ಆದಿಗೊಂಡನ ಚರಿತ್ರೆ

ಪದ :

ಹರ ಗುರು ಶಂಕರನು ಇವನು ಆದಾನು ಕುರಿ ಕಾಯುವ ಕುರುಬನು |
ಕುಡೊಕ್ಕಲಿಗಗ ಕುವರನಾಗಿ ಕುರುಹು ತೋರಿದ ಕುರುಬಾನು |
ಆದಿಗೊಂಡನಿಗೆ ಅಣುಗನಾಗಿ ಅವತಾರ ಮಾಡಿದ ಕುರುಬಾನು |
ಧರಿಗೆ ನೇಗಲಿ ಹೂದ ಶಿರದ ಮನೆಯಲ್ಲಿ ಕುರಿಗಳ
ಎಬಿಸಿದ ಕುರುಬಾನು | ಸತ್ತ ಕುರಿಯ ಮತ್ತೆ ಪ್ರಾಣವ ಪಡೆದು
ಸತ್ಯಕ್ಕೆ ಮೆರೆದಂಥ ಕುರುಬಾನು | ಧನುಜನ ಕೊಂದು
ದೇವಗನ್ಯಯ ಮದುವೆಯಾದಂಥ ಕುರುಬಾನು |
ಉಣ್ಣಿ ಕಂಕಣ ಕಟ್ಟಿ ಕೋರಿಗುರುವಿನ ಹೆಸರು ಹೇಳಿದ ಕುರುಬಾನು |
ಕಂಬಳಿ ಬೀಸಿ ಕುಂಬನಿಗೆ ಮಳೆ ತಂದ ಶಂಭು
ಅವತಾರದ ಕುರುಬಾನು | ಕಾಳಿಯ ವರನಾಗಿ ಕನ್ಯೆ ಲಗ್ನ
ವಾಗಿ ಕಾಳಿದಾಸನೆಂಬ ಕುರುಬಾನು | ಕುರಿಯ ಹಿಕ್ಕಿಯ
ಲಿಂಗವ ಮಾಡಿ ವೀರಗೊಲ್ಲಾಳನೆಂಬ ಕುರುಬಾನು |
ಅಜ್ಜ ಆದಿಗೊಂಡ ಮುತ್ಯ ಮುದ್ದುಗೊಂಡ
ನಮ್ಮಪ್ಪ ಸೆರೆವಾಡ ಸಿದ್ದಾನು ||

ವಚನ :

ಕುರುಬನು ಅಂದರೆ ಕುರುವು ಉಳ್ಳವನೇ ಒಬ್ಬ ಕುರುಬನು. ಆರು ಗುಣಗಳನ್ನು ಅಳಿದು ಮೂರು ಗುಣಗಳನ್ನು ದೂರ ಮಾಡಿ ಸರ್ವರಿಂದ ಬೈಸಿಕೊಂಡು ಕೋಪಬಾರದ ಹಾಗೆ ಅರಣ್ಯದಲ್ಲಿ ಕುರಿ ಕಾಯುವವನೆ ಒಬ್ಬ ಕುರುಬನು ಕರಿಯ ಕಂಕಣ ಕಟ್ಟಿ ಕೋರಿಗುರುವಿನ ಹೆಸರು ಹೇಳುವ ಒಬ್ಬ ಕುರುಬನು. ಕುರುಬನ ಚರಿತ್ರವನ್ನು ಚನ್ನಾಗಿ ಕೇಳಿರಿ. ಅದು ಏನಂದರೆ, ಹರನು ಗೌರಿಯ ಸದರಿನೊಳು ಕುಳಿತಾಗ್ಗೆ ಸುರಮುನಿಗಳು ನೋಡಿ ಹಾಸ್ಯಮಾಡಿ ನಕ್ಕರು. ನಕ್ಕದಕ್ಕೆ ನಗಜಾತಿಯಾದ ಪಾರ್ವತಿದೇವಿ ಅಂದದ್ದೇನಂದರೆ – ಎಲೋ ಸುರಮುನಿಗಳೇ ಹಾಸ್ಯಮಾಡಿ ನಕ್ಕವರೆಲ್ಲ ಕುರಿಗಳಾಗಿ ಧರಣಿಗೆ ಹೋಗಿರೆಂದು ಶಾಪ ಕೊಟ್ಟಳು. ಅದೇ ಶಾಪದಿಂದ ಸುರಮುನಿಗಳೆಲ್ಲರೂ ಕುರಿಗಳಾಗಿ ಧರಣಿಗೆ ಬಂದರು. ಮುಂದೆ ನಕ್ಕವರೆಲ್ಲ ಕುರಿಗಳಾದರು; ಹಿಂದೆ ನಕ್ಕವರೆಲ್ಲ ಮೇಕೆಗಳಾದರು. ಆವಾಗ್ಗೆ ಭೂಮಿ ತುಂಬ ಹರದಾಡಿ ಹುಲ್ಲು ಗಿಡಗಂಟಗಳನ್ನು ಮೇಯುತ್ತ ಭೂಮಿಯ ತುಂಬ ಆದರು. ಆವಾಗ್ಗೆ ಪರಮೇಶ್ವರನು ಬ್ರಹ್ಮನಿಗೆ ಕುರಿ ಕಾಯಲು ಆಜ್ಞೆ ಮಾಡಿದನು. ಬ್ರಹ್ಮನು ಧರಣಿಗೆ ಬಂದ ಕುರಿಯ ಹಿಂಡನ್ನು ತಿರುವಲು ಎಷ್ಟು ತಿರಿವಿದರೂ ಅವನಿಗೆ ಹೊಳ್ಳದಿರಲು ಸಾಕಾಗಿ ಕಂಗೆಟ್ಟು ತಿರುಗಿ ಕೈಲಾಸಕ್ಕೆ ಬಂದು ಶಂಕರನಿಗೆ ವಲ್ಲೆಂದು ಕೈಮುಗಿದನು. ಆವಾಗ್ಗೆ ಶಂಕರ ಮನಸ್ಸಿನಲ್ಲಿ ತಿಳಿದು ವಿಷ್ಣುವಿನನ್ನು ಕರೆಯಿಸಿ ಕುರಿಗಳನ್ನು ಕಾಯಲು ಹೇಳಿದನು. ಆವಾಗ್ಗೆ ವಿಷ್ಣು ಕುರಿ ಹಿಂಡಿಗೆ ಬಂದು ಕುರಿಗಳನ್ನು ಕಾಯ್ದು ಕಾಯ್ದು ಬೇಸತ್ತು ಕಟ್ಟಿ ಕಡೆಗೆ ಸಾಕಾಗಿ ಕಂಗೆಟ್ಟು ತಿರುಗಿ ಕೈಲಾಸಕ್ಕೆ ಬಂದು ಪರಮೇಶ್ವರನಿಗೆ ವಲ್ಲೆಂದು ಹೇಳಿದನು. ಆವಾಗ್ಗೆ ಪರಮೇಶ್ವರನು ಸ್ವತಃ ತನೇ ಕುರಿ ಕಾಯಲು ಹೋಗುವೆನೆಂದು ಪಾರ್ವತಿಗೆ ಬುತ್ತಿ ತರಲು ಹೇಳಿ ಕುರಿ ಹಿಂಡಿಗೆ ಬಂದನು. ಪರಮೇಶ್ವರನು ಕುರಿಗಳನ್ನು ಕಾಯುತ್ತಿರಲು ಅದೇ ಸ್ಥಳಕ್ಕೆ ಪಾರ್ವತಿಯ ಬುತ್ತಿಯನ್ನು ತೆಗೆದುಕೊಂಡು ಬಂದಳು. ಇಬ್ಬರೂ ಕೂಡಿ ಊಟ ಮಾಡಿ ಏಕಾಂತದಿಂದ ಮಾತಾಡಿದ್ದೇನಂದರೇ – ಹೀಗೆ ಕುರಿ ಕಾಯುತ್ತ ಕುಳಿತರೆ ಕೈಲಾಸ ಪಟ್ಟಣವು ಹಾಳಾಗುವು ದೆಂದು ಯೋಚಿಸಿ ಆದಿಗೊಂಡನಲ್ಲಿ ಭೂಮಿ ದಾನವನ್ನು ಬೇಡಲು ಆದಿಗೊಂಡನು ಪ್ರತ್ಯಕ್ಷ ಈಶ್ವರನು ಬಂದನೆಂದು ಭಾವಿಸಿ ಶಿರಬಾಗಿ ಸಾಷ್ಟಾಂಗ ಮಾಡಿ, ಏನು ಬೇಕೆಂದು ಕೇಳಿದನು. ಆಗ ಪರಮೇಶ್ವರನು ಅಂಗೈಯಗಲದಷ್ಟು ಭೂಮಿಯನ್ನು ಬೇಡಿದನು. ಅದಕ್ಕೆ ಆದಿಗೊಂಡನು | ಸ್ವಾಮಿಯೇ ನೀವು ಕೊಟ್ಟ ಭೂಮಿಯನ್ನು ನಾನೇಕೆ ಕೊಡಬೇಕು; ನೀವೇ ಬೇಕಾದಷ್ಟು ತೆಗೆದುಕೊಳ್ಳಿರೆಂದು ಹೇಳಲು, ಆವಾಗ್ಗೆ ಪರಮೇಶ್ವರನು ಎಲೋ ನರನೇ ಅದು ನಿನ್ನದಿರುವುದು, ನೀನೇ ಕೈಯೆತ್ತಿಕೊಡು ಎನ್ನಲು ಆವಾಗ್ಗೆ ಆದಿಗೊಂಡನು ಅಂಗೈಯಗಲ ಭೂಮಿಯನ್ನು ದಾನವಾಗಿ ಕೊಟ್ಟನು. ಆವಾಗ್ಗೆ ಪರಮೇಶ್ವರನು ಪಾರ್ವತಿಯು ಇಬ್ಬರೂ ಅರೇ ಅಂಗೈ ಭೂಮಿಯಲ್ಲಿ ಕೈಯಲ್ಲಿದ್ದ ತ್ರಿಶೂಲದಿಂದ ಗುಹೆಯನ್ನಗೆದು ಹುತ್ತವನ್ನು ಮಾಡಿ, ಅಷ್ಟೂ ಕುರಿಗಳನ್ನು ಹುತ್ತದಲ್ಲಿ ತುಂಬಿ, ಕಂಬಳಿಯಿಂದ ಕದವನ್ನು ಮಾಡಿ, ಬೀಗವನ್ನು ಹಾಕಿ, ಪಾರ್ವತಿಯ ಮೂಗಿನಲ್ಲಿದ್ದ ಮೂಗತಿಯನ್ನು ಕೀಲಿ ಮುದ್ರೆಯನ್ನು ಮಾಡಿದರು. ಅದೇ ಮೂಗುತಿಯು ಮುತ್ತಿಲ ಮರವಾಯಿತು. ಅಷ್ಟು ಮಾಡಿ ಕೈಲಾಸಕ್ಕೆ ತೆರಳಿದರು.

ಪದ :

ಆದಿಯಲ್ಲಿ ನೋಡಯ್ಯಾ ಆದಗೊಂಡ ಶರಣನು |
ಆದಿಗೊಂಡ ಶರಣಗೆಲ್ಲೊ ಸತಿಯಳು ನಿಂಗವ್ವನು |
ಆದಿಗೊಂಡನ ಮಕ್ಕಳೈಯಾ ಅರುಮಂದಿ ಮಕ್ಕಳಿನ್ನು |
ಅದರಾಗೊಬ್ಬವ ಕಿರಿಯ ಮಗನು ತಮ್ಮ ಭೂಮಿಯಲ್ಲಿ ಬಾಳೇವನು |
ಭೂಮಿಯಲ್ಲಿ ನೇಗಿಲು ಹೊಡೆಯುವಾಗ ಹುತ್ತಕ್ಕೆ ಹಚ್ಚಿ ನೇಗಿಲ ಹೊಡೆದಿದ್ದಾನು ||
ಅದೇ ಹುತ್ತದಲ್ಲಿ ನೋಡಲ್ಲಯ್ಯಾ ಕುರಿಗಳು ಕಡಲೇ ಬಂದಾವಿನ್ನು |
ಅದನ್ನು ನೋಡಿ ಗಾಬರಿಯಾಗಿ ಹೊಲದಲ್ಲಿದ್ದ ಕಸವನ್ನು |
ಹುತ್ತದ ಬಾಗಿಲಿಗೆ ಕಸವಗೆದು ಬೆಂಕಿಯನ್ನು ತಾ ಮಾಡಿದನು |
ಅದೇ ಬೆಂಕಿಯಲ್ಲಿ ಒಂದೊಂದು ಕುರಿಗಳು ಪಾರಾಗಿ ಕಡೆಕ ಬಂದಾವಿನ್ನು |
ಬೆಂಕಿಯ ಜಳಾ ತಾಕಿದ ಕುರಿಗಳು ಹಂಡಾ ಬಂಡಾ ಆದಾವಿನ್ನು |
ಅದನ್ನು ನೊಡಿ ಘಾಬರಿಯಾಗಿ ಬಹಳ ಚಿಂತಿ ಮಾಡಿದನೋ |
ಮನೆಯಲ್ಲಿದ್ದ ತಂದೆ ತಾಯಿಗೆ ಹೇಳದಲೇ ತಾ ಹೊರಟಾನೋ |
ಹೋಗಿ ಹೋಗಿ ಘೋರಾರಣ್ಯದೊಳಗ ಘಾಬರಿಯಾಗಿ ನಿಂತಾನೋ ||

ವಚನ :

ಕುರಿಗಳನ್ನು ಬೆನ್ನತ್ತಿ ಹೋಗಲು ಎಡರು ಮೂರು ದಿವಸ ಅನ್ನವಿಲ್ಲದಲೇ ಬಳಲುವದನ್ನು ಪರಮೇಶ್ವರನು ಕಂಡು ಅವನು ಇದ್ದಲ್ಲಿಗೆ ಬಂದು ಕುರಿ ಹಾಲನ್ನು ಹಿಂಡಲಿಕ್ಕೆ ಕಲಿಸಿ, ಹಾಲು ಕಾಸಲಿಕ್ಕೆ ಕಲ್ಲಿಗೆ ಕಲ್ಲು ಕಡಿದು ಬೆಂಕಿಯನ್ನು ಮಾಡಿ ಗಿಣ್ಣವನ್ನು ಕಾಸಿದನು. ಇದರಂತೆ ಮಾಡಿಕೊಂಡು ನೀನು ಬದುಕೆಂದು ಹೇಳಿ ಕೈಯಲ್ಲಿದ್ದ ತ್ರಿಶೂಲವನ್ನು ಬಡಿಗೆಯ ಮಾಡ, ತನ್ನ ಜೋಳಗಿವಟ್ಟಿ ಚೀಲಮಾಡಿ ಭೂಮಿಯನ್ನು ಬಡಿದು ಡೋಣಿಯನ್ನು ಮಾಡಿ ಉಣಿಸಿ ನೀನು ನನ್ನನ್ನು ಯಾವಾಗ್ಯ ಧ್ಯಾನ ಮಾಡುವಿಯೋ ಆವಾಗ್ಗೆ ಬರುವೆನೆಂದು ವಚನ ಕೊಟ್ಟು ಕೈಲಾಸಕ್ಕೆ ಹೊರಟು ಹೋದನು. ಮುಂದೆ ಒಂದಾನೊಂದು ದಿವಸ ಬೆಂಕಿಯು ಸಿಗದಿರಲು ಅತ್ತಿತ್ತ ನೋಡುವಷ್ಟರಲ್ಲಿ, ಘೋರಾರಣ್ಯದಲ್ಲಿ ಹೊಗೆ ಹಾಯುವುದನ್ನು ಕಂಡು ಅಲ್ಲಿಗೆ ಬಂದನು. ಅಲ್ಲಿ ಸುಂದರ ಸ್ತ್ರೀಯನ್ನು ಕಂಡು, ಬೆಂಕಿಯನ್ನು ಕೇಳಲು ಯಾತಕ್ಕೆಂದು ಸ್ತ್ರೀಯಳು ಪ್ರಶ್ನೆ ಮಾಡಲು, ಗಿಣ್ಣವನ್ನು ಕಾಸುವೆನೆಂದು ಹೇಳಿದನು. ಅವಳು ಆಗ್ಗೆ ನನಗೂ ಗಿಣ್ಣವನ್ನು ಕೊಟ್ಟರೆ ಬೆಂಕಿಯನ್ನು ಕೊಡುವೆನೆಂದು ಹೇಳಿ ಬೆಂಕಿಯನ್ನು ತಂದಳು. ಮರುದಿನ ಗಿಣ್ಣವನ್ನು ಕೊಟ್ಟು ಆಕೆಯ ಸಮಾಚಾರ ಕೇಳಿದನು. ಆವಾಗ್ಗೆ ಸ್ತ್ರೀಯಳು ಹೇಳುದುದೇನಂದರೆ, ನನ್ನನ್ನು ಸುಮಲಿಯೆಂಬ ರಾಕ್ಷಸಿಯು ತಂದು ಇಲ್ಲಿ ಇಟ್ಟಿರುವದು. ನಾನು ದೊಡ್ಡ ರಾಜನ ಮಗಳು.  ಆಗಲಿ, ನೀನು ಹೋಗು ರಾಕ್ಷಿಯು ಬರುವ ವೇಳೆಯಾಯಿತು. ಸಿಕ್ಕರೆ ನುಂಗೀತು ಎಂದು ಹೇಳಿ ಕುರಿ ಹಿಂಡಿಗೆ ಕಳಿಸಿದಳು. ಅಷ್ಟರಲ್ಲಿ ರಾಕ್ಷಸಿಯು ಬಂದು ಇಲ್ಲಿ ಹೊಸಬರಾರು ಬಂದಿದ್ದಾರೆಂದು ನುಡಿಯಿತು. ಆವಾಗ್ಗೆ, ಆ ಸ್ತ್ರೀಯು ಯಾರೂ ಇಲ್ಲ ಎಂದು ಹೇಳಿ, ತಾನು ನೀನು ಹೋದ ಮೇಲೆ ನಾನು ವಟ್ಹಾಕಿ ನೀನು ಬರುವೆಯೊ ಇಲ್ಲವೋ ಯೆಂಬ ಬಗೆ ಹೇಗೆ ನನಗೆ ನಿನ್ನ ಮರಣವನ್ನು ತಿಳಿಸಿದರೆ ಗೊತ್ತಾಗುವುದೆಂದು ಕೇಳಿದಳು. ಆವಾಗ್ಗೆ ಆ ಹುಚ್ಚಿ ರಾಕ್ಷಿಯು ತನ್ನ ಮರಣದ ಸುದ್ದಿಯನ್ನು ತಿಳಿಸಿತು. ಮರುದಿವಸ ಮತ್ತೆ ಬೇಟೆಗೆ ಹೋಯಿತು. ಇತ್ತ ಕುರುಬನು ಬರಲು ಅವನಿಗೆ ರಾಕ್ಷಿಯು ಮರಣವನ್ನು ತಿಳಿಸಿದಳು. ಆಗ್ಯೆ ಕುರುಬನು ರಾಕ್ಷಿಯ ಮರಣ ಇದ್ದ ಪಕ್ಷಿಯ ಹಿಡಿದು ಕೊಂದು ಬಿಟ್ಟನು. ಆವಾಗ್ಗೆ ಹೋದ ರಾಕ್ಷಸಿಯು ಅಲ್ಲಿಯೇ ಸತ್ತು ಬಿದ್ದಿತು. ಇತ್ತ ಆ ಸ್ತ್ರೀಯನು ಕರೆದುಕೊಂಡು ಕುರಿ ಹಿಂಡಿಗೆ ಬಂದು ಆ ಪರಮೇಶ್ವರನ ಧ್ಯಾನ ಮಾಡಲು ಪರಮೇಶ್ವರನು ಬಂದು, ಸ್ತ್ರೀಯಳ ವೃತ್ತಾಂತವನ್ನು ಕೇಳಿ ಕೈಲಾಸದಿಂದ ದೇವಾನುದೇವತೆಗಳನ್ನು ಕರೆಸಿ ಹಾವಿನ ಹಂದರ ಹಾಕಿಸಿ ಚೋಳಿನ ತೋರಣ ಕಟ್ಟಿ ಅದೇ ಕುರಿಯ ಉಣ್ಣೆಯ ಕಂಕಣವನ್ನು ಕಟ್ಟಿ ಲಗ್ನವನ್ನು ಮಾಡಿ ಕುರಿ ಉಣ್ಣೆಯನ್ನು ಕತ್ತರಿಸಲಿಕ್ಕೂ ನೂಲಲಿಕ್ಕೂ ನೇಯುವದನ್ನು ಸಹ ಕಲಿಸಿ ಕೈಲಾಸ್ಕೆ ತೆರಳಿದರು. ಇಂಥಾ ಪವಾಡವನ್ನು ಗೆದ್ದು ಚೆಲುವೆಯಾದ ಚನ್ನಮ್ಮನನ್ನು ಲಗ್ನವಾದಂಥಾ ಪದ್ಮಗೊಂಡನೆಂಬವನೆ ಒಬ್ಬ ಕುರುಬನು.

ಪದ :

ಹಡಪದ ಹಂಪಯ್ಯ ಶರಣ ಬಡ ಹೋರಿ ಬ್ರಹ್ಮಯ್ಯನೋ
ಮೂಳ ಮಾರಗಿ ಮಾರಯ್ಯನವರ ಚಾರು ಚಾರಿಗೆ ಭಜಿಸುವೆನು
ಲೋಲಕಾರ ರಂಬೆವ್ವಾ ನೀಲಲೋಚನೆ ತಾಯವ್ವ
ಮೃತ್ಯುನಾಗಿ ತಾ ಡೊಳ್ಳು ಬಾರಿಸ್ಯಾನು ನರ್ತನಂದದಿ
ಕುಣಿಯವೊನೊ
ವೀರ ಗೊಲ್ಲಾಳ ರಾಯನ ಕಥಿಯ ಹೇಳುವೆನು ಭಕ್ತಿಯಿಂದ
ಪೂರ್ಣ ನೀವು ಕೇಳಿರೆಂದು ತೋರಿ ಜನಕ ನಾ ಹೇಳುವೆನು
ದಡ್ಡಿಯಲ್ಲಿ ಹುಗಿದ ಹೊನ್ನು ಅಡ್ಡಗಾಳಿಗೆ ತೋರಿದನು
ಅಡವಿಯ ಹುಲ್ಲು ಮೇಯಿಸುವನು ಅವಾ ಮಡುವಿನ
ನೀರು ಕುಡಿಸುವನು
ಮುಂದಕೆಲ್ಲ ಕುರಿಗಳ ಹೊಡಿದು
ಹಿಂದಿಂದ ನಾಯಿ ಕರಿಯುವನು

ವಚನ :

ವೀರಗೊಲ್ಲಾ ಚರಿತ್ರೆಯನ್ನು ಒಂದಷ್ಟು ವಿವರಿಸುವೆನು ಚಂದಾಗಿ ಕೇಳಿರಿ. ಕುರುಬನು ದಾರಿಯಲ್ಲಿ ಕುರಿಗಳನ್ನು ಕಾಯುತ್ತಾ ನಿಂತಿರಲು ಹತ್ತು ಮಂದಿ ಜಂಗಮರು ಶಿಸ್ತಿನಿಂದ ಹರ ಹರಯೆನ್ನುತ್ತ ಕಾಶೀ ನಿಶ್ವಲಿಂಗನ ಜಾತ್ರೆಗೆ ಪೋಗುತ್ತಿರಲು ಹರ ಹರಯೆನ್ನುವ ಶಬ್ದವು ತನಗೆ ಕೇಳಿದಾಕ್ಷಣ ಓಡಿಬಂದು ಜಂಗಮರನ್ನು ನೋಡಿ ಪಾದಕ್ಕೆ ಬಿದ್ದು ಕೇಳಿದ್ದೇನಂದರೆ – ಜಂಗರೇ ತಾವು ಎಲ್ಲಿಗೆ ಪೋಗುದಿರಿ ಎಂದು ಕೇಳಿದಾಕ್ಷಣ ಜಂಗಮರು ಹೇಳಿದರು – ಅಪ್ಪಾ ನಾವು ಕಾಶಿ ವಿಶ್ವನಾಥನ ಜಾತ್ರೆಗೆ ಹೋಗುತ್ತೇವೆ ಎನ್ನಲು ಆವಾಗ್ಗೆ ಜಂಗಮರು ದುಡ್ಡ ಕೊಟ್ಟರೆ ನಿನಗೆ ಲಿಂಗವನ್ನು ತರುತ್ತೇವೆ ಎನ್ನಲು, ಕುರುಬನು ದಡ್ಡಿಯಲ್ಲಿ ಹುಗಿದ ಹಣವನ್ನು ಜಂಗಮರಿಗೆ ಕೊಟ್ಟು ಬಿಟ್ಟನು. ಜಂಗಮರು ದುಡ್ಡು ತೆಗೆದುಕೊಂಡು ಹೋಗಿ ಕಾಶಿ ವಿಶ್ವನಾಥನ ಜಾತ್ರೆಯನ್ನು ಶಿಸ್ತಿನಿಂದ ಮಾಡಿ ಇವನ ಮರೆತು ತಿರುಗಿ ಬಂದರು. ದಾರಿಯನ್ನು ಕಾಯುತ್ತಾ ಇದ್ದ ಕುರುಬನು ಇವರನ್ನು ನೋಡಿ ಓಡಿ ಬಂದು ಪಾದಕ್ಕೆ ಬಿದ್ದನು. ಆವಾಗ್ಗೆ ಜಂಗಮರು ಲಿಂಗವನು ಮರತವೆಂದು, ಅವನ ಕುರಿಯ ಹಿಕ್ಕಿಯನ್ನು ತೆಗೆದುಕೊಂಡು ಅವನಿಗೆ ಗುರುತು ಆಗದ ಹಾಗೆ. ಇದೆ ನಿನ್ನ ಲಿಂಗವೆಂದು ಕೊಟ್ಟು ತಮ್ಮ ಸ್ಥಳಕ್ಕೆ ಹೋದರು. ಇತ್ತ ಕುರುಬನು ನಿಷ್ಠೆಯಿಂದ ಕಸದ ಕಟ್ಟಿಯನ್ನು ಮಾಡಿ, ಅಷ್ಟು ಕುರಿಯ ಹಾಲನ್ನು ಹಿಂಡಿ ಲಿಂಗಕ್ಕೆ ಎರೆಯಿತ್ತಿದ್ದನು. ಮೂರು ತಿಂಗಳವರೆಗೆ ಮನೆಗೆ ಹಾಲು ಬಾರದಿರಲು ಅವನ ತಂದೆಯಾದ ಕಾಟಕೂಟನೆಂಬವನು ಮನದಲ್ಲಿ ಸಿಟ್ಟನ್ನು ತಾಳಿ ರೂಪ ಕೊಡಲಿಯನ್ನು ತೆಗೆದುಕೊಂಡು ಕುರಿ ಹಿಂಡಿಗೆ ಬರಲು, ದಡ್ಡಿಯಲ್ಲಿ ಮೂರು ಆಳು ಪ್ರಮಾಣ ಹಾಲು ಹೆಪ್ಪಾಗಿ ಕೆನೆಗಟ್ಟಿದುದನ್ನು ಕಂಡು ಮನದಲ್ಲಿ ಉಗ್ರವನ್ನು ತಾಳಿ, ಎಲೋ, ನೀಜಾತ್ಮನೇ ನನ್ನ ಮನೆ ಹಾಳುಮಾಡಿದೆಯೆಂದು ಆ ಕಟ್ಟೆಯನ್ನು ಕೆರುವುಗಾಲಿಲೇ ಒದ್ದು ಬಿಟ್ಟನು. ಆವಾಗ್ಗೆ ಮಗನು ನನ್ನ ಇಷ್ಟಲಿಂಗವನ್ನು ಒದ್ದನೆಂದು ಕೋಪಾರೂಢನಾಗಿ ತಂದೆಯ ಕೈಯಲ್ಲಿದ್ದ ಕೊಡಲಿಯನ್ನು ಕಸಿದುಕೊಂಡು ತಂದೆಯ ಶಿರವನ್ನು ಕಡಿದು ಬಿಟ್ಟನು. ಆಗ್ಗೆ ಪರಮೇಶ್ವರನಿಗೆ ಅರಿವು ಆಗಿ ಅದೇ ಕುರಿಯ ಹಿಕ್ಕಿಯಲಿ ಪ್ರತ್ಯಕ್ಷವಾಗಿ ನಿಜರೂಪವನ್ನು ತಾಳಿ ಅವನ ಭಕ್ತಿಗೆ ಮೆಚ್ಚಿ ಅವನ ತಂದೆಯ ಪಡೆದು ಮಾಯವಾದನು. ಇಂತಹ ಈಶ್ವರನನ್ನು ಒಲಿಸಿದಂತ ವೀರಗೊಲ್ಲಾಳನೆಂಬುವನೇ ಒಬ್ಬ ಕುರುಬನು.

ಪದ :

ಆದಿಗೊಂಡನ ಮಕ್ಕಳ ಚರಿತ್ರವ ನಿತ್ಯ ನೇಮದಿಂದ ಹೇಳುವೆನು |
ಒಲಿದ ಶರಣರ ಮಹಿಮೆಯನ್ನು ಸಾರಿ ಸಭಾಕ ನಾ ಹೇಳುವೆನು |
ಮೃತ್ಯು ಲೋಕದೊಳು ಮಾಡಿದ ಮಹಿಮೆಯ ಪ್ರೀತಿಲಿಂದ |
ಕೊಂಡಾಡುವೆನು||

ವಚನ :

ಕೇಳರಿ – ಅಜ್ಜ ಆದಿಗೊಂಡ, ಮುತ್ಯಾ ಮುದ್ದುಗೊಂಡ ಆದಿಗೊಂಡನ ಮಕ್ಕಳು ಆರುಮಂದಿ. ಅವರು ಯಾರ‍್ಯಾರು ಎಂದರೆ, ಅಮರಗೊಂಡ, ಶಿವಗೊಂಡ, ಶಿದ್ದಗೊಂಡ, ಪಡ್ಡಿಗೊಂಡ, ಮಿಂಚುಗೊಂಡ ಕಡಿಯ ಹುಟ್ಟಿದನಾ ಉಂಡಾಡ ಪದ್ಮಗೊಂಡ; ಹೀಗೆ ಆರು ಮಂದಿ ಮಕ್ಕಳಿಗೆ ಆರು ಕಂಕಣಗಳು ಹುಟ್ಟಿದವು. ಅವು ಯಾವು ಯಾವುವೆಂದರೆ ಹತ್ತಿಕಂಕಣ ಉಣ್ಣೆ ಕಂಕಣ, ನಾರಗಂಕಣ, ಅಳಿಗಾರ, ಬಳಿಗಾರ, ಬಿರಂಚಿ ಎಂಬ ಆರು ಕಂಕಣಗಳು ಹುಟ್ಟಿದವು. ಆರು ಕಂಕಣದಿಂದ ೨೩ ಕುಲಗಳು ಹುಟ್ಟಿದವು. ಈ ಇಪ್ಪತ್ತಮೂರು ಕುಲಕ್ಕೆ ಶೆರೇವಾಡ ಸಿದ್ಧೇಶ್ವರನೇ ಗತಿಯೋ !

* * *

 

ಮಾಳಿಗರಾಯನ ಚರಿತ್ರೆ

ಶಿವನಮಗಳು ಲಾಯವ್ವ ಮಾಳಪ್ಪ ಹೂವಿಗೆ ಕಾವಲೈದಾಳೋ
ಮುಂದ ಮಾರ ಪೈಣಕ ಮಾಳಪ್ಪ ಬೆಳ್ಳಿ ಪರ್ವತಾ ಆಯಿದಾವೊ
ಬೆಳ್ಳಿಬೆಟ್ಟ ದವಳ ಮಾಳಪ್ಪ ಕಡ್ಡಿರಾಜನ ಕಾವಲಿಯೊ
ಕಡ್ಡಿ ರಾಜನ ಕಾವಲಿ ಮಾಳಪ್ಪ ಹೂವಿಗೆ ಕಾವಲೈದಾನೊ
ಮುಂದ ಮಾರ ಪೈಣಕ ಮಾಳಪ್ಪ ಬಂಗಾರ ಪರ್ವತೈದಾವೊ
ಬಂಗಾರ ಬೆಟ್ಟದೊಳಗ ಮಾಳಪ್ಪ ಹೂಲಿ ರಾಜನ ಕಾವಲಿಯೋ
ಹೂಲೀ ರಾಜನ ಕಾವಲೀ ಮಾಳಪ್ಪ ಹೂವಿಗೆ ಕಾವಲೈದಾನೊ
ಮುಂದ ಮಾರ ಪೈಣಕ ಮಾಳಪ್ಪ ಕೈಲಾಸ ಕಡಿ ಬಾಗಿಲೋ
ಕೈಲಾಸ ಕಡಿ ಬಾಗಿಲದೊಳಗ ಬಸವಣ್ಣದೇವರ ಕಾವಲಿಯೋ
ಬಸಣ್ಣದೇವರ ಕಾವಲಿ ಮಾಳಪ್ಪ ಹೂವಿಗೆ ಕಾವಲಿಯದಾವೊ
ಕೈಲಾಸದೊಳಗ ಯೋಳು ಬಾಗಿಲಕ ಯೋಳು ಮಂದಿ ಯೋಳು ದೈತಾರೋ
ಯೇಳು ಮಂದಿ ದೈತಾರು ಮಾಳಪ್ಪ ಹೂವಿಗೆ ಕಾವಲೈದಾರೋ
ಕೈಲಾಸದೊಳಗೋ ಮಾಳೆ ಹಾಲು ಮತದ ಭಾವೇಳೋ
ಹಾಲುಮತದ ಭಾವಿಯ ವಳಗ ಕಪ್ಪಿ ಕಲಕದ ಶೀತಾಳೋ
ಹಾಲುಮತದ ಭಾವಿಯ ವಳಗ ಶೀತಾಳ ಗಂಗವ್ವನ ಕಾವಲಿಯೋ
ಕಾಳಿಂಗರಾಯನ ತೋಟದೊಳಗ ಕರಿಯ ಮಲ್ಲಿಗೆ ಆಯಿದಾವೊ
ಕರೇಮಲ್ಲಿಗೆ ಹೂವಿಗೆ ಮಾಳಪ್ಪ ಯೋಳು ದೆಡಿ ಕಾಳಿಂಗ
ಯೋಳು ಹೆಡಿ ಕರಿ ಕಾಳಿಂಗ ಮಗನ ಹೂವಿಗೆ ಸುತ್ತ ಬಿಗದಾನೊ
ಹರಹರನೂ ನನ ಕರಿಯದೇವರು ಹೂವಿನ ಕೂನಾ ಹೇಳಿದನೊ
ಮನಿಗ್ಯಾನಪ್ಪ ನನ ಮಾಳಿಗರಾಯ ಮಾತವರೇಳ್ಯಾನೋ
ಇಂತು ಮಾತನವರೇಳ್ಯಾನು ಮಾಳಪ್ಪ ಒಳ್ಳಿದೊಳ್ಳೆ ದಂಡಾನೋ
ಆಳೆಳೊ ಮಾಳಪ್ಪಾನೊ ಗುರುವಿನ ಪಾದಕೆರಗಿದನೊ
ಕಾಲ ಜೋಡಿಸಿ ಕರಗಳ ಮುಗಿದು ಶಿರವಬಾಗುತ ಹೇಳಿದನೊ
ನೀ ನನ ಬೆನ್ನಿಲೇ ಇದ್ದರೂ ಗುರುವೆ ಕೈಲಾಸಕ ಕೈ ಕೊಟ್ಟೆನೊ
ನೀ ನನ್ನ ಬೆನ್ನಿಲಿದ್ದರೆ ಗುರುವೇ ಸಮುದ್ರಕ್ಕೆ ಇದಿರೀಸುವೆನೊ
ವಡ್ಡಿರಾಯರ ಮಗ ಮಾಳಾ ವಳ್ಳೆದೊಳ್ಳೆದಂದಾನೊ
ದೊಡ್ಡದೇವರ ಪೂಜೇರಿ ಜಳಕ ನೇಮವ ಮಾಡುವನೊ
ಕ್ಯಾವಿಯವುಟ್ಟಾನು ಕ್ಯಾವಿಯ ಹೊದ್ದಾನು ಯನ್ನೊಡಿಯ ಮಾಳಪ್ಪನೊ
ಹಬ್ಬ ಮುಂಡಾಸಾ ಮಾಳಿಗರಾಯ ಬಿಗಬಿಗದ ತಾ ಸುತ್ತ್ಯಾನೊ
ಮೂರು ಹೇಡಿನ ಜ್ಯಾಡಿ ಮಾಳಪ್ಪ ಮುರದ ಗೊಂಡಿಯ ಮಾಡ್ಯಾನೊ
ನಡುವಿಗೆ ನಾಗಬಂದು ಹಾಕ್ಯಾನು ಮಾಳಪ್ಪ ಚಾಕ ಬಿಳಿ ಅಂಗಿ ತೊಟ್ಟಾನೊ
ವಡ್ಡಿರಾಯರಮಗ ಮಾಳಾತೆಯೇನು ತಯಾರಾಗ್ಯಾನೊ
ದೊಡ್ಡದೇವರ ಪೂಜೇರಿ ನಮ್ಮಪ್ಪ ತಾಯೇನು ತಯಾರಾಗ್ಯಾನೊ
ಕರಿಯದೇವರ ವರವಿನ ಆಳೋ ಗುರುವಿನ ಬಳಿಯಲಿ ಬಂದಾನೊ
ಗುರುವಿನ ಮುಂದಲ ಹಿಡಿ ಬಂಡಾರ ಉಡಲೊಳು ಆಗ ಕಟ್ಟುವನೊ
ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ ಇಲ್ಲಿಗೆ ಇದು ವಂದ ಸಂದೇಳೊ
ಸಂದಿನ ಪದಗಳ ವಂದಿಸಿ ಹೇಳುವೆ ತಂದಿ ಮಾಳಗರಾಯಾನೊ
ದೇವರ ಬಂದಾವ ಬನ್ನೀರೇ –

ಗುರುವಿನ ಮುಂದಿನ ಹಿಡಿ ಬಂದಾರಾ ಉಡಲೋಳು ಆಗ ಕಟ್ಟುವನೊ
ಹೂವಿನ ಕರಡೀ ಬಗಲಿಗೆ ಹಾಕ್ಯಾನು ಶೀತಾಳ ಬಿಂದಿಗಿ ಹೆಗಲೀಗೊ
ಆಳೇಳೊ ಮಾಳಪ್ಪನೊ ತಾಯೇನು ತೈಯಾರಾಗ್ಯಾನೊ
ತಾಯೇನು ತೈಯಾರಾಗ್ಯಾನು ಮಾಳಪ್ಪ ಗುರುವಿನ ಅಪ್ಪಣೆ ಪಡಿದಾನೊ
ಗುರುವಿನ ಅಪ್ಪಣೆ ಪಡಿದಾನು ಮಾಳಪ್ಪ ಗುರುವಿನ ಮಠದ ವಳಗಲ್ಲೋ
ಗುರುವಿನ ಮಠದ ವಳಗ ಮಾಳಪ್ಪ ಕೀಲಿ ಮುದ್ರಿಯ ಹಾಕ್ಯಾನೊ
ಸುತ್ತಲೀ ದ್ವಾರ ಬಾಗಿಲವೆಲ್ಲಾ ಬೀಗಬಂಧನ ಹಾಕ್ಯಾನೊ
ಬೀಗ ಬಂಧನ ಮಾಡ್ಯಾನು ಆಗ ಗುರುವಿನ ಮಠವ ಬಿಟ್ಟಾನೊ
ಗುರುವಿನ ಮಠವ ಬಿಟ್ಟಾನು ಮಾಳಪ್ಪ ಕ್ವಾಣಿಗನೂರ ಬಿಟ್ಟಾನೊ
ಕ್ವಾಣಿಗನೂರ ಸೀಮಿಯ ವಳಗ ಮೂರು ಪೈಣವ ಹೊಗ್ಯಾನೊ
ಎತ್ತರ ನಾಡೊ ತ್ರಿಬೇತ ದೇಶೊ ಮೂರು ಪೈಣವ ಹೋಗ್ಯಾನೊ
ಕೇದಾರಲಿಂಗ ಹಿಮಾಲಯ ಬೆಟ್ಟ ಮೂರು ಪೈಣವ ಹೋಗ್ಯಾನೊ
ಮುಂದ ಮೂರ ಪೈಣಕ ಮಾಳಪ್ಪ ಶೀಲಾ ನದಿಗೆ ಬಂದಾನೊ
ಶೀಲಾ ನದಿಯ ದಂಡೀಲೆ ಶಿವನ ಮಗಳು ಲಾಯವ್ವ
ಶಿವನ ಮಗಳು ಲಾಯವ್ವ ಮಾಳನ ಕಣ್ಣೀಲೆ ಕಂಡಾಳೊ
ಮಾಳನ ಕಣ್ಣೀಲೆ ಕಂಡಾಳು ಲಾಯವ್ವ ದಾರಿಗೆ ಅಡ್ಡ ಬಂದಾಳೋ
ದಾರಿಗೆ ಅಡ್ಡ ಬಂದಾಳು ಲಾಯವ್ವ ಮಾತನಾಡಿಸಿ ಕೇಳ್ಯಾಳೊ
ಯಾವ ನಾಡಿನ ಕುರುಬಾನೋ ನೀ ಯಾವ ದೇಶದ ಕುರುಬಾನೊ
ಯಾವ ದೇಶದ ಕುರುಬಾನು ನೀ ಇಲ್ಲಿಗೆ ಯತಕ ಬಂದವನೊ
ಇಲ್ಲಿಗೆ ಯಾತಕೆ ಬಂದವನು ನೀ ಎಲ್ಲಿಗೆ ಹೋಗತಿ ಅಂಬುವಳೊ
ಮನಿಗೇನಪ್ಪ ನನ ಮಾಳಿಗರಾಯ ಇಂತು ಮಾತವ ಕೇಳ್ಯಾನೊ
ಇಂತು ಮಾತವ ಕೇಳ್ಯಾನು ಮಾಳಪ್ಪ ಲಾಯವ್ವಗ ಯೇನಂತ ಹೇಳುವನೊ
ಬಾರು ಬಾರಲಿಯಪ್ಪಾ ನಾ ಯೇನು ಹೇಳಲಿ ಅಂತಾನೊ
ವಡ್ಡಿರಾಯರ ಮಗ ಮಾಳ ನಾ ದೊಡ್ಡ ದೇವರ ಪೂಜೇರಿ
ನನ್ನ ಗುರುವು ನೋಡ ನಮ್ಮವ್ವ ಬಗಸಜರದ ಬಾಗಶಾನೋ
ಬಗಸಬಾರದ ಬಾಗಶ್ಯಾನು ಬೇಡಬಾರದ ಬೇಡ್ಯಾನೋ
ಹುಳುವ ಮುಟ್ಟದ ಹೂವ್ವ ಬೇಡ್ಯಾನು ಕಪ್ಪಿಕಲಕದ ಶೀತಾಳೊ
ಮರ್ತ್ತ್ಯೆಲೋಕದೊಳಿಲ್ಲವೆಂದು ಕೈಲಾಸಕ ನಾ ಹೋಗುವೆನು
ಕರಿಯ ಮಲ್ಲಗಿ ಹೂವಿಗೆವ್ವಾ ನಾನು ಹೋಗುವೆನಂತಾನೊ
ಶಿವನ ಮಗಳು ಲಾಯವ್ವ ಇಂತು ಮಾತ ಕೇಳ್ಯಾಳೊ
ಇಂತು ಮಾತವ ಕೇಳ್ಯಾಳು ಲಾಯವ್ವ ಮಾಳಪ್ಪಗೇನಂತ ಹೇಳಿದಳೊ
ಕರಿಯ ಮಲ್ಲಗಿ ಹೂವಿಗೆ ಮಾಳಪ್ಪ ನನ್ನ ಕಾವಲಿ ಅಂತಾಳೊ
ನನ್ನ ಕಾವಲಿ ಅಂತಾಳು ಲಾಯವ್ವ ದಾರಿಯ ಬಿಡುವದಿಲ್ಲಂತಾಳೊ
ಮುನಿಗೆನಪ್ಪನನ ಮಾಳಿಗರಾಯ ಹಂಗದೊರದಂಗಿತಾನೊ
ಹಂಗದೊರದ ನಿಂತಾನು ಮಾಳಪ್ಪ ಭದ್ರ ಹೊಡೆದ ಕುಂತಾನೊ
ಮನಿಗ್ಯಾನಪ್ಪ ನನ ಮಾಳಿಗರಾಯ ಹ್ಯಾಂಗ ಮಾಡಬೇಕಂತಾನೊ
ಶಿವನ ಮಗಳು ಲಾಯವ್ವ ಮಾಳಪ್ಪಗೇನಂತ ಹೇಳಿದಳೋ
ವಡ್ಡಿರಾಯರ ಮಗ ಮಾಳನಂದೊಂದು ಮಾತು ಕೇಳಪ್ಪಾ
ದೊಡ್ಡ ದೇವರ ಪೂಜೇರಿ ನಮ್ಮಪ್ಪ ಇಂತು ಮಾತವ ಕೇಳ್ಯಾನೊ
ಇಂತು ಮಾತವ ಕೇಳ್ಯಾನು ಮಾಳಪ್ಪ ವಳ್ಳೆದೊಳ್ಳೆದೆಂದಾನೊ
ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ ಇಲ್ಲಿಗೆ ಇದು ವಂದು ಸಂದೇಳೊ
ಸಂದಿನ ಪದ ವಂದಿಸಿ ಹೇಳುವೆನು ಮಾಳಿಗರಾಯನೊ
ದೇವರ ಬಂದಾವ ಬನ್ನೀರೇ –

ಶಿವನ ಮಗಳು ಲಾಯವ್ವಗ ಮಾಳಪ್ಪಗೇನಂತೆ ಹೇಳಿದಳೊ
ಇರ ಮಾಳಪ್ಪ ಯನ್ನೊಡಿಯಗಾಗ ಕೇಳಂದಾಳೋ ಲಾಯವ್ವನೊ
ಕ್ವಾಣಿಗನವರ ಮಠದಾಗಯ್ಯ ನಿನ್ನ ಗುರುವಿನ ಸಂಗಾಟೊ
ನಿನ್ನ ಗುರುವಿನ ಸಂಗಾಟ ಮಗನೇ ನನ್ನ ಪೂಜಿ ನೀ ಮಾಡಿದರೊ
ನನ್ನ ಪೂಜಿ ನೀ ಮಾಡಿದರ ನಿನ ಹೂವಿಗೆ ದಾರಿ ಬಿಟ್ಟೇನೊ
ಹೂವಿಗೆ ದಾರಿ ಬಿಟ್ಟೇನಿ ಮಾಳಪ್ಪ ಬಲಗೈ ಭಾಷೆ ಕೊಡಬಾರೊ
ವಚವಬೃಷ್ಟ ನೀ ಆಗಬಾರದೆಂದು ಗಟ್ಟ್ಯಾಗಿ ಹೇಳ್ಯಾಳು ಮಾಳಪ್ಪಗೊ
ಶಿವನ ಮಗಳು ಲಾಯವ್ವಗ ಯೇನಂತ ಹೇಳಿದ ಮಾಳಪ್ಪನೊ
ಬಾರುಬಿರ ಲಯವ್ವಾ ಮಾನು ಲೋಕದ ವಳಗವ್ವ
ಮಾನುಲೋಕದ ಒಳಗ ಲಾಯವ್ವ ನನ್ನ ಗುರುವಿನ ಮಟದಾಗೋ
ನನ್ನ ಗುರುವಿನ ಮಟದಾಗವ್ವಾ ತ್ರಿಕಾಲ ಪೂಜಿ ಆಗುವದೊ
ನನ್ನ ಗುರುವಿನ ಮಟದಾಗವ್ವ ನಿನ್ನ ಪೂಜಿ ನಾ ಮಾಡುವೆನೊ
ಕೊಟ್ಟ ವಚನವ ತಪ್ಪುವದಿಲ್ಲವೆಂದು ಘಟ್ಟಾಗಿ ಹೇಳಿದ ಲಾಯವ್ವಗೋ
ಶಿವನ ಮಗಳು ಲಾಯವ್ವಾಗ ಹೂವಿಗೆ ದಾರಿ ಬಿಟ್ಟಾಳೋ
ವಡಿರಾಯರ ಮಗ ಮಾಳಾಗ ಮುಂದ ಮೂರ ಪೈಣಾವೊ
ಮುಂದ ಮೂರು ಪೈಣಾಕಲ್ಲು ಬಿಟ್ಟಾವೊ ಬೆಳ್ಳಿ ಬೆಟ್ಟಾವೊ
ಬೆಟ್ಟಾವೊ ಬೆಳ್ಳಿ ಬೆಟ್ಟದೊಳಗ ಕಂಡಾನೊ ಕಡ್ಡಿ ರಾಜಾನೋ
ಕಂಡಾನೋ ಕಡ್ಡಿರಾಜ್ಯಾನೋ ಆಗ ದಾರಿಗಿ ಅಡ್ಡ ಬಂದಾನೋ
ಯಾವನಾಡಿದ ಕರುಬಾನೋ ನೀ ಯಾವ ದೇಶದ ಕುರುಬಾನೋ
ಯಾವದೇಶದ ಕುರುಬಾನೋ ನೀ ಎಲ್ಲಿಗೆ ಹೋಗತೀ ಅಂಬುವನೋ
ವಡ್ಡಿರಾಯರ ಮಗ ಮಾಳ ಇಂತು ಮಾತವ ಕೇಳ್ಯಾನೋ
ಇಂತು ಮಾತವ ಕೇಳ್ಯಾನೋ ಒಳ್ಳೆದೊಳ್ಳೆದಂದಾನೋ
ಕಡ್ಡಿರಾಜಗ ಮಾಳಿಗರಾಯು ಯೇನಂತ ಹೇಳಿದನೋ
ವಡ್ಡಿರಾಯರ ಮಗ ಮಾಳಾನು ದೊಡ್ಡದೇವರ ಪೂಜೇರೋ
ನನ್ನ ಗುರುವಿಗೆ ನೋಡಲ್ಲಯ್ಯ ಕರೇಮಲ್ಲಗಿ ಬೇಕೇಳೋ
ಕರೇಮಲ್ಲಗಿ ಹೂವಿನಾ ಕೈಲಾಸಕ ನಾ ಹೋಗುವೆನೋ
ಕಡ್ಡಿರಾಜನ ನೋಡಲೈ ಇಂತು ಮಾತವ ಕೇಳ್ಯಾನೋ
ಇಂತು ಮಾತವ ಕೇಳ್ಯಾನಾಗ ಮಾಳಪ್ಪಗೇನಂತ ಹೇಳುವನೋ
ಕರಿಮಲ್ಲಿಗಿ ಹೂವಿಗೆ ಮಾಳಪ್ಪ ನನ್ನ ಕಾವಲಿ ಅಂತಾನೋ
ನನ್ನ ಕಾವಲೀ ಅಂತಾನಲ್ಲೊ ದಾರಿಯ ಬಿಡೊದಿಲ್ಲಂತಾನೋ
ದಾರಿಯ ಬಿಡೊದಿಲ್ಲಂತಾನಲ್ಲೊ ದಾರಿಯ ಬಿಡೊದಿಲ್ಲಂತಾನೋ
ದಾರಿಯ ಬಿಡೊದಿಲ್ಲಂತಾನಲ್ಲೊ ದಾರಿಯ ಅಡ್ಡಗಟ್ಟುವನೋ
ಮನಿಗ್ಯಾನಪ್ಪ ನನ ಮಾಳಿಗರಾಯ ಹ್ಯುಂಗ ಮಾಡಬೇಕಂತಾನೋ
ಹ್ಯಾಂಗ ಮಾಡಬೇಕಂತಾನು ಮಾಳಿಗರಾಯ ಗುರುವಿನ ಧ್ಯಾನಾ ಮಾಡುವನೋ
ನೆಂಬಂದ ಮಾತಿಗೆ ನಂಬಿದೆನೊ ನಾ ನೆಚ್ಚಂದ ಮಾತಿಗೆ ನೆಚ್ಚಿದನೋ
ಕೈಲಾಸ ನಡದರ‍್ಯಾಗಯ್ಯ ಎಂಥ ಬಂಧನಕಹಾಕಿದನೋ
ಮನಿಗ್ಯಾನಪ್ಪ ನನ ಮಾಳಿಗರಾಯ ಗುರುವಿನ ಧ್ಯಾನಾ ಮಾಡುವನೋ
ಇಲ್ಲಿಗೆ ಹರಿಹರ ಇಲ್ಲಿಗೆ ಶಿವಶಿವ ಇಲ್ಲಿಗೆ ಇದು ಒಂದು ಸಂದೇಳೋ
ಸಂದಿನ ಪದಗಳ ವಂದಿಸಿ ಹೇಳುವೆ ತಂದಿ ಮಾಳಿಗರಾಯಾನೋ
ದೇವಾರು ಬಂದಾವು ಬನ್ನೀರೇssss

ಕಡ್ಡಿರಾಜನ ನೋಡಲ್ಲಯ್ಯಾ ಮನಿಗೇ ನೀ ಮಾಳಪ್ಪಾಗೋ
ಮನಿಗೇನಿ ಮಾಳಪ್ಪಗಾಗ ಏನಂತ ಆಗ ಹೇಳಿದನೋ
ಬಾರು ಬಾರೋ ಮಾಳಿಗರಾಯ ನಂದೊಂದು ಮಾತು ಕೇಳಂದಾನೋ
ಮರ್ತ್ಯಲೋಕದ ಒಳಗ ಮಾಳಪ್ಪ ನಿನ್ನ ಗುರುವಿನ ಸಂಗಾಟೋ
ನಿನ್ನ ಗುರುವಿನ ಸಂಗಾಟ ಮಾಳಪ್ಪ ನನ್ನ ಪೂಜಿ ನೀ ಮಾಡಿದರೋ
ನನ್ನ ಪೂಜಿ ನೀ ಮಾಡಿದರ ನಿನ್ನ ಹೂವಿಗೆ ದಾರಿ ಬಿಟ್ಟೇನೋ
ಹೂವಿನ ದಾರಿ ಬಿಟ್ಟೇನಿ ಮಾಳಪ್ಪ ಬಲಗೈ ಭಾಷೆ ನೀ ಕೊಡಬಾರೋ
ಮನಿಗ್ಯಾನಪ ನನ ಮಾಳಿಗರಾಯ ಬಲಗೈ ಭಾಷೆ ಕೊಟ್ಯಾನೋ
ಕಡ್ಡಿರಾಜನ ನೋಡಲೈಯ್ಯಾ ಹೂವಿಗೆ ದಾರಿ ತಾ ಬಿಟ್ಟಾನೋ
ಮನಿಗ್ಯಾನಪ್ಪ ನನ ಮಾಳಿಗರಾಯ ದಾಟಿದನೋ ಬೆಳ್ಳಿ ಬೆಟ್ಟಾವೋ
ದಾಟಿದನೋ ಬೆಳ್ಳಬೆಟ್ಟವ ಮಾಳಪ್ಪ ಮುಂದ ಮೂರ ಪೈಣಾವೋ
ಮುಂದ ಮೂರ ಪೈಣಾವೊ ಕಲ್ಲೆ ಬಿಟ್ಟಾವೊ ಬಂಗಾರ ಬಿಟ್ಟಾವೋ
ಬಂಗಾರ ಬೆಟ್ಟದೊಳಗಲ್ಲೈಯಾ ಹುಲಿರಾಜನು ನೋಡ್ಯಾನೋ
ಹುಲಿರಾಜನು ನೋಡ್ಯಾನಲ್ಲೋ ದಾರಿಗಿ ಅಡ್ಡ ಬಂದಾನೋ
ದಾರಿಗಿ ಅಡ್ಡ ಬಂದಾನಲ್ಲೋ ಮಾತನಾಡಿಸಿ ಕೇಳ್ಯಾನೋ
ಯಾವನಾಡಿದ ಕುರುಬಾನೋ ನೀ ಯಾವದೇಶದ ಕುರುಬಾನೋ
ಯಾವ ದೇಶದ ಕುರುಬಾನೋ ನೀ ಎಲ್ಲಿಗ್ಹೋಗತಿ ಅಂಬುವನೋ
ಮನಿಗ್ಯಾನಪ್ಪ ನನ ಮಾಳಿಗರಾಯ ಇಂತು ಮಾತವ ಕೇಳ್ಯಾನೋ
ಇಂತು ಮಾತವ ಕೇಳ್ಯಾನು ಮಾಳಪ್ಪ ಹುಲಿರಾಜಗೇನಂತ ಹೇಳಿದನೋ
ನನ್ನ ಗುರುವಿನ ಪೂಜೆಗೆ ಕರೇಮಲ್ಲಿಗಿ ಬೇಕೇಳೋ
ಕರೇಮಲ್ಲಿಗಿ ಹೂವಿಗೆ ನಾ ಕೈಲಾಸಕ ಹೋಗುವೆನೋ
ಮಾಳಿಗರಾಯನ ಮಾತಿಗೆ ಹುಲಿರಾಜನು ಹೇಳಿದನೋ
ಬಾರು ಬಾರೋ ಮಾಳಿಗರಾಯ ಕರೇಮಲ್ಲಿಗಿ ಹೂವಿಗೋ
ಕರೇಮಲ್ಲಿಗೆ ಹೂವಿಗೊ ನಾ ಕಾವಲಿ ಅಂತಾನೋ
ನನ್ನ ಕಾವಲಿ ಅಂತಾನಲ್ಲೊ ದಾರಿಗಿ ಅಡ್ಡ ತಾ ನಿಂತಾನೋ
ಮನಿಗ್ಯಾನಪ್ಪ ಮಾಳಿಗರಾಯ ಗುರುವಿನ ಧ್ಯಾನಾ ಮಾಡುವನೋ
ಹುಲಿರಾಜನ ನೋಡಲ್ಲಯ್ಯಾ ಮಾಳಪ್ಪಗ ಏನಂತ ಹೇಳುವನೋ
ಬಾರು ಬಾರೋ ಮಾಳಿಗರಾಯ ನಂದೊಂದು ಮಾತು ಕೇಳಂದಾನೋ
ಮರ್ತ್ಯಲೋಕದ ಒಳಗಲ್ಲೈಯ್ಯಾ ನಿನ್ನ ಗುರುವಿನ ಸಂಗಾಟೋ
ನಿನ್ನ ಗುರುವಿನ ಸಂಗಾಟ ಮಾಳಪ್ಪ ನನ್ನ ಪೂಜಿ ನೀ ಮಾಡಿದರೋ
ನನ್ನ ಪೂಜಿ ನೀ ಮಾಡಿದರ ನಿನ್ನ ಹೂವಿಗೆ ದಾರಿ ಬಿಟ್ಟೇನೋ
ಮನಿಗ್ಯಾನಪ್ಪ ನನ ಮಾಳಿಗರಾಯ ಒಳ್ಳೆದೊಳ್ಳೆದಂದಾನೋ
ಹುಲಿರಾಜನ ನೋಡಲ್ಲೈಯ್ಯಾ ಬಲಗೈಯ್ಯೆ ಭಾಷೆ ಬೇಡ್ಯಾನೋ
ಮನಿಗ್ಯಾನಪ್ಪ ನನ ಮಾಳಿಗರಾಯ ಬಲಗೈ ಭಾಷೆ ಕೊಟ್ಟಾನೋ
ಹುಲಿರಾಜನ ನೋಡಲ್ಲೈಯ್ಯಾ ಹೂವಿಗೆ ಇದು ಒಂದು ಸಂದೇಳೋ
ಸಂದಿನ ಪದಗಳ ವಂದಿಸಿ ಹೇಳುವೆ ತಂದಿ ಮಾಳಿಗರಾಯಾನೋ
ದೇವಾರು ಬಂದಾವು ಬನ್ನೀರೇ

ಹುಲಿರಾಜನ ನೋಡಲ್ಲೈಯ್ಯ ಹೂವಿಗೆ ದಾರಿ ತಾ ಬಿಟ್ಟಾನೋ
ಮನಿಗ್ಯಾನಪ್ಪ ನನ ಮಾಳಿಗರಾಯ ಮುಂದ ಮೂರ ಪೈಣಾವೋ
ಮುಂದ ಮೂರ ಪೈಣಾಕಲ್ಲಿ ಕೈಲಾಸ ಬಾಗಿಲೋ
ಕೈಲಾಸ ಕಡಿ ಬಾಗಿಲದಾಗ ಬಸವಣ್ಣ ದೇವರು ಕಾವಲಿಯೋ
ಆಗ ನೋಡನನ್ನ ಬಸವಣ್ಣ ದೇವರು ಶಿದ್ಧಮಾಳಪ್ಪನ್ನ ನೋಡಿದನೋ
ಸಿದ್ಧಮಾಳಪ್ಪನ್ನ ನೋಡ್ಯಾನು ಬಸವಣ್ಣ ದಾರಿಗಿ ಅಡ್ಡ ಬಂದಾನೋ
ದಾರಿಗಿ ಅಡ್ಡ ಬಂದಾನು ಬಸವಣ್ಣ ಮಾತನಾಡಿಸಿ ಕೇಳ್ಯಾನೋ
ಮರ್ತ್ಯೆಲೋಕದ ಒಳಗಲ್ಲೈಯ್ಯಾ ಯಾರ ಮಗ ಹೇಳಂತಾರೋ
ಮರ್ತ್ಯೆಲೋಕದ ಒಳಗಲ್ಲೈಯ್ಯಾ ಗುರುವಿನ ಆಶ್ರಮ ಯಾವದೋ
ಮನಿಗ್ಯಾನಪ್ಪ ನನ ಮಾಳಿಗರಾಯ ಇಂತು ಮಾತನವ ಕೇಳ್ಯಾನೋ
ಇಂತು ಮಾತವ ಕೇಳ್ಯಾನು ಮಾಳಪ್ಪ ಬಸವಣ್ಣಗೇನಂತ ಹೇಳುವನೋ
ನಾಡೈತಿ ಒಂದು ನಾಡೈತಿ ಕಲ್ಲಿಯಾಣ ನಾಡಾವೋ
ಕಲ್ಲಿಯಾಣ ಮೂಡಲ ನಾಡೋ ಮೂಡಲಗಿರಿ ಒಂದ ನಾಡೈತೋ
ಮೂಡಲಗಿರಿಯ ನಾಡಿನ ಒಳಗ ಕ್ವಾಣಿಗನೂರು ಮರವೈತೋ
ಕ್ವಾಣಿಗನೂರ ಮಟದ ಒಳಗ ಕರಿಯದೇವರು ಆಯಿದಾನೋ
ಮಂಗ ಮುದಿಗಿ ಭಂಗಿಯ ದೇವರು ಕ್ವಾಣಿಗನೂರ ಮಟದಾಗೋ
ಕರಿಯದೇವರ ಕರ್ತದ ಮಗ ನೋಡಲ್ಲೈಯ್ಯಾ ಕೈಲಾಸಕ ಹೋಗುವೆನೋ
ಸಾಕನಾಡೋ ಸವರನಾಡೋ ಹುಲ್ಲಜಂತಿಯ ಗ್ರಾಮವೋ
ಹುಲ್ಲಜಂತಿಯ ಗ್ರಾಮದೊಳಗ ತಂದಾಳೊ ಸೋಮರಾಯನೋ
ತಂದೇಳು ಸೋಮರಾಯಾನಲ್ಲೊ ತಾಯೇಳು ಕಣ್ಣು ಬಾಯೇಳೋ
ಅಣ್ಣಾನೋ ಜಕರಾಯಾನೋ ನನ ತಮ್ಮಾನೋ ಮಾಳರಾಯಾನೋ
ಜಾತಿಯಲ್ಲಿ ನಾ ಬ್ರಾಹ್ಮಣನೋ ನೀರಿಯಲ್ಲಿ ನಾ ಕುರುಬನೋ
ನೀತಿಯಲ್ಲಿ ನಾ ಕುರುಬಾನು ಕುಲಬಿರುದು ಹೊತ್ತು ನಾ ಮೆರೆಯವೆನೋ
ಆಗ ನೋಡು ನನ ಬಸವಣ್ಣದೇವರು ಒಳ್ಳೆದೊಳ್ಳದೆಂದಾನು ಬಸವಣ್ಣ
ಮತ್ತೇನಾಗ ಕೇಳುವನೋ

ಕೆರಿಯ ದೇವರ ಕರ್ತನಿಗೆ ಆಳಿನ ನಾಮೊಂದು ಯಾವದೋ
ಆಗ ನೋಡ ನನ ಶಿದ್ಧಮಾಳಪ್ಪ ಬಸವಣ್ಣಗ ಏನಂತ ಹೇಳಿದನೋ
ವಡಿರಾಯರ ಮಗ ನಾ ದೊಡ್ಡದೇವರ ಪೂಜೇರಿಯೋ
ಸಿದ್ಧರೊಳಗ ಶಿವಗೇನಿ ನಾ ಮನುರೊಳಗ ಮನಿಗೇನೋ
ಆಗ ನೋಡ ನನ ಬಸವಣ್ಣ ಮತ್ತ ಏನಂತ ಕೇಳುವನೋ
ಮರ್ತ್ಯೆಲೋಕದ ಮಾನವರಾರು ಇಲ್ಲಿಗೆಂದು ಬಂದಿಲ್ಲೋ
ಇಲ್ಲಿಗೆ ಯಾರು ಬಂದಿಲ್ಲೆಂದು ಎಲ್ಲಿಗೆ ಹೋಗತಿ ಅಂಬುವನೋ
ಬಾರು ಬಾರೋ ಬಸವಣ್ಣಾ ನಾಯೇನು ಹೇಳಲಿ ಅಂತಾನೋ
ನನ್ನ ಗುರುವು ನೋಡಲ್ಲೈಯ್ಯಾ ಬಗಸಬಾರಿದ ಬಗಸ್ಯಾನೋ
ಬಗಸಬಾರದ ಬಗಸ್ಯಾನೋ ಅವ ಬೇಡಬಾರದ ಬೇಡ್ಯಾನೋ
ಕಪ್ಪಿಕಲಕದ ಶೀತಾಳ ಬೇಡ್ಯಾನು ಹುಳವ ಮುಟ್ಟದ ಹೂವೇಳೋ
ಮಾನುಲೋಕದಾಗ ಇಲ್ಲವೆಂದ ಕೈಲಾಸಕ ಹೋಗುವೆನೋ
ಕರಿಯದೇವರ ಕರ್ತದ ಮಗನೊ ಕೈಲಾಸಕ ಹೋಗುವೆನೋ
ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ ಇಲ್ಲಿಗೆ ಇದು ಒಂದು ಸಂದೇಳೋ
ಸಂದಿನ ಪದಗಳ ವಂದಿಸಿ ಹೇಳುವೆ ತಂದಿ ಮಾಳಿಗರಾಯನೋ
ದೇವಾರು ಬಂದಾವು ಬನ್ನೀರೇssss

ಕರಿಯದೇವರ ಕರ್ತದ ಮಗನೊ ಕೈಲಾಸಕ ಹೋಗುವೆನೋ
ಆಗ ನೋಡು ನನ ಬಸವಣ್ಣ ಸಿದ್ಧಮಾಳಪ್ಪಗ ಹೇಳಿದನೋ
ಹುಳವ ಮುಟ್ಟದ ಹೂ ಅಂದರ ಕರೀ ಮಲ್ಲಿಗಿ ಹೂವೇಳೋ
ಕಪ್ಪಿಕಲಕದ ಶೀತಾಳೆಂದರ ಹಾಲುಮತದ ಭಾವೇಳೋ
ಕರೇಮಲ್ಲಿಗಿ ಹೂವಿಗೆ ಮಾಳಪ್ಪ ಹಾಲುಮತದ ಭಾವಿಗೋ
ಹಾಲಮಠದ ಭಾವಿಗೆ ಮಾಳಪ್ಪ ಕಾಳಿಂಗರಾಯನ ಕಾವಲಿಯೋ
ಹಾಲಮತದ ಭಾವಿಗೆ ಶೀತಾಳ ಗಂಗವ್ವನ ಕಾವಲಿಯೋ
ಕರೇಮಲ್ಲಿಗಿ ಹೂವಿಗೆ ಏಳು ಹೆಡಿ ಕಾಳಿಂಗೋ
ಏಳು ಹೆಡಿ ಕರಿಕಾಳಿಂಗ ಮಾಳಪ್ಪ ಹೂವಿಗೆ ಸುತ್ತ ಬಿಗದಾನೋ
ಹೂವಿಗೆ ಸುತ್ತ ಬಿಗದಾನು ಮಾಳಪ್ಪ ಹಿಂದಕ ಹೋಗಂತ ಹೇಳಿದನೋ
ಮನಿಗ್ಯಾನಪ್ಪ ನನ ಮಾಳಿಗರಾಯಾ ಬಸವಣ್ಣಗೇನಂತ ಹೇಳಿದನೋ
ಮುಂದಕಿಟ್ಟ ಹೆಜ್ಜ್ಯೊ ಬಸವಣ್ಣ ಹಿಂದಕ ಇಡೋದಿಲ್ಲಂತಾನೋ
ನನ್ನ ಗುರುವಿನ ಸಲುವಾಗಿ ನನ ಪ್ರಾಣ ಹೋಗಲಿ ಅಂತಾನೋ
ಪ್ರಾಣ ಹೋಗಲಿ ಅಂತಾನು ಮಾಳಪ್ಪ ಮುಂದಕ ಹೋಗೋ ವ್ಯಾಳ್ಯಾಕೋ
ಆಗ ನೋಡಾ ನನ ಬಸವಣ್ಣದೇವರು ದಾರಿಗಿ ಅಡ್ಡ ಗಟ್ಟುವನೋ
ಬಾರು ಬಾರೋ ಮಾಳಿಗರಾಯಾ ಕರೇಮಲ್ಲಿಗಿ ಹೂವಿಗೋ
ಕಪ್ಪಿ ಕಲಗ ಶೀತಾಳಕ ನನ್ನ ಕಾವಲಿ ಅಂತಾನೋ
ನನ್ನ ಕಾವಲಿ ಅಂತಾನು ಬಸವಣ್ಣ ದಾರಿಯ ಬಿಡೊದಿಲ್ಲಂತಾನೋ
ಮನಿಗ್ಯಾನೆಪ್ಪ ನನ ಮಾಳಿಗರಾಯ ಹಂಗದೊರದ ಕುಂತಾನೋ
ಹಂಗದೊರೆದ ಕುಂತಾನಲ್ಲೊ ಹ್ಯಾಂಗ ಮಾಡಬೇಕಂತಾನೋ
ಹ್ಯಾಂಗಮಾಡಬೇಕಂತಾನು ಮಾಳಪ್ಪ ಗುರುವಿನ ಧ್ಯಾನಾ ಮಾಡುವನೋ
ಕೈಲಾಸ ಕಡಿ ಬಾಗಿಲದಾಗ ಎಂಥ ಬಂಧನಕ ಹಾಕಿದನೋ
ಹರಹರನೋ ನನ ಕರಿಯದೇವರು ಎಂಥ ಬಂಧನಕ ಹಾಕಿದನೋ
ನಂಬಂಧ ಮಾತಿಗೆ ನಂಬಿದೆನೋ ನಾ ನೆಚ್ಚಂದ ಮಾತಿಗೆ ನೆಚ್ಚಿದನೋ
ಹೇಳಿ ಕಳುವಿದ ಮಾತಿಗೆ ಬಂದೆನು ಕೈಲಾಸ ಕಡಿ ಬಾಗಿಲೋ
ಕೈಲಾಸ ಕಡಿ ಬಾಗಿಲದಾಗ ಎಂಥ ಬಂಧನಕ ಹಾಕಿದನೋ
ಎಂಥ ಬಂಧನಕ ಹಾಕಿದನೆಂದು ಗುರುವಿನ ಧ್ಯಾನಾ ಮಾಡುವನೋ
ಗುರುವಿನ ಧ್ಯಾನಾ ಮಾಡ್ಯಾನು ಮಾಳಪ್ಪ ತ್ರೀಪುಂಡಧಾರಣ ಹಣೆಯಲ್ಲೋ
ಭಂಡಾರ ಬಟ್ಟೊಂದು ಇಟ್ಟಾನು ಮಾಳಪ್ಪ ಗುರುವಿನ ಧ್ಯಾನಾ ಮಾಡುವನೋ
ಮಾಳಿಗರಾಯನ ಹಣೆಯಲ್ಲಿದ್ದ ತ್ರೀಪುಂಡಧಾರಣ ಭಸ್ಮಾವೋ
ಭಸ್ಮವು ಹಾರಿತು ಭಂಡಾರ ಕಂಡಿತು ಆಗ ನೋಡಿದ ಬಸವಣ್ಣೋ
ಆಗ ನೋಡಿದ ಬಸವಣ್ಣದೇವರು ಒಳ್ಳೆದೊಳ್ಳೆದಂದಾನೋ
ಒಳ್ಳೆದೊಳ್ಳೆದಂದಾನು ಬಸವಣ್ಣ ಮಾಳನ ಜಡಿಯ ಉಟ್ಟಾನೋ
ಮಾಳನ ಜೆಡಿಯ ಉಟ್ಟಾನು ಬಸವಣ್ಣ ಕಂಡಾನು ಶಿವಲಿಂಗವನೋ
ಕಂಡಾನು ಶಿವಲಿಂಗವ ಬಸವಣ್ಣ ಸಾವಿರದ ಎಂಟನೂರವನೋ
ಸಾವಿರದ ಎಂಟನೂರ ಲಿಂಗವ ಬಸವಣ್ಣಾಗ ನೋಡಿದನೋ
ಬಾರು ಬಾರೋ ಮಾಳಿಗರಾಯಾ ನಂದೊಂದು ಮಾತು ಕೇಳೆಂದಾನೋ
ವಡ್ಡಿರಾಯರ ಮಗ ಮಾಳಾಗ ಬಸವಣ್ಣದೇವರ ಮಾತಿಗ್ಯೋ
ಬಸವಣ್ಣದೇವರ ಮಾತಿಗೆ ಮಾಳಿಗರಾಯಾ ಹೇಳಂದಾನೋ
ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ ಇಲ್ಲಿಗೆ ಇದು ಒಂದು ಸಂದೇಳೋ
ಸಂದಿನ ಪದಗಳ ವಂದಿಸಿ ಹೇಳುವೆ ತಂದಿ ಮಾಳಿಗರಾಯನೊ
ದೇವಾರು ಬಂದಾವು ಬನ್ನೀರೇssss