ವೀರ ಅಭಿಮನ್ಯುವಿನ ಪದ

ಅಭಿಮನ್ಯು ಇದ್ದ ರಣಶೂರ
ರಣದೊಳಗ ತಾ ಗಂಭೀರ
ಚಕ್ರಕೋಟೆಯೊಳಗೆ ಲಡಾಯಿ ಮಾಡಿದನು
ಯಾರ ಇಲ್ಲರೀ ಮಗನಂತವರ                || ೧||

ತಾಯಿ ತಂದೆಗೆ ಮಗ ಸಣ್ಣವ
ನಕುಲ ಅವನ ಮ್ಯಾಗ ಬಲೇಜೀವ
ಲಡಾಯಿ ಮಾಡಾಕ ಅವರೆಲ್ಲಾ ಹೊಂಟರ
ಬರತೇನಂತ ಹಠಮಾಡಾವ                  || ೨ ||

ತಂದಿ ರಥದೊಳಗ ಕುಂದ್ರಾವ
ಕೃಷ್ಣ ಅವರ ಸೋದರ ಮಾವ
ಚಕ್ರಕೋಟೆ ತಂಗಿಗೆ ಹೇಳುವಾಗ
ಹೊಟ್ಟೆಯೊಳಗ ಕುಂತ ಕೇಳದವ             || ೩ ||

ಅಭಿಮನ್ಯುನ ಜೀವ ಸುತ್ತ ಮುತ್ತ
ಮುಂದೆ ಬರುವದು ಐತಪ್ಪ ಘಾತ
ಹೇ ಬ್ರಹ್ಮ ಬರೆದ ಲಿಖಿತ ಇದು
ಯಾರಿಗೂ ತಪ್ಪದ ಈ ಮಾತ                 || ೪ ||

ನೂರಂದಮಂದಿ ಕೌರವರ
ದುರ‍್ಯೋಧನೊಂದು ಬಹಳ ಅಹಂಕಾರ
ಮಂಚದಮ್ಯಾಗ ಮನಗಿದ ಕೃಷ್ಣ
ಕೇಳಾಕ ಹೋದ ದುರ‍್ಯೋಧನ               || ೫ ||

ಯಾರ ಕಡೆಗೆ ಸಾರಥಿಯಾಗತ್ತೀರಿ
ಹೇಳಬೇಕರಿ ಸ್ವಾಮಿ ನಮಗ
ಈಗ ಹೇಳುವದಿಲ್ಲ ನಾನು
ನಾಳೆ ಮುಂಜಾಲೇ ಎದ್ದು ಬಾಹೋಗ ನೀನು           || ೬ ||

ಹರಿಯಲು ಎದ್ದು ನನ್ನ ದೃಷ್ಟಿಲೀ
ಬಿದ್ದೋರ ಸಾರಥಿಯಾಗುವೆ ನಾನು
ಹೊರಳಿ ಬಂದನು ದುರ‍್ಯೋಧನ
ಗಾದಿ ಮ್ಯಾಗ ತಾ ಕುಂದ್ರುವನ               || ೭ ||

ಕಾಲದಸಿಲೇ ಕುಂತ್ರ ಅಬ್ರು ಹೋದಿತೆಂದು
ತಲೇ ಗುಂಬಿಲೇ ಕುಂತಾನು
ಅರ್ಜುನ ತಾನು ಹೋದಾನು ಹಿಂದಿಂದ
ಸ್ವಾಮಿ ಪಾದಕ ಇರಬೇಕಂದ                 || ೮ ||

ಅರವುಆತು ಅವ ಬಂದದ್ದು
ಅವನ ಕಡೆಗೆ ಮಾರಿ ಮಾಡಿ ಎದ್ದ
ಸ್ವಾಮಿ ಸಾರಥಿ ಆಗಿರೆಂದು ಕೈಮುಗಿದಾ
ಯಾಕ ಆಗಬಾರದು ಇರತೇನಂದಾ          || ೯ ||

ಅವನಕ್ಕಿಂತ ಮುಂಚೇಕ ಬಂದವರು
ಸ್ವಾಮಿ ಸಾರಥಿ ನಮಗ ಇನ್ಯಾರು
ದುರ‍್ಯೋಧನಗ ಹತ್ತಿತು ಚಿಂತಿ
ಓಡಿ ಹೋದನು ಬಲರಾಮನ ಹಂತೇಲಿ                || ೧೦ ||

ಬಲರಾಮ ಆಗ್ಯಾನು ಅವರಂತೆ
ಕೃಷ್ಣ ಮಾಡ್ಯಾನು ಮತ್ತೊಂದು ಯುಗತಿ
ಮಾಯೆದ ಗೋವು ಮುಂದೆ ಕಳುಹಿದ
ಹಳ್ಳ ಒಗದರ ಸತ್ತೈತಿ                || ೧೧ ||

ಬಲರಾಮನಗ ಆಗೈತಿ ಗೊತ್ತ
ಓಡಿ ಬಂದಾನು ಕೃಷ್ಣನ ಹಂತೇಲಿ
ಧೈರ್ಯ ಹೇಳಿದ ಕೃಷ್ಣದೇವರು
ಮೂರ ಲೋಕಕೆ ಮರಲಿಧರ                  || ೧೨ ||

ಪೃಥ್ವಿ ಪ್ರದಕ್ಷಿಣೆ ನೀವು ಹೋದರ
ನಿಮ ಕರ್ಮ ಹಿಂದಗಾತಯಿತಿ
ಬಲರಾಮ ತಯಾರಾಗಿ ಹೊಂಟ
ಕೌರವರಿಗೆ ಬಿದ್ದಿತು ಸಂಗಟ                   || ೧೩ ||

ಶ್ಯಾಮ ಸಪ್ತೆಕರನ ಕರಸಿ ಹೇಳಿದನು
ಹಿಂದ ಆದ ಮೂಲಾಂಬಗಿರಿ
ಹಿಂದಕ ನಿಮ್ಮ ತಂದೆ ಅರ್ಜುನನ ಕೊಂದಾಗ
ಯಾವಲ್ಲಿದ್ದಿರೀ ಎಲ್ಲಿ ಮನಗಿದ್ದಿರೀ              || ೧೪ ||

ಅವರ ಹೊಟ್ಟೆಯಾಗ ಬಿದ್ದಿತು ಉರಿ
ಅರ್ಜುನನ ಮಾಡೇವ ಸೂರಿ
ಪಂಚಪಾಂಡವರು ನಮ್ಮ ಕೈಯ್ಯಾಗ
ದಾಟಿ ಹೋಗುವದು ಇನ್ನೈತಿ ಬಿರೀ           || ೧೫ ||

ಇತ್ತ ಕಡೆಗೆ ಶ್ಯಾಮ ಸಪ್ತೆಕರ
ಅರ್ಜುನಗ ಬಂತು ಬಲಿ ಘೋರ
ಎರಡು ಕಡೆಗೆ ಹೋಗುವರ‍್ಯಾರ               || ೧೬ ||

ಶ್ಯಾಮ ಸಪ್ತಕರ ಕಡೆಗೆ
ಅರ್ಜುನ ಹೊಂಟ ಕೃಷ್ಣ ಸಾರಥಿ
ಆಗ್ಯಾನ ಆವಾಗ ಎಂದು ಬರುವದು
ನಿರ್ಧಾರ ಇನ್ನು ಹದಿನೆಂಟು ದಿವಸಕ                   || ೧೭ ||

ತಯಾರ ಆತು ಚಕ್ರಕೋಟೆ
ತಯಾರ ಆಗ ಬಾ ಅಂತ ಕರಿತಾರು
ಕೌರವರು ಚಕ್ರಕೋಟೆಗೆ
ಅಭಿಮನ್ಯು ಹೋಗ್ತಾನು ಶಂಸಬಿಡಿರಪ್ಪ ಮನದಂದು   || ೧೮ ||

ನಕುಲ ಸಹದೇವ ಧರ್ಮ ಭೀಮಸೇನ
ಚಕ್ರಕೋಟೆಗೆ ಹೊರಟಾರ ಆಗ
ಚಕ್ರಕೋಟೆ ಬಂತು ಸನಿಯಾಕ
ಆಗ ಜಯದ್ರಥ ಇದ್ದನು ಬಾಗಲಕ             || ೧೯ ||

ಎರಡು ಮೂರು ಬಾಣಕ ಸೋತು
ಬಂದರು ಅವರು ಹಿಂದಕ
ಧರ್ಮ ಹಾಕಿದ ಮುಸುಗ
ಅರ್ಜುನಗ ಹೆಂಗ ತೋರಲೀಮುಖ           || ೨೦ ||

ಧೈರ್ಯ ಗುನ್ನಿದರು ನಾಲ್ವರೋ
ಮುಣಗಿತು ಅಂದರು
ಪಾಂಡವರ ಹೆಸರು
ಅಭಿಮನ್ಯು ಬಂದನಾ ಒಳಗಿಂದ              || ೨೧ ||

ಕಳಾ ಹಿಡದಾನ ನಾಕು ಮಂದಿದ
ಮಾರಿಯಾಕ ಸಣ್ಣದು ಮಾಡೀರಿ
ಹೇಳಬೇಕರಪ್ಪ ನನ ಮುಂದ
ಅನುಭವ ತಿಳಿದಾನು ಹೊಟ್ಯಾಂದ            || ೨೨ ||

ಇಳವ ಕೊಡಿರೆಪ್ಪ ನನಗೊಂದ
ಇನೇಷ ಮಾತ್ರದಲೀ ಕೌರವರನ
ಕಡೆದು ಹಾಕತೇನಿ ನಾ ಛಾಪ
ನಾಶನಲ್ಲಿ ಕುಲದೀಪ ಹುಟ್ಟಿದ ಹೆಸರು                  || ೨೩ ||

ತಂದಿ ಪಾಂಡುರಾಜ ಅಧರ್ಮ ಅಂತಾನ
ಬೇಡಾಂತ ನೀನು
ಅನುಬಾರದಪ್ಪ ನೀ ಈ ಮಾತ
ಸಣ್ಣ ಮಗನ ಕಳೂಸದ ಹೆಂಗ                 || ೨೪ ||

ಜನ ಏಳು ಅಂದಿತು ನಮಗ
ಹೋದ ಕಾರ್ಯವು ನನ ಮಗಂದು
ಆಗಲೆಂತ ಹರಕೆ ಕೊಡಿರೆಪ್ಪ ನೀವು ನಿಂತ
ಧರ್ಮ ಬೀಮಗ ಖುಷಿ ಬಂದ

ಹವಾಯಿ ಹಸ್ತ ಇಟ್ಟಾರ ಕರದು                || ೨೫ ||
ತಾಯಿ ಬಂದಾಳು ಸುಭದ್ರ
ಕೊಂದು ಹೋಗು ನಮ್ಮನೆಲ್ಲಾರನು
ತಾಯಿಗೆ ಹೇಳಿದನು ನಿಷ್ಠುರಮಾತು
ನಿನ್ನ ಶಿರಾ ಇರುವದು ಖಚಿತ                 || ೨೬ ||

ಹೋದ ಕಾರ್ಯ ನನ ಮಗಂದ
ಆಗಲೆಂತಾ ಹರಕೆ ಕೊಡ ತಾಯವ್ವ
ನಿಂದು ರಣದೊಳಗ ಜಯಶೀಲನಾಗಿ
ಹೋಗಿ ಬಾರೋ ಕಂದವ್ವ ನೀನ              || ೨೭ ||

ಚಕ್ರಕೋಟೆಗೆ ಅಭಿಮನ್ಯು ಹೋಗ್ತಾ
ಬಾಣ ಬತ್ತಳಿಕೆ ಅವನ ಬಗಲಾಗ
ಬಾಣ ಬತ್ತಳಿಕೆ ಅವನ ಬಗಲಾಗ
ತುಡಮಿ ನಗಾರ ನುಡಿಸ್ಯಾರು                 || ೨೮ ||

ಹೊರಗ ನಗಾರಿ ಸೌ ಭತ್ತು
ತೂತರೀ ಸಪ್ಪುರೀ ಹಿಂದ
ಬದರಿ ಕಾಳಿ ಹಿಡಸ್ಯಾನ
ಆಯುಧಗಳ ತನ್ನ ಸಾಯುತ ತಗೊಂಡ                || ೨೯ ||

ಹೋಗಿ ಹತ್ಯಾನು ರಥ
ಕಳಸಾಕ ಹೊರಟಾರ ಒಂದ ಕೇಳು
ಹೋಗರಿ ಅಂತಾನ ಅಭಿಮನ್ಯು ಭೂಪ
ಊರೆಲ್ಲಾ ಮಾಡ್ಯಾರ ಆಳಾಪ                 || ೩೦ ||

ಈ ವ್ಯಾಳೇಕ ಇಲ್ಲನೋಡ ಅವರಪ್ಪ
ರಥ ಹೊರಟಿತು ರಂಪಾರ
ನಡುಗ್ಯಾನು ಕೈಲಾಸ ಶಂಕರ
ರಥ ಕಂಡರು ಕೌರವರು             || ೩೧ ||

ಇಷ್ಟು ದೌಡು ಬರುವವರ‍್ಯಾರು
ಬ್ರಹ್ಮ ವಿಷ್ಣು ಶಿವ ಶಂಕರ ಮತ್ತಿನ್ಯಾರ
ಶಿವನ ಮಗ ಷಣ್ಮುಖನಾದರ
ಅಯಿತಿ ವೀರಭದ್ರನ ಅವತಾರ               || ೩೨ ||

ಅವರು ಪುರಮಾಸಿ ಇಲ್ಲಿಗ ಬಂದರ
ನಾವು ಆಗತೇವಿ ಸಂಹಾರ
ಸಾರಥಿಗೆ ಹೇಳ್ಯಾರ ಹುಶಾರಿ
ಅಗಸಿಗೆ ಬಂತು ಕಾಳಿ ತಯಾರಿ               || ೩೩ ||

ಚಕ್ರಕೋಟೆ ಬಂತು ಸನಿಯಾಕ
ಜಯದ್ರಥ ಇದ್ದ ಬಾಗಲಕ
ಜಯದ್ರಥ ಅಭಿಮನ್ಯುನ ಕಂಡು
ಭಪ್ಪರೇ ಮಗನ ಬಹದ್ದೂರ          || ೩೪ ||

ನೀ ಬಂದದ್ದು ಹೆಚ್ಚು ಇಲ್ಲಿಗೆ
ನೀ ಎಲ್ಲಾರಿಗ ಮಗ ಹೋಗ ತಿರುಗಿ
ನಾನು ಬಂದೇನಿ ನಿಮಗಾಗಿ
ಬೇಕದಾರ ಹೋಗ ಶಿಖಂಡಿ                   || ೩೬ ||

ಬರುವ ಬಾಣ ಹೊಡಿತಾನ ವಾರಿ
ಕಡದು ಕಡದು ಮಾಡತಾನ ಸೂರಿ
ಕೌರವ ಆಗ್ಯಾನು ಕೈಸೆರಿ ರಥಕ
ಕಟ್ಟಿ ಹೇಳ್ಯಾನು ಸಾರಿ               || ೩೭ ||

ಕ್ಷತ್ರಿ ವಂಶದವರು ನೀವ ಆದರ
ಬಿಡಸಿಕೊಂಡು ನೀವು ಹೋಗರೀ
ಮಾತಾಡಿ ಮಾಡಿದರು ಮಸಲತ್ತ
ಬೆನ್ನಿಗೆ ಬಿದ್ದವರನ ಕೊಲ್ಲಬಾರದಂತ          || ೩೮ ||

ಕಿರಿಯವ ಕೊಟ್ಟಾನು ಅವರಂತೆ
ಕೊಲ್ಲೊದಿಲ್ಲ ಮ್ಯಾಲೆ ಏಳಂತೆ
ಕರ್ಣಗ ಹೇಳಿದರು ಏಕಾಂತ
ಹಿಂದು ಬಂದ ಕಡಿಬೇಕಂತಾ                  || ೩೯ ||

ಕರ್ಣ ಬಂದು ಹಿಂದ ಕೈ ಕಡದಾ
ಹಾರಿ ಹೋದವು ಎರಡು ಹಸ್ತಾ
ರಥದ ಗಾಲಿಯೊಳಗ ಮಂಡಗೈಯಿ
ಹೆಟ್ಟಿ ತಿರುವಾಡಿ ಒಗಿತ್ಯಾನು                  || ೪೦ ||

ಗುಂಪಿಗೆ ಅಭಿಮನ್ಯು ನಿಂದರವಲ್ಲಾ
ಕಾಲಗೆರಿ ಹಿಂದಿನವರು ಕಡಿತಾರು
ಆವಾಗ ಆಯಿತು ಅವರಿಗೆ ಧೈರ್ಯ
ಮುಕರಿ ಬಂದರು ಅವರೆಲ್ಲಾರು                || ೪೧ ||

ಸಾಗ ಕಂಬಳಿ ಮಡಿಗೆ ಮುಳ್ಳು
ಚೂಟದಂಗ ಬಾಣ ಬಡಿದಾವ ಯಾವ ಪರಿ
ದೇವಲೋಕದವರು ಅಳುತ್ತ
ಕಣ್ಣೀರು ಆಗಿ ಸುರಿದಾವ ಮುತ್ತ               || ೪೨ ||

ಅಭಿಮನ್ಯು ಇದ್ದರಣಶೂರ
ರಣದೊಳಗ ತಾ ಗಂಭೀರ
ಚಕ್ರಕೋಟೆಯೊಳಗ ಲಡಾಯಿ ಮಾಡಿದನು
ಯಾರೂ ಇಲ್ಲರೀ ಮಗನಂತವರ              || ೪೩ ||

* * *

 

ಡೊಳ್ಳಿನ ಪದಗಳು

[1]

ಪುಂಡ ಭೂತಾಳ ಸಿದ್ಧದೇವರು

ಸಲ್ಲಿಹೊತ್ತಿನ ನನ್ನ ಗುರುವಿನ ಕರದರ ಮಲ್ಲೀಗಿ ನೆನಿಬಂದ ಇಳಿದಾವ
ಮಲ್ಲೀಗಿ ಹೇಳ ಮಂಟಪದೊಳಗ ಗೊಲ್ಲಾಳ ಶಿವಾ ಬಂದ ಇಳಿದಾನ

ಗೊಲ್ಲಾಳ ಶಿವನೇ ನೀನೇ ಬಾ ನನ್ನ ಸಲ್ಲಗುದರಿ ಸಾಯೇಬೋ
ಸಲ್ಲಗುದರಿ ಕೈಯಾಗ ಹಿಡಕೊಂಡ ಸೊಗಸಾಗಿ ಮಾಡಿ ತಿರಿವ್ಯಾಡಿದೋ

ಗೊಲ್ಲಗುದಂ ಬಲಗೈಯ ಮ್ಯಾಲ ಬಲ್ಲಾಂಗ ತಿರಿವ್ಯಾಡಿದೋ
ಕೆಂದಗುದರಿ ಒಂದ ಗದ್ದದ ಮ್ಯಾಲ ಇಂಡಿಮಾಡಿ ಇಡ್ಯಾಡಿದೋ
ಇಂಡಿ ಮಾಡಿ ಈಡ್ಯಾಡುತ ಬಾ ನನ್ನ ದುಂಡ ಮಲ್ಲೀಗಿ ಧಡಿಗೊಳೊ

ದುಂಡ ಮಲ್ಲೀಗಿ ಧಡಿಗೋಳ ನಿನಗ ಸಣ್ಣಮಲ್ಲೀಗಿ ಸರಗೊಳೋ
ಸಣ್ಣ ಮಲ್ಲೀಗಿ ಸರಗೋಳ ನಿನಗ ಮಲ್ಲೀಗಿ ಹೂವಿನ ಮುಂಡಾಸೋ

ಮಲ್ಲೀಗಿ ಹೂವಿನ ಮುಂಡಾಸ ನಿನಗ ಶಾವಂತ್ರಿಹೂವಿನ ಶೆಲ್ಲೆನೋ
ಜಲ್ಲಿ ಜಲ್ಲಿಲೇ ಹುವ ಬಂದರ ಜಲ್ಯಾಡಿ ಮುಡಿದಿನಂದಾನೋ
ಬಂಡಿ ಬಂಡಿಲೇ ಹೂವ ಬಂದರ ಮಂಡಿಗಿ ಸಾಲ್ಯಾವ ಅಂದಾನೋ

ಅವರಿ ಪತ್ತರಿ ಅಡವ ಹಚ್ಚಿಕೊಂಡ ಹೋಳ ಮೈಯಲೇ ಹೊಳ್ಯಾನೋ
ಎಳಪ್ಪ ಎಬ್ಬಸತಾನ ಕೆಂಗರಣ್ಣಾ ತೆರದಾನೋ
ಕೆಂಗರಗಣ್ಣ ಗುಂಗರ ಮೀಸಿ ನುಂಗುವಂಥಾ ಭಾಳ ಅವತಾರೊ
ನುಂಗುವಂಥಾ ಭಾಳ ಅವತಾರನಂದರ ಬೈಲ ಭೂತಳಸಿದ್ದನೋ
ಬೈಲಭೂತಾಳ ಸಿದ್ದಾ ಬಾ ನನ್ನ ಬಡವರ ಅರ್ಜಿ ಬಂದಾವೋ

ಬಡವರ ಅರ್ಜಿ ಬಂದಾವೇನ ಬಲ್ಲವರ ಅರ್ಜಿ ಬಂದಾವೋ
ನಮ್ಮದೇವರ ಬರುವ ಹಾದೀಲೆ ಕಗ್ಗಲ್ ಕಡಿ ಆದಾವೋ
ಕಗ್ಗಲ್ ಕಡಿ ಆದಾವ ಹಿಡಗಲ್ ಹಿಟ್ಟ ಆದಾವೋ
ಹಿಂಡದೇವಿಯ ಗಂಡನಂದರ ಗಂಡದೇವಿಯ ಮಿಂಡನೋ
ಗಂಡದೇವಿಯ ಮಿಂಡನಂದರ ಪುಂಡ ಭೂತಾಳ ಸಿದ್ದನೋ

* * *

ಹರ ನಿನ್ನ ನೆನದೀನ ಗುರು ನಿನ್ನ ನೆನದೀವ
ಮರತ್ಯೇ ಸಲವುನ ಬಸವಾನೋ

ಮರತ್ಯೇ ಸಲವುನ ಬಸವಾನ ನೆನೆದೀನ ಬಾಗೋಡಿ ಬಸವಣ್ಣನೋ
ಬಾಗೋಡಿ ಬಸವನ ನೆನದೀವೋ ತಿಳಿಗಾವೆ ಬಸವಣ್ಣನೋ

ತಿಳಿಗಾವಿ ಬಸವನ ನೆನದೀವೋ ಕಡಪಟ್ಟ ಬಸವಣ್ಣನೋ
ಕಡಪಟ್ಟ ಬಸವನ ನೆನದೇವೋ ಕೊಡೆಕಲ್ ಬಸವಣ್ಣನೋ

ನಾರಿಯ ಹೊಟ್ಟಿಲೆ ಹೊರ‍್ಯಾಗಿ ಹುಟ್ಯಾನ
ಹೊನ್ನ ಬೊರ‍್ಯಾಳ ಬಸವಾನೋ

ಬೋರ‍್ಯಾಳಿ ಬಸವಾನ ನೆನದೀವೋ ಪರಪೂತ ಮಲ್ಲನ ನೆನದೀವೋ
ಪರವೂತ ಮಲ್ಲನ ನೆನದೀವೋ ಪಾತಾಳ ಗಂಗೀನ ನೆನದೀವೋ
ತೊಡಿಮ್ಯಾಲಿರುವ ಗೌರಾನ ನೆನದೀವ ಜಡಿ ಒಳಗಿರುವ ಗಂಗಾನೋ

ನಟ್ಟ ನಡುವೂ ನಮ್ಮಯ್ಯ ಪರಮೇಸೂರನ ನೆನದೀವೋ
ಪರಮೇಸೂರನ ನೆನದೀವೋ ನಾವ ಪಾರಬತಿ ದೇವಿನ ನೆನದೀವೋ

* * *

ರತ್ನ ಒಂದ ದೊರದಿತ ನನಗ ಓದ ಕೊಟ್ಟನಪಾ
ಕುರುಬನ ಕೈಯ್ಯಾಗ

ಅದರ ಮೂಲ ತಿಳಿಲಿಲ್ಲ ಕುರುಬಗ
ಹವಳಂತೆ ತಿಳಿದ ಮನದಾಗ

ಓದ ಕಟ್ಟ್ಯಾನಪ ಕುರಿ ಕೊಳ್ಳಾಗ
ಕುರಿಯ ಅಂತೈತಿ ತನ್ನ ಮನದಾಗ
ಆನಿಯಷ್ಟ ಉದ್ದ ಆಗೀನ ಈಗ

ಆನಿ ಕಿಮ್ಮತ್ತ ಕುರಿ ಆದೀತ ಹ್ಯಾಂಗ
ರತ್ನ ವ್ಯಾಪಾರಾತ ತನ್ನೊಳ್ಯಾಗ
ಯೋಗಣ್ಣ ಸಿದ್ದ ಹಾಡ್ಯಾರ‍್ಹಿಂಗ
ತಾಳ ಮೆಟ್ಟ ಲಯಾ ಸ್ವರಾ ಕೋಗಿಲ್ಹಾಂಗ
ರೇಲ್ವೆಗಾಡಿ ನಡದಾಂಗಾತೋ ಹಳಿಮ್ಯಾಗ
ಅಮೋಗಸಿದ್ಧ ವರುವಾದನೋ ಯೋಗಣ್ಣಗ

* * *

ಕತ್ತಲ ಮನಿಯೋ ಕನ್ನಡಿ ಬೆಳಕೋ
ಮುತ್ಯಾ ಅರಕೇರಿ ಗೌಡಾನೋ
ಮುತ್ಯಾ ಅರಕೇರಿ ಗೌಡಾ ಬಾ ನನ್ನ ಮುಪ್ಪೀಲೆ ಭಾಳ ಹಿರಿಯನೋ
ಮುಪ್ಪೀಲೆ ಧಾಳ ಹಿರಿಯಾ ನನ್ನ ಕಪ್ಪೀಲೆ ಭಾಳ ಕರಿಚೆಲುವೋ
ಕರಿಯ ಗಡ್ಡದ ಕಸ್ತೂರಿ ಬ ನನ್ನ ನರಿಯ ಗಡ್ಡದ ಹಿರಿಯನೋ
ನೀಲಗಡ್ಡದ ಲೋಲ್ಯಾ ಬಾ ನನ್ನ ನಾಡ ಗೌಡಮ್ಮಗೊಂಡಾನೋ

* * *

ಕಾಣಲ್ದ ಕಂಡೀರಿ ಇಪರೀತೋ
ಕುತ್ತ ಮೆಟ್ಟು ತಗಲ ಬಗಲ ಆದೀತೋ
ರಾಣಿಯ ಅಮಲ ಅಡಗಿತ್ತೋ
ಹೆಣ್ಣಮಕ್ಕಳ ಜಲಮಕ ಕೋಲಿ ಬಂತೋ
ಈಸ ದಿವಸ ಬಲು ಬೇಸಿತ್ತೊ
ಸಣ್ಣ ಕೂಸಿಗಾದರೂ ಸಹಿಸಾಲಿತ್ತೊ
ಭಾಗ್ಯವ ಗಳಿಸಿರಿ ಭವು ಮಸ್ತಾ
ನಾಡಾಂದೆಲ್ಲ ಇಪರೀತಾ
ಅನ್ನ ಬಂದ ಮ್ಯಾಲ ಗರವೀಕಿ ಬರಬ್ಯಾಡ
ಗರವಿನ ಮಾತೊಂದ ಬಿಡಬೇಕೋ
ಸುತ್ತ ದೇಶಕ ತೆರಿ ಹೊಡದೀತೋ
ಸುಳ್ಳಲ್ಲ ತಮ್ಮ ಸುಡಗಿ ಆದೀತೋ
ಪದಾ ಮಾಡಿ ತಾ ಸಾರಿ ಹೋಗುವಾಗ
ಚಿಕ್ಕಯ್ಯನ ವಚನ ಒಂದ ಆದೀತೋ

* * *

ಹಾಲಮತದಾಗ ನೀಲವ ತೋರ‍್ಯಾನ ನಿಂಗಾಗಿ ಬೀರಪ್ಪನೋ
ನಿಂಗಾಗಿ ಇರತಾನ ಬೀರಪ್ಪನೋ
ಅಂಗೈಯಾಗ ಹಿಡದಾನ ಮಾಳಪ್ಪನೋ
ಅಂಗೈಯಾಗ ಹಿಡಕೊಂಡ ಮಾರತಾಸ ರಾತ್ರ್ಯಾಗ
ಶಾವಿಯ ಮೂಡತಾನ ಮಾಳಪ್ಪನೋ
ಭಕ್ತೀಗಿ ಮೆಚ್ಚ್ಯಾನ ಬೀರಪ್ಪನೋ
ಏನ ಬೇಡ್ತಿ ಬೇಡಂದಾನ ಮಾಳಪ್ಪನೋ
ಬದಕವ ಬ್ಯಾಡಂದಾ ಭಾಗ್ಯವ ಬ್ಯಾಡಂದಾ
ನಿನ್ನ ವರವ ನನಗಿರಲೆಂದ ಮಾಳಪ್ಪನೋ[1]        ಡೊಳ್ಳಿನ ಪದಗಳು – “”ಕಾಡು ಹೂವುಗಳು” ಕೃತಿ. ಸಂ|| ಜೆ.ಬಿ. ಖಾಡೆ, ಮೈ.ವಿ.ವಿ. ಕನ್ನಡ ಅಧ್ಯಯನ ಸಂಸ್ಥೆ, ೧೯೭೩.