ಹಾಲಮಡ್ಡಿಯಮ್ಯಾಲ ಬಾಲ ಕಂದನಾಗಿ ನೀಲವ ಮಾಡಿದ ಗುರುವಚನೋ
ನೀಲವ ಮಾಡೂತ ಕುಲಕುಲು ನಗುವೂತ ಬಂದವರಿಗಿ ಹರಕಿ ಕೊಟ್ಟನೋ
ವರಗೋಳ ಕೊಡವೊತ ಹುಲಿಮಕದಗಶ್ಯಾಗ ಅಷ್ಟಪಾಲಕರವತಾರೋ
ಅಷ್ಟಪಾಲಕರ ಅವತಾರೋ ಮುಂದಿರು ಸಾಲಪಗಡಿ ಬಾಜಾರೋ
ಸಾಲಪಗಡಿ ಬಾಜಾರದೊಳಗಿರುವ ಡಾಲಗಣಿ ಮೆರೆವೂದು ಚೆಲುವೋ

ಎತ್ತ ನೋಡಿದರೂ ಸುತ್ತ ಖಾನೇಗಳು ನಡುವ ಮಾಲಗಂಬ ಚೆಲವೋ
ಒಳಗ ಗುರುವ ಕುತ್ತ ಹೊರಗ ಪಾದಗಳು ಎಡಬಲಕ ಎರಡಾಣಿ ಚೆಲವೋ
ಗುಲಾಬಿ ಹೂವಿನ್ಹಾಂಗ ಗುರ್ತಾವ ತೂರ‍್ಯಾವ ಮರ್ತೆಕ ಬಂದ ಮಾಸಿದ್ದ ಚೆಲವೋ
ಹಸಿರ ಹಳದಿಬಣ್ಣ ಕೆಂಪ ಸಿಂಹಾಸನ
ತನ ಹದಿನೇಳ ಕಳಿಯ ಅಮಗೊಂಡ ಚೆಲವೋ

* * *

ಸೋಮಾರ ಮಾಡ್ಯಾಳ ಸುದರಾಶಿ
ಐನಾರನ ಕರಿತಾಳ ಗುರಕಾಶಿ
ನೋಡಕ್ಕ ನೋಡನಾ ಹ್ಯಾಂಗ ಮಾಡತೀ

ಆತನ ಕೂಡಾ ನಾ ಬಾಳೆ ಹ್ಯಾಂಗ ಮಾಡಲೆ
ಮುಂಜಾಲೆ ಎಳತಾನ ಮೂರಮುದ್ದಿ ನುಂಗತಾನ
ಕಂಡವರ ಮ್ಯಾಲ ಹೋಗಿ ಬಿದ್ದನಂತಾನ
ನೋಡಕ್ಕ ನೋಡನಾ ಹ್ಯಾಂಗ ಮಾಡಲೇ

ಆತನಗೂಡ ಬಾಳೇ ಹ್ಯಾಂಗ ಮಾಡಲೇ
ಬಾಗೀಲಿಗಿ ಫಡಕಿಲ್ಲ ಬಾರಾಣೆ ರೊಕ್ಕಿಲ್ಲ
ಬಾದಾಮಿ ತೇರ ಏಳದೀನಂತಾನ
ನೋಡಕ್ಕ ನೋಡನಾ ಹ್ಯಾಂಗ ಮಾಡತೀ

ಪುಟ್ಯಾಗ ಹಿಟ್ಟಿಲ್ಲ ತಟ್ಟಾಗ ರೊಟ್ಟಿಲ್ಲ
ಏಳು ಮಂದಿ ಸಾಧೂರನ ಉಣಿಸಿನಂತಾನ
ನೋಡಕ್ಕ ನೋಡನಾ ಹ್ಯಾಂಗ ಮಾಡಲೇ

ಮರದಾಗ ಜ್ವಾಳಿಲ್ಲ ಕಲ್ಲಾಗ ಹಿಟ್ಟಿಲ್ಲ
ಬುಳಪ್ಪನ ಜಾತ್ರಿಗಿ ಹೋಗಲೇಂತಾನ
ನೋಡಕ್ಕ ನೋಡನಾ ಹ್ಯಾಂಗ ಮಾಡಲೇ

ಹೊಚ್ಚಲಾಕ ಅರಬಿಲ್ಲ ತೆಲಿಗಿ ಎಣ್ಣಿಲ್ಲ
ಕೂಸ ಹುಟ್ಟೈತೆಂತ ಕುಣದಾಡತಾನ
ನೋಡಕ್ಕ ನೋಡನಾ ಹ್ಯಾಂಗ ಮಾಡಲೇ

ಅಡವೀಗಿ ಹೋಗವಲ್ಲ ಹಿಡಿ ಹುಲ್ಲು ತರದಲ್ಲಿ
ಇದ್ದದ ಹೈನಾ ಎಲ್ಲಾ ಉಣತೀನಂತಾನ
ನೋಡಕ್ಕ ನೋಡನಾ ಹ್ಯಾಂಗ ಮಾಡಲೇ
ನೀರಿಗಿ ಹೋಗವಲ್ಲ ಊರಸುದ್ದಿ ಹೇಳತಾನ
ಗುರುವೀನ ಪಾದಾ ಹಿಡಿಬೇಕ
ನೋಡಕ್ಕ ನೋಡನಾ ಹ್ಯಾಂಗ ಮಾಡಲೇ
ಆತನಗೊಡ ಬಾಳೇ ಹ್ಯಾಂಗ ಮಾಡಲೇ

* * *

ಎಷ್ಟ ಹೇಳಿದರ ಕೇಳಿವಲ್ಲೋ
ವಟ್ಟತನ ಬುದ್ಧಿ ಬಿಡವಲ್ಲೋ
ನಾಯಿಬಾಲ ಲಳಗ್ಯಾನ ಹಾಕಿದರ ಎಂದಿಗಾಗದ ನೆಟ್ಟುಗ
ಒತ್ತಿ ಹಾಡಿದರ ಸತ್ತ ಹೋಗತಿ ಗೊತ್ತಿಜೀಂವಾ
ಇದ್ದರ ನೀನು ಹೇಳಬೇಕೋ
ಆತಾತು ಅನಬ್ಯಾಡ್ರಿ ಆಗಮಾನವ ಒಂದೈತಿ
ಆದದ್ದ ಗಂಟೆಲ್ಲ ಬಿಡಿಸುವವರ ಬರತಾರ

ಎಚ್ಚರ ಇರಬೇಕು ಕೇಳಿರಣ್ಣ
ಒಕ್ಕಳ ಬಿತ್ತೀರಿ ಇಕ್ಕಳ ಬೆಳದೀರಿ
ಎಚ್ಚರ ಇರಬೇಕಣ್ಣ

ಒಕ್ಕಲತನವೆಲ್ಲ ಹಕ್ಕಲಾದಾವೋ ಕೇಳಿರಣ್ಣ
ಎಂಟೆತ್ತ ಕಟ್ಟದಾಂವಾ ಒಂಟೆತ್ತ ಕಟ್ಟ್ಯಾನ
ಎಚ್ಚರ ಇರಬೇಕಣ್ಣ

ಗೌಡ ಕುಲಕರ್ಣಿ ತಾಡಾಗಿ ಹೋದರ
ಎಚ್ಚರ ಇರಬೇಕಣ್ಣ

ಉಳ್ಳಿಯ ಗಡ್ಡಿಗಿ ಹೆಣ್ಣೊಂದು ಆದಾವು
ಬಣ್ಣದ ಗುಬ್ಯಾರ ಮಣ್ಣಾಗಿ ಹ್ವಾದಾನ
ಹುಲಕಲ್ಲೀಗಿ ಕರ್ದವ ಬಿದ್ದೀತು
ಎಚ್ಚರ ಇರಬೇಕಣ್ಣ

ದೀವಳಿಗಿ ಹಬ್ಬಕ ದಿಮ್ಮವ ಬಡಿಸೀತು
ಕಾಗಿ ಗುಬ್ಬಿ ಕೂಡಿ ಹಬ್ಬವ ಹಾಕ್ಯಾವ

* * *

ಆದಿಸ್ಥಳದಲ್ಲಿ ಇದ್ದ ಕಂಬಳಿ
ಹಾಲುಮತದ ಧರಮಕ ಬತ್ತ ಕಂಬಳಿ

ಶಿಷ್ಯಾರದಿಂದ ಹುಟ್ಟಿತ ಕಂಬಳಿ
ಜಗದ ಗುರುವ ಮಡ್ಡಿಸಿದ್ದಾಗ ಹೊರುವ ಕಂಬಳಿ

ಮಳಿರಾಜ ಬಂದಾಗ ಬೆಚ್ಚಾತ ಕಂಬಳಿ
ತಲಿಮ್ಯಾಲ ಸುತ್ತುವ ಪಾವಡಾತ ಕಂಬಳಿ
ರಾಜಪಂಡಿತರಿಗೆ ಉಲನ್‌ಕೋಟ ಜಾಕೀಟನಂತ ಕಂಬಳಿ

ಬಿತ್ತು ಕೂರಿಗಿ ಹಾಕುವ ಕಂಬಳಿ ಕಣದಾಗ ರಾಶಿ ಅಳಿಯುವ ಕಂಬಳಿ
ಬಂಡಿ ರೈತಗ ಮುಂಡಿಮ್ಯಾಲ ಆಡುವ ಕಂಬಳಿ

ಬಂದ ಬೀಗರಿಗೆ ಹಾಸುವ ಕಂಬಳಿ
ಬಾಣಂತಿ ಮೈಮ್ಯಾಲ ಹೊರುವ ಕಂಬಳಿ

ಕೂಸಿನ ಕೈಯಾಗ ತಕಡಿಯಾತ ಕಂಬಳಿ
ಸರವರಿಗೆಲ್ಲ ಬೇಕಾತ ಕಂಬಳಿ

ದಿಮ್ಮಿನ ಬುಡಕ ಹಾಸುವ ಕಂಬಳಿ
ಇಂಗ ಜೀರಿಗಿ ಮಾರುವ ಕೋರಿ ಶೆಟ್ಟಿಗಾತು ಕಂಬಳಿ

ಶಿಷ್ಯಾರದಿಂದ ಹುಟ್ಟಿತ ಕಂಬಳಿ
ಸಿದ್ದ ಮಾಳಪ್ಪ ಎದ್ದ ಕರವೂದ
ಸುದ್ಧ ಜಾಡಿ ಗೊಂಗಡಿ

 

ಹುಲಿಯ ಫಜೀತಿ

ಕುರಬ ಗುಡ್ಡದಾಗ ಕುರಿಯ ಮೇಸತಿದ್ದಾ
ಬೇಗು ಬೆಳಗು ರಾತರಿ ಹಗಲಾ      || ಪ ||

ಗುಡ್ಡದ ವಾರ‍್ಯಾಗ ದಡ್ಡಿಹಾಕಿ ಮೆಟ್ಟಮಾಡಿದ್ದೊ ಗುಡಿಸಲಾ
ರೊಟ್ಟಿ ಬರತಿದ್ದು ಮ್ಯಾಲ ಮ್ಯಾಲ
ಹಿಂಡಕೊಂಡ ಬಡವತಿದ್ದ ಹಸಿ ಹಾಲಾ
ಕುರಿಮೇಸುದರೊಳಗೊಂದು ದಿನ ಬಿತ್ತೊ ಮಾಡಗತ್ತಲಾ
ಗಡ್ಡದ ಹೋತೊಂದು ದೊಡ್ಡಾ ಜನಾವರ ಕುರ‍್ಯಾಗಿತ್ತೊ ಮಿಗಿಲಾ
ತೆಪ್ಪಸಕೊಂಡ ಸರದ ನಿಂತಿತೋ ಮದಲಾ
ಬಿಟ್ಟ ಹ್ವಾದ ತಿರುಗಿ ನೋಡಲಿಲ್ಲ ಕುರಬ
ಒಂದ ತಾಸಿನ್ಯಾಗ ಮಳಿಯನಿಂತ ತುಸು ಮಾಡತೋ ಬಯಲಾ
ಕುರಿ ಹುಡಕುತ ಹರಿಹಿಡದ ಗಾಬರಿ ನಡೆದಿತ್ತಲ್ಲಾ
ಮುಂದ ಹುಲಿಗವಿ ಇತ್ತೊ ಅಸಲಾ
ಬಳಗ ಹೊಕ್ಕ ಝಾಡಿಸಿತೋ ಕೂದಲಾ
ಹುಲಿ ಗುಡ್ಡಕ ಮೈಲಾಕ ಹೋಗಿತ್ತು ಇನಾ ಬಂದಿದ್ದಿಲ್ಲಾ
ಬಂತ ಹುಲಿ ಗುಡಗ ಹೊಡಕೋತ ಆರಭಟ ಸರವತ್ತಿನ ಅಮಲಾ
ಗವಿ ಹಳಗ ನೀ ಯಾರ ಕರಗಾಲಾ
ಹೊರಬೀಳಂತ ಮಾಡತೈತಿ ಗುಲ್ಲಾ
ಧೈರ್ಯಮಾಡಿ ಹೋತಪ್ಪ ಮಾತಾಡತಾನ

* * *

 

ಜೊಳ್ಳಾಸುರನ ಪದ

ಬೇಡಿದ್ದು ಕೊಡುವಂಥ ರೂಢಿಗೀಶನ ಕಾಡಿದ್ದು ಕೇಳಿರಿ ಹೇಳುವೆನು
ಜೊಳ್ಳಾಸುರನೆಂಬ ಕಳ್ಳ ದೈತ್ಯನು ಬೋಳ ಶಂಕರಗೆ ಮರೆ ಬಿದ್ದ
ಉಪವಾಸ ಕುಂತವ ತಪಸ್ಸು ಮಾಡಿ ಶರಶಿವಾರಸ್ತು ಏಡಿ ಬೇಕಂದ |
ದುಷ್ಟ ದೈತ್ಯನ ಹೊಟ್ಟಿಯೊಳಗಣ ಕೆಟ್ಟಗುಣ ಕೇಳಿರಿ ಒಂದೀಟ
ಅಷ್ಟ ದೈತ್ಯರೊಳ್ ಶ್ರೇಷ್ಠನಿನಿಸಿ ತಾ ಸ್ರಿಷ್ಟಿಗೀಶನಾಗಬೇಕೆಂದಾ
ದೇವರಿಗಿಂತಾ ದೇವನಾಗುತೀನಿ ಸಾವು ಹುಟ್ಟು ನನಗಿಲ್ಲೆಂದ
ಚಿರಂಜೀವಿಯಾಗಿ ಪರಸ್ಪರ ನಾನು ಪಾರ್ವತಿದೇವಿ ಆಳಬೇಕೆಂದ
ಅಷ್ಟ ತಿಳಿದು ದೈತ್ಯ ಶ್ರೇಷ್ಠ ತಾ ನಿಷ್ಟಲಿಂದ ಮಾಡಿದ ತಪಸ್ಸು
ಬೋಳ ಶಂಕರನು ಖೂಳ ದೈತ್ಯನಿಗೆ ಏನು ಬೇಡುತ್ತಿದಿ ಬೇಡೆಂದಾ
ನಿನ್ನ ತಪಸ್ಸಿಗೆ ಚೆನ್ನಾಗಿ ಮೆಚ್ಚಿನಿ ಇನ್ನೇನು ಬೇಡುತ್ತಿ ಬೇಡೆಂದಾ
ವಚನ ಕೊಟ್ಟರೆ ರಚನವಾಗಿ ಚರ್ಚಿಸಿ ಹೇಳುತೀನಿ ಮನದಂದಾ
ಸ್ರಿಷ್ಟಿಕರ್ತ ಶಿವ ಸಿಟ್ಟಾಗಿ ಹೇಳುತ್ತಾನೆ ಕೊಟ್ಟ ವಚನ ತಪ್ಪುವದಿಲ್ಲೆಂದ
ಮುಂದಲ ಮಜಕೂರ ಚಂದಾಗಿ ಕೇಳಿರಿ ಮಂದಬುದ್ಧಿ ಆ ದೈತ್ಯನದ
ಗಂಗಾಧರನನ್ನ ಅಂಗದ ಒಳಗೆ ನುಂಗುವ ವರವನ್ನು ಕೇಳಿದೀಗ
ಇಂಥಾದೊಂದು ನಾನು ಪಂಥ ಮಾಡಿಕೊಂಡು ಕುಂತಿದ್ದೇನು ನಾನು ಉಪವಾಸ
ಹೊನ್ನು ಒಲ್ಲೆ ನಾನು ಚಿನ್ನ ಒಲ್ಲೆ ನಾನು ನಿನ್ನನ್ನು ಮಾತ್ರ ನಾನು ನುಂಗುವೆನೆಂದಾ
ಅಂದ ಮಾತು ಕೇಳಿ ಕುಂದುಗೊರಳನಾಗ ನನ್ನದೊಂದು ಮಾತೈತೆ ಕೇಳೆಂದ

ವಚನ

ಪರಮಾತ್ಮನು ಅನ್ನುತ್ತಾನೆ ಎಲೈ ಜೊಳ್ಳಾಸುರನೆ ನಿನ್ನ ತಪಸ್ಸಿಗೆ ಮೆಚ್ಚಿದೆ. ಏನು ಬೇಡುತ್ತೀದಿ ಬೇಡೆಂದನು. ಆಗ ಜೊಳ್ಳಾಸುರನು ನಿನ್ನ ದೇಹವನ್ನು ನನ್ನ ಪಿಂಡಾಂದೊಳಗೆ ನುಂಗಬೇಕೆಂದು ತಪಸ್ಸು ಮಾಡಿದ್ದೇನೆ. ಈಗ ನಿನ್ನನ್ನು ನುಂಗುತ್ತೇನೆ ಎಂದನು. ಆಗ ಪರಮಾತ್ಮನು ಅನ್ನುತ್ತಾನೆ, ಎಲೈ ಜೊಳ್ಳಾಸುರನೇ ಕೇಳತಕ್ಕಂಥ ವಸ್ತುವನ್ನು ಕೇಳಲಿಲ್ಲಾ ಆದರೆ ನನ್ನ ದೇಹವನ್ನು ಕೊಡಲಿಕ್ಕೆ ಸಿದ್ಧನಿದ್ದೇನೆ. ಆದರೆ ನನ್ನ ದೇಹ ನನ್ನ ಸ್ವತಂತ್ರವಿಲ್ಲ. ಯಾಕಂದರೆ ನನಗೆ ಅರ್ಧನಾರೀಶ್ವರನೆಂಬ ಹೆಸರು ಬಂದಿರುವುದು ಆದಕಾರಣ ಪಾರ್ವತಾದೇವಿಯನ್ನು ಕೇಳಿಕೊಂಡು ಬಂದು ನನ್ನ ದೇಹವನ್ನು ನಿನಗೆ ಕೊಡುತ್ತೇನೆಂದು ಕೈಲಾಸಕ್ಕೆ ತೆರಳುವಂಥಾವನಾದನು.

ಪದ

ಹೋಗಿ ಬರುತ್ತೇನಂಥ ಆಗ ಪರಮಾತ್ಮನು ಬೇಗ ಕೈಲಾಸಕ್ಕೆ ತೆರಳಿದನು
ಹೊಕ್ಕನು ಕೈಲಾಸ ಮುಕ್ಕನ್ಣ ಸಾಂಬನು ಮುಕ್ತಿಸಿಂಹಾಸನ ಏರಿದನು
ಗಂಧರ್ವ ಗರುಡರು ಬಂದು ಚೆನ್ನಾಗಿ ವಂದನೆ ಮಾಡಿದರು
ಗಿರಿಜನಂದಿನಿಯು ಆಗ ಹರನ ಪಾದಕ್ಕೆರಗಿ ಶಿರಬಾಗಿ ವಂದನೆ ಮಾಡಿದಳು
ಬಲ್ಲಿದ ಶಿವನಿಗೆ ಎಲ್ಲರು ಕೈಮುಗಿದು ಎಲ್ಲಿಂದ ಬಂದಿರಿ ಹೇಳಿನ್ನು
ಬಾಳಾಕ್ಷ ಅನ್ನುತ್ತಾನೆ ಲಾಲಿಸಿ ಕೇಳಿರಿ ಭೂಲೋಕಕ್ಕೆ ನಾನು ಹೋಗಿದ್ದೆನು
ಮರ್ತ್ಯಲೋಕದೊಳಗೆ ಆದ ವರ್ತಮಾನ ತುರ್ತಕ್ಕೆ ಕೇಳಿರಿ ಹೇಳುವೆನಾ
ಅನುಗಾಲ ನನಗಾಗಿ ಅಲ್ಲೊಬ್ಬ ದೈತ್ಯನು ಘನವಾದ ತಪಸ್ಸು ಮಾಡಿದನು
ಅಂತಃಕರಣದಿಂದ ಅವನ ಹತ್ತಿರ ಹೋಗಿ ಏನು ಬೇಡುತ್ತಿ ಬೇಡೆಂದೆನು
ಯಾರ‍್ಯಾರು ಬೇಡದ ವರವನ್ನು ಬೇಡಿದ ಘೋರ ಬಂತು ನನಗೆ ಮಾಡಲ್ಯಾಂಗೆ
ಮಂಗ ದೈತ್ಯನು ಅಂಗದ ಒಳಗೆ ನುಂಗುವ ವರವನ್ನು ಕೇಳಿದನು
ಗಂಗಾದೇವಿ ಇದಕೆ ಹ್ಯಾಂಗ ಮಾಡಲಿ ನಾ, ಮಂಗ ದೈತ್ಯಗೆ ಮಾತು ಕೊಟ್ಟಿಹೆನು |
ಮಾತು ಕೊಟ್ಟ ಮೇಲೆ ತಪ್ಪುವುದ್ಯಾಕಿನ್ನು ಪ್ರೀತಿಲಿಂದ ಹೋಗಿ ಬರ್ರಿ ನೀವು

ವಚನ

ಪರಮಾತ್ಮನು ಅರುಹಿದ ಮಾತಿಗೆ ಗಿರಿಜೆಯು ಅನ್ನುತ್ತಾಳೆ. ಅಯ್ಯೋ ಹರನೆ ಆ ದೈತ್ಯನು ನಿನ್ನ ಅಂಗವನ್ನು ನುಂಗಿದ ಮೇಲೆ ನನ್ನ ಮುತ್ತೈದಿತನಕ್ಕೆ ಧಕ್ಕಿಯನ್ನು ತಂದಿರಲ್ಲಾ ಎಂದಳು. ಆಗ ಪರಮಾತ್ಮನು ಅನ್ನುತ್ತಾನೆ, ಎಲೆ ಸತ್ಯವುಳ್ಳ ಪಾರ್ವತಿಯೇ ಕೇಳು. ನಿನ್ನ ಮುತ್ತೈದಿತನವು ಸ್ಥಿರವಾಗಿದ್ದರೆ ಆ ದೈತ್ಯನು ನನ್ನ ನುಂಗಿದರೇನು ಅಥವಾ ಬಿಟ್ಟರೇನು. ಮುತ್ತೈದಿತನಕ್ಕೆ ಕುಂದು ಬರಲರಿಯದು ಎಂದನು. ಆಗ ದುರ್ಗಿಯು ಅನ್ನುತ್ತಾಳೆ. ಹೇ ಸತ್ಯವುಳ್ಳ ಸದಾಶಿವ ಮೃತ್ಯುಂಜಯನೇ ನೀವು ಆ ದೈತ್ಯನಿಗೆ ಮಾತು ಕೊಟ್ಟಿದ್ದೀರಿ. ನಿಮ್ಮ ಸತ್ಯಕ್ಕೆ ನಿಮಿತ್ಯ ಬಾರದಂತೆ ಅದಕ್ಕಾಗಿ ತುರ್ತು ಹೋಗಿ ಬನ್ನಿರೆಂದು ಪಾರ್ವತಿದೇವಿಯು ಪರಮಾತ್ಮನನ್ನು ಕಳುಹಿಸುವಂಥಾಕಿಯಾದಳು.

ಪದ

ಗಿರಿಜೆ ಅಪ್ಪಣೆಯನ್ನು ಹರನು ತಕ್ಕೊಂಡು ತಿರುಗಿ ಬಂದನು ಸ್ವರ್ಗಲೋಕಕ್ಕೆ
ಸಾಕ್ಷಾತ್ ತಾ ಬಂದು ರಾಕ್ಷಸಗೆ ಅನ್ನುತ್ತಾನೆ. ಈ ಕ್ಷಣ ಕೇಳೋ ನೀ ಅಂಬುದೇನಾ
ಶಂಭುವೇ ನಾನೀಗ ಅಂಬುವದೇನೈತೆ ತಿಂಬುವದು ನಿನ್ನನ್ನು ತುರ್ತಕ್ಕೆ ನಾನಾ
ಇಂದಿಗೆ ನನ್ನ ನುಂಗಿ ಎಂದಿಗೆ ಬಿಡುವದು ಚೆನ್ನಾಗಿ ಮಾಡೋ ಕರಾರವನಾ
ಮುದ್ದತು ಮಾಡಿ ನೀ ನುಂಗ ನನ್ನ ಸದ್ಯಕ್ಕೆ ಸಿದ್ಧನಾಗಿ ಬಂದಿದ್ದೆನಾ
ಎಂದಿಗೆ ಕೂಡುವವು ಪಂಚರಾತ್ರಿಗಳು ಅಂದಿಗೆ ನಿನ್ನನ್ನು ಬಿಡುಹುವೆನು
ಒಳ್ಳೇದು ನುಂಗೋದು ಪರಮಾತ್ಮ ಆಗ ಕಳ್ಳ ದೈತ್ಯ ತಾ ನುಂಗಿದನಾ
ಮಸಲತ್ತು ಕೇಳಿರಿ ಅಸುರನು ಮಾಡಿದ್ದು ಕಸಿಬಸಿ ಬಿಡತನ ಮುಂದಲನೂ
ಮನದೊಳಗೆ ಅಂಬುತಾನೆ ಅಣಿಯಿಲ್ಲಾ ನನಗ್ಯಾರು ಘನ ಮಹಿಮ ಶಿವನನ್ನು ನುಂಗಿದೆನಾ
ಮೂರು ಲೋಕಕ್ಕೆಲ್ಲಾ ಕಾರಣನಾದಂತ ಧೀರ ಗಂಗಾದೇವಿ ಆಳುವೆನಾ
ಸಾಯದು ಹುಟ್ಟಿದು ನನಗಿಲ್ಲಾ ಕೇಳಿರಿ ದೇವರಿಗಿಂತ ದೇವನಾದೆ ನಾನು
ಜಂಭರಾರಿಯು ನಾನು ಶಂಭೋಶಂಕರ ನಾನು ಗಂಭೀರ ಪರಶಿವ ನಾನಾದೆ
ಇಷ್ಟೊಂದು ಗರ್ವವು ಹುಟ್ಟಿತು ಅವನಿಗೆ ಸೃಷ್ಟಿಕರ್ತನ ಮಹಿಮೆ ಕೇಳಿರಿನ್ನು
ನಂಬಿ ಕೆಟ್ಟವರಿಲ್ಲ ಶಂಭುಶಂಕರ ತಾನುಕುಂಬಾರ ಹುಳದಂತೆ ಇರುತಿಹನು
ಇದರಂತೆ ದೈತ್ಯನ ಉದರದಲ್ಲಿ ಇದ್ದನು ಹೆದರಿಕಿ ಇದ್ದಿಲ್ಲ ಶಿವಗಿನ್ನು
ವಾಯ್ದಕ್ಕೆ ಸರಿಯಾಗಿ ಪಂಚರಾತ್ರಿಗಳು ಒಂದೇ ದಿವಸಕ್ಕೆ ಬಂದು ಕೂಡಿದವು
ವಾಯ್ದಕ್ಕೆ ಸರಿಯಾಗಿ ಪಂಚರಾತ್ರಿಗಳು ಒಂದೇ ದಿವಸಕ್ಕೆ ಬಂದು ಕೂಡಿದವು
ಕೂಡಿದರು ಬಿಡಲಿಲ್ಲ ರೂಢಿಗೀಶ್ವರನನ್ನು ಆಡಿದ ವಚನಕ್ಕೆ ತಪ್ಪಿದನು
ಕಾಡುವ ಕಾಲಕ್ಕೆ ಕೂಡಿ ದೈತ್ಯನಿಗೆ ಮಾಡಿತು ವಿಧಿ ಉಪಟಳವನು
ಮುಂದಲ ಮಜಕೂರ ಚೆಂದಾಗಿ ಕೇಳಿರಿ ಒಂದು ಉಳಿಯದಂತೆ ಹೇಳುವೆನು.

ವಚನ

ಕೇಳಿರಿ ಕೆಟ್ಟ ದೈತ್ಯನಿಗೆ ಕಟ್ಟು ಮಾಡಿಕೊಟ್ಟ ವಚನವೇನೆಂದರೆ ಒಂದೇ ದಿವಸಕ್ಕೆ ಪಂಚರಾತ್ರಿಗಳು ಎಂದಿಗೆ ಕೂಡುವವು ಅಂದಿಗೆ ಬಿಡುಹುವೆನೆಂದನು. ಪರಮಾತ್ಮನಿಗೆ ಪಂಚಮುಖಗಳು ಇದ್ದುವು. ಆದ್ದರಿಂದ ಪಂಚರಾತ್ರಿಗಳು ನಾನು ಮುಂಚೆ ನೀನು ಮುಂದೆ ಎಂದು ಕೊಡುವಂಥವುಗಳಾದವು. ಕೂಡಿದರು ಪರಮಾತ್ಮನನ್ನು ಬಿಡದೆ ಹೋದನು.

ಪದ

ಭಾಳಾಕ್ಷ ಹೋಗಿನ್ನು ಕೈಲಾಸ ಪಟ್ಟಣ ಹಾಳು ಬಿದ್ದಾಂಗ ಆಯಿತು ಕೇಳಿರಿ ಇನ್ನು
ಗಡಿಬಿಡಿ ಬಿದ್ದಿತು ಮಡದಿಯು ಪಾರ್ವತಿ ಬಿಡದೆ ಮಾಡಿದಳು ದುಃಖವನು
ಸೃಷ್ಟಿಕರ್ತನು ಹೋಗಿ ಎಷ್ಟು ದಿವಸವಾಯಿತು ಕೆಟ್ಟ ದೈತ್ಯನು ಮಾಡಿದನು
ಮಂದಾರಗಿರಿಯವಾಸ ಇಂದ್ರಾದ್ಯರು ಬರಲಿಲ್ಲ ಎಂದು ಕಂಡೆನವರ ಮಾರಿಯನು
ಮುಕ್ಕಣ್ಣ ಶಿವ ಎನ್ನ ದುಃಖಕ್ಕೆ ಗುರಿಮಾಡಿ ಅಕ್ಕರತೆ ಎಂಬುದು ಹೋಯಿತಿನ್ನು
ನಂದೀಶ ಎನಗಿನ್ನು ತಂದಾನು ವನವಾಸ ಮುಂದೇನು ನಾನಿದ್ದು ಮಾಡುವೆನು
ಎಲ್ಲಿಹನೆಂದು ವಲ್ಲಭ ಶಿವನನ್ನು ಎಲ್ಲರಿಗೆ ಹೇಳ್ಯಾಳು ಹುಡುಕರಿನ್ನು
ಹರಹರ ಎನ್ನುತ ಮರಮರ ಮರುಗುತ ಹರಿ ಮಾರಿಯ ನೋಡ್ಯಾಳು ದೃಷ್ಟಿಸಿನ್ನು
ಹರಿ ಬಂದು ಅಂಬುತಾನೆ ಗಿರಿಜಗೆ ನೀ ಇನ್ನು ಮರುಗುವುದ್ಯಾಕಮ್ಮ ಮನದೊಳಗೆ
ಅನುಮಾನವಿದ್ದಿದ್ದು ಎನಗಿಷ್ಟು ಹೇಳಮ್ಮ ಸನುಮತ ನಾನೀಗ ಹೇಳುವೆನು
ಅಂತಾಳೆ ಪಾರ್ವತಿ ಕಂತು ಹರನು ಹೋಗಿ ಸಂತೋಷ ನನಗಿಲ್ಲ ಕೇಳೋ ನೀನು
ಒತ್ತರದಿಂದ ಹೋಗಿ ಗೊತ್ತು ಹಚ್ಚಿಬಾ ಮತ್ತಾರ ಕಡೆಯಿಂದ ಆಗುವುದೇನು
ತಾಯವ್ವ ನೀಕೇಳೆ ಮಾಯ್ವಾದ ಶಿವನನ್ನು ಎಲ್ಲಿ ಹುಡುಕಲಿ ಹೇಳೆ ನೀನು
ನಿನ್ನ ಪ್ರಯತ್ನವು ಯಾರಿಗೂ ತಿಳಿದಿಲ್ಲ ಚನ್ನಾಗಿ ಸೋದಿಸಿ ಹುಡುಕು ನೀನು
ಪರಿಪರಿಯಿಂದಲಿ ಗಿರಿಜೆ ಹೇಳಿದ ಮಾತ ಸರಿಬಂದು ಅನ್ನುತ್ತಾನೆ ಹರಿಯು ತಾನು
ನಿನ್ನ ಆಶೀರ್ವಾದ ಎನ್ನ ಮೇಲೆ ಇದ್ದರೆ ಪನ್ನಂಗಧರನನ್ನು ಹುಡುಕುವೆನಾ
ಕೊಡು ಕೊಡು ಅಪ್ಪಣೆ ತಡವ್ಯಾಕೆ ಹಡದವ್ವ ಒಡಿಯ ಶಂಕರನನ್ನು ಹುಡುಕುವೆನಾ
ಲೇಸಾಗಿ ಈಶ್ವರನು ವಾಸವಾಗಲೆಂದು ಆಶೀರ್ವಾದ ಕೊಟ್ಟಳು ತಾಯಿಯಿನ್ನು

ವಚನ

ಕೇಳರಿ ವಿಷ್ಣುವಿನ ಪ್ರಯತ್ನವನ್ನು ಎಷ್ಟಂತ ಹೇಳಲಿ ಕೃಷ್ಣನು ಪರಮಾತ್ಮನನ್ನು ಹುಡುಕುವುದಕ್ಕೆ ಅತಳ ವಿತಳ ಪಾತಾಳ ರಸಾತಳ ಇಂಥಪ್ಪ ಹದಿನಾಲ್ಕು ಲೋಕಗಳನ್ನು ಹುಡುಕಿದಾಗ್ಯೂ ಪರಮಾತ್ಮನ ದರುಶನವೇ ಇಲ್ಲದೋಯಿತು. ಆಗ ತನ್ನ ದಿವ್ಯದೃಷ್ಟಿಯಿಂದ ನೋಡಲು ಆ ದೈತ್ಯನ ಉದರದಲ್ಲಿ ಇರುವದಂ ಕಂಡು ಹರಿಯು ಅನ್ನುತ್ತಾನೆ ಈ ದೈತ್ಯನನ್ನು ಕೆಣಕುವ ಶಕ್ತಿ ನನಗಿಲ್ಲ. ಆದ್ದರಿಂದ ಹರಿಯು ಮಾಡಿದ ಪ್ರಯತ್ನವೇನೆಂದರೆ

ಪದ

ಪರಮಾತ್ಮನಿಗಿನ್ನೂ ಅರಿವು ಆಗಲೆಂದು ಹರಿ ತನ್ನ ಸ್ತೋತ್ರ ಕೊಂಡಾಡಿದನು.
ಹರ ಹರ ಶಿವಶಿವ ಗುರುದೇವ ನೀ ಹೋಗಿ ಧರಿಯಲ್ಲಿ ಮರಮರ ಮರುಗುವದೋ
ಅದಕ್ಕಾಗಿ ನಾ ನಿನ್ನ ಪಾದಕೆ ವಂದಿಪೆ ನೀ ಎನ್ನ ಸಲವೋದೋ ದೇವ
ಪಾರಾಗಿ ಬರುವಂಥ ಭಾರವು ನಿನ್ನದು ಆಗದು ದೈತ್ಯನ ಕೆಣಕುವುದಾ
ದೈತ್ಯನ ಕೆಣಕುವ ಚೈತನ್ಯ ನನ್ನಿಂದ ಆದಿತ್ಯಾಂಗಿ ಹೇಳಿರಿ ಸ್ವಾಮಿ
ನೀ ಇಷ್ಟೆಲ್ಲ ಸ್ತೋತ್ರವ ವಿಷ್ಣು ತಾ ಮಾಡಿದ್ದು ಹೊಟ್ಟಿಯೊಳಗೆ ಶಿವಕುಂತು ಕೇಳಿದನಾ
ಸರ್ವಾಂತರ್ಯಾಮಿಯು ಸರ್ವರಿಗೂ ಮಹಿಮೆಯು ಅರವಾಯಿತೊ
ಹರಿಸ್ತೋತ್ರ ಮಾಡುವುದಾ
ಉಲ್ಲಾಸವಾಗಿನ್ನು ಕೈಲಾಸಧೀಶನ ಚಲ್ಲಾಟ ಕೇಳಿರಿ ಮುಂದಾಗೋದ
ಚಿನ್ಮಯ ಶಿವನಿಗೆ ಮರ ಉಕ್ಕಿದ್ಹಾಂಗೆ ದನುಜನ ಹೊಟ್ಟೆಯು ಬೆಳೆಯುವದ
ಹೊಟ್ಟೆಯು ಬೆಳೆದದ್ದು ಎಷ್ಟಂಥ ಹೇಳಲಿ ಬೆಟ್ಟದಾಕಾರ ತೋರುವುದು
ಅಷ್ಟಾಗಿ ತಿಳಿಲಿಲ್ಲ ಕೆಟ್ಟ ದೈತ್ಯನಿಗೆ ಹೊಟ್ಟೆಯು ಮಿರಿ ಮಿರಿ ಮಿಂಚುವುದ
ಪರಿಪರಿಯಿಂದಲಿ ಹರಿಯು ತಾ ಮತ್ತಿಷ್ಟು ಪರಮಾತ್ಮನ ಧ್ಯಾನ ಮಾಡುವನಾ
ಧ್ಯಾನ ಮಾಡಿದಾಗ ಮಹದೇವನಾ ಹನ್ನೊಂದು ಕ್ಷೋಣಿ ದೈತ್ಯನ ಹೊಟ್ಟೆ ಬೆಳೆಯುವುದಾ
ಆನಂದ ಆದದ್ದು ನಾನೇನು ಹೇಳಲಿ ಈಗ ಬೆಳೆಯುವುದಾ
ಬೆಳಕೊಂತ ನಡದೀತು ಉಳುಕೊಂತ ನಡೆದಿವುಳೆ
ಕೊಂಬದ್ಹಾಗಿನ್ನು ಅಳಿಗಾಲ ಬಂದಿತು ಸಾಯುವುದು
ಎಷ್ಟಂತ ತಡದೀತು ಚಟ್ಟನೆ ಸಿಡಿದೀತು
ಹೊಟ್ಟೆಯು ಹೊಡೆದಿತು ದೈತ್ಯನದಾ
ಎಡಬಲಕೆ ಎರಡು ತುಂಡಾಗಿ ಬಿದ್ದನು ಕೆಡಕು ದೈತ್ಯ ತನ್ನ ಗರ್ವದಿಂದ
ಪರಮಾತ್ಮ ಪಾರಾಗಿ ಹೊರಬಿದ್ದು ಕೂತದ್ದು ಹಿರಿಯರೇ ಕಳಿರಿ ಉಳಿದ ಪದಾ !!

ವಚನ

ಹುರಿಗಣ್ಣನ್ನು ಮುಚ್ಚಿಕೊಂಡು ಹೊರಗೆ ಬರುವಂಥಾದನು. ಆಗ ಹರಿಯು “”ಪರಮಾತ್ಮನನ್ನು ಮಾತಾಡಿಸಿದರೆ ಉರಿಗಣ್ಣು ತೆರೆಯುತ್ತಾನೆ. ನಾನು ಮತ್ತು ಈ ಭೂಮಿ ಕೂಡ ಸುಟ್ಟು ಹೋಗುತ್ತದೆ.

ಪದ

ಹರಿಯು ಮಾಡಿದ ಬೇತು ಹಿರಿಯರೆ ಕೇಳಿರಿ ಕುರಬರ ಡೊಳ್ಳಿನ ಪಡಗವನ
ಸೊಕ್ಕಿದ ದೈತ್ಯನ ಡೊಕ್ಕಿಯ ಎಲುಬನ್ನು ತಕ್ಕೊಂಡು ಮಾಡಿದ ಡೊಳ್ಳವನಾ
ಚರ್ಮವ ತಕ್ಕೊಂಡು ಡೊಳ್ಳಿಗೆ ಹಾಕಿದ ಕರುಳು ಹಗ್ಗವ ತಾ ಮಾಡಿದನು
ಘೋರನ ಬಿಟ್ಟನು ಕೈಗಳ ಕಿತ್ತನು ಡೊಳ್ಳಿನ ಗುಣಿಗಳ ಮಾಡಿದನಾ
ನಡಕೆ ಕಟ್ಟಿ ಹರಿ ಬಡಕೊಂತ ನಿಂತನು ನುಡಿದಿತು ಅದ್ಭುತನಾದವನಾ
ನಾದಿನ ಶಬ್ದವು ಮಹದೇವಗಾನಂದವಾದದು ನಾನೇನು ಹೇಳುವೆನಾ
ಹರಿ ಡೊಳ್ಳು ಬಡದ್ಹಾಂಗೆ ಹರ ತನ್ನ ನಾಂಟ್ಯವ ಪರಿಪರಿಯಿಂದಲಿ ಮಾಡಿದನು
ಪಾರ್ವತದೇವಿಗೆ ಅರಿವು ಆಗಲೆಂದು ಹಾರ‍್ಯಾಡಿ ಡೊಳ್ಳು ಬಡಿಯುವನು
ಸ್ವಾಮಿಯು ನಮ್ಮಯ್ಯ ಬಮದಾನು ಎಂಬುದು ಆವಾಗ ಹುಟ್ಟಿತು ಕೇಳಿರಿನ್ನು
ಅದ್ಭುತನಾದವು ಬಿದ್ದಿತು ಡೊಳ್ಳಿನ ಶಬ್ದವು ಕೇಳಿರಿ ಹೇಳುವೆನು
ಡೊಳ್ಳಿನ ಬಡಿತಕ್ಕೆ ಸೀಳಿತು ಭೂಮಿ ಸುಳ್ಳಲ್ಲ ಕೇಳಿರಿ ಹೇಳುವೆನು
ಸಾಕಾಗಿ ನಾದವು ಆಕಾಶ ತುಂಬಿತು ಏಕಾಂತ ಕೈಲಾಸ ಕೇಳಿತಿನ್ನು
ಸಾಕ್ಷಾತ್ ದೇವಿಗೆ ಈ ಕ್ಷಣ ಶಬ್ದದ ಲಕ್ಷಣ ತೋರಿದು ಹೇಳುವೆನಾ
ಎಡಗಣ್ಣು ಎಡಭುಜ ಬಡದ್ಹಾಂಗೆ ಹಾರ‍್ಯಾವು ತಡಿಯಾದೆ ಕೇಳ್ಯಾಳಾ ನಂದೀನ
ನಂದಿ ಅನ್ನುತ್ತಾನೆ ಚೆಂದಾಗಿ ಕೇಳು ಮಂದಾಗಿರಿವಾಸ ಬಂದಿರುವಾ |
ಪರಮಾತ್ಮಗಿನ್ನೂ ಅರಿವು ಆಗಲೆಂದು ಹರಿಯು ತನ್ನ ಸ್ತೋತ್ರ ಕೊಂಡಾಡಿದನು
ಹರಹರ ಶಿವಶಿವ ಗುರುದೇವ ನೀ ಹೋಗಿ ಧರಿಯಲ್ಲಿ ಮರಮರ ಮರುಗುವುದೋ

ವಚನ

ಹರಿಯು ಬಾರಿಸಿದ ಡೊಳ್ಳಿನ ಶಬ್ದವು ಏಕಕಾಲಕ್ಕೆ ಕೈಲಾಸಕ್ಕೆ ಕೇಳಿಸಿತು. ಆಗ ಪಾರ್ವತಿಯು ನಾದದ ಶಬ್ದವನ್ನು ಕೇಳಿದಳು. ಆದರೆ ಪಾರ್ವತಿಗೆ ಎಡಗಣ್ಣು ಎಡಭುಜ ಹಾರಿದುವು. ಆಗ ನಂದೀಶನೊಡನೆ “”ಏ ನಂದಿಯೇ ! ಈ ಸುನಾದವು ಎಲ್ಲಿಂದ ಹೊರಡುವುದು” ಎಂದು ಕೇಳಿದಳು. ಆಗ ನಂದಿ “”ಪರಮಾತ್ಮನ ದರ್ಶನಕ್ಕೆ ಹರಿಯು ಬಂದಿರಬಹುದು. ಆದ್ದರಿಂದ ನಿನಗೆ ಅರಿವು ಆಗಲೆಂದು ಏನೋ ಒಂದು ಪರಿಯನ್ನು ಮಾಡಿರಬಹುದು” ಎಂದನು. ಆಗ ಪಾರ್ವತಿಯು ನಂದೀಶ್ವರನೊಡನೆ ನಾದಿನ ಶಬ್ದವನ್ನು ಹುಡುಕುತ್ತಾ ಹೋಗುವಂಥಾದವರಾದರು.

ಪದ

ನಾದಿನ ಶಬ್ದವ ಶೋಧಿಸಿ ಹುಡುಕುತ ಹೋದರು ಸಾಂಬನ ಸನ್ನಿಧಿಗೆ
ಸರ್ವಾಂತರ್ಯಾಮಿಯ ದರುಶನವಾದರು, ಹರುಷವಾದರು ತಮ್ಮ
ಮನದೊಳಗೆ, ಮುಂದೋಗಿ ದೇವಿ ತಾ ವಂದನೆ ಮಾಡ್ಯಾಳು ಬಂದಿನ್ನ
ಪರಶಿವಮೂರ್ತಿಗೆ ತಡಮಾಡಲಿಲ್ಲ.
ಉರಿಗಣ್ಣು ತೆರೆದಾರು ಅಡಗಿತು ಉರಿಯು ಕ್ಷಣದೊಳಗೆ
ನಡುಗಣ್ಣು ಮುಚ್ಚಿ ತಾ ಕಡಿಗಣ್ಣು ತೋರಿದನು ಅಡಗಿತು ಉರಿಯಲ್ಲ ಕ್ಷಣದೊಳಗೆ
ವೀರಶೈವರಿಗೆ ವೀರನಾಗಿ ತೋರ‍್ಯಾನು ತಾನು ಪರಶಿವನು
ಧರಿಯೊಳಗೆ ವೀರಸುತನಾದ ಬೀರನು ತಾನಾದ ಪೀರನಾದ ಮುಸಲ್ಮಾನರಿಗೆ
ಕುರುಬರ ಕುಲವನ್ನು ನಿರ್ಮಸಿ ಡೊಳ್ಳನು ಕರದಿನ್ನು ಕೊಟ್ಟನು ಅವರೊಳಗೆ
ಅಷ್ಟ ವಾಲಗದಲ್ಲಿ ಶ್ರೇಷ್ಠವಾದ್ಯವೆಂದು ಗಟ್ಟ್ಯಾಗಿ ಹೇಳ್ಯಾನು ಕುರುಬರಿಗೆ
ಕೆಟ್ಟ ಕಾರ್ಯಕೆ ಡೊಳ್ಳು ಮುಟ್ಟಬಾರದು ನೀವ್ ಕೆಟ್ಟುಹೋದಿರಿ ನಿಮ್ಮ ಕುಲದೊಳಗೆ
ಬೋಧಿಸಿ ಕೈಲಾಸದ ದಾರಿಯ ಹಿಡಿದರು ವಾದಿಸಬಾರದು ಇದರೊಳಗೆ
ಹಾಸ್ಯ ಮಾಡಿದಂಥ ಹೇಸಿ ಮನುಜರೆಲ್ಲ ನಾಶಾಗಿ ಹೋದಿರಿ ನಿಮ್ಮೊಳಗೆ
ಪೊಡವಿಯೊಳ್ ಮಂಟೂರು ವಡಿಯ ವಾಲ್ಮೀಕೇಶ
ಬಿಡದೆ ನಿಮಗೆ ನಾ ವಂದಿಸುವೆ
ನಾ ತಡಮಾಡದೆ ಅಡಿಗೆರಗುವೆನು ||

ವಚನ

ಹೇ ಬುದ್ಧಿಯುಳ್ಳ ಕುರುಬರೇ ಅಂದ್ಹಾಗೆ ನಮ್ಮ ಡೊಳ್ಳು ಹುಟ್ಟಿತು. ಚೆಂದಾಗಿ ಕೇಳಿದರೆ ಬಂದ ಪಾಪವು ಪರಿಹಾರವಾಗುತ್ತದೆ. ಆದರೆ ರಕ್ಕಸನ ಉದರವೇ ಡೊಳ್ಳಾಯಿತು. ಈ ಮಾತು ಸುಳ್ಳಲ್ಲ. ಪಾರ್ವತಿಯು ಪರಮಾತ್ಮನ ಹತ್ತಿರಕ್ಕೆ ಬರುವಾಗ ಕೈಲಾಸ ಮಂದಿರದಲ್ಲಿ ಷಣ್ಮುಖನನ್ನು ಬಿಟ್ಟು ಬಂದಿದ್ದಳು. ಆದ್ದರಿಂದ ಮಗನ ನೆನಪಾಯಿತು. ಆಗ ಮೊಲಿ ಜುಂ ಎಂದು ಮೊಲಿ ಹಾಲು ನೆಲಕ್ಕೆ ಬೀಳುವಂತಾದುವು. ಆಗ ಪಾರ್ವತಿಯು ಅಯ್ಯೋ ನನ್ನ ಮೊಲೆ ಹಾಲು ವ್ಯರ್ಥವಾದುವೆಂದು ಎಡದ ಮೊಲಿ ಹಾಲಿನ ಮಣ್ಣಿನಿಂದ ಆದಮ್ಮನನ್ನು ಬಲದ ಮೊಲಿ ಹಾಲಿನ ಮಣ್ಣಿನಿಂದ ಆದಿಗೊಂಡನನ್ನು ನಿರ್ಮಿಸಿ ಅವನಿಗೆ ಈ ಡೊಳ್ಳನ್ನು ಕೊಟ್ಟು ಅದೃಶ್ಯರಾದರು.