ಶಂಕಿ ತೊಂಡಿ

ಗುರುವೆ ನಿಮ್ಮ ಪಾದದಿರುವೆನಲ್ಲ ನಾ ಮರುತುಬಿಟ್ಟು ಜಲ್ಮದ ಬೇರ
ಮರತು ಬಿಟ್ಟು ಜಲ್ಮದ ಬೇರ ಶಿವಶರಣರಡಿಗೆ ಬಾಗುವೆ ಶಿsರ
ಚಂಡ ಪರಮ ಕಲಿಗಂಡ ಮೂಗನೂರ ಕೆಂಡಗಣ್ಣಿನ ಬಸವೇಶ್ವರ
ಕೆಂಡಗಣ್ಣಿನ ಬಸವೇಶ್ವರ ಪ್ರಚಂಡ ಅನ್ನದಾನಿ ಕವಿವರಣ
ದಕ್ಷನು ಧುರದಲ್ಲಿ ಸಾಕ್ಷಾತ್ ಜನಿಸಿದ ದಾಕ್ಷಾಯಣಿಗೆ ಮಾಡಿ ನಮಸ್ಕಾರ
ದಾಕ್ಷ | ದಕ್ಷನೋ ಈ ಹೊಟ್ಟೆಯ ಕುವರ
ನುತಿಸಿ ಹೇಳುವೆನು ಕ್ಷಿತಿಯೊಳ ಶರಣರ ಹಿತದಿ ಭಕ್ತಿಯನು ಮಾಡಿದರ
ನಾ ಸತತ ಹೇಳುವೆನು ಶರಣರ ಪೂರಾ
ಗ್ರೀಟ ದೇಶದಲ್ಲಿ ಹುಟ್ಟಿದ ಬಡವರ ಹೊಟ್ಟೆಯಲ್ಲಿ ಜನಿಸಿದ ಸದರಾ
ನಾ ಎಷ್ಟು ಹೇಳಲಿ ಚಮತ್ಕಾರ
ಕಿಂಕರತನದಲಿ ಶಂಕರನೊಲಿಸಿದ ಶಂಕಿತೊಂಡಿ ಶರಣನುತಾನ
ನಾ ಶಂಕಿಯಿಲ್ಲದೆ ಹೇಳುವೆ ಪೂರಾ

ವಚನ

ಗ್ರೀಟ ದೇಶದಲ್ಲಿ ಹುಟ್ಟಿಯಾನು ಶಂಕಿತೊಂಡಿ. ಆಟಪಾಟ ಮಾಡ್ತಾನೆ ಬಹು ಚಂಡಿ. ಉಂಟಾದಾಗೆ ಮಾಡ್ತಾನೆ ತಿಂದುಂಡು ಬಹು ಚಂಡಿ. ಎಷ್ಟೆಷ್ಟು ಹೇಳಿದರು ತೀರದು ಭಕ್ತಿ ಪ್ರಚಂಡಿ. ತಾಯಿ ತಂದೆ ಹೇಳುತ್ತಾರೆ ಶಂಕಿತೊಂಡಿಗೆ ಬಡತಾನ ಬಂದೈತೆ ಇವತ್ತಿಗೆ. ಕೂಲಿದನ ಕಾಯಬೇಕು ಹೊಟ್ಟೆ ಕೂಳಿಗೆ. ಆವಾಗೆ ಕಂದ ಅಂತಾನೆ ಸಂದೇಹವಿಲ್ಲ ತಂದು ಕೂಡರಿ ಕಾವುತ್ತೇನೆಂದನು ವಾರೇವು ಇಲ್ಲ ಮನಿಯೊಳಗೆ.

ಪದ

ತಂದೆ ಹೋಗಿ ತಾ ಮಂದಿಯ ದನಗಳ ತಂದುಕೊಟ್ಟನು ಕಾಯ್ವದಕೆ
ಆ ಕಂದ ನೋಡಿ ಅಂತಾನೆ ಕ್ಷಣಕೆ |
ಕಟ್ಟ ಬುತ್ತಿ ನನ್ನ ಅಟ್ಟ ಅಡವಿಗೆ ಎಷ್ಟೊತ್ತು ಎವ್ವ ಕಟ್ಟದಕೆ
ಅದನಟ್ಟ ತಂದ ಅಪ್ಪಣು ಕ್ಷಣಕೆ |
ದನ ಕಾಯಲಿಕ್ಕೆ ದನಗಾರನಾಗಿ ತನಯ ಹೊಂಟನು ಅಡವಿಯ ಸ್ಥಲಕೆ
ತನ ಮನಿಯಲಿಂದನ ಕಾಯ್ವದಕೆ
ಹತ್ತು ಹುಡುಗರು ಜತ್ತಿಲಿ ಕೂಡ್ಯಾರು ಜತ್ತಿಲಿ ದನಗಳ ಕಾಯ್ವದಕೆ
ದನ ಸುತ್ತ ಬಿಟ್ಟರು ಮೇಯ್ವದಕೆ
ಎಲ್ಲರು ಕೂಡಿ ಕಲ್ಲಿನದೊಂದು ಚೆಲ್ವಲಿಂಗ ಮಾಡಿದರದಕೆ
ಸುತ್ತೆಲ್ಲ ಗುಡಿ ಕಟ್ಟ್ಯದಕೆ

ವಚನ

ಶಂಕಿತೊಂಡಿ ಹೇಳುತಾನೆ ಹುಡುಗರಿಗೆ. ಶಂಕರಗೆ ಪೂಜೆ ಮಾಡ್ಬೇಕು ನಾವೀಗ. ತತ್ರಾಣಿ ನೀರು ಸುರುವ್ಯಾರು ಮ್ಯಾಗೆ. ಕಿಂಕರತನದಿಂದ ಭಸ್ಮವನ್ನು ಧರಿಸ್ಯಾರು ಫಣಿಗೆ. ಕಾಡುಪತ್ರಿ ಕೊಟ್ಟ್ಯಾರು ಮನಬಲ್ಲಂಗೆ. ಕೈ ಮುಗಿದು ಬೇಡಿಕೊಂಬುತಾರೆ ಗಂಗಾಧರಗೆ. ಬ್ಯಾಡಗೊಲಿದ ಕಾಡುಸಿದ್ಧನೆ ಕರುಣ ಇರಬೇಕು ನಮ್ಮ ಮ್ಯಾಗೆ. ಚೂರು ಬುತ್ತಿ ಎಡಿ ಮಾಡಿ ಉಂಡಾರು ಮುತ್ತುಗೆದೆಲಿಯಾಗೆ. ಮೃಢನಗೋಸ್ಕರ ದನದ ಮೇಲೆ ಆಸಿಬಿಟ್ಟು ದನಗಳನ್ನು ಕಳಕೊಂಡೇವು ನಾವೀಗ. ತಾಯಿ ತಂದೆ ಬೇಯುತ್ತಾರೆ ಮನಿಯೊಳಗೆ ಶಂಕಿತೊಂಡಿ ಹೇಳುತ್ತಾನೆ ಹುಡುಗರಿಗೆ ನಮ್ಮ ದನಗಳು ನಮ್ಮನಿಯೊಳಗಿದ್ದರೆ

ಬ್ರಹ್ಮ ಶಿವಗೆ ನೈವೇದ್ಯಕ ತರುವುದೇನಾ

ನಮ್ಮ ದನವು ನಮ್ಮನೆಯೊಳಗಿದ್ದರೆ ಬ್ರಹ್ಮಶಿವಗೆ ತರುವುದೇನಾ

ಪದ

ನಮ್ಮ ಮನಿಂದ ತರುವೆನು ಘೃತನಾ
ಹೋರಿ ಎತ್ತು ನಮ್ಮನಿಯೊಳಗಿದ್ದರೆ ಸೇರು ಬೆಣ್ಣೆ ತರುವನು ಪೂರಾ
ನಾ ಕ್ಷೀರ ತರುವೆನಂತರ ಹುಡುಗರಾ
ಇಷ್ಟು ಕೇಳಿ ಆ ದಿಟ್ಟ ಶಂಕಿಯು ಗಟ್ಟಿ ಕಲ್ಲು ತರುವನು ನೂರಾ
ನಮ್ಮಿಷ್ಟ ಭಕ್ತಿ ನಾವು ಬಡವsರಾ
ಹರಗೆ ಬೇಡಿಕೊಂಡು ಊರಿಗೆ ಬಂದರು ಕರುಗಳಲ್ಲೆಲ್ಲ ಇದ್ದವು ಪೂರ
ಹಿರಿಹಿರಿ ಹಿಗ್ಗಿದರು ಹುಡುಗsರಾ
ವಚನ
ಹಾಲು ಬೆಣ್ಣೆ ಹೊತ್ತು ಬಂದಾರು ಬಾಲರಿತ್ತ ಗಂಗಾಧರಗೆ ನೀಡ್ತಾರೆ ಮನಪೂರ್ತ. ಶಂಕಿತೊಂಡಿ ಜಡ್ಡಲಿಂದ ಮಲಗಿದನು ಗಡದ ಗುಡ್ಡದೊಳಗಿನ ಲಿಂಗದ ಹರಕಿಯನ್ನು ಮರತ. ಗುಡ್ಡದೊಳಗಿನ ಶಂಕರ ಅನ್ನುತಾನೆ ದೊಡ್ಡ ಭಕ್ತನ ಭ್ಕತಿ ಬರಲಿ ಬಹು ಚಂದ.

ಪದ

ಘೋರ ಬಿಟ್ಟನವ ಮೂರು ತಿಂಗಳು ಬಡತನ ಬಿಡಲಿಲ್ಲ
ಹೌಹಾರಿ ಆದ ಭಕ್ತನುಗಾಲ ಮದ್ದತು ಎದ್ದನು ಬಾಲ
ಶುದ್ಧ ಮೂರ ತಿಂಗಳು ಮೇಲ
ಎದಿವುದ್ದ ಕಲ್ಲು ಹೊಟ್ವ್ಯಾನು ಸಾಲಬಂಡಿವೂಡಿ ಕರಿದುಂಡಿ ಹೇರಿ ಶಂಕಿತೊಂಡಿ
ಕುಳಿತ ಬಂಡಿಯಮೇಲ
ಹೊಡಕೊಂಡು ಹೊಂಟ ಗುಡ್ಡದ ಮೇಲ
ಗುರಿಯ ನೋಡಲಿಕೆ ಕರಿಯಕಲು ಒಂದು ತರವಿಗಿಟ್ಟನೊಂದು ಬಾಲ
ಅಲ್ಲಿ ಹರನು ಇದ್ದನು ಖುಷಿಯಾಲ
ಮುಂದಕೆ ಹೋಗುತ ಚಂದ್ರಧರನ ಪಾದ ಕಂದ ಕಂಡ ಅಮೃತಪಾಲ
ಒಂದೊಂದು ಬಗೆವು ತಾನೆ ಕೈಕಲ್ಲ
ಒಂದು ದಿನಕೆ ಮೂರು ಬಂಧುರ ಕಲ್ಲು ಚಂದ್ರಧರನ ಮಾರಿಯ ಮೇಲ
ಆ ಕಂದ ಒಗಿದ ಆದವು ಕಲ್ಲ
ಚಂಡಿ ಕಾಂತಗೆ ದುಂಡಿಕಲ್ಲು ಮನಗಂಡು ಒಗಿದು ಬಿಟ್ಟಿದ್ದ ಮೊದಲ
ಶಂಕಿತೊಂಡಿ ನೋಡಿದ ಸುತ್ತಮುತ್ತೆಲ್ಲ

ವಚನ

ಶಂಕಿತೊಂಡಿ ಜಡ್ಡಿಲಿಂದ ಮಡಗಿದನು ಶುದ್ಧ. ಹರನ ಕಲ್ಲು ಬಂಡಿ ಮೇಲೆ ಮುದ್ಧ. ಪರಮೇಶ್ವರನಿಗೆ ಒಗೆವುತಾನೆ ಒಂದು ಒಂದು ಕಲ್ಲ ಲೆಕ್ಕಕೆ ಕಮ್ಮಿ ಹೇರ‍್ಯಾನು ಆಯಿತು ಒಂದು ಕಲ್ಲ. ಅಮ್ಮಮ್ಮಾ ಕಮ್ಮಿ ಎಂಬುವನೇ ನನ್ನ ಗುಣ ಮಾವಿತಿಗೆ ಕೊಡಬೇಕು ನನ್ನ ಪ್ರಾಣ. ಅಂತ ಸೋಮತನದಿಂದ ನಿಂತಾನು ಜಾಣ.

ಪದ

ಕತ್ತಿ ಎತ್ತಿ ತನ್ನ ಕುತ್ತಿಗೆ ಇಟ್ಟನು ಮೃತ್ಯುಂಜಯಗೆ ಮುಟ್ಟಲಿ ಕಲ್ಲ
ಅಂತ ಸತ್ಯಶೀಲ ನಿಂತನು ಬಾಲ
ಒಡೆಯ ಶಿವನು ಕೈಪಿಡಿದು ಹೇಳುತಾನೆ ಕಡಿದುಕೊಳ್ಳಲುಬ್ಯಾಡ ಶಿರ
ಅಂತ ಹುಡುಗನನ್ನು ಎತ್ತುತ ಮೇಲ
ತೊಡಿಯಲಿ ಪಾರ್ವತಿ ಜಡಿಯಲಿ ಗಂಗ ಮೃಡನು ನಿಜವು ತೋರಿದನಲ್ಲ
ನಿನಗ್ಹಿಡಿ ಎಂದನು ಸಾಯುಜ್ಯಪಾಲ
ಎತ್ತಿರ ಚತ್ರಗಿರಿ ಹೊತ್ತುವೊಯ್ದು ತನ್ನ ಉತ್ತಲಿ ಕೊಟ್ಟನು ಮುಕ್ತಿ ಫಲ
ಶಿವಶರಣ ನೊತ್ತಲಿದ್ದನು ಶಿವಶರಣ
ಧರೆಯೊಳು ಮೂಗನೂರು ಹಿರಿದು ಬಸವನ ಚರಣ ಪಿಡಿದು ಪಾಡುವೆ ಬಾಲ
ಇದು ತರುಳ ಅನ್ನದಾನಿ ಕವಿಯಾಲ

 

ರೇವಣಸಿದ್ದ

ಏಸೊಂದು ಪರಿಯಲ್ಲಾಡಿದರ ಇವ ಸಾಸರ ಮುಖದವನೊಬ್ಬವನೆ
ಸಾಸರ ಮುಖದ ಸದಾಶಿವನು ಇದ್ದು ಇಲ್ಲದವ ನಮ್ಮವನೆ
ಇದ್ದು ಇಲ್ಲದ್ದು ನಿಮ್ಮೊಳಗಾಡಿದ ನಮ್ಮ ಹಿರಿಯರನು ಬಲ್ಲವರ
ನಿಮ್ಮೊಳಗಾಡಿದ ನಮ್ಮ ಹಿರಿಯರು ಮನ್ನನೇಳಿ ಮರಿಗೊಂಡಾರ
ಮನ್ನನೇರಿ ಮರಿಗೊಂಡಾರ ಸ್ವಾಮಿ ಪುಣ್ಯಕೆ ಜಾಗೀರಾಗ್ಯಾರೆ
ಹಿರಿಯರನ್ನೆಲ್ಲ ಹಿಂದೆಗಳೆದು ಕರುಹುಡುಗರು ನಾವು ಬಂದೀವಿ
ಕರು ಹುಡುಗರು ನಾವು ಬಂದೀವಿ ಸ್ವಾಮಿ ಕಡೆಗಣ್ಣಿನಲಿ ನೋಡಬ್ಯಾಡಯ್ಯ
ತಡೆದ ಕಂಠಮಲಿ ಕಿಡಿಗಣ್ಣಿಲೆ ನೋಟ ಸವಗಣ್ಣಿಲೆ ನಮ್ಮ ಸಲುವಯ್ಯ
ಸವಗಣ್ಣಿಲೆ ನಮ್ಮ ಸಲುವುತ ಬಾ ನಮ್ಮಪ್ಪ ರೇವಣಸಿದ್ಧನೆ
ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ ಇಲ್ಲಿಗೆ ಇದು ಒಂದು ಸಂದೇಳು
ಹಾಲುಮತವೊ ಹನುಮಸಾಗರೊ ಗಿಳಿವೊಂದು ಕೋಣಿಗೆ ನೂರಯ್ಯೊ
ದೇವಾರು ಬದಾಂವು ಬನ್ನಿರೆ

 

ದೇವಿ ಹಾಡು

ಕೂಸನು ಹೊತ್ತಾಳೆ ಗುಲ್ಬುಟ್ಟಿ ಹೊತ್ತಾಳೆ ತಾನೊಂದು ರೂಪವು ತಾಳ್ಯಾಳೆ
ತಾನೊಂದು ರೂಪವು ತಾಳ್ಯಾಳೆ ಊರವ್ವ ಊರೆಲ್ಲ ಭಾಳೇವು ಹೊಂಟಾಳೆ
ಎಳ್ಳೇನು ಕಾಯಂಗ ಕಳುಬಾವು ಹರದಾವು ಒಳ್ಳೊಳ್ಳೆರಿಗೆ ಬಲುದಾಳ
ಒಳ್ಳೊಳ್ಳೆರಿಗೆ ಬಲುದಾಳ ಊರವ್ವ ಮಲ್ಲಿಗೆ ಕ್ವಾಣನ ಬಿಡಿಸ್ಯಾಳೆ
ಎಸರೇನು ಕಾಯಂಗ ಹಸುಬಾವು ಹರಿದಾವು ಹಸುಮಕ್ಕಳಿಗೆ ಒಲುದಾಳ
ಹಸುಮಕ್ಕಳಿಗೆ ಒಲುದಾಳ ಊರವ್ವ ಮಸುಳೆಯ ಕ್ವಾಣನ ಬಿಡಿಸ್ಯಾಳ
ಆರು ಕಾಲಿನೇಣಿ ಹತ್ಯಾಳ ಊರವ್ವ ಹಾರಿ ನೋಡ್ಯಾಳ ಊರ ಗೌಡನ
ಹಾರಿ ನೋಡ್ಯಾಳ ಊರ ಗೌಡನ ಮನಿಯಾಗ ಆರತಿ ಮತ್ಯಾಕ ತಡದಾವ
ಹನ್ನೆರಡು ವರುಷದ ಎಣ್ಣುಂಡ ಕ್ವಾಣನ ಸಣ್ಣ ಮಿಣಿಯಾಕಿಡಿರಂದಾಳ
ಇಪ್ಪತ್ತು ವರುಷದ ತುಪ್ಪುಂಡ ಕ್ವಾಣನ ಜತ್ತಿ ಮಿಣಿಯಾಕಿಡಿರಂದಾಳ
ಜತ್ತಿ ಮಿಣಿಯಾಕಿಡಿರಂದಾಳ ಊರವ್ವ ಎತ್ತ್ಯಾಕಿ ಕೊರಳ ಕೊಯ್ಸಾಳ
ಎತ್ತ್ಯಾಕಿ ಕೊರಳ ಕೊಯ್ಸಾಳ ಊರವ್ವ ನೆತ್ತರದೋಕಳಿನಾಡ್ಯಾಳ
ನೆತ್ತರದೋಕಳಿನಾಡ್ಯಾಳ ಊರವ್ವ ಛತ್ತರಿ ನೆರಳಾಗ ನಿಂತಾಳ
ಛತ್ತರಿ ನೆರಳಾಗ ನಿಂತಿರ ಊರವ್ವ ಭಗತರು ಕರೆದಾರು ಓ ಎನ್ನೆ
ಭಗತರು ಕರೆದಾರು ಓ ಎನ್ನಲಿಲ್ಲೊ ತಪ್ಪಿಸಿಕೊಂಡವು ದೇವರು
ಒಗದಾಳು ಎಂಬ ವನದಾಗಪ್ಪ ದಾಳಿಂಬರದ ಗೊನಿಯಾಗ
ದಾಳಿಂಬರದ ಗೊನಿಯಾಗಪ್ಪ ದೇವಿ ದ್ಯಾವರ ಶಬ್ದವು
ದೇವಿ ಎಂದರೆ ಯಾರೇಳಪ್ಪ ದ್ಯಾವರಂದರ ಯಾರೇಳು
ದೇವಿ ಎಂದರೆ ಪಾರ್ವತದೇವಿ ಶಾಸ್ತ್ರ ಮುಖಕ್ಕ ಊರವ್ವನ
ದೇವರೆಂದರೆ ಪರಮೇಶ್ವರನು ಶಾಸ್ತ್ರ ಮುಖಕ್ಕ ಬೀರಣ್ಣನ
ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ ಇಲ್ಲಿಗೆ ಇದು ಒಂದು ಸಂದೇಳು

 

ಮಳಿರಾಯ

ಮಳಿಗಾಳಿಗಳಿಲ್ಲದೆ ಮಡುಗಳೆದ್ದವು ಸುಳಿಗಾಳಿಲ್ಲದೆ ತಿರುಗ್ಯಾವು
ಸುಳಿಗಾಳಿಲ್ಲದೆ ತಿರುಗ್ಯಾವಲ್ಲೊ ವಜ್ಜರದ ಕೀಲ ಸಡಿಲ್ಯಾವು
ವಜ್ಜುರದ ಕೀಲ ಸಡಿಲ್ಯಾವಲ್ಲೊ ಬಿದ್ದನಪ್ಪ ಮಳೆದೇವನೊ
ಬಿದ್ದನಪ್ಪ ಮಳಿದೇವನಲ್ಲೊ ಗುಡ್ಡಗಳೆಲ್ಲ ಹಸುರಾಗ್ಯಾವೊ
ಗುಡ್ಡಗಳೆಲ್ಲ ಹಸುರಾಗ್ಯಾವಲ್ಲೊ | ಬಸವನ ಬಣ್ಣಕೆ ಬಂದಾನೊ
ಬಸವನ ಬಣ್ಣಕೆ ಬಂದಾನಲ್ಲೊ ಬಿತ್ತು ಬೀಜ ಜತುನಾದಾವೊ
ಸೆಡ್ಡಿ ಬಟ್ಟಲ ಶರಕ್ಕಮಿಣಿಯೋ ಎಡಿ ನೊಗ ಇಟ್ಟೊಂದಾಮ್ಯಾನೊ
ಎಡಿನೊಗ ಇಟ್ಟೊಂದ ಮ್ಯಾನಲ್ಲೊ | ಕೂರಿಗಿ ಪೂಜೆ ಮಾಡ್ಯಾನೊ
ಹುಡಿಯಲಿ ಹುಡಿಬೀಜ ಹಿಡಿಯಲಿ ಹಿಡಿಬೀಜ ಹೊಡಿವ ಬಾರಿಕೋಲು ಹೆಗಲಲ್ಲೊ
ಹೊಡಿವ ಬಾರಿಕೊಳು ಹೆಗಲಲಿ ಹಾಕಿಕೊಂಡು ಜಳಜಳ ಬೀಜವ ಬಿಟ್ಟಾನೊ
ಹಂಡ ಎತ್ತಿದ ಹಗ್ಗವ ಹಿಡಿದು ಗುಂಡ ಎತ್ತಿನೊಂದೊಡಿದಾನೊ
ಗುಂಡ ಎತ್ತಿನೊಂದೊಡಿದಾನೊಲ್ಲೋ ಜಳ ಜಳ ಬೀಜವ ಬಿತ್ತ್ಯಾನೊ
ಹಸಿ ಮಣ್ಣಿನಾಗ ಸಸಿ ನಾಟಿ ಬರುವಾಗ ಹಸನಾಗಿ ಬೆಳಿಯೊ ಭೂಮ್ಯವ್ವಾ
ಹಸನಾಗಿ ಬೆಳಿಯೊ ಭೂಮ್ಯವ್ವ ನಿನ್ನ ಹಸರಂತ ಕಾಲಂದಾಡ್ಯಾವೊ
ಹಾಲು ತುಂಬಿ ಹದ ಮೀರಿದ ಬಳಿಕ ಹಾಲು ತುಪ್ಪ ಚಲ್ಯಾಡ್ಯಾವೊ
ನಾಲ್ಕು ಮೂಲಿಗೆ ಮಂಚಿಗಿ ಹಾಕಿ ಕೌಣಿಲಿ ಗುಬ್ಬಿ ಕಾದಾನೊ
ಕುಡಗೋಲು ತಗೊಂಡು ಬುಡಮಟ ಕೊಯ್ದನು ಹಿಡಿಹಿಡಿ ಸಿವುಡೊಂದು ಈಡಾಡ್ಯಾನೊ
ಹಿಡಿಹಿಡಿ ಸಿವುಡೊಂದೀಡ್ಯಾಡ್ಯನಲ್ಲೊ ಚೆಂಡಿ ಕಟ್ಟಿ ಗೂಡಾಕ್ಯಾನೋ
ಕಣಗಳ ಮಾಡಿ ತೆನಿಗಳ ಮುರಸಿ ಸುತ್ತಕಣಕೆ ದಿಂಡ ಕಟ್ಟ್ಯಾನೊ
ತೆನಿಯಾದು, ಕಡಿಯಣ್ಣ ಕಣಕಾದು, ಹರುವಣ್ಣ ರೂಲನಾದರ ಹೂಡ್ಯಾನೊ
ರೂಲನಾದರೂ ಹೂಡ್ಯಾನೊ ಒಕ್ಕಲಿಗ ಹಾಡ್ಯಾಡಿ ರೂಲ ಹೊಡದಾನೋ
ಹಾಡ್ಯಾಡಿ ರೂಲ ಹೊಡದಾನೋ ಒಕ್ಕಲಿಗ ಹುಲಿಗನಂದು ರೂಲ ಬಿಟ್ಟಾನೊ
ರೂಲನಾದರೂ ಬಿಟ್ಟಾನೊ ಒಕ್ಕಲಿಗ ಕಂಕಿನಾದರೂ ಎಳದಾನೊ
ಕಂಕಿನಾದರೂ ಎಳದಾನೊ ಒಕ್ಕಲಿಗ ಸುಂಕದ ರಾಸಿ ಕಟ್ಯಾನೊ
ಮೂರು ಕಾಲಿನ ಮೆಟ್ಟವನಾಕಿ ಸುಂಕದ ರಾಶಿ ತೂರ‍್ಯಾನೊ
ಸುಂಕದ ರಾಶಿ ತೂರ‍್ಯಾನಲ್ಲೋ ರಾಸಿ ತುಂಬಿ ಮೇಟಿಗಾಕ್ಯಾನೊ
ರಾಸಿ ತುಂಬಿ ಮೇಟಿಗಾಕ್ಯಾನೊ ಒಕ್ಕಲಿಗ ಮೋಜು ಮಾಡಿ ರಾಸಿ ಕಟ್ಟ್ಯಾನೊ
ಮೋಜ ಮಾಡಿ ರಾಸಿ ಕಟ್ಟ್ಯಾನೊ ಒಕ್ಕಲಿಗ ಪೂಜೆ ಮಾಡಿ ಎಡಿ ಹಿಡದಾನ
ಪೂಜೆ ಮಾಡಿ ಎಡಿಹಿಡಿದಾನ ಒಕ್ಕಲಿಗ ರಾಸಿಯಾದರೂ ಮೊಗಚಿದನೋ
ರಾಸಿಯಾದರೂ ಮೊಗಚ್ಯಾನ ಒಕ್ಕಲಿಗ ರಾಸಿ ತುಂಬಿ ಬಂಡಿಗಾಕ್ಯಾನೊ
ರಾಸಿ ತುಂಬಿ ಬಂಡಿಗಾಕ್ಯಾನೊ ಒಕ್ಕಲಿಗ ಬಸವಣ್ಣನ್ಹೂಡಿ ರಾಸಿ ತಂದಾನೊ
ಬಸವಣ್ಣಗಿಂತ ಬಲ್ಲಿದನ್ಯಾರೊ ಶಿವನಿಗಿಂತ ದೊಡ್ಡವನ್ಯಾರೊ
ಶಿವನಿಗಿಂತ ಶಿವಶರಣರಧಿಕರೆಂಬ ಶರಣಡಿಗೆ ನಾನು ವಂದಿಸುವೆ
ಉತ್ತಮರಾದ ಊಲ್ವತ್ತಿ ಈರಗಾರು ಮುತ್ತಿನಂಥ ಪದ ಹಾಡಿದರು
ಹಾಡಿ ಹಾಡಿಕೊಂತೋದರೆ ಗುರುವೆ ಬೇಗುಂಟು ಬೆಳಗಾದಾವೆ
ಇಲ್ಲಿಗೆ ಇದು ಬಂದು ಸಂದೇಳು ಗುರುವೆ ಹಾಡಿದರು ಪದ ಮುಂದೇಳು

 

ಶಿಂದೋಗಿ ಮರುಳಣ್ಣ

ಮುಂಜಾಲೆದ್ದು ಸಿಂದೋಗಿ ಮರುಳಣ್ಣ ಹಗರಿ ಹಳ್ಳಕ ಹೋಗ್ಯಾನ
ಹಗರಿ ಹಳ್ಳಕ ಹೋಗ್ಯಾನ ಸಣ್ಣದೊಂದು ವರ್ತಿ ತಗದಾನ
ಮಜ್ಜನ ಬಿಂದಿಗಿ ತುಂಬ್ಯಾನ ಹೂವು ಎತ್ತುತಲಿ ಹೋಗ್ಯಾನ
ಮಜ್ಜನ ಬಿಂದಿಗಿ ಹೆಗಲೀಲಿ ಹೂವಿನ ಕರಡಿ ಬಗಲೀಲಿ
ಹೂವಿನ ಕರಡಿ ಬಗಲೀಲಿ ತಕ್ಕೊಂಡು ಬೂದಿ ದಿಬ್ಬವ ಹತ್ಯಾನ
ಬೂದಿ ದಿಬ್ಬವ ಹತ್ತೊ ಹೊತ್ತಿಗೆ ತುರುಕರಣ್ಣ ಎದ್ರು ಬಂದಾನ
ತರುಕರಣ್ಣ ಎದ್ರಿಗೆ ಬಂದಾನ ಚೇಜಿ ಹೊಟ್ಟೇಲೇನೈತೆಂದು ಕೇಳ್ಯಾನ
ಮುಂಗಾಲ ಬಳಕಾಲು ಮೂಗುತಿ ಬಲ್ಲ ಅಚ್ಚ ನೀಲಗಂಡ ಮರಿ ಐತೆ
ಆಗ ನೋಡ ತರುಕಾರಣ್ಣ ಚೇಜಿ ಕಾಲವ ಕಟ್ಟ್ಯಾನ

 

ಭರಮಣ್ಣ

ದುಮ್ಮಿನಾಳು ಭರಮಣ್ಣನಪ್ಪ ಸುಮ್ಮಾನು ಬರುವಲ್ಲೇಳು
ಆಡಮಕ್ಕಳ ಅಳಿಸ್ಯಾನ ಭರಮಣ್ಣ ಓದ ಮಕ್ಕಳ ಕೆಡಸ್ಯಾನ
ಓದ ಮಕ್ಕಳ ಕೆಡಿಸ್ಯಾನ ಭರಮಣ್ಣ ಮುಂದಕ ಸಾಗಿ ಬಂದಾನ
ಮುಂದಕ ಸಾಗಿ ಬಂದಾನ ಭರಮಣ್ಣ ಒಬ್ಬ ಸ್ತ್ರೀಯಳ ಕಂಡಾನ
ಒಬ್ಬ ಸ್ತ್ರೀಯಳ ಕಂಡಾನ ಭರಮಣ್ಣ ಲಗ್ಗಣಾಗಬೇಕಂದಾನ
ಅಂಗಳದಾಗ ಆಡುವ ತಂಗಿ ಸೂರವ್ವನ ಅಂಗೈಗೆರಿಗಳ ನೋಡ್ಯಾರ
ಒಂಟಿಯ ಸುಳಿಯೊ ಗಂಟಿಯ ಮುತ್ತೊ ಸಂತವುಳ್ಳ ಹೆಣ್ ಅಂದಾರ
ಸಂತವುಳ್ಳ ಹೆಣ್ಣಂದಾರ ನಮ್ಮ ಭರಮಗ ದಗ ಮಾಡಿ ತಗದಾರ
ಹಸಿಯೊ ಜಗಲೊ ಹಾಲುಗಂಬ ಗಗನಕ ಚಂದ ಹಂದರ
ಗಗನಕ ಚಂದವ ಹಂದರದಡಿಯಲೆ ಭರಮನ ಮದುವಿ ಮಾಡ್ಯಾರ
ಅದು ಎಲಿ ಹೋಳಿಗೆ ಸ್ವಾರಿಯಲ್ಲಿ ಬಾನ ಮ್ಯಾಲೆ ನೊರಿಹಾಲು ಸುರಿಯಾಲೆ
ಮ್ಯಾಲೆ ನೊರಿಹಾಲು ಸುರಿಯಲಪ್ಪ ತಂಗಿ ಸೂರವ್ವನ ಭೂಮಾತ
ಐದ ಮಂದಿ ಸ್ತ್ರೀಯರ ನೀವು ಆರತಿ ಮಾಡೇಳಂದಾರ
ಐದ ಮಂದಿ ಸ್ತ್ರೀಯರ ಕೂಡಿ ಆರತಿ ಮಾಡಲ್ಲಿಟ್ಟಾರ
ಏಳು ಏಳು ತಂಗಿ ಸೂರವ್ವ ಆರತಿ ಮಾಡೇಳಂದಾರ
ಆಗ ನೋಡು ತಂಗಿ ಸೂರವ್ವ ಸೂರ್ಯ ಚಂದ್ರ ನಿನ್ನೊಡಿಯಾನ?
ಸೂರ್ಯನಕಿಂತ ಬೆಳಕ್ಯಾರವ್ವ ಚಂದರಗಿಂತ ಖಳ ಯಾರ
ಚಂದರಗಿಂತ ಖಳ ಆದ ಪುತ್ರನ ಕೊಡು ಅಂಥ ನಾ ಬೇಡಿದೆನ

 

ಈರಪ್ಪ

ಈರನೆಂದರೆ ಹ್ಯಾಗಿರಬೇಕು ಧೀರತನಗಳು ಇರಬೇಕು
ಧೀರತನಗಳು ಇಲ್ಲದ ಬಳಿಕ ಹಿರಿತನಗಳು ಸಲ್ಲಾವ
ಈರತನಕ ತಕ್ಕಂಗ ಒನಪು ಜಂಪುಗಳಿರಬೇಕು
ಒನಪು ಜಂಪುಗಳಿಗೆ ತಕ್ಕಂಗ ಕಿರುಗೆಜ್ಜೆ ಕುಣಿಸುತ ಬರಬೇಕು
ಡೊಳ್ಳಿನ ಮ್ಯಾಗಳ ಮುಂಗೈ ಹಸ್ತ ಗಿಳಿಪಾತರನಂತಿರಬೇಕು
ತಾಳಮೇಳ ಪಿಲ್ಲಾಳ ಕೊಳಲು ಸೈಸಂಗತಿ ಕೂಡಿ ಬರಬೇಕು
ಸೈ ಸಂಗತಿ ಕೂಡಿ ಬಂದರೆ ಸ್ವಾಮಿ ಕಂಡು ಸೈ ಅಂದಾರೆ
ಸ್ವಾಮಿ ಕಂಡು ಸೈ ಅಂದಾನಪ್ಪ ಹತ್ತು ಮಂದಿ ಹೌಹಂದಾರ
ಹತ್ತು ಮಂದಿ ಹೌದಂದಾರಪ್ಪ ಗುರುಹಿರಿಯರು ಒಪ್ಪಿಕೊಂಡಾರ
ಗುರುಹಿರಿಯರು ಒಪ್ಪಿಕೊಂಡಾರಪ್ಪ ಕಳುವ್ಯಾರ ಕರ್ಪುರದೀಳ್ಯಾವ
ಕಾಚುಪಂಚ ಕೈಯೊಳಗಿಡಕೊಂಡು ಈರಾರ ಮಕ್ಕಳು ಆಡ್ಯಾರ

 

ಮಾಯವ್ವ

ಎಕ್ಕಲತ್ತಿ ಎಲ್ಲವ್ವ ನೀಬಾ ಕುಕನೂರು ದ್ಯಾಮವ್ವನೇ
ಒಡ್ಡಟ್ಟ ಉಡಸವ್ವ ನೀಬಾ ಸಿರಸಂಗಿ ಕಾಳವ್ವನೆ
ಬಾದೇವಿ ಬನದವ್ವ ನೀಬಾ ಬಾಳಿಯ ವನದವ್ವನೆ
ಹಾಲುಹಳ್ಳದ ಬಣ್ಣದ ಮಾಯವ್ವ ಇವರಾರು ಮಂದ್ಯತ ತಂಗೇಳೆ
ಇವರೇಳು ಮಂದಿ ಅಕ್ಕತಂಗೇರಪ್ಪ ಗಂಡನಿಲ್ಲದ ಬಾಲೇರು
ಗಂಡನಿಲ್ಲದ ಬಾಲೇರಪ್ಪ ಮಲಿ ಇಲ್ಲದ ಸುಗುಡೇರು
ಮಲಿ ಇಲ್ಲದ ಸುಗುಡೇರಪ್ಪ ಮಕ್ಕಳಿಲ್ಲದ ಬಂಜೇರು
ಮಕ್ಕಳಿಲ್ಲದ ಬಂಜೇರಪ್ಪ ಈರಗಾಸಿಯ ಹಾಕ್ಯಾರ
ಗಂಡಗಾಸಿಯ ಹಾಕ್ಯಾರಪ್ಪ ಕುನಿಗಿನ ಬ್ಯಾಟಿ ಹೊಂಟಾರೆ
ಆಡುತಾಡುತಲ್ಲೋದಾರಲ್ಲಾ ಅಧ್ವಾನರೊಂದ್ ಆಡಿವ್ಯಾಗ
ಅಧ್ವಾನದೊಂದ್ ಅಡರಿ ಒಳಗ ಟೋಪಿನಾರಿಯ ಹಳ್ಳವ
ಟೋಪಿನಾರಿದೊಂದ್ಹಳ್ಳದಾಗ ಸೋಸಿ ಬ್ಯಾಟಿಯೊಂದಾಡ್ಯಾರ
ಸೋಸಿ ಬ್ಯಾಟಿಯೊಂದಾಡ್ಯಾರಲ್ಲ ಗಿಡವೊಂದು ಬ್ಯಾಟಿ ಆಡ್ಯಾರ
ಗಿಡವೊಂದು ಬ್ಯಾಟಿನಾಡ್ಯಾರಲ್ಲ ಪುನಗಿನ ಬೆಕ್ಕ ಎಬಿಸ್ಯಾರ
ಪುನಗಿನ ಬೆಕ್ಕ ಎಬಿಸ್ಯಾರಲ್ಲ ಸೀಗಿ ಪೆಳಿಯಾಗ ಒಗಿಸ್ಯಾರ
ಸೀಗಿ ಪೆಳಿಯಾಗ ಹೋಗಿಸ್ಯಾರಪ್ಪ ಸುತ್ತುಗೋಲುಗಳ ಒಯ್ದಾರ
ಸುತ್ತಗೋಲುಗಳ ಒಯ್ದಾರಪ್ಪ ಪುನಗೀನ ಬೆಕ್ಕು ಬಡದಾರ
ಪುನಗಿನ ಬೆಕ್ಕು ಬಡದಾರಪ್ಪ ಆಡುತಾಡುತಲ್ಲೋದಾರ
ಆಡುತಾಡುತಲ್ಲೋದಾರಪ್ಪ ಅಧ್ವಾನದೊಂದ್ ಅಡಿವೇಳೆ
ಅಧ್ವಾನದೊಂದ್ ಅಡವಿಯ ಒಳಗ ಅಸ್ತಮಾನಗಳ ಮುಣುಗ್ಯಾವು
ಅಸ್ತಮಾನಗಳ ಮುಣುಗ್ಯಾವಪ್ಪ ಸಬ್ಬನಿದ್ದಿಯಗವುದಾರ
ಹಾಲು ಹಳ್ಳದ ಬಣ್ಣದ ಮಾಯೆ ಕಣ್ಣಿಗೆ ನಿದ್ರಿ ಇಲ್ಲಾವ
ಅಧ್ವಾನದೊಂದ್ ಅಡವಿವೊಳಗ ಕಂದನ ಸದದಲ್ಲಾಗ್ಯಾನೆ
ಏಳಿರೇಳಿರಿ ಅಕ್ಕಗಳಿರಾ ಕಂದನ ಸಬದಿಲ್ಲಾಗ್ಯಾವೆ
ಆರುಮಂದಿ ಅಕ್ಕಗಳಪ್ಪ ದಿಡಗ್ಗನೆದ್ದು ಕುಂತಾರ
ದಿಡಗ್ಗನೆದ್ದು ಕುಂತಾರಪ್ಪ ಕಂದನ ಸಬದ ಇಲ್ಲಾವ
ಇವಳೆಂಥ ಹಗಮಾಲಗಿತ್ತೇಳಪ್ಪ ಅವಳೆಂಥ ಹೊಯ್ಮಾಲಿಗಿತ್ತೇಳು
ಆ ಮಂದಿ ಅಕ್ಕಗಳಪ್ಪ ಸಬ್ಬ ನಿದ್ರಿಯ ಮಾಡ್ಯಾರ
ಮತ್ತೆ ಒಂದು ಜಾವದ ಮ್ಯಾಲೆ ಕಂದನ ಸಬದಲ್ಲಾಗ್ಯಾವೆ
ಏಳಿರೇಳಿರಿ ಅಕ್ಕಗಳಿರಾ ಕಂದನ ಸಬದಿಲ್ಲ್ಯಾಗ್ಯಾವೆ
ಆರುಮಂದಿ ಅಕ್ಕಗಳಪ್ಪಾ ದಿಡಗ್ಗನೆಂದು ಕುಂತಾರ
ದಿಡಗ್ಗನೆದ್ದು ಕುಂತಾರಪ್ಪ ಕಂದನ ಸಬದ ಕೇಳ್ಯಾವ
ನನ್ನ ಮಗನೆಂದು ನಿನ್ನ ಮಗನೆಂದು ಗುದ್ದ್ಯಾಡುತಲಿ ಹೋಗ್ಯಾರ
ಹಾಲು ಹಳ್ಳದ ಬಣ್ಣದ ಮಾಯವ್ವ ತಾನೊಂದೇಚಿನಿ ಮಾಡ್ಯಾಳ
ನನ್ನ ಮಗನಲ್ಲ ನಿನ್ನ ಮಗನಲ್ಲ ಯಾರ ಮಲಿಯಾಗ ಹಾಲೇಬರತಾವ
ಅವರ ಮಗನೇಳು ಅಂದಾಳ
ಕಾಡರುದ್ರನ ಭೂಮಿಯ ಮ್ಯಾಲೆ ಕನ್ಯಕಂಚಿಯ ಮರನೇಳೆ
ಕನ್ಯಕಂಚಿಯ ಮರಕ್ಕ ನೋಡು ಬೆಳ್ಳಿಯ ಹಗ್ಗ ಹಾಕ್ಯಾರೆ
ಬೆಳ್ಳಿಯ ಹಗ್ಗ ಹಾಕ್ಯಾರಪ್ಪ ಬಂಗಾರ ತೊಟ್ಟಿಲ ಕಟ್ಟ್ಯಾರ
ಆರುಮಂದಿ ಅಕ್ಕಗಳಪ್ಪ ಒಂದು ಜುರಿಯ ತೂಗ್ಯಾರ
ಮೂರು ಜುರಿಯ ತೂಗ್ಯಾರಪ್ಪ ಮೂರು ಜುರಿಯ ತೂಗ್ಯಾರ
ಮೂರು ಜುರಿಯ ತೂಗ್ಯಾರಪ್ಪ ಮಲಿಯಾಗ ಹಾಲು ಇಲ್ಲಾವ
ಹಾಲು ಹಳ್ಳದ ಬಣ್ಣದ ಮಾಯವ್ವ ತಾನೊಂದು ಜುರಿಯ ತೂಗ್ಯಾಳ
ತಾನೊಂದು ಜುರಿಯ ತೂಗ್ಯಾಳಪ್ಪ ಮಲಿಯ ಮೂಗು ಜುಮ್ಮೆಂದಾವ
ಮೂರು ಜುರಿಯ ತೂಗ್ಯಾಳಪ್ಪ ಹಾಲು ಹಳ್ಳವಾಗಿ ಹರದಾವ
ಆರುಮಂದಿ ಅಕ್ಕಗೆಳಪ್ಪ ತಂಗಿಯ ಮ್ಯಾಲೆ ಇರುವಾದ
ನನ್ನ ಮಗನಲ್ಲ ನಿನ್ನ ಮಗನಲ್ಲ ಎಲ್ಲರ ನಡುವಿ ಒಬ್ಬವನ
ಎಲ್ಲರ ನಡುವಿ ಒಬ್ಬವನಪ್ಪ ತೊಟ್ಟಿಲಿಗ್ಹಾಕಿ ತೂಗ್ಯಾರ
ತೊಟ್ಟಲಿಗ್ಹಾಕಿ ತೂಗ್ಯಾರಪ್ಪ ಜೋ ಎಂದು ಜೋಗುಳ ಪಾಡ್ಯಾರ
ಎತ್ತ ಹೋದರು ಹೇನಮ ಶಿವಯ
ಚಿತ್ತ ಎನ್ನ ಮೇಲಿರಲೇಳ