ಚೆಲ್ಲಳ್ಯವ್ವ (ಚೆಂಗಳಕ್ಯವ್ವ)

ನಾಕು ಟೆಂಗಿನ ಮರದ ನೆರಳಿಲೆ ಏಕ ಜಾಡಿಯ ಜಂಗಮನೊ
ಏಕ ಜಾಡಿಯ ಜಂಗನಪ್ಪ ಲೋಕಕ ಹುದಿಗಳಾದವನೊ
ಲೋಕಕ ಹುದಿಗಳಾದವನಪ್ಪ ಕೈಯಲಿ ಬೆತ್ತ ಹಿಡದವನೊ
ಕೈಯಲಿ ಬೆತ್ತ ಹಿಡಿದವನಪ್ಪ ಮುಂಗೈ ಜೋಳಿಗೆ ಹಾಕ್ಯಾನೊ
ಮುಂಗೈ ಜೊಳಿಗೆ ಹಾಕ್ಯಾನಪ್ಪ ಕಾಲಿಗೆ ಜಂಗ ಧರಿಸ್ಯಾನೊ
ಕಾಲಿಗೆ ಜಂಗ ಧರಿಸ್ಯಾನಪ್ಪ ಕೋರ‍್ಯಾಣ ಭಿಕ್ಷೆ ಬಂದಾನು
ಆಗ ನೋಡು ನನ ಹಾರರು ಬಾಲಿ ಮರ ತುಂಬ ದಾನವ ತಂದಾಳು
ಇವು ದಾನವ ಒಲ್ಲೆನು ಮಗಳ ಹಾಲು ದಾನ ಮಾಡಂದಾನ
ಆಗ ನೋಡು ನನ್ ಹಾರರ ಬಾಲಿ ಆಕಳು ಕರುಗಳ ಬಿಟ್ಟಾಳು
ಆಕಳು ಕರುಗಳ ಬಿಟ್ಟಾಳಪ್ಪ ಗಿಂಡಿಲೆ ನೊರೆಹಾಲು ಕರೆದಾಳು
ಗಿಂಡಿಲೆ ನೊರೆಹಾಲು ಕರೆದಾಳಪ್ಪ ಅಯ್ಯನ ಮುಂದೆ ಇಟ್ಟಾಳು
ಅಯ್ಯನ ಮುಂದೆ ಇಟ್ಟಾಳಪ್ಪ ಕರಕುಡದs ಮಲಿ ಎಂಜಲವು
ಕರಕುಡದ ಮಲಿ ಎಂಜಲವೆಂದೆ ಮುಂದಿನ ಮನಿಗೆ ಹೊಂಟಾನ
ಆಗ ನೋಡು ನನ್ನಯ್ಯಪ್ಪನ ರಡ್ಡ್ಯರ ಮನಿಗೆ ಹೋದಾನ
ರಡ್ಡ್ಯರ ಮನಿಗೆ ಹೋದಾನಪ್ಪ ಕೋರಾಣ ಭಿಕ್ಷವಂದಾನು
ಆಗ ನೋಡು ನನ ರೆಡ್ಡೆರ ಬಾಲಿ ಮರತುಂಬ ದಾನವ ತಂದಾಳು
ಈವ ದಾನವ ಒಲ್ಲೆನು ಮಗಳೆ ಹಾಲದಾನವ ಮಾಡವ್ವ
ಹಾಲದಾನವ ಮಾಡಂಬತಿಗೆ ಎಮ್ಮಿಯ ಕರುಗಳು ಬಿಟ್ಟಾಳು
ಎಮ್ಮಿಯ ಕರುಗಳು ಬಿಟ್ಟಾಳಪ್ಪ ಗಿಂಡಿಲೆ ನೊರೆಹಾಲು ಕರೆದಾಳು
ಗಿಂಡಿಲೆ ನೊರೆಹಾಲು ಕರೆದಾಳಪ್ಪ ಅಯ್ಯನ ಮುಂದೊಯ್ದಿಟ್ಟಾಳು
ಆಗ ನೋಡು ನನ್ನಯ್ಯನಪ್ಪ ಕರಕುಡದs ಮಲಿ ಎಂಜಲವು
ಕರಕುಡದ ಮಲಿ ಎಂಜಲವೆಂದೆ ಮುಂದಲ ಮನಿಗೆ ಬಂದಾನ
ಆಗ ನೋಡು ನನ ಜಂಗಮರಣ್ಣ ಕುರುಬರ ಮನಿಗೆ ಬಂದಾನ
ಕುರುಬರ ಮನಿಗೆ ಬಂದಾನಪ್ಪ ಕೋರ‍್ಯಾಣ ಭಿಕ್ಷೆ ಅಂದಾನ
ಆಗ ನೋಡು ನನ್ನ ಕುರುಬರ ಮಗಳು ಮರತುಂಬ ದಾನವ ತಂದಾಳು
ಈವ ದಾನವ ಒಲ್ಲೆನು ಮಗಳೆ ಹಾಲದಾನವ ಮಾಡ್ಹೋಗು
ಆಗ ನೋಡು ನನ್ನ ಕುರುಬರ ಬಾಲಿ ಸುತ್ತಿದ ಕುರಿಗಳು ಸುತ್ತಿದಂಗೊ
ಸುತ್ತಿದ ಕುರಿಗಳು ಸುತ್ತಿದಂಗಪ್ಪೊ ಮುಚ್ಚಿದ ಕುರಿಗಳು ಮುಚ್ಚಿದಂಗೊ
ಮುಚ್ಚಿದ ಮರಿಗಳು ಮುಚ್ಚಿದಂಗಪ್ಪ ಗಿಂಡಿಲೆ ನೊರೆಹಾಲು ಕರೆದಾಳು
ಗಿಂಡಿಲೆ ನೊರೆಹಾಲು ಕರೆದಾಳಪ್ಪ ಅಯ್ಯನ ಮುಂದೊಯ್ದಿಟ್ಟಾಳ
ಆಗ ನೋಡು ನನ್ನಯ್ಯನಪ್ಪ ಮೂರು ಬೊಗಸಿಯ ಸಲಿಸ್ಯಾನ
ಮೂರು ಬೊಗಸಿಯ ಸಲಿಸ್ಯಾನಪ್ಪ ಊಟಕೆ ಬರಬೇಕು ಅಂದಾಳ
ಊಟಕೆ ಬರ್ತೀನಂದಾನಪ್ಪ ನಿನ ಮಗನ ಕೊಯ್ಯಬೇಕಂದಾನ
ನಿನ್ನ ಮಗನ ಕೊಯ್ದ ಪಲ್ಯವ ಊಟ ಮಾಡತೀನಂದಾನ
ಗುರುವಿನ ಕರುಣ ನನಮೇಲ ಇದ್ದರ ಇಂಥ ಮಕ್ಕಳು ಇನ್ನೇನೊ
ಆಗ ನೋಡು ನನ ಕುರುಬರ ಬಾಲಿ ಓದೊ ಸಾಲಿಗೆ ಹೋಗ್ಯಾಳ
ಓದೊ ಸಾಲಿಗೆ ಹೋದಾಳಪ್ಪ ಮಗನನ ಕರೆದು ಬಂದಾಳು
ಮುಂದೆ ಮುಂದೆ ಚೆಲ್ಲಳ್ಯವ್ವನಪ್ಪ ಹಿಂದಿಂದೆ ಮಗ ಬಂದಾನ
ಹಿಂದಿಂದೆ ಮಗ ಬಂದಾನಪ್ಪ ದೇವರ ಮನಿಗೆ ಹೋದಾಳ
ದೇವರ ಮನಿಗೆ ಹೋದಾಳಪ್ಪ ಏತ್ಯಾಕಿ ಕುತಿಗಿ ಕೊಯ್ದಾಳ
ಏತ್ಯಾಕಿ ಕುತಿಗಿ ಕೊಯ್ದಾಳಪ್ಪ ಸಣ್ಣ ನುಣ್ಣಗ ಹೆಚ್ಚ್ಯಾಳ
ಸಣ್ಣಗ ನುಣ್ಣಗ ಹೆಚ್ಚಾಳಪ್ಪ ಚಿನ್ನದ ಚಿಟಿಗೆ ತುಂಬ್ಯಾಳ
ಚಿನ್ನದ ಚಿಟಿಗೆ ತುಂಬ್ಯಾಳಪ್ಪ ಒಲಿಯ ಮೇಲೆ ಒಯ್ದಿಟ್ಟಾಳ
ಒಲಿಯ ಮೇಲೆ ಒಯ್ದಿಟ್ಟಾಳಪ್ಪ ಮೂರು ಗಂಧದ ಸೆಕ್ಕೇಳು
ಮಗನ ಪಲ್ಲೇವು ಆದಿತಪ್ಪ ಗುರುಗಳ ನೀರ ಕಾದಾವು
ಈಗ ನೋಡು ನನ್ನ ಚೆಲ್ಲಳ್ಳವ್ವಾನು ಅಯ್ಯನ ಕರೆಯುತಲೋದಾಳು
ಮುಂದೆ ಮುಂದೆ ಚೆಲ್ಲಳ್ಳವ್ವನಪ್ಪ ಹಿಂದೆ ಹಿಂದೆ ಶಿವರಾಯನು
ಬಚ್ಚಲಿಗೆ ನೀರ‍್ಹಿಡಿದಾಳಪ್ಪ ಅಯ್ಯನ ಮೈಯ ತೊಳಿದಾಳು
ಅಯ್ಯನ ಮೈಯ ತೊಳಿದಾಳಪ್ಪ ಊಟಕ ನೀಡಿ ಕರದಾಳು
ಆಗ ನೋಡು ನನ್ನ ಜಂಗಮರಯ್ಯ ಮಗನ ಕರಯಬೇಕಂದಾನ
ಇದ್ದ ಒಬ್ಬ ಮಗನ ಕೊಲ್ಲಿನೊ ಗುರುವೆ ಇನ್ನೆಲ್ಲಿ ಮಗನ ಕರೆಯಲಿ
ಓದೋ ಸಾಲಿಗೆ ಹೋಗವ್ವ ಮಗಳೆ ನಿನ್ನಯ ಮಗನ ಕರಿಯವ್ವ
ಆಗ ನೋಡು ಚೆಲ್ಲಳ್ಳವ್ವನಪ್ಪ ಓದೋ ಸಾಲಿಗೆ ಬಂದಾಳು
ಓದೊ ಸಾಲಿಗೆ ಬಂದಾಳಪ್ಪ ಮಗನ ಕರೆಯುತಲೈದಾಳು
ಮಗನ ಕರೆಯುತಲೈದಾಳಪ್ಪ ಬಂದೀನ ತಾಯೆಂದು ಬಂದಾನು
ಮುಂದೆ ಮುಂದೆ ಚೆಲ್ಲಳ್ಳವ್ವನಪ್ಪ ಹಿಂದಿಂದೆ ಮಗ ಬಂದಾನ
ಹಿಂದಿಂದೆ ಮಗ ಬಂದಾನಪ್ಪ ಇಬ್ಬರು ಕಲೆತು ಉಂಡಾರು
ಇಬ್ಬರು ಕೈಬೆರಸುಂಡಾರಪ್ಪ ಏನೆಂದ್ಹರಕಿ ಕೊಟ್ಟಾರು
ಹಾಗಲ ಬಳ್ಳ್ಯಾಗ್ಹಬ್ಬಲಿ ಈ ಮನಿ ಕುಂಬಳದ ಕುಡಿ ಸಾಗಲೊ
ಗಂಗವ್ವ ಗೌರವ್ವ ಹುಟ್ಟಾಲಪ್ಪ ರಾಮಣ್ಣ ಲಕ್ಷ್ಮಣ ಹುಟ್ಟಾಲೊ
ಇಲ್ಲಿಗೆ ಇದು ಒಂದು ಸಂದೇಳು ಗುರುವೆ ಹಾಡಿದಾರು ಪದ ಮುಂದೇಳು

 

ಚೆಂಡಿನ ಜಗಳ

ಮಾಳಣ್ಣ ಗುರಿಯ ಹೂಡ್ಯಾನಪ್ಪ ಬೀರಣ್ಣ ಚೆಂಡ ಒಗದಾನ
ಬೀರಣ್ಣ ಚೆಂಡ ಒಗದಾನಪ್ಪ ಚೆಂಡಯಾವಲ್ಲಿಗೋದೀತ
ಚೆಂಡ ಯಾವಲ್ಲಿಗೋದೀತಪ್ಪ ಕೆಮ್ಮಣ್ಣಗುದಿನಾಗ ಬಿದ್ದೀತು
ಕೆಮ್ಮಣ್ಣಗುದಿನಾಗ ಬಿದ್ದ ಚೆಂಡು ತಾ ಜಂಗುಮರಣ್ಣ ಕಂಡಾನ
ಜಂಗಮರಣ್ಣ ಕಂಡಾನಪ್ಪ ಚೆಂಡ ಬಕ್ಕಣಕಾಕ್ಯಾನ
ಚೆಂಡ ಬಕ್ಕಣಕಾಕ್ಯಾನಪ್ಪ ನೀರ ತುಂಬಿಕೊಂಡು ಬಂದಾನ
ನೀರ ತುಂಬಿಕೊಂಡು ಬಂದಾನ ಜಂಗಮ ಬೀರಣ್ಣ ಚಂಡ ಕೇಳ್ಯಾನ
ಬೀರಣ್ಣ ಚೆಂಡ ಕೇಳ್ಯಾನಪ್ಪ ಮುತ್ತಿನ ಚೆಂಡು ಉಂಟೇನೊ
ಬಡ ಬಡ ಮನಿಗೆ ಬಂದನ ಜಂಗಮ ಮಡದಿಯ ಕರೆದು ಹೇಳ್ಯಾನ
ಮಡದಿನಾದರು ಕರದಾನಪ್ಪ ಜಗಲಿನಾದರು ತೊಳಿಯೆಂದ
ಜಗಲಿನಾದರ ತೊಳಿಯಂದಾನೊ ನೆಲಗಳ ಸಾರಿಸಬೇಕಂದನೊ
ಮುತ್ತಿನ ಚೆಂಡು ಜಗಲಿ ಮ್ಯಾಲಿಟ್ಟು ನಮಿಸುತ ಪೂಜಿ ಮಾಡ್ಯಾರೊ
ಪೂಜಿಪುಕ್ಕವ ಮಾಡ್ಯಾರಯ್ಯ ಒಂದಿನ ಅಂಬೋದು ಓದೀತು
ಒಂದಿನ ಅಂಬೋದು ಓದೀತಪ್ಪ ಎರಡು ದಿನಗಳು ಹೋದಾವು
ಎರಡು ದಿನಗಳು ಹೋದಾವಪ್ಪ ಮೂರನೆ ದಿನಗಳು ಬಂದಾವು
ಸಣ್ಣ ಮನಿ ತುಂಬ ಸಾವಿರದಿನಗಳು ಇನ್ನೂರ್ ಮುನ್ನೂರ್ ಕರುಗಳೊ
ಸಣ್ಣ ಮನಿಯಾಗ ಸಾವಿರ ಎಮ್ಮಿ ನೆತ್ತರದ್ಹಾಲ ಕರೆದಾವೊ
ನೆತ್ತಿರ ಹಾಲು ಕರೆದಾವಪ್ಪ ಕರುಗಳ ಹೊಟ್ಟೆ ನೋವೇಳೊ
ಮನಿಯಲಿ ಹೂಡುವ ಎಂಟೆತ್ತಪ್ಪ ಬಂಟರೆಂಬೋರು ಮಕ್ಕಳೊ
ಬಂಟರೆಂಬೋರು ಮಕ್ಕಳ ಕಣ್ಣು ಇಳಿಗಣ್ಣಿಗೆ ಬಂದಾವು
ಇಳಿಗಣ್ಣಿಗೆ ಬಿದ್ದಾವಪ್ಪ ಎಂಟು ಎತ್ತು ಕುಂಟು ಬಿದ್ದಾವು
ಎಂಟೆತ್ತು ಕುಂಟು ಬಿದ್ದಾವು ಜಂಗನ ಇದು ಏನು ಗಾಚಾರಂದಾನೊ
ಇದು ಏನು ಗಾಚಾರಂದಾನೊ ಪ್ರಶ್ನಿ ಕೇಳುತಾನೋದಾನು
ಪ್ರಶ್ನಿ ಕೇಳುತಾಲೋದಾನಪ್ಪ ಮುತ್ತಿನ ಚೆಂಡಿನ ಕಾಟಾವು
ಮುತ್ತಿನ ಚೆಂಡಿನ ಕಾಟವಾದರೆ, ಇದನು ಹ್ಯಾಂಗೆ ಒಪ್ಪಿಸಲೊ
ಇದ ಒಂದಕ ಒಪ್ಪಿಗೆ ಇಲ್ಲ, ಇನ್ನೂರು ಮುನ್ನೂರು ಕೈಪಂಜ
ಇನ್ನೂರು ಮುನ್ನೂರು ಕೈಪಂಜಿಡಕೊಂಡಪ್ಪ ಮುತ್ತಿನ ಸತ್ತಿಗೆ ನೆಳಲಲ್ಲಿ
ಮುತ್ತಿನ ಸತ್ತಿಗೆ ನೆಳಲಲ್ಲಿ ಹೋಗಬೇಕು ಬೀರಣ್ಣಗ್ಹರಕಿ ಮುಟ್ಟಬೇಕು
ಬೀರಣ್ಣಗ್ಹರಕಿ ಮುಟ್ಟ್ಯಾವಪ್ಪ ಎತ್ತುಗಳೆದ್ದು ನಿಂತಾವು
ಎತ್ತುಗಳೆದ್ದು ನಿಂತಾವಪ್ಪ ಮಕ್ಕಳು ಬಂಟsರು ಎದ್ದಾರು
ನೆತ್ತುರುಗರದ ಎಮ್ಮಿ ಆಗಲೆ ಹಾಲನಾದರು ಕರೆದಾವು
ಹಾಲನಾದರು ಕರೆದಾವಪ್ಪ ಕರಗಳಗಟ್ಟಿ ಸಗಣೇಳು
ಇಲ್ಲಿಗೆ ಇದು ಒಂದು ಸಂದೇಳು ಗುರುವೆ ಹಾಡಿದಾರು ಪದ ಮುಂದೇಳು

 

ಆರೋಹಣದ ಹಾಡು

ಹುಲುಲುಗ್ಯಾ ಹುಲುಲುಗ್ಯಲೇ ತಮ್ಮ ಹುಲುಲುಗ್ಯಾ
ಹೇಳ್ತೀನಿ ಕೇಳಲೇ ತಮ್ಮ ಹುಲುಲುಗ್ಯಾ
ಶಿರಹಟ್ಟಿ ಜಾತ್ರಿಗೊಮ್ಮೆ ಹೋರಿ ತರಾಕ  ಹೊಂಟ್ನೆಲೆ ತಮ್ಮ ಹುಲುಲುಗ್ಯಾ
ಹೋರಿ ನೋಡಿ ಖರೀದಿಗೆ ಕೇಳಿದ್ನೆಲೆ ತಮ್ಮ ಹುಲುಲುಗ್ಯಾ
ಕರದು ಸಾವಿರ ಹೇಳಿದ್ರಲೆ ತಮ್ಮ ಹುಲುಲುಗ್ಯಾ
ಸಾವಿರ ಹೇಳದ್ರೊಳಗ ಮೈಮುಟ್ಟ ಕೈಮುಟ್ಟಿ ಎಬ್ಬಿಸಿದ್ನೆಲೆ ತಮ್ಮ ಹುಲುಲುಗ್ಯಾ

 

ನೀತಿ ಇಲ್ಲದ ಮಾತಲ್ಲ

ಪರಮನಂದನ ದೊರಿಯ ಕುವರನ ಶರಣರ ಪಾದಕ ನಮೋ ನಮೋ
ಶರಣರ ಪಾದಕ ನಮೋ ನಮೋ ನಮ್ ಗುರುಹಿರಿಯರಿಗೆ ನಮೋ ನಮೋ
ಗುರು ಹಿರಿಯರಿಗೆ ನಮೋ ನಮೋ ನಮ್ ಕುಂತಿರ ದೈವಕ ನಮೋ ನಮೋ
ಕಡಗವಿಲ್ಲದ ಕೈಯಲ್ಲಪ್ಪ ಕಡಿವಾಣಿಲ್ಲದ ತೇಜಲ್ಲ |
ಕಂಟನಿಲ್ಲದೆ ಕೊಡನಲ್ಲಪ್ಪ ನೆಂಟರಿಲ್ಲದೆ ಸೂಳೆಲ್ಲ |
ನೆಂಟರಿಲ್ಲದ ಸೂಳೆಲ್ಲಪ್ಪ | ಬಂಟನಿಲ್ಲದ ಬಂಡೆಲ್ಲ
ಇದ್ದಲಿಲ್ಲನ ಕಬ್ಬಿಣ್ಯಾತಕ ವಿದ್ಯೆ ಇಲ್ಲದೆ ಬಡಿಗ್ಯಾಕ
ನೀತಿ ಇಲ್ಲದ ಮಾತಲ್ಲಪ್ಪ ಜೀವಕವಿಲ್ಲದೊಂದಾಳ್ಯಾಕ
ಜೀಕವಿಲ್ಲದೊಂದಾಳು ಕಂಡರ ನೂಕವಾರಿ ಯಾಕಯ್ಯ
ಗೌಡರು ಒಳ್ಳೇರೆಂದೇ ರೈತರು ಗೌಡರ ನಂಬದು ಸಲ್ಲಾವೆ
ರೈತರು ಒಳ್ಳೇರೆಂದೇ ಗೌಡರು ರೈತರ ನಂಬದು ಸಲ್ಲಾವೆ
ಬಡವರ ನೆರೆಯಲ್ಲಿ ಬ್ರಾಹ್ಮಣರಿದ್ದರ ಒಂದಕ ನೂರ್ಮಡಿ ಕೆಡಿಸುವರು
ಸತಿಯಳು ಒಳ್ಳೇಳ್ಳೇಂದೇ ಪುರುಷ ಸರಿಸಿ ಕುಂದ್ರದು ಸಲ್ಲಾವೆ
ಪುರುಷರು ಒಳ್ಳೇರೆಂದೇ ಮಡದಿ ಮಂಚ ಏರಾದು ಸಲ್ಲಾವೆ
ತುಪ್ಪದಂಗ ಇದ್ದರ ತಮ್ಮ ತುರುಕರ ನಂಬದು ಸಲ್ಲಾವೆ
ಹಾಲಿನಂಗ ಇದ್ದರ ತಮ್ಮ ಹಾರರ‍್ನ ನಂಬದು ಸಲ್ಲಾವೆ
ಬೆಲ್ಲದಂಗ ಇದ್ದರು ತಮ್ಮ ಬ್ಯಾಡರ ನಂಬದು ಸಲ್ಲಾವೆ
ಬೇವಿನ ಮರಕೆ ಬೆಲ್ಲದ ಸೋಪಾನ ಜೇನು ತುಪ್ಪದಲಿ ಒಯ್ಯನೀರ
ಜೇನು ತುಪದಲಿ ಒಯ್ಯನೀರ ಒಯ್ದರೆ ಬೇವು ತನ್ನ ಇಸವ ಬಿಡದೇಳು
ಶಿವನು ಕುಂದ್ರ ಮುತ್ತಿನ ಸದರಿಗೆ ಮೂರು ಸುತ್ತನಾವು ತಿರುಗೇವು
ದೇವಾರು ಬಂದಾವ ಬನ್ನೀರೇ

 

ಕಲಿಯುಗ

ದಗಲ್‌ಬಾಜಿ ಬುದ್ಧಿಯಿಂದ ಕೆಡತಾರೀ ಜನ | ಮಿಗಿಲ ಉತ್ತಮರೆನಿಸಿಕಗೊಂತಾರಿ
ಹೆಚ್ಚು ಹೆಚ್ಚು ಅನ್ನುತಲಿ ಹೆಣಗತಾರೊ | ತಮ್ಮ ಇಚ್ಛೆ ಬಂದವರಿಗೆ ಸೈ ಅಂತಾರ್ರಿ
ತುತ್ತ ಕೂಳಿಗೆ ಸುತ್ತ ಬಾಯಿ ಬಿಡತಾರೊ | ಬಹಳ ಪುಚ್ಚಿವಂತರಾಗಿ ನ್ಯಾಯ ಹೇಳ್ತಾರ್ರಿ
ನ್ಯಾಯವಾದ ಅನ್ಯಾಯ ಮಾಡ್ತಾರೊ | ತಮ್ಮ ಬಾಯಿ ಮಾತಿನಿಂದ ಕೆಡಿವಾಡ್ತಾರಿ
ಸಾಹಿತ ಸಂಪತ್ತುಗಳಿಗಂತಾರೊ | ಕೊಟ್ಟ ಬಾಯಿ ಬಡದು ಬಡವನೆನಿಸಿ ಕೊಂತಾರಿ
ಯಾವ ಧ್ಯಾಸನೆಂದು ಕಾಲ ಕಳಿತಾರೋ | ಒಂದು ಕಾಸ ತಂದು ಹೊಟ್ಟಿ ಹರಿತಾರ್ರಿ
ದ್ಯಾಸತಪ್ಪಿ ಸಜ್ಜನರಿನ್ನ ದೂಡುತಾರೊ | ಕೋಟಿ ರಾಯಸುಳ್ಳಿ ಒಳಗ ಬಿದ್ದು ಮುಳುಗುತಾರ್ರಿ
ಪಂಗ್ತ್ಯಾಂಗ ಪರಸಂಗ್ರಿ ಮಾಡುತಾರೊ | ಇಲ್ಲದಂಥ ಮತು ಹುಟ್ಟಿಸಿಗೊಂತಾರಿ
ಕುತುಹರನ ರೂಪ ಕಂಡು ಜರುಗುತಾರೊ | ತಮ ಸಂತಾನ ಸವರಿಕೊಂಡು ಹೋಗುತಾರ್ರಿ
ಬಿದ್ದಮಾತು ತಳ್ಳಿ ಹಿಡಿದು ಮಾಡ್ತಾರೊ ಅವರ ಬುದ್ಧಿಯೊಳಗ ಪರಕಾಗತಾರ್ರಿ
ಸಿದ್ಧಮೂರ್ತಿ ನನಗ ನಿನಗಂತಾರೊ | ಗವಿಸಿದ್ಧನ ಕಂಡು ಅವರು ಜರುಗುತಾರ್ರಿ

 

ಬೆಡಗಿನ ಹಾಡು

ಬೆಡಗಿನ ಹಾಡ ಹಾಡೊಂದ ನನ್ನ ಜಡದೇವಿ ಕಳ್ಳಿ ಮೆಳಿಯಣ್ಣ
ಮೂಡಲದಿಂದ ಬಂದಾವೊ ಹೆಣ್ಣ ನೋವರ ಮಣಕಾವೊ
ಹೆಡಿಗಿಗಡತರ ಕೆಚ್ಚಲ ತೆಕ್ಕಿಗಡತರ ಮಲಿಯೇನು
ಹಿಂಡಿದsರ ಕೊಡ ಹಾಲೇನು | ಕಂಡ ಕಡದ ಮಾರೂದು
ಕಂಡ ಕಡದು ಮಾರೋದು ರಕ್ತ ಹಿರೋದು
ಆ ರಕ್ತ ನೋಡಲ್ಲಪ್ಪ ದೇವಸಭೆಯಲ್ಲಿರುವುದೋ
ಬಾಲಲ್ಲಿ ನೀರು ಕುಡಿಯುವುದು ಬಾಯಲ್ಲಿ ಹವಳ ಸುರಿಸುವುದು
ಒಂದೊಂದ ಮುತ್ತು ನುಂಗುವುದು ಒಂದೊಂದು ಮುತ್ತು ಉಗುಳುವುದು  || ಬೆಡಗಿನ ||
ಹುಲ್ಲು ಹಾಕಿದರ ಹಿಂಡುವುದಿಲ್ಲ ಕಲ್ಲು ಹಾಕಿದರ ಹಿಂಡುವುದು
ಕಲ್ಲು ಹಾಕಿದರ ನೋಡಪ್ಪ ಬೋರಿಸಿ | ನೂರೆಯ ಹಾಲು ಕರೆಯುವುದು
ಮಲ್ಲಾಡಲಿಂದ ಬಂದಾವು ಮೂರು ಕಾಲಿನ ಮಣಕಾವು
ಕಟ್ಟಿದರ ಬಡ್ಡ (ಬರಡ) ಬೀಳವದು | ಕಟ್ಟದಿದ್ರ ಹೈನಾಗುವುದು
ನೆಡುವುದು ಹನ್ನೆರಡು ಕಾಲೇನು | ಹಿಡಿವುದು ಶಸ್ತ್ರದಾರೇನು              || ಬೆಡಗಿನ ||

ನೆತ್ತಿಲೆ ಮುಕ್ಕ ಹಾಕುದು | ತುತ್ತಿಗೊಮ್ಮೆ ನೀರು ಕುಡಿಯುವುದು
ಹೊಟ್ಯಾಗ ಹಲ್ಲು ಇರುವುದು ಕಿವಿಯಾಗ ನಾಲಿಗೆ ಇರುವುದು ||
ನೀರಾಗ ಹುಟ್ಟುವದು ನೀರಾಗ ಬೆಳೆವುದು ನೀರ ಸೋಕಿದರ ಕಾಯಾಗುವುದು
ಚಪ್ಪರಕ ಚಲ್ಲೊರೆಯುವುದು | ಬಸವಣ್ಣ ಬೆನ್ನಿಲೆ ಹೆರುವದೊ
ಬಸವಣ್ಣ ಬೆನ್ನಿಲೆ ಹೇರುವದೊ | ಬಾಜಾರಕ ಇಟ್ಟು ಮಾರುವದೋ ||

 

ಒಗಟುಗಳು

ಬುಡವ ನಡುವೆ ಹುಳಿ ಕೊನೆಯಲ್ಲಿ ಕೆಂಪೆಸಲಾವ
ಕೊನೆಯಲ್ಲಿ ಕೆಂಪೆಸಲಿನ ಬಾಲಿ ಮದ್ಯಣಕ ಮದುವ್ಯಾದಾಳ
ಮದ್ಯಣಕ ಮದುವ್ಯಾದಂಥ ಬಾಲಿ ಚೆಂಜೀಕ ಮೈ ನೆರತಾಳ
ಚೆಂಜೀಕ ಮೈ ನೆರತಂಥ ಬಾಲಿ ಸರ್ವತ್ತಿಗೆ ಬಸರಾಗ್ಯಾಳ
ಸರ್ವತ್ತಿಗೆ ಬಸರಾದಂಥ ಬಾಲಿ ಮುಂಜಾನಿಗೆ ಮಗನ್ಹಡದಾಳ
ಮುಂಜಾನಿಗೆ ಮುಗನ್ಹಡದಂಥ ಬಾಲಿ ಬಾಜ ಬಾಜರನ ತಿರುಗ್ಯಾಳ
ಬಾಜ ಬಾಜರನ ತಿರುಗ್ಯಾಳ ಬಾಲಿ ಅಂಗಡಿ ಮಳಿಗ್ಯಾಗ ಕುಂತಾಳ
ಅಂಗಡಿ ಮಳಿಗ್ಯಾಗ ಕುಂತಿರ ಬಾಲಿ ಕಂಡಾರ ಕಣ್ಹಾಕ್ಯಾರ
ಕಂಡಾರ ಕಣ್ಣಾ ಕ್ಯಾರ ಬಾಲಿ ಕೊಂಡರಿಗೆ ಮೈದುಂಬ್ಯಾಳ
ಬಲ್ಲಂಥ ಜಾಣನು ಬಾಯ್ವೊಳಗೈತೊಂದು ಹರಿಯ ಮೂಲಕ ತಿಳಿಯದ
ಹರಿಯ ಮೂಲಕ ತಿಳಿಯದಿದ್ದರ ಆರು ತಿಂಗಳೊಂದು ಕುರಿಕುರಿ
ಮರದಾಗ ಹುಟ್ಟುವುದು ಮಾತಿನ ಗಿಣಿ ಕಡೆಗೆಲ್ಲು ಬಾಯುಂಟು
ಎರಡು ಕಡಿಗೆಲ್ಲು ಬಾಯುಂಟು ಗಿಣಿಗೆ ಹೊಟ್ಟ್ಯಾಗ ಕಳ್ಳಿಲ್ಲಾವೆ
ಹೊಟ್ಟ್ಯಾಗ ಕಳ್ಳಿಲ್ಲಾದ ಗಿಳಿಯ ಬಾಯಾಗ ನಾಲಿಗಿಲ್ಲಾವ
ಬಾಯಾಗ ನಾಲಿಗಿಲ್ಲದ ಗಿಳಿಯ ಹೋಲು ಗೂಗಣ್ಣ ಕೂಗ್ಯಾವ
ಹಳ್ಳಿ ಪಿಳ್ಳಿಯ ಕಂಡಲ್ಲಿ ಗಿಳಿಯೆ ಪಿಲ್ಲಾಳಗೂಗನು ಕೂಗ್ಯಾವೆ
ಎರಿಯ ಹೊಲ್ದಾಗ ಬೆಳಿವುದಪ್ಪ ಅದು ಒಂದು ಕಾರ್ಯಕ ಬರುವುದು
ಗುಡದಾಗ ಹುಟ್ಟುವದು ಗುಡದಾಗ ಬೆಳಿವುದು ಅದು ಒಂದು ಕಾರ್ಯಕ ಬರುವುದು
ಆಡಿವ್ಯಾಗ ಹುಟ್ಟುವುದು ಆಡಿವ್ಯಾಗ ಬೆಳಿವುದು ಅದು ಒಂದು ಕಾರ್ಯಕ ಬರುವುದು
ಎರಿಯ ಹೊಲ್ದಾಗ ಬೆಳೆವುದಂದರ ನೂಲಿನಗ್ಗವನಲ್ಲೇನ
ಗುಡದಾಗ ಹುಟ್ಟುವದು ಗುಡದಾಗ ಬೆಳೆವುದು ಬಿದರ ಬಂಕ ಅಲ್ಲೇನು
ಆಡಿವ್ಯಾಗ ಹುಟ್ಟುವದು ಆಡಿವ್ಯಾಗ ಬೆಳೆವುದು ಆಡಿನ ಚರ್ಮ ಅಲ್ಲೇನೊ

* * *

 

ಭೂತಾಳ ಸಿದ್ಧದೇವರು

ದೇವಗ ಶರಣೆನ್ನಿ ದೇವರಿಗೆ ಶರಣೆನ್ನಿರೋ
ಗುರುವಿಗೆ ಶರಣೆನ್ನಿ ಸಿದ್ಧಾಗ ಶರಣೆನ್ನಿರೋ              || ಪಲ್ಲ ||

ಸಲ್ಲಿ ಹೊತ್ತಿನ ನನ ಗುರುವಿನ ಕರದರ ಮಲ್ಲೀಗಿ ನನಿಬಂದ ಇಳದಾವ
ಮಲ್ಲಿಗೆ ಹೇಳ ಮಂಟಪದೊಳಗ ಗೊಲ್ಲಾಳ ಶಿವ ಬಂದ ಇಳದಾನ
ಗೊಲ್ಲಾಳ ಶಿವನೆ ನೀನೇ ಬಾ ನನ್ನ ಸಲ್ಲಗುದರಿಯ ಸರದಾರನೋ
ಸಲ್ಲಗುದರಿ ಕೈಯಾಗ ಹಿಡಕೊಂಡ ಸೊಗಸಾಗಿ ಮಾರಿ ತಿರವ್ಯಾಡಿದೋ  || ೧ ||

ಗೊಲ್ಲಗುದರಿ ಬಲಗೈಯ ಮ್ಯಾಲ ಬಲ್ಲಾಂಗ ತಿರವ್ಯಾಡಿದೋ
ಕೆಂದಗುದರಿ ಬಂದ ಗದ್ದದ ಮ್ಯಾಲ ಇಂಡಿಮಾಡಿ ಇಡ್ಯಾಡಿದೋ
ಇಂಡಿಮಾಡಿ ಈಡ್ಯಾಡುತ ಬಾ ನನ್ನ ದುಂಡಮಲ್ಲಿಗಿ ಧಡಿಗಳೋ
ದುಂಡಮಲ್ಲಿಗಿ ಧಡಿಗೊಳ ನಿನಗ ಸಣ್ಣಮಲ್ಲಿಗಿ ಸರಗೊಳೋ                || ೨ ||

ಸಣ್ಣ ಮಲ್ಲಿಗಿ ಸರಗೋಳ ನಿನಗ ಮಲ್ಲಿಗಿ ಹೂವಿನ ಮುಂಡಾಸೋ
ಮಲ್ಲಿಗಿ ಹೂವಿನ ಮುಂಡಾಸ ನಿನಗ ಶ್ಯಾವಂತ್ರಿ ಹೂವಿನ ಶೆಲ್ಲೆನೋ
ಜಲ್ಲಿ ಜಲ್ಲಿಲೇ ಹೂವ ಬಂದರ ಜಲ್ಯಾಡಿ ಮುಡಿದೀ ನಂದಾನೋ
ಬಂಡಿ ಬಂಡಿಲೆ ಹೂವ ಬಂದರ ಮಂಡಿಗಿ ಸಾಲ್ಯಾವ ಅಂದಾನೋ        || ೩ ||

ಅವರಿ ಪತ್ತರಿ ಅಡವ ಹಚ್ಚಿಕೊಂಡು ಹೋಳ ಮೈಯಲೇ ಹೇಳ್ಯಾನೋ
ಏಳಪ್ಪ ಅಂತ ಎಬ್ಬಸತಾನೋ ಕೆಂಗರಗಣ್ಣಗಳ ತೆರದಾನೋ
ಕೆಂಗರಣ್ಣಗೊಳು ಗುಂಗರ ಮೀಸಿ ನುಂಗುವಂಥಾ ಭಾಳ ಅವತಾರೋ
ನುಂಗುವಂಥಾ ಭಾಳ ಅವತಾರನಂದರ ಬೈಲ ಭೂತಾಳ ಸಿದ್ಧಾನೋ    || ೪ ||

ಬೈಲ ಭೂತಾಳ ಸಿದ್ಧಾ ಬಾ ನನ್ನ ಬಡವರ ಬೇಡಿಕೆ ಬಂದಾವೋ
ಬಡವರ ಬೇಡಿಕೆ ಬಂದಾವೇನ ಬಲ್ಲವರ ಬೇಡಿಕೆ ಬಂದಾವೋ
ನಮ್ಮ ದೇವರ ಬರುವ ಹಾದಿಲೆ ಕಗ್ಗಲ ಕಡಿ ಆದಾವೋ
ಕಗ್ಗಲ ಕಡಿ ಆದಾವ ಭೂತಾಳಿ ಹಿಡಗಲ್ಲ ಹಿಟ್ಟ ಆದಾವೋ                  || ೫ ||

ಹಿಂಡ ದೇವಿಯ ಗಂಡನಂದರ ಗಂಡ ದೇವಿಯ ಮಿಂಡನೋ
ಗಂಡ ದೇವಿಯ ಮಿಂಡನಂದರ ಪುಂಡ ಭೂತಾಳ ಸಿದ್ಧಾನೋ
ಪುಂಡ ಭೂತಾಳ ಸಿದ್ಧಾಗ ನಡದರ ಗಂಡ ಶಕ್ತಿ ಕೊಟ್ಟಾನೋ
ಗಂಡಶಕ್ತಿ ಕೊಡುವ ಸಿದ್ಧಾನ ಚಂದಾಗಿ ನಾವ ಹಾಡೇವೋ                || ೬ ||

ಹಾಲ ಹಾಲಿಗೋ ಕುಕುಮ ಕುಕುಮಕೋ ತರಿಸೇವೋs
ಕುಕುಮ ತರಿಸಿ ಭಂಡಾರ ನಾವು ಸಿದ್ಧಾಗ ಹಾರಿಸೇವೋs ||
ಸಂತೋಷದಿಂದಲೆ ನವಮಾಸ ತುಂಬುತ ನಡದಿದಾವೋ
ಒಂಬತ್ತ ತಿಂಗಳ ರಾತ್ರಿ ಸಮಯದಲಿ ಚಂದ್ರನ ಕಂಡಿದಾಳೋ  || ೭ ||

ಒಂಬತ್ತ ತಿಂಗಳ ರಾತ್ರಿ ಸಮಯದಲಿ ಚಂದ್ರನ ಕಂಡಿದಾಳೋ

ಮಲ್ಲಿಗೆ ಸಾವಂತಿಗೆ ಮನಸೋಭಿಸುವ ಹೂಗಳ ಕಂಡಿದಾಳೋ  || ೮ ||
ಮಲ್ಲಿಗೆ ಸಾವಂತಿಗೆ ಮನಸೋಭಿಸುವ ಹೂಗಳ ಕಂಡಿದಾಳೋ
ಭವಾನಿ  ಸುಗ್ಗಾದೇವಿಯ ಹೊಟ್ಟೆಲೆ ಅದ್ಭುತ ಮಗ ಹುಟ್ಟಿದಾನೋ        || ೯ ||

ಭವಾನಿ ಸುಗ್ಗಾದೇವಿಯ ಹೊಟ್ಟೆಲೆ ಅದ್ಭುತ ಮಗ ಹುಟ್ಟಿದಾನೋ
ಕುರುಬರ ಗುರುವೆನಿಸಿದ ಸಿದ್ಧರಾಮಯ್ಯ ಹುಟ್ಟಿ ಬಂದಿದಾನೋ || ೧೦ ||