ಹರಕಿ ಹಾಡು ಅಥವಾ ಕರಿ ಹಾಡು

ಶುಕ್ರವಾರ ಸುದ್ದೋ ನಿನ ಮನಿs
ಶನಿವಾರದ ರಂಗೇನೋss
ಶನಿವಾರದ ರಂಗೇನೋ ನಿನ್ನ ಮನಿ
ಆಯಿತಾರದ ಹಬ್ಬೇನೋss
ಆಯಿತಾರದ ಹಬ್ಬೇನೋ ನಿನ್ನ ಮನಿ
ಭಾವುಳ್ಳ ಭಗತರ ನೋಡಪ್ಪs                 || ೧ ||

ಭಾವುಳ್ಳ ಭಗತರ ನೋಡಪ್ಪs
ಹಬ್ಬದ ಕಾರ್ಯ ಹಿಡದಾನೋs
ಭಾವುಳ್ಳ ಭಗತರ ಮನಿ ಮುಂದ
ಸಾಕರಿ ಮಾವಿನ ಮರವೇನೋs
ಸಾಕರಿ ಮಾವಿನ ಮರಹುಟ್ಯೋs
ಮಾವಿನ ಮರಕ ನೋಡಪ್ಪ                   || ೨ ||

ಸುತ್ತ ದಿಕ್ಕಿನ ಹಕ್ಕಿ ಕೂಡ್ಯಾವೋs
ಸುತ್ತ ದಿಕ್ಕಿನ ಹಕ್ಕಿ ಕೂಡ್ಯಾಗಿ
ಗಕ್ಕಲ ಗಿರದ ಮೇದಾವೋs
ಪಕ್ಕನಿಲ್ಲದ ಪಾರಿವಾಳೋ
ಲೆಕ್ಕನಿಲ್ಲದ ಗಿಣಿ ಹಿಂಡೋs
ಲೆಕ್ಕನಿಲ್ಲದ ಗಿಣಿ ಹಿಂಡ ಕೂಡಿ
ಭಗತಗ ಹರಕಿ ಕೊಟ್ಟಾವೋs                 || ೩ ||

ದೇವರುಂಡ ಮನಿಯಾಗ
ಹೊನ್ನದ ರಾಶಿ ಹೊಳಿಯಲ್ಯೋs
ಪೂಜೇರಿ ಉಂಡ ಮನಿಯಾಗ
ತುಪ್ಪದ ಕಾವಲಿ ಹರಿಯಲ್ಲೋs
ಆಳಮಕ್ಕಳುಂಡ ಮನಿಯಾಗ
ಹಾಲ ಕಾವಲಿ ಹರಿಯಲ್ಯೋs                 || ೪ ||

ರಾಮಣ್ಣ-ಲಕ್ಷ್ಮಣನನ್ನುವ
ಜೋಡ್ಯಾಡ ಗಂಡ ಹುಟ್ಟಲ್ಯೋs
ಗಂಗವ್ವ ಗೌರವ್ವನೆನ್ನುವ
ಜೋಡ್ಯಾಡ ಹೆಣ್ಣ ಹುಟ್ಟಲೋs
ಯಂಕವ್ವ-ಮಾಯವ್ವನೆನ್ನುವ
ಜೋಡ್ಯಾಡ ಹಗಿಯ ಹಾಕಲ್ಯೋs             || ೫ ||

ಅಂಗೈಯಷ್ಟು ಹೊಲವ ಮಾಡಿ
ಬಂಗಾರ ಬಿತ್ತಿ ಬೆಳೆಯಲ್ಯೋs
ಆವ ಜನ್ನಿಗಿ ಆಗಲಿ ನಿನ್ನಲಿ
ಎತ್ತ ಕಂಟಲಿಯಾಗಲೀs
ಹಾಗಲ ಬಳ್ಯಾಗ ಹಬ್ಬಲೆಪ್ಪ
ಕುಂಬಳ ಬಳ್ಯಾಗಿ ಕುಡಿ ಸಾಗಲಿs             || ೬ ||

ಐದ ಮನಿಯು ಆಗಲೆಪ್ಪ
ಐದ ನೂರು ಮನಿಯ ಆಗಲಿs
ಹಿಂತಾ ಹಕ್ಕಿಯ ನೋಡಪ್ಪ
ಹಿಂಗ ಹರಕಿಯ ಕೊಟ್ಟಾನ
ಹಿಂತಾ ಭಗತರ ಮನಿಗೋಳೋs
ಗಲ್ಲಿಗಲ್ಲಿಗೆ ಬೆಳೆಯಲ್ಯೋs           || ೭ ||

ಹೊಡೆಪ್ಪ ಡೊಳ್ಳ ಹಿಡೆಪ್ಪ ಸತ್ತಿಗೆ
ನಡೆಪ್ಪ ಮುಂದಿನ ಊರಿಗೆ
ಮುಂದಿನೂರು ಭಗತನೋs
ನಿಮ್ಮ ದಾರಿಯ ನೋಡ್ಯಾನೋs
ನಿಮ್ಮ ದಾರಿಯ ನೋಡ್ಯಾನಪ್ಪ
ಭಗತಿಯ ಮಾರಗ ಹಿಡದಾನೋs            || ೮ ||

 

ಅಂಕಲಗಿ ಅಡವೀಸ್ವಾಮಿ

ಚಾಲ :

ಸ್ವಾಮಿ ನಮ್ಮಯ್ಯ ದೇವರ ಬಂದಾವ ಬನ್ನಿರೆ
ಗುರುವಾ ರೇವಣಸಿದ್ದಾಗ ಶರಣೆನ್ನಿರೋs     || ಪಲ್ಲ ||

ದೇವಿ ದೇವರೋ ನಮ್ಮಯ್ಯ
ಹಾಡಿಗೆ ಮೊದಲೋ ನಮ್ಮಯ್ಯ
ಹಾಡಿಗೆ ಮೊದಲೋ ನಮ್ಮಯ್ಯ
ಬಡ್ಡಿಗೆ ಮೊದಲೋ ನಮ್ಮಯ್ಯ
ಬಡ್ಡಿಗೆ ಮೊದಲೋ ನಮ್ಮಯ್ಯ
ದಿಮ್ಮಿಗೆ ಮೊದಲೋ ನಮ್ಮಯ್ಯ
ತಾಳಿಗಿ ಮೊದಲೋ ನಮ್ಮಯ್ಯ
ತಾಳ ಬಾರಿಸೊ ನನ್ನ ತಾಳಿನ ಜಾಣಾ
ಕೊಂಬ ಸೀಳಿದಂಗ ಆಗಲ್ಯೋs
ದಿಮ್ಮಿ ಬಾರಿಸೋ ನನ್ನ ದಿಮ್ಮಿನ ಜಾಣಾ
ಕೊಂಬ ಸೀಳಿದಂಗ ಆಗಲ್ಯೋs
ಕೊಳಲು ಊದೋ ನನ್ನ ಕೊಳಲಿನ ಭರಮ
ನವಿಲು ಕೂಗಿದಂಗ ಆಗಲ್ಯೋs

ಪದ : 

ಬಂಗಾರ ಹುಲ್ಲಾತ ಸಿಂಗಾರ ಕಲ್ಲಾತ
ಜಂಗಮ ಗುರು ನನ್ನ ಅಡಿವೆಪ್ಪನೋs         || ೧ ||

ಜಂಗಮ ಗುರು ನನ್ನ ಲಿಂಗಾಂಗಿ ಮಾತಾಡ
ಮಾತಿನ ಗಿಣಿ ಬಾ ಅಡಿವೆಪ್ಪನೋs  || ೨ ||

ಮಾತಿನ ಗಿಣಿ ಬಂದ ಮನದಾಗ ಮಾತಾಡ
ತಿಳಿವಳಿಕೆ ತಿಳದ್ದೇಳ ಆಡಿವೆಪ್ಪನೋs         || ೩ ||

ತಿಳಿವಳಿಕೆ ತಿಳದ್ಹೇಳ ಎಲ್ಲ ಬೆಳಕಿನಾಗ
ಜಡಿ ತಂದಿ ನನ್ನ ಗುರು ಅಡಿವೆಪ್ಪನೋs      || ೪ ||

ಜಡಿ ತಂದಿ ನನ್ನ ಗುರು ಲಿಂಗಾಂಗಿ ಮಾತಾಡ
ಮಾತಿನ ಗಿಣಿ ಬಾ ಅಡಿವೆಪ್ಪನೋs  || ೫ ||

ಮಾತಿನ ಗಿಣಿ ಬಂದ ಮನದಾಗ ಮಾತಾಡ
ತಿಳವಳಿಕೆ ತಿಳಿದ್ಹೇಳ ಅಡಿವೆಪ್ಪನೋs         || ೬ ||

ತಿಳಿವಳಿಕೆ ತಿಳಿದ್ಹೇಳ ಸರ್ವ ಬೆಳಕಿನಾಗ
ಜಡಿ ತಂದಿ ನನ್ನ ಗುರು ಆಡಿವೆಪ್ಪನೋs      || ೭ ||

ತಿಳಿವಳಿಕೆ ತಿಳಿದ್ಹೇಳ ನವೀನ ಮಾರ್ಗದಲಿ
ಅಯಿದ ಅಕ್ಷರ ಕೊಡು ಅಡಿವೆಪ್ಪನೋs        || ೮ ||

ಆಯಿದ ಅಕ್ಷರ ಕೊಡ ನಯಿನ ಮಾರ್ಗದಲಿ
ನಾಲಿಗೆ ಮ್ಯಾಲ ದೇವರ ಅಡಿವೆಪ್ಪನೋs     || ೯ ||

ನಾಲಿಗಿ ಮ್ಯಾಲ ನಲಿದಾಡುತ ಬಾಯಪ್ಪ
ಕೋಗಿಲೆಯ ಸ್ವರ ಕೊಡ ಅಡಿವೆಪ್ಪನೋs     || ೧೦ ||

ಕೋಗಿಲೆಯ ಸ್ವರ ಕೊಡ ಕೂಗಿ ಹಾಡತೀನಿ
ಸಾವಿರಾಳಿನಾಗ ಅಡಿವೆಪ್ಪನೋs    || ೧೧ ||

ಸಾವಿರಾಳಿನಾಗ ತಡಾ ಬ್ಯಾಡ ತಂದೆ
ಕಡೆ ನುಡಿ ಕೊಡ ತಂದೆ ಅಡಿವೆಪ್ಪನೋs      || ೧೨ ||

ಕಡೆ ನುಡಿ ಕೊಡತೇನ ಆಳ ಮಕ್ಕಳ ಕೂಡಿ
ಬಾರಪ್ಪ ಗುಡಿಗೆಂದ ಅಡಿವೆಪ್ಪನೋs          || ೧೩ ||

ಬಾರಪ್ಪ ಗುಡಿಗೆ ಎಡಾ ದಿಮ್ಮನಿಟ್ಟ
ಎಚ್ಚರಲಿ ಹಾಡೆಂದ ಅಡಿವೆಪ್ಪನೋs || ೧೪ ||

ಎಚ್ಚರಲೆ ಹಾಡೋ ಹುಚ್ಚ ಆಳಮನಗ
ಸುಳ್ಳ ಬೇಡನೆಂದ ಅಡಿವೆಪ್ಪನೋs  || ೧೫ ||

ಸುಳ್ಳ ಸರುಳಿ ಸುತ್ತಿ ಕೊರಳಿಗೆ ಚೆತ್ತಿಗಿ ಹಚ್ಚಿ
ಮಾಯದ ಮುರುಳೊಂದ ಅಡಿವೆಪ್ಪನೋs   || ೧೬ ||

ಮಾಯದ ಮುರುಳೊಂದ ಹಳ್ಳ ಹಳ್ಳ ದಾಟಿ
ಇಸಾ ಕಾರಿಸಿದಾನ ಅಡಿವೆಪ್ಪನೋs || ೧೭ ||

ಇಸಾ ಕಾರಿಸಿದಾನ ರಾಜ ಪೌಳ್ಯಾಗ
ಭಕ್ತರ ಬಂದಾರ ಅಡಿವೆಪ್ಪನೋs    || ೧೮ ||

ಭಕ್ತರ ಬಂದಾರ ಬಾಗಿಯ ಕೈಮುಗಿದ
ಬಾ ಭಕ್ತಿ ಮೂರ ಮುಕ್ತಿ ಅಡಿವೆಪ್ಪನೋs       || ೧೯ ||

ಬಾ ಭಕ್ತಿ ಮೂರ ಮುಕ್ತಿ ಮುತ್ತೈದೆರ ಉಡಿತುಂಬಿ
ಹಿಡಿಕಾಯಿ ಒಡಿಕಾಯಿ ಅಡಿವೆಪ್ಪನೋs       || ೨೦ ||

ಹಿಡಕಾಯಿ ಒಡಿಕಾಯಿ ಹಾರತಾವ ಗುಡಿಮ್ಯಾಲ
ಸೆಡಗರ ನಡದೈತೀ ಅಡಿವೆಪ್ಪನೋs          || ೨೧ ||

ಹಾಲ ಮಂಚಕೋ ಮೇಲ ಗಿರಿಗ್ಯೋ
ಆಲಮನಿ ಮ್ಯಾಲಕ ನೂರೇಳೋs   || ೨೨ ||

* * *

ಚೀರವ್ವ-ಚನ್ನವ್ವನ ಪರೀಕ್ಷೆ

ಅಯ್ಯನೇಳೋ ಶಿವರಾಯನೋ
ಯಾವ್ಯಾವ ರೂಪಾ ತೋರ‍್ಯಾನೋ …..
ಯಾವ್ಯಾವ ರೂಪಾ ತೋರ‍್ಯಾನೆಂದರ                 || ಪಲ್ಲ ||

ಕುಲಮಿ ಕಂತಿಗಳ ಉಟ್ಟಾನೋ
ಕುಲಮಿ ಕಂತಿಗಳ ಉಟ್ಟಾನೇನ
ಕಾಲಾಗ ಗೆಜ್ಜಿಯ ಕಟ್ಯಾನೋ
ಕಾಲಾಗ ಗೆಜ್ಜೆಯ ಕಟ್ಟಾನೇನಂವ
ಮುರಗಿ ಬೆತ್ತವಂದ ಹಿಡದಾನೋ
ಮುರಗಿ ಬೆತ್ತವಂದ ಹಿಡದಾನೇನಂವ
ಮುಂಗೈ ಜೋಳಿಗೆ ಹಾಕ್ಯಾನೋ
ಮುಂಗೈ ಜೋಳಿಗೆ ಹಾಕ್ಯಾನೇನಂವ
ಮುಂದಿನ ಓಣಿಗೆ ಹೋದಾನೋ
ಮುಂದಿನ ಓಣಿಗೆ ಹೋದಾನೇನಂವ
ಕೋರ‍್ಯಾನ ಬಿಕ್ಷಾ ಎಂದಾನೋ …..          || ೧ ||

ಶಿವನ ಮಗಳ ಚೀರವ್ವ ಚೆನ್ನವ್ವ
ಹಿಟ್ಟಿನ ಭಿಕ್ಷಾ ತಂದಾಳೋ
ಹಿಟ್ಟಿನ ಭಿಕ್ಷಾ ತಂದಾರೇನವರ ಸ್ವಾಮಿ
ಒಲ್ಲೆ ಒಲ್ಲೇನ್ಹೇಳ ಎಂದಾನೋ
ಒಲ್ಲೆ ಒಲ್ಲನ್ಹೇಳ ಎಂದಾನಂವ
ಹೊಳ್ಳಿ ಮನಿಗೆ ಓದಿದಾಳೋ
ಹೊಳ್ಳಿ ಮನಿಗೆ ಓದಿದಾಳಾಕೆ
ಕಾಳ ಧಾನ್ಯಗಳ ತಂದಿದಳೋ
ಕಾಳ ಧಾನ್ಯಗಳ ತಂದಾರ ಸ್ವಾಮಿ
ಒಲ್ಲೆ ಒಲ್ಲೇನ್ಹೇಳ ಎಂದಿದಾನೋ
ಒಲ್ಲೆ ಒಲ್ಲೆನ್ಹೇಳ ಎಂದಿದರಾಗ
ರೊಕ್ಕ ಧಾನ್ಯಗಳ ತಂದಿದಳೋ
ರೊಕ್ಕ ಧಾನ್ಯಗಳ ತಂದಿದ ಸ್ವಾಮಿ
ಒಲ್ಲೆ ಒಲ್ಲೆನೇಳ ಎಂದಿದನೋ
ಒಲ್ಲೆ ಒಲ್ಲೆನೇಳ ಅಂದರ ಸ್ವಾಮಿ
ಹೊಳ್ಳಿ ಮನಿಗೆ ಓದಿದಳೋ
ಹೊನ್ನ ಧಾನ್ಯಗಳ ತಂದರ ಸ್ವಾಮಿ
ಒಲ್ಲೆ ಒಲ್ಲೆನ್ಹೇಳಂದಿದನೋ
ಒಲ್ಲೆ ಒಲ್ಲೆನ್ಹೇಳಂದರ ಸ್ವಾಮಿ
ಹೊಳ್ಳಿ ಮನಿಗೆ ಒಯ್ದಿದಳೋ
ಮುತ್ತ ಧಾನ್ಯಗಳ ತಂದಿದಳೋ
ಮುತ್ತ ಧಾನ್ಯಗಳ ತಂದರ ಸ್ವಾಮಿ
ಒಲ್ಲೆ ಒಲ್ಲೆನ್ಹೇಳಂದಿದನೋ …..               || ೨ ||

ಏನ ಬೇಡತಿರಿ ಬೇಡರಿ ಸ್ವಾಮಿ
ಬೇಡಿದ ಕೊಡುವೆನು ನಾನಿಂದು
ನಿನ್ನ ಮಗನ ನೋಡವ್ವಾ
ಕಡಿದು ಅಡಿಗೆಯ ಮಾಡವ್ವಾ
ಶಿವನ ಮಗಳು ಚೀರವ್ವ ಚೆನ್ನವ್ವ
ಕೂಗ್ಯಾಡಿ ಮಗನ ಕರದಾಳೋ
ರೊಕ್ಕದ ಹೆಜ್ಜಿ ಲಂಕನ ಕಟ್ಟಿ
ಗಲ್ ಗಲ್ ಮಗ ಬಂದಿದನೋ
ಗಲ್ ಗಲ್ ಮಗ ಬಂದಿದರೇನ
ದೇವರ ಕೋಲಿಗೆ ಕರಿದಿದಾಳೋ
ದೇವರ ಕಾಲಿಗೆ ಎರಗಿದನವನು
ಕಾಲ್ಮೆಟ್ಟಿ ಕೊರಳ ಕೊಯ್ದಿದಳೋ
ಕಡಿದು ಅಡುಗೆಯ ಮಾಡಿದಳೋ …..                  || ೩ ||

ಕಡಿದು ಅಡುಗೆಯ ಮಾಡಿದಳೇನಾಕಿ
ಗುರುವನ ಊಟಕ ಕರಿದಿದಾಳೋ
ಗುರುವನ ಊಟಕ ಕರಿದಿದಾಳೇನಾಕಿ
ಒಲ್ಲೆ ಒಲ್ಲೆನ್ಹೇಳಂದಿದಾನೋ
ಏನ ಬೇಡತಿರಿ ಬೇಡಿರಿ ಸ್ವಾಮಿ
ಬೇಡಿದ್ದು ಕೊಡುವೆನು ಅಂದಿದಾಳೋ
ನಿನ್ನ ಮಗನ ನೋಡವ್ವ ಅಲ್ಲಿ
ನನ್ನ ಬದಿಯಲಿ ಕೂಡ್ರಿಸು ಇಲ್ಲಿ
ಶಿವನ ಮಗಳ ಚೀರವ್ವ ಚೆನ್ನವ್ವ
ಕೂಗಾಡಿ ಮಗನ ಕರಿದಿದಾಳೋ
ರೊಕ್ಕದ ಗೆಜ್ಜಿ ಲಂಕನ ಕಟ್ಟಿ
ಗಲ್ ಗಲ್ ಮಗ ಬಂದಿದಾನೋ
ಗಲ್ ಗಲ್ ಮಗ ಬಂದಿದಾನೋ
ಗಲ್ ಗಲ್ ಬಂದ ಮಗನ
ಗುರುವಿನ ಬದಿಯಲಿ ಕೂಡ್ರಿಸಿದಳೋ
ಗುರುವಿನ ಬದಿಯಲಿ ಕೂಡ್ರಿಸಿದಳೇನಕಿ
ಕರೆದು ಊಟಕೆ ಹಾಕಿದಳೋ …..             || ೪ ||

ಅಲ್ಲಿಗಿಲ್ಲಿಗೋ ಇದು ಒಂದ ಸಂಧಿ
ಸಂಧಿಗೇಳ ಪದ ಮುಂದೇಳೋ
ಸಂಧಿಗೇಳ ಪದ ಮುಂದೇಳೋ …. ಮಾಳಿಗಿರಾಯಾ ||

* * *

 

ಮಾರ್ಗಪದ

ಗಿರಿಜ ಗಂಗಾದೇವಿ ಹರಿಬ್ರಹ್ಮರೆಲ್ಲಾರು
ಧರೆಗೆ ಇಳದ ತಾವು ಅಲ್ಲಿ ಬಂದಿದ್ದಾರೋ

ಶಿವನ ಸತಿದೇವಿ ನಾಗಗನ್ನೆರು ಕೂಡಿ ಶಿಸುವಿನಾ
ತೊಟ್ಟಿಲಾ ಕಟ್ಟಿದ್ದಾರೋ

ಹೆತ್ತ ಶಿಸುವಿನಾ ಎತ್ತಿ ಪಾರ್ವತಾದೇವಿ
ಆಗ ಇಟ್ಟಾಳೋ ಶಿಸುವಿಗೆ ನಾಮವನೋ

ಮುತ್ತಿನ ತೊಟ್ಟಿಲಕಟ್ಟಿ ಜೋಗುಳವನೆ ಹಾಡಿ
ಇಟ್ಟಾರೋ ಅವರು ನಾಮವನೋ

ಮುದ್ದಿಸಿ ಶಿಸುವಿಗೆ ಇದ್ದವರೆಲ್ಲರು ಸಿದ್ಧರಾಮಯ್ಯ
ಅಂತ ಕರಿದಿದ್ದಾರೋ

ರುದ್ರ ಮಾರುತಿ ಕೂಡಿ ಹರಿ ಬ್ರಹ್ಮರೆಲ್ಲರು
ಎದ್ದಾರೋ ತಮ್ಮ ತಮ್ಮ ಗುರುಸ್ಥಳಕೋ

ಮಾತನಾಡಲಿ ಬ್ಯಾಡೋ ತಾಯಿ ತಂದಿಯಗೂಡ
ಆತನ ಮಾತ ಮಾಡಿ ಹೊಂಡಿದಾರೋ

ದೇವಗನ್ಯಾರು ನಾಗಗನ್ಯಾರು ಆಗ ಮಗುವಿಗೆ
ಮುದ್ದಿಸಿ ಸಾಗಿದ್ದಾರೋ

ಹಿಂಥಾ ವ್ಯಾಳ್ಯಾದಾಗ ಸುಗ್ಗಲಾದೇವಿಗಿ
ಎಚ್ಚರಾಗಿ ಮಗನಾ ಕಂಡಿದ್ದಾಳೋ

ಮಗನ ರೂಪವ ನೋಡಿ ಮನದಾಗ
ಸುಗ್ಗಲಾದೇವಿ ಗುರುವನ ನೆನಿಯುತ ನಿಂತಿದ್ದಾನೋ

ನನ್ನಕ್ಕಿಂತ ಹೆಚ್ಚಿನ್ಯಾವರು ಜಗದೊಳಗ
ಯಾರೂ ಇಲ್ಲ ತನ್ನ ಸತಿ ಲಕ್ಷ್ಮಿದೇವಿಗೆ ಹೇಳಿದಾನೊ

* * *

 

ಮಾರ್ಗಪದ

ಆದಿನಾರಾಯಣ ಶಕ್ತಿಗೆ ಹೇಳತಾನು
ಮೊದಲಿಗೆ ನಾ ಒಬ್ಬಾವ ಇದ್ದಾವನೋ

ನನ್ನಕ್ಕಿಂತ ಹೆಚ್ಚಿನವರು ಜಗದೊಳಗ ಯಾರಿಲ್ಲ
ತನ್ನ ಸತಿಯಾ ಲಕ್ಷ್ಮಿಗೆ ಹೇಳಿದ್ದಾನೋ

ಎಷ್ಟ ಹೇಳಲಿ ದೇವಿ ಸೃಷ್ಟಿ ಒಳಗ ನಾನು ದುಷ್ಟ
ದೈತ್ಯರನ್ನ ಸಂಹರಿಸಿ ಬಿರುದವನೋ

ಹಿರಣ್ಯ ರಕ್ಕಸ ಹಿರಣ್ಯ ಕಶಪ ದೈತ್ಯರು
ಮಣ್ಣಪಾಲ ಆದವರು ನನ್ನಿಂದಾನೋ

ಅಂದಮ್ಯಾಲ ಯಾರು ಹೆಚ್ಚಿನವರು ಎಂಬುದು
ತಿಳಿದು ನೀನು ನಡಿ ಅಂದಾನೋ

ಭಕ್ತರ ಪಾಲಕಾ ದುಷ್ಟರ ನಾಶಕಾ
ಮುಕ್ತಿ ಪದವಿ ನನ್ನಿಂದಾ ತಿಳಿ ಅಂದಾನೊ

ನಿನ್ನಕ್ಕಿಂತ ಹೆಚ್ಚಿನ್ಯಾಕಿ ಅಂದಾಳೋ ಆದಿಶಕ್ತಿ
ತನ್ನ ಪತಿಯಾ ಮುಂದ ಹೇಳಿದ್ದಾಳೋ

ಆದಿಶಕ್ತಿಯು ತಾನು ಆದಿನಾರಾಯಣಗ ಹೇಳತಾಳ
ಮೊದಲಿಗಿ ನಾನು ಒಬ್ಬಾಕಿ ಅಂದಿದಾಳೋ

ಹರಿ ಬ್ರಹ್ಮ ರುದ್ರರು ಕೂಸಾಗಿ ಇರುವಾಗ ಯಾರು
ಮೊಲಿಯಾ ಕುಡಿಶ್ಯಾರು ಅಂದಿದಾಳೋ

ಶಂಭು ನೀ ಶಂಭ ದೈತ್ಯ ಮಹಿಷಾಸೂರೆಲ್ಲ ಸಂಹಾರ
ಆದದ್ದು ಯಾರಿಂದ ಅಂದಿದ್ದಾಳೋ