೧೬ನೆ ಸಂಧಿ
ದೇವಿಯ ಪದ
ಸದಾ ಸದಾ ಆದಿಶಕ್ತಿಗೆ ಶರಣ ಮಾಡತೇವರಿ
ವಾದ ಭೇದವಿಲ್ಲದೆ ನಾವು ಕುಂತ ಹೇಳತೇವರಿ
ನಗುತ ನಗುತ ನಿಮಗ ಒಂದ ಮಾತ ಕೇಳತೇವರಿ
ಬೇಗದಿಂದಾ ಹೇಳಿಕೊಟ್ಟರ ಶಾಣ್ಯಾ ಅಂತೇವರಿ
ನಿನ್ನೆ ರಾತರಿ ನನಗೆ ಒಂದ ಕನಸ ಬಿದ್ದಿತರಿ
ಅನ್ನಪೂರ್ಣದೇವಿಯ ಗುಡಿಯಾಗ ನಾಯಿ ಹೊಕ್ಕಿತರಿ
ನಾಯಿ ಹೋಗಿ ಗುಡಿ ಒಳಗ ಎಣ್ಣೆ ಕಂಡಿತರಿ
ಬಾಯಿತೆರದ ಕುಡಿಲಾಕ ಹೋಗಿ ಕುಳ್ಯಾಗ ಬಿದ್ದತರಿ
ಆಗ ಒಬ್ಬ ಗುಡಿಯಾಗ ಹೋಗಿ ನಾಯಿನ ಕಂಡಾನರಿ
ತೆಗಿಲಾಕ ಹೋದಾವವ ನಾಯಿ ನೋಡಿ ನುಂಗಿಬಿಟ್ಟತಿರಿ
ಆಗ ಒಂದ ನೊರಜ ಹೋಗಿ ಆ ನಾಯಿನ ತುಳದೀತರಿ
ಬೇಗದಿಂದಾ ಇಲಿ ಹೋಗಿ ಬೆಕ್ಕಿನ ನುಂಗಿತರಿ
ಊರಮುಂದಿನ ಹಳ್ಳ ನೋಡರಿ ಜಿಗದ ನಿಂತರಿ
ಹಾರಿನಿಂತ ಸಮುದ್ರಕ ತೆಕ್ಕಿಬಿದ್ದ ನುಗಸತಿತ್ತರಿ
ದೇವಿಯ ಧ್ಯಾನವ ಮಾಡಿದವರಿಗೆ ಅರ್ಥ ತಿಳಿಯುದರಿ
ಮಾಯಾದೊಳಗಿನ ಮಾನು ಮಂದಿಗಿ ತಿಳಿಯುದಿಲ್ಲ ನೋಡರಿ
ಒಬ್ಬಾಕಿ ಆದಿಶಕ್ತಿ ಜಗಕ ದೊಡ್ಡಾಕಿ ಅಲ್ಲೇನರಿ
ಇಬ್ಬರು ಅನ್ನುವ ಗಾದಿಯ ಮಾತ ತಿಳಿದ ನೋಡರಿ
ಗುರುವಿಗೆ ನಿಂದಾ ಮಾಡಿದ ಮಾಯಿಯ ಹರಣಾ ಅಲ್ಲೆನೋ
ಮಾಯಿ ಶಿಷ್ಯ ಗೋರಕ್ಷಕನ ಪ್ರಾಣ ಹೋಗಲಿಲ್ಲೇನೋ
ಹರನು ಮುನಿದರೆ ಗುರು ಕಾಯುವನು ತಿಳಿದಿಲ್ಲೇನೋ
ಅಪ್ಪ ಆದಿಂದ ನೆಪ್ಪ ಹಿಡಿ ಗುರು ದೊಡ್ಡಾಂವ ಅಲ್ಲೆನೋ
ಮುಪ್ಪ ಆದಿಂದ ನಿನಗ ಹ್ಯಾಂಗ ತಿಳಿಯುದಿಲ್ಲನೋ
ಶಿಕ್ಕರ ಶಿಕ್ಕಿತು ಕಣ್ಣಿಗೆ ಹ್ಯಾಂಗ ಕಾಣುದಿಲ್ಲೆನೋ
ಮಾರ್ಗಪದ
ಹಿಂಥಾ ವ್ಯಾಳಾದಾಗ ಸುಗ್ಗಲಾದೇವಿ ಎಚ್ಚರಾಗಿ
ಮಗನಾ ಕಂಡಿದ್ದಾಳೋ
ತುರಳಯು ತಾ ಕಂಡು ಪರಿಲಿಂದಾ ಹಿಗ್ಗುತ
ಹರುಷಾಗಿ ತನ್ನ ಮಗನ ಕಂಡಿದ್ದಾಳೋ
ಮಗನ ತೊಟ್ಟಿಲದಾಗ ಹಾಕಿ ಸುಗ್ಗಲಾದೇವಿ
ಮನದಾಗ ಗುರುವಿನ ನೆನದಿದ್ದಾಳೋ
ಜಗಜಗಸುವಂಥಾ ಕಂದ ಅವರು
ಬಗೆಬಗೆಯಾ ಬೂದಿಯಾ ಧರಿಸಿದ್ದಾರೋ
ಕಂದಗೆ ತರಳೆಲೆ ಬಿಂದುಲಿ ಗೋಪವಾ
ಒಂದೊಂದು ಪರಿಯಾದಿಂದ ವಸ್ತ್ರವನೋ
ಚಂದ ಚಂದದ ವಸ್ತ್ರವ ಧರಿಸಿ ಸಿದ್ರಾಮಗ
ಅವರು ಅವನಾ ಸಲವಿದ್ದಾರೋ
ತಿಂಗಳ ಶಶಿಯಂತೆ ಬೆಳೆದಾನೋ ಬಾಬಾ
ಅಂಗದೊಳಗೆ ಆಭರಣ ಹೊಂದಿದ್ದಾವೋ
ಮಾತೆ ಸುಗ್ಗಲಾದೇವಿ ಕರದಾಳೋ ಮಗನಾ
ರೀತಿ ಹೀತಿ ಹಿಡಿದ ಅಂದಿದಾಳೋ
ಮುದ್ದು ಮಗನ ನೋಡಿ ಕರದಾಳೋ
ಸುಗ್ಗಲಾದೇವಿ ಹೊಂದಿಕೊಂಡ ತನ್ನ ಮತವನ್ನೊ
ಮಾರ್ಗಪದ
ಆದಿಶಕ್ತಿ ತಾನು ಆಗ ಆದಿ ನಾರಾಯಣಗ ಹೇಳತಾಳ
ಮೊದಲಿಗೆ ನಾನು ಒಬ್ಬಾಕಿ ಅಂದಿದ್ದಾಳೊ
ಆದಿಶಕ್ತಿ ಎಂಬ ಬಿರದಾ ಧರಿಸಿ ಬಂದಿನೋ ದೇವಾ
ಮೇದಿನಿ ಒಳಗ ಹೆಸರನಂದ ಅಂದಾಳೋ
ನಾ ಹೆಚ್ಚು ನೀ ಹೆಚ್ಚು ಅನವುತ ಇಬ್ಬರು
ಆಗ ಜೋಡಿಲೆ ಅಲ್ಲಿ ವಾದವ ನಡಿಸಿದ್ದರೋ
ಲಕ್ಷ್ಮಿನಾರಾಯಣರ ವಾದವ ಕೇಳುತ
ಆಗ ನಾರದ ಮುನಿಗಳು ಬಂದಿದಾರೋ
ಇದರಲ್ಲಿ ಯಾರ್ಯಾರು ಏನು ಮಾಡಿದಿರಿ ಅಂದ
ಸದು ವಿನಯದಿಂದ ಅವರಿಗೆ ಕೇಳಿದ್ದಾನೋ
ನಾರದನ ಮಾತ ಕೇಳಿ ಸತಿಪತಿಗಳು ಆಗ
ಭರದಿಂದ ಹೇಳುದಕ ನಿಂತಿದ್ದಾರೋ
ಇಬ್ಬರು ಮಾಡಿದಂತಾ ಕೀರ್ತಿ ನಾರದಾ
ಕೇಳಿ ಶಭಾಸ ಅನವುತ ನಕ್ಕಿದಾನೋ
ಲೋಕ ಕಲ್ಯಾಣ ಮಾಡುದಕ ನಾರದಸ್ವಾಮಿ
ಕತೊಂದು ತಗದ ಅವರಿಗೆ ಹೇಳಿದ್ದಾನೋ
ರಕ್ಷಣಾ ಮಾಡಿದಿರಿ ವಿಷ್ಣುದೇವಾ ನೀನು ಆ ಕ್ಷಣಾ
ನಿನಗ ಮದತ್ತ ಯಾರದ ಅಂದಾನೋ
ಕೇಳಿ ನಾರಾಯಣ ನಾರದಸ್ವಾಮಿಯ ಮುಂದ
ನನಗ್ಯಾರು ಮದ್ದತ್ತ ಇಲ್ಲ ಅಂದಾನೋ
ನಾರಾಯಣ ಅಂದ ಮಾತ ಕೇಳಿ ನಾರದಸ್ವಾಮಿ
ಸುದರ್ಶನ ಚಕ್ರದ ಮದ್ದತ ಹೇಳಿದ್ದಾನೋ
ಸುದರ್ಶನ ಚಕ್ರದ ಸಹಾಯದಿಂದಾ ನೀನು
ಹದಗೆಟ್ಟ ದೈತರನ್ನ ಕೊಂದಾವ ನೀ ಅಲ್ಲನೋ
ಚಕ್ರ ಇರದಿದ್ದರ ನಾರಾಯಣ ಎಂಬುವ ಶಬುದ
ಧರೆಯೊಳಗ ಯಾರು ಕರಿಯವರು ಇಲ್ಲ ಅಂದಿನೋ
ಇಷ್ಟ ಮಾತವ ಕೇಳಿ ತಿರುಗುತ ಚಕ್ರವ ಬಂದು
ಗರವದಿಂದ ಮುಂದ ನಿಂತಿದ್ದಾನೋ
ತಿರುಗುವ ಚಕ್ರವ ನೋಡಿ ನಾರಾಯಣ
ಆಗ ಧರಿಸುವುದಿಲ್ಲ ಕೈಯೊಳಗ ಹೋಗ ಅಂದಾನೋ
ಧರಿಸುವುದಿಲ್ಲ ಅಂತ ಉರಿಯುತ ಸಿಟ್ಟಾಗಿ
ಧರಿಯೊಳಗ ನರಮಾನವ ಆಗಿ ಇರೋ ಅಂದಾನೋ
ಸಾವಿರ ತೋಳ ಧರಿಸಿ ಶಕ್ತಿಯು ಧರಿಶ್ಯಾನು
ಕಾರ್ತಿಕವಿರ್ಯಾಅರ್ಜುನ ಅಂತಾ ಜನಿಸಿದ್ದಾನೋ
೧೭ನೆ ಸಂಧಿ
ಗುರುವಿನ ಪದ
ಮಿಥ್ಯ ಅಲ್ಲೋ ಸತ್ಯ ಗುರುವಿಗೆ ಶರಣ ಮಾಡತಿವರಿ
ನಿಂತ ಶರಣಮಾಡಿ ನಾವು ಕುಂತ ಹಾಡತೇವರಿ
ಶಾಣ್ಯಾರಂತ ನಿಮಗ ನಾವು ಮಾತೊಂದ ಕೇಳತೀವರಿ
ಕೋಣನ ಬುದ್ಧಿಯವರು ಇದ್ದರ ಸುಮ್ಮಿ ಇರತೀರಿ
ಗಿಡಾ ವಂದು ಕಣ್ಣಿಲಿಂದಾ ನಾವು ಕಂಡಿವರಿ
ತುದಿ ಕೆಳಗ ಬೇರಮ್ಯಾಲ ಇದ್ದಿತ ನೋಡರಿ
ಯಾವ ತಾರೀಖಿಗೆ ಗಿಡಾ ಹುಟ್ಟಿತು ಹೇಳಾರಿ
ನೆಂಪಿಲೆ ಲೆಕ್ಕದ ಪ್ರಮಾಣ ಮಾಡಿ ನಮಗ ತಿಳಸರಿ
ಎತ್ತರ ಎಷ್ಟರ ಗಿಡದ ಪ್ರಮಾಣ ತಿಳಿದ ಹೇಳಿರಿ
ಸತ್ತರ ಸುದ್ದಾ ನಿಮಗ ಉತ್ತರಾ ಹ್ಯಾಂಗ ದೊರದವರಿ
ಹೂವು ಏಸು ಟೊಂಗಿ ಏಸು ಕಾಯಿ ಹೇಳರಿ
ನಮ್ಮ ಮುಂದ ಹೇಳಿದರೆ ನಿಮ್ಮನ್ನ ಬಿಡತೀವರಿ
ಗುರುವಿನ ಮಾರ್ಗಪದ
ಮುದ್ದು ಮಗನಾ ನೋಡಿ ಕರದಾಳೋ ಸುಗ್ಗಲಾದೇವಿ
ಹೊಂದಿಕೊಂಡ ತನ್ನ ಮಾತು ಏನೋ
ಕರದಾಳೋ ಸುಗ್ಗಲಾದೇವಿ ಮಗನಾ ನೋಡುತ
ತಾನು ಬರಿಯಾ ಬಾಲಕರ ಮಾತು ಏನೋ
ಬೆರಸಿ ಆಡಿದಾನೋ ಅವರ ವಳಗ ಒಬ್ಬಾ ಅರಿಯ
ತಾಯಿ ಇವನ ಮಾತು ಏನೋ
ಮಾತನಾಡುವುದಿಲ್ಲ ಮನುಜರೊಳಗೆ ಇಂವಾ
ಕವತುಕ ಮಾಡತಾನೋ ನಿನ್ನ ಮಗನೋ
ಭೂತದೊಳಗ ಒಂದು ಕಲ್ಲು ಲಿಂಗವ ಮಾಡಿ
ಆತನು ದಿನಂಪ್ರತಿಯಾ ಪೂಜೆಯನೋ
ಕಲ್ಲು ಲಿಂಗಕ್ಕೆಲ್ಲ ಪುಷ್ಪಗಳನ್ನು ತಂದು
ಮಲ್ಲಯ್ಯನಂಥಾ ಪೂಜೆಯಾ ಮಾಡುವನೋ
ಎಲ್ಲಾರು ಅಂತಾರಪ್ಪ ನಿನ್ನ ಮಗಾ ಮಾತನು
ಬಲ್ಲೆವರಿ ಅಂಥಾ ಅವರು ನುಡಿದಿದ್ದಾರೋ
ಹರ ಹರ ಶಿವ ಶಿವ ನಮದು ಎಂಥಾ ದೈವವೋ
ತರುಣನ ಕೊಟ್ಟಹೋದೋ ಮಲ್ಲಯ್ಯನೋ
೧೮ನೆ ಸಂಧಿ
ದೇವಿಯ ಪದ
ಪಂಚಮುಖದ ಶಕ್ತಿಯು ಹುಟ್ಟಿ ಶಕ್ತಿಲಿಂದಾ
ತ್ರಿಮೂರ್ತಿ ಹುಟ್ಟಿ ತ್ರಿಮೂರ್ತಿಲಿಂದಾ
ಆದಿತ ಸೃಷ್ಟಿಶಕ್ತಿಯ ಅವತಾರವೋ
ಎಲ್ಲವ್ವ ಅಂತಾ ಅವತಾರ ತೊಟ್ಟಿ ಬಲ್ಲಿನಂದವರನ
ಕುಣಿದಾಡಿಸಿ ಬಿಟ್ಟ ಭಂಡಾರ ಚೀಲ ಬಗಲಿಗೆ ತೊಟ್ಟಿ
ಶಕ್ತಿಯ ಅವತಾರವೋ
ಸಿಂಹದ ಮ್ಯಾಲ ಅವತಾರ ತೊಟ್ಟಿ ಬ್ರಹ್ಮನ ಶಿರಾ
ಹರದ ಬಿಟ್ಟ ಸಂಟಗ ಸುಡಗಾಡ ಕಾವಲ ಇಟ್ಟ
ಶಕ್ತಿಯ ಅವತಾರವೋ
ಮೊಹಿನೀ ಅಂತಾ ಅವತಾರ ತೊಟ್ಟಿ ದೈತ್ಯರಿಗೆ
ವಿಷಾ ಕುಡಿಸಿ ಬಿಟ್ಟಿ ದೇವ ದೇವತ್ಯಾರಿಗಿ
ಅಮೃತ ಕೊಟ್ಟ ಶಕ್ತಿಯ ಅವತಾರವೋ
ಭವಾನಿ ಅಂತಾ ಬಂದಿದಿ ಹುಟ್ಟಿ ಗಂಡಸರಿಗೆ
ಕವಡಿ ಸರಾ ಕಟ್ಟಿ ಕೈಯಾಗ ದೀವಟಿಗಿ ಹಿಡಿಸಿದಿ
ಶಕ್ತಿಯ ಅವತಾರವೋ
ಆದಿಲಕ್ಷ್ಮಿ ಅಂತಾ ಹುಟ್ಟಿ ಭಕ್ತರ ಭಾವಕ ನಿಂತಬಿಟ್ಟ
ಕುರಿಯಾ ಹಿಂಡಕ ಭಾಗ್ಯ ಅನಿಸಿಬಿಟ್ಟ
ಶಕ್ತಿಯ ಅವತಾರವೋ
ಮಹಾಕಾಳಿ ಅನಿಸಿದಿ ಹುಟ್ಟಿ ಬ್ರಹ್ಮಾಂಡವೆಲ್ಲ ನುಂಗಿಬಿಟ್ಟ
ಶಂಕರನ ಎದಿಮ್ಯಾಲ ಪಾದಾ ಇಟ್ಟ
ಶಕ್ತಿಯ ಅವತಾರವೊ
ಲಕ್ಕವ್ವ ತಾಯಿಯ ಅವತಾರ ತೊಟ್ಟ ನಡವೂರಾಗ
ನೆನದಿದಿ ಗಟ್ಟಿ ಬಂದ ಭಕ್ತರಿಗೆ ಬೇಕಾದ ಕೊಟ್ಟಿ
ಶಕ್ತಿಯ ಅವತಾರವೋ
ಮಾರ್ಗಪದ
ಸಾವಿರತೋಳ ಧರಿಸಿ ಕಾರ್ತಿಕಅರ್ಜುನನಾಗಿ
ಶಕ್ತಿಯ ಧರಿಸ್ಯಾನೋ ಸುದರ್ಶನೋ
ಅದಂದಾ ಸುದ್ದಿಯ ಕೇಳಿ ನಾರದಸ್ವಾಮಿ ಆಗ
ಹೋದೋ ಕೈಲಾಸ ಶಂಖರನ ಮುಂದ ಅವನೋ
ಕೈಲಾಸದೊಳಗ ಮಹಾದೇವ ಪಾರ್ವತಿಯ ಸಂಗಡಾ
ಉಲ್ಲಾಸದಿಂದಾ ಅವರು ಇರುತ್ತಿದ್ದರೋ
ಆಗ ನಾರದಸ್ವಾಮಿ ವಿಷ್ಣುಲಕ್ಷ್ಮಿಯ ವಾದ
ಬೇಗ ದೇವನ ಮುಂದ ಹೇಳಿದ್ದಾನೋ
ಕೈಲಾಸ ಪತಿ ಶಂಖರಾ ಪಾರ್ವತಿಯಗೂಡಾ
ಭೂಲೋಕಕ ಇಳಿದ ಅವರು ಬಂದಿದಾರೋ
ರಾಮಶೃಂಗ ಪರವುತದೊಳಗ ಮಹಾದೇವ
ತಾನು ಜಮದಗ್ನಿ ಋಷಿಯಾಗಿ ಇರತಿದ್ದನೋ
ಹಣಿಯ ಮ್ಯಾಗ ಒಂದು ಕಣ್ಣನ್ನು ಧರಿಸಿಕೊಂಡು
ತಪಗಳ ಮಾಡುತ ಅವನು ಇರತಿದ್ದನೋ
೧೯ನೆ ಸಂಧಿ
ಗುರುವಿನ ಪದ
ಆದಿಯ ಮಾತಿನ ಭೇದವು ತಿಳಿಯದೆ ವಾದ
ಮಾಡುವದ್ಯಾಕೋ ಹುಚ್ಚ ಮರುಳೇ
ಕುರಿಯಾ ಹುಟ್ಟಿದ ಗುರುತಾ ಕೇಳತಿದಿ ತಮ್ಮಾ ನೀನು
ಕುರಿ ಅಂತ ಅದಕ ಯಾರು ಅಂದಿದಾರೋ
ಹಾಲುಮತದ ಸೋದರಮಾವನ ಕೇಳತಿರಿ ತಮ್ಮಾ ನೀನು
ಹಾಲುಮತ ಯಾರು ಹುಟಿಸ್ಯಾರು ಹೇಳಿರಿ ಅಂದಿನೋ
ಬಡ್ಡಿ ಬಿಟ್ಟು ತುದಿತುದಿಗೆ ಹಾರ್ಯಾಡ ಬ್ಯಾಡೋ ನೀನು
ಬಿದ್ದ ಮುರದಾವು ನಿನ್ನ ಹಲ್ಲ ಅಂದಿನೋ
ಹರಕ ಮುಚ್ಚತೆಂತ ದೇವರಿಗಿ ಹೋಗಬ್ಯಾಡೋ
ಫರಕ ದಲಾದ ಇರೂದ ಗುರುವಿನ ಮಾರ್ಗಿ ಅಂದಿನೋ
ದೇವರ ಮುಂದ ಇರುವ ಮಾಯಿ ಮೂರ್ತಿನ ಕೇಳತಿದಿ
ತಮ್ಮಾ ಭಾವನ್ನ ಬಂದಿನ ಹೆಸರಾ ಹೇಳಂದಿನೋ
ಗೊಳ್ಳ ಹಾಡಬ್ಯಾಡೋ ನಿನಗೊಂದ ಕೇಳತೀನೋ ತಮ್ಮಾ
ತಾಳ ಡೊಳ್ಳ ಅಂಥಯಾರ ಅಂದಿದ್ದಾರೋ
ಮಾರ್ಗಪದ
ಹರಾಹರಾ ಶಿವಶಿವಾ ನಮ್ಮದೆಂಥ ದೈವವೋ
ತರುಳಾನ ಕೊಟ್ಟ ಹೋದೋ ಮಲ್ಲಯ್ಯನೋ
ಪರವಾಗಿ ಮಗನಿಗೆ ಸ್ಮರಣಿಕೊಟ್ಟು ದೇವಾ
ಕರುಣಿಸಿ ಕಾಯೋ ನೀನು ಮಲ್ಲಯ್ಯನೋ
ಅಂದು ಅಳವುತ ಆಗ ಸುಗ್ಗಲಾದೇವಿ ತಾನು
ಕಂದಗ ಕರಗಳ ಕಾಯಬೇಕ ಅಂದಿದಾಳೋ
ಚಂದದಿಂದ ನೀನು ಕಾಡಿನೊಳಗ ಕಾಯುತ ಹೋಗೋ
ಅಂದು ಕಟ್ಟಿದಾಳ ಆಗ ಬುತ್ತಿಯನೋ
ಮೂಕ ಸಿದ್ಧಾರಾಮೇಶ ಮರುಳಾಗಿ ತಾನು
ಶಂಖರನ ಗುಡಿಯಾ ಒಳಗೆ ಬಂದಿದಾನೋ
ಅಂಕಿತ ನೆವಮಾಡಿ ಕರಗಳನ ಕಾಯುತ
ಶಂಕರರ ಲಿಂಗಪೂಜೆ ಮಾಡುವನೋ
ಎತ್ತಿ ತಂದಾನೋ ಎಲ್ಲಾ ಪುಷ್ಪ ಫಲಗಳೆಲ್ಲ
ಸತ್ಯದಿ ಧರಿಸಿ ಶರಣ ಮಾಡಿದ್ದಾನೋ
ಬುತ್ತಿಯ ನೈವೇದ್ಯ ಮಾಡಿ ಸಲಸಿದಾನು ಕರ್ತ
ಗುರು ಆಗ ಅಲ್ಲಿ ಬಂದಿದಾನೋ
೨೦ನೆ ಸಂಧಿ
ದೇವಿಯ ಪದ
ಬೇಡಿದ ವರಗಳ ಕೊಡುವಂತ ಚಿಂಚಲಿ ಮಾಯವ್ವನ
ಗದ್ದಿಗಿ ಬಂದು ಮಾವಿನ ಹಣ್ಣಾ
ಪುಂಡಪುಂಡರನ ರುಂಡ ಹಾರಿಸಿದಂತ ಬಾದಾಮಿ
ಶಂಖರಿಯಾ ಗದ್ದಿಗಿ ಬಾಳಿಹಣ್ಣೊ
ಎಕ್ಕಿಯ ಗಿಡದಾಗ ಹಕ್ಕಿ ಬೊರ್ಯಾಡಿದಾಂಗ
ಲಕ್ಕವನ ಗದ್ದಿಗಿ ಬಂದು ಚಿಕ್ಕು ಹಣ್ಣೊ
ನಾ ಮೇಲ ಅಂದಾವರ್ನ ಬತ್ತಲೆ ಕುಣಶಾಳ
ಗುಡ್ಡದ ಎಲ್ಲವ್ವನ ಗದ್ದಿಗಿ ಹಲಸಿನ ಹಣ್ಣೊ
ಹಿಡಶಾಳೋ ದೀವಟಗಿ ಅನಶಾಳೋ ಉದೋ ಉದೋ
ತುಳಜಾ ಭವಾನಿ ಗದ್ದಿಗಿ ಪೇರಲ ಹಣ್ಣೊ
ಬಾಳ ಬಲ್ಲಿನಂದಾವರ್ನ ಗೋಳ ಮಾಡಿದಾಳು
ಕಾಳಮ್ಮ ದೇವಿ ಗದ್ದಿಗಿ ನೀಲದ ಹಣ್ಣೊ
ಗಿರಿಮ್ಯಾಗ ಮುರಿಯುವ ಭೌರಮ್ಮದೇವಿ
ಗದ್ದಿಗಿ ಸರವರಿಗೆ ಬೇಕಾದ ಭಾರಿ ಹಣ್ಣೊ
ಕಣಗೀಲ ಬನದಾಗ ಗಿಣಿ ಹಿಂಡ ಕುಂತಾಂಗ
ಸಣ್ಣ ದುರ್ಗವ್ವನ ಗದ್ದಿಗಿ ಅತ್ತಿಹಣ್ಣೊ
ಅನುಭವ ಮಂಟಪದಾಗ ಅಲ್ಲಮಪ್ರಭುವಿನ ಸೋಲಿಸಿ
ಅಕ್ಕಮಹಾದೇವಿ ಗದ್ದಿಗಿ ಓಂಕಾರದ ಹಣ್ಣೊ
ಮಾರ್ಗಪದ
ರಾಮಶೃಂಗ ಪರವುತದ ಮ್ಯಾಗ ಮಹಾದೇವ
ತಾನು ಜಮದಗ್ನಿ ಋಷಿಯನಾಗಿ ಇರತಿದ್ದನೋ
ಇತ್ತ ಪಾರ್ವತಾ ಭರತಖಂಡಾ ಕಾಶ್ಮೀರ ದೇಶದೊಳಗ
ದೇವಿ ರೇಣುಕ ಎಂಬ ಅರಸನ ನೋಡಿದ್ದಾಳೋ
ರೇಣುಕನೆಂಬಾನ ಅರಸ ನಿತ್ಯಾ ನೇಮದಿಂದ
ತಾನು ಕಾಳಿಕಾದೇವಿಯ ಪೂಜೆಯ ಮಾಡುವನೋ
ಅರಸರ ಭಕ್ತಿಗೆ ಮೆಚ್ಚಿ ಕಾಳಿಕಾದೇವಿ
ವರವಾಗಿ ಕೊಟ್ಟಾಳ ಒಂದು ಪುತ್ರಿಯನೋ
ಪಾರ್ವತಾದೇವಿ ಆಗ ಜನಿಸಿ ಬಂದಿದಾಳು ಅಲ್ಲಿ
ರೇಣುಕ ಎಲ್ಲಮ್ಮನಂಥ ನಾಮವ ಪಡಿದಿದ್ದಾಳೋ
ರೇಣುಕ-ರಾಜನು ಮಗಳನ್ನು ಕರಕೊಂಡು
ಜಮದಗ್ನಿ ಋಷಿಯಾ ಬಳಿಗೆ ಬಂದಿದಾನೋ
Leave A Comment