೨೦ನೆ ಸಂಧಿ
ಗುರುವಿನ ಪದ

ಮಣ್ಣುಗೊಂಬಿ ನಿರ್ಮಾಣ ಮಾಡಿದ ಗುರು ಸಾಂಬವ
ನಂಬುವ ವಿದ್ಯೆದ ಮನಿಯವನೋ

ತಾನು ತಿಳಿದ ಶಿವಾ ಆಸರಮಾಡಿದಾನು
ಜೀವ ನಂಬುದ ಒಂದ ಮನಿಯೋ

ಮೊದಲಿನ ಸಮಯ ಒಂಭತ್ತು ತಿಂಗಳು
ತಾಯ ಹೊಟ್ಟಿ ಅಂಬುದು ಮನಿ ಅಂದಿನೋ

ಸರ್ವಕುಲಾ ಮಿಕ ಮಿರಗ ಜಾತಿಗೆ ತಾಯಿ
ಮೊಲಿಯಾ ಅಡಗಿಯ ಮೊಲಿಯೋ

ಕಂದ ಕಿರಿ ಕಿರಿ ಮಾಡುವಂಥ ಕಟ್ಟಿ ತೂಗುವ
ತೊಟ್ಟಿಲಾ ಮನಿಯೋ

ಪ್ರೇಮದಿಂದ ನಿದ್ರೆ ಮಾಡುವಂಥಾ ಬಾಲಕರು
ಇರುದು ಒಂದು ದೊಡ್ಡಮನಿಯೋ

ಇಷ್ಟೆಲ್ಲಾ ತಿಳಿಸುದು ಸುಜ್ಞಾನ ಮೊದಲ
ಬುನಾ ಹಿಡಯೋ ತಮ್ಮಾ ಮನಿ ಅಂದಿನೋ

ಅಜ್ಞಾನಗ ತರಕವಲ್ಲ ಇದ ಒಂದು ತಮ್ಮ ಬಲ್ಲವರು
ಉಣ್ಣುವಂಥಾ ಹಾಲು ಹಣ್ಣೋ

ಜಿಡ್ಡ ಮನುಜಾ ನೀನು ದುಡ್ಡು ಖರ್ಚುಮಾಡಿ
ಕಟ್ಟಿಸಿದ್ದೊ ನೀನು ಖಾಲಿ ಮನಿಯೋ

ತಾಯಿತಂದಿ ಮಗನಿಗೆ ಬರಿಲಿಕ್ಕೆ ಕಲಿಸಿರೋ
ಓದು ಕಲಿಸುವದೋರಿದು ಖಾಲಿ ಮನಿಯೋ

ಸರಸ್ವತಿ ಒಲಿತವರ ಜರಾ ತಡಾ ಇಲ್ಲರಿ
ಕಲಿತರ ಸರ್ವ ವಿದ್ಯೆದ ಮನಿಯಾ ಅಂದಿನೋ

ಸಕಲ ವೇದ ಶಾಸ್ತ್ರ ಪುರಾಣ ಹೇಳುದಕ ಯುಕ್ತಿ
ಎಂಬುದಕ ಶಕ್ತಿಯ ಮನಿ ಅಂದಿನೋ

ನೀವೆಲ್ಲ ತಿಳಿಯಿರಿ ಇರ ಒಂದು ಮಾತುವರಿ
ಇಳಿದಾಂಗ ಮಾಗಿಯ ಹೊತ್ತು ಅಂದಿನೋ

ಮನಸ್ಸಿನೊಳಗ ತಮ್ಮಾ ಮಾಡಿದಿ ಏನು ಗೊತ್ತಾ
ನಿನ್ನ ಜೀವಕ ಯಾವ ಮನಿ ಸನಮಂತೋ

ತಿಳಿದ ಹೇಳಬೇಕೋ ತಮ್ಮಾ ಮೊದಲ ನಿನಗ
ಯಾವಲ್ಲಿ ಇತ್ತ ನಿನ್ನ ಮನಿಯೋ

ಕಂತುಹರಾ ಕೊಟ್ಟ ದೇಹ ಬಿಟ್ಟಮ್ಯಾಗ ಜೀವ
ಹುಡುಕುದು ಒಂದು ನೆಲದ ಮನಿಯೋ

 

ಮಾರ್ಗಪದ

ಎತ್ತಿ ತಂದಾನ ಸಿದ್ಧರಾಮ ಪುಷ್ಪಫಲಗಳನ್ನೆಲ್ಲ
ಸತ್ಯದಿಂದಾ ಶರಣಾ ಮಾಡಿದ್ದಾನೋ

ಬುತ್ತಿಯ ನೇವದ್ಯ ಮಾಡಿ ಸಲಸಿದಾನ
ಕರ್ತು ಗುರು ಆಗ ಬಂದಿದಾನೋ

ಕರಿಯಾ ಕಂಬಳಿ ಕಂಥೆ ಕರಿಯಾ ಜಡಿಗಳ ಬಿಟ್ಟು
ಕರದಲ್ಲಿ ತ್ರಿಶೂಲಾ ಹಿಡಿದು ಬಂದಿದಾನೋ

ಕೊರಳಲ್ಲಿ ರುದ್ರಾಕ್ಷಿ ಉರಗನಾ ಆಭರಣ
ಮರುಳ ಸಿದ್ಧನ ಬಳಿಗಿ ಬಂದಿದಾನೋ

ಉಂಡವಿದ್ದ ಬಾಲದ ಲಿಂಗದ ಬಳಿಯಲ್ಲಿ ಮಂಡಿಸಿ
ಇದ್ದ ಮರುಳನ ಕಂಡೋ ಶಂಕರನೋ

ಗುಂಡಗೊಪ್ಪರಿ ಹೊತ್ತು ಕೆಂಡದಂಥಾ ಗುರುನಾ
ಕಂಡು ಸಿದ್ಧರಾಮ ಅಂದಿದಾನೋ

ಹಸಿವೆ ನೀರಡಿಕೆಯಿಂದಾ ಬಳಲುವೆ ನಾನಯ್ಯ
ಶಿಶುವಿಗೆ ಭಿಕ್ಷವ ಬೇಡಿದ್ದಾನೋ

ಗುರುವಿನ ಶಬುದಾ ಕೇಳಿ ಸಿದ್ಧರಾಮ
ತಾನು ಕರವ ಮುಗಿದು ತಾನು ಬೇಡಿದಾನೋ

ಆಶನ ಆಯಿತು ಆಗಳೆ ಉಂಡಿನಪ್ಪ ಹುಸಿ ಅಲ್ಲೋ
ಕೇಳೊ ಎನ್ನ ಮಾತವನೋ

ತರುಳನ ಮುಖಾ ನೋಡಿ ಅಂತಾನು ಗುರು ಹರಾ
ಮರಳಿ ಮನಿಗಿ ಹೋಗ ಅಂತ ಅಂದಿದಾನೋ

ಕರಿತಾರೋ ನಿನಗ ತಾಯಿತಂದಿ ಪ್ರೀತಿಲಿಂದ
ತರಹೋಗೋ ನೀನು ಎನಗ ಬುತ್ತಿಯನೋ

ಬುತ್ತಿಗೆ ಹೋದರೆ ಮತ್ತ ಎನ್ನ ಕರಗಳು
ಅತ್ತಿತ್ತ ಹೋದಾವಾಂತ ನುಡಿದಿದ್ದಾನೋ

ಹೊತ್ತ ಮುಳುಗುವ ವ್ಯಾಳಕ ಕರಗಳು
ಅತ್ತಿತ್ತ ಹೋದಾವು ಅಂತ ಅಂದಿದಾನೋ

 

೨೨ನೆ ಸಂಧಿ
ಗುರುವಿನ ಮಾರ್ಗಪದ

ಮೂರ್ಖನ ಮುಂದ ಅರ್ಥ ಹೇಳಿದರ ವೇದಶಾಸ್ತ್ರ ಏನು ಬಲ್ಲಣ್ಣಾ
ಗುರು ಶಿಕ್ಷಣ ಆಗಿಲ್ಲೋ ನಿನಗಂಣ್ಣೊ

ನೂರುಸಾರೆ ನಿನಗ ಬುದ್ಧಿ ಹೇಳಿದರ ಮಾರಗ ನಿನಗ ತಿಳಿಯದಿಲ್ಲಣ್ಣಾ
ನಮ್ಮ ಗಡಿ ಹ್ಯಾಂಗ ನೀನು ಆದಿಎಣ್ಣೊ

ಕುರುಡನ ಕೈಯಾಗ ಕನ್ನಡ ಕೊಟ್ಟರ ಮಾರಿ ಅದಕ ಏನು ಕಾಣುದಣ್ಣಾ
ಬ್ಯಾರೆ ಪಿತಿ ಗುರುವಿನ ಆಟ ಅಣ್ಣಾ

ಕಿವುಡನ ಮುಂದ ಮಾರ್ಗ ಹಾಡಿದರ ಅದ ಏನ ಕಥಿಯಾ ಕೇಳುದಣ್ಣಾ
ಕತ್ತಿ ಮುಂದ ಹತ್ತಿಕಾಳ ಇಟ್ಟಾಂಗಣ್ಣಾ

ನಾಯಿಯ ಬಾಲ ಲಳಗ್ಯಾಗ ಇಟ್ಟರ ಅಹದ್ಯಾಂಗ ನೆಟ್ಟಗ ಆಗುದಣ್ಣಾ
ಇಂಥ ಸಾಕ್ಷಿ ನನಗ ಎಷ್ಟು ಹೇಳಲಿ ಅಣ್ಣಾ

ತನಗಿಂತ ಬುದ್ದಿವಂತರ ಹಾಡುವರ ಸಂಗಡಾ ವಾದ ಮಾಡಬಾರದಣ್ಣಾ
ನಿಂದಾ ಮಾಡಿದರ ನೀನು ಕೆಟ್ಟಣ್ಣ

ಭಾವ ಬಿಟ್ಟು ಬರಿಕೊಟ್ಟರ ತಮ್ಮ ಮೈಯಾನ ರೋಗ ಹೋಗುವದೇನಣ್ಣಾ
ಸಕ್ಕರಿಕಿಂತ ಸವಿ ಮಾತು ಆಡಣ್ಣಾ

ಸಜ್ಜನರ ಸಂಗತಿ ಗೆಳೆತಾನ ಮಾಡಿದರ ಬುದ್ಧಿ ಜ್ಞಾನ ನಿನಗ ಬರುದಣ್ಣಾ
ನಿನ್ನ ಮನಕ ತಿಳಿದ ನೀ ನಡಿಯಣ್ಣಾ

ನಾ ಹೆಚ್ಚ ನೀ ಹೆಚ್ಚ ಅನಬ್ಯಾಡ ತಮ್ಮಾ ನೀನು ಸುಳ್ಳ ಸಂತಿ ತಿಳಿಯಣ್ಣಾ
ರೇವಣಸಿದ್ಧನ ಪಾದಕ ಹೊಂದಣ್ಣ

 

ಮಾರ್ಗಪದ

ತರಹೋಗೋ ಎನಗಾಗಿ ಬುತ್ತಿಯ ನೀನು
ಕರಗಳನ ಕಾಯುತ ನಾನು ಇರುವುವೆನೋ

ಚಡಪಡಿಸುತ ದೇವ ತಾರಲಾರನೆಂದು
ಗಡಿಬಿಡಿದಾಂವಾ ಉಳಿಸೋ ಪ್ರಾಣವನೋ

ಗುರುವಿನಾ ಶಬ್ದ ಕೇಳಿ ಸಿದ್ಧರಾಮ ತಾನು
ಭರದಿಂದಾ ಮನಿಗಿ ಅವಾ ಬಂದಿದಾನೋ

ಬಂದು ತಾಯಿನ ಕಂಡು ವಂದಿಸಿ ಶರಣೆಂದು
ಇಂದ ಎನ್ನ ಬಳಿಗಿ ಒಬ್ಬಾವ ಬಂದಿದಾನೋ

ಕಂದನೆ ಹಸಿದನೆಂದು ಕಾಡಿದ ಎನಗ ತಾಯಿ ಬಂದೆನು
ಕಟ್ಟಮ್ಮಾ ಅವಗ ಬುತ್ತಿಯನೋ

ಮಗನ ಮಾತವ ಕೇಳಿ ಅತಿಯಾ ಹರುಷನಾಗಿ
ಸುಗ್ಗಲಾದೇವಿ ತಾನು ಎದ್ದಿದಾಳೋ

ಸುಗ್ಗಲಾದೇವಿಯು ಗುರುವಿನಾ ನೆನೆಯುತ
ಬಗೆ ಬಗೆಯಾ ಬುತ್ತಿ ಕಟ್ಟಿದಾಳೋ

ಬಗೆ ಬಗೆಯಾ ನಾಲ್ಕ ತರದ ಬುತ್ತಿಯ ಕಟ್ಟಿದ್ದಾಳೋ
ಮಗನ ಮುದ್ದಾಡಿ ಕಳುಹಿದ್ದಾಳೋ

ಮೂಕ ಮಗನ ಮಾತವ ಕೇಳಿ ಆಗ ಅವರು
ಶೋಕ ಸತಿಪತಿ ಬಿಟ್ಟಿದ್ದಾರೋ

ಇದ್ದ ಬದಿಗಿ ಬುತ್ತಿಯಾ ತಂದಿದಾನೋ
ಸಿದ್ಧರಾಮ ಸದು ವಿನಯದಿಂದ ಬಂದಿದಾನೋ

ಸದು ವಿನಯದಿಂದ ಬುತ್ತಿಯ ಎಣಿಸುದಕ ಬಂದು
ಗುರುವಿನಾ ನೋಡಿದಾ ಸಿದ್ಧರಾಮನೋ

ಅದಕ್ಕಿಂತ ಮೊದಲಿಗೆ ಹೋಗಿದ್ದ ಗುರುವಾ
ಹೆದರಿದಾನೋ ಆಗ ಸಿದ್ಧರಾಮರೋ

ಬುತ್ತಿಯ ತರವುದಕ ನನ್ನನ್ನು ಕಳುಹಿಸಿ
ಎತ್ತ ಹೋದೋ ಸ್ವಾಮಿ ಶಂಖರನೋ

ಹಂತೀಲೆ ಇದ್ದವರನ್ನ ಮತ್ತ ಕೇಳತಾನ
ಎತ್ತ ಹೋದೋ ಗುರುವಾ ಅಂದಿದಾನೋ

ನಿನಗೆಂದು ಬುತ್ತಿಯಾ ಮನಿಗೆ ತರಲಿಕ್ಕೆ ಹೋದೆ
ಘನ ಗುರುವಾ ರೇವಣಸಿದ್ಧೇಶನೋ

ಎನಕ್ಕಿಂತ ಮುಂಚೆ ನೀನು ನುಣಚಿ ಹೋದರ
ಎನಗ್ಯಾವ ಗತಿ ಅಂದೋ ಸಿದ್ಧರಾಮನೋ

ಎಕ್ಕಯ್ಯ ಜೋಗಯ್ಯ ಎತ್ತ ಹೋದೆ ಸ್ವಾಮಿ
ದಿಕ್ಕವ ತೋರಿಸಿರಿ ಅಂದಿದಾನೋ

ದಿಕ್ಕ ತೋರಿಸಿರಪ್ಪ ಅನವುತ ಸಿದ್ಧರಾಮ
ಚಿಕ್ಕ ಬಾಲಕರನ ಕೇಳಿದಾನೋ

 

೨೩ನೆ ಸಂಧಿ

ಕೇಳೊ ಮನುಜಾ ನೀನು ನಿನ್ನ ಗುಣಗಳನ ನೋಡಿ
ಹೊಗಳಿ ಹಿಗ್ಗಲಿ ಬ್ಯಾಡೋ ಕೇಳಿರಿ ಅಂದಿನೋ

ಅರ್ಜುನನ ಕೀರ್ತಿಯೋ ಧರ್ಮರಾಜನ ತಮ್ಮಾ
ಭೀಮಸೇನನ ಧೈರ್ಯ ಎಂಥಾದು ಕೇಳಿರಿ ಅಂದಿನೋ

ಶ್ರೀರಾಮನ ಶೌರ‍್ಯವ ಭರತನ ಅಂತಃಕರಣಾ
ಹರಿಶ್ಚಂದ್ರನ ಸತ್ಯವ ನೋಡ ಅಂದಿನೋ

ದುರ್ಯೋಧನನ ಸಂಪತ್ತನ ದಾನವೇಂದ್ರನ ದಿಟ್ಟತನ
ಬಾಣ ಭೂಪತೆ ಭಕ್ತತಾನ ಕೇಳಿರಿ ಅಂದಿನೋ

ಇಂಥಾವರಲ್ಲಿ ಎಂಥ ಗುಣಗಳು ನೋಡೋ ತಮ್ಮಾ
ಅಂತಾ ಗುಣಗಳ ಹಾಂಗ ಒಂದ ಇಲ್ಲಂದಿನೋ

ಕಾಲಿದಾಸನ ಕವಿತಾನ ಭೋಜರಾಜನ ಜಾಣತನ
ಜನಕರಾಜನ ಬ್ರಹ್ಮ ವಿದ್ಯೆ ನೋಡ ಅಂದಿನೋ

ವಾಲಕಿಯ ಬಲಾ ನೋಡೋ ಕಲಾಂತಕನ ವಿಜಯ ನೋಡೋ
ಹೈ ಹಯರಾಜನ ವೈಭವ ನೋಡಂದನೊ

ನಳರಾಜನ ಸೌಂದರ್ಯ ಗೋರಕ್ಷನ ಸಿದ್ದಿಯಾ
ವ್ಯಾಸ ಋಷಿಯ ಸಕಲ ವಿದ್ಯಾ ನೋಡ ಅಂದಿನೋ

ಶ್ರೀಕೃಷ್ಣನ ಯುಕ್ತತಾನ ಭಗೀರಥನ ಪ್ರಯತ್ನ
ಹಣಮಂತನ ಸಹಾಸ ನೋಡ ಅಂದಿನೋ

ಮಂದ ಬುದ್ಧಿಯ ಮನುಜಾ ನೀನು ಹಿಂದಿನವರ ಗುಣದಾಂಗ
ಸಿಂಹದ ಮುಂದ ನಾಯಿ ಹೊಗಳಿದಾಂಗ ಅಂದಿನೋ

ತಿಳಿದು ನೋಡೋ ತಮ್ಮಾ ಸ್ಥಿರವಲ್ಲೋ ನಿನ್ನ ವೇಗ ತಿಳಿದ
ಮ್ಯಾಲ ಹುರಳಿಲ್ಲ ಗುರುಬಲಾ ತಿಳಿ ಅಂದಿನೋ

 

ಮಾರ್ಗಪದ

ದಿಕ್ಕವ ತೋರಿಸಿರಪ್ಪಾ ಅನವುತ ಸಿದ್ಧರಾಮ
ಚಿಕ್ಕ ಬಾಲಕರನ ಕೇಳಿದ್ದಾನೋ

ಚಿಕ್ಕವರೆಲ್ಲ ಅಂತಾರು ಮೂಕ ಸಿದ್ಧರಾಮಗ ದಿಕ್ಕರಿಸುತ
ಅವರು ನಕ್ಕಿದ್ದಾರೋ

ಆತನ ಕಾಣಿವೋ ಮಾತು ಹ್ಯಾಂಗ ಬಂದಾವೋ
ಬೇತವ ತಿಳಿಸಂಥ ಕೇಳಿದ್ದಾರೋ

ಆತನು ಬಂದನು ಎನಗ ಅನ್ನವ ಬೇಡಿದಾಗ
ಮಾತು ಬಂದಾವು ಅಂದೋ ಸಿದ್ಧರಾಮನೋ

ಅಂದ ಮಾತವ ಕೇಳಿ ಎಲ್ಲಾರು ಬೆರಗಾಗಿ
ಚಂದ್ರಶೇಖರ ಶಿವಾ ಅಂಥ ಅಂದಿದಾರೋ

ಮಂದ ಮತಿಗೆ ಶಿವಾ ಸಿಗವೇನೋ
ಇವಗಪ್ಪ ಹಿಂದಕ ಹೊರಳಿ ಅವರು ಹೊಂಟಿದ್ದಾರೋ

ತಿರುಗೆಂದ ಮಾತಿಗೆ ತಿರಗಾವ ನಾನಲ್ಲ
ಕುರುಹ ಎನಗ ಗುರು ತೋರಿಸಿದ್ದಾನೋ

ಪರವುತಗಿಯೊಳಗ ಇರತಿನೊ ನಾ ಯೆಂದು
ಅರವು ತೋರಿಸಿದ ಎನಗ ಅಂದಿದಾನೋ

ಅರವು ತೋರಿಸಿದ ಎನಗ ಅಂದೋ ಸಿದ್ಧರಾಮೇಶಾ
ಪರವೂತದ ದಾರಿ ಯಾವದಂಥ ಕೇಳಿದ್ದಾನೋ

ಪರವೂತದ ದಾರಿ ಅವರು ತೋರಿಸುತ ಅಂತಾರು
ಸೂರ್ಯನಾ ಎದುರಿಗೆ ನೀನು ಹೋಗಂದಾರೋ

ಸೂರ್ಯಗೆ ಎದುರಾಗಿ ಅರವತತು ಗಾವೂದ ಇರುವದು
ನೋಡಪ್ಪ ಶ್ರೀ ಶೈಲನೋ

ಅಲ್ಲಿರುವ ಶ್ರೀ ಗಿರಿಯ ಮಲ್ಲೇಶಲಿಂಗಕ್ಕ ನಾನು
ಇಲ್ಲಿಂದಾ ಬುತ್ತಿಯ ಒಯ್ಯವನೋ

ಸಲ್ಲಿಸಿ ಅರ್ಪಣಾ ಮಾಡಿ ಬರುವೆನೋ ನಾನು
ಈಗ ಮೆಲ್ಲನೆ ತೆರಳಿದಾನೋ ಸಿದ್ಧರಾಮನೋ

ನಡೆದು ಮುಂದಕ ಹೆಜ್ಜೆ ಇಡವೊತ ನಡದಾನು
ಮುತ್ಯಾ ನೀನೇ ಗತಿ ಗುರುವಾ ಅಂದಿದಾನೋ

ಸಡಗರದಿಂದಾ ಬುತ್ತಿಯ ಸಾವರಿಕೊಂಡಾನು
ನಡೆದಾನು ಶ್ರೀಶೈಲಕ ಸಿದ್ಧರಾಮನೋ

ಇಲ್ಲಿಗಿ ಒಂದು ಶಿವಾ ಶಿವಾ ಸಂದೋ ಹಾಡಿದರ
ಪದ ಮುಂದ ಅಂದಿನೋ

 

೨೪ನೆ ಸಂಧಿ
ಮಾರ್ಗಪದ

ಸಡಗರದಿಂದ ಬುತ್ತಿ ಸಾವರಿಸಿಕೊಂಡು ತಾನು
ನಡದಾನು ಶ್ರೀಶೈಲಕ ಸಿದ್ಧರಾಮನೋ

ಬರಗಾಲು ಬಿಸಲೊಳು ಉರಿತಾವು ಅಂಗಾಲು
ಇರತಾವು ಹುಲಿ ಕರಡಿ ಮಿಕಗಳನೋ

ಬಿರುಗಾಳಿಯೊಳೆಗ ಬಾಯಿ ತೆರದಾವು ಮೃಗಗಳು
ಹರಿತಾವು ಅಲ್ಲಿ ಹೊಳೆ ಹಳ್ಳಗಳೋ

ಇಂಥಾದ ದಾರಿಯೊಳಗ ಅಂತಾನ ಸಿದ್ಧರಾಮ
ಚಿಂತೆ ಇಲ್ಲದೆ ಗುರುವಿನ ನೆನದಿದಾನೋ

ಚಿಂತೆ ರಿಲ್ಲದೆ ಸಿದ್ಧರಾಮ ಬರುವ ದಾರಿಯ ಒಳಗ
ನಿಂತತ ಅಲ್ಲಿ ಒಂದು ಹುಲಿಯವನೋ

ಎನೆಲೋ ಬಾಲಿಕಾ ಎಲ್ಲಿಗೆ ಹೋಗುವ ನೀನು
ನೀನ್ಯಾವ ದೆಶೆಯಿಂದಾ ಇಲ್ಲಿಗಿ ಬಂದಿಯೋ

ಮಾನವರಿಲ್ಲದ ಕಾನನದೊಳಗ ನೀನು ಏನು
ಕಾರಣಾ ಇಲ್ಲಿಗೆ ಬಂದಿದಿಯೋ

ಹುಲಿರಾಜಾ ಕೇಳೋ ಚೆಲುವಾ ಶ್ರೀ ಗಿರಿಮಲ್ಲಾ
ಸಲಿಸೆಂದು ಕೇಳ್ಯಾನೋ ಎನಗ ಭಿಕ್ಷೆಯನೋ

ಘಳಿಗೆ ತಡವಾಗದೆ ನಿಲ್ಲದೆ ಹೋಗುವೆ ಅಂದು
ಬಳಿಗೆ ನಾನು ಹೋಗಿ ಉಣಸುವೆನೋ

ಅಂದ ಮಾತವು ಕೇಳಿ ನೊಂದ ಹುಲಿರಾಜಾ
ಕಂದನ ಬೆನ್ನಹತ್ತಿ ಹೊಂಟಿದಾನೋ

ಮುಂದಕ ಸಾಗಿಸಿ ಮುಂದಕ ತಿರುಗುತ
ಅಲ್ಲಿಂದಾ ಶ್ರೀ ಶೈಲಕ ನಡದೋ ಸಿದ್ಧರಾಮ

ಬರುವಾಗ ಸಿದ್ಧರಾಮ ಕರಡಿಯ ಕಂಡನೋ
ತರುಬಿ ಅದನು ಸಿದ್ಧರಾಮ ಕೇಳಿದಾನೋ

ಪರವೂತ ದಾರಿ ಅರಹುಬೇಕೋ ಅಂದು ಕರಡಿ
ರಾಜಗ ಸಿದ್ಧರಾಮ ಕೇಳಿದ್ದಾನೋ

ಎಲ್ಲಿಯ ಪರವುತಾ ಇಲ್ಲಿಗ್ಯಾತಕ ಬಂದಿದಿಯೋ
ಕೊಲ್ಲುವವೋ ಇಲ್ಲಿ ನಿನ್ನ ಮೃಗಳನೋ