ವಚನ :

ಕಂದುಗೊರಳಗ್ಹೇಳತಾಳ ಪಾರ್ವತಿ, ಶರಣರ ಕಿಮ್ಮತ್ತು ತಿಳಿಯದೆ ಆಡಿದೆ ಹುಸಿ ಮಾತಾ. ಕಳೆಯಬೇಕು ನನ್ನ ದುರ‍್ಮತ. ತಿಳಿಯದಿದು ಕರುಣ ನಮ್ಮ ಮೇಲೆ ಮಮತಾ. ಶರಣರಲ್ಲಿ ನೀಚತನವಿರದಿದ್ದು ನಿಜವು. ಶರಣರ ಪ್ರಾಣವೇ ನಿನ್ನ ಪ್ರಾಣ. ನಿಮ್ಮ ಶರಣಂಗೆ ಶರಣು. ತ್ರಾಹಿ ತ್ರಾಹಿ ತ್ರಾಹಿ ಶಿವ ಕಾಯೋ ದಯಾನಿಧಿ ಕರುಣದಿಂದ ಕಾಯೋ ಎನ್ನ. ಕರುಣದಿಂದ ಕಾಯೋ ಪರಿಪೂರ್ಣ. ಆಯತಾಕ್ಷ ನಿಮ್ಮವಳನ್ನಾ.

ಪದ :

ಕರುಣದಿ ಶಂಕರ ಕರೆದು ಪಾರ್ವತಿಗೆ
ಹರುಷ ತೋರಿದನು ಆಕ್ಷಣ
ಹರುಷ ತೋರಿದನು ಆಕ್ಷಣ | ಇಂಥ
ಶರಣರ ಕಥೆಯೊಳಗಿನ ಕವನ       || ೧೮ ||

* * *

 

ವೀರಗಾರರು

ವೀರಗಾರರು ಬಂದಾರಪ್ಪ
ಧೀರರಾಗಿ ಇಲ್ಲೆ ನಿಂತಾರೊ
ಧೀರರಾಗಿ ಇಲ್ಲೆ ನಿಂತಾರಪ್ಪ
ಸೂರನಾಗಿ ಪದಹೇಳು

ಸೂರನಾಗಿ ಪದ ಹೇಳುವೆ ಸ್ವಾಮಿ
ಹಾಡುವನ ಮೇಲೆ ದಯವಿರಬೇಕು
ಹಾಡುವನ ಮೇಲೆ ದಯವಿರಬೇಕು ಸ್ವಾಮಿ
ಅಡ್ಡದಾಗಿ ಅಲ್ಲಂತ್ಹೇಳು

ಸುಳ್ಳರ ಹೇಳತೀವಿ ಕರೇನರ ಹೇಳತೀವಿ
ನಮ್ಮ ತಪ್ಪು ನಿಮ್ಮ ಮ್ಯಾಲಯ್ಯ
ನಮ್ಮ ತಪ್ಪು ನಿಮ್ಮ ಮ್ಯಾಲೆ ಹಾಕಿ
ದೈವಕ ಸಲಾಮ ಮಾಡತೀವರಿ

ದೈವವೆಂದರೆ ದೇವರಪ್ಪ
ದೈವಕ ಮಿಕ್ಕಿದವನ್ಯಾರೇಳು
ಕಾಲಾಗ ಗೆಜ್ಜಿ ಕಟ್ಟ್ಯಾರಪ್ಪ
ಟೊಂಕಕೆ ಡೊಳ್ಳು ಬಿಗಿದಾರೊ

ಟೊಂಕಕೆ ಡೊಳ್ಳು ಬಿಗಿದಾರಪ್ಪ
ಕೈಮಾಡಿ ಪದ ಹೇಳುವರು
ಕೈಮಾಡಿ ಪದ ಹೇಳುವೆ ಸ್ವಾಮಿ
ಹಾಡ ಮೇಲೆ ದಯವಿರಬೇಕು

ಹಾಡ ಹಾಡಿದರ ಬಾಯಾಕ ತಗಿತೀರಿ
ನೀವೊಂದು ಸವಾಲು ಹೇಳಯ್ಯ

 

ಏಳುಕೊಳ್ಳದ ಎಲ್ಲಮ್ಮ

ಭಕ್ತಿವಂತರೆಲ್ಲ ಸಿಸ್ತಿಲೆ ಕೂಡಿರಿ
ಚಿತ್ತಿಟ್ಟ ಕೇಳಿರಿ ಕತಿ ಒಂದ |
ಏಳುಕೊಳ್ಳದ ರೇಣುಕೆ ಮಹಾತ್ಮೆಯ
ಕತಿ ಹೇಳುವೆ ನಾ ನಿಮ್ಮುಂದಾ               || ೧ ||

ಒಂದು ದಿವಸ ವೈಕುಂಠ ಲೋಕದೊಳು
ಶೇಷಶಾಹಿಯಾದ ಮುಕ್ಕುಂದ |
ಚಿಂತಿಯಿಲ್ಲದೆ ಸಂತೋಷದಿಂದ
ಶೇಷನ ಮ್ಯಾಲ ಮಲಗಿದ್ದ           || ೨ ||

ಸಿರಿದೇವಿಯು ಸೇವೆಯ ಮಾಡುತ
ಪಾದವನೊತ್ತುತ ಮುದದಿಂದ |
ಲಕ್ಷ್ಮಿದೇವಿಯು ಪತಿಗೆ ಕೇಳತಾಳ
ತನ್ನ ಮನದಾನ ಮಾತೊಂದ                 || ೩ ||

ಇಬ್ಬರ ಒಳಗ ಯಾರು ಶ್ರೇಷ್ಠರು
ಎಂಬುದು ಹೇಳಿರಿ ನನ್ನ ಮುಂದ |
ನನಕಿಂತ ಶ್ರೇಷ್ಠರು ಜಗದೊಳಗ್ಯಾರಿಲ್ಲ
ವಿಷ್ಣು ಲಕ್ಷ್ಮಿಗೆ ಹೇಳಿದ                || ೪ ||

ಮಧುಕೈಟಭ ಸೋಮಕಯಗ್ರಿವ
ದುಷ್ಟ ರಕ್ಕಸರನು ನಾ ಕೊಂದೆ |
ಹಿರಣಾಕ್ಷ ಹಿರಣ್ಯಕಶಪ
ಮಣ್ಣು ಮುಕ್ಕಿದಾರ ನನ್ನಿಂದ                  || ೫ ||

ಅಂದಮ್ಯಾಲ ಯಾರು ಶ್ರೇಷ್ಠರೆಂಬುದು
ತಿಳಿದುನೋಡ ಲಕ್ಷ್ಮಿ ನೀ ಮುಂದಾ |
ರಕ್ಷಕನೆಂಬ ಬಿರುದನು ನಾನು
ಧರಿಸಿ ಬಂದೆನು ಆದಿಯಿಂದ                  || ೬ ||

ನಿನಕಿಂತ ನಾನು ಶ್ರೇಷ್ಠ ಇರುವೆನು
ಕೇಳಬೇಕ ನೀ ಮುಕ್ಕುಂದ |
ತ್ರಿಮೂರ್ತಿ ನೀವು ಕೂಸ ಇರುವಾಗ
ಮೊಲೆಯುಣಿಸಿದೆನು ಮುದದಿಂದಾ           || ೭ ||

ಮಹಿಷ ಶುಂಭ ನಿಶುಂಭ ರಕ್ತಬೀಜ
ಸಂಹಾರ ಆದದ್ದು ಯಾರಿಂದಾ |
ಆದಿಶಕ್ತಿಯೆಂಬ ಬಿರುದನು ಧರಿಸಿ
ಜಗದೊಳು ಆದೆನು ಪ್ರಸಿದ್ಧ                    || ೮ ||

ಅಂದಮ್ಯಾಲ ಯಾರು ಶ್ರೇಷ್ಠರೆಂಬುದು
ನೋಡಿಕೊಳ್ಳಬೇಕ ನೀ ತಿಳಿದಾ |
ನಾ ಹೆಚ್ಚ ನೀ ಹೆಚ್ಚ ಅನ್ನುತ ಇಬ್ಬರು
ಜೋರಿಲೆ ನಡಿಶ್ಶಾರು ವಾಗ್ವಾದ              || ೯ ||

ವಚನ :

ಕೇಳ ಶಾಹಿರ, ವೈಕುಂಠ ಲೋಕದಾಗ ಲಕ್ಷ್ಮಿ-ನಾರಾಯಣರದು ನಡಿವಂಥ ವಾದಾ. ಆಕಾಶಮಾರ್ಗದಿಂದ ಹೋಗುವ ನಾರದನು ಕೇಳಿದಾ. ಇವರಿಬ್ಬರ ನ್ಯಾಯದಾಗ ತಾ ಹೋಗಬೇಕೆಂದಾ. ವೈಕುಂಠಕ್ಕೆ ಹೋಗಿ ನ್ಯಾಯದ ಬೀಜಾ ಊರಿದಾ. ಇದರಲ್ಲಿ ಯಾರ‍್ಯಾರು ಏನೇನು ಮಾಡುವಿರಿ ಅಂತಾ ಕೇಳಿದಾ. ಆಮ್ಯಾಲೆ ನಿರ್ಣಯ ಹೇಳತೇನಂತ ವಚನ ನೀಡಿದಾ. ವಿಷ್ಣು ಲಕ್ಷ್ಮಿಯರು ಮಾಡಿದ ಕೀರ್ತಿಯ ಹೇಳಿದಾರ ಒಳೆಪಸಂದಾ.

ಪದ :

ಇಬ್ಬರು ಮಾಡಿದ ಕೀರ್ತಿಯ ಕೇಳಿ
ಹುಸಿನಗಿ ನಗುತ ನಾರದನು |
ಲೋಕ ಕಲ್ಯಾಣ ಮಾಡುವ ಸಲುವಾಗಿ
ಅಕಲ ಹಾಕಿದಾನ ನಾರದನು       || ೧೦ ||

ರಕ್ಷಣೆ ಮಾಡಿದ ವಿಷ್ಣು ನಿನಗೆ
ಸಹಾಯ ಮಾಡಿದವನ ಹೆಸರೇನು |
ನನಗ್ಯಾರು ಸಹಾಯ ಮಾಡಿಲ್ಲ ನಾರದಾ
ತಿಳಿದು ಕೇಳತಿದಿ ನನ್ನನ್ನು || ೧೧ ||

ಸುದರ್ಶನ ಚಕ್ರದ ಸಹಾಯದಿಂದ
ದೈತ್ಯರೆಲ್ಲರನು ಕೊಂದಿ ನೀನು |
ಚಕ್ರ ಇಲ್ಲದಿದ್ರ ವಿಷ್ಣು ನಿನ್ನನು
ಯಾರ ಕೇಳತಿದ್ರು ಅಂದಾನು       || ೧೨ ||

ಇಷ್ಟ ಕೇಳಿ ಚಕ್ರ ಹೆಮ್ಮಿಯಲಿಂದ
ಗಿರಗಿರ ತಿರುಗುತ್ತ ನಿಂತಿಹನು |
ತಿರುಗುವ ಚಕ್ರವ ನೋಡಿದ ವಿಷ್ಣು
ಸಿಟ್ಟು ಬೆಂಕ್ಯಾಗಿ ಅಂದಾನು         || ೧೩ ||

ಭೂಲೋಕದೊಳಗ ಮಾನವನಾಗಿ
ಹುಟ್ಟಿ ಬಾ ಹೋಗು ನೋಡುವನ |
ಸಾವಿರ ಭುಜಗಳ ಶಕ್ತಿಯ ತಾಳಿ
ಕಾರ್ತವೀರನಾಗಿ ಜನಿಸಿದನು       || ೧೪ ||

ಆದೆಂಥ ಸುದ್ದಿಯ ನೋಡಿ ನಾರದಾ
ಕೈಲಾಸಪತಿ ಮುಂದ ಹೇಳಿದನು |
ಕೈಲಾಸಪತಿಯು ಪಾರ್ವತಿ ಸಹಿತ
ಭೂಲೋಕದಲ್ಲಿ ಬಂದಿಹನು          || ೧೫ ||

ರಾಮಶೃಂಗ ಪರ್ವತದೊಳು
ಜಮದಗ್ನಿ ಋಷಿಯಾಗಿ ಇರುತಿಹನು |
ಹಣೆಯ ಮ್ಯಾಲೊಂದು ಕಣ್ಣನು ಧರಿಸಿ
ತಪಶ್ಚರ್ಯವ ಮಾಡುವನು          || ೧೬ ||

ಭರತಖಂಡದ ಉತ್ತರ ಭಾಗದಿ
ಕಾಶ್ಮೀರವೆಂಬ ದೇಶವನು |
ರೇಣುಕನೆಂಬ ಅರಸನು ಇರುವನು
ಕಾಳಿಕಾದೇವಿಯ ಭಕ್ತನು   || ೧೭ ||

ಅರಸರ ಭಕ್ತಿಗೆ ಮೆಚ್ಚಿ ಕಾಳಿಕಾ
ಕೊಟ್ಟಾಳ ಪುತ್ರಿಯ ದಾನವನು |
ಪಾರ್ವತ ದೇವಿಯು ಜನಿಸಿ ಬಂದಳು
ರೇಣುಕೆಯೆಂಬ ನಾಮದಲಿ || ೧೮ ||

ವಚನ :

ಕೇಳ ಶಾಹಿರ, ರೇಣಿಕಾದೇವಿ ತಂದೆಯಾದ ರೇಣಿಕರಾಜನು ಬಹಳ ಅಕ್ಕರತೆಯಿಂದ ಪಾಲನೆ ಮಾಡುತ್ತಿದ್ದನು. ರೇಣುಕೆಯು ದೊಡ್ಡವಳಾದ ಮೇಲೆ ರಾಜನು ತಕ್ಕ ವರ ಇಲ್ಲವೆಂದು ಚಿಂತಿಮಾಡುತ್ತಿದ್ದನು. ಒಂದು ದಿವಸ ನಾರದ ಅಲ್ಲಿಗೆ ಬಂದಾನು. ರೇಣುಕೆಗೆ ತಕ್ಕ ವರ ಜಮದಗ್ನಿ ಋಷಿಯೆಂದು ಅರುಹಿದನು. ರೇಣುಕ ರಾಜನು ಮಗಳನು ಕರಕೊಂಡು ಜಮದಗ್ನಿ ಹಂತ್ಯಾಕ ಬಂದಾನು.

ಪದ :

ಜಮದಗ್ನಿ ಕಂಡು ರೇಣುಕರಾಜನು
ಬಂದ ಅರಿಕೆಯ ತಿಳಿಸಿದನು |
ಗಾಂದರ್ವ ವಿವಾಹ ಆಗಲಿಯೆಂದು
ಜಮದಗ್ನಿ ಋಷಿಯು ಹೇಳಿದನು     || ೧೯ ||

ತೆಲಿಗೆ ಎಣ್ಣಿಯ ಹಚ್ಚಿ ರೇಣುಕಾ
ಕುಂಡಲ ಸ್ನಾನವ ಮಾಡೆಂದನು |
ತರುಣಿ ತೀರ್ಥದಿ ಸ್ನಾನ ಆದಮ್ಯಾಲ
ಎಣಿಗೊಂಡ ಅಂತ ಕರೆದಿಹನು      || ೨೦ ||

ಗಾಂದರ್ವ ವಿಧಿಯಂತೆ ಲಗ್ನ ಆದಮ್ಯಾಲ
ಸುಖದಿಂದ ಸಂಸಾರ ನಡಿಸಿದನು |
ಸುಲೋಚನ ಉಲೋಚನ ಬ್ರಿಲ್ಲೋಚನ ರಾಮ
ನಾಲ್ವರು ಮಕ್ಕಳ ಪಡದಿಹನು       || ೨೧ ||

ಸಾಕ್ಷಾತ್ ವಿಷ್ಣು ಜಮದಗ್ನಿ ರೇಣುಕಾಗ
ರಾಮನಾಗಿ ಜನ್ಮತಾಳಿದನು
ಜನನಿಜನಕರಿಗೆ ಬೇಕಾಗಿ ರಾಮಾ
ಸಕಲ ವಿದ್ಯವ ಗಳಿಸಿದನು || ೨೨ ||

ಒಂದು ದಿವಸ ಆ ಕಂದ ರಾಮನು
ತಂದೆಗೆ ವಂದಿಸಿ ಪೇಳಿದನು |
ತಂದೆಯೆ ನಾನು ತಪವ ಮಾಡಲು
ವಿಂದ್ಯಾದ್ರಿಗೆ ಹೋಗುವೆನು || ೨೩ ||

ಹೋಗುವಾಗ ರಾಮ ಜನನಿ ಜನಕರಿಗೆ
ರಾಮವೆಂದರೆ ನಾನು ಬರುವೆನು |
ತಂದೆತಾಯಿಯ ಅಪ್ಪಣೆ ಪಡೆದು
ವಿಂದ್ಯಾದ್ರಿ ಗುಡ್ಡಕ ನಡಿದಾನು       || ೨೪ ||

ಏಕನಿಷ್ಟದಿಂದ ಕಠಿಣ ತಪವ ಮಾಡಿ
ನೀಲಕಂಠನನು ಒಲಿಸಿದನು |
ಏನು ವರಗಳ ಬೇಡುತಿ ರಾಮಾ
ಬೇಡಿದ ವರಗಳ ಕೊಡುವೆನು       || ೨೫ ||

ಸಕಲ ವಿದ್ಯವ ಪಾಲಿಸು ದೇವ
ಅದರಿಂದ ಸಂತುಷ್ಟನಾಗುವೆನು |
ಮಹದೇವ ತಾನು ವಿಚಿಯಾರಮಾಡಿ
ರಾಮಗ ವರಗಳ ಕೊಡಿತಿಹನು      || ೨೬ ||

ಒಂದು ಪರಶು ಒಂದು ಧನುಷ್ಯವನ್ನು
ಧರಿಸಬೇಕೆಂದ ನೀನಿನ್ನು |
ಇಂದಿನಿಂದ ನೀನು ರಾಮನಲ್ಲ
ಪರುಶುರಾಮನಂತೆ ಕರೆಯುವೆನು  || ೨೭ ||

ನನ್ನ ಅವತಾರ ಎಂದು ಮುಗಿಸಬೇಕು
ಹೇಳಬೇಕಪ್ಪ ತಂದೆ ನೀನು |
ಧನುಸ್ಸು ಮುರಿದರೆ ನಿನ್ನ ಅವತಾರ
ಮುಗಿಯಿತೆಂದ ಶಿವ ಹೇಳಿದನು     || ೨೮ ||

ವಚನ :

ಕೇಳ ಶಾಹಿರ, ಶಿವನಿಂದ, ವರಗಳ ಪಡೆದ ಪರಶುರಾಮನು ಸಹ್ಯಾದ್ರಿ ಪರ್ವತಕ್ಕೆ ಬಿರಿಬಿರಿ ಬಂದಾನು. ಸಕಲ ವಿದ್ಯಕ ಅಧಿಪತಿಯಾದ ಗಜಾನನು ಅಲ್ಲಿ ವಾಸಮಾಡುತ್ತಿದ್ದನು. ನನಗ ಸಕಲ ವಿದ್ಯೆ ಕಲಿಸಬೇಕಂತ ಪರಶುರಾಮ ಕೇಳಿದನು. ಒಳ್ಳೇದು ಅಂತ ಗಣಪತಿಯು ವಚನವನ್ನು ನೀಡಿದನು. ವಿದ್ಯೆ ಕಲಿಯುತ ಪರಶುರಾಮನು ಗಣಪತಿ ಹಂತ್ಯಾಕ ಉಳಿದನು.

ಪದ :

ಮಲಪ್ರಭಾ ನದಿಯ ನೀರಿನಿಂದ
ಆಚಮನ ಮಾಡುತ್ತಿದ್ದ ಋಷಿವರದನು |
ಸೂರ್ಯನಿಲ್ಲದ ಸಮಯದಲ್ಲಿ
ರೇಣುಕೆ ತರತಿದ್ಲ ನೀರನ್ನು || ೨೯ ||

ಬೆಳಕು ಆಗೇತಂತ ರಾತ್ರಿ ಸಮಯದಿ
ಹಿಡಿದಾಳು ಮಲಪುರಿ ದಾರಿಯನು
ನದೀಗೆ ಬಂದು ದಂಡಿಲೆ ನಿಂತು
ನೋಡ್ಯಾಳು ಗಂಧರ್ವ ಸ್ತ್ರೀಯರನು || ೩೦ ||

ತನ್ನ ಸ್ತ್ರೀಯರೊಳು ಚಲ್ಲಾಟ ನಡಸಿದ್ದ
ಚಿತ್ರರಥನೆಂಬ ಗಂದರ್ವನ |
ಚಲ್ಲಾಟ ನೋಡಿ ರೇಣುಕದೇವಿ
ಚಂಚಲ ಮಾಡ್ಯಾಳ ಮನವನ್ನ      || ೩೧ ||

ತಂದೆಯ ಮನೆಯಲಿ ಇದ್ದಾಗ ನಾನು
ಇಂಥ ವೈಭವ ಕಂಡಿದ್ದೆನು |
ಇಷ್ಟ ಯೋಚನಾ ಮಾಡಿ ರೇಣುಕಾ
ಸಿಂಬಿಗೆ ಹಾಕ್ಯಾಳ ಕೈಯನ್ನಾ       || ೩೨ ||

ಸಿಂಬಿಗೆ ಕೈನು ಹಾಕುವಷ್ಟರಲ್ಲಿ
ಬುಸ್ಸೆಂತ ಎದ್ದನು ನಾಗಪ್ಪನು |
ಗಾಬರಿಯಾಗಿ ಹಿಂದಕ ಸರಿದು
ನೋಡಕಹತ್ಯಾಳ ಕೈಯನ್ನು         || ೩೩ ||

ಕೊಡಕ ಕೈಹಾಕಿದಂಗ
ಕೊಡ ಸೇರಿತು ಭೂಮಿಯನು |
ಕೊಡ ಸಿಂಬಿ ಇಲ್ಲದೆ ರೇಣುಕೆ
ಹಿಡದಾಳು ಆಶ್ರಮ ದಾರಿಯನು     || ೩೪ ||

ಗಾಬರಿಯಾಗಿ ಆಶ್ರಮಕ್ಹೋಗಿ
ಕಂಡಾಳ ತನ್ನ ಪತಿಯನ್ನು |
ಮೊದಲ ಗೊತ್ತಾಗಿ ಜಮದಗ್ನಿ ಋಷಿಯು
ಕೋಪವ ತಾಳಿ ಕುಳಿತಿದ್ದನು        || ೩೫ ||

ಕೊಡ ಸಿಂಬಿ ಎಲ್ಲ ಇಟ್ಟಿದಿ
ಮನದಾಗ ಮಾಡಿದಿ ಏನೇನು |
ಕುಷ್ಟರೋಗ ನಿನಗೆ ತಾಗಲಿ ಎಂದು
ಕೋಪದಿ ಕೊಟ್ಟಾನು ಶಾಪವನು    || ೩೬ ||

ಶಾಪವಹೊಂದಿ ರೇಣುಕದೇವಿಯು
ತಿರುಗುತ ಸೇರ‍್ಯಾಳ ಅಡವಿಯನು |
ಜೋಗುಳ ಬಾವಿ ಸತ್ಯವನ್ಹತ್ತರ
ಕಂಡ ಒಂದು ಕುಟೀರವನು          || ೩೭ ||

ವಚನ :

ಕೇಳ ಶಾಹಿರ, ಯಕ್ಕಯ್ಯ ಜೋಗಯ್ಯರೆಂಬ ಅಣ್ಣ ತಮ್ಮಂದಿರು ಸವದತ್ತಿ ಅರಸರು. ರಾಜ್ಯವನ್ನು ತ್ಯಾಗಮಾಡಿ ಅಲ್ಲಿ ಆಶ್ರಮವನ್ನು ಕಟ್ಟಿಕೊಂಡು ಇರುತ್ತಿದ್ದರು. ಅದರ ಹತ್ತಿರ ರೇಣುಕಾದೇವಿಯು ಹೋಗಿ ಅವರ ಸೇವೆಯನ್ನು ಮಾಡುತ್ತಿರಲು, ಋಷಿಗಳು ಅವಳ ಸೇವೆಗೆ ಮೆಚ್ಚಿ ಉದ್ಧಾರಮಾಡುವ ಕಾಲಕ್ಕೆ ಎಂದು ಹೇಳುತ್ತ –

ಪದ :

ಕಲಿಯುಗದಲಿ ಯಲ್ಲಮ್ಮನೆಂದು
ಕರೆಯುವರೋ ನಿನ್ನನು ಭಕ್ತರು |
ನಿನ್ನ ಭಕ್ತರಿಗೆ ನಮ್ಮಯ ಬಿರುದು
ಬೇಕೆಂದು ಯಕ್ಕಯ್ಯ ಹೇಳಿದನು    || ೩೮ ||

ಇಷ್ಟ ಹೇಳಿ ತಾ ಮುನಿವರನು
ಕೊಟ್ಟಾನ ಬಂಡಾರ ಚೀಲವನು |
ನಿಮ್ಮ ಇಷ್ಟದಂತೆ ಆಗಲಿಯೆಂದು
ರೇಣುಕೆ ಕೊಟ್ಟಾಳ ವಚನವನು      || ೩೯ ||

ಯಕ್ಕಯ್ಯ ಜೋಗಯ್ಯ ಉದ್ಭವೊ ಎಂದು
ಬಾಯಿಲೆ ಅನ್ನುವ ತಾಯಿ ನೀನು |
ಬಾಯಿಲೆ ಅಂದು ರೇಣಿಕಾದೇವಿ
ಬಂಡಾರ ಹಚ್ಚಾಳು ಹಣಿಗಿನ್ನು       || ೪೦ ||

ಅಲ್ಲಿಂದ ಗಂಡನ ಹತ್ತರ ಬಂದು
ಗಟ್ಯಾಗ ಹಿಡಿದಾಳ ಪಾದವನು |
ಸಿಟ್ಟಿಗೆ ಎದ್ದ ಜಮದಗ್ನಿ ಋಷಿಯು
ಮೂರುಮಂದಿ ಮಕ್ಕಳ ಕರಿದಾನು  || ೪೧ ||

ಮೂರುಮಂದಿ ಮಕ್ಕಳ ಕರೆದು ರೇಣುಕಾನ
ರುಂಡ ತಗೀ ಅಂತ ಹೇಳಿದನು |
ಮೂರು ಮಕ್ಕಳ ಮಾತ ಕೇಳಲಿಲ್ಲ
ಸುಟ್ಟುಬೂದಿಯ ಮಾಡಿದನು        || ೪೨ ||

ಪರಶುರಾಮನ ನೆನಸಿ ಜಮದಗ್ನಿ
ಮಗನೆ ಬಾಯೆಂದು ಕರೆದಾನು |
ಮಗನೆ ಬಾಯೆಂದು ಕರೆದು ರೇಣುಕಾನ
ಚಂಡ ಹಾರಿಸುತ ನುಡಿದಾನು       || ೪೩ ||

ತಂದಿಯ ಮಾತನು ಮೀರದಂತ
ತಾಯಿಯ ರುಂಡ ಕಡಿದಾನು |
ಭಪ್ಪರೆ ಮಗನೆ ಪರಶುರಾಮನೆ
ಏನು ಬೇಡತಿ ಬೇಡೆಂದಾನು        || ೪೪ ||

ತಂದಿಯೆ ಎನ್ನ ಅಣ್ಣಂದಿರ
ತಾಯಿಯ ಪ್ರಾಣ ಪಡಿ ಎಂದಾನ |
ಅದರಂತೆ ಆಗಲಿ ಎಂದು ತಂದೆಯು
ಪ್ರಾಣದಾನವ ನೀಡಿದನು  || ೪೫ ||

ಸುಖದಿಂದ ಇರುವಂಥ ಸಮಯದಲ್ಲಿ
ಕಾರ್ತವೀರನೆಂಬ ಅರಸನು |
ಬೇಟೆಯಾಡುತ ಬಂದಾನು
ಜಮದಗ್ನಿ ಪಾದಕ ನಮಿಸಿದನು      || ೪೬ ||

ಜಮದಗ್ನಿ ಪಾದಕ ನಮಿಸಿದನು
ಕಾಮಧೇನು ಒಂದ ನೋಡಿದನು |
ಕಾಮಧೇನು ಒಂದ ನೋಡಿದನು
ನನಗೆ ಕೊಡೆಂದು ಕೇಳಿದನು        || ೪೭ ||

ಜಮದಗ್ನಿ ಪ್ರಾಣವ ಹೀರಿದನು
ಧಾವಿಸಿ ಪರಶುರಾಮ ಬಂದಾನು |
ತಂದೆ ಮೈಮ್ಯಾಲಿನ ಗಾಯವ ನೋಡಿ
ಒಂದೊಂದಾಗಿ ಎಣಿಸಿದನು         || ೪೮ ||

ಗಾಯಗಳಾದದ್ದು ಇಪ್ಪತ್ತೊಂದು
ಅಷ್ಟುಸಾರೆ ಕ್ಷತ್ರಿಯರ‍್ನ ಕೊಂದಾನು
ಕಾರ್ತವೀರನನು ಕಂಡಾನು
ಯುದ್ಧದಲ್ಲಿ ಅವನ ಕೊಂದಾನು      || ೪೯ ||