೨೫ನೆ ಸಂಧಿ

ಗುರು ಅಂದರ ಕೊರಗುದೋ ಜನನಾ ಮರಣ ಬೇರಾ
ಗುರು ಅಂದರ ಸುಡುದು ಭವರೋಗ ಅಂದಿನೋ

ಗುರು ಅಂದರ ಕಂಟಕ ಬೈಲಾಗುವದೋ ತಮ್ಮಾ
ಗುರು ಅಂದರ ಬುದ್ಧಿ ಜ್ಞಾನ ದೊರಿಯುವದು ಅಂದಿನೋ

ಹಮ್ಮು ಅಂತಾರ ಬ್ಯಾಡೋ ಸುಮ್ಮನೆ ಕೂತಕೊಂಡು
ಹಾಡೋ ತಮ್ಮ ಗುರುವಿನ ಮಾರ್ಗ ಅಂದಿನೋ

ಅಂಥಿಂಥಾ ದೊಡ್ಡವರು ಯಾವ ಪರಿ ಆಗಿ ಹೋದರು
ಪಂಥ ಮಾಡಿದರ ಆಗುವದೇನ ಅಂದಿನೋ

ನಿಶ್ಚಿಂತ ಆದಂಥಾ ಗುರು ರೇವಣಸಿದ್ಧನು ಸತತ
ಹಾಡೋ ನೀನು ಮಾರ್ಗ ಅಂದಿನೋ

ಬಲ್ಲಾವರಿಗಿ ಇದು ಭಾಳ ಹೇಳುವದೇನು
ಎಲ್ಲಾರಿಗಿ ಗುರು ದೊಡ್ಡಾವ ತಿಳಿರಿ ಅಂದನೋ

ಪಂಚತತ್ವಗಳ ಅರ್ಥ ತಿಳಿಸಿರೆಪ್ಪ ನೀವು
ಈಗ ಪಂಚಮುಖಗಳ ಉತ್ಪತ್ತಿ ಹೇಳರಿ ಅಂದಿನೋ

 

ಮಾರ್ಗಪದ

ಮಲ್ಲೇಶ ಲಿಂಗಕ್ಕ ಬುತ್ತಿಯಾ ಒಯ್ಯುವನೆಂದು
ಎಲ್ಲಾ ಕಥಿಯಾ ಕರಡಿಗೆ ಸಿದ್ದರಾಮ ಹೇಳಿದ್ದಾನೋ

ಬುತ್ತಿಯ ಎಲ್ಲಿಗೆ ಇತ್ತಲ್ಯಾಕ ಬಂದಿದಿಯೋ
ಸತ್ತ ಹೋರಿಯೋ ಅಂದಿತ ಕರಡಿಯವನೋ

ಇತ್ತಿಂದಾ ಹಿಂದಕ ತಿರಗೋ ಬಾಳ ನೀನು
ಉತ್ತರ ಕೊಟ್ಟಿತು ಆಗ ಕರಡಿಯನೋ

ಕರಡಿಯ ಮಾತ ಕೇಳಿ ಮರುಳ ಸಿದ್ಧರಾಮೇಶಾ
ಕರುಗಳನ ಕಾಯುತ ನಾನು ಇರುತಿದ್ದೆನೋ

ಕರುಗಳ ಕಾಯುತ ಇರುವ ಜಾಗದಾಗ
ಪರವುತದ ಮಲ್ಲಯ್ಯ ಬಂದಿದ್ದಾನೋ

ಪರುವುತದ ಮಲ್ಲಯ್ಯ ಬಂದು ಭಿಕ್ಷವ ಕೇಳಿ
ಧರಿಯೊಳಗ ಮಾಯವಾಗಿ ಹೋಗಿದ್ದಾನೋ

ನಾನು ಬುತ್ತಿಯಾ ತರುವರೊಳಗ ಸಿಗದ ಹೋದೋ
ಹೀನ ಮಲ್ಲೇಶನೋ

ಬಾಲನ ಹೆಗಲ ಮ್ಯಾಗ ಹಾಕಿಕೊಂಡು ಕರಡಿ
ಆಗ ಪಲಾಯನ ಮಾಡಿತು ಕರಡಿಯನೋ

ತಿರುಗಂದ ಮಾತಿಗೆ ತಿರಗಾಂವ ನಾನಲ್ಲ
ಗಿರಿಯ ಮಲ್ಲಯ್ಯಾಗ ಹೋಗಿ ಉಣಸುವೆನೋ

ಗಿರಿಯ ಮಲ್ಲಯ್ಯನ ಉಣಿಸುವ ತನಕಾ ಮರಳಿ
ಬರಾಂವ ಅಲ್ಲ ಅಂದೋ ಸಿದ್ಧರಾಮನೋ

ಹಾದಿಯ ಕೇಳಿದರ ನಾಡಮಾತ ನಿಮ್ಮಲ್ಯಾಕೋ
ಅಂದು ನಡಿಯುತ ಹೊಂಟನೋ ಸಿದ್ಧರಾಮನೋ

ಕಲ್ಯಾಣದ ಸೀಮಿಯಲ್ಲಿ ಮಲ್ಲಯ್ಯನ ಜಾತ್ರಗೆ
ಎಲ್ಲಾರು ಉಘೇ ಉಘೇ ಅನವುತಲೋ

 

೨೬ನೆ ಸಂಧಿ

ಹೀನ ಮನುಜಾಗ ಏನು ಹೇಳಿದರೇನೋ
ಮನದಾಗ ಮಶ್ಚರ ಬಿಟ್ಟಿತೆನೋ

ಮಾನವರನು ಕಂಡು ಬೊಗಳಬ್ಯಾಡ ಅಂದರ
ಸ್ವಾನಾಗಿ ಬೊಗಳುದು ಬಿಟ್ಟೆತೇನೋ

ಸುದ್ದ ಹಡಿದರ ನಾವು ನಿದ್ರೆ ಬಂದವರಿಗೆ
ಸಿದ್ದಾಗಿ ಎದ್ದ ಕುಂತ ಕೇಳತೀನೋ

ವೀರ ಅರ್ಜುನಗ ರಣಹೇಡಿ ಅಂದರ
ಸೋಜಿಗವಾಗದೆ ಬಿಟ್ಟತೇನೋ

ನಾರಿ ಪರಿವ್ರತಿಗೆ ಜಾರಿ ಅಂದರ ಸರವರ
ಮನಾ ಅದಕ ಒಪ್ಪಿತೇನೋ

ರೀತಿಗೇಡಿಗೆ ಮಾತನ ಹೇಳಿದರ ಮಾತಿನಲ್ಲಿ
ಅದು ಮನಸಾ ಇಟ್ಟಿತೇನೋ

ನಮ್ಮ ಗುರು ರೇವಣಸಿದ್ಧನ ಮಾರ್ಗವು ಬಿಟ್ಟರ
ನರಕದ ದಾರಿಯು ತಪ್ಪಿತೇನೋ

* * *

 

ಹರಕೆ ಹಾಡು

ಕಲ್ಲಿಗೆ ಕಲ್ಲೆ ಹೊಂದ್ಯಾವ ನಿನಗಂಡಿ ಕೆಬ್ಬಣದಿರಮಳಿ ಜಡಿದಾವ
ಕೆಬ್ಬಿಣದರಿಮಾಳ್ಗಿಗೆ ತಕ್ಕ ಉಕ್ಕಿನ ನೆಲಗಾರವು
ಉಕ್ಕಿನ ನೆಲಗಾರ‍್ಯದ ಮೇಲೆ ಕಾಜಿನ ಕಲ್ಲು ಕಂಬಾವೆ
ಕಾಜಿನ ಕಜಲ್ಲು ಕಂಬಾದ ಮೇಲೆ ಚಿನ್ನದ ಸಿಟಿ ಬೋದೇಳೆ
ಚಿನ್ನದ ಸಿಟಿ ಬೋದಿನ ಮೇಲೆ ರನ್ನದ ತೊಳಿಗಳನೇರ‍್ಯಾವೆ
ರನ್ನದ ತೊಳಿಕಂಬಕೆ ತಕ್ಕ ಬೆಳ್ಳಿಯ ಬಿಗಿ ಜಂತೇಳೆ
ಬೆಳ್ಳಿಯ ಬಿಗಿ ಜಂತೇಳಿನ ಮೇಲೆ ಹವಳದ ಮಳವಂತೇಳೆ
ಹವಳದ ಮಳವಂತಾದ ಮೇಲೆ ಅರಗಿನ ಬರಗಿನ ತೊಪ್ಪಲೆ
ಅರಗಿನ ಬರಗಿನ ತೊಪ್ಪಲ ಮೇಲೆ ಸೀಸದ ಮೇಲ್ ಮುದ್ದೇಳೆ
ಸೀಸದ ಮೇಲ್ ಮುದ್ದಿಗೆ ತಕ್ಕ ಭಂಡಾರದ ಬದಿ ಮಣ್ಣೇಳೆ
ಭಂಡಾರದ ಬದಿಮಣ್ಣಿಗೆ ತಕ್ಕ ಬೆಕ್ಕದಚ್ಚಿನ ಕುಂಬೇಳೆ
ಚೆಲ್ಲದಚ್ಚಿನ ಕುಂಬಿಯ ಕೆಳಗೆ ರನ್ನಾದರುನಾಳಿಗಿ ಇಟ್ಟಾರೆ
ರನ್ನಾ ದರುನಾಳಿಗಿಟ್ಟಾರಪ್ಪ ಬೆಲ್ಲದ ನೀರು ಬಿಟ್ಟಾರೆ
ಬಾಚಿಲೆ ಕೆತ್ತಿದ ಬಾಗಿಲು ತೋಳಿಗೆ ಜೋಡೆಳ್ಡು ಗಿಳಿಗಳ ಹಚ್ಚ್ಯಾರೆ
ಜೋಡೆಳ್ಡು ಗಿಳಿಗಳ ಹಚ್ಚ್ಯಾರಪ್ಪ ಮೇಲೆರಡು ಅರಗಿಣಿ ಹಚ್ಚ್ಯಾರೆ
ಮಲಿಯಮ್ಮ ನಿನ್ನ ಗುಡಿಯಾ ಮುಂದೆ ಸಕ್ಕರಿ ಬಾರಿ ಮರನೇಳೆ
ಸಕ್ಕರಿ ಬಾರಿ ಮರಕ್ಕೆ ನೋಡು ಲೆಕ್ಕವಿಲ್ಲದ ಗಿಳಿಹಿಂಡು
ಲೆಕ್ಕವಿಲ್ಲದ ಗಿಳಿಹಿಂಡಪ್ಪಾ ಪುಕ್ಕವಿಲ್ಲದ ಪಾರವಾಳ
ಪುಕ್ಕವಿಲ್ಲದ ಪಾರಿವಾಳಪ್ಪ ಏನೇನು ಸವಿಗಳ ಮೇದಾವ
ಏನೇನ್ ಸವಿಗಳ ಮೇದಾವಪ್ಪ ಹಣ್ಣು ಹಂಪಲು ಮೇದಾವ
ಹಣ್ಣು ಹಂಪಲು ಮೇದಾವಪ್ಪ ಕಬ್ಬುಕಡಲಿ ಮೇದಾವ
ಕಬ್ಬು ಕಡಲಿ ಮೇದಾವಪ್ಪ ಏನೊಂದು ಹರಕಿ ಕೊಡುತಾವ
ಹಬ್ಬಲಿ ಹಬ್ಬಲಿ ಹಬ್ಬಲಿ ಈಮನಿ ಹೀರಿ ಬಳ್ಲಾಗ್ಹಬ್ಬಲಿ
ಹೀರಿ ಬಳ್ಳ್ಯಾಗ್ಹಬಲಿ ಈಮನಿ ಹಿರೇತನಗಳು ನಡಿಯಲಿ
ಆಗಲಿ ಆಗಲಿ ಈಮನಿತನ ಹಾಗಲ ಬಳ್ಳಾಗ್ಹಬ್ಬಲಿ
ಹಾಗಲ ಬಳ್ಳ್ಯಾಗ್ಹಬ್ಬಲಿ ಈಮನಿ ಹಾಲು ತುಪ್ಪ ಹರದಾಡಲಿ
ಹಬ್ಬಲಿ ಹಬ್ಬಲಿ ಹಬ್ಬಲಿ ಈಮನಿ ಕವಡಿ ಬಳ್ಳಾಗ್ಹಬ್ಬಲಿ
ಕವಡಿ ಬಳ್ಳ್ಯಾಗ್ಹಬ್ಬಲಿ ಈಮನಿ ಗೌಡಿಕಿ ಪಟ್ಟ ನಡಿಯಾಲಿ
ಮಾಳಿಗಿ ತುಂಬಾ ಮಣ್ಯಿಕೆಮ್ಮಾಗಲಿ ಕೊಟಗಿ ತುಂಬಾ ಕ್ವಾರೆಮ್ಮಿ
ಕಟ್ಟಲಿ ಎತ್ತು ಕಟ್ಟಲಿ ಈಮನಿ ಎಂಟೆತ್ತಿನ ಬ್ಯಾಸಾಯ ನಡಿಯಲಿ
ಹಳ್ಳದ ಹೊಲವ ಮಾಡಲಿ ಈಮನಿ ಬನ್ನಿ ಮರ ನೆರಳಾಗಲಿ
ಕಾಮಣ್ಣ ಭೀಮಣ್ಣರೆಂಬೋ ಅಣ್ಣತಮ್ಮಗಳು ಆಗಲಿ
ಗಂಗವ್ವ ಗೌರವ್ವನೆಂಬೋ ಅಕ್ಕತಂಗೇರು ಆಗಲಿ
ನಿಂಗವ್ವ ನೀಲವ್ವರೆಂಬೋ ನೆಗಣ್ಣಿ ನೆಗಣ್ಣ್ಯಾರಾಗಲಿ
ಈ ಊರು ಭಂಡಾರ ಇಳದಾವಪ್ಪ ಮುಂದ್ಲೂರು ಭಂಡಾರೇರ‍್ಯಾವ
ಈ ಊರು ಭಕ್ತರು ಕಳುವ್ಯಾರಪ್ಪ ಮುಂದ್ಲೂರು ಭಕ್ತರು ಕಾದಾರೆ
ಹೊಡಿಯಪ್ಪ ಡೊಳ್ಳು, ಹಿಡಿಯಪ್ಪ ಚತ್ರಿಕಿ,
ನಡಿಯಪ್ಪ ನಮ್ಮ ನಾಡೀಗೆ !
ದೇವರು ಬಂದಾವು ಬನ್ನೀರೇ, ಸ್ವಾಮಿ ಗುರುವು ಬಂದಾವೆ ಬನ್ನೀರೇ.

* * *

 

ಮಂಗಳಾರತಿ

ಮಂಗಲದಾರುತಿ ಬೆಳಗವ್ವಾ ತಂಗಿ
ಜಂಗಮದೇವಗ ನಮಿಸವ್ವಾ
ಅಂಗದ ಕಳಿಯನು ತಿಳಿಯವ್ವಾ ತಂಗಿ
ಗಂಗಾಧರನ ಪಾದಾ ಭಜಿಸವ್ವಾ

ಬಂದಿದಿ ತಪ್ಪನು ಹಿಡಬೇಡಾ
ಅಂದು ಮನದೊಳಗಿಡ ಬೇಡಾ
ದಂದೇವ ಮಾಡುದು ಬಿಡಬೇಡಾ
ತಂಗಿ ಜಿಂದಗಿ ಗರ್ವದಿ ಕುಣಿಬೇಡಾ

ಅರಗಿಳಿಯಂತೆ ನುಡಿಬೇಕ
ತಿರುಗುವ ಚ್ಯಾಳಿ ಬಿಡಬೇಕ
ಪರರೊಳು ವರ್ಮವ ಬಿಡಬೇಕ
ತಂಗಿ ಗುರುವಿನ ಗುಟ್ಟೊಂದರಿಬೇಕ

ತವರಮನಿಯ ಪ್ರೀತಿ ತರವಲ್ಲಾ
ತೋರುವ ಜಗವಿದು ಕರೆ ಅಲ್ಲಾ
ನಾರುವ ದೇಹ ಸ್ಥಿರವಲ್ಲಾ ತಂಗಿ
ಮೋರೆ ಕಟ್ಟಕೊಳೊ ದಿನವಲ್ಲಾ

ಅಗ್ಗದ ಸಿರಿಯು ಸುಡಬೇಡ
ಗುಗ್ಗರಿ ತಿಂದು ಕಾಲ ಕಳಿಬೇಕ
ಗುಗ್ಗರಿ ತಿಂದು ಕಾಲ ಕಾಳಿಬೇಕ
ಹಿಗ್ಗಿ ಶಿವಾನಂದ ನೆನಿಬೇಕ

 

೬೮ನೆ ಸಂಧಿ
ಮಂಗಳಾರತಿಯ ಪದ

ಮಂಗಳಾರುತಿಯ ರೇವಣಸಿದ್ಧಗ ಬೆಳಗುವನೋ
ಮಂಗಳಾರುತಿ ಬೆಳಗುವೆ ನಾನು ಪಂಚಮುಖದ ಪರಮೇಶೂರಗ
ಮಿಂಚು ಮುಕುಟು ಗಿಡಿಯ ಗಂಧ
ಪಂಚ ಪಾರ್ವತಿ ಅರಸಗೋ ಮಂಗಳಾರುತಿಯಾ

ಜರದ ಪೀತಾಂಬರ ಉಟ್ಟ ಪೈಟಣವಾದ
ಸರಸ ಕುಬ್ಬಸ ತೊಟ್ಟು
ಹತ್ತು ಸಾವಿರ ಸ್ತ್ರೀಯರೆಲ್ಲ ಎತ್ತಿ ಪಾಡಿರಿ
ಕರ್ತು ಗುರು ರೇವಣಸಿದ್ಧಗ ಭಕ್ತಿಲಿಂದಾ
ಬೆಳಗಿರಿ ಮಂಗಳಾರುತಿಯಾ

ಜಂಗಮನೇ ತಾನು ತನ್ನೊಳುತಾನು
ಲಿಂಗಪೂಜೆಯನೇ ಅಂಗನಾರಿಯರೆಲ್ಲ
ಶ್ರೀಂಗಾರಾಗಿರಿ ಶಿವನ ಪೂಜೆಗೆ
ತುಂಬ ಕುಮುಟಗಿ ಸಿದ್ಧಲಿಂಗ ಭಕ್ತಿಲಿಂದಾ ಬೆಳಗಿರಿ ಮಂಗಳಾರುತಿಯಾ

ಧರಿಯೊಳಗ ಅಧೀರನು ಭಜಿಸುವ ಭಕ್ತರ ನಿಡ್ಯ ಸಲುವನೋ
ಮೆರೆಯುವ ಕಮಟಗಿಯೆಂಬ ಪುರದೊಳು
ಗುರುವೆ ರೇವಣಸಿದ್ಧ ದೇವಗೋ
ಕರವ ಮುಗಿವೆ ಬಂದಿ ಮುಕ್ತಿ ಕೊಡೋ ಎನಗೆ
ಮಂಗಳಾರುತಿಯ ರೇವಣಸಿದ್ಧಗ ಬೆಳಗುವೆನೋ

 

೬೯ನೆ ಸಂಧಿ
ಮಂಗಳಾರತಿಯ ಪದ

ಆರುತಿ ಬೆಳಗುವೆನೋ ಸಿದ್ದೇಶಾಗ
ಆರುತಿ ಬೆಳಗುವೆನೋ ಸಿದ್ದೇಶಾಗ

ಆರುತಿ ಚೆಳಗುವಿ ನಿರುತ ಸೇವೆಯ ಮಾಡಿ
ಕರ್ತು ಗುರು ಅಲ್ಲಮಪ್ರಭು ದೇವರಿಗೆ ಆರುತಿ

ಸಿಂಧು ಬಲ್ಲಾಳಗ ಒಲಿದವನೋ ಕಂದನಾಗಿ
ಮೊಲಿಯ ಹಾಲವ ಕುಡದವನೋ

ಅಜ ಹರಿ ಹರರಿಗೆ ರೂಪವ ತೋರದವನೋ
ಸರಿ ನಿನಗೆ ಅರಹುದು ಶ್ರೀಗಿರಿ ವಲ್ಲಭನೇ

ವರವೇದ ಶಾಸ್ತ್ರಕೆ ನೆಲಕದಂತ ಏನೇ
ಪರಂಜೋತಿ ಅನಿಸಿದವನೇ

ಕುಮಟಗಿ ಒಡಿಯಾ ಗುರು ರೇವಣಸಿದ್ಧದೇವಾ
ನುಡಿಸೆನ್ನ ಬಾಯಿಂದಾ ನಿನ್ನ ನಾಮವನೋ

ಕೊಡೋ ಎನಗೆ ಮುಕ್ತಿ ನಾನು ಬೇಡುವನೋ
ಆರುತಿ ಬೆಳಗುವೆನೋ ಸಿದ್ಧೇಶಗ