ವಚನ :
ಕೇಳ ಶಾಹಿರ, ಜಮದಗ್ನಿ ಋಷಿಯು ಸತ್ತ ದಿವಸ ಹುಣ್ಣಿಮೆ ಇದ್ದುದರಿಂದ ಅದಕ್ಕೆ ಮುಂದೆ ಕಲಿಯುಗದಲ್ಲಿ ರಂಡಿ ಹುಣ್ಣಿಮೆಯೆಂದು ಅನ್ನುವರು. ಆ ಮುಂದೆ ಪರಶುರಾಮನು ತಂದೆಯ ಪ್ರಾಣ ಪಡೆದುದಕ್ಕೆ ಮುತ್ತೈದಿ ಹುಣ್ಣಿಮೆ ಅನ್ನುವರು. ರಂಡಿ ಹುಣ್ಣಿಮೆಗೆ ಮತ್ತು ಮುತ್ತೈದಿ ಹುಣ್ಣಿಮೆಗೆ ಮೂರು ತಿಂಗಳ ಅಂತರವೆಂದು ಹಿರಿಯರು ಅನ್ನುವರು. ತಂದೆ ತಾಯಿಗೆ ಪರಶುರಾಮನು ಸುಖವಾಗಿ ಸ್ವರ್ಗಕ್ಕೆ ಹೋಗೆಂದನು.
ಪದ :
ಇಷ್ಟ ಮಾತ ಕೇಳಿ ತಾಯಿ ರೇಣುಕಾ
ಪರಶುರಾಮ ಕೇಳ ಮಾತನ್ನು
ನನ್ನ ಭಕ್ತರನು ಬಿಟ್ಟಿರಲಾರೆ
ಸೇರಲಾರೆ ನಾನು ಸ್ವರ್ಗವನು || ೫೦ ||
ನಿನ್ನ ಭಕ್ತರನು ರಕ್ಷಿಪೆನೆಂದು
ತಾಯಿಗೆ ವಚನವ ನೀಡಿದನು |
ಈ ಕೆಲಸ ಮಾತ್ರ ಆಗಲಾರದೆಂದು
ಮಗನಿಗೆ ಹೇಳ್ಯಾಳ ಮಾತನ್ನು || ೫೧ ||
ನಿನ್ನ ಸಲ್ಲು ನನಗ ಬ್ಯಾಡ
ನನ್ನ ಸಲ್ಲು ನಿನಗ ಬ್ಯಾಡೆಂದಾನು
ಇಷ್ಟ ಮಾತ ಆಡಿ ಪರಶುರಾಮನು
ಅಲ್ಲಿಂದ ದಾರಿಯ ಹಿಡಿದಾನು || ೫೨ ||
ಈಗಲು ಗುಡ್ಡದಲ್ಲಿ ನಡಿತೈತಿ ಇಲ್ಲಂತ
ಪರೀಕ್ಷೆ ಮಾಡಿರಿ ನೀವದನು |
ತಾಯಿಯ ಕತಿಯ ಹೇಳಿ ಕೇಳಿದವಗ
ಕೊಡತಾಳ ಪುಣ್ಯದ ಫಲವನ್ನು || ೫೩ ||
* * *
ವೀರ ಗೊಲ್ಲಾಳ
ವಾಲಗಿಡುವನು ಬನ್ನೀರೆ
ಕೈಲಾಸಾದ್ರಿ ನಿವಾಸಗೆ || ೧ ||
ನಾದಬಿಂದು ಕಲಿದಾತನೆ
ವೇದಕ ನಿಲುಕದಾತನೆ || ೨ ||
ಸತ್ಯವಾದ ಶರಣರಡಿಗೆ ನಾ
ವ್ಯರ್ಥಾನಂದದಿ ಕುಣದೇನು || ೩ ||
ಹಾರಿ ಕುಣಿದು ಡೊಳ್ಳು ಬಾರಿಸಿ
ಬೀರನೋಲಗ ಇಡುವುವನು || ೪ ||
ಪೊಡವಿಯೊಳು ದೃಢ ಭಕ್ತ ಗೊಲ್ಲಾಳ
ಬಿಡದೆ ಕುರಿಯ ಕಾಯುವನು || ೫ ||
ಅಡವಿಯಲ್ಲಿ ಕುರಿಯ ಮೇಸಿ
ಮಡದ ನೀರು ತಾ ಕುಡಿಸುವನು || ೬ ||
ಮುಂದಿನವೆಲ್ಲ ಕುರಿಗಳ್ಹೊಡೆದು
ಹಿಂದಿನ ನಾಯಿ ಕರೆಯುವನು || ೭ ||
ಗುಡ್ಡದಂತ ದೊಡ್ಡ ದೇಹ
ಗಡ್ಡ ಮೀಸೆ ಬೆಳಸಿರುವನು || ೮ ||
ಶುದ್ಧ ಮನಸಿನ ಗೊಲ್ಲಾಳ
ಗದ್ದಕ ಕೋಲು ಕೊಟ್ಟಾನು || ೯ ||
ಎಲ್ಲಿ ನೋಡಿದರ ಹರ ಹರನೆಂಬುದು
ಸೊಲ್ಲು ಗೊಲ್ಲಾಳ ಕೇಳ್ಯಾನ || ೧೦ ||
ಇಂದು ಗುಳೆವ ಕಟ್ಟಿಕೊಂಡು
ಮುಂದಕೆಲ್ಲಿ ಹೋಗುವಿರೋ || ೧೧ ||
ಮರುಳನೆಂದು ನಕ್ಕು ಅವರು
ತಿರುಗಿ ಮಾತನಾಡಲಿಲ್ಲವೋ || ೧೨ ||
ಅರುವುಗೆಟ್ಟು ಹೋಗತಾವೆಂದು
ಕುರುಬ ಮನಕ ತಿಳಕೊಂಡಾನು || ೧೩ |
ಹಿಂದ ಬರುವ ಜಂಗಮಯ್ಯನ
ನಂದ ಗೊಲ್ಲಾಳ ಕೇಳ್ಯಾನು || ೧೪ ||
ಇಂದು ಗುಳೆವ ಕಟ್ಟಿಕೊಂಡು
ಮುಂದಕೆಲ್ಲಿ ಹೋಗುವಿರೋ || ೧೫ ||
ಆಗ ನೋಡೋ ಜಂಗಮಯ್ಯ
ಎಲ್ಲ ತಿಳಿಸಿ ಹೇಳ್ಯಾನು || ೧೬ ||
ಮಲ್ಲಿಕಾರ್ಜುನನ ದರ್ಶನಕ
ನಿಲ್ಲದೆ ನಾವು ಹೋಗುವೆವು || ೧೭ ||
ಬೇಡಿದಂತ ವಡವಿಯ ನನಗ
ತಂದುಕೊಡಬೇಕು ಅಂದಾನೋ || ೧೮ ||
ಬಿಂದಿಗಿ ಹೊನ್ನ ಕೊಟ್ಟರ ಲಿಂಗ
ತಂದುಕೊಡತೇನಂದಾನೋ || ೧೯ ||
ದಡ್ಡಿಯಲ್ಲಿ ಹುಗುದ ಹೊನ್ನು
ಅಡ್ಡ ಗಾಳಿಗೆ ತೂರುವನು || ೨೦ ||
ಮಡ್ಡಗರುಬ ದಡ್ಡಿಯಲ್ಲಿ
ಬಿಂದಿಗೆ ಹೊನ್ನ ಎಬ್ಬಿ ಕೊಟ್ಟಾನು || ೨೧ ||
ದುಡ್ಡು ತಗೊಂಡು ಜಂಗಮಯ್ಯ
ದೊಡ್ಡ ಹರುಷವಾಗ್ಯಾನು || ೨೨ ||
ಮಲ್ಲಿಕಾರ್ಜುನನ ದರ್ಶನಕ್ಹೋಗಿ
ತನ್ನ ಹರಕೆಯ ಮುಟ್ಟಿಸ್ಯಾನು || ೨೩ ||
ದುಡ್ಡ ದೊರೆತ ಮಬ್ಬಿನಿಂದ
ಲಿಂಗ ತರುವುದ ಮರತಾನು || ೨೪ ||
ತಿರುಗಿ ಬರುತ ಜಂಗಮಯ್ಯ
ಕುರಬನ ಕಣ್ಣಿಲೆ ಕಂಡಾನು || ೨೫ ||
ಕುರಿಯ ಹಿಕ್ಕಿಯ ತಗೊಂಡು ಜಂಗಮ
ವಲ್ಲಿ ಪದರಲಿ ಕಟ್ಯಾನು || ೨೬ ||
ವೀರ ಗೊಲ್ಲಾಳ ಜಂಗಮನ ಕಂಡು
ತಾರೋ ಲಿಂಗ ಒಂದನ್ನು || ೨೭ ||
ಕುರಿಯ ಹಿಕ್ಕಿಯ ಕೊಟ್ಟು ಜಂಗಮ
ಜಾರಿಕೊಂಡು ತಾ ನಡದಾನು || ೨೮ ||
ಕುರಿಯ ಹಿಕ್ಕಿಯ ಕಟ್ಟಿಯ ಕಟ್ಟಿ
ಅಷ್ಟ ಮೂರುತಿ ಇಟ್ಟಾನು || ೨೯ ||
ವೀರ ಕುರಿಯ ಹಾಲ ಹಿಂಡಿ
ಶ್ರೇಷ್ಠ ಲಿಂಗಕೆ ಎರದಾನು || ೩೦ ||
ಮನೆಗೆ ಹಾಲು ಬಾರದಿರಲು
ಜನಕ ಕೋಪವ ತಾಳ್ಯಾನು || ೩೧ ||
ಹೊಂದಿಕಿಲಿಂದ ಕೊಡಲಿಯ ಪಿಡಿದು
ತರುಳನ ಬಳಿಗೆ ಬಂದಾನು || ೩೨ ||
ಹಿರಿಯ ಕುರುಬ ಲಿಂಗವನು
ಕೆರವುಗಾಲಿಲೆ ಒದ್ದಾನು || ೩೩ ||
ತರುಬಿ ಅವನ ಕೊಡಲಿಯ ಪಿಡಿದು
ತಂದಿಯ ಶಿರವ ಕಡಿದಾನು || ೩೪ ||
ಕುರಿಯ ಹಿಕ್ಕಿಲಿಂದ ಮೆರೆದು
ಗ್ವಾಲಿಗೇರಿ ಲಿಂಗ ಎನಿಸ್ಯಾನು || ೩೫ ||
ಕರುಣದಿಂದ ಅವರಿಗೆ ಮೋಕ್ಷ
ಕೊಟ್ಟ ಜಗದ್ಗುರು ಮಲ್ಲೇಶ್ವರ || ೩೬ ||
* * *
ಬೂದಿಯ ಮಹಿಮೆ
ಬೂದಿಯ ಧರಿಸಿದರ ಹೋದಿತೋ ಭವರೋಗ ಬೂದಿಕಿಂತ ಹೆಚ್ಚಿನದಿಲ್ಲಾ
ಹಂಬಲ ಬಿಟ್ಟು ನಂಬಿಕೆ ಇಟ್ಟರ ಇಂಬಾಗಿ ಕಾಯ್ದಿತೋ ಈ ಬೂದಿ
ತುಂಬಿದ ನದಿಯೊಳು ಅಂಬಿಗನಾಗಿ ದಂಡಿಗೆ ಹಚ್ಚೀತೊ ಈ ಬೂದಿ
ಹುಣ್ಣು ಹುಳಗಳ ಹತ್ತಿ ಹುಚ್ಚಿದ್ದು ತಿರುಗುವಾಗ ನಿಚ್ಚಳಮಾಡಿತು ಈ ಬೂದಿ
ಎತ್ತು ಬಂಡಿಯ ಹೂಡಿ ಹೊಲಕ ಹಾಕಿದರ ಹುಚ್ಚಿದ್ದು ಬೆಳೆದೀತೊ ಈ ಬೂದಿ
ಅಟ್ಟಂತ ಗಡಗಿಗೆ ಪಟ್ಟವ ಬಡಿದರ ಅಮೃತ ಎನಸೀತೊ ಈ ಬೂದಿ
ತಂಬಿಗಿ ತಪ್ಪೇಲಿ ಉಂಡೆಂಜಲ ಗಂಗಾಳ ಮಡಿಮಾಡಿ ಇಡಿಸಿತೋ ಈ ಬೂದಿ
ಹೆಚ್ಚಾಗಿ ಬೂದಿ ಮೈಯಲಿ ಧರಿಸಿದರ ಸನ್ನೇಸಿ ಎನಸೀತೋ ಈ ಬೂದಿ
ಅದ್ವೈತ ಸಮಸ್ತರಿಗೆ ದೂರವೆನಿಸದು ಬೂದಿ ಇದ್ದ ಇದ್ದ ಸಾಧುಗಳಿಗೆ ಈ ಬೂದಿ
ಹಿರೆಹೊಳಿ ದಂಡಿಲಿ ಬಬಲಾದಿ ಅಪ್ಪನವರ ಹಸ್ತದೊಳಾಡಿತೋ ಈ ಬೂದಿ
ಶಿವಭಕ್ತರ ಹೊರತು ಯಾರಿಲ್ಲ ಜಗದೊಳು ಬಸವ ಪುರಾಣಕ ಗನವಿಲ್ಲಾ
ಬಸವಣ್ಣನ್ಹೆಂಡಿ ಭಕ್ತಿಲಿ ತಂದರ ಹಸನ ಆದಾವೋ ನಿಮ್ಮ ಮನಿಮಾರಾ
ಬಸವಣ್ಣನ್ಹೆಂಡ್ತಿ ಇಬೂತಿ ಉಂಡಿ ಎಲ್ಲ ದೇವರ ಮುಂದೆ ಇರುವುದೋ
ಎಲ್ಲ ದೇವರ ಮುಂದೆ ಇರುವುದೋ ಇದು ಸರ್ವಕಾರ್ಯಕೆಲ್ಲ ಬರುವುದೋ
ಸರ್ವಕಾರ್ಯಕೆಲ್ಲ ಬರುವುದೋ ಇದು ಶರಣರ ಹಣಿಮ್ಯಾಲ ಧರಿಸುವದೋ
* * *
ಒಕ್ಕಲಿಗ ಮುದ್ದಣ್ಣ
ಒಕ್ಕಲಿಗ ಮುದ್ದಣ್ಣ ನಡಿಸಿದಾನ
ಧರ್ಮ ಮಾಡದ ಪಂತಾ
ನಿಲವ ಕೊಯ್ಯಕ ಕುಡಗೋಲ ಹಾಕಿದನು
ಜಂಗಮಾಗಿ ಬಂದ ಭಗವಂತ
ಶಿವಾಂತ ನಾವು ಇವತ್ತ ಬಂದೇವು
ಹೊಲ ಬಿಟ್ಟು ನುಗಿಸಿದರತ್ತ
ಕೋದ ಪೆಂಡಿಕಟ್ಟಿ ಹಾಕತಾನ
ಆಗ ಬಂದು ಕೊಟ್ಟಾನಂತ
ಮುದುಕ ಮನುಷ ಎಡತಾಕಲಾರೆ
ನನ್ನ ದಾನ ಮುಂಚೆ ಕೊಡಬೇಕು ಭಕ್ತ
ಕೇಳುದಿಲ್ಲಾ ನೀ ಜೋಳ ಕೊಡತೇನಿ
ಕಡೆಗಣಕ ಬರಹೋಗಂತಾ
ಲಗು ರಾಶಿಮಾಡಿ ಹಗೇಕ ಹೊರತಾನು
ಆಗ ಬಂದ ಕೊಟ್ಟಾನಂತ
ಆಗಿಹೋದವು ಈಗೆಲ್ಲಿ ಸಿಕ್ಕಾವು
ಮನ್ಯಾಗ ನಡಿ ಅಂದ ಮತ್ತಾ
ಮನಿಗಿ ಹೋಗಿ ಮತ್ತೇನ ಹೇಳತಾನು
ಹೋಗಿ ಬಾರ ಉಣತೇನಿ ಹಸ್ತಾ
ಇನ್ನ ಬಂದರಿಗೆಲ್ಲಾ ಹೋಗು ಹೊರಗಾ
ಮುಂದ ಮಾಡಿದನು ಮಸಲತ್ತಾ
ಅತ್ತಂಗ ಮಾಡಿ ಸತ್ತಾನಂದ ಬಿಡು
ಹೇಣತಿಗೆ ಹೇಳಿದ ಮಾತಾ
ಬಂದು ವ್ಯಾಳ್ಯಾಕ ಬಂಡ ಮಾಡತಾಳ
ಸತ್ತಾವೇನ ಕೊಡತಾನಂತಾ
Leave A Comment