ಚೋರ ಬಸವ ಚರಿತ್ರೆ !

ಕಲ್ಯಾಣ ಪುರದೊಳು ನಿತ್ಯಕ ಜಂಗಮರಿಗೆ
ಅನ್ನ ಪ್ರಸ್ತನಿಟ್ಟನು ಬಸವೇಶ್ವರನು             || ೧ ||

ಲಕ್ಷದ ಮೇಲೆ ತೊಂಭತ್ತು ಸಾವಿರ
ಜಂಗಮರಿದ್ದ ಬಸವೇಶ್ವರನು                  || ೨ ||

ಇನ್ನಾರು ಸಾವಿರ ಜಂಗಮರು ಬೇಕೆಂದು
ಯೋಚನೆಮಾಡಿ ಬಸವೇಶ್ವರನು              || ೩ ||

ತೆಪ್ಪಿದ ನಿಜರೂಪಿ ಹಚ್ಚಿದ ವಿಭೂತಿ
ಬೆತ್ತ ಹಿಡಿದು ಬಸವೇಶ್ವರನು                  || ೪ ||

ಅಡ್ಡಗೊಂಗಡಿ ಹೊತ್ತು ಲಿಂಗ ವಸ್ತ್ರವ ಕೋರಿ
ಸಂಗಮನಾದ ಬಸವೇಶ್ವರನು                || ೫ ||

ಗಗ್ಗರಿ ಉಂಗುರ ಜಂಗುಮಲಿಕಿನ ಚೀಲ
ಹೆಗಲಲಿ ಹೊತ್ತ ಬಸವೇಶ್ವರನು               || ೬ ||

ಹಿಂಗೆಲ್ಲ ಹುಡುಕಿದ ಎಲ್ಲಿ ಸಿಕ್ಕಾರೆಂದು
ಆಲೋಚನಾದ ಬಸವೇಶ್ವರನು               || ೭ ||

ಮಾದೇವರಾಜನ ಬಳಿಯಲ್ಲಿ ಜಂಗಮರು
ಇದ್ದಾರೆಂದನು ಬಸವೇಶ್ವರನು                || ೮ ||

ಕಾಲಲಿ ನಡಿದರ ಕಾಮಿಕದೊನಕೆ
ಹ್ಯಾಂಗ ಹೋಗುವದಂದ ಬಸವೇಶ್ವರನು              || ೯ ||

ಮನಸಿಗೆ ತಿಳಿದಾನು ಮಾಯದಲಿ ಒಂದು
ಕ್ಷಣದಾಗ ಹೋದ ಬಸವೇಶ್ವರನು             || ೧೦ ||

ಕಾಮಿಕವನದ ಅಗಸಿ ಬಾಗಿಲ
ಕಾಣೂತಂದ ಬಸವೇಶ್ವರನು                  || ೧೧ ||

ಅಗಸಿಯ ಬಾಗಿಲಿಗೆ ಆಳಿನ ಕಾವಲ
ಇದ್ದಾರೆಂದನು ಬಸವೇಶ್ವರನು                || ೧೨ ||

ಬಂದೇವಿ ಇಲ್ಲೀಗೆ ಮುಂದಿನ ಯತ್ನ ಹ್ಯಾಂಗ
ಹೋಗುವದಂದ ಬಸವೇಶ್ವರನು              || ೧೩ ||

ಇಂಗು ಜೀರಿಗೆ ಮಾರುವ
ಕೋರಿಶೆಟ್ಟಿಯಾದನು ಬಸವೇಶ್ವರನು                  || ೧೪ ||

ಕಂಚು ತಾಂಬರ ಹಿತ್ತಾಳೆ ಕೊಡರ‍್ಹೀಂಗ
ಅನ್ನೂತ ಹೊಂಟ ಬಸವೇಶ್ವರನು             || ೧೫ ||

ಶೆಟ್ಟಿಯ ಕಂಡಾರ ಸಿಟ್ಟೀಲೆ ಕೇಳ್ಯಾರ
ಕೊಟ್ಟವರ‍್ಯಾರ ನಿಗಪ್ಪಣೆಯನು                || ೧೬ ||

ಬಿಟ್ಟಾರು ಎನ್ನೂದು ದೃಷ್ಟಾಂತ ತಿಳಿ ಎಷ್ಟು
ಹೇಳುವೆ ರಾಜನ ಆಜ್ಞೆಯನು                  || ೧೭ ||

ಹೊರಗಿನ ಜನ ಬಂದು ವನದೊಳಗ ಹೊಕ್ಕರ
ಚಾಕರಿ ಕಸಗೊಂಡು ಅಟ್ಟುವನು              || ೧೮ ||

ವನದ ಒಳಗಿನ ಹೈರಿಯಾಕ ಬಿಟ್ಟರೆ
ಅನ್ನುವನು ನಮಗ ಶಿಕ್ಷೆಯನು                 || ೧೯ ||

ಪಕ್ಷಿ ಪಶು ಮೃಗ ವೃಕ್ಷವು ಹೊಕ್ಕರೆ
ಕೋಪಿಸಿ ಕೊಟ್ಟಾನು ಅಪ್ಪಣೆನೂ              || ೨೦ ||

ರಾತರೀ ಹಗಲಿಯು ನಿಂತಲ್ಲೇ ಪಾರವು
ಘಾತಕ ರಾಜ ಭೀತಿಯನು           || ೨೧ ||

ಒಂದಿವಸ ಒಪ್ಪತ್ತು ಅನ್ನುವ ಇಲ್ಲೆಂದು
ಅನುಭವ ಅವರಿಗೆ ಹೇಳಿದನು                 || ೨೨ ||

ಬಿಟ್ಟರೆ ನೀ ಹೋಗಿ ಭೆಟ್ಟಿಯಾದರೆ
ನಿಮ್ಮನ್ನಿಟ್ಟಿದ್ದು ಯಾಕೆಂದು ಕೇಳುವನು                 || ೨೩ ||

ಬಡವರು ಆಡುವ ನುಡಿಗಳು ನಿಶ್ಚಯ
ಬಿಡುವದು ಹ್ಯಾಗೆಂದು ತಿಳಿಯುವನು                   || ೨೪ ||

ಕೇಳಿರಿ ಪಾಲಕರೆ ಹೇಳುವನು ನಮ್ಮ
ಜಾತಿಯು ಆದಿ ಬಣಜಗನು                   || ೨೫ ||

ನಿತ್ಯಕ ಜಂಗಮರು ತಪ್ಪಿದರೆ ನಮ-
ಗನ್ನಕ ಅಪ್ಪಣೆ ಇಲ್ಲನ್ನುವನು                   || ೨೬ ||

ನೀತಿಯ ನಿಷ್ಠಕ್ಕದ ಬ್ಯಾಸರ ಬಳಸಿದರ
ಯಾತಕ್ಕ ಕಲಿಯೊಳು ಹುಟ್ಟುವದು            || ೨೭ ||

ಹಸುವಾಗಿ ಎನ್ನಗ ಅಸುವು ಹಾರುವದು
ಬಕ್ಷೀಸ ಬಿಡಿರೆಂದು ಕೇಳಿದನು                 || ೨೮ ||

ಹಾರೂದು ಹಲ್ಲಾಣ ಮಾಡಿರಿ ಕಲ್ಯಾಣ
ಶಿಶುವಿಗೆ ಸಿಗುವುದು ಪುಣ್ಯವನು              || ೨೯ ||

ಕಳ್ಳ ಅಲ್ಲ ನಾನು ತಳ್ಳಿಸು ಲಗುಮಾಡಿ
ಕೊರಳಲ್ಲಿ ರುದ್ರಾಕ್ಷಿ ಲಿಂಗವನು               || ೩೦ ||

ವಿಶ್ವಾಸ ಕೊಟ್ಟವಗ ವಿಘ್ನವ ತಂದರೆ
ಅಗ್ನಿಯ ಪ್ರವೇಶನಾಗುವೆನು                  || ೩೧ ||

ಹೇಳಿದನಾತಂಗ ಬಂದೀತು ಕರುಣವು
ಜ್ಞಾನಿ ಇದ್ದನು ಒಬ್ಬ ಪಾಲಕನು               || ೩೨ ||

ಕೇಳೋ ಬಣಜಿಗನ್ನಿನ್ನ ಹೇಳು ಪ್ರಲಾಪ ಎನ್ನ
ಕಾಯದೊಳಗಾತು ಕಷ್ಟವನು                 || ೩೩ ||

ಬರುವಂಥ ವಿಘ್ನಕ ಇದುರಾಗಿ ಇರತೇನಿ
ಬಿಡತೇನಿ ಹೋಗೆಂದ ಹಾದಿಯನು           || ೩೪ ||

ಹೋಗಿ ಹೊಳ್ಳಿ ಬರುವಾಗ ನಾಲ್ಕು ಮಂದಿ ಆಳಿಗೆ
ಸ್ವಾಧೀನ ಕೊಡಬೇಕು ನೋಡುವೆನು                   || ೩೫ ||

ಸಂತೋಷ ಒಡಲೊಳು ಸಮುದ್ರ ಸಮನಾಗಿ
ಪ್ರತ್ಯಕ್ಷ ಇದುರಿಗೆ ಈಶ್ವರನು                  || ೩೬ ||

ಶರಣೆಂದು ಕರಮುಗಿದು ಬರುವೆನು ಹೋಗೆಂದು
ವನದೊಳಗ್ಹೊಕ್ಕು ಬಸವೇಶ್ವರನು             || ೩೭ ||

ಮಡಿವಾಳ ಗುರುವಿನ ಮನದಲ್ಲಿ ಸ್ಮರಿಸುವೆ
ಕೇಳರಿ ಮುಂದಿನ್ನು ಹೇಳುವೆನು               || ೩೮ ||

ಮಾದೇವರಾಜನ ವನದಾಗಿನ್ಯಶ್ವರ್ಯಕ
ಆಶ್ಚರ್ಯನಾದ ಬಸವೇಶ್ವರನು               || ೩೯ ||

ಮಲ್ಲೀಗಿ ಮುಳಬಾಜಿ ಬಿಲ್ವ ಪತ್ತರಿಗಿಡ
ಗುಲಾಬಿ ಕಾಮಕಸ್ತೂರಿ ವಾಸನಿನೋ                  || ೪೦ ||

ಸೂರ್ಯಪಾನ ಡೇರೆದ್ದೂ ಚೆಂಕೇಶ್ವರ ದಾಳಿಂಬ್ರ
ಸದರಿ ಒಪ್ಪುವದು ಅಗ್ರವನು                   || ೪೧ ||

ಕ್ಯಾದಗಿ ವನದೊಳು ವಸಂತ ಕಾಲದಿ
ಕೋಗಿಲ ದನಿಗಳ ಕೇಳಿದನು                  || ೪೨ ||

ವಜ್ರದ ಅರಮನಿ ಕನ್ನಡಿ ಹೊಳಿದಾವು
ಕಿರಣ ಸೂರ್ಯನಂಗ ಜ್ಯೋತಿಯನು                   || ೪೩ ||

ಮಂಟಪ ಸಿಂಹಾಸನ ಗದ್ದಗಿಮ್ಯಾಲಿನ್ನ
ವಿರಕ್ತಮುನಿಗಳ ಕಾಣುವನು                   || ೪೪ ||

ಊದುವರು ಹಾಡುವರು ಬಾರಿಸುವರ ಜಂಗಮರು
ಯಾವತ್ತು ಶಿವಯೆಂಬ ಶಬ್ದವನು              || ೪೫ ||

ಪಂಚಾಕ್ಷರ ಶಿವಮಂತ್ರ ಓದೂದು ಕೇಳಿ
ಸಂತೋಷನಾದ ಬಸವೇಶ್ವರನು             || ೪೬ ||

ಇಂಥವರ‍್ನ್ಹಿನ್ಯಾಂಗ ಸಂರಕ್ಷಣೆ ಮಾಡ್ಯಾರೆಂದು
ನಿಂತಲ್ಲೆ ತರತರ ನಡುಗುವನು               || ೪೭ ||

ಇಷ್ಟೂರಿಗೆ ತಿಳಿದೊಬ್ಬ ಹೆಚ್ಚಿನ ಶರಣ
ಶೆಟ್ಟಿಯ ಕಣ್ಣಿಲೆ ಕಾಣುವನು                   || ೪೮ ||

ಮಾನವರೊನದೊಳು ಬರುವ ಸ್ಥಿರವ್ಹೆಂಗ
ಮನುಷ್ಯಾನಲ್ಲೀವ ಹೆಂಗೆಂಬುವನು            || ೪೯ ||

ಯಾವನಡಿನವನೆಂದು ಮಾತಾಡಿಸಿ ಕೇಳಿದ
ಬಂದದ್ದು ಹ್ಯಾಂಗೆಂದು ಹೇಳೆಂದನು          || ೫೦ ||

ಕೇಳರಿ ಶಿವ ಶಿವ ಹೇಳುವೆನು ನಿಮಗ
ಬಂದದ್ದು ಎಂಥಾ ವ್ಯಾಳ್ಳೇವನು               || ೫೧ ||

ಕಲ್ಯಾಣ ದೇಶದ ಬಣಜಿಗನು ಕೋರಿ
ಶೆಟ್ಟಿಯ ಸಂಗಮನೆಂಬುವನು                || ೫೨ ||

ತಿರುಗುತ್ತ ಬಂದೇವಿ ಪರನಾಡ ಇಲ್ಲಿಗೆ
ತರಬಿದ್ದ ಖರೆ ಹೌದೆಂಬುದವನು              || ೫೩ ||

ಇಂಗುವ ಜೀರಿಗೆ ಮಾರುವೆನು
ಕಂಚು ತಾಂಬರ ಹಿತ್ತಾಳಿ ಎತ್ತುವೆನು                   || ೫೪ ||

ಒಂದ್ಹೊತ್ತು ಉಪವಾಸ ಬಂದಿತು ಸಂತಾಪ
ಅನುಭವ ಅವರಿಗೆ ಹೇಳಿದನು                 || ೫೫ ||

ಅನ್ನವ ನೀಡುವೆ ಕಂಚಾಣ ಕೊಡುವೆನು
ಬರ್ರೊಬ್ಬ ಶಿವ ಶಿವ ಎಂಬುವನು               || ೫೬ ||

ಅನಬ್ಯಾಡೋ ಈ ನುಡಿ ಮಾದೇವ ಕೇಳಿದರ
ಮುಂದೇನು ಹೇಳೂನು ಮಾರ್ಗವನು                  || ೫೭ ||

ಪುಣ್ಯವ ಪಡೆಯುದಕ ಆರಸಾವಿರ ಜಂಗಮರಿಗೆ
ಅನ್ನದ ಆಧಾರ ನೀಡುವೆನು                   || ೫೮ ||

ಅವನಲ್ಲೇ ಧೃಢವಿರುತ ಅನ್ನಿಗರನ್ನದ
ಆಸೇವು ನಮಗೇನು ಎಂಬುವರು             || ೫೯ ||

ಎನ್ನಲ್ಲೇ ಹಿಡಿ ಅನ್ನ ಕಣ್ಣಿಗೆ ತೋರೂದು
ಇಷ್ಟೂರನ್ನಿದರೊಳಗೆ ಉಣಿಸುವೆನು           || ೬೦ ||

ಇಷ್ಟೂರಿಗೆ ಹಿಡಿಯನ್ನ ಕೊಟ್ಟೇನಿ ಅಂತಾನು
ಅವನಲ್ಲೇ ಏನೈತೋ ನಿಷ್ಟವನು              || ೬೧ ||

ಖಂಡಗನ್ನ ಒಮ್ಮೆ ಉಂಡರೆ ಸಾಲದು
ಬಂಡಾಗುದು ಬಂತು ವ್ಯಾಳ್ಳೇವನು           || ೬೨ ||

ನೂಕುತಲೊಬ್ಬಬ್ಬರು ಹೊಡೆಹೊಡೆದು ನಗತಾರೋ
ಅಂತಾರು ಇದು ಒಳ್ಳೆ ಆಶ್ಚರ್ಯವನು                  || ೬೩ ||

ಕರಿದಂಥ ಪ್ರಸ್ತಕೆ ಬಾರದಿರ್ದೊಡೆ
ಕಾಯೂವ ಗೂಳ್ಯಾಗಿ ಹುಟ್ಟುವನು            || ೬೪ ||

ಬರೆತೇವಿ ಎಲ್ಲಾರು ಹರದಾಡಿತೋ ಮನ
ಗಟ್ಯಾಗಿ ಹೇಳಂದಾರೋ ವಚನವನು                  || ೬೫ ||

ಏಳರಿ ಶಿವ ಶಿವ ಆಗಲಿ ಜಳಕವು
ಮಾಡಿರಿ ನೀರು ಲಿಂಗ ಪೂಜೆಯನು          || ೬೬ ||

ಜಗಕಾಗಿ ಮಡಿಯುಟ್ಟು ಮುಗಿಸ್ಯಾರು ಜಪತಪ
ಮುಂದಿನ ನಡಿಯೂದು ಊಟವನು           || ೬೭ ||

ಮಡಿವಾಳ ಗುರುವಿನ ಮನದಲ್ಲೆ ಸ್ಮರಿಸುವ
ಕೇಳರಿ ಮುಂದಿನು ಹೇಳುವೆನು               || ೬೮ ||

ಹಿಡಿಯ ಅನ್ನದ ಗಂಟು ನಡುಮಧ್ಯದಲ್ಲಿಟ್ಟು
ನಡೆಯಲೆಂದ ಬಸವೇಶ್ವರನು                 || ೬೯ ||

ನೀಡುವ ಇದನ ಹ್ಯಾಂಗ ಉಣ್ಣೂನು ಅಂತೀರಿ
ಕಾಣದೆ ಬಂದಿಲ್ಲ ಅನ್ನವನು          || ೭೦ ||

ಬಿಟ್ಟು ಬಿಟ್ಟೇಳೂರ ಬಿಚಗ್ಯಾಸಿಯಾಡುರು
ತರವಲ್ಲ ಇನ್ನತಿ ಕೋಪವನು                  || ೭೧ ||

ಕಾಸಿಯ ಬಿಗದುಟ್ಟು ನಿಂತಾನೋ ಬಸವಣ್ಣ
ನಡಿಯಿರಿ ಶರಣರೆ ನೀಡುವೆನು                || ೭೨ ||

ಗಿಂಡಿಯಷ್ಟು ಅನ್ನ ದಂಡಿಗೆ ನಡೆಸಿದರೆ
ಇದ್ದಷ್ಟು ಇತ್ತ ಹಿಡಿ ಬುಟ್ಟಿಯನು                || ೭೩ ||

ನಡೆಸಿದ ಜನಕೆಲ್ಲ ನಿಂತಾನೋ
ಅಪ್ಪಣೆ ಕೊಟ್ಟ ಬಸವೇಶ್ವರನು                 || ೭೪ ||

ಉಣ್ಣುವುದಕ್ಕಿಂತ ಅನ್ನೂರು ಮನದೊಳು
ತಿಳಿಲಿಲ್ಲ ಇವ ಬಸವೇಶ್ವರನು                 || ೭೫ ||

ಹಾಲು ಸಕ್ಕರೆ ತುಪ್ಪ ನಿತ್ಯದಲುಂಡೇವಿ
ಅದಕ ಹೆಚ್ಚಿನ ರುಚಿ ಬುತ್ತಿಯನು              || ೭೬ ||

ಅಕ್ಕರದಲಿ ಉಂಡು ನಕ್ಕಾರು ಡೇಗುತ
ಸಿಕ್ಕಾನು ನಮಗಿಂದು ಈಶ್ವರನು             || ೭೭ ||

ಶಿವಶಿವ ನಿನ್ನ ಪುಣ್ಯ ಬಹಳಾತೋ ನಮಗಿನ್ನು
ತಿಳಿಯದು ಹೇಳರಿ ಶೂನವನು                || ೭೮ ||

ಹೇಳಿದ ಆಜ್ಞೆಯ ಕೇಳಿದರ ಇದಕ
ಹೆಚ್ಚಿಂದು ಕಂಡೀರಿ ಐಶ್ವರ್ಯವನು            || ೭೯ ||

ಬಿಜ್ಜಳನ ಐಶ್ವರ್ಯಕ ಹೇಳೂದಕಳೆತಿಲ್ಲ
ಕಲ್ಯಾಣ ಕಾಣೂದು ಪುಣ್ಯವನು                || ೮೦ ||

ನಿಮ್ಮಲ್ಲೇ ಮನಸಾಗಿ ಬಂದೇನಿ ಇಲ್ಲಿಗೆ
ಹೌದೇಳು ನಾ ಬಸವೇಶ್ವರನು                || ೮೧ ||

ಸಲಹು ಗಣಂಗಳು ಬರುಮನವಿದ್ದರೆ
ನಡೆಯಿರಿ ಕಲ್ಯಾಣಕ ಹೋಗುವೆನು           || ೮೨ ||

ಬಸವಣ್ಣಾ ಇಂಥದಕ ಅಗಸಿಗೆ ಕಾವಲು
ಹೋಗುವದ್ದ್ಯಾಂಗೇಳೋ ಮಾರ್ಗವನು                 || ೮೩ ||

ಇದಕ್ಯಾಕ ಭೀತಿಯೆಂದು ಬಿಚ್ಚಿದನೋ ಚೀಲ
ಇದರೊಳಗೊಬ್ಬಬ್ಬರ‍್ಹೋಗೆಂದನು             || ೮೪ ||

ಬಸವಣ್ಣ ನಿನ್ನ ಮಹಿಮೆಯು ತಿಳಿಯದು ನಮಗಿನ್ನು
ಚೀಲವು ಹಿಡಿಸದು ಒಬ್ಬರನು                  || ೮೫ ||

ಸಬ್ಬೈಲಿ ಸಾಲದು ಆರು ಸಾವಿರ ಜನ
ಇದರೊಳಗ್ಹ್ಯಾಂಗಿನ್ನು ಹೋಗುವದಿನ್ನು                  || ೮೬ ||

ಹಿಂಚ್ಯಾಳಿಸುವದ್ಯಾಕ ಹಂತೇಕ ಬರತೇನಿ
ನಡೆಯಿರಿ ಒಳಿಯಾಕ ನೋಡುವನು          || ೮೭ ||

ವರ್ವರು ನಡೆದಾರು ಹೆಚ್ಚಿನ ಸದರಿನ್ನ
ಮುತ್ತಿನ ಅರಮನಿ ಗದ್ದಗೀನೋ               || ೮೮ ||

ಬಸವನ ಭಾವಕ ಹಸುವಿನ್ನು ಹರಿದಾವು
ಶರಣರು ಆದರು ಮೋಕ್ಷವನು                 || ೮೯ ||

ಶಿವ ಶಿವ ಎನ್ನುತಲಿ ಹೊತ್ತಾನು ಚೀಲವು
ಬಿಟ್ಟಾನು ವನ ಬಸವೇಶ್ವರನು                || ೯೦ ||

ಬರುವಾಗ ಆಳಿಗೆ ಆಜ್ಞೆವ ಹೇಳಿದ್ದೆ
ಆಗೂನು ಅವರಿಗೆ ಭೆಟ್ಟಿಯನು                || ೯೧ ||

ಪಾಲ್ಕರಿರಾ ಇನ್ನ ಕಲ್ಯಾಣಕ ಹೋಗುವೆ
ಸ್ವಾಧೀನ ನೋಡಿರಿ ಅನ್ನುವನು               || ೯೨ ||

ಬರಿಯದು ಚೀಲವು ಅದರೊಳಗೇನೈತಿ
ಹೋಗಂತ ಕೊಟ್ಟಾರು ಅಪ್ಪಣೆನೊ            || ೯೩ ||

ಅಗಸಿಯ ದಾಟಿಂದ ಆರಸಾವಿರ ಜನ
ಕದಕೊಂಡ ಹೊದ ಬಸವೇಶ್ವರನು            || ೯೪ ||

ಹ್ವಾದಾನು ಕಲ್ಯಾಣಕ ಧೀರ ದಂಡು ಒಳ್ಳೇ
ತುಂಬಿಕೊಳ್ಳುವು ಲಿಂಗ ಪೂಜೆಯನು                   || ೯೫ ||

ಲಕ್ಷದ ಮೇಲೆ ತೊಂಬತ್ತಾರು ಸಾವಿರ
ಜಂಗಮರ ಸಲುಹಿದ ಬಸವೇಶ್ವರನು                   || ೯೬ ||

ಜಂಗಮರ ಕದ್ದ ಕತೆಯನ್ನು ಕೇಳರಿ
ಇದಕಾದ ಚೋರ ಬಸವೇಶ್ವರನು             || ೯೭ ||

ಮಹಾಶರಣ ಮಡಿವಾಳ ಗುರುವಿನ ಮನದಲಿ ಸ್ಮರಿಸುವೆ
ಕೇಳರಿ ಮುಂದಿನ್ನು ಹೇಳುವೆನು               || ೯೮ ||

ಮಾದೇವ ಜಂಗಮರ ಹಾದಿಯ ನೋಡ್ಯಾನು
ಆದೀತು ಶಿವಪೂಜೆ ವ್ಯಾಳ್ಳೇವನು             || ೯೯ ||

ತಿಳಿಲಿಲ್ಲೋ ಮಾಯವು ತಲ್ಲಣಿಸುತ ವನ
ಎಲ್ಲಿ ನೋಡಿದರ ಶಬ್ದವಿಲ್ಲ           || ೧೦೦ ||

ಹಸಿದಾರು ಜನರೆಂದು ವಿಷವು ಆದಿತು ಮನ
ಮಾಡುವದೇನಾತು ಮೋಸವನು             || ೧೦೧ ||

ಮುಣಗಿತು ಪುಣ್ಯವು ಮುನಿದಾನು ಈಶ್ವರ
ಮನದಲ್ಲೇ ತಾಳಿದ ಕೋಪವನು              || ೧೦೨ ||

ಕಪಟವ ತಿಳಿದಾನು ಕಲ್ಯಾಣಕ ಹೋದಾನು
ಒಯ್ದಿರುವ ಬಸವೇಶ್ವರನು           || ೧೦೩ ||

ಉಗ್ರವ ತಾಳಿದ ತಿದ್ದಿದ ಮೀಸಿಯು
ಇನ್ನ್ಯಾಕ ನಡಿಯಲಿ ಯುದ್ಧವನು              || ೧೦೪ ||

ಕಡಿದು ಅವನ ಶಿರ ಹರಿಸುವೆ ರಕ್ತವು
ಬಿಡರೆಂದ ಮಾಡಿದ ಪಂಥವನು               || ೧೦೫ ||

ಇನ್ನ್ಯಾತರಾಸೆವು ಬಸವಣ್ಣನ ಬಲ
ಮುರಿದಿದ್ದ ಕಲ್ಲೆಂದ ಮಾದೇವನು             || ೧೦೬ ||

ತನ್ನಲ್ಲಿ ಇದ್ದಾವ ಬಲ್ಲಾವ ಪೌರಾಣಿ
ಸಲ್ಲದು ಬ್ಯಾಡೆಂದು ವ್ಯಾಜ್ಯವನ್ನು             || ೧೦೭ ||

ಮರ್ತ್ಯದೊಳು ಹುಟ್ಟಿದಾವ ಮನುಷ್ಯನು ಅಲ್ಲಾವ
ಕಂಡುಳಿದನು ಕೈಲಾಸವನು                  || ೧೦೮ ||

ಮಾದೇವನ ಕೋಪವು ಮಸ್ತಕ ಏರಿತು
ಹತ್ತಿಕಿ ಇಟ್ಟ ಪೌರಾಣಿನ              || ೧೦೯ ||

ಆಗಿನ್ನ ತಿಳಿದಾನು ಅರಣ್ಯದೊಳಗಿದ್ದ
ಕರಸಿದ ಕಳ್ಳ ಕಿರಾತರನು           || ೧೧೦ |

ಬ್ಯಾಡರಿಗೆ ಹೇಳಿದ ಮಾಡಿದ್ದು ಬಸವಣ್ಣ
ಮೃತವಳಿದು ವೈಯ್ದಾನು ಶರಣರನು                  || ೧೧೧ ||

ಜೈಯಿಸಿರಿ ಈ ವ್ಯಾಳ್ಯಾ ಮಾಯದಲ್ಲೇ
ನಿಮ್ಮ ಆಯುಧದಲ್ಲೇ ಹೊಡೆಯಿರೆಂಬುವನು            || ೧೧೨ ||

ಈಶ್ವರ ಇದು ಎಂಥ ವ್ಯಾಳ್ಯವ ತಂದಾನು
ಪ್ರಾಣವ ಕೊಲ್ಲುದು ಪ್ರಾಪ್ತಿಯನು              || ೧೧೩ ||

ಕ್ರೋಧವ ತಾಳಿ ಹ್ಯಾಂಗ ಕಾದುವನು
ಅಲ್ಲಿ ಕಲ್ಯಾಣದೊಳು ಬಸವೇಶ್ವರನು                   || ೧೧೪ ||

ಶಿವ ಶಿವ ಶರಣನ ವಚನ ಹ್ಯಾಂಗ ಮೀರುನು
ಚಿಂತೀಲೆ ಹಿಡಿದಾರು ವೀಳ್ಯಯನು            || ೧೧೫ ||

ಬ್ಯಾಡರ ಹುಡುಗರ ಅರೆಚಣ್ಣ ತೆಗಿಸ್ಯಾನು
ಅದರು ಜಂಗಮ ವೇಷವನು                  || ೧೧೬ ||

ಓಡಲ ಕಟಗಿಯ ಬೆತ್ತವ ಮಾಡಿದರು
ಕಾಯಿಸರ ರುದ್ರಾಕ್ಷಿ ಲಿಂಗವನು               || ೧೧೭ ||

ಹಚ್ಚಿದರ ವಿಭೂತಿ ಹೊತ್ತಾರು ಕಾವಿನಲ್ಲಿ
ಮುಚ್ಚಿ ಹಿಡಿದರು ತಮ್ಮ ಆಯುಧನು          || ೧೧೮ ||

ಮಾರ್ಗವ ಹಿಡಿದಾರು ಮಹದೇವನಾಜ್ಞೆವು
ಮರತಾರು ಮತ್ತೇನು ಜ್ಞಾನವನು             || ೧೧೯ ||

ಅಜ್ಞಾನ ಅಳಿದಾರು ಸುಜ್ಞಾನ ಜೈಸುತ
ಬಸವಣ್ಣನ ಮೇಲೆ ಭಕ್ತಿಯನು                 || ೧೨೦ ||

ನೆನೆಯುತ ಕಲ್ಯಾಣಕ್ಹೋದರು ಮಠಕಲ್ಲೇ
ಜಂಗಮರ ಕಂಡ ಬಸವಣ್ಣನು                 || ೧೨೧ ||

ಜಂಗಮರ ಲಿಂಗಪೂಜೆ ನಡೆದಿತ್ತು ಜನರೊಳು
ಕೂಡ್ರಿಸಿದ ಬ್ಯಾಡರನು               || ೧೨೨ ||

ಶಿವ ಶಿವ ಶಿವಪೂಜೆ ಮಾಡೋನು ನಮ್ಮಲ್ಲಿ
ಆಯುಧ ಔಡಲ ಪಳಕವನು                   || ೧೨೩ ||

ಮಾಡಿದ ಅವರಂತೆ ನೋಡಿದರ ಸರ
ಆಗ್ಯಾವು ರುದ್ರಾಕ್ಷಿ ಲಿಂಗವನು                || ೧೨೪ ||

ತೀರಿತು ಊಟವು ಕಿರಾತನರ ಕರೆದು
ಹೇಳಿದನು ಬಸವೇಶ್ವರನು          || ೧೨೫ ||

ಶಿವಶರಣನ ಆಜ್ಞೆವ ಮೀರಬ್ಯಾಡರಿ ನೀವು
ತೀರಿಸಿರಿ ಬಂದ ಕಾರ್ಯವನ್ನು                || ೧೨೬ ||

ಶಿವ ಶಿವ ಈ ನುಡಿ ಅನಬ್ಯಾಡೋ ನಮಗಿನ್ನು
ಸಲುಹೆಂದು ಹಿಡಿದಾರು ಪಾದವನು           || ೧೨೭ ||

ಕಲ್ಯಾಣದೈಶ್ವರ್ಯ ನೋಡತಿರೋ ನೀವು
ಬಲ್ಲವರ‍್ಹೊಂದಿರಿ ಮೋಕ್ಷವನು                 || ೧೨೮ ||

ಶಿವ ಶಿವ ಈ ವ್ಯಾಳ್ಯ ಎಂದಿಗೂ ಸಿಗದಿನ್ನು
ಹೊಂದಿಸು ಗತಿ ಬಸವೇಶ್ವರನು              || ೧೨೯ ||

ಕೈಲಾಸದಿಂದ ಪುಷ್ಪದ ವಿಮಾನ
ಇಳಿದಾವೊ ಹೊಂದಿರಿ ಮೋಕ್ಷವನು           || ೧೩೦ ||

ಮಡಿವಾಳ ಗುರುವಿನ ಮನದಲ್ಲಿ ಸ್ಮರಿಸುವೆ
ಕೇಳರಿ ಮುಂದಿನ್ನು ಹೇಳುವೆನು               || ೧೩೧ ||

ಕಿರಾತರು ಮೋಕ್ಷ ಹೊಂದಿದ ಸುದ್ದಿಯ
ಆದೀತು ಕೇಳಿದ ಮಹದೇವನು               || ೧೩೨ ||

ಬಸವಣ್ಣನ ಮೇಲೆ ಮಥನವು ಮಾಡದಲೆ
ಹೋಗಿದ್ದರೆ ಗತಿ ಹೊಂದುವೆನು               || ೧೩೩ ||

ನಿಂಗ್ರಾಸಿ ಪುತ್ರಗ ಹೇಳಿದ್ದಕ್ಕೆ ಎನ್ನ
ಐಶ್ವರ್ಯ ಕಲ್ಯಾಣಕ ಹೋಗುವೆನು           || ೧೩೪ ||

ಜೋಡ ಮಡದಿಯ ತನ್ನ ಮಹದೇವಿ ಕರದಾನು
ಹಿಡಿದಾನು ಕಲ್ಯಾಣದ ಹಾದಿಯನು           || ೧೩೫ ||

ಬಾಧಿನಿತೊಳಲೊಳು ಹೋದಾನು ಕಲ್ಯಾಣಕ
ಹೊರಗಿರುತಲಿ ಉಸುರು ಹಾಕುವನು                  || ೧೩೬ ||

ಚಿಂತೀಲಿ ಅಂತಾನು ಎಂಥವಗ ವಿಘ್ನವು
ಮಾಡಿದ ಮುಖ ಹೆಂಗ ತೋರುವೆನು                  || ೧೩೭ ||

ಮಹಾದೇವ ಶರಣನು ಬಂದಿರುವ ಸುದ್ಧಿಯ
ಕೇಳಿದನು ಬಸವೇಶ್ವರನು           || ೧೩೮ ||

ಬಂದಾನು ಬಸವಣ್ಣ ನೋಡಲಾರದವ
ಮಾಡಿದ ಶಿರಬಾಗಿ ಶರಣವನು               || ೧೩೯ ||

ಶರಣನ ಮುಖಬಾಡಿ ಉರಿತಾಕಿದ ಬಾಳಿ
ಗರಿಹಂಗ ಆಯಿತೆಂದ ಬಸವೇಶ್ವರನು                  || ೧೪೦ ||

ಅವರಿಗೆ ಮಥನವು ಬಹಳೊತ್ತು ಕೂಡ್ಯಾವು
ಮತ್ತೇನು ನಡಿದಾವು ಹೇಳುವೆನು             || ೧೪೧ ||
ಮಹದೇವ ಅಂತಾನು ಶಿವ ಶಿವ ಕಲ್ಯಾಣ

ಒಳಗಿದ್ದು ಕಳೆಯುವೆ ಕಾಲವನು              || ೧೪೨ ||

ಮಹದೇವ ಎಂಬುವ ನಾಮ ತೆಗೆದ ಅವ
ಹೆಸರಿಟ್ಟು ಮೋಗಳಿ ಮಾರಯ್ಯನು            || ೧೪೩ ||

ಆಗದ ಕಾಯಕ ಕಷ್ಟ ಎಂದಿ ಹೇಳಿದ
ಕಟ್ಟಗಿ ಹೊರಿ ತಂದು ಮಾರುವನು            || ೧೪೪ ||

ಕಾಲವನು ಹಾಕುತ ಕಲ್ಯಾಣ ದೊಳು ಹೊರಿ
ನಿಲ್ಲಿಸಿ ಬಸಲೊಳು ಮಾರುವನು              || ೧೪೫ ||

ನಿತ್ಯಕ್ಕ ನಾಲ್ಕು ದುಡ್ಡ ರೊಕ್ಕ ದುಡಿದು
ಒಬ್ಬ ಜಂಗಮಗ ಅನ್ನ ನಡೆಸುವೆನು           || ೧೪೬ ||

ಕಂಡಾನೋ ಬಸವಣ್ಣ ಐಶ್ವರ್ಯದಲ್ಲೇ
ಇದ್ದವಗ ಎಂಥ ವ್ಯಾಳ್ಯೇವನು                 || ೧೪೭ ||

ಮರಗುತ್ತ ಸೆರಗಿಲೆ ಜಾಳಿಗೆ ಹೊನ್ನವನು ಕಟ್ಟಿ
ಜಂಗಮನಾಗಿ ತಾ ಹೋಗುವನು             || ೧೪೮ ||

ನಿತ್ಯಕ್ಕ ನಡಿದಂಥ ಮಹಾದೇವಿ ಪಾದಪೂಜೆ
ನಡಸಿದಳಾತನ ಊಟವನು                  || ೧೪೯ ||

ಹೊನ್ನವರ ಮನೆಯಲ್ಲಿ ಜಗಲಿ ಮ್ಯಾಲೆ ಇಟ್ಟು
ಮಾಯವಾದನೋ ಬಸವೇಶ್ವರನು           || ೧೫೦ ||

ಬಂದಾನೋ ಮಹದೇವ ಮನೆಯಲ್ಲಿ ದೃವ್ಯವ
ಜಗಲಿಯ ಮ್ಯಾಲೆ ಕಾಣುವನು                || ೧೫೧ ||

ಅಕಟಕಟಾ ಎಂದು ಮಹಾದೇವಿ ಕರೆದಾನು
ಇಲ್ಲಿ ಬಂದವರು ಯಾರು ಎಂದು ಕೇಳಿದನು            || ೧೫೨ ||

ಜಂಗಮರ ಶಿವ ಇನ್ನಾರು ಬರುವರು
ಅರಿಯೆನು ಎಂದಳು ಮಹದೇವಿಯನು                 || ೧೫೩ ||

ಕೇಳಿದ ಮಡದಿಯ ಜಾಳಿಗೆ ಹೊನ್ನನು
ಕಾಲಿಲೆ ಉರುಳಿಸಿ ತಿಪ್ಪಿಯೊಳೊಗಸಿದನು             || ೧೫೪ ||

ಲಕ್ಷದ ಮೇಲೆ ತೊಂಬತ್ತಾರು ಸಾವಿರ
ಬಸವಣ್ಣನ ಜನಕ ಊಟ ಹೇಳಿದನು          || ೧೫೫ ||

ಇಂಥ ಬಸವ ಇಷ್ಟು ಜನಕೇನು ಉಣಿಸ್ಯಾನು
ಅಂತ್ಯಾರೋ ಜಂಗಮರು ಆಶ್ಚರ್ಯವನು              || ೧೫೬ ||

ಶರಣನ ಜನರಿಗೆ ಕರೆತಂದು ಬಂಗಾರದ
ಪರಮಾಣದಲ್ಲಿ ಅವರ ಊಟವನು            || ೧೫೭ ||

ಬೇಡಿದ್ದ ಉಣಸಿನ ಮಾಡಿದ ಭಿಕ್ಷವ
ಜನರಿಗೆ ಬಂಗಾರದ ಬೆತ್ತವನು                || ೧೫೮ ||

ನಗು ನಗುತ ಜನರು ಹೊರಟಾರು ನಿಂತವರ
ಹಾದಿಯ ನೋಡುವ ಬಸವೇಶ್ವರನು                   || ೧೫೯ ||

ವ್ಯಾಳ್ಯೇವಾದಿತು ಎಲ್ಲ ಹೋಗಿದ್ದಿರಿ ನಡೆಯಿರಿ
ಆಗಲಿ ಅಂದ ಜಳಕವನು            || ೧೬೦ ||

ಜಂಗಮರು ಅಂತಾರು ಬಸವಣ್ಣನ ಮೋಳಿಗೆಯ
ಮಾರಯ್ಯನ ಮನೆಯಲ್ಲಿ ಊಟವನು                   || ೧೬೧ ||

ಬೇಡಿದು ಉಣಸಿದ ಮಾಡಿದನು ಭಿಕ್ಷವ
ಜನರಿಗೆ ಬಂಗಾರದ ಬೆತ್ತವನು                || ೧೬೨ ||

ಮಾದೇವ ಶರಣನು ವರ್ದಿ ಅವನು
ಹರುಷಾಗಿರಲೆಂದ ಬಸವೇಶ್ವರನು            || ೧೬೩ ||

ಉಳವಿಯ ಬಾಗಿಲ ಕುಂದಗೋಳೆ ಮಡಿವಾಳ
ಗುರುವಿನ ಮನದಲ್ಲಿ ಸ್ಮರಿಸುವೆನು            || ೧೬೪ ||