ಅಕ್ಕ ನಾಗಮ್ಮ
ಮತ್ತೆ ಶ್ರೀಯದವಾಗಿ ಸರಸ್ವತಿ ಎನಗೊಲಿ
ಮೊದಲ ಎನ್ನಯ ಬಲಗೊಂಬುವೆನು
ಮೊದಲ ಎನ್ನಲ ಬಲಗೊಂಬುವೇನು ಸಣ್ಣ
ಹಸುಳರ ಸಲ್ಲಿನೊಳರುವೆ ನೀನು
ಹಸುಳರ ಸಲ್ಲಿನೊಳರುವೆ ನೀನು ಕಂದ
ಪಾರ್ವತಿ ಮೋಹದ ಕುಮಾರನು
ಎನಗೆ ಮತಿಯ ಕೊಡು ಗಜಮುಖದೊಡಯನೆ
ಗಣಪತಿ ಮಹರಾಜ ಅತಿಸುಂದರಾ
ಕಲ್ಯಾಣ ಪುರದೊಳು ಬಸವ ರಾಜೇಂದ್ರನು
ಬಹಳ ಪ್ರಖ್ಯಾತ ನಡೆಸುತಲಿ
ಬಹಳ ಪ್ರಖ್ಯಾತ ನಡಸುತಲಿ ಅಲ್ಲಿ
ಮರಣ ಅಂಬುದು ಅಂಜಿ ಓಡುತಲಿ
ಮರಣ ಅಂಬುದು ಅಂಜಿ ಓಡುತಲಿ ನಿತ್ಯ
ಪುಷ್ಪದ ಮಳಿಗಳು ಸುರಿಯುತಲಿ
ಪುಷ್ಪದ ಮಳಿಗಳು ಸುರಿಯುತಲಿ
ದಿಕ್ಕು ದೇಶದ ಶರಣರು ಇರುವುತಲಿ
ಲಕ್ಷದ ಮೇಲೆ ತೊಂಭತ್ತಾರು ಸಾವಿರ
ಪ್ರಥಮ ಗಣಂಗಳು ಸುಖದಿಂದಿರುತ
ಕಲ್ಯಾಣ ಪುರದೊಳು ಬಸವರಾಜೇಂದ್ರನು
ಇಲ್ಲದ ಪವಾಡ ಗೆಲಿದಿಹನು
ಇಲ್ಲದ ಪವಾಡ ಗೆಲಿದಿಹನು ಅಲ್ಲಿ
ಕೊಂಡೆಣ್ಣ ಮಂಚಣ್ಣ ಬಲ್ಲಿದರು
ಕೊಂಡೆಣ್ಣ ಮಂಚಣ್ಣ ಬಲ್ಲಿದರು ಬಸವ
ವಲ್ಲಭನೆಂದು ರಾಜಗ ಹೇಳಿದರು
ಇಲ್ಲದ ಬೋಧಗಳ ಬೋದಿಸಿದರು
ಎಲ್ಲರ ಗರ್ವವ ಮುರಿದರು
ಕಕ್ಕಯ್ಯನವರ ಮನಿ ಮಿಕ್ಕಿದ ಪ್ರಸಾದ
ಅಪ್ಪ ಬಸವರಾಜ ತಂದಿದ್ದನೊ
ಅಪ್ಪ ಬಸವರಾಜ ತಂದಿದ್ದನೋ ಅದನ
ಅಕ್ಕ ನಾಗಮ್ಮ ಶರಣೆ ನೋಡಿದಳು
ಜಳಕ ಜಾತುಣಿಮಾಡಿ ನೀಲಕಾಸಿ ಮಡಿಯುಟ್ಟು
ಲಿಂಗಕೆ ತೋರಿಸಿ ಸಲಸಿದಳು
ಲಿಂಗಕೆ ತೋರಿಸಿ ಸಲಸಿದಳು ಅಕ್ಕ
ಶರಣೆಗೆ ಗರ್ಭಿಣಿ ತೋರಿದವು
ಶಿವಲೀಲ ಸಂಪತ್ತು ನೊಡಲಾರದವರು
ಕಿಚ್ಚಗಣ್ಣಿನ ಕಿಡಿ ಆಗುತಲಿ
ಕಿಚ್ಚಗಣ್ಣಿನ ಕಿಡಿಯಾಗುತಲಿ ತಮ್ಮ
ಮನದಾನ ಅಸಂತೃಪ್ತಿ ಉಸುರುತಲಿ
ಮನದಾನ ಅಸಂತೃಪ್ತಿ ಉಸುರುತಲಿ ಇವು
ಖ್ಯಾತಿ ಯಾದವೆಂದು ಹುಡುಕುತಲಿ
ಕಲುಹಿನರೆಲ್ಲರು ಕೂಡಿ ಮಾತಾಡಾರೊ
ಬಲ್ಲಿದ ಮಸಲತ್ತು ನಡಸಿದರೋ
ಇತ್ತ ಪುರದೊಳು ಪೊಕ್ಕು ಜೈನರ ಕೇರಿಯೊಳು
ಬಸವನ ಮನೆ ಯಾವುದೆಂಬುವರು
ಬಸವನ ಮನೆ ಯಾವುದೆಂಬುವರು ಬಸವ
ನಮ್ಮ ಭಗತನೆಂದು ಹೇಳಿದರು
ದೂರ ಹಿಂದಕ ನಿಂತು ಬಿಟ್ಟು ಸನ್ನೆಯ ಮಾಡಿ
ತೊರಿಸಿ ಒಳಯಾಕ ಹೋಗೆಂದರು
ಕೂಡಿದ ಜನರೆಲ್ಲ ಬಸವನ ಮನಿ ಪೊಕ್ಕು
ಗಂಡನಿಲ್ಲದೆ ಗರ್ಭಿಣಿ ಹೆಂಗ ಅಂದರೋ
ಗಂಡನಿಲ್ಲದೆ ಗರ್ಭಿಣಿ ಹೆಂಗ ಅಂದರೋ ನಮ್ಮ
ಪುರದೊಳಗೆ ಇವ ಪುಂಡಗಾರಾದನೋ
ಪುರದೊಳಗೆ ಇವ ಪುಂಡಗಾರಾದನೋ ಇವನ
ಕೇಳುವ ಪಂಡಿತರು ಇಲ್ಲಾದರೋ
ಅವರು ರಆಜ್ಯ ಬಿಜ್ಜಳಗ್ಹೋಗಿ ಹೇಳಿದರು
ಅರಸ ಬಿಜ್ಜಳ ಎದ್ದು ಸದರಿನಲಿ ಕುಂತಾನು
ಹಣಿಯ ಗಂಟಕಿ ಮಾತ ನಾಡಿದನು
ಹಣಿಯ ಗಂಟಿಕಿ ಮಾತನಾಡಿದನು ನಿಮ್ಮ
ರೀತಿಯು ಇದು ಸೈಯೆಂಬುವನು
ರೀತಿಯು ಇದು ಸೈಯೆಂಬುವನು ನಮ್ಮ
ಪುರದೊಳಗಂಜಿಕಿ ಇಲ್ಲದಾಯಿತೆಂದನು
ದಾಸಿಯರನ ಕೊಟ್ಟು ಕರಿಯಲಿಕ್ಕೆ ಕಳಿಸ್ಯಾನ
ಭಾಷೆ ಪಾಲಿಪ ಅಕ್ಕನಾಗಮ್ಮನು
ಭಾಷೆ ಪಾಲಪ ಅಕ್ಕನಾಗಮ್ಮನು ಹೋಗಿ
ಕೆಳ್ಯಾರ ಒಳ ಹೊಕ್ಕು ನೀಲಮ್ಮನು
ಕೆಳ್ಯಾರ ಒಳ ಹೊಕ್ಕು ನೀಲಮ್ಮನು
ಸಭೆಗೆ ನೆನೆವುತ ಬಂದಳು ಶಂಕರನು
ನೆನೆವುತ ಬಂದಳು ಶಂಕರನು
ಕಂಡಾಳೊ ಬಸವ ರಾಜೇಂದ್ರವನು
ಕುಂತಿರು ಜನರೆಲ್ಲ ಚಿತ್ತಿಟ್ಟು ಕೇಳಿರಿ
ಹೊಟ್ಟೆನ್ನ ಶಿಶುವಿನ ನುಡಿಸುವೇನು
ಉದರ ದೊಳಿರುವಂಥ ಚದುರ ನೀದಾರೆಂದು
ಮಧುರತನದಿಂದ ಕೇಳಿದರು
ಮಧುರತನದಿಂದ ಕೇಳಿದರು ನೀನು
ಧರಿಗೆ ಬಾಳ ಭಾರ ಆದೆಂದರು
ಧರಿಗೆ ಬಾಳ ಭಾರ ಅದೆಂದರು ನೀನು
ಬರುವ ಕುರುಹು ಯಾವದ್ದೇಳೆಂದರು
ಸ್ವಾದರ ಮಾವನ ಸತ್ಯ ವಚನವ ಕೇಳಿ
ಮನಸಿನೊಳಗ ಕುಶಿ ಆದ ಗಂಭೀರನು
ಖಡ ಖಡ ಶಿಡಿಲಿನ ಗುಡುಗು ಗರ್ಜನೆಯಂತೆ
ಗರ್ಜಿಸಿ ತಾ ಮಾತನಾಡಿದನು
ಗರ್ಜಿಸಿ ತಾ ಮಾತನಾಡಿದನು ಮೂಢ
ಹುಡುಗ ಜೈನರ ಮಾತ ಕೇಳಿದನು
ಹುಡುಗ ಜೈನರ ಮಾತ ಕೇಳಿದನು ಕಾಡು
ಕ್ವಾಣನ ಸೊಕ್ಕು ನಿಮಗ್ಯಾಕೆಂದನು
ಕ್ವಾಣನ ಸೊಕ್ಕ ನಿಮಗ್ಯಾಕೆಂದನು ನಿಮಗ
ಕೆಡಗಾಲ ಸಮೀಪ ಆಯಿತೆಂದನು
ಜೈನ ಮತದ ಕೊಡು ಮುರಕೊಂಡ ಬರುವೆನು
ಚನ್ನಬಸವನೆಂದು ಬಿರುದು ಸಾರಿದನು
ವೀರ ಆರ್ಭಾಟವ ತಾಳದ ಜನರೆಲ್ಲ
ತಲ್ಲಣಿಸುತ ಗಜಗಂಬುತಲಿ
ತಲ್ಲಣಿಸುತ ಗಜಗಂಬುತಲಿ ದೊಡ್ಡ
ಪರ್ವತ ಗದಗದ ನಡುಗತಲಿ
ಪರ್ವತ ಗದಗದ ನಡುಗತಲಿ ಸೂರ್ಯ
ಚಂದ್ರನ ಮಾರ್ಯಾಗ ತಪ್ಪು ತಲಿ
ಚಂದ್ರನ ಮಾರ್ಯಾಗ ತಪ್ಪು ತಲಿ ಜನರು
ಎದೆವಡೆದು ಬಾಯಾರಿ ಉಸುರುತಲಿ
ಪ್ರಳಯ ಕಾಲದ ಹೊತ್ತು ಬಂದಿತು ನಮಗಿನ್ನು
ತ್ರಿಲೋಕದವರು ಚಿಂತಿಸುತ
ಅರಸ ಬಿಜ್ಜಳ ಎದ್ದು ಸದರಿನಲಿ ಕುಳಿತಾನು
ಬುದ್ಧಿ ಸುಜ್ಞವಂತನಾಗಿದ್ದನು
ಬುದ್ಧಿ ಸುಜ್ವವಂತನಾಗಿದ್ದನು ಅಗ್ನಿ
ಕೆಣಕಿದವರ ಬುದ್ಧಿ ಕಡಿಮಿ ಅಂದನು
ಕೆಣಕಿದವರ ಬುದ್ಧಿ ಕಡಿಮೆ ಅಂದನು ನೀನು
ರಕ್ಷಿಸು ನಾನು ನಿನ್ನ ಶಿಶು ಅಂದನು
ಕರ ಮುಗಿದು ಜೈನರ ಚರಣಕ್ಕೆ ಎರಗ್ಯಾರು
ಅಕ್ಕನಾಗಮ್ಮನ ಕೊಂಡ್ಯಾಡುತ್ತ
ಸಡಗರದಿಂದ ವಸ್ತ್ರ ಉಡಗರಿ ಮಾಡ್ಯಾರೊ
ಹೆಚ್ಚಿನ ಜವಳಿಯ ತರಸಿದರೋ ಬಿಚ್ಚಿ
ಸೀರಿ ಕುಬ್ಬುಸ ಮುಯ್ಯ ಮಾಡಿದರೊ
ಸೀರಿ ಕುಬ್ಬಸ ಮುಯ್ಯ ಮಾಡಿದರೊ ವಾದ್ಯ
ಡುಮಿ ಡುಮಿ ಬೇರಿಯ ಹೊಡಿಸಿದರೊ
ಕಾಳಿಯು ಕರ್ಣಿಯ ಸಾರುತ ಬಾಜಾರುದೊಳು
ಅಕ್ಕಮ್ಮನ ಅರಮನಿಗೆ ಕಳೆಸಿದರೊ
ಅರಮನೆಯೊಳು ಶಿವ ಶರಣರ ಶಿವಪೂಜೆ
ಕರ್ಪುರ ಕೋಡ ಬತ್ತಿ ಪುಷ್ಪದಲ್ಲಿ ತುಂಬ
ಹಿಡಿಸಿದ ಬಂದಿತು ಸ್ವರ್ಗದಲ್ಲಿ
ಹೀನರೂಪವ ಬಿಟ್ಟು ಕಪಟರೂಪವ ತಾಳಿ
ಕಲ್ಯಾಣಪುರಕ ಬಂದ ಶಂಕರನು
* * *
ಪಿಂಡಾಂಡ ಪ್ರಕೃತಿ
ಜನನ ಮರಣ ಎರಡು ನಿಮ್ಮ ಸ್ವಾಧೀನ
ಜಗದ್ಗುರು ಎನಿಸಿದಿ ನೀನು || ೧ ||
ಪರಮೇಶ್ವರನ ಪಾರ್ವತಿ ಕೇಳತಾಳ
ಕೈಮುಗಿದು ನಿಂತು ಅರ್ಧಾಂಗಿ || ೨ ||
ಪಿಂಡ ಪ್ರಕೃತಿ ಆಗುವಾಕೃತಿ
ನಮಗ ತಿಳಿಸಬೇಕ್ರಿ ಇದರ ಬಗಿ || ೩ ||
ಶಂಭು ಹೇಳತಾನ ಕೇಳ ಪಾರ್ವತಿ
ಪೈಲೆ ಪಿಂಡ ಆಗುವ ಕೂನ || ೪ ||
ಗಂಡಿನಿಂದ ಪಿಂಡ ಉತ್ಪನ್ನವಾಯಿತು
ಮೊದಲು ಇರುವ ತನ್ನ ಠಿಕಾಣಾ || ೫ ||
ಸ್ತ್ರೀಯಳು ಮುಟ್ಟಾದ ಮೂರು ದಿವಸಕ
ದೇಹ ಶುದ್ಧ ಚೌತಿಯದಿನ || ೬ ||
ಸತಿಯು ಪತಿಯು ಏಕಾಂತ ಕೂಡಿದರ
ರಾತ್ರಿ ವೇಳೆ ಅದೇ ದಿನಾ || ೭ ||
ಬಿಂದು ಬಿದ್ದು ಒಂದಾತು ನೇತ್ರ ಕಲಕಿ
ಅಲ್ಲಿಗಿಳಿತು ಪಿಂಡದ ಜೇನಾ || ೮ ||
ಐದು ದಿನವಸಕ ನೀರ ಗುರಳಿಯಂಗ
ಪಳ್ಳಾಗಿ ಇರುವದು ಪ್ರಮಾಣ || ೯ ||
ಮತ್ತೆ ಕೇಳ ಹತ್ತು ದಿವಸಕ
ರಕ್ತ ಕರಣಿಯಾಗುವದಣ್ಣ || ೧೦ ||
ಇಪ್ಪತ್ತು ದಿವಸಕ ಹೆಪ್ಪಗಟ್ಟಿತು
ಸಿಪ್ಪಿ ಸುಲಿದ ಬಾಳಿ ಹಣ್ಣ || ೧೧ ||
ತಿಂಗಳಾದ ಮೇಲೆ ಟಿಸುಳು ಒಡಿಯತೈತಿ
ಮುಂಚೆ ಹುಟ್ಟಿತು ಮಾರಿಯ ಶಿರ || ೧೨ ||
ಎರಡು ತಿಂಗಳಿಗೆ ತೋಳು ತೊಡಿಗಳು
ಬಾಳಿಯ ಸುಳಿಯ್ಹಂಗ ಬಹು ಮಧುರ || ೧೩ ||
ಮೂರು ತಿಂಗಳಿಗೆ ಮೂಡಿ ಬರುವ
ಚಂದ್ರಮನ್ಹಂಗ ಅದರ ಆಕಾರ || ೧೪ ||
ನಾಲ್ಕು ತಿಂಗಳಿಗೆ ನಾಸಿಕ ಜನನಿ
ಕೂಸು ಆಯಿತು ಮಾಯದ ವರ್ಣ || ೧೫ ||
ಐದು ತಿಂಗಳಿಗೆ ಕರ ನೇತ್ರಗಳು
ಹಸನಾಗಿ ಆಗುವವು ತಯ್ಯಾರ || ೧೬||
ಆರು ತಿಂಗಳಿಗೆ ಸರ್ವ ಸ್ವಾಮಾನ
ದೇಹಕ ಮೂಡಿ ಬಂದಾವ ಉಗುರಾ || ೧೭ ||
ಏಳು ತಿಂಗಳಿಗೆ ಒಳಗ ಬಲಾತ್ಕಾರ
ಓಡ್ಯಾಡುತಾನ ನೋಡು ಸರ್ದಾರ || ೧೮ ||
ಎಂಟು ತಿಂಗಳಿಗೆ ಜ್ಞಾನ ಹುಟ್ಟಿತು
ಹರದಾಡತೈತಿ ಹಲವು ಪ್ರಕಾರ || ೧೯ ||
ಹೇಸಿಕೆ ಉಚ್ಚಿ ಎಂಥಾ ಜಗದಾಗ
ಸ್ವಾಮಿ ಎನ್ನಗ ನೀ ತಂದಿಟ್ಟಿ || ೨೦ ||
ಇಂಥ ಕೆಲಸ ಎಂದೆಂದು ಮಾಡುದಿಲ್ಲ
ಹೇಳತೈತಿ ಗುರುವಿನ ಮುಟ್ಟಿ || ೨೧ ||
ಮಾನವ ಜಲ್ಮಕ ಹುಟ್ಟಿಬಾರದ್ದಾಂಗ
ಪುಣ್ಯವ ಪಡಿತೇನಿ ನಾ ಹುಟ್ಟಿ || ೨೨ ||
ಒಂಭತ್ತು ತಿಂಗಳಿಗೆ ದೊಡ್ಡದಾಯಿತು
ಹೊರಗ ಬಂದೇನಂತೈತಿ ದಾಟಿ || ೨೩ ||
ಪಾಪ-ಪುಣ್ಯ
ಪಾಪ ಪುಣ್ಯದಲ್ಲಿ ಜಾಸ್ತಿಯಾವದೆಂದು
ಪ್ರಶ್ನೆ ಮಾಡಿದಳು ಪಾರ್ವತಾ || ೧ ||
ಪುಣ್ಯದ ಬಲದಿಂದ ಪಾಪ ಹುಟ್ಟಿತು
ಪರಮೇಶ್ವರ ಹೇಳಿದ ಮಾತ || ೨ ||
ಐಶ್ವರ್ಯ ಆನಂದ ಕೊಟ್ಟರ
ಬಾಳೇವ ಮಾಡ್ಯಾರು ಬಹು ಶಿಸ್ತ || ೩ ||
ಮಕ್ಕಳುಮರಿ ಹೆಚ್ಚಾದ ಕಾಲಕ
ಮನಿ ಕಟ್ಟಿಸ್ಯಾಳು ಮಾಲಿಂದ ಮ್ಯಾಲಕ || ೪ ||
ದುಡ್ಡು-ದುಗಾಣಿ ಮಿಕ್ಕಿದ ಕಾಲಕ
ವಂಕಿ ಸರಗಿ ಮಾಡಿಸ್ಯಾಳು ನತ್ತ || ೫ ||
ನತ್ತ ಮಾಡಿದ ಅಕ್ಕಸಾಲಿಗ್ಗ ಅಂತಾಳ
ಏನ ಹಸನ ಹಚ್ಯಾನ ಮುತ್ತ || ೬ ||
ಹೆಂತ ಶಾಣ್ಯಾ ಅಗಸ್ಯಾಲಿ ಹುಟ್ಟ್ಯಾನು
ಎಲ್ಲಿ ಆದನು ಇವ ಬುದ್ಧಿವಂತ || ೭ ||
ಮೂಗಾ ಮುರಿದು ಮೂಳನ್ನ ಮಾಡಿದರ
ಯಾತರಾಗ ಇಡತಾಳ ನತ್ತ || ೮ ||
ದೇವರ್ಯಾಕ ನನ ಮೂಗು ಕಳೆದನೆಂದು
ನೆನಸತಾಳ ಮೂಗ ಮುಚಿಗೊಂತ || ೯ ||
ನತ್ತಿನ ತಕ್ಕೊಂದು ಅತ್ತಿಹೂವಿನ
ಶೀರಿಯ ತಂದಳು ನಕ್ಕೊಂತ || ೧೦ ||
ಶರಗಬಿಚ್ಚಿ ಜಾಡನ್ನ ನೆನಸತಾಳ
ಜರಾ ಹಾಕಿದಾನು ಸುತ್ತ ಮುತ್ತ || ೧೧ ||
ಎಂಥ ಶಾಣ್ಯಾ ಇವ ಶೀರಿ ನೇದನು
ಎಲ್ಲಿ ಆದನು ಇವ ಬುದ್ಧಿವಂತ || ೧೨||
ನಡಾ ಮುರಿದು ಕುಡಗೋಲಮಾಡಿದರ
ಶೀರಿ ಎಲ್ಲಿ ಹಾಕತಾಳ ಸುತ್ತ || ೧೩ ||
ದೇವರ್ಯಾಕ ನನ್ನ ಊನ ಮಾಡ್ಯಾನೆಂದು
ನೆನಸತಾಳ ಕುಂಟ್ಯಾಡಿಕೊಂಡ || ೧೪ ||
ಹೇಣತಿ ಸಂದು ಆದೀತು ಇಲ್ಲಿಗೆ
ಗಂಡನ ಸಂದು ಹೇಳುವೆ ಮುಂದೆ || ೧೫ ||
ಊರ ಮುಂದಿನ ಹೊಲಾ ಮಾಡಿದಾನು
ಮೂಡಲ ಹೋರಿ ಕಟ್ಟ್ಯಾನು ಎತ್ತ || ೧೬ ||
ರಂಟಿ ನೇಗಿಲು ಹೊಡಿದು ಗೊಬ್ಬರ
ಹಾಕಿದಾನು ಅವನು ಮಸ್ತಾ || ೧೭ ||
ಹೊಲಾ ಎಲ್ಲಾ ಕೈದೆನಿ ಇರುವದು
ಅಯಗಾರಿಗೆ ಕೊಡಬೇಕಯೆತ್ತ? || ೧೮ ||
ಆಗ ಪರಮೇಶ್ವರ ಬಂದ ಕೇಳತಾನ
ನೀನು ಕಾಣತೀದಿ ಬುದ್ಧಿವಂತ || ೧೯ ||
ಬೀಳ ಹೊಲ ಇದು ಏನ ಬೆಳದೈತಿ
ನೀನು ಕಾಣತಿದಿ ಪುಣ್ಯವಂತ || ೨೦ ||
ಏನು ಹೇಳಬೇಕ್ರಿ ಎತ್ತು ಆಳಿನ
ನೆತ್ತರ ಇಳಿದಾವ್ರಿ ಉದಿಯಾಗಂದ || ೨೧ ||
ಆಗ ಪರಮೇಶ್ವರ ಹೇಳಿ ಹೊಂಟಾನು
ನೀನು ಕಾಣತಿದಿ ಬುದ್ಧಿವಂತ || ೨೨ ||
ಮುಂದಿನ ವರ್ಷಕ ಮಸ್ತ ಬದಕಮಾಡಿ
ಬಿತ್ತಿದಾನು ಬೆಳದೀತಂತ || ೨೩ ||
ಬಿತ್ತಿದ ಬೀಜ ಭೂಮಿಯ ನುಂಗಿತು
ಕಾಣಲಿಲ್ಲ ಹುಟ್ಟಿದ ಗುರ್ತ || ೨೪ ||
ಮತ್ತೆ ಪರಮೇಶ್ವರ ಬಂದ ಕೇಳತಾನ
ಬೀಳಯಾಕ ಬಿದ್ದೈತೆಂತ || ೨೫ ||
ಏನ ಹೇಳಬೇಕ್ರಿ ದೇವರ ಮನಸಿಗೆ
ಬರಲಿಲ್ಲರಿ ಮಾಡಿದ ಘಾತ || ೨೬ ||
ನೆಳ್ಳೂವಾಗ ನೆನಸೂದ ಕರೇವೆಂದು
ತರ್ಕ ಮಾಡಿದಳು ಪಾರ್ವತ || ೨೭ ||
ಶಿಲೇದ ಮ್ಯಾಗ ಶಿಕೆ ಹಾಕಿದ್ಹಾಂಗ
ಅರುಚಿಗೆ ಬಸವ ಹೇಳಿದ ಮಾತ || ೨೮ ||
* * *
ಹಾಲುಮತ ಹಿರಿಮೆ
ನಮಿಸುವೆ ಶಿವನೆ ಗಂಗಾಧರನೆ
ಗೌರಿವರನೆ ಪುರಹರನೆ
ಗೌರಿವರನೆಪುರಹರನೆ
ಕೈಲಾಸನಾಥನೆ ವಿಷಧರನೆ || ೧ ||
ಕಾಲಕಾಲಕೆ ಮಳೆ ಬೆಳೆಕೊಟ್ಟು
ಕಾಪಾಡೈ ಕರುಣಾಕರನೆ
ಕಾಪಾಡೈ ಕರುಣಾಕರನೆ
ಮೃತೃಂಜಯನೆ ಪನ್ನಗಧರನೆ || ೨ ||
ಕಾಲಕಾಲನೆ ನೀಲಕಂಠನೆ
ವ್ಯಾಲಾಭರಣನೆ ಶಂಕರನೆ
ವ್ಯಾಲಾಭರಣನೆ ಶಂಕರನೆ ಶ್ರೀ-
ಶೈಲವಾಸನೆ ಶಶಿಧರನೆ || ೩ ||
ನಮಿಸುವೆ ತಾಯೆ ಪಾರ್ವತಾ ದೇವಿಯೆ
ಕಾಪಾಡೌ ಕರುಣಾನಿಲಯ
ಕಾಪಾಡೌ ಕರುಣಾನಿಲಯ
ದಾಕ್ಷಾಯಣಿದೇವಿಯೆ ಶಾಂತಿಮಯೆ || ೪ ||
ಹೇಮಾಂಬರನೆ ಹೇಮಕಾಯನೆ
ವಿದ್ಯಾನಾಥ ವಿನಾಯಕನೆ
ವಿದ್ಯಾನಾಥ ವಿನಾಯಕನೆ ಕೊಡು
ನನ್ನ ಮತಿಗೆ ಮಂಗಲವನ್ನೆ || ೫ ||
Leave A Comment