ವಚನ :

ಪುಣ್ಯದಿಂದ ಬರುವ ಫಲವನ್ನು ಎಲ್ಲರೂ ಬೇಡುವಿರಿ. ಆದರೆ ಪುಣ್ಯಮಾಡುವುದನ್ನು ಬಿಟ್ಟಿರುವಿರಿ. ಪಾಪದಿಂದ ಒದಗುವ ಫಲವನ್ನು ಒಲ್ಲೆನ್ನುವಿರಿ. ಪಾಪ ಮಾಡುವುದನ್ನು ಮಾತ್ರಬಿಡಲಾರಿರಿ. ಇದಕ್ಕಾಗಿ ಬೆಳೆದ ಬೆಳೆ ಹೋಗುವುವು ಕೈಜಾರಿ. ನಮ್ಮ ಪಾಪ ಕಂಡೇ ದೇವರು ಕೊಲ್ಲುತ್ತಿರುವನು ವಿಷಕಾರಿ. ಇದನ್ನರಿತು ಎಚ್ಚರಾಗಿರಿ.

ಪದ :

ಇದ್ದವರೆಲ್ಲರು ಇಲ್ಲದವರಿಗೆ
ಸಲ್ಲಿಸಿ ಗಳಿಸಿರಿ ಪುಣ್ಯವನು
ಸಲ್ಲಿಸಿ ಗಳಿಸಿರಿ ಪುಣ್ಯವನು
ಪರಮಾತ್ಮನು ಬೇಗನೆ ಒಲಿಯುವನು        || ೬ ||

ಪರೋಪಕಾರವು ವರಪುಣ್ಯವು ತಿಳಿ
ಪರಪೀಡೆಯೇ ಪಾಪವು ಇದನು
ಪರಪೀಡೆಯೇ ಪಾಪವು ಇದನು
ಇದನರಿತು ನಡೆಯಿರೆನ್ನುವೆ ನಾನು || ೭ ||

ನಮ್ಮ ಪಾಪಗಳ ಭಾರವನ್ನು
ಭೂದೇವಿ ಹೊತ್ತು ಕುಸಿದಿ ಹಳಿದನು
ಭೂದೇವಿ ಹೊತ್ತು ಕುಸಿದಿ ಹಳಿದನು
ನೀವಿಳಿಸಿರಿ ಅವಳ ಭಾರವನು       || ೮ ||

ಇಳಿಸದಿದ್ದರೆ ಭೂಮಿತಾಯಿ ತಾ
ನುಂಗಿಬಿಡುವಳೆಂಬುವದನ್ನು
ನುಂಗಿಬಿಡುವಳೆಂಬುದನ್ನು
ದಿಟವೆಂದು ನಂಬಿರೆನ್ನುವ ನಾನು    || ೯ ||

ವಚನ :

ಇಂದು ಪಾಪ ಪುಣ್ಯಗಳ ವಿಚಾರಣೆಯ ಕಾಲಸನ್ಹಿತವಾಗಿದೆಯೆಂದು ಎಲ್ಲರೂ ತಿಳಿಯಬೇಕು. ಇಂದು ಮಾಡಿದ ಪಾಪ ಪುಣ್ಯದ ಫಲವನ್ನು ನಾಳೆಯೇ ಉಣ್ಣಬೇಕು. ದುಷ್ಟರು ಇನ್ನು ಬದುಕುವೆನೆಂಬುದನ್ನು ಮರೆಯಬೇಕು. ಈವರೆಗಾದ ಅನ್ಯಾಯದ ಅತಿರೇಖವನ್ನು ಸಹಿಸಿ ಸಹಿಸಿ ಸಾಕಾಗಿ ಕಾಲ ಪುರುಷನು ಕೆರಳಿರುವನೆಂದು ತಿಳಿಯಬೇಕು. ಇನ್ನಾದರೂ ಸನ್ಮಾರ್ಗ ಅರಸಬೇಕು. ಈಗ ಹಾಲುಮತದ ಮಹಿಮೆಯನ್ನು ದಯೆಯಿಟ್ಟು ಲಾಲಿಸಬೇಕು.

ಪದ :

ಇವರು ಕುರುಬರು ಇವು ಡೊಳ್ಳಿನ
ಹಾಡೆಂದು ಜರಿವ ಪಂಡಿತರನ್ನು
ಹಾಡೆಂದು ಜರಿವ ಪಂಡಿತರನ್ನು
ತಿರುಳರಿತು ನುಡಿಯಿರೆನ್ನುವ ನಾನು          || ೧೦ ||

ಸಕ್ಕರಿ ಕೇಸರಿ ಬೆರೆಯಿಸಿ ಕೊಟ್ಟರೆ
ಕುಡಿಯಲು ಆಕಳ ಹಾಲನ್ನು
ಕುಡಿಯಲು ಆಕಳ ಹಾಲನ್ನು
ಕರಿ ಆಕಳದಾಮಗುವರೇನು         || ೧೧ ||

ಜೇನು ತುಪ್ಪ ಹುಳದೆಂಜಲವಲ್ಲವೆ
ಮೆಲ್ಲುವರೇಕೆಲ್ಲರು ಅದನು
ಮೆಲ್ಲುವರೇಕೆಲ್ಲರು ಅದನು
ವಸ್ತುವಿನ ಗುಣಕೆ ಕೂಡಿ ಬೆಲೆಯನ್ನು || ೧೨ ||

ಇಲ್ಲಿ ಕೂಡಿರುವ ದೈವವೆ ದೇವರು
ಎಂದು ನಂಬಿ ಕೈಮುಗಿಯುವೆನು
ಎಂದು ನಂಬಿ ಕೈಮುಗಿಯುವೆನು
ತಮ್ಮಾಶೀರ್ವಾದ ಬೇಡುವೆನು      || ೧೩ ||

ವಚನ :

ಈ ಪ್ರಪಂಚದಲ್ಲಿ ಯಾವುದೇ ಮತ ಪಂಥದಲ್ಲಿ ಹುಳುಕು ಇದೆ. ಅದರ ಜೊತೆಗೆ ಬೆಳಕು ಇದೆ. ಸಂಸ್ಕೃತಿ ಸುಧಾರಣೆಯರಿತ ಮಾನವನು ಕೊಳಕನ್ನು ತೊಳೆದು ತಿರುಳನ್ನು ಆಧರಿಸಿ ನಡೆಯಬೇಕು. ಅದರಲ್ಲಿಯೇ ಸಮಾನದ ಉನ್ನತಿ ಇದೆ.

ಪದ :

ಕುರುಬರು ನಾವು ಕುರುಬರು ನಾವು
ಕುರಿಗಳ ಮೇಯಿಸುವ ಕುರುಬರು
ಕುರಿಗಳ ಮೇಯಿಸುವ ಕುರುಬರು
ಮರೆಮೋಸಗಳರಿಯದ ಕುರುಬರು || ೧೪ ||

ಸುರಿಯುವ ಮಳೆಯಲಿ ನೆನೆಯುವ ಕುರುಬರು
ಕೊರೆಯುವ ಚಳಿಯಲಿ ಬಿರಿವವರು
ಕೊರೆಯುವ ಚಳಿಯಲಿ ಬಿರಿವವರು
ಉರಿ ಬಿಸಿಲಲಿ ಕರಿಯುವ ಧೀರರು  || ೧೫ ||

ಅಡವಿಯ ಹೊಡೆಹುಲ್ಲ ಮೇಯಿಸುವವರು
ಮಡುವಿನ ತಿಳಿನೀರ ಕುಡಿಸವರು
ಮಡುವಿನ ತಿಳಿನೀರ ಕುಡಿಸವರು
ಯಾರೊಡನೆ ಜಗಳ ಮಾಡದಂಥವರು       || ೧೬ ||

ಕಾಡಿನ ಬಂಟರು ಮುಗಿಲಿನ ನೆಂಟರು
ಹುಲಿ ಚಿರ್ಚಗಳನ್ನಿರಿಯುವವರು
ಹುಲಿ ಚರ್ಚಿಗಳನ್ನುರಿಯುವವರು
ತೋಳಗಳ ಬೆದರಿಸಿ ಅಟ್ಟುವವರು  || ೧೭||

ವಚನ :

ಹಳ್ಳಿ ನಮ್ಮ ತವರೂರು. ಅಡವಿ ನಮ್ಮ ಮನೆಮಾರು. ನಂಬಿಗೆಯ ನಾಯಿಗಳೇ ನಮ್ಮ ಗೆಳೆಯರು. ನಾವರಿಯೆವು ಪಟ್ಟಣದ ಸೆವಿಸಾರು. ಕುರಿಯೇ ನಮ್ಮ ದೇವರು. ಹಾದಿತಪ್ಪಿದವರಿಗೆ ಹಾಲು ಕುಡಿಸಿ ಹಾದಿತೋರಿಸುವವರು. ಒಂದು ಕೆನ್ನೆಗೆ ಹೊಡೆದರೆ ಎರಡನೇದನ್ನು ಕೊಡುವವರು. ತಾಳ್ಮೆ ಎಂಬುದನ್ನು ಕಲಿಸಿರುವರು ನಮ್ಮ ಹಿರಿಯರು. ಹಾಲ ಕುಡಿದು ಬದುಕುವೆವು ವರ್ಷ ನೂರು. ಇದೇ ನಮ್ಮ ಮೂಲ ಬೇರು.

ಪದ :

ಸತ್ತ ಕುರಿಗಳನು ಹೊತ್ತು ಮಾರುವೆವು
ಮತ್ತೆ ಮಾಂಸ ಸೇವಿಸದವರು
ಮತ್ತೆ ಮಾಂಸ ಸೇವಿಸೆದವರು ಆ
ಚಿತ್ತಜಾರಿಯನ್ನು ನೆನವವರು        || ೧೮ ||

ಹಾಲ ಕುಡಿದು ಹಲ ಕಕ್ಕುತ ಹಾಲನು
ರೊಕ್ಕಕೆಂದು ಮಾರದಂಥವರು
ರೊಕ್ಕಕ್ಕೆಂದು ಮಾರದಂಥವರು
ನಾವಿಂತಹ ಉದಾರ ಗುಣದವರು  || ೧೯ ||

ಇಂತಹ ಉದಾರ ಗುಣದವರೆಮಗೆ
ಹಾಲುಮತದವರು ಎನ್ನವರು
ಹಾಲುಮತದವರ ಎನ್ನುವರು ನಮ್ಮ
ಕುಲಕೆ ಹಾಲುಮತ ಎನ್ನುವರು      || ೨೦ ||

ಇಂತಹ ಉದಾರ ಗುಣದವರೆಮಗೆ
ವಡ್ಡ ಮಡ್ಡರೆಂದು ಜರೆಯುವರು
ದಡ್ಡ ಮಡ್ಡರೆಂದು ಜರೆಯುವರು ನಮ್ಮ
ಹೊಲಬನೆ ಅರಿಯದ ಗಾವಿಲರು    || ೨೧ ||

ಕುರುಬಗೆ ಹೂವನು ಕೊಟ್ಟರೆ ಅದನವ
ಕುಂಡಿಯೊಳಿಟ್ಟೆಂತೆನ್ನುವರು
ಕುಂಡಿಯೊಳಟ್ಟಿಂತೆನ್ನುವರು ನಿಜ
ಗುಟ್ಟನು ತಿಳಿಯದ ಪಾಮರನು     || ೨೨ ||

ವಚನ :

ಹಿಂದೆ ನಮ್ಮ ಹಿರಿಯನಿಗೆ ಒಬ್ಬ ದೊರೆಯು ಒಂದು ಹೂವು ಕೊಟ್ಟನಂತೆ. ಅದನ್ನು ಅವನು ತಾನು ಮುಡಿಯದೆ ಹಿಂದೆ ಇದ್ದ ಶಿವಲಿಂಗಕ್ಕೆ ಮುಟ್ಟಿಸಿದನಂತೆ ಇದನ್ನು ಕಂಡ ಅರಸನು ಹೀಗೇಕೆ ಮಾಡಿದಿಯೆನ್ನಲು ನಮ್ಮ ಒಡಿಯ ಸ್ವಾಮಿ ಅಲ್ಲಿ ನನ್ನ ಶಿವನಿರುವನೆಂದು ಲಿಂಗತೋರಿಸಿದನಂತೆ ! ಆಗ ಆ ರಾಜನು ಅವನ ಭಕ್ತಿಗೆ ಮೆಚ್ಚಿ ಆ ನಾಡನ್ನೇ ಅವನಿಗೆ ಉಂಬಳಿ ಹಾಕಿಕೊಟ್ಟನಂತೆ. ಈ ವಸ್ತುಸ್ಥಿತಿ ಅರಿಯದವರು ನಮ್ಮನ್ನೇ ಅಪಾರ್ಥಮಾಡಿ ನಿಂದಿಸುವರು. ಇದನ್ನರಿತು ಬಲ್ಲವರು ನಡೆಯಬೇಕೆಂದು ಬೇಡುವೆನು.

ಪದ :

ಕುರುಬರು ನೇಯುವ ಕರಿಕಂಬಳಿಯು
ಗುರುವಿನ ಗದ್ದುಗೆಗಿರಬೇಕು
ಗುರುವಿನ ಗದ್ದುಗೆಗಿರಬೇಕು ಶುಭ-
ಕಾರ್ಯಕೆ ಇದು ಬೇಕೇಬೇಕು        || ೨೩ ||

ಮದುವೆಯ ಹಂದರದೊಳಗೆ ಹಾಸಕ್ಕಿಯ
ಹೊಯ್ಯಲು ಕಂಬಳಿ ಇರಬೇಕು
ಹೊಯ್ಯಲು ಕಂಬಳಿ ಇರಬೇಕು ಒಕ್ಕಲಿಗರ
ಹೆಗಲಿಗೆ ಇದು ಬೇಕೇ ಬೇಕು        || ೨೪ ||

ಕುರುಬರ ಉಣಿಯ ನೂಲದು
ಯಂತ್ರಕೆ ಮಂತ್ರಕೆ ಇರಬೇಕು
ಯಂತ್ರಕೆ ಮಂತ್ರಕೆ ಇರಬೇಕು ಈ
ತಂತ್ರವ ಮೊದಲರಿತಿರಬೇಕು       || ೨೫ ||

ಗುದ್ದಲಿ ಪೂಜೆಗೆ ಕುರುಬರು ಬೇಕು
ಬಿತ್ತುವಾಗ ಕುರುಬರು ಬೇಕು
ಬಿತ್ತುವಾಗ ಕುರುಬರು ಬೇಕು
ಮತ್ತೆ ಉತ್ಸವಕ್ಕೆ ಡೊಳ್ಳಿರಬೇಕು    || ೨೬ ||

ಮೈಲಾರ ಮಹದೇವನ ಗೊರವರಿಗೆ
ಧರಿಸಲು ಕರಿ ಕಂಬಳಿ ಬೇಕು
ಧರಿಸಲು ಕರಿ ಕಂಬಳಿ ಬೇಕು
ಕೇಳಿದುವೇ ಅವರಿಗೆ ಹಿರಬದುಕು    || ೨೭ ||

ವಚನ :

ನಮ್ಮ ಕೈಗಳು ಕಾಮಧೇನು ! ಗೈಮೆ ಕಲ್ಪವೃಕ್ಷ ! ಮಂಗಳ ಗ್ರಹ ಮುಳುಗುವವರೆಗೆ ನಾವು ಕುರಿ ಮೇಯಿಸುವುದರಿಂದ ಅದಕ್ಕೆ ಕುರುಬರ ಚಿಕ್ಕೆ ಎಂದು ಹೆಸರು ಬಂದಿರುವದು. ಕಾರಣ ನಮ್ಮ ಚರಿತ್ರೆ ಹಾಗೆ ಮಹತ್ವದ್ದಾಗಿರುವದು.

ಪದ :

ಗೋಕುಲದೊಳಗಾಕಳ ಮೇಯಿಸಿದಾ
ಶ್ರೀಕೃಷ್ಣನು ಕುರುಬನು ಕೇಳು
ಶ್ರೀಕೃಷ್ಣನು ಕುರುಬರು ಕೇಳು
ಸುಳ್ಳಾದರೆ ಪಂಡಿತರನು ಕೇಳು     || ೨೮ ||

ಸಂಸ್ಕೃತ ಸಾಹಿತ್ಯದಾಕಾಶ ದಿನ ಮಣಿ
ಕಾಲಿದಾಸ ಕುರುಬನು ಕೇಳು
ಕಾಲಿದಾಸ ಕುರುಬನು ಕೇಳು
ನೀನೊಪ್ಪದಿದ್ದರೀಗಲೆ ಹೇಳು        || ೨೯ ||

ಕನ್ನಡ ನಾಡಿನ ಚನ್ನಿಗ ಕವಿವರ
ಕನಕದಾಸ ಕುರುಬನು ಕೇಳು
ಕನಕದಾಸ ಕುರುಬನು ಕೇಳು
ಕೇಳಿದಕಾಗಿ ನಮ್ಮೀ ಕುಲ ಮೇಲು   || ೩೦ ||

ವಿಜಯನಗರ ಸಾಮ್ರಾಜ್ಯದ ಕಟ್ಟಿದ
ಹುಕ್ಕ ಬಕ್ಕರು ಕುರುಬರು ಕೇಳು
ಹುಕ್ಕ ಬುಕ್ಕರು ಕುರುಬರು ಕೇಳು
ಸಂಗೊಳ್ಳಿರಾಯಣ್ಣನು ಕಟ್ಟಾಳು     || ೩೧ ||

ಮರಾಠಾ ಸಾಮ್ರಾಜ್ಯ ಕಟ್ಟಿದ ಶಿವಾಜಿ
ಮಹಾರಾಜ ಕುರುಬನು ಕೇಳು
ಮಹಾರಾಜ ಕುರುಬನು ಕೇಳು
ಸುಳ್ಳಾದರೆ ತಿಳಿ ಇತಿಹಾಸದೊಳು  || ೩೨ ||

ಅಲ್ಪ ವೆಚ್ಚದಲಿ ರೈತಗೆ ಗೊಬ್ಬರ
ಕೊಡುವವರೇ ಕುರುಬರು ಕೇಳು
ಕೊಡುವವರೇ ಕುರುಬರು ಕೇಳು
ಹೀಗೀ ರೈತ ಕುರುಬರೊಳ್ಳೇ ಮೇಳು         || ೩೩ ||

ಬಹಳ ಹೇಳಲಾರೆ ಮೈಲಾರ ಲಿಂಗನು
ಕುರುಬರ ಮನೆ ಕಾಯುವ ಆಳು
ಕುರುಬರ ಮನೆ ಕಾಯುವ ಆಳು
ಈ ಜಗದಿ ಭಕ್ತಿ ಗಾವುದ ಮೇಲು     || ೩೪ ||

ವಚನ :

ಸಂಸ್ಕೃತದಲ್ಲಿ ಕುರಿಗೇ ಕುರರೀ ಅನ್ನುವರು. ಆದರೆ ತದ್ಭವವೇ ಕುರಿಯಾಗಿರುವುದು. ಕುರಿ ಸಾಕುವವರೇ ಕುರುಬರು. ಕುರುಹು ತೋರುವರೇ ಕುರುಬರು. ಹೀಗೆ ಬಂದಿದೆ ಕುರುಬರೆಂಬ ಹೆಸರು.

ಪದ :

ಇಂತಹ ಸುಂದರ ಕುರುಬರ ಚರಿತೆಯ
ಅಲ್ಪದರಲಿ ನಾ ಹೇಳಿದೆನು
ಅಲ್ಪದರದಲಿ ನಾ ಹೇಳಿದೆನು
ಬೇಕಾದರೆ ದೊಡ್ಡದು ಮಾಡುವೆನು  || ೩೫ ||

ಕುರುಬರೆಂದರೆ ಕೀಳರಲ್ಲವೆಂದು
ಮನವರಿಕೆಯ ನಾ ಮಾಡಿದೆನು
ಮನವರಿಕೆಯ ನಾ ಮಾಡಿದೆನು
ಇದನರಿತರೆ ಧನ್ಯನು ಆಗುವೆನು    || ೩೬ ||

ವಚನ :

ಹಾಲಿನ ದಾನ ಮಾಡುವುದೇ ನಮ್ಮ ಶೀಲ ಹಾಲಿನಂತೆ ನಮ್ಮ ಮನ ಬೆಳ್ಳಗೆ, ನಮ್ಮ ಕೃತಿ ಬೆಳ್ಳಗೆ. ಆದ ಕಾರಣ ಹಾಲುಮತದವರೆಂಬ ಅಭಿದಾನ. ಹಾಲುಮತದವರೆನಿಸಿಕೊಳ್ಳುವುದೇ ನಮಗೆ ಭೂಷಣ. ಹೀಗಾದ ವಿನಃ ನಮಗೆ ಸಮಾಜದಲ್ಲಿ ಇಲ್ಲ ಸ್ಥಾನ. ಈ ಗುರಿ ಬೇಗ ಯಶಸ್ವಿಯಾದಷ್ಟು ನಮ್ಮ ಕಲ್ಯಾಣ. ಆದ ಕಾರಣ –

ಪದ :

ಕುರುಬರ ಬದಲು ಹಾಲುಮತದವರು
ಎನಿಸಲು ಮಾಡಿರಿ ಯತ್ನವನು
ಎನಿಸಲು ಮಾಡಿರಿ ಯತ್ನವನು
ಸಮಾಜ ಧುರೀಣರು ಅರಿತಿದನು    || ೩೭ ||

ಹಾಲುಮತ ಎಂಬ ಶಬ್ದವು ಎಂತಹ
ಸುಂದರವಿದೆಯೆಂದರಿತಿದನು
ಸುಂದರವಿದೆಯೆಂದರಿತಿದನು
ಲಗು ಬಳಕೆಗೆ ತರಲೆಂದೊರೆಯುವೆನು        || ೩೮ ||

ಕುರುಬರೆಂಬ ನುಡಿ ಮಾಜುವವರಿಗೆ
ಸತತ ಮಾಡಿರಿ ಪ್ರಯತ್ನವನು
ಸತತ ಮಾಡಿರಿ ಪ್ರಯತ್ನವನು
ಹೀಗಾದರೆ ಪಡೆವೆವು ಹಿರಿಮೆಯನು || ೩೯ ||

ಕಿರಿದರಲ್ಲಿ ಹಿರಿಯರ್ಥವನೊರೆಯುವ
ಸರಸ ಚರಿತೆಯನು ರಚಿಸಿದೆನು
ಸರಸ ಚರಿತೆಯನು ರಚಿಸಿದೆನು ಅನು-
ಸರಿಸಲು ಧನ್ಯನು ಆಗುವೆನು        || ೪೦ ||

 

ಮಹಾಸತಿ ಅನಸೂಯೆ

ಗುರುವೆ ನಿಮ್ಮ ಘನ ಚರಣವ ನಂಬಿ
ಶರಣು ಬಂದೆ ಕರುಣದಿ ನೀನು
ಶರಣು ಬಂದೆ ಕರುಣದಿ ನೀನು | ನಿನ್ನ
ತರಳನೆಂದು ಕೊಡು ಜಯವನ್ನು              || ೧ ||

ಮೂರು ಲೋಕವ ಪಾಲಿಸು ಶಂಕರ
ಗೌರಿ ಗಣಪ ವೀರೇಶ್ವರನು
ಗೌರಿ ಗಣಪ ವೀರೇಶ್ವರನು | ಸುಕು-
ಮಾರತನದಿ ಭೃಂಗಿಗಳನ್ನು                   || ೨ ||

ವೀರ ಕೈಲಾಸದಿ ಹರನ ರೂಪವ
ಧರಿಸಿ ಮೆರೆವ ಶಿವ ಪ್ರಮಥರನು
ಧರಿಸಿ ಮೆರೆವ ಶಿವ ಪ್ರಮಥರನು | ಈ
ಧರಣಿಯನ್ನು ತಾ ಶರಣರನು                 || ೩ ||

ಅರಿತು ಸರ್ವರ ಚರಣಗಳನ್ನು
ಶಿರದಿ ಹೊತ್ತು ಕುಣಿದಾಡುವೆನು
ಶಿರದಿ ಹೊತ್ತು ಕುಣಿದಾಡುವೆನು | ಇಹ-
ದುರಿತವನ್ನು ತುಳಿದಾಡುವೆನು                || ೪ ||

ಕೇಳಿರೆಲ್ಲರು ಹೇಳುವೆ ನಾನು
ಶೀಲ ಧರ್ಮದ ಗುಣಗಳನ್ನು
ಶೀಲ ಧರ್ಮದ ಗುಣಗಳನ್ನು | ನೀವು
ಬಾಳಿರಿ ನಂಬಿ ಶಿವನನ್ನು            || ೫ ||

ಸ್ಥಿರವಲ್ಲವು ನಿರ್ಗುಣನಳಿ ಎಂಥ
ನರ ಜಲ್ಮವು ಕಡೆಯೊಳೆ ಇನ್ನು
ನರ ಜಲ್ಮವು ಕಡೆಯೊಳೆ ಇನ್ನು | ತಾ
ಬೆರೆದು ಕೂಡುವುದು ಮಣ್ಣನ್ನು                || ೬ ||

ಧರಣಿಯಲ್ಲಿ ನೀ ಇರುವುದರೊಳಗೆ
ಭರದಿ ಮಾಡುವುದು ಭಕ್ತಿಯನು
ಭರದಿ ಮಾಡುವದು ಭಕ್ತಿಯನು | ಮುರ-
ಹರನ ಹೊಂದಿರಿ ಮುಕ್ತಿಯನು                || ೭ ||

ಸೊಕ್ಕಿನಿಂದಲಿ ಮೆರೆಯಬೇಡಿರಿ
ಮುಕ್ಕಣ್ಣನ ಪಾದಗಳನ್ನು
ಮುಕ್ಕಣ್ಣನ ಪಾದಗಳನ್ನು | ಅವ
ಅಕ್ಕರತೆಯಲಿ ಕಾಯುವನು                   || ೮ ||

ವಚನ :

ಹೇ ಮನುಷ್ಯ, ಇರುವೆ ಮೊದಲು ಮಾಡಿಕೊಂಡು ಆನೆಯವರೆಗೂ ಎಲ್ಲಾ ಜೀವಿಗಳಲ್ಲಿ ಮನುಷ್ಯನೇ ಶ್ರೇಷ್ಠನು. ಯಾಕಂದರೆ, ದೇವರು ಮನುಷ್ಯನಿಗೆ ವಿಚಾರ ಶಕ್ತಿಯನ್ನು ಕೊಟ್ಟಿದ್ದಾನೆ. ಈ ವಿಚಾರ ಶಕ್ತಿಯಿಂದ ಪಾಪ ಪುಣ್ಯಗಳನ್ನು ತಿಳಿದುಕೊಳ್ಳುವುದಕ್ಕೆ ಬರುತ್ತದೆ. ಹೀಗಿದ್ದು ಅಜ್ಞಾನದಿಂದ ಪಶುಗಳಂತೆ ಸಂಸಾರಕ್ಕೆ ಮೋಹಿಸಿ ಭಗವಂತನ ಭಜನೆಯನ್ನು ಮರೆತು ನಾಯಿ ನರಿ ಮೊದಲಾದ ಅನೇಕ ಜನ್ಮಗಳನ್ನು ತಿರುಗಬೇಡಿರಿ.

|| ಕಂದ ||

ಸತಿ ಸುತರು ಬಂಧು ಬಳಗವು ಮೃತ್ಯದೊಳು
ತನ್ನೊಡನೆ ಬರುವ ದೇಹವಿದು ಕ್ಷಿತಿಯೊಳು ಶಾಶ್ವತವೆ?
ಎಲೆ ಮತಿಗೇಡಿ ಮನುಜ ಧರ್ಮದಿಂದ ಚರಿಸು.

ವಚನ :

ಹೇ ಮೂಢಾ, ನೀನು ಚಿರಂಜೀವಿಯಲ್ಲ. ನೀರಿನ ಮೇಲಿನ ಗುರುಳೆಯಂತೆ ಈ ಶರೀರವು ಅಸ್ಥಿರವಾದದ್ದು. ಹೆಂಡರು ಮಕ್ಕಳಿಗೆ ಮೋಹಿಸಿ ಮೈ ಮರೆತು ಪರಮಾತ್ಮನನ್ನು ಮರತೆಯಲ್ಲ. ನೀನು ಸಾಯುವಾಗ ನಿನ್ನ ಹೆಂಡಿರು ಮಕ್ಕಳು ನಿನ್ನ ಸಂಗಡ ಬರುವರೆ ಹ್ಯಾಗೆ? ಮತ್ತು ನೀನು ಗಳಿಸಿದ ಹೊಲ ಮನೆಗಳನ್ನು ನಿನ್ನ ಹಿಂದೆ ತೆಗೆದುಕೊಂಡು ಹೋಗುವಿಯಾ? ಯಮದೂತರು ಹಿಡಿದು ಬಡಿದು ಹೊಡೆಯುವಾಗ ನಿನ್ನನ್ನು ಬಿಡಿಸಿಕೊಳ್ಳುವವರು ಯಾರು ಹೇಳು. ಅಜ್ಞಾನವಂತನಾಗಬೇಡ. ದೇವರ ಭಕ್ತಿಯನ್ನು ಸಂಪಾದಿಸು.

ಪದ :

ನಿನ್ನ ಕುಲದ ನಡತೆಯ ಬಿಡಬೇಡ
ಮನ್ನಿ ಸು ಗುರು ಯಜಮಾನರನು
ಮನ್ನಿ ಸು ಗುರು ಯಜಮಾನರನು | ತಿಳಿ
ಸನ್ನುತ ಲೀಲೆಯ ಮಾರ್ಗವನು     || ೯ ||

ಮಾಡಬೇಡ ಪರ ಹೆಣ್ಣಿಗೆ ಆಸೆಯ
ಕೇಡು ತಪ್ಪಲಾರದು ನಿನಗೆ
ಕೇಡು ತಪ್ಪಲಾರದು ನಿನಗೆ | ಒಡ-
ನಾಡು ಸಜ್ಜನರ ಕೂಡಿನ್ನು  || ೧೦ ||

ಕಳ್ಳತನಕೆ ಮೈಗೊಡಬೇಡ
ಸುಳ್ಳು ಸಾಕ್ಷಿ ಹೇಳುವುದನ್ನು
ಸುಳ್ಳು ಸಾಕ್ಷಿ ಹೆಳುವುದನ್ನು  | ಮೈ
ಗಳ್ಳನಾಗದಿರು ನೀ ಮುನ್ನು          || ೧೧ ||

ಮಂದಿಯ ಮನನೊಂದಿಸಿ ಹೊಂದಬೇಡ ಬಿಡು
ಹಂದಿ ನರಿ ನಾಯಿ ಜನ್ಮವನು
ಹಂದಿ ನರಿ ನಾಯಿ ಜನ್ಮವನು | ಮನ-
ಬಂದ ಹಾಗೆ ನಡೆಯದಿರು ಇನ್ನು    || ೧೨ ||

ಕುಲದಿ ಛಲದಿ ಬಲವಂತನೆಂದು ನೀತಿ
ತಿಳಿದು ಸೊಕ್ಕಿ ಮೆರೆಯುವದನ್ನು
ತಿಳಿದು ಸೊಕ್ಕಿ ಮೆರೆಯುವದನ್ನು | ಬಿಡು
ತಿಳಿದು ನೋಡು ರಾವಣನನ್ನು      || ೧೩ ||

ಜಾಣನಂಥ ಕಡು ಜಾಣನಲ್ಲ ಬಿಡು
ಕೋಣ ಸೊಕ್ಕು ಬಡಿವಾರವನ್ನು
ಕೋಣ ಸೊಕ್ಕು ಬಡಿವಾರವನ್ನು | ನೀ
ಕ್ಷೋಣಿಯಲ್ಲ ಅಲ್ಪನು ನೀನು         || ೧೪ ||

ಪರರಿಗೆ ಇದ್ದ ಸಂಪತ್ತನ್ನು
ಮರುಗಬೇಡ ಹಿಡಿಧೈರ್ಯವನು
ಮರುಗಬೇಡ ಹಿಡಿಧೈರ್ಯವನು | ಪುರ
ಹರನು ಕೊಡುವನು ಸಿರಯನ್ನು     || ೧೫ ||

ಕುಂದು ಹೊರಲಬ್ಯಾಡೆಂದಿಗೂ ಜಗದಿ
ಇಂದುಧರನ ಪಾದಗಳನ್ನು
ಇಂದುಧರನ ಪಾದಗಳನ್ನು | ಬಲು-
ಚಂದದಿಂದ ಧ್ಯಾನಿಸು ನೀನು       || ೧೬ ||