ವಚನ :

ಹೇ ಮಾನವಾ, ನಿತ್ಯ ಆಚರಣೆಯನ್ನು ದಾನ ಧರ್ಮ ಪರೋಪಕಾರವನ್ನು ಪರಮಾತ್ಮ ಪೂಜೆಯನ್ನು ಸಹಾಯವನ್ನು ಮಾಡಿ ಸುಖ ಪಡದೆ ಸುಖಾದಾಸೆಯಿಂದ ಹಗಲಿರುಳು ಕಳವು, ಕೊಲೆ, ಹಾದರ, ಸುಳ್ಳು, ಚಾಡಿ ಮುಂತಾದ ನೀಚ ಕಾರ್ಯಗಳಲ್ಲಿ ಮಗ್ನನಾಗಿ ತಿರುಗುವಿಯಲ್ಲ? ಇಂಥ ದುರಾಚಾರದಲ್ಲಿ ನಿನಗೆ ಸುಖವೆಷ್ಟು? ಈ ಲೋಕದಲ್ಲಿ ಪ್ರಾರಬ್ಧದಿಂದ ಸುಖ ದುಃಖಗಳು  ದೊರೆಯುವವಲ್ಲದೆ ಬೇರೆ ನಿನ್ನ ಹಂಬಲದಿಂದಲೇನಾಗುವುದು? ಪೂರ್ವದಲ್ಲಿ ಮಹಾತ್ಮರನ್ನು ವಿಚಾರಿಸು.

|| ವೃತ್ತ ||

ಫಣಿಯಂ ಬುಟ್ಟಿಯೋಳ್ ಇಟ್ಟು ಕಟ್ಟಿರಲು ಕೂಳಂ ಕಾಣದೆ ಸಾಯುವ ಕ್ಷಣದೋಳ್ ಒಂದು ಇಲಿಯು ಬುಟ್ಟಿಯಂ ಕಡಿ ಹೊಕ್ಕು ಹಾವಿಗೆ ಆಹಾರವಾಯಿತು. ಹಾವು ತನ್ನ ದೈವದಿಂದ ಕಿಂಡಿಯೊಳಗಿಂದ ಓಡಿ ಹೋಯಿತು ನೋಡಿರಿ ಜಗದೋಳ್ ಪ್ರಾರಬ್ಧವೇ ಕಾರಣಂ.

ವಚನ :

ಒಬ್ಬ ಹಾವಾಡಿಗನು ಹಾವನ್ನು ಹಿಡಿದುಕೊಂಡು ಬಂದು ಪುಟ್ಟಿಯಲ್ಲಿ ಹಾಕಿ ಕಟ್ಟಿ ತಲೆ ದಿಂಬಿಗೆ ಇಟ್ಟು ಮಲಗಿದ್ದನು. ಹಾವು ಅನ್ನವು ಇಲ್ಲದೆ ಹೊರಗೆ ಹೋಗುವುದಕ್ಕೆ ಮಾರ್ಗವನ್ನು ಕಾಣದೇ ಗೋಳಾಡುತ್ತಿತ್ತು. ಒಂದಾನೊಂದು ಇಲಿಯು ತನ್ನಿಂದ ತಾನೇ ಪ್ರಯತ್ನದಿಂದ ಬುಟ್ಟಿಯನ್ನು ಕಡಿದು ಕಿಂಡಿಯನ್ನು ಮಾಡಿತು. ಆಗ ಹಾವು ಇಲಿಯನ್ನು ತಿಂದು ಅದೇ ಇಲಿಯು ಮಾಡಿದ ತೂತಿನಿಂದ ಹೊರಗೆ ಹೋಗಿ ಸಂಕಟದಿಂದ ಪಾರಾಯಿತು. ಆದ್ದರಿಂದ ದೈವಬಲವೇ ಮುಖ್ಯವಾದದ್ದು. ಈ ದೈವವಾದರೂ ತನ್ನಿಂದ ತಾನೇ ಎಂದೂ ಆಗುವುದಿಲ್ಲ. ನಾವು ಮಾಡಿದ ಕರ್ಮವೇ ಪ್ರಾರಬ್ಧವಾಗುವುದು. ಆದ್ದರಿಂದ ಪುಣ್ಯವನ್ನು ಮಾಡು. ಉತ್ತಮವಾದ ಪಾರಮಾರ್ಥವು ಪ್ರಾಪ್ತವಾಗುತ್ತದೆ.

ಪದ :

ಸತ್ತ ಕುರಿಯನ್ನು ಹೊತ್ತು ಮಾರುವವನು
ನಿತ್ಯದಲ್ಲಿ ಕುರುಬನು ನೋಡಾ
ನಿತ್ಯದಲ್ಲಿ ಕುರುಬನು ನೋಡಾ | ನೀ
ಕುತ್ತಗಿ ಕೊಯ್ಯಲಿ ಬೇಡಾ  || ೧೭ ||

ಅರಿಯದಲೆ ವರ ಹರಕೆಯೆಂದು ನೀ
ಕುರಿಯನ್ನು ಕಡಿಯಲಿ ಬೇಡ
ಕುರಿಯನ್ನು ಕಡಿಯಲಿ ಬೇಡ | ದೇವರು
ಕುರಿ ತಿಂಬುವನೇ ಮೂಢಾ          || ೧೮ ||

ಹೆಂಡ ಸಾರಾಯಿ ಕುಡಿದು ನೀನು ಯಮ-
ಗೊಂಡದಲ್ಲಿ ಬೀಳಲಿ ಬೇಡ
ಗೊಂಡದಲ್ಲಿ ಬೀಳಲಿ ಬೇಡ | ಜಗ-
ಬಂಡನಾಗಿ ಹೊಂದುವಿ ಕೇಡ        || ೧೯ ||

ನಿನ್ನ ಮತ ಧರ್ಮಾಚರಣೆಯನು
ಮಾಡದೆ ನೀನು ಬಿಡಬೇಡ
ಮಾಡದೆ ನೀನು ಬಿಡಬೇಡ | ಅದು
ಕೊಡುವು ನಿನಗೆ ಫಲವನ್ನು || ೨೦ ||

ಹರಿಯ ನಾಮವನು ಉಚ್ಛರಿಸುತಲಿರು
ಎಚ್ಚರಿಕೆಯಲಿ ಮರಿಯಲಿಬೇಡ
ಎಚ್ಚರಿಕೆಯಲಿ ಮರಿಯಲಿಬೇಡ | ಇದು
ನರ ಜನ್ಮಕೆ ಭೂಷಣ ನೋಡ        || ೨೧ ||

ಪರರ ಗಂಟು ಅಪಹರಿಸಲಿ ಬೇಡ ನೀ
ಮೊರೆ ಹೊಕ್ಕವರನು ಬಿಡಬೇಡ
ಮೊರೆ ಹೊಕ್ಕವರನು ಬಿಡಬೇಡ | ನಂ-
ಬಿರುವವರನು ವಂಚಿಸಬೇಡ        || ೨೨ ||

ಸ್ಮೃತಿ ಗುರುವಾಖ್ಯವ ಮೀರದೆ
ಪಾದವ ಹಿಡಿದು ನಡಿ ಬಿಡಬೇಡ
ಪಾದವ ಹಿಡಿದು ನಡಿ ಬಿಡಬೇಡ | ಸದ್ಗತಿ
ಯಾಗುವುದು ನಿನಗೆ ನೋಡಾ      || ೨೩ ||

ವಚನ :

ಧರ್ಮವಂತರೆ, ಸತ್ಯ ಹಾಗೂ ಧರ್ಮವನ್ನು ಸದಾ ಆಚರಿಸಬೇಕೆಂಬುದಾಗಿ ಸ್ಮೃತಿಯು ಬೋಧಿಸುತ್ತದೆ. ಗ್ರಹಸ್ಥ ಜಗತ್ತಿನಲ್ಲಿ ಧರ್ಮವೇ ಮುಖ್ಯ ಕಾರಣವಾಗಿದೆ. ಜಾತಿ, ಕುಲ, ಕ್ರಿಯಾದಿಗಳನ್ನು ಬಿಡದೇ ನಡೆಯಬೇಕು. ಕುಲ ಧರ್ಮ ಕೆಟ್ಟರೆ ನರಕ ವಾಸವು ಎಂದಿಗೂ ತಪ್ಪಲಾರದು. ತಮ್ಮ ಕುಲಧರ್ಮವು ಹೇಗೇ ಇದ್ದರೂ ಅದೇ ತಮಗೆ ದೊಡ್ಡದು. ಪರರ ಹಿತ ಕೇಳುತ್ತಿರಬೇಕು. ಶಾಸ್ತ್ರ ಸಮ್ಮತವಾಗದಂಥ ನಡತೆಯು ತಮ್ಮಲ್ಲಿ ಅಜ್ಞಾನದಿಂದ ಬಂದು ಬೇರೂರಿದ್ದರೆ ಬಿಟ್ಟುಕೊಡಬೇಕು. ತನ್ನ ಧರ್ಮದಲ್ಲಿ ನಿರತನಾಗಿರಬೇಕೆಂದು ಕೃಷ್ಣನು ಅರ್ಜುನನಿಗೆ ಹೀಗೆ ಹೇಳಿದ್ದಾನೆ :

“”ಸ್ವಧರ್ಮನಾಪಿನ ಶ್ರೀ ಅಹಾಃ ಪರಮೋ ಧರ್ಮ ಭಯಂವಃ” ಎಂಬ ಗೀತೆಯ ವಚನದಂತೆ ತನ್ನ ಧರ್ಮವು ತನಗೆ ಸುಖವನ್ನು ಕೊಡುತ್ತದೆ. ಅನ್ಯಧರ್ಮವು ಭಯಂಕರವಾದದ್ದು, ಆದ್ದರಿಂದ ಪರಧರ್ಮವನ್ನು ಹಿಡಿಯಬೇಡ. ಅಹಿಂಸಾ ಪರಮೋಧರ್ಮಃ ಎಂಬಂತೆ ಧರ್ಮಗಳಲ್ಲಿ ಅಹಿಂಸೆಯೆಂದರೆ ಎರಡನೇ ಪ್ರಾಣಗಳನ್ನು ಕೊಲ್ಲದಿರು ಮತ್ತು ಎರಡನೇಯವರಿಗೆ ನೋವು ಮಾಡದಿರುವುದೇ ಶ್ರೇಷ್ಠವಾದ ಧರ್ಮವಾಗಿದೆ. ಯಜ್ಞಾದಿ ಕರ್ಮಗಳಲ್ಲಿ ಸಹ ಕುರಿಗಳನ್ನು ಕಡಿದು ತಿಂಬುವವರು ಮುಂದಿನ ಜನ್ಮದಲ್ಲಿ ಕುರಿಗಳಾಗಿ ಹುಟ್ಟುವರು. ಕೊಲ್ಲಿಸಿಕೊಂಡಂಥ ಕುರಿಯು ಮನುಷ್ಯನಾಗಿಯೇ ಹುಟ್ಟಿ ಇವನನ್ನು ಕೊಲ್ಲುವದೆಂದು ಧರ್ಮ ಶಾಸ್ತ್ರವು ಹೇಳುತ್ತದೆ. ದೇವರಿಗೆಂದು ಬೇಡಿಕೊಂಡು ಕುರಿಗಳನ್ನು ಕೊಲ್ಲುವವರು ಪರಮಪಾಪಿಗಳಾಗಿ ಹುಟ್ಟುತ್ತಾರೆ. ಇವರನ್ನು ರಾಕ್ಷಸರೊಳಗೆ ಎಣಿಸತಕ್ಕದ್ದು. ದೇವರು ಕಾಣಬಲ್ಲನೆ? ಕುರಿಗಳನ್ನು ಬೇಡಬಲ್ಲನೆ? ದೇವರು ಕಾಡಿದರೆ ಮನುಷ್ಯರು ಉಳಿಯುವುದುಂಟೆ? ರಾಕ್ಷಸರಂತೆ ಮಾಂಸವನ್ನು ಬೇಡಿ ಮನುಷ್ಯರಿಂದ ಹೊಟ್ಟೆ ಹೊರಕೊಳ್ಳುವವರು ದೇವರಲ್ಲ. ಇಂಥ ಪಿಶಾಚಿಗಳಿಗೆ ದೇವರೆಂದು ನಂಬುವ ಪಾಪಿಗಳು ಭಕ್ತರಲ್ಲ. ನಿಜವಾದ ಕುರುವನು ಕುರಿಗಳನ್ನು ಮಕ್ಕಳಂತೆ ಜೋಪಾನ ಮಾಡುತ್ತಾನೆ. ಬದುಕಿ ಇದ್ದರೆ ಹಾಲುಂಬುವರು. ಸತ್ತರೆ ಹೊತ್ತು ಮಾರುವರು. ಯಾವನು ಕುರಿಯನ್ನು ಕೊಂದು ತಿಂಬುವನೋ ಅವನು ಕುರುಬನಲ್ಲ. ಅಂಥವನು ಲಿಂಗವನ್ನು ಧರಿಸಿ ತನ್ನ ಗುರುವನ್ನು ಕರೆತಂದು ತನ್ನ ಮನೆಯಲ್ಲಿ ಉಣಿಸಿದರೆ ನಾಯ ನರಕವನ್ನು ಹೊಂದುವನು. ಆದ್ದರಿಂದ ಹೇ ಮಾನವಾ. ನೀನು ನಿತ್ಯದಲ್ಲಿ ಸ್ನಾನಮಾಡಿ ವಿಭೂತಿಯನ್ನು ಧರಿಸು. ನಾಚಬೇಡ. ದೇವರನ್ನು ಪೂಜಿಸು. ಸದ್ಗುಣಗಳನ್ನು ಬಿಡದೆ ಉದ್ಯೋಗವನ್ನು ಮಾಡು. ಆಶ್ರಯಿಸಿದಂಥ ಸತಿ ಸುತರನ್ನು ಕಾಪಾಡು. ಪೂರ್ವದಲ್ಲಿ ಮಹಾತ್ಮರು ಹೇಗೆ ಸಂಸಾರ ಮಾಡಿದರೋ ಅವರಂತೆ ನೀನು ಸಂಸಾರಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರನಾಗು. ಮೊದಲಿನ ಸಂಸಾರಿಗಳಲ್ಲಿ ಶ್ರೇಷ್ಟರಾದ ಅತ್ರಿ-ಅನಸೂಯದೇವಿಯರ ಚರಿತ್ರೆ ಹೇಳುವೆ ಭಕ್ತಿಯಿಂದ ಕೇಳಿರಿ.

ಪದ :

ಘನ ಮಹಿಮದಿ ಪಾವನದಿಂದೆಸೆಯುವ
ಅನಸೂಯಾ ಚರಿತ್ರೆಯ ನಾನು
ಅನುಸೂಯಾ ಚರಿತ್ರೆಯ ನಾನು | ಸ
ಜ್ಜನರಲಿ ಚಂದದಿ ಹೇಳುವೆನು       || ೨೪ ||

ಅತ್ರಿ ಎಂಬ ಮುನಿನಾಥನಿದ್ದನೀ
ಧರೀತ್ರಿಯಲಿ ಘನತಪವನ್ನು
ಧರೀತ್ರಿಯಲಿ ಘನತಪವನ್ನು | ಮಾ
ಡುತ್ತಿದ್ದ ನಿತ್ಯದಲಿ ತಾನು   || ೨೫ ||

ಒಂದು ದಿನದೊಳು ಅತ್ರಿಯ ಮನಿಗೆ
ಬಂದನು ಶೌಬರಿಯೆಂಬ ಮುನಿವರನು
ಬಂದನು ಶೌಬರಿಯೆಂಬ ಮುನಿವರನು | ಆ
ನಂದದಿ ಅತ್ರಿಯ ನೋಡಿದನು      || ೨೬ ||

ಬಂದ ತೌಬರಿಗೆ ವಂದಿಸಿ ಅತ್ರಿಯು
ಚಂದದಿಂದ ಉಪಚಾರವನು
ಚಂದದಿಂದ ಉಪಚಾರವನು | ಮನ-
ದಿಂದ ಮಾಡಿದನು ಮುನಿವರನು    || ೨೭ ||

ಆಗ ಹೇಳಿದನು ಶೌಬರಿ ಅತ್ರಿಗೆ
ರಾಗದಿಂದ ಸಂಸಾರವನು
ರಾಗದಿಂದ ಸಂಸಾರವನು | ನೀ
ನೀಗಿ ಮಾಡು ಹೇಳುವೆ ನಾನು      || ೨೮ ||

ಕೇಳೆಲೊ ಅತ್ರಿ ಸಕಲಾಶ್ರಮದೊಳು
ಮೇಲು ಗ್ರಹಸ್ಥಾಶ್ರಮವಿದು
ಮೇಲು ಗ್ರಹಸ್ಥಾಶ್ರಮವಿದು | ನೀ
ತಾಳು ಬಿಡದೆ ಸಂಸಾರವನು       || ೨೯ ||

ಮೌನಿ ಜ್ಞನಿ ಸನ್ಯಾಸಿಗಳನ್ನು
ಮಾನದಿಂದ ಸಂಸಾರವನು
ಮಾನದಿಂದ ಸಂಸಾರವನು | ಈ
ಕ್ಷೋಣಿಯಲ್ಲಿ ಮಾಡಿಕೊಂಡಿರು ನೀನು         || ೩೦ ||

ವಚನ :

ಎಲೈ ಅತ್ರಿ ಮುನಿಯೆ, ಬ್ರಹ್ಮಚಾರಿ, ಗ್ರಹಸ್ಥ, ವಾನಪ್ರಸ್ಥ, ಸನ್ಯಾಸ ಎಂಬ ನಾಲ್ಕು ಆಶ್ರಮಗಳಲ್ಲಿ ಗ್ರಹಸ್ಥಾಶ್ರಮವೇ ದೊಡ್ಡದು. ಯಾಕಂದರೆ ಅನೇಕ ಮುನಿಗಳು, ಜ್ಞಾನಿಗಳು, ಸನ್ಯಾಸಿಗಳು ಮತ್ತು ಪಾಪಿ ಪರದೇಶಿ ಮುಂತಾದ ಅನಾಥರು ಸಂಸಾರಿಗಳಲ್ಲಿ ರಕ್ಷಣವಾಗುತ್ತಾರೆ. ಆದ್ದರಿಂದ ನೀನು ಸಂಸಾರವನ್ನು ಮಾಡು ಎಂದು ಹೇಳಿದನು. ಶೌಬರಿಯ ಆಜ್ಞೆಯನ್ನು ಕೇಳಿ ಅತ್ರಿಯು ಪ್ರಪಮಚ ಮಾಡಲಿಕ್ಕೆ ಒಡಂಬಟ್ಟು ಲಗ್ನವಾಗಲಿಕ್ಕೆ ಯೋಗ್ಯವಾದ ಕನ್ಯೆಯನು ಹುಡುಕುತ್ತ ಅನೇಕ ದೇಶಗಳಲ್ಲಿ ಸಂಚರಿಸಿದನು. ಆಗ ಈತನಿಗೆ ಸುದೈವದಿಂದ ಅನಸೂಯಾ ಎಂಬ ಗುಣವಂತೆಯು ದೊರೆತಳು. ಅವಳನ್ನು ಲಗ್ನವಾಗಿ ತನ್ನ ಆಶ್ರಮಕ್ಕೆ ಕರೆತಂದು ಸಂಸಾರ ಸುಖದಿಂದ ಇದ್ದನು. ಅನಸೂಯಾ ಹೇಳಿದ್ದೇನಂದರೆ –

ಪದ :

ಗಂಡನೆ ದೇವರು ಗಂಡನೆ ಗುರು
ಗಂಡನೆ ಸರ್ವ ಬಳಗವು ಮತ್ತು
ಗಂಡನೆ ಸರ್ವ ಬಳಗವು ಮತ್ತು
ಗಂಡನಿಂದ ಸದ್ದತಿಯೆನುತ          || ೩೧ ||

ಪತಿಯ ಸೇವೆಯನು ಹಿತದಿ ಮಾಡುವಳು
ಸತಿ ಅನಸೂಯಾ ನಿರುತದಲಿ
ಸತಿ ಅನಸೂಯಾ ನಿರುತದಲಿ | ಆ
ಪತಿಗೆ ಹಿತವನು ಚಿಂತಿಸುತ         || ೩೨ ||

ತನ್ನ ಗಂಡನ ಸುಖ ದುಃಖವನು
ತನ್ನವೆಂದು ತಾ ಭಾವಿಸುತ
ತನ್ನವೆಂದು ತಾ ಭಾವಿಸುತಾ | ಸತಿ
ಭಿನ್ನವಿಲ್ಲದಿದ್ದಳು ತಾನು    || ೩೩ ||

ನಿತ್ಯ ಕನಸಿನಲ್ಲಿ ನೆನಸದಿದ್ದಳು
ಘನತರವಾದ ಸಂಪತ್ತು
ಘನತರವಾದ ಸಂಪತ್ತು | ತನ್ನ
ಮನಕೆ ತಾರದೆ ಏಪತ್ತು    || ೩೪ ||

ಮನಿಗೆ ಬಂದ ಮುನಿಯೋಗಿಗಳನ್ನು
ಸನುಮತದಿಂದುಚರಿಸುತ್ತ
ಸನುಮತದಿಂದುಪಚರಿಸುತ್ತಾ | ಸತಿ
ಘನ ಕೀರ್ತಿ ಪಡೆದಳು ಮತ್ತು        || ೩೫ ||

ಸುಳ್ಳು ಚಾಡಿ ಮೈಗಳ್ಳ ಗುಣಗಳು
ಎಳ್ಳಷ್ಟು ಇಲ್ಲ ಈಕೆಯ ಸುತ್ತು
ಎಳ್ಳಷ್ಟು ಇಲ್ಲ ಈಕೆಯ ಸುತ್ತು | ಮನ
ದಲ್ಲಿ ಶಂಕರನ ಧ್ಯಾನಿಸುತ || ೩೬ ||

ಎಂಥ ಕಷ್ಟ ಬಂದೊದಗಿದರೂ
ಚಿಂತಿ ಮಡದಿದ್ದಳೊ ನಗುತ
ಚಿಂತಿ ಮಾಡದಿದ್ದಳೋ ನಗುತ | ತನ್ನ
ಕಾಂತನನ್ನು ಸಂತೋಷಿಸುತ       || ೩೭ ||

ಜಡಜ ನೇತ್ರಿಯ ನಡೆತೆಯಾ ನೋಡಿ
ಪೊಡವಿ ಜನರು ಕೊಂಡಾಡುತ್ತ
ಪೊಡವಿ ಜನರು ಕೊಂಡಾಡುತ್ತ | ನಮ್ಮ
ಹಡದ ತಾಯಿಯೆಂಬರು ಮತ್ತ      || ೩೮ ||

ವಚನ :

ಈ ಪ್ರಕಾರವಾಗಿ ಅನಸೂಯಾದೇವಿಯು ಸದ್ಗುಣಿಯಾಗಿ ತನ್ನ ಪತಿಸೇವೆಯಲ್ಲಿ ಇರುತ್ತಿರಲಾಗಿ ಈಕೆಯ ಪತಿವ್ರತಾ ಧರ್ಮವನ್ನು ನೋಡಿ ಸೂರ್ಯ ತನ್ನ ಚರಣ ಕಿರಣಗಳಾದ ಬಿಸಿಲ ತಾಪವು ಈಕೆಯ ಮನೆಯ ಮೇಲೆ ಬೀಳಬಾರದೆಂದು ಓರಿಗೆ ಸಂಚರಿಸುತ್ತಿದ್ದನು. ಮಾರುತನು ಈಕೆಯ ಅಂಗಳದಲ್ಲಿ ಬಿದ್ದ ಕಸವನ್ನು ತೆಗೆಯುತ್ತಿದ್ದನು. ಆಶ್ರಮದ ಸುತ್ತಮುತ್ತ ಆ ವನದಲ್ಲಿ ಸಂಚರಿಸುವಂಥ ಕ್ರೂರ ಮೃಗಗಳು ತಮ್ಮ ಸ್ವಭಾವವಾದ ವೈರಭಾವವನ್ನು ಬಿಟ್ಟು ಈ ಮಹಾತಾಯಿಯ ಅಧೀನವಾಗಿ ವರ್ತಿಸುತ್ತಿದ್ದವು. ಈಕೆಯು ಜಗನ್ಮಾತೆಯೆಂದು ಸಜ್ಜನರು ಕೊಂಡಾಡುತ್ತಿದ್ದರು. ಇಂಥ ಅನಸೂಯಾ ದೇವಿಯು ಈ ಭೂಮಂಡಲದಲ್ಲಿರುವಳೆಂಬು ದನ್ನು ತಿಳಿಯದೆ, ನಮ್ಮ ಸಮಾನ ಪತಿವೃತಾ ಧರ್ಮವುಳ್ಳವರು ಯಾರು ಇದ್ದಾರೆಂದು ಪಾರ್ವತಿ, ಲಕ್ಷ್ಮಿ, ಸರಸ್ವತಿಯರಿಗೆ ಸೊಕ್ಕು ಬಂದಿತು. ಅದೆಂತೆಂದರೆ –

ಪದ :

ಮೂರು ಮೂರ್ತಿಗಳು ಹೆಂಡರುಗಳಿಂದ ಘನ
ಗೌರಿ ಲಕ್ಷ್ಮಿ ಶಾರದೆಯಿವರು
ಗೌರಿ ಲಕ್ಷ್ಮಿ ಶಾರದೆಯಿವರು | ನಾವು
ಮೂರು ಮಂದಿ ಪತ್ರಿಯವರು       || ೩೯ ||

ನಮ್ಮ ಸಂಪತ್ತು ರೂಪದ ಸೊಗಸು
ವೈಭವವೇನು ಹೇಳುವದು
ವೈಭವವೇನು ಹೇಳುವದು | ನಮ್ಮ
ಪತಿವೃತಾಗುಣಗಾನ ಮಾಡದವರ‍್ಯಾರು      || ೪೦ ||

ಯಾರಾರಿಲ್ಲವು ಮೂರು ಲೋಕದೊಳು
ಮೀರಿದಂಥ ನಾವು ಮೂವರು
ಮೀರಿದಂಥ ನಾವು ಮೂವರು | ನಮ-
ಗಾರು ಜೋಡು ಸುಖಪಡುವಲ್ಲೆ      || ೪೧ ||

ಎಲ್ಲರಿಂದ ಪೂಜೆಗೈವೆವು
ಎಲ್ಲರಲ್ಲಿ ಮೇಲಾದವರು
ಎಲ್ಲರಲ್ಲಿ ಮೇಲಾದವರು | ನಾವು
ಎಲ್ಲರನ್ನು ಪಾಲಿಸುವವರು || ೪೨ ||

ದೊರೆಯದು ನಮ್ಮನು ಮರಿತವರಿಗೆ ಸುಖ
ಶಿರಿ ವಿದ್ಯಾ ಬುದ್ಧಿಗಳವರು
ಶಿರಿ ವಿದ್ಯಾ ಬುದ್ಧಿಗಳವರು | ಪರಿ
ಪರಿ ದುಃಖಕೆ ಗುರಿಯಾಗುವರು     || ೪೩ ||

ಇವರ ಸೊಕ್ಕು ಮನ ಬಂದ ಹಾಗೆ ಬಲು
ಮಂದಗೆಟ್ಟು ಮಾತಾಡಿದರು
ಮಂದಗೆಟ್ಟು ಮಾತಾಡಿದರು | ಆ
ಸುಂದರಾಂಗಿ ದೇವಿಯವರು        || ೪೪ ||

ನಮ್ಮ ಮಾತನು ಮೀರುವುದಿಲ್ಲ
ನಮ್ಮ ಗಂಡಿರು ಕೇಳುವರು
ನಮ್ಮ ಗಂಡರು ಕೇಳುವರು | ಬಲು
ಮೋಹಿಸಿ ಇರುವರು ನಮ್ಮನ್ನು      || ೪೫ ||

ವಚನ :

ಹೀಗೆ ಮದೋನ್ಮತ್ತರಾದ ಪಾರ್ವತಿ, ಲಕ್ಷ್ಮಿ, ಸರಸ್ವತಿಯವರು ಶಂಕೆಯನ್ನು ಹೊಂದಿರಲು ಪತಿವೃತೆಯಾದ ಅನಸೂಯಾದೇವಿಯ ಕೀರ್ತಿಯನ್ನು ಜಗತ್ತಿನಲ್ಲಿ ಪ್ರಸಿದ್ಧಿ ಮಾಡಬೇಕೆಂದು ಒಂದಾನೊಂದು ದಿವಸ ನಾರದನು ವೀಣೆಯನ್ನು ಹಿಡಿದುಕೊಂಡು ಭಜನೆಯನ್ನು ಮಾಡುತ್ತ ಕೈಲಾಸಕ್ಕೆ ಹೋದನು. ಅಲ್ಲಿ ಪಾರ್ವತಿ, ಲಕ್ಷ್ಮಿ, ಸರಸ್ವತಿ ತಾಯಿಯವರು ವಿನೋದ ಮಾಡುತ್ತ ಕುಳಿತಿದ್ದರು. ಆಗ ನಾರದನು ದೇವಿಯವರಿಗೆ ನಮಸ್ಕರಿಸಿ ನಿಂತಿರಲು, ನೋಡಿ ದೇವಿಯವರು, ಹೇ ನಾರದಾ, ನೀನು ಅನೇಕ ಲೋಕಗಳಲ್ಲಿ ಸಂಚಾರ ಮಾಡುತ್ತಿ, ಯಾವ ಲೋಕದೊಳಗಾದರೂ ಪತಿವೃತಾ ಧರ್ಮದಲ್ಲಿ ನಮ್ಮನ್ನು ಸರಿಗಟ್ಟುವವರಿದ್ದರೆ ಹೇಳುವೆಯಾ? ಎಂದು ಕೇಳಲಾಗಿ ನಾರದನು ಅಂದದ್ದೇನಂದರೆ –

ಪದ :

ಅತ್ರಿ ಮುನಿಪನ ಪತ್ನಿ ಪತಿವ್ರತ
ಉತ್ತಮದಿಂದಲಿ ಲೋಕದೆ
ಉತ್ತಮದಿಂದಲಿ ಲೋಕದೋಳು | ಬಹು
ಸತ್ಯದಿಂದಲಿ ಬಾಳುವಳು  || ೪೬ ||

ಯಾರು ಇಲ್ಲ ಅನಸೂಗ ಜೋಡು
ಮೂರು ಲೋಕದಲಿ ಬಲು ಮೇಲು
ಮೂರು ಲೋಕದಲಿ ಬಲು ಮೇಲು | ಈ
ನಾರಿಯು ಕಾಣುವಳು ಮಿಗಿಲು      || ೪೭ ||

ಅಂದ ಮಾತಿಗೆ ಸುಂದರಾಂಗಿಯರು
ಚಂದದಿ ನಕ್ಕರು ಹಾಸ್ಯದೊಳು
ಚಂದದಿ ನಕ್ಕರು ಹಾಸ್ಯದೊಳು | ಮನ-
ನೊಂದು ಪೇಳಿದರು ತವರದೊಳು  || ೪೮ ||

ಏನು ಬಲ್ಲ ಇವನಾರದ
ಕೂಳು ಕಾಣದೆ ತಿರುಗುವ ಹಗಲಿರುಳು
ಕೂಳು ಕಾಣದೆ ತಿರುಗುವ ಹಗಲಿರುಳು | ಆ
ಮುನಿಯು ಎಣಿಸಿದ್ದಳು ಅವಳು      || ೪೯ ||

ನುಚ್ಚು ಹಾಕಿದವರತ್ತ ಕಾಣುವ
ಹುಚ್ಚ ನಾರದನ ಮಾತುಗಳು
ಹುಚ್ಚ ನಾರದನ ಮಾತುಗಳು | ಬಲು
ನೆಚ್ಚಿಗಿಲ್ಲ ಸಾಸಿವೆಯಷ್ಟು   || ೫೦ ||

ಸುರಸತಿಯರನು ಹೋಲುವುದುಂಟೆ
ನರಸತಿಯರು ಈ ಭುವನದೊಳು
ನರಸತಿಯರು ಈ ಭುವನದೊಳು | ಬಿಡು
ನಾರದ ನೀವು ಹೇಳುವುದೇನು      || ೫೧ ||

ತಾಯಿಯರೆ ಸುಳ್ಳಾಗದೆಂದಿಗೂ
ಆಕೆಗೆ ಸರಿಯಲ್ಲೆನ್ನುವದು
ಆಕಿಗೆ ಸರಿಯಲ್ಲೆನ್ನುವದು | ದೇವಿ
ನಿಮಗೆ ಇರುವಳು ಆಕಿ ಮೇಲು      || ೫೨ ||

ಪತಿವೃತಾ ಶ್ರೇಷ್ಠಳು ಅನಸೂಯಾ
ಸುಗಮದಿಂದಲಿರುವಳು ಇಲ್ಲಿ
ಸುಗಮದಿಂದಲಿರುವಳು ಇಲ್ಲಿ | ಆ
ಸುದತಿ ಮೇಲು ತ್ರಿಭುವನದಲ್ಲಿ       || ೫೩ ||

ವಚನ :

ಹೇ ಗೌರಿ ಪಾರ್ವತಿಯರೆ ಕೇಳಿರಿ, ಆ ಮಹಾ ಪತಿವ್ರತೆಯಾದ ಅನಸೂಯಾದೇವಿಗೆ ಎಳ್ಳಷ್ಟಾದರೂ ಜೋಡಿಲ್ಲ. ಆ ಸಾದ್ವಿಯು ಮೂರು ಲೋಕದಲ್ಲಿ ಉಚ್ಛ ಪತಿವೃತೆಯು, ಆ ಶಿರೋಮಣಿಯು ಸಾಕ್ಷಾತ್ ಜಗತ್ತಿನಲ್ಲಿ ಪರಮಪೂಜ್ಯಳು. ಆಕೆ ಧನ್ಯಳು; ಮತ್ತು ಸುಗುಣಳು. ಅವಳನ್ನು ಹೊಗಳಲಿಕ್ಕೆ ಆದಿಶೇಷನಾದರೂ ಶಕ್ಯನಲ್ಲ. ಬಹಳ ಹೇಳುವುದೇನು; ಹೇ ತಾಯಿಗಳೇ ಅನಸೂಯಾದೇವಿಯು ನಿಮ್ಮನ್ನು ಪಾದರಾಕ್ಷಗಳಂ ಮಾಡಿ ಎರಡೂ ಕಾಲಿನಲ್ಲಿ ಹಾಕಿಕೊಂಡು ನಿತ್ಯದಲಿ ಸಂಚರಿಸುವಳು. ಮನಸ್ಸಿಗೆ ಬಂದ ಹಾಗೆ ಸೊಕ್ಕಿನಿಂದ ನುಡಿಯಬೇಡಿರಿ ಎಂದು ನಾರದನು ಹೇಳಿದನು. ಆಗ ಪಾರ್ವತಿ, ಲಕ್ಷ್ಮಿ, ಸರಸ್ವತಿಯರು –

ಪದ :

ಕೇಳಿ ಕೋಪವ ತಾಳಿ ಶಕ್ತಿಯರು
ಆಲೋಚನೆ ಮಾಡುತ ಮನೆಗೆ

ಆಲೋಚನೆ ಮಾಡುತ ಮನೆಗೆ | ಬಲು
ಗೋಳಾಡುತ ಬಂದರು ಕೊನೆಗೆ     || ೫೪ ||

ತ್ರಿಮೂರ್ತಿಗಳ ಹೆಂಡರನ್ನು ಆ
ಸೀಮಂತಿನಿ ಎಡಗಾಲೊಳಗೆ
ಸೀಮಂತಿನಿ ಎಡಗಾಲೊಳಗೆ | ತಾ
ಪ್ರೇಮದಿಂದ ಹಾಕಿದಳೆನಗೆ          || ೫೫ ||

ಮಾನ ಹೋಯ್ತು ಅಪಮಾನದಿಂದ ಈ
ಪ್ರಾಣವನ್ನು ಇಡಬೇಕು ಯಾಕೆ
ಪ್ರಾಣವನ್ನು ಇಡಬೇಕು ಯಾಕೆ | ಎಂದು
ಹೇಳಿಕೊಂಡರೋ ತಮ್ಮ ವಚನದಲ್ಲೆ          || ೫೬ ||

ಮುಂದೆ ಬಾಳುವ ರೀತಿ ಹ್ಯಾಗೆ ಎಂದು
ಮನದಲಿ ಘನ ಚಿಂತಿಯನು
ಮನದಲಿ ಘನ ಚಿಂತಿಯನು | ಕಂದಿ-
ಕುಂದಿ ಬಿಟ್ಟರನ್ನ ನೀರನ್ನು  || ೫೭ ||

ಬಣ್ಣ ಬಿಡುವ ಸತಿಯರ ಬಳಿಗೆ ಆ
ಸನ್ನುತ ಪತಿಗಳು ಅವರಡಿಗೆ
ಸನ್ನುತ ಪತಿಗಳು ಅವರಡಿಗೆ | ಆ
ಉನ್ನತ ಸುಂದರಾಂಗಿಯರೆಡೆಗೆ     || ೫೮ ||

ಕಂದಿದ ಬಗೆಯನು ತಮ್ಮೊಳಗೆ
ಏನೆಂದು ಹೇಳಿರಿ ಬಿಡದ್ಹಾಗೆ
ಏನೆಂದು ಹೇಳಿರಿ ಬಿಡದ್ಹಾಗೆ | ನೀವು
ಸುಮ್ಮನೆ ಆಲೋಚನೆ ಮಾಡುವುದ್ಯಾಕೆ       || ೫೯ ||

ಏಳಿ ಈಗ ನಿವ್ಯಾಕ ಮಲಗಿರಿ
ಹೇಳಿ ಈಗ ಚಿಂತೆಯ ನಮಗೆ
ಹೇಳಿ ಈ ಚಿಂತೆಯ ನಮಗೆ | ಮನ-
ದಾಲೋಚನೆ ಯಾತಕೆ ನಿಮಗೆ      || ೬೦ ||

ಚಿಂತೆಯು ನಾವು ಬಿಡಿಸುವೆವೆಂದು
ಕಾಂತಿಯರಿಗೆ ಹೇಳಿದರಾಗ
ಕಾಂತಿಯರಿಗೆ ಹೇಳಿದರಾಗ | ಆ
ಶಂಕೆಯನ್ನು ಹರಿಸೇವಿ ಈಗ         || ೬೧ ||

ವಚನ :

ಆ ಕಾಲದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ತಮ್ಮ ತಮ್ಮ ಹೆಂಡರಾದ ಸರಸ್ವತಿ, ಲಕ್ಷ್ಮಿ, ಪಾರ್ವತಿಯರನ್ನು ನೋಡಿ; ಹೇ ಶಕ್ತಿಯರೆ, ನಿಮಗೆ ಬಂದ ವಿಪತ್ತು ಯಾವುದು? ಯಾಕೆ ವ್ಯಸನದಿಂದ ಮಲಗಿದಿರಿ? ಯಾರಾದರೂ ನಿಮಗೆ ಬೈದರೋ? ಅಥವಾ ಹಾಸ್ಯ ಮಾಡಿದರೋ ಹೇಗೆ? ಏನಾಯಿತು ಹೇಳಿರಿ. ಮೇಲಕ್ಕೇಳಿರಿ ಎಂದು ಆಶ್ವರ್ಯದಿಂದ ಕೇಳಿದರು. ಆಗ ಸರಸ್ವತಿ, ಲಕ್ಷ್ಮಿ, ಪಾರ್ವತಿಯರು ತಮ್ಮ ತಮ್ಮ ಗಂಡಂದಿರಿಗೆ ಹೇಳಿದ್ದೇನೆಂದರೆ, ಆಹೋ ಪತಿರಾಯರೆ ನಾವು ಹೇಳಿದಂತೆ ನಡೆಸಿಕೊಳ್ಳುತ್ತೇವೆಂದು ನಮಗೆ ನೀವು ಪೂರ್ಣವಾಗಿ ವಚನಕೊಟ್ಟರೆ ನಾವು ಹೇಳುತ್ತೇವೆ. ನಿಮ್ಮೊಡನೆ ಸಂಸಾರವನ್ನು ಮಾಡುತ್ತೇವೆ. ಇಲ್ಲದಿದ್ದರೆ ಪ್ರಾಣವನ್ನು ನೀಗುತ್ತೇವೆ ಎಂದು ಹೇಳಿದ ಮಾತುಗಳಿಗೆ ಹರಿ, ಹರ, ವಿರುಚಿಗಳು ಯಾಕಾಗಲೊಲ್ಲದೆಂದು ವಚನಕೊಟ್ಟರು. ಆಗ ಶಕ್ತಿಯರು ತಟ್ಟನೆ ಎದ್ದು ಅಂದದ್ದೇನಂದರೆ ಪ್ರಾಣ ಪತಿಗಳೆ ಅತ್ರಿ ಮಹಾಋಷಿಯ ಹೆಂಡತಿ ಅನಸೂಯಾ ಎಂಬವಳು ಪತಿವೃತಾ ಧರ್ಮದಿಂದ ಕೀರ್ತಿಯನ್ನು ಹೊಂದಿ ನಮಕಿಂತಲೂ ಮೇಲಾಗಿರುವಳಂತೆ. ಸಾಮಾನ್ಯರಂತೆ ನಿಮಗೆ ನಾವು ಹೆಂಡರಾಗಿದ್ದು ಭೂಲೋಕದಲ್ಲಿ ಒಬ್ಬ ಹೆಂಗಸಿಗಿಂತ ಕಡಿಮೆಯಾದ ಮೇಲೆ,  ಸರ್ವಥಾ ನಾವು ಜೀವಿಸಲಾರೆವು. ನಮ್ಮನ್ನು ಉದ್ಧಾರ ಮಾಡಬೇಕೆಂಬ ಇಚ್ಛೆ ನಿಮಗೆ ಇದ್ದರೆ ಅವಳ ಹತ್ತಿರ ನೀವು ಹೋಗಿರಿ; ಮತ್ತು ಅನ್ನವನ್ನು ಬೇಡಿರಿ. ಅವಳು ಬಡಿಸಲಿಕ್ಕೆ ಬಂದಾಗ ಬತ್ತಲೆಯಾಗಿ ಬಂದರೆ ನಾವು ಉಣ್ಣುತ್ತೇವೆಂದು ಹೇಳಿ ಅವಳ ಪಾತಿವೃತವನ್ನು ಕೆಡಿಸಿ ಬರಬೇಕೆಂಬುದಾಗಿ ಹೇಳಿದ ಮಾತಿಗೆ; ತ್ರಿಮೂರ್ತಿಗಳು ವಚನಕೊಟ್ಟ ತಪ್ಪಿಗೆ ನಡೆಸಬೇಕೆಂತಲೂ ಅನಸೂಯಾ ದೇವಿಯ ಪತಿವೃತಾ ಧರ್ಮವನ್ನು ಮೆರಿಸಬೇಕೆಂತಲೂ ಒಡಂಬಟ್ಟು ಆಗಿಂದಾಗ ಹೊರಡಲು ಸಿದ್ಧರಾದರು.