ಪದ :

ಬ್ರಹ್ಮ ವಿಷ್ಣು ಮಹೇಶ್ವರರಾದರು
ತಮ್ಮ ರೂಪವನು ಅಡಗಿಸುತ
ತಮ್ಮ ರೂಪವನು ಅಡಗಿಸುತ | ವರ
ಬ್ರಾಹ್ಮಣರಾಗಿ ವೇಷವತಾಳುತ್ತ     || ೬೨ ||

ಮುನಿ ಪತಿವೃತೆಯರ ಆಶ್ರಮಕೆ
ಅನುನಯದೊಳು ಬಂದರು ತುರ್ತ
ಅನುನಯದೊಳು ಬಂದರು ತುರ್ತ | ಆ
ಮುನಿ ಮನಿಯೊಳಗಿದ್ದಿಲ್ಲಾತಾ       || ೬೩ ||

ಅತಿಥಿಗಳು ಕಾಣುತ್ತ ಮುನಿಪನ
ಸತಿ ಅನಸೂಯಾ ನಸುನಗುತ
ಸತಿ ಅನಸೂಯಾ ನಸುನಗುತ | ಅತಿ
ಹಿತದಿಂದಲಿ ನೀರನು ಕೊಡುತ      || ೬೪ ||

ಆಸನ ಬಿಟ್ಟು ಕೂಡಿಸಲಿಕ್ಕೆ
ಮೋಸಗಾರ ಗಡಬಡಿಸುತ್ತ
ಮೋಸಗಾರ ಗಡಬಡಿಸುತ್ತ | ನೀ
ಪೋಷಿಸವ್ವ ಆಸನಕೊಡುತ         || ೬೫ ||

ಹಸಿವೆಯಾಗಿ ಕಸಿವಿಸಿಯಾಗುವುದು
ಆಸನಕೊಡು ತಂಗಿ ತ್ವರಿತ
ಆಸನ ಕೊಡು ತಂಗಿ ತ್ವರಿತ | ಈ
ಹಸುವಳಿ ಬೇಗನೆ ಅತಿ ತುರ್ತ      || ೬೬ ||

ಈ ಪರಿ ಬೇಡಿದ ಮೋಸಗಾರರ
ಕಾಪಟ್ಯವ ತಿಳಿಯದ ವನಿತಾ
ಕಾಪಟ್ಯವ ತಿಳಿಯದ ವನಿತಾ | ಆ
ತಾಪಸರಿಗೆ ಬಡಿಸುವೆಯನುತ      || ೬೭ ||

ಎಡೆಯ ಮಾಡಲಿಕ್ಕೆ ಬಂದ ಮುನಿಪನ
ಮಡದಿಯ ಕಂಡಿಲ್ಲವು ಎನುತ
ಮಡದಿಯ ಕಂಡಿಲ್ಲವು ಎನುತ | ತಾವು
ತಡೆಯದಿದ್ದರೆ ಚರಿಸುತ    || ೬೮ ||

ವಚನ :

ಆಗ ತ್ರಿಮೂರ್ತಿಗಳು, ಅವ್ವಾ ನಮ್ಮನ್ನು ತೃಪ್ತಿ ಮಾಡಬೇಕೆಂಬ ಇಚ್ಛೆಯು ನಿಮಗೆ ಇದ್ದರೆ ನಮ್ಮ ವೃತಗಳನ್ನು ಕೈಗೂಡಿಸಬೇಕು. ಅದೇನೆಂದರೆ, ನೀನು ಬತ್ತಲೆಯಾಗಿ ಬಂದು ನಮಗೆ ಉಣಿಸಬೇಕು. ಅಂದರೆ ಶಾಂತರಾಗುತ್ತೇವೆ. ನಿನಗೆ ಪುಣ್ಯ ಕೀರ್ತಿ ಸಂಪತ್ತುಗಳು ದೊರೆಯುತ್ತವೆ. ಹಾಗೆ ಮಾಡದಿದ್ದರೆ ನಿಮ್ಮ ಮನೆಯಲ್ಲಿ ನಮ್ಮ ಭೋಜನವಾಗಲಾರದು. ನಾವು ಹೋಗುತ್ತೇವೆ. ಮಾರ್ಗವನ್ನು ಬಿಡಬೇಕೆಂದು ಹೇಳಿದ ಮಾತುಗಳನ್ನು ಕೇಳಿದ ಕೂಡಲೇ ಅನಸೂಯಾದೇವಿಯು ಮೂರ್ಛೆ ಹೊಂದಿ ಅಯ್ಯೋ ಪರಮಾತ್ಮ ಎಂಥ ವಿಪತ್ತನ್ನು ಉಂಟು ಮಾಡಿದಿ? ಆಹಾ ದೈವವೆ, ಏನು ಮಾಡಲಿ? ಎಂದು ದುಃಖಿಸಹತ್ತಿದಳು.

ಪದ :

ಎನ್ನ ದೇಹವ ಗಂಡನ ಹೊರತು
ಅನ್ಯ ಜನರು ಕಂಡರೆ ಇನ್ನು
ಅನ್ಯ ಜನರು ಕಂಡರೆ ಇನ್ನು | ಸಂ-
ಪನ್ನೆ ಯಾಗಲಾರೆನು ನಾನು        || ೬೯ ||

ಅತಿಥಿಗಳನು ಉಣಿಸದಿದ್ದರೆಲ್ಲ
ಪತಿಹೊಂದುವನತಿ ಕೇಡನ್ನು
ಪತಿಹೊಂದುವನತಿ ಕೇಡನ್ನು | ದು-
ರ್ಗತಿಯಾಗುವುದು ಗತಿಯೇನು     || ೭೦ ||

ಇಂತು ಮನದೊಳಗೆ ಚಿಂತಿಸುತ್ತ ತನ್ನ
ಕಾಂತನ ಪಾದೋದಕವನ್ನು
ಕಾಂತನ ಪಾದೋದಕವನ್ನು | ಮತಿ-
ವಂತಿ ಭಕ್ತಿಯಿಂದಲಿ ತಾನು         || ೭೧ ||

ತಂದು ಹಾಕಿದಳು ಬಂದ ಯತಿಗಳಿಗೆ
ಚಂದದಿಂದ ಪಾದ ತೀರ್ಥವನು
ಚಂದದಿಂದ ಪಾದ ತೀರ್ಥವನು | ಆ
ನಂದದಿಂದ ನೆನಸಿದಳು ಪತಿಯನ್ನು          || ೭೨ ||

ಏನು ಹೇಳಲಿ ಈ ಮಾನನಿಯ ಪ್ರತಿ-
ಭಾನ್ವಿತ ಮಹಿಮೆಯ ಬಲವನ್ನು
ಭಾನ್ವಿತ ಮಹಿಮೆಯ ಬಲವನ್ನು | ಆ
ಮಾನಿನಿ ಮುರಿದಳು ಗತಿಯನ್ನು    || ೭೩ ||

ಶಿಶುಗಳಾದರು ತ್ರಿಮೂರ್ತಿಗಳು ಆ
ಋಷಿ ಸತಿ ಅನಸೂಯಾ ಹರುಷದಲಿ
ಋಷಿ ಸತಿ ಅನಸೂಯಾ ಹರುಷದಲಿ | ತಾ
ಕೊಟ್ಟಳು ತನ್ನ ಮಲೆ ಶಿಶುಗಳಿಗೆ    || ೭೪ ||

ತೊಟ್ಟಲೊಳಗೆ ತಾನಿಟ್ಟು ಹಾಡಿದಳು
ನೆಟ್ಟಗೆ ಜೋಗುಳ ಪದಗಳನ್ನು
ನೆಟ್ಟಗೆ ಜೋಗುಳ ಪದಗಳನು | ಆ
ಶ್ರೇಷ್ಠ ಸೃಷ್ಟಿಯ ಪತಿಗಳನು         || ೭೫ ||

ಆಡುತಿರುವ ಕೂಸುಗಳನು ಕಾಣುತ
ಅತ್ರಿಋಷಿಯು ಬಂದನು ಆಗ
ಅತ್ರಿಋಷಿಯು ಬಂದನು ಆಗ | ತನ್ನ
ಸುದತಿಗೆ ಕೇಳಿದನು ಏಕಾಂತ       || ೭೬ ||

ವಚನ :

ಹೇ ಪ್ರಿಯತಮೆ ಈ ಶಿಶುಗಳು ಯಾರು? ನಿನಗೆ ಹೇಗೆ ದೊರೆತವು? ಇಂಥ ಕೋಮಲವಾದ ಕುಮಾರರನ್ನು ಪಾಲಿಸಬೇಕಾದರೆ ಈ ಶಿಶುಗಳಿಗೂ ಮತ್ತು ನಿನಗೂ ಸಮಂಧವೆಲ್ಲಿ? ಇಂತೆಂದು ತನ್ನ ಸತಿಯಳಾದ ಅನಸೂಯಾದೇವಿಯನ್ನು ಕೇಳಿದ ಅತ್ರಿಮುನಿಗೆ ಭಕ್ತಿಯಿಂದ ನಮಸ್ಕರಿಸಿ ಇಂತೆಂದಳು : ನೀವು ಹೊರಗೆ ಹೋದ ಕಾಲದಲ್ಲಿ ಮೂವರು ಅತಿಥಿಗಳು ಭಿಕ್ಷಾರ್ಥವಾಗಿ ಬಂದು ಹಸುವಿನ ಬಾಧೆಯನ್ನು ತಾಳಲಾರದೆ ನಮಗೆ ಉಣಿಸಬೇಕೆಂದು ಕೇಳಿದರು. ಆಗ ಅತಿಥಿ ಸತ್ಕಾರವನ್ನು ಮನಗಂಡು ಪಕ್ವಾನ್ನ ಮಾಡಿ ಉಣಿಸಲಿಕ್ಕೆ ಹೋದರೆ, ಬತ್ತಲೆಯಿಂದ ನಮಗೆ ಎಡಿಮಾಡಿದರೆ ನಾವು ಉಂಡು ಹೋಗುತ್ತೇವೆ. ಇಲ್ಲದಿದ್ದರೆ ನಿನ್ನ ಮನೆಯಲ್ಲಿ ಉಂಬುವದಿಲ್ಲ ಎಂದು ಹೇಳಿದರು. ಆಗ ನನ್ನ ಪತಿವೃತಾ ಧರ್ಮವನ್ನು ಉಳಿಸಿಕೊಳ್ಳಲಿಕ್ಕೆ ನಿಮ್ಮ ಪಾದೋದಕವನ್ನು ಅವರಿಗೆ ಸಿಂಪಡಿಸಲಾಗಿ ಈ ರೀತಿ ಶಿಶುಗಳಾಗಿದ್ದಾರೆ. ಇವುಗಳನ್ನು ಪ್ರೇಮದಿಂದ ರಕ್ಷಿಸುವ ಅಪೇಕ್ಷೆಯುಂಟು. ಅನುಗ್ರಹವಾಗಬೇಕೆಂದು ಹೇಳಿದ ಮಾತಿಗೆ ಮುನಿಯು ಆಶ್ಚರ್ಯಚಿತ್ತನಾಗಿ ಇವರು ಯಾರಿರಬಹುದೆಂದು ದಿವ್ಯ ದೃಷ್ಟಿಯಿಂದ ನೋಡಿ ತನ್ನ ಪತ್ನಿಗೆ ಹೇಳುತ್ತಾನೆ ಅದೇನಂದರೆ –

ಪದ :

ಇವರು ಬ್ರಹ್ಮ ಹರಿ ರುದ್ರರು ನನ್ನ
ಯುವತಿಯ ಪಾತೀವೃತ್ಯವನ್ನು
ಯುವತಿಯ ಪಾತೀವೃತ್ಯವನ್ನು | ತಾವು
ಅಪಹರಿಸಲಿಕ್ಕೆ ಬಂದಿಹರಿನ್ನು        || ೭೭ ||

ನಿನ್ನಯ ವಿಮಲ ಮಹಿಮೆಯಿಂದ
ಕಮಲಾಸನ ಹರಿ-ಹರರಿನ್ನು
ಕಮಲಾಸನ ಹರಿ-ಹರರಿನ್ನು | ನಮ್ಮ
ಆಶ್ರಮದೊಳು ಶಿಶುವಾದವಿನ್ನು     || ೭೮ ||

ಚಿಕ್ಕವು ಶಿಶುಗಳು ಇವುಗಳಿನ್ನು
ಬಿಡದಕ್ಕರದಿಂದ ರಕ್ಷಿಸು ನೀನು
ಬಿಡದಕ್ಕರದಿಂದ ರಕ್ಷಿಸು ನೀನು | ಎಂದು
ಬಿಡದೆ ಸುದತಿಗೆ ಹೇಳಿದನು         || ೭೯ ||

ಪ್ರಾಣನಾಥನ ಮಾತುಗಳನು ಕೇಳಿ
ಸಾನು ರಾಗದಿ ಶಿಶುಗಳನು
ಸಾನು ರಾಗದಿ ಶಿಶುಗಳನು | ಆ
ಮಾನಿನಿ ಪಾಲಿಸುವಳು ತಾನು      || ೮೦ ||

ಹತ್ತು ಸಾವಿರ ವರುಷವಾದರೂ
ಉತ್ತಮ ಶಿಶು ತೊಟ್ಟಿಲವನ್ನು
ಉತ್ತಮ ಶಿಶು ತೊಟ್ಟಿಲವನ್ನು | ಬಿಡ-
ದರ್ತಿಯಿಂದ ಬಾಳದವಿನ್ನು          || ೮೧ ||

ಕಳೆದು ಹೋದವು ಬಹಳ ವರುಷಗಳು
ಬೆಳೆಯಲಿಲ್ಲ ಶಿಶುಗಳು ಇನ್ನು
ಬೆಳೆಯಲಿಲ್ಲ ಶಿಶುಗಳು ಇನ್ನು | ನಾ
ತಿಳಿಯಲಾರೆ ಚಮತ್ಕಾರವನು      || ೮೨ ||

ಈ ಮಹಿಮೆಯನು ಗೌರಿ ಲಕ್ಷ್ಮಿ ಸರಸ್ವತಿ
ಬಾರದಿರುವ ತಮ್ಮ ಗಂಡರನ್ನು
ಬಾರದಿರುವ ತಮ್ಮ ಗಂಡರನ್ನು | ಹೌ
ಹಾರಿ ಬಯಸಿದರು ತಾವಿನ್ನು        || ೮೩ ||

ನಮ್ಮ ಗಂಡರು ಬರಲಿಲ್ಲವೇಕೆ
ನಮ್ಮ ಗಂಡರ ಮುಖವನ್ನು
ನಮ್ಮ ಗಂಡರ ಮುಖವನ್ನು | ಇ-
ನ್ನೊಮ್ಮೆ ಕಾಣುವ ಬಗೆಯೇನು       || ೮೪ ||

ವಚನ :

ತಮ್ಮ ಗಂಡಂದಿರು ಬಾರದ್ದರಿಂದ ದೇವಿಯರು ಗಾಭರಿಯಾಗಿ ಅನ್ನುತ್ತಾರೆ. ಅನಸೂಯಾದೇವಿಯ ಪಾತೀವ್ರತ್ಯವನ್ನು ಕೆಡಿಸಲಿಕ್ಕೆ ಹೋದ ನಮ್ಮ ಗಂಡರು ಈವರೆಗೂ ಬರಲಿಲ್ಲ. ನಾವು ಹೇಗೆ ಮಾಡೋಣ. ಹೋದ ಕಾರ್ಯವಾಗುವದು ಹೇಗಿರಲಿ; ನಾವು ನಮ್ಮ ಗಂಡರನ್ನು ವ್ಯರ್ಥವಾಗಿ ಕಳೆದುಕೊಂಡೆವಲ್ಲಾ. ಅವರ ಸುದ್ದಿಯೂ ಸಹ ತಿಳಿಯದೇ ಹೋಯಿತು. ಇದಕ್ಕೇನು ಮಾಡಬೇಕೆಂದು ಚಿಂತಿಸುವಷ್ಟರಲ್ಲಿ ಅಲ್ಲಿಗೇ ನಾರದ ಮುನಿಗಳು ಬರುವಂತಾದರು. ಅವರನ್ನು ಕಂಡು ದೇವಿಯವರು ಬಹಳ ಶೀಘ್ರದಿಂದ ಅಪ್ಪಾ, ಗೊತ್ತಿರದೆ ಹೇಳಬೇಕೆಂದು ಕೇಳಿದರು. ಆಗ ನಾರದರು ಅಮ್ಮ ತಾಯಿಗಳೇ ನಿಮ್ಮ ಗಂಡಂದಿರ ಆಸೆಯನ್ನು ಬಿಟ್ಟು ಬಿಡಿರಿ. ಅವರು ತಿರುಗವ ಹಾಗಿಲ್ಲ. ಯಾಕೆಂದರೆ ಅನುಸೂಯಾದೇವಿ ಯವರ ಮನೆಯಲ್ಲಿ ಈಗ ಶಿಶುಗಳಾಗಿ ಆಡುತ್ತಿದ್ದಾರೆ. ಆಕೆಯು ಬಹು ಪ್ರೇಮದಿಂದ ಸಲಹುತ್ತಿದ್ದಾಳೆ. ನಿಮ್ಮ ದುರಾಲೋಚನೆಯೇ ನಿಮಗೆ ಮುಳುವಾಯಿತು, ಈಗ ಚಿಂತಿಸಿದರೆ ಆಗುವದೇನು? ನಮ್ಮ ಸಮಾನರು ಯಾರು ಇಲ್ಲವೆಂದು ಸೊಕ್ಕಿನಿಂದ ನಿಮ್ಮ ಗಂಡರನ್ನು ಕಳಿಸಿ ಮೊದಲೇ ಬುದ್ಧಿಯನ್ನು ಕಳಕೊಂಡಿದ್ದೀರಿ. ನಿಮ್ಮ ಗಂಡರು ಶಿಶುಗಳಾದರೇನಾಯಿತು. ಅವರನ್ನು ಮರೆತು ಶಾಂತರಾಗಿ ಇರುವುದೇ ಲೇಸು; ಎಂದು ಹೇಳಿದನು. ಆಗ ಶಕ್ತಿಯರು ಹೌ ಹಾರಿ ಅಯ್ಯೋ ದೈವವೇ ಹ್ಯಾಗೆ ಮಾಡೋಣ? ನಾವು ಸರ್ವಥಾ ಅಪರಾಧಿಗಳಾದೆವು. ನಮ್ಮಂಥ ಬುದ್ಧಿಗೇಡಿಗಳು ದುಷ್ಠರು ಯಾರು ಇಲ್ಲ. ಹೇ ನಾರದ ಮುನಿಶ್ರೇಷ್ಠ ಹ್ಯಾಗಾದರು ಮಾಡಿ ನಮ್ಮ ಗಂಡರನ್ನು ತಂದು ಕೊಡಬೇಕು. ಕೇಳಿ ನಾರದರು ಅಂದದ್ದೇನಂದರೆ –

ಪದ :

ಅಮ್ಮನವರು ನಮ್ಮಿಂದ ಆಗದು
ಹೆಮ್ಮೆ ಯಾಕೆ ಹೋಗಿರಿ ನೀವು
ಹೆಮ್ಮೆ ಯಾಕೆ ಹೋಗಿರಿ ನೀವು | ಆ
ಎಮ್ಮಗ ಮರೆ ಬೀಳಿರಿ ನೀವು        || ೮೫ ||

ಮಾಡಿದ ತಪ್ಪಿಗೆ ಬೇಡಿಕೊಳ್ಳಿರಿ
ಪಾಡಲ್ಲಾ ಮನಸಿನ ಛಲವು
ಪಾಡಲ್ಲಾ ಮನಸಿನ ಛಲವು | ಮಾ
ತಾಡದಿದ್ದ ರಾಗದು ಫಲವು || ೮೬ ||

ಬೇಡಿಕೊಂಡರ ನಿಮ್ಮ ಗಂಡರ
ನೀಡುವಳಾ ಮಾನಿನಿ ಮಣಿಯು
ನೀಡುವಳಾ ಮಾನಿನಿ ಮಣಿಯು | ನೆರೆ
ನೋಡಿ ಕರುಣಿಸುವಳು ದಯದಿಂದ || ೮೭ ||

ನಾರದ ಮುನಿಯು ಹೀಗೆಂದು ಹೇಳಲು
ಗೌರಿ ಲಕ್ಷ್ಮಿ ಭಾರತಿ ತಾವು
ಗೌರಿ ಲಕ್ಷ್ಮಿ ಭಾರತಿ ತಾವು | ಆ
ನಾರದನೊಡಗೊಳ್ಳುತ ಅವರು      || ೮೮ ||

ಋಷಿಯ ಆಶ್ರಮಕ ಹೋಗಿ ಕಂಡರು
ಬಿಸಿಜನೇತ್ರ ಅನಸೂಯೆಯನು
ಬಿಸಿಜನೇತ್ರ ಅನುಸೂಯೆಯನು | ಅವರು
ಸರಿಯೆ ತಿಳಿದರು ತಮ ತಪ್ಪನ್ನು    || ೮೯ ||

ತಾಯಿ ನಮ್ಮ ಅಪರಾಧವನ್ನು
ಮರೆದು ಕಾಯಬೇಕು ನಮ್ಮನ್ನು
ಮರೆದು ಕಾಯಬೇಕು ನಮ್ಮನ್ನು | ಕಮ-
ಲಾಕ್ಷಿ ನೀ ಕೊಡು ಪತಿಗಳನು        || ೯೦ ||

ವಚನ :

ಹೇ ತಾಯಿ ಅನುಸೂಯಾದೇವಿ ನಮ್ಮ ಪತಿಗಳು ಹೇಗಿದ್ದರೋ ಅದರಂತೆ ಮಾಡಿ ಶತ ಅಪರಾಧಿಗಳಾದ ನಮಗೆ ನಿನ್ನ ಸುಗುಣಗಳಿಂದ ದಯಪಾಲಿಸಬೇಕು ಎಂದು ಬೇಡಿಕೊಂಡರು. ಆಗ ಅನಸೂಯಾದೇವಿಯು ಗಂಡನ ಅಪ್ಪಣೆಯನ್ನು ಪಡೆದು ಪತಿಯ ಪಾದೋದಕವನ್ನು ಆ ಶಿಶುಗಳಿಗೆ ಹಾಕಿದಳು. ಆ ಕೂಡಲೇ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳು ನಿಜ ರೂಪ ತೋರಿದರು. ಆಗ ಪುಷ್ಪವೃಷ್ಟಿಯಾಯಿತು. ದೇವದುಂಬಿಗಳು ಮೊಳಗಿದವು. ಕೋಟಿ ಸೂರ್ಯರು ಉದಯವಾದಂತೆ ಪ್ರಕಾಶ ತುಂಬಿತು. ಆಗ ಋಷಿ ದಂಪತಿಗಳು ತ್ರಿಮೂರ್ತಿಗಳನ್ನು ನಮಸ್ಕರಿಸಿ ಭಕ್ತಿಯಿಂದ ಸ್ತುತಿಸಿದರು. ಆ ದಂಪತಿಗಳನ್ನು ನೋಡಿ ಪ್ರಸನ್ನಭಾವದಿಂದ ಹೇಳಿದ್ದೇನಂದರೆ –

ಪದ :

ತಾಯಿಯೆ ನಿನ್ನ ಮೊಲೆಯನು ಉಂಡು
ಬಲು ಪಾವನರಾದೆವು ನಾವು
ಬಲು ಪಾವನರಾದೆವು ನಾವು | ನಿನಗಾವ
ಫಲಗಳು ಬೇಕು ಕೇಳವ್ವಾ || ೯೧ ||

ತಾಯಿಯಾಗಿ ಮೊಲೆಯನುಣಿಸಿದ ನಮಗೆ
ತಾಯಿ ನೀನು ಹೌದೇಳವ್ವಾ
ತಾಯಿ ನೀನು ಹೌದೇಳವ್ವಾ | ನಾ
ಕಾಯುವೆ ಸುಖದಲಿ ಬಾಳವ್ವಾ      || ೯೨ ||

ಇಂದುಧರನು ಹೀಗೆಂದು ಹೇಳಲು
ಚಂದದಿ ಮುನಿಸತಿ ವರವನ್ನು
ಚಂದದಿ ಮುನಿಸತಿ ವರವನ್ನು | ಆ-
ನಂದದಿ ಬೇಡ್ಯಾಳು ಆಗ ಶಾನು    || ೯೩ ||

ತೊಟ್ಟಿಲು ಬರಿದಾಯ್ತು ಹೊಟ್ಟೆಯಲಿ
ಹುಟ್ಟಬೇಕು ನೀವು ಎನ್ನುತಲಿ
ಹುಟ್ಟಬೇಕು ನೀವು ಎನ್ನುತಲಿ | ಸಂ-
ತುಷ್ಟಪಡಿಸಬೇಕು ಎನ್ನುತಲಿ        || ೯೪ ||

ಒಪ್ಪಿಕೊಂಡರು ಈ ವರವಾ ಬಹು
ಸಡಗರದಲಿ ನುಡಿದರು ಜಯವಾ
ಸಡಗರದಲಿ ನುಡಿದರು ಜಯವಾ | ಹೋ-
ದರು ಆಶೀರ್ವದಿಸಿ ತಾವಾ || ೯೫ ||

ಈಶ ವಿಷ್ಣು ಬ್ರಹ್ಮರು ತಾವು ತಮ್ಮ
ವಾಸಕೆ ಹೊರಟರು ಸಮುದ್ರದಿ
ವಾಸಕೆ ಹೊರಟರು ಸಮುದ್ರದಿ | ಮು-
ಟ್ಟ್ಯಾರು ತಮ್ಮ ಕೈಲಾಸವನು       || ೯೬ ||

ಕೆಲವು ದಿನದೊಳು ಅನಸೂಯಾದೇವಿ
ತಳೆದಳು ಸುಂದರ ಗರ್ಭವನು
ತಳೆದಳು ಸುಂದರ ಗರ್ಭವನು | ಮುನಿ
ನಲಿದು ತಾಳುತ ಸಂತಸವ         || ೯೭ ||

ವಚನ :

ತ್ರಿಮೂರ್ತಿಗಳು ಕೊಟ್ಟ ವಚನವನ್ನು ನಡೆಸುವುದಕ್ಕೆ ಅನಸೂಯಾದೇವಿ ಗರ್ಭವನ್ನು ಪ್ರವೇಶ ಮಾಡಿದರು. ಆಗ ಅತ್ರಿಯು ಅನಸೂಯಾದೇವಿಯರಿಗೆ ವಿಶೇಷ ಆನಂದವು ತಲೆದೋರಿತು. ಸುಂದರವಾದ ಗರ್ಭವು ಆ ಪತಿವ್ರತಾ ಶಿರೋಮಣಿಗೆ ಮಂಗಲವಾಗಿ ಒಪ್ಪುತ್ತಿತ್ತು.

ಪದ :

ಹೆತ್ತಳಾಕಿ ಒಂಭತ್ತು ತಿಂಗಳು
ಉತ್ತಮ ವೇಳೆಗೆ ಮಕ್ಕಳನು
ಉತ್ತಮ ವೇಳೆಗೆ ಮಕ್ಕಳನು | ಅತ್ರಿ
ಪತ್ನಿ ಮೂರು ಶಿಶುಗಳನು || ೯೮ ||

ಭವ ಹರ ಶಿವ ಬಹಳ ಹಸನಾಗಿ ಈ
ಭುವನದಲ್ಲಿ ಅವತರಿಸಿದನು
ಭುವನದಲ್ಲಿ ಅವತರಿಸಿದನು | ಮುಂ-
ದಿವನು ತಪವನು ಆಚರಿಸಿದನು     || ೯೯ ||

ಬ್ರಹ್ಮ ಹರಿ ರುದ್ರ ಮೂರು ಅಂಶ ಕೂಡಿ
ತವಕದಿಂದ ನಾರಾಯಣನು
ತವಕದಿಂದ ನಾರಾಯಣನು | ಮುನಿ
ಯುವತಿಯಲ್ಲಿ ಹುಟ್ಟಿದ ತಾನು       || ೧೦೦ ||

ಮೂರು ಅಂಶದಿಂದ ಹುಟ್ಟಿದ್ದರಿಂದ
ಮೂರು ಮುಖಗಳಿದ್ದವು ಅವಗೆ
ಮೂರು ಮುಖಗಳಿದ್ದವು ಅವಗೆ | ಅವ
ತಾರಗೈದ ದತ್ತಾತ್ರಯನು || ೧೦೧ ||

ಒಂದು ಶಿವನ ಮತ್ತೊಂದು ಬ್ರಹ್ಮನ
ಒಂದು ಹರಿಯ ಮುಖಗಳು ಮುನ್ನಾ
ಒಂದು ಹರಿಯ ಮುಖಗಳು ಮುನ್ನಾ | ತಾ
ಒಂದು ದೇಹವಾಯಿತು ಇನ್ನಾ      || ೧೦೨ ||

ಮೃತ್ಯುವನ್ನು ಉದ್ಧರಿಸಲಿಕ್ಕೆ
ದತ್ತನು ಗುರುವಿನ ರೂಪವನು
ದತ್ತನು ಗುರುವಿನ ರೂಪವನು | ತಾ-
ಳುತ್ತ ಜಗವನು ಉದ್ಧರಿಸಿದನು      || ೧೦೩ ||

ಚಂದನಾಗಿ ಆ ಬ್ರಹ್ಮ ಹುಟ್ಟಿದ
ಹೊಂದಿದ ತಾನಾಕಾಶವನು
ಹೊಂದಿದ ತಾನಾಕಾಶವನು | ನೆರೆ
ಚಂದದಿ ಲೋಕವ ಬೆಳಗುವನು     || ೧೦೪ ||

ಪೊಡವಿಯಲ್ಲಿ ಜಗದೊಡೆಯರು ಪಡೆದ
ಪಡೆದಳು ಘನ ಸಂಪದಗಳನು
ಪಡೆದಳು ಘನ ಸಂಪದಗಳನು | ಆ
ಮಡದಿ ಪಡೆದಳು ಮೋಕ್ಷವನು      || ೧೦೫ ||

 

ಭೀಮಾರ್ಜುನರ ಗರ್ವಭಂಗ

ಜನಮೇಜಯನ ಮುಂದ ವೈಶಂಪಾಯ ಹೇಳತಾನ
ಪಾಂಡು ಚರಿತ್ರೆಯ ಸಾರುವನು |
ಭೀಮ ಅರ್ಜುನರ ಗರ್ವಭಂಗಮಾಡಿ
ಸಲುಹಿ ಕಾಯ್ದ ಮುರಲೀಧರನು               || ೧ ||

ಅರ್ಜುನ ಅಂತಾನು ನಾನು ಹೆಚ್ಚಿನವ
ನನಕಿಂತ ಹೆಚ್ಚಿಲ್ಲ ಯಾವನು |
ಪರಮ ಮಹಾಪುಂಡ ಮೂರು ಲೋಕದ ಗಂಡ
ಎಂಬ ಬಿರುದು ಹೀಂಗ ನನ್ನಲ್ಲಿ                || ೨ ||

ಇಂದ್ರನು ರಚಿಸಿದ ಪಾಂಡುರ ವನವನು
ದ್ವಂಸಮಾಡಿದೆ ಒಂದು ಕ್ಷಣದಲಿ |
ಶಬರ ರೂಪದಿಂದ ಬಂದ ಶಿವನಕೂಡ
ಯುದ್ಧ ಮಾಡಿದೆ ಇಂದ್ರಕೀಲದಲಿ              || ೩ ||

ಮೆಚ್ಚಿ ಪರಮೇಶ್ವರನ ಪಾಶುಪತಾಸ್ತ್ರ
ಕರೆದುಕೊಟ್ಟ ಅಂತಃಕರಣದಲಿ |
ವಿರಾಟ ನಗರಕೆ ಹೋಗಿ ನಿಂತೆವು
ವಾಸವಾದೆವು ಗುಪ್ತರೂಪದಲಿ                || ೪ ||

ವಚನ :

ಮಹಾವೀರ ಪಾರ್ಥ ರಣಶೂರ ಎಂಬ ನಾಮ ಕೇಳಿರಿ ನನಗ ಬಂದೈತಿ, ಹೀಗಂತ ಬಿರುದು ಸಾರತೈತಿ. ಹಿತಬೋಧಮಾಡಿ ಸರಿಯಾಗಿ ನಿಂತ ಸಾರಥಿ ಭೀಷ್ಮನ ನಾಶಿಕ ಹರಿದು ಸಂಹಾರ ಮಾಡಿದೆ. ಹಾಗು ಕೌರವನ ಬಲ ಮಡಿಯುವಂತೆ ಮಾಡಿ ಹಸ್ತಿನಾವತಿ ವಶಮಾಡಿಕೊಂಡೆ.

ಪದ :

ನನ್ನಿಂದ ಭೂಮಿ ನನ್ನಿಂದ ಸೀಮಿ
ನನಕಿಂತ ಹೆಚ್ಚಿಲ್ಲ ಯಾವನು |
ಅರ್ಜುನನಾಡಿದ ಮಾತ ಕೇಳಿ
ಬಹಳ ಸಿಟ್ಟು ಬಂತು ಭೀಮಸೇನಗ || ೫ ||

ಪುಂಡ ಪ್ರಪಂಡಂತ ಮಾತನಾಡತಾನ
ಜಿಗದಾಡತಾನ ಸುಳ್ಳ ಕೋತಿ ಹಂಗ |
ಕೃಷ್ಣ ಸಾರಥಿ ಆಗದಿದ್ದರ
ತಿಳಿಯತಿತ್ತ ಕುರುಕ್ಷೇತ್ರದಾಗ        || ೬ ||

ನಿನ್ನ ರಥಕ ಬಾಣ ಹೊಡೆದಾನು ಕರ್ಣ
ಹೋಗಿ ಬಿತ್ತು ಕೊನ್ನರದಾಗ |
ನನ್ನ ಕಸರತ್ತು ಕೇಳು ಪಾಲ್ಗುಣ
ಚಿತ್ತವಿಟ್ಟು ಹೇಳುವೆ ನಿನಗ || ೭ ||

ಮಗದ ಭೂಪತಿ ಜರಾಸಂಧನ
ಸೀಳಿಬಿಟ್ಟರೆ ದರ್ದಿಲ್ಲ ನನಗ |
ದುಷ್ಟಕೀಚಕ ಇಟ್ಟ ಮನಸ
ಆ ನಿಷ್ಠೆಯುಳ್ಳ ದ್ರೌಪದಿ ಮ್ಯಾಗ     || ೮ ||