ವಚನ :

ಶೋಕಮಾಡುತ್ತ ದ್ರೌಪದಿ ಹೇಳಿಕೊಂಡಳು ನಿಮಗೆ. ಹಾಕಿದಿರಿ ಒಬ್ಬೊಬ್ಬರ ಮ್ಯಾಲ. ನಿಮ್ಮ ಸ್ವರೂಪ ತಿಳಿದ ಮ್ಯಾಲ ಅತಿ ಸಿಟ್ಟ ಬಂತ ನನಗ. ಹೋಗಿ ಕುಂತೆ ಗರಡಿ ಮನಿಯಾಗ. ಕಮಲಮುಖಿ ಎಂದು ತಿಳಿದು ಕೀಚಕ ಹಸ್ತ ಇಟ್ಟನು ಎದಿಮ್ಯಾಗ. ಮುಷ್ಟಿ ಯುದ್ಧ ನಡೆದಾಗ.

ಪದ :

ಎತ್ತಿ ಹಾಕಿ ನಾ ಒತ್ತಿ ಹಿಡಿದು ಆಗ
ಸೀಳಿ ಮಾಡಿದೆ ಎರಡು ಭಾಗವನು |
ಭೀಮ ಅರ್ಜುನಗ ಗರ್ವಹುಟ್ಟಿತೆಂದು
ತಿಳಿಯಬಂತು ಕೃಷ್ಣನ ಮನಕ       || ೯ ||

ಇವರ ಗರ್ವಭಂಗ ಮಾಡದೆ ಹೋದರೆ
ಉದ್ಧಟವಾಗುವುದು ಈ ಕಾಲಕ್ಕ |
ಕಪಟನಾಟಕಿ ಕೃಷ್ಣಗಾರುಡಿ
ವೇಷ ತಗೊಂಡು ಆಗ್ಯಾನ ಕ್ಷಣಕ    || ೧೦ ||

ಮಾಯ ವಿಕಾರದ ಕುದುರೆ ಮಾಡಿದನ
ಕಾಣತಿತ್ತ ಬಹಳ ನಾಜೂಕ |
ಕಪಟಭಾವದ ಸರ್ಪಮಾಡಿದನು
ಇತ್ತು ಮೂರು ಲಕದ ತೂಕ          || ೧೧ ||

ಕುದುರೆ ಸರ್ಪು ಗಡ ತಂದ ಗಾರುಡಿ
ಬಂದು ನಿಂತ ಹಸ್ತಿನಾಪುರಕ |
ಬೀದಿ ಬೀದಿಯನು ಹುಡುಕಿ ಹೊಕ್ಕನ
ಧರ್ಮರಾಯನ ಓಲಗಕ   || ೧೨ ||

ವಚನ :

ತ್ರಿಲೋಕ ಸಂಚಾರ ಮಾಡಿಬಂದೆ. ಕಾಣಲಿಲ್ಲ ಮಹಾವೀರ ಈ ಕುದುರೆಯ ಮೇಲೆ ಏರುವರು. ಹೆಗಲಮೇಲಿನ ಸರ್ಪ ತೋರಿಸಿದೆ ನೆಗುವಲಿಲ್ಲ ಯಾರಾರಾ. ಈ ಗರಡಿಮನಿ ತಾಲೀಮ ಆದವರಾ. ಅಂದಮಾತಕೇಳಿ ಭೀಮಸೇನಗ ಬಂದಿತಾಗ ಅಹಂಕಾರ ನನಕಿಂತ ಹೆಚ್ಚು ಇನ್ನಾರಾ.

ಪದ :

ತಲ್ಲಣಿಸುತ ಭೀಮ ತಡೆಯಲಾರದೆ
ನೆಗುವಲಿಕ್ಕೆ ಹೋದ ಸರ್ಪವನು
ಬಾಹುಸತ್ವದಿಂದ ಎತ್ತಲಿಕ್ಕೆ ಹೋಗಿ
ಕೈಹಾಕಿದ ಸರ್ಪಿನ ಬುಡಕ || ೧೩ ||

ಹಾಕಿದ ಕ್ಷಣ ಮೂಲೋಕದ ಭಾರ
ತಾಳಿನಿಂದ ಆ ವ್ಯಾಳ್ಯಕ |
ಎತ್ತುವದಂತು ಒತ್ತಟ್ಟಿಗಿರಲಿ
ಅವನ ಹಸ್ತ ಬರಲಿಲ್ಲ ಕಡಿಯಾಕ     || ೧೪ ||

ಗರ್ವನಷ್ಟವಾಗಿ ಗರುಡವಾಹನನ
ಸ್ಮರಿಸಿದಾನು ಆಗಿನ ಕ್ಷಣಕ |
ಅಂಜಿ ಅಂದು ಮುಕ್ಕುಂದ ಮುರಾರಿ
ಬಂದು ಒದಗು ಈ ಕಾಲಕ್ಕ          || ೧೫ ||

ಇವನ ಗರ್ವ ಪರಿಹಾರವಾಯಿತೆಂದು
ತಿಳಿಯ ಬಂತು ಕೃಷ್ಣನ ಮನಕ |
ಕಪಟನಾಟಕಿ ಹಿಡಿದ ಸರ್ಪನು
ತೂರಿನಿಂತ ಆ ಗಗನಕ್ಕ   || ೧೬ ||

ವಚನ :

ಭೀಮಸೇನ ಅಂಜಿನಡುಗಿದ. ಆದ ಬಹಳ ಸಣ್ಣ. ಅವನ ಫಜೀತಿ ಬಲ್ಲ ಮುಕ್ಕಣ್ಣ. ಅರ್ಜುನ ಬಂದಂತಾನ ಗಾರುಡಿಗ. ಅಶ್ವ ಎಂಥಾದ್ದು ನೋಡೋಣ. ನಗುತ್ತ ಗಾರುಡಿ ಅಶ್ವಕ್ಕೆ ಜೀನ ಹಾಕಿ ತಂದ ಡಣಾಡಣಾ. ಪಾಲ್ಗುಣ ಹತ್ತಿದನು ಕಣಾಕಣಾ.

ಪದ :

ಪಂಚಸೂತ್ರಗಳ ಹರದಂಗ ಆದಿತು
ಹಿಡಿದು ನಡದಿತು ಗಗನಮಾರ್ಗವನು |
ಆಕಾಶ ಮಾರ್ಗಕೆ ಕುದುರೆ ನಡೆದಿತೊ
ದಿಕ್ಕು ದಿಕ್ಕುಗಳ ಚರಿಸುತ || ೧೭ ||

ಒಯ್ದು ಸಮುದ್ರದಲಿ ಇವನ
ಉರುಳಿಸಿ ಬಿಟ್ಟಿತು ಬೇಕಂತ |
ಭಕ್ತರ ರಕ್ಷಣೆ ಮಾಡುವುದಕ್ಕೆ
ಓಡಿಬಂದ ಅಲ್ಲಿ ಹರಿ ತುರ್ತಾ        || ೧೮ ||

ಅದೇ ಸಮುದ್ರದ ಮಧ್ಯದಲಿ
ಒಂದ ಮಾಯದ ಮರಮಾಡಿ ಗೊತ್ತಾ |
ದೈವಯೋಗದಿಂದ ಬಿದ್ದ ಅರ್ಜುನ
ಮರದಮ್ಯಾಲ ಹರಿ ಸ್ಮರಿಸುತ      || ೧೯ ||

ತಡಾಮಾಡದೆ ಗಿಡದ ಟೊಂಗಿಯನು
ಹಿಡಿದು ಬಿದ್ದ ಜೊತಾಡುತ್ತಾ |
ನೀರಾಗ ಮೊಸಳಿ ಬಾಯಿ ತೆರೆಯುತಿತ್ತ
ಬಿದ್ದರ ಇವನ ತಿನಬೇಕಂತ          || ೨೦ ||

ವಚನ :

ಅರ್ಜುನ ಬಳಲಿ ಬಾಯಾರಿ ಕಂಗೆಟ್ಟು ನೀರು ತಂದ ತನ್ನ ಕಣ್ಣಿಗೆ. ಅನುರೇಣು ತೃಣದಲ್ಲಿ ವ್ಯಾಪವಾದ ಕಮಲಾಕ್ಷ ಕಾಯೋ ಇಂದಿಗೆ. ದಯಮಾಡೋ ನಂಬಿದಾ ಭಕ್ತಗೆ. ಘೋರ ಶೋಕ ಮಾಡುತ್ತ ಸಂತಾಪ ಇನ್ಯಾರಿಗೆ ಹೇಳಲಿ? ಅರಿವಾಯ್ತು ಕೃಷ್ಣನ ಮನಸ್ಸಿಗೆ.

ಪದ :

ರಾಕ್ಷಸಿ ರೂಪವ ತಾಳಿದ ಶ್ರೀಹರಿ
ಬಿಚ್ಚಿಬಿಟ್ಟ ತನ್ನ ಕೇಶವನು |
ಸಮುಂದರ ದಂಡೆಯ ಮ್ಯಾಲೆ ರಾಕ್ಷಸಿ
ನಿಂತ ಕೇಳತೈತಿ ಅರ್ಜುನನ        || ೨೧ ||

ಯಾರು ನೀನು ಇಲ್ಲ್ಯಾತಕ ಬಂದಿ
ಯಾವ ವಸ್ತು ಬೇಕು ಹೇಳ ನಿನಗ |
ವಸ್ತುವಿನ ಮಾರಿಗೆ ಉರಿ ಹಚ್ಚಲಿ
ಪಾರಾಗುವ ಹಂಚಿಕೆ ಇನ್ನಾಂಗ      || ೨೨ ||

ಆಡಿದ ನುಡಿಗಳು ಸ್ಮರಿಸಿ ಹೇಳತೈತಿ
ಪಾರ ಮಾಡುವೆನು ನಾ ಈಗ |
ಮದವಿ ಇಲ್ಲದ ಹದಿನಾರು ಸಾವಿರ
ವರಷ ತುಂಬಿ ಹೋದವು ನನಗ     || ೨೩ ||

ನನ್ನ ತಕ್ಕ ವರ ದೊರಿಯಲಿಲ್ಲ
ಎಲ್ಲ ಸ್ವರ್ಗ ಮರ್ತ್ಯ ಪಾತಾಳದಾಗ |
ಮಾರ ಹರನ ಸರಿ ಮನೋಹರ ಕಾಣತೀದಿ
ಮದುವೆ ಮಾಡಿಕೊಳ್ಳೊ ನೀ ಎನಗ || ೨೪ ||

ವಚನ :

ಮುಂದಿನ ವಿಚಾರ ತಿಳಿಯದೆ ಪಾರ್ಥ ವಚನ ಕೊಟ್ಟ ರಾಕ್ಷಸಿಗಾಗ. ಅದ್ಭುತಾಕಾರವಾಗಿ ಚಾಚಿಬಿಟ್ಟಳು ತನ್ನ ಕೈಯನ್ನ. ಅರ್ಜುನ ಅಂಜಿ ನಡುಗ್ಯಾನು ಅಯ್ಯಯ್ಯೊ ಸ್ವಾಮಿ ವ್ಯರ್ಥ ತಿಂದು ಬಿಡತೈತಿ ನನ್ನನ್ನು. ವ್ಯರ್ಥ ಪ್ರಾಣ ಕಾಳ ಕೊಂಡೇನು. ರಾಕ್ಷಸಿ ಹೇಳತೈತಿ ಹೆದರಬೇಡಿ ಪ್ರಿಯ ನೀನು. ನಾನೇನು ಮಾಡುವದಿಲ್ಲ ನಿನಗ.

ಪದ :

ನಿಮಿಷ ಮಾತ್ರದಲ್ಲಿ ತೆಗೆದು ಕಡಿಯಕ
ಪಾರು ಮಾಡಿತು ಅವನನ್ನು |
ವಚನ ಕೊಟ್ಟಹಾಗೆ ಲಗ್ನ ಮಾಡಿಕೊ
ತಡ ಮಾಡುವದು ಇನ್ಯಾಕ || ೨೫ ||

ಅಷ್ಟ ಇಷ್ಟ ರಾಕ್ಷಸರನೆಲ್ಲ
ಕರಸಿಕೊಂತ ಲಗ್ನ ಮಾಡುವುದಕ |
ಸಾಕಿನಿ ಡಾಕಿನಿ ಶಾಲಿನಿ ಜ್ವಾಲೆಯರು
ಎಂಬ ಪಿಶಾಚ್ಯಾರು ಆಕ್ಷಣಕ         || ೨೬ ||

ಬಂದ ಕೂಡಿದರು ಲಗ್ನ ಮಾಡಿದರು
ಏನು ಕೊರತೆ ಇಲ್ಲ ಒಂದಕ್ಕ |
ಗಂಡ ಹೆಂಡಿರು ಹೊಂದಿಕಿಯಾದರು
ಗರ್ಭ ನಿಂತಿತು ಕೇಡುಗಾಲಕ        || ೨೭ ||

ವಚನ :

ಬಸರಿನ ವಿಸ್ತಾರ ಕುಂತ ಕೇಳರಿ ಚಿತ್ತವಿಟ್ಟು ನಿಮ್ಮ ಧ್ಯಾನಕ್ಕ. ಹೊಟ್ಟೆ ಮುಂದಕ ಬೆಳೆದು ಹಬ್ಬಿತ್ತು ಮೇಲ ಪರ್ವತದ ಸರಿತೂಕ. ಕುಂಡಿ ತಿಗಾ ಹಿಂದ ದೊಡ್ಡವಾದವು. ಹೊಟ್ಟೆ ಜೋಲಿಯನ್ನು ಹಿಡಿಯುವುದಕ. ಎರಡು ಕುಚಗಳ ನಡುವಿನ ಅಂತರ ಅರವತ್ತು ಮೊಳ. ಈ ರೀತಿ ಬಸರಿನ ಕಳ. ನವಮಾಸ ತುಂಬಿ ರಕ್ಕಸಿಗೆ ಬ್ಯಾನಿ ಒತ್ತಿ ಬಂದವು ಬಹಳ. ಅರ್ಜುನನಿಗೆ ಆಯಿತು ಅತಿ ಗೋಳ. ಹಡೆಯಲಿಕ್ಕೆ ಹಸ್ತ ಊರಿ ಕುತಾಳ. ಕೂಸ ಇಳಿದವು ಸಳ ಸಳ. ತಲ್ಲಣಿಸಿ ಹೋತ ಭೂತಳ.

ಪದ :

ದಿನ ಒಂದರಂತೆ ಹಡೆಯುತ ನಡೆದಳು
ರಾಕ್ಷಸಿ ಮೂರು ವರ್ಷವನಾ |
ತೊಡಿಯ ತೊಳೆಯಲಿಕ್ಕೆ ನಿತ್ಯ ನೀರಿಗೆ
ಹೋಗುತ್ತಿದ್ದ ಅರ್ಜುನ ನದಿಗೆ        || ೨೮ ||

ನೀರ ಹೊತ್ತು ಹೆಗಲ ಗಂಟು ಆತ
ಬೇಡಿಕೊಂತಾನು ಪರಮಾತ್ಮನಿಗೆ |
ನೀರಿಗೆ ಒಂದಿನ ಬಂದ ಅಲ್ಲಿಂದ
ಓಡಿ ಹೋದ ಹಸ್ತಿನಾಪುರಕ         || ೨೯ ||

ಸುದ್ದಿ ಕೇಳಿ ಎದ್ದು ಒದರ‍್ಯಾಡತಾಳು
ಎಬ್ಬಿಸತಾಳ ತನ್ನ ಮಕ್ಕಳಿಗೆ |
ಸಣ್ಣ ದೊಡ್ಡ ಹಿರಿ ಕಿರಿ ಮರಿಗಳನೆತ್ತಿ
ಅವಚಿಕೊಂಡಳು ತನ್ನೆದಿಗೆ || ೩೦ ||

ವಾಯುವೇಗದಿದ ಬೇಗನೆ ಜಿಗಿಯುತ
ಓಡಿ ಬಂದಳು ಗಜಪುರಕೆ|
ಧರ್ಮನ ಚರಣಕೆ ಎರಗಿ ನಿಂತಳೊ
ತೋರಿಸಿಕೊಡರಿ ನನ ಗಂಡನಿಗೆ    || ೩೧ ||

ಅವಳ ಕಂಡ ಬಂಡ ಆದ ಅರ್ಜುನ
ನೀರತಂದ ತನ್ನ ಕಣ್ಣಿಗೆ |
ಗರ್ವಭಂಗ ಮಾಡಿ ಗರ್ವಿಲಿಂದಲಿ
ಮಯವಾದಳು ರಾಕ್ಷಸಿ    || ೩೨ ||

* * *

 

ಗಿರಿಜಾ ಕಲ್ಯಾಣ

ಗಣಪತಿ ಪಾದಕ ನಮಿಸುವೆ ನಾನು
ಸರಸ್ವತಿ ಪಾದಕ ಎರಗುವೆ ನಾ               || ೧ ||

ಬಂದ ದೈವಕ ಕೈಯ ಮುಗದು ನಾ
ಶಿವನ ಮದವಿ ಸಂದ ಹೇಳುವೆ ನಾ           || ೨ ||

ಕುಂದರಪುರದಲಿ ಚಂದದಿಂದಲಿ
ಗಿರಿರಾಯ ರಾಜ್ಯವನಾಳಿದನ                 || ೩ ||

ದಂಡು ದರ್ಬಾರ ಇಟ್ಟಿದ್ದ ಗಿರಿರಾಯ
ಬಂದ ರಾಜರನ ಮುರದಾನ                  || ೪ ||

ದಾನ ಧರ್ಮದಲಿ ಹೆಸರಾದ ಗಿರಿರಾಯ
ಮಾನದಲ್ಲಿ ಕೀರ್ತಿ ಪಡದಾನ                 || ೫ ||

ದೇವ ಮಾನವರು ಹೆದರಿ ನಡಿಯುತಾರು
ಗಿರಿರಾಜನ ಸರಿನಾದವರಾ                   || ೬ ||

ಗಿರಿರಾಜನ ಸತಿ ಮೀನಾದೇವಿಯವರು
ಪರಿವೃತೆಯಂತೆ ಮೆರಿಯುವರಾ              || ೭ ||

ಸತಿ ಪತಿ ಇಬ್ಬರು ಅತಿ ದುಃಖವ ಪಡುವರು
ಗತಿಗಾಣದಲೆ ಮಕ್ಕಳಿಲ್ಲದಲೆ                  || ೮ ||

ಮೀನಾದೇವಿಯವರು ತಪಕೆ ನಡಿದರು
ತಪಮಾಡಿ ಮಕ್ಕಳು ಪಡೆಯುದಕ            || ೯ ||

ವಚನ :

ಇಂತು ಮೀನಾದೇವಿಯು ಮಕ್ಕಳಿಲ್ಲವೆಂಬ ಬಯಕೆಯಿಂದ ಮಂದಿರವನ್ನು ಬಿಟ್ಟು ಅರಣ್ಯಕ್ಕೆ ಪೋಗಿ ತಪವನಾಚರಿಸಲಾಗಿ ಜಗದಾಂಬಿ ಪ್ರಸನ್ನಳಾಗಿ ಅಂದದ್ದು ಏನಂದರೆ, ಎಲೌ ಮೀನಾದೇವಿ ನಿನ ತಪಕ್ಕೆ ಮೆಚ್ಚಿದೆ. ನಿನ್ನ ಹೊಟ್ಟೆಯಲ್ಲಿ ನಾನೇ ಜನಿಸುತ್ತೇನೆಂದು ಅಂತರ್ದಾನವಾದಳು. ಇತ್ತ ಮೀನಾದೇವಿಯು ಮನಿಗೆ ಬಂದು ಪತಿಯಾದ ಗಿರಿರಾಯನಿಗೆ ಅನ್ನುವದೇನಂದರೆ –

ಪದ :

ಪತಿ ಗಿರಿರಾಯ ಕೇಳು ಅತಿ ಹರುಷದಲಿ
ಸತಿಯಾಡುವ ನುಡಿಗಳನಾ         || ೧೦ ||

ಜಗಜ್ಜನನಿ ಜಗದಾಂಬಿ ಒಲಿದಳು
ಮಗಳ ಫಲವಕೊಟ್ಟು ಸಾಗಿದಳು    || ೧೧ ||

ಮಾತು ಮುತ್ತಿನ್ಹಂಗ ಕೇಳ್ಯಾನು ಗಿರಿರಾಯ
ಸತಿಕೂಡ ರತಿಕ್ರೀಡೆನಾಡಿದನು      || ೧೨ ||

ಚಲ್ವ ಕೆಂದುಟಿ ಗಲ್ಲ ಬಿಲ್ಲದಳ
ಮೆಲ್ಲನೆ ನಲ್ಲ ಹಿಡಿಯುವನು          || ೧೩ ||

ಕರಗಳ ಪಾಶವ ಬಿಗಿದನು ಗಿರಿರಾಯ
ಕಿರಿ ಕೂದಲಗಳ ಸರಿಸುವನು       || ೧೪ ||

ಪುಟ್ಟ ಬೆಟ್ಟದಂತ ಬಟ್ಟ ಕುಚಕೆ
ಸೃಷ್ಟಿಪತಿ ಕಷ್ಟ ಕೊಟ್ಟಾನು || ೧೫ ||

ಎಷ್ಟು ಹೇಳಲಿ ಇನ್ನೆಷ್ಟು ಬಣ್ಣಿಸಲಿ
ಸೃಷ್ಟಿ ಪತಿಯ ಕಾಮನಾಟವನ      || ೧೬ ||

ಸಾರಿ ಹೇಳತೇನಿ ನಾರಿ ಮೀನಾದೇವಿ
ಮೀರಿದ ಗರ್ಭವ ಧರಿಸಿದಳಾ       || ೧೭ ||

ಬಯಕಿ ಹತ್ತಿದವು ಮೀನಾದೇವಿಗೆ
ದಿನಗಳ ತುಂಬ್ಯಾವು ಬರುಬರುತಾ || ೧೮ ||

ಬ್ಯಾನಿ ತಿನ್ನುತಲಿ ಮೀನಾದೇವಿಯರು
ಜ್ಞಾನವಿಲ್ಲದಂಗ ಬಳಲಿದರಾ         || ೧೯ ||

ವಚನ :

ಈ ಪ್ರಕಾರವಾಗಿ ಮೀನಾದೇವಿಯು ನವಮಾಸ ತುಂಬಿದ ಕೂಡಲೆ ಹೆಣ್ಣು ಕೂಸು ಹೆತ್ತಳು. ಆ ಕೂಸಿಗೆ ಪಾರ್ವತಾದೇವಿಯೆಂದು ಹೆಸರಿಟ್ಟರು. ಹೆಣ್ಣು ಕೂಸು ಸಣ್ಣದಾದರೂ ಜಾಣರಂತೆ ಶಿವನ ಪ್ರಾಣಲಿಂಗನು ಪೂಜಿಸುವುದನ್ನು ತಾಯಿ ತಂದೆಗಳು ಕಣ್ಣಾರೆ ಕಂಡು ಸಂತೋಷಪಡುತ್ತಿರುವರು. ಇತ್ತ ಪಾರ್ವತಾದೇವಿಯವರು ದಿನ ದಿನಕ್ಕೆ ಬಿದಗಿ ಚಂದ್ರನಂತೆ ಬೆಳೆದು ಹತ್ತು ವರ್ಷದ ಪ್ರಾಯಕ್ಕೆ ಬಂದರು. ಆವಾಗ್ಗೆ ಮೀನಾದೇವಿಯವರು ಪತಿಯಾದ ಗಿರಿರಾಜನಿಗೆ ಅನ್ನುವುದೇನಂದರೆ –

ಪದ :

ಪ್ರಾಣಕಾಂತರೆ ನೋಡಿದಿರಾ ಈ
ಜಾಣ ಮಗಳೆ ಮದವಿಯ ಕಾರ್ಯ  || ೨೦ ||

ಹರೇದ ಮಗಳು ಪಾರ್ವತಾದೇವಿಗೆ
ತುರ್ತ ಲಗ್ನ ಮಾಡಲಿಬೇಕ || ೨೧ ||

ಶಿವನ ಕರಸರಿ ಬಲು ಬೇಗ
ಅವನಿಗೆ ಕೊಡುವೆನು ನನ ಮಗಳ  || ೨೨ ||

ನಾಗಭೂಷಣ ಶಿವ ಅಳಿಯನಾದರೆ
ಮಗಳು ಸುಖದಲ್ಲಿ ಇರುವಳ        || ೨೩ ||

ಮಡದಿ ಮಾತಿಗೆ ಒಪ್ಪಿದನವ
ದಡನೆ ದೂತರನ ಕರಸಿದನು        || ೨೪ ||

ಅಷ್ಟರಲ್ಲಿ ಬಂದ ಶ್ರೇಷ್ಠನಾರದ ಮುನಿ
ಸೃಷ್ಟಿ ಪತಿ ಕೇಳೆಂದಾನು   || ೨೫ ||

ಸುಡಗಾಡದಲ್ಲಿ ಶಿವಾ ಇರುವನು
ಬಡವನಾಗಿ ತಿರದುಂಬುವನು       || ೨೬ ||

ಕಾಡ ಹುಲಿಗಳ ಚರ‍್ಮವ ಹೊತಗೊಂಡು
ಗಾಢದಿ ಯೋಗವ ಮಾಡುವನಾ    || ೨೭ ||

ಪಾರ್ವತಿ ಶಿವನಿಗೆ ಕೊಡಬ್ಯಾಡಾ
ಸರ್ವಸೌಖ್ಯದಿಂದ ಕೆಡಬ್ಯಾಡಾ      || ೨೮ ||

ನಂದಕೃಷ್ಣನಿಗೆ ನಿನ್ನ ಮಗಳಕೊಡು
ಹಿಂದ ಮುಂದ ನೋಡಲು ಬ್ಯಾಡ   || ೨೯ ||

ಮಾನವಂತನು ಬಲು ಜಾಣ
ಧನವಂತನು ನಮ್ಮ ಶ್ರೀಕೃಷ್ಣ        || ೩೦ ||

ತನು ಮನದಲ್ಲೇ ಪಾರ್ವತಿಗೆ ಒಲಿದನು
ಪಾರ್ವತಿ ರೂಪಕ ಬಲು ಪ್ರಾಣಾ    || ೩೧ ||

ವಚನ :

ಇಂತು ನಾರದನ ಮಾತನ್ನು ಗಿರಿರಾಯನು ಕೇಳಿ ತನ್ನ ಮಗಳನ್ನು ಕೃಷ್ಣನಿಗೆ ಕೊಡಬೇಕೆಂದು ವಚನಕೊಟ್ಟ; ಸಭಾದೊಳಗೆ ಸ್ಪಷ್ಟ. ಅತ್ತ ನಾರದನು ವೈಕುಂಠಕ್ಕೆ ಬಂದು ಕೃಷ್ಣನಿಗೆ ಈ ಸುದ್ದಿಯನ್ನು ಅರುಹಿದಾ. ಇತ್ತ ಪಾರ್ವತಾದೇವಿಯು ಈ ಸುದ್ದಿಯನ್ನು ಕೇಳಿ ತಾಯಿ ಕಡೆಗೆ ಬಂದು ಅನ್ನುವದೇನಂದರೆ –

ಪದ :

ಗಡನೆ ತಾಯಿ ಕಡೆ ಬಂದಾಳೊ
ಹಡದವ್ವಾ ಕೇಳಂದಾಳೊ  || ೩೨ ||

ಶಿವನ ಮೇಲೆ ನನ್ನ ಮನಸ ಇರುವದು
ಶಿವನ ಮಡದಿ ತಾನಂದಾಳ         || ೩೩ ||

ಜಡಜವಜನಿ ಕೇಳ ಪಾರ್ವತಿ
ಬಿಡು ಬಿಡು ತರವಲ್ಲವ ರೀತಿ        || ೩೪||

ಪೊಡವಿಪತಿ ಶ್ರೀಕೃಷ್ಣದೇವರಿಗೆ
ಮಡದಿಯಾಗಿ ಸುಖದಿಂದಿರತಿ       || ೩೫ ||

ಪೊಡವಿಪತಿಯು ನಿನ್ನ ಹಡಿದವರು
ನುಡಿದ ಮಾತಿಗೆ ತಪ್ಪದಂಥವರು   || ೩೬ ||

ಬಡವರ ಮಣಿ ಹಡದ ಮಗಳ ಕೊಟ್ಟು
ಕಡು ಕಷ್ಟವ ನೋಡದಂಥವರು      || ೩೭ ||

ಬಡಿವಾರ ಹೇಳಬ್ಯಾಡ ಕೃಷ್ಣಂದು
ತುಡುಗ ಮಾಡಿ ಬಡ್ತ ತಿನ್ನುವದು    || ೩೮ ||

ನಾರಿ ಗೌಳಿಗರು ನೀರಿಗೆ ಹೋಗುವಾಗ
ದಾರಿ ಕಟ್ಟಿ ಶರಗ ಜಗ್ಗವದು          || ೩೯ ||

ಬಡತನವಾದರು ನಮ್ಮ ಶಿವನು
ಬಡ ಭಕ್ತರನು ಕಾಯುವನು          || ೪೦ ||

ಬಿಡದೆ ತಪಾ ಮಾಡಿ ಶಿವನ ಒಲಿಸಿಕೊಂಡು ಶಿವನ
ತೊಡಿಯಮ್ಯಾಲೆ ಕೂಡ್ರುವೆನು      || ೪೧ ||

ವಚನ :

ಇಂತು ಪಾರ್ವತಾದೇವಿ ತಾಯಿ ಮುಂದ ಹೇಳಿ ಹಂಪಿವಿರುಪಾಕ್ಷನ ಗುಡಿಗೆ ಹೋಗಿ ಶಿವನನ್ನು ಕುರಿತು ತಪಸ್ಸನ್ನು ಆಚರಿಸಿ ಶಿವನೇ ಶಿವಲಿಂಗವೆಂದು ಲಿಂಗಾರ್ಚನೆಯನ್ನು ಮಾಡಿ ಹರನನ್ನು ಕುರಿತು ಭಜನೆಯನ್ನು ಮಾಡಿದಳು ಆ ಜಗದಾಂಬಿಕೆಯು –

ಭಜನೆ :

ಹರ ಹರ ಶಂಕರ ರಿಪು ಹರನೆ
ಮೂರ ಹರನೇ ಗಂಗಾಧರನೆ |
ಗಿರವರನೆ ಸುರನುತನೆ
ಕರುಣದಿ ಪೊರೆಯೋ ಗುರುಹರನೆ ||

ಹರ ಹರ ದಕ್ಷನ ಶಿರವನು ಹರಸಿದನೊ
ಸಾಕ್ಷಾತ ಗಿರಿಯಲೆ ಜನಿಸಿದನೊ|
ಅಕ್ಷಯನೆ ರಕ್ಷಿಸು ನೀ
ಈಕ್ಷಿಸು ಸತಿಯಳ ವೀಕ್ಷಿಪನೆ ||