ಪಾರ್ವತಿಯ ಬಯಕೆ

ಸಾಂಬ ಸದಾಶಿವ ನಂಬಿದ ಭಕ್ತರ
ಕುಂಭಿನಿಯೊಳು ಪಾಲಿಸು ಎನ್ನ
ಕುಂಭಿನಿಯೊಳು ಪಾಲಿಸ ಎನ್ನ | ಜಗ-
ದಂಗ ಪ್ರಿಯ ರಕ್ಷಿಸೊ ಮುನ್ನ                  || ೧ ||

ಒಂದಿನ ಶಂಕರ ಕೈಲಾಸ ನಗರದಿ
ಮಂದಗಮನಿ ಪಾರ್ವತಿ ತಾನಾ
ಮಂದಗಮನಿ ಪಾರ್ವತಿ ತಾನಾ | ಆ-
ನಂದದಿಂದ ಇದ್ದನೋ ಶಿವನ                 || ೨ ||

ಗೌರಿ ಕೇಳತಾಳೋ ಮಾರಹರನಿಗೆ
ಊರ್ವಿಯಲ್ಲಿ ಯಾರು ಬಲವಾನ
ಊರ್ವಿಯಲ್ಲಿ ಯಾರು ಬಲವಾನ | ಅಂತ
ಪಾರ್ವತಿ ಕೇಳತಾಳೊ ಗಂಡನ               || ೩ ||

ಮಡದಿ ಮಾತು ಕೇಳಿ ಮೃಡನು ಹೇಳತಾನು
ಜಡಜನೇತ್ರಿ ಹೇಳುವೆ ನಾನಾ
ಜಡಜನೇತ್ರಿ ಹೇಳುವೆ ನಾನಾ | ಈ
ಪೊಡವಿಗೆ ಗಂಡನು ನರ ಅರ್ಜುನ            || ೪ ||

ಅವನ ತಡವಿ ಈ ಭುವನದಿ
ಯಾರು ನೋಡಿಲ್ಲಾತನ ಬೆನ್ನಾ
ಯಾರು ನೋಡಿಲ್ಲಾತನ ಬೆನ್ನಾ | ಎಲೆ
ಆಯತಾಕ್ಷಿ ತಿಳಿಯಲೆ ನೀನಾ                 || ೫ ||

ಅಂಥ ಬಲಾಢ್ಯ ಪೃಥ್ವಿಯ ಮೇಲೆ
ಎಂಥವ ತೋರಿಸುವ ನನಗವನ
ಎಂಥವ ತೋರಿಸುವ ನನಗವನ | ಅಂತ
ಕಾಂತೆಮಣಿಯು ಕೇಳತಾಳು ಶಿವನ          || ೬ ||

ವಚನ :

ಚಂದ್ರಧರ ಹೇಳುತಾನ ತನ್ನ ಹೆಂಡತಿಗೆ. ಆತಂದೆಲ್ಲ ಹೇಳ್ತೀನಿ ಕೇಳು ನಿನಗ. ಬಂಧುರ ಭರತಖಂಡದಲ್ಲಿ ಹಸ್ತಿನಾಪುರದಾಗ ಪಾಂಡುನಂದನನ ಮಗ ಪಾರ್ಥ ಅದಾನ ಬಲವಾನ. ಮಗಾ ತಪಾ ಮಾಡತಾನ ಬಾಣ ಬೇಕಂತ. ಚಪಲಾಕ್ಷ ನಾ ಹೋಗತೇನಿ ತುರ್ತಾ. ಗುಪ್ತಯೋಗ ಮಾಡತಾನ ಪರಿಪೂರ್ತಾ. ತಪದ ಭಾರದಿಂದ ನಾನಾದೇನನರ್ಥ.

ಪದ :

ತಡೆಯುವದಿಲ್ಲ ನಾ ಪೊಡವಿಪನ್ಹತ್ತರ
ಮಡದಿ ಕೇಳ ಹೋಗತೇನಿ ನಾನಾ
ಮಡದಿ ಕೇಳ ಹೋಗತೇನಿ ನಾನಾ | ಅವಗ
ಕೊಡುವೆ ಬೇಡಿದಂತಾ ಫಲಗಳನಾ || ೭ ||

ವಚನ :

ಮಾತಿನಿ ಹೇಳುತಾಳೊ ಶಂಕರಗ. ನಾನು ಬರುತ್ತೇನೆ ನೋಡಲಿಕ್ಕೆ ಆತನ ಹತ್ತಿರ. ಕೂನಾ ನೋಡುತ್ತೇನೆ ಆತನ ಭೀಕರ. ನನಗ ಬೆನ್ನ ತೋರಿಸಿರಿ ಆತನದು ಚೂರಾ.

ಪದ :

ಸೃಷ್ಠಿಗೀಶನೆ ನನ ಬಿಟ್ಟು ಹೋಗಬೇಡ
ಭೆಟ್ಟಿಯಾಗತೇನಿ ನಾನವನ
ಭೆಟ್ಟಿಯಾಗತೇನಿ ನಾನವನ | ಅಂತ
ಗಟ್ಟಿಪಾದ ಹಿಡಿದಾಳೊ ತಾನಾ      || ೮ ||

ವಚನ :

ಪರಮೇಶ್ವರ ಹೇಳತಾನ ನಕ್ಕೊಂತ. ಹೇ ಗಿರಿಜೆ ಹೇಳತೇನಿ ಕೇಳೆ ಕಾಂತಾ. ತ್ವರೆಯಬೇಕು ರೂಪ ಎಲ್ಲ ಏಕಾಂತ. ಧರಿಸಬೇಕು ವೇಷ ಬೇಡರಂತ.

ಪದ :

ಬೇಡನ್ಹಂಗ ನಾ ರೂಪಮಾಡತೇನಿ
ಓಡ ನನಮುಂದ ಚಿಗರ‍್ಯಾಗಿ
ಓಡ ನನಮುಂದ ಚಿಗರ‍್ಯಾಗಿ | ಲಗು
ಕೂಡ ಅವನ್ಹಂತೆ ಓಡ್ಹೋಗಿ          || ೯ ||

ಅಲ್ಲಿಂದ ನಿನಗೆ ತಿಳಿಸಿ ಹೇಳತೇನಿ
ಸೊಲ್ಲ ಕೇಳ ಬಹು ಸೊಗಸಾಗಿ
ಸೊಲ್ಲ ಕೇಳ ಬಹು ಸೊಗಸಾಗಿ | ನೀ
ಮೆಲ್ಲನೇಳ ಸ್ತ್ರೀ ಹರಣ್ಯಾಗಿ || ೧೦ ||

ವಚನ :

ಪರಮೇಶ್ವರನಂದ ಮಾತು ಕೇಳಿ ಪಾರ್ವತಿ ಕಬೂಲಾಗಿ, ಕೊಂಕಿನಿಂದ ನಿಂತಾಳೊ ಸಣ್ಣ ಚಿಗರ‍್ಯಾಗಿ. ಭಯಂಕರವಾಗಿ ನಿಂತಾನೋ ಶಿವನು ಬೇಡನಾಗಿ. ಝೇಂಕರಿಸ್ಯಾನು ಬಿಲ್ಲು ಬಾಣ ಬಹು ಸೊಗಸಾಗಿ. ಕಾಳಕೂಟ ವಿಷ ಮಾಡಿದ ಕಸ್ತೂರಿ ಗಂಧ ಬಾಳ ನೇತ್ರದೊಳ್ ಅಡಗಿಸಿಬಿಟ್ಟಾನೋ ಬಹುಚಂದ. ಹೇಳತಾನ ಪಾರ್ವತಿಗೆ ಲಗು ನಡಿ ಮುಂದ ಮುಂದ. ವ್ಯಾಳ್ಯವಾಗತೈತಿ ಪಾರ್ಥನ ಕಾಣುವದಾ.

ಪದ :

ಮೃಡನು ಶಂಕರಿ ನಡಿದರಿಬ್ಬರು
ಜೋಡಿಲೆ ಬ್ಯಾಡನ ರೂಪಾಗಿ
ಜೋಡಿಲೆ ಬ್ಯಾಡನ ರೂಪಾಗಿ | ದೂರ
ನೋಡಿದರು ಪಾರ್ಥಶಿವಯೋಗಿ     || ೧೧ ||

ನೆತ್ತಿ ಮೇಲೆ ಜಡಿಸುತ್ತಿ ಕಾಂಬುವದು
ಸುತ್ತೆಲ್ಲ ಬೆಂಕಿ ನಿಗಿನಿಗಿ
ಸುತ್ತೆಲ್ಲ ಬೆಂಕಿ ನಿಗಿನಿಗಿ | ಅವನ
ಹತ್ತಿರ ನಿಂತಿತೊ ಚಿಗರ‍್ಹೋಗಿ       || ೧೨ ||

ಪಾರ್ಥ ಸಾವುತೇನಿ ವ್ಯರ್ಥ ಕೊಲ್ಲತಾನ
ದೂರ್ಥ ಬ್ಯಾಟಿ ತಿಂಬುವ ಕಾಗಿ
ದೂರ್ಥ ಬ್ಯಾಟಿ ತಿಂಬುವ ಕಾಗಿ | ನಾನ-
ನರ್ಥ ಆಗತೇನಿ ಕಾಯೋಗಿ         || ೧೩ ||

ದನಿಯು ಕೇಳಿ ಆ ಮುನಿಯು ಪಕ್ಕನೆ
ಕಣ್ಣು ತೆರೆದು ನೋಡಿದ ಬಾಗಿ
ಕಣ್ಣು ತೆರೆದು ನೋಡಿದ ಬಾಗಿ | ಹೆಣ್ಣು
ಚಿಗರಿ ಕಂಡಿತೋ ಎದುರಿಗೆ         || ೧೪ ||

ಹೊಡೆಯಬ್ಯಾಡ ಎದಿ ಕೊಡುವದಿಲ್ಲ ಈ
ಪೊಡವಿಪ ಕ್ಷತ್ರಿಯ ವಂಶರಿಗೆ
ಪೊಡವಿಪ ಕ್ಷತ್ರಿಯ ವಂಶರಿಗೆ | ಮುಂದೆ
ಕೆಡಕು ತಂದಿರಿ ಮರಿಯಾದಿಗೆ       || ೧೫ ||

ಇಷ್ಟು ವಚನವ ಗಟ್ಯಾಗಿ ಕೊಟ್ಟುದು
ಸ್ಪಷ್ಟ ತಿಳಿಯಿತೊ ಶಂಕರನಿಗೆ
ಸ್ಪಷ್ಟ ತಿಳಿಯಿತೊ ಶಂಕರನಿಗೆ | ಆಗ
ತಟ್ಟನೆ ಬಂದಾನೊ ಶಬರಾಗಿ       || ೧೬ ||

ಎಲ್ಲಿ ಹೋತೊ ನನ್ನ ಹುಲ್ಲೆ ತೋರಿಸಂತ
ಪಾಲ್ಗುಣನನು ಕೇಳತಾನು ಕೂಗಿ
ಪಾಲ್ಗುಣವನನು ಕೇಳತಾನು ಕೂಗಿ | ಆಗ
ಪಾಲ್ಗುಣ ಹೇಳತಾನು ಸೊಗಸಾಗಿ  || ೧೭ ||

ವಚನ :

ಎಲೈ ಧೂರ್ತನೆ ಕೇಳಬೇಕೆನ್ನ ಮಾತ. ಕ್ಷತ್ರಿಯ ವಂಶದಲ್ಲಿ ಹುಟ್ಟಿದ ಪಾರ್ಥ. ಮರ್ತಾದರು ಕೊಡಲಿಕ್ಕಿಲ್ಲ ಬೆನ್ನಿಗೆ ಬಿದ್ದ ತುತ್ತ. ತುರ್ತಕ್ಕೆ ಮಾಡಿ ತೋರೋ ನಿನ್ನ ಕಸರತ್ತ. ಯುದ್ಧದಲ್ಲಿ ಜಯಿಸಿ ಒಯ್ಯಬೇಕು ಚಿಗರಿಯ ಮರಿ. ಕದ್ದು ಒಯ್ದರೆ ಜೀವ ಹೋದೀತೊ ಹಾರಿ. ಶುದ್ಧ ಬಿಲ್ಲು ತೊಡು ಭಾರಿ. ಗುದ್ದಾಟ ಮಾಡಿ ಗೆದ್ದುಕೊಂಡು ಒಯ್ಯಬೇಕು ಹರಣಿಯ ಮರಿ.

ಪದ :

ಇಷ್ಟು ಕೇಳಿ ಶಿವ ಸಿಟ್ಟಿಗೆ ಎದ್ದಾನೊ
ತಟ್ಟನೆ ಯುದ್ಧಕ ನಿಲ್ಲಂದ
ತಟ್ಟನೆ ಯುದ್ಧಕ ನಿಲ್ಲಂದ | ವಳೆ
ಗಟ್ಟಿಬಾಣ ಬಿಟ್ಟನು ಒಂದ  || ೧೮ ||

ಅರ್ಜುನನ ನೋಡಿ ಘರ್ಜಿಸಿ ನುಡಿದನು
ಮರ್ಜಿ ಹಿಡದಿದ್ದೆನು ನಾನಿಂದ
ಮರ್ಜಿ ಹಿಡದಿದ್ದೆನು ನಾನಿಂದ | ನೀ
ದುರ್ಜನ ಆದಿಯಂತ ಸಿಟ್ಟಾದ       || ೧೯ ||

ಎದಿಯ ಜಗ್ಗಿ ಶಿವ ಮದನಾರಿ ಬ್ಯಾಡವ
ಎದಿಗೆಬಾಣ ಹೊಡಿದನೊ ಜಲದ
ಎದಿಗೆ ಬಾಣ ಹೊಡದನೊ ಜಲದ | ಶಿವ
ಬೆದರಿ ನಿಂತು ಬಾಣವ ತೆಗೆದ       || ೨೦ ||

ನೋಡಲೆ ಪಾರ್ಥ ಬ್ಯಾಡನ ಕೈಯೊಂದು
ಮಾಡತೇನಿ ವಳೆ ಕಷ್ಟಂದ
ಮಾಡತೇನಿ ವಳೆ ಕಷ್ಟಂದ | ಜೋಡ
ಜೋಡ ಬಾಣ ಹೊಡಿದನೊ ದುಂದ || ೨೧ ||

ಹೂಡಿದ ಬಾಣವನು ಕಡಿದು ಪಾರ್ಥನು
ಆಡತಾನ ಬ್ಯಾಡನ ಮುಂದ
ಆಡತಾನ ಬ್ಯಾಡನ ಮುಂದ | ನೀ
ಓಡಿ ಹೋಗಲೆ ಇಲ್ಲಿಂದ    || ೨೨ ||

ನಕ್ಕು ನರನು ಒಂದು ಚಿಕ್ಕ ಬಾಣದಿಂದ
ಮುಕ್ಕಣ್ಣಗ ಬಿಟ್ಟನೊ ಸರದ
ಮುಕ್ಕಣ್ಣಗ ಬಿಟ್ಟನೊ ಸರದ | ಆಗಿ
ದಕ್ಕಿ ಹತ್ತಿ ಶಿವ ತಾನೊಂದ          || ೨೩ ||

ಬಗ್ಗಿ ಬಾಣದ ಕೀಲ ಜಗ್ಗಿ ಶಿವ
ಡೊಗ್ಗಾಲಮಂಡಿ ಹೂಡಿದಾ
ಡೊಗ್ಗಾಲಮಂಡಿ ಹೂಡಿದಾ | ಜಗ್ಗಿ
ಜಗ್ಗಿ ಪಾರ್ಥನಿಗೆ ತಗಿದೊಗಿದಾ      || ೨೪ ||

ನೋಡಿ ಪಾರ್ಥ ಜೋಡಿಸಿ ಬಿಲ್ಲು
ಬ್ಯಾಡನೆದಿಗೆ ಬಿಟ್ಟನೊ ಜಲದಾ
ಬ್ಯಾಡನೆದಿಗೆ ಬಿಟ್ಟನೊ ಜಲದ | ಇದ
ನೋಡತಾಳೊ ಪಾರ್ವತಿ ಮೋದ   || ೨೫ ||

ಬಾಣದ ಪೆಟ್ಟಿಗೆ ತ್ರಾಣಗುಂದಿ ಶಿವ
ಕ್ಷೋಣಿಗೆ ಕುಂತು ಪಾರ್ಥನಿಗಂದಾ
ಕ್ಷೋಣಿಗೆ ಕುಂತು ಪಾರ್ಥನಿಗಂದಾ | ಬಿಲ್ಲು
ಬಾಣ ಬಿಟ್ಟು ಕುಸ್ತಿಗೆ ಕರದ || ೨೬ ||

ವಚನ :

ಮುಷ್ಠಿ ಯುದ್ಧ ಮಾಡ್ಯಾರು ಬಹುಚಂದ. ಸೃಷ್ಟಿಪತಿ ಶಿವನು ಖುಸಿಲಿಂದ. ಪೆಟ್ಟಿಗೆಪೆಟ್ಟು ಕೊಟ್ಟಾರೊ ಬಹು ಹೊಂದಕಿಲಿಂದ, ಬಿಟ್ಟಾರೊ ಮುಷ್ಠಿ ಯುದ್ಧ ಅಲ್ಲಿಂದ.

ಪದ :

ಮಲ್ಲಯುದ್ಧ ವಳೆ ಬಲ್ಲಿದ ದೇವ
ಘುಲ್ಲಲೋಚನನು ತಾ ಕರದ
ಘುಲ್ಲಲೋಚನನು ತಾ ಕರದ | ವಳೆ
ಬಲ್ಲಿದ ನರ ಬಂದನೊ ಮುಂದ      || ೨೭ ||

ರಟ್ಟಿ ಹಿಡಿದು ಕೈಕಟ್ಟಿ ವಗೆಯುತಾನ
ದಿಟ್ಟ ಪಾರ್ಥ ಬ್ಯಾಡನ ಹಿಡಿದ
ದಿಟ್ಟ ಪಾರ್ಥ ಬ್ಯಾಡನ ಹಿಡಿದ | ಕಾಲ
ಕಟ್ಟಿ ಶಿವನು ತಾ ಕಡಿಗಾದ || ೨೮ ||

ಬುಡುಕಬಿದ್ದು ಶಿವ ಕಾಲತೊಡಕ ಹಾಕಿ
ನಡಕ ತೆಕ್ಕಿ ಹಾಕಿದನೊ ಬಂದಾ
ನಡಕ ತೆಕ್ಕಿ ಹಾಕಿದನೊ ಬಂದಾ | ವಳೆ
ದುಡುಕಿ ಹೊಡೆದು ನಿಂತಾನು ಬಂದಾ        || ೨೯ ||

ಬರಪುರ ಶಿಟ್ಟಾಗಿ ಭಕಾಶಿ ಪಾರ್ಥ
ಪುರಮಾಶಿ ತಲೆಮಟ ಹೊತ್ತೆದ್ದಾ
ಪುರಮಾಶಿ ತಲೆಮಟ ಹೊತ್ತೆದ್ದಾ | ಶಿವ
ತರಹರಿಸುತ ಭೂಮಿಗೆ ಬಿದ್ದಾ       || ೩೦ ||

ಹರನು ನರನ ಅಂಗಿ ಹರಿದು ಪಾರ್ವತಿಗೆ
ನೋಡಂತ ಬಿದ್ದುಕೊಂಡು ತಾ ಕರೆದ
ನೋಡಂತ ಬಿದ್ದುಕೊಂಡು ತಾ ಕರೆದ | ಶಿವೆ
ನೋಡತಾಳೊ ತ್ವರಿತದಿ ಬಂದಾ   || ೩೧ ||

ಅವನ ಮೇಲೆ ಹರಿದು ಅಂಗಿ ಮೈ
ತೆರೆದದ್ದು ಕಂಡಳು ಬಹುಚಂದ
ತೆರೆದದ್ದು ಕಂಡಳು ಬಹುಚಂದ | ಉಮೆ
ನರನ ಬೆನ್ನು ನೋಡಿದಳಂದ        || ೩೨ ||

ವಚನ :

ಮೈ ಬೆನ್ನು ತೋರಿದ ಕೂಡಲೆ ಮಾಯವಾದ ಶಂಕರತಾನಾ. ಬೆನ್ನಿಗ ಪಾರ್ಥ ನೋಡಿದನಾಗ, ಹರಹರ ಎನ್ನಪರಾಧ ಕ್ಷಮಿಸಬೇಕೊ ಅಂತಾ. ಚೆನ್ನಾಗಿ ಮಾಡ್ತಾನ ಸ್ತೋತ್ರ.

ಪದ :

ಮಾರಹರ ಮದನಾರಿ ಕೃಪಾನಿಧಿ
ಪೂರ ಕಾಯಬೇಕು ಬಾಲನ್ನ
ಪೂರ ಕಾಯಬೇಕು ಬಾಲನ್ನ | ನಿಮ್ಮ
ಬೇರು ತಿಳಿಯದಂತ ಅಧಮನ್ನ     || ೩೩ ||

ಕೂಸು ಮರವಿ ತಿಂಬೊ ಪಾಶಕ್ಕೆ ಶಿಲ್ಕಿಂದೆ
ಬ್ಯಾಸರ ಮಾಡದೆ ಕಾಯೆನ್ನ
ಬ್ಯಾಸರ ಮಾಡದೆ ಕಾಯೆನ್ನ | ತಂದೆ
ನೀಲಕಂಠನೆ ಈ ಪಾರ್ಥನ್ನ          || ೩೪ ||

ಸ್ತೋತ್ರಕೆ ಶಂಕರ ಪ್ರತ್ಯಕ್ಷವಾಗುತ
ಪಾರ್ಥಗ ಮೆಚ್ಚಿದ ಶಿವ ತಾನು
ಪಾರ್ಥಗ ಮೆಚ್ಚಿದ ಶಿವ ತಾನು | ಬಹು
ಆರ್ಥಿಲೆ ಕೊಟ್ಟನೊ ಅಸ್ತ್ರವನ        || ೩೫ ||

ಪಾಶುಪತಾಸ್ತ್ರವ ಪಾರ್ಥಗ ಕೊಡುವುತ
ಪಾರ್ವತಿ ಸಂಗಡ ಹೊರಟಾನು
ಪಾರ್ವತಿ ಸಂಗಡ ಹೊರಟಾನು | ಇತ್ತ
ಪಾರ್ಥ ಗಜಪುರಕೆ ನಡೆದಾನು      || ೩೬ ||

 

ಭೃಂಗಿ

ಪರಮಾನಂದ ಪರಮೇಶ್ವರ ಪಾರ‍್ವತಿ
ಹರ ಗುರುಪಾದಕ ನಮೋ ನಮೋ           || ಪ ||

ಕಂದ ಕೇಳತಾನ ಕುಂದುಗೊರಳನ ತಾ
ಒಂದಿನ ಮಾಡಿದ ಕಥನವನಾ
ಒಂದಿನ ಮಾಡಿದ ಕಥನವನಾ | ಗಣ-
ವೃಂದಗೊಳಗೆ ನುಡಿದ್ಹಾಡುವೆನಾ             || ೧ ||

ಗಂಗಾಧರ ಶ್ರೀಮಂಗಲಗೌರಿ
ಪಿಂಗದೆ ಏರುತ ಗಾದಿಯನಾ
ಪಿಂಗದೆ ಏರುತ ಗಾದಿಯನಾ | ಶಿವ
ಪುಂಗ ಭೃಂಗಿ ಬಂದನು ತಾನಾ               || ೨ ||

ನೆಟ್ಟಗೆ ತನ್ನ ನಾಂಟ್ಯವನಾಡಿ
ಒಂಟಿ ಮಾಡಿದ ಮುಜುರಿಯನಾ
ಒಂಟಿ ಮಾಡಿದ ಮುಜರಿಯನಾ | ತಾ
ಒಂಟಿಗೈಯಲೆ ಸಾಷ್ಟಾಂಗವನಾ              || ೩ ||

ಗಿರಿಜೆ ನೋಡಿ ಮನ ತರಹರಗೊಳ್ಳುತ
ಹರನಿಗ್ಹೇಳತಾಳೊ ತಾ ಆದನಾ
ಹರನಿಗ್ಹೇಳತಾಳೊ ತಾ ಆದನಾ | ಪುರ
ಹರನೆ ನೋಡು ಈ ಶರಣವನ                || ೪ ||

ಏಕೊ ದೇವ ಪರಬ್ರಹ್ಮನೆ ಸಾಕಂತ
ಬೇಕಂದ ಮಾಡಿದ ಶರಣವನ
ಬೇಕಂತ ಮಾಡಿದ ಶರಣವನ | ಅವ
ಗ್ಯಾಕ ಕೊಟ್ಟರಿ ಇಷ್ಟು ಸಲುಗಿಯನ            || ೫ ||

ನನ್ನ ಮಾಸ ನನ್ನ ಮಜ್ಜದಿಂದ ಇವ
ಉನ್ನತವಾಗಿ ಬೆಳೆದಾನು
ಉನ್ನತವಾಗಿ ಬೆಳೆದಾನು | ಇವ
ನನ್ನ ಬಿಟ್ಟು ಎಲ್ಲಿ ಹೋಗುವನು                || ೬ ||

ಪಾರ್ವತಿ ಮಾತಿಗೆ ಹರನು ಹೇಳತಾನು
ಶರಣರ ಸ್ಥಿತಿ ಆರಿದಿಲ್ಲ ನೀನು
ಶರಣರ ಸ್ಥಿತಿ ಆರಿದಿಲ್ಲ ನೀನು | ಅವರಿಗೆ
ಸರಿಸಮ ಆಗಲಾರೆ ನೀನು          || ೭ ||

ಆಡಿದ ಮಾತಿಗೆ ಮೃಡಾಣಿ ಹೇಳತಾಳು
ತಡೆದು ನೋಡ್ರಿ ಎನ್ನ ಶಕ್ತಿಯನು
ತಡೆದು ನೋಡ್ರಿ ಎನ್ನ ಶಕ್ತಿಯನು | ಅಂತ
ಮಾಡಿದಾಳೊ ಒಂದು ಯುಕ್ತಿಯನು          || ೮ ||

ಮಜ್ಜ ಮಾಂಸವೆಲ್ಲ ನನ್ನದೆಂದು ತಾ
ಜಗ್ಗಿ ಮಾಡಿಕೊಂಡು ಕಪಟವನ
ಜಗ್ಗಿ ಮಾಡಿಕೊಂಡು ಕಪಟವನ | ಒಳೆ
ಹಿಗ್ಗಿ ಬಿಟ್ಟಾಳ ಬಿರಗಾಳಿಯನಾ                || ೯ ||

ಎಲಬು ತೊಗಲು ಎರಡು ಉಳಿದವೊ ಭೃಂಗಿ
ಹೊಲಬುಗೆಟ್ಟು ನಿಂತನು ತಾನಾ
ಹೊಲಬುಗೆಟ್ಟು ನಿಂತನು ತಾನಾ | ಒಳೆ
ಬಲ್ಮಿ ಶಿವನ ಸ್ತುತಿ ಮಾಡಿದನಾ               || ೧೦ ||

ನಿರಂಜನನೆ ನಿರೂಪನೆ ನಿಶ್ಚಲ
ನಿಗಮಾತೀತನೆ ಕಾಯೋ ಎನ್ನ
ನಿಗಮಾತೀತನೆ ಕಾಯೋ ಎನ್ನ | ಬಹು
ನಿರ್ಭಯ ನಿನ್ನಯ ಮಗ ನಾನಾ              || ೧೧ ||

ಗಾಳಿಯ ಜೋಲಿಗೆ ತಾಳದೆ ಭೃಂಗಿ
ಮೇಲಕೆ ಹಾರುತ ನಿಂತಾನ
ಮೇಲಕೆ ಹಾರುತ ನಿಂತಾನ | ಶಿವ
ಶೂಲಧರನ ನೋಡಿದ ತಾನ                  || ೧೨ ||

ಮಂಗಲ ಶಿವ ತಾ ಭೃಂಗಿಯ ನೋಡುತ
ಪಿಂಗದೆ ಕೈಯನ ಬೆತ್ತವನಾ
ಪಿಂಗದೆ ಕೈಯನ ಬೆತ್ತವನಾ | ಗುರು
ಸಂಗಮೇಶ ಹಿಂದ ಹಚ್ಚಿದನಾ                 || ೧೩ ||

ಚಿಕ್ಕ ಭೃಂಗಿಗೆ ಮುಕ್ಕಾಲುವಾದಿತು
ನಕ್ಕೊಂತ ಗಟ್ಯಾಗಿ ನಿಂತಾನು
ನಕ್ಕೊಂತ ಗಟ್ಯಾಗಿ ನಿಂತಾನು | ತಾ
ಮುಕ್ಕಣ್ಣನ ಸ್ತುತಿ ಮಾಡಿದನು                 || ೧೪ ||

ಜಗದ್ಗುರು ಜಗದೀಶ ಪಶುಪತಿ
ಬಗಳಾಂಬಿಯ ಮನೋಹರ ನೀನಾ
ಬಗಳಾಂಬಿಯ ಮನೋಹರ ನೀನಾ | ನಿಮ್ಮ
ಮಗನು ನಾನು ರಕ್ಷಿಸು ಎನ್ನಾ                || ೧೫ ||

ಮುಕ್ಕಾಲು ಭೃಂಗಿ ಚಿಕ್ಕಮಾತ ಕೇಳಿ
ನಕ್ಕನಾಗ ಶಂಕರ ತಾನಾ
ನಕ್ಕನಾಗ ಶಂಕರ ತಾನಾ | ನಿನ್ನ
ಸೊಕ್ಕು ಮುರಿಯಿತು ಪಾರ‍್ವತಿ ಇನ್ನಾ                   || ೧೬ ||

ಹರನ ಮಾತು ಕೇಳಿ ಗೌರಿಯು ಮನದಾಗ
ಮರುಗಿ ನಾಚಿ ತಗ್ಗಿಸಿ ತೆಲಿನಾ
ಮರುಗಿ ನಾಚಿ ತಗ್ಗಿಸಿ ತೆಲಿನಾ | ಶರಣ-
ರಡಿಗೆ ಎರಗ್ಯಾಳೊ ತಾನಾ                   || ೧೭ ||