ಮುಂಬೆಳಗಿನ ಹೊಂಬಿಸಿನ ಮಳೆ ಹೊಯ್ದಿತ್ತು,
ಇಳೆಯೆಲ್ಲವು ಆ ಸ್ವರ್ಣಸಲಿಲದಲಿ ಮಿಂದಿತ್ತು.
ಭೂಮಿಯೆ ಸ್ವರ್ಗದ ತೆರನಿತ್ತು.
ಹೂವಿನ ಎದೆಗಳ ಮಧುಮಕರಂದಕೆ
ದುಂಬಿಗಳೊಲವಿನ ಸಂಗೀತ,
ಬೆಳಗಿನ ಲೋಕದ ನಿರ್ಭರಮೌನಕೆ
ಓಂಕಾರದ ಝೇಂಕಾರವ ತುಂಬಿತ್ತು.
ಗಗನಸೀಮೆಯಲಿ ಹಕ್ಕಿಗಳಿಂಚರ
ನಾನಾ ಸುಮಧುರ ಸ್ವರದಲ್ಲಿ
ಚಿಮ್ಮಿರೆ, ಪ್ರಭಾತವಿಹಾರಸಮೀರ
ಹಾಡನು ತೇಲಿಸಿ ಒಯ್ದಿತ್ತು.
ಸ್ವರಸೋಪಾನವ ಕಟ್ಟಿತ್ತು.

ಗಿಡಗಿಡದಲಿ, ಮರಮರದಲಿ
ಚೆಂದಳಿರಿನ ಲೀಲೆ
ನಾದೋನ್ಮಾದದೆ ನಚ್ಚಣಿಯೋಲೆ
ಲಾಸ್ಯವನಾಡಿದೆ ; ಹಚ್ಚ ಹಸುರಿನಲಿ
ಹೊದರು ಹೊದರಿನಲಿ ಹಿಮಬಿಂದು
ಅಲ್ಲಲ್ಲಿಯೆ ನಿಂದು
ಮಿರುಮಿರುಗಿರೆ ಹೊಂಗದಿರನ
ಕನಸಿನ ಕಿಡಿಯಂತೆ,
ಸುಂದರ ಪ್ರಾತಃಕಾಲದ ಚೆಲುವಿಗೆ
ಮರುಳಾಗುತ ನಿಂತೆ.

ಇಂತು ಸವಿಯುತಿರೆ ಬೆಳಗಿನ ಚೆಲುವನು
ಕಂಡಿತು ಪಕ್ಕದ ಹೊದರಿನ ಮೇಲೆ
ಚಕ್ರಾಕಾರದ ತಂತುಬಲೆ !
ಎಂತಹ ಸುಂದರ ತಂತುಕೃತಿ !
ವಿಸ್ಮಯಗೊಂಡುದು ನನ್ನಮತಿ !
ಏನು ನೂಲುಗಳು, ಏನು ಬಂಧನ ;
ಎಂಥ ಸೂಕ್ಷ್ಮಕಲೆ, ಎನಿತು ಮೋಹನ !
ಛೇ, ತೆಗೆ ಆ ಬೇಲೂರಿನ ಶಿಲ್ಪಕಲೆ
ಇದರ ಮುಂದುಗಡೆ ಅಲ್ಪವಲೆ !
ಎನ್ನಿಸಿತೆನಗಾ ತಂತುಬಲೆ !

ಕೀಟದ ಕೃತಿಗಾ ಸಗ್ಗದರಸಿಯರು
ಮಣಿಗಳ ಮೆಚ್ಚುಗೆಯಿತ್ತಂತೆ,
ಚಿತ್ರ ವಿಚಿತ್ರದಿ ಮೆರೆಯುವ ಬಲೆಯಲಿ
ಅಲ್ಲಲ್ಲಿಯೆ ಹಿಮಬಿಂದು
ಸೆರೆಗೈದೊಲು ನಿಂದು
ಹೊಳೆದುವು ಕಾಮನ ಬಿಲ್ಲನು ನೆಯ್ದು !
ನೋಡಿದೆನೆವೆಯಿಕ್ಕದೆ ನೋಡಿದೆ
ಹಸುಳೆಯ ಮುಗ್ಧಕುತೂಹಲದಿ.
ಚಕ್ರಾಕಾರದ ಬಲೆಯ ಮಧ್ಯದಲಿ
ಚಕ್ರವರ್ತಿಯೊಲು ಠೀವಿಯಲಿ
ಕುಳಿತಿದ್ದಿತು ಆ ಕೃತಿಶಿಲ್ಪಿ.
ವಿಕಟಾಕಾರದ ಕ್ರಿಮಿಶಿಲ್ಪಿ
*    *     *     *     *     *
ಹೊಂಬಿಸಿಲಿಗೆ ಮಿರುಮಿರುಗಿರೆ ತಂತುಕೃತಿ
ಚೆಲುವಿಗೆ ಮರುಳಾಯಿತು ನನ್ನ ಮತಿ !
ನೋಡುತ್ತಿರೆ ನಾನಿಂತು
ಅಲ್ಲಾಡಿತು ಆ ತಂತು !
ಕೇಂದ್ರ ವಿರಾಜಿತ ಆ ವಿಕಟಾಕೃತಿ
ವಕ್ರಾಕಾರದ ಬಾಹುಗಳೆತ್ತಿ
ಚಲಿಸಿತು ಮುಂದಕೆ ಬಲೆಯಲ್ಲಿ !
ಆ ಬಲೆಯೊಂದರ ಮೂಲೆಯಲಿ
ಒದ್ದಾಡುತ್ತಿದೆ ಹುಳುವೊಂದು !
ಬಲೆಯ ನೂಲುಗಳ ಸಾವಿನ ಬಂಧ
ಬಿಗಿಯುತ್ತಿದೆ ಆ ಕೀಟವನು,
ಚೀರಾಡಿತು ಆ ಪ್ರಾಣಿ
ಸುಂದರ ಸೊಬಗಿನ ಬಲೆಯಲ್ಲಿ
ಯುಮಬಂಧದ ಆ ನೂಲಿನಲಿ !

ಮುಂದಕೆ ಚಲಿಸಿದ ಕೃತಿಶಿಲ್ಪಿಯ ಕೈ
ಹಿಡಿಯಿತು ನರಳುವ ಕೀಟವನು,
ಹೊಟ್ಟೆಯ ಹಸಿವಿಗೆ ಊಟವನು !
ಮೈ ನಡುಗಿತು ; ಸಿಡಿದೊಡೆಯಿತು ಸೌಂದರ್ಯ !
ಸಾವು ಬದುಕಿನ ಹೋರಾಟದ ಕ್ರೌರ್ಯ
ಎದೆ ತುಂಬಿತು, ಮೂಕ ಮೌನದಲಿ
ಆವುದೊ ಅನುಭವಭಾರದಲಿ
ಹಿಂದಿರುಗಿದೆ ; ಹಕ್ಕಿಗಳುಲಿ ಕೇಳಿತ್ತು
ಎಂದಿನ ತೆರದಲಿ ಹೊಂಬಿಸಿಲಿಳೆಯನು
ಚುಂಬನಗೈದಿತ್ತು !