ಶಾಕ್ತ ತಂತ್ರಗಳು

ಭಾರತೀಯ ಸಂಸ್ಕೃತಿಗೆ ತಂತ್ರವು ಕೊಡುಗೆ ನೀಡಿರುವುದು ಅನೇಕ ಮುಖಗಳಲ್ಲಿ ಆದರೆ ವಿಶೇಷವಾಗಿ ಶಾಕ್ತಮತಕ್ಕೂ ತಂತ್ರಕ್ಕೂ ಇರುವ ಸಂಬಂಧ ತೀವ್ರ ಸ್ವರೂಪದ್ದು. ಭಾರತದಲ್ಲಿ ಶಕ್ತಿಪೂಜೆ ವೈದಿಕ (ವೇದ ಮೂಲ)ವೋ ಅಲ್ಲವೋ ಎಂಬದರ ಬಗ್ಗೆ ವಿದ್ವಾಂಸರಲ್ಲಿ ಭಿನ್ನ ಮತಗಳಿವೆ. “ಭಾರತೀಯ ತಾಂತ್ರಿಕ ಗ್ರಂಥಗಳೆಲ್ಲವೂ ವೇದ ಪ್ರಾಮಾಣ್ಯವನ್ನು ಅಂಗೀಕರಿಸಿವೆ’’ ಎಂಬ ಶ್ರೀಕಂಠಶಾಸ್ತ್ರೀಯವರ ಮಾತು ಚಚ್‌ಪದ (೧೯೭೫, ಪುಟ ೧೭೦).

ಭಾರತದಂತೆ ವಿದೇಶದ ಸಂಸ್ಕೃತಿಗಳಲ್ಲೂ ಶಕ್ತಿಯನ್ನು ತಾಯಿ ಎಂದು ಸ್ವೀಕರಿಸಿ ಪೂಜಿಸುವ ಪದ್ಧತಿಯಿದೆ. ಸುಮೇರಿಯ, ಅಸ್ಸೀರಿಯ, ಫ್ರಿಜಿಯ, ಈಜಿಪ್ಟ್, ಸಿರಿಯಾ ದೇಶಗಳಲ್ಲಿನ ಶಕ್ತಿಪೂಜೆಯಲ್ಲಿ ದ್ವೈತಭಾವ ಮತ್ತು ದೇಹದ ಪುನರುತ್ಥಾನ ತತ್ವಗಳಿಗೆ ಸ್ಥಾನವಿದೆ. ಭಾರತದ ಶಾಕ್ತಮತದಲ್ಲಿ ಮುಖ್ಯವಾಗಿ ಕರ್ಮಷ ಪುನರ್ಜನ್ಮಗಳಿಗೆ ಹೆಚ್ಚಿನ ಸ್ಥಾನವಿದೆ (ಅದೇ, ೧೯೭೫, ಪುಟ ೧೭೦-೭೧).

ವೈದಿಕ ಮತದಲ್ಲಿ ಶಕ್ತಿಪೂಜೆ ಮತ್ತು ತಂತ್ರ ಸಾಹಿತ್ಯ ಮುಖ್ಯವಾಗಿ ಬೆಳೆದಿರುವುದು ಶ್ರೀ ಚಕ್ರ ಪೂಜೆ ಮತ್ತು ದೇವಾಲಯ ನಿರ್ಮಾಣ, ಶಿಲ್ಪಶಾಸ್ತ್ರದ ಸಂದಭಲ್‌ಲಿ. ವೈದಿಕ ವಾಙ್ಮಯದಲ್ಲಿ ಮಂತ್ರ, ಯಂತ್ರ, ನ್ಯಾಸ, ದೀಕ್ಷೆ, ಶ್ರೀ ಚಕ್ರ ಮೊದಲಾದ ಅಂಶಗಳಿಗೆ ಮಹತ್ವ ಹೆಚ್ಚು. ಬೌದ್ಧ ಮತ್ತು ವೈದಿಕರಲ್ಲಿ ಮಂಡಲಗಳಿಗೆ ಸಾಧನೆಯಲ್ಲಿ ಮತ್ತು ಚಿತ್ರಕಲೆಯಲ್ಲಿ ವಿಶೇಷ ಸ್ಥಾನವಿದೆ.

ಶ್ರೀ ಚಕ್ರ ಒಂದು ಯಂತ್ರವಾಗಿದ್ದು ಅದರ ಮಧ್ಯದಲ್ಲಿರುವ ಬಿಂದುವಿನ ಮಂಡಲ/ವೃತ್ತಕ್ಕೆ ಓಡ್ಯಾಣ ಪೀಠ ಎಂದು ಹೆಸರು. ತ್ರಿಕೋಟಾಗಳ ತುದಿಯಲ್ಲಿರುವ ಜಾಗಗಳಿಗೆ ಪೂರ್ಣಗಿರಿ, ಜಾಲಂಧರ ಮತ್ತು ಕಾಮೇಶ್ವರಿ ಪೀಠಗಳೆಂದು ಹೆಸರಿದೆ. ಭಾರತದ ಉದ್ದಗಲಕ್ಕೂ ತಂತ್ರ ಆಚರಣೆಯಲ್ಲಿದ್ದ ಕಾರಣದಿಂದಲೋ ಏನೋ ಈ ಮೂರು ಜಾಗಗಳನ್ನು ಭೌಗೋಳಿಕ ಕ್ಷೇತ್ರಗಳಲ್ಲಿ ಗುರುತಿಸುವ ಪ್ರಯತ್ನ ನಡೆದಿದೆ. ವಾಯುವ್ಯ ಪ್ರಾಂತ್ಯದ ಉದ್ಯಾನ ಎಂಬ ಸ್ಥಳವೇ ಓಡ್ಯಾಣ. ಉತ್ತರ ಬದರಿಯೇ ಪೂರ್ಣಗಿರಿ ಮತ್ತು ಜಲಂಧರ ಜಿಲ್ಲೆಯೇ (ಪಂಜಾಬ್ ರಾಜ್ಯ) ಜಾಲಂಧರ (೧೯೭೫, ಪು. ೭೫). ಭಾರತದ ಪಶ್ಚಿಮದ ಮತ್ತು ವಾಯುವ್ಯ ಭಾಗಗಳಲ್ಲಿ ಬೇರೆ ಬೇರೆ ಐತಿಹಾಸಿಕ ಕಾಲಗಳಲ್ಲಿ ಅನೇಕ ತಾಂತ್ರಿಕಶಾಕ್ತರು ಇದ್ದರೆಂಬುದಕ್ಕೆ ಶ್ರೀ ಚಕ್ರದ ಈ ಭಾಗಗಳು ಸಂಕೇತವಿರಬಹುದು. ಇಂದಿಗೂ ಅಸ್ಸಾಂ ರಾಜ್ಯದ ಕಾಮಾಖ್ಯವನ್ನು ಸತಿಯ ದೇಹವನ್ನು ಶಿವನು ಹೊತ್ತು ತಿರುಗುತ್ತಿದ್ದಾಗ ಆ ದೇಹವನ್ನು ವಿಷ್ಣು  ಕತ್ತರಿಸಿದ ಐತಿಹ್ಯದೊಡನೆ ವಿಶೇಷವಾಗಿ ಸಮೀಕರಿಸಲಾಗುತ್ತದೆ. ಸತಿಯ ದೇಹದ ವಿವಿಧ ಭಾಗಗಳು ಭಾರತದ ವಿವಿಧ ಭಾಗಗಳಲ್ಲಿ ಬಿದ್ದು ಶಕ್ತಿಪೀಠಗಳು ಹುಟ್ಟಿಕೊಂಡವು. ಸತಿಯ ಯೋನಿ ಬಿದ್ಧ ಸ್ಥಳವೇ ಕಾಮಾಖ್ಯ ಎಂಬ ನಂಬಿಕೆಯಿದೆ.

ಯೋಗಶಾಸ್ತ್ರದಲ್ಲಿ ಇಳಾ, ಪಿಂಗಳಾ, ಸುಷುಮ್ನಾ ಎಂಬ ನಾಡಿಗಳಿಗೆ ಸಂಕೇತವಾಗಿ ಗಂಗಾ, ಯಮುನಾ, ಸರಸ್ವತಿ ನದಿಗಳನ್ನು ಇಟ್ಟುಕೊಂಡರೆ ಪ್ರಾಚೀನ ಆರ್ಯಾವರ್ತವೇ ತಂತ್ರಗಳ ಮುಖ್ಯ ಭೂಮಿ ಎನಿಸುತ್ತದೆ. ಈ ಭೂಪ್ರದೇಶಧ ಒಂದು ಮೂಲಗೆ ಇಂದಿನ ಅಫಘಾನಿಸ್ತಾನ, ಮತ್ತೊಂದು ತುದಿಗೆ ಬದರಿಯಾದರೆ, ಮಗದೊಂದು ಅಂಚೇ ಕಾಮಾಖ್ಯ. ಹೀಗೆ ಈ ಭೂಭಾಗವು ಎಷ್ಟೋ ಪುರಾಣದೇವತೆಗಳ ಉಗಮ ಭೂಮಿಯಾದಂತೆ, ತಾಂತ್ರಿಕ ಆಚರಣೆಯ ಪೀಠವೂ ಆಗಿದೆ. ಇಂದಿಗೂ ತಂತ್ರದ ಪ್ರಬಾವವನ್ನು ಬಂಗಾಳ, ಅಸ್ಸಾಂ, ಒರಿಸ್ಸಾ ಮತ್ತು ಹಿಮಾಲಯದ ಪ್ರದೇಶದಲ್ಲಿ ನೋಡಬಹುದು.

ತಂತ್ರದಲ್ಲಿ ಮುಖ್ಯವಾಗಿ ಶ್ರೀವಿದ್ಯಾ ಉಪಾಸನೆ(ಪೂಜೆ)ಯಲ್ಲಿ ಎರಡು ಸಂಪ್ರದಾಯಗಳಿವೆ. ವೇದ-ಪುರಾಣಗಳಲ್ಲಿ ಬರುವ ಋಷಿಗಳಾದ ಅಗಸ್ತ್ಯ ಮತ್ತು ಅವನ ಹೆಂಡತಿ ಲೋಪಾಮುದ್ರೆಯ ಹೆಸರಿನಲ್ಲಿ ಈ ಮಾರ್ಗಗಳನ್ನು ಕ್ರಮವಾಗಿ ಕಾದಿ ಮತ್ತು ಹಾದಿ ಎಂದು ಗುರುತಿಸಲಾಗಿದೆ. ಇವೆರಡರ ಮಿಶ್ರಣವನ್ನು ಕಹಾದಿ ಎನ್ನಲಾಗಿದೆ. ಕಾದಿದೆ ಸಮಯಾಚಾರವೆಂದೂ, ಹಾದಿಗೆ ಕೌಲಮಾರ್ಗವೆಂದೂ, ಕಹಾದಿಗೆ ವಾಮಾಚಾರವೆಂದೂ ಹೆಸರು. ಸಾಮಾನ್ಯವಾಗಿ ಆಧುನಿಕ ಶಿಕ್ಷಿತರಲ್ಲಿ ‘ವಾಮ’ದ ಬಗ್ಗೆ ಭಯ, ದೂರವಿದ್ದರೆ ಒಳ್ಳೆಯದು ಎಂಬ ಭಾವನೆಯಿದೆ. ಇದಕ್ಕೆ ಹಲವು ಕಾರಣಗಳಿವೆ. ಇದರಲ್ಲಿ ಕೆಲವು ವ್ಯಾಖ್ಯಾನಕ್ಕೆ ಸಿಗುವಂತವೂ ಇವೆ. ಉದಾಹರಣೆಗೆ ಈ ಕುರಿತಂತೆ ಸ್ವಾತಂತ್ರ್ಯಪೂರ್ವ ಭಾರತದ ಮವದ ಚಿಂತಕರಲ್ಲೊಬ್ಬರಾದ ಅರವಿಂದರ ವ್ಯಾಖ್ಯೆಯನ್ನು ನೋಡಬಹುದು:

೧. ತಂತ್ರ-ಪುರಾಣಯುಗದಲ್ಲಿ ತ್ರಿಮೂರ್ತಿಗಳಿಗಿಂತ ಭಿನ್ನರಾದ ಹೊಸ ದೇವತೆಗಳು ಹುಟ್ಟಿಕೊಂಡರು, ಹೊಸ ಕಲ್ಪನೆ ಚಿಗುರಿತು.

೨. ವೈದಿಕ ಯಜ್ಞ ವ್ಯವಸ್ಥೆ ಹದ ತಪ್ಪಿತು. ಆಗ ಯಜ್ಞ ಶಾಲೆಗಳ ಬದಲಾಗಿ ದೇವಾಲಯಗಳು ತಲೆಯೆತ್ತಿದ್ದವು.

೩. ಪೂರ್ವಮೀಮಾಂಸೆಯ ಹಿಡಿತದಲ್ಲಿದ್ದ ಯಜ್ಞದ ವ್ಯವಸ್ಥೆಯ ಕರ್ಮಕಾಂಡದ ಸ್ಥಾನವನ್ನು ಭಕ್ತಿ ಪ್ರಧಾನವಾದ ಭಕ್ತಿಕಾಂಡ ಆವರಿಸಿತು.

೪. ಮುಖ್ಯವಾಗಿ ತ್ರಿಮೂರ್ತಿಗಳ ಸ್ವರೂಪಗಳು ಪರಿವರ್ತಿತವಾಗಿ, ಜೊತೆಗೆ ಹಲವು ‘ಜೀರ್ಣ’ಗೊಂಡ ದೇವತೆಗಳ ಶಕ್ತಿಗಳು ಸೇರಿ ಹೊಸದಾದ ಶಕ್ತಿದೇವತೆಯು ಹುಟ್ಟು ಪಡೆಯಿತು.

೫. ಹೊಸದಾಗಿ ಹುಟ್ಟಿದ ಈ ಶಾಕ್ತತಂತ್ರವು ಎರಡು ರೀತಿಯ ಆರಾಧನೆಯನ್ನು ರೂಪಿಸಿತು: ೧) ಅಂತರಂಗದ ಆರಾಧನೆ ಮತ್ತು ೨. ಬಹಿರಂಗದ ಅರ್ಚನೆ, (ಇದರಿಂದಾಗಿ ಏಕಕಾಲದಲ್ಲಿ ಧ್ಯಾನ, ಯೋಗದಂಥ ಆರಾಧನೆಗಳೂ ಪೂಜೆ, ಹಾಡು, ನೃತ್ಯ, ದೇವಾಲಯ ನಿರ್ಮಾಣದಂಥ ಅರ್ಚನೆಗಳೂ ತಲೆಯೆತ್ತಿದವು.)

೬. ಒಟ್ಟಿನಲ್ಲಿ ವೇದ, ಉಪನಿಷತ್ತು, ಜೈನ – ಬೌದ್ಧಗಳ ನಂತರದ ಕಾಲದಲ್ಲಿ ಪುರಾಣ, ತಂತ್ರ ಮತ್ತು ಯೋಗಗಳು ಮಿಶ್ರಗೊಂಡವು. ಪರಸ್ಪರ ಕೊಳುಕೊಡೆ ನಡೆಸಿದವು. ಎಷ್ಟನ್ನೋ ಕಳಕೊಂಡವೋ, ಎಷ್ಟೋ ಹೊಸತನ್ನು ಪಡೆದುಕೊಂಡವು. (ಪುನರುಜ್ಜೀವನದತ್ತ ಹಿಂದೂ ಧಮ೪ – ಅರವಿಂದರು ಅನು: ಡಾ. ಜಿ.ಬಿ. ಹರೀಶ, ೨೦೦೨, ಪುಟ ೫೫-೫೬).

“ವೈದಿಕ ಮತಕ್ಕೂ ತಾಂತ್ರಿಕ ಮತಕ್ಕೂ ಉಪಾಸನಾಕ್ರಮದಲ್ಲಿ ವ್ಯತ್ಯಾಸವೇ ವಿನಾ ಮೂಲತತ್ವವು ಒಂದೇ’’ (ಶ್ರೀಕಂಠಶಾಸ್ತ್ರಿ, ೧೯೭೫, ಪುಟ ೧೭೩) ಎಂಬ ಅರಾಯದಂತೆಯೇ “ಶೂದ್ರ ಮತ್ತು ಸ್ತ್ರೀಯರನ್ನು ಧಾರ್ಮಿಕ ಸ್ಥಾನಮಾನದಿಂದ ಬಹಿಷ್ಕರಿಸಿದ್ದ ಆಸ್ತಿಕ ಮತ್ತು ನಾಸ್ತಿಕ ಗುಪ್ತ ಸಮಾಜಗಳು ತಮ್ಮ ಹೊರ ಆಕೃತಿಯನ್ನು ಬದಲಿಸಿಕೊಂಡವು ಎಂಬ ಒಳನೋಟವೂ ಲಭ್ಯವಿದೆ (ನಾಗರಾಜಪ್ಪ. ಕೆ.ಜಿ. ೧೯೯೮). ಉದಾಹರಣೆಗೆ ಮಿಥಿಲಾ ಪ್ರದೇಶದಲ್ಲಿ (ಇಂದಿನ ಬಿಹಾರ್)’’ ಅಂತಃಶಾಕ್ತ ಬಹಿಃ ಶೈವಾ| ಸಭಾ ಮಧ್ಸೇತು ವೈಷ್ಣವಾ’’ ಎಂಬ ಮಾತು ಪ್ರಚಲಿತವಿದೆ. ಅಂದರೆ ಒಳಗೆ ಶಾಕ್ತ, ಹೊರಗೆ ಶೈವ ಸಭೆಯಲ್ಲಿದ್ದಾಗ ವೈಷ್ಣವ. ಒಂದು ಕೇಂದ್ರದಿಂದ ಹೊರಟ ಮೂರು ವೃತ್ತಗಳನ್ನು ಕಲ್ಪಿಸಿಕೊಂಡರೇ ಕೇಂದ್ರವೇ ತಂತ್ರ ಪದ್ಧತಿ, ಅದಕ್ಕೆ ಅಂಟಿಕೊಂಡಿರುವ ತೀರಾ ಒಳಗಿನ ವೃತ್ತ ಶಾಕ್ತ, ಮಧ್ಯದ್ದು ಶವ, ತೀರಾ ಹೊರ ವೃತ್ತ ವೈಷ್ಣವ. ಇದೇ ಕೇಂದ್ರ ತ್ರಿವೃತ್ತ ಪರಿಕಲ್ಪನೆಯನ್ನು ವೈಷ್ಣವ ಪಥಕ್ಕೂ ಅನ್ವಯಿಸಬಹುದು. ಲಕ್ಷ್ಮಿಯು ಪುರಾಣಗಳಲ್ಲಿ ವಿಷ್ಣು ಪತ್ನಿಯಾಗಿ ದೊಡ್ಡ ಸ್ಥಾನ ಹೊಂದಿರುವ ವೈಷ್ಣವ ದೇವತೆಯಾದರೂ ಕೊಲ್ಲೂರಿನ ಮಹಾಲಕ್ಷ್ಮಿ ಮತ್ತು ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿಯ ಮಹಾಲಕ್ಷ್ಮಿರಲ್ಲಿ ಒಂದು ವಿಶೇಷವಿದೆ. ಈ ಲಕ್ಷ್ಮಿಯರ ದೇವಾಲಯಕ್ಕೆ ಜಯ-ವಿಜಯರಾಗಲಿ, ಗರುಡ, ಹನುಮರಾಗಲಿ ದ್ವಾರಪಾಲಕರಾಗಿರದೆ ಭೈರವ ದ್ವಾರಪಾಲಕನಾಗಿದ್ದಾನೆ. ಮೂಲತಃ ಶಾಕ್ತಪೀಠಗಳಾದ ಈ ಕೇಂದ್ರಗಳು ಅಂತರಂಗದಲ್ಲಿ ಶಾಕ್ತಪೀಠಗಳು, ಬಹಿರಂಗದಲ್ಲಿ ವೈಷ್ಣವ ಸ್ಥಾನಗಳು.

ಶಾಕ್ತ ಸಾಹಿತ್ಯಗಳಲ್ಲಿ ಒಂದಾದ ಲಲಿತಾ ಸಹಸ್ರನಾಮದಲ್ಲಿ ಲಕ್ಷ್ಮಿಯ ಪ್ರಸ್ತಾಪವಿದೆ. ಭಾರತದ ಎಷ್ಟೋ ಪಂಥಗಳು ತಂತ್ರದಿಂದ ಸ್ಫೂರ್ತಿ ಹೊಂದಿದರೂ ಅದರ ಬಗ್ಗೆ ಭಯ ಮಿಶ್ರಿತ ಗೌರವ, ದೂರದಿಂದಲೇ ಅನುಕರಿಸಲು ಹೋಗಿ ತೀರಾ ಹತ್ತಿರಕ್ಕೆ ಬಂದು ಬಿಡುವ ಸ್ಥಿತಿಯನ್ನು ಹೊಂದಿಬಿಟ್ಟವು. ತಂತ್ರದ ಆಕರ್ಷಣೆ-ವಿಕರ್ಷಣೆಯಲ್ಲಿ ವೈಷ್ಣವ, ಜೈನ, ಶಾಕ್ತ, ಗಣಪತಿ, ಕುಮಾರಸ್ವಾಮಿ, ಸೂರ್ಯ ಆರಾಧನೆಯ ಪಂಥಗಳಿಗೆ ವಿಶೇಷವಾದ ರೂಪ, ಸಂಕೀರ್ಣತೆಗಳು ಒದಗಿವೆ.

ವೈಷ್ಣವ ತಂತ್ರಗಳು

ವೈಷ್ಣವ ಪಂಥಗಳ ಮೇಲೂ ತಂತ್ರದ ಪ್ರಭಾವವಿದೆ. ವೈಷ್ಣವ ಆಚಾರ‍್ಯರು ತಾಂತ್ರಿಕ ಆಚರಣೆಯಲ್ಲ ಕೆಲವು ಬದಲಾವಣೆಗಳನ್ನು ಅಳವಡಿಸಿದರು. ಅದನ್ನು ಕೆಳಕಂಡಂತೆ ಸಂಗ್ರಹಿಸಬಹುದು.

೧. ತಂತ್ರಗಳ ಆಂತರಿಕ ಆಚರಣೆಗಿಂತ ಬಾಹ್ಯ ಕ್ರಿಯೆಗಳದ ಬಾಹ್ಯ ಪೂಜೆ/ ಬಹಿರಂಗ ಪೂಜೆ ಮತ್ತು ಮಂತ್ರದ ತತ್ವಕ್ಕೆ ಮಹತ್ವ ನೀಡಿದರು.

೨. ಜನ ತಮ್ಮ ಇಷ್ಟಾರ್ಥ ನಿವೇದನೆಗೆ ಈ ಮಾರ್ಗ ಬಳಸಲು ತಿಳಿಸಿದರು. ತಂತ್ರದ ಪಂಚಮಕಾರಗಳಲ್ಲಿ ಒಂದಾದ ಮಾಂಸಾಹಾರ ಸೇವನೆ ಇಲ್ಲದೆಯೂ ಸಾಧನೆ ಸಾಧ್ಯ ಎಂಬುದನ್ನು ಸೂಚಿಸಿದ ಅವರು ಇಷ್ಟ ದೈವವು ಭಕ್ತಿ ಅರ್ಪಿಸುವ ಆಹಾರದ ಸಾರವನ್ನು ಮಾತ್ರ ಸ್ವೀಕರಿಸುತ್ತಾನೆ/ಳೆ ಮತ್ತು ಭಕ್ತಿ ಉತ್ಕಟವಾಗಿದ್ದಾಗ ನೇರವಾಗಿ ಆಹಾರದ ಭಾಗವನ್ನು ಸ್ವೀಕರಿಸಬಹುದು ಎಂದು ನುಡಿದು ತಂತ್ರದ ಮೂಲಕ ಭಕ್ತಿ ಸಾಧನೆಯಲ್ಲಿ ವಿಶ್ವಾಸ ಹೆಚ್ಚಿಸಿದರು.

೩. ಮಂತ್ರದ ಮಹತ್ವ ತಿಳಿಸಿ, ನಾಮಜಪ ದೈವ ಸಾಕ್ಷಾತ್ಕಾರಕ್ಕೆ ಹಾದಿ, ಇದಕ್ಕೆ ಆಹಾರ ಮತ್ತು ಮನಸ್ಸಿನ ಶುದ್ಧತೆ ಮುಖ್ಯ ಎಂಬುದನ್ನು ತಿಳಿಸಿಕೊಟ್ಟರು.

“The Tantrika rites can be practised in the purest form possible, without a touch of wine or sex-indulgence, and this is amply proved in the lives of numerous saints of this school” (The Tantrika mode of worship – Swami Madhavananda; Studies on the Tantras, 2002, pp.5)

ಕಾವ್ಯಕಂಠ ವಾಸಿಷ್ಠ ಗಣತ್ತಿ ಮುನಿ ರಚಿಸುವ ‘ಉಮಾಸಹಸ್ರಂ’ನಲ್ಲಿ ಈ ವೈಷ್ಣವ ಬೋಧನೆಗೆ ಸಮೀಪದ ಚಿಂತನೆ ಕಂಡು ಬರುತ್ತದೆ. ವೈಷ್ಣವ ಚಿಂತನೆಯಲ್ಲಿ ತಂತ್ರಕ್ಕೂ ವಿಷ್ಣುವಿನ ನಾಮರೂಪಗಳಿಗೂ ಸಂಬಂಧವಿದ್ದಂತೆ, ಇಲ್ಲಿ ಶಕ್ತಿಗೂ ಅವಳ ಮಗ ಸ್ಕಂಧನಿಗೂ ಇರುವ ಆನುಭಾವಿಕ ಸಂಬಂಧದ ವ್ಯಾಖ್ಯೆಯಿದೆ. ಆಹಾರದಲ್ಲಿ ಕಣ್ಣಿಗೆ ಕಾಣಿಸುವ ಆಹಾರದೊಂದಿಗೆ, ಇಂದ್ರಿಯಗಲು ಮತ್ತು ಮನಸ್ಸಿನ ಮೂಲಕ ಸ್ವೀಕರಿಸುವ ಮಾನಸಿಕ ಆಹಾರ (Mental Food)ವೂ ಇದೆ. “ಯಾರೂ ಆಹಾರ ಶುದ್ಧಿಯಿಂದ ಪರಿಶುದ್ಧರೋ ಮತ್ತು ಯಾರ ಸ್ಮೃತಿ ಯಾವಾಗಲೂ ಶಕ್ತಿಯುವಾಗಿರುವುದೋ ಅವರ ವಿಕಸಿತ ಹೃದಯ ಕಮಲದಲ್ಲಿ ಆಕೆ ಪರಿಶುದ್ಧ ಬೆಳಕಾಗಿ, ಸತ್ವವಾಗಿ ಬೆಳಗುತ್ತಿರುವಳು. ಆ ತಾಯಿಯೇ ಕುಮಾರ (ಸ್ಕಂದ, ಗುರುಗ್ರಹ)ನ ಶಕ್ತಿಯಾಗಿರುವಳು’’. ಇದು ಕೌಮಾರಿ ಎಂಬ ದೇವತೆಯ ಸ್ವರೂಪ.

ವಾಮ ಮತ್ತು ದಕ್ಷಿಣ ಅಥವಾ ಎಡಗೈ ಮತ್ತು ಬಲಗೈ ಎಂಬ ಪಂಥಗಳು ತಾಂತ್ರಿಕರಲ್ಲಿವೆ. ಸಾಮಾನ್ಯವಾಗಿ ಇದರ ಬಗ್ಗೆ ತಪ್ಪು ಅಭಿಪ್ರಾಯಗಳೇ ಹೆಚ್ಚು. ವಾಮ ಕ್ರೂರ, ರಕ್ತದಿಂದ ಕೂಡಿದ ಪೂಜೆ ಎಂಬ ಭಾವನೆಯೊಂದಿಗೆ ಈ ಕುರಿತು ಲೈಂಗಿಕ ಕ್ರಿಯೆಯೂ ಸೇರಿದಂತೆ ಅನೇಕ ವಿಚಿತ್ರ ಅಭಿಪ್ರಾಯಗಳಿವೆ. ದಕ್ಷಿಣ ಎಂದರೆ ಸಾತ್ವಿಕ, ಹಣ್ಣು ಹೂವಿನ ಪೂಜೆ, ಲೈಂಗಿಕತೆ ನೇರವಾಗಿರದೆ ಎಲ್ಲವೂ ಸಾಂಕೇತಿಕ ಎಂಬ ದೃಷ್ಟಿ ಜನರಲ್ಲಿ ಬೇರೂರಿದೆ. ಇದಕ್ಕಿಂತ ಭಿನ್ನವಾದ ನೆಲೆಯಲ್ಲಿ ವಾಮ ಮಾರ್ಗದ ವ್ಯಾಖ್ಯಾನವನ್ನು ಅರವಿಂದರು ಮಡಿದ್ದಾರೆ. “ಮೂಲದಲ್ಲಿ ಕನಿಷ್ಠ ಪಕ್ಷ ಆಂಶಿಕವಾಗಿಯಾದರೂ ಸತ್ಯವಾಗಿದ್ದ ಆದರ್ಶಗಳ ಆಧಾರದ ಮೇಲೆ ಕೆಟ್ಟಲ್ಪಟ್ಟ ಮಹಾನ್ ಸಾಮಾರ್ಥ್ಯವಿರುವ ಪದ್ಧತಿಯಾಗಿತ್ತು ತಂತ್ರ. ಅದರಲ್ಲಿರುವ ದಕ್ಷಿಣ ಮಾರ್ಗ (ಬಲಗೈ) ಮತ್ತು ವಾಮ ಮಾರ್ಗ (ಎಡಗೈ) ಎಂಬ ಎರಡು ವಿಭಜನೆಗಳು ಸಹ ನಿರ್ದಿಷ್ಟವಾದ ಒಂದು ಗಂಭೀರ ದೃಷ್ಟಿಯಿಂದಲೇ ಉಂಟಾದದ್ದು. ಪ್ರಾಚೀನ ಕಾಲದಲ್ಲಿ ಪದಗಳಿಗಿದ್ದ ಸಾಂಕೇತಿಕ ಅರ್ಥದ ಪ್ರಕಾರ ದಕ್ಷಿಣ ಮತ್ತು ವಾಮ ಮಾರ್ಗಗಳ ಭೇದವೆಂದರೆ ಜ್ಞಾನಮಾರ್ಗ ಮತ್ತು ಆನಂದ ಮಾರ್ಗಗಳ ನಡುವಿನ ಭೇದವೇ ಆಗಿತ್ತು. ವಿವೇಚನಾ ಶಕ್ತಿ, ಸ್ವಸಾಮರ್ಥ್ಯಗಳನ್ನು ಊರ್ಜಿತಗೊಳಿಸಿಕೊಳ್ಳುವ ಸಾಮರ್ಥ್ಯದಂಥ ಸ್ವಭಾವಗಳು ದಕ್ಷಿಣ ಮಾರ್ಗವೆನಿಸಿದವು. ಮನುಷ್ಯನ ಶಕ್ತಿಯಲ್ಲಿರುವ ಆನಂದವನ್ನು ಪಡೆಯುವ ಸ್ವಸಾಮರ್ಥ್ಯವು ವಾಮ ಮಾರ್ಗವೆನಿಸಿತು. ಆದರೆ ಎರಡೂ ಮಾರ್ಗಗಳ ತತ್ವ ಗೊಂದಲಮಯವಾಗಿ, ಅದರ ಸಂಕೇತಗಳು ವಿರೂಪಗೊಂಡು ಅಂತಿಮವಾಗಿ ಎರಡೂ ಪತನ ಹೊಂದಿದವು’’ (ಆರ್.ಎಲ್.ಕಶ್ಯಪ. ೨೦೦೨, ಪುಟ ೩೬).

ಜೈನತಂತ್ರ

ಐತಿಹಾಸಿಕವಾಗಿ ಬುದ್ಧನಿಗಿಂತಲೂ ಕನಿಷ್ಠ ೩೦೦ ವರ್ಷಗಳಷ್ಟು ಹಳೆಯದಾದ ಜೈನಮತದಲ್ಲಿ ತಂತ್ರವು ಆರಂಭದ ಹಂತದಲ್ಲಿ ಪ್ರಭಾವಿಸಿರಲಿಲ್ಲ. ಪ್ರಾಚೀನ ಜೈನ ಗ್ರಂಥಗಳಲ್ಲಿ ಜೈನಮುನಿಗಳು ಧ್ಯಾನದ ಉಪ ಉತ್ಪತ್ತಿಯಾಗಿ by product ಅನೇಕ ಸಿದ್ಧಿಗಳನ್ನು ಗಳಿಸಿದ್ದರ ಉಲ್ಲೇಖಗಳಿವೆ. ಉದಾಹರಣೆಗೆ ನೆಲಕ್ಕೆ ಕಾಲು ತಾಕಿಸದೆ ಆಕಾಶದಲ್ಲಿ ಸಂಕರಿಸುವ ಸಿದ್ಧಿ. ಆದರೆ ಈ ಸಿದ್ಧಿಗಳು ಆಧ್ಯಾತ್ಮಿಕ ಸಾಧನೆಗೆ ಅಡಚಣೆಯೆಂದು ಅದರ ಬಳಕೆಯನ್ನು ಮುನಿ-ಶ್ರಾವಕ (ಗೃಹಸ್ಥ)ರಿಬ್ಬರಿಗೂ ನಿಷೇಧಿಸಲಾಯಿತು. ಆದರೆ ಮುಂದೆ ಮಧ್ಯಕಾಲದಲ್ಲಿ ಜೈನರು ಅನೇಕ ಯಂತ್ರಗಳನ್ನು (Mystical diagrams) ರಚಿಸಿ ಅವುಗಳಿಗೆ ವಿಧಾನ, ಆಚರಣೆಗಳನ್ನು ರೂಪಿಸಿದರು. ಯಂತ್ರ ಮತ್ತು ಆಚರಣೆಗಳನ್ನು ಬೆಸೆಯಲು ಮಂತ್ರ, ಬೀಜ ಅಕ್ಷರಗಳು ಬಳಕೆಗೆ ಬಂದವು. ಸಾಮಾನ್ಯವಾಗಿ ಜೈನಯಂತ್ರಗಳಲ್ಲಿ ತೀರ್ಥಂಕರರ ಹೆಸರು ಕೆತ್ತಲ್ಪಟ್ಟಿರುತ್ತದೆ. ಜೊತೆಯಲ್ಲಿ ಜೈನ ಯಕ್ಷ-ಯಕ್ಷಿಯರಿಗೆ ಸಂಬಂಧಿಸಿದ ಬೀಜಾಕ್ಷರಗಳಿರುತ್ತವೆ. ಜೈನ ಯಂತ್ರಾರಾಧನೆಯು ಸಮುದಾಯದ ಹಿರಿಯರೆನಿಸಿದ ಕ್ಲುಲ್ಲಕರು, ಭಟ್ಟಾರಕರು ಮತ್ತು ಯತಿಗಳ ‘ಮಾರ್ಗ’ದರ್ಶನದಲ್ಲಿ ನಡೆಯುತ್ತದೆ. ವಿದ್ವಾಂಸರಾದ ಪದ್ಮನಾಭ ಜೈನಿಯವರ ಅಭಿಪ್ರಾಯದಂತೆ ಋಷಿಮಂಡಲ, ಕಲಕುಂಡದಂಡ, ಗಂಧರವಲಯ ಮತ್ತು ಸಿದ್ಧ ಚಕ್ರಗಳು ಜೈನರ ಮುಖ್ಯ ಯಂತ್ರಗಳು (The Jain path of purification. Motilal Banarasides, Delhi, 2001, pp. 254 fn. 20) ಜೈನಯಂತ್ರಾರಾಧನೆಯಲ್ಲಿ ಶ್ರಾವಕರಿಗಿಂತ ಮುನಿ, ಆಚಾರ‍್ಯರ ಪಾತ್ರವೇ ಹಿರಿದಾಗಿದ್ದು. ಶ್ರಾವಕರು ಮಂತ್ರ ಪಠನಕ್ಕೆ ಯೋಗ್ಯರು. ಇಷ್ಟಾದರೂ ‘Lacking the basic ingredient of the tantric cult-fusion of the mundane and the super mundane such practices seem to have and little effect upon the development of Jainism’ ಎಂಬ ಅವರ ಮಾತನ್ನು ಮಧ್ಯಕಾಲದಲ್ಲಿ ಯಾಪನೀಯ ಪಂಥದ ಉಗಮಕ್ಕೂ ಹಿಂದಿನ ಜೈನಮತಕ್ಕೆ ಚೆನ್ನಾಗಿ ಅನ್ವಯಿಸಬಹುದು.

ಜೈನ ಸಂಘದಲ್ಲಿ ಶ್ವೇತಾಂಬರ ಮತ್ತು ದಿಗಂಬರ ಸಂಘಗಳಂತೆಯೇ ಅತಿ ಪ್ರಾಚೀನವಾದ ಮತ್ತೊಂದು ಒಳಪಂಥವೇ ಯಾಪನೀಯ ಸಂಘ, ಇದಕ್ಕೆ ‘ಗೋಪ್ಯ ಸಂಘ’ ಎಂಬ ಹೆಸರಿರುವುದನ್ನು ಸ್ವಲ್ಪ ಗಮನಿಸಬೇಕಾಗುತ್ತದೆ. ದಿಗಂಬರ, ಶ್ವೇತಾಂಬರ ಎಂದು ಜೈನ ಸಂಘವು ಒಡೆದು ಇಬ್ಭಾಗವಾಗಿ ಎಪ್ಪತ್ತು ವರ್ಷಗಳ ನಂತರ ಶ್ರೀಕಲಶನೆಂಬ ಶ್ವೇತಾಂಬರ ಮುನಿಯಿಂದ ಆರಂಭವಾದ (ಕ್ರಿ.ಶ.೧೪೮) ಯಾಪನೀಯ ಸಂಘದ ಮೂಲಕ ತಂತ್ರವು ಜೈನಮತಕ್ಕೂ ಧಾಳಿಯಿಟ್ಟಿತು. ಬೆತ್ತಲೆಯಿರುತ್ತಿದ್ದ ಯಾಪನೀಯ ಮುನಿಗಳು ನವಿಲುಗರಿಯ ಪಿಚ್ಫ ಮಾತ್ರ ಹೊಂದಿದ್ದು ಉಣ್ಣಲು ಪಾತ್ರೆಯನ್ನೂ ಹೊಂದಿರಲಿಲ್ಲ. ಪಾಣಿಪಾತ್ರೆಯನ್ನು ಬಳಸುತ್ತಿದ್ದ ಇವರು ನಗ್ನ ಮೂರ್ತಿಗಳ ಆರಾಧಕರು. ಉಳಿದಂತೆ ದಿಗಂಬರ ಪಂಥದ ಅನೇಕ ತಾತ್ವಿಕತೆಗಳನ್ನು ಒಪ್ಪುವ ಇವರು ತಾಂತ್ರಿಕ ಪ್ರೇರಣೆ ಪಡೆದ ಕಾರಣ ‘ಮಾತೃಪಂಥದ ಆರಾಧಕರಾಗಿ ಸ್ತ್ರೀಯರಿಗೂ ಮುಕ್ತಿಯನ್ನು ಬೋಧಿಸಿದರು (ಕೆ.ಜಿ. ನಾಗರಾಜಪ್ಪ, ೧೯೯೮, ಪುಟ ೧೪೨) ಕರ್ನಾಟಕದಲ್ಲಿ ಪ್ರಭಾವಶಾಲಿಗಳಾಗಿದ್ದ ಈ ಪಂಥಕ್ಕೆ ಕದಂಬ, ರಾಷ್ಟ್ರಕೂಟ ರಾಜ ಮನೆತನಗಳು ದಾನದತ್ತಿ ನೀಡಿವೆ.  ಕರ್ನಾಟಕದಲ್ಲಿ ಪ್ರಭಾವಶಾಲಿಯಾಗಿರುವ ಜ್ವಾಲಾಮಾಲಿನಿ ಯಕ್ಷಿಯ ಆರಾಧನೆಗೆ ಯಾಪನೀಯರ ಪ್ರಭಾವವೇ ಕಾರಣ. ಜೈನರಲ್ಲಿ ತಾಂತ್ರಿಕತೆಯು ಶಾಕ್ತ ರೂಪದಲ್ಲಿ ಬಂದು ಶಾಕ್ತ ಜೈನವೆನಿಸಿತು. ಇಪ್ಪತ್ನಾಲ್ಕು ತೀರ್ಥಂಕರರಿಗೂ ಯಕ್ಷ, ಯಕ್ಷಿಯರಿದ್ದರೂ, ಇನ್ನೂ ಅನೇಕ ಶಾಸನ ದೇವತೆಗಳು ದೇವರನ್ನೇ ಒಪ್ಪದ ಜೈನಮತದಲ್ಲಿ ಪ್ರವೇಶಿಸಿದ್ದರೂ ಎಲ್ಲಾ ಯಕ್ಷಿಯರೂ ಅಷ್ಟು ಪ್ರಸಿದ್ಧರಲ್ಲ. ಬಿಜಾಪುರ, ಕನಕಗಿರಿ ಮಲೆಯೂರು, ಮೈಸೂರು, ಕಾರ್ಕಳ, ಬೆಳಗಾಂ, ತುಮಕೂರು, ಹಾಸನ ಮುಂತಾದ ಪ್ರದೇಶಗಳಲ್ಲಿ ಜೈನಶಕ್ತಿ ಪೂಜೆಯ ಪ್ರಭಾವವಿದೆ. ಮಂತ್ರ ಮಂಡಲಾರಾಧನೆ, ತಂತ್ರ ಗ್ರಂಥಗಳಾದ ಭೈರವ ಪದ್ಮಾವತಿ ಕಲ್ಪ, ಜ್ವಾಲಿನಿಕಲ್ಪ, ಬಾಹುಬಲಿ ಕಲ್ಪಗಳ ರಚನೆ, ಕಾಳ ಸರ್ಪದೋಷ ಪರಿಹಾರ ಮೊದಲಾದ ಕ್ರಮಗಳು, ದಿಗಂಬರ ಪಂಥದ ನೆಲೆವೀಡಾದ ಕರ್ನಾಟಕದಲ್ಲಿ ಇಂದಿಗೂ ಕಾಣುತ್ತಿರುವುದರ ಹಿಂದೆ ಕಣ್ಮರೆಯಾದ ಯಾಪನೀಯ ಪಂಥದ ಕೊಡುಗೆಯಿದೆ. ಬೌದ್ಧರಲ್ಲಿ ವಜ್ರಯಾನದ ಮೂಲಕ ತಂತ್ರ ಮತ್ತು ಅದರ ಆಚರಣೆಗಳು ಕಾಣಿಸಿಕೊಂಡಂತೆ ಜೈನರಲ್ಲಿ ಯಾಪನೀಯದ ಮೂಲಕ ಸಸ್ಯಾಹಾರ ಸಂಸ್ಕೃತಿಯಲ್ಲಿ ಅದಕ್ಕೆ ಹೊಂದಿಕೊಳ್ಳುವಂತೆ ತಂತ್ರ ಜೀವಂತವಾಗಿದೆ.

‘ಕೆಲವರು ಶಿವನ ಪರಮ ಆರಾಧಕರು. ಕೆಲವರು ವಿಷ್ಣುವಿನ ಪರಮ ಅಭಿಮಾನಿಗಳು ಆದರೆ ಕೆಲವೇ ಕೆಲವರು ಮಾತ್ರ ಲಲಿತೆಯ ನಾಮಗಳ ಪರಿಚಯ ಹೊಂದಿರುವರು’ ಎಂಬ ಮಾತು ಲಲಿತಾ ಸಹಸ್ರನಾಮದಲ್ಲಿದೆ. ಇದಕ್ಕಿಂತಲೂ ತೀವ್ರವಾಗಿ ದೇವಿಪೂಜೆಯ ಮಹತ್ವವನ್ನು ಹೇಳುವ ಮಾತು ತಂತ್ರಗಳಲ್ಲಿದೆ. ಶಕ್ತಿಯಿಲ್ಲದೆ ಶಿವ ಶಿವ ಎಂಬ ಮಾತು ಗಮನಾರ್ಹ. ಆದರೆ ಶಾಕ್ತ ಪಂಥದ ದೃಷ್ಟಿಯಿಂದ ಈ ಮಾತನ್ನು ನೋಡದೆ ವ್ಯಾಪಕವಾದ ಸಾಂಸ್ಕೃತಿಕ ರಾಜಕಾರಣದ ಹಿನ್ನೆಲೆಯಲ್ಲಿ ತಂತ್ರವನ್ನು ಅಭ್ಯಾಸ ಮಾಡಬಹುದೆನಿಸುತ್ತದೆ. ಮಧ್ಯಯುಗದಲ್ಲಿ ಯುದ್ಧ, ಲೈಂಗಿಕತೆ, ಶತ್ರು ನಾಶ ಮುಂತಾದ ಕಾರಣಗಳಿಂದ ವೈದಿಕ (ಶೈವ, ವೈಷ್ಣವ) ಜೈನ-ಬೌದ್ಧಗಳಿಗೆ ಸೀಮಿತವಾಗಿದ್ದ ರಾಜತ್ವದ ಮಾನ್ಯತೆ ತಾಂತ್ರಿಕರಿಗೂ ದೊರೆಯಿತು. ತಾಂತ್ರಿಕರು ರಾಜ ಗುರುಗಳಾದಂತೆ, ತಂತ್ರದ ಆಚರಣೆಗಳು ಅರಮನೆ ಸಮೀಪದ ಅಕ್ಷರ ಲೋಕಕ್ಕೆ ತೆರೆದುಕೊಂಡವು. ಎಲ್ಲಾ ಪಂಥಗಳಲ್ಲೂ ಇರುವ ಅರಮನೆ ಗುರುಮನೆಗೆ ಹತ್ತಿರವಾದ ಲೌಕಿಕ ಜಾಣ ಕಾರಣದಿಂದ ಜಾನಪದೀಯವಾದ ತಾಂತ್ರಿಕ ಆಚರಣೆಗೆ ಸೌಮ್ಯ ರೂಪ ಬಂದಿದ್ದಲ್ಲದೆ, ಗ್ರಂಥ ರಚನೆ ಸಂಸ್ಕೃತದಲ್ಲಾಯಿತು. ತಾಂತ್ರಿಕ ತಿರುಳನ್ನು ತಮ್ಮದಾಗಿಸಿಕೊಳ್ಳುವ ಮೇಲಾಟದಲ್ಲಿ ತಂತ್ರಕ್ಕೆ ವಾಮಾಚಾರ, ಮಾಟ ಎಂಬ ಸೀಮಿತ ಅರ್ಥ ಬಂದಿದ್ದಲ್ಲದೆ, ತಂತ್ರಗಳು ರಾಕ್ಷಸ ಪ್ರವೃತ್ತಿಯ ಮೂಲಬೇರು ಎಂಬ ಭಾವನೆಯನ್ನು ಉಂಟುಮಾಡುವ ಪ್ರಯತ್ನ ಕಂಡು ಬಂದಿತು. ಭಾರತದ ಎಷ್ಟೋ ಸಾಮಾಜಿಕ ಧಾರ್ಮಿಕ ಸುಧಾರಣಾವಾದಿ ಪಂಥ-ಚಳುವಳಿಗಳ ಮೂಲಬೇರು ಕುಂಡಲಿನೀ ಉದ್ದೀಪನ, ಶಿವಶಕ್ತಿ ಕೃಷ್ಣ-ರಾಧೆ ಮಿಲನದ ತಾಂತ್ರಿಕ ರಹಸ್ಯ ಪಂಥಗಳಲ್ಲಿದೆಯೆನಿಸುತ್ತದೆ.

ಇಪ್ಪತ್ತನೆಯ ಶತಮಾನದಲ್ಲಿ ಬಂದ ಅರವಿಂದ ಪಂಥ, ಓಶೋ ಒಂಥಗಳೊಂದಿಗೆ ಅನೇಕ ಯೋಗ ಸಾಧನಾ ಮಾರ್ಗಗಳು ಅಂತರಂಗದಲ್ಲಿ ತಾಂತ್ರಿಕ ಕುಂಡಲಿನೀ ಜಾಗರಣೆಯ ಕ್ರಮವನ್ನು ಬೋಧಿಸಿದರೂ ಪ್ರಚಾರ, ಮನ್ನಣೆ, ಅಧಿಕಾರ ಮುಂತಾದ ಅಂಶಗಳಿಂದಾಗಿ ಬಹಿರಂಗದಲ್ಲಿ ಭಿನ್ನ ಭಿನ್ನ ರೂಪಗಳಲ್ಲಿ ರೂಪಾಂತರ ಹೊಂದಿವೆ. ಮಧ್ಯಕಾಲದಂತೆ ಈಗ ತಂತ್ರವು ಅಧಿಕಾರ ಕೇಂದ್ರದಲ್ಲಿ ಬಹಿರಂಗವಾಗಿ ತೋರದಿದ್ದರೂ ಭಾರತದ ಅನೇಕ ರಾಜಕಾರಣಿಗಳ, ಅಧಿಕಾರಸ್ಪರ ಜೀವನದಲ್ಲಿ ತಂತ್ರ ಮತ್ತು ತಾಂತ್ರಿಕರ ಆಗಮನ ನಿರ್ಗಮನಗಳು ನಡೆದಿವೆ. ಆಧುನಿಕ ಇಂಗ್ಲಿಷ್ ಬಲ್ಲ ನಗರ ಪ್ರದೇಶದ ಶಿಕ್ಷಿತರ ಖಾಸಗಿ ಜೀವನದಲ್ಲಿ, ಲೈಂಗಿಕ ಆಧ್ಯಾತ್ಮಿಕ ಅನ್ವೇಷಣೆಯಲ್ಲಿ, ಕೆಲವೊಮ್ಮೆ ಯೋಗದ ಹೆಸರಿನಲ್ಲಿ ಹಲವೊಮ್ಮೆ ಧ್ಯಾನವಾಗಿ, ಮಗದೊಮ್ಮೆ ನಾಮಜಪವಾಗಿ ತಂತ್ರವು ನುಸುಳಿ ಉಳಿದಿದೆ. ಹಸ್ತ ಸ್ಪರ್ಶ, ಶಕ್ತಿಪಾತ, ದೃಷ್ಟಿದೀಕ್ಷೆ, ಮಂತ್ರದ ರಹಸ್ಯೋಪದೇಶ, ಅನುಷ್ಠಾನಗಳಂಥ ಅಂತರಂಗದ ಲೋಕದಂತೆಯೇ, ವೈದಿಕ, ಅದಕ್ಕೆ ಸಮ್ಮತವಾದ ಹೋಮ ಹವನಗಳಲ್ಲಿ ನಡೆಯುವ ಚಂಡೀ ಪಾರಾಯಣ, ದೇವಿ ಭಾಗವತ ಪಠಣದಲ್ಲಿ ತಂತ್ರದ ಪರಿಸರ ನೆರಳಾಡುತ್ತಿದೆ. ಇಷ್ಟಾದರೂ ವರ್ಣಾಶ್ರಮ, ಮುಟ್ಟು-ತಟ್ಟಿನ ಭೇದವಿಲ್ಲದ, ಹೆಣ್ಣು ಗಂಡಿನ ತಾರತಮ್ಯವಿಲ್ಲದ, ಬಡವರ ಕೈಗೆಟಕುವ ತಂತ್ರ ತನ್ನಷ್ಟಕ್ಕೆ ಉಳಿದುಕೊಂಡಿದೆ. ಇದಕ್ಕೆ ಪಿ.ಎಚ್.ಡಿ ಪದವಿಗಳ ಪ್ರಪಂಚವಾಗಲಿ, ಸಂಸ್ಕೃತ ಕನ್ನಡದ ಬೌದ್ಧಿಕ ಮಾತ್ರದ ಪರಿಸರವಾಗಲಿ ದೂರ. ಕನ್ನಡ ಸಾಹಿತ್ಯದಲ್ಲಿ ಜೈನ, ವೀರಶೈವ, ವೈದಿಕ ಧಾರೆಗಳಂತೆಯೇ ಸಮಾನಾಂತರವಾದ ಶಾಕ್ತ ಸಂಸ್ಕೃತಿಧಾರೆಯೊಂದಿದೆ. ಅದರ ತುಣುಕು-ಮಿಣುಕುಗಳು ಅಲ್ಲಮ ಮೊದಲಾದವರ ವಚನಗಳಲ್ಲಿ, ಶಾಕ್ತ ರಾಮಾಯಣ, ಭಾಗವತಗಳಲ್ಲಿ, ತತ್ವಜ್ಞಾನಿಗಳ ತಾತ್ವಿಕ ಲಾವಣಿ, ಪದಗಳಲ್ಲಿ ಗುಪ್ತಗಾಮಿನಿಯಾಗಿದೆ. ಈ ವಿಷವನ್ನು ಬೆಳೆಸುವುದಕ್ಕೆ ಇಲ್ಲಿ ಅಸ್ಪದ ಇಲ್ಲದಿದ್ದರೂ ಪಂಪನು ಅರಿಕೇಸರಿಯನ್ನು ಉದಾತ್ತ ನಾರಾಯಣ, ಮಹೇಶ್ವರ, ಮೊದಲಾಗಿ ವರ್ಣಿಸಿದ ನಂತರದ ಪದ್ಯ ತಂತ್ರದ ಮತ್ತು ಜೈನಪಂಥದ ಹಿನ್ನೆಲೆಯಲ್ಲಿ ಹೊಸ ಕುತೂಹಲವನ್ನು ಹುಟ್ಟಿಸುತ್ತದೆ:

ತಿಸುಳದೊಳುಚ್ಚಳಿಪ್ಪ ಪೊಸ ನೆತ್ತರೆ ಕೆಂದಳಿರಾಗ ಕಣ್ಣಗು
ರ್ವಿಸುವಿನಮೊಕ್ಕು ನೇಲ್ವ ಕರುಳೋಳಿಯೆ ಬಾಳ ವ್ಯಾಣಾಳಮಾಗೆ ಮಿ ||
ಕ್ಕಸುರರ ಮಯ್ಯೊಳಾದ ವಿರಹಾಗ್ನಿಯನಾಸುತಿಂತೆ ತನ್ನ ಕೂ |
ರಸಿಯೊಳಡುರ್ತು ಕೊಂದಸಿಯಳಿ(ರ್ಕ)ಸಿಯೊಳ್ ಪಡೆ ಮೆಚ್ಚೆ ಗಂಡನಾ
(ವಿಕ್ರಮಾರ್ಜುನವಿಜಯಂ ೧.೬)

‘ಹಿಡಿದ ತ್ರಿಶೂಲದ ಉಕ್ಕುವ ಹೊಸ ನೆತ್ತರೆ ಕೆಂದಳಿರಾಗಿ, ಕಣ್ಣಿಗೆ ಭಯಂಕರವಾಗುವಂತೆ (ಅಲ್ಲಿ) ಜೋತಾಡುವ ಕರುಳ ಮಾಲೆಯೆ ಎಳೆಯ ತಾವರೆಯದಂಟಾಗಿ – ಆ ಮೀರಿದ ರಾಕ್ಷಸರ ಮೈಯಲ್ಲಾದ ಬಿರಹತಾಪವನ್ನು ಆರಿಸುತ್ತ – ಅಂತೆಯೇ ಮೇಲೆ ಬಿದ್ದು, ತನ್ನ ಹರಿತವಾದ ಖಡ್ಗದಿಂದ (ಅವರನ್ನೆಲ್ಲ) ಕೊಂದ ಲತಾಂಗಿ ಕಾಳಿಯು ‘ಪಡೆಮೆಚ್ಚೆ ಗಂಡ’ (ನೆಂದು ಬಿರುದಾಂಕಿತನಾದ ಅರಿಕೇಸರಿ)ಯ ಖಡ್ಗದಲ್ಲಿ ನೆಲೆಸಿರಲಿ (ಡಾ. ಎಲ್. ಬಸವರಾಜ, ಪಂಪನ ಸಮಸ್ತ ಭಾರತ ಕಥಾಮೃತ, ೨೦೦೧, ಪುಟ ೧೪)

ತ್ರಿಶೂಲ, ಕರುಳಮಾಲೆ, ಖಡ್ಗದ ವರ್ಣನೆಯಿರುವ ಕಾಳಿಯ ವರ್ಣನೆ ಕರ್ನಾಟಕದ ಯಾವುದೋ ತಾಂತ್ರಿಕ ಪಂಥದತ್ತ ಬೆರಳು ಮಾಡುವಂತಿದೆ. ಈ ಕುರಿತು ಹೆಚ್ಚಿನ ಸಾಂಸ್ಕೃತಿಕ ಓದಿಗೆ ಅವಕಾಶವಿದೆ.