ತಂತ್ರದೀಕ್ಷೆ ಮತ್ತು ಮಂಡಲ

ಉಳಿದ ಮತೀಯ ದೀಕ್ಷೆ (Initiation)ಗಿಂತ ತಾಂತ್ರಿಕ ದೀಕ್ಷೆ ಹೆಚ್ಚು ಸೂಕ್ಷ್ಮ ಮತ್ತು ರಹಸ್ಯ ಮಟ್ಟದ್ದು. ತಂತ್ರದಲ್ಲಿ ದೀಕ್ಷೆ ಕೊಡಲು ಬಹಿರಂಗದಲ್ಲಿ ಒಬ್ಬ ಗುರುವಿದ್ದಂತೆಯೇ ಅಂತರಂಗದ ‘ಅರಿವು’ ಗುರುವಿನ ಕೆಲಸ ಮಾಡುತ್ತದೆ. ಗುರು ಮತ್ತು ಶಿಷ್ಯನ ಸಂಬಂಧವನ್ನು ನವಮಾಸ ಪಿಂಡವನ್ನು ಗರ್ಭದಲ್ಲಿ ಬೆಳೆಸಿ ಶಿಶುವಿಗೆ ಜನ್ಮ ಕೊಡುವ ತಾಯಿಗೆ ಹೋಲಿಸುವ ಮಂತ್ರವೊಂದು ಅಥರ್ವಣ ವೇದದಲ್ಲಿದೆ:

ಆಚಾರ್ಯ ಉಪನಯಮಾನೋ ಬ್ರಹ್ಮ ಚಾರಿಣಂ ಕೃಣುತೇ ಗರ್ಭಮಂತಃ |
ತಂ ರಾತ್ರೀಸ್ತ್ರಿಸ್ರ ಉದರೇ ವಿಭರ್ತಿ ತಂ ಜಾತಂ ದ್ರಷ್ಟುಮಬಿಸಂಯಂತಿ ದೇವಾಃ ||
(ಅ.ವೇ : ೧೧. ೫.೩)

‘The teacher initiating the Brahmacharin (pupil) makes him (as it were) a spiritual child within him. Him for three nights he bears (like the mother the child) in his (spiritual) womb. When he is born (i.e. is a new spirithal being) the shining ones come together to see him’ (The call of the Vedas, A.C. Bose, 1970, Pp. 118)

ಅಂದರೆ, ತಾಯಿ ಮಗುವನ್ನು ತನ್ನೊಳಗೆ ಸ್ವೀಕರಿಸುವ ಹಾಗೆ, ಗುರುದೀಕ್ಷೆ ನೀಡಿ ಬ್ರಹ್ಮಚಾರಿಯನ್ನು ಸ್ವೀಕರಿಸುತ್ತಾನೆ. ತಾಯಿ ಮಗುವನ್ನು ತನ್ನ ಗರ್ಭದಲ್ಲಿರಿಸಿಕೊಳ್ಳುವಂತೆ ಮೂರು ರಾತ್ರಿಗಳು ಅವನನ್ನು ಧರಿಸುತ್ತಾನೆ. ಜನಿಸಿದ ಶಿಶುವನ್ನು ನೋಡಲು ದೇವತೆಗಳು ಬರುತ್ತಾರೆ. ತಾಂತ್ರಿಕ ಮಂಡಲಗಳನ್ನು ಗುರುಶಿಷ್ಯ ಪರಂಪರೆಯ ರಹಸ್ಯ ದೀಕ್ಷೆಯ ಹಿನ್ನೆಲೆಯಲ್ಲಿ ನೋಡಿ, ಮಂಡಲಗಳು ತರ್ಕಾತೀತ ಪ್ರತೀಕಗಳು ಎಂದು ವಿದ್ವಾಂಸರು ಭಾರತೀಯ ಚಿತ್ರಕಲೆಯ ಹಿನ್ನೆಲೆಯಲ್ಲಿ ಅದ್ಭುತವಾಗಿ ವಿಶ್ಲೇಷಿಸಿರುತ್ತಾರೆ. ಈಗ ಮಂಡಲಗಳ ಹಿನ್ನೆಲೆಯನ್ನು ಸಂಗ್ರಹವಾಗಿ ನೋಡಬಹುದು:

೧. ಬೌದ್ಧ, ಜೈನ, ವೈದಿಕ ಮತಗಳಲ್ಲಿ ತಾಂತ್ರಿಕ ಮಂಡಲಗಳಿದ್ದು ಅದರ ಪ್ರಭಾವ ಬೌದ್ಧರ ಮೂಲಕ ಪೂರ್ವ ದೇಶಗಳಿಗೆ ಹರಡಿದೆ. ಟಿಬೆಟ್, ಜಪಾನಿನಲ್ಲೂ ಮಂಡಲಗಳಿವೆ.

೨. ಮಂಡಲಗಳು ‘ಆಧುನಿಕ ಶೈವ, ಶಾಕ್ತ, ಮಹಾಯಾನ ಬೌದ್ಧಾದಿಗಳಿಂದ ಸೃಷ್ಟಿಸಲ್ಪಟ್ಟಿಲ್ಲ. ಮಾನವನ ಬೆಳವಣಿಗೆಯ ಪ್ರಾರಂಭ ದಿಶೆಯಲ್ಲಿಯೆ ವಿಶ್ಯವ್ಯಾಪ್ತಿ’ ಹೊಂದಿವೆ.

೩. ಪ್ರತೀಕದ ಉಪಾಸನೆಯಲ್ಲಿ ಸಾಧಕನು ಸಿದ್ದಿ ಪಡೆಯಲು ಅವನ ಅಹಂಕಾರವು ಪ್ರತಿಬಿಂಬದಲ್ಲಿ (ಮಂಡಲ) ಆಡಚಣೆಯಿಲ್ಲದ ಒಳಹೊಕ್ಕು ತಿಳಿದಿರುವುದರ ಗಡಿಯನ್ನು ದಾಟಬೇಕು. ಅಜ್ಞಾತಾಂಶವು ‘ಚಿಲುಮೆಯಂತೆ ಉಕ್ಕಿ ಬಂದು’ ತಿಳಿದದ್ದು- ತಿಳಿಯದ್ದು ಎರಡೂ ಮಿಲನ ಹೊಂದಿದೆ. ನಂತರ ಜ್ಞಾತಾಂಶವೂ ಪರಿವರ್ತನೆ ಹೊಂದುವುದೇ ಮಂಡಲ ಪ್ರಯೋಗದ ತಾತ್ವಿಕತೆಯ ರಹಸ್ಯ.

೪. ಸಾಧನೆಯಲ್ಲಿ ಉಂಟಾಗಬಹುದಾದ ಚಿತ್ತ ಭ್ರಮಣೆ, ಮನೋದೌರ್ಬಲ್ಯಗಳನ್ನು ನಿವಾರಿಸಿ ಗುರುತಿಸಿಕೊಂಡಿರುವ ಗುರಿಯನ್ನು ಸಾಧಿಸಲು ತಾಂತ್ರಿಕ ಮಂಡಲಗಳನ್ನು ಭಾರತೀಯರು ರಹಸ್ಯ ಬೋಧೆಯಲ್ಲಿ ಬಳಸುತ್ತಾರೆ.

೫. ಮಂಡಲಗಳು ಕನಸಿನ ಲೋಕಕ್ಕೆ ಸಂಬಂಧಿಸಿದಂತೆ ಕಂಡರೂ ಅದು ಮೂಲ ಪ್ರತೀಕ, ಅನಾದಿ, ತರ್ಕಕ್ಕೆ ಸಿಕ್ಕಂತೆ ಕಂಡರೂ, ತರ್ಕಾತೀತ. ಮಂಡಲದ ಮಧ್ಯದಲ್ಲಿ ಆಯಾ ತಾಂತ್ರಿಕ ಹಿನ್ನೆಲೆಗೆ ಸಂಬಂಧಿಸಿದಂತೆ ಮಧ್ಯದಲ್ಲಿ ಸಾಧನೆಯ ಧ್ಯೇಯವಾದ ಬುದ್ಧ, ಯಾವುದೇ ಗುರು. ಶಿವ-ಶಕ್ತಿಯ ಮೂರ್ತಿಗಳಿರುತ್ತವೆ. ಇದನ್ನು ಟಿಬೆಟ್ಟಿನ ಚಿತ್ರಪಟಗಳಲ್ಲೂ ಕಾಣಬಹುದು.

ವಿದ್ವಾಂಸರು ಗುರುತಿಸುವಂತೆ ‘ಎಲ್ಲದರಲ್ಲೂ ಮಧ್ಯದಲ್ಲಿ ಉಪಾಸ್ಯದೇವತೆಯ ವಿಗ್ರಹ ಅಥವಾ ಚಿಹ್ನೆ ವಿಶ್ವದಲ್ಲಿ ಅಡಗಿರುವ ಬೀಜದಂತಿದೆ’ (ಎಸ್. ಶ್ರೀಕಂಠಶಾಸ್ತ್ರೀ, ಭಾರತೀಯ ಚಿತ್ರಕಲೆಯಲ್ಲಿ ಮಂಡಲ, ೧೯೯೩, ಪುಟ ೨೫೩).

ತಂತ್ರವು ರಹಸ್ಯವಾದರೂ ಅದರ ಕೆಲವು ಆಚರಣೆಗಳು ರಂಗೋಲಿ, ಚಿತ್ರಕಲೆ, ನಿತ್ಯಜೀವನದ ಪೂಜೆಯಲ್ಲಿ ಆಂಶಿಕವಾಗಿ ನುಸುಳಿಕೊಂಡಿವೆ. ಮಂತ್ರ, ತಂತ್ರ, ವಿಧಿವಿಧಾನಗಳು ಆಯಾ ಪ್ರಾಂತದಲ್ಲಿ, ಸಮುದಾಯಗಳಲ್ಲಿ ನಿರ್ದಿಷ್ಟ ಸಮ್ಮತ ನೆಲೆಯಲ್ಲಿ ವ್ಯವಹರಿಸುತ್ತಿರುವಂತೆ ಕಂಡರೂ ಅಂತರಂಗದಲ್ಲಿ ತಂತ್ರದ ಬೆಳಕು ಸುಪ್ತವಾಗಿ ಬೆಳಗುತ್ತಲೇ ಇದೆ. ತಂತ್ರಗಳನ್ನು ಬಿಟ್ಟು ಭಾರತೀಯ ಧರ್ಮಗಳಿಲ್ಲ. ಅವುಗಳೊಡನೆ ಗುದ್ದಾಡುತ್ತಲೇ, ಅದರ ಒರಟು ಮೈಯನ್ನು ತಮ್ಮ ತಾತ್ವಿಕತೆಯ ಹದಕ್ಕೆ ಅನುವುಗೊಳ್ಳುತ್ತಲೇ ಎಷ್ಟೋ ಮತ, ಆಚರಣೆಗಳು ದೃಢವೆಂದುಕೊಳ್ಳುತ್ತಲೇ ತಮ್ಮ ಮೊದಲ ನೆಲೆಗಳಿಂದ ಪಲ್ಲಟಗೊಂಡಿವೆ. ಕಾಲಕ್ರಮದಲ್ಲಿ ಈ ಪ್ರಕ್ರಿಯೆಗೆ ಬೆಚ್ಚಿ ಬಿದ್ದು ತಾಂತ್ರಿಕತೆಯ ಅಂಶವನ್ನು ಸಂಸ್ಕೃತ ಭಾಷೆ, ವೈಭವದ ಆಚರಣೆಗಳ ಮುಸುಕಿನಲ್ಲಿ ಬಚ್ಚಿಡಲು ಪ್ರಯತ್ನಿಸಿವೆ.

ಭಾರತೀಯ ಸಾಹಿತ್ಯದಲ್ಲಿ ಜನಜೀವನದ ಪ್ರತಿಬಿಂಬವನ್ನು ಕಾಣುತ್ತೇವೆ. ಭಾರತೀಯ ಜೀವನದಲ್ಲಿ ಮತಕ್ಕೆ ಮಹತ್ವವಿದೆ. ತಮ್ಮ ತಮ್ಮ ಮತಗಳನ್ನು ಹಾಡಲು ಜನರಿಗೆ ತಮ್ಮ ತಮ್ಮ ಭಾಷೆಗಳೇ ಮಾಧ್ಯಮಗಳಾದವು. ಉದಾಹರಣೆಗೆ ಬೌದ್ಧ ಸಾಹಿತ್ಯ ಪಾಳಿ ಭಾಷೆಯಲ್ಲಿ ರಚಿತವಾಯಿತು, ಮುಂದೆ ಸಂಸ್ಕೃತಕ್ಕೂ ಹರಡಿತು. ಪಾಳಿಯು ಪ್ರಾಕೃತದ ಒಂದು ರೂಪ. ಪ್ರಾಕೃತದ್ದೇ ಮತ್ತೊಂದು ರೂಪ ಅರ್ಧಮಾಗಧಿಯಲ್ಲಿ ಜೈನಮತದ ಗ್ರಂಥಗಳಿವೆ, ಮುಂದೆ ಜೈನವಾಙ್ಮಯ ಭಾರತೀಯ ಉಳಿದ ಭಾಷೆಗಳಂತೆಯೇ ಸಂಸ್ಕೃತವನ್ನೂ ವ್ಯಾಪಿಸಿತು. ಸ್ವಾರಸ್ಯವೆಂದರೆ ಹಿಂದಿಯಲ್ಲೂ ಮೊದಲು ಬಂದದ್ದು ಜೈನ ಹಾಗೂ ಸಿದ್ಧಪಂಥದವರ ಸಾಹಿತ್ಯ. ಅದೇ ರೀತಿ ನಾಥ ಪಂಥದವರು ಮರಾಠಿ ಸಾಹಿತ್ಯದ ಮೊದಲ ಕೃತಿಗಳನ್ನು ರಚಿಸಿದರು. ಇವರಂತೆಯೇ ಮಹಾನುಭಾವ ಪಂಥದವರೂ ಮರಾಠಿಯಲ್ಲೇ ತಮ್ಮ ಸಾಹಿತ್ಯ ರಚಿಸಿದರು. ಪ್ರಾಯಃ ಇಷ್ಟೊಂದು ಮತ, ಸಂಪ್ರದಾಯ, ಸಾಧನೆಯ ಬಹಿರಂಗ ಮತ್ತು ರಹಸ್ಯ ಪಂಥಗಳು ಬರದಿದ್ದರೆ ಇಷ್ಟೊಂದು ವಾಙ್ಮಯ ಭಾರತದಲ್ಲಿ ಸೃಷ್ಟಿಯಾಗುತ್ತಿರಲಿಲ್ಲ.

ನಾಥ ಪಂಥದವರು ಹಿಂದಿಗೇ ಸೀಮಿತರಾಗದೆ ಪಂಜಾಬಿ ಭಾಷೆಯಲ್ಲೂ ಕೃತಿ ರಚಿಸಿದರು. ತಾಂತ್ರಿಕ ಆಚರಣೆ, ತತ್ವದಲ್ಲಿ ನಂಬಿಕೆ ಇಟ್ಟವರು ಕಾಶ್ಮೀರ ಭಾಷೆಯಲ್ಲಿ ಬರೆದರು. ಬಂಗಾಳಿ ಭಾಷೆಯಲ್ಲಿ ೧೦ನೇ ಶತಮಾನದಲ್ಲಿ ಬೌದ್ಧರ ಮತೀಯ ಭಾವಗೀತೆಗಳು ರಚನೆಯಾಯಿತು. ಮುಂದೆ ಸೂಫಿ, ಬಾಹುಲ್ ಸಂಪ್ರದಾಯಗಳವರು ಆ ಸಾಹಿತ್ಯಕ್ಕೆ ಪುಷ್ಟಿ ತಂದರು. ಶ್ರೀರಾಮಕೃಷ್ಣ ಪರಮಹಂಸರು ಪದೇ ಪದೇ ನೆನಪಿಸಿಕೊಳ್ಳುವ ರಾಮಪ್ರಸಾದ್ ಮಹಾಕಾಳಿ ಭಕ್ತನಾಗಿದ್ದ, ಅವನ ಗೀತೆಗಳಲ್ಲಿ ತಂತ್ರ ಮತ್ತು ಭಕ್ತಿಯ ಪರವಶತೆಯಿದೆ. ಈಗ ಶ್ರೀರಾಮಕೃಷ್ಣ ಪರಮಹಂಸರು ಕೂಡ ಶ್ರೇಷ್ಠ ತಾಂತ್ರಿಕರೇ ಎಂಬುದನ್ನು ನೋಡಬಹುದು.

ಶ್ರೀರಾಮಕೃಷ್ಣ ಪರಮಹಂಸರು ಮತ್ತು ತಂತ್ರ ಸಾಧನೆ

ಶ್ರೀರಾಮಕೃಷ್ಣ ಪರಮಹಂಸರು ಭಕ್ತಿ ಅದ್ವೈತ ಮುಂತಾದ ಸಾಧನೆಗಳೊಂದಿಗೆ ನೇರವಾಗಿ ಭೈರವಿ ಎಂಬ ಸ್ತ್ರೀ ಗುರುವಿನ ಸಹಾಯದಿಂದ ತಾಂತ್ರಿಕ ಸಾಧನೆಯನ್ನು ಯಶಸ್ವಿಯಾಗಿ ಪೂರೈಸಿದ್ದ ವಿವರಣೆ ಲಭ್ಯವಿದೆ ಮಧ್ಯಯುಗದ ಕೋಲಾಹಲದ ನಂತರ ಪರಮಹಂಸರಂಥ ಚೈತನ್ಯಶಕ್ತಿ ತಂತ್ರವನ್ನು ಸಾಧನೆ ಮಾಡಿದ್ದು ಅದರ ಆಧ್ಯಾತ್ಮಿಕ ಮುಖವನ್ನು ಪ್ರಪಂಚಕ್ಕೆ ಮತ್ತೆ ಪರಿಚಯಿಸಿತು. ಅದರ ಸಂಕ್ಷಿಪ್ತ ಪರಿಚಯ ಇಲ್ಲಿದೆ.

೧. ಬಿಲ್ವಮರದ ಕೆಳಗೆ ಮತ್ತು ಪಂಚವಟಿಯ ಕೆಳಗೆ ಕ್ರಮವಾಗಿ ಮೂರು ಮನುಷ್ಯ ತಲೆಬರುಡೆಯಿಂದ ಕೂಡಿದ ಅಸನ ಹಾಗೂ ಐದು ವಿವಿಧ ಪ್ರಾಣಿಗಳ ತಲೆಬುರುಡೆಗಳ ಆಸನವನ್ನು ಸಾಧನೆಗೋಸ್ಕರ ನಿರ್ಮಿಸಲಾಯಿತು.

೨. ಸ್ವತಃ ಪರಮಹಂಸರು ಹೇಳಿರುವಂತೆ ‘ಅರವತ್ತು ನಾಲ್ಕು ತಂತ್ರಗಳಲ್ಲಿ ಹೇಳಿರುವ ಎಲ್ಲ ಸಾಧನೆಗಳನ್ನೂ ಬ್ರಾಹ್ಮಣಿಯು ನನ್ನಿಂದ ಮಾಡಿಸಿದಳು. ಕೆಲವು ಅತ್ಯಮತ ಕಠಿಣ ಸಾಧನೆಗಳು. ಅವುಗಳಲ್ಲಿ ತೊಡಗುವ ಹೆಚ್ಚಿನ ಸಾಧಕರು ಹಾದಿ ತಪ್ಪಿ ಬಿಡುತ್ತಾರೆ. ಆದರೆ ತಾಯಿಯ ಕೃಪೆಯಿಂದ ಅವುಗಳೆಲ್ಲದರಲ್ಲಿಯೂ ಉತ್ತೀರ್ಣನಾದೆ’ (ಸ್ವಾಮಿ ಶಾರದಾನಂದ ಅನು: ಪ್ರಭುಶಂಕರ, ಶ್ರೀ ರಾಮಕೃಷ್ಣ ಲೀಲಾ ಪ್ರಸಂಗ, ಭಾಗ-೧, ೧೯೯೪, ಪುಟ ೨೦೭-೦೮)

೩. ಸುಂದರ ಯುವತಿಯು ನಗ್ನಳಾಗಿದ್ದು ಅವಳ ತೊಡೆಯ ಮೇಲೆ ಕುಳಿತು ಪರಮಹಂಸರು ಭಾವಮಯರಾಗಿ ಮಂತ್ರ ಜಪಿಸಿದರು.

೪. ಬ್ರಾಹ್ಮಣಿಯು ಶವದ ತಲೆಬುರುಡೆಯಲ್ಲಿ ಮೀನನ್ನು ಬೇಯಿಸಿ ಶ್ರೀ ಜಗನ್ಮಾತೆಗೆ ತರ್ಪಣ ಮಾಡುವುದನ್ನು ತೋರಿಸಿಕೊಟ್ಟಂತೆಯೇ ಪರಮಹಂಸರೂ ಮಾಡಿ ಅದನ್ನು ಸ್ವೀಕರಿಸಿದರು. ಕೊಳೆತ ಮಾಂಸವನ್ನು ತರ್ಪಣದ ನಂತರ ಸ್ವೀಕರಿಸಿದರು.

೫. ಸಂಭೋಗ ಕ್ರಿಯೆಯಲ್ಲಿದ್ದ ಹೆಣ್ಣು ಗಂಡನ್ನು ಬ್ರಾಹ್ಮಣಿಯು ಪರಮಹಂಸರಿಗೆ ತೋರಿಸಿದಾಗ ಅದನ್ನು ಶಿವಶಕ್ತಿಲೀಲೆ ಎಂದು ಭಾವಿಸಿ ಸಮಾಧಿ ಸ್ಥಿತಿಗೆ ತಲುಪಿ ಹಿಂದಿರುಗಿದ ಬಳಿಕ ಬ್ರಾಹ್ಮಣಿ ಹೇಳಿದ್ದು : ‘ನೀನು ಅತ್ಯಂತ ಕಷ್ಟ ಸಾಧ್ಯವಾದ ತಂತ್ರ ಸಾಧನೆಯಲ್ಲಿ ಸಿದ್ಧಿಯನ್ನು ಪಡೆದು ದಿವ್ಯಭಾವದಲ್ಲಿ ಪ್ರತಿಷ್ಠಿತನಾಗಿದ್ದೀಯೆ. ಇದೇ ವೀರಭಾವ ಸಾಧನೆಯ ಅಂತಿಮ ಗಡುವು’ (೧೯೯೪, ಪುಟ ೨೦೯)

೬. ತಂತ್ರ ಸಾಧನೆಯಿಂದಾಗಿ ಯೋನಿ ಎಂದರೆ ಜಗದ್ಯೋನಿ. ಕಾರಣ ಎಂದರೆ ಜಗತ್ಕಾರಣ, ‘ತುಲಸೀ ಪತ್ರೆ ಮತ್ತು ನುಗ್ಗೆ ಸೊಪ್ಪು ಎರಡೂ ಸಮ’ ಎಂಬ ಪವಿತ್ರ ಭಾವನೆ, ಸ್ತ್ರೀ ಎಂದರೆ ತಾಯಿ ಎಂಬ ದರ್ಶನ ತಮಗಾದುದರ ಜೊತೆಗೆ ಸುಶುಮ್ನಾ ನಾಡಿಯು ಪೂರ್ಣವಾಗಿ ತೆರೆದು, ಪರಮಹಂಸರ ಸ್ವಭಾವ ಬಾಲಕನಂತಾಯಿತು.

ಪರಮಹಂಸರ ಸಾಧನೆಗಳು ವೀರ ಎಂಬ ತಂತ್ರ ಸಾಧನೆಗೆ ಸೇರಿದವು. ಸಾಮಾನ್ಯವಾಗಿ ತಂತ್ರವೆಂದರೆ ಲೈಂಗಿಕತೆ ಅಷ್ಟೆ ಎಂಬ ಸೀಮಿತ ದೃಷ್ಟಿಕೋನಕ್ಕೆ ಸಮಾಜದ ವಿಚಾರಹೀನತೆಯೊಂದಿಗೆ ಹಲವಾರು ತಾಂತ್ರಿಕರ ವರ್ತನೆಗಳೂ ಕಾರಣ ಆಧ್ಯಾತ್ಮಿಕ ಸಾಧನೆಗಾಗಿ ಸ್ತ್ರೀಯನ್ನು ಹೊಂದಿ ಮುಂದೆ ‘ಯೋಗಿಗೆ ಯೋಗಿಣಿಯಾಗಿ ಕಾಡಿತ್ತು ಮಾಯೆ’ ಎಂಬ ಸ್ಥಿತಿಗೆ ತಾಂತ್ರಿಕನೇಕರು ಬಂದು ಮುಟ್ಟಿದ್ದುಂಟು ಆದರೆ ಹೆಣ್ಣು, ಮಾಂಸ, ಮೀನು, ಮಧ್ಯ, ಲೈಂಗಿಕ ಪ್ರಯೋಗಗಳು ತಂತ್ರಕ್ಕಿರುವ ಒಂದು ದಾರಿ. ಅದರ ಸಹಿತವಾಗಿ ಅಥವಾ ಅದಿಲ್ಲದೆ ಸಾಧಕನು ದೇಹಸಂಸ್ಕೃತಿಯನ್ನು ಬಳಸಿಕೊಂಡು ಆತ್ಮಸಂಸ್ಕೃತಿಗೇರುವುದು ಮುಖ್ಯ.

ತಂತ್ರ, ಹೆಣ್ಣು ಮತ್ತು ಸ್ವಾತಂತ್ರ್ಯ ಸಂಗ್ರಾಮ

ತಂತ್ರಶಾಸ್ತ್ರದಲ್ಲಿ ಹೆಣ್ಣಿಗೆ ಪ್ರಾಶಸ್ತ್ಯ. ಆಕೆ ಸಾಧನ. ಸಲಕರಣ ಮತ್ತು ಮುಖ್ಯವಾಗಿ ಮರೆಯಬಾರದ ಮಾತೆಂದರೆ ಗಂಡಿನ ಆತ್ಮೋನ್ನತಿಯ ಬೆಳಕಿನ ಕಂಭ. ಸ್ವಾರಸ್ಯಕರವೆಂದರೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಂತ್ರದೀಕ್ಷೆಯ ಪ್ರಭಾವ ಕೆಲಸ ಮಾಡಿದ್ದು. ಅದು ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ ಹೇಗೋ ಹಾಗೇ – ಇನ್ನಷ್ಟು ಸ್ಪಷ್ಟವಾಗಿ ಕ್ರಾಂತಿಕಾರಿಗಳ ‘ತಾಯ್ನಾಡಿ’ನ ಪರಿಕಲ್ಪನೆಯಲ್ಲಿ ಪ್ರಜ್ವಲಿಸಿದೆ. ಮೊದಲಿಗೆ ಗಾಂಧೀಜಿಯವರ ವಿಷಯದಲ್ಲಿ ಈ ಕುರಿತು ಸಿದ್ಧವನಹಳ್ಳಿ ಕೃಷ್ಣಶರ್ಮರ ಮಾತುಗಳು.

‘ಹೆಣ್ಣು ಗಾಂಧೀಜಿಗೆ ತಾಯಿ. ಆಕೆ ಇಂದ್ರಿಯ ಭೋಗದ ಪದಾರ್ಥ ಎಂಬುದನ್ನು ಹೊಲ್ಲ, ಹೆಣ್ಣು ಪಾವನ ರೂಪಿ. ಅಷ್ಟು ಹೊಲಸಾಗಿ ಆಕೆಯನ್ನು ತಿಳಿಯುವುದು ಸಾಧ್ಯವಿಲ್ಲ. ಹಿಂದಿನ ಕಾಲದಲ್ಲೂ ಒಂದೊಂದು ಸಲ ಮಿಂಚಿನಂತೆ ಹೆಣ್ಣಿನ ವಿಷಯದಲ್ಲಿ ಆದರ ಹೊಳೆದುಹೋಗಿದೆ. ನೂರು ತಪ್ಪು ಮಾಡಲಿ ಹೆಣ್ಣನ್ನು ಹೂವಿನಿಂದಲೂ ಕೂಡ ಹೊಡೆಯಬೇಡ ಎಂದು ತಂತ್ರಶಾಸ್ತ್ರದ ಹಾದಿ ಹಿಡಿದವರು ಹೇಳಿದ್ದಾರೆ. ವೈಷ್ಣನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ಹೆಣ್ಣಿಗೆ ಪಾಪವೇ ಇಲ್ಲ ಎಂದರು. ಮೊದಲು ಹೇಳಿದವರದು ವಿಚಿತ್ರ ವೈರಾಗ್ಯವಾದರೆ ಇವರದು ವಿಪರೀತ ರಾಗ. ಈ ಪಾಪ ಪುಣ್ಯಗಳ ಬೆಂಕಿ ತುಪ್ಪಗಳ ವಿಷಯ ವ್ಯವಹಾರದಲ್ಲಿ ಗಾಂಧೀಜಿ ತೊಡಗಿಕೊಳ್ಳರು. ಗಾಂಧೀಜಿಯ ಬ್ರಹ್ಮಚರ್ಯ ಉತ್ತಮ ಜಾತಿಯದು. ಈ ಯುಗ ಕಂಡ ನೈಷ್ಕಿಕ ಬ್ರಹ್ಮಚಾರಿ ಅವರು. ಬ್ರಹ್ಮಚರ್ಯ ವ್ರತ ತೊಟ್ಟ ಮೇಲೆ ಅವರಿಗೆ ಹೆಣ್ಣು ಎನ್ನುವ ಜೀವವೆಲ್ಲ ತಂಗಿಯೋ ಮಗಳೋ ಆಗಿ ಹೋಯಿತು. ಈ ನಿಟ್ಟಿನಲ್ಲಿ ನಡೆದವರಿಗೆ ಹೆಣ್ಣು ಅಗ್ನಿ ಕುಂಡವಲ್ಲ, ಯಜ್ಞಕುಂಡ’ (ಸಿದ್ಧವನಹಳ್ಳಿ ಕೃಷ್ಣಶರ್ಮ : ೧೯೮೩, ಪರ್ಣಕುಟಿ, ಪುಟ ೧೧೧)

ಗಾಂಧೀಜಿ ತಂತ್ರಶಾಸ್ತ್ರ ಸಾಧಕ ಎಂದು ಈ ಮಾತಿನ ಅರ್ಥವಲ್ಲ. ಆದರೆ ವೈಷ್ಣವ ಧರ್ಮದ ಮರ್ಮ ಅರಿತು ಆಚರಿಸಿದ್ದ ಗಾಂಧೀಜಿಯವರ ಮೂಲಕ ಕಂಡೂ ಕಾಣದಂತೆ ಹೆಣ್ಣೀಗಿರುವ ಗೌರವ ಸ್ಥಾನ ಹೆಚ್ಚಿತು. ಇದು ನೈಜ ತಂತ್ರಶಾಸ್ತ್ರಕ್ಕೆ ದೊಡ್ಡ ಕೊಡುಗೆಯೇ ಆಗಿದೆ. ಗಾಂಧೀಜಿಯವರು ಸ್ತ್ರೀಲೋಕದ ಬಗ್ಗೆ ಹೇಳಿರುವ ಈ ಮಾತು ಕೇವಲ ತಾಂತ್ರಿಕದ ಹೆಸರಿನಲ್ಲಿ ಹೆಣ್ಣಿನ ದೇಹ ಭೋಗದಲ್ಲಿ ತೊಡಗಿರುವವರನ್ನು ಮಾತ್ರವಲ್ಲದೆ, ತಂತ್ರದೊಡನೆ ಏನೂ ಸಂಬಂಧವಿರದ ಸಕಲ ಗಂಡುಗಳನ್ನೂ ಎಚ್ಚರಿಸಿ ತಿವಿಯುವಂತಿದೆ: ‘ನನ್ನ ಹೆಂಡತಿಯೇ ನನ್ನ ಸರ್ವ ಸ್ತ್ರೀಲೋಕ. ಆಕೆಯನ್ನು ಅರ್ಥಮಾಡಿಕೊಂಡಾಗ ನನಗೆ ಇಡೀ ಹೆಣ್ಣು ಜಾತಿಯ ಮನಸ್ಸೇ ಅರ್ಥವಾಯಿತು’ (ಅದೇ, ಪುಟ ೧೧೫).

* * *

ತಾಂತ್ರಿಕ ಪಂಥದ ಪ್ರಭಾವ ಕ್ರಾಂತಿಕಾರಿ ಸಂಘಟನೆಗಳನ್ನು ಹೇಗೆ ಪ್ರಭಾವಿಸಿತ್ತು ಎಂಬುದರ ಚಿತ್ರಣ ಶಿವರಾಮು ಅವರ ಒಂದು ಕಥೆ ಒಂದು ವ್ಯಥೆ ಗ್ರಂಥದಲ್ಲಿದೆ. ೧೯೦೨ರಲ್ಲಿ ಸತೀಶ್ ಚಂದ್ರ ಬೋಸ್ ರಿಂದ ಮೊದಲ್ಗೊಂಡ ‘ಅನುಶೀಲನ ಸಮಿತಿ’ ಸ್ಫೋಟಕ ವಸ್ತುಗಳ ಬಳಕೆ, ತಯಾರಿಕೆ, ಶಸ್ತ್ರಾಸ್ತ್ರಗಳ ಬಳಕೆ – ತರಬೇತಿಯನ್ನು ನೀಡುವ ಕೇಂದ್ರವಾಗಿತ್ತು. ಬಂಗಾಳದಲ್ಲಿ ತಲೆಯೆತ್ತಿದ ಈ ಕ್ರಾಂತಿಕಾರಿ ಗುಂಪಿನ ಚಟುವಟಿಕೆ ರಹಸ್ಯವಾಗಿದ್ದಲ್ಲದೆ, ಅದರ ಸದಸ್ಯತ್ವ ಪಡೆಯುವ ಕ್ರಮ ಕಠಿಣವಾಗಿತ್ತು. ರಾಜಕೀಯ ಸ್ವಾತಂತ್ರ್ಯ ಪಡೆಯುವ ಗುರಿಯಿಂದ ಈ ಗುಂಪಿನ ದೀಕ್ಷೆಯ ಕಾರ‍್ಯಕ್ರಮದ ಹಿಂದೆ ತಾಂತ್ರಿಕ ಪಂಥದ ಪ್ರಭಾವ ಕಂಡುಬರುತ್ತದೆ. ಬಂಕಿಮ, ರವೀಂದ್ರ, ಅರವಿಂದರ ಬರಹಗಳ ಮೂಲಕ ಬಂಗಾಳದ ಭಾರತದ ವಿವಿಧ ಪ್ರಾಂತಗಳ ಶಕ್ತಿದೇವತೆಯು (ಕಾಳಿ, ದುರ್ಗಿ, ಇತ್ಯಾದಿ ರಾಷ್ಟ್ರ ದೇವತೆಯ ಸ್ವರೂಪ ತಳೆದಿದ್ದಳು.

ಈ ಸಮಿತಿಯ ಹಿರಿಯ ನಾಯಕ ‘ಪುಲಿನ ಬಿಹಾರಿದಾಸ್ ಹೊಸಬರಿಗೆ ಪ್ರತಿಜ್ಞೆ ಮಾಡಿಸುತ್ತಿದ್ದರು. ಯಾವುದಾದರೂ ಕಾಳಿ ದೇವಸ್ಥಾನದಲ್ಲಿ ೧೦-೧೨ ಜನ ಸೇರುತ್ತಿದ್ದರು. ಆಗ ಹೊರಗಿನವರಾಗಲೀ, ಮಂದಿರದ ಪೂಜಾರಿಯಾಗೇ ಆಗಲೀ ಒಳಗೆ ಪ್ರವೇಶವಿಲ್ಲ. ಹೊಸ ಸದಸ್ಯರು ಕಾಳಿಕಾ ಮಾತೆಗೆ ಪೂಜೆ, ನೈವೇದ್ಯ ಒಪ್ಪಿಸುತ್ತಿದ್ದರು. ಬಳಿಕ ಪ್ರತಿಜ್ಞೆ ಮಾಡಬೇಕಾದವನು ತಾಯಿಯೆದುರು ಮಂಡಿಯೂರಿ ಕುಳಿತುಕೊಳ್ಳುತ್ತಿದ್ದ. ಅವನ ತಲೆಯ ಮೇಲೆ ಭಗವದ್ಗೀತೆ, ಒಂದು ಭರ್ಜಿ ಇಡಲಾಗುತ್ತಿತ್ತು. ಹಿಂದಿನ ದಿನದಿಂದ ಅವನು ಉಪವಾಸ ಇರಬೇಕಾಗಿತ್ತು. [….] ಕೆಲವೊಮ್ಮೆ ಈ ಪ್ರತಿಜ್ಞಾ ಸ್ವೀಕಾರ ಕಾಳೀಮಂದಿರದ ಬದಲು ಶ್ಮಶಾನದಲ್ಲಿ ನಡೆಯುತ್ತಿತ್ತು […….] ದೀಕ್ಷೆ ಪಡೆದ ನಂತರ ಹೊಸಬನಿಗೆ ಗುಪ್ತನಾಮ ಕೊಡುತ್ತಿದ್ದರು’ (೨೦೦೫ : ಪುಟ ೧೦೧-೧೦೨)

ಬಂಗಾಳ, ಅಸ್ಸಾಂ ಪ್ರಾಂತಗಳು ಹಿಂದಿನಿಂದಲೂ ಶಕ್ತಿಪಂಥದ ಮುಖ್ಯ ಸ್ಥಾನಗಳು ಎಂಬುದನ್ನು ಸ್ಮರಿಸಿದರೆ, ರಾಷ್ಟ್ರೀಯ ಆಂದೋಲನದಲ್ಲಿ ತಾಂತ್ರಿಕ ಶಾಕ್ತಪಂಥದ ಪ್ರಭಾವವನ್ನು ನೋಡುವಾಗ ಆಶ್ಚರ್ಯವೆನಿಸುವುದಿಲ್ಲ. ‘ವಂದೇ ಮಾತರಂ’ ಗೀತೆಗೆ ‘ಆನಂದ ಮಠ’ ಕಾದಂಬರಿಯಿಂದ ಪ್ರತ್ಯೇಕ ಸ್ಥಾನ ದೊರೆತು ಅದು ಸ್ವಾತಂತ್ರ್ಯ ಆಂದೋಲನದ ಸ್ಫೂರ್ತಿ ಗೀತೆಯಾದ ಕಾಲದಲ್ಲಿ ಬಂದ ಅನೇಕ ಹಾಡುಗಳ ಮೇಲೆ ಶಾಕ್ತ ಸಂಪ್ರದಾಯದ ನೇರ ಪ್ರಭಾವಿದೆ. ಕಾಲಕ್ರಮದಲ್ಲಿ ಇವು ದಾಖಲಾಗದೆ ಕಣ್ಮರೆಯಾಗಿದ್ದರೂ, ದೊರೆತಿರುವ ಕೆಲವು ಸಾಲುಗಳನ್ನು ನೋಡಿದರೂ ಶಕ್ತಿ ಸಂಪ್ರದಾಯದ ಮಾತನ್ನು ಸ್ವರೂಪದ ಆರಾಧನೆಯು, ೧೯-೨೦ನೇ ಶತಮಾನದ ಸಂಧಿ ಕಾಲದಲ್ಲಿ ನೆಲವನ್ನು ತಾಯಿ ಎಂದು ನೋಡುವ ದೃಷ್ಟಿಕೋನಕ್ಕೆ ದಾರಿ ಮಾಡಿಕೊಟ್ಟಿತು ಎಂಬುದು ತಿಳಿಯುತ್ತದೆ. ವೇದದಲ್ಲಿ ಪೃಥ್ವಿ ಸೂಕ್ತ. ಭೂಸೂಕ್ತಗಳಿದ್ದರೂ, ಹೊಸ ಕಾಲದಲ್ಲಿ ಸ್ವಾತಂತ್ರ್ಯ ಪಡೆಯುವ ಹುಮ್ಮಸ್ಸು ನೆಲ ತಾಯಿಗೆ ಹೊಸ ಜೀವಕಳೆಯನ್ನು ತಂದುಕೊಟ್ಟಿತು. ಕೆಲವು ಸ್ವಾತಂತ್ರ್ಯ ಹೋರಾಟಗಾರರ ಮಾತುಗಳು ಈ ಹೊಸತನವನ್ನು ಹಿಡಿದಿಟ್ಟಿರುವುದನ್ನು ನೋಡಬಹುದು.

೧. ಶಕ್ತಿ ಸಂಪ್ರದಾಯದ ದೀಕ್ಷೆ ಪಡೆದ ನಮ್ಮ ಶಿರಸ್ಸು ಸರ್ವಶಕ್ತಳಾದ ತಾಯಿಯ ಚರಣದಲ್ಲಿ ಬಾಗಿದೆ….. ಯುದ್ಧದ ಖಣಖಣರವ ಕೇಳಿ ತಾಯಿ ಬರುತ್ತಾಳೆ (ವರದಾಚರಣ ಮಿತ್ರ ಎಂಬ ಕ್ರಾಂತಿಕಾರಿ ಬರೆದ ಹಾಡು)

೨. ತಾಯಿ! ರತ್ನಾಭರಣಗಳನ್ನು ಕಳಚಿ ಬಿಸುಡು, ನರ ರುಂಡಗಳ ಮಾಲೆ ತೊಡು… ಚಿನ್ನದ ಕೊಳಲು ಪಕ್ಕಕ್ಕಿಡು, ಬಿಚ್ಚುಗತ್ತಿ ಹಿಡಿದು, ರಕ್ಕಸರನ್ನು ಕಡಿದು, ಅವರ ರಕ್ತದಿಂದ ನಿನ್ನ ದಾಹ ತಣಿಸಿಕೊ.(ಹರೀಶ ಚಂದ್ರ ಚಕ್ರವರ್ತಿ ಎಂಬ ಕ್ರಾಂತಿಕಾರಿಯ ಹಾಡು)

೩. ರಕ್ತ ಸಮುದ್ರವನ್ನು ಕಡೆದು ನಾವಿಂದು ಅಮೂಲ್ಯ ಸ್ವಾತಂತ್ರ್ಯ ಲಕ್ಷ್ಮಿಯನ್ನು ಮೇಲಕ್ಕೆ ತರುತ್ತೇವೆ. ತಾಯಿ, ರಣಚಂಡಿಯಾಗಿ ನೀ ಏಳು, ನಿನ್ನ ಕಾಲ ಬಳಿ ಅರ್ಪಿಸಲು ನೈವೇದ್ಯ ತಂದಿದ್ದೇವೆ!

(ಕಿಶೋರ ಚಂದ್ರ ಗಂಗೂಲಿ ಎಂಬ ಕ್ರಾಂತಿಕಾರಿಯ ಹಾಡು) (ಅದೇ, ಪುಟ ೯೫)

ಸ್ವಾತಂತ್ರ್ಯ ಪಡೆಯುವ ತಹ ತಹಕ್ಕೆ ಕೇಂದ್ರ ಆರಾಧ್ಯ ದೇವತೆಯಾಗಿ ಹೀಗೆ ಶಕ್ತಿಯು ಭಾರತಮಾತೆಯಾಗಿ ಅವತರಿಸಿದಳು. ಕಾಲಕಾಲಕ್ಕೆ ಸಾಮಾಜಿಕ ಸಾಂಸ್ಕೃತಿಕ ಅವಶ್ಯಕತೆಗೆ ತಕ್ಕಂತೆ ದೇವತೆಗಳು ಹುಟ್ಟುವುದು, ರೂಪಾಂತರಗೊಳ್ಳುವುದು ಭಾರತಕ್ಕೆ ಹೊಸತಲ್ಲ. ಮುಖ್ಯವಾಗಿ ನೆಲದ ಮುಕ್ತಿ, ಸ್ತ್ರೀ ಗೌರವ ಇವು ಗಾಂಧೀಜಿ ಮತ್ತು ಮೆಲೆ ಉಲ್ಲೇಖಿಸಿದ ಕ್ರಾಂತಿಕಾರಿಗಳ ನಡುವಿನ ಸಾಮಾನ್ಯ ಅಂಶ. ತಂತ್ರವು ಸಮಯ ಬಂದಾಗ ಆಧ್ಯಾತ್ಮಿಕ ಆಯಾಮದೊಡನೇ, ಸಾಮಾಜಿಕ ಜವಾಬ್ದಾರಿಯನ್ನು ವಹಿಸುವುದಕ್ಕೆ ಇದೊಂದು ಉತ್ತಮ ಉದಾಹರಣೆ, ಭಾರತೀಯ ನವೋದಯ ಸಾಹಿತ್ಯದ ಹಿಂದಿರುವ ಒಂದು ಮುಖ್ಯ ಪ್ರೇರಣೆ ರಾಷ್ಟ್ರೀಯತೆಯ ಹುಡುಕಾಟ, ಈ ಹುಡುಕಾಟಕ್ಕೆ ಶಾಕ್ತತಂತ್ರದ ನೆಲಗಟ್ಟಿದೆ.

ಇದೇ ಸಂದರ್ಭದಲ್ಲಿ ಬಂಗಾಳದ ವಿಷಯದಲ್ಲಿ ಮತ್ತೊಂದು ವಿಷಯ ಪ್ರಸ್ತಾಪಿಸಬಹುದು. ಅದು ಭಾರತೀಯ ರೊಮ್ಯಾಂಟಿಸಂನ ಮೂಲದ ಪ್ರಶ್ನೆ. ಬ್ರಿಟಿಷ್ ಶಿಕ್ಷಣದ ಪರಿಣಾಮವಾಗಿ ದೇಸೀ ಶಿಕ್ಷಣ ವ್ಯವಸ್ಥೆಗೆ ಪರ‍್ಯಾಯವಾಗಿ ಬಂದ ಇಂಗ್ಲೆಂಡ್ ಮೂಲದ ಪಠ್ಯಕ್ರಮದಿಂದಾಗಿ ವರ್ಡ್‌ವರ್ತ್ ಷೆಲ್ಲಿ ಇತ್ಯಾದಿ ರೊಮ್ಯಾಂಟಿಕ್ ಕವಿಗಳ ಓದು ಭಾರತಕ್ಕೆ ಬಂದಿತು. ಆ ಮೂಲಕವೇ ಕನ್ನಡ, ಮರಾಠಿ, ಬಂಗಾಳಿಯಲ್ಲಿ ನವೋದಯ ರೊಮ್ಯಾಂಟಿಸಂ ತಳಹಾದಿಯ ಮೇಲೆ ರೂಪುಗೊಂಡಿತು ಎಂಬ ಜನಪ್ರಿಯ ವಾದವಿದೆ. ಆದರೆ ಶಂಕರ ಮೊಕಾಶಿ ಪುಣೇಕರರು ಇದಕ್ಕೆ ವಿರುದ್ಧವಾಗಿ ವಾದ ಹೂಡಿದ್ದಾರೆ. ಅದು ತಾಂತ್ರಿಕ ಪಂಥದ ಆಧಾರದಿಂದ ಭಾರತೀಯ ರೊಮ್ಯಾಂಟಿಸಂನ್ನು ತೋರಿಸುವ ಪ್ರಯತ್ನ.

ಇಂಗ್ಲಿಷ್ ಶಿಕ್ಷಣ, ಧಾರ್ಮಿಕ ಸುಧಾರಣ ಚಳುವಳಿಗಳು ಬಂಗಾಲದಲ್ಲಿ ಶುರುವಾಯಿತು ಶಕ್ತಿ ಪೂಜೆಯ ನಾಡಾದ ಬಂಗಾಳದಲ್ಲಿ ‘ರೊಮ್ಯಾಂಟಿಕ್ ಕಾವ್ಯದ ಸ್ತ್ರೀ ಸೌಂದರ್ಯದ ಆದರಣೆಗೂ ಶಾಕ್ತ ತಾಂತ್ರಿಕ ಸಂಪ್ರದಾಯಕ್ಕೂ ಸುಲಭವಾಗಿ ಮೇಳ ಕೂಡಿತು’ (೧೯೯೫ : ಪುಟ ೧೧೭). ಈ ಹಿನ್ನೆಲೆಯಲ್ಲಿ ಪುಣೇಕರರು ಮಂಡಿಸುವ ವಾದ ಹೀಗಿದೆ:

೧. ಶ್ರೀ ರಾಮಕೃಷ್ಣ ಪರಮಹಂಸ (ವೇದಾಂತ), ಶ್ರೀ ವಿವೇಕಾನಂದ (ಸನ್ಯಾಸ ಮಾರ್ಗ)ಗಳಿಂದ ಇಂಗ್ಲಿಷ್ ವಾತಾವರಣ, ಶಾಕ್ತ ಪ್ರಭಾವದ ಹಿನ್ನೆಲೆಯಲ್ಲಿ ಬಂಗಾಳದಲ್ಲಿ ಹೊಸತನ ಬಂದಿತು. ಮುಂದೆ ಅರಿವಿಂದ ದೇಹಾತ್ಮಗಳ ಸಾಮನ್ವಯಿತ ತತ್ವವೂ ಮೂಡಿತು.

೨. ಬ್ರಜೇಂದ್ರನಾಥ ಸೀಲರು ‘ಪಾಶ್ಚಾತ್ಯ ರೊಮ್ಯಾಂಟಿಸಿಝಂವನ್ನೇ ಭಾರತೀಯ ತತ್ವದ ಅಂಗವಾಗಿ ನೊಣಗಲು ಯತ್ನಿಸಿದರು’.

೩. ಪುಣೇಕರರು ಶಾಕ್ತ ಮೂಲದ ರೊಮ್ಯಾಂಟಿಸಂ ಈ ಮೊದಲೇ ಆಗಿತ್ತು ಎಂಬುದನ್ನು ತೋರಿಸಿಕೊಟ್ಟಿರುವುದು ಸ್ವಾರಸ್ಯಕರವಾಗಿದೆ.

‘ಒಂದು ರೀತಿಯಿಂದ Naturalisation (Humanisation) of the supernatual ಬಂಗಾಳದಲ್ಲಿ ಎಂದೋ ಆಗಿ ಹೋಗಿತ್ತು. ಚೈತನ್ಯದೇವ ಕಾನ್ಹಪಾ (ಡೊಂಬಿ ಪದಗಳು) ಜ್ಯಾಯಸಿ, ವಿದ್ಯಾಪತಿ, ಇವರೆಲ್ಲರೂ ಶಾಕ್ತ ರೊಮ್ಯಾಂಟಿಕರೇ. ಜ್ಯಾಯಸಿಯಂತೂ ಮುಸಲ್ಮಾನನು- ಟಾಗೋರರ ಹ್ಯುಮನಿಸಂ ಬಂಗಾಳಕ್ಕೆ ಅವಶ್ಯವೇ ಇರಲಿಲ್ಲ. ಬಂದದ್ದು ಒಳ್ಳೆಯದೇ ಆಯಿತು’ (ಅದೇ).

೪. ಬಹಳ ಮುಖ್ಯವಾಗಿ ಪುಣೇಕರರ ಲಕ್ಷ್ಯವಿರುವುದು ಅದುವರೆಗೂ ಇದ್ದ ‘ಮೂಲ ಶಾಕ್ತ ಸ್ವರೂಪದ ಅಳಿದು ಅದರ ಬದಲು ತುಸು ಬೆರತು’ ಕೊಂಡಿದ್ದು ಬಗ್ಗೆ. ನವೋದಯದಲ್ಲಿ ಉಂಟಾದ ಭಾಷಾ ಸುಕುಮಾರತೆಯ ಮೂಲ ಇಲ್ಲಿದೆ! ಮೊಕಾಶಿ ಕೊಡುವ ಪರಿಕಲ್ಪನಾತ್ಮಕ ಹಂತದಲ್ಲಿಲ್ಲದಿದ್ದರೂ ಭಾಷಿಕ ಹದದಲ್ಲಿ ಬಂದ ಬದಲಾಣವೆ ಎಷ್ಟೆಂದರೆ ಇಂದು ನಾವು ಶಿಕ್ಷಿತರು ತಂತ್ರವೆಂದರೆ ನಾಚುವಷ್ಟು ಮುಂದೆ ಬಂದದ್ದರ ಸೂಚಕವಾಗಿದೆ. ಅವರು ಸೂಚಿಸುವಂತೆ ‘ಮಾತೆ’ ಪದದ ಬದಲು ‘ಮಾತೃಶಕ್ತಿ’ ‘ಕಾಮ’ದ ಬದಲು ‘ಪ್ರೇಮ’ ‘ತ್ರಿಪುರ ಸುಂದರಿ ತತ್ವ’ದ ಜಾಗದಲ್ಲಿ ‘ಸೌಂದರ್ಯ ತತ್ವ’ ‘ಸೃಷ್ಟಿ’ ಬದಲು ‘ನಿಸರ್ಗ’.

ಅಂದರೆ ರಾಷ್ರೀಯ ಆಂದೋಲನದ ಹಿನ್ನೆಲೆಯಲ್ಲಿ ತಾಯಿತತ್ವ ಆಳವಾಗಿ ಕೆಲಸ ಮಾಡಿದ್ದರೂ ಅದರ ಸಾಮಾಜಿಕ ತಾತ್ವಿಕ ನೆಲೆಗಳು ನಿರ್ಲಕ್ಷ್ಯಕ್ಕೆ ಒಳಗಾದವು.