ತಂತ್ರಸಾಧನೆ ಒಂದು ಹೊರನೋಟ

ತಂತ್ರಸಾಧನೆ ಪ್ರಪಂಚ ನಿಗೂಢ. ಸದಸ್ಯರಲ್ಲದವರಿಗೆ ಅಲ್ಲಿ ಪ್ರವೇಶವಿಲ್ಲ. ಆದರೆ ಬಂಗಾಳಿ ಸಾಹಿತಿ ಅಮರೇಶ್ ಬೋಸ್, ಪಶ್ಚಿಮ ಬಂಗಾಳದ ಬರ್ದ್ವಾನ್ ಜಿಲ್ಲೆಯ ಗಡಿ ಭಾಗದ ಹಳ್ಳಿಯೊಂದರಲ್ಲಿ ಕೌಲಮಾರ್ಗ (ಒಂದು ತಂತ್ರ ಪಂಥ)ದ ತಾಂತ್ರಿಕದ ಮೂಲಕ ಅವರಲ್ಲಿ ನಡೆಸುವ ರಹಸ್ಯವಾದ ‘ಚಕ್ರ’ಕ್ಕೆ ವೀಕ್ಷಕನಾಗಿ ಪ್ರವೇಶ ಗಿಟ್ಟಿಸಿದರು. ಆ ತಾಂತ್ರಿಕ ಮೊದಲಿಗೆ ಸಮರೇಶ್‌ರಿಗೆ ಹೇಳಿದ್ದು ‘ತೃಪ್ತಿಯ ಮೂಲಕ ಜ್ಞಾನಗಳಿಕೆಯೇ ತಂತ್ರಸಾಧನೆ ನಮ್ಮ ಬಯಕೆಗಳನ್ನು ತಣಿಸಿಕೊಳ್ಳುವ ಮೂಲಕ, ಪುರುಷ ಪ್ರಕೃತಿ ಶಕ್ತಿಗಳ ಐಕ್ಯತೆಯಿಂದ ಅರಿವು ಪಡೆಯಲಾಗುತ್ತದೆ. ನಾವು ಬಣ್ಣಿಸುವ ಈ ತೃಪ್ತಿಯನ್ನು ಲಂಪಟತ್ವ, ವಿಷಯ ಲಾಲಸೆ ಎಂದು ಹಲವರು ತಪ್ಪಾಗಿ ಭಾವಿಸುತ್ತಾರೆ. ಸಾಧನೆಯ ಮಾರ್ಗದಲ್ಲಿರದ ಜನರನ್ನು ನಾವು ಪ್ರಾಣಿ ಸ್ವಭಾವದವರೆಂದು ಬಗೆಯುತ್ತದೆ. ಆದ್ದರಿಂದಲೇ ನಮ್ಮ ಆಚರಣೆಗಳನ್ನು ಸಮಾಜದ ಇತರ ಜನರಿಂದ ಗೋಪ್ಯವಾಗಿಡುತ್ತೇವೆ’

ತಾಂತ್ರಿಕರು ಆಪ್ತರಾದವರನ್ನು ತುಂಬ ಪ್ರೀತಿ, ಗೌರವಗಳಿಂದ ನಡೆಸಿಕೊಳ್ಳುತ್ತಾರೆಂಬ ಅನುಭವ ಲೇಖಕರಿಗಾಗಿದ್ದು ೧೯೪೭ರ ನವೆಂಬರ್‌ನಲ್ಲಿ. ಪ್ರಣತೋಷಬಾಬಾ ಎಂಬ ತಾಂತ್ರಿಕ (ಹಿಂದೂ), ಅವನ ಅನುಯಾಯಿ ಭೈರವಿ ಎಂಬ ಮಹಿಳೆ ಮತ್ತು ದೀಕ್ಷಾ ವಿಧಿಗೆ ಕಾದಿದ್ದ ಕನ್ಯೆ ಈ ಮೂವರೊಡನೆ ಲೇಖಕರು ಹತ್ತಿರದವರಾದರು. ಪಂಚಮಕಾರ ಸಾಧನೆ (ಮದ್ಯ, ಮತ್ಸ್ಯ, ಮುದ್ರೆ, ಮಾಂಸ ಮತ್ತು ಮೈಥುನ ಮೂಲಕ ನಡೆಸುವ ಒಂದು ವಿಶಿಷ್ಟ ಸಾಧನೆ)ಯ ಕಟ್ಟ ಕಡೆಯ ಹಂತವನ್ನು ತಾಂತ್ರಿಕರು ವಿಶೇಷ ಸ್ಥಾನದಲ್ಲಿಟ್ಟು ಗೌರವಿಸುತ್ತಾರೆ. ಅವರ ಪ್ರಕಾರ ಮೈಥುನವೆಂದರೆ ‘ಶಿವನಂತಹ ಪುರುಷ ಸಾಧಕನೊಬ್ಬ ಶಿವನಂತಹ (ಶಕ್ತಿ) ಸಾಧಕಿಯೊಡನೆ ಬೆರೆಯುವುದು’

ತಾಂತ್ರಿಕ ವಿಧಿ ಪೂರೈಕೆಗಾಗಿ ಕೆಲವೊಮ್ಮೆ ಮೈಥುನಕ್ಕೆ ಮುನ್ನ ಸಂಬಂಧಪಟ್ಟ ಗಂಡು ಹೆಣ್ಣಿನ ನಡುವೆ ಒಂದು ರೀತಿಯ ವಿವಾಹದ ಆಚರಣೆಯೂ ನಡೆಯುತ್ತದೆ. ಪುರುಷ ತಾಂತ್ರಿಕರು ಸ್ತ್ರೀ ಸಂಗಾತಿಯನ್ನು ‘ಶಕ್ತಿ’ ಅಥವಾ ‘ಭೈರವಿ’ ಎಂದು ಕರೆಯುತ್ತಾರೆ.

ಮನುಷ್ಯನು ವಿಕಾಸಾವಸ್ಥೆಯಲ್ಲಿ ಏನೆಲ್ಲ ಸಾಧಿಸಿದ್ದರೂ ಸಂತಾನದ ವಿಷಯದಲ್ಲಿ ಸ್ತ್ರೀಯ ಪಾತ್ರ, ಮಹತ್ವ ಹಾಗೇ ಉಳಿದಿದೆ. ಹೀಗಾಗಿ ತಂತ್ರಸಾಧನೆ ಮತ್ತು ತಾಂತ್ರಿಕ ಆರಾಧನೆಯ ವಿಧಾನಗಳನ್ನು ಆಧುನಿಕ ಬುದ್ಧಿಜೀವಿಗಳು ಆದಿಮಾನವಲ್ಲಿ ಪ್ರಚಲಿತವಿದ್ದ ಸಂತಾನಶಕ್ತಿಗೆ (Fertility) ಸಂಬಂಧಪಟ್ಟ ಆಚರಣೆಯ ಮೂಲದವು ಎಂದು ತಿಳಿಯುತ್ತಾರೆ. ಆದರೆ ಲೇಖಕರ ಪ್ರಕಾರ ಇದು ಅಷ್ಟು ಸರಿಯಾದ ವ್ಯಾಖ್ಯಾನವಲ್ಲ. ಬದಲಿಗೆ ವಿಜ್ಞಾನವು ಮನುಷ್ಯನ ಜನ್ಮದ ಬಗ್ಗೆ ಎಷ್ಟೋ ರಹಸ್ಯಗಳನ್ನು ಒಡೆದಿದ್ದರೂ ಸಂತಾನ ಪ್ರಕ್ರಿಯೆಯಲ್ಲಿ ಹೆಣ್ಣಿನ ಪ್ರಾಮುಖ್ಯತೆ ಕುಂದಿಲ್ಲ. ಆದ್ದರಿಂದಲೇ ಸಹಜವಾಗಿ ಗಂಡು ಹೆಣ್ಣಿನ ಮಿಲನದ ವಿಷಯವು ತಂತ್ರಶಾಸ್ತ್ರದೊಡನೆ ಬೆಸೆದುಕೊಡಿರಬಹುದು.

ಲೇಖಕರು ಪ್ರಣತೋಷಬಾಬಾರಿಂದ ಪ್ರಾಣಾಮಾಮದ ಮೂಲಕ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸಬಹುದು. ಈ ಶಕ್ತಿ ಎಚ್ಚರಗೊಂಡಾಗ ಸುಷುಮ್ನ ಪ್ರದೇಶ ಸಾಧ್ಯವಾಗುತ್ತದೆ. ತಾಂತ್ರಿಕ ಪದ್ಧತಿಯಲ್ಲಿ ಜ್ಞಾನ ಸಾಧನೆಗೆ ಪ್ರಾಣಾಮಾಮ- ಕುಂಡಲಿನಿ ಜಾಗೃತಿಯೇ ಮಾರ್ಗ ಎಂಬುದನ್ನು ತಿಳಿದುಕೊಂಡರು. ಇದಲ್ಲದೆ ರಸ್ತೆ ಬದಿಯಲ್ಲಿ ಮಣ್ಣಿನಲ್ಲಿ ತಲೆ ಹುಗಿದು ಕೊಂಡು ಕೂತ ಸಾಧುಗಳು, ಶಿಶ್ನವನ್ನು ಸಾಧಾರಣ ಗಾತ್ರಕ್ಕಿಂತ ಹೆಚ್ಚಿಗೆ ಹಿಗ್ಗಿಸಬಲ್ಲವರು, ನಾಣ್ಯವನ್ನು ಶಿಶ್ನದ ಮೂಲಕ ಒಳಕ್ಕೆ ಸೆಳೆದುಕೊಂಡು ಮರಳಿ ಆಚೆಗೆ ಚಿಮ್ಮಿಸಬಲ್ಲಂಥ ಸಾಧುಗಳು ಇವರೆಲ್ಲಾ ಯೋಗ ಸಾಧನೆಯಲ್ಲಿ ಮುಂದುವರೆಯದೆ ಅರ್ಧಕ್ಕೆ ನಿಂತವರು. ಶರೀರ ಮುಖ್ಯ ಎಂದು ತಿಳಿದರೂ ಅದನ್ನು ಮುಂದಿನ ಸಾಧನೆಗೆ ಹೇಗೆ ಬಳಸಿಕೊಳ್ಳಬೇಕೆಂದು ತಿಳಿಯದವರು. ಇನ್ನೂ ಒಂದು ಕಾರಣವೆಂದರೆ ಪವಾಡ, ಹಣಗಳಿಕೆಯ ದಾರಿ ಹಿಡಿದ ಇಂಥ ಸಾಧುಗಳಿಗೆ ಸುಷುಮ್ನಾ ಹಂತ ದಾಟಿ ಮುಂದೆ ಹೋಗಲು ಸಾಧ್ಯವಾಗಿರುವುದಿಲ್ಲ. ‘ಧರ್ಮ ಸಾಧನೆಗೆ ಶರೀರವೇ ಮೂಲ’ ಎಂದು ಕಾಳಿದಾಸ ಹೇಳಿದ್ದಾನೆ. ಆದರೆ ಎಷ್ಟೋ ತಾಂತ್ರಿಕರು ಶರೀರವನ್ನು ಕೇವಲ ಇಂದ್ರಿಯ ಭೋಗಕ್ಕೆ ಬಳಸಿಕೊಂಡು ತಂತ್ರದ ಹೆಸರಿಗೆ ಮಸಿ ಬಳಿದಿದ್ದಾರೆ.

ತಂತ್ರದ ಪಂಚಮಕಾರಗಳನ್ನು ಯಾವಾಗಲೂ ಎಲ್ಲ ಪಂಥದಲ್ಲೂ ನೇರವಾಗಿ ಬಳಸುವುದಿಲ್ಲ. ಇವುಗಳ ಸಂಕೇತವಾಗಿ ಬದಲಿ ವಸ್ತುಗಳನ್ನು ಬಳಸಲಾಗುತ್ತದೆ. ಉದಹಾರಣೆಗೆ, ಪುರುಷ ಮತ್ತು ಸ್ತ್ರೀಯ ಸಂಭೋಗವನ್ನು ಗಂಡು ಪುಷ್ಪವಾದ ರಕ್ತ ಕರಾಜಿ ಮತ್ತು ಹೆಣ್ಣು ಪುಷ್ಪವಾದ ಅಪರಾಜಿತದ ಮೂಲಕ ಪ್ರತಿನಿಧಿಸಲಾಗುತ್ತದೆ. ಗಂಧವು ವೀರ್ಯದ ಸಂಕೇತ, ಕುಂಕಮವು ಸ್ತ್ರೀಯ ಯೋನಿ ದ್ರವದ ಸಂಕೇತ. ಸಾಮಾನ್ಯವಾಗಿ ಹಿಂದೂ ಮನೆಗಳಲ್ಲಿ ನಡೆಸುವ ಎಷ್ಟೋ ಪೂಜೆಗಳಲ್ಲಿ ಈ ಸಂಕೇತಗಳ ಅರಿವಿಲ್ಲದೆ ತಂತ್ರದ ಪೂಜಾ ಮಾರ್ಗ ಬಳಕೆಯಲ್ಲಿರುವುದನ್ನು ನೋಡಿದರೆ ಈ ಪಂಥದ ದಟ್ಟ ಪ್ರಭಾವ ತಿಳಿಯುತ್ತದೆ.

ಬಂಗಾಳದ ಎಷ್ಟೋ ಹಳ್ಳಿಗಳಲ್ಲಿ ಮೇಲೆ ಶೈವ, ಒಳಗೆ ಶಾಕ್ತ ಎಂಬ ಆಚರಣೆಗಳಿಗೆ, ಉದಾಹರಣೆಗೆ, ಸಂತಾಲ್ ಪರಗಣದ ಹಳ್ಳಿಗಳಲ್ಲಿ ಸಾಕಷ್ಟು ಶಿವಾಲಯಗಳೊಂದಿಗೆ ದೇವಿಯ ಚಿಕ್ಕ ಗುಡಿಯಿದೆ. ಅಲ್ಲಿ ರಾತ್ರಿಯ ವೇಳೆಯಲ್ಲಿ ಅನೇಕ ಚಪ್ಪರಗಳನ್ನು ನಿರ್ಮಿಸಿ, ಪ್ರತಿಯೊಂದು ಪೂಜಾ ಚಪ್ಪರದಲ್ಲೂ ದೇವಿಗೆ ಬಲಿ ಕೊಡಲು ಒಂದೊಂದು ಆಡನ್ನು ತಂದಿದ್ದರು. ರಾತ್ರಿ ಏರಿ ಮಧ್ಯರಾತ್ರಿಯಾದಾಗ ಬ್ರಾಹ್ಮಣ ಅಬ್ರಾಹ್ಮಣ ಭೇದವಿಲ್ಲದೆ ಬಲ್ಲರೂ ಮದ್ಯ ಸೇವಿಸಿದರು. ಪೂಜಾ ಮಂತ್ರದ ಸ್ವರ, ತಮ್ಮಟೆಗಳ ಸುದ್ದಿನೊಂದಿಗೆ ಸಾಯಲು ಸಿದ್ಧವಾದ ಪ್ರಾಣಿಗಳ ಆರ್ತನಾದ ಬೆರೆತು ಹೋಗಿತ್ತು. ಬೆಳಗಿನ ಜಾವದಲ್ಲಿ ಕನಿಷ್ಠ ಪಕ್ಷ ಆ ಹಳ್ಳಿಯಲ್ಲಿ ಅಂದು ೫೦೦ ಆಡುಗಳನ್ನು ವಿವಿಧ ಚಪ್ಪರಗಳಲ್ಲಿದ್ದ ವಿವಿಧ ಕಾಳಿಯ ವಿಗ್ರಹದ ಎದುರು ಬಲಿ ಕೊಡಲಾಯಿತು. ಸಮರೇಶ ಬಸು ವಿವರಣೆ ನೋಡಿ: ‘ಸುತ್ತೆಲ್ಲ ರಕ್ತದ ಹೊಳೆಯೇ ಹರಿಯಿತು. ಜನರು ಕಡಿದು ಬಿದ್ದ ರುಂಡವನ್ನೆತ್ತಿಕೊಂಡು ಚೆಂಡಾಟ ಆಡಿದರಲ್ಲದೆ, ತಮ್ಮ ಹಣೆಗಳಿಗೆ ಅವುಗಳ ರಕ್ತವನ್ನೇ ಸಿಂಧೂರವಾಗಿ ಬಳಿದುಕೊಂಡರು’ ಇಡೀ ದಿನದ ಈ ಉನ್ಮಾದದ ನಂತರ ಪೂಜೆ ಸೂರ‍್ಯಾಸ್ತದ ಬಳಿಕ ಕಾಳಿಯ ಎಲ್ಲಾ ಮೂರ್ತಿಗಳನ್ನು ನದಿಯಲ್ಲಿ ವಿಸರ್ಜಿಸಲು (ಕರ್ನಾಟಕದಲ್ಲಿ ನದಿ, ಕೆರೆ, ಬಾವಿಗಳಲ್ಲಿ ಭಾದ್ರಪದ ಮಾಸದಲ್ಲಿ ಗಣೇಶನ ವಿಗ್ರಹವನ್ನು ವಿಸರ್ಜಿಸುವಂತೆ) ತೆಗೆದುಕೊಂಡು ಹೋಗಲಾಯಿತು. ಡೋಲು, ತಮ್ಮಟೆ ನಾದಕ್ಕೆ ಜನ ಮತ್ತಿನಿಂದ ನರ್ತಿಸಿದರು. ಕಾಳಿಯ ವಿಸರ್ಜನೆಯ ನಂತರ ಸಂತಾಲ ಗಂಡು ಹೆಣ್ಣುಗಳು ತಮ್ಮೊಳಗೆ ಪರಸ್ಪರ ನರ್ತಿಸುತ್ತಿದ್ದವರು ನಿಧಾನವಾಗಿ ಅವರವರಲ್ಲೇ ಪ್ರಣಮದಲ್ಲಿ ತೊಡಗಿದರು. ‘ನೇರವಾಗಿ ಇಡೀ ಸಮುದಾಯ ಕಸಿವಿಸಿ ಸಂಕೋಚಗಳಿಲ್ಲದೆ ಪ್ರಣಯಾರಾಧನೆ ಮಾಡುತ್ತಿದ್ದ ನೋಟವದು’

* * *

ಈಗ ಕಾಮಾಕ್ಯ ಪ್ರದೇಶದಲ್ಲಿ ನಡೆಯುವ ‘ಚಕ್ರ’ದ ಕೆಲವು ಹಂತಗಳನ್ನು ಸ್ಥೂಲವಾಗಿ ನೋಡಬಹುದು :

೧. ಸಾಧಕರ ಗುಂಪು ದೇವಾಲಯದಲ್ಲಿ ಸೇರುತ್ತದೆ. ಜನರು ತಂದಿರುವ ಆಡುಗಳನ್ನು ದೇವಿಗೆ ಬಲಿ ಕೊಡಲಾಗುತ್ತದೆ.

೨. ಮಾಂಸದ ಆಡುಗೆಯನ್ನು ತಯಾರಿಸಲಾಗುತ್ತದೆ.

೩. ಸಾಧಕರಾದ ಗಂಡು ಹೆಣ್ಣುಗಳು ಶೈವ ಪದ್ಧತಿಯಲ್ಲಿ ವಿವಾಹವಾಗುತ್ತಾರೆ.

೪. ಯಂತ್ರಗಳ ರಚನೆಗೆ, ವಿವಿಧ ಆಕೃತಿಗಳನ್ನು ಕಳಶದ ಮೇಲೆ ಬರೆಯುವುದು ನಡೆಯುತ್ತದೆ.

೫. ಬೇಯಿಸಿದ ಮಾಂಸ, ಮೀನು, ಅನ್ನ, ಹಣ್ಣುಗಳ ಅರ್ಪಣೆ ನಡೆಯುತ್ತದೆ.

೬. ನೈವೇದ್ಯದ ನಂತರ ಓದಿನಲ್ಲಿ ಮದ್ಯ ಸೇವನೆ. ತಯಾರಿಸಿದ ಆಹಾರವನ್ನು ಪ್ರಸಾದವಾಗಿ ಸ್ವೀಕರಿಸುತ್ತಾ, ಹೆಣ್ಣು ಗಂಡು ಪರಸ್ಪರರನ್ನು ‘ತಂದೆ’, ‘ತಾಯಿ’ ಎಂದು ಸಂಬೋಧಿಸುತ್ತಾ, ಆಹಾರವನ್ನು ಪರಸ್ಪರ ತಿನ್ನಿಸುತ್ತಾರೆ.

೭. ಹಸ್ತ ಮುದ್ರೆಗಳ ಬಳಕೆ, ಮಂತ್ರಗಳ ಪಠಣ, ಗಂಧದಲ್ಲಿ ಅದ್ದಿದ ಹೂಗಳನ್ನು ಹಾಸಿನ ಮೇಲೆ ಹಾಕುವುದು.

೮. ಗಂಡು, ಹೆಣ್ಣು ಇಬ್ಬರೂ ಬೆತ್ತಲಾದ ನಂತರ, ಗಂಡು ಹೆಣ್ಣಿನ ದೇಹಕ್ಕೆ ಗಂಧ ಲೇಪಿಸಿ, ಕೊರಳಿಗೆ ಮಾಲೆ ಹಾಕಿ, ಹಣೆಯ ಮೇಲೆ ತ್ರಿಕೋಣ ಬರೆಯುವುದು.

೯. ಗಂಡು ಹೆಣ್ಣಿನ ಯೋನಿಯನ್ನು ಪ್ರವೇಶಿಸುವ ಮೊದಲು ಆಕೆಗೆ ವೀಳೆಯ ನೀಡಿ ‘ತಾಯಿ’! ಜ್ಞಾನ ಸಾಧನೆಗೆ ಅನುಮತಿ ಕೊಡು’ ಎಂದು ಕೇಳಿದಾಗ ಆಕೆ ಪುರುಷನನ್ನು ಮುಟ್ಟುವುದರ ಮೂಲಕ ಸಮ್ಮತಿಸಿದ ಮೇಲೆ ದೇಹದಲ್ಲಿ ಸುಪ್ತವಾಗಿರುವ ಆರು ಚಕ್ರಗಳು ಜಾಗೃತವಾಗುವಂತೆ ಒಂದೊಂದು ಚಕ್ರದ ಸ್ಥಾನವನ್ನು ಮುಟ್ಟಿ ಸಂಭೋಗ ಕ್ರಿಯೆ ಮುಂದುವರೆಸುವುದು.

೧೦. ಸಹಸ್ರಾರ (ನೆತ್ತಿಯ ಭಾಗ)ವನ್ನು ಅಂತಿಮವಾಗಿ ಮುಟ್ಟಿ ನಂತರದ ಸಂಭೋಗದಲ್ಲಿ ವೀರ‍್ಯ ಸ್ಖಲನ ಮಾಡುವಿಕೆ, ಇದು ಮಹಾಶಕ್ತಿಯು ಶಿವನೊಡನೆ ಸೇರುವ ಆನಂದದ ಹಂತ. ಇದೇ ‘ಚಕ್ರ’.

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಾದಂಬರಿ ಪ್ರಕಾರದಲ್ಲಿ ತಂತ್ರದ ಲೇಪವಿರುವ ಕೆಲವು ಕಾದಂಬರಿಗಳಿದ್ದು, ಅವುಗಳಿಗೆ ತಂತ್ರದ ರೋಚಕ ಹಿನ್ನೆಲೆ ಕಲ್ಪಿಸಲಾಗಿದೆ. ಇಂದಿರಾತನಯರ ‘ಚಕ್ರಾಯಣ’, ಸತ್ಯಕಾಮರ ‘ಪಂಚಮಗಳ ನಡುವೆ’, ತ.ರಾ.ಸು. ಅವರ ‘ಚಕ್ರೇಶ್ವರಿ’, ಇದರಲ್ಲಿ ತಾಂತ್ರಿಕ ಪಂಥಗಳ ಸ್ಥೂಲ ಚಿತ್ರಣವಿದೆ. ಸುರೇಶ್ ಸೋಮಾಪುರ ಅವರ ಗುಜರಾತಿ ಮೂಲದ ‘ಅಘೋರಿಗಳ ನಡುವೆ’ ಕಾದಂಬರಿಯಲ್ಲಿ ಅಘೋರಿಗಳ ಪ್ರಪಂಚದ ಸ್ಥೂಲ ಚಿತ್ರಣವಿದೆ. ಭೈರಪ್ಪನವರ ‘ಸಾರ್ಥ’ದಲ್ಲಿ ಬೌದ್ಧ, ಮೀಮಾಂಸಕ, ಇಸ್ಲಾಂ, ವೈದಿಕ ಧಾರೆಗಳೊಂದಿಗೆ ತಾಂತ್ರಿಕ ಮಾರ್ಗದ ಚಿತ್ರಣವಿದೆ. ಆದರೂ ಕನ್ನಡದಲ್ಲಿ ತಂತ್ರಗಳ ಹೃದಯವನ್ನು ಅರಿತು ಬರೆದಿರುವ ಕಾದಂಬರಿ ಇಲ್ಲವೆಂದೇ ಹೇಳಬೇಕು.

ಹಿಂದೂ, ಬೌದ್ಧ ತಂತ್ರಗಳು

ಹಿಂದೂ ಸಂಪ್ರದಾಯದ ಪ್ರಕಾರ ನಟವರ ನಾಗರ ನಾದ ಯೋಗಿ, ಶಿವನು ಶಕ್ತಿಯೊಡನೆ ನಡೆಸಿದ ಸಂವಾದಗಳೇ ತಂತ್ರಗಳು. ಇನ್ನು ಆಕಸ್ಮಾತ್ತಾಗಿ ಕೇಳಿಸಿಕೊಂಡ ಯೋಗಿಸಿದ್ದರ ಶಿಷ್ಯರು ತಂತ್ರಗಳನ್ನು ಬರೆದಿಟ್ಟಿದ್ದಾರೆ ಎಂಬ ನಂಬಿಕೆಯಿದೆ. ಮುಖ್ಯವಾಗಿ ಮೌಖಿಕ ಪರಂಪರೆಯಲ್ಲಿರುವ ತಂತ್ರವು ಸಾಹಿತ್ಯದಾಚೆಗೆ ಕಲೆ, ಶಿಲ್ಪ, ಚಿತ್ರ, ಸಂಗೀತ, ನೃತ್ಯದ ಸಂಕೇತಗಳ ಮೂಲಕ ಉಳಿದ ಬಂದಿದೆ.

ಲಿಖಿತ ತಂತ್ರ ರೂಪಕ್ಕೆ ಬಂದರೆ ವೈದಿಕ ಧಾರೆಯಲ್ಲಿ ಅವು ವೇದ, ಉಪನಿಷತ್ತಿನ ನಂತರದವು. ದಕ್ಷಿಣ ಭಾರತದಲ್ಲಿಯೂ ಸಿದ್ಧರ ಸಂಪ್ರದಾಯದಲ್ಲಿ ಶಿವ-ಶಕ್ತಿಯರ ಪರಂಪರೆ ಮುಂದುವರಿದಿದೆ. ಹಿಂದೂಗಳ ವೈದ್ಯ, ರಸವಿದ್ಯೆ, ಜ್ಯೋತಿಷ ಗ್ರಂಥಗಳಲ್ಲಿ ಜೀವನದ ಅಂಗಗಳಾದ ಆರೋಗ್ಯ, ಲೋಹಶಾಸ್ತ್ರ, ಅಂಕೆಗಳ ರಹಸ್ಯಗಳು ಇರುವುದರಿಂದ ಅವುಗಳಿಗೂ ತಂತ್ರ ಎಂದು ಹೆಸರು.

ಬೌದ್ದ ರಹಸ್ಯ ಸಂಪ್ರದಾಯದ ಪ್ರಕಾರ ಗೌತಮ ಬುದ್ಧನೇ ಶಿಷ್ಯರಿಗೆ ದೀಕ್ಷೆ ಮತ್ತು ಉಪದೇಶದ ಮೂಲಕ ರಹಸ್ಯ ತತ್ವಗಳನ್ನು ತಿಳಿಸಿಕೊಟ್ಟ. ಮಹಾಯಾನ ಬೌದ್ಧ ಧಾರೆಯಲ್ಲಿ ಸೂತ್ರಗಳ ಅಧ್ಯಯನದ ನಂತರ ತಂತ್ರಗಳ ಅಧ್ಯಯನ ನಡೆಯುತ್ತದೆ.

ಕೆಲವು ಹಿಂದೂ (ವೈದಿಕ) ತಂತ್ರಗಳು

ವೇದ, ಉಪನಿಷತ್ತುಗಳ ನಂತರದ ಆಗಮ-ಪುರಾಣ ಯುಗದಲ್ಲಿ ಅನೇಕ ವೈದಿಕ ತಂತ್ರಗಳು ಬಂದವು. ಮಹಾವಿದ್ಯಾ ತಂತ್ರ (ಕಾಲ : ಕ್ರಿ.ಶ. ೪ನೇ ಶತಮಾನಕ್ಕಿಂತ ಹಿಂದೆ); ಲಕ್ಷ್ಮೀತಂತ್ರ (ಸಂಗ್ರಹ : ಕ್ರಿ.ಶ. ೯-೧೦ನೇ ಶತಮಾನ). ಕುಲಾರ್ಣವ ತಂತ್ರ (ಕ್ರಿ.ಶ.೧೦೦೦) ಕಾಲಿವಿಲಾಸ ತಂತ್ರ (ಕಾಲ ತಿಳಿದಿಲ್ಲ); ಕಾಲಿಕಾ ಪುರಾಣ ತಂತ್ರ (ಸಂಗ್ರಹ : ಕ್ರಿ.ಶ. ೧೪ನೇ ಶತಮಾನ); ಕಾಮರತ್ನ ತಂತ್ರ (ಕಾಲ ತಿಳಿದಿಲ್ಲ); ಮಹಾನಿರ್ವಾಣ ತಂತ್ರ (ಸುಧಾರಣವಾದಿ ದೃಷ್ಟಿಯುಳ್ಳ ತೀರಾ ಇತ್ತೀಚಿನ ತಂತ್ರ ಗ್ರಂಥ).

ಮಧ್ಯಕಾಲದಲ್ಲಿ, ವಿಶೇಷವಾಗಿ ಕ್ರಿ.ಶ. ೧೦ ರಿಂದ ೧೭ನೇ ಶತಮಾನದ ನಡುವೆ ಅನೇಕ ತಂತ್ರಗಳು ಉದಯಿಸಿದವು. ಭಿನ್ನಮಸ್ತ ತಂತ್ರ, ಗಣಪತಿ ತಂತ್ರ, ಗಂಧರ್ವ ತಂತ್ರ, ಗುಪ್ತ ಸಾಧನ ತಂತ್ರ, ಜ್ಞಾನಾರ್ಣವ ತಂತ್ರ, ಕಾಕಚಂಡೀಶ್ವರ ಕಲ್ಪತಂತ್ರ, ಕಾಳಿತಂತ್ರ, ಕಾಮಾಖ್ಯ ತಂತ್ರ, ಕೌಲಾವಳೀ ತಂತ್ರ, ಕುಲಚೂಡಾಮಣಿ ತಂತ್ರ, ಕುಬ್ಜಿಕಾ ತಂತ್ರ, ಕುಂಡಲಿನೀ ತಂತ್ರ, ಮಾಲಿನ ವಿಜಯೋತ್ತರ ತಂತ್ರ, ಮಾತೃಕಾಭೇದ ತಂತ್ರ, ಮಾಯಾ ತಂತ್ರ, ನೇತ್ರ ತಂತ್ರ, ನೀಲ ತಂತ್ರ, ನಿರುತ್ತರ ತಂತ್ರ, ನಿರ್ವಾಣ ತಂತ್ರ, ಸರಸ್ವತಿ ತಂತ್ರ, ಸ್ವಚ್ಫಂದ ತಂತ್ರ (ಪ್ರಾಚೀನ ಶೈವ ತಂತ್ರ) ತೋಡಲ ತಂತ್ರ, ಯೋಗಿಣೀ ತಂತ್ರ, ಯೋನಿ ತಂತ್ರ ಇವು ಈ ಕಾಲಘಟ್ಟದ ಕೆಲವು ತಂತ್ರ ಗ್ರಂಥಗಳು ಪ್ರಕಟವಾಗಿವೆ. ಆದರೆ ಬ್ರಿಟಿಷ್ ಶಿಕ್ಷಣದ ದುಷ್ಟರಿಣಾಮಗಳನ್ನು ಇನ್ನೂ ನಾವು ಅನುಭವಿಸುತ್ತಿರುವುದರಿಂದ ಅವು ವಿದ್ಯಾವಂತ ಶಿಕ್ಷಿತರನ್ನು ಆಕರ್ಷಿಸುತ್ತಿಲ್ಲ. ಅವುಗಳ ಸ್ವಾರಸ್ಯವನ್ನು ಓದಿ ಚರ್ಚಿಸುವುದು ಕಾಣುತ್ತಿಲ್ಲ.

ಕೆಲವು ಬೌದ್ಧ ತಂತ್ರಗಳು

ತಂತ್ರಗಳ ತಾಯಿ ಎನಿಸಿದ ಗುಹ್ಯಾ ಸಮಾಜ ತಂತ್ರ (ಕಾಲ : ಕ್ರಿ.ಶ. ೪ನೇ ಶತಮಾನ), ಮಂಜುಶ್ರೀ ಮೂಲತಂತ್ರ, ಚಂಡಮಹಾರೋಶನ ತಂತ್ರ (ಕಾಲ : ಕ್ರಿ.ಶ. ೭ನೇ ಶತಮಾನ), ಹೇವರಾಜ ತಂತ್ರ, (ಕಾಲ : ಕ್ರಿ.ಶ. ೭-೮ನೇ ಶತಮಾನ), ಚಕ್ರ ಸಂಭರ ತಂತ್ರ, ಮಹಾಕಾಲ ತಂತ್ರ, ಅಭಿಧಾನೋತ್ತರ ತಂತ್ರ, ಸಂವರೋದಯ ತಂತ್ರ (ಕಾಲ : ಕ್ರಿ.ಶ. ೧೦ನೇ ಶತಮಾನ) ಇವು ಸಂಸ್ಕೃತದ ಬೌದ್ಧ ತಂತ್ರಗಳು. ಟಿಬೆಟ್ ಭಾಷೆಯಲ್ಲಿ ಎಷ್ಟೋ ಮಹತ್ವದ ಬೌದ್ಧ ತಂತ್ರಗಳಿವೆ. ಕುರುಕುಲ್ಲ ತಂತ್ರ, ಮಹಾವೈರೋಚನ ತಂತ್ರ, ವಜ್ರ ಪಾತಾಳ ತಂತ್ರ, ವಜ್ರ ಯೋಗಿನೀ ತಂತ್ರ, ಯೋಗಿನೀ ತಂತ್ರ – ಇವು ಕೆಲವು ಪ್ರಮುಖ ಬೌದ್ಧ ತಂತ್ರ ಗ್ರಂಥಗಳು. ಟಿಬೆಟ್‌ನಲ್ಲಿ ಪವಿತ್ರವಾದ ಧಾರ್ಮಿಕ ಗ್ರಂಥಗಳ ದೊಡ್ಡ ಭಂಡಾರವಿದ್ದು ಪವಿತ್ರ ಗ್ರಂಥ ರಾಶಿಯನ್ನು ‘ಕಂಜುರ್’ ಮತ್ತು ‘ತೆಂಜುರ್’ ಎಂದು ಕರೆಯಲಾಗಿದೆ. ೨೨ ತಂತ್ರ ಸಂಪುಟಗಳಿದ್ದು ಇದರ ಮೇಲೆ ೮೬ ಸಂಪುಟಗಳ ವ್ಯಾಖ್ಯಾನ ರಾಶಿಯಿದೆ.

ತಂತ್ರ ಗ್ರಂಥಗಳಲ್ಲಿ ಮೌಖಿಕ, ಲಿಖಿತ ಇವೆರಡರ ದೊಡ್ಡ ವಾಙ್ಮಯವಿದ್ದು, ಸಮಾಜಶಾಸ್ತ್ರ, ಇತಿಹಾಸ, ಮತಧರ್ಮಶಾಸ್ತ್ರ, (Theology) ಸಾಹಿತ್ಯ, ತತ್ವಶಾಸ್ತ್ರದ ಸಂಶೋಧಕರಿಗೆ ಇವು ಅಮೂಲ್ಯ ಆಕರಗಳು. ತಂತ್ರಗಳ ಅಧ್ಯಯನದಿಂದ ಭಾರತೀಯ ಸಂಸ್ಕೃತಿಯ ಭಾಷೆ, ಸಾಹಿತ್ಯ ಮತ್ತು ನಿತ್ಯ ಜೀವನದ ಅಪಾರ ಒಳನೋಟಗಳು ಹೊರಗೆ ಬರಬಲ್ಲವು. ಇದುವರೆಗೂ ಪ್ರತ್ಯೇಕ ಶಾಸ್ತ್ರಗಳಾಗಿರುವ ಕಾವ್ಯಮೀಮಾಂಸೆ ಮತ್ತು ತಂತ್ರಶಾಸ್ತ್ರದ ಎಷ್ಟೋ ಪರಿಕಲ್ಪನೆಗಳ ತೌಲನಿಕ ಅಧ್ಯಯನದಿಂದ ಅಭಿನವಗುಪ್ತ ಮೊದಲಾದವರ ಪರಿಕಲ್ಪನೆಗಳ ಸೂಕ್ಷ್ಮ ಹಿನ್ನೆಲೆ ತಿಳಿಯುತ್ತದೆ.

ತಂತ್ರಗಳ ತತ್ವ

ಮೊದಲೇ ಹೇಳಿದಂತೆ ತಂತ್ರಗಳ ಪ್ರಪಂಚ ದೊಡ್ಡದು. ಅದನ್ನು ಶಾಸ್ತ್ರ, ಗ್ರಂಥ ಅಧ್ಯಯನ, ವಿಚಾರ ವಿನಿಯಮದ ಮೂಲಕ ಹೇಗೋ ಹಾಗೆ ಸ್ಥಳಕಾರ‍್ಯ, ಮಾನವಶಾಸ್ತ್ರ, ಜಾನಪದಗಳ ದೃಷ್ಟಿಯಿಂದಲೂ ನೋಡುವುದು ಅನಿವಾರ‍್ಯ, ಅಪೇಕ್ಷಣಿಯ. ತಂತ್ರದ ಎಷ್ಟೋ ಪರಿಕಲ್ಪನೆಗಳು ವೇದಾಂತ, ಯೋಗ, ನಾಥಪಂಥದ ಚಿಂತನೆಗಳಲ್ಲಿ ಸೇರಿಕೊಂಡಿವೆ. ಇದಕ್ಕೆ ಒಂದು ಉದಾಹರಣೆಯನ್ನು ನೋಡಬಹುದು. ಆದಿಶಕ್ತಿಯೆಂದರೆ ವೇದಾಂತವು ಹೇಳುವ ತುರೀಯ ಸ್ಥಿತಿಯ ಸಂವಾದಿ ಎಂದು ಚಿಂತಕ ಕೆ. ಗುರುದತ್ತ ಹೇಳುತ್ತಾರೆ. ಈ ಸ್ಥಿತಿಯಲ್ಲಿ ಸುಷುಪ್ತಿ (Deep Sleep) ಸ್ವಪ್ನ (Dream) ಮತ್ತು ಜಾಗೃತ (Waking) ಸ್ಥಿತಿಗಳು ಸೇರುತ್ತವೆ. ಈ ಅವಸ್ಥಾತ್ರಯಗಳು ಅದೇ ಕ್ರಮದಲ್ಲಿ ಕಾಳಿ, ದುರ್ಗಾ ಮತ್ತು ಸರಸ್ವತಿಯರ ಸಂಕೇತ. ಹಾಗೆಯೇ ತಂತ್ರ ಮತ್ತು ದೇವೀ ಪುರಾಣಗಳ ಪ್ರಕಾರ ಯೋಗ ನಿದ್ರಾ ಮತ್ತು ಕಾಳರಾತ್ರಿಗೆ ಕಾಳಿ ಸಂಕೇತ. ಎಲ್ಲಾ ದೇವತೆಗಳ ಶಕ್ತಿಯ ತೇಜಸ್ಸಿನ ಸಮಷ್ಟಿಯೇ ದುರ್ಗಾ ಜಾಗೃತಿ ಮತ್ತು ಬ್ರಹ್ಮ ಸೃಷ್ಟಿಯ ಸಾಕ್ಷಿಯೇ ಸರಸ್ವತಿ.

ಯೋಗವೆಂದರೆ ಕೇವಲ ಆಸನ, ಪ್ರಾಣಾಯಾಮಗಳಲ್ಲ. ಅದೊಂದು ಜೀವನಶೈಲಿ, ಹಾಗೆಯೇ ತಂತ್ರವು ಯೋಗದ ಹಲವಾರು ಆಯಾಮಗಳನ್ನು ಒಳಗೊಂಡಿದೆ. ‘ಯೋಗ’ ಎಂದರೆ ಕೂಡುವಿಕೆ ಎಂಬ ಮುಖ್ಯಾರ್ಥವಿದೆ. ಇದು ಸೃಷ್ಟಿಯಲ್ಲಿನ ಸ್ತ್ರೀ ಪುರುಷ ತತ್ವಗಳ ಮಿಲನವೂ ಹೌದು. ಶಿವ (ಪುರುಷ) ಮತ್ತು ಶಕ್ತಿ (ಸ್ತ್ರೀ) ಎರಡೂ ಒಂದೇ ಆಸ್ತಿತ್ವದ ಎರಡು ಮುಖಗಳು. ತಂತ್ರಶಾಸ್ತ್ರ ಗ್ರಂಥಗಳಲ್ಲಿ ಶಿವನು- ತಾನು ಮತ್ತು ಪಾರ್ವತಿ ಬೇರೆ ಬೇರೆಯಲ್ಲ ಎಂದು ಹೇಳುತ್ತಾನೆ. ನಾಥಪಂಥದ ಮುಖ್ಯ ಪಠ್ಯವಾದ ‘ಸಿದ್ಧಸಿದ್ಧಾಂತ ಪದ್ಧತಿ’ ಯಲ್ಲಿ ಶಿವ ಮತ್ತು ಶಕ್ತಿಯರೆಂದರೆ ಚಂದ್ರ ಮತ್ತು ಚಂದ್ರನ ನೆರಳು ಎರಡೂ ಒಂದನ್ನೊಂದು ಹಿಂಬಾಲಿಸುವಂತೆ ಎಂದು ಹೇಳಲಾಗಿದೆ. ‘ತೋಡಲ ತಂತ್ರ’ದಲ್ಲಿ ಶಿವ ಶಕ್ರಿಯರ ತತ್ತ್ವವನ್ನು ಇನ್ನಷ್ಟು ಒಡೆದು ಹೇಳಿದೆ. ಶಕ್ತಿಯಿಲ್ಲದಿದ್ದರೆ ಶಿವ ಏನನ್ನೂ ಮಾಡಲಾರ, ಶಕ್ತಿಯಿಲ್ಲದ ಶಿವ ಶವ (Dead Body) ಎಂದು ಪರಿಗಣಿಸಲಾಗಿದೆ. ಜೈನತತ್ತ್ವಶಾಸ್ತ್ರದಲ್ಲಿ ದ್ರವ್ಯ (Reality) ಮತ್ತು ಗುಣಶಕ್ತಿ (Quality) ಎರಡೂ ಒಂದರಿಂದೊಂದು ಭಿನ್ನವಲ್ಲ. ಉದಾ : ಚಿನ್ನ ಮತ್ತು ಚಿನ್ನದ ಬಣ್ಣ ಎರಡೂ ಬೇರೆಯಲ್ಲ. ಈಗ ತಂತ್ರಶಾಸ್ತ್ರದ ಕೆಲವು ತಾತ್ವಿಕ ಅಂಶಗಳನ್ನಷ್ಟೆ ನೋಡೋಣ.

ವೇದಗಳನ್ನು ‘ವೇದ’ ಎಂದು ಕರೆಯುವಂತೆ ತಂತ್ರಗಳನ್ನು ‘ತಂತ್ರ’ ಎಂದು ಕರೆಯಲಾಗಿದೆ. ಆದರೆ ತಂತ್ರದ ಪ್ರಪಂಚ ವಿಸ್ತಾರ, ವೈವಿಧ್ಯಮಯ ಮತ್ತು ಎಲ್ಲಾ ಪಂಥಗಳ ತಾತ್ತ್ವಿಕತೆಯಲ್ಲೂ ಸರ್ವಾಂಗೀಣ ಸಾಮರಸ್ಯ ಸಾಧ್ಯವಿಲ್ಲವಾದ್ದರಿಂದ ಅದನ್ನು ‘ತಂತ್ರಗಳು’ ಎಂದು ಕರೆಯುವುದೇ ಸರಿ. ಭಾರತೀಯ ದರ್ಶನಗಳ ಕೊನೆಯ ಗುರಿ ಮೋಕ್ಷ, ನಿರ್ವಾಣ, ಅಲ್ಲಿಗೆ ಸಾಧಕರ ಜೀವನದ ಕಡೆಯ ನೆಲೆ, ಮೋಕ್ಷ. ಇದನ್ನು ತಾಂತ್ರಿಕ ಪರಿಭಾಷೆಯಲ್ಲಿ ‘ಪೂರ್ಣತಾಖ್ಯಾತಿ’ ಎಂದು ಕರೆಯಲಾಗಿದೆ. ಜೀವವು ತಾನು ಶಿವ ಎಂದು ಅರಿಯುವುದು, ಬಾಳುವುದೇ ಈ ತಾಂತ್ರಿಕ ಮೋಕ್ಷದ ಸ್ವರೂಪ. ಜೀವದ ಮೇಲ್ಮುಖದ ಪ್ರಯಾಣದ, ಆಧ್ಯಾತ್ಮಿಕ ಶಿಖರಗಾಮಿ ಯಾತ್ರೆಯ ಭಾಷಿಕ ಸ್ವರೂಪವೇ ತಂತ್ರದ ಒಂದು ಹಂತದ ತಾತ್ವಿಕತೆ. ಒಂದು ಹಂತ ಯಾಕೆಂದರೆ ಅನುಭವವು ಎಂದಿಗೂ ಭಾಷೆಯಲ್ಲಿ ಸಂಪೂರ್ಣವಾಗಿ ಪ್ರಕಟವಾಗುವುದು ಸಾಧ್ಯವೇ? ಜೀವಕ್ಕೆ ಹಲವು ಅಡಚಣೆ, ಹಲವಾರು ಭ್ರಮೆಗಳು. ಜೀವಕ್ಕಿರುವ ಮಿತಿ-ಗಡಿಗಳನ್ನು ತಂತ್ರ ಮುಖ್ಯವಾಗಿ ಐದೆಂದು ಕರೆದಿದೆ. ಅದಕ್ಕೆ ಕಂಚುಕ ಎಂದು ಹೆಸರು. ಯಾವುದು ಮನುಷ್ಯನ ಅಥವಾ ಜೀವಿಗಳನ್ನು ಅದುಮಿಡುತ್ತದೆಯೋ, ತಡೆಯೊಡ್ಡುತ್ತದೆಯೋ ಅವೇ ಕಂಚುಕಗಳು. ಮನುಷ್ಯನು ತನ್ನ ಇತಿಮಿತಿಗಳನ್ನು ಅರಿತು ಅದನ್ನು ದಾಟುವುದೇ ತಂತ್ರ ಮಾರ್ಗ. ಹಾಗಾಗಿ ತಂತ್ರ ಸಾಧನೆಗೆ ಗುಂಡಿಗೆ ಬೇಕು. ತಂತ್ರವು ಆಧ್ಯಾತ್ಮಿಕ ಶಿಖರಗಳನ್ನು ಹಂತ ಹಂತವಾಗಿ ಏರುವಾಗ ಭೌತಿಕ, ಮಾನಸಿಕ ಆಯಾಮಗಳನ್ನು ವಿಸ್ತರಿಸಿಕೊಳ್ಳುವ ದಾರಿ. ನಿಜವಾದ ತಾಂತ್ರಿಕವೆಂದರೆ ಗುಂಪು, ಪಂಥ, ಸಮಾಜ ಇದರ ಸೀಮಿತ ಪರಿಕಲ್ಪನೆಯನ್ನು ನಿಜಕ್ಕೂ ದಾಟಿದವನು.

ಉಳಿದ ಭಾರತೀಯ ಚಿಂತನೆಗಳಿಗಿಂತ ತಂತ್ರವು ಹೆಚ್ಚು ಪ್ರಾಯೋಗಿಕವಾದದ್ದು. ಬೌದ್ಧಿಕ ಚರ್ಚೆಯ ದಂತಗೋಪುರದಿಂದ ಹೊರಗೆ ಉಳಿದಿರುವಂಥದ್ದು. ಹಾಗಾಗೆಯೇ ಹೆಚ್ಚಿನ ಬುದ್ಧಿ ಜೀವಿಗಳನ್ನು ಆಕರ್ಷಿಸದಿರುವುದು! ಇರಲಿ. ಈಗ ತಂತ್ರಶಾಸ್ತ್ರದ ಕೆಲವು ಹಿನ್ನೆಲೆಯನ್ನು ನೋಡೋಣ.

ನಿಜಕ್ಕೂ ಹಗಲು-ರಾತ್ರಿಯೆನ್ನದೆ ಕಣ್ಣಿಗೆ ಕಾಣುವ ಈ ಪ್ರಪಂಚದಲ್ಲಿ ಕ್ರೌರ‍್ಯ, ದುಷ್ಟತನ, ಅಹಂಕಾರ, ದುರ್ಬಲರ ಶೋಷಣೆ ಇದೆ ಎಂಬುದನ್ನು ತಂತ್ರ ಒಪ್ಪುತ್ತದೆ. ನಾವು ಕಣ್ಣು ಮುಚ್ಚಿ ಕುಳಿತು ಆಧ್ಯಾತ್ಮಿಕ ಭ್ರಮೆಯಿಂದ ಅದು ಇಲ್ಲ ಎಂದರೆ ಹೋಗಿ ಬಿಡುವುದಿಲ್ಲ.

ಅಲ್ಲಿಗೆ ತಂತ್ರ, ಜಗತ್ತಿನ ಕೇಡನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತದೆ. ಹೆದರದೆ ಅರ್ಥ ಮಾಡಿಕೊಳ್ಳುತ್ತದೆ. ಶಕ್ತಿಯ ವಿವಿಧ ರೂಪಗಳ ಆರ್ಥೈಕೆ ಮೊದಲ ಹಂತ.

ನಂತರದ ಹಂತ ಸಾಧಕನು ತನ್ನಲ್ಲಿರುವ ದೋಷ, ದೌರ್ಬಲ್ಯಗಳನ್ನು ಅಲಕ್ಷಿಸದೆ ಅದನ್ನು ಎದುರಿಸುವುದು, ಎದುರಿಸದೆ ಮೋಕ್ಷ ಎಲ್ಲ. ಡಾಂಟೆಯ ಡಿವೈನ್ ಕಾಮಿಡಿಯಲ್ಲಿ ‘ನರಕದಿಂದ ಹೊರಗೆ ಹೋಗುವ ಬಾಗಿಲು ಎಲ್ಲಿದೆ?’ ಎಂಬ ಪ್ರಶ್ನೆಗೆ ಉತ್ತರ ‘ನರಕದ ಕೇಂದ್ರದಲ್ಲಿ’ ಎಂದು! ಹಾಗೆ ಜೀವನದಿಂದ ಮುಕ್ತಿ ಬೇಕೆಂದರೆ ಉತ್ತರ ಜೀವನಕ್ಕೆ ಬೆನ್ನು ತೋರಿಸುವುದಲ್ಲ, ಎದುರಿಸುವುದು. ಯಾವ ಶಕ್ತಿಗೆ ಹೆದರಿ ಮೊದಲ ಹಂತದಲ್ಲಿ ಬಿದ್ದಿದ್ದನೇ ಅದೇ ಶಕ್ತಿಯ ಸಹಾಯದಿಂದ ಎದ್ದು ನಿಲ್ಲುವುದು. ಇದು ಎರಡನೆಯ ಹಂತ ಮುಳ್ಳಿನಿಂದ ಮುಳ್ಳನ್ನು ತೆಗೆದಂತೆ.

ತಾಂತ್ರಿಕ ಪಂಥ ರಸಿಕ ಪಂಥ. ಜಗತ್ತು ದೇವರ ಸೃಷ್ಟಿಯಾದ ಮೇಲೆ ಅದನ್ನು ಹೀನಾಯವಾಗಿ ಏಕೆ ಹೀಗಳೆಯಬೇಕು? ದೇಹವನ್ನು ಎಷ್ಟೋ ಭಕ್ತಿ ಪಂಥ, ಯೋಗ ಪಂಥಗಳು ತುಚ್ಫವೆಂದು ನೋಡಲಾಗಿದೆ. ಆದರೆ ತಂತ್ರಗಳು ದೇಹವನ್ನು ಎಂದೂ ತಿರಸ್ಕಾರದಿಂದ ನೋಡಿಲ್ಲ. ದೇಹವು ಶಿವ-ಶಕ್ತಿಯರು ವಾಸಿಸುವ ದೇವಾಲಯ. ಪವಿತ್ರ ಎಂಬುದು ತಂತ್ರದ ಭಾವನೆ. ಚಿಂತಿಸುವುದೇ ಅಲ್ಲ, ಭಾವಿಸುವುದು ತಂತ್ರದ ಮತ್ತೊಂದು ದೊಡ್ಡಶಕ್ತಿ. ದೇಹವು ಮಲಮೂತ್ರಗಳ ಬಚ್ಚಲು ಎಂಬ ದೃಷ್ಟಿಯನ್ನು ಆಂತರಿಕವಾಗಿ ಏನೇ ಭೇದವಿದ್ದರೂ ಎಲ್ಲ ತಂತ್ರಗಳೂ ನಿರಾಕರಿಸುತ್ತದೆ. ಶಂಕರಾಚಾರ‍್ಯರ ಸೌಂದರ‍್ಯ ಲಹರಿಯ ಸ್ತ್ರೀ ವರ್ಣನೆ, ಮಿಥುನ ಶಿಲ್ಪಗಳು, ಕಾಮಶಾಸ್ತ್ರ, ಕೋಶಗಳಿರಲಿ, ಬೌದ್ಧರ ಸ್ತ್ರೀ ಪುರುಷ ಮಿಲನ ತತ್ವದ ಯುಗನದ್ಧವೇ ಇರಲಿ, ಜೈನರ ನಗ್ನ ದೇಹ ಸೌಂದರ‍್ಯದ ಮಧುರ ಆರಾಧನೆಯೇ ಇಲರಿ ಅಲ್ಲೆಲ್ಲಾ ದೇಹವನ್ನು ಉನ್ನತವಾಗಿಟ್ಟು ಗೌರವಿಸಲಾಗಿದೆ. ಮಹಾಶಕ್ತಿಗೂ ವಿಶ್ವಕ್ಕೂ, ಆಕಾಶದಲ್ಲಿರುವ ಅಮೂರ್ತತೆಗೂ, ಭೂಮಿಯ ದಟ್ಟ ವಾಸ್ತವತೆಗೂ ನಡುವಿನ ಸೇತುವೆಯೇ ದೇಹ. ಆಧ್ಯಾತ್ಮ ಪಂಥಗಳ ದುರ್ಲಕ್ಷ್ಯದಿಂದಾಗಿ ದೇಹಕ್ಕೆ ಮಹತ್ವ ತಪ್ಪಿ ಒಂದೆಡೆ ದೇಹ (ಅನ್ನಮಯ), ಮತ್ತೊಂದು ಕಡೆ ಪ್ರಾಣಶಕ್ತಿ, ಮನೋಶಕ್ತಿ, ಅರಿವಿನ (ವಿಜ್ಞಾನ) ಶಕ್ತಿಗಳ ನಡುವೆ ಆಳವಾದ ಕಂದಕ ಏರ್ಪಟ್ಟಿತ್ತು. ಗ್ರಾಂಥಿಕವಾಗಿ ಮಾತ್ರವಲ್ಲ ಪ್ರಾಯೋಗಿಕವಾಗಿಯೂ ಉಪನಿಷತ್ತಿನ ಪಂಚಕೋಶಗಳ ಪರಿಭಾಷೆಯಲ್ಲಿ ಹೇಳುವುದಾದರೊ ಅನ್ನಮಯ ಮತ್ತು ಪ್ರಾಣಮಯ, ಮನೋಮಯ, ವಿಜ್ಞಾನಮಯಗಳ ನಡುವೆ ಮೊದಲಿನ ಸಂಪರ್ಕ ತಂದದ್ದೇ ತಂತ್ರಗಳು. ದೈಹಿಕ ಮೃಗೀಯ ಕಾಮವನ್ನು ಆಧ್ಯಾತ್ಮಿಕ ಸಾಧನೆಯ ಮೆಟ್ಟಿಲಾಗಿ ಮಾಡಿಕೊಂಡಿದ್ದು ತಂತ್ರಗಳ ಸಾಧನೆ. ಇದರಲ್ಲಿ ಪ್ರಮಾದಗಳಾಗುವುದಿಲ್ಲ ಎಂದಲ್ಲ. ಆದರೆ ಇಡೀ ಭಾರತೀಯ ಬದುಕಿನಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಧಾರೆಗಳಿಗೆ ಕೊಂಡಿಯಾಗುವಂತೆ ರೂಪುಗೊಂಡಿದ್ದು ತಂತ್ರಗಳ ವೈಶಿಷ್ಟ್ಯ.

ಇದ್ದದ್ದನ್ನು ಇದ್ದಂತೆ ಒಪ್ಪಿ ಮುಂದುರವರಿಯುವುದು ತಾಂತ್ರಿಕರ ತಾತ್ವಿಕತೆಯಲ್ಲ. ಉದಾ: ದೇಹ, ಮನಸ್ಸುಗಳ ಆವರಣವನ್ನು ಇದ್ದಂತೆ ಸ್ವೀಕರಿಸಿದರೂ ಅದರ ಯೋಗ್ಯತೆ, ಶಕ್ತಿಗಳನ್ನು ಹುರಿ ಮಾಡುವುದು ತಂತ್ರದ ತಾತ್ವಿಕತೆ. ದೇಹ ಮನಸ್ಸು ಇವು ನಿರ್ಲಕ್ಷ್ಯದಿಂದಾಗಿ ನೀರು ಹಾಕದೆ ನೆಲಕ್ಕೆ ಬಾಗಿರುವ ಹೂವಿನ ಗಿಡದ ಟೊಂಗೆಯಂತಿದ್ದರೆ ಅದಕ್ಕೆ ಸಾಧನೆಯ ನೀರೆರೆದು. ಅದರಲ್ಲಿರುವ ರಸವನ್ನು ಜಾಗೃತಗೊಳಿಸುವುದು, ಆಧ್ಯಾತ್ಮಿಕ ಸೂರ‍್ಯ ಚಂದ್ರರ ಕಡೆ ಮುಖ ಮಾಡುವಂತೆ ಪ್ರೇರೇಪಿಸುವುದು ತಂತ್ರದ ನೆಲೆ. ಭೌತ ವಸ್ತುವಿನಲ್ಲೂ ಚೈತನ್ಯ (energy) ಸುಪ್ತವಾಗಿದೆ. ನಿದ್ರಿಸುತ್ತಿದೆ ಎಂದು ಆಧುನಿಕ ವಿಜ್ಞಾನ ತೋರಿಸಿಕೊಟ್ಟಿದೆ. ಜಡದಲ್ಲಿರುವ ಚೈತನ್ಯ ಶಕ್ತಿಯ ಜಾಗರಣೆ, ಎಚ್ಚರ ಇದು ಕುಂಡಲಿನ ಶಕ್ತಿಯ ಹಿಂದಿರುವ ಪರಿಕಲ್ಪನೆ. ಆರುಚಕ್ರ (ಪದ್ಮ)ಗಳ ಪರಿಭಾಷೆಯಲ್ಲಿ ಮಾತನಾಡುವ ತಂತ್ರದಲ್ಲಿ ಒಂದೊಂದು ಚಕ್ರವೂ ಸೂಕ್ಷ್ಮ ದೇಹದ ಒಂದೊಂದು ಭಾಗದಲ್ಲಿ ಎಂಬ ಪರಿಕಲ್ಪನೆಯಿದೆ. ಮೊದಲೇ ಹೇಳಿದರೆ ತಂತ್ರವು ಶಾಸ್ತ್ರವಾದರೂ ಅದು ಸಾಧನಾ ಮಾರ್ಗ. ಆರಾಮ ಕುರ್ಚಿಯ ತತ್ವಶಾಸ್ತ್ರವಲ್ಲ. ಜೀವವು ತನ್ನ ದೇಹ, ಮನಸ್ಸಿನ ಜಾಗೃತವಾದ ಕ್ರಮಬದ್ಧ ಎಚ್ಚರಿಕೆಯ ಜಾಗರಣೆಯಿಂದ ಕಡೆಯ ಚಕ್ರದವರೆಗೂ ಸಾಗುವ ಯಾತ್ರೆಯೇ ಕುಂಡಲಿನ ಜಾಗರಣೆ ಮತ್ತು ಉತ್ಥಾನ. ಇದು ಸಾದಕನು ಅನುಭವಿ ಗುರುವಿನೊಂದಿಗೆ ನಡೆಸುವುದು ಕ್ರಮ. ಶಕ್ತಿಯನ್ನು ನಾಶ ಮಾಡಲಾಗುವುದಿಲ್ಲ. ಆದರೆ ಕೆಳ ಹಂತದ ಶಕ್ತಿಯನ್ನು ಉನ್ನತ ಹಂತದ ಶಕ್ತಿಯನ್ನಾಗಿ ಪರಿವರ್ತಿಸಬಹುದು ಎಂಬುದೇ ತಂತ್ರಗಳ ಶಕ್ತಿ ಚಿಂತನೆ.

ಕುಂಡಲಿನ ಶಕ್ತಿಯನ್ನು ಜಾಗೃತಗೊಳಿಸಿದಷ್ಟು, ಅದರ ಸದುಪಯೋಗ ಮಾಡಿಕೊಂಡವರ ಸಂಖ್ಯೆ ಕಡಿಮೆ ಎಂದು ಅನುಭವಿಗಳು ಹೇಳುತ್ತಾರೆ. ಶಕ್ತಿ ಬಂದಷ್ಟು ಸುಲಭವಾಗಿ ಉಳಿಯುವುದಿಲ್ಲ. ಶಕ್ತಿಯನ್ನು ಆರೋಹಣ ಕ್ರಮದಲ್ಲಿ ಏರಿಸಿ, ಅವರೋಹಣ ಕ್ರಮವಾಗಿ ಇಳಿಸುವುದು ಕುಂಡಲಿನಿ ಶಕ್ತಿ ಪರಿಕಲ್ಪನೆಯ ಮತ್ತೊಂದು ಆಯಾಮ. ೧. ನಾದ, ೨. ಬಿಂದು, ೩. ಕಲಾ, ೪. ವರ್ಣ, ೫. ತತ್ವ, ೬. ಮಂತ್ರ – ಇದು ಕುಂಡಲಿನಿ ಶಕ್ತಿಯ ಅವರೋಹಣ ಕ್ರಮ. ಆಧುನಿಕರಾದ ನಮಗೆ ತತ್ವಶಾಸ್ತ್ರ ಕಷ್ಟವಾಗುತ್ತಿರಲು ಕಾರಣ ನಾವು ಅದನ್ನು ಪಾಶ್ಚಾತ್ಯ Speculative ತತ್ವಶಾಸ್ತ್ರದಂತೆ ಕೇವಲ ಚಿಂತನಾಕ್ರಮವಾಗಿ ನೋಡುತ್ತಿರುವುದು. ಭಾರತದಲ್ಲಿ ಆಧ್ಯಾತ್ಮ ಎಂದರೆ ದರ್ಶನವೂ ಹೌದು. ತತ್ವಶಾಸ್ತ್ರವೂ ಹೌದು. ಅದು ಚಿಂತನೆ, ಬರಹ, ಬೋಧನೆ, ಸಾಧನೆಗಳ ಸಂಗಮ. ಬಿ.ಎಸ್.ಸಿ., ಎಂ.ಎಸ್.ಸಿ. ತರಗತಿಗಳ ಪರಿಭಾಷೆಯಲ್ಲಿ ಹೇಳುವುದಾದರೆ ತಂತ್ರದಲ್ಲಿ ಥಿಯರಿ, ಪ್ರಾಕ್ಟಿಕಲ್ ಎಲ್ಲಾ ಇದೆ, ಅದರಲ್ಲಿ ವಿದ್ಯಾರ್ಥಿಯು ಮುಟ್ಟಿರುವ ಯೋಗ್ಯತೆಯ ಅಳೆಯುವ ಮೆಥೆಡ್ ಕೂಡಾ ಇದೆ.

ಆದರೆ ದುರ್ದೈವವೆಂದರೆ ವಾದ ವಿವಾದಗಳಲ್ಲಿ ಶುಷ್ಕವಾಗುತ್ತಿದ್ದ ಭಾರತೀಯ ಜನಜೀವನಕ್ಕೆ ಹೊಸ ರಸ, ರುಚಿ ತಂದು, ದೇವಾಲಯ ಸಂಸ್ಕೃತಿ, ಶಿಲ್ಪಕಲೆ, ಚಿತ್ರಕಲೆಗೆ ಹೊಸ ಮಾತು ಕಲಿಸಿದ ತಂತ್ರಗಳು ಇಂದು ಮೂಲೆ ಗುಂಪಾಗಿವೆ. ಮಾರ್ಗ ಜೀವನಕ್ರಮ, ದೇಸೀ ಜೀವನ ಕ್ರಮಗಳಲ್ಲಿ ಅದರ ಮಿಂಚು ಆಗಾಗ ಸುಳಿದರೂ, ಬದುಕಿನ ಬೇಕಾದ ಬೆಳಕಾಗಿ ತೆರೆದುಕೊಳ್ಳಲಾಗುತ್ತಿಲ್ಲ.

ಭಾರತವೆಂಬ ಮಹಾಸ್ಮಶಾನದಲ್ಲಿ ತಂತ್ರದ ವರ್ತಮಾನ – ಇತಿಹಾಸ ಮೃತ ರೂಪದಲ್ಲಿದೆ, ಅಧ್ಯಯನ ಮಟ್ಟದಲ್ಲಿ ಶವ ರೂಪಿ ತಂತ್ರಾಧ್ಯಯನಕ್ಕೆ ಶವ ಸಾಧನೆ ನಡೆದು, ತಂತ್ರದ ಸೌಂದರ‍್ಯ, ಸಾಮಾನ್ಯರ ಬದುಕಿನಲ್ಲಿ ಅದು ವಹಿಸುತ್ತಾ ಬಂದಿರುವ ಮೂಲಭೂತ ಪಾತ್ರದ ಚಿತ್ರ ಬಯಲಿಗೆ ಬಂದರೆ ತಂತ್ರದ ಶಿವ ಸಾಧನೆ ಆದೀತು. ಒಟ್ಟಿನಲ್ಲಿ ತಾಯಿತತ್ವವನ್ನು ಬಲವಾಗಿ ನಂಬಿ, ಪ್ರತಿಪಾದಿಸುವ ತಂತ್ರಗಳು ಭಾರತೀಯ ಸಂಸ್ಕೃತಿಯ ತಾಯಿ ಬೇರು. ನಾವಿನ್ನೂ ಸಂಸ್ಕೃತಿ ಅಧ್ಯಯನದಲ್ಲಿ ತಾಯಿ ಬೇರಿನ ತನಕ ಹೋಗಬೇಕು. ತಾಯಿ ಭಾರತೀಯ ಪಾದ ಮುಟ್ಟಬೇಕಿದೆ.

ಉಪಸಂಹಾರ

ದೇವರ ಇರವು ಅಥವಾ ಇಲ್ಲದಿರುವಿಕೆಗಿಂತ ಸಮಾಜದ ಬಹಿಷ್ಕೃತ ಜಾತಿ, ಸಮುದಾಯಗಳಿಗೂ ಸ್ವತಂತ್ರ ಚಿಂತನೆ ಮತ್ತು ಆಧ್ಯಾತ್ಮಿಕ ಧಾರ್ಮಿಕ ಕ್ರಿಯೆಗಳನ್ನು ತಂದುಕೊಟ್ಟಿದ್ದು ತಂತ್ರಗಳ ವಿಶೇಷತೆ. ಶ್ರಮಣ (ಜೈನ, ಬೌದ್ಧ, ಆಜೀವಿಕ) ಮತ್ತು ಬ್ರಾಹ್ಮಣ ಧರ್ಮಗಳ ತಾಂತ್ರಿಕವಾದಂತೆ, ತಂತ್ರವೂ ಬ್ರಾಹ್ಮಣೀಕರಣಕ್ಕೆ ಒಳಗಾಯಿತು.

ತಂತ್ರಗಳನ್ನು ಕುರಿತು ಎಷ್ಟೇ ಯೋಚಿಸಿದರೂ ವಿಸ್ಮಯವೆನಿಸುತ್ತದೆ. ನಮ್ಮ ಇಡೀ ಬೃಹತ್ ಸಮುದಾಯಗಳನ್ನು ನಾನಾ ಆಯಾಮಗಳಲ್ಲಿ, ಕಲೆ ಸಾಹಿತ್ಯ ಶಿಲ್ಪ ಚಿತ್ರ ವಿಧಿವಿಧಾನಗಳ ಹಂತದಲ್ಲಿ ತಂತ್ರವು ಪ್ರಭಾವಿಸಿದೆ. ವ್ಯಕ್ತಿಯ ಎಲ್ಲ ಕಟ್ಟುಪಾಡುಗಳನ್ನೂ ಮೀರಿ ಸ್ವತಂತ್ರನಾಗಿ, ಧೀಮಂತನಾಗಿ, ಗೌರವದಿಂದ ಬಾಳಬೇಕು ಎಂಬುದು ತಂತ್ರಗಳ ಉದ್ದೇಶ. ವೈದಿಕ, ಜೈನ, ಬೌದ್ಧ – ಇತ್ಯಾದಿಗಳಂತೆ ತಂತ್ರವೂ ಒಂದು ದರ್ಶನ, ಜೀವನವನ್ನು ಭಾವಿಸುವ ದೃಷ್ಟಿಕೋನ. ದೃಷ್ಟಿಕೋನವೆಂದರೆ ಸೀಮಿತ ಎಂದು ಭಾವಿಸುವಂತಿಲ್ಲ. ಉಳಿದ ಕೋನಗಳನ್ನು ಒಳಗೊಳ್ಳುವ ಮಾರ್ಪಡಿಸುವ ದೃಷ್ಟಿ ದರ್ಶನ.