ತಕ್ಕಡಿಯಿಂದ ತಂಬೂರಿಯ ತನಕ
ಸಹಧರ್ಮಿಣಿಯ ಮೂಗುತಿಯ ಮಿನುಗು,
ತಂಬೂರಿಯಿಂದ ತುಂಬುವ ತನಕ
ಹಾಡಿನ ಮೊಳಗು.

ತಕ್ಕಡಿಯಲ್ಲಿ ತೂಗಿದನು ಇಹದ ಸರುಕೆಲ್ಲವನು
ಈ ವ್ಯಾಪಾರಿ,
ಗೊತ್ತಾಗಲಿಲ್ಲ ವೈಕುಂಠಕ್ಕೆ ದಾರಿ.

‘ದಾರಿ ಯಾವುದಯ್ಯಾ ವೈಕುಂಠಕೆ?’
ಪ್ರಶ್ನೆಗುತ್ತರವಾಗಿ ಮೊಳಗಿತ್ತು ಒಳಗಿಂದಲೇ
ಮರು ಪ್ರಶ್ನೆ : ‘ಯಾರು ಹಿತವರು ನಿನಗೆ
ಈ ಮೂವರೊಳಗೆ
ನಾರಿಯೋ ಧಾರುಣಿಯೋ ಬಲುಧನದ ಸಿರಿಯೋ?’

ಉತ್ತರದ ಬೆಳಕನು ಕಂಡ ; ಹೆಗಲಿಗೇರಿತ್ತು ತಂಬೂರಿ,
ಉದ್ದಕೂ ತೆರೆದ ಹಾಡಿನ ದಾರಿ,
ಪಲ್ಲವಿ ಅನುಪಲ್ಲವಿಗಳಲ್ಲಿ ಚಲಿಸಿತು ಚರಣ.
ಕನ್ನಡದ ಜನಮನದ ಹೊಸ್ತಿಲಿನಲ್ಲಿ
ರಾಗದ ಕಿರಣ
ಊರೂರು ಕೇರಿ ಕೇರಿಗಳಲ್ಲಿ
ದೇವರನಾಮದನುರಣನ.

ಅಂದಿನಿಂದ ಇಂದಿನ ತನಕ ಕೇಳುತಿದೆ ಅದೇ
ತಂಬೂರಿಯೋಂಕಾರ
ವಿಠ್ಠಲನ ಚರಣ ಕಿರಣದ ಸುತ್ತ ಝೇಂಗುಡುವ
ಭ್ರಮರ.
ಕೃಷ್ಣಮಹಿಮೆಯ ಕಥೆಗೆ ಬರೆದ ನಾದದ ಭಾಷ್ಯ
ಈ ಪುರಂದರ.