೧೮೫೯ರ ಏಪ್ರಿಲ್‌೧೮ನೆಯ ದಿವಸ ಮಧ್ಯಾಹ್ನ ನಾಲ್ಕು ಗಂಟೆಯ ಸಮಯ.

ಗ್ವಾಲಿಯರ್‌ನಿಂದ ಎಪ್ಪತ್ತೈದು ಮೈಲಿ ದೂರ ಇರುವ ಶಿವಪುರಿ ಎನ್ನುವ ಇಂಗ್ಲೀಷ್‌ಸೈನಿಕ ಠಾಣೆ. ಅಲ್ಲಿಯ ಜೈಲಿನಿಂದ ಕೈದಿಯೊಬ್ಬನನ್ನು ಹೊರತಂದರು. ಅವನ ಕೈಕಾಲುಗಳಿಗೆ ಬೇಡಿ. ಸೈನಿಕರ ಕಾವಲಿನಲ್ಲಿ ಅವನನ್ನು ನೇಣುಗಂಬದ ಬಳಿಗೆ ಕರೆದೊಯ್ದರು. ಆತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ದಿಟ್ಟನಾಗಿ ಹೆಜ್ಜೆ ಇಡುತ್ತಾ ಗಲ್ಲು ಹಲಗೆಯನ್ನು ಆತ ಹತ್ತಿದ. ನೇಣುಹಾಕಿದಾಗ ಒದ್ದಾಡದಿರಲೆಂದು ಕೈಕಾಲು ಕಟ್ಟಿ ಕಣ್ಣಿಗೆ ಬಟ್ಟೆ ಕಟ್ಟಬಂದವರಿಗೆ ‘ತನಗೆ ಅದೆಲ್ಲ ಬೇಕಾಗುವುದಿಲ್ಲ’ ಎಂದು ನಸುನಕ್ಕು ಸನ್ನೆ ಮಾಡಿದ್ದ. ತನ್ನ ಸ್ವಂತ ಕೈಗಳಿಂದ ಉರುಲುಹಗ್ಗವನ್ನು ತಾನೆ ಕೊರಳಿಗೆ ಹಾಕಿಕೊಂಡ. ನೇಣಿನ ಹಗ್ಗವನ್ನು ಎಳೆಯುತ್ತಿದ್ದಂತೆ ನಿಮಿಷಾರ್ಧದಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.

ಈ ಹೃದಯ ವಿದ್ರಾವಕ ದೃಶ್ಯವನ್ನು ನೆನೆದು ನಾಡಿನ ಮೂಲೆಮೂಲೆಯಲ್ಲಿ ಕಣ್ಣೀರಿನ ಕೋಡಿ ಹರಿದಿತ್ತು.

ಇಂಗ್ಲಿಷರ ಕೈಗೆ ಸೆರೆಸಿಕ್ಕು ಹೀಗೆ ಗಲ್ಲಿಗೇರಿದ ಆ ಕೈದಿ ಕಳ್ಳನಲ್ಲ, ಕೊಲೆಗಡುಕನಲ್ಲ. ನಗುನಗುತ್ತಾ ಸಾವನ್ನೆದರಿಸಿದ ಆ ಪುರುಷಸಿಂಹನ ಹೆಸರೇ ತಾತ್ಯಾಟೋಪಿ! ೧೮೫೭ರಲ್ಲಿ ಇಂಗ್ಲೀಷ್‌ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಸ್ವಾತಂತ್ರ್ಯ ಸಂಗ್ರಾಮದ ಮಹಾಸೇನಾನಿ!! ನಾಡಿನ ಗುಲಾಮಗಿರಿಯ ಸರಪಳಿಯನ್ನು ಕಡಿದು ಹಾಕಿ ಮತ್ತೊಮ್ಮೆ ಸ್ವಾತಂತ್ರ್ಯದ ಘೋಷಣೆ ಮಾಡುತ್ತಾ ಪ್ರಚಂಡ ಇಂಗ್ಲೀಷ್‌ಸೈನಿಕ ಶಕ್ತಿಯೊಂದಿಗೆ ಸೆಣಸಾಡಿದ ಕೆಚ್ಚಿನ ಕಲಿ!

ನಾನಾಸಾಹೇಬನ ಭುಜಬಲ

ತಾತ್ಯಾಟೋಪಿಯು ಹುಟ್ಟಿದ್ದು ೧೮೧೪ರಲ್ಲಿ. ಈತನ ತಂದೆಯ ಹೆಸರು ಪಾಂಡುರಂಗ ಪಂತ. ನಾಸಿಕ್‌ಜಿಲ್ಲೆಯಲ್ಲಿರುವ ಯೇವಲೆ ಎಂಬ ಊರಿನವರಾದ ಪಾಂಡುರಂಗ ಪಂತರಿಗೆ ಎಂಟು ಜನ ಮಕ್ಕಳಿದ್ದರು. ಅವರಲ್ಲಿ ಎರಡನೆಯವನ ಹೆಸರು ‘ರಘುನಾಥ.’ ಈತನೇ ಮುಂದೆ ‘ತಾತ್ಯಾಟೋಪಿ’ ಎಂಬ ಹೆಸರಿನಿಂದ ಸ್ವಾತಂತ್ರ್ಯ ಸಮರದಲ್ಲಿ ಅಮರನಾದನು.

ಆ ಕಾಲದಲ್ಲಿ ಮರಾಠಿಗರ ರಾಜ್ಯದ ಆಳ್ವಿಕೆ ನಡೆಸುತ್ತಿದ್ದ ಪೂನಾದ ಪೇಶ್ವೆ ಎರಡನೆಯ ಬಾಜಿರಾಯನ ರಾಜ ದರಬಾರಿನಲ್ಲಿ ಪಾಂಡುರಂಗ ಪಂತರಿಗೆ ಸನ್ಮಾನದ ಸ್ಥಾನವಿದ್ದಿತು. ಪೇಶ್ವೆಯರವರ ಮನೆಗೆ ಸಹ ಆಗಿಂದಾಗ್ಗೆ ಹೋಗಿ ಬರುವ ಸಂಪ್ರದಾಯವಿದ್ದಿತು. ತನ್ನ ತಂದೆಯೊಡನೆ ಇರುತ್ತಿದ್ದ ರಘುನಾಥನು ಸ್ವಾಭಾವಿಕವಾಗಿ ಬಾಜಿರಾಯನ ಕಣ್ಣಿಗೆ ಬೀಳುತ್ತಿದ್ದನು. ಗಂಭೀರ ಮುಖಮುದ್ರೆಯ ಹೊಳಪು ಕಣ್ಣಿನ ಈತನನ್ನು ಕಂಡು ಪ್ರಸನ್ನರಾದ ಪೇಶ್ವೆಯವರು ರತ್ನಖಚಿತವಾದ ಟೋಪಿಯೊಂದನ್ನು ಬಳುವಳಿಯಾಗಿ ಈತನಿಗೆ ಕೊಟ್ಟರು. ಮನೆಮಂದಿಯೆಲ್ಲಾ ರಘುನಾಥನನ್ನು ಪ್ರೀತಿಯಿಂದ ‘ತಾತ್ಯಾ’ ಎಂದು ಕರೆಯುತ್ತಿದ್ದರು. ಮರಾಠಿ ಭಾಷೆಯಲ್ಲಿ ಇದೊಂದು ಅಕ್ಕರೆಯ ಕರೆ. ಪೇಶ್ವೆಯವರಿಂದ ಬಹುಮಾನವಾಗಿ ಪಡೆದಿದ್ದ ಈ ಟೋಪಿಯು ಆತನ ಜೀವನ ಸಂಗಾತಿಯಾಗಿ ಕಡೆಯವರೆಗೆ ಶಿರಭೂಷಣವಾಯಿತು. ಆದ್ದರಿಂದಲೇ ಆತನಿಗೆ ‘ತಾತ್ಯಾಟೋಪಿ’ ಎಂದು ಹೆಸರಾಯಿತು.

ಆಗ ದೇಶದಲ್ಲೆಲ್ಲಾ ಇಂಗ್ಲೀಷರ ಪ್ರಭಾವ ಹರಡಿತ್ತು. ಆರು ಸಾವಿರ ಮೈಲಿ ದೂರವಿರುವ ಇಂಗ್ಲೆಂಡಿನಿಂದ ವ್ಯಾಪಾರ ಮಾಡಲೆಂದು ಭಾರತಕ್ಕೆ ಬಂದ ಕೈಹಿಡಿಯಷ್ಟು ಈ ಬ್ರಿಟಿಷರು ತಕ್ಕಡಿಯನ್ನು ಬಿಸುಟು ರಾಜ ದಂಡವನ್ನು ಕೈಲಿ ಹಿಡಿದರು. ಭಾರತದಲ್ಲಿದ್ದ ರಾಜರು-ಪಾಳೆಯಗಾರರು ಪರಸ್ಪರ ಕಚ್ಚಾಡುತ್ತಿದ್ದರು. ಇಂಗ್ಗೀಷರು ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿಕಟ್ಟುತ್ತಾ ಕಡೆಗೆ ತಾವೇ ಒಂದೊಂದೇ ರಾಜ್ಯವನ್ನು ನುಂಗುತ್ತಾ ಬಂದರು. ನಮ್ಮ ಒಳಜಗಳ ಇನ್ನೊಬ್ಬರಿಗೆ ಲಾಭ. ದೇಶೀ ರಾಜರೆಲ್ಲ ಸ್ವಾತಂತ್ರ್ಯ ವನ್ನು ಕಳೆದುಕೊಂಡು ಇಂಗ್ಲೀಷರ ಸಾಮಂತರಾದರು. ಸಂಪೂರ್ಣ ಹಿಂದು ಸ್ಥಾನವನ್ನೇ ಕಬಳಿಸುವ ಸಂಚು ಇಂಗ್ಲೀಷರದು.

ಆದರೆ ಇಂಗ್ಲೀಷರ ಈ ಹಂಚಿಕೆಗೆ ಬಲಿಬೀಳದೆ ತಮ್ಮ ಸ್ವಾತಂತ್ರ್ಯವನ್ನು ಕಾಯ್ದುಕೊಂಡಿದ್ದರು. ಮರಾಠಿಗರು. ಮರಾಠಿಗರ ರಾಜ್ಯವೆಂದರೆ ಭಾರತದ ಖಡ್ಗಹಸ್ತ ಆಗಿತ್ತು.

ಆದರೆ ಇಂಗ್ಲೀಷರು ಎದೆಗುಂದಲಿಲ್ಲ. ಸಮಯ ಕಾದಿದ್ದರು. ಕಡೆಗೆ ಆ ದುರ್ದಿನ ಬಂದೇ ಬಂದಿತು. ಮರಾಠಿಗರಲ್ಲಿ ಒಡಕು ಹೆಚ್ಚಾಯಿತು. ಶೂರರು ಮತ್ತು ಮುತ್ಸದ್ದಿಗಳಾಗಿದ್ದ ಅನೇಕ ಮರಾಠಿ ವೀರರು ೧೮೦೦ರ ಹೊತ್ತಿಗೆ ಮೃತರಾದರು. ಎರಡನೆಯ ಬಾಜಿರಾಯನಂತಹ ದುರ್ಬಲ ಮತ್ತು ವಿಲಾಸಪ್ರಿಯ ಪೇಶ್ವೆಯು ಅಧಿಕಾರಕ್ಕೆ ಬಂದನು. ನಮ್ಮ ನಾಡಿನವರೇ ಹಲವರು ದ್ರೋಹಿಗಳು ಇಂಗ್ಲೀಷರೊಡನೆ ಪಿತೂರಿ ಮಾಡಿದರು. ಕಡೆಗೆ ೧೮೧೮ರಲ್ಲಿ ನಡೆದ ಕಟ್ಟಕಡೆಯ ಇಂಗ್ಲಿಷ್‌ಮರಾಠಿಗರ ಯುದ್ಧದಲ್ಲಿ ಮರಾಠಿಗರು ಸೋಲನ್ನೊಪ್ಪಬೇಕಾಯಿತು. ಹತಭಾಗ್ಯ ಹಿಂದುಸ್ಥಾನದ ಸ್ವಾತಂತ್ರ್ಯಸೂರ್ಯನಿಗೆ ಗುಲಾಮಗಿರಿಯ ಗ್ರಹಣ ಹಿಡಿಯಿತು.

ಸೋತ ಪೇಶ್ವೆ ಬಾಜಿರಾಯನು ಎಂಟು ಲಕ್ಷ ರೂಪಾಯಿಗಳ ವಾರ್ಷಿಕ ವೇತನವನ್ನು ಸ್ವೀಕರಿಸಲು ಒಪ್ಪಿಕೊಂಡು ಇಂಗ್ಲೀಷರಿಗೆ ನಾಡನ್ನೊಪ್ಪಿಸಿ ರಾಜ್ಯತ್ಯಾಗ ಮಾಡಿದನು. ಕಾನ್‌ಪುರದ ಬಳಿಯಲ್ಲಿರುವ ಬ್ರಹ್ಮಾವರ್ತಕ್ಕೆ ವಲಸೆ ಹೋದನು. ಬ್ರಹ್ಮಾವರ್ತಕ್ಕೆ ಹೋದವರಲ್ಲಿ ಯೇವಲೆ ಪಾಂಡುರಂಗ ಪಂತರು ಸಹ ಒಬ್ಬರು. ಅವರೊಡನೆ ಬಾಲಕ ತಾತ್ಯಾಟೋಪಿಯೂ ಇದ್ದ.

ಬ್ರಹ್ಮಾವರ್ತದಲ್ಲಿ ತಾತ್ಯಾಟೋಪಿಯ ಬಂಧುಗಳಾಗದ್ದವೆರಲ್ಲರೂ ಮುಂದೆ ಸ್ವಾತಂತ್ರ್ಯದ ಹೋರಾಟ ನಕ್ಷತ್ರಗಳಂತೆ ಕಂಗೊಳಿಸಿದರು.

ಆ ಬಾಲಕರಲ್ಲಿ ಪ್ರಮುಖನೇ ನಾನಾಸಾಹೇಬ ಪೇಶ್ವೆ ಪೇಶ್ವೆ ಬಾಜಿರಾಯನ ದತ್ತಕ ಪುತ್ರ; ೧೮೫೭ರ ಸ್ವಾತಂತ್ರ್ಯ ಸಮರದ ಪ್ರಮುಖ ಸೂತ್ರಧಾರ. ಇವನ ಮಲತಮ್ಮನ ಮಗನಾದ ರಾವ್‌ಸಾಹೇಬ ಸಹ ಇವರುಗಳು ಜೊತೆಗಾರನಾಗಿದ್ದನು. ಮುಂದೆ ಕ್ರಾಂತಿಯ ದಿವಸಗಳಲ್ಲಿ ತಾತ್ಯಾಟೋಪಿಗೆ ನೆರಳಿನಂತೆ ಬೆಂಗಾವಲಾಗಿದ್ದನು. ಇವರ ಕಿರಿಯ ಸಂಗಾತಿಯಾಗಿ ಬೆಳೆಯುತ್ತಿದ್ದಳು ‘ಮನು’ ಎನ್ನುವ ಹುಡುಗಿ, ಮೋರೋಪಂತ ತಾಂಬೆ ಎನ್ನುವ ಬ್ರಾಹ್ಮಣನ ಮಗಳು. ಅತಿ ತೇಜಸ್ವಿಯಾದ ಈ ಹುಡುಗಿಯನ್ನು ಎಲ್ಲರೂ ಅಕ್ಕರೆಯಿಂದ ‘ಛಬೀಲಿ’ ಎಂದು ಕರೆಯುತ್ತಿದ್ದರು. ಇವಳೇ ಮುಂದೆ ದೇಶದ ಕಣ್ಣು ಕೋರೈಸಿದ ‘ಝಾನ್ಸಿರಾಣಿ ಲಕ್ಷ್ಮೀಬಾಯಿ’. ಈ ಎಲ್ಲಾ ಕೀರ್ತಿಶಾಲಿ ಎಳೆಯರ ಬೃಂದಾವನವಾಗಿತ್ತು, ಬ್ರಹ್ಮಾವರ್ತ! ಬ್ರಹ್ಮಾವರ್ತದಲ್ಲಿ ಈ ಎಲ್ಲಾ ಮಕ್ಕಳ ವಿದ್ಯಾವ್ಯಾಸಂಗಕ್ಕೆ ಯೋಗ್ಯ ಏರ್ಪಾಟು ಮಾಡಲಾಗಿತ್ತು. ಜೊತೆಗೆ ಕತ್ತಿವರಸೆ, ಕುದುರೆ ಸವಾರಿ ಮೊದಲಾದ ಸೈನಿಕ ಶಿಕ್ಷಣವನ್ನು ಕಲಿಸಲಾಗಿತ್ತು. ಸೈನಿಕ ಕಲೆಯಲ್ಲಿ ನಿಷ್ಣಾತನಾಗಿ ರಣಪಂಡಿತನಾದನು ತಾತ್ಯಾಟೋಪಿ. ೧೮೫೧ರಲ್ಲಿ ಎರಡನೆಯ ಬಾಜಿರಾಯನು ಮೃತನಾದ ನಂತರ ನಾನಾಸಾಹೇಬನೇ ಪೇಶ್ವೆಯ ಪಟ್ಟಕ್ಕೇರಿದನು. ಅವನು ಬಹು ಸ್ವಾಭಿಮಾನಿ ಮತ್ತು ಸ್ವಾತಂತ್ರ್ಯ ಬ್ರಿಟಿಷರ ಗುಲಾಮಗಿರಿಯು ಮುಳ್ಳಿನಂತೆ ಅವನ ಮನಸ್ಸಿಗೆ ಚುಚ್ಚುತ್ತಿತ್ತು. ಸೋಲನ್ನೊಪ್ಪಿಕೊಂಡು ೧೮೧೮ರಲ್ಲಿ ಬಾಜೀರಾಯನು ಕೆಳಗಿಟ್ಟಿದ್ದ ಕತ್ತಿಯನ್ನು ನಾನಾಸಾಹೇಬನು ಪುನಃ ಕೈಗೆತ್ತಿಕೊಂಡನು. ಅವನ ಹಿತಚಿಂತಕನೂ, ಪ್ರಮುಖ ಸಲಹೆಗಾರನೂ ಮತ್ತು ಸೇನಾಪತಿಯೂ ಆಗಿದ್ದನು ತಾತ್ಯಾಟೋಪಿ. ಇಂಗ್ಲೀಷರನ್ನು ಸದೆಬಡಿದು, ಸ್ವರಾಜ್ಯವನ್ನು ಹೇಗೆ ಸ್ಥಾಪಿಸುವುದೆಂಬುದೇ ಅವರಿಬ್ಬರ ನಡುವೆ ಸದಾ ಸರ್ವದಾ ನಡೆದಿದ್ದ ಗುಪ್ತಾಲೋಚನೆ.

ದಾಸ್ಯದ ಕತ್ತಲನ್ನು ಹಿಮ್ಮೆಟ್ಟಿಸಲು

ಮರಾಠಿಗರ ರಾಜ್ಯ ಮುಳುಗಿದ ನಂತರ ಭಾರತದಲ್ಲಿ ಸಾಮ್ರಾಜ್ಯ ಕಟ್ಟುವ ಇಂಗ್ಲೀಷರ ಕನಸು ನನಸಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಅವರ ಮಾರ್ಗ ಇದೀಗ ನಿಷ್ಕಂಟಕವಾಗಿತ್ತು. ಇಂಗ್ಲೀಷರು ನೀತಿ-ಅನೀತಿ, ಸತ್ಯ-ಅಸತ್ಯಗಳ ವಿಚಾರ ಮಾಡಲು ಸಿದ್ಧವಾಗಿರಲಿಲ್ಲ. ಜನರ ಭಾವನೆಗಳಿಗೆ ಬೆಲೆ ಇರಲಿಲ್ಲ.

ಇಂಗ್ಲೀಷರ ಗವರ್ನರ್‌ಜನರಲ್‌ಆಗಿ ಭಾರತಕ್ಕೆ ಬಂದಿದ್ದ ಲಾರ್ಡ್‌ಡಾಲ್‌ಹೌಸಿಯಂತೂ ಭೂಮಿ ತಿನ್ನುವ ಬಕಾಸುರನೇ ಸರಿ. ಯಾವುದಾದರೊಂದು ನೆಪ ಹೂಡಿ ದೇಶೀ ರಾಜರಿಂದ ರಾಜ್ಯ ಕಿತ್ತುಕೊಂಡು ಬ್ರಿಟಿಷ್‌ಸಾಮ್ರಾಜ್ಯಕ್ಕೆ ಸೇರಿಸುವ ಸಂಚು ಅವನದು.

ಜೊತೆಗೆ ಕ್ರೈಸ್ತಪಾದ್ರಿಗಳು ತಂಡತಂಡವಾಗಿ ಬರಲಾರಂಭಿಸಿದರು. ಇಲ್ಲಿಯ ಜನರನ್ನು ಮೋಸದಿಂದ ಕ್ರೈಸ್ತಧರ್ಮಕ್ಕೆ ಮತಾಂತರಿಸತೊಡಗಿದರು. ಅವರದೇ ಸರಕಾರವಾದ್ದರಿಂದ ಅವರಿಗೆ ಯಾರ ಹೆದರಿಕೆಯೂ ಉಳಿದಿರಲಿಲ್ಲ. ಅನೇಕ ಚಿಕ್ಕ ಪುಟ್ಟ ರಾಜ್ಯಗಳನ್ನು ಅಷ್ಟೇ ಅಲ್ಲ, ದಿಲ್ಲಿಯಂತಹ ರಾಜ್ಯವನ್ನು ವಾರಸುದಾರರಲ್ಲಿಯ ಜಗಳವನ್ನು ನೆಪಮಾಡಿಕೊಂಡು, ಇಂಗ್ಲೀಷರ್ ಕೈವಶ ಮಾಡಿಕೊಂಡರು. ಬಾದಶಹನಾದ ಬಹಾದ್ದೂರ್‌ಶಾಹನನ್ನು ಅವರು ಮೂಲೆಗೊತ್ತಿದರು. ಅಯೋಧ್ಯೆಯ ಪ್ರಾಂತವನ್ನೇ ಡಾಲ್‌ಹೌಸಿಯು ನುಂಗಿಹಾಕಿದರು. ದತ್ತುಪುತ್ರಿಗೆ ರಾಜ್ಯ ಅಧಿಕಾರವಿಲ್ಲವೆಂದು ಸಾರಿ ಝಾನ್ಸಿಯ ರಾಜ್ಯದ ಮೇಲೆ ಇಂಗ್ಲೀಷರದೇ ಹಕ್ಕಿದೆ, ಎಂದನು. ನಾನಾಸಾಹೇಬ್‌ಪೇಶ್ವೆಯು ಸಹ ದತ್ತು ಮಗನೆಂದು, ಅವನಿಗೆ ಸಲ್ಲಬೇಕಾಗಿದ್ದ ಎಂಟು ಲಕ್ಷ ರೂಪಾಯಿ ವಾಷಿಕ ವೇತನವನ್ನು ನಿಲ್ಲಿಸಿದನು. ಇಂಗ್ಲೀಷರೆಂದರೆ ಮೊದಲೇ ಉರಿದೇಳುತ್ತಿದ್ದ ನಾನಾ ಸಾಹೇಬ್‌. ಈಗಂತೂ ಬೆಂಕಿಯಲ್ಲಿ ಎಣ್ಣೆ ಹಾಕಿದಂತಾಯಿತು.

ಆದರೆ ಇಲ್ಲಿಂದ ಇಂಗ್ಲೀಷರನ್ನು ಹೊಡೆದಟ್ಟಲು ಪ್ರಾಣವನ್ನೇ ಪಣವಾಗಿಟ್ಟು ಎಡೆಬಿಡದೆ ಹೋರಾಡಿದ ತಾತ್ಯಾಟೋಪಿಯು ಕಳೆದುಕೊಂಡಿದ್ದುದಾದರೂ ಏನು? ಅವನು ಕಳೆದುಕೊಂಡಿದ್ದುದು ಒಂದೇ. ಪ್ರಾಣಕ್ಕೂ ಪ್ರಿಯವಾದುದು, ಸ್ವರ್ಗಕ್ಕೂ ಹೆಚ್ಚು ಮಿಗಿಲಾದುದು, ತಾಯಿನಾಡು! ಆ ನಾಡಿನ ಸ್ವಾತಂತ್ರ್ಯ ಸಮ್ಮಾನ!!

ಇಂಗ್ಲೀಷರ ಅನ್ಯಾಯಗಳಿಂದ ನಾಡ ಜನತೆ ರೊಚ್ಚಿ ಗೆದ್ದಿತ್ತು. ಅಸಂತೋಷದ ಅಗ್ನಿ ಧಗಧಗಿಸುತ್ತಿತ್ತು. ಆದರೆ ಪ್ರಚಂಡ ಬ್ರಿಟಿಷ್‌ಸಾಮ್ರಾಜ್ಯದ ವಿರುದ್ಧ ಹೋರಾಟ ಹೂಡಿ ಆ ಕ್ರಾಂತಿಯಜ್ಞದಲ್ಲಿ ತಮ್ಮ ಸರ್ವಸ್ವವನ್ನು ಹೋಮ ಮಾಡಲು ಜನರು ಸಿದ್ಧರಾದುದಕ್ಕೆ ಕಾರಣ – ಸ್ವದೇಶಭಕ್ತಿ ಮತ್ತು ಸ್ವಧರ್ಮಾಭಿಮಾನ. ಜನಮನದ ಈ ಕೂಗನ್ನು ಕಂಡು ಹಿಡಿದು ಕ್ರಾಂತಿಯ ಕಲ್ಪನೆಗೆ ಮೂರ್ತರೂಪ ಕೊಟ್ಟವನು ನಾನಾಸಾಹೇಬ್‌ಪೇಶ್ವೆ. ಬ್ರಿಟಿಷರ ಸಾಮ್ರಾಜ್ಯಕ್ಕೆ ಭಾರತದಲ್ಲಿ ಆಧಾರ ಭಾರತೀಯ ಸೈನ್ಯ. ಆ ಸೈನಿಕರ ಅಂತಃಕರಣದಲ್ಲಿ ಪ್ರಖರ ದೇಶಭಕ್ತಿಯ ಹೊನಲು ಹರಿಸಿ, ಬ್ರಿಟಿಷ್‌ಸಾಮ್ರಾಜ್ಯವನ್ನು ಬುಡಸಹಿತ ಕಿತ್ತೆಸೆಯುವ ಅತ್ಯದ್ಘುತ ಯೋಜನೆ ಕೈಗೊಂಡನು ನಾನಾಸಾಹೇಬ್‌. ಈ ಯೋಜನೆಯಲ್ಲಿ ಅವನ ಬಲಗೈಯಂತಿದ್ದನು ತಾತ್ಯಾಟೋಪಿ. ದೇಶದ ದೂರದೂರದಲ್ಲಿನ ರಾಜ ಮಹಾರಾಜರೊಡನೆ ಗುಪ್ತಸಂಧಾನ ನಡೆಯಿತು. ಕ್ರಾಂತಿ ಸಂದೇಶ ಹರಿಡಿತು. ದಿಲ್ಲಿಯ ಬಹಾದ್ದೂರ್‌ಶಹಾ, ಝಾನ್ಸಿಯ ರಾಣಿಲಕ್ಷ್ಮೀಬಾಯಿ, ಜಗದೀಶಪುರದ ಕುವರಸಿಂಗ್‌ಮೊದಲಾದವರು ಸ್ವಾತಂತ್ರ್ಯ ಸಂಗ್ರಾಮದ ಮುಂದಾಳುಗಳಾದರು. ಹಾಗೆಯೇ ಅನೇಕ ಸೈನಿಕ ಪಡೆಗಳು ದಾಸ್ಯ ವಿಮೋಚನೆಗಾಗಿ ಕಂಕಣ ಕಟ್ಟಿದವು. ಬಿಳಿಯ ಅಧಿಕಾರಿಗಳನ್ನು ಕಂಡರೆ ಬೆದರುತ್ತಿದ್ದ ನಾಡಿನ ಸೈನಿಕರಲ್ಲಿ ನಿರ್ಭಯ ಮೂಡಿತು. ಸಲಾಮು ಹೊಡೆಯುತ್ತಿದ್ದ ಕೈಗಳೇ ಶತ್ರುಗಳ ವಿರುದ್ಧ ಗುಂಡು ಹರಿಸಲು ಕಾದಿದ್ದವು.

ಈ ಧೀರರು ಸಂಗ್ರಾಮವನ್ನು ಗುಪ್ತವಾಗಿ ಸಂಘಟಿಸಿದ್ದರು. ಆ ಯೋಜನೆಯಂತೆ ೩೧ ಮೇ ೧೮೫೭ರಂದು ದೇಶಾದ್ಯಂತ ಒಂದೇ ಸಾರಿ ಕ್ರಾಂತಿ ಏಳಬೇಕೆಂದು ನಿಗದಿ ಮಾಡಲಾಗಿತ್ತು. ಎಲ್ಲಕಡೆ ಹೋರಾಟ ಒಂದೇ ಸಾರಿ ಆರಂಭವಾದರೆ ಕೈಹಿಡಿಯಷ್ಟು ಇಂಗ್ಲೀಷರು ಅದಕ್ಕೆ ಈಡಾಗಲಾರರೆಂಬ ಹಂಚಿಕೆ ಅದಾಗಿತ್ತು. ನಿರ್ಧರಿಸಿದಂತೆ ನಿಗದಿ ಮಾಡಿದ ದಿನವೇ ದೇಶವೆಲ್ಲಾ ಸಿಡಿದೆದ್ದಿದ್ದರೆ ನಾಡಿನ ಇತಿಹಾಸದ ದಿಕ್ಕೇ ಬದಲಿಸುತ್ತಿತ್ತು. ಆದರೆ ………..

ಸ್ವಾತಂತ್ರ್ಯದೇವತೆಯ ಖಡ್ಗಹಸ್ತ ತಾತ್ಯಾ

ಇದ್ದಕ್ಕಿದ್ದಂತೆ ಅತಿ ಅನಿರೀಕ್ಷಿತವಾಗಿ ಬ್ಯಾರಕ್‌ಪುರದಲ್ಲಿ ಒಂದು ವಿಲಕ್ಷಣ ಘಟನೆ ಜರುಗಿತು. ನಿಗದಿ ಮಾಡಿದ ದಿನಕ್ಕಿಂತ ಸುಮಾರು ಎರಡು ತಿಂಗಳು ಮುಂಚಿತವಾಗಿಯೇ, ಅಂದರೆ ೨೯ನೆಯ ಮಾರ್ಚ್‌೧೮೫೭ರಂದೇ ಅಲ್ಲಿಯ ಸೈನ್ಯದ ಠಾಣೆಯಲ್ಲಿ ಕ್ರಾಂತಿಯ ಕಿಡಿ ಹಾರಿಬಿಟ್ಟಿತು. ಕ್ರಾಂತಿಯುದ್ಧದಲ್ಲಿ ಮೊದಲ ಗುಂಡು ಹಾರಿಸಿದ ಶೂರ ಸಿಪಾಯಿ ಮಂಗಲಪಾಂಡೆ.

ಸೈನಿಕರಿಗೆ ಹೊಸದಾಗಿ ಕೊಡಲಾಗುತ್ತಿದ್ದ ಕಾಡತೂಸುಗಳಿಗೆ ಹಸು-ಹಂದಿಗಳ ಕೊಬ್ಬು ಸವರಿದ್ದಾರೆಂಬ ವದಂತಿ ಹರಡಿತ್ತು; ಕ್ರಾಂತಿಕಾರಿಗಳು ಅದನ್ನು ಹೆಚ್ಚು ಹರಡಿಸಿದ್ದರು. ಧರ್ಮಾಭಿಮಾನಿಗಳಾದ ಬ್ಯಾರಕ್‌ಪುರದ ಸೈನಿಕರು ಅವನ್ನು ಉಪಯೋಗಿಸವುದಿಲ್ಲವೆಂದು ಹಟ ಹಿಡಿದರು. ಸಿಟ್ಟಿಗೆದ್ದ ಬಿಳಿಯ ಅಧಿಕಾರಿಗಳು ಸೈನಿಕರೆಲ್ಲರ ಕೈಯಲ್ಲಿನ ಶಸ್ತ್ರ ಕಸಿದುಕೊಳ್ಳಲು ಆಜ್ಞೆಮಾಡಿದರು. ಸೈನಿಕರಿಗೆ ಶಸ್ತ್ರವೆಂದರೆ ಪ್ರಾಣಪ್ರಿಯವಾದುದು. ಆದ್ದರಿಂದ ಈ ಅಪ್ಪಣೆಯನ್ನು ಪರಿಪಾಲಿಸುವುದೆಂದರೆ ಸ್ವತಃ ಅಪಮಾನ ಮಾಡಿಕೊಂಡಂತೆ ಎಂದೆನಿಸಿತು, ಬ್ಯಾರಕ್‌ಪುರದ ಸೈನಿಕ ಮಂಗಲಪಾಂಡೆಗೆ. ಆತನದು ಉನ್ಮತ್ತ ದೇಶಭಕ್ತಿ. ಅವನ ರಕ್ತ ಕುದಿದಿತ್ತು. ಸಿಂಹ ಹೃದಯದ ಆ ಸಿಪಾಯಿ ಬಿಳಿಯ ಅಧಿಕಾರಿ ಹೂಸನ್‌ಎನ್ನುವನ ಮೇಲೇರಿ ಗುಂಡು ಹಾರಿಸಿದನು, ಅಡ್ಡಬಂದವರು ಸಹ ಗುಂಡೇಟಿಗೀಡಾದರು. ಜೀವಸಹಿತ ಸೆರೆ ಸಿಗಬಾರದೆಂದು ಕಟ್ಟಕಡೆಗೆ ತನ್ನ ಮೇಲೆ ಸಹ ಗುಂಡು ಹಾರಿಸಿಕೊಂಡನು. ಗಾಯಗೊಂಡನು, ಆದರೆ ಸಾಯಲಿಲ್ಲ; ಬ್ರಿಟಿಷರ ಕೈಸೆರೆಯಾದ. ಅವನ ವಿಚಾರಣೆಯಾಯಿತು. ೬ನೆಯ ಏಪ್ರಿಲ್‌೧೮೫೭ರಂದು ಎಲ್ಲಾ ಸಿಪಾಯಿಗಳು ನೋಡುನೋಡುತ್ತಿದ್ದಂತೆ ನೇಣಿಗೇರಿದ ಮಂಗಲಪಾಂಡೆ. ೧೮೫೭ರ ಕ್ರಾಂತಿಕಾರಿಗಳಲ್ಲಿ ಮೊದಲ ಹುತಾತ್ಮ!

ಆದರೆ ಅವನೊಂದು ಅನಾಹುತ ಮಾಡಿದ್ದ. ಕ್ರಾಂತಿಯುದ್ಧಕ್ಕಾಗಿ ನಿಗದಿ ಮಾಡಿದ ದಿನದವರೆಗೆ ಕಾಯಲಾರದವನಾದ! ಉತ್ಸಾಹ ಅತಿರೇಕವಾಗಿತ್ತು, ಸ್ವಾತಂತ್ರ್ಯಸಂಗ್ರಾಮ ಅಸ್ತವ್ಯಸ್ತವಾಗಿ ಆರಂಭ ಆಗಿಬಿಟ್ಟಿತು.

ಬ್ಯಾರಕ್‌ಪುರದ ಕ್ರಾಂತಿ ಘೋಷಣೆಯ ಮರುಧ್ವನಿ ತಿಂಗಳೊಳಗಾಗಿ ಮೀರತ್‌ನಲ್ಲಿ ಕೇಳಿ ಬಂದಿತು. ೧೦ನೆಯ ಮೇ ೧೯೫೭ರಂದು ಮೀರತ್‌ನಲ್ಲಿನ ಸೈನಿಕರು ಬಂಡೆದ್ದರು. ‘ಮಾರೋ ಫಿರಂಗಿಕೋ’ ‘ಬಿಳಿಯರನ್ನು ಸದೆಬಡೆಯಿರಿ!’ ಇದು ಅವರ ಘೋಷಣೆ ಆಗಿತ್ತು. ನೋಡುನೋಡುತ್ತಿದ್ದಂತೆ ಮೀರತ್‌ಕ್ರಾಂತಿಕಾರಿಗಳ ವಶವಾಯಿತು. ಅಳಿದುಳಿದ ಬ್ರಿಟಿಷರು ಜೀವ ಕೈಯಲ್ಲಿ ಹಿಡಿದು ಓಡಿದರು. ಬಂಡೆದ್ದ ಸಿಪಾಯಿಗಳು ರಾತ್ರಿಯೆಲ್ಲಾ ನಡೆದು ೩೬ ಮೈಲಿ ದೂರದ ದಿಲ್ಲಿಗೆ ಧಾವಿಸಿದರು. ಮರುದಿನವೇ ದಿಲ್ಲಿಯನ್ನು ಗೆದ್ದರು. ಬಹದ್ದೂರ್‌ಶಹನನ್ನು ತಮ್ಮ ಮುಂದಾಳೆಂದರು. ದೇಶೀ ಸೈನಿಕರಿಗೆಲ್ಲಾ ಕರೆ ಕೊಟ್ಟರು- ಚಲೋ ದಿಲ್ಲಿ! ಚಲೋ ದಿಲ್ಲಿ !! ಆದರೆ ಬ್ರಹ್ಮಾವರ್ತ ಮಾತ್ರ ಶಾಂತವಿತ್ತು. ನಾನಾಸಾಹೇಬ್‌ತಾತ್ಯಾಟೋಪಿಯವರು ಇಂಥ ಹೊತ್ತಿಗಾಗಿ ಹೊಂಚು ಕಾದಿದ್ದರು. ಅಷ್ಟರಲ್ಲಿ……………

ಕಾನಪುರದ ಇಂಗ್ಲೀಷ್‌ಪ್ರಮುಖ ಸರ್ ಹ್ಯೂವ್ಹೀಲರ್‌ನಿಗೆ ಕಾನ್‌ಪುರದ ಸೈನ್ಯ ಶಿಬಿರದಲ್ಲಿ ಅಸಂತೋಷ ಹೊಗೆಯಾಡುತ್ತಿದ್ದೆಯೆಂದು ಸುಳಿವು ಹತ್ತಿತು. ಅಲ್ಲಿಯ ಇಂಗ್ಲೀಷ್‌ರ ಸಂರಕ್ಷಣೆಯ ಹೊಣೆಯೊಡನೆ ಅಲ್ಲಿದ್ದ ಹನ್ನೆರಡು ಲಕ್ಷ ರೂಪಾಯಿಗಳ ಖಜಾನೆಯನ್ನೂ ಕಾಯಬೇಕಾಗಿದ್ದಿತು. ಯಾರ ಸಹಾಯ ದೊರೆತೀತು ಎಂದು ಯೋಚಿಸಿ ಹತ್ತಿರದಲ್ಲಿಯೇ ಮಿತ್ರನಂತಿದ್ದ ನಾನಾಸಾಹೇಬನ ನೆರವು ಕೋರಿದನು. ಖಜಾನೆ ರಕ್ಷಣೆಗಾಗಿ ಕಾನ್‌ಪುರಕ್ಕೆ ಬರಲು ಮೇ ೨೦ ರಂದು ಬ್ರಹ್ಮಾವರ್ತಕ್ಕೆ ಕರೆ ಕಳುಹಿಸಿದನು. ನಾನಾ ಮತ್ತು ತಾತ್ಯಾಟೋಪಿ ಇವರ ಅಂತರಂಗವೀಗ ರಣರಂಗ ಎಂಬುದು ಆ ವ್ಹೀಲರನಿಗೇನು ಗೊತ್ತು? ಮುನ್ನೂರು ಸೈನಿಕರನ್ನೂ ಎರಡು ತೋಪುಗಳನ್ನೂ ತೆಗೆದುಕೊಂಡು ಮೇ ೨೨ರಂದು ನಾನಾಸಾಹೇಬ ಕಾನ್‌ಪುರದಲ್ಲಿ ಬಂದಿಳಿದನು. ಇಂಗ್ಲೀಷರು ಈ ತಮ್ಮ ಮಿತ್ರನನ್ನು ಸ್ವಾಗತಿಸಿ ಖಜಾನೆ ಕಾಯಲು ಕೇಳಿಕೊಂಡರು ಇಂಗ್ಲೀಷರ್ ಬದ್ಧ ಶತ್ರುವು ಅವನ ಸಂರಕ್ಷಕನಂತೆ, ಅವರ ಖಜಾನೆಯ ಕಾವಲುಗಾರನಂತೆ!

ನಾನಾಸಾಹೇಬ್‌ಮೇ ೨೨ರಂದು ಕಾನ್‌ಪುರದಲ್ಲಿ ಬಂದಿಳಿದ ನಂತರ ಜೂನ್‌೩ರವರೆಗೆ ಅಲ್ಲಿಯ ದೇಶೀ ಸೈನ್ಯದ ಪ್ರಮುಖನಾದ ಸುಭೇದಾರ ಟೀಕಾಸಿಂಗ್‌ನೊಡನೆ ಗುಪ್ತ ಮಾತುಕಥೆ ನಡೆಸಿದನು. ಒಂದು ದಿನ ನೌಕಾವಿಹಾರದ ನೆಪದಿಂದ ನಾನಾಸಾಹೇಬ್‌ಗಂಗಾಘಾಟಿಗೆ ಬಂದು ಅಲ್ಲಿಯ ದೋಣಿಯೊಂದನ್ನೇರಿದನು. ಆ ದೋಣಿಯಲ್ಲಿ ಅವನಿಗಾಗಿ ಕಾದಿದ್ದರು -ಟೀಕಾಸಿಂಗ್‌ಮೊದಲದ ಕ್ರಾಂತಿಕಾರಿಗಳು. ನದಿಯ ನೀರಿನ ಮೇಲೆ ಕಾರಸ್ಥಾನ ನಡೆಯಿತು. ಬಂಡಾಯದ ಎಲ್ಲ ವಿವರಗಳು ಚರ್ಚಿಸಲ್ಪಟ್ಟವು. ಅದರಂತೆ ಜೂನ್‌೪ನೆಯ ಮಧ್ಯರಾತ್ರಿ ಕಾನ್‌ಪುರದಲ್ಲಿನ ಸೈನಿಕರು ಬಂಡೆದ್ದರು. ನಾನಾಸಾಹೇಬ್‌ತಾತ್ಯಾಟೋಪಿಯರ ಮುಂದಾಳುತನದಲ್ಲಿ ಘನಘೋರರ ಯುದ್ಧ ಆರಂಭವಾಯಿತು. ಹನ್ನೆರಡು ಲಕ್ಷ ರೂಪಾಯಿ ಇಂಗ್ಲೀಷರ ಕೈಬಿಟ್ಟಿತು. ಅನೇಕ ಇಂಗ್ಲೀಷರು ಪ್ರಾಣ ತೆತ್ತರು.

ಕಾನ್‌ಪುರವನ್ನು ಗೆದ್ದ ಸ್ವಾತಂತ್ರ್ಯ ಸೈನಿಕರ ವಿಜಯೋತ್ಸವ ಹೇಳತೀರದು. ಬ್ರಹ್ಮಾವರ್ತದಲ್ಲಿ ವಿಧಿಪೂರ್ವಕವಾಗಿ ರಾಜ್ಯಾಭಿಷೇಕವಾಗಿ ಪುನಃ ನಾನಾಸಾಹೇಬ್‌ಪೇಶ್ವೆಯು ಪಟ್ಟಕ್ಕೇರಿದನು. ನಾಡಿಗೆ ಒಡೆಯ ದೊರಕಿದಂತಾಯಿತು.

ಕಾನ್‌ಪುರದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಆರಂಭವಾದದ್ದು ತಿಳಿಯುತ್ತಿದ್ದಂತೆಯೇ ಮೂರೇ ದಿನಗಳಲ್ಲಿ ಜೂನ್‌೭ರಂದು ಝಾನ್ಸಿಯು ಸ್ವಾತಂತ್ರ್ಯ ಘೋಷಿಸಿತು. ರಾಜ್ಯ ಹೀನ ಲಕ್ಷ್ಮಿಯು ಪುನಃ ಮಹಾರಾಣಿ ಲಕ್ಷ್ಮೀಬಾಯಿಯಾದಳು. ಆ ಸ್ವಾತಂತ್ರ್ಯ ಸೌದಾಮಿನಿಯ ಕತ್ತಿಯು ಒರೆಯಿಂದ ಹೊರಬಿದ್ದಿತು. ಕಾನ್‌ಪುರ ಮತ್ತು ಝಾನ್ಸಿಗಳು ಬಂಡೆದ್ದ ಸುದ್ದಿ ಹಾಹಾ ಎನ್ನುವುದರೊಳಗಾಗಿ ನಾಡೆಲ್ಲಾ ಹಬ್ಬಿತು. ಅಲ್ಲಲ್ಲಿಯ ಅಳಿದುಳಿದ ಸೈನಿಕ ಪಡೆಗಳ ದಂಗೆಯೆದ್ದವು. ಕ್ರಾಂತಿಯ ಜ್ವಾಲೆ ಕಾಳ್ಗಿಚ್ಚಿನಂತೆ ಉತ್ತರ ಹಿಂದುಸ್ಥಾನವನ್ನೆಲ್ಲಾ ಆವರಿಸಿತು. ಪ್ರಾಣ ಉಳಿಸಿಕೊಳ್ಳಲೆಂದು ಇಂಗ್ಲೀಷರು ಅತ್ತಿಂದಿತ್ತ ಓಡಹತ್ತಿದ್ದರು. ನೂರು ವರ್ಷಗಳ ಪಾಪದ ಪ್ರಾಯಶ್ಚಿತ್ತ ಇಂಗ್ಲೀಷರನ್ನು ಕಾಡುತ್ತಿತ್ತು. ಭಾರತದ ಕೇಸರಿಯು ಮೈಕೊಡವಿಕೊಂಡು ಎದ್ದಿತ್ತು.

ಆದರೆ ಈ ಗೆಲುವಿನ ಸಂಭ್ರಮ ಬಹುಕಾಲ ಉಳಿಯಲಿಲ್ಲ. ಜುಲೈ ೧೬ ರಂದು ಇಂಗ್ಲೀಷ್‌ಸೈನ್ಯವು ನಾನಾಸಾಹೇಬನ ಸೈನ್ಯವನ್ನು ಸೋಲಿಸಿತು. ಅಳಿದುಳಿದ ಸೈನ್ಯ ಕಲೆ ಹಾಕಿ ನಾನಾಸಾಹೇಬ್‌ತಪ್ಪಿಸಿಕೊಂಡು ಓಡಿಹೋಗಬೇಕಾಯಿತು. ಅವನನ್ನು ರಕ್ಷಿಸುತ್ತಾ ಅವನ ನೆರಳಿನಂತೆ ಹಿಂಬಾಲಿಸಿದ್ದನು ತಾತ್ಯಾಟೋಪಿ.

ಸುಸಂಘಟಿತ, ಜಿದ್ದಿನ ಮತ್ತು ಶಿಸ್ತುಪ್ರಿಯರಾದ ಇಂಗ್ಗೀಷರ ಎದುರಿಗೆ ದೇಶೀ ಸೈನ್ಯ ಸೋಲನುಭವಿಸಿ ಹರಿದುಹಂಚಿತ್ತು. ಹೀಗೆ ಅಸ್ತವ್ಯಸ್ತವಾದ ಸೈನ್ಯದ ಪಡೆಗಳನ್ನು ಒಂದುಗೂಡಿಸಿ ಪುನಃ ಹುರಿದುಂಬಿಸಿ, ಸ್ವಾತಂತ್ರ್ಯದ ಗುರಿಯನ್ನು ಸಾಧಿಸಬಲ್ಲ ಸಮರ್ಥ ಸೇನಾಪತಿ ಯಾರು ಎಂಬುದೇ ಎಲ್ಲಾ ಕ್ರಾಂತಿವೀರರ ಮುಂದಿದ್ದ ಸವಾಲು ಆಗಿತ್ತು. ಎಲ್ಲರ ಮುಂದಿದ್ದ ಉತ್ತರ ಸಹ ಒಂದೇ ತಾತ್ಯಾಟೋಪಿ. ಈ ಪರಿಸ್ಥಿತಿಯ ಭಯಾನಕತೆಯನ್ನು ಕಂಡುಕೊಂಡು ನಾನಾಸಾಹೇಬ್‌ಪೇಶ್ವೆಯು, ಸೈನ್ಯದ ಸರ್ವ ಜವಾಬ್ದಾರಿಯನ್ನು ವಹಿಸಿಕೊಂಡು ಸ್ವಾಧೀನತೆಯ ಸಂಗ್ರಾಮವನ್ನು ಮುಂದುವರಿಸಲು ತಾತ್ಯಾಟೋಪಿಯನ್ನೇ ಕೇಳಿಕೊಂಡನು. ನಾನಾನ ಆಜ್ಞೆಯಂದರೆ ತಾತ್ಯಾಗೆ ವೇದವಾಕ್ಯ. ಇದುವರೆವಿಗೆ ಒಟ್ಟಿಗೆ ಓಡಾಡುತ್ತಿದ್ದ ಇಬ್ಬರೂ ಈಗ ಬೇರೆಯಾಗಬೇಕಾಯಿತು. ತನ್ನ ಹೊಣೆ ಎಷ್ಟು ಕಠಿಣವಾದುದು ಎಂಬುದು ತಾತ್ಯಾಟೋಪಿಗೆ ಗೊತ್ತಿಲ್ಲದಿರಲಿಲ್ಲ. ಸೋತು ಹಂಚಿಹೋಗಿದ್ದ ಸಹಸ್ರಾರು ಸೈನಿಕರನ್ನು ಸಂಘಟಿಸುವುದು, ಅವರ ಹೊಟ್ಟೆ ಬಟ್ಟೆಗಳಿಗೆ ಒದಗಿಸುವುದು, ಕೈಗೆ ಶಸ್ತ್ರಾಸ್ತ್ರ ದೊರಕಿಸುವುದು; ಮತ್ತು ನಿರಾಶೆಗೊಂಡಿದ್ದ ಸೈನಿಕರ ಮನಸ್ಸಿನಲ್ಲಿ ವಿಶ್ವಾಸವನ್ನು ನಿರ್ಮಿಸುವುದು, ಹೀಗೆ ಒಂದಲ್ಲ ಎರಡಲ್ಲ ನೂರಾರು ಸಮಸ್ಯೆಗಳು ತಲೆ ತಿನ್ನುತ್ತಿದ್ದವು. ಇಂಗ್ಲೀಷ್‌ಸೈನ್ಯವಾದರೊ ಸಕಲ ಶಸ್ತ್ರಾಸ್ತ್ರಗಳಿಂದ ಸಜ್ಜಿತವಾಗಿತ್ತು.

ಮೊಟ್ಟಮೊದಲು  ತಾತ್ಯಾಟೋಪಿಯು ಶಿವರಾಜಪುರ ಎಂಬ ಮಿಲಿಟರಿ ಕೇಂದ್ರದ ಕಡೆ ಹೊರಟನು. ಅದೇ ತಾನೆ ಅಲ್ಲಿ ಬಂಡೆದ್ದ ಪಡೆಯನ್ನು ತನ್ನ ವಶಮಾಡಿಕೊಂಡನು. ಆ ಸೈನಿಕ ತುಕಡಿಯನ್ನು ತೆಗೆದುಕೊಂಡು ಬಿರುಗಾಳಿಯಂತೆ ನುಗ್ಗಿದನು. ಕಾನ್‌ಪುರವನ್ನು ಗೆದ್ದು, ಲಖ್ನೋ ಕಡೆ ಹೊರಟಿದ್ದ ಹ್ಯಾವಲಾಕ್‌ನ ಮೇಲೆ. ಇಂಗ್ಲೀಷರ ಮೇಲೆ ಸಿಡಿಲು ಬಿದ್ದಂತಾಯಿತು. ಮರಾಠಿಗರ ಪರಂಪರೆಯ ಕಿರುಕುಳ ಯುದ್ಧದಲ್ಲಿ ತಾತ್ಯಾ ನಿಪುಣ. ಅಡಗಿ ಕುಳಿತು ಹೊಡೆಯುವುದು, ಹೊಡೆದು ಓಡಿಹೋಗುವುದು. ಒಮ್ಮೆ ಹಿಂದಿನಿಂದ, ಒಮ್ಮೆ ಮುಂದಿನಿಂದ; ಎಡದಿಂದ, ಬಲದಿಂದ; ಕಾಣದ ತಾತ್ಯಾಟೋಪಿಯ ಕತ್ತಿಯ ಆಘಾತಕ್ಕೆ ಸಿಕ್ಕು ಹ್ಯಾವ್‌ಲಾಕ್‌ನ ಸೈನ್ಯ ತತ್ತರಿಸಿತು.

ಹ್ಯವ್‌ಲಾಕನನ್ನು ಹಣ್ಣು ಮಾಡಿದ ತಾತ್ಯಾ ಇದ್ದಕ್ಕಿದ್ದಂತೆ ಕಾಲ್ಪಿಯ ಮೇಲೆ ಬಂದೆರಗಿದನು. ಕಾಲ್ಪಿಯು ಕಾನ್‌ಪುರದಿಂದ ೪೫ ಮೈಲಿ ದೂರದಲ್ಲಿರುವ ಕೋಟೆ-ಭದ್ರವಾದ ಕೋಟೆ. ನಾನಾಸಾಹೇಬನ ಆಗಿನ ಕೇಂದ್ರ ಫತ್ತೇಪುರ ಮತ್ತು ಲಕ್ಷ್ಮೀಬಾಯಿಯ ಝಾನ್ಸಿಗಳ ಮಧ್ಯೆ ಇದ್ದು, ಎರಡಕ್ಕೂ ಸಂಬಂಧ ಕೂಡಿಸುವ ಮಹತ್ವದ ಕಿಲ್ಲೆ. ಈ ಕೋಟೆಯ ಮುಂದೆ ಬಂದಿಳಿದ ತಾತ್ಯಾಟೋಪಿ ನೋಡುನೋಡುತ್ತಿದ್ದಂತೆ ಗೆದ್ದುಕೊಂಡೇ ಬಿಟ್ಟ.

ತಾತ್ಯಾಟೋಪಿ ಕತ್ತಿಯನ್ನು ಝಳಪಿಸುತ್ತಾ ವಿಜೃಂಭಿಸಿದ.

ಗೆದ್ದ ಕಾಲ್ಪಿ ಕೋಟೆಯನ್ನು ಇನ್ನಷ್ಟು ಭದ್ರಪಡಿಸಿದ ತಾತ್ಯಾಟೋಪಿ ತನ್ನ ಸೈನ್ಯ ಸಂಚಾಲನೆಯ ಕೇಂದ್ರ ಮಾಡಿಕೊಂಡ. ಮದ್ದು ಗುಂಡುಗಳ ಕಾರಖಾನೆಯನ್ನು ಶುರುಮಾಡಿದ. ಸುತ್ತಲೂ ಶತ್ರು ತುಂಬಿರುವಾಗ ಅವರ ನಡುವೆಯೇ ನವೀನ ಸೃಷ್ಟಿ ಮಾಡಿದ್ದ. ಕಾಲ್ಪಿಯ ಕಾವಲಿನ ವ್ಯವಸ್ಥೆ ಮಾಡಿ ಮತ್ತೆ ಹೊರಬಿದ್ದ ತಾತ್ಯಾ ಒಂದರಮೇಲೊಂದರಂತೆ ಅದ್ಭುತ ಸಾಹಸಕ್ಕೆ ಕೈಹಾಕಿದ.

೧೮೫೭ರ ನವೆಂಬರ್. ಒಂದೇ ಏಟಿಗೆ  ತಾತ್ಯಾಟೋಪಿಯು ಕಾನ್‌ಪುರದಿಂದ ಗ್ವಾಲಿಯರ್‌ವರೆಗೆ ಸೈನಿಕ ಚೌಕಿ ಏರ್ಪಡಿಸಿದ. ಗ್ವಾಲಿಯರ್‌ನ ಶಿಂಧೆ ರಾಜರ ಸೈನ್ಯದ ಪಡೆಗಳನ್ನು ಯುದ್ಧಕ್ಕೆ ಸೇರಲು ಆಹ್ವಾನಿಸಿದ. ಇದ್ದಕ್ಕಿದ್ದಂತೆ ಅದೃಶ್ಯಯನಾದವನು ಪುನಃ ಕಾಣಸಿಕೊಂಡಿದ್ದು ಶಿಂಧೆ ಸೈನ್ಯದ ಶಿಬಿರವಾದ ಮೋರಾರ್‌ನಲ್ಲಿ. ಪ್ರಖ್ಯಾತವಾದ ಶಿಂಧೆ ಸೈನ್ಯವನ್ನೂ ತನ್ನದಾಗಿ ಮಾಡಿಕೊಂಡಿದ್ದ. ಇಷ್ಟರಲ್ಲಿ ಕಾನ್‌ಪುರ ಕಾಯುತ್ತಿದ್ದ ಇಂಗ್ಲೀಷ ಅಧಿಕಾರಿ ವಿಂಡ್‌ಹ್ಯಾಮ್‌ಬಳಿ ಸಾಕಷ್ಟು ಸೈನ್ಯ ಇಲ್ಲವೆಂಬುದನ್ನು ಪತ್ತೆ ಹಚ್ಚಿದ. ಇದೇ ಹೊತ್ತು ಎಂದು ಸೈನಿಕರನ್ನು ಹುರದುಂಬಿಸಿ ಯಮುನಾ ನದಿಯನ್ನು ನೇರವಾಗಿ ದಾಟಿ ಕನಸುಮನಸಿನಲ್ಲಿ ಎಣಿಸಿರದಿದ್ದ ಆ ವಿಂಡ್‌ಹ್ಯಾಮ್‌ಮುಂದೆ ಸೈನ್ಯಸಹಿತ ಪ್ರಕಟನಾದ. ಹಾದಿಯಲ್ಲಿಯ ಠಾಣೆಗಳನ್ನು ಗೆದ್ದು ಇಂಗ್ಲೀಷರ ಆಹಾರ ಸರಬರಾಜನ್ನೇ ಕತ್ತರಿಸಿದ್ದ. ಪಾಂಡುನದಿಯ ದಡದಲ್ಲಿ ಭೀಕರ ಕಾಳಗ ನಡೆಸಿದ. ರಣಾಂಗಣದಲ್ಲಿ ಕತ್ತಿ ಝಳಪಿಸುತ್ತಾ ವಿಜೃಂಭಿಸಿದ. ಇಂಗ್ಲೀಷರ ಪರಾಭವ ಹೇಳತೀರದು, ಅವರ ಸಂಪತ್ತೆಲ್ಲಾ ಲೂಟಿಯಾಗಿತ್ತು. ಆಹಾರಧಾನ್ಯ ನಷ್ಟವಾಗಿತ್ತು; ಅಸಂಖ್ಯ ಇಂಗ್ಲೀಷರು ಸಾವಿನದವಡೆಗೆ ಸಿಕ್ಕಿದ್ದರು. ಅವರ ಸೈನ್ಯ ಧೂಳೀಪಟವಾಗಿತ್ತು. ಅವರ ನಾಮಾಂಕಿತ ಯುದ್ಧಪಟುಗಳು ಸಾವನ್ನಪ್ಪಿದರು. ಕಾಲ್ಪಿಗಾಗಿ ಹರಸಿದ್ದ ಕಣ್ಣೀರು ಆರುವ ಮುನ್ನವೇ ಕಾನ್‌ಪುರ ಪುನಃ ಇಂಗ್ಲಿಷರ್ ಕೈಬಿಟ್ಟಿತು. ದೂರದ ಯೂರೋಪಿನ ಮೂಲೆ ಮೂಲೆಗೂ ತಾತ್ಯಾಟೋಪಿಯ ಹೆಸರು ಮುಟ್ಟಿದ್ದಿತು, ಇಂಗ್ಲೆಂಡ್‌ದೇಶಕ್ಕೆ ಗರ ಹೊಡೆದಿತ್ತು. ಇಡಿ ಯೂರೋಪ್‌ಖಂಡಕ್ಕೆ ಹಿಂದುಸ್ಥಾನದ ಪರಾಕ್ರಮದ ಪರಿಚಯ ಮಾಡಿಕೊಟ್ಟ ಸೇನಾಪತಿ ತಾತ್ಯಾಟೋಪಿ! ಕ್ರಾಂತಿಯ ಕೇಂದ್ರ ಕಾನ್‌ಪುರ-ಬ್ರಹ್ಮಾವರ್ತಗಳು ಪುನಃ ನಾನಾಸಾಹೇಬ್‌ಪೇಶ್ವೆಯನ್ನು ಬರಮಾಡಿಕೊಂಡವು. ದೇಶದ ಬೇರೆಬೇರೆ ಭಾಗಗಳಲ್ಲಿ ಇಂಗ್ಲೀಷರ್ ವಿರುದ್ಧ ಹೋರಾಡಿ ಸೋತು ನಿರಾಶೆಗೊಂಡಿದ್ದ ದೇಶೀ ಸೈನಿಕರ ಮೈಯಲ್ಲಿ ಹೊಸ ಚೈತನ್ಯ ಸಂಚರಿಸಿತು, ಈ ಕಾನ್‌ಪುರ ವಿಜಯದಿಂದ.

ಇಂಗ್ಲೀಷರ ಪ್ರಮುಖ ಸೇನಾಪತಿ ಸರ್‌ಕಲಿನ್‌ಕ್ಯಾಂಬೆಲ್‌ಆಗ ಲಕ್ನೋದಲ್ಲಿದ್ದ. ತಾತ್ಯಾಟೋಪಿಯು ಸಾಮಾನ್ಯ ಶತ್ರುವಲ್ಲ ಎಂಬುದನ್ನು ಅನೇಕ ಯುದ್ಧ ಗೆದ್ದಿದ್ದ ಆ ಸೇನಾಪತಿಯು ಗುರುತಿಸಿದ. ತಾತ್ಯಾಟೋಪಿಯನ್ನು ಸೋಲಿಸಿ ಸೆರೆ ಹಿಡಿದ ಹೊರತು ಇಂಗ್ಲೀಷರಿಗಿನ್ನು ಉಳಿಗಾಲವಿಲ್ಲ ಎಂಬುದನ್ನು ಮನಗಂಡ. ತನ್ನ ಸೈನ್ಯವನ್ನೆಲ್ಲಾ ಕಲೆ ಹಾಕಿದ. ಹಲವು ಕುಶಲ ಸೇನಾಪತಿಗಳೊಡನೆ ಕಾನ್‌ಪುರಕ್ಕೆ ಮುತ್ತಿಗೆ ಹಾಕಿದ. ತಾತ್ಯಾಟೋಪಿಯ ಸುತ್ತಲೂ ಸೈನ್ಯದ ಬಲೆ ಹೆಣೆದಿದ್ದ. ಡಿಸೆಂಬರ್ ೬ರಂದು ತಾತ್ಯಾಟೋಪಿಯನ್ನು ಕೈಸೆರೆ ಹಿಡಿಯಲು ಕಾಲಿನ್‌ಮಾಡಿದ ಯತ್ನ ಅಷ್ಟಿಷ್ಟಲ್ಲ. ತಾತ್ಯಾಟೋಪಿಯು ಸಹ ಇಂಗ್ಲೀಷರ ಹಂಚಿಕೆಯನ್ನು ಗುರುತಿಸಿದ. ಕಾನ್ಪುರದ ಆವರಣದಲ್ಲಿ ಮತ್ತೊಮ್ಮೆ ಕದನ ನಡೆಯಿತು. ಆದರೆ ಈ ಸಾರಿ ವಿಜಯದ ಮಾಲೆ ಕಾಲಿನ್‌ಕೊರಳಿಗೆ ಬಿದ್ದಿತು. ಕಾನ್‌ಪುರದ ಪತನವಾಯಿತು. ಬ್ರಹ್ಮಾವರ್ತದ ನಾನಾಸಾಹೇಬನ ಅರಮನೆಯನ್ನು ಇಂಗ್ಲಿಷರು ಸುಟ್ಟು ಬೂದಿ ಮಾಡಿದರು. ನಗರದ ಸಂಪತ್ತನ್ನೆಲ್ಲಾ ದೋಚಿದರು.

ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಯಾವ ತಾತ್ಯಾಟೋಪಿಯನ್ನು ಸೆರೆಹಿಡಿಯಬೇಕೆಂದು ಇಷ್ಟೆಲ್ಲಾ ಯೋಜನೆ ಮಾಡಿ ಅನೇಕ ಸಿಪಾಯಿಗಳನ್ನು ಕಾಲಿನ್‌ಬಲಿಗೊಟ್ಟಿದ್ದನೋ ಆ ತಾತ್ಯಾಟೋಪಿಯು ಕಾಲಿನ್‌ನ ಕಣ್ಣಿಗೆ ಮಣ್ಣೆರಚಿದ್ದ. ಇಂಗ್ಲೀಷರ ಸೈನ್ಯದ ಬಲೆಯನ್ನು ಕತ್ತರಿಸಿ ತನ್ನ ಸೈನ್ಯ ಸಮೇತ ತಪ್ಪಸಿಕೊಂಡು ಕಾಲ್ಪಿಯ ಕಡೆ ಪಲಯನ ಮಾಡಿದ್ದ. ಬೆನ್ನಟ್ಟಿ ಬಂದಿದ್ದ ಇಂಗ್ಲಿಷ್‌ಸೈನ್ಯ ಹಿಂದಿರುಗಬೇಕಾಯಿತು. ಇಂಗ್ಲೀಷರಿಗೆ ಸಿಂಹಸ್ವಪ್ನನಾಗಿದ್ದ ಅವನು. ಕಾನ್‌ಪುರದಿಂದ ಕಾಲ್ಪಿಗೆ ಬಂದ ನಂತರ ತಾತ್ಯಾಟೋಪಿಯು ದೇಶೀ ರಾಜಮಹಾರಾಜರ ಕಡೆ ಗಮನ ಹರಿಸಿದನು. ಅವನು ದೇಶದ ಈ ಎಲ್ಲಾ ರಾಜರುಗಳಿಂದ ಸಾಧ್ಯವಾದ ಸಹಾಯ ಬಯಸಿದ್ದನು. ಕೆಲವರು ಸ್ವಾತಂತ್ರ್ಯ ಸಮರದಲ್ಲಿ ಗುಪ್ತವಾಗಿ ಸಹಾಯ ಮಾಡಿ ತಾತ್ಯಾಟೋಪಿಗೆ ನೆರವಾಗಿದ್ದರು. ಇಂಗ್ಲಿಷರ್ ರೋಷಕ್ಕೆ ಈಡಾಗಬೇಕಾದೀತೆಂದು ಇನ್ನು ಕೆಲವರು ತಟಸ್ಥರಿದ್ದರು. ಸ್ವರಾಜ್ಯದ ಕರೆಯು ಕೇಳಿದರೂ ಕೇಳದಂತೆ ಸ್ವಾರ್ಥ ಸಾಧಕರಾದ ಅನೇಕ ರಾಜರು ಸ್ವಜನರ ವಿರುದ್ಧ ಇಂಗ್ಲಿಷರಿಗೆ ನೆರವಾಗುತ್ತಿದ್ದರು. ಇಂತಹರಲ್ಲಿ ಪ್ರಮುಖನಾಗಿದ್ದನು. ‘ಚರಖಾರಿ’ ಪ್ರದೇಶದ ರಾಜ. ನೆರವಿಗಾಗಿ ಕೈಚಾಚಿದ್ದ ನಾನಾಸಾಹೇಬನೊಡನೆ ಬಹಳ ಉದ್ಧಟತನದಿಂದ ವರ್ತಿಸಿದ್ದ. ಇಂಗ್ಲೀಷರೊಡನೆ ಸ್ನೇಹ ಬೆಳೆಸಿದ್ದ. ಇಂತಹ ಸ್ವಜನದ್ರೋಹಿಯ ಪಾರುಪತ್ಯ ಮಾಡಲು ಸಂಕಲ್ಪ ಮಾಡಿದ್ದ, ತಾತ್ಯಾಟೋಪಿ. ನಾಡಿನ ಎಲ್ಲಾ ದೇಶದ್ರೋಹಿಗಳಿಗೆ ಪಾಠ ಕಲಿಸಲಿದ್ದ.

ತಾತ್ಯಾಟೋಪಿಯು ಬರಲಿರುವನು ಎಂಬುದನ್ನು ಕೇಳಿಯೇ ಈ ‘ಚರಖಾರಿ’ ರಾಜ ಗಡಗಡನೆ ನಡುಗಿಹೋದ. ಇಂಗ್ಲೀಷರ್ ಮೊರೆಹೊಕ್ಕ. ವೈಸ್‌ರಾಯ್‌ಆಗಿದ್ದ ಕ್ಯಾನಿಂಗ್‌ಮತ್ತು ಸೇನಾಪತಿ ಕಾಲಿನ್‌ರು ಅಭಯದಾನ ನೀಡಿ ಸರ್‌ಹ್ಯೂ ರೋಜ್‌ಎನ್ನುವ ಸೈನ್ಯಾಧಿಕಾರಿಗೆ ಈ ರಾಜನ ಸಹಾಯಕ್ಕಾಗಿ ಧಾವಿಸೆಂದು ಆಜ್ಞೆ ಮಾಡಿದರು. ಆದರೆ ಆ ಸರ್‌ಹ್ಯೂ ರೋಜ್‌ಝಾನ್ಸಿಯ ಬಳಿ ಡೇರೆ ಹೂಡಿದ್ದ. ಝಾನ್ಸಿ ಬಿಟ್ಟು ಹೊರಡುವಂತಿರಲಿಲ್ಲ. ಈ ಎಲ್ಲಾ ಲೆಕ್ಕಾಚಾರ ಹಾಕಿದ್ದ ತಾತ್ಯಾಟೋಪಿಯು ಸುಮ್ಮನೆ ಕುಳಿತಾನೆ? ಗರುಡನಂತೆ ಎರಗಿಹೋದ ಆ ಚರಖಾರಿ ರಾಜ್ಯದ ಮೇಲೆ. ರಾಜದಾನಿಯನ್ನೇ ಕೈವಶಮಾಡಿಕೊಂಡ. ತಪ್ಪೊಪ್ಪಿಕೊಂಡ ಆ ಅಹಂಕಾರಿ ರಾಜನಿಂದ ಮೂರು ಲಕ್ಷ ರೂಪಾಯಿ ಯುದ್ಧತೆರಿಗೆ ವಸೂಲು ಮಾಡಿದ. ಜೊತೆಗೆ ಇಪ್ಪತ್ನಾಲ್ಕು ತೋಪುಗಳನ್ನು ಸಹ ಪಡೆದ. ಈ ಘಟನೆಯಿಂದಾಗಿ ದೇಶದಲ್ಲಿ ವಿಲಕ್ಷಣ ಪರಿಣಾಮ ಉಂಟಾಯಿತು. ದೇಶದ ಎಲ್ಲ ರಾಜರು, ಪಾಳೆಯಗಾರರು ಸ್ವಜನದ್ರೋಹ ಬಗೆದು ಸುರಕ್ಷಿತವಾಗಿರುವುದು ಅಸಾಧ್ಯ ಎಂಬ ಪಾಠ ಕಲಿತರು. ಸ್ವತಃ ವೈಸ್‌ರಾಯ್‌ಮತ್ತು ಇಂಗ್ಲಿಷ್‌ಸೇನಾಪತಿಯು ಎಷ್ಟೇ ಆಶ್ವಾಸನೆ ಕೊಟ್ಟರೂ, ಸ್ವರಾಜ್ಯಕ್ಕೆ ದ್ರೋಹ ಬಗೆಯುವ ಸ್ವಾರ್ಥ ಬಡುಕರೆಲ್ಲರಿಗೆ ಕಠೋರವಾದ ಶಿಕ್ಷೆ ಕೊಡಲು ಕಾಲಯಮನಂತೆ ಕಾದಿದ್ದಾನೆ  ತಾತ್ಯಾಟೋಪಿ ಎಂಬುದು ಸ್ಪಷ್ಟವಾಯಿತು.

ಮುಂದೆ ತನ್ನ ಸೈನ್ಯಕ್ಕೆ ಶಸ್ತ್ರಾಸ್ತ್ರ ಮತ್ತು ಹಣದ ಕೊರತೆ ಉಂಟಾದಾಗಲೆಲ್ಲಾ ಇಂಗ್ಲೀಷರೊಡನೆ ಗೆಳೆತನದಿಂದಿರುವ ಈ ರಾಜರುಗಳ ಮೇಲೆಯೇ ತಾತ್ಯಾಟೋಪಿ ದಂಡೆತ್ತಿ ಹೋಗುತ್ತಿದ್ದ. ಧನಧಾನ್ಯ ಲೂಟಿ ಮಾಡಿಕೊಂಡು ಶಸ್ತ್ರ ಸಾಮಗ್ರಿಗಳನ್ನು ಕಸಿದುಕೊಂಡು ಬರುತ್ತಿದ್ದ. ತಾತ್ಯಾಟೋಪಿಯು ತನ್ನೆಲ್ಲಾ ಕ್ರಾಂತಿಯುದ್ಧದ ಕೇಂದ್ರವಾದ ಕಾಲ್ಪಿಯಲ್ಲಿ ತಳವೂರಿ ಕುಳಿತಿದ್ದನು. ಝಾನ್ಸಿಯ ಲಕ್ಷ್ಮೀಬಾಯಿ ಮತ್ತು ಜಗದೀಶಪುರದ ಕುವರಸಿಂಹನನ್ನು ಬಿಟ್ಟರೆ ಬೇರೆಲ್ಲಾ ಬಂಡಾಯಗಾರರು ದಿಲ್ಲಿ ಚಲೋ ಎನ್ನುತ್ತಾ ಹೋಗಿ ದಿಲ್ಲಿ ನಗರದಲ್ಲಿ ಸೇರಿಕೊಂಡುಬಿಟ್ಟರು. ಉತ್ಸಾಹದ ಭರದಲ್ಲಿ ಯುದ್ಧನೀತಿಯನ್ನೇ ಮರೆತಿದ್ದರು. ಎಲ್ಲಾ ಕಡೆ ಹರಡಿಕೊಂಡಿದ್ದು ನಾಲ್ಕು ದಿಕ್ಕಿನಿಂದ ಶತ್ರುವನ್ನು ಹಣ್ಣುಗೊಳಿಸಬೇಕು ಎನ್ನುವುದನ್ನೇ ಗಮನಿಸದೆ ಎಂಬತ್ತು ಸಾವಿರದಷ್ಟು ಸೈನಿಕರು ದಿಲ್ಲಿಯಲ್ಲಿ ಬಂದು ತುಂಬಿದರು. ಆದ್ದರಿಂದಲೇ ಇಂಗ್ಲೀಷರು ತಮ್ಮ ಶಕ್ತಿಯನ್ನೆಲ್ಲಾ ಕಲೆಹಾಕಿ ದಿಲ್ಲಿ ಧ್ವಂಸಮಾಡುತ್ತಿದ್ದಂತೆ ಒಂದೇ ಏಟಿಗೆ ದಿಲ್ಲಿ ಮುರಿದು ಬಿತ್ತು. ಕ್ರಾಂತಿಕಾರರು ಚದುರಿಹೋದರು. ಬಹಾದ್ದೂರ್ ಶಹನು ಇಂಗ್ಲೀಷರ ಕೈಸೆರೆಯಾಗಬೇಕಾಗಿ ಬಂದಿತು. ಸ್ವಾತಂತ್ರ್ಯ ಯುದ್ಧದಲ್ಲಿ ಅದೊಂದು ದೊಡ್ಡ ಪರಾಜಯವಾಯಿತು.

ಇಂಗ್ಲೀಷರ ಉತ್ಸಾಹ ಇಮ್ಮಡಿಯಾಯಿತು.

ಆದರೆ ತಾತ್ಯಾಟೋಪಿಯು ಮಾತ್ರ ದಿಲ್ಲಿಗೆ ಹೋಗದೆ ಕಾಲ್ಪಿಯಲ್ಲಿಯೇ ಸ್ವಾತಂತ್ರ್ಯ ಯುದ್ಧಕೇಂದ್ರವನ್ನು ನಿರ್ಮಾಣ ಮಾಡಿದ್ದನು. ಕೇವಲ ನಾಲ್ಕೈದು ಸಾವಿರ ಸೈನಿಕರ ಸಹಾಯದಿಂದ ವರ್ಷಗಟ್ಟಲೆ ಯುದ್ಧ ನಡೆಸಿದ್ದನು. ಕಪಟ ಕಾರಸ್ಥಾನದಲ್ಲಿ ಕುಶಲರಾದ ಇಂಗ್ಲಿಷರಿಗೆ ಸಹ ಚಳ್ಳೇಹಣ್ಣು ತಿನ್ನಿಸಿದ್ದನು. ಇಂಗ್ಲಿಷರು ಹಣ್ಣುಹಣ್ಣಾಗಿದ್ದರು.

ಕಾಲ್ಪಿ ಎಂದರೆ ಚದುರಿಹೋಗಿದ್ದ ಎಲ್ಲಾ ಸ್ವಾತಂತ್ರ್ಯ ಸೈನಿಕರಿಗೆ ಆಶ್ರಯದ ಸ್ಥಾನವಾಗಿತ್ತು. ಕಷ್ಟದಲ್ಲಿದ್ದವರಿಗೆ ಸಹಾಯ-ಸರಬರಾಜುಗಳ ಆಶಾಸ್ಥಾನವಾಗಿತ್ತು. ೧೮೫೭ರ ಕ್ರಾಂತಿಯುದ್ಧದ ಸ್ಫೂರ್ತಿಕೇಂದ್ರ ಆಗಿತ್ತು. ಭಾರತದ ಭವಿಷ್ಯ ಕಾಲ್ಪಿಯಲ್ಲಿನ ಆಗುಹೋಗುಗಳ ಮೇಲೆ ನಿಂತಿತ್ತು. ಈ ಕಾಲ್ಪಿಯ ಶಿಲ್ಪಿಯೇ ತಾತ್ಯಾಟೋಪಿ!

ಝಾನ್ಸಿಯ ಸ್ವಾತಂತ್ರ್ಯ ಲಕ್ಷ್ಮಿಗಾಗಿ

ಕಾಲ್ಪಿಯಂತೆಯೇ ಇಂಗ್ಲೀಷರಿಗೆ ಸವಾಲನ್ನೊಡ್ಡಿದ ಇನ್ನೊಂದು ಕ್ರಾಂತಿಯ ಕೇಂದ್ರ ಝಾನ್ಸಿ. ‘ಮೇರೀ ಝಾನ್ಸಿ ನಹೀ ದೂಂಗೀ’ (ನನ್ನೀ ಝಾನ್ಸಿಯ ನಾ ಬಿಡಲಾರೆ) ಎಂದು ಬ್ರಿಟಿಷ ಆಡಳಿತಗಾರರನ್ನು ಧಿಕ್ಕರಿಸಿ ಕೋಟೆಯನ್ನು ಕಾದಿದ್ದಳು ರಾಣಿ ಲಕ್ಷ್ಮೀಬಾಯಿ. ಸರ್ ಹ್ಯೂ ರೋಜ್‌ಎನ್ನುವ ನುರಿತ, ಸಮರ್ಥ ಇಂಗ್ಲಿಷ್‌ಸರದಾರನು ನಾಲ್ಕೂ ಕಡೆಯಿಂದ ಝಾನ್ಸಿಯನ್ನು ಮುತ್ತಿದ್ದನು. ಅವನ ಪ್ರಚಂಡ ಸೈನ್ಯವನ್ನು ಎದುರಿಸಿ, ಆತನ ತೋಪಿನ ಏಟುಗಳಿಗೆ ಅಳುಕದೆ ಯುದ್ಧ ನಡೆಸಿದ್ದಳು ಆ ಸ್ವಾತಂತ್ರ್ಯ ಲಕ್ಷ್ಮಿ: ಇಪ್ಪತ್ಮೂರು ವಯಸ್ಸಿನ ಸುಕುಮಾರ ತರುಣಿ, ವಿಧವೆ. ಕೈಯಲ್ಲಿ ಕತ್ತಿ ಹಿಡಿದು ಕೈಹಿಡಿಯಷ್ಟು ತನ್ನ ಸೈನಿಕರನ್ನು ಹುರಿದುಂಬಿಸುತ್ತಾ ರಣಾಂಗಣದಲ್ಲಿ ಸುತ್ತುತ್ತಿದ್ದಳು ಆ ಸಂಗ್ರಾಮದೇವತೆ. ಬಿದ್ದವರನ್ನು ಎಬ್ಬಿಸುವ, ಹೇಡಿಗಳನ್ನೂ ಶೂರರನ್ನಾಗಿ ಮಾಡುವ ದೃಶ್ಯ ಅದಾಗಿತ್ತು. ನುರಾರು ಕದನಗಳಲ್ಲಿ ಕಾದಿದ್ದ ಸರ್ ಹ್ಯೂ ರೋಜ್‌ಕೂಡ ಬೆರಗಾಗಿದ್ದ,  ಈ ರಣರಾಗಿಣಿಯ ಶೌರ್ಯಧೈರ್ಯ ಕಂಡು. ‘ದಿಟ್ಟರೆಲ್ಲೆಲ್ಲಾ ದಿಟ್ಟಳು ಈಕೆ’ ಎಂದಿದ್ದ.

ಝಾನ್ಸಿಯ ಈ ಅದ್ಭುತ ಯುದ್ಧವಾರ್ತೆ ತಾತ್ಯಾಟೋಪಿಗೆ ಅವನಿಗಾದ ಆನಂದ ಹೇಳತೀರದು. ತನ್ನಂತೆಯೇ ಬ್ರಿಟಿಷರ ಬೆನ್ನು ಮುರಿಯುವ ವೀರರು ಇದ್ದಾರೆ; ತನ್ನ ಬಾಲ್ಯದ ಗೆಳತಿ ಛಬೀಲಿಯೇ ಆ ವೀರ ಮಹಿಳೆ ಲಕ್ಷ್ಮೀಬಾಯಿ ಎಂದು ಮೇಲೆ ಕೇಳಬೇಕೆ?

ಹೀಗೆ ಸಂತೋಷಪಡುತ್ತಿರುವಾಗಲೇ, ಝಾನ್ಸಿರಾಣಿಯ ದೂತನೊಬ್ಬನು ಅತಿ ಕಳವಳವನ್ನುಂಟು ಮಾಡುವ ಸಂದೇಶವನ್ನು ತಂದ.

ಝಾನ್ಸಿ ಅಪಾಯದಲ್ಲಿದೆ. ಇನ್ನು ಕೆಲವೇ ದಿನ ತನ್ನ ಸ್ವಾತಂತ್ರ್ಯ ಸಂರಕ್ಷಿಸಿಕೊಳ್ಳಬಲ್ಲದು. ಸರ್ ಹ್ಯೂ ರೋಜ್‌ಬಲಾಢ್ಯ. ಝಾನ್ಸಿಗೆ ಆಹಾರ ಸರಬರಾಜಿಲ್ಲ. ಸೈನ್ಯವಿಲ್ಲ, ಶಸ್ತ್ರವಿಲ್ಲ. ಜನ ಕಂಗೆಟ್ಟಿದ್ದಾರೆ. ತಕ್ಷಣವೇ ಸಹಾಯಕ್ಕೆ ಬರದೇ ಹೋದರೆ ಝಾನ್ಸಿಯು ಕೈಬಿಡುವುದು ಖಚಿತ. ಲಕ್ಷ್ಮೀಬಾಯಿಯು ಕೈಸೆರೆಯಾಗುವುದೂ ಖಚಿತ.

ತಾತ್ಯಾಟೋಪಿಯನ್ನು ಸಹಾಯಕ್ಕೆ ಬರಲು ಕರೆ ಕಳುಹಿಸಿದ್ದಳು. ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ. ೧೮೫೮ರ ಮಾರ್ಚ್‌೩೦ ರ ಹೊತ್ತಿಗೆ ತಾತ್ಯಾಟೋಪಿಯು ಝಾನ್ಸಿಯನ್ನು ಸರ್ ಹ್ಯೂ ರೋಜನ ಮುತ್ತಿಗೆಯಿಂದ ಬಿಡುಗಡೆ ಮಾಡಲೆಂದು ಹೊರಟ್ಟಿದ್ದ. ಜೊತೆಗೆ ಅಲ್ಲಲ್ಲಿಂದ ಬಂದು ಸೇರಿದ್ದ ಇಪ್ಪತ್ತೆರಡು ಸಾವಿರ ಸೈನಿಕರಿದ್ದರು. ಝಾನ್ಸಿಯ ಸಮೀಪಕ್ಕೆ ಬರುತ್ತಿದ್ದಂತೆ ತಾನು ಬಂದಿರುವುದು ರಾಣಿಗೆ ತಿಳಿಯಲೆಂದು ಬೆಂಕಿಹೊತ್ತಿಸಿ ಸನ್ನೆ ಮಾಡಿದ್ದ. ಕೋಟೆಯ ಒಳಗಡೆಯವರಿಗೆ ಸಮಾಧಾನದ ಉಸಿರು ಬಿಡುವಂತಾಯಿತು.

ಆದರೆ ಝಾನ್ಸಿಯ ದುರ್ದೈವ! ಹ್ಯೂರೋಜ್‌ನೊಡನೆ ನಡೆದ ಕದನದಲ್ಲಿ ತಾತ್ಯಾಟೋಪಿಯು ಸೋತುಹೋದ. ಅವನು ಎಷ್ಟು ಹೋರಾಡಿದರೂ ಅವನ್ನೆಲ್ಲಾ ಸೈನಿಕರು ಹೋರಾಡಲಿಲ್ಲ. ಅದೆಂತಹ ಸೈನ್ಯ? ಸಂತೆಗೆ ಸೇರಿದಂತೆ ತಾತ್ಯಾಟೋಪಿಯ ಬಳಿ ಅಲ್ಲಲ್ಲಿ ಸೋತು ಓಡಿ ಬಂದಿದ್ದ ಹೇಡಿಗಳೆಲ್ಲಾ ಸೇರಿದ್ದರು. ನಾಡಿಗಾಗಿ ಮಾಡೋಣ ಅಥವಾ ಮಡಿಯೋಣವೆಂದ ಬಂದಿದ್ದವರು ಕೈಹಿಡಿಯಷ್ಟು ಮಾತ್ರ ಇಂಗ್ಲಿಷರ ಒಂದೇ ಆಘಾತಕ್ಕೆ ಮರಳಿನ ಮನೆಯಂತೆ ಉರುಳಿದರು. ಅಳಿದುಳಿದವರನ್ನು ಕರೆದುಕೊಂಡು ಆತ ಕಾಲ್ಪಿಗೆ ಕಾಲು ತೆಗೆದ. ಝಾನ್ಸಿಯ ಬಿಡುಗಡೆಗೆಂದು ಅವನು ತಂದಿದ್ದ ತೋಪಿನಿಂದಲೆ ಝಾನ್ಸಿಯ ಮೇಲೆ ಗುಂಡು ಹಾರಿಸಿದರು. ಇಂಗ್ಲೀಷರು ಈ ಸೋಲಿನಿಂದ ಭಯಂಕರ ನಿರಾಶೆ ಎಲ್ಲ ಕಡೆ ಹರಡಿತು. ಲಕ್ಷ್ಮೀಬಾಯಿಯು ಝಾನ್ಸಿಯಿಂದ ತಪ್ಪಿಸಿಕೊಂಡು ಕಾಲ್ಪಿಯ ಕಡೆ ಕುದುರೆ ಓಡಿಸಿದಳು. ಝಾನ್ಸಿಯ ಕೋಟೆ ಇಂಗ್ಲೀಷರ  ಕೈಸೇರಿತು. ಇಪ್ಪತ್ತೊಂದು ಮೈಲಿ ಮಧ್ಯರಾತ್ರಿಯಲ್ಲಿ ದಾಟಿದಳು ಲಕ್ಷ್ಮೀಬಾಯಿ. ತನ್ನನ್ನು ಮುತ್ತಲು ಬಂದ ಇಂಗ್ಲೀಷರನ್ನು ತುಂಡು ಮಾಡಿದಳಲ್ಲದೆ ಇಂಗ್ಲೀಷ್‌ಸರದಾರ ಬೋಕರನನ್ನು ಸಹ ಗಾಯಗೊಳಿಸಿ ನೆಲಕ್ಕುರುಳಿಸಿದಳು. ಬೆಳಕು ಹರಿಯುತ್ತಿದ್ದಂತೆ ಕಾಲ್ಪಿ ತಲುಪಿದಳು. ತಾತ್ಯಾಟೋಪಿಯ ಆಶ್ರಯಕ್ಕೆ ಬಂದಳು. ಇಬ್ಬರ ಗುಪ್ತಾಲೋಚನೆ ನಡೆಯಿತು.

ಹ್ಯೂರೋಜ್‌ನ ದೃಷ್ಟಿ ಕಾಲ್ಪಿಯ ಕಡೆ ಹೊರಳಿತು. ಇಂಗ್ಲೀಷ್‌ಸಾಮ್ರಾಜ್ಯವನ್ನು ಲೆಕ್ಕಿಸದೆ ಪ್ರತಿ ಸ್ಪರ್ಧಿಯಂತೆ ಮರೆಯುತ್ತಿದ್ದ ಕಾಲ್ಪಿಯ ಕೋಟೆಯನ್ನು ಕೈವಶಮಾಡಿಕೊಳ್ಳಲೆಂದು ಅಪಾರ ಸೈನ್ಯದೊಡನೆ ಹೊರಟು ಬಂದನು. ತಾತ್ಯಾಟೋಪಿ, ಲಕ್ಷ್ಮೀಬಾಯಿಯರು ಮತ್ತೊಂದು ಘನಘೋರ ಕಾಳಗ ನಡೆಸಿದರು. ಆದರೆ ಸೋಲು ಕಾದಿತ್ತು. ಕಾಲ್ಪಿಯು ಕೈಬಿಟ್ಟಿತು. ಕ್ರಾಂತಿಕಾರಿಗಳೆಲ್ಲಾ ತಪ್ಪಿಸಿಕೊಂಡು ಓಡಿದರು. ಕಾಲ್ಪಿಯಲ್ಲಿನ ಅಪಾರ ಸಂಪತ್ತು, ಶಸ್ತ್ರಸಾಮಗ್ರಿಗಳು ಇಂಗ್ಲೀಷರ ವಶವಾದವು. ತಾತ್ಯಾಟೋಪಿಯ ವರುಷಾನುವರುಷದ ಪರಿಶ್ರಮ ವ್ಯರ್ಥವಾಯಿತು.

ಕಾಲ್ಪಿಯ ಪತನದ ನಂತರ ಎಲ್ಲಾ ಕ್ರಾಂತಿಕಾರರು ಆಶ್ರಯಹೀನರಾದರು. ಆದರೂ ಎದೆಗೆಡದ ಗಂಡುಗಲಿ ತಾತ್ಯಾಟೋಪಿ ಗುಪ್ತವಾಗಿ ಗ್ವಾಲಿಯರ್‌ಗೆ ಹೋದ. ಅದೊಂದು ಮರಾಠೀ ರಾಜ್ಯ. ಅಲ್ಲಿಯ ಸೈನಿಕರೊಡನೆ ಸ್ನೇಹ ಬೆಳೆಸಿದ. ಅವರ ದೇಶಭಕ್ತಿಯನ್ನು ಹೊಡೆದೆಬ್ಬಿಸಿದ. ನೋಡುನೋಡುತ್ತಿದ್ದಂತೆಯೇ ಗ್ವಾಲಿಯರ್‌ನಲ್ಲಿ ಕ್ರಾಂತಿಯ ನಿಶಾನೆ ಹೂಡಿದ. ಅವನನ್ನು ವಿರೋಧಿಸಿದ ರಾಜ ಮತ್ತು ದಿವಾನರನ್ನೇ ಗಡಿಪಾರು ಮಾಡಿದ. ಕಾನ್‌ಪುರ ಕಳೆದುಕೊಂಡ ನಂತರ ತಾತ್ಯಾಟೋಪಿಯು ಕಾಲ್ಪಿಯಲ್ಲಿ ಕ್ರಾಂತಿಕೇಂದ್ರವನ್ನು ಸೃಷ್ಟಿಸಿದ್ದ. ಈಗ ಕಾಲ್ಪಿಯು ಕೈ ಬಿಟ್ಟ ನಂತರ ಗ್ವಾಲಿಯರ‍್ನಿಂದ ರಣ ಕಹಳೆಯನ್ನು ಊದಿದ. ಗೆದ್ದೆವೆಂದು ಇಂಗ್ಲೀಷರು ಅಂದುಕೊಳ್ಳುವಷ್ಟರಲ್ಲಿ ಸ್ವಾತಂತ್ರ್ಯ ಸೈನಿಕರು ಪುನಃ ಸೆಡ್ಡು ಹೊಡೆದು ನಿಂತರು.

ಸರ್ ಹ್ಯೂ ರೋಜ್‌ತಡಮಾಡಲಿಲ್ಲ. ಗ್ವಾಲಿಯರ್ ಮೇಲೆ ಮುತ್ತಿಗೆ ಹಾಕಿದ. ೧೮ನೆಯ ಜೂನ್‌೧೮೫೮ರಂದು ಭೀಕರ ಯುದ್ಧವಾಯಿತು. ತಾತ್ಯಾಟೋಪಿ ರಾಣಿ ಲಕ್ಷ್ಮೀಬಾಯಿಯರು ಮೈಮರೆತು ಶತ್ರುಸೇನೆಯ ಒಳಕ್ಕೇ ನುಗ್ಗಿ ಯುದ್ಧ ಮಾಡಿದರು. ಆದರೆ ಪರಾಕ್ರಮಕ್ಕೆ ಫಲ ಸಿಗದೆ ಮಹಾಘಾತವಾಯಿತು. ರಾಣಿ ಲಕ್ಷ್ಮೀಬಾಯಿಯ ಕೋಮಲವಾದ ಶರೀರದ ಮೇಲೆ ಎರಡು ಭಯಂಕರ ಗಾಯಗಳಾದವು. ಒಂದು ಕಣ್ಣು ಕಿತ್ತು ಹೊರ ಬಂದಿತು. ಎದೆಯಿಂದ ರಕ್ತ ಸುರಿಯ ಹತ್ತಿತು. ರಕ್ತಮಯವಾಗಿದ್ದ ರಾಣಿಯು ಇಂಗ್ಲೀಷರ್ ಕೈಯಿಂದ ತಪ್ಪಸಿಕೊಂಡು ಓಡಿದಳು. ಬಿಳಿಯ ಸೈನಿಕರು ಬೆನ್ನುಹತ್ತಿದರು. ನೆತ್ತರಿನಲ್ಲಿ ನೆನೆದಿದ್ದ ನಿಶ್ಯಕ್ತಳಾದ ರಾಣಿಯು ಕೊನೆಯ ಉಸಿರೆಳೆದಳು. ರಾಣಿಯ ಸಾವಿನ ಸುದ್ದಿಯಿಂದ ಕ್ರಾಂತಿ ಸೈನಿಕರಿಗೆ ಸಿಡಿಲುಬಡಿದಂತಾಯಿತು. ತಾತ್ಯಾಟೋಪಿ ಏಕಾಕಿಯಾಗಿದ್ದ!

ಏಕಾಕಿ ಪುರಷಸಿಂಹ

ಕ್ರಾಂತಿಯ ಜ್ವಾಲೆ ಅರುತ್ತಾ ಬಂದಿತು. ಕ್ರಾಂತಿ ನಾಯಕರು ಗುಪ್ತರಾದರು. ಸೈನಿಕರು ಓಡಿಹೋದರು. ಎಲ್ಲಾ ಕಡೆ ಸೋಲು. ದೇಶದ ರಾಜ ಮಹಾರಾಜರು ಕೈಕಟ್ಟಿ ಕುಳಿತರು. ತಾತ್ಯಾಟೋಪಿಯ ಬೆಂಬಲಕ್ಕೆ ಒಬ್ಬನೂ ಬರಲೊಲ್ಲ. ಬದಲಾಗಿ ಇಂಗ್ಲೀಷರಿಗೆ ನೆರವಾದರು. ಏಕಾಕಿಯಾಗಿ ಹೋರಾಟ ನಡೆಸಿದ್ದ ತಾತ್ಯಾಟೋಪಿಗೆ ಇನ್ನು ವಿಜಯದ ಆಸೆ ಲವಲೇಶವೂ ಉಳಿದಿರಲಿಲ್ಲ. ಇಂಗ್ಲೀಷರ ಕೈಯಲ್ಲಿ ತನಗೆ ಸಾವು ಖಂಡಿತ ಎಂದು ಗೊತ್ತಾದರೂ ಆತ ತನ್ನ ಹೋರಾಟ ಬಿಟ್ಟುಕೊಡಲಿಲ್ಲ. ಇಂಗ್ಲಿಷರ ಮುಂದೆ ದಯಾದಾನಕ್ಕಾಗಿ ಕೈ ಒಡ್ಡಲಿಲ್ಲ. ತನ್ನ ಧ್ಯೇಯಕ್ಕಾಗಿ ಕಡೆಯ ಉಸಿರನವರೆಗೂ ಹೋರಾಡುವವನೇ ನಿಜವಾದ ಧೀರ.

ಅವನನ್ನು ಹಿಡಿಯಲು ಎಂಟು ತಿಂಗಳವರೆಗೆ ಎಂಟು ಪಳಗಿದ ಸೇನಾಪತಿಗಳು ಬೆನ್ನುಹತ್ತಿದರು. ಹೆಜ್ಜೆಹೆಜ್ಜೆಗೆ ಇಂಗ್ಲೀಷ್‌ಸೈನ್ಯದ ಕಾವಲಿತ್ತು. ಆದರೆ ತಾತ್ಯಾಟೋಪಿಯು ಇವತ್ತು ಇಲ್ಲಿದ್ದರೆ ನಾಳೆ ಅಲ್ಲಿ. ಇಡೀ ಗುಡ್ಡಗಾಡುಗಳಲ್ಲಿ, ನದಿಯ ತೀರಗಳಲ್ಲಿ, ರಾಜಸ್ಥಾನದ ಮರುಳುಗಾಡಿನಲ್ಲಿ ಎಲ್ಲೆಡೆ ಲೀಲಾಜಾಲವಾಗಿ ತಿರುಗುತ್ತಿದ್ದ. ಸಿಕ್ಕ ಸೈನಿಕರನ್ನು ಕಲೆಹಾಕುವುದು; ಮತ್ತೊಂದು ಕದನ, ಮತ್ತೊಂದು ಸೋಲು. ಪಳಗಿದ ಇಂಗ್ಲೀಷ್‌ಸೇನಾಪತಿಗಳು ಇವನ ಧೈರ್ಯ, ಕೌಶಲ್ಯ ಕಂಡು ಮೂಗಿನ ಮೆಲೆ ಬೆರಳಿಟ್ಟರು. ನರ್ಮದಾ ನದಿಯನ್ನು ಅದೆಷ್ಟು ಬಾರಿ ಅತ್ತಿಂದಿತ್ತ ಅವನು ದಾಟಿದ್ದನೋ ಅದು ಅವನಿಗೇ ಗೊತ್ತು ಮತ್ತು ಆ ನರ್ಮದೆಗೆ ಗೊತ್ತು. ತಾತ್ಯಾಟೋಪಿ ಒಬ್ಬೊಂಟಿಗನಾಗಿ ಸೆಣಸಿದ್ದ. ಆದರೆ ಅದೆಷ್ಟು ದಿನ?

ಇಂಗ್ಲೀಷರಿಗೆ ಒಂದು ದಿನ ಸುಖನಿದ್ರೆಯನ್ನು ಕೊಡಲಿಲ್ಲ.

ಸ್ವರಾಜ್ಯ ನಿರ್ಮಾಣದ ಒಂದು ಮಹಾನ್‌ಪ್ರಯತ್ನ ಈಗ ಮಣ್ಣುಗೂಡಿತ್ತು. ವಿಕ್ಟೋರಿಯಾ ರಾಣಿಯ ಪ್ರಸಿದ್ಧ ಪತ್ರಿಕೆಯೊಂದು ಪ್ರಕಟವಾಯಿತು. ಕ್ರಾಂತಿಯ ವೀರರೆಲ್ಲರಿಗೆ ಶಸ್ತ್ರತ್ಯಾಗ ಮಾಡಿ ಕ್ಷಮೆ ಕೇಳಿಕೊಳ್ಳಲು ಕರೆಕೊಡಲಾಯಿತು. ಜೀವದಾನದ ಅಭಯ ನೀಡಲಾಗಿತ್ತು. ತಾತ್ಯಾಟೋಪಿಯ ಸ್ವಾತಂತ್ರ್ಯ ಸೈನ್ಯ ಹರಿದು ಹಂಚಿಹೋಗಿತ್ತು. ಕ್ರಾಂತಿವೀರರನೇಕರು ವೈರಿ ಇಂಗ್ಲೀಷರಿಗೆ ಶರಣಾಗತರಾದರು.

ಸಹಾಯ ನೀಡುವೆನೆಂದು ತಾತ್ಯಾಟೋಪಿಗೆ ಆಶ್ವಾಸನೆ ನೀಡಿದ್ದ ಹೈದರಾಬಾದಿನ ನಿಜಾಮನು ವಚನಭಂಗ ಮಾಡಿದನು. ತನ್ನ ರಾಜ್ಯದ ಕಡೆ ಬಂದದ್ದೇ ಆದರೆ ಇಂಗ್ಲೀಷರ್ ಪರವಾಗಿ ಹೋರಾಡಿ ತಾತ್ಯಾಟೋಪಿಯನ್ನು ಕೊಲ್ಲುವುದಾಗಿ ಹೇಳಿದನು. ಗ್ವಾಲಿಯರ್‌ನ ಶಿಂಧೆ ರಾಜನು ಎಷ್ಟು ಬೇಡಿದರೂ ಸ್ನೇಹಹಸ್ತ ನೀಡಲಾರದವನಾಗಿದ್ದನು. ಎಲ್ಲ ಕಡೆ ನಿರಾಶೆ, ಎಲ್ಲ ಕಡೆ ಸೋಲು, ಎಲ್ಲ ಕಡೆ ವಚನಭಂಗ.

೧೮೫೭ರಲ್ಲಿ ಇಂಗ್ಲೀಷರ್ ವಿರುದ್ಧವಾಗಿ ಸ್ಪೋಟಗೊಂಡಿದ್ದ ಜ್ವಾಲಾಮುಖಿಯ ಶಾಂತವಾಗಿತ್ತು. ಆರದ ಕಿಡಿ ಒಂದೇ-ತಾತ್ಯಾಟೋಪಿ. ತಾತ್ಯಾಟೋಪಿಯು ಒಟ್ಟು ನೂರೈವತ್ತು ಕದನಗಳನ್ನು ಇಂಗ್ಲೀಷರ ವಿರುದ್ಧ ಕಾದಿದ್ದನು. ಹತ್ತು ಸಹಸ್ರ ಇಂಗ್ಲೀಷ್‌ಸೈನಿಕರೊಡನೆ ಮೂರು ವರ್ಷ ಒಂದೇ ಸಮನೆ ಸೆಣಸಾಡಿದ್ದನು. ಹೆಸರಾಂತ ಅನೇಕ ಇಂಗ್ಲೀಷರ್ ಸರದಾರರನ್ನು ಯುದ್ಧದಲ್ಲಿ ಕೊಂದಿದ್ದನು. ಇಂಗ್ಲೀಷರಂತೂ ಈತನನ್ನು ಸೈತಾನನೆಂದೇ ಕರೆಯುತ್ತಿದ್ದರು. ಆದರೆ ಈಗ……..

ಜ್ವಲಂತ ಅಂತಃಕರಣವೊಂದರ ಹೊರತಾಗಿ ಇಂದು ತಾತ್ಯಾಟೋಪಿಯ ಬಳಿ ಏನೂ ಉಳಿದಿಲ್ಲ. ಅವನೀಗ ರೆಕ್ಕೆ ಇಲ್ಲದ ಹಕ್ಕಿ, ಹಲ್ಲುಗುರು ಕಳೆದುಕೊಂಡ ಹುಲಿ, ಒಂಟಿ ಸಲಗ. ಬಾ ಎಂದು ಕರೆಯುವವರಿಲ್ಲ. ಮಲಗಲು ನೆರಳಿಲ್ಲ. ತಲೆ ಇಡಲು ಮನೆಯಿಲ್ಲ. ಹಸಿವು ಬಾಯಾರಿಕೆಯಿಂದ ಕಂಗೆಟ್ಟಿದ್ದಾನೆ. ಅವನನ್ನು ನಿರ್ದಯವಾಗಿ ಬೇಟೆಯಾಡಲು ಬ್ರಿಟಿಷ್‌ಸೈನಿಕರು ಬಂದ ಸುಳಿವು ಸಿಕ್ಕುತ್ತಿದ್ದಂತೆ ಓಡುತ್ತಿದ್ದಾನೆ. ಕಾಡಿನಿಂದ ಕಾಡಿಗೆ ಗುಡ್ಡದಿಂದ ಗುಡ್ಡಕ್ಕೆ; ಹಗಲಿಲ್ಲ, ರಾತ್ರಿಯಿಲ್ಲ. ಅವನಿಗೆ ಸಹಾನುಭೂತಿ ತೋರಿಸಿದರೆ ಕಠೋರ ಶಿಕ್ಷೆಯಾಗಲಿದೆ. ಅವನನ್ನು ಹಿಡಿದುಕೊಟ್ಟವರಿಗೆ ಬಹುಮಾನ ದೊರಕಲಿದೆ. ಇಂಗ್ಲೀಷರಿಗೆ ಅಂದಿನ ಜಗತ್ತಿನಲ್ಲಿ ಅತ್ಯಂತ ಬೆಲೆಬಾಳುವ ವಸ್ತು ತಾತ್ಯಾಟೋಪಿ.

ತಾತ್ಯಾಟೋಪಿಯ ಮುಂದೆ ಕೇವಲ ಎರಡು ಮಾರ್ಗಗಳು ಉಳಿದಿದ್ದವು. ಇಂಗ್ಲೀಷರ್ ಕೈಗೆ ಸಿಗದಂತೆ ಏಕಾಕಿಯಾಗಿ ಹೋರಾಡುತ್ತಾ ಕಡೆಗೊಂದು ದಿನ ಮಡಿಯುವುದು. ಇಲ್ಲವೇ ಅಳಿದುಳಿದ ಅನೇಕ ಕ್ರಾಂತಿಕಾರಿಗಳಂತೆ ಇಂಗ್ಲೀಷರಿಗೆ ಶರಣಾಗತನಾಗಿ ತನ್ನ ಜೀವನ ಉಳಿಸಿಕೊಳ್ಳುವುದು. ಇಂಗ್ಲೀಷರ ಚಾಕರಿ ಮಾಡುವುದು. ದೇಶದ ಶತ್ರುವಿನೊಡನೆ ಗೆಳೆತನ? ಛೀ! ಶರಣಾಗತ ಬದುಕಿಗಿಂತ ಸ್ವಾಭಿಮಾನದ ಸಾವು ಲೇಸು. ಭಾರತದ ಸ್ವಾಭಿಮಾನವೇ ಮೈತಾಳಿ ಬಂದಿಂತಿದ್ದ ತಾತ್ಯಾಟೋಪಿ ಮಡಿದಾನೇ ಹೊರತು ಮಣಿಯಲಾರ.

ತಾತ್ಯಾಟೋಪಿಗೆ ಆಶ್ರಯ ಸಿಗಬಲ್ಲ ಆಶಾಸ್ಥಾನ ಎಂದರೆ ಕೇವಲ ಅವನ ಹಳೆಯ ಗೆಳೆಯನಾದ ಮಾನಸಿಂಗನ ಬಳಿ. ಗ್ವಾಲಿಯರ್‌ಸೈನ್ಯದಲ್ಲಿನ ಆ ಸರದಾರ ಕ್ರಾಂತಿ ಸೈನ್ಯ ಸೇರಲೆಂದು ತನ್ನ ರಾಜನನ್ನು ಬಿಟ್ಟು, ಹಿಂದೆ ತಾತ್ಯಾಟೋಪಿಯ ಬಳಿ ಬಂದಿದ್ದ. ತಾತ್ಯಾಟೋಪಿಯು ಅವನನ್ನು ಸ್ವಾಗತಿಸಿದ್ದ, ಸಮರಾಂಗಣದಲ್ಲಿ ಸಹಾಯ ಮಾಡಿದ್ದ. ಇದೀಗ ಆಶ್ರಯ ನೀಡೆಂದು ಆ ಮಾನಸಿಂಗನ ಬಳಿ ತಾತ್ಯಾಟೋಪಿ ಬಂದಿದ್ದ.

ಆ ಮಾನಸಿಂಗನು ತಾತ್ಯಾಟೋಪಿಯನ್ನು ಹತ್ತಿರದಲ್ಲಿದ್ದ ಪಾರಣವೆಂಬ ನಿಬಿಡವಾದ ಕಾಡಿಗೆ ಕರೆದೊಯ್ದ. ಮೂರು ನಾಲ್ಕುದಿನ ನಿಶ್ಚಿಂತೆಯಾಗಿ ವಿಶ್ರಮಿಸಲು ಹೇಳಿ, ನಂತರ ಮುಂದಿನ ಯೋಜನೆ ಮಾಡಬಹುದೆಂದ. ಸುತ್ತಿಸುತ್ತಿ ಬಸವಳಿದು ಬಂದಿದ್ದ ತಾತ್ಯಾಟೋಪಿಯು ಮಿತ್ರನ ಸಲಹೆಯಂತೆ ಆ ಕಾಡಿನ ಆಶ್ರಯ ಪಡೆದ. ಗೆಳೆಯನ ಕಾವಲಿದೆಯೆಂದು ನಿಶ್ಚಿಂತನಾದ.

ಮೈಯೆಲ್ಲಾ ಕಣ್ಣುಮಾಡಿಕೊಂಡು ತಾತ್ಯಾಟೋಪಿಗಾಗಿ ಹುಡುಕುತ್ತಿದ್ದ ಇಂಗ್ಲೀಷರು ಮಾನಸಿಂಗನ ಆಶ್ರಯದಲ್ಲಿ ಆತನಿರುವುದನ್ನು ಪತ್ತೆ ಹಚ್ಚಿದರು. ಹಿಡಿಯಲು ಹೋದರೆ ಆತ ಪುನಃ ನುಸುಳಿ ಹೋಗುವುದು ಖಂಡಿತ. ಸಾವಿರಾರು ಜನ ವರ್ಷವೆಲ್ಲಾ ಪ್ರಯತ್ನಪಟ್ಟು ಇದುವರೆವಿಗೆ ಹಿಡಿಯಲಾರದಾಗಿದ್ದರು. ಪರಾಕ್ರಮದಿಂದ ಆಗದೆ ಇದ್ದುದನ್ನು ಕಪಟದಿಂದ ಸಾಧಿಸುವ ಹಂಚಿಕೆ ಹಾಕಿದರು. ಮಾನಸಿಂಗನೊಡನೆ ಫಿತೂರಿ ಮಾಡಿದರು. ತಾತ್ಯಾಟೋಪಿಯನ್ನು ಹಿಡಿದುಕೊಟ್ಟರೆ ಮಾನಸಿಂಗನ ಹಳೆಯ ಅಪರಾಧಗಳನ್ನು ಮನ್ನಿಸುವುದಲ್ಲದೇ ಸಂಸ್ಥಾನವೊಂದನ್ನು ಬಳುವಳಿಯಾಗಿ ಕೊಡುವ ಆಸೆ ತೋರಿಸಿದರು. ಬಹುಮಾನವನ್ನು ಕೇಳಿ ಬಾಯಲ್ಲಿ ನೀರೂರಿತು ಈ ಮಾನಸಿಂಗನಿಗೆ. ಶ್ರದ್ಧೆ ಸತ್ತಿತು. ಸ್ವಾರ್ಥ ಗೆದ್ದಿತು. ತಾತ್ಯಾಟೋಪಿಯನ್ನು ಹಿಡಿದುಕೊಡಲು ಒಪ್ಪಿಯೇಬಿಟ್ಟನು. ನಂಬಿ ಬಂದಿದ್ದ ಆ ಸ್ವಾತಂತ್ರ್ಯ ವೀರ ಮಿತ್ರನನ್ನು ಕ್ಷುದ್ರ ಸ್ವಾರ್ಥಕ್ಕೆ ಬಲಿಬಿದ್ದು ಶತ್ರುವಶಮಾಡ ಹೊರಟಿದ್ದನು. ಆ ಮಾನಸಿಂಗ್‌. ಇಂಗ್ಲೀಷ್‌ಪಡೆಯೊಂದನ್ನು ಗುಪ್ತವಾಗಿ ಕರೆತಂದನು. ಶಾಂತವಾಗಿ ಮಲಗಿ ನಿದ್ರಿಸುತ್ತಿದ್ದ ತಾತ್ಯಾಟೋಪಿಯನ್ನು ಇಂಗ್ಲೀಷರ ವಶಮಾಡಿದನು. ನಿದ್ದೆಯಿಂದ ತಾತ್ಯಾಟೋಪಿ ಕಣ್ಣುಬಿಡುವ ಮೊದಲೆ ಕೈಕಾಲುಗಳಿಗೆ ಬೇಡಿ ತೊಡಿಸಲಾಗಿತ್ತು. ಹಿಂದುಸ್ಥಾನದ ಪರಾಕ್ರಮವು ಪಂಜರದಲ್ಲಿ ಸಿಲುಕಿತ್ತು.

೧೮೫೯ನೆಯ ಏಪ್ರಿಲ್‌೭ರಂದು ಮಧ್ಯರಾತ್ರಿ ತಾತ್ಯಾಟೋಪಿಯು ಇಂಗ್ಲೀಷರ್ ಕೈಸೆರೆಯಾದನು. ಇಂಗ್ಲೀಷರ ಸರ್ವ ಸೈನಿಕರಿಗೆ ಮತ್ತು ಕುಶಲ ಸೇನಾಪತಿಗಳಿಗೆ ಸಾಧ್ಯವಾಗದಿದ್ದದ್ದನ್ನು ಆ ಮಾನಸಿಂಗನು ವಿಶ್ಚಾಸಘಾತ ಮಾಡಿ ಹಗುರವಾಗಿ ಸಾಧಿಸಿದ್ದನು.

ಮಾರನೆಯ ದಿನ ತಾತ್ಯಾಟೋಪಿಯನ್ನು ಶಿವಪುರ ಬಳಿಯಲ್ಲಿ ಬೀಡುಬಿಟ್ಟಿದ್ದ ಜನರಲ್‌ಮೀಡ್‌ಎನ್ನುವ ಇಂಗ್ಲೀಷ್‌ಅಧಿಕಾರಿಯ ಮುಂದೆ ಕೈಕಾಲು ಕಟ್ಟಿ ಹಾಜರುಪಡಿಸಿದರು. ಇಂಗ್ಲೀಷರ್ ವಿರುದ್ಧ ಯುದ್ಧ ಹೂಡಿದ ಎಂದು ಸೈನಿಕ ನ್ಯಾಯಾಲಯದ ಮುಂದೆ ನಿಲ್ಲಿಸಿದರು. ಮೂರು ದಿನ ವಿಚಾರಣೆಯ ನಾಟಕ ನಡೆಯಿತು.

ಆದರೆ ತಾತ್ಯಾಟೋಪಿಯ ಮುಖದ ಮೇಲೆ ಎಳ್ಳಷ್ಟೂ ಚಿಂತೆಯಿರಲಿಲ್ಲ. ಧೈರ್ಯವಾಗಿ ನೆರೆದಿದ್ದ ಎಲ್ಲಾ ಇಂಗ್ಲೀಷರನ್ನು ಉದ್ದೇಶಿಸಿ ಗುಡುಗಿನಂತೆ ಉತ್ತರಿಸಿದ.

‘ನಾನು ನಿಮ್ಮ ಚಾಕರನಲ್ಲ. ನಾಡಿನ ಒಡೆಯನಾದ ಪೇಶ್ವೆಯ ಸೇವಕ. ಯುದ್ದದಲ್ಲಿ ಹೊರತಾಗಿ ಯಾವ ನಿರಪರಾಧಿಯ ನೆತ್ತರು ನಾನು ಹರಿಸಿಲ್ಲ. ನನಗೆ ನಿಮ್ಮ ಯಾವ ನ್ಯಾಯವೂ ಬೇಕಾಗಿಲ್ಲ. ನಿಮ್ಮಿಂದ ನಾ ಬಯಸುವುದು ಒಂದೇ. ತೋಫಿನ ಬಾಯಿಗೆ ನನ್ನ ಕಟ್ಟಿ ಗುಂಡು ಹಾರಿಸಿ ತುಂಡುತುಂಡು ಮಾಡಿ; ಇಲ್ಲವೇ ಗಲ್ಲುಗಂಬದ ಮೇಲೆ ನೇಣುಹಾಕಿ.’

ಎಂತಹ ವೀರಕೇಸರಿ! ಸಾವಿನ ದವಡೆಯಲ್ಲಿ ಸಹ ನಿರ್ಭಯ! ಆಯಿತು. ನ್ಯಾಯಾಲಯದ ನಾಟಕವೂ ಮುಗಿಯಿತು. ತಾತ್ಯಾಟೋಪಿಗೆ ಫಾಸಿಯ ಶಿಕ್ಷೆ ವಿಧಿಸಲಾಗಿತ್ತು. ನೇಣುಗಂಬದ ಬಳಿ ನಿಲ್ಲಿಸಲಾಗಿತ್ತು. ನೋಡುನೋಡುತ್ತಿದ್ದಂತೆ ಆ ಪುಣ್ಯ ಪ್ರತಾಪೀ ಪುರುಷನನ್ನು ಗಲ್ಲಿಗೇರಿಸಿದರು. ದೇಶಭಕ್ತನನ್ನು ದಂಗೆಕೋರನೆಂದು, ಕ್ರಾಂತಿವೀರನನ್ನು ಕೊಲೆಗಡುಕನೆಂದು ಹೀಯಾಳಿಸಿದರು.

ಆದರೆ ಆ ಮಹಾನ್‌ದೇಶಭಕ್ತನ ಉಜ್ವಲ ಬಲಿದಾನವನ್ನು ಕೃತಜ್ಞ ಹಿಂದುಸ್ಥಾನ ನೆನಸದಿದ್ದೇತೆ? ಜನರ ಮನಸ್ಸಿನಲ್ಲಿ ಎಂದೆಂದಿಗೂ ಅಳಿಸದಂತೆ ಹಚ್ಚಹಸಿರಾಗಿರುವ ಹೆಸರಾಗಿದೆ -ತಾತ್ಯಾಟೋಪಿ!