ಪ್ರೇಮಗಿರಿ ಕಂದರದ ಗುಹೆಯಲಿ ಯೋಗಿಯಾಗುತ ನಿಲ್ಲುವೆ
ದಿವ್ಯ ನಿತ್ಯಾನಂದ ನಿರ್ಝರದಲ್ಲಿ ಧ್ಯಾನದಿ ಮೀಯುವೆ.
ತತ್ವಫಲರಸ ಪಾನಗೈಯುತ ಜ್ಞಾನಸುಧೆಯನು ತಣಿಸುವೆ,
ಪರಮ ಪುರುಷನ ಪಾದವನು ವೈರಾಗ್ಯ ಕುಸುಮದಿ ಪೂಜಿಪೆ.

ಎದೆಯ ದಾಹಕೆ ನೀರನೆರೆಯಲು ಕೂಪಜಲವನ್ನರಸದೆ
ಶಾಂತಿವಾರಿಯನೆತ್ತಿ ಹೃದಯದ ಹೊನ್ನಗಿಂಡಿಯ ತುಂಬುವೆ
ನಿನ್ನ ಪದಪದ್ಮಗಳ ಸುಧೆಯನು ದಿನವು ದಿನವೂ ಕುಡಿಯುತ,
ನಗುವೆ, ಕುಣಿಯುವೆ, ಅಳುವೆ, ಹಾಡುವೆ, ಪರಮತೋಷದಿ
ಮುಳುಗುತ.