ಏತಾವದೇತದಾಖ್ಯಾನಂ ಸೋತ್ತರಂ ಬ್ರಹ್ಮಪೂಜಿತಮ್!
ರಾಮಾಯಣಮಿತಿ ಖ್ಯಾತಂ ಮುಖ್ಯಂ ವಾಲ್ಮೀಕಿನಾ ಕೃತಮ್||
ತತಃ ಪ್ರತಿಪ್ಠಿತೋ ವಿಷ್ಣುಃ ಸ್ವರ್ಗಲೋಕೇ ಯಥಾಪುರಮ್ತ್ಯ್
ಯೇನ ವ್ಯಾಪ್ತಮಿದಂ ಸರ್ವಂ ತ್ರೈಲೋಕ್ಯಂ ಸಚರಾಚರಮ್||
ತತೋ ದೇವಾಃ ಸಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ|
ನಿತ್ಯಂ ಶೃಣ್ವಂತಿ ಸಂತುಷ್ಟಾ ದಿವ್ಯಂ ರಾಮಾಯಣಂ ದಿವಿ||
-ಶ್ರೀಮದ್ ರಾಮಾಯಣ ಫಲಶ್ರುತಿ

ವಿಷ್ಣುಪಾದಚ್ಯುತೆಯಾಗಿ ಭಗೀರಥನನ್ನು ಹಿಂಬಾಲಿಸಿದ ಗಂಗೆ ದಾರಿಯಲ್ಲಿ ಜಹ್ನುವಿನ ಯಾಗಶಾಲೆಯನ್ನು ಪ್ರವೇಶಿಸಲು ಆತನು ಆ ಮಹಾ ಸ್ರೋತವನ್ನು ಹೀರಿದನಂತೆ. ತರುವಾಯ, ಭಗೀರಥನ ಪ್ರಾರ್ಥನೆಗೆ ಅನುಗ್ರಹ ರೂಪವಾಗಿ ಅದನ್ನು ಜಾಹ್ನವಿಯನ್ನಾಗಿ ಮಾಡಿದನೆಂದು ಪುರಾಣಕಥೆಯಿದೆ. ಗಂಗೆ ಭಗೀರಥನನ್ನು ಹಿಂಬಾಲಿಸಿ ಭಾಗೀರಥಿಯಾದಂತೆ, ಜಹ್ನುವಿನೊಡಲ ಒಳಹೊಕ್ಕು ಕಿವಿಯಿಂದ ಹೊಮ್ಮಿ ಜಾಹ್ನವಿಯಾದಂತೆ, ಲೋಕವ್ಯಾಪಾರದ ಕಥಾವಸ್ತು ಕಿವಿಯಿಂದ ಕಿವಿಗೆ ಹರಿದು, ಜನಮನಸ್ಸನ್ನು ಹಿಂಬಾಲಿಸಿ ಬಂದು, ಯಾವನಾದರೊಬ್ಬ ಮಹಾಕವಿಯ ಪ್ರತಿಭಾಯಾಗಶಾಲೆಯನ್ನು ಹೊಕ್ಕು, ಅವನಿಂದ ಕುಡಿಯಪಟ್ಟು, ಮರಳಿ ಲೋಕಾನುಗ್ರಹಾರ್ಥವಾಗಿ ಆತನ ಜಹ್ನುಕರ್ಣ ಸದೃಶವಾದ ಕಲ್ಪನಾಜ್ಯೋತಿರ್ಮಾರ್ಗದಿಂದ ಛಂದಶ್ಯರೀರಿಯಾಗಿ ಹೊರಹೊಮ್ಮಿ ಅವಿನಾಶಿಯಾದ ಚಿರಕಾವ್ಯವಾಗಿ ಪರಿಣಮಿಸುತ್ತದೆ. ಅಂತಹ ಚಿರಕಾವ್ಯಗಳಲ್ಲಿ ಮೊಟ್ಟಮೊದಲನೆಯದು ಶ್ರೀಮದ್ ವಾಲ್ಮೀಕಿ ರಾಮಾಯಣ.

ಗಂಗೆ, ಭಾಗೀರಥಿ, ಜಾಹ್ನವಿ ಎಂಬ ಹೆಸರುಗಳನ್ನು ಸಮಾನಾರ್ಥದ ಪದಗಳೆಂದು ನಾವು ಸಾಮಾನ್ಯವಾಗಿ ಉಪಯೋಗಿಸಿದರೂ ಭಾಗೀರಥಿ ಬರಿಯ ಗಂಗೆಯಲ್ಲ, ಜಾಹ್ನವಿ ಬರಿಯ ಭಾಗೀರಥಿಯಲ್ಲ. ವಿಷ್ಣುಪಾದದಿಂದ ಸಂಭವಿಸಿದಳು. ಎಂಬ ಕಾರಣದಿಂದ ಆಕೆಯ ಸ್ವರೂಪ ಸ್ವಭಾವ ಸ್ವಧರ್ಮಗಳಲ್ಲಿ ಯಾವ ಯಾವ ಪರಿಣಾಮಗಳುಂಟಾದುವೆಂದು ನಾವು ಭಾವಿಸಿ ಪೂಜಿಸುತ್ತೇವೆಯೊ ಹಾಗೆಯೆ ಭಗೀರಥನನ್ನು ಹಿಂಬಾಲಿಸಿದಳು ಎಂಬ ಕಾರಣದಿಂದಲೂ ಜಹ್ನುವನ್ನು ಹೊಕ್ಕು ಹೊರಹೊಮ್ಮಿದಳು ಎಂಬ ಕಾರಣದಿಂದಲೂ ಪರಿಣಾಮಗಳುಂಟಾದುವೆಂದು ಊಹಿಸದಿರಲು ನಮಗೆ ಸಾಧ್ಯವಲ್ಲ. ಆದ್ದರಿಂದಲೆ, ರಸಾನುಭವಶಾಲಿಗಳಿಗೆ ಭಾಗೀರಥಿ ಬರಿಯ ಗಂಗೆಯಲ್ಲ, ಜಾಹ್ನವಿ ಬರಿಯ ಭಾಗೀರಥಿಯಲ್ಲ-ಎಂದು ನಾವು ಹೇಳಿದ್ದು.

ಮರದ ಒದಗೆಯಲ್ಲಿ ನೀರು ಹರಿದುಬಂದರೆ ಆ ನೀರಿನಲ್ಲಿ ಏನೂ ಬದಲಾವಣೆಯಾಗದಿರಬಹುದು. ಅಥವಾ ಆದರೂ ತುಸು ಪಾಚಿಯ ಕೊಳೆ ಬೆರೆಯಬಹುದು. ಆದರೆ ಸಕ್ಕರೆಯ ಒದಗೆಯಲ್ಲಿ ನೀರು ಹರಿದು ಬಂದರೆ ಆ ನೀರು ಎಂದಿಗೂ ಬರಿಯ ನೀರಾಗಿರದು. ಅದು ಮಧುರ ಪಾನೀಯವಾಗಿ ಕುಡಿಯುವವರ ನೀರಡಿಕೆಯನ್ನು ಪರಿಹರಿಸುವ ಕರ್ತವ್ಯವೊಂದನ್ನೆ ಅಲ್ಲದೆ ಅವರ ಬಹಿರಂತರಿಂದ್ರಿಯಗಳಿಗೆ ಅತ್ಯಂತ ಸುಸ್ವಾದುವಾದ ರಸಾನುಭವವನ್ನೂ ಉಂಟುಮಾಡಿಕೊಡುವ ಗುಣದಿಂದ ಸಮನ್ವಿತವಾಗಿರುತ್ತದೆ. ನಾಲಗೆಯಿರದವರಿಗೆ ಆ ನೀರಿಗೂ ಮರದ ಒದಗೆಯಿಂದ ಹರಿದುಬರುವ ನೀರಿಗೂ ವ್ಯತ್ಯಾಸ ಗೋಚರಿಸಬಹುದು. ಅಂದಮಾತ್ರಕ್ಕೆ ಅವೆರಡೂ ಒಂದೇ ಅಲ್ಲ.

ಅದರಂತೆಯೆ ಕರ್ಣಪರಂಪರೆಯಾಗಿ ಬರುವ ಲೋಕವೃತ್ತವಾದ ಕಥಾವಸ್ತುವೂ ಕವಿಯ ಮನೋಮಯದ ಇಂದ್ರಜಾಲದಲ್ಲಿ ಸೋಸಿಬರುವ ಅದೇ ಲೋಕವೃತ್ತವನ್ನೆ ವಿಷಯವಾಗುಳ್ಳ ಕಾವ್ಯವೂ ಎಂದಿಗೂ ಒಂದೇ ಆಗಿರುವುದಿಲ್ಲ. ಎರಡನೆಯದರ ರುಚಿಯೇ ಬೇರೆ, ರಸವೇ ಬೇರೆ. ಆ ಎರಡರ ಉದ್ದೇಶಗಳೂ ಬೇರೆ ಬೇರೆ; ಪ್ರಯೋಜನಗಳೂ ಬೇರೆ ಬೇರೆ; ಕಬ್ಬಿಣದ ನಲ್ಲಿಯಲ್ಲಿ ಬರುವ ನೀರಿನ ಉದ್ದೇಶ ಪ್ರಯೋಜನಗಳೂ ಸಕ್ಕರೆಯ ನಲ್ಲಿಯಲ್ಲಿ ಬರುವ ನೀರಿನ ಉದ್ದೇಶ ಪ್ರಯೋಜನಗಳೂ ಬೇರೆ ಬೇರೆಯಾಗಿರುವಂತೆ.

ವಿಷಯ, ಭಾವ, ಚಿತ್ರ, ಇತ್ಯಾದಿಗಳಿಗೆ ಕವಿಕೃತಿಯಾದ ಕಾವ್ಯವು ಲೋಕವೃತ್ತಕ್ಕೆ ಬಹುಮಟ್ಟಿಗೆ ಋಣಿ, ಚಿತ್ರಕಾರನ ಚಿತ್ರ ಬಣ್ಣಗಳಿಗೆ ಬಹುಮಟ್ಟಿಗೆ ಋಣಿಯಾಗಿರುವಂತೆ. ಆದರೆ ಬರಿಯ ಬಣ್ಣಗಳಿಂದ ಎಂದಿಗೂ ಚಿತ್ರ ಸೃಷ್ಟಿಯಾಗದು-ವರ್ಣಶಿಲ್ಪಿಯ ಪ್ರತಿಭೆ, ಭಾವ, ಕಲ್ಪನೆಗಳು ಆ ಬಣ್ಣಗಳ ಕೈಂಕರ್ಯವನ್ನು ಸ್ವೀಕರಿಸದಿದ್ದರೆ: ಅಂದರೆ ಚಿತ್ರವು ವರ್ಣಗಳಿಗೆ ಋಣಿಯಾದರೂ, ವರ್ಣಗಳಿಂದಲೆ ಅದು ಅಭಿವ್ಯಕ್ತವಾಗಿದ್ದರೂ ಚಿತ್ರ ಪ್ರಪಂಚವು ವರ್ಣಪ್ರಪಂಚಕ್ಕೆ ಮೀರಿದುದು. ಚಿತ್ರತ್ವ ಮತ್ತು ವರ್ಣತ್ವ ಭೂಮಿಕೆಗಳೆರಡೂ ಬೇರೆ ಬೇರೆ; ಒಂದೇ ಅಳತೆಗೋಲಿಂದ ಎರಡನ್ನೂ ಅಳೆಯಲೆಳಸುವುದು ಬೆಪ್ಪು. ಅದರಂತೆ ಲೋಕವೃತ್ತದಿಂದಲೇ ಕಾವ್ಯ ಸೃಷ್ಟಿಯಾದರೂ, ಅಲ್ಲಿಯ ಮನೆ ಮಠ ಮರಗಿಡ ಪಶುಪಕ್ಷಿ ಮನುಷ್ಯಾದಿಗಳೆ ಇಲ್ಲಿಯೂ ಗೋಚರವಾದರೂ ಲೋಕವೃತ್ತವು ಕವಿಕೃತಿಯಿಂದ ಭಿನ್ನವಾಗಿ, ಅನ್ಯವಾಗಿ, ಅವೆರಡೂ ಬೇರೆಬೇರೆಯ ಭೂಮಿಕೆಗಳಿಗೆ ಸೇರುತ್ತವೆ. ಬೇರೆ ಬೇರೆಯ ಅನನ್ಯಪರತಂತ್ರವಾದ ಪ್ರಪಂಚಗಳಿಗೆ ಸೇರುತ್ತವೆ ಎಂದರೂ ತಪ್ಪಾಗುವುದಿಲ್ಲ.

ಜನಮನಸ್ಸಿನ ಭಾಗೀರಥಿಯಾಗಿ, ಕವಿಜಹ್ನುವಿನ ವಾಗ್‌ಧಾರೆಯಿಂದ ಹೊಮ್ಮಿದ ಜಾಹ್ನವಿಯಾಗಿ, ಅವಿನಾಶಿಯಾದ ಚಿರಕಾವ್ಯವಾಗಿ ಪರಿಣಮಿಸಿರುವ ಮಹಾ ಮೇರುಕೃತಿಗಳಲ್ಲಿ ಪ್ರಪ್ರಥಮವೂ ಅತ್ಯಂತ ಪೂಜ್ಯವೂ ಆಗಿರುವುದೆಂದರೆ ಆದಿಕವಿ ವಾಲ್ಮೀಕಿಯ ಶ್ರೀಮದ್ ರಾಮಾಯಣ. ಸಾಮಾನ್ಯರಿಗೆ ಅದೊಂದು ಪುರಾಣ; ತದ್ವಿದರಿಗೆ ಇತಿಹಾಸ; ಸಹೃದಯರಿಗೆ ಅದೊಂದು ಮಹಾಕಾವ್ಯ. ತತ್ಕಾಲದ ಲೋಕಧರ್ಮವೆ ಪರಮಪ್ರಮಾಣವೆಂದು ಭಾವಿಸುವ ಕೆಲವು ಆಧುನಿಕರಿಗೆ ರಾಮಾಯಣ ಕೇವಲ ಕಟ್ಟುಕಥೆ. ಅಲ್ಲಿ ಬರುವ ಘಟನೆಗಳೂ ವ್ಯಕ್ತಿಗಳೂ ವ್ಯಕ್ತಿವ್ಯಾಪಾರಗಳೂ ಅತ್ಯುತ್‌ಪ್ರೇಕ್ಷಿತ ಇಲ್ಲ ಅಪ್ರಾಕೃತವಾಗಿ ಸದ್ಯದ ಈ ಲೋಕದ ಸ್ಥಿತಿಗೂ ರೀತಿಗೂ ದೂರವಾಗಿರುವುದರಿಂದ ಅದನ್ನವರು ಸತ್ಯಕ್ಕೆ ಸಲ್ಲಬೇಕಾದ ಗೌರವದಿಂದ ಕಾಣಲು ಸಮ್ಮತಿಸುವುದಿಲ್ಲ. ಮತ್ತೆ ಕೆಲವು ಸಂಪ್ರದಾಯಶೀಲರಾದರೊ ಅಲ್ಲಿರುವುದನ್ನೆಲ್ಲ ಅಕ್ಷರಶಃ ಸತ್ಯವೆಂದು ಭಾವಿಸಿ, ಸಮರ್ಥಿಸಿ, ಪೂಜಿಸುತ್ತಾರೆ. ಇನ್ನು ಕೆಲವರು ಅದರಲ್ಲಿ ಭರತವರ್ಷದ ಬಹು ಪೂರ್ವಕಾಲದ ಚರಿತ್ರೆಯನ್ನು ಹುಡುಕ ಹೊರಟು ಆರ್ಯದ್ರಾವಿಡ ನಾಗರಿಕತೆಗಳ ಸಂಘರ್ಷಣೆಯ ಚಿತ್ರವನ್ನು ಕಾಣಲು ಹವಣಿಸುತ್ತಾರೆ. ಇಷ್ಟೊಂದು ಭಿನ್ನರುಚಿಯ ಮತ್ತು ಭಿನ್ನ ದೃಷ್ಟಿಯ ಈ ಎಲ್ಲ ರಾಮಾಯಣಪ್ರೇಮಿಗಳಿಗೂ ಸಾಧಾರಣವಾಗಿರುವ ವಿಷಯ ಒಂದಿದೆ. ಅದೇನೆಂದರೆ ಅವರೆಲ್ಲರೂ ರಾಮಾಯಣವನ್ನು ಪ್ರತಿಕೃತಿಯ ದೃಷ್ಟಿಯಿಂದ ನೋಡಲೂ ಅಳೆಯಲೂ ಬೆಲೆ ಕಟ್ಟಲೂ ಪ್ರಯತ್ನಿಸುತ್ತಾರೆ ಎಂಬುದು. ರಾಮಾಯಣದಲ್ಲಿ ಇರುವುದೆಲ್ಲ ಅಕ್ಷರಶಃ ಸತ್ಯ ಎನ್ನುವಾತನು ಅದು ಲೋಕವೃತ್ತದ ಪ್ರತಿಕೃತಿ ಎಂದೇ ಸಾಧಿಸ ಹೊರಡುತ್ತಾನೆ. ಅದು ಬರಿಯ ಅತಿಮಾನುಷ ವ್ಯಾಪಾರಗಳಿಂದ ಕೂಡಿದ ಕಟ್ಟುಕಥೆ ಎನ್ನುವಾತನೂ ಅದು ತನಗೆ ತಿಳಿದಿರುವ ಲೋಕವೃತ್ತದ ಪ್ರತಿಕೃತಿಯಂತೆ ಇಲ್ಲ ಎನ್ನುವ ಕಾರಣದಿಂದಲೆ ಹಾಗೆ ವಾದಿಸುತ್ತಾನೆ. ಅಂತೂ ಅವರೆಲ್ಲರಿಗೂ ಸಾಧಾರಣವಾದುದೆಂದರೆ ಈ ಪ್ರತಿಕೃತಿಯ ದೃಷ್ಟಿ.

ಆದರೆ ಕವಿಕೃತಿ ರಾಮಾಯಣವನ್ನು ಮತ್ತೊಂದು ದೃಷ್ಟಿಯಿಂದ ಸಮೀಕ್ಷಿಸಬಹುದು. ಅದು ಪ್ರತಿಮಾದೃಷ್ಟಿ. ಆ ದೃಷ್ಟಿಯಿಂದ ಪರಿಶೀಲಿಸಿದರೆ ರಾಮಾಯಣ ಒಂದು ನಿತ್ಯಕಥೆಯಂತೆ ಬೋಧೆಯಾಗುತ್ತದೆ. ನಿತ್ಯಕಥೆ ಎಂದರೆ ಭೂತ ವರ್ತಮಾನ ಭವಿಷ್ಯತ್ ಕಾಲಗಳಿಗೆ ಮಾತ್ರ ಅನ್ವಿತವಾಗದೆ ಅವುಗಳನ್ನೊಳಗೊಂಡೂ ಅತೀತವಾಗಿ ನಿಲ್ಲುವ ಕಥೆ: ತ್ರಿಕಾಲಾತೀತವಾದ ಅಲೋಕಸತ್ಯಗಳು ಲೋಕಕಾಲದೇಶಾಧೀನವಾಗಿ ಸ್ವತಂತ್ರವಾಗಿ ರೂಪಗೊಂಡು ಸ್ವಭಾವತಂತ್ರವಾಗಿ ವಿಕಾಸಗೊಳ್ಳುವುದನ್ನು ಪ್ರತಿಮಾವಿಧಾನದಿಂದ ನಿರೂಪಿಸುವ ಕಥೆ.

ಶ್ರೀಮದ್ ರಾಮಾಯಣವನ್ನು ಪ್ರತಿಮಾವಿಧಾನದಿಂದ ರೂಪುಗೊಂಡ ಅಂತಹ ನಿತ್ಯಕಥೆ ಎಂದು ಸಮೀಕ್ಷಿಸಿದರೆ, ಶ್ರೀರಾಮನು ಹುಟ್ಟಿದನು, ಸೀತಾದೇವಿಯನ್ನು ಮದುವೆಯಾದನು, ತಂದೆಯ ಮಾತಿನಂತೆ ಕಾಡಿಗೆ ಹೋದನು, ರಾಕ್ಷಸರೊಡನೆ ಯುದ್ಧಮಾಡಿ ರಾವಣನನ್ನು ಕೊಂದನು ಎಂಬ ಭೂತಕಾಲ ಕ್ರಿಯಾಪದಪ್ರಯೋಗ ಮಾತ್ರ ಸತ್ಯವಾಗದೆ, ಶ್ರೀರಾಮನು ಹುಟ್ಟುತ್ತಿದ್ದಾನೆ, ಸೀತಾದೇವಿಯನ್ನು ಮದುವೆಯಾಗುತ್ತಿದ್ದಾನೆ, ಕಾಡಿಗೆ ಹೊರಟಿದ್ದಾನೆ, ರಾಕ್ಷಸರೊಡನೆ ಕಾಳೆಗವಾಡಿ ರಾವಣನನ್ನು ಕೊಲ್ಲುತ್ತಿದ್ದಾನೆ ಎಂಬ ವರ್ತಮಾನಕಾಲ ಕ್ರಿಯಾಪದಪ್ರಯೋಗವೂ ಸತ್ಯವಾಗುತ್ತದೆ. ಅಂತೆಯೇ ಭವಿಷ್ಯತ್ ಕಾಲ ಕ್ರಿಯಾಪದಪ್ರಯೋಗವೂ ಸತ್ಯವಾಗುತ್ತದೆ. ಒಬ್ಬನ ಅನುಭವಕ್ಕೆ ರಾಮನು ಹುಟ್ಟುತ್ತಿರುವುದೂ ಇನ್ನೊಬ್ಬನ ಅನುಭವಕ್ಕೆ ಅವನು ರಾವಣನನ್ನು ಕೊಲ್ಲುತ್ತಿರುವುದೂ ಸತ್ಯವಾಗುತ್ತವೆ. ಅಷ್ಟೇ ಅಲ್ಲದೆ ಏಕಸಮಯದಲ್ಲಿಯೇ ಎಲ್ಲವೂ ನಡೆಯುತ್ತಿರುವುದೂ ಸತ್ಯವಾಗುತ್ತದೆ. ತನ್ನ ಲೀಲಾರೂಪದಲ್ಲಿ ತ್ರಿಕಾಲದಲ್ಲಿ ವ್ಯಕ್ತಗೊಳ್ಳುವ ಕಥೆ, ಎಂದರೆ ಇಲ್ಲಿ ಶ್ರೀರಾಮಾವತಾರ ಚರಿತ, ತನ್ನ ನಿತ್ಯರೂಪದಲ್ಲಿ ಕಾಲಕ್ಕೆ ಅತೀತವಾಗಿ ಸ್ಥಿತವಾಗಿರುತ್ತದೆ. ಹಾಗಿರುವುದರಿಂದಲೆ ಶ್ರೀರಾಮಾಯಣ ಕಾವ್ಯದಂತಹ ಮಹಾ ಕವಿಕೃತಿಗಳು ನಿತ್ಯಕಾವ್ಯಗಳಾಗಿ ಯಾರು ಯಾವ ನೋಟದಿಂದ, ಎಂತಹ ಸಂಸ್ಕಾರದ ಸೋಪಾನದಿಂದ ಈಕ್ಷಿಸಿದರೂ ಅವರವರಿಗೆ ಆಯಾ ರೀತಿಯಿಂದಲೆ ‘ದರ್ಶನ’ವಿತ್ತು ಸಂತೃಪ್ತಿಕರವಾಗುತ್ತವೆ.

ನಿತ್ಯರೂಪದಲ್ಲಿರುವ ನಿತ್ಯಕಥೆ ರಾಮಾಯಣವು ಜಾಗ್ರತ್‌ಸತ್ತೆಯಾದ ನಮ್ಮ ವಾಸ್ತವಪ್ರಪಂಚಕ್ಕಿಳಿದು ಚರಿತ್ರೆಯ ರೂಪದಿಂದ ಇತಿಹಾಸ ಭಗೀರಥನ ಹಿಂದೆ ಬಹುದೂರ ನಡೆದಿರಬೇಕು. ಆ ವಾಸ್ತವ ಚರಿತ್ರೆಯ ರೂಪಸ್ವರೂಪಗಳು ಹೇಗಿದ್ದುವೊ ನಾವು ಖಚಿತವಾಗಿ ಅರಿಯಲಾರದವರಾಗಿದ್ದೇವೆ. ಹಾಗೆ ಅರಿಯಲು ಸಾಧ್ಯವಾಗಿದ್ದರೆ ರಾಮ ರಾವಣರು ಚರಿತ್ರೆಯ ವ್ಯಕ್ತಿಗಳಾಗಿ ಅಶೋಕ ಅಕ್ಬರರಂತೆ ನಮಗೆ ಪರಿಚಿತರಾಗುತ್ತಿದ್ದರು; ರಾಮಾಯಣ ಕಾವ್ಯವಾಗಿರದೆ ಚರಿತ್ರೆಯಾಗಿರುತ್ತಿತ್ತು. ಈಗ ನಮಗೆ ಲಭಿಸುವುದು ಅವರ ಪ್ರತಿಕೃತಿಸ್ವರೂಪವಲ್ಲ, ಪ್ರತಿಮಾಸ್ವರೂಪ. ಆದರೆ ಇತಿಹಾಸ ಭಗೀರಥನ ಹಿಂದೆ ಬಂದ ರಾಮಾಯಣಕಥಾಗಂಗೆ ಕವಿಜಹ್ನು ವಾಲ್ಮೀಕಿಯ ಹೃದಯಪ್ರವೇಶ ಮಾಡಿ ಮರೆಯಾದವಳು ಮತ್ತೆ ಕವಿ ಪ್ರತಿಭೆಯಿಂದ ಪ್ರಚೋದಿತಳಾಗಿ ಜಹ್ನುಕರ್ಣಸದೃಶವಾದ ಕವಿಕಲ್ಪನಾ ಜ್ಯೋತಿರ್ಮಾರ್ಗದಿಂದ ಛಂದಶ್ಯರೀರಿಯಾಗಿ ಹೊರಹೊಮ್ಮಿದಾಗ, ಅವಳಾ ಭಾಗೀರಥಿಯ ಸ್ವರೂಪವು ಸಂಪೂರ್ಣವಾಗಿ ಪರಿವರ್ತಿತವಾಗಿ, ಜಾಹ್ನವೀ ರೂಪದಿಂದ ಜಗದ್‌ಯಾತ್ರಿಯಾಗಿ, ಅಂದಿನಿಂದ ಇಂದಿನವರೆಗೂ ಸಕಲ ಜೀವಕಲ್ಯಾಣಕಾರಿಣಿಯಾಗಿದ್ದಾಳೆ.

ಭಗವಚ್ಚರಣದಿಂದ ಸಂಭವಿಸಿದರೂ ಭಗೀರಥನನ್ನು ಹಿಂಬಾಲಿಸಿ ಬಂದರೂ ಜಾಹ್ನವಿ ಪ್ರಮುಖವಾಗಿ ಜಹ್ನುಜಾತೆ. ನಮಗೆ ಲಭಿಸಿರುವಂತೆ ಆಕೆ ಜಹ್ನು ಸೃಷ್ಟಿ ಅಥವಾ ಕೃತಿ. ಅಂತೆಯೆ ರಾಮಾಯಣ ಮಹಾಕಾವ್ಯವೂ “ಬ್ರಹ್ಮಪೂಜಿತಮ್” ಆದರೂ “ಮುಖ್ಯಂ ವಾಲ್ಮೀಕಿನಾ ಕೃತಮ್” ವಾಲ್ಮೀಕಿಯ ಸೃಷ್ಟಿ ಅಥವಾ ಕೃತಿ. ಕವಿಪ್ರತಿಭೆ ಲೋಕವೃತ್ತವನ್ನು ನುಂಗಿ ಹಾಗೆಯೇ ವಮನ ಮಾಡುವುದಿಲ್ಲ. ಹುಲ್ಲನ್ನು ಮೇದರೂ ಹಾಲನ್ನು ಕೊಡುವ ಗೋವಿನಂತೆ ಅದು ತಾನು ಒಳಕೊಳ್ಳುವುದನ್ನು ತನ್ನ ತಪಶ್ಯಕ್ತಿಯಿಂದ ಪರಿವರ್ತಿಸಿ ಸುಧೆಯಂತಹ ಸಂಪೂರ್ಣ ನೂತನ ಪದಾರ್ಥವನ್ನು ಸೃಜಿಸಿ ದಾನಮಾಡುತ್ತದೆ. ಬರಿದು ಹುಲ್ಲನ್ನೇ ತಿಂದರೂ ಹಾಲನ್ನು ಕೊಡುವ ಹಸುವನ್ನು ನೋಡಿ ನಮ್ಮ ಶುಷ್ಠ ತಾರ್ಕಿಕಬುದ್ಧಿ ‘ಹುಲ್ಲು ಸತ್ಯ, ಹಾಲು ಮಿಥ್ಯೆ’ ಎಂದು ವಾದಿಸಿದರೆ, ಹಾಲನ್ನು ಕುಡಿದು ಪುಷ್ಟಿಹೊಂದುತ್ತಿರುವವನು ಕನಿಕರಿಸಿ ನಗಬೇಕಾಗುತ್ತದೆ. ಏಕೆಂದರೆ, ಗೋವು ಹುಲ್ಲನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಪುಡಿಮಾಡಿ ಸಾಗಿಸುವ ಮೃತಪ್ರಾಯವಾದ ಜಡಯಂತ್ರ ಮಾತ್ರವಲ್ಲ. ಅದು ಜೀವಂತವಾದ ಒಂದು ಬ್ರಹ್ಮತಂತ್ರ; ಅಥವಾ ಪ್ರಾಣಮಯವಾದ ಚಿದ್‌ಯಂತ್ರ. ಈಶ್ವರೀ ಚಿತ್‌ತಪಸ್ಸು ತೃಣವನ್ನೂ ಕ್ಷೀರವಾಗಿಸುವ ಋತಶಕ್ತಿಯಾಗಿ ಗೋವಿನಲ್ಲಿ ನೆಲೆಸಿದ್ದಾಳೆ. ಆದ್ದರಿಂದಲೆ ನಾವು ಸತ್ಯ ಎಂದು ಭಾವಿಸುವ ಹುಲ್ಲಿಗೆ ಪ್ರತಿಯಾಗಿ ಪಡೆಯುವ ಹಾಲು ಮಿಥ್ಯೆಯಾಗುವುದಿಲ್ಲ. ಅದೂ ಹುಲ್ಲಿನಂತೆಯೆ ಸತ್ಯ; ಅಥವಾ ಬಾಳ್ವೆಯ ದೃಷ್ಟಿಯಿಂದ ಹೇಳುವುದಾದರೆ ಹುಲ್ಲಿಗಿಂತಲೂ ಹೆಚ್ಚಿನ ಸತ್ಯ. ಏಕೆಂದರೆ ಹುಲ್ಲಿನಲ್ಲಿ ಇಲ್ಲದ ಅನೇಕ ರಸ ರುಚಿ ಸತ್ತ್ವಗಳು ಹಾಲಿನಲ್ಲಿರುತ್ತವೆ. ಸೇವಿಸಿದವರಿಗೆ ಗೊತ್ತಾಗುತ್ತದೆ ಅವು ಮಿಥ್ಯೆಯಲ್ಲ ಎಂಬ ಸತ್ಯ.

ವಾಲ್ಮೀಕಿಯಂತಹ ಋಷಿಕವಿಯ ತಪೋಮಯವಾದ ಮಹಾಮನಸ್ಸು ಋತಚಿಚ್ಛಕ್ತಿ ಸರ್ವದಾ ಕ್ರಿಯೋನ್ಮುಖವಾಗಿ ಪ್ರಜ್ವಲಿಸುತ್ತಿರುವ ಅಗ್ನಿಮಯವಾದ ಯಜ್ಞಶಾಲೆಯಾಗಿರುತ್ತದೆ. ಅಲ್ಲಿಗೆ ಜಳ್ಳು ಹೊಕ್ಕರೂ ದಳ್ಳುರಿಯಾಗಿ ಪರಿಣಮಿಸುತ್ತದೆ. ಆ ಜ್ವಾಲೆ ಹೋಮವಸ್ತುವಿಗಿಂತಲೂ ಸತ್ಯಸ್ಯ ಸತ್ಯ. ಮಹರ್ಷಿ ವಾಲ್ಮೀಕಿಯ ಮನೋಧೇನುವಿನ ಶ್ರೀಮಚ್ಚಿತ್‌ತಪಸ್ಸಿನ ಅಧಿಕಾರಕ್ಕೆ ಒಳಗಾದರೆ ಎಂತಹ ಬಣಗು ತೃಣವೂ ಅಮೃತವಾಗಿ ಪರಿವರ್ತಿತವಾಗುತ್ತಿತ್ತು ಎಂದ ಮೇಲೆ ಶ್ರೀರಾಮಚರಿತದಂತಹ ಸದ್ವಸ್ತು ಅದಕ್ಕೆ ವಿಷಯವಾದರೆ ಎಂತಹ ರಸಾಮೃತ ಸೃಷ್ಟಿಯಾಗಬೇಕೊ ಅಂತಹ ರಸಾಮೃತವೆ ಸೃಷ್ಟಿಯಾಗಿದೆ ಶ್ರೀಮದ್ರಾಮಾಯಣದಲ್ಲಿ.

ಮಹರ್ಷಿಯ ಮಹಾಪ್ರತಿಭೆ ತನಗೆ ದೊರೆಕೊಂಡ ಲೋಕಚರವಾದ ಲೀಲಾರೂಪಗಳಿಗೆ ಅವುಗಳ ಸ್ವಸ್ವರೂಪವಾದ ನಿತ್ಯರೂಪಗಳನ್ನು ಆಮಂತ್ರಿಸಿ ಶ್ರೀಮದ್‌ರಾಮಾಯಣವೆಂಬ ಒಂದು ನಿತ್ಯಕಥೆಯನ್ನು ಲೋಕಕ್ಕೆ ಅನುಗ್ರಹಿಸಿದೆ. ಪ್ರತಿಮಾ ದೃಷ್ಟಿಯಿಂದ ಅದರ ನಿತ್ಯತ್ವವನ್ನು ಗ್ರಹಿಸಿ ಕಾವ್ಯೋಪಾಸನೆ ಮಾಡುವ ಸಹೃದಯರಿಗೆ ಮುಮುಕ್ಷುಗಳೆಲ್ಲರ ಆಕಾಂಕ್ಷೆಯ ಪರವಸ್ತುವೂ ಅತ್ಯಂತ ಪರಮ ಶ್ರೇಯಸ್ಸೂ ಆಗಿರುವ ರಸರೂಪಿ ಸಚ್ಚಿದಾನಂದ ಸಾಕ್ಷಾತ್ಕಾರವಾಗುವುದರಲ್ಲಿ ಒಂದಿನಿತೂ ಸಂದೇಹವಿಲ್ಲ:

“ತನ್ನ ಲೀಲಾ ಲೋಕಲೋಕಂಗಳಂ ಸೃಜಿಸಲ್
ಅನಾದಿಕವಿ, ಪರಮ ಪುರುಷೋತ್ತಮಂ, ಸರ್ವೇಶ್ವರಂ,
ಬೇರೆಬೇರೆಯ ವಿಶ್ವಕವಿಗಳಂ ಬ್ರಹ್ಮರ್ಕಳಂ
ನಿರ್ಮಿಪೋಲ್, ನಮ್ಮೀ ಚತುರ್ಮುಖ ಜಗತ್ ಕರ್ತೃ ತಾಂ
ತನ್ನ ಲೀಲೆಯ ಕಾವ್ಯಸತ್ತೆಯ ಬೃಹತ್‌ಕೃತಿಗಳಂ
ಸೃಷ್ಟಿಸೆ ವಸುಂಧರೆಯೊಳಂತೆಯೆ ಕವೀಂದ್ರರ್ಕಳಂ
ಪುಟ್ಟಿಪನ್ ಬ್ರಹ್ಮಕೃತಿಯೊಳ್ ಸಚ್ಚಿದಾನಂದಮಂ
ವ್ಯಕ್ತಗೊಳಿಪಂತುಟಾ ಅವ್ಯಕ್ತ ಪರಮ ತತ್ತ್ವಂ,
ವರಕವಿಯ ಕಾವ್ಯಸತ್ತೆಯೊಳಾತ್ಮರಸ ಸತ್ಯಮಂ
ಪ್ರಕಟಿಸುವನೀ ಬ್ರಹ್ಮನನ್ಯವಿಧದಿಂದೆಮ್ಮ
ಮರ್ತ್ಯ ಪೃಥಿವೀ ತತ್ತ್ವದೊಳ್ ಪ್ರಕಟನಾಸಾಧ್ಯಮಂ,
ಅನಿರ್ವಚನ ಬೋಧ್ಯಮಂ, ಪ್ರತಿಮಾ ವಿಧಾನದಿಂ
ರಸಋಷಿ ಪ್ರತಿಭಾನ ಮಾತ್ರ ಸಂವೇದ್ಯಮಂ…….”
“…….ಕವಿಕೃತಿಯುಮಾ ಬ್ರಹ್ಮಕೃತಿಯಂತೆ ಋತಚಿದ್
ವಿಲಾಸಮ್; ಆ ಕೃತಿಲೋಕಮೀ ಪ್ರಕೃತಿ ಲೋಕದೊಲೆ
ಬಹುಲೋಕ ಕಿರಣಮಯ ಸತ್ಯಸೂರ್ಯೋತ್ತಮನ
ಚಿತ್‌ಪ್ರಕಾಶನದೊಂದು ರಸಲೋಕರೂಪ ಕಿರಣಂ.
ಸಂಭವಿಸಿ ಭವಕಿಳಿದು ವಾಣೀಪತಿಯ ಕೃತಿಯ
ವಿಭವಗಳನನುಭವಿಸುವೋಲುಣ್ಬವೋಲ್ ಕಾಣ್ಬವೋಲ್
ಕಾಣವೇಳ್ಕುಂ ಪೊಕ್ಕು ಕೃತಿನೇತ್ರಪಥದಿಂ
ಕವೀಂದ್ರ ಮತಿಲೋಕದೊಳ್ ಪೊಳೆವ ಋತಕಲ್ಪನಾ
ಮೂರ್ತಂಗಳಂ, ಭಾವಚರ ನಿತ್ಯ ಸತ್ಯಂಗಳಂ.”