ಇದ್ದುದನ್ನು ಇದ್ದಂತೆಯೆ, ನಡೆದುದನ್ನು ನಡೆದಂತೆಯೆ ಚಿತ್ರಿಸಲು ಪ್ರಯತ್ನಿಸುತ್ತದೆ- ಪ್ರತಿಕೃತಿಯ ವಿಧಾನ. ಪ್ರಯತ್ನಿಸುತ್ತದೆ ಎಂಬ ಪದದ ಸಂಪೂರ್ಣ ಪ್ರಯೋಜನವನ್ನು ಸಂಪೂರ್ಣವಾಗಿ ನಾವು ಸ್ವೀಕರಿಸಬೇಕು. ಏಕೆಂದರೆ ಅಂತಹ ಪ್ರಯತ್ನ ಎಂದೆಂದಿಗೂ ಸಂಪೂರ್ಣವಾಗಿ ಸಫಲವಾಗುವುದಿಲ್ಲ. ಹಾಗೆ ಸಫಲವಾಗುವುದಾದರೆ ಅದೂ ಬ್ರಹ್ಮಸೃಷ್ಟಿಯೆ ಆದೀತು. ಬ್ರಹ್ಮಸೃಷ್ಟಿಗೆ ಎಷ್ಟು ಸದೃಶವಾದರೂ ವಿಶ್ವಾಮಿತ್ರಸೃಷ್ಟಿ ಬೇರೆಯಾಗಿಯೆ ನಿಲ್ಲುವಂತೆ, ಕವಿಕೃತಿ ಪ್ರಕೃತಿಗೆ ಅದೆಂತಹ ಪ್ರತಿಕೃತಿಯನ್ನೊಡ್ಡಲು ಸಮರ್ಥವಾದರೂ ಪ್ರಕೃತಿಗೆ ಬೇರೆಯಾಗಿಯೆ ನಿಲ್ಲುತ್ತದೆ. ಹಾಗೆ ಸಂಪೂರ್ಣವಾಗಿ ಪ್ರಕೃತಿತಂತ್ರವಾಗಿರದೆ ಪ್ರತಿಭಾತಂತ್ರವಾಗಿ ಮೂಡುವುದು ಕವಿಕೃತಿಗೆ ಅನಿವಾರ್ಯ ಮಾತ್ರವಲ್ಲ, ಕಲಾದೃಷ್ಟಿಯಿಂದ ಇಷ್ಟವೂ ಹೌದು. ಏಕೆಂದರೆ ಕಲೆ ಅದೆಂತಹ ವೀರ ಪ್ರತಿಕೃತಿ ನಿರ್ಮಾಣಶ್ರದ್ಧೆಯಿಂದ ಕೂಡಿದ್ದರೂ ತನ್ನ ಸಾಮಗ್ರಿಯನ್ನು ಆಯ್ಕೆಗೂ ಜೋಡಣೆಗೂ ಒಳಪಡಿಸದಿರಲು ಸಾಧ್ಯವಾಗುವುದಿಲ್ಲ. ಜೊತೆಗೆ ಭಾವದ ಬಣ್ಣದಿಂದ ಅನುಭವದ ವಿಷಯ ಅಲಂಕೃತವಾಗಿಯೆ ತೀರುತ್ತದೆ. ಚೇತನವಿಹೀನವಾದ ಶುಭ್ರದರ್ಪಣವು ಒಂದು ವಸ್ತುವನ್ನಾಗಲಿ ದೃಶ್ಯವನ್ನಾಗಲಿ ಪ್ರತಿಬಿಂಬಿಸುವಂತೆ ಆಶೆ ಅಪೇಕ್ಷೆ ರಾಗ ದ್ವೇಷ ಅಭಿಪ್ರಾಯ ಆದರ್ಶಗಳಿಂದ ಕೂಡಿರುವ ಮಾನವ-ಮನಸ್ಸು ಬಾಹ್ಯಪ್ರಪಂವನ್ನು ಗ್ರಹಿಸುವುದಿಲ್ಲ. ಹಾಗೆ ಗ್ರಹಿಸುವುದೆ ಅಸಾಧ್ಯವಾಗಿರುವಾಗ ಇನ್ನು ಹಾಗೆಯೆ ಅಭಿವ್ಯಕ್ತಗೊಳಿಸುವುದು ಹೇಗೆತಾನೆ ಸಾಧ್ಯ? ಬದುಕಿನಲ್ಲಿಯೆ ಪ್ರತಿಕೃತಿಯ ವಿಧಾನ ನೈಜವಲ್ಲ; ಔಪಚಾರಿಕ. ಎಂದಮೇಲೆ ಕಲೆಯಲ್ಲಿ ಅದು ತಲೆದೋರುವುದೆಂತು? ಸಾಧ್ಯವಿಲ್ಲ. ಅದಕ್ಕಾಗಿಯೆ, ಇದ್ದುದನ್ನು ಇದ್ದಂತೆ ಚಿತ್ರಿಸಲು ‘ಪ್ರಯತ್ನಿಸುತ್ತದೆ’ ಪ್ರತಿಕೃತಿಯ ವಿಧಾನ-ಎಂದು ನಾವು ಹೇಳಿದ್ದು. ಆ ಪ್ರಯತ್ನ ಸಫಲವಾಗಲಿ ವಿಫಲವಾಗಲಿ ಅದು ಇಲ್ಲಿ ನಮಗೆ ಅಪ್ರಧಾನ. ಅಂತಹ ಪ್ರಯತ್ನ ನಡೆಯಿತೆಂದರೆ ಸಾಕು. ಅದನ್ನು ಪ್ರಚೋದಿಸುವ ದೃಷ್ಟಿಗೆ “ಪ್ರತಿಕೃತಿ ದೃಷ್ಟಿ” ಎಂದು ಕರೆಯುತ್ತೇವೆ. ಅಂತಹ ದೃಷ್ಟಿಯಿಂದ ರೂಪುಗೊಳ್ಳುವ ಕಲಾಕೃತಿಯ ರೀತಿ ಪ್ರತಿಕೃತಿಯ ವಿಧಾನವಾಗುತ್ತದೆ.

ಇದ್ದದ್ದನ್ನು ಇದ್ದಂತೆಯೆ, ನಡೆದುದನ್ನು ನಡೆದಂತೆಯೆ ಚಿತ್ರಿಸಬೇಕು ಎಂಬ ಪ್ರಯತ್ನಕ್ಕೆ ಹೋಗದೆ ಇದ್ದದ್ದೂ ನಡೆದದ್ದೂ ತನಗೆ ಹೇಗೆ ಗೋಚರಿಸಿತೊ ಆ ತನ್ನ ಅನುಭವಕ್ಕೆ ಆಕಾರ ಕಲ್ಪನೆಮಾಡುವ ಪ್ರಯತ್ನದ ರೀತಿಯನ್ನು ಪ್ರತಿಮಾವಿಧಾನವೆಂದು ಕರೆಯುತ್ತೇವೆ. ಪ್ರತಿಮಾದೃಷ್ಟಿಗೆ ವಸ್ತುವಿಗಿಂತಲೂ ಆ ವಸ್ತು ಪ್ರಚೋದಿಸುವ ಅನುಭವವೆ ವಿಶೇಷವಾಗಿ ಮಾನ್ಯ ವಿಷಯ. ಅಲ್ಲದೆ, ವಸ್ತುವಿಗಿಂತಲು ಆ ವಸ್ತುವಿಗೆ ಕಾರಣವಾದ ಅಥವಾ ಪ್ರೇರಣವಾದ ಶಕ್ತಿ ಅಥವಾ ಚೈತನ್ಯವೆ ಪ್ರತಿಮಾದೃಷ್ಟಿಗೆ ಅಗ್ರಗಣ್ಯವಾದ ಪರಮಪ್ರಯೋಜನದ ಕಲಾವಿಷಯ. ಪ್ರತಿಕೃತಿ ವಿಧಾನವು ಪ್ರಧಾನವಾಗಿ ವಸ್ತುನಿಷ್ಠವಾದುದಾದರೆ ಪ್ರತಿಮಾವಿಧಾನವು ತತ್ತ್ವನಿಷ್ಠ. ಪ್ರತಿಕೃತಿ ವಿಧಾನದ ಆಶಯ ಸೇಂದ್ರಿಯವೂ ವೈಷಯಿಕವೂ ತತ್ಕಾಲಗತ ಘಟನಾಪ್ರಧಾನವೂ ಆಗಿರುವ ಬಾಹ್ಯಸತ್ಯ; ಅಥವಾ ತಾದ್ರೂಪಕಸತ್ಯ. ಪ್ರತಿಮಾವಿಧಾನದ ಆಶಯ ಅತೀಂದ್ರಿಯವಾಗಿ, ವಿಷಯಕ್ಕೆ ಕಾರಣ ಸ್ವರೂಪವೂ ಪ್ರಯೋಜನಸ್ವರೂಪವೂ ಆಗಿ, ಕಾಲಿಕಮಾತ್ರವಾಗಿರದೆ ಧ್ಯೇಯಾತ್ಮಕವೂ ಆಗಿರುವ ಭಾವಸತ್ಯ; ಅಥವಾ ತಾದಾತ್ಮ್ಯಕಸತ್ಯ.

ಪ್ರತಿಕೃತಿಯ ದೃಷ್ಟಿ, ಲೌಕಿಕ ದೃಷ್ಟಿ; ಅದರ ಪ್ರಯೋಜನವೂ ಸಾಮಾನ್ಯವಾಗಿ ಬಹುಮಟ್ಟಿಗೆ ಲೌಕಿಕವೆ. ಪ್ರತಿಮಾದೃಷ್ಟಿ ಅಪೂರ್ವವಾಗಿ ಲೌಕಿಕವಾಗಿದ್ದರೂ ಸಾಧಾರಣವಾಗಿ ಅಲೌಕಿಕ; ಅದರ ಪ್ರಯೋಜನದ ವಿಚಾರವಾಗಿಯೂ ಆ ಮಾತೆಯೆ ಸಲ್ಲುತ್ತದೆ.

ಕಲೆಯಲ್ಲಿ ಈ ಎರಡು ದೃಷ್ಟಿಗಳೂ ಇವೆ. ಕಲೆ ತನ್ನ ದೃಷ್ಟಿಗೆ ಅನುಗುಣವಾಗಿ ಈ ಎರಡೂ ವಿಧಾನಗಳನ್ನು ಅನುಸರಿಸುತ್ತದೆ. ನಾಟಕ ಕಲೆಯಲ್ಲಿ ಈ ಎರಡು ದೃಷ್ಟಿಗಳೂ ಮತ್ತು ವಿಧಾನಗಳೂ ಹೇಗೆ ರೂಪಗೊಳ್ಳುತ್ತವೆ, ಹೇಗೆ ಪ್ರಯೋಗವಾಗುತ್ತವೆ ಎಂಬುದನ್ನು ಪರಿಶೀಲಿಸಲು ಸಾಮಾಜಿಕ ಪೌರಾಣಿಕ ಐತಿಹಾಸಿಕ ಮತ್ತು ಕಾಲ್ಪನಿಕ ನಾಟಕಗಳನ್ನು ನಿದರ್ಶನವಾಗಿ ತೆಗೆದುಕೊಳ್ಳಬಹುದು.

ಸಾಮಾಜಿಕ ನಾಟಕಗಳು ಮುಕ್ಕಾಲು ಮೂರುವೀಸ ಪಾಲು ಪ್ರತಿಕೃತಿಯ ದೃಷ್ಟಿಗೂ ವಿಧಾನಕ್ಕೂ ಒಳಗಾಗುತ್ತವೆ. ಅದಕ್ಕೆ ಹತ್ತಿರ ಹತ್ತಿರವಾಗಿ ಐತಿಹಾಸಿಕ ನಾಟಕಗಳು ಬರುತ್ತವೆ. ಪುರಾಣಗಳ ಪ್ರಪಂವೇ ಪ್ರತಿಮಾಪ್ರಪಂಚವಾಗಿರುವುದರಿಂದ ಪೌರಾಣಿಕ ನಾಟಕಗಳೆಲ್ಲ ಅನಿವಾರ್ಯವಾಗಿ ಪ್ರತಿಮಾದೃಷ್ಟಿಯಿಂದ ಪ್ರಚೋದಿತವಾಗಿ ಪ್ರತಿಮಾ ವಿಧಾನದಿಂದ ಮೈಗೊಂಡಿರುತ್ತವೆ.

[1] ಕಾಲ್ಪನಿಕ ನಾಟಕಗಳಲ್ಲಿ ನಾಟಕಕಾರನ ಮನೋಧರ್ಮ ಮತ್ತು ಕಲಾಕೌಶಲ ಇವುಗಳನ್ನು ಅನುಸರಿಸಿ ಪ್ರತಿಕೃತಿ ಮತ್ತು ಪ್ರತಿಮಾ ವಿಧಾನಗಳೆರಡೂ ಪ್ರಯೋಗವಾಗುತ್ತದೆ.

ಪ್ರತಿಕೃತಿಯೇ ಸರ್ವಾಧಿಕಾರಿಯಾಗಿರುವ ಸಾಮಾಜಿಕ ನಾಟಕಗಳಲ್ಲಿ ಪ್ರತಿಮಾ ವಿಧಾನವನ್ನು ತಂದರೆ ಅಸ್ವಾಭಾವಿಕವಾಗುತ್ತದೆ; ವಿಕಾರವಾಗಿ ತೋರಿ ವಿಪರೀತ ಫಲವಾದರೂ ಆಗಬಹುದು. ಸಾಮಾಜಿಕ ನಾಟಕಗಳು ಸಂಪೂರ್ಣವಾಗಿ ಲೋಕಧರ್ಮಿಯಾದುವು; ಅನ್ಯಲೋಕಧರ್ಮಕ್ಕೆ ಅಲ್ಲಿ ಪ್ರವೇಶಿಸಲು ಅವಕಾಶವಿಲ್ಲ. ಲೋಕ ಮತ್ತು ಲೋಕಾಂತರದ ಧರ್ಮಗಳು ಪರಸ್ಪರವಾಗಿ ಹಾಸುಹೊಕ್ಕಾಗಿ ಹೆಣೆದುಕೊಂಡಿರುವ ‘ಶಾಕುಂತಲ’ ನಾಟಕದಲ್ಲಿ ದಿವ್ಯಜ್ಯೋತಿ ಶಕುಂತಲೆಯನ್ನು ಹೊತ್ತುಕೊಂಡು ಹೋದಂತೆ ಲೋಕಧರ್ಮವೇ ಸರ್ವಸ್ವವಾಗಿರುವ ‘ಟೊಳ್ಳು ಗಟ್ಟಿ’ಯಂತಹ ನಾಟಕದಲ್ಲಿ ಪವಾಡಪ್ರವೇಶಕ್ಕೆ ಸ್ಥಾನವಿಲ್ಲ. ಒಂದು ವೇಳೆ ಕೃತಕವಾಗಿ, ಬಲಾತ್ಕಾರವಾಗಿ ಪ್ರವೇಶಿಸಿದರೆ ಮಾನವೂ ಇಲ್ಲವಾಗುತ್ತದೆ. ಸಾಮಾಜಿಕ ನಾಟಕಗಳಲ್ಲಿ ಆಶ್ಚರ್ಯ ಅಥವಾ ಅದ್ಭುತವು ಕೇವಲ ಆಕಸ್ಮಿಕದ ರೂಪದಲ್ಲಿ ತಲೆಹಾಕಬಹುದೇ ಹೊರತು ಅಪ್ರಾಕೃತದ ರೂಪದಲ್ಲಿ ವ್ಯಕ್ತವಾಗಲವಕಾಶವಿಲ್ಲ.[2]

ಐತಿಹಾಸಿಕ ನಾಟಕಗಳಲ್ಲಿ ಪ್ರತಿಕೃತಿಯ ವಿಧಾನವೆ ವಿಶೇಷವಾಗಿ ಮಾನ್ಯವಾದುದಾದರೂ ಪ್ರತಿಮಾವಿಧಾನವನ್ನೂ ಅಪೂರ್ವವಾಗಿ ತಂದರೆ ಅಷ್ಟೇನೂ ವಿಕೃತವಾಗಿ ತೋರದಿರಬಹುದು. ಅಶರೀರವಾಣಿಗಳಿಗೂ ಅತೀಂದ್ರಿಯ ದರ್ಶನಗಳಿಗೂ ಪ್ರತಿಕೃತಿಯ ದೃಷ್ಟಿಯಿಂದಲೂ ಅವಕಾಶವುಂಟೆಂದು ಆಧುನಿಕ ಮನಶ್ಯಾಸ್ತ್ರದ ಆಧಾರದ ಮೇಲೆಯೂ ಸಮರ್ಥಿಸಬಹುದು. ಆದರೆ ಸಾಕ್ಷಾತ್ ಪ್ರತ್ಯಕ್ಷೀಕರಣದ ಸಮರ್ಥನೆಯ ವಿಚಾರದಲ್ಲಿ ಮಾತ್ರ ವೈಜ್ಞಾನಿಕವಾದ ಆಧುನಿಕತೆ ಹಿಂಜರಿಯುತ್ತದೆ. ಅಂತಹ ಎಡೆಗಳಲ್ಲಿ ಕಲೆ ಪ್ರತಿಮಾವಿಧಾನವನ್ನು ತಂದೊಡ್ಡಿ ತನ್ನನ್ನು ತಾನು ಸಮರ್ಥಿಸಿಕೊಳ್ಳಬಹುದು. ಶಿವಾಜಿಗೆ ದುರ್ಗಾಂಬಿಕೆ ಪ್ರತ್ಯಕ್ಷಳಾಗಿ ಖಡ್ಗವನ್ನೂ ಧರ್ಮ ಸಂಸ್ಥಾಪನೆಗೆ ಆದೇಶವನ್ನೂ ಇತ್ತು ಅಂತರ್ಧಾನವಾದಳು ಎಂಬುದನ್ನು ಚಿತ್ರಿಸುವ ನಾಟಕ ದೃಶ್ಯವನ್ನು ಪ್ರತಿಕೃತಿದೃಷ್ಟಿಯಿಂದ ಸಾಧ್ಯವಾಗದಿದ್ದರೆ ಪ್ರತಿಮಾದೃಷ್ಟಿಯಿಂದಲಾದರೂ ಸಮರ್ಥಿಸಬಹುದು. ನಾಟಕದಲ್ಲಿ ಯಾವ ಚಿತ್ರಗಳು ಯಾವ ಕ್ರಮದಲ್ಲಿ ಮೂಡಿ, ಮಾಡಿ, ಆಡಿ, ದೃಶ್ಯಸೃಷ್ಟಿಯಾಗುತ್ತದೆಯೊ ಹಾಗೆಯೆ ತದ್ರೂಪವಾಗಿ ವಾಸ್ತವದಲ್ಲಿಯೂ ಶಿವಾಜಿಯ ಜೀವನ ಚರಿತ್ರೆಯಲ್ಲಿ ನಡೆಯಿತು ಎಂಬುದು ಪ್ರತಿಮಾವಿಧಾನದ ಆಶಯವಾಗಿಲ್ಲ. ಶಿವಾಜಿಯ ಅಂತರನುಭವಗಳಿಗೆ-ಆತನ ಭಕ್ತಿ, ಶ್ರದ್ಧೆ, ಉತ್ಸಾಹ, ಆವೇಶ, ತ್ಯಾಗಶೀಲತೆ, ಧಾರ್ಮಿಕಕ್ರೋಧ, ದುಷ್ಟಶಿಕ್ಷಣ ಶಿಷ್ಟರಕ್ಷಣಭಾವ, ದೈವಿಕದಿಂದಲೇ ತಾನು ಪ್ರಚೋದಿತನೆಂಬ ಆತನ ನಂಬಿಕೆ, ಧರ್ಮರಕ್ಷಣೆಗಾಗಿ ದೇವಿಯಿಂದ ತಾನು ಆಜ್ಞಪ್ತನೆಂಬುವ ಆತನ ಉತ್ಕಟಾನುಭೂತಿ ಇವೇ ಮೊದಲಾದ ಹೃದಯದ ಆವೇಶಭಾವಗಳು ಮೂರ್ತವಾಗಿ ಮೈದೋರುತ್ತವೆ ಎಂಬುದಷ್ಟೆ ಅದರ ಆಶಯ. ಎಂದರೆ ಅದರ ಉದ್ದೇಶ ಭಾವಸತ್ಯವೆ ಹೊರತು ಬರಿಯ ಬಾಹ್ಯಸತ್ಯವಲ್ಲ.

ಪಾಶ್ಚಾತ್ಯರ ಪ್ರಸಿದ್ಧವಾದ ಐತಿಹಾಸಿಕ ನಾಟಕಗಳಲ್ಲಿಯೂ ಈ ಪ್ರತಿಮಾ ವಿಧಾನವನ್ನು ಅಲ್ಲಲ್ಲಿ ಎದುರುಗೊಳ್ಳಬಹುದು. ಅವರ ದೃಷ್ಟಿಯೂ ವಿಧಾನವೂ ವಿಶೇಷವಾಗಿ ಪ್ರತಿಕೃತಿಯದ್ದಾದರೂ ಕಲೆ ಗತ್ಯಂತರವಿಲ್ಲದೆ ಪ್ರತಿಮಾವಿಧಾನವನ್ನೂ ಒಪ್ಪಿಕೊಂಡಿದೆ. ಷೇಕ್ಸ್‌ಪಿಯರ್ ಮಹಾಕವಿಯ ಜಗತ್ಪ್ರಸಿದ್ಧವಾದ ಕೆಲವು ದುರಂತ ನಾಟಕಗಳಲ್ಲಿ ಈ ಪ್ರತಿಮಾವಿಧಾನವನ್ನು ನಾವು ಗುರುತಿಸಬಹುದು. ಉದಾಹರಣೆಗಾಗಿ: ಹ್ಯಾಮ್ಲೆಟ್ ನಾಟಕದಲ್ಲಿ ಬರುವ ಪ್ರೇತ; ಮ್ಯಾಕ್‌ಬೆತ್ ನಾಟಕದಲ್ಲಿ ಬರುವ ಮರುಳುಗಳು.

ಆ ಪ್ರೇತವಾಗಲಿ ಮರುಳುಗಳಾಗಲಿ ನಾಟಕದಲ್ಲಿ ಚಿತ್ರಿತವಾಗಿರುವ ರೀತಿಯಿಂದ ಹೇಳುವುದಾದರೆ, ಬರಿಯ ಭ್ರಾಂತಿಜನ್ಯಮೂರ್ತಿಗಳಲ್ಲ; ಮನೋವಿಕೃತಿಗಳಲ್ಲ; ಪ್ರಕೃತಿಯ ಆಕೃತಿಗಳಾಗಿವೆ. ಅವುಗಳ ವಾಸ್ತವಿಕತೆಯಲ್ಲಿ ನಂಬುಗೆಯುಳ್ಳವರು ಅವನ್ನು ಪ್ರತಿಕೃತಿದೃಷ್ಟಿಯಿಂದಲೇ ಒಪ್ಪಿಕೊಳ್ಳಬಹುದು; ಒಲ್ಲದವರು ಪ್ರತಿಮಾದೃಷ್ಟಿಯಿಂದ ಆ ದೃಶ್ಯದ ರಸಾಸ್ಥಾದನ ಮಾಡಬಹುದು.[3]

ಪೌರಾಣಿಕ ಕಥಾವಸ್ತುಗಳೆಲ್ಲ ಸಂಪೂರ್ಣವಾಗಿ ಪ್ರತಿಮಾಪ್ರಪಂಚಕ್ಕೆ ಸೇರಿರುತ್ತವೆ: ಆದ್ದರಿಂದ ಅಂತಹ ಕಥಾವಸ್ತುಗಳಿಂದ ರಚಿತವಾಗಿರುವ ನಾಟಕಗಳೆಲ್ಲ ಪ್ರತಿಮಾಪ್ರಪಂಚಕ್ಕೇ ಸೇರುತ್ತವೆ. ಅದೇ ಕಾರಣವಾಗಿ ಅವುಗಳ ರಚನಾವಿಧಾನ ಸಂಪೂರ್ಣವಾಗಿ ಪ್ರತಿಮಾವಿಧಾನಕ್ಕೆ ಒಳಪಡುತ್ತದೆ. ಅಂತಹ ಕಥಾವಸ್ತುಗಳನ್ನು ಪ್ರತಿಕೃತಿಯ ರೀತಿಯಿಂದ ಸ್ವೀಕರಿಸುವುದು ಲೋಕಧರ್ಮಿಯಾದ ವಿಚಾರದೃಷ್ಟಿಗೆ ಸಾಧ್ಯವಲ್ಲ. ಅಂತಹ ಕಥೆಗಳನ್ನೆಲ್ಲ ಯಥಾರ್ಥವಾಗಿ ನಡೆದುವೆಂದೂ ‘ಚರಿತ್ರೆ’ಯೆಂದೂ ಭಾವಿಸುವುದು ಬೆಪ್ಪಾಗುತ್ತದೆ. ಹಾಗೆ ಭಾವಿಸುವುದರಿಂದ ಅವುಗಳ ನೈಜಸ್ವರೂಪವೆ ಕಾಣದಾಗಿ, ಆ ಕಾವ್ಯಲೀಲಾ ಪ್ರತಿಮೆಗಳ ಹಿಂದಿರುವ ನಿತ್ಯಸತ್ಯದಿಂದ ನಾವು ಚಿರವಾಗಿ ವಂಚಿತರಾಗುತ್ತೇವೆ; ಚಿಪ್ಪನ್ನೆ ತಿರುಳೆಂದು ಭಾವಿಸಿದಂತೆ. ತಿರುಳಿನ ಅಭಿವ್ಯಕ್ತಿಗೆ ಅನಿವಾರ್ಯವೂ ಅತ್ಯಂತ ಆವಶ್ಯಕವೂ ಆದುದಾದರೂ ಚಿಪ್ಪು ಎಂದಿಗೂ ತಿರುಳಲ್ಲ.[4]

ಪ್ರತಿಮಾ ಪ್ರಪಂಚಕ್ಕೆ ಸೇರಿದ ಪೌರಾಣಿಕ ಕಥಾವಸ್ತುವಿನಿಂದ ನಾಟಕ ರಚನೆ ಮಾಡುವಾತನು ಪ್ರತಿಕೃತಿಯ ವಿಧಾನವನ್ನೇ ಪ್ರಯೋಗಿಸಬೇಕೆಂದು ಹಠ ಮಡಿದರೆ ಅವಿವೇಕವಾಗುತ್ತದೆ, ಗಂಧದ ಮರದಿಂದ ಹಾಲುಗಲ್ಲಿನ ವಿಗ್ರಹವನ್ನು ಕೆತ್ತಬೇಕು ಎಂದಂತೆ. ಪೌರಾಣಿಕ ಕಥಾವಸ್ತುವನ್ನು ಬಳಸುವ ನಾಟಕಕಲೆ ಕೃಪಣವಾದ ‘ಯಥಾರ್ಥತೆ’ಯಿಂದಲೂ ರೂಕ್ಷವಾದ ‘ವಾಸ್ತವಿಕತೆ’ಯಿಂದಲೂ ಪಾರಾಗಿ ಧ್ಯೇಯಜಗತ್ತಿನ ನಿತ್ಯಸತ್ಯಗಳಿಗೆ ಮೂರ್ತಿದಾನಮಾಡುವ ಮಹತ್ಕಾರ್ಯದಲ್ಲಿ ತೊಡಗುತ್ತದೆ. ಅಲ್ಲಿಗೆ ಬೇಕಾದುದು ಪ್ರತಿಮಾದೃಷ್ಟಿ; ಆ ಕಲೆಗೆ ಕ್ಷೇಮಕರವಾದುದು ಪ್ರತಿಮಾವಿಧಾನ.[5]

ಹರಿಶ್ಚಂದ್ರನ ಕಥೆ ಪುರಾಣಕಥೆ. ಹರಿಶ್ಚಂದ್ರನ ‘ಚರಿತ್ರೆ’ ಹೇಗಿತ್ತು ಅಥವಾ ಇರಲಿಲ್ಲ ಎಂಬುದು ನಮಗೆ ತಿಳಿಯದು. ಅಲ್ಲದೆ ಇಲ್ಲಿಗೆ ಅದು ಅಪ್ರಕೃತ. ನಮಗೀಗ ಒದಗಿರುವುದು ಪುರಾಣಕಥೆ. ಅದು ‘ಸತ್ಯಮಹಿಮೆ’ಗೂ ‘ಸತ್ಯಸಾಧನೆ’ಗೂ ‘ಸತ್ಯದ ತಪಸ್ಯೆ’ಗೂ ‘ಸತ್ಯ ಸಾಕ್ಷಾತ್ಕಾ’ಕ್ಕೂ ಮಾನವ ಕಲ್ಪನೆ ಒಡ್ಡಿರುವ ಅತ್ಯದ್ಭುತವಾದ ಕಥಾರೂಪದ ಜೀವಂತ ಪ್ರತಿಮೆ. ಅದನ್ನು ನಾಟಕಸಾಮಗ್ರಿಯನ್ನಾಗಿ ಸ್ವೀಕರಿಸುವ ಕವಿ ‘ಅಲ್ಪ’ವಾದ ಪ್ರತಿಕೃತಿಗೆ ಆ ವಸ್ತುವನ್ನು ಜಗ್ಗಿಸಿ ಕುಗ್ಗಿಸಿದರೆ ಕೃತಿ ‘ಅಲ್ಪ’ವಾಗುತ್ತದೆ. ಆ ಕಥೆಯಲ್ಲಿರುವ ಅಪ್ರಾಕೃತ, ಅತಿಮಾನುಷ, ಅತ್ಯದ್ಭುತಗಳನ್ನು ತೆಗೆದು ಹಾಕಿದರೆ ಏನು ಉಳಿಯುತ್ತದೆ? ಸರಿಯಾಗಿ ವಾದಮಾಡುವುದಕ್ಕೂ ಬರದೆ ಬೆಪ್ಪುಬೆಪ್ಪಾಗಿ ಮಾತನಾಡಿ ತನ್ನೆಲ್ಲವನ್ನೂ ಕಳೆದುಕೊಂಡು, ಹೆಂಡತಿ ಮಕ್ಕಳಿಗೂ ಸರ್ವನಾಶ ತಂದೊಡ್ಡಿ, ಕೊನೆಯಲ್ಲಿ ತಾನೂ ಸಾಯುವ ಅಥವಾ ಸಾವಿಗಿಂತಲೂ ರೂಕ್ಷವಾದ ಒಂದು ದುಃಸ್ಥಿತಿಗಿಳಿಯುವ ಒಬ್ಬ ಬೆಪ್ಪುತಕ್ಕಡಿಯ ಚಿತ್ರ ಉಳಿಯಬಹುದು. ಅಂತಹ ನಾಟಕದಿಂದ ಏನು ತಾನೆ ಸಾಧ್ಯವಾದೀತು? ಪ್ರಾಯಶಃ ಜಾಣನಾದವನು ಆ ನಾಟಕ ನೋಡಿ ‘ಹರಿಶ್ಚಂದ್ರನಂತೆ ಬೆಪ್ಪುತಕ್ಕಡಿಯಾಗಬಾರದು’ ಎಂದು ಘಟ್ಟಿ ಮನಸ್ಸು ಮಾಡಿಕೊಂಡು ಮನೆಗೆ ಹೋಗಿ ವಿಶ್ವಾಮಿತ್ರನಂತೆ ಸಂಪಾದನೆಗೆ ತೊಡಗುತ್ತಾನೆ! ಅಂದರೆ, ಈಗ ಪ್ರಚಲಿತವಾಗಿರುವ ಹರಿಶ್ಚಂದ್ರನ ಕಥೆಯಿಂದ ಒದಗಬಹುದಾದ ಫಲಕ್ಕೆ ಸಂಪೂರ್ಣ ವಿಪರೀತವಾದ ಫಲ ಸಿದ್ಧವಾದಂತಾಯಿತು! ಅದನ್ನು ಕಲಿಯುವುದಕ್ಕೆ ನಾಟಕ ನೋಡಬೇಕೇಕೆ? ಅದನ್ನು ಕಲಿಸುವುದಕ್ಕೆ ನಾಟಕ ರಚಿಸಬೇಕೇಕೆ? ಆ ಬುದ್ಧಿ ನರಪ್ರಾಣಿಗೆ ಪ್ರಕೃತಿದತ್ತವಾದ ಸಹಜ ಸಿದ್ಧಿಯಾಗಿರುವಾಗ ಅದರ ಪ್ರಚೋದನೆಗೆ ಕಲಾಕ್ಲೇಶವೊಂದು ಬೇರೆ ಬೇಕೆ?

ನರತ್ವದಿಂದ ಸುರತ್ವಕ್ಕೆ ವಿಕಾಸಗೊಳ್ಳಲು ತಪಸ್ವಿಯಾಗಿರುವ ಮಾನವತೆಗೆ ಒಂದಿನಿತಾದರೂ ನೆರವಾಗುವ ಕಲೆ ದೈವೀಕಲೆ; ಅದಕ್ಕೆ ಪ್ರತಿಕೂಲವಾಗುವ ಕಲೆ ಎಷ್ಟು ಮನಮೋಹಕವಾಗಿದ್ದರೂ ಆಸುರೀ ಕಲೆ. ಇದುವರೆಗೆ ಪ್ರಪಂಚದ ಸಾಹಿತ್ಯದಲ್ಲಿ ದೈವೀಕಲೆಗೆ ವಿಶೇಷ ಸಹಾಯವಾಗಿ ನಿಂತಿರುವ ವಿಧಾನವೆಂದರೆ ಪ್ರತಿಮಾವಿಧಾನ. ವಿಧಾನಮಾತ್ರದಿಂದ ದೈವೀಗುಣ ಹೊಮ್ಮುತ್ತದೆಂದು ಸಮರ್ಥಿಸುವುದು ಈ ಲೇಖಕನ ಆಶಯವಲ್ಲವಾದರೂ ಯಥಾರ್ಥವಿಜ್ಞಾನದ ಹೆಸರಿನಲ್ಲಿ ಪ್ರತಿಕೃತಿಯ ದೃಷ್ಟಿಯನ್ನೇ ಪರಮಸತ್ಯದ ದೃಷ್ಟಿ ಎಂದು ಪರಿಕೀರ್ತಿಸುವ ಈ ಕಾಲದಲ್ಲಿ ಪ್ರತಿಮಾವಿಧಾನದ ಪಕ್ಷದಲ್ಲಿ ನಿಂತು ಅದರ ಮರ್ಮವನ್ನು ಅರಿಯುವ ಸಾಹಸ ಮಾಡಿದರೆ ನಮ್ಮ ಮಹಾಕಾವ್ಯ ಪುರಾಣ ನಾಟಕಾದಿ ಸಾಹಿತ್ಯಕೃತಿಗಳಲ್ಲಿ ಹುದುಗಿ ಬೆಳಗುತ್ತಿರುವ ಆತ್ಮಶ್ರೀ ನಮ್ಮ ಜನತಾ ಹೃದಯಕ್ಕೆ ದೀಪಧಾರಿಯಾಗಬಹುದೆಂಬ ಪ್ರತ್ಯಾಶೆಯಿಂದ ಅದರ ಪರವಾಗಿ ನಾಲ್ಕಾರು ಸಮರ್ಥನೆಯ ಮಾತುಗಳನ್ನು ಇಲ್ಲಿ ಹೇಳಿದೆ.


[1]       ಅಲ್ಲಿಯೂ ಪ್ರತಿಕೃತಿಯ ವಿಧಾನವನ್ನು ಹೊಂದಿಸುವ ಪ್ರಯತ್ನದ ವಿಕೃತ ಫಲಗಳನ್ನು ಆಧುನಿಕ ನಾಟಕಗಳಲ್ಲಿ ಕಾಣಬಹುದು. ಅಂತಹ ಪ್ರಯತ್ನಕ್ಕೆ ಬೆಂಬಲವಾಗಿರುವ ಮನೋಧರ್ಮವೆಂದರೆ-ಭಾವಲೋಕದ ಸತ್ಯತೆಯ ವಿಚಾರವಾಗಿರುವ ಸಂದೇಹ; ಮತ್ತು ಭವಲೋಕವೇ ಪರಮಸತ್ಯ ಎಂಬ ಶ್ರದ್ಧೆ.

[2]       ಆದರೆ ವೈಜ್ಞಾನಿಕ ನಿಯಮಗಳಿಂದ ಬದ್ಧವಾಗಿರುವ ನಮ್ಮ ಲೋಕದ ವ್ಯಾಪಾರಗಳಲ್ಲಿಯೂ ಅಪ್ರಾಕೃತ, ಅತಿಮಾನುಷ ಮತ್ತು ಅಲೌಕಿಕವಾದ ಶಕ್ತಿಗಳೂ ಚೇತನ ವಿಶೇಷಗಳೂ ಆಗಾಗ ಪ್ರವೇಶಿಸುತ್ತಿರುವುದೂ ಅನುಭವದ ವಿಷಯವಾಗಿರುವುದರಿಂದ ಪ್ರತಿಕೃತಿಯ ವಿಧಾನದಲ್ಲಿಯೂ ಅಪ್ರಾಕೃತ ಏಕ ಪ್ರವೇಶಿಸಬಾರದು ಎಂಬ ಪ್ರಶ್ನೆ ಏಳುತ್ತದೆ, ಔಚಿತ್ಯದ ವಲಯದಲ್ಲಿ ಮಾತ್ರ.

[3]       ಯಾವ ಮನೋಧರ್ಮ ಹ್ಯಾಮ್ಲೆಟ್ ನಾಟಕದಲ್ಲಿ ಪ್ರೇತವನ್ನೂ ಮರುಳುಗಳನ್ನೂ ಸೃಜಿಸಿ ದೃಶ್ಯರಚನೆ ಮಾಡಿ ತನ್ನ ಗುರಿಯನ್ನು ಸಮರ್ಪಕವಾಗಿ ಸಾಧಿಸಿತೊ ಆ ಮನೋಧರ್ಮಕ್ಕೆ “ಕಿಂಗ್‌ಲಿಯರ್” ನಾಟಕದಲ್ಲಿ ಶುಭ್ರಶೀಲವಾಗಿ ಅಮೃತಶಿಲಾಮೂರ್ತಿಯಂತಿರುವ ಮಗಳ ಮೃತ ಕಳೇಬರವನ್ನು ಮುದಿ ತಂದೆ ಹೊತ್ತು ತರುವ ಕೃತಕವಾದ ಮಿಥ್ಯಾದೃಷ್ಟಿಯ ದೃಶ್ಯವನ್ನು ತಪ್ಪಿಸುವಂತೆ ಮಾಡಲು ಪ್ರತಿಮಾ ಮತ್ತು ಪ್ರತಿಕೃತಿ ವಿಧಾನಗಳೆರಡೂ ರುಚಿಸಲಿಲ್ಲ. ಪ್ರೇತ, ಮರುಳು ಮೊದಲಾದುವು ಅಕೃತಕವಾಗಿ ತೋರಿದ ಆ ದೃಷ್ಟಿಗೆ ಒಂದು ಕಲ್ಯಾಣಕರವಾದ ಅಶರೀರವಾಣಿಯ ಅಥವಾ ಒಬ್ಬ ಮಂಗಳಕರನಾದ ದೇವದೂತನ ಸನ್ನೆಯ ಸುಕೃತಪ್ರತಿಮಾರೂಪವಾದ ಸಹಾಯವನ್ನು ಸ್ವೀಕರಿಸುವುದು ಕೃತಕವಾಗಿ ತೋರಿತಂತೆ! ಅದಲ್ಲ ನಿಜ: ನಿಜವಾದ ನಿಜ ಯಾವುದೆಂದರೆ- ಕವಿಯ ದೃಷ್ಟಿಯಂತೆ ಅವನ ಸೃಷ್ಟಿ.

[4]       ‘ಕಾವ್ಯವಿಮರ್ಶೆಯಲ್ಲಿ ಪೂರ್ಣದೃಷ್ಟಿ’ ಎಂಬ ವಿಮರ್ಶ ಲೇಖನವನ್ನು ನೋಡಿ.

[5]       ‘ಪ್ರತಿಮಾ ಮತ್ತು ಪ್ರತಿಕೃತಿ’ ಮತ್ತು ‘ಋಷಿ ವಾಲ್ಮೀಕಿಯ ಕಾವ್ಯಜಾಹ್ನವಿ’ ಎಂಬ ವಿಮರ್ಶ ಲೇಖನಗಳನ್ನು ನೋಡಿ.