ಎಲ್ಲಿ ಸೌಂದರ್ಯ ಪರಿಮಿತದಲ್ಲಿ ವಿಹರಿಸುತ್ತದೆಯೋ ಅಲ್ಲಿ ಮೈದೋರುವುದು ಲಾಲಿತ್ಯ. ಎಲ್ಲಿ ಅದು ಅಪರಿಮಿತದಲ್ಲಿ ವಿಜೃಂಭಿಸಿ ವಿರಾಟ್ ಸ್ಪರ್ಶಿಯಾಗುತ್ತದೆಯೋ ಅಲ್ಲಿ ಹೊರಹೊಮ್ಮುವುದು ಭವ್ಯತೆ. ಅಲ್ಪ ಶಬ್ದಕ್ಕೆ ಯಾವ ಹೀನಾರ್ಥವನ್ನೂ ಆರೋಪಿಸದೆ ಹೇಳುವುದಾದರೆ, ಅಲ್ಪತೆ ಲಾಲಿತ್ಯದ ಒಂದು ಲಕ್ಷಣ; ಭೂಮತೆ ಭವ್ಯತೆಯ ಲಕ್ಷಣ.

ಲಾಲಿತ್ಯ ನಮ್ಮ ವ್ಯಕ್ತಿತ್ವಕ್ಕೆ ಯಾವ ಆಘಾತವನ್ನೂ ಉಂಟು ಮಾಡುವುದಿಲ್ಲ. ಅದಕ್ಕೆ ಬದಲಾಗಿ ನಮ್ಮ ಅಹಂಕಾರವನ್ನು ಹಿಗ್ಗಿಸಿ, ಅನುಗ್ರಹ ಪಡೆಯಲೆಂಬಂತೆ ಅದಕ್ಕೆ ಒಂದು ರೀತಿಯಲ್ಲಿ ಕೈಂಕರ್ಯವೆಸಗುತ್ತದೆ. ಅದರ ಸಾಮೀಪ್ಯದಲ್ಲಿ ನಮ್ಮ ಅಸ್ತಿತ್ವದ ದರ್ಪಕ್ಕೆ ಒಂದಿನಿತೂ ಹಾನಿಯುಂಟಾಗುವುದಿಲ್ಲ. ನಮ್ಮ ಅಧ್ಯಕ್ಷತೆಯ ಗೌರವಕ್ಕೆ ಒಂದಿನಿತೂ ಧಕ್ಕೆ ತಗಲದ ರೀತಿಯಲ್ಲಿ ನರ್ತಿಸುತ್ತದೆ ಲಾಲಿತ್ಯ, ಆಸನ ಅಲುಗದಂತೆ, ವೇದಿಕೆ ಕಳಚಿಕೊಂಡುಬೀಳದಂತೆ. ಅಲ್ಲದೆ, ನಮ್ಮ ಪ್ರಶಂಸೆ, ನಮ್ಮ ಸ್ತೋತ್ರ, ನಮ್ಮ ಸನ್ಮಾನದ ಕಟಾಕ್ಷ ಇವುಗಳನ್ನು ಯಾಚಿಸುವಂತೆ ಸ್ವಲ್ಪ ಮಟ್ಟಿಗೆ ದಾಸ್ಯಸಹಜವಾದ ನೈಚ್ಯ ರೀತಿಯಿಂದಲೂ ವರ್ತಿಸುತ್ತದೆ. ಅದು ನಮ್ಮನ್ನು ಮೋಹದಿಂದ ಆಕರ್ಷಿಸಿ, ತಾತ್ಕಾಲಿಕವಾಗಿ ಮೈಮರೆಸಲೂ ಬಹುದು. ಆದರೆ ಆ ಪರವಶತೆ ಹಸುಳೆಯ ಆರೈಕೆಯಲ್ಲಿ ಅಥವಾ ನಲ್ಲೆಯ ಲಲ್ಲೆಯಲ್ಲಿ ತನ್ನನ್ನು ಮರೆತು ಬಿಡುವ ತಾಯಿಯ ವಾತ್ಸಲ್ಯದ ಅಥವಾ ನಲ್ಲನ ಒಲವಿನ ಆತ್ಮವಿಸ್ಮೃತಿಯೇ ವಿನಾ ಮಹತ್ತಾದುದನ್ನು ದರ್ಶಿಸಿದಾಗ ಭೂಮಾನುಭೂತಿಯನ್ನು ಅನುಭವಿಸುವ ರಸಋಷಿಯ ಭಾವಸಮಾಧಿಯ ಪ್ರಜ್ಞಾ ಪ್ರಲಯಸ್ಥಿತಿಯಲ್ಲ.

ಲಾಲಿತ್ಯ ನಮ್ಮ ಅಹಂಕಾರಕ್ಕೆ ಎಷ್ಟರಮಟ್ಟಿಗೆ ಪರಿಪೋಷಕವಾಗುತ್ತದೆಯೋ ಅದಕ್ಕಿಂತಲೂ ಮಹತ್ತರವಾಗಿ ನಮ್ಮ ಪ್ರತ್ಯೇಕತೆಗೆ ವಿಧ್ವಂಸಕವಾಗುತ್ತದೆ ಭವ್ಯತೆ. ಭವ್ಯವಾದುದರ ಮುಂದೆ ನಮ್ಮ ವ್ಯಕ್ತಿತೆ ತತ್ತರಿಸುತ್ತದೆ. ಅಲ್ಲಿ ಸೌಂದರ್ಯ ಮಹತೋಮಹೀಯವಾಗಿ ನಮ್ಮ ಬುದ್ಧಿಯನ್ನು ಸೋಲಿಸಿ, ಕಲ್ಪನೆಯನು ಹಿಂತಳ್ಳಿ, ಭಾವವನ್ನೂ ಮೀರಿ, ನಮ್ಮನ್ನು ಬ್ರಹ್ಮದತ್ತಣ್ಗೆ ಬೀಸಿ ಎಸೆಯುತ್ತದೆ.

ಭವ್ಯತಾ ಅನುಭವಸಾಧನೆಗೆ ಎರಡು ಪಕ್ಷಗಳಿವೆ: ಒಂದನೆಯದು ಮತ್ತು ಮೊದಲನೆಯದು ಅಹಂಕಾರ ನಷ್ಟ; ಎರಡನೆಯದು ಬ್ರಹ್ಮಲಾಭ.

ನಮ್ಮ ವ್ಯಕ್ತಿತ್ವವನ್ನು ಅಪ್ಪಳಿಸಿ, ಆತ್ಮವನ್ನು ಅಣೋರಣೀಯಕ್ಕೆ ನೂಂಕಿದ ಮಾತ್ರದಿಂದಲೆ ಭವ್ಯತಾ ಅನುಭವವುಂಟಾಗುವುದಿಲ್ಲ. ಬರಿಯ ನೇತ್ಯಾತ್ಮಕವಾದ ವೈನಾಶಿಕ ಗುಣದಿಂದಲೇ ಯಾವುದೂ ಭವ್ಯತೆಗೇರಲಾರದು. ಅಂತಹ ಮೃತ್ಯುಶೂನ್ಯತೆಯನ್ನು ಭಯಂಕರ, ಘೋರ, ಭೀಕರ ಎಂದು ಮೊದಲಾಗಿ ಕರೆಯುತ್ತೇವೆ. ಬರಿಯ ಆತ್ಮಹತ್ಯಾಕಾರಿಯಾದ ವಿಧ್ವಂಸಿಗೆ ರಸಲೋಕದಲ್ಲಿ ಹುಗಲಿಲ್ಲ, ಮಾನ್ಯತೆಯಿಲ್ಲ. ಭವ್ಯತಾ ಅನುಭವದಲ್ಲಿ ಭಯಂಕರವೂ ಭೀಕರವೂ ಘೋರವೂ ಸ್ವಲ್ಪಮಟ್ಟಿಗೋ ಬಹುಮಟ್ಟಿಗೋ ಸೇರಿರುವುದನ್ನು ಕಾಣುತ್ತೇವೆ. ಆದರೆ ಅವು ಅಲ್ಲಿಯೇ ಪರ್ಯವಸಾನವಾಗುವುದಿಲ್ಲ. ವ್ಯಕ್ತಿತ್ವವನ್ನು ಅಪ್ಪಳಿಸುವುದಕ್ಕೇನೊ ಆ ಗುಣಗಳು ನೆರವಾಗುತ್ತವೆ. ಆದರೆ ಅಪ್ಪಳಿಸಲ್ಪಟ್ಟ ವ್ಯಕ್ತಿತ್ವವು ತನ್ನ ಅಹಂಕಾರದ ಅಲ್ಪತೆಯನ್ನು ವಿಸರ್ಜಿಸಿ ವಿರಾಡಹಂಕಾರದ ಅಥವಾ ಬ್ರಹ್ಮದ ಭೂಮತೆಯನ್ನು ಅರ್ಜಿಸುವುದರಿಂದಲೇ ಭವ್ಯತಾ ಅನುಭವವುಂಟಾಗುವುದು. ಆ ಅನುಭವಕ್ಕೆ ವಿಸರ್ಜನದಷ್ಟೇ ಆರ್ಜನವೂ ಆವಶ್ಯಕ; ಭಯದಷ್ಟೇ ಗೌರವವೂ ಅನಿವಾರ್ಯ. ಯಾವ ಸೌಂದರ್ಯ, ಪ್ರಕೃತಿಯದಾಗಲಿ ಕಲಾಕೃತಿಯದಾಗಲಿ, ದರ್ಶನಪ್ರಾರಂಭದಲ್ಲಿ ವ್ಯಕ್ತಿತೆಯನ್ನು ಅಪ್ಪಳಿಸಿದರೂ ತರುವಾಯ ಅದು ಭೂಮಕ್ಕೆ ಕುಪ್ಪಳಿಸುವಂತೆ ಅದಕ್ಕೆ ಸಹಾಯ ಮಾಡುವುದೋ ಅದನ್ನು ಭವ್ಯವೆಂದು ವರ್ಣಿಸುತ್ತೇವೆ.

ಭೂಮಾನುಭೂತಿಯ ಅಥವಾ ಭವ್ಯತಾ ಅನುಭವದ ಮೀಮಾಂಸೆ ಆ ಲೇಖನದ ಮುಖ್ಯ ವಿಷಯವಲ್ಲ.

[1] ಪ್ರಕೃತಲೇಖನ ಮೇಲೆ ಸೂಚಿತವಾಗಿರುವ ಭವ್ಯತೆ ಪಂಪಮಹಾಕವಿಯ ಕಾವ್ಯಲೋಕದಲ್ಲಿ ಹೇಗೆ ಸಾಕ್ಷಾತ್ಕಾರಗೊಂಡಿದೆ ಎಂಬುದನ್ನು ಒಂದು ನಿದರ್ಶನದಿಂದ ತೋರಿಸಲು ಪ್ರಯತ್ನಿಸುತ್ತದೆ. ಆ ಪ್ರಯತ್ನಕ್ಕೆ ಪೀಠಿಕೆಯಾಗಿ ಭವ್ಯತೆಯನ್ನು ಕುರಿತು ಸೂತ್ರ ಮಾರ್ಗದಿಂದ ನಾಲ್ಕು ಮಾತುಗಳನ್ನು ಹೇಳಿದ್ದೇವೆ.

ವಿಶ್ವಪ್ರಕೃತಿಯಲ್ಲಿಯೂ ಮಾನವ ಕಲಾಕೃತಿಗಳಲ್ಲಿಯೂ ಸಾಹಿತ್ಯಕೃತಿಗಳಲ್ಲಿರುವಂತೆ ಭವ್ಯತಾ ಅನುಭವವನ್ನು ಪ್ರಚೋದಿಸುವ ವಸ್ತುಗಳೂ ವ್ಯಕ್ತಿಗಳೂ ಸನ್ನಿವೇಶಗಳೂ ಅನೇಕವಿದೆ. ಅದರಂತೆಯೆ ಲಾಲಿತ್ಯ ಪ್ರಚೋದಕಗಳಿಗೂ ಕಡಮೆಯಿಲ್ಲ. ಹಸುರು ದಡಗಳ ನಡುವೆ, ನೊರೆಗರೆದು, ಜುಳಜುಳನೆ ಗಳಪುತ್ತಾ, ನೆಗೆನೆಗೆದು, ಇಳಿದೋಡುವ ಮಲೆಯ ತೊರೆ ರಮ್ಯತೆಗೆ[2] ಅಥವಾ ಲಾಲಿತ್ಯಕ್ಕೆ ಉದಾಹರಣೆಯಾದರೆ ಜೋಗದ ಜಲಪಾತ ಭವ್ಯತೆಗೆ ಉದಾಹರಣೆಯಾಗುತ್ತದೆ. ಸರೋವರವನ್ನು ಸಂದರ್ಶಿಸಿದಾಗ ಮೂಡುವುದು ಲಾಲಿತ್ಯ; ಸಮುದ್ರದರ್ಶನದಿಂದ ಉದ್ಭವಿಸುವುದು ಭವ್ಯತೆ. ಉದ್ಯಾನದಿಂದ ಲಾಲಿತ್ಯ; ಮಹಾಪರ್ವತಾರಣ್ಯದಿಂದ ಭವ್ಯತೆ. ಬೇಲೂರಿನ ಶಿಲಾಬಾಲಿಕೆಯರಿಂದ ಲಾಲಿತ್ಯ; ಶ್ರವಣಬೆಳ್ಗೊಳದ ಗೊಮ್ಮಟೇಶ್ವರನಿಂದ ಭವ್ಯತೆ; ದೇವತಾವಿಗ್ರಹದಲ್ಲಿ[3] ಲಾಲಿತ್ಯ; ದೇಗುಲದ ಗೋಪುರದಲ್ಲಿ ಭವ್ಯತೆ.

ಜಗತ್ತಿನ ನಾನಾ ದೇಶಗಳ ಮತ್ತು ನಾನಾ ಸಂಸ್ಕೃತಿಯ ಕವಿ ಕೃತಿಗಳಲ್ಲಿ ಈ ಭವ್ಯತೆ ವಿವಿಧ ರೀತಿಗಳಿಂದ ಅವತಾರವೆತ್ತಿದೆ: ಉತ್ತುಂಗ ಗಂಡಶೈಲದ ಬಂಡೆಯಲ್ಲಿ ಸರಪಣಿಗಳಿಂದ ಕಟ್ಟುಗೊಂಡು ನರಳುತ್ತಿದ್ದರೂ, ಮೇಲೆತ್ತಿದ್ದ ಸ್ವಾತಂತ್ರ್ಯದ ಮಹೋನ್ನತ ಶಿರವನ್ನು ಬಾಗಿಸದೆ, ನಿಷ್ಠುರ ನಿರಂಕುಶ ದೈವದೊಡನೆ ಹೋರಾಡುತ್ತಿರುವ ಷೆಲ್ಲಿಯ ಪ್ರೊಮೀಥಿಯಸ್ಸಿನ ಮಹತ್ತಿನಲ್ಲಿ; ಸ್ವಾಯತ್ತತಂತ್ರಕ್ಕಾಗಿ ಜಗದೀಶ್ವರನೊಡನೆ ಮಲೆತು, ಸೆಣಸಿ, ದೇವದಳ ಸಮೇತ ನರಕಕ್ಕಿಳಿದರೂ ಕೆಚ್ಚುಗೆಡದೆ, ತನ್ನ ಪಕ್ಷದವರನ್ನು ಹುರಿದುಂಬಿಸಿ, ಅವರ ಮುಖಂಡನೂ ಮಾರ್ಗದರ್ಶಿಯೂ ಆಗಿ, ಅವರಿಗಾಗಿ ಖೇಯಸ್ ಎಂಬ ಮಹಾ ತಮಸ್ಸಾಗರವನ್ನು ಲಂಘಿಸುತ್ತಿರುವ ಮಿಲ್ಟನ್ ಮಹಾ ಕವಿಯ ಬೃಹದ್ ಭಯಂಕರ ಮೂರ್ತಿ ಸೇಟನ್ನಿನ ಪ್ರತೀಕಾರ ಭೀಷಣ ಸಾಹಸದ ಭೀಷ್ಮತೆಯಲ್ಲಿ; ಮಹಾಕಾರ್ಯಕ್ಕಾಗಿ ತನ್ನ ಯೋಗಶಕ್ತಿಯನ್ನೆಲ್ಲ ವಿನಿಯೋಗಿಸಲು ಸಂಕಲ್ಪಿಸಿ, ಮಹೇಂದ್ರ ಪರ್ವತ ಸ್ಪರ್ಧಿಯೆಂಬಂತೆ ಗಗನಾಕಾರನಾಗಿ ಬೆಳೆದು, ಶತಯೋಜನ ಮಹಾಂಭೋಧಿಯನ್ನು ಲಂಘಿಸಲೆಂದು ವಿಜೃಂಭಿಸುತ್ತಿರುವ ಆದಿಕವಿ ವಾಲ್ಮೀಕಿಯ ಆಂಜನೇಯನ ರುಂದ್ರರೂಪದ ರುದ್ರರಮಣೀಯತೆಯಲ್ಲಿ; ದ್ವಾಪರಯುಗ ಸಾಗರದ ಸಂಮಥನ ಕ್ರಿಯೆಗೆ ನಿಯಂತ್ರಿಸಿದ ಮಹಾಗಿರಿ ಮಂದರದಂತೆ ವಿಗುರ್ವಿಸಿ, ಜಗದ್ವಿಜಯಿ ಸವ್ಯಸಾಚಿಗೆ ಭಗವದ್ಗೀತೆಯನ್ನು ಬೋಧಿಸುತ್ತಿರುವ ವೇದವ್ಯಾಸ ಮಹರ್ಷಿಯ ಪಾರ್ಥಸಾರಥಿಯ ಸುರಾಸುರಾದ್ಭುತ ವಿಶ್ವರೂಪ ದರ್ಶನದ ದಿವ್ಯ ದೈತ್ಯತೆಯಲ್ಲಿ; – ಹೀಗೆ ಮಹಾಕವಿಗಳ ಮಹತ್‌ಕೃತಿಗಳಲ್ಲಿ ರಸಾನುಭವಕ್ಕೆ ಕಿರೀಟೋಪಮವಾದ ಭೂಮಾನುಭೂತಿಯನ್ನು ದಾನ ಮಾಡುವ ಭವ್ಯಚಿತ್ರಗಳು ಅಲ್ಲಲ್ಲಿ ಪೃಥುಲಗೋಪುರಗಳಂತೆ ಶಿಲ್ಪಗೊಂಡಿವೆ. ಅವುಗಳಿಂದಲೇ ಆ ಕವಿಗಳಿಗೂ ಆ ಕಾವ್ಯಗಳಿಗೂ ಮಹತ್ತು ಲಭಿಸಿರುವುದು. ಭವ್ಯತೆಯನ್ನು ತಕ್ಕ ಪ್ರಮಾಣದಲ್ಲಿ ಹೊರಹೊಮ್ಮಿಸದ ಯಾವ ಕವಿಯೂ ಮಹಾಕವಿಯಾಗಲಾರನು; ಯಾವ ಕಾವ್ಯವೂ ನಿತ್ಯ ನೂತನವಾದ ಚಿರಕಾವ್ಯವಾಗಲಾರದು.

ಕನ್ನಡನಾಡಿನ ಮೊದಲ ಕವಿಯಾದ ಪಂಪನಿಗೆ ಮಹಾಕವಿಯ ಪಟ್ಟವೇನೋ ಕಟ್ಟಿಟ್ಟ ಗಂಟಾಗಿದೆ. ಆತನ ಕಾವ್ಯಗಳೆರಡೂ ಮಹಾಕಾವ್ಯಗಳೂ ಹೌದು, ಚಿರಕಾವ್ಯಗಳೂ ಹೌದು. ಪಂಪನ ವ್ಯಕ್ತಿತ್ವದ ಭವ್ಯತೆ ಅವನು ತನ್ನ ಕಾವ್ಯಗಳನ್ನು ನಡೆಸಿರುವ ರೀತಿಯ ಮಹತ್ತಿನಲ್ಲಿ ಮಾತ್ರವಲ್ಲದೆ ಆ ಕಾವ್ಯಗಳಿಗೆ ಆರಿಸಿಕೊಂಡ ವಿಷಯಗಳ ಬೃಹತ್ತಿನಿಂದಲೂ ಗೋಚರವಾಗುತ್ತದೆ. ಗಜರಾಜನ ಮೇಲೆರಗಿ ಅದನ್ನು ಸ್ವಾಧೀನ ಪಡಿಸಿಕೊಳ್ಳುವುದರಿಂದಲೇ ಸಿಂಹಕ್ಕೆ ಮೃಗರಾಜನ ಪಟ್ಟ ಲಭಿಸುತ್ತದೆ. ಬೃಹದ್‌ಭಾವಗಳನ್ನು ವಸ್ತುಗೈದು ಮಹತ್‌ಕೃತಿಗಳನ್ನುರಚಿಸುವುದರಿಂದಲೇ ಜಗತ್‌ ಕವಿಗಳಾಗುತ್ತಾರೆ. ಪಂಪನು ಕೀರ್ತಿದೃಷ್ಟಿಯಿಂದಲೇನೊ ಕರ್ಣಾಟಕ ಕವಿ; ನಿಜಮಹಿಮೆಯಿಂದಲಾದರೊ ಜಗತ್‌ಕವಿ. ಏಕೆಂದರೆ ಆತನ ಕಾವ್ಯಗಳಲ್ಲಿ ಸಾಕ್ಷಾತ್ಕಾರಗೊಂಡಿರುವ ಭವ್ಯತೆ ಇತರ ಜಗತ್‌ಕವಿಗಳ ಮಹಾಕಾವ್ಯಗಳಲ್ಲಿ ಮೈಗೊಂಡಿರುವ ಭವ್ಯತೆಗೆ ಸಮಸ್ಪರ್ಧಿಯಾಗಿದೆ.

ಈ ಲೇಖನದಲ್ಲಿ ಪಂಪನ ಭವ್ಯತೆಗೆ ನಿದರ್ಶನವಾಗಿ ತೆಗೆದುಕೊಳ್ಳುವ ಸನ್ನಿವೇಶ ‘ಆದಿಪುರಾಣ’ದ್ದಾದ್ದರಿಂದ ಆತನ ‘ವಿಕ್ರಮಾರ್ಜುನವಿಜಯ’ ಹೆಸರಿನ ‘ಭಾರತ’ದ ವಿಚಾರವಾಗಿ ಭವ್ಯತೆಯ ದೃಷ್ಟಿಯಿಂದ ಇಲ್ಲಿ ಹೇಳಬಹುದಾದ ಲವಮಾತ್ರ ವಿಮರ್ಶೆಯನ್ನು ಮೊದಲು ಕೈಕೊಳ್ಳುವುದರಲ್ಲಿ ಔಚಿತ್ಯವಿದೆ.

ವ್ಯಾಸಕೃತಿಯ ಮಹಿಮಾಮಯ ಪ್ರಭಾವದಿಂದ ಮಹಾಭಾರತದ ವ್ಯಕ್ತಿಗಳಲ್ಲಿ ಹಲವೂ, ಸಂನಿವೇಶಗಳಲ್ಲಿ ಕೆಲವೂ, ಭಾರತೀಯ ಮಾನವ ಮಹಾಮನಸ್ಸಿನ ಮಂದಿರಗಳಲ್ಲಿ ಚಿರಪೂರ್ವದಿಂದಲೂ ಭವ್ಯತಾಗೋಪುರಗಳಾಗಿ ನಿಂತಿವೆ. ಕಾಲ ಸಂದಂತೆಲ್ಲ ವ್ಯಾಸರ ತರುವಾಯ ಬಂದ ಮಹಾಕವಿಗಳಲ್ಲಿ ಪುನರ್ಭಾವಿತವಾಗಿ, ಅವರ ಕೃತಿಗಳಲ್ಲಿ ಪುನರ್‌ಭವಿಸಿ, ಜನಮನದಲ್ಲಿ ಮರಳಿ ಮರಳಿ ಪುಷ್ಟಿಗೊಂಡು, ಬಣ್ಣಗೂಡಿ ಬೆಳೆಯುತ್ತಿವೆಯೆ ಹೊರತು ಅವರ ಆಕೃತಿ ಕ್ಷೀಣಿಸುತ್ತಿಲ್ಲ; ಅವರ ತೇಜಸ್ಸು ಮಸುಳುತ್ತಿಲ್ಲ. ಅಲ್ಲದೆ, ಎಷ್ಟೋ ವೇಳೆ, ವ್ಯಾಸದೃಷ್ಟಿಯ ಮೊರಡಿಗೆ ನುಣುಪು ಬಂದಿದೆ; ಬಲ್ಮೆಗೆ ಇನಿತೂ ಊನವಾಗದಂತೆ ಗಾಂಭೀರ್ಯ ಸಮನಿಸಿದೆ; ಅನಾವಶ್ಯಕವೆನಿಸುವ ವಿಕಾರ ರಾಕ್ಷಸೀಯತೆಗೆ ರುಂದ್ರಸುಂದರವಾದ ಸಹಜದೈತ್ಯತೆ ಲಭಿಸಿದೆ. ಆಧಿಕ್ಯ ದೋಷದಿಂದಾದ ಕಲಾವೈರೂಪ್ಯಕ್ಕೆ ಸಂಯಮದ ಸಂಸ್ಕೃತಿ ದೊರೆಕೊಂಡಿದೆ. ಅತಿಶಯ ಸಾಮರ್ಥ್ಯ ಸಹಜವಾದ ಅತಿ ನಿರ್ಲಕ್ಷ್ಯತೆಯಿಂದಲೋ ಅವಿಮರ್ಶಶೀಲವಾದ ರಚನಾಶಕ್ತಿಯ ಕೌಶಲ್ಯಾಭಾವದಿಂದಲೋ ಉಂಟಾದ ಶಿಥಿಲವಿಪುಲತೆಗೆ ಸಂಗ್ರಹಶೀಲವಾದ ನೈಪುಣ್ಯದ ಪುಣ್ಯಸಂಗದಿಂದ, ಕಬಂಧತೆ ಮಾಣ್ದು, ಬೃಂದಾರಕತೆ ಮೈ ದೋರಿದೆ. ಅಂತಹ ಕಲಾತಪಸ್ಸನ್ನು ಕೈಕೊಂಡು ರಸಸಿದ್ಧಿ ಪಡೆದವರಲ್ಲಿ ನಮ್ಮ ಪಂಪನೂ ಅಗ್ರಮಾನ್ಯ.

‘ವ್ಯಾಸಮುನೀಂದ್ರ ರುಂದ್ರ ವಚನಾಮೃತ ವಾರ್ಧಿಯನೀಸುವೆಂ’ ಎಂದು ಮೊದಲುಮಾಡಿ ತನ್ನ ‘ಸಮಸ್ತಭಾರತ’ ಕಾವ್ಯವನ್ನು ನಡಸಿ, ಅದರ ತುತ್ತತುದಿಯನ್ನು ಸಿಂಹಾವಲೋಕನ ವಿಧಿಯಿಂದ ಇಂತೆಂದು ಹಾಡಿದ್ದಾನೆ:

ಚಲದೊಳ್ ದುರ್ಯೋಧನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ
ಬಲದೊಳ್ ಮದ್ರೇಶನತ್ಯುನ್ನತಿಯೊಳಮರಸಿಂಧೂದ್ಭವಂ ಚಾಪವಿದ್ಯಾ
ಬಲದೊಳ್ ಕುಂಭೋದ್ಭವಂ ಸಾಹಸದ ಮಹಿಮೆಯೊಳ್ ಫಲ್ಗುಣಂ ಧರ್ಮದೊಳ್ ನಿ
ರ್ಮಲಚಿತ್ತಂ ಧರ್ಮಪುತ್ರಂ ಮಿಗಿಲಿವರ್ಗಳಿನೀ ಭಾರತಂ ಲೋಕಪೂಜ್ಯಂ||

ಕವಿ ಕೈಬಿಟ್ಟಿದ್ದರೂ ಕಾವ್ಯ ನಿರ್ಭಯವಾಗಿ ಸೇರಿಸಲು ಅನುಮತಿಯೀಯುತ್ತದೆ ‘ಅಸುರಾರಾತಿಯಂ ಶ್ರೀ ಕೃಷ್ಣನಂ.’

ಮೇಲೆ ಹೇಳಿದ ವ್ಯಕ್ತಿಗಳಂತೆಯೆ ಭವ್ಯತೆಯ ಮಟ್ಟಕ್ಕೇರುವ ಸನ್ನಿವೇಶಗಳೂ ಕೆಲವಿದೆ ಪಂಪಭಾರತದಲ್ಲಿ. ಅವುಗಳಿಗೆ ಆ ಶಕ್ತಿಯಿರುವುದು, ಬಹಿರ್ಗಾತ್ರಕ್ಕಿಂತಲೂ ಹೆಚ್ಚಾಗಿ, ಅಂತರ್ಮಹಿಮೆಯಲ್ಲಿ: ಕರ್ಣನ ಧರ್ಮ ಸಂಕಟದ ಸನ್ನಿವೇಶ; ಅಭಿಮನ್ಯುವಿನ ಪೌರುಷದ ಸನ್ನಿವೇಶ; ಭಗದತ್ತ ನಾನೆ ಬಱೆಯೆಲ್ವುಡಿವನ್ನೆಗಮೊತ್ತುವ ಸನ್ನಿವೇಶ; ಮತ್ತು ಎಲ್ಲಕ್ಕಿಂತಲೂ ಉನ್ನತವಾಗಿ, ಮಕುಟಪ್ರಾಯವಾಗಿ, ವೃಕೋದರ ಸುಯೋಧನರ ಗದಾಯುದ್ಧ ಸನ್ನಿವೇಶ, ಇತ್ಯಾದಿ.

ಭೀಮ ದುಶ್ಯಾಸನರ ಭೈರವಘರ್ಷಣೆಯ ಭಯಂಕರ ಸನ್ನಿವೇಶವನ್ನು ಭವ್ಯತೆಗೆ ನಿದರ್ಶನವಾಗಿ ತೆಗೆದುಕೊಳ್ಳಲು ಹಿಂಜರಿಯಬೇಕಾಗುತ್ತದೆ. ಪಂಪನ ಆ ಬೀಭತ್ಸಕೃತಿ ನಮ್ಮನ್ನು ಅಪ್ಪಳಿಸುತ್ತದೆ, ಭಯಗೊಳಿಸುತ್ತದೆ, ದಿಗ್‌ಭ್ರಮೆಗೊಳಿಸುತ್ತದೆ, ಜುಗುಪ್ಸೆಯಿಂದ ಕಣ್‌ಮುಚ್ಚಿಕೊಳ್ಳುವಂತೆ ಮಾಡುತ್ತದೆ. ಆ ಚಿತ್ರ ಅನದ್ಭುತವಾಗಿದೆ, ಅಘೋರವಾಗಿದೆ, ಆದರೆ ಭವ್ಯವಾಗಿಲ್ಲ. ಅದರಲ್ಲಿ ಭವ್ಯತಾ ಅನುಭವಕ್ಕೆ ಅವಶ್ಯವಾಗಿರುವ ಎರಡು ಶಕ್ತಿಗಳಲ್ಲಿ ಮೊದಲನೆಯದು, ಎಂದರೆ ನಮ್ಮ ವ್ಯಕ್ತಿತೆಯನ್ನು ವಿಧ್ವಂಸನಗೈಯುವ ಶಕ್ತಿ, ಮಾತ್ರ ಇದೆ. ನಮ್ಮನ್ನು ಬ್ರಹ್ಮದತ್ತಣ್ಗೆ ಬೀಸಿ ಭೂಮಾನುಭೂತಿಗೊಯ್ಯುವ ಶಕ್ತಿ ಅದಕ್ಕೆ ಇಲ್ಲ. ಏಕೆಂದರೆ ಬರಿಯ ಕ್ರೌರ್ಯ, ಬರಿಯ ಹಿಂಸೆ, ಬರಿಯ ದೌಷ್ಟ್ಯ, ಬರಿಯ ನಾಶ ಇವು ಎಷ್ಟೇ ಬೃಹತ್ ಪ್ರಮಾಣದಲ್ಲಿರಲಿ, ಅದರಿಂದ ಭವ್ಯತೆ ಉದ್ಭವಿಸುವುದಿಲ್ಲ.

ಕಾವ್ಯಕಲಾದೃಷ್ಟಿಯಿಂದ ಪಂಪಭಾರತಕ್ಕೆ ಹೊಯ್‌ಕಯ್ಯಾಗಿ ನಿಲ್ಲಲಾರದು ಆತನ ಆದಿಪುರಾಣ, ಬಹುವಿಷಯಗಳಲ್ಲಿ, ಅನೇಕ ಕಾರಣಗಳಿಂದ. ಆದರೆ ಭವ್ಯತೆಯ ದೃಷ್ಟಿಯಿಂದ ಮಾತ್ರ ಆದಿಪುರಾಣ ಒಂದೆರಡು ಸನ್ನಿವೇಶಗಳಲ್ಲಿ ಭಾರತಕ್ಕೂ ಮಿಗಿಲಾಗಿ ಮಹೋನ್ನತವಾಗಿದೆ.

ಪ್ರಾಯಶಃ ಯಾವ ಕಾರಣಗಳಿಗಾಗಿ ಆದಿಪುರಾಣದ ಕಲೆ ಭಾರತದ ಕಲೆಗಿಂತ ಹಲವು ವಿಷಯಗಳಲ್ಲಿ ಬೀಳಾಗಿದೆಯೋ ಆ ಕಾರಣಗಳೇ ಅದರ ಕೆಲವು ಬೃಹಚ್ಚಿತ್ರಗಳ ಭವ್ಯತೆಗೆ ಮೂಲವಾಗುತ್ತವೆಂದು ತೋರುತ್ತದೆ.

ಭಾರತ ಲೋಕವ್ಯವಹಾರದ ಕಾವ್ಯ, ಮೊತ್ತದಲ್ಲಿ ಅದರ ಗುರಿ ಧರ್ಮ ಸಂಸ್ಥಾಪನೆ ಎಂದುಕೊಂಡರೂ ಅದರ ಕಣ್ಣು ಐಹಿಕ ವ್ಯಾಪಾರಗಳ ಕಡೆಗೂ ಅವುಗಳಿಂದ ಮೂಡುವ ಸಮಸ್ಯೆಗಳ ಅರಿವು ಮತ್ತು ಪರಿಹಾರಗಳ ಕಡೆಗೂ ಒಲೆದಿದೆ. ಮಾನವರ ಮೂಲವಾಸನೆಗಳ ಅತಿವರ್ತನೆಯಿಂದಲೊ ದುರ್ವರ್ತನೆಯಿಂದಲೊ ಒದಗುವ ಘರ್ಷಣೆಗಳೂ ದುಷ್ಪರಿಣಾಮಗಳೂ ದುರಂತಗಳೂ ಅದರ ಮುಖ್ಯ ವಸ್ತು. ಅಲ್ಲಿ ಮೈದೋರುವುದು ಕರ್ಮಯೋಗದ ಮತ್ತು ಧರ್ಮಾವಿರುದ್ಧಭೋಗದಮಹಿಮೆ. ಅಲ್ಲಿ ಪರಮಜ್ಞಾನಿಗಳನ್ನೂ ಜೀವನ್ಮುಕ್ತರನ್ನೂ ಜೀವನ ರಣರಂಗದ ಜಟಿಲತೆ ಕುಟಿಲತೆಗಳ ಹಾಸುಹೊಕ್ಕಿನಲ್ಲಿಯೆ ಸಂಧಿಸುತ್ತೇವೆ. ಅಜ್ಞಾನಿಗಳೊಡನೆಯೂ ದುರಭಿಮಾನಿಗಳೊಡನೆಯೂ ದುಷ್ಟರು ವಂಚಕರು ಅಮರ್ಷಿಗಳೊಡನೆಯೂ ಹೋರಾಡುತ್ತಿರುವಾಗಲೆ ಅವರನ್ನು ಎದುರುಗೊಳ್ಳುತ್ತೇವೆ. ಶಾಂತಿಪರ್ವವೆಂಬ ಒಂದು ಇಡೀ ಪರ್ವವನ್ನೇ ಒಳಕೊಂಡಿರುವ ಆ ದುರಂತ ಇತಿಹಾಸದ ರುದ್ರಕಾವ್ಯದಲ್ಲಿ ಶಾಂತಿ ಎಂಬುದು ಮರುಸರಸ್ಸಿನಂತೆ ದಿಗಂತಯಾತ್ರಿಯಾಗಿದೆಯೆ ಹೊರತು ಒಂದೆಡೆ ನಿಂತಂತೆಯಾಗಲಿ ಎಲ್ಲಿಯಾದರೂ ನೆಲಸಿದಂತೆಯಾಗಲಿ ತೋರುವುದಿಲ್ಲ. ಆ ವಾಸ್ತವಕಾವ್ಯದಲ್ಲಿ ಜೀವನದ ಯಥಾರ್ಥತೆ ಅದು ಇರುವಂತೆಯೆ ಚಿತ್ರಿತವಾಗಿದೆ. ಆದ್ದರಿಂದ ಅಲ್ಲಿ ಕಲ್ಪನೆ. ತನ್ನ ಭೂಮತೆಯನ್ನೆಲ್ಲ ಬಹುಮಟ್ಟಿಗೆ (ವಿಶ್ವರೂಪ ದರ್ಶನದಂಥವುಗಳನ್ನು ಉಳಿದು) ಪ್ರಾಕೃತದ ಪರಿಧಿಯೊಳಗೇ ನಿಲ್ಲಿಸಿಕೊಳ್ಳಬೇಕಾಯಿತು.

ಆದರೆ ಆದಿಪುರಾಣದ ಕಥೆಯೆ ಬೇರೆ; ಅದರ ರೀತಿಯೆ ಬೇರೆ; ಅದರ ಉದ್ದೇಶವೆ ಬೇರೆ; ಅದರ ತುತ್ತತುದಿಯ ಸಿದ್ಧಿಯೂ ಬೇರೆಯೆ. ಆದಿಪುರಾಣ ಅಲೌಕಿಕ ಸಿದ್ಧಿಯನ್ನೇ ಪ್ರಧಾನವಸ್ತುವನ್ನಾಗಿಯೂ ಮುಖ್ಯಲಕ್ಷ್ಯವನ್ನಾಗಿಯೂ ಮಾಡಿಕೊಂಡಿರುವ ಕಾವ್ಯ. ಅದರ ಬಯಕೆಯ ದರ್ಶನವೋ ಅತ್ಯಂತ ಮಹೋದಾತ್ತ. ಅದು ಕೈಕೊಳ್ಳುವ ಸಾಧನವೋ ಅತೀವ ಕಠೋರ ನಿಷ್ಠಾನ್ವಿತ. ಅಲ್ಲಿ ಜೀವವು ಲೋಕಲೋಕಗಳಲ್ಲಿ, ಜನ್ಮಜನ್ಮಗಳಲ್ಲಿ, ವಿಮಾನಗಳಲ್ಲಿ, ಕಲ್ಪಗಳಲ್ಲಿ, ಗ್ರೈವೆಗಳಲ್ಲಿ, ತೊಳಲಿ, ಬಳಲಿ, ಅರಿತು, ನುರಿತು, ಸವಿದು ತವಿದು ಮನುಷ್ಯ ಕಲ್ಪನೆಗೆ ಸಾಧ್ಯವಾಗಬಹುದಾದ ಉದ್ಧಾರದ ಸರ್ವೋಚ್ಛ ಪದವಿಗೇರುತ್ತದೆ. ಭಾರತ ಎಷ್ಟರಮಟ್ಟಿಗೆ ಹಿಂಸಾಕಾವ್ಯವೊ ಆದಿಪುರಾಣ ಅಷ್ಟರಮಟ್ಟಿಗೆ ಅಹಿಂಸಾಕಾವ್ಯ. ಅಲ್ಲಿ ರಾಜ್ಯಸಂಪಾದನೆಗಾಗಿ ಒಂದು ಕುರುಕ್ಷೇತ್ರವೇ ಏರ್ಪಟ್ಟರೆ ಇಲ್ಲಿ ರಾಜ್ಯಪರಿತ್ಯಾಗದಿಂದಲೇ ಅನೇಕ ತಪಃಕ್ಷೇತ್ರಗಳು ಉದ್ಭವಿಸುತ್ತವೆ. ಅಲ್ಲಿಯ ರಣವ್ರತದ ಸ್ಥಾನವನ್ನು ಇಲ್ಲಿ ಅಣುವ್ರತ ಆಕ್ರಮಿಸುತ್ತದೆ. ಅಲ್ಲಿ ಬಹಿರ್ ಮುಖತೆ ಧನುರ್ಧಾರಿಯಾಗಿದ್ದರೆ ಇಲ್ಲಿ ಅಂತರ್ಮುಖತೆ ಧ್ಯಾನಶೀಲವಾಗಿದೆ. ಅಲ್ಲಿ ವ್ಯಕ್ತಿಯ ಮತ್ತು ವ್ಯಕ್ತಿತ್ವದ ವೈಭವಾಭಿವೃದ್ಧಿ ಹೆಮ್ಮೆಪಟ್ಟುಕೊಳ್ಳುತ್ತಿದೆ. ಇಲ್ಲಿ ಆ ಹೆಮ್ಮೆ ಅರ್ಹತ್ ಪದವಿಗೆ ಅಡಚಣೆಯಾಗುವುದರಿಂದ ಅದರ ಸಂಪೂರ್ಣ ದಮನವೇ ಆತ್ಮದ ಪ್ರಯತ್ನವಾಗುತ್ತದೆ. ಅಲ್ಲಿ ಭೀಷ್ಮನು ಮೊದಲಿಂದ ತುದಿವರೆಗೆ ತಾನಾಗಿಯೇ ಉಳಿದು ಮುಕ್ತನಾಗುತ್ತಾನೆ; ಇಲ್ಲಿ ಮಹಾಬಲನು (ಅಥವಾ ಜಯವರ್ಮನು) ಲಲಿತಾಂಗ, ವಜ್ರಜಂಘ, ಆರ್ಯ, ಶ್ರೀಧರ, ಸುವಿಧಿ, ಅಚ್ಯುತೇಂದ್ರ, ವಜ್ರನಾಭಿ ಮತ್ತು ಅಹಮಿಂದ್ರಾದಿಗಳಲ್ಲಿ ಚರನಾಗಿ ಹತ್ತನೆಯ ಭವದಲ್ಲಿ ಅರ್ಹಂತನಾಗುತ್ತಾನೆ. ಆದಿಪುರಾಣದ ಕಲಾಸಾಮಗ್ರಿ ಭವಭವಗಳಲ್ಲಿ, ಲೋಕಾಲೋಕಗಳಲ್ಲಿ, ಚತುರ್ಗತಿಗಳಲ್ಲಿ ಪರಿವ್ರಜಿಸಿ, ನೇಮಿರಹಿತ ಕೇವಲತೆಯ ಅಸೀಮದಲ್ಲಿ ನಿರ್ವಾಣವಾಗುವುದರಿಂದ ಅಲ್ಲಿ ಕಲ್ಪನೆ ತನ್ನ ಭೂಮತೆಯನ್ನು ಪ್ರಾಕೃತದ ಪರಿಧಿಯೊಳಗಿಡುವ ನಿರ್ಬಂಧಕ್ಕೆ ಒಳಗಾಗಿಲ್ಲ. ಆದ್ದರಿಂದಲೇ ಅಲ್ಲಿ ಭವ್ಯತೆಗೆ ಬೇಕಾದ ಹಾಗೆ ಅವಕಾಶವೊದಗಿದೆ; ಮತ್ತು ಅದು ಅತಿ ಕಷ್ಟಸಾಧ್ಯವೂ ಆಗಿಲ್ಲ.

ಈ ಕೋನದಿಂದ ಸಮೀಕ್ಷಿಸಿದರೆ ಆದಿಪುರಾಣಕ್ಕೆ ಭಾರತಕ್ಕಿಂತಲೂ ಮಹತ್ತರ ಭವ್ಯಕಾವ್ಯವಾಗುವ ಸಂಪತ್ತಿಯೂ ಅವಕಾಶವೂ ಯಥೇಚ್ಛವಾಗಿದೆ. ಆದರೆ, ಪಂಪಮಹಾಕವಿಯ ದೈತ್ಯಪ್ರತಿಭೆಯ ದಿವ್ಯ ಸಾಮರ್ಥ್ಯಕ್ಕೆ ಅದೇನೂ ಅಸಾಧ್ಯವಾಗಿರದಿದ್ದರೂ, ರೂಪುಗೊಂಡು ನಮಗೆ ಲಭಿಸಿರುವ ಅವನ ಕೃತಿ ಆ ಆದರ್ಶದಿಂದ ಬಹುದೂರವುಳಿದಿದೆ. ಹಾಗಾಗಿರುವುದಕ್ಕೆ ಕಾರಣಗಳನ್ನು ಊಹಿಸುವುದೂ ಕಷ್ಟವಲ್ಲ. ಈ ಲೇಖನಕ್ಕೆ ಅದು ಅಪ್ರಸಂಗ. ಆದರೂ ನಮ್ಮಲ್ಲಿ ಮೂಡುವ ಒಂದು ಪ್ರತ್ಯಾಶೆಯನ್ನು ಸೂಚಿಸಿ, ಆದಿಪುರಾಣದ ವಸ್ತುವಿನ ಮಹೋದಾತ್ತ ಭವ್ಯತೆಯ ವಿಷಯದಲ್ಲಿ ನಮಗಿರುವ ಗಂಭೀರ ಶ್ರದ್ಧೆಯನ್ನು ಬಯಲುಗೈದರೆ ಪೂರ್ವದ ಆ ಮಹಾಕವಿಗೆ ಅಗೌರವವಾಗುವುದೆಂದು ತಿಳಿದವರಾರೂ ತಿಳಿಯಲಾರರು: ಯಾವ ಒಂದು ಮತದ ಸಿದ್ಧಾಂತದ ಬಂಧನಕ್ಕೂ ಒಳಗಾಗದೆ, ಉದಾತ್ತದರ್ಶನಗಳೆಲ್ಲವುಗಳ ಸಾರವನ್ನೂ ಹೀರಿಕೊಂಡು, ನವದರ್ಶನ ದೀಪ್ಯಮಾನಮನನಾಗಿ, ಮಹಾಕವಿ ಡಾಂಟೆ ‘ಡಿವೈನ್ ಕಾಮೆಡಿ’ಯನ್ನು ರಚಿಸಿದಂತೆ ರಚಿಸುವುದಾದರೆ ಆದಿಪುರಾಣದ ಕಥಾಸಾಮಗ್ರಿಯಿಂದ ಲೋಕ ಗೌರವ ಭಾಜನವಾಗುವ, ಅತ್ಯಂತ ನವೀನ ತತ್ತ್ವಜ್ಞಾನ ಮತ್ತು ವಿಜ್ಞಾನಾಂಶಗಳನ್ನು ಒಳಗೊಂಡ ನೂತನ ದರ್ಶನದ, ಜಗತ್ಕಾವ್ಯವೊಂದನ್ನು ಸೃಜಿಸುವ ಪುಣ್ಯ ಮುಂದೆ ಬರಲಿರುವ ಕನ್ನಡ ಕವೀಂದ್ರನೊಬ್ಬನಿಗೆ ಮೀಸಲಾಗಿದೆ.

ವಿಕ್ರಮಾರ್ಜುನ ವಿಜಯವನ್ನು ಆರು ತಿಂಗಳಲ್ಲಿಯೂ ಆದಿಪುರಾಣವನ್ನು ಮೂರು ತಿಂಗಳಲ್ಲಿಯೂ ರಚಿಸಿದೆನೆಂದು ಹೇಳಿಕೊಂಡಿದ್ದಾನೆ ಪಂಪ. ರಚನಾ ಸಮಯದ ನಿಮಿಷಗಳನ್ನೂ ಗಂಟೆಗಳನ್ನೂ ಕೂಡಿಸಿ ಬಂದ ಹೊತ್ತಿನ ಮೊತ್ತವನ್ನು ತಿಂಗಳುಗಳಾಗಿ ಭಾಗಿಸಿರುವನೆಂದುಕೊಂಡರೆ ನಮ್ಮ ಆಶ್ಚರ್ಯ ವಿಸ್ಮಯದ ಎಲ್ಲೆಯನ್ನು ಮುಟ್ಟದಿರಬಹುದು. ಹಾಗಲ್ಲದೆ, ಸಮಗ್ರಕೃತಿಯನ್ನೂ, ಅದನ್ನು ಉತ್ತುಬಿತ್ತುವ ಮೊತ್ತಮೊದಲಿಂದ ಹಿಡಿದು ರಸಾನ್ನ ಭೋಜನದ ಸಮಾರಾಧನೆಯ ಸಿದ್ಧಿಯ ತುತ್ತತುದಿಯವರೆಗೂ, ಮೂರು ಮತ್ತು ಆರು ತಿಂಗಳಲ್ಲಿ ಮುಗಿಸಿದನೆಂದರೆ ನಂಬುಗೆ ತತ್ತರಿಸುತ್ತದೆ, ಪವಾಡ ಸಂದರ್ಶನವಾದಂತಾಗುತ್ತದೆ. ಮಿಲ್ಟನ್ ಕವಿಗೆ ‘ಪ್ಯಾರಡೈಸ್ ಲಾಸ್ಟ್’ ಮಹಾಕಾವ್ಯವನ್ನು ಬರೆಯಲು ಎಂಟು ವರ್ಷ ಹಿಡಿಯಿತಂತೆ. ಆದರೆ ವಾಸ್ತವವಾಗಿ ಕುಳಿತು ಕೆಲಸಮಾಡಿದ ಕಾಲವಷ್ಟನ್ನೇ ಗಣನೆಗೆ ತಂದುಕೊಂಡಿದ್ದರೆ ಅವನೂ ಬಹುಶಃ ಎಂಟೇ ತಿಂಗಳಲ್ಲಿ ರಚಿಸಿದೆನೆಂದು ಹೇಳಿಕೊಳ್ಳಬಹುದಾಗಿತ್ತೆಂದು ತೋರುತ್ತದೆ. ಆದರೆ ಒಂದು ವ್ಯತ್ಯಾಸ ಗಣನೀಯವಾಗಿದೆ: ಅವನ ಕಾವ್ಯದ ವಸ್ತು ಸ್ವತಂತ್ರ ಸೃಷ್ಟಿ, ಮುಕ್ಕಾಲು ಮೂರುವೀಸ ಪಾಲು. ಪಂಪನ ಎರಡೂ ಕಾವ್ಯಗಳ ವಸ್ತುಗಳು ಸಂಸ್ಕೃತದಲ್ಲಿ ಆಗಲೇ ರೂಪುಗೊಂಡು ಸಿದ್ಧವಾಗಿದ್ದುವು. ಆದ್ದರಿಂದ ಇದ್ದುದನ್ನು ರೂಪಿಸುವ ಕೆಲಸವಿದ್ದರೂ ಹೊಸತಾಗಿ ಸೃಷ್ಟಿಸುವ ಕಾರ್ಯ ಅವನಿಗೆ ಅಷ್ಟಾಗಿರಲಿಲ್ಲವೆಂದು ಸಮಾಧಾನ ಹೇಳಬಹುದು.

ಅಂತೂ ‘ಮೂರು’ ತಿಂಗಳಲ್ಲಿಯೆ ಬರೆದುದರ ಪರಿಣಾಮವಾಗಿಯೋ ಏನೋ ಆದಿಪುರಾಣ ಮಹಾಕಾವ್ಯದಲ್ಲಿ ಕವಿತಾಶಕ್ತಿಯ ಏರುಂಜೌವನದ ಪದಾಧಿಕ್ಯ ಮೊದಲಗೊಂಡು ಅನವಶ್ಯ ಶೃಂಗಾರ ವರ್ಣನಾಪರ್ಯಂತವೂ ಜನ್ಮಜನ್ಮಾಂತರದ ಜಟಿಲಕಥೆಯ ವಸ್ತುರಥ ಎಷ್ಟೋ ಸಾರಿ ಅಪಥ ಕುಪಥ ಮರುಪಥಗಳಲ್ಲಿ ಪರ್ಯಟನ ಮಾಡುತ್ತಿರುವುದನ್ನು ಕಾಣುತ್ತೇವೆ. ಓದುಗರಿಗೂ ಒಂದು ವಿಧದಲ್ಲಿ ಜೈನತಪಸ್ಸಿನ ಬಿರುಬೇಗೆಯ ಪರಿಚಯವಾಗುತ್ತದೆ! ಆದರೆ ಅಲ್ಲಲ್ಲಿ ರಮಣೀಯವಾದ ಪ್ರಕೃತಿವರ್ಣನೆಯ ರಸಾರಣ್ಯಶ್ರೇಣಿಗಳೂ, ಅವುಗಳ ನಡುನಡುವೆ, ಒಮ್ಮೊಮ್ಮೆ, ಭವ್ಯತಾ ಹಿಮವಚ್ಛೈಲಶಿಖರಗಳೂ, ಚೇತೋಹಾರಿಗಳಾಗಿ ಬಾನ್‌ಮುಟ್ಟೆ ಮೂಡುತ್ತವೆ. ಯಾವ ಕವಿಯಲ್ಲಿಯೆ ಆಗಲಿ, ಯಾವ ಕಾವ್ಯದಲ್ಲಿಯೆ ಆಗಲಿ, ಸಮಗ್ರ ಕಥೆಯೂ ಸರ್ವಕಾಲವೂ ಭವ್ಯತಾ ಶಿಖರನಿವಾಸಿಯಾಗಿರಬೇಕು ಎಂದರೆ ಆಗದಮಾತು; ಆಗಾಗ ಅದು ಅಲ್ಲಿಗೆ ಪ್ರವಾಸಿಯಾದರೆ ಸಾಕು. ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ. ಆ ಬಿಳಿಕುಳಿರ ಕೈವಲ್ಯದಲ್ಲಿ ಚಿರನಿವಾಸಿಯಾಗುವ ಆಧ್ಯಾತ್ಮಿಕ ಸಾಮರ್ಥ್ಯ ಅರ್ಹಂತನೊಬ್ಬನಿಗೇ!

ಭವಭವಾಂತರಗಳಲ್ಲಿ ಜನಿಸಿ, ಕ್ರಮಕ್ರಮವಾಗಿ ಧರ್ಮಸಾಧನಗಳಿಂಧ ಶ್ರೇಯಸ್ಸಿನ ಸೋಪಾನಗಳನ್ನೇರಿ, ಸರ್ವಾರ್ಥಸಿದ್ಧಿಯಲ್ಲಿ ಅಹಮಿಂದ್ರನಾಗಿ ಮುಂದಿನ ಮತ್ತು ಕೊಟ್ಟಕೊನೆಯ ಜನ್ಮದಲ್ಲಿ ಅರ್ಹತ್ ಪಟ್ಟಕ್ಕೆ ಅರ್ಹವಾಗಲಿರುವ ಆತ್ಮವೊಂದು ನರಗತಿಯಲ್ಲಿ ಹುಟ್ಟುವುದೆಂದರೆ ಸಾಮಾನ್ಯ ಸಂಗತಿಯಲ್ಲ. ಅದೊಂದು ವಿಶ್ವವಿಶೇಷ ಸಂಭ್ರಮದ ಸಮಯ. ಯಾವ ಸಿದ್ಧಿಗಿಂತ ಬ್ರಹ್ಮಾಂಡದಲ್ಲಿ ಬೇರೊಂದು ಉತ್ತಮತರ ಸುಖ, ಸಂತೋಷ, ಸಂಪತ್ತು, ಸಂತೃಪ್ತಿ, ಶಾಂತಿ ಇಲ್ಲವೋ ಅದನ್ನು ಪಡೆಯುವಾತನ ಜನನಕ್ಕಿಂತಲೂ ಅಪೂರ್ವವಾದುದೂ ಉತ್ಸವಪೂರ್ವಕವಾದುದೂ ಮತ್ತೊಂದಿಲ್ಲ. ಯಾವ ಸಾಕ್ಷಾತ್ಕಾರದಿಂದ ಜೀವದ ಸಕಲ ಮಾಯಾವರಣಗಳೂ ಕಳಚಿ ಬಿದ್ದು, ಆತ್ಮಕ್ಕೆ ಅನಂತದರ್ಶನ, ಅನಂತಜ್ಞಾನ, ಅನಂತಸುಖ ಮತ್ತು ಅನಂತ ವೀರ್ಯಗಳಿಂದ ಕೂಡಿದ ಪರಮಸ್ಥಿತಿ ಲಭಿಸುವುದೋ ಆ ಸಾಕ್ಷಾತ್ಕಾರಕ್ಕೆ ಅಧಿಕಾರಿಯಾದವನ ದಿವ್ಯಚೇತನ ತನ್ನ ಸ್ವರ್ಗದಿಂದ ನಿಸರ್ಗದ ಗರ್ಭಕ್ಕೆ ಅವತರಿಸುವುದೆಂದರೆ ಇಂದ್ರಾದಿ ದೇವತೆಗಳಿಗೂ[4] ಮಹೋತ್ಸವವೇ ದಿಟ.

ಬರಲಿರುವ ತೀರ್ಥಂಕರನಿಗಾಗಿ ಪುರಂದರನೇ ಬಂದು ಸಾಕೇತಪುರವನ್ನು ರಚಿಸುತ್ತಾನೆ, ‘ನಾಕದ ಫಣಿಲೋಕದಂದದ ಪೊೞಲ್ಗಳನೀ ಪೊೞಲೊಂದು ರಮ್ಯಹರ್ಮ್ಯದ ಬೆಲೆಗಂಬರಂ ನೆಱೆಯದೆಂಬಿನಂ’ (೬-೮೯) ಆ ಇಂದ್ರ ರಚಿತ ಅಯೋಧ್ಯೆಯಲ್ಲಿ ಶ್ರೀ ನಾಭಿರಾಜನು ‘ಸ್ವರ್ಗದಿಂದಂ ಪುರುದೇವಂ ಬಂದಪಂ ನಂದನನೆನಗೆನಿಸಲ್ಕಾನೆ ಸಂಸಾರ ಸೌಖ್ಯಾಕರನಾಗಿರ್ದಪ್ಪೆನೆಂಬುತ್ಸವದೊಳೆ ಸುಕದಿಂದಮಿರ್ದಂ.’ (೬-೧೦೮). ಲೋಕವೆಲ್ಲ ಉತ್ಕಂಠತೆಯಿಂದ ಇದಿರು ನೋಡುತ್ತಿದೆ ‘ಪರಮನ ಚರಮ ಗರ್ಭಾವತರಣಮನ್.’ ‘ಸಾಕೇತಮುತ್ಕೇತು ಬಾಹುಗಳಿಂದಂ ಕರೆವಂತದೇನೆಸೆದುದೋ ಸರ್ವಾರ್ಥ ಸಿದ್ಧೀಶನಂ’ (೭-೨). ದಿಗಂಗನೆಯರಾದಿಯಾಗಿ ಸುರಲಲನೆಯರು ನಾಭಿರಾಜಾಂಗನೆಗೆ ಕೈಂಕರ್ಯವೆಸಗಿದರು. ‘ಜಿನ ಜನನಿಯ ಮನಮನಱೆದೋಲಗಿಸಿದರ್. ‘ಭೃಂಗ ಸಂಗೀತಿ ಚೆಲ್ವಂ ನೀಡಿತ್ತಾ ರುಂದ್ರ ದೇವಾನಕದೊಡನೆ ಜಯೋದ್ಘೋಷಣಂ. ಮಂದಮಂದಂ ತೀಡಿತ್ತಾಲೋಲ ಗಂಗಾ ಲಲಿತ ಲಹರಿಕಾಸಾರಂ ಸಮೀರಂ.’ (೭-೨೫).

ಬರೆ ಚೈತ್ರಂ, ಕೃಷ್ಣಪಕ್ಷಂ ದೊರೆಕೊಳೆ, ನವಮೀ ವಾಸರಂ ಪೊರ್ದೆ, ಲೋಕೋ
ತ್ತರಮಾಗಿರ್ದುತ್ತರಾಷಾಢದೊಳತಿ ಶುಭದಂ ಬ್ರಹ್ಮಯೋಗಂ ಮನಂಗೊಂ
ಡಿರೆ, ಭಾಸ್ವನ್ನಾಭಿರಾಜಾಂಗನೆ ವಿಶದ ಯಶೋಭಾಗಿಯಂ ಭವ್ಯಪದ್ಮಾ
ಕರ ಬೋಧಾದಾಯಿಯಂ ತಿಗ್ಮಕರನುದಯದೊಳ್ ಪುತ್ರನಂ ಪೆತ್ತಳಾಗಳ್. (೭-೩೬)

ನದೀಮೂಲದಲ್ಲಿ ಮಹಾವಾಹಿನಿಗೂ ಕಿರಿಯ ತೊರೆಗೂ ತಾರತಮ್ಯ ತೋರುವುದಿಲ್ಲ. ಅನಂತರ ಜೀವಮಾನದಲ್ಲಿ ಮಹಾತ್ಮನಾಗುವಾತನಿಗೂ ದುರಾತ್ಮನಾಗುವಾತನಿಗೂ ಅಲ್ಪಾತ್ಮನಾಗುವಾತನಿಗೂ ಅವರ ಶಿಶುತನದಲ್ಲಿ ಪರಸ್ಪರ ಭಿನ್ನಭಾವ ಅಷ್ಟೇನೂ ತೋರದಿರಬಹುದು. ತೋರದಿದ್ದಮಾತ್ರಕ್ಕೆ ಇಲ್ಲವೆಂದಲ್ಲ. ಬಹುಶಃ ನಮಗೆ ಗೋಚರಿಸದಿರುವುದಕ್ಕೆ ಕಾರಣ, ಮಾಹಾತ್ಮ್ಯ ಅಪೂರ್ವವೂ ಅನಿರೀಕ್ಷಿತವೂ ಆಗಿರುವುದೇ. ಕಾರ್ಯದ ವಿಶೇಷತೆಗೆ ಸರಿದೂಗುವಂತೆ ಕಾರಣವೂ ವಿಶೇಷವಾಗಿರಬೇಕು. ಹಾಗಾದರೆ ಜೀವನ ಆ ವಿಶೇಷತೆಯನ್ನು ಹೇಗೆ ಸಾಧಿಸುತ್ತದೆ? ಕಲೆ ಹೇಗೆ ಸಾಧಿಸುತ್ತದೆ?

ಜೀವನ ಆ ವಿಶೇಷತೆಯನ್ನು ನಾನಾ ಬಹಿರುಪಕರಣಗಳಿಂದ ಪ್ರದರ್ಶಿಸುತ್ತದೆ. ರಾಜನ ಕೂಸಿಗೂ ರೈತನ ಕೂಸಿಗೂ ಶ್ರೀಮಂತನ ಶಿಶುವಿಗೂ ಸಾಮಾನ್ಯನ ಶಿಶುವಿಗೂ ನೈಸರ್ಗಿಕವಾದ ವ್ಯತ್ಯಾಸಗಳು ಹೆಚ್ಚಾಗಿಲ್ಲದಿದ್ದರೂ ರಾಜನ ಐಶ್ವರ್ಯ ಕೈಕೊಳ್ಳುವ ಪುತ್ರೋತ್ಸವದ ವೈಭವದಿಂದ ರಾಜಕುಮಾರನ ವಿಶೇಷತೆ ಲೋಕಕ್ಕೆ ಘೋಷಿತವಾಗುತ್ತದೆ. ಶ್ರೀಮಂತನ ಶಿಶುವಿನ ವಿಶೇಷತೆ ಅವನು ದಾನಮಾಡುವ ಚಿನ್ನದ ನಾಣ್ಯಗಳಿಂದ ಪ್ರದರ್ಶಿತವಾದರೆ ಸಾಮಾನ್ಯನ ಶಿಶುವಿನ ಸಾಧಾರಣತೆ ಅವನ ಕೊಡಿಗೆಯಲ್ಲಿ ಪ್ರಕಟವಾಗುತ್ತದೆ. ನವಿಲಿನ ವಿಶೇಷತೆಗೆ ಸಾಧನ ಅದರ ಬಣ್ಣಬಣ್ಣದ ಕಣ್ಣು ಕಣ್ಣಿನ ಹೀಲಿ; ಕೋಗಿಲೆಯ ವಿಶೇಷತೆಗೆ ಸಾಧನ ಅದರ ಆಹ್ಲಾದಕರ ಇಂಚರ. ಇಂಗ್ಲೆಂಡಿನ ದೊರೆ ವಿಶೇಷತಾಪ್ರಾಚುರ್ಯಕ್ಕಾಗಿ ಕೋಹಿನೂರು ವಜ್ರದ ಕಿರೀಟಧಾರಣೆ ಮಾಡಿದರೆ ರೆಡ್ ಇಂಡಿಯನ್ ಹೆಗ್ಗಡೆ ತರತರದ ಹಕ್ಕಿಗಳ ಬಣ್ಣಬಣ್ಣದ ನೀಳ್ಗರಿಗಳನ್ನು ತಲೆಗೆ ಸಿಕ್ಕಿಸಿಕೊಳ್ಳುತ್ತಾನೆ.

ಕಲೆ ಆ ವಿಶೇಷತೆಯನ್ನು ಹಲವು ಕುಶಲೋಪಾಯಗಳಿಂದ ಸಾಧಿಸಿದರೂ ಮೂರು ಪ್ರಧಾನವಿಧಾನಗಳು ಗಣ್ಯವಾಗಿವೆ. ಒಂದು ಪ್ರತಿಕೃತಿಯ ವಿಧಾನ. ಎರಡು, ಪ್ರತಿಮಾವಿಧಾನ. ಮೂರು, ಉಪಮಾವಿಧಾನ-ಅದರಲ್ಲಿಯೂ ಮಹೋಪಮಾವಿಧಾನ.

ಇರುವ ಹಾಗೆಯೆ ಚಿತ್ರಿಸುವುದು ಪ್ರತಿಕೃತಿಯ ವಿಧಾನ. ಎಂದರೆ, ಬಾಳು ವಿಶೇಷತೆಯನ್ನು ಹೇಗೆ ಸಾಧಿಸುತ್ತದೆಯೊ ಹಾಗೆಯೆ ಅದನ್ನು ವರ್ಣಿಸುವುದು. ಇಲ್ಲಿ ಕಲೆ ಕನ್ನಡಿಯಂತೆ ನೈಷ್ಕರ್ಮಿ. ಅದಕ್ಕೆ ಪ್ರಕೃತಿಯ ಯಥಾರ್ಥತೆಯನ್ನು ಮೀರುವ ಸ್ವಾತಂತ್ರ್ಯವಿಲ್ಲ. ಇದು ಚೆನ್ನಾಗಿ ವ್ಯಕ್ತವಾಗುವುದು ವಾಸ್ತವ ಜೀವಿತದ ಕಥೆ ಮತ್ತು ಕಾದಂಬರಿಗಳಲ್ಲಿ.

ಉಪಮಾ ಮತ್ತು ಮಹೋಪಮಾ ವಿಧಾನಗಳಂತೂ ಕಲೆಯ ಪ್ರಾಣಕ್ಕೆ ಶ್ವಾಸೋಚ್ಛ್ವಾಸಗಳಾಗಿವೆ.[5] ಉಪಮಾ ಉಪಾಯವೂ, ಒಂದು ರೀತಿಯಲ್ಲಿ, ಬಾಳು ವಿಶೇಷತೆಯನ್ನು ಸಾಧಿಸಲು ಕೈಕೊಳ್ಳುವ ಉಪಾಯದಂತೆ, ಬಹಿರುಪಕರಣವೇ, ಆದರೆ ಇಲ್ಲಿ ಭಾವಸಾದೃಶ್ಯದ ವಿದ್ಯುತ್ ಕ್ರಿಯೆಯಿಂದ ಉಪಮೆಯ ಆಗಂತುಕತ್ವ ಅಂತಸ್ಸತ್ತ್ವವಾಗಿ ಪರಿಣಮಿಸುತ್ತದೆ: ನಮ್ಮ ಶರೀರಕ್ಕೆ ಪರಕೀಯವಾದ ಅನ್ನವು ಜಠರರಸ ಪ್ರಭಾವದಿಂದ ನಮ್ಮ ಮೈನೆತ್ತರಾಗಿ ಪರಿಣಮಿಸುವಂತೆ.

ಮೇಲೆ ವಿವರಿಸಿದ ಎರಡು ವಿಧಾನಗಳಿಗಿಂತಲೂ ಅತ್ಯಂತ ಗಮನಾರ್ಹವಾದ ವಿಧಾನವೆಂದರೆ ಪ್ರತಿಮಾವಿಧಾನ.[6] ಈ ವಿಧಾನ ಕಲಾಪ್ರಪಂಚದಲ್ಲಿ ಮಾತ್ರವಲ್ಲ ಮತಪ್ರಪಂಚಲದಲ್ಲಿ ಅದಕ್ಕೂ ಮಿಗಿಲು ಸರ್ವಾಧಿಕಾರಿಯಾಗಿದೆ. ಅತಿ ಗಹನವಾದರೂ ಅತಿ ಸುಲಭವೂ ಸಹಜವೂ ಆಗಿ ತೋರುವುದರಿಂದ ಇದು ಅತ್ಯುತ್ತಮವಿಧಾನವೂ ಆಗಿದೆ. ಕಲೆಯನ್ನು ಅಡಗಿಸುವುದರಲ್ಲಿಯೆ ಕಲೆಯ ಮಹತ್ತಿದೆ ಎಂಬ ತತ್ತ್ವವನ್ನು ಸಾಧಿಸುವುದಕ್ಕೆ ಈ ಪರಮೋತ್ತಮ ವಿಧಾನವನ್ನು ಬಿಟ್ಟರಿಲ್ಲ.

ಪ್ರಕೃತಿ ಜೀವನವು ವಿಶೇಷತೆಯನ್ನು ಸಂಪಾದಿಸುವುದು ಸಂಪತ್ ಸೂಚಕವಾದ ವಸ್ತುಗಳ ಸಂಯೋಜನದಿಂದ. ಕಲೆ ಅದನ್ನು ಪ್ರತಿಬಿಂಬಿಸಿದರೆ ಆ ವಿಧಾನವೆ ಪ್ರತಿಕೃತಿ. ಸದೃಶಭಾವ ಪ್ರಚೋದಕಗಳಾದ ಇತರ ವಸ್ತುಗಳ ಸಂಸರ್ಗದಿಂದ ಪ್ರಕೃತವಸ್ತುವಿನಲ್ಲಿ ಭಾವಪುಷ್ಟಿಯಾಗುವಂತೆ ಮಾಡುವ ವಿಧಾನವೆ ಉಪಮಾ. ಅದನ್ನೇ ಮಹತ್ತಾಗಿ ಸಾಧಿಸುತ್ತದೆ ಮಹೋಪಮಾ. ಮಹೋಪಮೆ ಬೃಹಚ್ಚಿತ್ರದಿಂದ ಆವಶ್ಯಕವಾದ ಭಾವಕೋಶವನ್ನು ಸೃಜಿಸಿದರೆ, ಅಂತಹ ಭಾವಕೋಶಕ್ಕೆ ಬೃಹಚ್ಚಿತ್ರವೊಂದು ಸೃಷ್ಟಿಯಾಗುತ್ತದೆ ಪ್ರತಿಮಾ ವಿಧಾನದಲ್ಲಿ. ಒಂದೇ ಭಾವಕೋಶಕ್ಕೆ ಒಬ್ಬೊಬ್ಬ ಕಲೆಗಾರನೂ ಅವನವನ ದರ್ಶನ, ಪ್ರತಿಭೆ, ಸಂಸ್ಕಾರ, ಸನ್ನಿವೇಶ, ಮತ್ತು ಅಭ್ಯಾಸ ಕೌಶಲಗಳಿಗೆ ತಕ್ಕಂತೆ ಪ್ರತೀಕಗಳನ್ನು ನಿರ್ಮಿಸುತ್ತಾನೆ. ಕೆಲವೊಮ್ಮೆ ಅ ಪ್ರತೀಕಗಳು ಅಲ್ಪವಿಸ್ತಾರದ ಭಾವಕೋಶ ಪ್ರತಿಮಾ ಪ್ರದೇಶಗಳಾಗುವುದಕ್ಕೆ ಬದಲಾಗಿ ಭೂಮ ವಿಸ್ತಾರದ ಭವ್ಯಪ್ರಪಂಚಗಳಾಗುತ್ತವೆ, ಡಾಂಟೆಯ ಮಹಾದರ್ಶನವು ‘ಡಿವೈನ್ ಕಾಮೆಡಿ’ಯಲ್ಲಿ ಸ್ವತಂತ್ರವೂ ಪೃಥುಲವೂ ಆಗಿರುವ ಒಂದು ಪ್ರತಿಮಾ ಪ್ರಪಂಚವಾಗಿ ಸಾಕ್ಷಾತ್ಕಾರಗೊಂಡಿರುವಂತೆ.

ಶ್ರೀ ಕೃಷ್ಣನ ಜನನದ ಭವ್ಯತೆಗೆ ಭಾಗವತದ ಕವಿಯ ಭಾವಮಯ ಕಲೆ ಒಂದು ಮಹತ್ ಪ್ರತಿಮೆಯನ್ನು ಸೃಷ್ಟಿಸಿದೆ, ಕಾರಿರುಳಿನ ಕಾಳರಾತ್ರಿಯಲ್ಲಿ, ತಟಿದ್‌ರಮ್ಯ ಮೇಘಕೇಶದ ವಜ್ರಘೋಷಭೀಷಣ ವರ್ಷಭೈರವನ ತಾಂಡವಾಟ್ಟಹಾಸದಲ್ಲಿ, ಸಾವಿರ ಹೆಡೆಯ ಆದಿಶೇಷನ ಕೊಡೆವಿಡಿದ ಸೇವಾ ಸಹಾಯದಲ್ಲಿ, ಮತ್ತು ತನ್ನ ಅಖಂಡ ಜಲಸ್ರೋತವನ್ನೂ ಇರ್ಭಾಗಮಾಡಿ ನಂದಗೋಕುಲಕ್ಕೆ ಮಾರ್ಗದಾಯಿಯಾಗುವ ಯಮುನಾತರಂಗಿಣಿಯ ವಿನಯಭೀರುತೆಯಲ್ಲಿ. ಬೈಬಲ್ಲಿನ ನಮ್ರತರವಾದ ಮತೀಯಕಲೆ ದನದ ಕೊಟ್ಟಿಗೆಯಲ್ಲಿ ಹುಟ್ಟಿ ಮುರುವಿನ ಮರಿಗೆಯಲ್ಲಿ ಪವಡಿಸಿದ್ದ ಶಿಶು ಯೇಸುವಿನ ಜನನದ ಮಹತ್ತನ್ನು ಗಗನಪಥದಲ್ಲಿ ಮಾರ್ಗದರ್ಶಿಯಾಗಿ ಮುಂಬರಿದ ನಕ್ಷತ್ರವೊಂದರ ಬೆಂಬಳಿವಿಡಿದು ಬಂದು ಕಾಣಿಕೆಯೊಪ್ಪಿಸಿ ನಮಸ್ಕಾರ ಮಾಡಿದ ಮೂವರು ಪ್ರಾಚ್ಯ ದೇಶದ ದಿವ್ಯದರ್ಶಿಗಳ ಪ್ರತಿಮೆಯಿಂದ ಸಾಧಿಸುತ್ತದೆ. ಆದಿತೀರ್ಥಂಕರನ ಜನನ ಬಾಲ್ಯಾದಿ ಜೀವಮಾನದ ಕಥೆ ಶ್ರೀಕೃಷ್ಣನ ಜೀವನ ಕಥೆಯ ರೋಮಾಂಚನಕರವೂ ಸಾಹಸ ಪ್ರಪೂರ್ಣವೂ ಆದ ಬಹಿರ್ ಘಟನೆಗಳಿಂದಾಗಲಿ ಯೇಸುಕ್ರಿಸ್ತನ ಜೀವನ ಕಥೆಯ ಕರುಣ ಪೂರ್ಣವಾದ ಕ್ಲೇಶಾನುಭವಗಳಿಂದಾಗಲಿ ಕಂಟಕಿತವಾಗಿಲ್ಲ. ಆಸನ್ನ ಭವ್ಯನಾದ ಆದಿದೇವನ ದಿವ್ಯಕಥೆ ಅಹಿಂಸೆಯ ಅಸ್ತಿಭಾರದ ಮೇಲೆ ಅಂತಸ್ಸಾಧನೆಯ ಶಿಲ್ಪಕರ್ಮದಿಂದಲೆ ರಚಿತವಾಗಿದೆ. ಶ್ರೀಕೃಷ್ಣ ಮತ್ತು ಯೇಸುಕ್ರಿಸ್ತನ ಜೀವನ ಕಥೆಗಳಲ್ಲಿ ಇಲ್ಲಿಯ ಅಪ್ರಾಕೃತ ಮತ್ತು ಅತಿಮಾನುಷ ಪವಾಡಗಳು ಯಥೇಚ್ಛವಾಗಿ ನೆಯ್ಗೊಂಡಿದ್ದರೂ ಇಲ್ಲಿ ಅವತರಿಸುವಾತನು ದೇವರೂ ಅಲ್ಲ, ದೇವರ ಮಗನೂ ಅಲ್ಲ, ಸ್ವಪ್ರಯತ್ನ ಮತ್ತು ಸ್ವತಃ ಸಾಧನೆಗಳಿಂದ ಅರ್ಹತ್ ಆಗಲಿರುವ ಒಂದು ಸಾಮಾನ್ಯ ಜೀವ. ಬಹುಶಃ ಹಿಂದೆ ಎಷ್ಟೋ ಜನ್ಮಗಳಲ್ಲಿ ಹುಲಿಯೋ ಇಲಿಯೋ ನಾಯಿಯೋ ನರಿಯೋ ಆಗಿ ಯಃಕಶ್ಚಿತ್ತಾಗಿದ್ದ ಒಂದು ಜೀವ. ಅಂಥಾ ಜೀವ ಈಗ ಬಹು ಪ್ರಯತ್ನದಿಂದ ಅಹಮಿಂದ್ರತ್ವಕ್ಕೆ ಏರಿದೆ. ಆ ಜೀವ ನಾಭಿರಾಜಾಂಗನೆ ಮರುದೇವಿಯ ಹೊಟ್ಟೆಯಲ್ಲಿ ಹುಟ್ಟಿದೆ. ಸಮಸ್ತ ಪ್ರಕೃತಿಗೂ ಇಂದ್ರಾದಿ ದೇವತೆಗಳಿಗೂ ಅದು ಗೊತ್ತಾಗುತ್ತದೆ. ಆದರೆ ನಮಗೆ? ಮಗು ಬೆಳೆದು, ದೊಡ್ಡವನಾಗಿ, ಸಮ್ಯಕ್‌ತ್ವವನ್ನು ಸಂಪಾದಿಸಿದ ಮೇಲೆ ಸರ್ವರಿಗೂ ತಿಳಿಯುತ್ತದೆ ನಿಜ. ಆಮೇಲೆ ಎಲ್ಲರೂ ಚಾಮರವಿಕ್ಕುತ್ತಾರೆ. ನಿಜ. ಆದರೆ ಕಲೆ ಭವಿಷ್ಯದ್ದರ್ಶಿ. ಅದರ ಕಾರುಣ್ಯಕ್ಕೂ ಜನತೆಯ ಕಾರ್ಪಣ್ಯಕ್ಕೂ ಬಹು ದೂರಾಂತರ. ಬದುಕಿರುವಾಗ ಮಹಾತ್ಮನಿಗೆ ಮೊಳೆ ಹೊಡೆದು ಕೊಂದು, ಅವನ ಕೀರ್ತಿಗೆ ಸ್ಮಾರಕಗಳನ್ನು ನಿರ್ಮಿಸುತ್ತದೆ ಜನತಾಕಾರ್ಪಣ್ಯ. ಕಲಾಕಾರುಣ್ಯವಾದರೊ ಆತನ ಗರ್ಭಾವತರಣ ಮೊದಲುಗೊಂಡು ಸಮವಸರಣದವರೆಗೂ ತನ್ನ ಹಾಲ್ದೊರೆಯ ಔದಾರ್ಯವನ್ನು ಹರಿಯಿಸುತ್ತದೆ, ಹೊರುವ ಹೆರುವ ಸಾಕುವ ಸಲಹುವ ತಾಯಿಯಂತೆ.

ತೀರ್ಥಂಕರನಾಗಲು ಜನಿಸಿರುವ ಶಿಶುವಿನ ಭವ್ಯತೆಯನ್ನು ನಮ್ಮ ಕವಿ ಹೇಗೆ ಸಾಧಿಸಿದ್ದಾನೆ? ಜನ್ಮಾಭಿಷೇಕದ ಮಹಾಪ್ರತಿಮೆಯಿಂದ: ಆ ಪ್ರತಿಮಾಚಿತ್ರಕ್ಕೆ ಸಮಾನವಾಗುವ ಭೂಮಾನುಭೂತಿಯ ಚಿತ್ರಗಳು ಸಾಹಿತ್ಯಲೋಕದಲ್ಲಿ ಅಪೂರ್ವ ಮತ್ತು ಅಲ್ಪಸಂಖ್ಯಾತ. ಮಹಾಚಕ್ರವರ್ತಿಯಾದ ನಾಭಿ ರಾಜನು ಪುತ್ರೋತ್ಸವಕ್ಕಾಗಿ ತನ್ನ ಸಮಸ್ತ ಐಶ್ಚರ್ಯವನ್ನೂ ವಿನಿಯೋಗಿಸಿದ್ದರೂ ಅದು ಕವಿಯಿಂದ ವರ್ಣಿತವಾಗಿರುವ ಜನ್ಮಾಭೀಷೇಕದ ಅಖರ್ವವೈಭವದ ಪಾದಧೂಳಿಯನ್ನೂ ತಲೆಯಲ್ಲಿ ಧರಿಸಿಕೊಳ್ಳುವುದಕ್ಕೆ ಯೋಗ್ಯವಾಗುತ್ತಿರಲಿಲ್ಲ. ಅಷ್ಟು ಗಗನೋತ್ತುಂಗವಾಗಿದೆ ಆ ಪ್ರತಿಮಾಭವ್ಯತೆ.

ಭವ್ಯತೆಗೆ ಪ್ರತಿಮಾ ನಿರ್ಮಾಣವು ಹೇಗೆ ದಿವ್ಯಪ್ರತಿಭಾ ಮಾತ್ರ ಸಾಧ್ಯವೋ ಭೂಮಾನುಭೂತಿಯೂ ಹಾಗೆಯೆ ಸಾಧನಶೀಲವಾದ ಸಹೃದಯತೆಗೆ ಮಾತ್ರ ಸಾಧ್ಯ. ಆ ಅನುಭವ ಪಡೆಯುವ ಅಧಿಕಾರ ಸಂಪಾದನೆ ಧವಳಗಿರಿಶೃಂಗಕ್ಕೆ ಏರುವಂತೆ. ಕಣಿವೆಯ ಉದ್ಯಾನಗಲಲ್ಲಿ ವಿಹರಿಸುವಂತೆಯೂ ಅಲ್ಲ; ತಪ್ಪಲಿನ ಅರಣ್ಯಗಳಲ್ಲಿ ಅಲೆದಾಡುವಂತೆಯೂ ಅಲ್ಲ. ಶೃಂಗಾರಾದಿ ರಸಾನುಭವಗಳಂತೆ ಸಾಧಕರಲ್ಲದ ಅಲಸ ರಸಿಕರಿಗೆ ಗಿಟ್ಟುವುದಿಲ್ಲ ಭೂಮಾನುಭೂತಿ. ಏಕೆಂದರೆ, ಭವ್ಯತಾ ಅನುಭವವು ರಸಋಷಿಗಳ ಅಮೃತಾಹಾರ. ಆ ಅನುಭೂತಿ ಕಲಾಯೋಗದ ಶಿಖರಸಿದ್ಧಿ. ಆದ್ದರಿಂದಲೆ ಓದುಗನು ಅಲ್ಪತೆಯ ಮತ್ತು ಅಲ್ಪಸ್ವಲ್ಪತೆಯ ಸಣ್ಣ ಮನಸ್ಸನ್ನು ವಿಸರ್ಜಿಸಿ, ಮಹಾಯಾತ್ರೆಗೆ ಸಿದ್ಧವಾಗುವ ಭೂಮಬುದ್ಧಿಯಿಂದ ಮುಂಬರಿಯುವುದು ಅತ್ಯವಶ್ಯ.

‘ಕೈಶಾನುವ ನೆೞಲಳುರದಂತೆವೊಲ್ ಕನ್ನಡಿಯಂ’ ಜ್ಞಾನಮಯ ತೇಜೋನಿಧಿಯಾದರೂ ತಾಯ ಗರ್ಭಕ್ಕೆ ‘ಪೀಡೆಯನಂತೇನಂ ಮಾಡದೆ’ ಜಿನಶಿಸು ಜನಿಸಿತು.

ಆ ತ್ರೈಲೋಕ್ಯ ನಾಥೋದಯಮನಱೆಪುವಂತಾ ತ್ರಿಳೋಕತ್ಕಮಾಗಳ್
ತ್ರಿದಶಾನೇಕಾನಕಂಗಳ್ ಮೊಳಗಿದುವು;
ಕರಾಸ್ಫಾಳನಂ ದೇವರಿಂದಾಗದೆ ಮುಂ ಕೊಲ್ಪದ್ರುಮಂಗಳ್
ಪೊಸತಲರ್ದಲರಂ ತಾಮೆ ಸಾಲ್ವನ್ನೆಗಂ ಸೊಸಿದುವು;
ಏಕಾಯ್ತೀ ಕಿರೀಟಕ್ಕವನತಿಯನೆ ದೇವೋತ್ತಮಾಂಗಂಗಳುಂ ಬಾಗಿದುವು.

ಪೀಠಕಂಪನದಿಂದ ಅದನ್ನರಿತ ದೇವೇಂದ್ರನು ತನ್ನಾಸನದಿಂದೆದ್ದು ಅಲ್ಲಿಯೆ ‘ಮೂಱುಸೂೞ್ ಪೊಡೆವಟ್ಟಂ.’

ವೈದಿಕಪುರಾಣಗಳ ಇಂದ್ರನಂತೆ ಕರುಬು ಕುವರ್ತನೆಗಳಿಂದ ಲಘುತರನಾಗದೆ ಅತ್ಯಂತ ಪೂಜಾರ್ಹನಾಗಿಯೂ ಮಹಾನುಭಾವನಾಗಿಯೂ ಉಳಿದಿರುವ ಜೈನಪುರಾಣಗಳ ಆ ಗುರುವ್ಯಕ್ತಿ ಸೌಧರ್ಮೇಂದ್ರನು ಶಚೀದೇವಿವೆರಸು ದೇವನಿಕಾಯ ಸಮೇತನಾಗಿ ಗಗನದಿಂದ ಅವನಿತಳಕ್ಕೆ ಅವತರಿಸುತ್ತಾನೆ. ಶಚೀಮಹಾದೇವಿ ‘ತಿರೋಹಿತ ಶರೀರೆಯಾಗಿ ಮರುದೇವೀವಿಳಸತ್ ಪ್ರಸೂತಿಗೃಹಮಂ ಪೊಕ್ಕು’, ತಾಯ ತೊಡೆಯ ಮೇಲೆ ಹೊಳೆಯುತ್ತಿದ್ದ ಹಸುಳೆಯನ್ನು ಅಕ್ಕರೆಯಿಂದ ನೋಡಿ, ತಾಯಿಮಕ್ಕಳಿಬ್ಬರನ್ನೂ ಮೂರು ಸಾರಿ ಬಲಗೊಂಡು, ಮಾಯಾನಿದ್ರೆಯಿಂದ ಆಕೆಗೆ ಮೈಮರೆಯುವಂತೆ ಮಾಡಿ, ಮಾಯಾಶಿಶುವೊಂದನ್ನು ಆಕೆಯ ಮುಂದಿಟ್ಟು, ಜಗತ್ ತ್ರಿತಯ ಪತಿಯಾದ ನಿಜ ಶಿಶುವನ್ನು ಎತ್ತಿತಂದು, ದೇವೇಂದ್ರನ ಕೇಯೂರಂಜಿತ ಭುಜಯುಗಳಕ್ಕೆ ನೀಡುತ್ತಾಳೆ. ಐರಾವತ ಗಜೇಂದ್ರದ ಮೇಲಿದ್ದ ಆತನು ಆ ದಿವ್ಯ ಶಿಶುವನ್ನು ತೊಡೆಯೇರಿಸಿಕೊಂಡು

ತ್ರಿಜಗನ್ನಾಥನ ಮಜ್ಜನಕ್ಕೆ ಮಣಿಪೀಠಾಕಾರದಂತಾಗಿ ವಿ
ಶ್ವಜಗತ್ ಪೂಜಿತಮಾಗಿ ಪೆಂಪುವಡೆದಾ ಹೇಮಾಚಳೇಂದ್ರಕ್ಕೆ ಕ
ಲ್ಪಜರಂ ಪೋಗಲೆ ಸನ್ನೆಗೆಯ್ಯೆ ಭಗವಜ್ಜನ್ನಾಭಿಷೇಕೋತ್ಸವ
ಧ್ವಜಮಂ ಪೋಲ್ತುದು ರತ್ನರಂಜಿತ ಭುಜಾದಂಡಂ ಸುರಾಧೀಶನಾ || (೭-೪೮)

ಇಲ್ಲಿಯೂ ಇನ್ನು ಮೇಲೆಯೂ ನಮ್ಮ ಕಲ್ಪನೆ ಭೂಗೋಳದ ಸಣ್ಣ ಪುಟ್ಟ ಅಡಿಕಡ್ಡಿಗಳ ಕಿರು ಅಳತೆಗಳನ್ನು ಹಿಂದೆಬಿಟ್ಟು ಖಗೋಳದ ಕೋಟ್ಯಂತರ ಯೋಜನಾದ್ಭುತ ದೂರಗಳ ಬೃಹನ್ಮಾನಸೂತ್ರದ ದೈತ್ಯಗಣಿತದ ಅನುಚರನಾಗಬೇಕಾಗುತ್ತದೆ. ಆ ಅಪಾರದೂರಗಳ ಅಳತೆಗೆ ಕನಿಷ್ಠಾಂಶದ ಮೂಲ ಮಾನದಂಡವೆಂದರೆ ಜಿನಾರ್ಭಕನ ಜನ್ಮಾಭಿಷೇಕಕ್ಕಾಗಿ ಮೇರುಪರ್ವತದ ನೆತ್ತಿಯಲ್ಲಿ ಪೀಠರಚನೆ ಮಾಡಿರೆಂದು ದೇವತೆಗಳಿಗೆ ಸನ್ನೆಗೆಯ್ಯುತ್ತಿರುವ ಸುರಾಧೀಶನ ನಭೋನ್ನತವಾದ ರತ್ನರಂಜಿತ ಭುಜಾದಂಡ!

ಮೆರವಣಿಗೆ ಹೊರಟಿತು, ಮಹಾಮೇರುಯಾತ್ರಿ. ಐರಾವತ ಗಜಕ್ಕೆ ತಮ್ಮ ಹೇರಾನೆಗಳನ್ನು ಪಕ್ಕುಮಾಡಿ ‘ಸನತ್ಕುಮಾರ ಮಾಹೇಂದ್ರರಿಕ್ಕಿದರ್ ಚಾಮರಮಂ.’ ನಮಸ್ಕರಿಸುವ ಕಿರೀಟಗಳೊ, ಹೊಯ್ವ ದೇವದುಂದುಭಿಗಳೊ, ಅಮರಕಾಂತಾ ನರ್ತನದ ಬೆಡಂಗುಗಳೊ, ಪರಿಮಳಗಳೊ, ಗೀತಗಳೊ, ಸರ್ವೇಂದ್ರಿಯ ವೈಭವಗಳೂ ಮೆರವಣಿಗೆ ಹೊರಟಿದ್ದುವಲ್ಲಿ.

ಇಲ್ಲಿ ಭವ್ಯತೆಗೆ ಕಳಶಪ್ರಾಯವಾದ ಒಂದು ಮಹತೋಮಹೀಯ ಭೂಮಚಿತ್ರವನ್ನು ತಂದೊಡ್ಡುತ್ತದೆ ಕವಿಪ್ರತಿಭೆ. ನಾವೂ ಆ ಅಖರ್ವಪ್ರತಿಮೆಯನ್ನು ಕಲ್ಪಿಸಿಕೊಳ್ಳಬೇಕು, ಸಾವಧಾನದಿಂದ, ಧ್ಯಾನಾತ್ಮಕರಾಗಿ, ಒಮ್ಮೆ ಹತ್ತಿರ ನಿಂತು, ಒಮ್ಮೆ ದೂರಹೋಗಿ; ಒಮ್ಮೆ ಮರ್ತ್ಯದಿಂದ, ಒಮ್ಮೆ ಅಮರ್ತ್ಯದಿಂದ; ನಾನಾ ದಿಕ್ಕು, ನಾನಾ ದೂರ, ನಾನಾ ದೃಷ್ಟಿಕೋನಗಳಿಂದ ದರ್ಶಿಸಬೇಕು. ಆದರೆ ಒಂದು ವಿಷಯ ಎಲ್ಲಕ್ಕೂ ಬಹು ಮುಖ್ಯ: ಸ್ಪಷ್ಟತೆಯನ್ನು ಸಂಪಾದಿಸುವುದಕ್ಕೇನೋ ಕಷ್ಟಪಡಬೇಕು. ಮತ್ತೆ, ಹಾಗೆ ಸಂಪಾದಿಸಿದ ಸ್ಪಷ್ಟತಾ ಕರ್ಪೂರಕ್ಕೆ ಪುನಃ ಅಸ್ಪಷ್ಟತಾಗ್ನಿಯನ್ನು ಹೊತ್ತಿಸಿ ಆ ಮಂಗಳಾರತಿಯ ಕಂಪುಹೊಗೆಯ ಬೆಳಕಿನಲ್ಲಿ ಅಥವಾ ನೀಲಿಗತ್ತಲೆಯಲ್ಲಿ ಆ ದೃಶ್ಯತ್ರಿವಿಕ್ರಮನನ್ನು ದೃಷ್ಟಿಸಿ ರಸಮೂರ್ಛಿತರಾಗಬೇಕು. ಏಕೆಂದರೆ, ಖಚಿತವಾದ ಸ್ಪಷ್ಟತೆಯಿಂದ ಭವ್ಯತಾ ಅನುಭವಕ್ಕೆ ಅಡಚಣೆಯಾಗುತ್ತದೆ. ಸ್ಪಷ್ಟತೆಗೂ ಅಲ್ಪತೆಗೂ ಆತ್ಮ ಸಂಬಂಧವಿರುವಂತೆ ಅಸ್ಪಷ್ಟತೆಗೂ ಭೂಮತೆಗೂ ಅಧ್ಯಾತ್ಮ ಸಂಬಂಧವಿದೆ.

ಇಂದ್ರನನ್ನೂ ಜಿನಶಿಶುವನ್ನೂ ಹೊತ್ತ ಐರಾವತಕ್ಕೆ ವಿಕ್ರಿಯಾಶಕ್ತಿಯ ಮಹಿಮೆಯಿಂದ ಒಂದು ರೂಪಬೃಹತ್ತು ದೊರೆಕೊಳ್ಳುತ್ತದೆ.

ನೆಗೞ್ದೈರಾವತದಂತಿಗಾದುದು ಮೊಗಂ ಮೂವತ್ತೆರೞ್ನೊೞ್ಪೊಡಾ
ಮೊಗಮೊಂದೊಂದರಱೊಳೆಂಟು ಕೋಡವಱೊಳಂತೊಂದೊಂದಱೊಳ್ ಪೂಗೊಳಂ
ನೆಗೞ್ದೊಂದೊಂದೆಸೆದಿರ್ಕುಮಾ ಕೊಳಗಳಂತೊಂದೊಂದಱೊಳ್ ಚಿತ್ರ ಪ
ತ್ರಗಣಂ ಪದ್ಮಿನಿ ನಾಡೆ ಚೆಲ್ವನೊಳಕೊಂಡೊಂದೊಂದೆ ಕಣ್ಗೊಪ್ಪುಗುಂ (೭-೫೨)

ಪೊಸಪೂವಬ್ಜಿನಿಯೊಂದಱೊಳ್ ಸೊಗಯಿಕ್ಕುಂ ಮೂವತ್ತೆರೞ್ಪೂವಿನೊಳ್
ಪೊಸಗಂಪಂ ಪುದಿದೊಪ್ಪಿ ತೋಱುವೆಸಳ್ಗಳ್ಮೂವತ್ತೆರೞ್ಚೆಲ್ವೆನಿ
ಪ್ಪೆಸಳೋರೊಂದಱ ಮೇಲೆ ಲೀಲೆಮಿಗೆ ಮೂವತ್ತಿರ್ವರೋರಂತೆ ನ
ರ್ತಿಸೆ ದೇವಾಂಗನೆಯರ್ ಬೆಡಂಗನೊಳಕೊಂಡತ್ತಿಂದ್ರರುಂದ್ರದ್ವಿಪಂ (೭-೫೩)

ವದನಕ್ಕೆಮ್ಮ ತಳಕ್ಕೆ ನೀಳ್ದ ನಗೆಗಣ್ಗಂ ತಾಂ ಗಡಂ ತನ್ನ ನೀ
ಳ್ದ ದಳಂಗಳ್ ಗಡ ಪೋಲ್ವೆಯೆಂಬ ಸೆಣಸಿಂ ಮಿಕ್ಕೇವದಿಂದಿಕ್ಕಿ ಮೆ
ಟ್ಟಿದರೀ ಕಾಂತೆಯರೀ ಸರೋರುಹದಳವ್ರಾತಂಗಳಂ ತಪ್ಪದೆಂ
ಬುದನೆಂಬನ್ನೆಗಮೇಂ ಬೆಡಂಗೆಸೆದುದೋ ದೇವಾಂಗನಾನರ್ತನಂ (೭-೫೪)

ನವಕಮಳದಳಂಗಳ್ ಭೀಕರಂ ಬಲ್ಪುಮಾಗಿ
ರ್ಪುವೆ? ತಳಕೆ ತಳಂಗಳ್ ನೋಯವೇ ಮೆಟ್ಟಿದಂದೆಂ
ದವಱೆಸಳನವಳ್ದಿರ್ ಮೆಟ್ಟಿದರ್ ಮೆಟ್ಟರೆಂಬಂ
ತವಯವದೊಳೆ ಲೀಲಾನೃತ್ಯದಿಂ ಕಣ್ಗೆವಂದರ್ || (೭-೫೫)

ಹಿಮಾಚಲಕ್ಕಿಂತಲೂ ದೊಡ್ಡದಾದ ಆ ಐರಾವತಕ್ಕೆ ಮೂವತ್ತೆರಡು ಮುಖಗಳಾಗಿವೆ. ಒಂದೊಂದು ಮುಖದಲ್ಲಿ ಎಂಟೆಂಟು ಬೆಳ್ಳಗೆ ನೀಳ್ದ ದಂತಗಳುದಿಸಿವೆ. ಆ ಒಂದೊಂದು ಕೋಡಿನ ಅಗ್ರಪ್ರದೇಶದಲ್ಲಿ ಒಂದೊಂದು ಸರೋವರವಾಗಿದೆ. ಆ ಒಂದೊಂದು ಹೂಗೊಳದಲ್ಲಿ ಒಂದೊಂದೇ ತಾವರೆ ಅರಳಿದೆ, ಅರ್ಧ ಸರೋವರವನ್ನಾದರೂ ತುಂಬಿ. ಆ ಒಂದೊಂದು ತಾವರೆಯಲ್ಲಿ ಮೂವತ್ತೆರಡು ಎಸಳು ಶೋಭಿಸುತ್ತಿವೆ. ಆ ಒಂದೊಂದು ಎಸಳಿನ ಮೇಲೆ ಮೂವತ್ತೆರಡು ದೇವಾಂಗನೆಯರು ನರ್ತಿಸುತ್ತಿದ್ದಾರೆ, ಮೆಟ್ಟಿದರೊ ಮೆಟ್ಟರೊ ಎಂಬಂತೆ! ಪುಣ್ಯವಿದ್ದಷ್ಟು ಊಹಿಸಿಕೊಳ್ಳಿ! ಅರ್ಹತೆಗೆ ತಕ್ಕಂತೆ ಅನುಭೂತಿ!

ಇಂತಹ ‘ರುಂದ್ರದ್ವಿಪಮಂ’ ಬಳಸಿ ಅನುಸರಿಸಿ ‘ಗಗನತಳೋದ್ಗಾಮಿ ಯಾಯ್ತಿಂದ್ರ ಸೈನ್ಯಂ.’ ಮೇರುಗಿರೀಂದ್ರದವರೆಗೂ ರಚಿತವಾದ ಮಹಾಮಣಿಸೋಪಾನ ಪಂಕ್ತಿತ್ರಯವನ್ನೇರುತ್ತಾ ‘ರಯ್ಯಮಾಯ್ತಿಂದ್ರ ಸೈನ್ಯಂ.’

ಮುಂದೆ ಇಂಪುತುಳುಕುವ ಪಂಪಪ್ರತಿಭೆ ಕಾವ್ಯದಲ್ಲಿ ದಾರಿಯುದ್ದಕ್ಕೂ ಪುಷ್ಪಾಂಜಲಿಯನ್ನು ಮುಕ್ತಹಸ್ತದಿಂದ ಎರಚುತ್ತಿರುವುದನ್ನು ನೋಡುತ್ತೇವೆ. ಆ ಹೂವಿನ ಹುಡಿಯಿಂದಲೇ ಎಂಬಂತೆ ತೋರುತ್ತದೆ ‘ಕುಸುಮ ಕುಳರಜಮಾಗಿ ಅಡರ್ದುದು ಸುರಗಿರಿಯನ್ ಇಂದ್ರರುಂದ್ರಗಜೇಂದ್ರಂ.’

ಆ ಗಿರಿಮಸ್ತಕದಲ್ಲಿ ಸಮೆದಿದ್ದ ಅಭಿಷೇಕವೇದಿಕೆಯೋ ನೂರು ಯೋಜನ ವಿಷ್ಕಂಭವಾಗಿದೆ, ಐನೂರು ಯೋಜನ ವಿಸ್ತಾರವಾಗಿದೆ, ಎಂಟು ಯೋಜನ ಉತ್ಸೇಧವಾಗಿದೆ; ಅಷ್ಟಮೀ ಚಂದ್ರಾಕೃತಿಯಲ್ಲಿ ಭೀಮರಮ್ಯವಾಗಿದೆ. ಅಭಿಷೇಕಕ್ಕೆ ನೀರು?

ಕ್ಷೀರಾಬ್ಧಿಯ ನೀರಲ್ಲದೆ
ಧೀರನ ಮಜ್ಜನಕ್ಕೆ ಪೆಱವು ನೀರ್ ತಗವೆಂದಾ
ವಾರಾಶಿವರಂ ಸುರಜನ
ದಾರಿ ಮನೋಹಾರಿ ನೀಳ್ದುವೆರಡುಂ ಕೆಲದೊಳ್.

ಮೇರುಶೈಲದ ಶಿಖರದಿಂದ ಹಿಡಿದು ಕ್ಷೀರಸಾಗರದವರೆಗೆ ನಿಂತಿದೆ, ಎರಡು ಸಾಲಾಗಿ ಬೆಟ್ಟಗಳೆ ಸಾಲ್ಗೊಂಡಂತೆ, ಮಹಾಗಾತ್ರದ ಅಸಂಖ್ಯ ದೇವಪಂಕ್ತಿ. ಒಂದೊಂದು ಸಾಲಿಗೂ ತಲೆಯಾಳುಗಳಾಗಿ ನಿಂತಿದ್ದಾರೆ, ಜಿನಶಿಶುವಿನ ಒಂದು ಪಕ್ಕದಲ್ಲಿ ಸೌಧರ್ಮೇಂದ್ರ, ಇನ್ನೊಂದು ಪಕ್ಕದಲ್ಲಿ ಈಶಾನೇಂದ್ರ. ಅವರ ಕೈಯ ಕುಂಭಗಳ ಅಳತೆಯಿಂದಲೇ ಆ ದೇವತೆಗಳ ಗಾತ್ರ ಮತ್ತು ಬಲಗಳನ್ನೂ ಭೀಮವೈಭವವನ್ನೂ ಊಹಿಸಿಕೊಳ್ಳಬಹುದು. ‘ಅಷ್ಟಯೋಜನ ಗಂಭೀರೈಕಯೋಜನ ಮುಖವಿಸ್ತಾರ ಶಾತಕುಂಭ ಕುಂಭಂಗಳಂಕೊಂಡು’ ಎಂದಿದೆ ವರ್ಣನೆ. ಆ ಚಿನ್ನದ ಕೊಡಗಳಿಗೆ ಹೊಟ್ಟೆಯ ಸುತ್ತಳತೆ ಎಂಟು ಯೋಜನ, ಬಾಯ ಸುತ್ತಳತೆ ಒಂದು ಯೋಜನ! ಕ್ಷೀರವನ್ನು ಮೊಗೆಮೊಗೆದು ಎಷ್ಟು ಶೀಘ್ರವಾಗಿ ಕೈಯಿಂದ ಕೈಗೆ ಸಾಗಿಸುತ್ತಿದ್ದಾರೆ ಎಂದರೆ, ದೂರ ನಿಂತು ನೋಡುವವರಿಗೆ, ನಕ್ಷತ್ರಗಳ ಒಂದು ಅಖಂಡ ಮಾಲೆಯೇ ಮೇರುಗಿರಿ ಶಿಖರದಿಂದ ಕ್ಷೀರಸಾಗರದ ವರೆಗಿನ ದೀರ್ಘದೂರದಲ್ಲಿ, ಬೆಟ್ಟವೆ ತೊಟ್ಟುನೀಳ್ದ ಕಟ್ಟಾಣಿಯಂತೆ, ಗಿರ್ರನೆ ಸುತ್ತಿ ತೋರುತ್ತಿದೆ, ಬೈಗಿನ ಹೆಮ್ಮುಗಿಲಿಗೆ ಚುಕ್ಕಿಗಳಂಚು ಕಟ್ಟಿದಂತೆ!

ಅಯ್ದನೆಯ ಜಲಧಿವರಮ್-ಇರ
ದೆಯ್ದುವ, ಮೊಗೆವ,-ಅಂತೆ ಮೊಗೆದುಮ್-ಓರೊರ್ಬರ ಕೈ
ಗೆಯ್ದಿಸುವ ಬೇಗಮಂ ಮನಮ್-
ಎಯ್ದಿದುದಿಲ್ಲಮ್-ಅಮರ ಚರಿತಮ್-ಏನಚ್ಚರಿಯೋ!

ಕಳಧೌತಘಟಂ ಮುಕ್ತಾ
ಫಳಾಂಚಿತಗ್ರೀವಮ್-ಎಳೆದುಕೊಂಡುದು ತಾರಾ
ವಳಿ ಪರಿವೃತ ನವ ಸಂಧ್ಯಾ
ಜಳದದ ಗಾಡಿಯನ್-ಅನೇಕ ಸುರಕರತಳದೊಳ್! (೭-೮೨,೮೩)

ಪಂಪನು ಆ ಅಭಿಷೇಕವನ್ನು ಮಹೋದಾತ್ತವಾಗಿ ವರ್ಣಿಸಿ, ವರ್ಣಿಸಿ, ಕಡೆಗೆ ಸೋತು ಸುಯ್ಯುತ್ತಾನೆ:

ಮಜ್ಜನ ಪೀಠಂ ಸುರಗಿರಿ,
ಮಜ್ಜನ ಜಳವಮೃತ ಜಳಧಿ ಜಲಮ್,-ಅಮರೇಂದ್ರಂ
ಮಜ್ಜನವಳ್ಳನುಮ್-ಎನೆ, ಜಿನ
ಮಜ್ಜನ ಮಹಿಮೆಯ ಬೆಡಂಗನೇವಣ್ಣಿಪುದೋ! (೭-೧೦೨)

೧೦

ಜೀವದ ಅಹಂಕಾರವನ್ನು ಅಣೋರಣೀಯಕ್ಕೆ ಅಪ್ಪಳಿಸಿ, ಆತ್ಮವನ್ನು ಮಹತೋಮಹೀಯಕ್ಕೆ ಬೀಸಾಡಿ, ಅದನ್ನು ಬ್ರಹ್ಮಸ್ಪರ್ಶಿಯನ್ನಾಗಿ ಮಾಡುತ್ತದೆ, ಜನ್ಮಾಭಿಷೇಕದ ತರುವಾಯ, ಅದರ ಕಲಾಸಿದ್ಧಿಸ್ವರೂಪದಂತೆ ಸಂಪ್ರಾಪ್ತವಾಗುವ ಇಂದ್ರನ ಆನಂದ ನೃತ್ಯದ ವಿರಾಡ್‌ವರ್ಣನೆ. ಆದಿಪುರಾಣ ಕಾವ್ಯದಲ್ಲಿ ಇದಕ್ಕಿಂತಲೂ ಆಮೇಲೆ ಬರುವ ನೀಲಾಂಜನೆಯ ಲಾಸ್ಯದಲ್ಲಿ ಲಲಿತರಮ್ಯತೆ ಹೇಗೆ ತನ್ನ ಪರಮಾವಧಿಗೇರುತ್ತದೆಯೊ ಹಾಗೆಯೆ ಇಲ್ಲಿ ತಾಂಡವಭವ್ಯತೆ ತನ್ನ ಪರಮಾವಧಿ ಗೇರುತ್ತದೆ.

ಅಭಿಷೇಕ ಕಲ್ಯಾಣ ಪೂರೈಸಿದೆ. ‘ಅನೇಕ ದುಂದುಭಿಬಧಿರಿತ ಸಕಳದಿಙ್ಮಂಡಳನ್ ಆಖಂಡಳನ್ ಅಮರಸಮಿತಿವೆರಸು ಅಯೋಧ್ಯಾಪುರಕ್ಕೆ ಅಭಿಮುಖನಾದಾಗಳ್ ಬಿನ್ನನಿರ್ದುದು ಸುರಶೈಳಮ್ ಅದೊಂದು ಮದುವೆಗಳಿಪಿದ ಮನೆವೊಲ್.’ ಇಂದ್ರನು ತಾಯಿತಂದೆಗಳಿಗೆ ಜಿನಾರ್ಭಕನನ್ನೊಪ್ಪಿಸಿ, ಅವರನ್ನು ಪರಿಪೂಜಿಸುತ್ತಾನೆ. ಆ ಹಬ್ಬಕ್ಕೆ, ಕಂಡುಂಡು ತಣಿಯಲು, ಪುರಜನರು ಸಂತೆನೆರೆಯುತ್ತಾರೆ. ಮುಡಿದ ಹೂವಿನ ಹುಡಿಯಿಂದಲೂ ಚಾರು ಪಟವಾಸದ ಧೂಳಿಯಿಂದಲೂ ತೊಟ್ಟ ಒಡವೆಗಳ ಅರುಣಾಂಶುಗಳಿಂದಲೂ ‘ಪಿಂಜರಿತ-ಪಿಶಂಗಿತ- ಅರುಣಿತದಿಙ್ಮುಖಮಾದುದು ತನ್ಮಹೋತ್ಸವಂ.’

ಸರ್ವರ ಸಂತೋಷದಲ್ಲಿ ಭಾಗಿಯಾದ ಸೌಧರ್ಮೇಂದ್ರನು ತಾನೂ ‘ಆನಂದ ನಾಟಕಮ್ ಆಡಲ್ ಬಗೆದನ್.’ ‘ಕೃತಾನುಕರಣಮೆ ನಾಟಕಂ’ ಅಪ್ಪುದಱೆಂ, ಭಗವಜ್ಜನ್ಮಾಭಿಷೇಕ ಸಂಬಂಧಿಯಾಗೆ ತನ್ನ ಪೊಸತೆ ಸಮೆತ ಸಮವತಾರರೂಪಮಂ ಸುರಾಸುರ ಸಭೆಗಂ ನಾಭಿರಾಜಾದಿ ಮನುಜಸಭೆಗಂ ಮೆಱೆಯಲೆಂದು ತಾಂಡವಮ ನಾಡಲ್ ಉದ್ಯೋಗಂಗೆಯ್ದು, ನಾಟ್ಯವಿದ್ಯಾಚಾರ್ಯನಂ ಪೋಲ್ತು ರಂಗೊಂಬೊಕ್ಕು, ಲೋಕಾಕಾರಮನಭಿನಯಿಪಾಕಾರಂ[7] ನೆಗೞೆ ನಿಂದು ಚೆಲ್ವಂ ಪಡೆದಂ.’

ಆ ತಾಂಡವೇಂದ್ರನನ್ನಾಗಲಿ ಆ ನಾಟ್ಯರಂಗವನ್ನಾಗಲಿ ಚಿತ್ರಿಸಿಕೊಳ್ಳುವ ಕಲ್ಪನೆಗೆ ಕೃಪಣತೆ ಒಂದಿನಿತೂ ಸಲ್ಲದು. ಸಮುದ್ರ ಪರಿವೇಷ್ಟಿತ ಸಮಸ್ತಪೃಥ್ವೀ ಮಂಡಳವನ್ನೂ ಅಳೆಯುವಂತೆ ಅವನ ಪದವಿನ್ಯಾಸ. ಕುಲಶೈಲಗಳಲುಗುವಂತೆ ಪದಾಘಾತ. ಆವನ ಬಹುಸಂಖ್ಯೆಯ ತೋಳುಗಳಾಟಕ್ಕೆ ಹೂಮಳೆಯಂತೆ ತಾರೆಗಳುದುರುತ್ತವೆ. ಹೊರಹೊಮ್ಮುವ ಸುಯ್ಲಿನ ಬಿರುಬಿಗೆ ಕಡಲುಗಳುಚ್ಚಳಿಸುತ್ತಿವೆ. ದೇವತೂರ್ಯಗಳಿಂದಲೂ ಗೀತಧ್ವಾನಗಳಿಂದಲೂ ದಿಕ್ಕುದಿಕ್ಕುಗಳೆ ಪ್ರತಿರಣಿತವಾಗುತ್ತಿವೆ. ಒಮ್ಮೆ ನೆಲದಲ್ಲಿ, ಒಮ್ಮೆ ಆಕಾಶದಲ್ಲಿ. ಬಳಿ ಬಂದನು ಎನ್ನುವುದರೊಳಗೆ ದೂರವಾಗಿ ಹೊಳೆಯುತ್ತಾನೆ, ಸೂಕ್ಷ್ಮಾಂಗನಾಗುತ್ತಾನೆ. ತೆಕ್ಕನೆ ಭುವನವ್ಯಾಪಿಯಾಗುತ್ತಾನೆ. ಆ ತಾಂಡವಮೂರ್ತಿಯ ಚಲಿಸುತ್ತಿರುವ ಅಸಂಖ್ಯ ಬಾಹುಗಳ ಮೇಲೆ ದೇವಾಂಗನೆಯರು ಓಳಿಗೊಂಡು ನರ್ತಿಸುತ್ತಿದ್ದಾರೆ. ಆ ಬಾಹುಗಳು ದಿಗಂತದಿಂದ ದಿಗಂತಕ್ಕೂ ಆಕಾಶದಿಂದ ಭೂತಲಕ್ಕೂ ಸಂಚರಿಸುತ್ತಿದ್ದರೂ ಆ ನರ್ತಕಿಯರು ಬೆದರುವುದಿಲ್ಲ, ಬೀಳುವುದಿಲ್ಲ: ಕಣ್ಣು ಮುಚ್ಚಿ ಬಿಡುವುದರಲ್ಲಿ ಹದಿನೆಂಟು ಮೈಲಿ ಮುಂಬರಿವ ವೇಗದಿಂದ ಸೂರ್ಯನನ್ನು ಸುತ್ತುತ್ತಿರುವ ಭೂಗೋಳದ ಮೇಲೆ ಕರ್ತವ್ಯನಿಷ್ಠರಾಗಿ ಚಲಿಸುತ್ತಿರುವ ಮನುಷ್ಯರಂತೆ! ಅಷ್ಟೇ ಅಲ್ಲ. ದೂರದಿಂದ ನೋಡುವವರಿಗೆ, ನರ್ತಿಸುವ ಆ ದೇವಲಲನೆಯರ ಸಾಲುಗಳು, ಕುಣಿದಂತೆಲ್ಲ ಕುಣಿಯುವ, ಇಂದ್ರನ ಅಲಂಕಾರದ ಮಣಿಮಾಲೆಗಳಂತೆ ಮಾತ್ರ ತೋರುತ್ತವೆ. ತಾರತಮ್ಯದಿಂದ ಇಂದ್ರನ ರೂಪಬೃಹತ್ತು ‘ಸುಮನೋಹರ ಭಯಂಕರ’ವಾಗುತ್ತದೆ. ಅಲ್ಲದೆ, ಒಂದು ಕಡೆಯ ತೋಳುಗಳ ಮೇಲೆ ಸುರಯುವತಿಯರು ಕುಣಿದರೆ, ಮತ್ತೊಂದು ಕಡೆಯ ತೋಳುಗಳ ಮೇಲೆ ಸುರಯುವಕರು ಕುಣಿಯುತ್ತಿದ್ದಾರೆ. ಪುನಃ ಪಂಪನ ಮಹಾ ಪ್ರತಿಭೆಯೂ ಏದುತ್ತದೆ. ಭೂಮಾನುಭೂತಿಗೆ ನಾಲಗೆ ತತ್ತರಿಸುತ್ತದೆ; ಕಲ್ಪನೆ ಸೋಲುತ್ತದೆ; ಮತಿ ಭ್ರಮಿಸುತ್ತದೆ. ಆತನ ಮಹಾವಾಣಿಯ ಸಾಗರ ಘೋಷಕ್ಕೆ ಕಿವಿಗೊಟ್ಟರಲ್ಲದೆ ನಮಗೆ ತಗುಳಲಾರದು ಆ ಭವ್ಯತೆ: (೭-೧೧೮, ೧೨೦, ೧೨೧, ೧೨೨, ೧೨೩, ೧೨೪, ೧೨೫, ೧೨೬).

ಪದವಿನ್ಯಾಸದ ತಱುಗಲ್
ಪೊದೞೆ ಲಯಂಬೆರಸು ರಂಗಮಂ ಬಳಸಿದನಾ
ತ್ರಿದಶಾಧಿನಾಥನ್,-ಅಳೆವವೊಲ್-
ಉದನ್ವದಾವೇಷ್ಟಿತಾಖಿಳಾವನಿತಳಮಂ!

ಕುಲಶೈಲಂಗಳ್ ಪದಾಘಾತದೊಳಲುಗುವಿನಂ, ತಾರಕಾ ಸಂಕುಳಂ ತೋ
ಳ್ಗಳದೊಂದಳ್ಳೇಱೆನೊಳ್ ಪೂವಲಿವೊಲುದುರ್ವಿನಂ, ವಾರ್ಧಿಗಳ್ ರೇಚಕೋತ್ಥಾ
ನಿಳ ತೀವ್ರಾಘಾತದಿಂದುಚ್ಚಳಿಪಿನಮ್,-ಅಖಿಳಾಶಾಂತರಂ ದೇವತೂರ್ಯಾ
ವಳಿಗೀತಧ್ವಾನದಿಂದಂ ಪುದುವಿನಮ್-ಎಸೆದತ್ತಿಂದ್ರನಾನಂದನೃತ್ಯಂ!

ಎಳೆಯೊಳ್ ತೋಱೆದ ರೂಪನಾಗಳೆ ನಭೋಭಾಗಾಗ್ರದೊಳ್ ತೋರ್ಪನ್,-ಆ
ಗಳೆ ಗೆಂಟಾಗಳ ಸಾರೆಯಾಗಿ ಪೊಳೆವಂ, ಸೂಕ್ಷ್ಮಾಂಗನಾಗಿರ್ಪನ್,-ಆ
ಗಳೆ ದಿಗ್‌ವ್ಯಾಪಕನಪ್ಪನ್,-ಇಂತು ಪಲವುಂ ಚೋದ್ಯಂಗಳಿಂ ವಿಕ್ರಿಯಾ
ಬಳದಿಂದಾಡಿ ಮಹೇಂದ್ರಜಾಲಿಗನುಮಂ ಪೋಲ್ತಂ ಸುರಾಧೀಶ್ವರಂ!

ರಸಭಾವಾಭಿನಯಂಗಳಂ ಭುಜಲತಾ ಭ್ರೂಚಾಪನೇತ್ರೋತ್ಪಲ
ಪ್ರಸರಂಗಳ್ ಪಸರಂಗೆಯುತ್ತಿರೆ, ಲಸನ್ನೇತ್ರಂಗಳಂ ಕೂಡೆ ಬಂ
ಚಿಸುತುಂ ಮೆಟ್ಟುವ ಮೆಟ್ಟಿನೊಳ್ಪು ಜನತಾನೇತ್ರಂಗಳಂ, ನಾಡೆ ಚೆ
ಲ್ವೆಸೆದತ್ತು-ಇಂದ್ರನ ನೀಳ್ದ ತೋಳ್ದುಱುಗಲೊಳ್ ದೇವಾಂಗನಾರ್ತನಂ!

ಆನಂದಂಬೆರಸಂಕದಚ್ಚರಸಿಯರ್ ದೇವೇಂದ್ರನೈರಾವತಾ
ಳಾನಸ್ತಂಭಸಮಂಗಳಪ್ಪ ಭುಜಸಂದೋಹಂಗಳೊಳ್ ವೀರ ಕಾಂ
ತಾನೀಕಕ್ಕೆಣೆಯಾಗಿ ಕೂಡೆ ಕುಣಿದರ್, ಮತ್ತಂ ಕೆಲರ್ ನೋಡಿ ಸೂ
ಚೀ ನಾಟ್ಯಂಗಳನಾಡಿದರ್ ಖರನಖಪ್ರಾಂತಂಗಳೊಳ್ ಶಕ್ರನಾ!

ತ್ರಿದಶ ಗಣಾಧಿನಾಯಕನ ಪರ್ವಿದ ತೋಳ್ದುಱುಗಲ್ಗಳೊಳ್ ಪಳಂ
ಚದೆ, ಗಗನಂಬರಂ ನೆಗೆದು ಸೂಸುವ ಬಾಹುಪರಿಭ್ರಮಂಗಳೊಳ್
ಬೆದಱದೆ, ಶಕ್ರನೃತ್ಯದೊಳೊಡಂಬಡೆ ನರ್ತಿಸುವಲ್ಲಿ ಜತ್ತನ
ಟ್ಟದ ಮಣಿಯಂತದೇಂ ಪದುಳಮಾದುದೊ ದಿವ್ಯವಧೂಕದಂಬಕಂ!

ಯುವಸಂಘಾತಮದೊಂದು ತೋಳ್ದುಱುಗಲೊಳ್ ಮತ್ತೊಂದುತೋಳೋಳಿಯೊಳ್
ಯುವತೀವ್ರಾತಮ್-ಅನೇಕ ಭೇದರಸಭಾವಂಗಳ್ ಪೊದೞ್ದುಣ್ಮಿ ಪೊ
ಣ್ಮುವಿನಂ ನರ್ತಿಸೆ, ಸೂತ್ರಧಾರವಿಧಿಯಿಂ ಸುತ್ರಾಮನ್-ಅಂದಿಂತು ತಾಂ
ಡವಲಾಸ್ಯಂಗಳ ಚೆಲ್ವನೊರ್ಮೆಯೆ ತದೀಯಾಸ್ಥಾನದೊಳ್ ತೋಱೆದಂ!

ಧರೆ ರಂಗಂ, ಗಗನಂ ಮನೋಹರತರಂ ನಾಟ್ಯಾಲಯಂ ನರ್ತಕಂ
ಸುರರಾಜಂ, ಸಭೆ ದೇವಮರ್ತ್ಯ ಸಭೆ, ಸಂದಾರಾಧ್ಯನೀಶಂ ಜಗ
ದ್ಗುರು, ತನ್ನೃತ್ಯಫಲಂ ತ್ರಿವರ್ಗವಿಭವಂ,-ತಾನೆಂದೊಡೇಮಾತೊ? ಸಾ
ಸಿರಮುಂ ನಾಲಗೆಯುಳ್ಳ ವಾಸುಕಿಯುಮಿನ್ನೇನೆಂದದಂ ಬಣ್ಣಿಪಂ!


[1]       ‘ರಸೋ ವೈ ಸಃ’ ಎಂಬ ಗ್ರಂಥದಲ್ಲಿ “ಭೂಮಾನುಭೂತಿ ಮತ್ತು ಭವ್ಯತಾಮಿಮಾಂಸೆ” ಎಂಬ ಲೇಖನದಲ್ಲಿ ಈ ವಿಷಯವನ್ನು ಕೂಲಂಕಶವಾಗಿ ವಿವರಿಸಿದ್ದೇವೆ.

[2]       ‘ರಮ್ಯತೆ’ ಎಂಬುದೂ ‘ಲಾಲಿತ್ಯ’ಕ್ಕೆ ಸಮೀಪ ಸಂಬಂಧಿ.

[3]       ಅಂತರನುಭವದೃಷ್ಟಿಯಿಂದಲ್ಲದಿರಬಹುದು.

[4]       ವೈದಿಕ ಪುರಾಣಗಳ ದೇವತೆಗಳಂತೆ ಮನುಷ್ಯರ ತಪಸ್ಸಿಗೆ ವಿಘ್ನಕಾರಿಗಳಲ್ಲ ಜೈನಪುರಾಣಗಳ ದೇವರುಗಳು; ಅತ್ಯಂತ ಉಪಕಾರಿಗಳು.

[5]       ‘ಇತ್ಯಾದಿ’ ಗ್ರಂಥದಲ್ಲಿರುವ ‘ಉಪಮಾಲೋಲ ಲಕ್ಷ್ಮೀಶ’ ಲೇಖನವನ್ನೂ ಪ್ರಕೃತ ಗ್ರಂಥದಲ್ಲಿರುವ ‘ಮಹೋಪಮೆ’ ಲೇಖನವನ್ನೂ ನೋಡಿ.

[6]       ‘ಸಾಹಿತ್ಯದಲ್ಲಿ ಪ್ರತಿಮಾ ಮತ್ತು ಪ್ರತಿಕೃತಿ’ ಎಂಬ ಲೇಖನದಲ್ಲಿ ಇದರ ಕೂಲಂಕಷವಾದ ವಿಚಾರವಿಮರ್ಶೆ ಮಾಡಿದೆ. ಆದ್ದರಿಂದ ಇಲ್ಲಿ ಪ್ರಕೃತ ವಿಷಯಕ್ಕೆ ಅತ್ಯಾವಶ್ಯಕವಾದುದಷ್ಟನ್ನು ಸೂಚಿಸಿದೆ.

[7]       ಸ್ಫುಟ ವೈಶಾಖಸ್ಥಾನಂ ಕಟಿತಟ ವಿನ್ಯಸ್ತ ಹಸ್ತಯುಗನಾಗಿ ಮಹಾ ಲಟಹಂ ಬೆರಸಿರ್ದೊಪ್ಪುವ ನಟನಾಕೃತಿ ತಾನೆ ಲೋಕದೊಂದಾಕಾರಂ.(ಆ.ಪು.೧-೪೫)