ಮನುಷ್ಯನ ಮನಸ್ಸು ಊರ್ಧ್ವಮುಖಿ. ಅವನ ಕನಸು ಗಗನಗಾಮಿ. ಅವನ ಕಲ್ಪನೆ ನಕ್ಷತ್ರಯಾತ್ರಿ. ಆ ಊರ್ಧ್ವಮುಖದ, ಗಗನಗಮನದ ಮತ್ತು ನಕ್ಷತ್ರಯಾತ್ರೆಯ ಸಾಹಸಕ್ಕೆ ಮೊದಲನೆಯ ಸಾಕ್ಷಿ ಚರಿತ್ರೆ; ಎರಡನೆಯ ಸಾಕ್ಷಿ ಕಲೆ. ಒಂದು ಬಹಿರ್ಮುಖದ ಸಾಹಸವಾದರೆ ಮತ್ತೊಂದು ಅಂತರ್ಮುಖದ ಸಾಹಸ. ದಾರಿಗಳೆರಡಾದರೂ ಗುರಿಗಳೆರಡಲ್ಲ. ಇಂದಿಲ್ಲದಿದ್ದರೂ ಮುಂದೆ ಕೈಗೂಡಬಹುದೆಂದು ನಂಬಿರುವ ಸುಖಶಾಂತಿಗಳ ಸಂಪಾದನೆಯೆ ಮಾನವಸಾಹಸಕ್ಕೆ ಪರಮಗಂತವ್ಯ. ಆ ಸಾಹಸ ಅಲೆಕ್ಸಾಂಡರನ ದಂಡಯಾತ್ರೆಯಾಗಿ, ಕಾಳಿದಾಸನ ಮೇಘದೂತವಾಗಿ, ಶ್ರವಣಬೆಳ್ಗೊಳದ ಗೋಮಟೇಶ್ವರನಾಗಿ ನಾನಾರೂಪಿಯಾಗಿ ವ್ಯಕ್ತವಾಗುತ್ತದೆ. ಆ ಸಾಹಸದ ಫಲವಾಗಿಯೆ ಕ್ರಿಸ್ತ ಬುದ್ಧರೂ ಆವಿರ್ಭವಿಸುತ್ತಾರೆ.

ಎಲ್ಲ ಕಲೆಗಳ ಗುರಿಯೂ ಆನಂದ, ರಸಾನುಭೂತಿ. ಆ ಆನಂದದ ಸ್ವರ್ಗಕ್ಕಾಗಿಯೆ ನಿರಂತರವೂ ಮರ್ತ್ಯವು ಅಮರ್ತ್ಯದ ಕಡೆಗೆ ಮುಖಚಾಚಿ ನೋಡುತ್ತದೆ, ಕೈನೀಡಿ ಬೇಡುತ್ತದೆ. ಒಮ್ಮೊಮ್ಮೆ, ಕಲ್ಪನೆ ಐಹಿಕ ಯಥಾರ್ಥವನ್ನೆ ಶೃಂಗರಿಸಿ ತನ್ನ ಸ್ವಪ್ನಸ್ವರ್ಗವನ್ನು ರಚಿಸಲು ಪ್ರಯತ್ನಿಸುತ್ತದೆ. ಒಮ್ಮೊಮ್ಮೆ, ಮರ್ತ್ಯದಿಂದ ಅಮರ್ತ್ಯಕ್ಕೆ ವರ್ಣವರ್ಣದ ಸ್ವರ್ಣಸೇತುವನ್ನು ಬೀಸಿ, ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಪಯಣ ಸೌಕರ್ಯವನ್ನು ಕಲ್ಪಿಸಿ, ಕಾಮಧೇನುವಿನ ಕೆಚ್ಚಲಸೋನೆಗೊಂದು ಕಾಲುವೆ ಮಾಡಿ, ಆ ಸೊದೆ ಮನೆಯಂಗಳದಲ್ಲಿರುವ ಹೊಂಗಿಂಡಿಗೆ ದುಮುಕುವಂತೆ ಮಾಡುತ್ತದೆ. ಆ ಕವಿಪ್ರತಿಭೆಯ ಭಾಗೀರಥಿಯಲ್ಲಿ ರಸಸ್ನಾನ ಮಾಡಿ, ಕ್ಷಣಿಕಮರ್ತ್ಯದ ಮಣ್ಣು ದೂಳು ಬಿಸಿಲು ಕೆಸರುಗಳಿಂದ ಪಾರಾದ ಸಹೃದಯನ ಆತ್ಮಕ್ಕೆ ಗೋಚರವಾಗುತ್ತದೆ ಶಾಶ್ವತವಾದ ಆನಂದಾನುಭೂತಿ.

ಮಹಾಕವಿಪ್ರತಿಭೆಯ ಸ್ವಪ್ನಸುಂದರ ಸಾಹಸಗಳಲ್ಲಿ ಕಾದಂಬರೀ ಕಾವ್ಯವೂ ಒಂದದ್ಭುತ ಕೃತಿ. ಅದೊಂದು ಮೇಘಚುಂಬಿಯಾದ ಶೃಂಗಾರ ಗೋಪುರ. ಅದರ ತಳಹದಿ ಭೂಮಿಯ ಮೇಲಿರುವಂತೆ ಕಾಣುತ್ತದೆ. ಅದರ ತುದಿ ಬೆಳ್ಮುಗಿಲಿನ ಮುದ್ದಾಟದಲ್ಲಿ ಅರೆಮರೆಯಾಗಿದೆ. ಅದರ ಜಗತ್ತು ಹೊಸ ಮಳೆಯಲ್ಲಿ ಮಿಂದ ಮಲೆಗಳ ಮೇಲೆ ಮೂಡುವ ಸೂರ್ಯೋದಯದ ಚೈತ್ರಕಾನನ ಪಂಕ್ತಿಯ ವರ್ಣವೈವಿಧ್ಯದಿಂದಲೂ ಖಚಿತರಚನಾವೈಖರಿಯಿಂದಲೂ ಶೋಭಿಸುತ್ತಿದ್ದರೂ ಬೆಳ್ದಿಂಗಳ ರಾತ್ರಿಯಂತೆ ಹೊಂಗನಸಿನ ಹೊದಿಕೆಯಲ್ಲಿ ಧ್ಯಾನಶೀಲವಾಗಿದೆ.

ಮಹತ್ತಾದ ಕಲೆಗೆ ಅತಿಸ್ಪಷ್ಟತೆ ಒಂದು ನ್ಯೂನತೆ; ಅತಿ ಅಸ್ಪಷ್ಟತೆ ಒಂದು ದೋಷ. ಕಾದಂಬರಿಯ ಕಥೆ ಆ ಕೊರತೆಯಿಂದಲೂ ಈ ಕುಂದಿನಿಂದಲೂ ಪಾರಾಗಿ, ಒಂದರ ಸೌಂದರ್ಯದಿಂದಲೂ ಮತ್ತೊಂದರ ಸತ್ಯದಿಂದಲೂ ಶೋಭಿಸುತ್ತಿದೆ.

ನರನಿಗೆ ಅಮರನಾಗಬೇಕೆಂಬ ಆಸೆ. ಆದರೆ ಮರ್ತ್ಯದ ಸುಖ ಸೌಂದರ್ಯಗಳನ್ನು ಕೈಬಿಡಲಾರದ ಮೋಹ. ಮತ್ತು ಐತಿಕದ ಪ್ರೇಮ, ಸೌಂದರ್ಯ, ಸುಖ, ಭೋಗ ಇವುಗಳಿಗೆ ಸ್ವರ್ಗದ ಅಜರತೆ, ಅಮರತೆ, ನಿತ್ಯಯೌವನ ಮತ್ತು ಶಾಶ್ವತಾನಂದಗಳನ್ನು ಹೇಗಾದರೂ ಕೊಳ್ಳೆಹೊಡೆದು ತಂದು ಗಂಟು ಹಾಕಬೇಕೆಂಬ ವೀರಸಾಹಸ. ಮಾನವನ ಆ ಬಯಕೆ ಪ್ರಪಂಚದ ಅನೇಕ ಕಲಾಕೃತಿಗಳಲ್ಲಿ ರೂಪಧಾರಣೆ ಮಾಡಿದೆ. ಕಾದಂಬರಿಯೂ ಆ ಹಂಬಲದೊಂದು ಹೊಂಗನಸು; ಆ ಮೋಹದ ಒಂದು ಐಂದ್ರಜಾಲಿಕ ಸೃಷ್ಟಿ.

ಮಾನವನ ಸಂಕಲ್ಪ ಸಮಸ್ತಕ್ಕೂ ಪ್ರತಿನಿಧಿಯಾದ ಕವಿಪ್ರತಿಭೆ ಮಣ್ಣಿನಿಂದ ಮುಗಿಲಿಗೆ ಬೀಸಿರುವ ಆ ರಸಸೇತುವೆಯ ಕೃಪಾಶ್ರಯದಲ್ಲಿ ಮರ್ತ್ಯರಾದ ನರರು ಅಮರರಿಗೆ ಹೆಗಲೆಣೆಯಾಗಿದ್ದಾರೆ. ಮನುಷ್ಯರು ಗಂಧರ್ವ ಲೋಕಕ್ಕೆ ಏರಿದ್ದಾರೆ. ಗಂಧರ್ವರು ತಮ್ಮ ಮೇಘಜಗತ್ತಿನ ಹಮ್ಮುಬಿಮ್ಮುಗಳನ್ನು ನೀಗಿ ಪೃಥ್ವಿಗಿಳಿದು ಬಂದು ನರರಿಗೆ ನಂಟರಾಗಿದ್ದಾರೆ. ದೇವತಪಸ್ವಿಯಾದ ಪುಂಡರೀಕನಂತೆಯೆ ತ್ರಿಲೋಕ ವಂದಿತನಾದ ಚಂದ್ರನೂ ಮನುಷ್ಯ ಸತಿಯ ಗರ್ಭದಲ್ಲಿ ಅವತರಿಸಿದ್ದಾನೆ. ಕುಮಾರ ತಾಪಸ ಕಪಿಂಜಲನು ಗೆಳೆತನದ ಹಿರಿಮೆಗಾಗಿ ಕುದುರೆಯತನಕ್ಕೂ ಬಿದ್ದುಬಿಟ್ಟಿದ್ದಾನೆ. ಗಂಧರ್ವ ಕನ್ಯೆಯರಲ್ಲಿ ಅನರ್ಘ್ಯರತ್ನಗಳಾಗಿದ್ದ ಮಹಾಶ್ವೇತೆ ಮತ್ತು ಕಾದಂಬರಿಯರು ನಮ್ಮ ಭೂಮಿಯ ಗೃಹಿಣೀ ಪದವಿಯನ್ನು ಹೆಮ್ಮೆಯಿಂದ ಸ್ವೀಕರಿಸಿ, ಮನುಷ್ಯತ್ವಕ್ಕೆ ಗೌರವವನ್ನು ನಿವೇದಿಸಿದ್ದಾರೆ. ಸ್ವರ್ಗಮರ್ತ್ಯಗಳನ್ನು ಒಂದುಮಾಡಿರುವ ಕಾವ್ಯಸೇತುವೆಯಲ್ಲಿ ಹಿಂದಕ್ಕೂ ಮುಂದಕ್ಕೂ ತಿರುತಿರುಗಾಡುವ ನಮಗೆ ಮರ್ತ್ಯರಿಗೂ ಗಂಧರ್ವರಿಗೂ ತಾರತಮ್ಯವೆ ಮರೆತುಹೋಗುತ್ತದೆ. ಅಮರರೂರಿಗೆ ನಂಟರಾಗಿ ಹೋದವರು ಅಮೃತಪಾನ ಮಾಡದೆ ಹಿಂತಿರುಗುವುದಿಲ್ಲವಾದ್ದರಿಂದ ನಾವು ಅಲ್ಲಿಗೆ ಹೋಗುವಾಗ ಮರ್ತ್ಯರೆ ಹೊರತು ಮರಳಿ ಬರುವಾಗ ಅಲ್ಲ.

ಮನುಷ್ಯನು ಸ್ವರ್ಗಕ್ಕೇರಿ, ಸ್ವರ್ಗವನ್ನು ಭೂಮಿಗೆ ಎಳೆತರುವ ಸಾಹಸ ಚಿತ್ರಗಳನ್ನು ಪರಂಪರೆಯಾಗಿ ಪ್ರದರ್ಶಿಸುವ ಕಾದಂಬರೀ ಕಾವ್ಯ ಒಂದು ರಮಣೀಯ ಚಿತ್ರಶಾಲೆಯಾಗಿದೆ.

ಕಾದಂಬರಿ ಪ್ರೇಮದ ವಿಜಯಕಥೆ. ವೈರಾಗ್ಯವು ಶೃಂಗಾರಕ್ಕೆ ಶರಣಾದ ಕಥೆ. ದೈಹಿಕಕಾಮ ಜನ್ಮಜನ್ಮಾಂತರಗಳ ಕ್ಲೇಶ ಕಷ್ಟ ವಿರಹಗಳ ಉಗ್ರತಪಸ್ಸಿನಿಂದ ಕಾಳಿಕೆಯನ್ನು ಕಳೆದುಕೊಂಡು ಅಚ್ಚ ಹೊನ್ನಾಗಿ ದೈವಿಕ ಪ್ರೇಮದಲ್ಲಿ ಸಾರ್ಥಕತೆಯನ್ನು ಸಂಪಾದಿಸಿದ ಪುಣ್ಯಕಥೆ. ಆ ಕಥೆ ಅಗ್ನಿ ಜ್ವಾಲೆಯಲ್ಲಿ ಬೇರ್ಗೊಂಡು ಚಂದ್ರಜ್ಯೋತ್ಸ್ನೆಯಾಗಿ ಹಣ್ಗೊಂಡಿದೆ. ಅಲ್ಲಿಯ ಶೃಂಗಾರವೂ ತಪೋಮಯವಾಗಿದೆ; ತಪಸ್ಸೂ ಶೃಂಗಾರಪೂರ್ಣವಾಗಿದೆ.

ಮೌನವನ್ನೇ ಮಿಸಿಮಿಡಿದು ಮಹಾಸಂಗೀತವನ್ನಾಗಿ ಮಾಡಿರುವ ಕವಿಪ್ರತಿಭ ನಮ್ಮನ್ನು ಬೆರಗುಗೊಳಿಸುತ್ತದೆ: ಎನಿತು ಕಿರಿದಾದ ಕನಸಿನಲ್ಲಿ ಎನಿತು ಹಿರಿದಾದ ಕಾವ್ಯಮಂದಿರವನ್ನು ಕಂಡರಿಸಿದ್ದಾನೆ! ಸಣ್ಣದೊಂದು ಪ್ರಣಯದ ಕಿಡಿಯಿಂದ ಪ್ರೇಮದಾವಾಗ್ನಿಯ ಮಹಾಜ್ವಾಲೆಯನ್ನು ಹೊತ್ತಿಸಿ, ಶಿಲಾಪರ್ವತವನ್ನು ಕೊರೆದು ಬೃಹತ್ತಾದ ವಿಹಾರಗಳನ್ನು ನಿರ್ಮಿಸುವ ದೈತ್ಯಶಿಲ್ಪಿಯಂತೆ, ಕವಿ ಆ ಜ್ವಾಲೆಯನ್ನೇ ಕೊರೆದು ಕಡೆದು ಮಹಾಕಾವ್ಯದ ಸುಧಾಸೌಧವನ್ನು ಸೃಜಿಸಿದ್ದಾನೆ.

ಕಾದಂಬರಿಯ ಕಥೆ ಕ್ರಿಯೆಗಿಂತಲೂ ಹೆಚ್ಚಾಗಿ ಕನಸನ್ನು ಹೋಲುತ್ತದೆ. ಅದರಲ್ಲಿ ಬರುವ ಕ್ರಿಯೆಯೂ ಸ್ವಪ್ನಕ್ರಿಯೆ. ರಾಮಾಯಣ ಮಹಾಭಾರತಗಳಂತೆ ಅದು ಪರ್ವತಕಂದರಗಳಲ್ಲಿ ಧುಮ್ಮಿಕ್ಕಿ, ನೆಲವನ್ನಪ್ಪಳಿಸಿ ಕೊಚ್ಚಿ ಕೆಡಹುತ್ತಾ ಅನೇಕ ಉಪನದಿಗಳನ್ನು ಕೂಡಿಕೊಳ್ಳುತ್ತಾ ನುಗ್ಗಿ ಹರಿಯುವ ಭೀಷ್ಮ ಪ್ರವಾಹವಾಗಿಲ್ಲ. ಅಲ್ಲಿ ಮನುಷ್ಯ ಹೃದಯದ ಭಯಂಕರ ಭಾವಗಳ ಘರ್ಷಣೆಘೋಷಣೆಗಳಿಲ್ಲ.

ಕಾದಂಬರಿಯ ಕವಿಯ ದರ್ಶನಕ್ಕೆ ಎರಡು ಕಣ್ಣುಗಳಿವೆ. ಒಂದು: ಸರಳ ಗಂಭೀರ ಅನಶ್ಲೀಲ ಸುಂದರ ಶೃಂಗಾರ. ಮತ್ತೊಂದು: ಸದ್ಯಃಫಲಕಾಂಕ್ಷಿಯಲ್ಲದ, ಜನ್ಮಜನ್ಮಾಂತರದವರೆಗೂ ಕಾಯುವ ಸಾಮರ್ಥ್ಯವೂ ತಾಳ್ಮೆಯೂ ಶ್ರದ್ಧೆಯೂ ಇರುವ, ಪ್ರೇಮದ ನೀರವಧ್ಯಾನಮಯವಾದ ತಪಸ್ಸು. ಕಣ್ಣುಗಳೆರಡಾದರೂ ಕಾಣಿಕೆಯೆರಡಲ್ಲ. ಒಂದಕ್ಕೆ ಮತ್ತೊಂದು ಪೂರಕ ಮತ್ತು ಪೋಷಕ. ಪ್ರೇಮವು ತಪಸ್ಸಿನಿಂದಲೆ ಶುದ್ಧವಾಗಿ ಶಾಶ್ವತವಾಗಿ ಸಾರ್ಥಕವಾಗುತ್ತದೆ. ಭೋಗಕ್ಕೆ ತ್ಯಾಗದಿಂದಲೆ ಸಿದ್ಧಿ.

ಕಾದಂಬರೀ ಕಾವ್ಯದಲ್ಲಿ ಶೃಂಗಾರಕ್ಕೆ ತಪಸ್ಸು ಸಾಧನರಂಗವಾಗಿದೆ. ಅಲ್ಲಿ ಘಟನಾಪರಂಪರೆಗಳ ಅಟ್ಟಹಾಸಕ್ಕಿಂತಲೂ ಅನುಭೂತಿಯ ದೀರ್ಘತೆಯೆ ಉಜ್ವಲವಾಗಿದೆ. ಅಲ್ಲಿ ಕೌತುಕದ ಘಟನೆಗಳಿಗೇನೋ ಕಡಮೆಯಿಲ್ಲ. ಆದರೆ ಆ ಘಟನೆಗಳ ಚಲನೆ ಹೃದಯಾನುಭವದ, ಮನೋವೇದನೆಯ, ವ್ರತಪೂರ್ಣ ತಪಸ್ಸಿನ ನಿಶ್ಚಲತೆಯಲ್ಲಿ ಸಮಾಧಿಹೊಂದಿದೆ. ಉರಿಯುತ್ತಿರುವ ಹಣತೆಯ ಸೊಡರು ಓಡಿಯಾಡುವುದಿಲ್ಲ, ಗಲಭೆ ಮಾಡುವುದಿಲ್ಲ. ಆದರೂ ಅದರ ನಿಶ್ಚಲತೆ ನೀರವತೆಗಳು ಅಕರ್ಮಸೂಚಕವಲ್ಲ. ಹೊಕ್ಕುನೋಡುವ ವಿಜ್ಞಾನಿಯ ಕಣ್ಣಿಗೆ ಅಲ್ಲಿ ಭಯಂಕರ ಕರ್ಮರಂಗವೊಂದು ಗೋಚರಿಸುತ್ತದೆ. ಅದರಂತೆಯೆ ಮಹಾಶ್ವೇತೆಯ ತಪಸ್ಸಿನ ನಿಶ್ಚಲತೆಯಲ್ಲಿ ವಿಶ್ವಶಕ್ತಿಗಳನ್ನೆ ತಿರ್ರನೆ ತಿರುಗಿಸುವ ಮಹಾಶಕ್ತಿಯನ್ನು ದರ್ಶಿಸುತ್ತೇವೆ. ಯಾವುದು ಸುಲಭ ಸಿದ್ಧಿಯಿಂದ ಕ್ಷಣಿಕವಾಗುತ್ತಿತ್ತೋ, ಯಾವುದು ಶೀಘ್ರತೃಪ್ತಿಯಿಂದ ತನ್ನ ಚಿರಚೇತನವನ್ನು ದೈನಂದಿನ ಬೇಸರಕ್ಕೆ ಸಮರ್ಪಿಸಿ ಅಲ್ಪವಾಗಿ ವಿಸ್ಮೃತವಾಗುತ್ತಿತ್ತೋ ಆ ಪ್ರಣಯವು ಕಾದಂಬರೀ ಕಾವ್ಯದಲ್ಲಿ ತಪಸ್ಸಿನಿಂದ ಶಾಶ್ವತವಾಗಿದೆ; ಮತ್ತು ಮಹತ್ತಾಗಿದೆ. ಕ್ಷಣಿಕಕಾಮ ಕಷ್ಟದ ಮೂಷೆಯಲ್ಲಿ ಕರಗಿ, ಕಾಲದ ಒರೆಗಲ್ಲಿನಲ್ಲಿ ಪರೀಕ್ಷಿತವಾಗಿ, ಶಾಶ್ವತಪ್ರೇಮದಲ್ಲಿ ಪರಿಣಮಿಸಿದುದಕ್ಕೆ ಪುಂಡರೀಕ ಮಹಾಶ್ವೇತೆಯರ ಕಥೆ ನಿದರ್ಶನವಾಗಿದೆ.

ಆ ನಿದರ್ಶನದಲ್ಲಿ ಕವಿಯ ‘ದರ್ಶನ’ ಇಂಗಿತವಾಗಿದೆ.

ಆ ದರ್ಶನ ನಮಗೆ ಅಪರಿಚಿತವಾದುದಲ್ಲ. ನಮ್ಮ ಪ್ರಾಚೀನ ಮಹಾಕವಿಗಳೆಲ್ಲರೂ ತಮ್ಮ ಅಮರಕಾವ್ಯಗಳಲ್ಲಿ ಅದೇ ದರ್ಶನವನ್ನು ಪ್ರತಿಪಾದಿಸಿದ್ದಾರೆ. ಉಪನಿಷತ್ತಿನ ಋಷಿಗಳಿಂದ ಪ್ರಣೀತವಾದ ನಮ್ಮ ಸಂಸ್ಕೃತಿ ತ್ಯಾಗಶೀಲವಲ್ಲದ ಭೋಗವನ್ನು ಅಲ್ಪವೆಂದು ಪರಿಗಣಿಸುತ್ತದೆ. ಅದು ಭೋಗವನ್ನು ಅಲ್ಲಗಳೆಯುವುದಿಲ್ಲ. “ಯೋ ವೈ ಭೂಮಾ ತತ್ಸುಖಂ; ನಾಲ್ಪೇ ಸುಖಮಸ್ತಿ” “ತೇನ ತ್ಯಕ್ತೇನ ಭುಂಜೀಥಾ”-ಯಾವುದು ಭೂಮವೋ, ಎಂದರೆ ಮಹತ್ತಾದುದೊ, ಅದೇ ಸುಳ. ಅಲ್ಪದಲ್ಲಿ ಸುಖವಿಲ್ಲ. ಸಮಸ್ತ ಭೋಗವೂ ಭೂಮಕ್ಕೆತ್ತಿದ ತ್ಯಾಗದಾರತಿಯಾಗಬೇಕು. ಆಗ ಕ್ಷಣಿಕ ಭೋಗವೂ ಬ್ರಹ್ಮಾನಂದವಾಗಿ ಮಾರ್ಪಡುತ್ತದೆ.

ಕ್ಷುಧೆ ಮತ್ತು ಕಾಮ ಇವೆರಡೂ ಪ್ರಕೃತಿಯಲ್ಲಿ ಬಹು ದೊಡ್ಡ ರಂಗಗಳನ್ನು ನಿರ್ಮಿಸಿಕೊಂಡಿರುತ್ತವೆ. ಸರಸವಾದಾಗ, ಸಮರಸವಾದಾಗ, ಮೈತ್ರಿಯ ಔತಣಕೂಟಗಳೂ ಶೃಂಗಾರದ ವೈವಾಹಮಂಟಪಗಳೂ ನಿರ್ಮಾಣವಾಗುತ್ತವೆ. ವಿರಸವಾಗಿ, ಸ್ಪರ್ಧೆ ಪ್ರಾರಂಭವಾಯಿತೆಂದರೆ ರಣಚಂಡಿಯ ಭೈರವಲೀಲೆ ನಡೆದುಹೋಗುತ್ತದೆ: ರಾಮಾಯಣ, ಮಹಾಭಾರತ, ಈಲಿಯಡ್ ಮತ್ತು ಒಡಸ್ಸಿಗಳಿಗೆ ಸಾಮಗ್ರಿಯೊದಗುತ್ತದೆ. ಆಗ ನಿಸರ್ಗದ ರಾಜ್ಯದ ಜೊತೆಗೆ ಮಾನವನ ಮನಸ್ಸಾಮ್ರಾಜ್ಯವೂ ಗೋಚರವಾಗುತ್ತದೆ. ದೇಹಕ್ಕೂ ಧ್ಯೇಯಕ್ಕೂ ಹೋರಾಟ ನಡೆದು, ಧ್ಯೇಯಕ್ಕಾಗಿ ದೇಹ ಸಮರ್ಪಿತವಾದಾಗ ಅಥವಾ ಶರಣಾದಾಗ ಆತ್ಮದ ‘ದರ್ಶನ’ ವ್ಯಕ್ತವಾಗುತ್ತದೆ.

ಪ್ರಾಚೀನ ಯುಗದಲ್ಲಿ ಮನುಷ್ಯನ ಕ್ಷುಧಾಕಾಮಗಳು ಈಗಿರುವಂತೆಯೆ ಇದ್ದುವಾದರೂ ಜನಸಂಖ್ಯೆ ವಿರಳವಾಗಿದ್ದುದರಿಂದಲೂ ಭೂವಿಸ್ತಾರವು ವಿಫುಲವಾಗಿದ್ದುದರಿಂದಲೂ ಈಗ ನಡೆಯುತ್ತಿರುವಂತೆ ಕ್ಷುಧಾಕಾರಣಕ್ಕಾಗಿ ಮಹಾಸಮರಗಳು ಜರುಗುತ್ತಿದ್ದುದು ಕಡಮೆಯೆಂದೇ ತೋರುತ್ತದೆ. ಅಥವಾ ನಡೆದಿದ್ದರೂ ಸಾಹಿತ್ಯ ಅಂಥವುಗಳನ್ನು ಶಾಶ್ವತಗೊಳಿಸಲು ಇಷ್ಟಪಟ್ಟಿಲ್ಲ. ಆದರೆ ಕಾಮಕಾರಣಕ್ಕಾಗಿ ಬಹು ದೊಡ್ಡ ಯುದ್ಧಗಳು ಬಹುಕಾಲದವರೆಗೆ ನಡೆದಿರುವುದಕ್ಕೆ ಎಲ್ಲ ದೇಶಗಳ ಮಹಾಪುರಾಣಗಳೂ ಸಾಕ್ಷಿಯಾಗಿವೆ. ಇಂದು ಕಾಮಕ್ಕಾಗಿ ಅಂಥಾ ಮಹಾಯುದ್ಧಗಳು ನಡೆಯುವುದಿಲ್ಲ; ಎಂದರೆ, ದೇಶದೇಶದ ಜನರೇ ಪಕ್ಷ ಪ್ರತಿಪಕ್ಷಗಳಾಗಿ ನಿಂತು ಒಬ್ಬರನ್ನೊಬ್ಬರು ಕೊಲ್ಲುವುದಿಲ್ಲ. ಆದರೆ ಸಾಮಾನ್ಯವ್ಯಕ್ತಿಗಳ ಜೀವಿತದಲ್ಲಿ ಮನ್ಮಥನ ಮಥನಕೋಲಾಹಲವು ಯಥೇಚ್ಛವಾಗಿರುತ್ತದೆ. ಆ ಪ್ರಪಂಚವನ್ನು ಕುರಿತು ಬರೆದು ಬಣ್ಣಿಸುವ ಕಾರ್ಯ ಈಗ ಕಾದಂಬರಿಗಳಿಗೆ ಮೀಸಲಾಗಿದೆ. ಹಿಂದಿನ ಮಹಾಪುರಾಣಗಳ ಸ್ಥಾನದಲ್ಲಿ ಇಂದು ಮಹಾಕಾದಂಬರಿಗಳು ನಿಂತಿವೆ.

ಮಹಾಪುರಾಣಗಳೆಲ್ಲವೂ ಒಂದೊಂದು ರೀತಿಯಲ್ಲಿ ಪ್ರಣಯ ಕಥೆಗಳಾಗಿವೆ. ಪ್ರಾಣಿಯ ಪ್ರಣಯ ಮೊದಲುಗೊಂಡು ಪರಮೇಶ್ವರನ ಪ್ರಣಯದವರೆಗೂ ಅಲ್ಲಿ ಚಿತ್ರಿತವಾಗಿದೆ. ಅಂತಹ ಚಿತ್ರಗಳಲ್ಲಿ ನಮ್ಮ ಆರಾಧನೆಗೆ ಪಾತ್ರವಾಗಿ, ನಮ್ಮ ಸಾಧನೆಗೆ ಸೂತ್ರವಾಗಿ, ಚಿರಕಾಲವೂ ನಮ್ಮ ಪ್ರೇಯಸ್ಸು ಶ್ರೇಯಸ್ಸುಗಳಿಗೆ ಆದರ್ಶವಾಗಿ ದೇವವೇದಿಕೆಯ ಮೇಲೆ ನಿಂತಿರುವ ದೇವಿಯರು ಕೆಲವರಿದ್ದಾರೆ: ಸೀತೆ, ಸಾವಿತ್ರಿ, ದಮಯಂತಿ, ಪಾರ್ವತಿ, ಚಂದ್ರಮತಿ, ಊರ್ಮಿಳೆ, ಶಕುಂತಳೆ, ವಾಸವದತ್ತೆ, ಇತ್ಯಾದಿ.

ಅವರ ಕೀರ್ತಿಗಳಲ್ಲಿ ತರತಮಾಂತರಗಳಿರಬಹುದು. ಅವರು ಸಹಿಸಿದ ಕಷ್ಟಗಳಲ್ಲಿ ರೂಪವ್ಯತ್ಯಾಸಗಳಿರಬಹುದು. ಆದರೆ ಅವರ ತಪಸ್ಸಿನ ಹೃದಯದಲ್ಲಿ ಸ್ಪಂದಿಸುವ ಭಾವತೀಕ್ಷ್ಣತೆಯಲ್ಲಿ ಹಿರಿಕಿರಿಯಿಲ್ಲ, ಮೇಲುಕೀಳಿಲ್ಲ. ಅವರಲ್ಲಿ ಒಬ್ಬೊಬ್ಬರ ಪ್ರೇಮವೂ ಒಂದೊಂದು ರೀತಿಯಲ್ಲಿ ವಿಧಿಯ ನಿಷ್ಠುರ ನಿರ್ದಾಕ್ಷಿಣ್ಯ ಪರೀಕ್ಷೆಗೆ ಒಳಗಾಗಿದೆ. ಒಬ್ಬೊಬ್ಬರೂ ಉತ್ತೀರ್ಣರಾಗಿ ಉಜ್ಜ್ವಲರಾಗಿದ್ದಾರೆ. ಇನಿಯರೊಡಗೂಡಿದ ಮೇಲೆ ಕೆಲವರ ತಪಸ್ಸು ಪ್ರಾರಂಭವಾಗುತ್ತದೆ. ಕೆಲವರದ್ದು ಅದಕ್ಕೆ ಪೂರ್ವದಲ್ಲಿಯೆ ಮೊದಲಾಗುತ್ತದೆ. ಜನಕನಂದಿನಿ ಸೀತೆ ರಾಮನೊಡಗೂಡಿ ಅಯೋಧ್ಯೆಯ ಅರಮನೆಯಲ್ಲಿ ಕೆಲಕಾಲ ಸುಖವಾಗಿದ್ದು, ತರುವಾಯ ಅರಣ್ಯವಾಸ ಮತ್ತು ಲಂಕಾವಾಸಗಳ ಅಗ್ನಿಸ್ನಾನದಿಂದ ಜಗದ್ವಂದ್ಯೆಯಾಗಿದ್ದಾಳೆ. ಗಿರಿರಾಜನಂದಿನಿ ಪಾರ್ವತಿಯಾದರೊ ತಪ್ಪಸ್ಸಿನ ತರುವಾಯ ಅದರ ಫಲರೂಪವಾಗಿಯೆ ಚಂದ್ರಮೌಳಿಗೆ ಅರ್ಧಾಂಗಿಯಾಗುತ್ತಾಳೆ. ಇನಿಯನ ಕೊರಳಿನಲ್ಲಿ ಮೃತ್ಯುಪಾಶದ ಛಾಯೆಯನ್ನು ಕಂಡೂ ಅವನನ್ನು ವರಿಸಿ, ತನ್ನ ಪ್ರೇಮದ ತಪಸ್ಸಿನಿಂದ ಯಮನನ್ನೂ ಒಲಿಸಿ, ತನ್ನ ಪ್ರಾಣೇಶ್ವರನನ್ನು ಗೆದ್ದುಕೊಂಡಿದ್ದಾಳೆ ಸಾವಿತ್ರಿ. ಪತಿ ತನ್ನ ಆದರ್ಶಕ್ಕಗಿ ಕೈಕೊಂಡ ತಪಸ್ಸಿನಲ್ಲಿ ಮನಃಪೂರ್ವಕವಾಗಿ ಭಾಗಿಯಾಗಿ, ಆತನಿಗೊಂದು ಬೆಂಬಲವಾಗಿ, ರಾಣಿಯಾಗಿದ್ದರೂ ಪಡಬಾರದ ಕಷ್ಟಾವಮಾನಗಳನ್ನೆಲ್ಲ ಸಹಿಸಿ, ಪೂಜಾರ್ಹಳಾಗಿದ್ದಾಳೆ ಚಂದ್ರಮತಿ. ಆಕೆಯ ತಂಗಿ-ದಮಯಂತಿ. ಊರ್ಮಿಳೆಯ ತಪಸ್ಸು ಎಲ್ಲರಗಿಂತಲೂ ಕಷ್ಟಕರ. ಏಕೆಂದರೆ ಅದೊಂದು ಅನಂತ ನಿರೀಕ್ಷೆ. ಇತರರ ತಪಸ್ಸಿನಲ್ಲಿ ಕ್ರಿಯೆಯ ಮತ್ತು ಸಾಹಸದ ವಿರಾಮವಿದೆ. ಊರ್ಮಿಳೆಯ ತಪಸ್ಸಾದರೊ ನಿಶ್ಚಲತೆಯಿಂದಲೂ ನೀರವತೆಯಿಂದಲೂ ನಿರೀಕ್ಷೆಯ ದೀರ್ಘತೆಯಿಂದಲೂ ಅವಿರಾಮವಾಗಿದೆ. ಆಕೆಯದು ಅಹಲ್ಯೆಯ ತಪಸ್ಸಿನಂತೆ ಶಿಲಾ ತಪಸ್ಸು. ಶಕುಂತಳೆಯ ತಪಸ್ಸಿನಲ್ಲಿರುವಂತೆ ಕುಮಾರನ ಕಣ್ಬೆಳಕಿನ ತಂಪಿಲ್ಲ; ವಾಸವದತ್ತೆಯ ತಪಸ್ಸಿನಲ್ಲಿರುವಂತೆ ಪತಿಯ ಸಾಮೀಪ್ಯದ ಅಲಂಪಿಲ್ಲ. ಶಕುಂತಳೆಯ ಕಷ್ಟದ ಕಾರ್ಮೋಡಕ್ಕೆ ಸಂತಾನವಾತ್ಸಲ್ಯದ ಮಿಂಚಿನಂಚಿದೆ. ವಾಸವದತ್ತೆಯ ಸಂಕಟದ ಸಮೀಪದಲ್ಲಿಯೆ ವೆಂಕಟರಮಣನಿದ್ದಾನೆ. ಆ ದೃಷ್ಟಿಯಿಂದ ನೋಡಿದರೆ ಊರ್ಮಿಳೆಯ ತಪಸ್ಸು ಅತ್ಯುಗ್ರವೂ ಅಸಹನೀಯವೂ ಆಗಿ ತೋರುತ್ತದೆ. ಆಕೆಯನ್ನು ಹೋಲುವ ಮತ್ತೊಬ್ಬ ಮಹಾ ಮಹಿಳೆಯೆಂದರೆ ಕಾದಂಬರಿಯ ಮಹಾಶ್ವೇತೆ.

ಅಂತೂ ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಪ್ರಸಿದ್ಧರೂ ಪೂಜ್ಯರೂ ಆಗಿರುವ ಮಹಿಳೆಯರೆಲ್ಲರೂ ತಪಸ್ಸಿಲ್ಲದೆ ಆ ಮಹತ್ತಿಗೇರಿಲ್ಲ ಎಂಬುದು ನಿರ್ವಿವಾದವಾಗಿದೆ.

ಆಧುನಿಕ ನಾಗರಿಕತೆಗೆ ತಪಸ್ಸಿನಲ್ಲಿ ನಂಬುಗೆ ತಪ್ಪಿಹೋಗಿದೆ. ನಿಜವಾಗಿಯೂ ವಾಸ್ತವ ಜೀವನದಲ್ಲಿ ಅದು ತಪ್ಪಿಹೋಗಿಲ್ಲ. ತಪ್ಪುವುದಾದರೂ ಹೇಗೆ? ಪ್ರಕೃತಿಸಿದ್ಧವಾದ ನಿಯಮವದು. ಆದರೆ ಹೆಂಡಕುಡುಕನಿಗೆ ಪರಿಣಾಮದ ದುರಂತತೆಯ ಕಡೆಗೆ ಲಕ್ಷವಿರುತ್ತದೆಯೆ? ಯಾರಾದರೂ ಎಚ್ಚರಿಸಿದರೂ ಅದು ಅವನಿಗೆ ರುಚಿಸುತ್ತದೆಯೆ? ಅವನು ಬುದ್ಧಿವಂತನಾಗಿದ್ದರಂತೂ ಕುಡಿಯುವುದರ ಪರವಾಗಿ ನೂರಾರು ವಾದಗಳನ್ನು ತಂದೊಡ್ಡಿ ಎದುರಾಳಿಯನ್ನು ಮದ್ಯದ ಮಧ್ಯದಲ್ಲಿಯೆ ಮುಳುಗಿಸಿಬಿಡುತ್ತಾನೆ. ಅದರಂತೆಯೆ ಇಂದ್ರಿಯ ಸುಖಗಳ ವಿಷಯದಲ್ಲಿ ಅಸಂಯಮಿಯಾದವನಿಗೆ ಅವನ ರುಚಿ ಅವನ ‘ದರ್ಶನ’ಕ್ಕೆ ಮೂಲವಾಗುತ್ತದೆ. ಅಂಥವನು ಆಸೆಯನ್ನೇ ಆಲೋಚನೆ ಎಂದು ಭ್ರಮಿಸುತ್ತಾನೆ. ಚೆನ್ನಾಗಿ ಕುಡಿದಾಗ ಮದ್ಯಪಾಯಿಗೆ ತನ್ನ ಮನಸ್ಸು ಪೂರ್ಣವಾದಂತೆ ತೋರುತ್ತದೆ; ತನ್ನ ಆತ್ಮಕ್ಕೆ ಚಿರಂತನ ತೃಪ್ತಿ ಲಭಿಸಿದಂತೆ ತೋರುತ್ತದೆ; ತನಗೆ ಪ್ರಪಂಚದಲ್ಲಿ ಇನ್ನೇನೂ ಬೇಕಾಗಿಲ್ಲ ಎಂಬಂತೆ ತೋರುತ್ತದೆ. ತನ್ನ ಪ್ರಾಣಪಾತ್ರೆ ಪೂರ್ಣವಾಯಿತು ಎಂದುಕೊಳ್ಳುತ್ತಾನೆ. ಶೃಂಗಾರರಸ ಪೂರ್ಣವಾಗಿಯೂ ಸುಪ್ರಸಿದ್ಧವಾಗಿಯೂ ಇರುವ ರವೀಂದ್ರನಾಥಕೃತ ‘ಚಿತ್ರಾ’ ನಾಟಕದ ಕೊನೆಯಲ್ಲಿ ಚಿತ್ರಾಂಗದೆಯ ಆಲಿಂಗನದಿಂದ ಅಮರರಸಪಾನ ಮಾಡಿದಂತೆ ಸುಖಮೂರ್ಛೆಗೆ ಸಂದ ಅರ್ಜುನನು “ಕಮಲನೇತ್ರೆ, ಪೂರ್ಣವಾಯ್ತಿಂದು ನನ್ನ ಪ್ರಾಣ ಪಾತ್ರೆ!” ಎಂಬರ್ಥದ ವಾಕ್ಯವನ್ನು ಹೇಳುತ್ತಾನೆ. ಆ ವಾಕ್ಯದಿಂದಲೇ ಆ ನಾಟಕ ಮುಗಿಯುತ್ತದೆ. ಅದನ್ನು ಓದಿದಾಗಲೆಲ್ಲ ನನಗೆ ಕಂಠಪೂರ್ತಿಯಾಗಿ ಕುಡಿದ ಮದ್ಯಪಾಯಿಯ ನೆನಪಾಗುತ್ತದೆ. “ಮುಂದೆ?” ಎಂಬ ಪ್ರಶ್ನೆ ಅನಿವಾರ್ಯವಾಗಿ ತುಟಿಮೀರುತ್ತದೆ. ಆ ಪ್ರಶ್ನೆಗೆ ಲಕ್ಷ್ಮೀಶಕವಿ ಒಂದು ರೀತಿಯಾಗಿ ಉತ್ತರ ಹೇಳಿದ್ದಾನೆ. ಆ ಉತ್ತರದಲ್ಲಿ ಪ್ರಾಣಪಾತ್ರೆ ಅಷ್ಟು ಸುಲಭವಾಗಿ ಪೂರ್ಣವಾಗುವುದಿಲ್ಲ ಎಂಬುದು ವ್ಯಕ್ತವಾಗುತ್ತದೆ. ಎಷ್ಟೇ ಪರಿಶುದ್ಧವಾದುದಾಗಲಿ, ಎಷ್ಟೇ ಮುಗ್ಧವಾದುದಾಗಲಿ, ತಪಸ್ಸಿನಿಂದ ಪರೀಕ್ಷಿತವಾಗಿ ಚಂಚಲತಾ ವಿಮುಕ್ತವಾಗದಿದ್ದರೆ, ಪರಿಷ್ಕೃತವಾಗಿ ಪರಿಪಕ್ವವಾಗದಿದ್ದರೆ, ತಾರುಣ್ಯದ ತರಳಭೋಗಕ್ಕೆ ಚಿರಪ್ರೇಮದ ಮಹತ್ತಾಗಲಿ ಗೌರವವಾಗಲಿ ದೊರೆಯುವುದಿಲ್ಲ: ಅದು ನಮ್ಮ ಪ್ರಾಚೀನ ಕವಿದರ್ಶನದ ಕಾವ್ಯವಾಣಿ.

ಹೊಸ ಕಲೆ ಒಪ್ಪದಿದ್ದರೂ ಹೊಸ ಬಾಳು ಆ ದರ್ಶನವನ್ನು ಹುಸಿಗೈಯಲಾಗಲಿ ವಂಚಿಸಲಾಗಲಿ ಸಮರ್ಥವಾಗಿಲ್ಲ. ತರುಣರಾದ ಪ್ರಿಯ ಪ್ರೇಯಸಿಯರು ತಮ್ಮ ಪಿತೃಗಳಿಗೆ ತಿಳಿಯದಂತೆ ಓಡಿಹೋಗಿ ಆಲಿಂಗಿಸುವ ಅಥವಾ ಚುಂಬಿಸುವ ಚಿತ್ರವನ್ನೇ ಕೊನೆಯ ವಿಷಯವನ್ನಾಗಿ ಮಾಡಿ ಸಾಹಿತ್ಯವನ್ನು ಕೊನೆಮುಟ್ಟಿಸುವ ಕಿರಿಯ ಕಥೆಗಳೂ ಕಿರಿಯ ನಾಟಕಗಳೂ ಅಗ್ಗದ ಚಲಚ್ಚಿತ್ರಗಳೂ ಸತ್ಯವನ್ನು ಮರೆಮಾಚಿದರೂ, ಕೋರ್ಟಿನಲ್ಲಿ ನಡೆಯುವ ಮೊಕದ್ದಮೆಗಳ ಪತ್ರಿಕಾವರದಿಗಳಾದರೂ ಪ್ರಾಚೀನ ಕವಿದರ್ಶನದ ಅಬಾಧಿತ ಸತ್ಯಕ್ಕೆ ಸಾಕ್ಷಿಗಳಾಗಿರುತ್ತವೆ.

ಕಲ್ಪನೆಯ ಬೆನ್ನೇರಿ ಸೌಂದರ್ಯವನ್ನು ಬೆನ್ನಟ್ಟಿ ಬೇಟೆಯಾಡುತ್ತಾ ಮುನ್ನುಗ್ಗುವ ಕವಿಯಾತ್ಮಕ್ಕೆ ತನ್ನ ಪ್ರಯತ್ನ ವಿಫಲವಾದಂತೆ ತೋರುತ್ತದೆ; ಆ ಬೇಟೆಯನ್ನುಳಿದು, ಆ ಬೆನ್ನಿಂದಿಳಿದು, ಸೋತು, ದಣಿದು ತಟಸ್ಥವಾಗುತ್ತದೆ; ಹಾಗಿರುವಾಗಲೆ ತಟಕ್ಕನೆ ಅದಕ್ಕೆ ಕೇಳಿಸುತ್ತದೆ ಸತ್ಯದ ರಸವಾಣಿ. ಅದರಂತೆ, ಕಿನ್ನರ ಮಿಥುನವನಟ್ಟಿ, ಸೋತು, ಇಂದ್ರಾಯುಧದಿಂದಿಳಿದು, ಹರನ ನೋಟಕ್ಕೆ ಕೈಲಾಸವೇ ಕರಗಿದಂತೆ ಹಬ್ಬಿಯೂ, ರುದ್ರಾಟ್ಟಹಾಸವೆ ಜಲವಾದಂತೆ ಬೆಳಗಿಯೂ, ತ್ರೈಲೋಕ್ಯ ಲಕ್ಷ್ಮೀಮಣಿಮುಕುರದಂತೆ ನೈರ್ಮಲ್ಯ ಶೋಭಾಕಲಿತವಾಗಿಯೂ ಇದ್ದ ಅಚ್ಛೋದ ಸರೋವರದ ತೀರದ ಲಲಿತಲತಾಗೃಹದ ಇಂದೂಪಲದ ಮೇಲೆ ಪಟ್ಟಿರ್ದ ಚಂದ್ರಾಪೀಡನಿಗೆ ಕೇಳಿಸಿತು-ವೀಣಾಧ್ವನಿ! ತನ್ನ ತೇಜಿಯೆ ಮುರಿದ ಕೊರಲಾಗಿ, ಬಳಲ್ದೆಳಪಲಾಟಿಪ ಮೆಯ್ಯಾಗಿ, ಕಡೆವಾಯ ಲೋಳೆಯೊಳ್ ಪೊರೆದುಗುತರ್ಪ ಪಚ್ಚಪಸಿಯಚ್ಚಗಱುಂಕೆಯಾಗಿ, ಮರಲ್ದ ದಿಟ್ಟಿಯಾಗಿ, ಕತ್ತರಿಮೊನೆಗೊಂಡೆಳಲ್ವ ಕಿವಿಯಾಗಿ ಸೋಲ್ತ ಭಾವವನ್ನು ಸೂಚಿಸುತ್ತಿತ್ತು ಎಂದಮೇಲೆ ವೀಣಾ ವಿದ್ಯಾಧರನಾದ ರಾಜಕುಮಾರನಿಗೆ ಆ ವಿಪಂಚೀನಾದ ಪೆಣ್ದುಂಬಿಯ ಗಾವರಂಬೊರೆದು ಪೊಣ್ಮುತ್ತಿರ್ದ ಪುಪ್ಪಾಸ್ತ್ರಚಾಪಲತಾ ಜ್ಯಾರವದಂತೆ ಅಮಾನುಷವಾದ ಓಜೆಯಿಂದ ಗಂಧರ್ವರನ್ನು ಸೋಲಿಸುತ್ತಾ ಪಳಂಚಲೆದಂತೆ ಇಂಪಾದುದರಲ್ಲಿ ಅಚ್ಚರಿಯೇನಿದೆ? ಅದೂ ಅಲ್ಲದೆ ಮನುಜರಿಗೆ ಅಗೋಚರವಾದ ಹರಾದ್ರಿಯ ತಪ್ಪಲಿನಲ್ಲಿ ಆ ಗೇಯದ ದನಿ! ಕುತೂಹಲಿತ ಮಾನಸನಾದ ಆ ನರೇಂದ್ರನಂದನನು ಕುದುರೆಯ ಬೆನ್ಗೆ ಬಂದು ಮುಂದುವರಿದನು-ಮೃಗಸೂಚಿತ ಗೇಯಮಾರ್ಗದಿಂ.

ಚಂದ್ರಾಪೀಡ ಮಹಾಶ್ವೇತೆಯರ ಸಂದರ್ಶನದ ಸನ್ನಿವೇಶಕ್ಕೆ ಕವಿಪ್ರತಿಭೆ ಉದಾರವೂ ಉತ್ತುಂಗವೂ ತುಷಾರಶುಭ್ರವೂ ಆಗಿರುವ ಎಂತಹ ಅಭ್ರವೇದಿಕೆಯನ್ನು ವಿರಚಿಸಿದೆ!

ಕಾದಂಬರೀ ಕಾವ್ಯದಲ್ಲಿ ಪ್ರಧಾನ ಸನ್ನಿವೇಶಗಳು ಮಾತ್ರವಲ್ಲದೆ ಸಮಗ್ರ ಕಥಾಭಿತ್ತಿಯೂ ತಪೋವನಗಳ ಪರಿವೇಷದಿಂದ ಸಂವೃತವಾಗಿದೆ. ಶೂದ್ರಕನ ಆಸ್ಥಾನವಾಗಲಿ, ತಾರಾಪೀಡನ ರಾಜಧಾನಿಯಾಗಲಿ, ಅಥವಾ ಗಂಧರ್ವಲೋಕದ ಹೇಮಕೂಟದ ಕಾದಂಬರಿಯ ಕನ್ಯಾಂತಃಪುರದ ಕಾಂಚನಮಯ ತೋರಣಗಳ ಮಂಟಪವಾಗಲಿ ನಮ್ಮ ಮನಸ್ಸನ್ನು ಚಿರಕಾಲವೂ ಸೆಳೆದಿಡಲು ಸಮರ್ಥವಾಗುವುದಿಲ್ಲ. ಅವೆಲ್ಲವೂ ಸೋಪಾನಗಳೆ ಹೊರತು ದೇವಮಂದಿರವಲ್ಲ. ಸೋಪಾನಪಂಕ್ತಿಯ ಮನೋಹರತೆ ದೇವನಿಕೇತನದ ಪವಿತ್ರತೆಗೆ ಸಮರ್ಪಿತ. ಬಾಗಿಲಲ್ಲಿ ಕಣ್ಗೊಳಿಸುವ ತೋರಣ ಕಾಂಚನದ್ದಾದರೂ ಅದು ಅಂತರ್ವಲಯದ ಗರ್ಭಗುಡಿಯಲ್ಲಿರುವ ಭಗವದಿಂದುಮೌಳಿಯ ಹಾಲ್ಗಲ್ಲಿನ ಪ್ರತಿಮೆಗೆ ಪ್ರತೀಹಾರಿ.

ಕಾವ್ಯಲೋಕದಲ್ಲಿ ನಮ್ಮ ಮನಸ್ಸು ಅಲೆಯುವ, ಒಲಿಯುವ, ವಿಹರಿಸುವ, ವ್ರತಗೈಯುವ ಸ್ಥಾನಗಳೆಂದರೆ: ಅರಣ್ಯ, ಆಕಾಶ, ನದಿ, ನಿರ್ಝರ, ಪರ್ವತ, ತಪೋವನ. ನಮ್ಮ ಕಲ್ಪನೆ ತೀರ್ಥಸ್ನಾನ ಮಾಡುವುದು ಅಚ್ಛೋದ ಪಂಪಾ ಸರೋವರಗಳಲ್ಲಿ. ನಮ್ಮ ಹೃದಯ ಧ್ಯಾನವಿಹಾರಿಯಾಗುವುದು ಜಾಬಾಲಿ ಮತ್ತು ಮಹಾಶ್ವೇತೆಯರ ಆಶ್ರಯಮಗಳಲ್ಲಿ. ನಮ್ಮ ಚೇತನ ಸಾಷ್ಟಾಂಗ ಪ್ರಣಾಮ ಮಾಡುವುದು ಶ್ವೇತಕೇತು ವ್ರತಿಗಳ ಚರಣತಲದಲ್ಲಿ. ಅಲ್ಲಿ ನಮ್ಮ ಪ್ರಾಣಕ್ಕೆ ನಿತ್ಯಸಂಗಿ ಕಪಿಂಜಲ ಮಹರ್ಷಿ. ಈ ಮಹಾ ಶ್ವೇತವಾತಾವರಣದ ಸಂಪೂತ ಮಹಿಮೆಯಿಂದಲೇ ಕಾದಂಬರಿಯ ಓಕುಳಿಯ ವರ್ಣವೂ ಹಾಲ್‌ಬೆಳ್ಳಿಗೆ ತಿರುಗಿದೆ; ರುಚಿರಶೃಂಗಾರದ ಅಚಿರತೆಯೂ ಅಕ್ಷಯಶಾಂತಿಯ ಕ್ಷೀರಕಾಂತಿಯಿಂದ ಶೋಭಿಸುತ್ತಿದೆ.

ಮಹಾಶ್ವೇತೆಯ ಮಹಾಶ್ವೇತಾಶ್ರಮ: ಹೆಸರಾಲಿಸಿದರೆ ವಿಷಯಬೋಧೆಯಾಗುತ್ತದೆ!

ಪೃಥ್ವಿಯ ದೈನಂದಿನ ಜೀವನದ ಧೂಳೀ ಧೂಸರ ವಕ್ಷಸ್ಥಲದಿಂದ ಬಹುದೂರವಾಗಿದ್ದೇವೆ. ಬಹು ಎತ್ತರಕ್ಕೇರಿದ್ದೇವೆ. ಹೈಮಾಚಲದ ಸ್ಫಟಿಕನಿಕಾಶ ಅನಿಲಮಂಡಲ. ಅಚ್ಛೋದ ಸರೋವರದ ಶೀತಲನಿರ್ಮಲ ವಾರಿವಿಸ್ತಾರ. ಕಂಪಿಂಪು ತಂಪಿಡಿದು ತೀಡುತಿದೆ ಬೈಗುಗಾಳಿ:

ಕುಮುದರಜಂಗಳೊಳ್ ಪೊರೆದು ವಾಃಕಣಜಾಲಮನಾಂತು ಕೂಡೆ ವಿ
ಶ್ರಮಿಸಿ ತರಂಗಮಾಲಿಕೆಗಳೊಳ್ ಕಲಹಂಸನಿನಾದ ಬಂಭ್ರಮದ್
ಭ್ರಮರರವಂಗಳೊಳ್ ಬೆರಸಿ ಮಾರುತನೊಯ್ಯನೆ ಬಂದು ತೀಡಿದ
ತ್ತಮರ್ದೊಸೆದಪ್ಪಿಕೊಂಡು ಕರೆವಂತೆವೊಲಾ ಮನುಜೇಂದ್ರ ಚಂದ್ರನಂ.
ಅಂಚೆಗಳಿಂಚರದಿಂ ತಣ್ಪಿಂ ಚೆಲ್ವಿಂ ಸವಿಯಿನಬ್ಜಘನಸೌರಭದಿಂ
ಕಾಂಚನಕಮಳಾಕರಮಿದು ಪಂಚೇಂದ್ರಿಯಸುಖಮನೆನಗೆ ಪಡೆದಪುದೀಗಳ್.

ವೈರಾಗಿಗಳ ಆದರ್ಶದೇವನಾದ ಗೌರೀವಲ್ಲಭನಿಗೂ ಮೋಹ ಹುಟ್ಟಿಸುವಂತಿದೆ ಆ ಚೇತೋಹಾರಿಯಾದ ದೃಶ್ಯ.

ಎಲ್ಲಿ ನೋಡಿದರೂ ಬಿಳಿಯ ಬಣ್ಣ. ಎತ್ತ ಕಣ್ಣೋಡಿದರೂ ರಜತನವನೀತ ಶುಭ್ರ ತುಹಿನರಾಶಿ. ಆ ಶ್ವೇತಶುಭ್ರತೆಯಲ್ಲಿ ಮಿಂದು ಶುದ್ಧಚೇತನನಾದ ಚಂದ್ರಾಪೀಡನು ಬೀಣೆಯಿಂಚರದ ಬಟ್ಟೆವಿಡಿದು ಮುಂಬರಿದು ನೋಡುತ್ತಾನೆ: ಅದೊ ಸಿದ್ಧಾಯತನಂ ಮನಂಗೊಳಿಸಿ ತೋರುತ್ತಿರ್ಪುದು! ಅಲ್ಲಿ ರತ್ನಪೀಠಘಟಿತವೂ ದೇದೀಪ್ಯಮಾನಪ್ರಭವೂ ಚತುರ್ವಕ್ತ್ರಸುಂದರವೂ ಆದ ನಿರ್ಮಲ ದಿವ್ಯಮೌಕ್ತಿಕ ಶಿಲಾಲಿಂಗವೊಂದು ಗೋಚರಿಸುತ್ತದೆ. ಇಲ್ಲಿ ಕವಿಯ ವರ್ಣನೆ, ಬೆಳ್ಪಿನ ಮೇಲೆ ಬೆಳ್ಪನ್ನು ಹೇರಿ, ಬೆಳ್ಳಿಯ ಬೆಟ್ಟಕ್ಕೆ ಪ್ರತಿಸ್ಪರ್ಧಿಯಾಗಿ ನಿಂತಿದೆ: ಹರಹಾಸನದ ಅವಯವಗಳಂತೆ! ಅನಂತಾನಂತ ಭೋಗಗಳಂತೆ! ಪೂರ್ಣೇಂದು ಕಲಾಳಿಯಂತೆ! ಮುತ್ತಿನ ಶಿಲೆಯ ದಿವ್ಯ ಲಿಂಗವನ್ನು ಮುತ್ತಿವೆಯಂತೆ ಬೆಳ್ದಾವರೆಯ ಸೇನೆ!

ಆ ಸಿದ್ಧಾಯತನವನ್ನಾಗಲಿ ಆ ಮೌಕ್ತಿಕಶಿಲಾಲಿಂಗವನ್ನಾಗಲಿ ಚಿತ್ರಿಸಿಕೊಳ್ಳುವುದರಲ್ಲಿ ಕಾರ್ಪಣ್ಯ ದೂರವಾಗಿರಬೇಕು ನಮ್ಮ ಕಲ್ಪನೆ. ಅಲ್ಲಿ ಅಲ್ಪಕ್ಕೆ ಸ್ಥಾನವಿಲ್ಲ. ಎಲ್ಲವೂ ಹೈಮಾಚಲಸಂಗಿಗಳೆ.

“ಎಲ್ಲವು ಎಲ್ಲಿಯು ಮಹತ್ತೆ ಇಲ್ಲಿ
ಈ ಸಹ್ಯ ಮಹಾ ಬೃಹತ್ತಿನಲ್ಲಿ!”

ಎಂಬಂತೆ ಅಸೀಮದ ಸೀಮೆಯಲ್ಲಿ ಭೂಮವೇ ಸಾಧಾರಣ ಮತ್ತು ಸಾಮಾನ್ಯ. ಚರಾಚರಗುರುವಪ್ಪ ಶೂಲಪಾಣಿ ದೇವರ ಮಹಾಪ್ರತಿಮೆಯ ಧವಳಬೃಹತ್ತು ಎಷ್ಟು ವಿರಾಟಾಗಿತ್ತೆಂದರೆ ಅದನ್ನು ಆಶ್ರಯಿಸಿ ‘ಭಕ್ತಿಯೆ ಭವಸನ್ನಿಧಿಯಲ್ಲಿ ರೂಪು ಗೊಂಡಂತಿರ್ದ’ ಮಹಾಶ್ವೇತೆ ರಾಜಕುಮಾರನ ಕಣ್ಣಿಗೆ ತಟಕ್ಕನೆ ಬೀಳಲಿಲ್ಲ!

ಆ ತಪಸ್ವಿನಿಯ ವರ್ಣನೆಯಲ್ಲಿಯೂ ಕವಿಯ ಕುಂಚಿಕೆ ಅಮೃತದಲ್ಲಿ ಅದ್ದಿಹೋಗಿದೆ. ಅಮೃತಾಂಭೋರಾಶಿ ಪೂರಪ್ರತಿಮ ನಿಜ ತಪಸ್ಸಂಚಯಂ ಪರ್ವಿತೋ ಲೋಕಮನ್-ಎಂಬಂತಿದೆ ಆಕೆಯ ದೇಹಾಂಶು. ಆತನು ಹರನನ್ನು ಆರಾಧಿಸುತ್ತಿರ್ದ ಆ ‘ಅತ್ಯುತ್ತಮ ದಿವ್ಯಾಕಾರೆ’ ಶಂಖದಿಂದ ಕಡೆದಂತಿದ್ದಾಳೆ; ಮುತ್ತಿನಿಂದ ತೆಗೆದಂತಿದ್ದಾಳೆ; ಮೃಣಾಳದಿಂದ ಪಡೆದಂತಿದ್ದಾಳೆ. ಅಮೃತಾಂಶು ರಶ್ಮಿಗಳ ಕುಂಚಿಗೆಯಿಂದಮೆ ಕರ್ಚಿ ಪಾರದಂದೊಡೆದರೊ-ಎಂಬಂತಿದ್ದಾಳೆ.

ಆಗತಾನೆ ಮಿಂದು ಮಡಿಯುಟ್ಟು ಬಂದಿದ್ದಾಳೆ ಆಕೆ. ಎಳಮಿಂಚಿನ ಒಳ್ದಳಿರ್ಗಳ ಬಣ್ಣದ ಕೂದಲನ್ನು ಕೆದರಿಬಿಟ್ಟಿದ್ದಾಳೆ. ಆ ತಪಸ್ವಿನಿಯ ಚೆದರ್‌ಮುಡಿ ಬಾಚದೆ, ಹಿಕ್ಕದೆ, ಜಡೆಗೊಂಡು, ನಸುಕೆಂಬಣ್ಣಕ್ಕೂ ತಿರುಗಿದೆ. ಹೊಸ ಮೀಹದ ತುಂತುರು ಹನಿಗಳೂ ಅಲ್ಲಲ್ಲಿ ಸಿಕ್ಕಿಕೊಂಡಿವೆ. ಆಕೆ ಹಿಡಿದಿದ್ದ ಜಪಸರವೂ ಮುತ್ತಿನದು. ಆಕೆಗೆ ಬ್ರಹ್ಮಸೂತ್ರವೂ ಇದೆ. ವಯಸ್ಸು? ದೇವತೆಗಳಿಗೆ ವಯಸ್ಸೆ? ವಯಸ್ಸಿಲ್ಲ. ಆದರೂ

ದಿವಿಜತೆಯಿಂ ದಿವಸಂಗಳ
ಪವಣಱೆಯಲ್ಬಾರದಾಡೊಡಂ ಸೊಗಯಿಸಿ ತೋ
ರ್ಪವಯವದಿಂದಂ ಪದಿನೆಂ
ಟು ವರಿಸದಾಕೃತಿಯಿನಬ್ಜಮುಖಿ ಕಣ್ಗೆಸೆದಳ್.

ಮನುಷ್ಯರೀತಿಯಾಗಿ ಆಕಾರವನ್ನು ನೋಡಿ ವಯಸ್ಸು ಹೇಳಬಹುದಾದರೆ: ಆಕೆಗೆ ಹದಿನೆಂಟು ತುಂಬಿತ್ತು.

ಆಕೆಯಲ್ಲಿ ತರಳೆಯ ಲಾವಣ್ಯವಿದ್ದಿತೆ ಹೊರತು ಲಾಘವವಿರಲಿಲ್ಲ. ಆ ತಪಸ್ವಿನಿಯನ್ನು ನೋಡಿದೊಡನೆ ಚಕ್ರೇಶ್ವರನ ಕುಮಾರನಾಗಿದ್ದ ಚಂದ್ರಾಪೀಡನ ಹೃದಯದಲ್ಲಿಯೂ ಭಯಮಿಶ್ರಿತ ಭಕ್ತಿಸಂಚಾರವಾಗುತ್ತದೆ. ಅವಿವಾಹಿತನಾಗಿದ್ದರೂ ಯೌವನ ತುಂಬಿದವನಾಗಿದ್ದರೂ ಶಕುಂತಳೆಯನ್ನು ಕಂಡ ದುಷ್ಯಂತನಂತಾಗಲಿಲ್ಲ. ಮುಂದೆ ಹೇಮಕೂಟದಲ್ಲಿ ಕಾದಂಬರಿಯನ್ನು ಕಂಡಾಗ ಯಾವ ಭಾವಸಂಚಾರದಿಂದ ಆತನ ಮನಸ್ಸು ಉಲ್ಲೋಲಕಲ್ಲೋಲವಾಯಿತೋ ಆ ಭಾವಕ್ಕೆ ಇಲ್ಲಿ ಎಡೆಯೆಲ್ಲಿ?

ಅತಿ ಗಂಭೀರೆಯನೂರ್ಜಿತ
ಮತಿಯಂ ನಿರ್ಮಳೆಯನಮಲ ಧೈರ್ಯಾದಿ ಗುಣಾ
ನ್ವಿತೆಯಂ ದೃಢಪಾಶುಪತ
ವ್ರತೆಯಂ ಕನ್ಯಕೆಯನಂದು ಕಂಡಂ ಕ್ಷಿತಿಪಂ.

ಕಂಡು, ಕುದುರೆಯಿಂದಿಳಿದು, ಅದನ್ನೊಂದು ಮರದ ಕೊಂಬೆಗೆ ಕಟ್ಟಿ, ದೂರದಿಂದಲೆ ಭಗವದಿಂದುಮೌಳಿಗೆ ಪೊಡವಟ್ಟು, ರಮಣೀಯ ದೇವಾಯತನದ ನೂತ್ನಸ್ತಂಭವನ್ನು ನೆಮ್ಮಿನಿಂದು, ಆ ದಿವ್ಯ ಕಾಂತೆಯನ್ನು ಮತ್ತೆ ಸಂವೀಕ್ಷಿಸುತ್ತಾನೆ. ಭಗವದಾರಾಧನೆಯಲ್ಲಿ ತಲ್ಲೀನೆಯಾಗಿದ್ದಾಕೆಯಲ್ಲಿ ರಾಜಕುಮಾರನಿಗೆ ಹೊಳೆದ ಗುಣಗಳೆಂದರೆ: ರೂಪಸಂಪತ್ತಿ, ಕಾಂತಿ, ಉಪಶಾಂತಿ.

ವಿಸ್ಮಯ ಕುತೂಹಲಗಳಿಂದ ನೋಡುತ್ತಿದ್ದ ಚಂದ್ರಾಪೀಡನಿಗೆ ಏನೇನೊ ಆಲೋಚನೆ: ಆರ್ಗೆ ಸತಿ? ಪೆಸರೇನ್? ಇಂತು ತೋರ್ಪ ಜವ್ವನದೊಳಗೆ ಈ ತಪಕ್ಕೆ ಗುರಿಮಾಡಿದ ಉಬ್ಬೆಗಮಾವುದು? ಮನುಜನನ್ ಎನ್ನನ್ ಈಕ್ಷಿಸಿ ಭವಾದ್ರಿಯ ನೇರದಿರ್ದೊಡೆ, ಅಥವಾ ತೊಟ್ಟನೆ ಕೊಳೆ ಮಾಯವಾಗದಿರ್ದೊಡೆ ಒಯ್ಯನೆ ಬೆಸಗೊಳ್ವೆನ್.

ಹೀಗೆಲ್ಲಾ ಬಗೆಯುತ್ತಾ ನಿಂತಿರುವಾಗಲೆ ಆ ತಪಸ್ವಿನಿಯ ಪೂಜೆ ಪೂರೈಸುತ್ತದೆ. ಆಕೆ ಆಕಾಶಕ್ಕೆ ಒಗೆಯಲೂ ಇಲ್ಲ, ಮಾಯವಾಗಲೂ ಇಲ್ಲ. ಅದಕ್ಕೆ ಬದಲಾಗಿ

ಒಸೆದಾಶ್ವಾಸಿಸುವಂತೆ ಪುಣ್ಯತತಿಯಿಂದಂ ಮುಟ್ಟುವಂತಚ್ಛ ತೀ
ರ್ಥ ಸಮೂಹಾಂಬುಗಳಿಂದವಂದಭಿಷವಂ ಮಾೞ್ಪಂತೆ ಪೂತತ್ವಮಂ
ಪಸರಿಪ್ಪಂತೆ ಬರಂಗಳಂ ಪದಪಿನಿಂದೀವಂತೆ ದೃಕ್ತೃಪ್ತಿ ರಾ
ಜಿಸೆ ದಿವ್ಯಾಂಗನೆ ನೋಡಿದಳ್ ತಗುಳ್ದು ಚಂದ್ರಾಪೀಡಭೂಪಾಲನಂ.

ಕಣ್ಣಿನ ಆಮಂತ್ರಣವೆ ಅನಿತೊಂದು ಹಿತಕರವಾಗಿತ್ತು. ಜೊತೆಗೆ ಅತ್ಯುತ್ತಮವಾದ ಸಂಸ್ಕೃತಿಯ ಜೇನು ಸೋರುವಂತೆ ಸವಿನುಡಿಯ ಸ್ವಾಗತವೂ ಬೆಂಬಲವಾಯಿತು:

ಸ್ವಾಗತಮೇ ನಿನಗೆ ಮಹಾ
ಭಾಗನೆ ಮದ್ಭೂಮಿಗೆಂತು ಬಂದಯ್ ನೀನ
ಭ್ಯಾಗತನಾಗಲ್ವೆೞ್ಕೆಂ
ದಾಗಳ್ ನೃಪಸುತನನೞ್ಕಱೆರಿಂ ಸತಿ ನುಡಿದಳ್

ಮಾತನಾಡಿಸಿದುದೆ ಸಾಕು ಕೃತಾರ್ಥನಾದೆನೆಂದು ರಾಜಕುಮಾರನೂ “ದೇವಿಯರ್ ಬೆಸಸಿದಂತೆ ಗೆಯ್ವೆನ್” ಎಂದು ‘ಬೆಂಬಳಿವಿಡಿದು ನಡೆಯುವ ಶಿಷ್ಯನಂತೆ’ ಆಕೆಯನ್ನು ಹಿಂಬಾಲಿಸುತ್ತಾನೆ.

ಆ ಜೋಗಿನಿಯ ನೋಂಪಿಯ ಗುಹೆಯಲ್ಲಿ ಆಕೆಯ ಆತಿಥ್ಯದಿಂದ ಅನುಗ್ರಹೀತನಾಗಿ ಚಂದ್ರಾಪೀಡನು ‘ತನ್ನ ಬಂದ ವೃತ್ತಾಂತಮನೆಲ್ಲಮಂ ನೆರೆಯೆ ಪೇಳ್ದು’ ಬಹಳ ಸಂಕೋಚದಿಂದಲೆಂಬಂತೆ ಆಕೆಯ ವಿಚಾರವನ್ನು ಪ್ರಸ್ತಾಪಿಸುತ್ತಾನೆ. ಅಲ್ಲಿಯೂ ಎಷ್ಟು ವಿನಯ: ಹಿರಿದಾದ ತಮ್ಮ ಪ್ರಸಾದವನ್ನು ಪಡೆದ ಒಂದು ಗರ್ವದಿಂದ ಪರಿಚಿತನಂತೆ ಬಿನ್ನವಿಸಲು ಪ್ರಯತ್ನಿಸುತ್ತಿದ್ದೇನೆ. ‘ಅಧೀರರಪ್ಪ ಮನುಜರ್ ಪ್ರಭುಗಳ್ ದಯೆಯಿಂದ ತಮ್ಮನ್ ಆದರಿಸಿದೊಡೆ, ಆಗಳ್ ಅಂತೆ ಗಳಪಲ್ ಬಗೆದರ್ಪುದಿದಾವ ವಿಸ್ಮಯಂ!’ ನಾನು ಮನುಜ. ಮನುಜನಾದವನಿಗೆ ನಾ ಕಂಡ ಇದೆಲ್ಲವೂ ಅತ್ಯಾಶ್ಚರ್ಯಕರ ಮಾತ್ರವಲ್ಲದೆ ಕೌತುಕಾವಹವೂ ಆಗಿದೆ………

ಆಕೆ ಪ್ರಶ್ನೆಗೆ ಯಾವ ಉತ್ತರವನ್ನೂ ಕೊಡಲಿಲ್ಲ. ಮೌನವಾದಳು. ಅತಿಯಾದ ಯಾತನೆಯನ್ನು ಸಂಯಮಿಸುವಂತೆ ಕಣ್‌ಮುಚ್ಚಿದಳು. ಕಣ್ಣೀರು ಬಳಬಳನೆ ಹನಿ ಹರಿಯಿತು. ಇಕ್ಕಿದ ಬಿರ್ದ್ದನುಂಡು ತೆಪ್ಪಗಿರುವುದು ಬಿಟ್ಟು ‘ಇದೆತ್ತೆತ್ತಲೀಗಳ್ ಬೆಸಗೊಂಡೆನ್’ ಎಂದು ಚಂದ್ರಾಪೀಡನು ತನ್ನನ್ನು ತಾನೆ ಹಳಿದುಕೊಂಡನು.

ಅಷ್ಟೇ ಅಲ್ಲ, ಅವನಿಗೆ ಇನ್ನೊಂದು ಆಶ್ಚರ್ಯ. ಯಾವ ವ್ಯಕ್ತಿಯನ್ನು ನೋಡಿದೊಡನೆ ಶಾಂತಿಯ ನಿಧಿ ಎಂದು ಭಾವಿಸಿದ್ದನೋ, ಯಾರ ವಾಣಿಯನ್ನು ಆಲಿಸಿದಂದು ಪರಮತೃಪ್ತಿಯ ಧ್ವನಿ ಎಂದು ಊಹಿಸಿದ್ದನೋ, ಯಾರ ಕಣ್ಣಿನ ಬೆಳಕಿನಲ್ಲಿ ದುಃಖಾತೀತವಾದ ಆನಂದದ ಕಾಂತಿಯನ್ನು ಸಂದರ್ಶಿಸಿದೆನೆಂದು ತಿಳಿದಿದ್ದನೋ ಅಂತಹ ಮಹಾಶ್ವೇತೆ ಅಳುತ್ತಿದ್ದಾಳೆ! ‘ಇಂತಪ್ಪವರುಂ ಅಳುವಂದಂ ಅದ್ಭುತಂ!’

ಎಂತಹರಿಗೂ ಒಮ್ಮೊಮ್ಮೆ ಹಾಗೆನ್ನಿಸುತ್ತದೆ: ಇಂತಪ್ಪವರುಂ ಅಳುವಂದಂ ಅದ್ಭುತಂ.

ಇದೇ, ಕವಿ ತನ್ನ ತಪೋಮಯ ಶೃಂಗಾರದ ಕಥೆಗೆ ಕಟ್ಟಿರುವ ಹಿನ್ನೆಲೆ: ಸಿದ್ಧಾಯತನದಲ್ಲಿ, ವಿರೂಪಾಕ್ಷದೇವನ ಮಹಿಮಾಯಮ ಸಾನ್ನಿಧ್ಯದಲ್ಲಿ, ಗುಹಾಂಗಣದ ತಪಸ್ಸಾಧನ ರಂಗದಲ್ಲಿ ತಪಸ್ವಿನಿಯಾಗಿದ್ದ ಮಹಾಶ್ವೇತೆ ತನ್ನ ಪ್ರಣಯ ಕಥೆಯನ್ನು ತಾನೇ ಹೇಳುವಂತೆ ಮಾಡಿದ್ದಾನೆ.

ಕಥೆಯಲ್ಲಿ ಪ್ರಧಾನ ಪಾತ್ರ ವಹಿಸಿರುವ ಗಿಳಿಯ ರೂಪದ ಪುಂಡರೀಕನ ಸಮ್ಮುಖದಲ್ಲಿ ವಾಚಂಯಮಿ ವರೇಣ್ಯನಾದ ಜಾಬಾಲಿ ಮಹರ್ಷಿಯ ಗಂಭೀರ ವಾಣಿಯನ್ನು ಕೇಳುತ್ತಿರುವ ಕುಮಾರತಾಪಸ ಸಂಘದಂತೆ ಚಂದ್ರಾಪೀಡನೂ ಕಿವಿಯಾಗಿ ಕೇಳಿದುದರಲ್ಲಿ ಆಶ್ಚರ್ಯವೇನಿದೆ?

ಮಹಾಶ್ವೇತೆ ಬರಿದೆ ವರದಿಯೊಪ್ಪಿಸುವುದಿಲ್ಲ. ಪುನರನುಭವಿಸಿ ಹೇಳುತ್ತಾಳೆ. ಅನುಭವಿಸಿ ಹೇಳಿದುದೆಲ್ಲ ಸಾಹಿತ್ಯ. ಉಳಿದುದೆಲ್ಲ ವರದಿ.

ಆ ಆತ್ಮಕಥೆಯಲ್ಲಿ ಎಳೆಯ ಒಲವು ಮೊತ್ತಮೊದಲು ಮೊಳೆಯಿಣುಕಿದುದು ಚಿತ್ರಿತವಾಗಿದೆ. ಅಲ್ಲಿಯ ಶೃಂಗಾರ ತಪಸ್ಸಿನಲ್ಲಿ ಇರ್ಮೆ ಸೋಸಿ ಬರುತ್ತದೆ. ಮಹಾಶ್ವೇತೆಯ ಅನುರಾಗದ ತಪಸ್ಸಿನಲ್ಲಿ ಒಮ್ಮೆ; ಕುಮಾರ ತಪಸ್ವಿಗಳಿಗೆ ಕಥೆ ಹೇಳುವ ಜಾಬಾಲಿಯ ವಿರಾಗದ ಸಂಯಮದಲ್ಲಿ ಮತ್ತೊಮ್ಮೆ. ಆದ್ದರಿಂದಲೆ ಕಾವ್ಯದುದ್ದಕ್ಕೂ ಪ್ರೇಮದ ಜಯಡಿಂಡಿಮಕ್ಕಿಂತಲೂ ಅದನ್ನು ತೂರಿ ಮೀರಿ ನಮಗೆ ಕೇಳಿಬರುತ್ತದೆ-ತಪಸ್ಸಿನ ವೀಣಾಧ್ವನಿ. ಕಟ್ಟಕಡೆಯಲ್ಲಿಯೂ ಕಾವ್ಯಕೈಲಾಸದ ನೆತ್ತಿಯಮೇಲೆ ಶೃಂಗಾರದ ದಿಗ್ವಿಜಯದ ಧ್ವಜವೇನೋ ಹಾರಾಡುತ್ತದೆ. ಆದರೆ ಕಣ್ಣಿಟ್ಟು ನೋಡುವವರಿಗೆ ಗೊತ್ತಾಗುತ್ತದೆ-ಆ ಧ್ವಜವಸ್ತ್ರ ವಲ್ಕಲದ್ದು; ಅದರ ಬಣ್ಣ ಕಾವಿ!

ಪುಂಡರೀಕ ಮಹಾಶ್ವೇತೆಯರ ಕಥೆಯಲ್ಲಿ ಪ್ರತಿಪ್ಠಿತಿವಾಗಿರುವುದು-ಕರ್ಮಫಲರೂಪಿಯಾದ ವಿಧಿಯ ವಜ್ರನಿಯತಿ. ಆ ಋತದ ನಿಷ್ಠೆಗೆ ಕಾಲತ್ರಯವೇದಿ ಶ್ವೇತಕೇತು ವ್ರತಿಗಳ ಕುಮಾರನೆಂಬ ದಾಕ್ಷಿಣ್ಯವಿಲ್ಲ. ಜೇಡನ ಜಟಿಲಕಲೆಯ ತಂತುಕೃತಿಯಲ್ಲಿ ಸೆರೆಯಾದ ಉಷಃಕಾಲದ ಹಿಮಬಿಂದುವಿನಂತೆ ಲಲಿತೆ, ಕೋಮಲೆ, ಗಂಧರ್ವಕನ್ಯ ಎಂಬ ಪಕ್ಷಪಾತವಿಲ್ಲ. ಪ್ರಣಯಿಗಳಿಬ್ಬರೂ ತುದಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಪಡೆಯುತ್ತಾರೆ: ಕಷ್ಟ ರೂಪದಲ್ಲಿ ತಪಸ್ಸಿನ ರೂಪದಲ್ಲಿ ತಪ್ಪುಗಾಣಿಕೆ ತೆತ್ತು ಅರ್ಹರಾದಮೇಲೆ. ವ್ರತಭ್ರಷ್ಟತೆ ಎಷ್ಟು ಲಲಿತವಾಗಿದ್ದರೇನು? ಎಷ್ಟು ರುಚಿಕರವಾಗಿದ್ದರೇನು? ಮತ್ತೆಷ್ಟು ಕಲಾಪೂರ್ಣವಾಗಿದ್ದರೇನು? ಅದಕ್ಕೆ ತಪ್ಪಿದ್ದಲ್ಲ ಋತದ ಶಿಕ್ಷೆ.

ಕಥೆ ಹೇಳುತ್ತಿದ್ದ ಗುರು ಜಾಬಾಲಿಯ ಕಣ್ಣಿನ ಕಾಂತಿಯಲ್ಲಿ ಮತ್ತು ಮುಖದ ಶಾಂತಿಯಲ್ಲಿ ಹಾರೀತ ಮೊದಲಾದ ತರುಣ ತಪಸ್ವಿಗಳಿಗೆ ಏನು ದರ್ಶನವಾಗುತ್ತದೆ? ಪವಿತ್ರಪ್ರೇಮದ ಮಹಿಮೆ ಮಾತ್ರವಲ್ಲ; ಸಂಯಮದ ಹಿರಿಮೆ ಮತ್ತು ಋತದ ಗರಿಮೆ.

ಆ ಆತ್ಮಕಥೆಗೂ ಅಚ್ಛೋದ ಸರಸ್ತೀರವೇ ರಂಗಭೂಮಿ. ತಾಯೊಡನೆ ಮಜ್ಜನಕ್ಕೆಂದು ಅಲ್ಲಿ ಬಂದಿದ್ದ ಗಂಧರ್ವಕನ್ನೆ, ಮಹಾಶ್ವೇತೆ, ಕುಮಾರ ತಪಸ್ವಿಯಾದ ಪುಂಡರೀಕನನ್ನೂ ಅವನಿಗೆ ಅನುರೂಪವೆಂಬಂತೆ ಜತೆಯೊಳಿದ್ದ ಕೆಳೆಯ ಕಪಿಂಜಲನನ್ನೂ ನೋಡುತ್ತಾಳೆ. ನೋಡಿದೊಡನೆ ಪುಂಡರೀಕನಲ್ಲಿ ಪ್ರೇಮಪರವಶೆಯಾಗುತ್ತಾಳೆ, ಉಚಿತ ಅನುಚಿತಗಳ ಎಣಿಕೆಯಿಲ್ಲದೆ. ಪುಂಡರೀಕನ ಕೈಯಲ್ಲಿದ್ದ ಪಟಿಕದ ಮಣಿಯ ಜಪಸರವೂ ಮಹಾಶ್ವೇತೆಗೆ ‘ಮನೋಜವಿನಾಶದಿನಳ್ವ ತನ್ಮನೋಹರಿಯ ಪೊದಳ್ದ ಕಣ್ಣನಿಗಳಂತೆ’ ತೋರುತ್ತದೆ.

ನಿಯತೇಂದ್ರಿಯನೊಳ್ ತೇಜೋಮಯನೊಳ್ ರೂಪೈಕಪಕ್ಷಪಾತದೆ ನೆಱೆ ನೀ
ತಿಯನೞೆದು ಮುನಿಪನೊಳ್ ನಿರ್ಭಯನಂಗಜನೆನ್ನನಿಂತಿರಲ್ ಸೋಲಿಕುಮೇ?

ತನ್ನೊಳೆಸೆದ ಮನ್ಮಥವಿಕಾರವನ್ನು ನೋಡಿ ಮುನಿಕುಮಾರನು ಎಲ್ಲಿ ಶಪಿಸುತ್ತಾನೆಯೊ ಎಂದು ಗಂಧರ್ವಕನ್ಯೆ ಹೆದರುತ್ತಾಳೆ. ಆದರೂ ಪೂಜಾರ್ಹರನ್ನು ಅವಜ್ಞೆಗೆಯ್ಯಲಾಗದೆಂದು ‘ಎವೆಯಿಕ್ಕದಾಂ ಮನಂಗೊಳಿಪ ಮುನೀಂದ್ರ ನಾನನವನೀಕ್ಷಿಸುತುಂ ಪೊಡೆವಟ್ಟೆನಳ್ಕರಿಂ.’ ಪರಿಣಾಮ: ‘ಗಾಳಿಗೊಡ್ಡಿದ ದೀಪಾಂಕುರದಂತೆ ತನ್ಮುನಿಯುಮಂ ಕಾಮಂ ಚಲಂ ಮಾಡಿದಂ.’

ಮುಂದೆ ನಡೆದ ಕಥೆಯನ್ನು ಮಹಾಶ್ವೇತೆ, ಸ್ವತಃ ಅನುಭವಿಸಿದವರಿಗೆ ಮಾತ್ರ ಸಾಧ್ಯವಾಗುವ ಮುದ್ದುಮೋಹದಿಂ ವರ್ಣಿಸುತ್ತಾಳೆ. ಕೃತ್ತಿಕಾತಾರಾಸ್ತಬಕಾನು ಕಾರಿಣಿಯಾದ ತನ್ನ ಕರ್ಣಪೂರದ ಪುಷ್ಪಮಂಜರಿಯನ್ನು ಮಹಾಶ್ವೇತೆಗೆ ತೊಡಿಸುವ ಅವಸರದಲ್ಲಿ ಉಂಟಾದ ಕದಂಪಿನ ನಸು ಸೋಂಕಿಗೆ ಸೋತ ಮುನಿಕುಮಾರನ ಕೈಯಿಂದ ಅಕ್ಷಮಾಲೆ ಬಿದ್ದುಹೋಗುತ್ತದೆ. ನೆಲಕ್ಕೆ ಬೀಳುವ ಮೊದಲೇ ಅದನ್ನು ಕರಪಲ್ಲವದೊಳಾಂತು ‘ತೊಳಗುವ ಹಾರಮಂ ತಳೆವಂತೆ ಕೊರಲೊಳ್ ತಳೆದು’ ಸುಖಿಸುತ್ತಿರುವ ವ್ಯತಿಕರದಲ್ಲಿ ಕೆಳದಿಯರು ಆಕೆಯನ್ನು ಮೀಹಕ್ಕೆ ಕರೆದೊಯ್ಯುತ್ತಾರೆ, ‘ಪೊಸತಪ್ಪದೊಂದು ಪಿಡಿಗಂಕುಶವಿಟ್ಟು ಮರಳ್ಚುವಂದದಿಂ.’

ಪುಂಡರೀಕನ ಧೈರ್ಯಸ್ಖಲನೆಯನ್ನು ಕಂಡು ಕಪಿಂಜಲನು ವ್ರತಿಯನ್ನು ಎಚ್ಚರಿಸುತ್ತಾನೆ. ಆ ಉಪದೇಶವೂ ಕೆರೆ ನಿಂತ ಅವಿವೇಕಕ್ಕೆ ಕೋಡಿ ಹೊಡೆಯುವ ಕೆಲಸವನ್ನೇ ಮಾಡುತ್ತದೆ. ಶ್ವೇತಕೇತು ಮಹಾಮುನಿಗಳ ಕುಮಾರನು ಜಪಸರವನ್ನು ಇಸುಕೊಳ್ಳಲು ಹೋಗಿ ಗಂಧರ್ವಕನ್ಯೆಯ ಕೊರಳಹಾರವನ್ನು ತಳೆಯುತ್ತಾನೆ. ಅಂತೂ ಅಕ್ಷಮಾಲೆಯೆ ಪ್ರಣಯಪಾಶವಾಗಿ ಪರಿಣಮಿಸುತ್ತದೆ. ಜಪಸರ ಮತ್ತು ಹಾರಗಳ ಅದಲು ಬದಲಾವಣೆಯಿಂದ ಒಬ್ಬರ ‘ವೃತ್ತಿ’ಯನ್ನು ಮತ್ತೊಬ್ಬರು ಕೈಕೊಳ್ಳುವ ‘ಧ್ವನಿ’ ಇಂಗಿತವಾಗಿದೆ.

ಆಜನ್ಮಮಿತ್ರನ ಪ್ರಾಣರಕ್ಷಣೆಗಾಗಿ ಕಪಿಂಜಲನು ಪ್ರಣಯ ರಾಯಭಾರವನ್ನು ನಿರ್ವಹಿಸುತ್ತಾನೆ. ತುಂಬು ಬೆಳ್ದಿಂಗಳ ಗಾಂಧರ್ವ ರಾತ್ರಿಯಲ್ಲಿ ಮಹಾಶ್ವೇತೆ ಕೆಳದಿ ತರಳಿಕೆಯೊಡನೆ ಪ್ರಿಯನ ಪ್ರಾಣಪಾಲನೆಗಾಗಿ ಗುಪ್ತ ಯಾತ್ರಿಯಾಗುತ್ತಾಳೆ. ಆದರೇನು? ದುಂಬಿ ಹೋಗುವುದರಲ್ಲಿಯೆ ಮಕರಂದ ಬತ್ತಿರುತ್ತದೆ. ಪುಂಡರೀಕನು ಪರಾಸುವಾಗಿರುತ್ತಾನೆ.

ನಡೆದ ಸಂಗತಿಯೆಲ್ಲವನ್ನೂ ಕಪಿಂಜಲನಿಂದ ತಿಳಿದು ಚಿತಾರೋಹಣ ಗೆಯ್ಯಲು ಪ್ರಯತ್ನಿಸುತ್ತಿರುವ ಮಹಾಶ್ವೇತೆಗೆ ಚಂದ್ರಮಂಡಲದಿಂದ ಮೈದೋರಿದ ಪ್ರಭಾಮೂರ್ತಿ

ಬಗೆಗೆಟ್ಟು ಸಾವ ಬಗೆಯಂ
ಮಗಳೆ ಮಹಾಶ್ವೇತೆ ಬಗೆಯದಿರ್ ಕೂಡುವೆ ನೀಂ
ಮಗುಳೆಯುಮೀತನನೆನುತುಂ
ಮಗುಳ್ದಾತಂಬೆರಸು ಗಗನಮಾರ್ಗಕ್ಕೊಗೆದಂ.

ಕಪಿಂಜಲನೂ ಸಖನ ಶರೀರವನ್ನು ಒಯ್ಯುತ್ತಿದ್ದಾತನ ಬೆಂಬಾಲಿಸಿ ಅಂತರಿಕ್ಷಕ್ಕೆ ಚಿಮ್ಮುತ್ತಾನೆ. ಆಮೇಲೆ ಮಹಾಶ್ವೇತೆ ಆ ಆಕಾಶಪುರುಷನ ಆಶಾವಾಣಿಯನ್ನು ನೆಮ್ಮಿ, ಪ್ರಿಯನ ಅಕ್ಷಾವಳಿಯನ್ನೂ ವಲ್ಕಲವನ್ನೂ ಕಮಂಡಲುವನ್ನೂ ತಳೆದು ತಪಸ್ವಿನಿಯಾಗುತ್ತಾಳೆ:

ಮನಮಂ ನಿಗ್ರಹಿಸುತ್ತಸದ್ವಿಷಯದತ್ತಲ್ ಪೊರ್ದಂದಂತಾಗಿ ಮಾ
ಡಿ ನಿರುದ್ಧೇಂದ್ರಿಯೆಯಾಗಿ ಬಂಧುಜನಮಂ ತಾಯ್ತಂದೆಯಂ ಪತ್ತುವಿ
ಟ್ಟೆನಗಿನ್ನೊರ್ವರುಮೇವರೆಂಬ ಬಗೆಯಂ ನಿಶ್ಚೈಸಿ ಲೋಕೈಕನಾ
ಥನನಾನಾಗಳನಾಥೆಯೆಂ ಶರಣೆನುತ್ತಾಶ್ರೈಸಿದೆಂ ಸ್ಥಾಣುವಂ.

ಕಥೆ ಹೇಳಿದ ಮಹಾಶ್ವೇತೆ ಪೂರ್ವದುಃಖವನ್ನೆಲ್ಲ ಮತ್ತೊಮ್ಮೆ ಅನುಭವಿಸಿ ಅತಿ ದಾರುಣವಾಗಿ ರೋದಿಸುತ್ತಾಳೆ. ಚಂದ್ರಾಪೀಡನು ಹಲವಾರು ಸಂತೈಕೆಗಳಿಂದ ಹೊಗೆ ಸುತ್ತಿದ್ದ ಆಕೆಯ ಪ್ರತ್ಯಾಶೆಯ ಕೊಳ್ಳಿ ಹೊತ್ತಿಕೊಳ್ಳುವಂತೆ ಮಾಡುತ್ತಾನೆ.

ಯಾವ ವ್ರತವಾದರೂ ಆತ್ಮದ ಶ್ರೇಯಸ್ಸಿಗೆ ಅವಶ್ಯಕವಾಗಿದ್ದರೆ ಜಯಶೀಲವಾಗುತ್ತದೆ. ಒಬ್ಬರು ಮಾಡಿದ್ದಾರೆಂದು ಮತ್ತೊಬ್ಬರು ಅನುಕರಿಸುವ ವ್ರತ ಹುಟ್ಟಿಬಂದ ಮೀಸೆಯಂತಿರುವುದಿಲ್ಲ, ಕಟ್ಟಿಕೊಂಡ ಗಡ್ಡದಂತಿರುತ್ತದೆ. ನಸು ಜಗ್ಗಿದರಾಯ್ತು ಕಿತ್ತುಬರುತ್ತದೆ.

ಮಹಾಶ್ವೇತೆ ತಾನು ಕೈಗೊಂಡಿದ್ದ ಬೆಂಕಿನೋಂಪಿಯನ್ನು ಅನುಕರಿಸಲು ತೊಡಗಿದ್ದ ತನ್ನ ತಂಗಿ ಕಾದಂಬರಿಗೆ ಮೊದಲು ಬುದ್ಧಿಹೇಳಿ ಕಳುಹಿಸುತ್ತಾಳೆ. ಕಡೆಗೆ, ತಂಗಿಯ ತರಳ ಮುಗ್ಧ ವ್ರತರೂಪಿಯಾದ ಛಲಕ್ಕೆ ಅಪ್ರತಿಹತ ಪ್ರತಿವಾದರೂಪವಾಗಿ ಚಂದ್ರಾಪೀಡನನ್ನೆ ಹೇಮಕೂಟಕ್ಕೆ ಕರೆದೊಯ್ಯುತ್ತಾಳೆ.

ಅಲ್ಲಿ ಕವಿ ರಾಜಕುಮಾರನನ್ನೆಂತೊ ನಮ್ಮನ್ನೂ ಅಂತೆಯೆ ಶೃಂಗಾರ ಮಂಚದ ಉಯ್ಯಾಲೆಯಲ್ಲಿಟ್ಟು ತೂಗುತ್ತಾನೆ. ಕಾಮನಬಿಲ್ಲಿನ ಬಣ್ಣಬಣ್ಣದೋಕುಳಿ ಎರಚುತ್ತಾನೆ. ನಯ ಮತ್ತು ಸಂಸ್ಕೃತಿಗಳ ಅಮರಕಲಾಜಾಲವನ್ನೆ ನೇಯುತ್ತಾನೆ. ಆ ಸಂಸ್ಕೃತಿಯ ಸ್ನಿಗ್ಧಚ್ಛಾಯೆಯಲ್ಲಿ ಕಂಚುಕಿಯಾಗಲಿ ಪ್ರತೀಹಾರಿಯಾಗಲಿ ಆಳಾಗಲಿ ಅರಸಾಗಲಿ ನಯಮೂರ್ತಿಗಳಾಗಿ ಕಾಣುತ್ತಾರೆ. ಕುಮಾರವ್ಯಾಸನ ಕೃತಿಯ ವೀರವೊರಟಾಗಲಿ ಚಾಮರಸನ ಪ್ರಭುಲಿಂಗಲೀಲೆಯ ಬೀದಿಯೊರಟಾಗಲಿ ಅಲ್ಲಿ ಸುಳಿಯುವುದಿರಲಿ, ಇಣುಕುವುದ ಕೂಡ ಇಲ್ಲ. ಅಲ್ಲಿಯ ಶ್ರೀಮಂತತೆಯ ಸಿಹಿ ಅತಿಯಾಗಿ ಅತಿಥಿಗಳಿಗೆ ಎಲ್ಲಿ ಅರೆಯಾಗುತ್ತದೆಯೊ ಎಂದು ಹೆದರಿಕೆಯಾಗುತ್ತದೆ.

ಗಂಡುಹೆಣ್ಣುಗಳಿಬ್ಬರೂ ಒಬ್ಬರನೊಬ್ಬರು ನೋಡಿ, ಮೆಚ್ಚಿ ಒಲಿಯುತ್ತಾರೆ. ಚಂದ್ರಾಪೀಡನು ತಂದೆಯಾಣತಿಯನ್ನೆ ಇಂದ್ರಾಯುಧಕ್ಕೆ ವಾಘೆರಾಘೆಯನ್ನಾಗಿ ಮಾಡಿಕೊಂಡು ಉಜ್ಜಯಿನಿಗೆ ಹಿಂತಿರುಗಿದ ಮೇಲೆ, ಕಾದಂಬರಿಯ ಪೊಳ್ಳುನೋಂಪಿಯ ಕೊನೆಗಾಣ್ಕೆಗೆ ಮನಸ್ಸು ನೆಮ್ಮದಿಯಾದರೂ ರಾಜ ಕುಮಾರನು ಯಾವುದನ್ನೂ ಸ್ಪಷ್ಟಗೊಳಿಸದಿದ್ದುದಕ್ಕೆ ಅಳಲಿಂದ ‘ಇಂತುಟೆವಲಂ’ ಎಂದುಕೊಂಡು ಮಹಾಶ್ವೇತೆ ಮರಳಿ ತನ್ನಾಶ್ರಮಕ್ಕೆ ತೆರಳಿ ಘೋರತರ ತಪಶ್ಚರಣೆಯಲ್ಲಿ ನಿರತಳಾಗುತ್ತಾಳೆ.

ಕುಮಾರನೊಬ್ಬನು ಕನ್ಯೆಯೊಬ್ಬಳನ್ನು ನೋಡಿ ಮೋಹಗೊಂಡ ಮಾತ್ರಕ್ಕೆ ಅದು ಮಹಾಪರಾಧವಾಗುವುದಿಲ್ಲ. ಅದಕ್ಕೆ ಪ್ರಾಯಶ್ಚಿತ್ತದ ಆವಶ್ಯಕತೆಯೂ ಅನಿವಾರ್ಯವಾಗುವುದಿಲ್ಲ. ಆದರೆ ಪುಂಡರೀಕನು ವ್ರತಿ. ನಿಯತಿಯ ವಜ್ರ ದೃಷ್ಟಿಯಲ್ಲಿ ವ್ರತಚ್ಯುತಿ ಶಿಕ್ಷಾರ್ಹ. ಶಿಕ್ಷೆಗೋಸ್ಕರ ಶಿಕ್ಷೆಯಲ್ಲ. ಅದರಲ್ಲಿ ಪ್ರತೀಕಾರ ಭಾವನೆಯಿಲ್ಲ; ಶುದ್ಧೀಕರಣ ಭಾವನೆಯಿದೆ. ಪುಂಡರೀಕನ ಮನಸ್ಸಿನಲ್ಲಿ ಮಹಾಶ್ವೇತೆಯನ್ನು ಕಂಡೊಡನೆ ತಟಕ್ಕನೆ ಸಂಭವವಿಸಿದ್ದು ಶರೀರಜ ಕಾಮವೋ ಅಥವಾ ಆತ್ಮಜ ಪ್ರೇಮವೋ ಪರೀಕ್ಷೆಯಾಗಬೇಕು. ಆ ಪರೀಕ್ಷೆ ಕಾಲವಿಳಂಬನ ರೂಪದಿಂದ ಮಾತ್ರವಲ್ಲದೆ ಕಷ್ಟರೂಪದಿಂದಲೂ ನಡೆದಿದೆ. ಮಹಾಶ್ವೇತೆಯ ತಪಸ್ಸು ಕಾಲರೂಪಿ ಮತ್ತು ಸ್ಥಾಣುಶೀಲ. ಪುಂಡರೀಕನದು ಭ್ರಮಣೆ, ಭ್ರಮಣೆ, ಮತ್ತೂ ಭ್ರಮಣೆ. ಜನ್ಮಜನ್ಮಾಂತರಗಳಲ್ಲಿ ಭ್ರಮಣೆ: ದೇವತ್ವದಿಂದ ಮನುಷ್ಯತ್ವಕ್ಕೆ; ಮನುಷ್ಯತ್ವದಿಂದ ತಿರ್ಯಗ್ಜಾತಿಗೆ. ಆದರೆ ಎಲ್ಲೆಲ್ಲಿ ಎಷ್ಟೆಷ್ಟು ಉರುಳಿದರೂ ಆತನ ಪ್ರೇಮ ಪ್ರಜ್ವಲಿಸುತ್ತದೆಯೆ ಹೊರತು ಒಮದಿನಿತೂ ಮಸುಳುವುದಿಲ್ಲ. ಜಾಬಾಲಿ ಮಹರ್ಷಿ ಕಥೆ ಹೇಳಿದುದನೆಲ್ಲ ಕೇಳಿ ಜಾತಿಸ್ಮರತೆಯುಂಟಾದ ಮೇಲೆ ಗಿಳಿಯಾಗಿದ್ದ ಪುಂಡರೀಕನು ಹೇಳುವುದೇನು? “ಭವದೀಯ ಪದಾಸನ್ನತೆಯಿಂದ ಮುನ್ನಿನ ಭವಗಳನ್ನೂ ಬಂಧುಗಳನ್ನೂ ನೆಱೆ ತಿಳಿವಱೆತಮಾಯ್ತು. ಆದೊಡಮೇಂ, ಮುನೀಂದ್ರ, ನಾಣ್ಚದೆ ಮತ್ತಂ ಬಿನ್ನವಿಸಿದಪೆನ್”

ಜಾತಿಸ್ಮರತೆ ವಿರಕ್ತಿಗೆ
ಹೇತುವೆನುತ್ತಿರ್ಪರದುವ ಪುಸಿಯಾಗಿ ಮಹಾ
ಶ್ವೇತೆಯೊಳಾದೊಂದನುರಾ
ಗಾತಿಶಯಂ ಪೆರ್ಚಿದಪುದು ಮುನ್ನಿಂದೀಗಳ್.

ವಿರಕ್ತಿಗೆ ಹೇತುವಾಗಬೇಕಾಗಿದ್ದ ಜಾತಿಸ್ಮರತೆ ಮಹಾಶ್ವೇತೆಯ ಮೇಲಣ ರಾಗಾತಿಶಯಕ್ಕೆ ಕಾರಣವಾಗುತ್ತದೆ. ಆದರೂ ರಾಗವು ವಿರಾಗದ ನಿಷ್ಠೆಗೆ ಸಿಲುಕಿ ಅದರಿಂದ ಹದಗೊಳ್ಳುವವರೆಗೂ ಪುಂಡರೀಕನಿಗೆ ಇಷ್ಟಾರ್ಥ ಸಿದ್ಧಿಯಾಗಲಿ ಕಷ್ಟವಿಮುಕ್ತಿಯಾಗಲಿ ಕೈಗೂಡುವುದಿಲ್ಲ.

ಪುಂಡರೀಕನ ಉದ್ಧಾರಕ್ಕೆ ಎಷ್ಟು ಕಡೆಗಳಲ್ಲಿ ಪ್ರಯತ್ನ ನಡೆಯುತ್ತಿದೆ! ಮತ್ತೆಷ್ಟು ದಿಕ್ಕುಗಳಿಂದ ಸಹಾಯ ಒದಗುತ್ತದೆ! ಹಲವರ ಆಕಾಂಕ್ಷೆ, ಹಲವರ ಆಶೀರ್ವಾದ, ಹಲವರ ತಪಸ್ಸು. ಆ ಕೃಪಾಹಸ್ತವು ಕೈಯಾನದಿದ್ದರೆ ಅವನ ಪತನದ ಹಾದಿಯ ಇಳಿಜಾರು ಇನ್ನೂ ಎಷ್ಟು ಕಡಿದಾಗುತ್ತಿತ್ತೊ? ಅವನ ಏಳ್ಗೆ ಮತ್ತೆಷ್ಟು ದೂರಾಂತರವಾಗುತ್ತಿತ್ತೊ ಹೇಳಬಲ್ಲವರಾರು? ಒಂದುಕಡೆ ಮಹಾಶ್ವೇತೆ, ಒಂದುಕಡೆ ಕಪಿಂಜಲ; ಒಂದುಕಡೆ ತಾಯಿ ಲಕ್ಷ್ಮಿ, ಮತ್ತೊಂದು ಕಡೆ ತಂದೆ ಶ್ವೇತಕೇತುವ್ರತಿ; ಜೊತೆಗೆ ತಾರಾಪೀಡಾದಿಗಳ ಕ್ಷೇಮಚಿಂತನೆಯ ನೋಂಪಿ ಬೇರೆ. ಅವನ ಉದ್ಧಾರಕ್ಕೆ ಮಿತ್ರಸ್ನೇಹ, ಪುತ್ರವಾತ್ಸಲ್ಯ, ಸತೀಪ್ರೇಮ ಎಲ್ಲವೂ ಕಂಕಣಕಟ್ಟಿ ನಿಲ್ಲುತ್ತವೆ. ಮತ್ತು, ಆತನ ಹೃದಯರಾಗದ ನಿಶ್ಚಲ-ಉತ್ಕಟ-ಏಕಾಗ್ರತೆಯೂ ತನ್ನ ಶ್ರೇಯಸ್ಸಿಗಾಗಿ ವಿಧಿಯ ಮುಷ್ಟಿಯೊಡನೆ ಹಣಾಹಣಿಯಾಗಿ ಹೋರಾಡುವುದನ್ನೂ ನೋಡುತ್ತೇವೆ.

ಚಂಡಾಲವನಿತೆಯ ವೇಷದಲ್ಲಿದ್ದ ಅವನ ತಾಯಿ ಅವನನ್ನು ಪಂದೊವಲಿನ ಪಂಜರದಲ್ಲಿಟ್ಟು ‘ಕಾಮಪರತೆಯಿಂದಮ್ ಕೆಟ್ಟಯ್’ ಎಂದು ಭರ್ತ್ಸನೆ ಮಾಡುತ್ತಾಳೆ. ಬರಿಯ ಬುದ್ಧಿವಾದದಿಂದ ಯಾರುತಾನೆ ತಿದ್ದು ಪಡೆಯುತ್ತಾರೆ? ಅನುಭವ ಮಾಗಿದಾಗ ಚಿಕ್ಕದೊಂದು ನುಡಿ ಬಾಳಬಟ್ಟೆಯನ್ನೆ ಬದಲಾಯಿಸಲು ಸಮರ್ಥವಾಗುತ್ತದೆ. ತನ್ನ ಹಿಂದಿನ ದುರಂತ ಕಥೆಯೆಲ್ಲವನ್ನೂ ಮರಳಿ ತಿಳಿದ ಶುಕರೂಪಿಗೆ ಆಗ ಅರಿವು ಮೊಳೆಯುತ್ತದೆ. ಆಗ ಜಾನಿಸುತ್ತಾನೆ:

ಸುರಲೋಕಭ್ರಷ್ಟನೆಂ ಮರ್ತ್ಯರೊಳುದಯಿಪ ತಿರ್ಯಕ್ತ್ವದೊಳ್ ನಿಲ್ವ ಚಂಡಾ
ಲರ ಕಯ್ಯೊಳ್ ಬೀಳ್ವ ತೋಲ್ಪಂಜರದ ಪಡಕೆಯೊಳ್ ನಿಲ್ವ ದುರ್ವಾರದುಃಖೋ
ತ್ಕರಮೆಲ್ಲಂ ನೋಡಲೆನ್ನಿಂದ್ರಿಯನಿವಹದ ದೋಷಂ ದಲಿನ್ ಮೀರದಂತಾ
ಗಿರಿಸಲ್ವೇಳ್ಕೆಂದವಂ ನಿಗ್ರಹಿಪ ನಿಯಮದಿಂ ಮೌನದಿಂದಿರ್ದೆನಾಗಳ್.

ನಿಖಿಲೇಂದ್ರಿಯ ನಿಗ್ರಹಕ್ಕೆ ನಿಶ್ಚಯಂಗೆಯ್ದ ಮೇಲೆಯೆ ಪುಂಡರೀಕನ ಜೀವನಪಥವು ಅಧಃಪತನವನ್ನುಳಿದು ಊರ್ಧ್ವಗಾಮಿಯಾಗುತ್ತದೆ: ಕಾಮದ ಹಂದೊವಲಿನ ಹೇಸಿಗೆಯ ಪಂಜರವು ಪ್ರೇಮದ ಕನತ್ಕನಕ ಪಂಜರವಾಗಿ ಪರಿಣಮಿಸುತ್ತದೆ. ‘ಅನಂತರಮೆ ತೋರಿತಿಂದ್ರಪುರದಂತಿರಾ ಪಕ್ಕಣಂ.’

ಕಾವ್ಯದ ಉತ್ತರಭಾಗದಲ್ಲಿ ಮಹಾಶ್ವೇತೆಯ ತಪಸ್ಸು ಕಾದಂಬರಿಯ ತಪಸ್ಸಿಗೆ ಶ್ರದ್ಧೆ ಜೀವ ಉತ್ಸಾಹಗಳನ್ನು ದಾನಮಾಡುವ ಹೊಣೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಪುಂಡರೀಕನು ಎರಡು ಜನ್ಮವೆತ್ತಿ, ಬಾಳಿ, ಮರಳಿ, ಹಿಂತಿರುಗುವವರೆಗೂ ಕಾಯಬೇಕಾದ ಬಹು ದೀರ್ಘಕಾಲಾವಕಾಶದಲ್ಲಿ ಸ್ವತಃ ಮಹಾಶ್ವೇತೆಯೂ ಕೂಡ ಕೆಲವೊಮ್ಮೆಯಾದರೂ ಸಂದೇಹಗ್ರಸ್ತಳಾಗಿದ್ದಳೆಂದರೆ ಅದರಿಂದ ಆಕೆಯ ತಪಸ್ಸಿನ ಮೇಲ್ಮೆ ಒಂದಿನಿತೂ ಕೀಳ್ಪಡುವುದಿಲ್ಲ. ಏಕೆಂದರೆ ಧರ್ಮಜೀವನದಲ್ಲಿ ಶ್ರದ್ಧೆ ಉಚ್ಛ್ವಾಸದಂತಿದ್ದರೆ ಸಂದೇಹ ನಿಃಶ್ವಾಸದಂತೆ. ಸಾಮಾನ್ಯರ ಬಾಳಿನಲ್ಲಿ ಕೆಲವರ್ಷಗಳ ನಿರೀಕ್ಷಣೆಯೇ ಅತಿ ಕಠೋರವಾಗಿ ಕಾಣುತ್ತದೆ. ಅನೇಕ ನರಪ್ರಾಣಿಗಳು ಸೋತು, ಮನಸ್ಸು ಸೋತು, ಪ್ರಾಣಿಗಳಾಗಿ, ಆದರ್ಶದ ಅತೃಪ್ತಿಯಿಂದ ಪಾರಾಗುತ್ತಾರೆ. ತಮಗೆ ಅತಿಯೂ ಅಸಹ್ಯವೂ ಆಗಿರುವ ಮೇಲ್ಮಟ್ಟದ ಕುದಿಹದಿಂದ ಕೆಳಮಟ್ಟದ ತಣ್ಣೆಗಿಳಿದು ಸಂಸ್ಕೃತಿಯ ಸಾಹಸವನ್ನು ಪ್ರಕೃತಿಯ ಸಾಧಾರಣತೆಗೆ ಶರಣು ಮಾಡುತ್ತಾರೆ. ಆ ದೃಷ್ಟಿಯಿಂದ ನೋಡಿದರೆ, ಜನ್ಮಾಂತರಗಳವರೆಗೂ ಕಾಯುವ ಮಹಾಶ್ವೇತೆಯ ಶ್ರದ್ಧೆ ಸಾಹಸಗಳ ಚರಣತಲದಲ್ಲಿ ಆದರ್ಶೋನ್ಮುಖಿಗಳೆಲ್ಲರೂ ಚಂದ್ರಾಪೀಡನಂತೆ ಶಿಷ್ಯತ್ವವನ್ನು ಅಂಗೀಕರಿಸಿ ಹಣೆಮಣಿಯಬೇಕಾಗುತ್ತದೆ.

ಮಹಾಶ್ವೇತೆಯ ಅನುರಾಗವು ಬರಿಯ ಅತನುರಾಗವಾಗಿ ಇದ್ದಿದ್ದರೆ, ಆಕೆಯ ಪ್ರೇಮವು ಅಳೀಕಕಾಮವಾಗಿ ಇದ್ದಿದ್ದರೆ, ಆಕೆಗೆ ತನ್ನ ಗುರಿಯಲ್ಲಿ ಆಶಂಕೆ ಸಂಜನಿಸಿ ನಂಬುಗೆ ಸಡಿಲವಾಗಿದ್ದಿದ್ದರೆ, ವೈಶಂಪಾಯನನು ಬಂದು ತನ್ನೆದುರು ಶೃಂಗಾರ ಭಿಕ್ಷುವಾಗಿ ನಿಂತಂದೇ ಕಥೆಗೂ ವ್ಯಥೆಗೂ ಆದರ್ಶತೆಗೂ ಎಲ್ಲಕ್ಕೂ ತಿಲಬಲಿಯಾಗುತ್ತಿತ್ತು.

ವೈಶಂಪಾಯನನು ಪುಂಡರೀಕನೇ ಎಂದು ಕಟ್ಟಕಡೆಗೆ ಗೊತ್ತಾಗಿದ್ದರೂ ಮೇಲಿನ ವಿಮರ್ಶೆ ನಿಲ್ಲುತ್ತದೆ.

ಸೌಂದರ್ಯದಲ್ಲಾಗಲಿ ತೇಜಸ್ಸಿನಲ್ಲಾಗಲಿ ವೈಶಂಪಾಯನನು ಪುಂಡರೀಕನಿಗೆ ಕಡಮೆಯಿಲ್ಲ. ಮಹಾಶ್ವೇತೆ ಮಾಡಿರುವ ಅವನ ವರ್ಣನೆಯೆ ಅದಕ್ಕೆ ಸಾಕ್ಷಿ.

ಅವನು ತನ್ನನ್ನು ನೋಡಿದ ರೀತಿಯನ್ನೂ ತನ್ನನ್ನು ಮಾತನಾಡಿಸಿದ ರೀತಿಯನ್ನೂ ಮಹಾಶ್ವೇತೆ ಹೇಗೆ ಚಿತ್ರಿಸಿ ಬಣ್ಣಿಸಿದ್ದಾಳೆ! ಆದರೂ ಆಕೆ ‘ಪುಂಡರೀಕದೇವನ ವೃತ್ತಾಂತದಿಮದ ಅಪೇತಕೌತುಕೆ ಮತ್ತು ಅಪಗತಸುಖೆ.’ ಆದ್ದರಿಂದ ಅವನು ಯಾರು ಏನು ಎಂದು ಕೂಡ ವಿಚಾರಿಸಲೆಳಸಲಿಲ್ಲ. ಅವನನ್ನು ನಿವಾರಿಸುವಂತೆ ತರಳಿಕೆಗೆ ಆಣತಿಯಿತ್ತಳಷ್ಟೆ.

ಆ ಇರುಳು ‘ನಿರ್ಮಲ ಚಂದ್ರದ್ಯುತಿ ವರ್ಷಹರ್ಷಿತ ಚಕೋರಾನಂದವಾರ್ಬಿಂದು ಸಂಕುಲದೊಳ್’ ಮಿಂದು ಬಂದ ತಂಗಾಳಿಗೆ ತನುವೊಡ್ಡಿ ಶಿಲಾಪಟ್ಟದಲ್ಲಿ ಪಟ್ಟಿರ್ದು, ‘ಮಿಸುಗುವ ಚಂದ್ರಮಂಡಲದಿನ್ ಅಂದು ಇಳಿತಂದನ ದಿವ್ಯವಾಣಿಯುಂ ಪುಷಿಯೆನಿಸಿತು ಮಾಯ್ದೆನೆಗೆ ಪಾಪಿಗೆ’ ಎಂದು ಮೊದಲಾಗಿ ಆಶಂಕೆಯ ಆಂದೋಳನದಲ್ಲಿ ಆಲೋಚಿಸುತ್ತಿದ್ದಾಗಲೆ ಆ ದ್ವಿಜಕುಮಾರನೂ ಅಲ್ಲಿಗೆ ಐತರುತ್ತಾನೆ:

“ಅಪ್ಪುವೞೆಯಾಸೆಯಿಂ ದೂರದೊಳ್ ನಿಮಿರ್ವ ನಿಡುದೋಳ್ಗಳುಂ ತನ್ನೊಳ್ ತೋಱೆ ಯುಕ್ತಾಯುಕ್ತ ವಿವೇಕಕ್ಕೆ ಪಿಂತೆಗೆದುನ್ಮತ್ತನಂತೆ ಅಚ್ಚ ಬೆಳ್ದಿಂಗಳೊಳೊಯ್ಯನೆ ಬರುತಿರ್ದನ್.”

ಆಗ ಮಹಾಶ್ವೇತೆ “ಇವನೆನ್ನಂ ಕಯ್ಯೆಳಂ ಬಂದು ಮುಟ್ಟಲೊಡಂ ಪತ್ತುವಿಡಲ್ಕೆವೇಳ್ಕುವಸುವಂ………ನಿಷ್ಫಲಮಾಯ್ತಕ್ಕಟ ಮಂದಭಾಗ್ಯಗೆನಗೀ ಪ್ರಾಣಸಂಧಾರಣಂ” ಎಂದು ಕಳವಳಿಸುತ್ತಿರಲು ಜನ್ಮಜನ್ಮಾಂತರದ ಪ್ರೇಮದಿಂದ ಪ್ರೇರಿತನಾಗಿ ವೈಶಂಪಾಯನನು ಹುಚ್ಚನಂತೆ ಮುಂಬರಿದುಕೋರುತ್ತಾನೆ:

“ಎಲೇ ಕುಮುದನೇತ್ರೆ ಮನ್ಮಥ ಸಹಾಯನೀ ಚಂದ್ರಮಂ
ಕೊಲಲ್ ಬಗೆದನೆನ್ನನಾರ್ತನನನಾಥನಂ ದುಃಖಿಯಂ
ಪಲುಂಬಿ ಮರೆವೊಕ್ಕೆನಾಂ ನಿನಗಧೀನಮೀ ಜೀವಿತಂ
ವಿಲಂಬಿಸದೆ ರಕ್ಷಿಸೆನ್ನನಱೆಯೆಂ ಪ್ರತೀಕಾರಮಂ

ಅದನ್ನು ಕೇಳಲೊಡನೆ ನೆತ್ತಿಯಲ್ಲಿ ಉರಿ ಮಸಗಿತು. ಕಿನಿಸು ಕಯ್ಗಣ್ಮಿತು. ‘ಕಣ್ಬನಿಗಿಡಿಗಳಿಂದುರಿಪುವಂತವನಂ ನೀಡುಂ ನೋಡುತ್ತಾವಿಷ್ಟೆಯಂತೆನ್ನನ್ ಆನಱೆಯದೆ

ನುಡಿವನ್ನಮೆನ್ನನೀ ಪರಿ
ಸಿಡಿಲೇತಕೆ ಕೆಡೆದುದಿಲ್ಲ ನಿನ್ನಯ ಸಿರದೊಳ್
ಉಡುಗಿದುದಿಲ್ಲಮುಸಿರ್ ನೂ
ರ್ಮಡಿಯೆನಲೀ ಜಿಹ್ವೆ ಬಿರಿದುದಿಲ್ಲ ದುರಾತ್ಮಾ’

ಎಂದು ನುಡಿದು, ಚಂದ್ರಾಭಿಮುಖಿಯಾಗಿ ಕಯ್ಗಳಂ ಮುಗಿದು ‘ಮಹಾಭಾಗ, ಸಕಲ ಭುವನ ಚೂಡಾಮಣಿಯಪ್ಪ ರೋಹಿಣೀರಮಣ, ಪುಂಡರೀಕನನಾಂ ನೋಡಿದಂದಿನಿಂ ಮತ್ತೊರ್ವ ಪುರುಷನಂ ಮನದೊಳಾದೊಡಂ ಭಾವಿಸದಿರ್ದುದು ನನ್ನಿಯಪ್ಪೊಡೆ ಈ ಅಳೀಕಕಾಮಿ ಗಿಳಿಯಾಗಿ ಪುಟ್ಟುಗೆ’ ಎಂದು ಶಪಿಸಿದಳು. ಮದನಜ್ವರ ವೇಗದಿಂದಿಲೋ ಪಾಪಪರಿಹಾಕದಿಂದಲೋ ಅಥವಾ ತೀವ್ರಶಾಪವಾಙ್ಮಹಿಮೆಯಿಂದಲೋ ಆತನಂದು ‘ಕಡಿದಿಕ್ಕಿದ ಪೆರ್ಮರನಂತೆವೋಲದೇನಹಹ ನಿರೂಪಿಪೆಂ ಕೆಡೆದು ಪೊಂದಿದನಾ ಯಿಳೆಯಲ್ಲಚೇತನಂ.’

ಹಿಂದೆಲ್ಲಿಯೂ ಮಹಾಶ್ವೇತೆಯ ಕೋಪವನ್ನು ಕಂಡರಿಯದ ನಾವು ಭಯಭ್ರಾಂತರಾಗುತ್ತೇವೆ. ಇದ್ದಕ್ಕಿದ್ದ ಹಾಗೆ ಕೋಮಲ ಹೂವು ಕಠೋರ ಸಿಡಿಲಾಗುತ್ತದೆ. ಪವಿತ್ರ ಪ್ರೇಮಕ್ಕಾಗಿಯೇ ಮಹಾಶ್ವೇತೆ ತೆಕ್ಕನೆ ಮಹಾಕಾಳಿಯಾಗುತ್ತಾಳೆ. ತಪಸ್ವಿನಿಯಾದ ಅಬಲೆಯ ಬಲವೇನೆಂಬುದನ್ನು ತೋರುತ್ತಾಳೆ. ಮಹಾಶ್ವೇತೆ ಬರಿಯ ಜಲಜಮುಖಿ ಮಾತ್ರವಲ್ಲ; ಸಮಯ ಬಂದರೆ ಪ್ರಲಯಮುಖಿಯೂ ಆಗುತ್ತಾಳೆ. ಈಗ ಆಕೆಯ ಲಾವಣ್ಯವು ಭವ್ಯತೆಗೇರುತ್ತದೆ. ಲಾಲಿತ್ಯವು ರೌದ್ರಸಂಗಿಯಾಗಿ ಭಕ್ತಿಗೌರವ ಭಾಜನವಾಗುತ್ತದೆ. ಅಲ್ಪತೆ ಮಹತ್ತಿಗೇರುತ್ತದೆ: ಯಾವುದು ಅಪರೀಕ್ಷಿತವಾಗಿದ್ದಿದ್ದರೆ ಸುರಕ್ಷಿತವಾದ ಅಲ್ಪತೆಯೇ ಆಗಿ ಉಳಿಯುತ್ತಿತ್ತೋ ಅದೇ ಪರೀಕ್ಷಿತವಾಗಿ ಮಹತ್ತಿಗೇರುತ್ತದೆ.

ಆಹಾರ ಲಭಿಸದಿದ್ದುರಿಂದ ಹೊಟ್ಟೆಗಿಲ್ಲದೆ ಸತ್ತರೆ ಅದನ್ನು ನಿರಶನವ್ರತ ವೆಂದಾಗಲಿ ಪ್ರಾಯೋಪವೇಶವೆಂದಾಗಲಿ ವಿಷಯ ತಿಳಿದವರಾರೂ ಕರೆಯುವುದಿಲ್ಲ. ಉಣಿಸು ಬಳಿಸಾರಿ ಉಣ್ಣೆಂದು ಬೇಡುತ್ತಿದ್ದರೂ ಹಸಿವೆಯ ಯಮಯಾತನೆಯನ್ನು ತೆಗೆದುಕೊಂಡು ವ್ರತಾಚಾರಿಯಾಗಿರುವಾತನೆ ನಿಜವಾದ ವ್ರತಿ. ಪ್ರಲೋಭದ ಸೆಳೆತವಿಲ್ಲದಿದ್ದರೆ ಇಂದ್ರಿಯನಿಗ್ರಹವೂ ಜಡರೂಢಿಯಾಗಬಹುದು; ಪಾತಿವ್ರತ್ಯವೂ ಪದ್ಧತಿಯಾಗಬಹುದು; ವ್ಯಾಕುಲತೆಯೂ ಆಕಳಿಸಬಹುದು.

ಸ್ವರ್ಗವೇಷಿಯಾದ ಪ್ರಲೋಭನವು ಅಪ್ಪು ಬಾ ಎಂದು ತೋಳ್‌ನೀಡಿ ಮುಂದೆ ನಲಿದಂದು ಅದನ್ನು ಕಡೆಗಣ್ಣಿನಿಂದಲೂ ನೋಡದೆ ವಿಸರ್ಜಿಸಿದಾಗ ಮಾತ್ರ ಸಾಮಾನ್ಯಸ್ತ್ರೀ ಮಹಾಮಹಿಳೆಯಾಗುತ್ತಾಳೆ. ಲಂಕೇಶ್ವರನನ್ನು ಜುಗುಪ್ಸಾಗದೆಯಿಂದ ಚೂರ್ಣೀಕೃತನನ್ನಾಗಿ ಮಾಡಿ, ತಿರಸ್ಕಾರದ ಸಮ್ಮಾರ್ಜನಿಯಿಂದ ಗುಡಿಸಿ, ಕಸದ ಮೂಲೆಗೊತ್ತಿದಂದು ಸೀತೆ ಲೋಕ ಪೂಜ್ಯೆಯಾಗಿದ್ದಾಳೆ. ಸ್ಫುರದ್ರೂಪಿಯಾದರೂ ಅಳೀಕಕಾಮಿಯಾದ ವೈಶಂಪಾಯನನನ್ನು ವಿಸರ್ಜಿಸಿ ಈ ಮಹಾಶ್ವೇತೆ ಜನಕಕನ್ಯೆಗೆ ಹೆಗಲೆಣೆಯಾಗಿದ್ದಾಳೆ.

ವಿವಾಹ ತತ್ವಗಳಲ್ಲಿಯೂ ನರನಾರಿಯರ ಸಂಬಂಧದ ವಿಷಯಗಳಲ್ಲಿಯೂ ಹೊಸಹೊಸ ಬಿರುಕುಗಳೂ ಸಡಿಲಗಳೂ ಸಂದೇಹಗಳೂ ಮೊಗದೋರುತ್ತಿರುವ ಈ ಸಮಯದಲ್ಲಿ ನಮ್ಮ ಮನಸ್ಸು ಪ್ರಾಚೀನಕಾಲದ ಮಹಾ ಮಹಿಳೆಯರ ಚರಣತಲ ಕ್ಷೇತ್ರಕ್ಕೆ ಯಾತ್ರೆ ಹೋಗಲು ನಾಚುತ್ತಿರುವುದೇನೊ ಅರ್ಥವಾಗುತ್ತದೆ. ಆದರೆ ಆ ಯಾತ್ರೆ ಸಂಪೂರ್ಣವಾಗಿ ನಿಂತುಹೋದರೆ ಎಲ್ಲಿ ಅನರ್ಥವುಂಟಾಗುತ್ತದೆಯೋ ಎಂದು ಹೆದರಿಕೆಯೂ ಆಗುತ್ತದೆ.

ಕಾವ್ಯಗಳನ್ನೆಲ್ಲ ಗಂಡಸರು ಬರೆದಿದ್ದಾರೆ; ಅಲ್ಲಿ ಬರುವ ಹಿರಿಯ ಹೆಣ್ಣುಗಳೆಲ್ಲ ಅವರ ಕೈಗಾರಿಕೆ; ಸೀತೆ, ಸಾವಿತ್ರಿ, ದಮಯಂತಿ, ಮಹಾಶ್ವೇತೆಯರೆಲ್ಲ ಪುರಷಹೃದಯದ ಆಶಾಸೂಚಿಗಳೇ ಹೊರತು ಸ್ತ್ರೀಹೃದಯದ ವಿಷಯಸೂಚಿಗಳಲ್ಲ. ಸ್ತ್ರೀಯರೇ ಕಾವ್ಯಗಳನ್ನು ಬರೆದಿದ್ದ ಪಕ್ಷದಲ್ಲಿ ಅಥವಾ ಬರೆಯುವ ಪಕ್ಷದಲ್ಲಿ ಕಥಾನಾಯಿಕೆಯರ ರೀತಿ ಬೇರೆಯಾಗಿರುತ್ತಿತ್ತು. ಅದೂ ಅಲ್ಲದೆ, ಗಂಡಸರೆಲ್ಲ ಹೆಂಗಸರು ಸೀತೆ ಮಹಾಶ್ವೇತೆಯರಾಗಿರಬೇಕೆಂದು ಬೋಧಿಸುತ್ತಾರೆಯೆ ಹೊರತು ತಾವು ಶ್ರೀರಾಮ ಪುಂಡರೀಕರಂತೆ ಇರಬೇಕೆಂದು ಆಗ್ರಹಪಡುವುದಿಲ್ಲ.-ಇಂತಹ ಟೀಕೆಯಲ್ಲಿ ಸ್ವಲ್ಪಮಟ್ಟಿಗೆ ಸತ್ಯವಿರಬಹುದಾದರೂ ಶ್ರೇಯಸ್ಸಿನ ದೃಷ್ಟಿಯಿಂದ ಅದು ಅಪ್ರಕೃತ. ಇಬ್ಬರೂ ರೋಗಿಗಳೆಂದು ಆರೋಗ್ಯವನ್ನೆ ಹಳಿಯುವುದೂ, ಇಬ್ಬರೂ ಸುಳ್ಳುಗಾರರೆಂದು ಸತ್ಯವನ್ನೆ ಅಲ್ಲಗಳೆಯುವುದೂ, ನಿದರ್ಶನಗಳು ಅಪೂರ್ವವೆಂದು ಆದರ್ಶವನ್ನೆ ತಿರಸ್ಕರಿಸುವುದೂ ಪ್ರೇಮದ ದಿವ್ಯತೆಗೆ ಲಕ್ಷಣವಲ್ಲ. ಮತ್ತು ಬಹುಸಂಖ್ಯೆಯ ಜನರು ಅನುಸರಿಸಲಾರದ ಮಾತ್ರಕ್ಕೆ ಬಹುಕಾಲದಿಂದ ಸಮೆದುಬಂದ ಒಂದು ದಾರಿಯನ್ನೆ ತ್ಯಜಿಸುವುದು ಕ್ಷೇಮಂಕರ ಬುದ್ಧಿಯಲ್ಲ. ಎತ್ತರಗಳಿರುವುದು ಎಲ್ಲರೂ ಹತ್ತುತ್ತಾರೆಂದಲ್ಲ, ಎಲ್ಲರೂ ಹತ್ತಬೇಕೆಂದು.

ತನ್ನ ಪ್ರಾಣಮಿತ್ರ ವೈಶಂಪಾಯನನು ಮಹಾಶ್ವೇತೆಯ ಶಾಪದಿಂದ ತೀರಿಕೊಂಡುದನ್ನು ನೋಡಿ ವಿಗತಪ್ರಾಣನಾದ ಚಂದ್ರಾಪೀಡನಿಗಾಗಿ ರೋದಿಸುತ್ತಿದ್ದ ತಂಗಿ ಕಾದಂಬರಿಗೆ ಹೀಗೆಂದು ಉಪದೇಶಿಸುತ್ತದೆ ಮಹಾಶ್ವೇತೆಯ ಶ್ರದ್ಧೆ:

ಎನಗಿದು ದೈವಮೆಂದು ಮನದೊಳ್ ಪರಿಭಾವಿಸಿ ಕಲ್ಲ ಮಣ್ಣ ರೂ
ಪನೆ ಗಡ ಪೂಜಿಸುತ್ತುಮಿರೆ ಸನ್ನಿದವಾದಪುದೆಂದೊಡಕ್ಕ ನೆ
ಟ್ಟನೆ ಮನುಜೇಂದ್ರಚಂದ್ರವೆಸರಿಂದೆಸೆವಗ್ಗದ ಚಂದ್ರಮೂರ್ತಿಯಂ
ಮನಮೊಸೆದರ್ಚಿಸುತ್ತಮಿರೆ ಸನ್ನಿದನಪ್ಪುದಿದಾವ ಸಂದೆಗಂ?