ಉಪಮಾ ಅಲಂಕಾರಕ್ಕೂ ಕಾವ್ಯಕ್ಕೂ ಯಾವ ಸಂಗಮಹಿಮೆ ಇದೆಯೋ ಅದೇ ಸಂಗಮಹಿಮೆ ಮಹೋಪಮಾ ಅಲಂಕಾರಕ್ಕೂ ಮಹಾಕಾವ್ಯಕ್ಕೂ ಅದಕ್ಕಿಂತಲೂ ಮಹತ್ತಾಗಿಯೇ ಇದೆ.

ಉಪಮಾ ಎಂದರೆ ಹೋಲಿಕೆ. ಅಲಂಕಾರಾರ್ಥದಲ್ಲಿ ‘ಬರಿಯ ಹೋಲಿಕೆ’ಯಲ್ಲ: ಸಂಪದ್ಯುಕ್ತವಾದ ಹೋಲಿಕೆ. ಎಂದರೆ ಉಪಮೆಯಿಂದ ಅರ್ಥವಿಶದತೆಗೆ ಅಥವಾ ವಿಷಯ ಸ್ಪಷ್ಟತೆಗೆ ಸಹಾಯವಾದರೆ ಸಾಲದು; ರಸಾನುಭೂತಿಯೂ ಆಗಲೇಬೇಕು, ಅವಶ್ಯವಾಗಿ. ಅಲಂಕಾರ ಎನ್ನಿಸಿಕೊಳ್ಳುವಾಗ ರಸಸ್ಪರ್ಶಿಯಾಗುವುದೇ ಉಪಮೆಗೆ ಮುಖ್ಯ ಪ್ರಯೋಜನ. ಉಳಿದುದೆಲ್ಲ ಅಪ್ರಯೋಜನವಲ್ಲದಿದ್ದರೂ ಉಪಪ್ರಯೋಜನ. ಯಾವುದಾದರೂ ಒಂದು ಗಹನತತ್ತ್ವ ಪ್ರತಿಪಾದನೆ ಮಾಡುವಾಗ ಪಂಡಿತರಲ್ಲದವರಿಗೂ ವಿಷಯವನ್ನು ಸ್ಪಷ್ಟಪಡಿಸುವುದಕ್ಕಾಗಿ ಒಂದು ಹೋಲಿಕೆ ಕೊಡಬಹುದು. ಅಂಥಾದ್ದು ಉದಾಹರಣೆ, ದೃಷ್ಟಾಂತ ಅಥವಾ ಸಾಮತಿ ಎನ್ನಿಸಿಕೊಳ್ಳಬಲ್ಲುದೆ ಹೊರತು ಉಪಮಾ ಅಲಂಕಾರವೆನ್ನಿಸಿಕೊಳ್ಳಲಾರದು. ಹೋಲಿಕೆ ರಸಸ್ಪೃಶವಾಗಿದ್ದರೆ ಮಾತ್ರ ಅಲಂಕಾರವಾಗುತ್ತದೆ. ಸಹೃದಯರಲ್ಲಿ ಭಾವಗಳನ್ನು ಎಚ್ಚರಿಸಿ, ತನ್ಮೂಲಕ ರಸಾನುಭವಕ್ಕೆ ಕಾರಣವಾಗುತ್ತದೆ ಉಪಮಾ ಅಲಂಕಾರ. ಒಮ್ಮೊಮ್ಮೆ ‘ಕಾರಣ’ವಾಗದೆ ‘ನೆವ’ ಅಥವಾ ‘ನಿಮಿತ್ತ ಮಾತ್ರ ಕಾರಣ’ವಾಗುವುದೂ ಉಂಟು. ಬಹುಶಃ ಉಪಮೆ ಅಲಂಕಾರವಾದಾಗ ಕಾರಣದ ಕಡೆಗಿಂತಲೂ ಹೆಚ್ಚಾಗಿ ನೆವದ ಕಡೆಗೇ ನಮ್ಮ ಗಮನ ತಿರುಗಬೇಕಾಗುತ್ತದೆ. ಸತ್ಯಾನ್ವೇಷಣೆಯ ವಿಜ್ಞಾನದಲ್ಲಿ ಮತ್ತು ಸತ್ಯಜಿಜ್ಞಾಸೆಯ ತತ್ವದಲ್ಲಿ ಕಾರಣಕ್ಕೆ ಪ್ರಾಧಾನ್ಯವಿರುತ್ತದೆ. ರಸಾನುಭೂತಿಯ ಕಲಾಪ್ರಪಂಚದಲ್ಲಿ ‘ಕಾರಣ’ದಿಂದ ಪ್ರತಿಕೂಲವಾಗದಿದ್ದರೂ ‘ನೆವ’ವೂ ಸಾಕಾಗುತ್ತದೆ.

ಕಾರಣಸಂಬಂಧವಿರಲಿ ನಿಮಿತ್ತ ಸಂಬಂಧವಿರಲಿ ಒಂದು ಪ್ರಕೃತ ವಿಷಯದ ಭಾವಕೋಶಕ್ಕೆ ಮತ್ತೊಂದು ಅನ್ಯವಿಷಯದ ಭಾವಕೋಶವನ್ನು ಸಂಗಗೊಳಿಸಿ, ಪ್ರಕೃತ ವಿಷಯದ ಭಾವಕೋಶದ ವೃದ್ಧಿಯಿಂದ ರಸವೃದ್ಧಿಯಾಗುವಂತೆ ಮಾಡುವುದೇ ಉಪಮಾ ಅಲಂಕಾರದ ಉದ್ದೇಶ. ಮೊದಲನೆಯದರ ಭಾವಕೋಶ ಪುಷ್ಟಿಗೊಳ್ಳಬೇಕಾದರೆ ಎರಡನೆಯದರ ಭಾವಕೋಶ ಅದಕ್ಕೆ ಅವಿರುದ್ಧವಾಗಿರಬೇಕೆಂದು ಬೇರೆ ಹೇಳಬೇಕಾಗಿಲ್ಲ.

ಪ್ರತಿಯೊಂದು ಪದಕ್ಕೂ ಅರ್ಥ ಮತ್ತು ಭಾವಗಳಿರುವಂತೆ ಅರ್ಥಕೋಶ ಮತ್ತು ಭಾವಕೋಶಗಳೂ ಇರುತ್ತವೆ. ನಿಘಂಟಿನಲ್ಲಿರುವ ಪದದ ಅರ್ಥ ಸರ್ವರಿಗೂ ಸಮಾನ; ಆದರೆ ಭಾವ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸ ವಾಗುತ್ತದೆ. ಅಥವಾ ಒಂದೇ ವ್ಯಕ್ತಿಯಲ್ಲಿಯೂ ಕಾಲದಿಂದ ಕಾಲಕ್ಕೆ ವ್ಯತ್ಯಾಸ ಹೊಂದುತ್ತದೆ. ಭಾವಕೋಶವೆಂದರೆ ಪದದ ಅರ್ಥವನ್ನು ಕೇಂದ್ರ ಬಿಂದುವಾಗುಳ್ಳ ರಾಗಾನುಭವಗಳ, ನಿಷ್ಕೃಷ್ಟತೀರವಿಲ್ಲದ, ಅಸ್ಪಷ್ಟ ಪಾರಾವಾರ ಅಥವಾ ಪರಿವೇಷ. ಭಾವಕೋಶವು ವ್ಯಕ್ತಿಯ ಸ್ವಯಂ ಅನುಭವದಿಂದ ಮಾತ್ರ ವೃದ್ಧಿಯಾಗುತ್ತದೆ. ಅದು ಎಷ್ಟು ಪುಷ್ಟಿಗೊಂಡರೆ ಅಷ್ಟು ಹೆಚ್ಚಾಗುತ್ತವೆ ರಸಗ್ರಹಣಕಾರಿಯಾದ ಸೂಕ್ಷ್ಮಬುದ್ಧಿ ಮತ್ತು ರಸಾನುಭವಕಾರಿಯಾದ ಹೃದಯಶಕ್ತಿ. ಕಾವ್ಯಕಲೆಯ ರಸಾಸ್ವಾದನೆಗೂ ಆನಂದಾನುಭವಕ್ಕೂ ಅತ್ಯಂತ ಆವಶ್ಯಕವಾದ ಸಹಕಾರಿ ಈ ಭಾವಕೋಶ ಪುಷ್ಟಿ.

ಉಪಮಾ ಅಲಂಕಾರವು ಒಂದು ರಸವತ್ತಾದ ಸಾಧನ, ಈ ಭಾವಕೋಶ ಪುಷ್ಟಿಗೆ. ಭಾವಕೋಶಪುಷ್ಟಿಗೆ ನೇರವಾಗಿ ನೆರವಾಗದ ಯಾವ ವಿಧಾನವೂ ಅಲಂಕಾರವಲ್ಲ. ಆದ್ದರಿಂದ ಉಪಮಾ ಅಲಂಕಾರವೊಂದೇ ನಿಜವಾದ ಅಲಂಕಾರ. ಉಪಮಾ ಮೂಲವಲ್ಲದ ಅಲಂಕಾರಗಳು ಅಲಂಕಾರಗಳಲ್ಲ. ಅವುಗಳನ್ನು ಅಲಂಕಾರಗಳೆಂದು ಕರೆದರೂ ಔಪಚಾರಿಕ. ಸ್ವಭಾವೋಕ್ತಿ, ವಿನೋಕ್ತಿ, ಸಂದೇಹಾಲಂಕಾರ, ಆಕ್ಷೇಪಾಲಂಕಾರ ಎಂದು ಮೊದಲಾಗಿ ಒಂದೊಂದು ಉಕ್ತಿವೈಚಿತ್ರ್ಯಕ್ಕೂ ಒಂದೊಂದು ಹೆಸರಿಡುತ್ತಾ ಹೋದರೆ ಅದಕ್ಕೆ ಕೊನೆಯೂ ಇಲ್ಲ; ಬೆಲೆಯೂ ಇಲ್ಲ. ವಿದ್ವತ್ತು ಕಣೆಗೆದರಿದ ಎಯ್ಯಮಿಗದಂತೆ ಭಯಂಕರವಾಗುತ್ತದೆ.

ಉಪಮಾ ಅಲಂಕಾರಕ್ಕೆ ರೂಪೋಪಮೆ, ಗುಣೀಪಮೆ, ಭಾವೋಪಮೆ, ಮಿಶ್ರೋಪಮೆ, ಹೀನೋಪಮೆ, ಮಾಲೋಪಮೆ, ಮಹೋಪಮೆ-ಎಂದು ಬೇಕಾದರೆ ಅನುಕೂಲಕ್ಕೆ ತಕ್ಕಂತೆ ಬೇರೆಬೇರೆ ಹೆಸರಿಟ್ಟುಕೊಳ್ಳಬಹುದು.

[1]

ಮಹೋಪಮೆ ಎಂದರೇನು? ಅದರ ಸ್ಥಾನವೇನು? ಅದರ ಸಾರ್ಥಕ್ಯವೇನು? ಅದನ್ನು ಪೂರ್ವಕಾಲದ ಮಹಾಕವಿಗಳು ಹೇಗೆ ಪ್ರಯೋಗಿಸಿದ್ದಾರೆ? ಇನ್ನಾದರೂ ಅದರಿಂದ ಪ್ರಯೋಜನವಿದೆಯೇ? ಎಂಬುದನ್ನು ಕುರಿತು ಸಂಕ್ಷೇಪವಾಗಿ ವಿಚಾರಮಾಡಲು ಪ್ರಯತ್ನಿಸುತ್ತದೆ, ಈ ಬರವಣಿಗೆ.

ಮಹೋಪಮೆ ಎಂದರೆ ಮಹಾ ಉಪಮೆ. ಮಹಾ ಎಂದರೆ ದೀರ್ಘ ಎಂದಷ್ಟೇ ಅರ್ಥವಾಗದಿದ್ದರೂ ದೀರ್ಘತೆಯೂ ಅದಕ್ಕೊಂದು ಅನಿವಾರ್ಯವಾದ ಆತ್ಮಲಕ್ಷಣ. ಬರಿಯ ದೀರ್ಘತೆಯಲ್ಲಿ ಏನಿದೆ? ಎಂದು ನಿರ್ಲಕ್ಷಿಸುವುದು ಅಲ್ಪಾನುಭವಕ್ಕೆ ಅಥವಾ ಅನುಭವದ ಅಲ್ಪತೆಗೆ ಕುರುಹಾಗುತ್ತದೆ. ಇನ್ನೇನಿಲ್ಲದಿದ್ದರೂ ಬರಿಯ ‘ಮಹಾಗಾತ್ರ’ ಮಾತ್ರದಿಂದಲೇ ಮಹತ್ತು ಸ್ಫುರಿಸುವುದನ್ನು ದಿನದಿನದ ಬಾಳಿನಲ್ಲಿ ನಾವು ಅನುಭವಿಸುತ್ತಿದ್ದೇವೆ. ಬಹುಶಃ ಮಹತ್ತಲ್ಲದುದಕ್ಕೆ ಬೃಹತ್ ಸಂಘಟಿಸುವುದಿಲ್ಲ ಎಂಬುದು ಸೃಷ್ಟಿ ರಹಸ್ಯವೊ ಏನೊ! ಅಂತೂ ಬೃಹತ್ತಾದುದೆಲ್ಲ ಮಹತ್ತಾಗಿ ತೋರುತ್ತದೆ ಎಂಬುದು ನಿರ್ವಿವಾದ. ನಾಲ್ಕಾರು ಅಡಿಗಳೆತ್ತರದಿಂದ ಬೀಳುವ ನಲ್ಲಿಯ ನೀರಿನ ಕಿರುಧಾರೆಗೂ ಮಹತ್ತಾದ ಮಲೆಗಾಡುಗಳ ಹಿನ್ನೆಲೆಯಲ್ಲಿ ಒಂಬೈನೂರಡಿಗಳೆತ್ತರದಿಂದ ಧುಮು ಧುಮು ಧುಮುಕುವ ಭೀಷ್ಮ ಸುಂದರವಾದ ಜೋಗದ ಜಲಪಾತಕ್ಕೂ ವ್ಯತ್ಯಾಸವಿರುವುದು ಗಾತ್ರದಲ್ಲಿ ತಾನೆ! ಆದರೂ ಅವೆರಡೂ ಬೇರೆ ಬೇರೆ ಅನಂತ ದೂರಾಂತರದ ಪ್ರಪಂಚಗಳಿಗೆ ಸೇರುತ್ತವೆ: ಒಂದು ಸ್ವಲ್ಪ ಮತ್ತು ಅಲ್ಪ; ಮತ್ತೊಂದು ದಿವ್ಯ ಮತ್ತು ಭವ್ಯ.

ಉಪಮೆ ಮಾಡುವ ಕೆಲಸವನ್ನೆ ಮಾಡುತ್ತದೆ ಮಹೋಪಮೆ: ಇನ್ನೂ ಬೃಹತ್ತಾಗಿ, ಇನ್ನೂ ಮಹತ್ತಾಗಿ. ಪ್ರಕೃತ ವಿಷಯಕ್ಕೆ ದೂರವಾಗಿರುವುದರ ಶ್ರೀಮಂತ ಭಾವಕೋಶವನ್ನು ಪ್ರಕೃತ ವಿಷಯದ ಭಾವಕೋಶಕ್ಕೆ ಜಲಕ್ಕನೆ ತಗುಳ್ಚುವುದೇ ಉಪಮೆಯ ಕರ್ತವ್ಯ. ‘ಜಲಕ್ಕನೆ ತಗುಳ್ಚು’ವುದೆಂದರೆ ಆ ವ್ಯಾಪಾರವು ಅಪ್ರತ್ಯಕ್ಷ ಮತ್ತು ಅತಿ ಶೀಘ್ರ. ಅದೊಂದು ಆಧ್ಯಾತ್ಮಿಕ ರಾಸಾಯನಿಕ ಕ್ರಿಯೆ:

……..ಹಂತಿಗೊಂಡುದು ಗಗನ ನೀಲಿಮೆಯ
ಜಗಲಿಯೊಳ್ ನೀರ್ವೊರೆಗಳೆದ ಬೆಳ್ಳಿಯುಣ್ಣೆಯಾ
ಮುಗಿಲ ಹಗುರಂ……….

ನೀರಿನ ಹೊರೆಯನ್ನು ಕಳೆದು ಹಗುರವಾದ ಬಿಳಿಯ ಮುಗಿಲು ನೀಲಾಕಾಶದಲ್ಲಿ ಸಾಲಾಗಿ ತೇಲುತ್ತದೆ. ‘ಬೆಳ್ಳಿಯುಣ್ಣೆಯ ಮುಗಿಲ ಹಗುರಂ’ ಎಂಬಲ್ಲಿ ಮುಗಿಲು ಬೆಳ್ಳಿಯ ಹಾಗೆ ಬೆಳ್ಳಗಿತ್ತು, ಹೊಳೆಯುತ್ತಿತ್ತು; ಆದರೆ ಭಾರವಾಗಿರಲಿಲ್ಲ; ಉಣ್ಣೆಯ ಹಾಗೆ ಹಿಂಜಿ ಹಿಗ್ಗಿತ್ತು, ಗರಿಹಗುರವಾಗಿತ್ತು; ಎಂದೆಲ್ಲಾ ವ್ಯಾಖ್ಯಾನ ಮಾಡಬಹುದು. ಸಾದೃಶ್ಯ ಸಂಪತ್ತನ್ನು ವಿವರಿಸಿ ವಿಸ್ತರಿಸಲೂ ಬಹುದು. ಆದರೆ ಅದೆಲ್ಲವೂ ಹಿಂದೆ ಹೇಳಿದ ರಾಸಾಯನಿಕ ಕ್ರಿಯೆಯ ವೈಜ್ಞಾನಿಕ ವಿಭಜನೆಯಾಯಿತೇ ಹೊರತು ಆ ರಾಸಾಯನಿಕ ಕ್ರಿಯೆ ಆಗಲಿಲ್ಲ. ಕವಿ ವರ್ಣಿಸುವ ಚಿತ್ರವೂ ಮತ್ತು ಅನುಭವಿಸುವ ಭಾವವೂ ಹೃದಯದಲ್ಲಿ ತಟಕ್ಕನೆ ಮಿಂಚಾಗಿ ಮಿಂಚಿದರೆ ಮಾತ್ರ ರಸಾನುಭೂತಿ ಪರಮಾವಧಿಗೇರುತ್ತದೆ. ಆ ‘ಮಿಂಚು’ ಅತಿ ಮುಖ್ಯ.[2] ಸೂಕ್ಷ್ಮ ಹಾಸ್ಯವನ್ನು ತಟಕ್ಕನೆ ಗ್ರಹಿಸದಿದ್ದರೆ ಹೇಗೆ ಹಾಸ್ಯವು ರಸವಾಗುವುದಕ್ಕೆ ಬದಲಾಗಿ ಬುದ್ಧಿಯ ಚರ್ಚೆ ಸರಿಯೆಂದೊಪ್ಪುವ ಸಪ್ಪೆಯಾಗುತ್ತದೆಯೊ ಹಾಗೆಯೆ ಸಾದೃಶ್ಯ ಸಂಪತ್ತಿಯ ಆಯವ್ಯಯದ ಪಟ್ಟಿಯನ್ನು ಲೆಕ್ಕಾಚಾರ ಹಾಕಿ, ತರುವಾಯ ಉಪಮೆಯಿಂದ ರಸವನ್ನು ಹಿಂಡಲು ಹೊರಟರೆ ಉತ್ತಮ ಪರಿಣಾಮ ಲಭಿಸುವುದಿಲ್ಲ. ‘ಪರಿಣಾಮರಮಣೀಯ’ವಾಗುವುದಿಲ್ಲ. ಏಕೆಂದರೆ ರಸಾನುಭೂತಿ ಒಂದು ‘ಮಿಂಚು’; ಬರಿಯ ‘ತಯಾರಿಕೆ’ಯಲ್ಲ. ಪ್ರತಿಭಾಶಾಲಿಯಾದ ಕವಿಯಲ್ಲಿಯೆ ಆಗಲಿ ಅಥವಾ ಉತ್ತಮ ಸಂಸ್ಕಾರದ ಸಹರದಯನಲ್ಲಿಯೆ ಆಗಲಿ ಉಪಮಾಸೃಷ್ಟಿ ಹೊಳೆಯುತ್ತದೆ; ಬೆಳೆಯುವುದಿಲ್ಲ. ಬೆಳೆಯುವುದೇ ಇಲ್ಲವೆಂದಲ್ಲ. ಸಂಸ್ಕಾರ ಪಕ್ವವಾಗಬೇಕಾದರೆ ಅನೇಕ ಅನುಭವಗಳು ಸೇರಿ ಭಾವಕೋಶ ಬೆಳೆದಿರಲೇಬೇಕು. ಆದರೆ ಆ ಬೆಳವಣಿಗೆ ಅಂತಃಶ್ಚಿತ್ತದಲ್ಲಿ ಗುಪ್ತವಾಗಿರುತ್ತದೆ; ಸುಪ್ತವಾಗಿರುತ್ತದೆ. ಮೆಟ್ಟಿದೊಡನೆ ಬುಸ್ಸೆಂದು ಹೆಡೆಯೆತ್ತುವ ನಾಗರ ಹಾವಿನಂತೆ ಸುರುಳಿ ಸುತ್ತಿಕೊಂಡಿರುತ್ತದೆ. ಬೆಳೆಯುವುದೆಲ್ಲ ಮನಃಶಾಸ್ತ್ರದ್ದು; ಹೊಳೆಯುವುದೆಲ್ಲ ಕಾವ್ಯದ್ದು.

ಬೆಳ್ಳಿಯನ್ನು ರೂಪಾಯಿಯ ಅವಸ್ಥೆಯಲ್ಲಿ ಮಾತ್ರ ನೋಡಿದ್ದರಾಗಲಿ, ಉಣ್ಣೆಯನ್ನು ಬೀದಿಯಲ್ಲಿ ಅಲೆಯುವ ಒಂದೆರಡು ಕುರಿಗಳ ಚರ್ಮದ ಅವಸ್ಥೆಯಲ್ಲಿ ಮಾತ್ರ ಸಂಧಿಸಿದ್ಧರಾಗಲಿ, ಅಂತಹ ವಾಚಕನಿಗೆ ‘ಬೆಳ್ಳಿಯುಣ್ಣೆಯ ಮುಗಿಲ ಹಗುರಂ’ ಎಂಬ ಅಲಂಕಾರವು ಅರ್ಥವಾದರೂ ವ್ಯರ್ಥ. ಏಕೆಂದರೆ, ಬೆಳ್ಳಿಯನ್ನೂ ಉಣ್ಣೆಯನ್ನೂ ಸ್ವಲ್ಪ ಮಟ್ಟಿಗಾದರೂ ರಾಶಿಯ ಸ್ಥಿತಿಯಲ್ಲಿ ಕಲ್ಪನೆಯಲ್ಲಾದರೂ, ನೋಡಿ ಮುಟ್ಟಿ ಮೆಚ್ಚಿದವನಿಗೆ ಒದಗುವ ಚಿತ್ರವಾಗಲಿ ಭಾವವಾಗಲಿ ಅವನಿಗೆ ದೊರೆಯುವುದಿಲ್ಲ. ಎರಡನೆಯವನಿಗೆ ಕೂಡ ಬೆಳ್ಳಿ ಮತ್ತು ಉಣ್ಣೆ ಎಂಬ ಪದಗಳಿಂದ ಮನಸ್ಸಿಗೆ ಬರಬೇಕಾದದ್ದು ಆ ಪದಾರ್ಥಗಳಲ್ಲ. ಆ ಪದಾರ್ಥಗಳ ರೂಪ ಗುಣಗಳಿಂದ ಪರಿಪುಷ್ಟವಾದ ಭಾವಕೋಶ ಸ್ಥಿತಿ. ಹಾಗೆ ಉದ್ದೀಪ್ತವಾದ ಆ ಭಾವಕೋಶವನ್ನು ಬಾನ್ನೀಲಿಯಲ್ಲಿ ತೇಲುವ ಬೆಳ್ಮುಗಿಲಿಗೆ ‘ಜಲಕ್ಕನೆ ತಗುಳ್ಚು’ವುದು ಉಪಮೆಯ ಉದ್ದೇಶ.

ವಿಸ್ತಾರಗೊಂಡರೆ, ವಿವರ ವರ್ಣನೆಯಿಂದ ದೀರ್ಘವಾದರೆ, ಬೃಹತ್ತಾದರೆ ಉಪಮೆ ಮಹೋಪಮೆಯಾಗುತ್ತದೆ. ಹಿಂದೆ ಹೇಳಿದಂತೆ, ಬೆಳ್ಳಿಯನ್ನು ರೂಪಾಯಿಯ ಅವಸ್ಥೆಯಲ್ಲಿ ಮಾತ್ರ, ಉಣ್ಣೆಯನ್ನು ಕುರಿಯ ಚರ್ಮದ ಸ್ಥಿತಿಯಲ್ಲಿ ಮಾತ್ರ ನೋಡಿರುವಾತನಿಗೆ ಆ ಉಪಮೆ ಬಹುಮಟ್ಟಿಗೆ ವ್ಯರ್ಥವಾಗುತ್ತದೆ; ರಾಶಿ ಸ್ಥಿತಿಯಲ್ಲಿ ಅನುಭವಿಸಿದಾತನಿಗೆ ಪೂರ್ಣ ಸಾರ್ಥಕತೆ ಲಭಿಸುತ್ತದೆ. ಹಾಗೆ ರಾಶಿರಾಶಿಯಾಗಿ ನೋಡಿ ಮುಟ್ಟಿ ಅನುಭವಿಸುವುದನ್ನು ಇನ್ನೂ ವಿವರವಾಗಿ, ಚಿತ್ರಪೂರ್ಣವಾಗಿ, ಭಾವಪೂರ್ಣವಾಗಿ, ಹಿನ್ನೆಲೆಯೊಡನೆಯೂ ಸನ್ನಿವೇಶ ಸಹಿತವಾಗಿಯೂ ವರ್ಣಿಸಿ, ಅಂತಹ ಬೆಳ್ಳಿಯಂತೆ, ಅಂತಹ ಉಣ್ಣೆಯಂತೆ ‘ಮುಗಿಲರಾಶಿಯ ಹಗುರ ಹಬ್ಬಿತ್ತು’ ಎಂದು ದೀರ್ಘವಾಗಿ ಬಣ್ಣಿಸಿದರೆ ಈ ಚಿಕ್ಕ ಉಪಮೆಯೆ ಮಹೋಪಮೆಯ ಮಟ್ಟಕ್ಕೂ ಪಟ್ಟಕ್ಕೂ ಏರಬಹುದು. ಆಗ ಬೆಳ್ಳಿಯನ್ನೂ ಉಣ್ಣೆಯನ್ನೂ ರಾಶಿ ರಾಶಿಯಾಗಿ ನೋಡದಿರುವಾತನಿಗೂ, ಆತನ ಕಲ್ಪನಾಶಕ್ತಿ ಸಜೀವವಾಗಿದ್ದರೆ, ಹಾಗೆ ನೋಡಿದಂತೆಯೇ ಅನುಭವವಾಗಿ, ಚಿತ್ರವು ರಮಣೀಯವಾಗಿ ಭಾವವು ಉಜ್ಜ್ವಲವಾಗುತ್ತದೆ. ಆಗ ಉಪಮೆ ಹೆಚ್ಚು ಭೂಮವಾಗಿ ಹೆಚ್ಚು ಸಾರ್ಥಕವಾಗುತ್ತದೆ; ಮಹೋಪಮೆಯಾಗುತ್ತದೆ.

ಕಾವ್ಯವೋದುವ ವ್ಯಕ್ತಿ ತನಗೆ ತಾನೆ ಬಹುಕಾಲದ ಅನುಭವದಿಂದ ತನ್ನ ಭಾವಕೋಶವನ್ನು ತುಂಬಿಕೊಂಡಿರಬೇಕಾಗುತ್ತದೆ. ಹಾಗೆ ಭಾವಕೋಶ ತುಂಬಿರದಿದ್ದರೆ ಉಪಮೆಯ ಉದ್ದೇಶ ವಿಫಲ. ಭಾವಕೋಶ ಬರಿದಾಗಿರುವಾತನಿಗೂ ಅಥವಾ ಅಲ್ಪಸ್ವಲ್ಪ ತುಂಬಿರುವಾತನಿಗೂ ಮಹೋಪಮೆ ಬಹಳ ಉಪಕಾರ ಮಾಡುತ್ತದೆ. ಓದುಗನೇ ಬಹುಕಾಲದ ಪ್ರಯತ್ನದಿಂದಲೂ ಶ್ರಮದಿಂದಲೂ ಪಡೆಯಬಹುದಾದ ಅನುಭವಗಳನ್ನೆಲ್ಲ ಮಹೋಪಮೆ ಒಟ್ಟಿಗೆ ತಂದುಕೊಡುತ್ತದೆ. ಆ ಅನುಭವಗಳು ಕವಿಯ ಅನುಭವಗಳಾಗಿಯೂ ಹೊರಹೊಮ್ಮಿರುವುದರಿಂದ ಹೊಸತಾಗಿಯೂ ರಸವತ್ತಾಗಿಯೂ ಇರುತ್ತವೆ.

ಹಾಗೆಂದು ಹೇಳಿ, ಸಣ್ಣ ಕವನಗಳಲ್ಲಿಯೂ ಭಾವಗೀತೆಯಲ್ಲಿಯೂ ಬರುವ ಉಪಮೆಗಳನ್ನೆಲ್ಲ ವಿಸ್ತರಿಸಿ ಮಹೋಪಮೆಗಳನ್ನಾಗಿ ಮಾಡಲೆಳಸಿದರೆ ಅಸಂಗತವಾಗುತ್ತದೆ: ಭೀಮನ ಗದೆಯನ್ನು ಹಸುಳೆಯ ಕೈಗೆ ಕೊಟ್ಟಂತೆ. ಅದರಿಂದ ಉಪಕಾರವಿಲ್ಲ; ಅಪಾಯವಿದೆ. ವಿಕಾರವಾಗುವುದು ಒಂದುವೇಳೆ ತಪ್ಪಿದರೂ ಹಾಸ್ಯಾಸ್ಪದವಾಗುವುದು ತಪ್ಪುವುದಿಲ್ಲ.

ಮಹಾಕಾವ್ಯಗಳಿಗೆ ಮಾತ್ರ ಮಹೋಪಮೆ ಒಪ್ಪುತ್ತದೆ. ಗರುಡಗಂಬವಿರಬೇಕಾದ್ದು ಗುಡಿಯ ಮುಂದೆ. ಕೊಟ್ಟಿಗೆಯಲ್ಲಿ ಅದನ್ನು ನಟ್ಟು, ಅದಕ್ಕೆ ದನದ ದಾವಣಿ ಕಟ್ಟಿದರೆ! ದೇವಾಲಯಗಳಲ್ಲಿದ್ದ ಉತ್ತಮ ಶಿಲ್ಪಕೃತಿಯ ಎನಿತೋ ಕಲಾಶಿಲೆಗಳು ಮುಖ ಅಡಿಯಾಗಿ, ಬೆನ್ನು ಮೇಲಾಗಿ, ಬಟ್ಟೆಯೊಗೆಯುವ ಕಲ್ಲುಚಪ್ಪಡಿಗಳಾಗಿಲ್ಲವೇನು? ಯಾವುದರ ಪ್ರಯೋಜನ ಎಲ್ಲಿ ಪರಮವೋ ಅಲ್ಲಿದ್ದರೆ ಅದಕ್ಕೆ ಪರಮ ಬೆಲೆ: ಸೌಂದರ್ಯಜಗತ್ತಿನಲ್ಲಿ ಅದೇ ಪರಮ ಕಲೆ. ರಸದ ಅರಸಿಕೆಗೆ ಔಚಿತ್ಯವೆ ಸಿಂಹಾಸನ.

ಒಂದು ಗೊತ್ತಾದ ಕಾರ್ಯಕ್ಕಾಗಿ ಒಂದು ಗೊತ್ತಾದ ಸ್ಥಳಕ್ಕೆ ಸ್ವಲ್ಪ ದೂರ ಮಾತ್ರ ಪ್ರಯಾಣಮಾಡುವಾತನಿಗೆ ಅಡ್ಡದಾರಿಗಳಲ್ಲಿ ಅಡ್ಡಾಡುವುದು ಅಹಿತಕರ ಮತ್ತು ನಿಷಿದ್ಧ. ಶೀಘ್ರವಾಗಿ ಪೂರೈಸಬೇಕಾದ ಕರ್ತವ್ಯವಿರುವುದರಿಂದ ಆತನ ಅಡ್ಡದಾರಿಯ ಅಡ್ಡಾಟವು ಒಂದು ದೊಡ್ಡ ಅಪರಾಧ. ಅಂತಹನು ಕರ್ತವ್ಯಭ್ರಷ್ಟ, ಮತ್ತು ಗುರಿಗೇಡಿ. ಅಂತಹ ಅಡ್ಡಾಟದಿಂದ ಅವನಿಗೂ ಇತರರಿಗೂ ಕಷ್ಟನಷ್ಟಗಳಲ್ಲದೆ ಬೇರೆಯ ಫಲ ದೊರೆಯುವ ಸಂಭವವಿರುವುದಿಲ್ಲ.

ಆದರೆ ಮಹಾಯಾತ್ರೆ ಹೊರಡುವಾತನ ವಿಷಯವೇ ಬೇರೆ. ಅಂತಹ ಪರಿವ್ರಾಜಕನಿಗೆ ದಾರೆಯೆಲ್ಲವೂ ಗುರಿಯೇ; ಯಾತ್ರೆಯುದ್ದಕ್ಕೂ ಆತನು ತೀರ್ಥದರ್ಶಿ ಮತ್ತು ಕ್ಷೇತ್ರಸ್ಪರ್ಶಿ. ಅವನದು ವಿರಾಮಾಯಣ. ಅವನಿಗೆ ಅವಸರವಿಲ್ಲ. ನಡೆದು ನಡೆದು ದಣಿದಾಗ ದಣಿವಾರುವವರೆಗೂ ಕೂತುಕೊಳ್ಳುತ್ತಾನೆ. ನೀರಡಿಕೆಯಾದರೆ ನಾಲ್ಕಾರು ಮೈಲಿಗಳಾಚೆ ಕಾಣಬಹುದಾದ ಸರೋವರಕ್ಕಾಗಿ ಅಡ್ಡದಾರಿ ಹಿಡಿಯುತ್ತಾನೆ. ನೀರ್ಕುಡಿದು ತಣಿದಮೇಲೆ, ಮರಳಿ ತನ್ನ ದಾರಿಗೆ ಸೇರಿ, ಹೊಸತುಗೊಂಡ ಹುರುಪಿನಿಂದ ಮುಂದುವರಿಯುತ್ತಾನೆ. ಎಲ್ಲಿ ಬೈಗಾದರಲ್ಲಿ ಬಳಿಯ ಹಳ್ಳಿಯಲ್ಲಿ ತಂಗುತ್ತಾನೆ. ದಾರಿ ನಡೆಯುವಾಗ ಯಾರಾದರೂ ‘ಹತ್ತು ಮೈಲಿ ದೂರದಲ್ಲಿ ಒಂದು ಗೇರುಸೊಪ್ಪೆಯಿದೆ’ ಎಂದರಾಗಲಿ, ‘ಹದಿನೈದು ಮೈಲಿ ದೂರದಲ್ಲಿ ಒಂದು ಹಳೆಬೀಡೋ ಬೇಲೂರೋ ಸೋಮನಾಥಪುರವೋ ಇದೆ’ ಎಂದರಾಗಲಿ, ಸರಿ, ಅಡ್ಡದಾರಿ ಹಿಡಿಯುತ್ತಾನೆ. ಅದರಿಂದ ನಷ್ಟವಿಲ್ಲ. ಆ ಜಲಪಾತವನ್ನೊ ಆ ಕಲೆಯ ಬಲೆಯ ದೇಗುಲವನ್ನೊ ಮನದಣಿಯೆ ನೋಡಿ ಹೊಸಜೀವ ತುಂಬಿಕೊಳ್ಳುತ್ತಾನೆ. ಬೇಸರ ಪರಿಹರಿಸಿಕೊಳ್ಳುತ್ತಾನೆ. ಏಕನಾದದಂತಾಗುತ್ತಿದ್ದ ದಾರಿಯನ್ನು ವಿವಿಧ ಸುಸ್ವರ ಮೇಳವನ್ನಾಗಿ ಮಾರ್ಪಡಿಸಿಕೊಳ್ಳುತ್ತಾನೆ. ಇಮ್ಮಡಿಸಿದ ಹುರುಪಿನಿಂದ, ಆನಂದದಿಂದ, ಉಲ್ಲಾಸದಿಂದ, ಉತ್ಸಾಹದಿಂದ ಹಾಡಿಕೊಳ್ಳುತ್ತಾ ಬಂದು, ಮತ್ತೆ ತನ್ನ ಬಟ್ಟೆವಿಡಿದು ಮುಂಬರಿಯುತ್ತಾನೆ. ಹೋಗುತ್ತಾ ಹೋಗುತ್ತಾ ಅವನ ಅನುಭವ ಹೆಚ್ಚುತ್ತದೆ. ಭಾವಕೋಶ ಬೆಳೆಯುತ್ತದೆ. ಆ ಯಾತ್ರೆ ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತದೆ; ಇನ್ನೂ ಭಾವಮಯವಾಗುತ್ತದೆ. ಭಿಕಾರಿ ಬೀದಿವರಿಯುತ್ತಾ ಶ್ರೀಮಂತನಾಗುವ ಭವ್ಯವಾದ ಪವಾಡ ದೃಶ್ಯವನ್ನು ಸಂಧಿಸುತ್ತೇವೆ. ಅಂತಹ ಪರಿವ್ರಾಜಕನೊಡನೆ ಅರೆತಾಸು ಮಾತಾಡಿದರೆ ಸಾಕು, ನಾವೇ ಯಾತ್ರೆಮಾಡಿದಂತಾಗುತ್ತದೆ: ಹೊಳೆ, ಕೆರೆ, ಹಳ್ಳಿ, ಕಾಡು, ಪಟ್ಟಣ, ಪರ್ವತ, ಜಲಪಾತ, ದೇವಾಲಯ, ತರತರದ ಜಂತುಗಳು, ವಿವಿಧ ಶೀಲದ ಮಾನವರು!-ಕೂತಲ್ಲಿಯೆ ಯಾತ್ರೆಯಾಗುತ್ತದೆ. ಆತನ ಬೆನ್ನ ಜೋಳಿಗೆ ಪೊಳ್ಳಾಗಿರಬಹುದು; ಆದರೆ ಮನಸ್ಸಿನ ಜೋಳಿಗೆ ಕಾಳಿಡಿದು ಸಿಡಿಯುವಂತಿರುತ್ತದೆ.

ಮಹಾಕಾವ್ಯವು ಮೇಲೆ ಹೇಳಿದ ಮಹಾಯಾತ್ರೆಯಂತೆ. ಮಹೋಪಮೆ ಅಲ್ಲಿಯೆ ಕೊಟ್ಟಿರುವ ಆ ಯಾತ್ರೆಯ ವರ್ಣನಾ ಚಿತ್ರದಂತೆ.

‘ಮಹಾಯಾತ್ರೆಯಂತೆ’ ಎಂದಷ್ಟೇ ಹೇಳಿದ್ದರೆ ಉಪಮೆಯಾಗುತ್ತಿತ್ತು. ಅದರ ಬೃಹಚ್ಚಿತ್ರವರ್ಣನೆ ಮಹೋಪಮೆಯಾಗಿದೆ. ಆಗಿರದಿದ್ದರೂ ಆಗಬಹುದಾದ ಲಕ್ಷಣಗಳನ್ನು ಒಳಗೊಂಡಿದೆ. ಮಹಾಯಾತ್ರೆಗೆ ಜಲಪಾತ, ದೇವಾಲಯ ಮೊದಲಾದವುಗಳ ದರ್ಶನಗಳಿರುವಂತೆ ಮಹಾಕಾವ್ಯಕ್ಕೆ ಮಹೋಪಮೆಗಳಿರುತ್ತವೆ: ಸುದೀರ್ಘ ದಾರಿಯ ಬೇಸರದ ಪರಿಹಾರ, ನವಾನುಭವಗಳ ಸಂಪಾದನೆ, ಉಲ್ಲಾಸಕರವಾದ ವಿವಿಧ ಭಾವಗಂಗಾಸ್ನಾನ, ಪಯಣಕ್ಕೆ ಆವಶ್ಯಕವಾಗಿ ಬೇಕಾದ ಸಲಕರಣೆಗಳ ಸಂಗ್ರಹ-ಇವೆಲ್ಲವೂ ಮಹೋಪಮೆಗಳಿಂದ ಸಿದ್ಧಿಸುತ್ತವೆ.

ಯಾವುದು ತನಗೆ ತಾನೆ ಇದ್ದಿದ್ದರೆ ಸಾಧಾರಣವಾಗಿಯೆ ಉಳಿಯುತ್ತಿತ್ತೊ ಅದು ಮಹೋಪಮೆಯ ಸಾನ್ನಿಧ್ಯದಲ್ಲಿ ಮಹತ್ತಿಗೇರುತ್ತದೆ: ಮನುಷ್ಯ ಸಾಮಾನ್ಯವಾಗಿರುವ ತಲೆ ಕೀರಿಟಧಾರಣೆ ಮಾಡಿ ದೊರೆತನಕ್ಕೇರುವಂತೆ. ಅಂಗಿ ಬಿಚ್ಚಿ ನಿಲ್ಲಿಸಿದರೆ ಸಾಮಾನ್ಯವಾಗಿ ತೋರುವಾತನಿಗೆ ರಣ ವಸ್ತ್ರಗಳನ್ನುಡಿಸಿ, ರಣಾಲಂಕಾರಗಳನ್ನು ತೊಡಿಸಿ, ಚಿನ್ನದ ಮೂಲಾಮಿನಿಂದ ಹೊಳೆಯುವ ಕಟಿಬಂಧನಕ್ಕೆ ಒರೆಗೂಡಿದ ರಣಖಡ್ಗವನ್ನು ಸಿಕ್ಕಿಸಿ, ರಣತೇಜಿಯಮೇಲೆ ಕೂರಿಸಿದರೆ,-ದಶದಿಕ್ಕುಗಳನ್ನೂ ತನ್ನ ಧವಳಕೀರ್ತಿಯಿಂದ ಬೆಳ್ಳಂಗೊಳಿಸುವ ಮಹಾಪ್ರತಾಪಶಾಲಿಯಾದ ಸೇನಾಪತಿಯಾಗುತ್ತಾನೆ. ವೇಷಮಾತ್ರವೇ ಅದಕ್ಕೆ ಕಾರಣವಾಗಿ ತೋರಿದರೂ, ವಿಚಾರಿಸಿ ನೋಡಿದರೆ, ಆ ವೇಷವು ನಮ್ಮಲ್ಲಿ ಪ್ರಚೋದಿಸುವ ಭಾವಕೋಶವೇ ಅದಕ್ಕೆ ನೈಜಕಾರಣವೆಂದು ಗೊತ್ತಾಗುತ್ತದೆ. ನಿಜವಾಗಿಯೂ ಸ್ವಭಾವತಃ ಪ್ರತಾಪಶಾಲಿಗಳಾದ ಅನೇಕ ಸೇನಾಪತಿಗಳು ಆ ವೇಷವನ್ನೇ ಧರಿಸಿ ಕಾಳೆಗವಾಡಿ ಕೀರ್ತಿವಂತರಾಗಿದ್ದಾರೆ. ಆದ್ದರಿಂದ ಆ ವೇಷಕ್ಕೂ ಅವರ ಪ್ರತಾಪಕ್ಕೂ ಒಂದು ಭಾವಸಂಬಂಧ ಕಲ್ಪಿತವಾಗಿದೆ. ಆದ್ದರಿಂದಲೆ ಆ ವೇಷಧಾರಣೆ ಮಾಡಿದ ಸಾಧಾರಣನೂ ನಮಗೆ ಪ್ರತಾಪಶಾಲಿಯಂತೆ ತೋರುತ್ತಾನೆ.

ಮೇಲಿನ ಉಪಮೆ ಮಹೋಪಮೆ ಹೇಗೆ ಮಹತ್ತನ್ನು ದಾನಮಾಡುತ್ತದೆ ಎಂಬುದನ್ನು ವಿವರಿಸುತ್ತದೆ. ಅಲ್ಲದೆ ಪರಿಚಿತವಾದುದರ ಸಹಾಯದಿಂದ ಪರಿಚಯ ದೂರವಾದುದನ್ನು ಅನುಭವಕ್ಕೆ ತರುತ್ತದೆ.

ಅತ್ಯಂತ ಅಧೋಲೋಕದಲ್ಲಿ ಹೊಸದಾಗಿ ಸೃಷ್ಟಿಸಿದ್ದ ನರಕಸೀಮೆಯಿಂದ ಹೊರಟ ದೇವರ ವೈರಿಯಾದ ಸೇಟನ್ನನು ‘ಖೇಯಾಸ್’ ಹೆಸರಿನ ಅಪಾರವಾದ ತಮಸ್ಸಿನ ಆಕಾಶ ವಿಸ್ತೀರ್ಣವನ್ನು ಲಂಘಿಸುವುದನ್ನು ಚಿತ್ರಿಸುವಾಗ ಹೀಗೆ ವರ್ಣಿಸಿದ್ದಾನೆ ಮಿಲ್ಟನ್ ಮಹಾಕವಿ:

Meanwhile the Adversary of God and Man,
Satan, with thoughts inflamed of highest design,
Puts on swift wings, and towards the Gates of Hell
Explores his solitary flight: sometimes
He scores the right hand coast, sometimes the left:
Now shaves with level wing the Deep, then soars
Up to the fiery concave towering high.-
As when far off at sea a fleet descried
Hangs in the clouds, by equinoctial winds
Close sailing from Bengala, or the Isles
Of Ternate and Tidore, whence merchants bring
Their spicy durgs: they on the trading flood
Thro’ the wide Ethiopian to the Cape
Ply stemming nightly towards the Pole. So seemed
Far off the flying Fiend……

ವಿಕ್ಷುಬ್ಧ ಸಾಗರದ ಮಧ್ಯೆ, ನೊರೆನೊರೆಯಾಗಿ ಭೋರ್ಗರೆವ ಮಹಾ ತರಂಗಗಳ ತಾಡನದಿಂದ ತತ್ತರಿಸುತ್ತಾ, ಕಡಲಿನ ನೀರೊಡಲನ್ನು ಸೀಳಿ, ತುಂತುರಿನ ಮಂಜು ಮುಗಿಲುಗಳನ್ನು ಬಗೆಬಗೆದು, ತೂರಿ, ತೋರಿ, ಹೋರಿ ಬರುತ್ತಿರುವ, ಒಂದು ಹಡಗನ್ನಲ್ಲ, ಒಂದು ನೌಕಾ ಸಮೂಹವನ್ನೇ ಚಿತ್ರಿಸಿಕೊಂಡು ಅನುಭವಿಸುವಾತನ ಭಾವಕೋಶ ಎಷ್ಟು ಉಜ್ವಲವಾಗುತ್ತದೆ! ಎಂತಹ ಭವ್ಯತೆಗೇರುತ್ತದೆ! ಅದರಲ್ಲಿಯೂ ದೂರದ ತೀರದಲ್ಲಿ ನಿಂತುನೋಡುತ್ತಿರುವ ನಮಗೆ ಆ ನೌಕಾಸ್ತೋಮದ ಭಯಂಕರ ಹೋರಾಟವೂ ಸಲಿಲ ಘೋಷವೂ ಕಲ್ಪನಾ ಮಾತ್ರ ವೇದ್ಯ. ಕಣ್ಣಿಗೆ ಕಾಣುವಷ್ಟರಿಂದ ಊಹಿಸಲು ಮಾತ್ರ ಸಾಧ್ಯ. ಆ ಚಿತ್ರದಿಂದ ಉಜ್ವಲವಾದ ಸಹೃದಯನ ಭಾವಕೋಶವನ್ನು ಸೇಟನ್ನಿನ ಮಹಾಲಂಘನಕ್ಕೆ ‘ಜಲಕ್ಕನೆ ತಗುಳ್ಚಿ’ ಉಪಮೇಯಕ್ಕೆ ಎಂತಹ ಮಹತ್ತು ಬೃಹತ್ತುಗಳನ್ನು ದಯಪಾಲಿಸಿದ್ದಾನೆ ಮಹಾಕವಿ!

ಮಹೋಪಮೆಯಲ್ಲಿ ಪರಿಣಾಮರಮಣೀಯತೆಯೇ ಅಗ್ರಗಣ್ಯ ಫಲ ಮತ್ತು ಪರಮಗಮ್ಯ. ಅವಯವ ಸಾದೃಶ್ಯ ಇರಬಹುದು; ಅಥವಾ ಇಲ್ಲದಿರಬಹುದು. ‘Ternate’ಗೆ ಸಾದೃಶ್ಯವಾವುದು? ‘Tidore’ಗೆ ಸಾದೃಶ್ಯ ಎಲ್ಲಿ? ವ್ಯಾಪಾರಿಗಳಿಗೂ ಅವರು ಹಡಗುಗಳಲ್ಲಿ ತುಂಬಿರುವ ಸಂಬಾರದ ಸಾಮಾನುಗಳಿಗೂ ಸಾದೃಶ್ಯಸಂಪತ್ತಿಯೇನು? ಎಂದು ಮೊದಲಾಗಿ ವಿದ್ವತ್ತು ಕಲೆಯ ತಲೆಯ ಹೇನುಹಿಕ್ಕುತ್ತಾ ಕುಳಿತುಕೊಂಡರೆ ಅದಕ್ಕಷ್ಟೇ ಲಾಭ: ತಲೆತುರಿಕೆ ಕಡಮೆಯಾಗುತ್ತದೆ.

ಸಂಸ್ಕಾರಗಳನ್ನು ಉದ್ದೀಪನಗೊಳಿಸಿ ಮಹೋಪಮೆ ತನ್ನ ಕಾರ್ಯಸಾಧನೆ ಮಾಡಿಕೊಳ್ಳುತ್ತದೆ. ಸಂಸ್ಕಾರಗಳನ್ನು ಹೊಸದಾಗಿ ಸೃಷ್ಟಿಸಲೂ ಪ್ರಯತ್ನಿಸುತ್ತದೆ. ಆದರೆ ಆ ಪ್ರಯತ್ನಕ್ಕೂ ಅದರ ಸಫಲತೆಗೂ ಮಿತಿಯಿದೆ: ಊದುಬತ್ತಿಯ ಸುವಾಸನೆಯನ್ನು ದೇವಸ್ಥಾನದಲ್ಲಿಯೇ ಯಾವಾಗಲೂ ಅನುಭವಿಸಿದಾತನಿಗೆ ಅದನ್ನೆಲ್ಲಿ ಎದುರುಗೊಂಡರೂ ದೇವರ ನೆನಪನ್ನು ತಂದುಕೊಟ್ಟು ಧ್ಯಾನಭಾವವನ್ನೂ ಶಾಂತರಸವನ್ನೂ ಪ್ರಚೋದಿಸುತ್ತದೆ; ಆ ಪರಿಮಳವನ್ನು ವೇಶ್ಯಾಗೃಹದಲ್ಲಿಯೇ ಯಾವಾಗಲೂ ಅನುಭವಿಸುವಾತನಲ್ಲಿ ಅದನ್ನು ಸಂಧಿಸಿದಾಗ ಉದ್ರಿಕ್ತವಾಗುವ ಭಾವಗಳೇ ಬೇರೆ, ರಸಗಳೇ ಬೇರೆ. ಅದಕ್ಕೇನು ಮಾಡುವುದು? ಉಪಮಾ ಅಲಂಕಾರಕ್ಕಿರಬಹುದಾದ ತೊಂಡುತೊಡಕೆಲ್ಲ ಮಹೋಪಮಾ ಅಲಂಕಾರಕ್ಕೂ ಇದೆ.

ಮಹೋಪಮೆಗೆ ನರಕದಲ್ಲಿಯೂ ಸ್ವರ್ಗದ ಗಾಳಿ ಬೀಸುವಂತೆ ಮಾಡಲು ಸಾಮರ್ಥ್ಯವಿದೆ. ಡಾಂಟೆಯ ‘ಡಿವೈನ್ ಕಾಮೆಡಿ’ಯಲ್ಲಿ ಇಟಲಿಯ ಆ ಮಹಾಕವಿ ಮತ್ತೊಬ್ಬ ಪೂರ್ವ ಕವಿವರೇಣ್ಯನಾದ ‘ವರ್ಜಿಲ್’ ಒಡಗೂಡಿ ಸ್ವರ್ಗಯಾತ್ರೆಗೆ ಮುನ್ನ ನರಕಯಾತ್ರೆ ಮಾಡುತ್ತಾನೆ. ದುರ್ದರ್ಶನೀಯವಾದ ರುದ್ರ ದೃಶ್ಯಪರಂಪರೆಗಳ ಮಧ್ಯೆ ಬೀಭತ್ಸ ಭಯಾನಕ ರಸಗಳಲ್ಲಿ ಹಾದು ಹಾದು ಸಾಕಾಗುತ್ತದೆ. ನಾರಕ ನಿರಂತರತೆ ಅವಿರಾಮವಾಗುತ್ತದೆ. ಎಲ್ಲಿ ನೋಡಿದರೂ ಎತ್ತ ತಿರುಗಿದರೂ ನರಕ, ನರಕ, ಮತ್ತೂ ನರಕ. ಅನ್ಯಲೋಕಗಳಿಗೆ ಇಣುಕುವುದಕ್ಕೂ ಕೂಡ ಅಲ್ಲಿ ಅವಕಾಶವಿಲ್ಲ; ಅಪ್ಪಣೆಯಿಲ್ಲ. ಓದುವವನೂ ಡಾಂಟೆ ವರ್ಜಿಲರಂತೆ ಹೊಗೆತುಂಬಿದ ಕೋಣೆಯಲ್ಲಿ ಸಿಕ್ಕಿಬಿದ್ದು ಏದುತ್ತಿರುವಾಗ, ಕವಿಕರುಣೆ ಮಹೋಪಮೆಯ ಒಂದು ಕಿಟಕಿಯನ್ನು ತೆರೆಯುತ್ತದೆ: ಏನದ್ಭುತಂ! ನರಕಲೋಕದ ಎಂಟನೆಯ ಚಕ್ರದ ಏಳನೆಯ ಕೂಪದಲ್ಲಿರುವ ನಾವು ತಟಕ್ಕನೆ ತೆಂಕಣ ಇಟಲಿಯ ಮಲೆನಾಡಿನ ಮನೋಹರತೆಯಲ್ಲಿ ಉಸಿರೆಳೆಯುತ್ತೇವೆ; ಶ್ವಾಸಕೋಶಗಳನ್ನು ಮಾತ್ರವಲ್ಲದೆ ಪ್ರಾಣಕೋಶವನ್ನೂ ತುಂಬಿಕೊಳ್ಳುತ್ತೇವೆ!

ನರಕದ ಭಯಂಕರತೆಗೆ ಮಾರ್ಗದರ್ಶಿಯಾದ ವರ್ಜಿಲನ ಮುಖವೂ ಕಪ್ಪಾಗುತ್ತದೆ. ಡಾಂಟೆ ಅದನ್ನು ಕಂಡು ಎದೆಗೆಡುವನಿತರಲ್ಲಿಯೆ ಮರಳಿ ವರ್ಜಿಲನ ಮೊಗಕ್ಕ ಹೊಳವು ಮರಳುತ್ತದೆ. ಡಾಂಟೆ ಮತ್ತೆ ಧೈರ್ಯಗೊಳ್ಳುತ್ತಾನೆ:

In that young year-time when the sun his hair
Tempers beneath Aquarius, and when
The nights already tow’rd the south land fare,-
The hoarfrost on the green sward copies then
His sister’s image white, but by and by
Abates the dainty temper of his pen,-
The husbandman, who sees starvation nigh,
Rising and looking out, beholds the plain
All whitened over, whence he smites his thigh:
Returning in, doth to and fro complain
Like one who cannot mend his wretched case;
Then out he comes and picks up hope again,
Beholding how the world has altered face
In little while, and catching up his crook
Drives forth his Sheep to pasturage apace:
Thus when I saw perturbed my Master’s look
Did I loose heart, and thus the balm applied
Suddenly from the wound the ailment took.

ಮಿಲ್ಟನ್, ಡಾಂಟೆ ಮೊದಲಾದ ಪಾಶ್ಚಾತ್ಯ ಪುರಾಣಕವಿಗಳಿಗೆಲ್ಲ ಪುರಾಣಕವಿಯಾದ ಹೋಮರನು ತನ್ನ ಮಹಾಕಾವ್ಯಗಳಲ್ಲಿ ಮೊತ್ತಮೊದಲಾಗಿ ಮಹೋಪಮೆಗಳನ್ನು ವಿಪುಲವಾಗಿ ಪ್ರಯೋಗಿಸಿದ್ದಾನೆ. ಆದ್ದರಿಂದಲೆ ಮಹೋಪಮೆಎಗ ‘ಹೋಮರೋಪಮೆ’ ಎಂಬ ಹೆಸರೂ ಬಳಕೆಗೆ ಬಂದುಹೋಗಿದೆ.

ಹೋಮರನ ಮಹಾಕಾವ್ಯಗಳೆರಡೂ ಉಜ್ವಲ ಕವಿಕೃತಿಗಳಾದರೂ ಪುರಾಣಸಹಜವಾದ ಒರಟಿನಿಂದಲೂ ಪುರಾತನರ ಸ್ಥೂಲಾಭಿರುಚಿಗಳಿಂದಲೂ ಮೊರಡಾಗಿವೆ. ಕಥಾವಿಷಯದ ದೃಷ್ಟಿಯಿಂದಲಂತೂ ನಿರಾದರ್ಶವಾಗಿವೆ: ಸಾಹಸದಲ್ಲಿ ಆದರ್ಶ ಸೀಮೆಯನ್ನು ಮುಟ್ಟಿದರೂ ಆದರ್ಶ ಸೀಮೆಯ ಸಾಹಸಗಳು ಅಪೂರ್ವ. ಹಾಗೆಂದ ಮಾತ್ರಕ್ಕೆ ಕವಿಗೂ ಅವನ ಕವಿತೆಗೂ ಅಗೌರವವಾದಂತಾಗುವುದಿಲ್ಲ. ಕವಿ ವರ್ಣಿಸುವ ಆ ಯುಗಧರ್ಮವನ್ನು ಮಾತ್ರ ವಿಮರ್ಶಿಸಿದಂತಾಗುತ್ತದೆ. ಅವನ ಮಹೋಪಮೆಗಳಿಗೂ ಈ ವಿಮರ್ಶೆ ತಕ್ಕ ಮಟ್ಟಿಗೆ ಸಲ್ಲುತ್ತದೆ. ಆದರೆ ಒಂದು ವಿಚಾರ ಮಾತ್ರ ನಿರ್ವಿವಾದ: ನಯ, ಸಂಸ್ಕೃತಿ, ಕರುಣೆ, ದಯೆ-ಮೊದಲಾದ ಸಭ್ಯತಾಜನ್ಯ ವಿಷಯಗಳಲ್ಲಿ ಆ ಆದಿಕವಿಯ ಕೃತಿಶೈಲಗಳೂ ಬಂಡೆಮೊಗದ ಮಹೋಪಮೆಗಳೂ ಈಗಿನ ರುಚಿಗೆ ಎಷ್ಟೇ ಅಸಮರ್ಪಕವಾಗಿ ಕಂಡುಬಂದರೂ ದೈತ್ಯಬಲ, ರಾಕ್ಷಸಛಲ, ಭೀಮಪ್ರತೀಕಾರ, ಉನ್ಮತ್ತವೀರ್ಯ, ಅನಾಗರಿಕ ಶೌರ್ಯ, ಆರಣ್ಯಕ ಧೈರ್ಯ ಮತ್ತು ಪರ್ವತೋಪಮ ಸ್ಥೈರ್ಯಗಳಲ್ಲಿ ಮಾತ್ರ ಹೋಮರ್ ಮಹಾಕವಿಯ ಸೃಷ್ಟಿ ಮಹತ್ತಿನೊಡನೆ ಹೆಗಲೆಣೆಯಾಗಿ, ಹೊಯ್‌ಕಯ್ಯಾಗಿ ನಿಲ್ಲುತ್ತದೆ. ಹಲವೆಡೆಗಳಲ್ಲಂತೂ ಆ ಸೃಷ್ಟಿ ಮಹಿಮೆಯೊಡನೆ ಮಲ್ಲಗಾಳೆಗವಾಡಿ, ಅದನ್ನು ಸೋಲಿಸಿ, ಕಂಸನೆದೆಯ ಮೇಲೆ ಮಂಡಿಯೂರಿ ಕುಳಿತು ಅವನ ಕೊರಳಬಳೆಯನ್ನು ನುರ್ಗ್ಗೊತ್ತುವ ಕೃಷ್ಣನಂತೆ ತೋರಿ ಭವ್ಯಭಯಂಕರವೂ ಆಗುತ್ತದೆ.

ಆತನ ಮಹೋಪಮೆಗಳಲ್ಲಿ ಬೇಟೆಯ ಬಾಳು ವಿಶೇಷವಾಗಿ ಚಿತ್ರಿತವಾಗಿದೆ:

ಈನಿಯಸ್ ಹೆಸರಿನ ಟ್ರಾಯ್ ಪಕ್ಷದ ಮಹಾವೀರನು ಅಖಿಲೀಸ್ ಹೆಸರಿನ ಗ್ರೀಕ್ ಪಕ್ಷದ ಭಯಂಕರ ವೈರಿಯೊಡನೆ ಕಾಳೆಗಕ್ಕೆ ನಡೆಯುತ್ತಾನೆ: (Iliad, Book XX,185-203).

AEneas first with threatening mein advanced,
Nodding his ponderous helm; before his breast
His shield he bore, and poised his brazen spear.
He met Achilles from the opposing ranks;
Fierce as a ravening lion, whom to slay
Pour forth the stalwart youths, the united strength
Of the roused village; he unheeding moves
At first; but wounded by a javelin thrown
By some bold youth, he turns, with gaping jaws,
And frothing fangs, collecting for the spring.
His breast too narrow for his mighty heart;
And with his tail he lashes both his flanks
And sides, as though to rouse his utmost rage;
Then on, in pride of strength, with glaring eyes
He dashes, if some hunters he may slay,
Or in the fore most rank himself be slain.
So moved his dauntless spirit Peleus’ son
AEneas to confront………

ಭಯಂಕರ ವೈರಿ ಇದಿರ್ಮಲೆತು ಮುನ್ನುಗ್ಗುವ ಚಿತ್ರದ ಮತ್ತು ಭಾವದ ಭೀಕರತೆಯನ್ನು ಓದುಗನ ನಾಳಗಳಲ್ಲಿ ಧುಮುಕಿಸುವುದಿಲ್ಲವೆ ಈ ಧೈತ್ಯ ಮಹೋಪಮೆ?

ಪಾಶ್ಚಾತ್ಯರಲ್ಲಿ ಮಹೋಪಮೆ ಒಂದು ವಿಶೇಷಕಲೆಯಾಗಿ ಪರಿಣಮಿಸಿದೆ. ಪೂರ್ವಕವಿಗಳನ್ನನುಸರಿಸಿ ನವೀನರಲ್ಲಿಯೂ ಕೆಲವರು ಉತ್ಕೃಷ್ಟ ಮಹೋಪಮೆಗಳನ್ನು ಸೃಷ್ಟಿಸಿದ್ದಾರೆ. ಎಂತಹ ಸೌಂದರ್ಯವೂ ಅತಿರೇಕದಿಂದ ಅಸಹ್ಯವಾಗಬಹುದು. ಹುಬ್ಬುಗಳ ನಡುವೆ ಬಿಂದುರೂಪದಿಂದಿರಬೇಕಾದ ಚಂದ್ರಕುಂಕುಮವನ್ನು ಹಣೆಯ ತುಂಬಾ ಬಳಿದುಕೊಂಡರೆ! ಹಣೆಯ ಅಗಲಕ್ಕೂ ಕುಂಕುಮದ ಬೊಟ್ಟಿಗೂ ಯಾವುದೋ ಒಂದು ಪ್ರಮಾಣಾಂತರವಿದ್ದರೆ ಮಾತ್ರ ಅದು ಚೆಲುವಿಗೆ ನೆರವಾಗುತ್ತದೆ. ಮಹಾಕಾವ್ಯದ ಬೃಹದ್ ವಿಸ್ತೀರ್ಣದಲ್ಲಿ ಮಹೋಪಮೆಗೆ ಮನೋಹರತೆ ಬರುತ್ತದೆಂದು ಲಘುಕಾವ್ಯಗಳಲ್ಲಿಯೂ ಅದನ್ನು, ಪ್ರಮಾಣಾಂತರದ ಪರಿಜ್ಞಾನವೂ ರಸವಿವೇಚನೆಯೂ ಇಲ್ಲದೆ, ಪ್ರಯೋಗಿಸಿದರೆ ಆಭಾಸವಾಗುತ್ತದೆ. ಕಾವ್ಯಸುಂದರಿಗಾದರೂ ಸೀರೆಯೆಲ್ಲ ಜರತಾರಿಯಂಚಾಗಿ ಬಿಟ್ಟರೆ, ಆಕೆಗೆ ತೊಂದರೆ, ನೋಡುವವರಿಗೆ ನಗೆ.

ಆದರೂ, ಮಹತ್ತೊಂದು ಇದ್ದರೆ, ಎಲ್ಲಿದ್ದರೂ ಮಹೋಪಮೆಗೆ ಸನ್ಮಾನ ಸಲ್ಲುತ್ತದೆಂಬುದನ್ನು ಮಹಾಕವಿಯಾದವನು ಸಾಧಿಸಿ ತೋರಿಸಬಲ್ಲನು. ಅದಕ್ಕೊಂದು ನಿದರ್ಶನ, ಮ್ಯಾಥ್ಯೂ ಆರ್ನಾಲ್ಡ್. ಒಂಬೈನೂರಕ್ಕಿಂತಲೂ ಕಡಮೆ ಸಂಖ್ಯೆಯ ಪಂಕ್ತಿಗಳಿರುವ ಆತನ “ಸೊಹ್ರಾಬ್ ಮತ್ತು ರುಸ್ತುಮ್” ಎಂಬ ಕಥನ ಕಾವ್ಯದಲ್ಲಿ ಬರುವ ಶ್ಲಾಘ್ಯವಾದ ಮಹೋಪಮೆಗಳ ಮಾತಿರಲಿ; ‘ರಗ್ಬಿ ಚಾಪೆಲ್’ ಎಂಬ ಇನ್ನೂರೇಳು ಪಂಕ್ತಿಯ ಭಾವಗೀತೆಯಲ್ಲಿಯೂ ರೂಪಕರೀತಿಯ ಮಹೋಪಮೆಯೊಂದನ್ನು ಎಷ್ಟು ಪರಿಣಾಮ ರಮಣೀಯವಾಗಿ ಉಪಯೋಗಿಸಿದ್ದಾನೆ! ಎಂಬತ್ತು ನಾಲ್ಕನೆಯ ಪಂಕ್ತಿಯಿಂದ ಪ್ರಾರಂಭವಾಗಿ ನೂರಿಪ್ಪತ್ತು ಮೂರನೆಯ ಪಂಕ್ತಿಯಲ್ಲಿ ಕೊನೆಮುಟ್ಟುತ್ತದೆ, ಆದರ್ಶ ಸಾಧನೆಗೆ ಉಪಮೆಯಾಗಿರುವ ಪರ್ವತಾರೋಹಣದ ಆ ವರ್ಣನೆ. ಯಾವ ಮಹಾಕವಿಯ ಯಾವ ಮಹಾಕಾವ್ಯದ ಮಹೋಪಮೆಗೂ ಬಿಟ್ಟುಕೊಡುವುದಿಲ್ಲ ಆ ಭಾವಗೀತೆಯ ಮಹೋಪಮೆ.

ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಮಹೋಪಮೆಯನ್ನು ಸರ್ವಾಂಶಗಳಲ್ಲಿಯೂ ಸಂಪೂರ್ಣವಾಗಿ ಹೋಲುವ ಉಪಮೆಗಳು ದುರ್ಲಭವಾಗಿದ್ದರೂ ಅದರ ಛಾಯೆಗಳೇನೊ ಅಲ್ಲಲ್ಲಿ ದೊರೆಯುತ್ತವೆ. ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ[3] ಸರೋವರದಲ್ಲಿ ಮಿಂದ ಲಲನೆಯರು ‘ನನೆದ ಮೈಯೊಳಿಹ ವಸನಂಗಳಂ ಸಡಿಲ್ಚಿ……ಪಲವು ಬಣ್ಣಂಗಳಂ ತೆಗೆದುಟ್ಟು ರಂಜಿಸಿದರು’ ಎಂಬುದನ್ನು ಮಾಗಿ ಜಾರಿ ವಸಂತ ಋತು ತಲೆದೋರುವ ಸಮಯಕ್ಕೂ (ಸಂ.೩೧, ಪ.೫೩), ಮಂದಮಾರುತನನ್ನು ತೂಣಗೊಂಡವನಿಗೂ (ಸಂ.೩, ಪ.೩೨), ಕೃಷ್ಣನನ್ನು ಮುಂಗಾರ ಜೀಮೂತದೊಡ್ಡಿಗೂ (ಸಂ.೨೬, ಪ.೫೯) ಹೋಲಿಸುವ ರೀತಿಯಲ್ಲಿ ಮಹೋಪಮೆಯ ಛಾಯೆ ಸುಳಿಯುತ್ತದೆ.

ವಿಸ್ತರಿಸಿದರೆ, ವಿವರಿಸಿದರೆ, ವರ್ಣಿಸಿದರೆ, ಸೊಗಸಾದ ಮಹೋಪಮೆಗಳಾಗಬಹುದಾದ ಉಪಮೆಗಳಿಗಂತೂ ಗಣನೆಯಿಲ್ಲ. ಕುಶನ ಶರಾಘಾತಿಗೆ ಭರತಾನುಜನು ‘ಗಿರಿತಟದೊಳ್ ಒಂದೊಂದರೊಳ್‌ಪೆಣಗಿ ಸೋಲ್ತ ಮದಕರಿ ದರಿಗುರುಳ್ವಂತೆ’ ಬಿದ್ದನೆಂಬುದನ್ನಾಗಲಿ (ಸಂ.೨೦, ಪ.೩೧), ‘ಇದು ಭಗೀರಥ ರಥವ ಬೆಂಕೊಂಡು ಪರಿವ ಸುರನದಿಯ ಪ್ರವಾಹಮೆನಲ್’ (ಸಂ.೪, ಪ.೨೮) ಎಂದು ದೊರೆಯ ಹಿಂದೆ ನಡೆತರುವ ಸೇನಾವಾಹಿನಿಗೆ ಒಡ್ಡಿದ ಉಪಮೆಯನ್ನಾಗಲಿ ಮಹೋಪಮೆಯ ಮಹತ್ತಿಗೆತ್ತಲಾರದೆ ಪ್ರತಿಭೆ?

ಒಂದು ದೃಷ್ಟಿಯಿಂದ ನೋಡಿದರೆ ಲಕ್ಷ್ಮೀಶನೇ ಆ ಕೆಲಸವನ್ನೂ ಮಾಡಿದ್ದಾನೆ. ಅರ್ಜುನನಿಗೂ ಬಭ್ರುವಾಹನನಿಗೂ ಆದ ಕಾಳೆಗವನ್ನು ರಾಮನಿಗೂ ಕುಶಲವರಿಗೂ ಆದ ಕಾಳೆಗಕ್ಕೆ ಹೋಲಿಸಿದ ಜೈಮಿನಿಯನ್ನು ಕುರಿತು ಜನಮೇಜಯನು ಅದನ್ನು ವಿವರಿಸಿ ತಿಳಿಸುವಂತೆ ಕೇಳಿಕೊಳ್ಳುತ್ತಾನೆ. ಆಗ ಜೈಮಿನಿ ರಾಮಾಯಣವನ್ನೆಲ್ಲ ಸಂಕ್ಷೇಪವಾಗಿ ಹೇಳಿ, ಸೀತಾವನವಾಸಾದಿ ಕಥೆಯನ್ನು ವಿಸ್ತಾರವಾಗಿ ವರ್ಣಿಸುತ್ತಾನೆ: ನಾಲ್ಕು ದೊಡ್ಡ ಸಂಧಿಗಳಲ್ಲಿ! ನಮ್ಮ ಮನಸ್ಸು ಭಾರತ ಪ್ರಪಂಚವನ್ನು ಮರೆತು ರಾಮಾಯಣದ ಜಗತ್ತಿನಲ್ಲಿ ಪರ್ಯಟನ ಮಾಡುತ್ತದೆ. ನಾಲ್ಕು ದೀರ್ಘ ಸಂಧಿಗಳ ರಸಪ್ರಯಾಣದ ತರುವಾಯ ಮತ್ತೆ ಅರ್ಜುನ ಬಭ್ರುವಾಹನರ ಕಾಳೆಗಕ್ಕೆ ಬರುತ್ತೇವೆ.

ಆದರೆ ಲಕ್ಷ್ಮೀಶನ ಪ್ರಯತ್ನವನ್ನು ‘ಮಹೋಪಮೆ’ ಎಂದು ಹೇಳಲಾಗುವುದಿಲ್ಲ. ಸ್ವತಂತ್ರವಾಗಿ ನಿಲ್ಲಬಹುದಾದ ಒಂದು ದೀರ್ಘ ಕಥನ ಕಾವ್ಯವನ್ನೆ ‘ಮಹೋಪಮೆ’ ಎನ್ನಲಾಗುವುದಿಲ್ಲ. ಬೇಕಾದರೆ ಅದನ್ನು ‘ಉಪಾಖ್ಯಾನೋಪಮೆ’ ಎಂದು ಕರೆಯಬಹುದು!

ನಮ್ಮ ಕಾವ್ಯದೇವಿಗೆ ಪಾಶ್ಚಾತ್ಯ ಕಾವ್ಯದೇವಿಯಿತ್ತ ಹೊಸಕಾಣಿಕೆ-‘ಮಹೋಪಮೆ.’ ಆ ಒಡವೆ ಸ್ವಲ್ಪ ವಿಲಕ್ಷಣವಾಗಿ ಕಂಡರೆ ಅದಕ್ಕೆ ಕಾರಣ-ಅಪರಿಚಯ. ರಸಲೋಕದಲ್ಲಿ ‘ಅಪರಿಚಯ’ವನ್ನೇ ದೋಷವೆಂದು ಹಳಿದರೆ ನಮ್ಮ ಸ್ವಲ್ಪತೆಗೆ ನಾವೇ ಕನ್ನಡಿ ಹಿಡಿದಂತಾಗುತ್ತದೆ.

ಬಾಳಿನಲ್ಲಿ ಎನಿತೆನಿತೋ ಅಪರಿಚಯಗಳು ಸುಪರಿಚಯಗಳಾಗಿ ಸುಖ ಶಾಂತಿಗಳಿಗೆ ಕಾರಣವಾಗುತ್ತವೆ. ಪಶ್ಚಿಮದಿಂದ ಬಂದ, ಒಂದಲ್ಲ, ಎರಡಲ್ಲ, ಹಲವಾರು ಅಪರಿಚಿತಗಳು ಈಗ ಎಷ್ಟರಮಟ್ಟಿಗೆ ಸುಪರಿಚಿತಗಳಾಗಿವೆ ಎಂದರೆ ಅವು ಹೊರಗಿನಿಂದ ಬಂದವೆಂಬುದನ್ನೂ ನಾವು ಮರೆತಿದ್ದೇವೆ. ‘ಮಹೋಪಮೆ’ಯೂ ಮುಂದೆ ಅಂತಹ ಸುಪರಿಚಿತಗಳೊಂದಿಗೆ ಸೇರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಆ ಹೆಣ್ಣು ಕನ್ನಡದ ಮನೆಗೆ ಹೊಸ ಸೊಸೆ: ಅವಳು ಮೂರು ಜಡೆಗಳನ್ನು ಹಾಕಿಕೊಂಡಿರಬಹುದು. ಬಣ್ಣ ಬಣ್ಣದ ಸೀರೆಯನ್ನು ನೆಲಗುಡಿಸುವಂತೆ ಉಟ್ಟಿರಬಹುದು. ನಾನಾ ರತ್ನಗಳಿಂದ ತಯಾರಾದ ಅವಳ ಕೊರಳ ಹಾರಗಳು ಅತಿ ನೀಳವಾಗಿ ಜೋಲಾಡುತ್ತಿರಬಹುದು. ಒಟ್ಟಿನಲ್ಲಿ ಆಕೆಯದೆಲ್ಲವೂ ಕೊಂಚ ಅಧಿಕಾಲಂಕಾರವಾಗಿ ತೋರಬಹುದು. ಅತ್ತೆಗೆ ಮುನಿಸು; ಅತ್ತಿಗೆಗೆ ಕರುಬು. ಕೆಲವರಿಗೆ ಕುತೂಹಲ; ಮತ್ತೆ ಹಲವರಿಗೆ ಕೈಗೆಟುಕದ ಅಪಕ್ವ ಕಟುಫಲ. ಕೈಹಿಡಿದ ಇನಿಯನಿಗೆ ಮಾತ್ರ ಎಷ್ಟು ನೋಡಿದರೂ ಸಾಲದು; ಎಷ್ಟು ಮೆಚ್ಚಿದರೂ ಸಾಲದು; ಎಷ್ಟು ಬಣ್ಣಿಸಿದರೂ ಸಾಲದು. ಇರಲಿ. ಹೊಸ ಸೊಸೆ ಕೆಲದಿನಗಳಲ್ಲಿಯೆ ಮನೆಯವಳಾಗುತ್ತಾಳೆ. ತನ್ನ ಸೌಜನ್ಯ ಸದ್ಗುಣಗಳಿಂದ ಎಲ್ಲರ ಮನಸ್ಸನ್ನೂ ಅಕ್ಕರೆಯಿಂದ ಸೂರೆಗೊಳ್ಳುತ್ತಾಳೆ. ಹಿರಿಕುಲದ ಹೆಣ್ಣು ಹಿರಿತನದಿಂದ ಕೂಡಿಯೇ ಇದ್ದಾಳೆ; ಹಿರಿಯಳೆಂದು ಸನ್ಮಾನಿತಳೂ ಆಗುತ್ತಾಳೆ.[4]


[1]       ‘ಇತ್ಯಾದಿ’ ಗ್ರಂಥದಲ್ಲಿರುವ ‘ಉಪಮಾಲೋಲ ಲಕ್ಷ್ಮೀಶ’ ಎಂಬ ಲೇಖನವನ್ನು ನೋಡಿ.

[2]       ಸ್ವಸಾಮರ್ಥ್ಯವಶೇನೈವ ವಾಕ್ಯಾರ್ಥಂ ಪ್ರಥಯನ್ನಪಿ |
ಯಥಾ ವ್ಯಾಪಾರನಿಷ್ಪತ್ತೌ ಪದಾರ್ಥೋ ನ ವಿಭಾವ್ಯತೇ ||
ತದ್ವತ್ಸಚೇತಸಾಂ ಸೋಢರ್ಥೋ ವಾಚ್ಯಾರ್ಥವಿಮುಖಾತ್ಮನಾಮ್ |
ಬುದ್ಧೌ ತತ್ವಾರ್ಥದರ್ಶಿನ್ಯಾಂ ಝಟಿತ್ಯೇವಾವಭಾಸತೇ || (ಧ್ವನ್ಯಾಲೋಕ ೧-೧೧,೧೨)

[3]       ‘ಇತ್ಯಾದಿ’ ಗ್ರಂಥದಲ್ಲಿರುವ ‘ಉಪಮಾಲೋಲ ಲಕ್ಷ್ಮೀಶ’ ಎಂಬ ಪ್ರಬಂಧವನ್ನು ನೋಡಿ.

[4]       ‘ಚಿತ್ರಾಂಗದಾ’ ಎಂಬ ಹೆಸರಿನ ಮಹಾಛಂದಸ್ಸಿನ ಕಾವ್ಯದಲ್ಲಿ ನಾಲ್ಕಾರು ಮಹೋಪಮೆಗಳಿವೆ. ಇತ್ತೀಚೆಗೆ ಪ್ರಕಟವಾಗಿರುವ ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯದಲ್ಲಿ ಉತ್ತಮ ನಿದರ್ಶನಗಳು ದೊರೆಯುತ್ತವೆ.