ಕವಿಪ್ರತಿಭೆಯ ಮುಖದರ್ಶನ

ಕಾವ್ಯಲೋಕದಲ್ಲಿ ಸಹೃದಯ ಸುಸ್ಮರಣೀಯವಾಗಿ ಕಂಗೊಳಿಸುವ ಸರೋವರಗಳ ಪಂಕ್ತಿಯಲ್ಲಿ ಕನ್ನಡಿಗರ ಮನಸ್ಸನ್ನು ಸೂರೆಗೊಂಡು, ಅವರ ರಸ ಕೃತಜ್ಞತೆಗೆ ಪಾತ್ರವಾಗಿ, ವಂದನೀಯವೂ ಅಭಿನಂದನೀಯವೂ ಆಗಿರುವ ಕಾಸಾರೋತ್ತಮಗಳೆಂದರೆ, ಅಚ್ಛೋದ ಮತ್ತು ವೈಶಂಪಾಯನ. ಆ ಸಲಿಲ ಶರೀರಿಗಳು ತಮ್ಮದೆ ಆದ ಒಂದು ರಸರಾಜ್ಯವನ್ನು ಕಲ್ಪಿಸಿಕೊಂಡು ತಮ್ಮದೆ ಆದ ಒಂದು ಆಧಿಪತ್ಯವನ್ನು ನಡಸುತ್ತಾ, ವಸ್ತುಗಳಾದರೂ ಪ್ರಭಾವಶಾಲಿಗಳಾದ ಪ್ರಮುಖಪಾತ್ರಗಳಂತೆ ತಮ್ಮದೆ ಆದ ಒಂದು ವಿಶೇಷ ಪುರುಷಕಾರವನ್ನು ಸಂಸ್ಥಾಪಿಸಿ, ನಮ್ಮ ಭಯ ಭಕ್ತಿ ಗೌರವ ಪ್ರಶಂಸೆಗಳಿಗೆ ಭಾಜನವಾಗಿದೆ. ಬಿತ್ತರವಾಗಿ ಹಬ್ಬಿ ನಿಂತ ನೀರು ಅವುಗಳ ಲೀಲಾರೂಪ ಮಾತ್ರ; ಅವು ತಮ್ಮ ನಿತ್ಯರೂಪದಲ್ಲಿ ಚಿನ್ಮಯವೂ ಸಚೇತನವೂ ಶಾಪಾನುಗ್ರಹ ಸಮರ್ಥವೂ ಆದ ಅಧಿದೇವತೆಗಳಂತೆ ಸಂದರ್ಭೋಚಿತವಾಗಿ ತಪೋಮಯ, ಧರ್ಮೋಗ್ರ, ಅಥವಾ ಕ್ಷಮಾಶೀಲ; ಸೌಮ್ಯ, ರೌದ್ರ ಅಥವಾ ಶಾಂತ. ಕೇವಲ ಸಾಕ್ಷಿಗಳಂತೆ ತಾಟಸ್ಥ್ಯಭಾವದಿಂದ ಮುಗ್ಧವಾಗಿ ಶೋಭಿಸಿದರೂ ಅವು ಧರ್ಮನಿಧಿಯಾದ ತಮ್ಮ ಇಚ್ಛಾಶಕ್ತಿಯ ಅಂತಶ್ವೇತನದ ಮರ್ಮಸೂತ್ರಗಳಿಂದ ಪಾತ್ರಗಳ ಮೇಲೆ ಅಭಿಶಾಪದ ಅಥವಾ ಆಶೀರ್ವಾದದ, ಶಿಕ್ಷೆಯ ಅಥವಾ ಕ್ಷಮೆಯ ಪ್ರಭಾವಗಳನ್ನು ಬೀರಿ, ಆ ವ್ಯಕ್ತಿಗಳ ಹಣೆಯಬರಹದ ನಿರ್ಣಯದಲ್ಲಿ ನಿಗೂಢಕರ್ಮಿಗಳಾಗಿವೆ. ಕಾವ್ಯಪಾತ್ರಗಳ ಮಾತಂತಿರಲಿ; ಆ ತೀರ್ಥದೇಹಿಗಳು ತಮ್ಮನ್ನು ವರ್ಣಿಸುವ ಕವಿಪ್ರತಿಭೆಗೂ ಕನ್ನಡಿ ಹಿಡಿದು, ಸಹೃದಯರಿಗೆ ಆ ಪ್ರತಿಭಾಶ್ರೀಯ ಮುಖದರ್ಶನವಾಗುವಂತೆ ಸಹಾಯಮಾಡುತ್ತವೆ; ಕವಿಯ ಕಲ್ಪನಾ ಶಕ್ತಿಯನ್ನೂ ಅದರ ಸಂಪತ್ತನ್ನೂ ನಮಗೆ ನಿರ್ಣಯಿಸಿಕೊಡುವ ಮಾನಮುಕುರಗಳಾಗಿ ಪರಿಣಮಿಸುತ್ತವೆ; ಇನ್ನೂ ಮುಂಬರಿದು ಹೊಕ್ಕು ಹೇಳುವುದಾದರೆ, ತಮ್ಮನ್ನು ರಚಿಸುವ ಕವಿಯ ಬಹುಮುಖ ಪ್ರತಿಭೆಯ ಒಂದು ಮುಖದ ವಿರಚನೆಗೆ ತಾವೆ ಕವಿಗಳಾಗುತ್ತವೆ.

ಉತ್ತಮ ಕವಿ ಯಾವುದನ್ನು ನೋಡುತ್ತಾನೆ, ಏಕೆ ನೋಡುತ್ತಾನೆ, ಹೇಗೆ ನೋಡುತ್ತಾನೆ, ಅಥವಾ ನೋಡುವಂತೆ ಮಾಡುತ್ತಾನೆ; ಏನನ್ನು ಕಾಣುತ್ತಾನೆ, ಏಕೆ ಕಾಣುತ್ತಾನೆ, ಹೇಗೆ ಕಾಣುತ್ತಾನೆ, ಅಥವಾ ಕಾಣುವಂತೆ ಮಾಡುತ್ತಾನೆ;-ಎಂಬುದು ಅಮಂದ ಪ್ರಜ್ಞನಾದ ಸಹೃದಯನಿಗೆ ಔದಾಸೀನ್ಯದ ವಿಷಯವಾಗುವುದಿಲ್ಲ. ಅದನ್ನು ಗಮನಿಸದಿದ್ದರೆ ಕಾವ್ಯದ ಉತ್ತಮತೆಯಾಗಲಿ, ಕವಿಯ ಉತ್ತಮತೆಯಾಗಲಿ ನಮಗೆ ಗೋಚರಿಸುವುದಿಲ್ಲ. ಏಕೆಂದರೆ ಕವಿಯ ಪ್ರಕೃತಿವರ್ಣನೆ ಕವಿಪ್ರಕೃತಿಯನ್ನೂ ವರ್ಣಿಸುತ್ತದೆ; ಕವಿಪ್ರತಿಭೆಯ ಅಂತರ್ವರ್ಣಗಳನ್ನೂ ಬೆಳಕಿಗೆ ತರುತ್ತದೆ; ಕವಿ ಹೃದಯದ ಸಂಸ್ಕಾರ, ವಿದ್ಯೆ, ನಾಗರಿಕತೆ, ಸಂಸ್ಕೃತಿ ಕಾವ್ಯಶಕ್ತಿ, ಕಲ್ಪನಾಸಂಪತ್ತು ಇತ್ಯಾದಿಗಳಿಗೆ ತೋರ್‌ಬೆರಳೂ ಒರೆಗಲ್ಲೂ ಆಗುತ್ತದೆ.

ಹದಿನೆಂಟು ವರ್ಣನೆಗಳಲ್ಲಿ ‘ರಾಜೀವಾಕರ’ದ ವರ್ಣನೆಯೂ ಒಂದಿರಬೇಕೆಂದು ಅದರ ವರ್ಣನೆಗೆ ತೊಡಗುವ ಪಂಡಿತನಾದ ‘ಪ್ರಯತ್ನ ಕವಿ’ಗೆ ತನ್ನ ವರ್ಣನೆಯ ವಿಷಯದ ‘ಜೀವಾಕರ’ ಅಲಕ್ಷಿತ. ಅವನ ಸರೋವರಗಳೆಲ್ಲ ಕವಾತುಮಾಡುವ ಸೈನಿಕರಂತೆ ಸಮವಸ್ತ್ರಧಾರಿಗಳಾಗುತ್ತವೆ. ಅಚ್ಛೋದವಾಗಲಿ ವೈಶಂಪಾಯನವಾಗಲಿ ಪಂಪೆಯಾಗಲಿ ಎಲ್ಲಾ ಒಂದೆ! ಅಲಂಕಾರ ಶಾಸ್ತ್ರಕ್ಕೆ ಭಂಗಭರದಂತೆ ಕೈ ಬೆರಳೆಣಿಸಿ ಲೆಕ್ಕ ಹಾಕಿ ತಪ್ಪಾಗದಂತೆ ನೋಡಿಕೊಳ್ಳುತ್ತಾನೆ; ಕೊಳಗಳಲ್ಲಿರಬೇಕಾದ ಯಾವ ವಸ್ತುವನ್ನೂ ಕೈಬಿಡುವುದಿಲ್ಲ. ಪಟ್ಟಿಯ ಪ್ರಕಾರ ಅಲಂಕಾರಗಳನ್ನೂ ಸೇರಿಸಬಹುದು. ಕಥೆಯ, ಭಾವದ, ರಸದ ಮತ್ತು ಸಂದರ್ಭದ ಔಚಿತ್ಯಕ್ಕಿಂತಲೂ ಅಲಂಕಾರಗಳ ಪ್ರದರ್ಶನದ ಚಾತುರ್ಯದಲ್ಲಿಯೆ ಅವನು ಹೆಚ್ಚು ಆಸಕ್ತ. ಈ ಅಲಂಕಾರವಾಯಿತು, ಆ ಅಲಂಕಾರವನ್ನೇಕೆ ತರಬಾರದು? ಆ ಕವಿ ವ್ಯಾಜಸ್ತುತಿಯನ್ನು ಪ್ರಯೋಗಿಸಿದ್ದಾನೆ; ನಾನೇಕೆ ವ್ಯಾಜನಿಂದೆಯನ್ನು ಪ್ರಯೋಗಿಸಿ ಅವನನ್ನು ತಲೆಮೆಟ್ಟುವಂತೆ ಬರೆಯಬಾರದು? ಛೆಃ ಒಂದಾದರೂ ಶ್ಲೇಷೋಪಮಾಲಂಕಾರವಿಲ್ಲದಿದ್ದರೆ ಅದೆಂತಹ ಕಮಲಾಕರದ ವರ್ಣನೆ? ಹೀಗೆ ಹೊರಳುತ್ತದೆ ಅವನ ಆಲೋಚನೆಯ ದಾರಿ. ಅವನ ಕವಿತೆ ಮೂಗುದಾರ ಹಾಕಿ ಗಾಣಕ್ಕೆ ಕಟ್ಟಿದ ಎತ್ತಿನಂತೆ ಶಾಸ್ತ್ರದ ಚಕ್ರಗತಿಯಲ್ಲಿ ಸುತ್ತುತ್ತದೆ. ಎನಿತು ಸುತ್ತಿದರೇನು? ಇದ್ದಲ್ಲಿಯೆ ಇರುತ್ತದೆ. ವಿದ್ವತ್ತಿನ ಗಾರೆಯೇನೊ ತಯಾರಾಗುತ್ತದೆ, ರಾಶಿ ರಾಶಿ!

‘ಅಯತ್ನ ಕವಿ’ಯ ‘ರಾಜೀವಾಕರ’ವಾದರೋ ಅದರ ‘ಜೀವಾಕರ’ತ್ವದಿಂದ ಸಂಭವಿಸುತ್ತದೆ. ಅವನಲ್ಲಿರುವ ಪಾಂಡಿತ್ಯ, ಶಾಸ್ತ್ರ, ಸಂಪ್ರದಾಯ ಎಲ್ಲವೂ ‘ಜೀವಾಕರ’ತ್ವಕ್ಕೆ ಅಧೀನವಾಗಿ, ಅದಕ್ಕೆ ಪೋಷಕವಾಗಿ ಪ್ರಕಾಶಕವಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿ ತಾವೂ ಸಾರ್ಥಕವಾಗಿ ಕೃತಿಯನ್ನೂ ಧನ್ಯವಾಗಿಸುತ್ತವೆ. ಅಲ್ಲಿ ವಿದ್ವತ್ತು ಔಚಿತ್ಯದ ಆಡಳಿತಕ್ಕೆ ಒಂದಿನಿತೂ ಚ್ಯುತಿ ಬರದ ರೀತಿಯಲ್ಲಿ ವರ್ತಿಸುತ್ತದೆ. ಅದು ವಾಹನತ್ವದ ಸ್ವಧರ್ಮವನ್ನಾಗಲಿ ವಿನಯಶೀಲತೆಯನ್ನಾಗಲಿ ಅತಿಕ್ರಮಿಸಿ ಅಥವಾ ಧಿಕ್ಕರಿಸಿ, ವಾಹಕತ್ವದ ಪರಧರ್ಮವನ್ನು ಪರಾಕ್ರಮದಿಂದ ಆಕ್ರಮಿಸಿ, ತನ್ನ ಅಲ್ಪಾಹಂಕಾರವನ್ನು ಮೆರೆಯುವ ಅವಿವೇಕಕ್ಕೂ ಅಸಾರ್ಥಕತೆಗೂ ಪಕ್ಕಾಗುವುದಿಲ್ಲ. “ಸ್ವಧರ್ಮೇನಿಧನಂ ಶ್ರೇಯಃ” ಎಂಬುದನ್ನು ಬಲ್ಲ ಸಹಜ ಕವಿಯ ಶಾಸ್ತ್ರವಿದ್ಯೆ ನಿಜವಾಗಿಯೂ ಶ್ರೇಯಸ್ಸಾಧನವಾಗುತ್ತದೆ.

ಅಚ್ಛೋದ ಮತ್ತು ವೈಶಂಪಾಯನ ಸರೋವರಗಳನ್ನು ಸ್ಥಳಾಂತರಗೊಳಿಸಿ ವಿನಿಮಯ ಮಾಡುವುದರ ಅನೌಚಿತ್ಯ ಕುಕವಿಯಾದವನಿಗೆ ಅವೇದ್ಯವಾಗಬಹುದು. ಆದರೆ ಮಹಾಕವಿಯಾದವನಿಗೆ ಅಂತಹ ವಿನಿಮಯ ಕಾರ್ಯ ಅಸಹ್ಯ, ಊಹೆಗೂ ಅಸಾಧ್ಯ. ಹಾಗೆ ಮಾಡುವುದು ಅವನ ಭಾಗಕ್ಕೊಂದು ಮಹಾವಿರೂಪ, ಮಹಾ ಪಾಪ. ದುರ್ಯೇಧನನನ್ನು ಕಾದಂಬರೀ ಕಾವ್ಯಲೋಕಕ್ಕೆ ಕರೆದೊಯ್ದರೆ ಎಂತಹ ‘ಶಕಾರ ವಿಕಾರ’ವಾಗುತ್ತದೆಯೋ ಅದಕ್ಕಿಂತಲೂ ವಿಕಟತರವಾಗುತ್ತದೆ, ಅಚ್ಛೋದ ಸರೋವರವನ್ನು ಗದಾಯುದ್ಧ ಕಾವ್ಯರಂಗಕ್ಕೆ ಎಳೆತರುವ ವಿಕಾರ. ಚಂದ್ರಾಪೀಡ ಪುಂಡರೀಕ ಮಹಾಶ್ವೇತೆಯರು ಹೇಗೆ ಕಾದಂಬರೀ ಕಾವ್ಯಲೋಕನಿಷ್ಠರೋ ಹಾಗೆಯೇ ಅಚ್ಛೋದ ಸರೋವರವೂ ಆ ಲೋಕಕ್ಕೆ ಸಂಪೂರ್ಣವಾಗಿ ನಿಯತಿಬದ್ಧ. ಆ ನಿಯಮ ಸೃಷ್ಟಿಯಿಂದ ಮಾತ್ರವಲ್ಲದೆ ಇಷ್ಟದಿಂದಲೂ ಅಲಂಘನೀಯ. ಆದ್ದರಿಂದಲೆ ಆ ಸರೋವರಗಳ ಸಿರಿಗನ್ನಡಿಯಲ್ಲಿ ಪಂಪ ರನ್ನ ನಾಗವರ್ಮ ಮತ್ತು ನಾರಣಪ್ಪರ ಪ್ರತ್ಯೇಕವೂ ಸ್ವತಂತ್ರವೂ ಆದ ಪ್ರತಿಭಾಶ್ರೀಯ ಮುಖದರ್ಶನ ಮಾಡಲು ಸಹೃದಯನಿಗೆ ಸಾಧ್ಯ. ಸುಲಭಸಾಧ್ಯವಲ್ಲದಿದ್ದರೂ ಕಾವ್ಯಸಾಧಕನ ರಸಪ್ರಜ್ಞೆಗೆ ಯತ್ನಸಾಧ್ಯ.

ಅಚ್ಛೋದವೈಶಂಪಾಯನ!

ಅಭಿಜ್ಞನಾದ ಸಾಹಿತಿಯ ಕಾವ್ಯಸಂಸ್ಕಾರದ ಸರಸ್ಸಿನಲ್ಲಿ ಎಂತಹ ಧ್ವನಿ ತರಂಗಗಳು ಸ್ಪಂದಿತವಾಗುತ್ತವೆ, ಆ ಹೆಸರೆರಡು ಕೇಳಿದೊಡನೆ! ಅಚ್ಛೋದ ಸರೋವರ ನಮ್ಮ ಮನಸ್ಸನ್ನು ಹೈಮಾಚಲದ ಔನ್ನತ್ಯಕ್ಕೇರಿಸಿದರೆ ವೈಶಂಪಾಯನ ಸರಸ್ಸು ರಣಕ್ಷೋಭೆಯಿಂದ ಉಲ್ಲೋಲಕಲ್ಲೋಲವಾದ ಕುರುಕ್ಷೇತ್ರದ ಒಂದು ಮೂಲೆಗೆ ಅದನ್ನು ಬೀಸುತ್ತದೆ. ಅಚ್ಛೋದವು ನಮ್ಮ ಹೃದ್ರಂಗದಲ್ಲಿ ಶಾಂತಿ, ಸತ್ತ್ವ, ವಿಶ್ವವೈಶಾಲ್ಯ, ತಪಸ್ಯೆ, ಬ್ರಾಹ್ಮ ತೇಜಸ್ಸು ಮೊದಲಾದ ಸಾತ್ವಿಕ ಭಾವಗಳನ್ನೂ ಸಾಹಸಗಳನ್ನೂ ಪ್ರಚೋದಿಸಿದರೆ ವೈಶಂಪಾಯನವು ಕ್ರಾಂತಿ, ರಜಸ್ಸು, ಸಂಕೀರ್ಣತೆ, ರಣಸಾಹಸ, ಕ್ಷಾತ್ರಪೌರುಷ, ಇತ್ಯಾದಿ ತಮಃಪ್ರಚುರವಾದ ರಜೋಮಯ ಭಾಗಳನ್ನೂ ಸಾಹಸಗಳನ್ನೂ ಉದ್ರೇಕಿಸುತ್ತದೆ. ಅಚ್ಛೋದವು ಮರ್ತ್ಯದೂರವಾಗಿ, ಅಮರ್ತ್ಯ ಸಮೀಪವಾಗಿ, ಕೈಲಾಸ ಪರ್ವತದ ಧವಳಿಮಾಶೀರ್ವಾದದಿಂದ ಪುನೀತವಾಗಿ, ಗಗನೋನ್ನತವಾಗಿ, ಗಗನಸ್ಪರ್ಧಿಯಾಗಿ, ನಿಶ್ಯಬ್ದವಾಗಿ, ಅಮೃತಕಾಸಾರವಾಗಿ ವಂದನೀಯವಾಗುತ್ತದೆ. ವೈಶಂಪಾಯನವಾದರೋ ‘ಪಾತಾಳಕ್ಕೆ ಬಿಲ’ವಾಗಿ ‘ಘೋರಾಂಧಕಾರಕ್ಕೆ ಕೂಪ’ವಾಗಿ ಧೂಳೀ ಧೂಸರವಾಗಿ, ಯುದ್ಧೋನ್ಮತ್ತರಾದ ಪ್ರಚಂಡ ಕಲಿಗಳಿಬ್ಬರ ಅಬ್ಬರದಿಂದಲೂ ಗದಾಘಾತದಿಂದಲೂ ಪ್ರಕ್ಷುಬ್ಧವಾಗಿ, ಅವರ ಮೆಯ್ಯಿಂದೊಳ್ಕುವ ಕೆನ್ನೀರಿಂದ ಆರಕ್ತವಾಗಿ, ಮೃತ್ಯುಮಯವಾಗಿ, ರಕ್ತಸರೀವರವಾಗಿ ರೌದ್ರ ಸೌಂದರ್ಯದಿಂದ ಅಭಿನಂದನೀಯವಾಗುತ್ತದೆ.

ಕವಿವರ ನಾಗವರ್ಮನ ಕಲಶಕೃತಿಯಾದ ಕಾದಂಬರಿಯ ರಸಕೃಪೆಯಿಂದ ಕನ್ನಡ ಕಾವ್ಯಲೋಕದಲ್ಲಿ ಅಮರತೆವೆತ್ತಿದೆ, ಅಚ್ಛೋದ ಸರೋವರ. ಕಾವ್ಯವನ್ನೋದಿ ಧನ್ಯನಾಗುವ ಸಹೃದಯನ ದೃಷ್ಟಿಗೆ ಕೊನೆಕೊನೆಗೆ ಅದೊಂದು ಜಲರೂಪಿಯೂ ಸರೋವೇಷಿಯೂ ಆದ ಬೃಹದ್ದೇವತಾ ವ್ಯಕ್ತಿಯಂತೆ ಪೂಜ್ಯವಾಗಿ ಪರಿಣಮಿಸುತ್ತದೆ. ಕವಿ ಆ ಸರೋವರನ್ನು ನಮ್ಮ ಕಣ್ಬೊಲಕ್ಕೆ ಬಿಜಯಂಗೆಯ್ಯಿಸುವಾಗ ಶ್ರೀಮದ್ ವ್ಯಕ್ತಿಗೆ ಅರ್ಹವಾದ ಗೌರವಪೂರ್ಣವಾದ ಪೀಠಿಕೆಯನ್ನೊಡ್ಡುತ್ತಾನೆ. ಕಥೆಯ ಹಾದಿಯಲ್ಲಿ ಕಣ್ಣಿಗೆ ಬೀಳುವ ಯಃಕಶ್ಚಿತ ನಿಸರ್ಗ ಭಾಗವೊಂದನ್ನು ಪ್ರಾಸಂಗಿಕವಾಗಿ ವರ್ಣಿಸಿ ಮುಂಬರಿಯುವಂತೆ ಅವಸರದಿಂದಾಗಲಿ ಉದಾಸೀನವಾಗಿಯೆ ಆಗಲಿ ವರ್ತಿಸುವುದಿಲ್ಲ. ಹೊರರೂಪದಿಂದ ಪ್ರಾಣಿಮಾತ್ರವಾಗಿ ತೋರಿದರೂ ಆಕಾರ ಮಾತ್ರದಿಂದಲೆ ಅಸಾಧಾರಣವಾಗಿ ಮನಂಗೊಳಿಸುತ್ತಿದ್ದ ಇಂದ್ರಾಯುಧವನ್ನು ಚಂದ್ರಾಪೀಡನೆಡೆಗೆ ಮೊದಲು ತಂದಾಗ ಆ ದಿವ್ಯಾಶ್ವವನ್ನು ನೋಡಿದೊಡನೆ ರಾಜಪುತ್ರನು ಕುದುರೆಯ ‘ಮಹಾ ಪ್ರಾಣತೆ’ಗೂ ಅದರ ತೇಜದೇಳ್ಗೆಗೂ ಅಚ್ಚರಿವಟ್ಟು “ದೇವತಾತ್ಮನೋ ಪೇಳ್ ಇದು? ದಿಟಂ; ಏರಲ್ಕೆ ಶಂಕೆ ಪುಟ್ಟಿದುದೀಗಳ್!” ಎಂದುಕೊಂಡು “ಕ್ಷಮೆಯಂ ಮಾಡಶ್ವ ನೀನಾರಱೆ ಯೆನದಱೆನ್” ಎಂದದರ ಕ್ಷಮೆಬೇಡಿ, ಆ ಮಹಾಶ್ವದ ಆಕೇಕರದ ಅನುಮತಿಯನ್ನೂ ಹೇಷಾರವದ ಅನುಜ್ಞೆಯನ್ನೂ ಪಡೆದ ತರುವಾಯವೆ ಅದನ್ನಾರೋಹಣಂಗೆಯ್ವಂತೆ ಮಾಡಿದ ಮಹಾಕವಿ ಅಚ್ಛೋದ ಸರೋವರಕ್ಕೆ ತನ್ನ ವರ್ಣನಾ ಪೂಜೆಯನ್ನು ಸಲ್ಲಿಸುವ ವಿಷಯದಲ್ಲಿ ಎಂದಾದರೂ ಅವಜ್ಞೆ ತೋರಿಯಾನೆ? ಕವಿಯ ಅಂತರ್ದೃಷ್ಟಿಗೆ ಅಚ್ಛೋದ ಸರೋವರ ಬರಿಯ ನೀರಿನ ವಿಸ್ತಾರವಲ್ಲ. ಕಾದಂಬರೀ ಕಾವ್ಯದ ಕಥಾಸಮಸ್ತಕ್ಕೂ ಅದು ಅಧ್ಯಕ್ಷತೆ ವಹಿಸುತ್ತದೆ. ಪ್ರತಿಮಾವಿಧಾನದಿಂದ ಅವಲೋಕಿಸಿದರೆ, ಅದು ಧರ್ಮದೇವತೆಯ ಸಲಿಲಾಕ್ಷಿಯಂತೆಯೂ ಕರ್ಮದೇವತೆಗೆ ಸರಸ್ಸಾಕ್ಷಿಯಾಗಿಯೂ ಸೇವೆ ಸಲ್ಲಿಸುತ್ತದೆ ಎಂಬುದು ಹೃತ್‌ಸಂವೇದ್ಯವಾಗುತ್ತದೆ. ಅದು ತಪಸ್ವಿಗಳಿಗೆ ಆಶ್ರಮಸ್ಥಾನ. ತಪಸ್ವಿಗಳಿಗೆಲ್ಲ ಸರ್ವೋತ್ತಮ ತಪಸ್ವಿಯಾದ ಆ ಕೈಲಾಸೇಶ್ವರನಿಗೂ ಅದು ತಪೋರಂಗವಾಗಿತ್ತು. ಆ ಸರೋವರದ ತರುಸುಂದರ ತೀರಪ್ರದೇಶಗಳಲ್ಲಿಯೆ ಕಾದಂಬರೀ ಮಹಾಕಾವ್ಯದ ಮಹತ್ಕಥೆಗೆ ಅಂಕುರಾರ್ಪಣವಾಗುತ್ತದೆ. ಪುಂಡರೀಕ ಮಹಾಶ್ವೇತೆಯರ ಪ್ರಥಮದರ್ಶನಕ್ಕೆ ತನ್ನ ರಮಣೀಯ ವನ್ಯತಟ ವೇದಿಕೆಯನ್ನು ಸಮೆಯುವುದೂ ಆ ಸರೋವರವೆ. ಅವರಿರ್ವರ ಪ್ರಪ್ರಥಮ ಪ್ರಣಯ ಪ್ರರೋಹಣೆಗೆ ಫಲವತ್ತಾದ ಶೃಂಗಾರರಂಗವನ್ನು ನೇರ್ಪಡಿಸುವುದೂ ಆ ಸರೋವರವೆ. ಕಾಮದ ಕಲ್ಮಷವಿರೇಚನಕ್ಕೆ ಅಗ್ನಿಕುಂಡವೇರ್ಪಡುವುದೂ ಆ ದಿವ್ಯಸರಸ್ಸಾನ್ನಿಧ್ಯದಲ್ಲಿಯೆ. ಪರೀಕ್ಷೆಗೂ ಶಿಕ್ಷೆಗೂ ಕರ್ಮಬಾಹು ತನ್ನ ಧರ್ಮ ದಂಡವನ್ನೆತ್ತುವುದೂ ಆ ಕಮಲಾಕರದ ಸಮಕ್ಷದಲ್ಲಿಯೆ. ಮಹಾಶ್ವೇತೆಯ ಲೋಕತ್ರಯಾಶ್ಚರ್ಯಕರವಾದ ಅಮೃತ ತಪಸ್ಯೆ ಪ್ರಾರಂಭವಾಗುವುದೂ, ಆಕೆ ತನ್ನ ಸಾತ್ವಿಕ ತಪಶ್ಯಕ್ತಿಯ ಚಿರಕಲ್ಯಾಣಮಯಿಯಾದ ಇಚ್ಛೆಯ ಆವರ್ತಮಾರುತದ ಕ್ಷೇಮಂಕರ ಹಸ್ತದಿಂದ, ಕರ್ಮವಶರಾಗಿ ನಾನಾ ಲೋಕಗಳಲ್ಲಿ ನಾನಾ ಯೋನಿಗಳಲ್ಲಿ ನಾನಾ ರೀತಿಗಳಲ್ಲಿ ಬಿದ್ದೆದ್ದು ತೊಳಲುತ್ತಿದ್ದ ಮಹದ್ವ್ಯಕ್ತಿಗಳನ್ನು ಎತ್ತಿ ಉದ್ಧಾರ ಮಾಡುವುದೂ ಆ ಸರೋವರದ ಕುಶಲಪರಿಣಾಮಕರವಾದ ನೇತೃತ್ವದಲ್ಲಿಯೆ ಅಂತಹ ಮಹತ್ ಸರೋವರ ಬರಿಯ ಕೆರೆಯೆ? ಅದರ ವರ್ಣನೆಯ ಪ್ರಯೋಜನ ಅಲಂಕಾರ ಮಾತ್ರ ನಿಷ್ಠವೆ? ಅಥವಾ ಇಲ್ಲಿಗೆ ಸಾಲ್ವುದೆ ಬರಿಯ ಪ್ರತಿಕೃತಿಯ ಕಲೆ?

ಇಂದ್ರಾಯುಧಾರೋಹಿ ಚಂದ್ರಾಪೀಡನು ಕಿನ್ನರ ಮಿಥುನದ ಬೆಂಬಳಿವಿಡಿದು, ಪರಿವಾರದವರನ್ನೆಲ್ಲ ಹಿಂದಿಕ್ಕಿ, ತಾನೊಬ್ಬನೆ ಅರಣ್ಯಮಯವೂ ನರವಿಹೀನವೂ ಆದ ಹಿಮಾಚಲ ಶ್ರೇಣಿಯ ನೆತ್ತಿಗೇರಿ, ಕೈಲಾಸಪರ್ವತದ ಸನಿಹಕ್ಕೆ ಬರುತ್ತಾನೆ. ಬೇಟೆಯಾಯಾಸದಿಂದಲೂ ದುರ್ಮೋಹದುದ್ಯೋಗದ ನಿರರ್ಥಕತೆಯಿಂದಲೂ ಪರಿವಾರದವರಿಗೆ ವೃಥಾ ಉದ್ವೇಗ ಕಾರಣನಾದೆನಲ್ಲ ಎಂಬ ವ್ಯಾಕುಲತೆಯಿಂದಲೂ ಧ್ಯಾನಾಧೀನಮನಸ್ಕನಾಗಿ ನಿಂದ ಆ ಉರ್ವೀಶ್ವರನು “ತುರಂಗಮಕ್ಕೆ ಘನವಾದತ್ತು ಶ್ರಾಂತಿ, ನೀರ್ದಾಣಮಂ ನೋಡಿ, ಮೆಲ್ಲನೆ ಸಾರ್ದು, ಬೞಲ್ಕೆಯಂ ಕಳೆದು, ಬಱೆಕ್ಕೆ ನಾಂ ಪೋಪೆನ್” ಎಂದು ವಾರಿನಿವಾಸಂಗಳಿಗಾಗಿ ನಾಲ್ದೆಸೆಗಳಲ್ಲಿಯೂ ನೋಡುತ್ತಾನೆ. ನಿರೀಕ್ಷಣೆಯ ಸಾಧನೆಗೆ ಸಿದ್ಧಿಯ ಪೂರ್ವಸೂಚನೆ ಮೈದೋರುವಂತೆ ಗದರೆ

ಕುಮುದರಜಂಗಳೊಳ್ ಪೊರೆದು ವಾಃಕಣಜಾಲಮನಾಂತು ಕೂಡೆ ವಿ
ಶ್ರಮಿಸಿ ತರಂಗಮಾಲಿಕೆಗಳೊಳ್ ಕಲಹಂಸನಿನಾದ ಬಂಭ್ರಮ
ದ್ಬ್ರನರ ರವಂಗಳೊಳ್ ಬೆರಸಿ ಮಾರುತನೊಯ್ಯನೆ ಬಂದು ತೀಡಿದ
ತ್ತಮರ್ದೊಸೆದಪ್ಪಿಕೊಂಡು ಕರೆವಂತೆವೊಲಾ ಮನುಜೇಂದ್ರ ಚಂದ್ರನಂ.

ಆ ಹಿತಸೂಚನೆಯ ಶುಭಶ್ರದ್ಧೆಯೊಡನೆ ಮುಂಬರಿದ ಚಂದ್ರಾಪೀಡನ, ಇಂದ್ರಾಯುಧದ ಬೆನ್ನೇರಿ ನಿಮಿರಿ ನಿಟ್ಟಿಸುತ್ತಿದ್ದ ಕಣ್ಣಿಗೆ ತೆಕ್ಕನೆ ಬೀಳುತ್ತದೆ, ಅಚ್ಛೋದ ಸರೋವರ. ಅದರ ಹಠಾತ್ ದೃಗ್ಗೋಚರವಾಗುವಿಕೆಯನ್ನು ನಾವು ಗಮನಿಸಬೇಕು. ಅದನ್ನು ಹಿಂದವನು ಕಂಡಿಲ್ಲ, ಕೇಳಿಲ್ಲ. ಅದು ಅನಿರೀಕ್ಷಿತ, ಆಶ್ಚರ್ಯಕರ, ಸಂಪೂರ್ಣವಾಗಿ ಅಪರಿಚಿತ! ದುರ್ಯೋಧನನಿಗೆ ವೈಶಂಪಾಯನ ಸರೋವರ ಪೂರ್ವಪರಿಚಿತ. ಅದನ್ನವನು ಅನೇಕಸಾರಿ ಕಂಡಿದ್ದಿರಬಹುದು. ಅದರಲ್ಲಿ ಮಿಂದೂ ಇದ್ದಿರಬಹುದು. ಅದು ಅಲ್ಲಿದೆ ಎಂಬ ವಿಚಾರದಲ್ಲಾಗಲಿ, ಸಾಮಾನ್ಯವಾಗಿ ಅದು ಎಂತಿರುತ್ತದೆ ಎಂಬ ವಿಚಾರದಲ್ಲಾಗಲಿ ಅವನಿಗಾದ ಶಂಕೆಯಾಗಲಿ ಕುತೂಹಲವಾಗಲಿ ಇಲ್ಲ. ಅವನಿಗೆ ನೀರು ಬೇಕಾದುದು ಚಂದ್ರಾಪೀಡನಿಗೆ ಬೇಕಾದಂತೆ ಶ್ರಾಂತಿಯ ಪರಿಹಾರಕ್ಕಲ್ಲ, ಸೇದೆಯ ನಿವಾರಣೆಗಲ್ಲ, ಕುಡಿಯಲಲ್ಲ, ಮೀಯಲಲ್ಲ, ಕುಡಿಯಿಸಲಿಕ್ಕೂ ಅಲ್ಲ, ಮೀಯಿಸಲಿಕ್ಕೂ ಅಲ್ಲ: ಹೊಕ್ಕು ತಲೆಮರೆಯುವುದಕ್ಕೆ ಮಾತ್ರ. ಪಂಪ ಮಹಾಕವಿ ಒಂದಿನಿತೂ ಎಚ್ಚರತಪ್ಪದೆ ವರ್ತಿಸುತ್ತಾನೆ. ಆ ಸಮಯದ ದುರ್ಯೋಧನನಿಗೆ ಆ ಸಮಯದಲ್ಲಿ ಅದು ಹೇಗೆ ಕಂಡಿತು ಎಂಬುದರಲ್ಲಿ ಮಾತ್ರ ಅವನು ಆಸಕ್ತ. ಕೊಳದ ಹೂವುಗಳಿಂದ ಕಂಪುಹೊತ್ತು ಬೀಸುವ ಗಾಳಿಯಲ್ಲಾಗಲಿ, ತುಂತುರು ಹನಿಗಳಿಂದ ಕೂಡಿದ ಆ ಗಾಳಿಯ ತಣ್ಪಿನಲ್ಲಾಗಲಿ, ‘ಕಲಹಂಸ ನಿನಾದ ಬಂಭ್ರಮದ್‌ಭ್ರಮರ ರವಂಗಳಲ್ಲಾಗಲಿ’ ದುರ್ಯೋಧನ ಸಂಪೂರ್ಣವಾಗಿ ವಿರಕ್ತ; ಅದಕ್ಕಿಂತಲೂ ಹೆಚ್ಚಾಗಿ ಅನಾಸಕ್ತ. ಪಂಪನೂ ‘ಕಳಹಂಸ ಕೋಕನಿಕರ ಧ್ವನಿ’ಯ ವಿಚಾರವಾಗಿ ಮಾತೆತ್ತಿದರೂ ಅದರ ಉದ್ದೇಶ ಬೇರೆ, ಫಲ ಬೇರೆ. ಅಚ್ಛೋದ ಸರೋವರದಿಂದ ಬೀಸುವ ಗಾಳಿ ಮನುಜೇಂದ್ರ ಚಂದ್ರನಾದ ಚಂದ್ರಾಪೀಡನನ್ನು ‘ಅಮರ್ದೊಸೆದಪ್ಪಿಕೊಂಡು ಕರೆ’ದರೆ ವೈಶಂಪಾಯನ ಸರಸ್ಸಿನಲ್ಲಿದ್ದ ‘ಕಳಹಂಸ ಕೋಕನಿಕರ ಧ್ವನಿ’ ‘ರುಂದ್ರ ಫಣೀಂದ್ರಕೇತು’ವನ್ನು ಕುರಿತು ‘ಇಲ್ಲಿ ಬಾೞ್ವರಂ ಕದಡದಿರ್, ಇತ್ತ ಬಾರದಿರು, ಸಾರದಿರು!’ ಎಂದು ಒದರುತ್ತದೆ, ಹುಯ್ಯಲಿಡುತ್ತದೆ. ಅಲ್ಲಿ ‘ದಯಮಾಡಿಸಯ್ಯ’ ಎಂಬ ಆಹ್ವಾನವಿದ್ದರೆ ಇಲ್ಲಿ ‘ತೊಲಗಯ್ಯೋ’ ಎಂಬ ಹುಯ್ಯಲು ಕೇಳಿಸುತ್ತದೆ. ಆಗಿನ ದುರ್ಯೋಧನನ ಕಣ್ಣಿಗೆ ಅವನು ಹಿಂದೆ ಎನಿತೆನಿತೊ ಸಾರಿ ನೋಡಿ ಮೆಚ್ಚಿಕೊಂಡಿರಬಹುದಾಗಿದ್ದ ಆ ವೈಶಂಪಾಯನ ಸರಸ್ಸು ಹೇಗೆ ಕಂಡಿತು ಎಂಬುದನ್ನು ಬಣ್ಣಿಸುವಾಗ ಪಂಪ ಮಹಾಕವಿಯ ಅಯತ್ನ ಪ್ರತಿಭೆ ‘ಇದು ಪಾತಾಳ ಬಿಲಕ್ಕೆ ಬಾಗಿಲ್’ ಎಂದು ಪ್ರಾರಂಭಿಸಿ ಮೃತ್ಯುಮಯ ತಮೋಲೋಕವನ್ನು ‘ಧ್ವನಿ’ಸುತ್ತದೆ. ನಾಗವರ್ಮನು ತನ್ನ ಕಥೆಗೆ, ತನ್ನ ಪಾತ್ರಕ್ಕೆ, ತನ್ನ ಸನ್ನಿವೇಶಕ್ಕೆ, ತನ್ನ ಕಾವ್ಯೋದ್ದೇಶಕ್ಕೆ ಮತ್ತು ತನ್ನ ‘ದರ್ಶನ’ದ ಅಂತಿಮ ಪ್ರಯೋಜನಕ್ಕೆ ತಕ್ಕಂತೆ ಆಶ್ಚರ್ಯ, ಆನಂದ, ಸತ್ತ್ವ, ಸಂತೋಷ, ಸೌಂದರ್ಯ, ಬೃಹತ್ತು, ಮಹತ್ತು, ಭವ್ಯತೆ ಈ ದೈವೀಭಾವಗಳ ಉನ್ಮೀಲನ ಮತ್ತು ಉನ್ಮೇಷಣಕ್ಕೆ ಪ್ರೇರಕವಾಗುವ ತಪೋಲೋಕಪ್ರಕೃತವಾದ ಪದಶ್ರೀಯಿಂದ ಪ್ರಚುರನಾಗಿ ಅಚ್ಛೋದ ಸರೋವರದ ವರ್ಣನೆಗೆ ತೊಡಗುತ್ತಾನೆ:

ಎಲೆ ತಾರಾಗಂ ಹರಂ ಕಣ್ಣಿಡೆ ಕರಗಿದುದಂತಲ್ತು ರುದ್ರಾಟ್ಟಹಾಸಂ
ಜಲಮಾದತ್ತಲ್ತು ಚಂದ್ರಾತಪಮಮೃತರಸಾಕಾರಮಾಯ್ತಲ್ತು ಹೈಮಾ
ಚಲಮಂಭೋರೂಪದಿಂದಂ ಪರಿಣಮಿಸಿದುದಂತಲ್ತು ನೈರ್ಮಲ್ಯ ಶೋಭಾ
ಕಲಿತಂ ತ್ರೈಲೋಕ್ಯ ಲಕ್ಷೀ ಮಣಿಮುಕುರಮೆನಲ್ ಚೆಲ್ವದಾಯ್ತಬ್ಜಷಂಡಂ

ಕುದುರೆ ಏರಿ, ಪರ್ವತಶ್ರೇಣಿಯ ಕಂದರ ಶಿಖರಪ್ರದೇಶಗಳ ನಿಮ್ನೋನ್ನತಗಳನ್ನು ಇಳಿದೇರಿ, ಮುಂಬರಿಯುತ್ತಿದ್ದ ಚಂದ್ರಾಪೀಡನು ಅದೊಂದು ದಿಣ್ಣೆಯನ್ನೇರುತ್ತ ಅದರ ನೆತ್ತಿಯನ್ನು ಸೇರಿದೊಡನೆ, ತೆಕ್ಕನೆ ಕಣ್ಗೊಳಿಸುತ್ತದೆ, ಅನಿರೀಕ್ಷಿತವಾಗಿ, ಆಶ್ಚರ್ಯೋದ್ದೀಪಕವಾಗಿ, ಅಚ್ಛೋದ ಸರೋವರ. ಆದ್ದರಿಂದಲೆ ಕವಿ “ಎಲೆ!” ಎಂಬ ಆಶ್ಚರ್ಯಸೂಚಕವಾದ ಶಬ್ದದಿಂದ ವರ್ಣನೆಗೆ ದುಮ್ಮಿಕ್ಕುತ್ತಾನೆ. ಆ ನೀರಿನ ಹರವು ಬಿಸಿಲನ್ನು ಮರುಬಿಂಬಿಸಿ ತಳತಳನೆ ಕರಗಿದ ಬೆಳ್ಳಿಯಂತೆ ರಾರಾಜಿಸುತ್ತದೆ. ಮೊದಲು ನೋಡುವುದೂ ಗ್ರಹಿಸುವುದೂ ಕಣ್ಣಾದ್ದರಿಂದ ಕವಿ ಆ ಇಂದ್ರಿಯ ಜ್ಞಾನಕ್ಕೆ ಪ್ರಥಮಸ್ಥಾನ ಕೊಡುತ್ತಾನೆ. ಬೆಳ್ಳಿ ಅಲ್ಲಿಗೆ ಎಲ್ಲಿಂದ ಬರಬೇಕು? ಬೆಳ್ಳಿಯ ಬೆಟ್ಟ ಕೈಲಾಸವೆ ಬಳಿಯಿದೆ! ಆದರೆ ಅದು ಕರಗುವುದೆಂತು? ಯಾವ ಸಾಮಾನ್ಯಾಗ್ನಿ ಆ ದಿವ್ಯ ಪರ್ವತವನ್ನು ಕರಗಿಸಬಲ್ಲದು? ಇನ್ನಾವ ಅಗ್ನಿಯಿಂದಲೂ ಆಗದು; ಹರನ ಮೂರನೆಯ ಕಣ್ಣಿನಿಂದ ಮಾತ್ರ ಸಾಧ್ಯ. ‘ತಾರಾಗಂ ಹರಂ ಕಣ್ಣಿಡೆ ಕರಗಿದುದು.’ ಅಲ್ಪ ಸ್ವಲ್ಪ ಬೆಳ್ಳಿ ಕರಗಿದರೆ ಅಚ್ಛೋದ ಸರೋವರದ ವೈಶಾಲ್ಯ ಹೇಗೆತಾನೆ ಸಿದ್ಧಿಸೀತು? ಅಷ್ಟು ವಿಸ್ತಾರವಾದ ದ್ರವೀಭೂತ ರೌಪ್ಯ ಸರೋವರ ಸಿದ್ಧವಾಗಬೇಕಾದರೆ ಬೆಳ್ಳಿಯ ಬೆಟ್ಟವೆ ಕರಗಬೇಕಲ್ಲವೆ! ತಾನೂ ಗೌರಿಯೂ ನಿತ್ಯವೂ ವಾಸಿಸುವ ತಮ್ಮ ಮೋಹದ ಮನೆಯಾದ ಬೆಳ್ಳಿಯ ಬೆಟ್ಟವನ್ನು ಮುಕ್ಕಣ್ಣನು ಎಂದಾದರೂ ಕರಗಿಸುತ್ತಾನೆಯೆ? ಹಾಗೆ ಮಾಡುವುದು ಕೋಪದ ವಿಷಯ. ಅದಕ್ಕಿಲ್ಲಿ ಕಾರಣವಿಲ್ಲ. ಆದ್ದರಿಂದ ‘ಅಂತಲ್ತು’ ಎಂದುಕೊಂಡ ಚಂದ್ರಾಪೀಡನಿಗೆ ಆ ಸರೋವರ ಮತ್ತೆ ‘ರುದ್ರಾಟ್ಟಹಾಸಂ ಜಲಮಾದತ್ತು’ ಎಂಬಂತೆ ತೋರುತ್ತದೆ. ಮೊದಲನೆಯ ಹೋಲಿಕೆ ರುದ್ರನ ಕೋಪವನ್ನು ಮನಸ್ಸಿಗೆ ತರುವುದಾದರೆ ಎರಡನೆಯ ಉಪಮಾನ ಪಾರ್ವತೀ ಪತಿಯ ಉತ್ಕಟ ಹರ್ಷವನ್ನು ಮನಸ್ಸಿಗೆ ತರುತ್ತದೆ. ಗೌರಿಯೊಡನೆ ಸರಸಸಲ್ಲಾಪದಲ್ಲಿರುವ ಮಹೇಶ್ವರ ಯಾವುದೋ ವಿನೋದದಿಂದ ನಗುತ್ತಾನೆ. ರುದ್ರನ ನಗೆ! ಜಗತ್ಪತಿಯ ಅಟ್ಟಹಾಸ! ಹಹ್ಹಹ್ಹಹ್ಹಹ್ಹ ಎಂದೆದ್ದು ತರಂಗ ತರಂಗವಾಗಿ ವ್ಯಾಪಿಸಿ ಲೋಕಾಂತರಗಳನ್ನು ಮುಟ್ಟುತ್ತದೆ; ದಿಕ್ತಟಗಳನ್ನು ತಟ್ಟುತ್ತದೆ; ವಿಶ್ವಜಡವನ್ನು ವಿಶ್ವಚೇತನಕ್ಕೆ ಎಚ್ಚರಿಸುತ್ತದೆ. ಆ ರುದ್ರಾಟ್ಟಹಾಸವೆ ಜಲವಾಯ್ತು! ನಗೆ ಬೆಳ್ಳಗಿದೆ ಎಂಬ ಕವಿಸಮಯ ಮಾತ್ರವಲ್ಲ ಈ ಹೋಲಿಕೆಯ ಪ್ರಯೋಜನ. ಅದೂ ಅಲ್ಲದೆ ಬೆಳ್ಳಗಿದೆ ಎಂಬ ವಿಷಯವನ್ನು ಹಿಂದಿನ ಉಪಮೆಯೆ ಸಾಧಿಸಿದೆ. ಈ ಎರಡನೆಯ ಉಪಮೆ ಸಾಧಿಸುವುದು ಕಣ್ಣಿಗೆ ವಿಷಯ ಮಾತ್ರವನ್ನಲ್ಲ, ಅದಕ್ಕಿಂತಲೂ ಮುಖ್ಯವಾಗಿ ಕಿವಿಯ ವಿಷಯವನ್ನು. ಚಂದ್ರಾಪೀಡನು ಮೊದಲು ನೋಡಿ ಕಾಣುತ್ತಾನೆ. ಹಾಗೆಯೆ ನಿಂತು ನೋಡುತ್ತಿರುವಾಗ ಅಲೆಗಳು ದಡಕ್ಕೆ ಅಪ್ಪಳಿಸುವ ಸದ್ದು ಕೇಳಿಸುತ್ತದೆ. ಆದರೆ ಅದು ಅಂತಿಂತಹ ಸಪ್ಪಳವಲ್ಲ. ಹಹ್ಹಹ್ಹಹ್ಹಹ್ಹ ಎಂದು ಪರಂಪರೆಯಾಗಿ ಕೇಳಿಬರುವ ರುದ್ರನ ಅಟ್ಟಹಾಸ. ಸರೋವರದ ತೆರೆ ದಡಕ್ಕಪ್ಪಳಿಸುವ ಜಲನಾದ ಅಷ್ಟೊಂದು ಭವ್ಯವಾಗಿ ಕಿವಿಗೆ ಬೀಳುತ್ತದೆ! ಗಾಳಿ ಬಲವಾಗಿ ಬೀಸುವಾಗ ಯಾವುದಾದರೂ ದೊಡ್ಡ ಕೆರೆಯೊಂದರ ಏರಿಯ ಮೇಲೆ ನಿಂತು ಗಮನವಿಟ್ಟು ಆಲಿಸಿದವರಿಗೆ ಸ್ವಲ್ಪವಾದರೂ ಅರ್ಥವಾಗುತ್ತದೆ, ಅನುಭವಕ್ಕೆ ಬರುತ್ತದೆ, ಚಂದ್ರಾಪೀಡನ ‘ರುದ್ರಾಟ್ಟಹಾಸಂ ಜಲಮಾದತ್ತು’ ಎಂಬ ರಸಾನುಭೂತಿ.

ಕವಿ ಮತ್ತೆ ಅದನ್ನೂ ‘ಅಲ್ತು’ ಎನ್ನುತ್ತಾನೆ. ಬೆಳ್ಳಿಯ ಬೆಟ್ಟ ಕರಗಿತು ಎಂಬ ಉಪಮೆಯಿಂದ ಸ್ಫುರಿಸುವ ಮಹೋಷ್ಣಭಾವವೂ ರುದ್ರನ ಅಟ್ಟಹಾಸದಿಂದ ಧ್ವನಿಸುವ ಮಹೋದಗ್ರಭಾವವೂ ಅಲ್ಲದೆ ಆ ಸರೋವರದಲ್ಲಿ, ಅದರಂಚಿಗೆ ಮುಂಬರಿದು ನೀರಿಗೆ ಹತ್ತಿರವಾಗುತ್ತಿದ್ದ ರಾಜಕುಮಾರನಿಗೆ ಮತ್ತೊಂದು ಸೌಮ್ಯಸುಂದರತೆ ಅಂತಃಕರಣ ಚುಂಬಿಯಾಗುತ್ತದೆ. ಆದ್ದರಿಂದಲೆ ಕವಿ ಮೇಲಿನ ಎರಡು ಹೋಲಿಕೆಗಳನ್ನೂ ‘ಅಲ್ತು’ ಎಂದು ‘ಚಂದ್ರಾತಪಂ ಅಮೃತ ರಸಾಕಾರಮಾಯ್ತು’ ಎನ್ನುತ್ತಾನೆ. ಬೆಳ್ದಿಂಗಳ ಹಾಲುಮಳೆ ಮಡುಗಟ್ಟಿತಂತೆ!

ಕುದುರೆ ಮತ್ತೂ ಹತ್ತುಮಾರು ಬಳಿ ಸಾರುತ್ತದೆ. ಚಂದ್ರಾಪೀಡನಿಗೆ ಆ ಸರೋವರದ ಹರವು ಎಲ್ಲೆ ಮೀರಿದಂತೆ ಕಾಣುತ್ತದೆ. ಅದರ ಅಮೇಯ ವಿಸ್ತಾರದ ಭೂಮಾನುಭೂತಿಗೆ ಕವಿ ಒಂದು ಭವ್ಯ ಪ್ರತಿಮೆಯನ್ನು ನಿರ್ಮಿಸುತ್ತಾನೆ: ‘ಹೈಮಾಚಲಂ ಅಂಭೋರೂಪದಿಂದಂ ಪರಿಣಮಿಸಿದುದು!’ ಸರೋವರದ ಬೃಹತ್ತಿಗೆ ಸಮಸ್ಪರ್ಧಿ ಹೈಮಾಚಲವಲ್ಲದೆ ಮತ್ತಾವುದು ತಾನೆ ಹೊಯ್‌ಕಯ್ ಆದೀತು!

ಕೊನೆಯದಾಗಿ ಇಂದ್ರಾಯುಧಾಶ್ವ ಸರೋವರದ ಅಂಚಿಗೇ ನಡೆದು ಬರುತ್ತದೆ. ಎಂತಹ ಚೇತೋಹಾರಿಯಾದ ದೃಶ್ಯದೇವತೆ ಕಣ್ತುಂಬಿ ಬಗೆತಬ್ಬಿ ಹಬ್ಬಿ ಹರಡುತ್ತದೆ, ಚಂದ್ರಾಪೀಡನ ನೇತ್ರ ನಿರ್ವಾಣೋತ್ಸವಕ್ಕೆ! ಯೋಜನ ಯೋಜನ ಹಸರಿಸಿರುವ ಪಳುಕಿನ ಕನ್ನಡಿಯಂತೆ ಬಾನನ್ನೂ ಅಲ್ಲಿ ತೇಲುವ ಮೋಡಗಳನ್ನೂ ದಡದಲ್ಲಿ ಉಕ್ಕಿ ಬೆಳೆದಿರುವ ವನಶ್ರೀಯನ್ನೂ ದಿಗ್ಭಿತ್ತಿ ಎಂಬಂತೆ ಒಂದೆಡೆಗೆ ಎದುರಾಗಿ ಹಬ್ಬಿರುವ ಬೆಳ್ಳನೆಯ ಕೈಲಾಸ ಪರ್ವತವನ್ನೂ ಮನೋಹರವಾಗಿ ಪ್ರತಿಬಿಂಬಿಸಿ ‘ನೈರ್ಮಲ್ಯ ಶೋಭಾಕಲಿತಂ ತ್ರೈಲೋಕ್ಯಲಕ್ಷ್ಮೀ ಮಣಿಮುಕುರಮೆನಲ್ ಚೆಲ್ವದಾಯ್ತಬ್ಜಷಂಡಂ!’ ತ್ರಿಲೋಕಲಕ್ಷ್ಮಿ ತನ್ನ ಸೌಂದರ್ಯದರ್ಶನಕ್ಕಾಗಿ ಹಿಡಿದಿರುವ ಶೋಭಾಕಲಿತವಾದ ಮಣಿದರ್ಪಣವಲ್ಲದೆ ಮತ್ತೇನು, ಆ ಮಣಿನಿಕಾಶೋದಕದ ಅಚ್ಛೋದ ಸರೋವರ! ವೈರಾಗಿಗಳ ಚಕ್ರವರ್ತಿ ಪರಮೇಶ್ವರನಿಗೂ ಮೋಹಕಾರಿಯಾಗಿತ್ತು ಎಂದಮೇಲೆ ಹೇಳುವುದೇನು ಆ ಸರೋವರದ ಸೌಂದರ್ಯವನ್ನು:

ಆವುವುಱೆದೆಡೆಗಳೆಂದು ಸ
ರೋವರಮಂ ನೋಡುತಿರ್ಪ ಬಗೆಯಿಂ ಕೈಲಾ
ಸಾವಾಸಮಂ ಬಿಡಂ ಗೌ
ರೀವಲ್ಲಭನೆಂದೊಡಾರಿದಂ ನೆಱೆಪೊಗೞ್ವರ್

ಹೀಗೆ ಮೊದಲಾಗುವ ಅಚ್ಛೋದ ಸರೋವರದ ಪರಿಚಯ ಬರಬರುತ್ತ ಗಾಢತರವೂ ಗಂಭೀರತರವೂ ಆಗಿ, ಕಡೆಗೆ ಗೌರವಪೂರ್ವವಾದ ಪೂಜ್ಯಭಾವಕ್ಕೂ ಭಾಜನವಾಗುತ್ತದೆ. ಮಹಾಶ್ವೇತೆಯ ತಪಸ್ಯೆಯಲ್ಲಿ ಕಂಡುಬರುವ ಶ್ರದ್ಧೆ, ದೃಢತೆ, ಪರಿಶುದ್ಧಿ, ಅಚಂಚಲತೆ, ಕುಶಲ ಪರಿಣಾಮದಲ್ಲಿ ನಿಸ್ಸಂಶಯತೆ, ಇತ್ಯಾದಿ ದೈವೀಗುಣಗಳಿಗೆ ಅಚ್ಛೋದ ನೀರಾಕರದ ನಿತ್ಯಸಾನ್ನಿಧ್ಯವೂ ನಿತ್ಯಸಂಸರ್ಗವೂ ನಿತ್ಯಸಂದರ್ಶನವೂ ಬಹುಮಟ್ಟಿಗೆ ಪ್ರೇರಕವೂ ಪ್ರೋತ್ಸಾಹಕವೂ ಪೋಷಕವೂ ಆಗಿದ್ದುವೆಂದರೆ ಸಂದೇಹಪಡವುದು ನಷ್ಟಚೇತಸ ಲಕ್ಷಣವಾದೀತು.

ಅಚ್ಛೋದದ ತೀರದ ವನಪ್ರದೇಶದಲ್ಲಿ ಮನೆಮಾಡಲು ಮನಸ್ಸು ಬರುವಂತೆ ವೈಶಂಪಾಯನ ತೀರದಲ್ಲಿ ನೆಲಸಲು ಮನಸ್ಸಾಗುವುದಿಲ್ಲ. ಅಚ್ಛೋದ ಶಾಂತಿಯ ಕುಟೀರ; ವೈಶಂಪಾಯನ ಅಶಾಂತಿಯ ರಣಕ್ಷೇತ್ರ. ಅಚ್ಛೋದ ತೀರ ತಪೋಮಯ, ವೈಶಂಪಾಯನ ತೀರ ರಜೋಮಯ. ಅಚ್ಛೋದತೀರ ನಮ್ಮ ಚಿರಕಲ್ಯಾಣಕ್ಕೂ ಪರಮಪುರುಷಾರ್ಥ ಸಾಧನೆಗೂ ಪುಣ್ಯವೇದಿಕೆ. ವೈಶಂಪಾಯನ ತೀರ ವೀರಧರ್ಮ ತಿರಸ್ಕಾರವಾದ ಕ್ರೋಧಕ್ಕೂ ಪ್ರತೀಕಾರ ಪೂರ್ಣವಾದ ವೈರ ಸಾಧನೆಗೂ ರಕ್ತರಂಬ. ಅಚ್ಛೋದ ಸರೋವರ ಶಾಂತ ದಿವ್ಯ; ವೈಶಂಪಾಯನ ರೌದ್ರಭವ್ಯ!

ಆದ್ದರಿಂದಲೆ ಪಂಪಮಹಾಕವಿ ಅದರ ವರ್ಣನೆಯನ್ನು ಧ್ವನಿ ಪ್ರಚುರವಾದ ಪ್ರತಿಮಾ ವಿಧಾನದಿಂದ ಪ್ರಾರಂಭಿಸುತ್ತಾನೆ. ಭೀಷ್ಮ ಸಂದರ್ಶನದ ತರುವಾಯ ಜಲಮಂತ್ರಶಿಕ್ಷಿತನಾಗಿ, ಕಾಲವಂಚನ ದೀಕ್ಷಿತನಾಗಿ, ಕುರುಕ್ಷೇತ್ರ ಸಮರ ಸಂಕ್ಷೋಭಿತಾಂತಃಕರಣನಾಗಿ, ಕೋಪ ದ್ವೇಷ ದುಃಖ ಸಂಕಟ ಚಲ ಪ್ರತೀಕಾರಾದಿ ಭಯಂಕರ ಭಾವಗಳಿಂದ ದಹ್ಯಮಾನನಾಗಿ ಬಳಿಸಾರಿದಾ ದುರ್ಯೋಧನನಿಗೆ ವೈಶಂಪಾಯನ ಸರೋವರ ತೋರಿದ ಪಾಂಗೆ ಬೇರೆ:

ಇದು ಪಾತಾಳ ಬಿಲಕ್ಕೆ ಬಾಗಿಲಿದು ದಲ್ ಘೋರಾಂಧಕಾರಕ್ಕೆ ಮಾ
ಡಿದ ಕೂಪಂ ಪೆಱತಲ್ತಿದುಗ್ರ ಲಯಕಾಳಾಂಭೋಧರಚ್ಛಾಯೆ ತಾ
ನೆ ದಲೆಂಬಂತಿರೆ ಕಾಚಮೇಚಕ ಚಯಚ್ಛಾಯಾಂಬುವಿಂ ಗುಣ್ಪಿನಿಂ
ಪುದಿದಿರ್ದತ್ತು ಸರೋವರಂ ಬಕ ಬಳಾಕಾನೀಕ ರಾವಾಕುಳಂ     (ಪಂ.ಭಾ. ೧೩-೭೨)
ಅದಟಿನ ವಿಕ್ರಮಾರ್ಜುನನ ಸಾಹಸಭೀಮನ ಕೋಪಪಾವಕಂ
ಪುದಿದಳುರ್ದಱ್ವೆ ಕೊಳ್ಳದಿರದಿಲ್ಲಿಯುಮೆಮ್ಮುಮನಿಲ್ಲಿ ಬಾೞ್ವರಂ
ಕದಡದಿರಿತ್ತ ಬಾರದಿರು ಸಾರದಿರೆಂಬವೊಲಾದುದೆತ್ತಮು
ನ್ಮದ ಕಳಹಂಸ ಕೋಕನಿಕರಧ್ವನಿ ರುಂದ್ರಫಣೀಂದ್ರ ಕೇತುವಂ (ಪಂ. ಭಾ. ೧೩-೭೩)

ಪಂಪನು ಉಪಯೋಗಿಸುವ ಮೂರು ರೂಪಕಗಳು ದುರ್ಯೋಧನನ ಜೀವಿತದಶೆಗೂ ಅವನ ಅಂತಃಸ್ಥಿತಿಗೂ ಕೆತ್ತಿದ ಪ್ರತಿಮೆಗಳಂತಿವೆ. ಮೂರನೆಯ ಹೋಲಿಕೆಯಂತೂ ಆತನಿಗೆ ಮುಂದೊದಗಲಿರುವ ಗತಿಗೆ ಭವಿಷ್ಯ ನುಡಿಯುವಂತಿದೆ. ಸರೋವರದ ಹೊರಮೆಯ್ಯ ಚೆಲುವಿನಲ್ಲಿ ದುರ್ಯೋಧನ ಅನಾಸಕ್ತನಾದದ್ದು ಮಾತ್ರವಲ್ಲ, ಅದು ಇಲ್ಲಿ ಕವಿಗೂ ಅಪ್ರಕೃತ. ಸರೋವರ ಹೇಗೆ ಕಂಡಿತು ಎಂಬುದನ್ನು ರೂಪಕಗಳಿಂದ ಬಣ್ಣಿಸುವಂತೆ ತೋರಿದರೂ ಅದು ಗೌಣ. ಮುಖ್ಯವಾದುದು ಅದರಿಂದ ಹೊಮ್ಮುವ ಧ್ವನಿ. ಪಾತಾಳ ಬಿಲಕ್ಕೆ ಬಾಗಿಲ್ ಎನ್ನುವುದರಿಂದ ಆಳವಾಗಿತ್ತೆಂದೂ, ಘೋರಾಂಧಕಾರಕ್ಕೆ ಮಾಡಿದ ಕೂಪಂ ಎನ್ನುವುದರಿಂದ ನೀನು ಕರ್ರಗಿತ್ತೆಂದೂ ವ್ಯಾಖ್ಯಾನ ಮಾಡಿ ಅಲಂಕಾರಗಳನ್ನು ಹೇಳಿ ಎಲ್ಲ ಪೂರೈಸಿತೆಂದು ಮುಂದುವರಿಯುವುದು ಕುರುಡುಗಾಂಪು. ಪಾತಾಳ ಬಿಲಕ್ಕೆ ಬಾಗಿಲ್ ಎನ್ನುವುದು ಕೊಳದ ಆಳವನ್ನು ಸೂಚಿಸುವುದಕ್ಕಿಂತಲೂ ಅತಿಶಯವಾಗಿ ಕುರುಚಕ್ರವರ್ತಿಯ ಪತನದ ಆಳ ಅನಿತಿನಿತಲ್ಲ, ಪಾತಾಳದವರೆಗೂ ಇಳಿಯುತ್ತದೆ ಎಂಬುದನ್ನು ಸರಸ್ಸು ಸಾರುತ್ತದೆ. ಘೋ ರಾಂಧಕಾರಕ್ಕೆ ಮಾಡಿದ ಕೂಪಂ ಎನ್ನುವುದರಲ್ಲಿ ಆ ಪತನದಲ್ಲಿರುವ ಅಪಕೀರ್ತಿ, ತಮಸ್ಸು, ಅವಿವೇಕ, ಅಂಧಕಾರ ಮತ್ತು ಅದರ ಘೋರತೆ ಇವು ಪ್ರತಿಮಾನವಾಗುತ್ತವೆ. ಇನ್ನು ಉಗ್ರಲಯಕಾಳಾಂಭೋಧರಚ್ಛಾಯೆ ಎಂಬ ರೂಪಕವಂತೂ ‘ಲಯ’ ಮತ್ತು ‘ಕಾಲ’ ಎಂಬ ಪದಗಳಿಂದ ಮೃತ್ಯುಚ್ಛಾಯೆಯೇ ಸರೋರೂಪಿಯಾಗಿ ದುರ್ಯೋಧನನಿಗಾಗಿ ಬಾಯಿ ತೆರೆದಿರುವುದನ್ನು ಘೋಷಿಸುವಂತಿದೆ. ಸಾವು ಕರ್ರಗೆ ಕರಾಳವಾಗಿ ಆಳವಾಗಿದ್ದ ತನ್ನ ಕೂಪಾಸ್ಯವನ್ನು ‘ಆ!’ ಎಂದು ತೆರೆದು ವೈಶಂಪಾಯನ ಕಾಸಾರ ರೂಪದಲ್ಲಿ ಭೀಮವೈರಿಯನ್ನು ಇದಿರುನೋಡುತ್ತಿತ್ತು ಎಂಬ ಅಂತಸ್ಸತ್ಯವನ್ನು ಕವಿ ಅತ್ಯಂತ ಶ್ಲಾಘನೀಯವಾಗಿ ಸಾಧಿಸಿದ್ದಾನೆ. ‘ಕಾಚಮೇಚಕ ಚಯಚ್ಛಾಯಾಂಬುವಿಂ ಗುಣ್ಪಿನಿಂ’ ಎಂಬ ಹೊರಮೆಯ್ಯ ಬಣ್ಣನೆಯಿಂದ ಮೇಲೆ ವಿವರಿಸಿದುದನ್ನು ಸಾಧಿಸಿ, ಮುಂದಿನ ಪದ್ಯದಲ್ಲಿ (೧೩-೭೩) ‘ಬಕ ಬಳಾಕಾವೀಕ ರಾವಾಕುಳಂ ಸರೋವರಂ’ ಎಂಬುದನ್ನು ಸಾರ್ಥಕಗೊಳಿಸುತ್ತಾನೆ.

ಆ ಪದ್ಯದಲ್ಲಿ ಅಲಂಕಾರಶಾಸ್ತ್ರ ದೃಷ್ಟಿಗೆ ‘ಉತ್‌ಪ್ರೇಕ್ಷೆ’ ತೋರಿದರೂ ಒಳಹೊಕ್ಕು ಕಾಣುವ ಸಹೃದಯನಿಗೆ ಅಲ್ಲಿರುವುದು ‘ಸ್ವಭಾವೋಕ್ತಿ.’ ಆ ಪದ್ಯದ ಬಹಿರಾಕೃತಿಯನ್ನು ಬಹಿರ್‌ದೃಷ್ಟಿಯಿಂದ ಮಾತ್ರ ಗಮನಿಸಿದರೆ ಅದು ಉತ್‌ಪ್ರೇಕ್ಷೆಯಂತೆ ತೋರುತ್ತದೆ. ಅದು ಯಾವ ಭಾವಸಂಕುಲಗಳಿಗೆ ಪ್ರತಿಮೆಯಾಗಿ ಕವಿಯ ಅಂತಶ್ಚೇತನದ ಅಲಂಘ್ಯನಿಯತಿಗೆ ಅಧೀನವಾಗಿ ಮೆಯ್‌ವೆತ್ತು ಮೂಡಿದೆಯೋ ಆ ಭಾವಸತ್ಯವನ್ನೂ ಕವಿಯ ಅನುಭವದ ಆ ರಸಲೋಕದ ರೀತಿ ನೀತಿ ವ್ಯಾಪಾರ ಚೇಷ್ಟಿತಗಳನ್ನೂ ಲಕ್ಷಿಸಿದರೆ ಅದು ‘ಸ್ವಭಾವೋಕ್ತಿ.’ ಏಕೆಂದರೆ ಅಲ್ಲಿರುವ ಕಾವ್ಯಲೋಕಸತ್ಯವು ಈ ಲೋಕ ಸತ್ಯದಂತೆ ತನ್ನದೆ ಒಂದು ಸಮಾನಸತ್ಯವಾದ ಋತನಿಯಮದಿಂದ ಕ್ರಮಬದ್ಧವಾಗಿದೆ. ಆದ್ದರಿಂದ ಅಲ್ಲಿ ‘ಕಳಹಂಸ ಕೋಕನಿಕರ ಧ್ವನಿ’ ಬರಿಯ ಧ್ವನಿಯಲ್ಲ, ‘ಧ್ವನಿ’ ಪೂರ್ಣವೂ ಆಗಿದೆ.

ಯಾವನಾದರೂ ಮನುಷ್ಯ ಬಳಿಸಾರಿದರೆ ಯಾವ ಕೊಳದ ಹಕ್ಕಿಗಳಾದರೂ ಗಾರಾಗಿ ಕೂಗಿಕೊಂಡು ಹಾರಿ ದೂರ ಹೋಗುವುದು ಲೋಕ ಪ್ರಕೃತಿಯ ಸಹಜವ್ಯಾಪಾರ. ಅಂತೆಯೆ ವೈಶಂಪಾಯನ ಸರೋವರದಲ್ಲಿದ್ದ ‘ಬಕ ಬಳಾಕಾನೀಕ’ವೂ ‘ಕಳಹಂಸಕೋಕನಿಕರ’ವೂ ‘ರುಂದ್ರ ಫಣೀಂದ್ರ ಕೇತು’ವಾದ ಕೌರವನು ಕೊಳದ ಬಳಿ ಸಾರುತ್ತಿದ್ದುದನ್ನು ಕಂಡು ಕೂಗಿಕೊಳ್ಳುವುದು ಸ್ವಭಾವ ಸಿದ್ಧ. ಲೋಕಸಹಜ ವ್ಯಾಪಾರದ ದೃಷ್ಟಿಯಿಂದ ಆ ಉಲಿ ಹಕ್ಕಿಗಳ ಭಯಕ್ಕೆ ಸೂಚಕವೇ ಹೊರತು ಅದಕ್ಕೂ ಹೆಚ್ಚಿನ ಇನ್ನಾವ ಅರ್ಥವೂ ಅದಕ್ಕೆ ಇರುವುದಿಲ್ಲ. ಅಲ್ಲದೆ ತಮ್ಮೆಡೆಗೆ ಬರುತ್ತಿರುವವನು ದುರ್ಯೋಧನ ಎಂದಾಗಲಿ ಆತನು ಕುರುಕ್ಷೇತ್ರ ಸಂಗ್ರಾಮದಲ್ಲಿ ಸೋಲ್ಪಟ್ಟು ಅಡಗಲೆಂದು ಬರುತ್ತಿರುವನೆಂದಾಗಲಿ ಆ ಪಕ್ಷಿಗಳಿಗೆ ತಿಳಿಯದು. ಆದ್ದರಿಂದ ಪ್ರತಿಕೃತಿಯ ದೃಷ್ಟಿ ಆ ಪಕ್ಷಿಕೂಜನದ ಸಹಜ ವ್ಯಾಪಾರಕ್ಕೆ ಮೂದಲೆ ಭರ್ತ್ಸನೆ ಪ್ರಶಂಸೆ ಮೊದಲಾದ ಆರೋಪಗಳನ್ನು ಎಂದಿಗೂ ಹೊರಿಸುವುದಿಲ್ಲ. ಆದರೆ ಅದಕ್ಕಿಂತಲೂ ಸೂಕ್ಷ್ಮತರವಾದ ಪ್ರತಿಮಾದೃಷ್ಟಿ ಪ್ರಕೃತಿಯ ಸ್ಥೂಲ ವ್ಯಾಪಾರಗಳ ಅಂತರಂಗ ಸಮಯೋಚಿತವೂ ಸಚೇತನವೂ ಸಾರ್ಥವೂ ವಿಶ್ವಚಿತ್ ಸಂಕಲ್ಪಿತವೂ ಆದ ಪ್ರಚೋದನಗಳನ್ನು ಅನುಭವಿಸುತ್ತದೆ. ಅಂತಹ ಅನುಭವಗಳನ್ನು ನಂಬಲಾರದವರಿಗೂ ಕಾಣಲಾರದವರಿಗೂ ಊಹಿಸಲಾರದವರಿಗೂ ಒಪ್ಪಲಾರದವರಿಗೂ ಅದು ‘ಉತ್‌ಪ್ರೇಕ್ಷೆ’ಯಾಗುತ್ತದೆ. ಸಹಾನುಭೂತಿಯಿಂದ ಅನುಭವಿಸುವ ಸಹೃದಯರಿಗೂ ಪ್ರತ್ಯಕ್ಷವಾಗಿ ಅನುಭವಿಸುವ ಕ್ರಾಂತದರ್ಶಿಯಾದ ರಸಋಷಿಗೂ ಅದು ‘ಸ್ವಭಾವೋಕ್ತಿ’ಯಾಗುತ್ತದೆ.

ಹಾಗೆ ಪ್ರತ್ಯಕ್ಷವಾಗಿ ಅನುಭವಿಸುವುದು ಸುಲಭಸಾಧ್ಯವಲ್ಲ. ಕವಿಗೂ ಕೂಡ ಅವನು ಋಷಿಯಾಗಿದ್ದರೆ ಮಾತ್ರ ಅದು ಸಾಧ್ಯ. ಅವನ ಪ್ರತಿಭೆ ಅಂತಹ ಮಹೋನ್ನತವಾದ ‘ದರ್ಶನ’ದಲ್ಲಿ ಸಂಸ್ಥಾಪಿತವಾಗಿ ಅದರಿಂದ ದೀಪ್ತವಾಗಿದ್ದರೆ ಮಾತ್ರ ಅದು ಅವನಿಗೆ ಅಲಂಕಾರ ಮಾತ್ರವಾಗದೆ ಸತ್ಯಸ್ಯಸತ್ಯವಾಗುತ್ತದೆ. ಅಂತಹನ ಉಕ್ತಿ ಸಂಶಯದಿಂದ ಕಂಪಿತವಾಗುವುದಿಲ್ಲ; ಸಂದೇಹದಿಂದ ಬರಿಯ ಉತ್‌ಪ್ರೇಕ್ಷಾಲಂಕಾರವಾಗಿ ಪರಿಣಮಿಸುವುದಿಲ್ಲ; ರೂಪಕಾಲಂಕಾರದ ಬೆನ್ನಹಿಂದೆ ಅವಿತುಕೊಳ್ಳುವುದಿಲ್ಲ. ‘ಅಂತಹ ದರ್ಶನ’ಕ್ಕೆ ತನ್ನ ಕಂಡ ಕಾವ್ಯಸತ್ಯವನ್ನು ಸಾರಿ ಹೇಳಲು ಅಂಜಿಕೆಯಿಲ್ಲ, ನಾಚಿಕೆಯಿಲ್ಲ. ‘ಎಂಬಂತಿರೆ’ ‘ಎಂಬವೋಲ್’ ಮೊದಲಾದ ತೆರೆಮರೆಗಳೂ ಅದಕ್ಕೆ ಬೇಕಿಲ್ಲ. ಏಕೆಂದರೆ ಅದು ಹೇಳುವುದು ಸತ್ಯ; ಅದಕ್ಕೆ ತಿಳಿದಿರುವ ಏಕಮಾತ್ರ ಅಲಂಕಾರವೆಂದರೆ ‘ಸ್ವಭಾವೋಕ್ತಿ’. ಅಂತಹ ಮಹೋನ್ನತವಾದ ‘ದರ್ಶನ’ ದ್ರಷ್ಟರಾದ ಮಹಾಕವಿಗಳು ಸಾದೃಶ್ಯ ಸೂಚಕವಾದ ಪದಗಳನ್ನು ಉಪಯೋಗಿಸಿದರೂ ಅದು ‘ಕಾವ್ಯ ಸಮಯ’ ಮಾತ್ರವಾಗಿರುತ್ತದೆ. ಅಲ್ಲದೆ ಓಲಂತೆಗಳ ತೆರೆಗಳಿದ್ದರೂ ಅವು ಮರೆಗಳಾಗಿರುವುದಿಲ್ಲ. ಭಾಷೆಜ್ಯೋತಿ ತನ್ನ ಪ್ರಕಾಶನಕ್ಕೆ ಆ ತೆರೆಗಳನ್ನೆ ನಲೆಗೈದು, ಅವುಗಳಿಂದ ಸೋಸಿಬಂದು, ದಿಗಂಬರ ಸತ್ಯಕ್ಕೆ ದೀವಿಗೆ ಹಿಡಿದಿರುತ್ತದೆ.

ಪಂಪಮಹಾಕವಿ ಆ ಎತ್ತರಕ್ಕೆ ಏರಿದ್ದನೊ ಇಲ್ಲವೊ ಹೇಳಲು ಹೆದರಿಕೆಯಾಗುತ್ತದೆ. ಅವನ ‘ಆದಿಪುರಾಣ’ ಭವ್ಯಕಾವ್ಯದಲ್ಲಿ ಕಂಡುಬರುವ ‘ದರ್ಶನ’ದಿಂದ ಆತನ ದೃಷ್ಟಿ ದೀಪ್ತವಾಗಿದ್ದ ಪಕ್ಷದಲ್ಲಿ ಆತನು ಅಂತಹ ಶ್ರದ್ಧಾಶಿಖರಕ್ಕೆ ಏರಿದ್ದನೆಂದು ಭಾವಿಸುವುದರಲ್ಲಿ ತಪ್ಪೇನೂ ಇಲ್ಲ. ನಮ್ಮ ಪ್ರಕೃತ ಪರಿಶೀಲನೆಗೆ ಪಾತ್ರವಾಗಿರುವ ಸನ್ನಿವೇಶವನ್ನು ಹೊಕ್ಕು ನೋಡಿದರೆ ಆ ಭಾವನೆ ಮತ್ತೂ ಪುಷ್ಟಿಗೊಳ್ಳುತ್ತದೆ.

ಕವಿ ಮೊದಲನೆಯ ಪದ್ಯದಲ್ಲಿ ‘ತಾನೆ ದಲ್ ಎಂಬಂತಿರೆ’ ಎಂದೂ ಎರಡನೆಯದರಲ್ಲಿ ‘ಎಂಬವೊಲಾದುದು’ ಎಂದೂ ಸಾದೃಶ್ಯ ಸೂಚಕವಾದ ಪದಗಳನ್ನು ಉಪಯೋಗಿಸಿ, ಯಾವುದು ರಸಋಷಿಗೆ ನಿಶ್ಚಯಜ್ಞಾನವಾಗಬಹುದಿತ್ತೊ ಅದನ್ನು ಕೆಳಮಟ್ಟಕ್ಕಿಳಿಸಿ, ಯಾವುದು ಈ ಲೋಕಧರ್ಮನಿಷ್ಠವಾದ ದೃಷ್ಟಿಗೆ ಅಯಥಾರ್ಥ ಮತ್ತು ಕಲ್ಪನಾಮಾತ್ರವಾಗಬಹುದಾಗಿತ್ತೊ ಅದನ್ನು ಮೇಲುಮಟ್ಟಕ್ಕೇರಿಸಿ ಎರಡಕ್ಕೂ ನಡುವೆ ನಿಲ್ಲುವ ಸಂಭಾವನಾ ಜ್ಞಾನಕ್ಕೆ ಅವಕಾಶ ಕಲ್ಪಿಸಿದ್ದಾನೆ. ಹಾಗೆ ಮಾಡುವುದೂ ಒಂದು ದೃಷ್ಟಿಯಿಂದ ಕಾವ್ಯಧರ್ಮಕ್ಕೆ ಲೇಸೆಂದೆ ತೋರುತ್ತದೆ. ಏಕೆಂದರೆ ಕಾವ್ಯಲೋಕ ಈ ಲೋಕ ಆ ಲೋಕಗಳ ನಡುವೆ ಸಂಚರಿಸುವ ಒಂದು ಯಾತ್ರಾಜಗತ್. ಅದು ಯಾತ್ರೆಯೂ ಆಗುತ್ತದೆ, ಸೇತುವೂ ಆಗುತ್ತದೆ. ತನ್ನ ಅತ್ಯಂತ ಮಹೋನ್ನತ ಸ್ಥಿತಿಯಲ್ಲಿ ಅದರ ಮುಡಿ ಕೈವಲ್ಯಸತ್ಯದ ನಿರ್ದಿಗಂತ ಸೀಮೆಯಲ್ಲಿ ಆನಂದ ವಿಹಾರಿಯಾದರೆ ತನ್ನ ಅತ್ಯಂತ ಸಾಮಾನ್ಯ ಸ್ಥಿತಿಯಲ್ಲಿ ಅದರ ಅಡಿ ಮರ್ತ್ಯಸತ್ಯದ ಮಿತವಲಯದಲ್ಲಿ ಕರ್ಮಕಾರಣ ಸಂಚಾರಿಯಾಗುತ್ತದೆ.

ಕುರುಕ್ಷೇತ್ರದಂತಹ ಸಂಗ್ರಾಮದ ರಂಗರಚನೆಯ ವಿಷಯದಲ್ಲಿ, ಯುಧಿಷ್ಠಿರ ಭೀಮ ಅರ್ಜುನ ದುರ್ಯೋಧನ ದ್ರೌಪದಿ ಗಾಂಧಾರಿ ಮೊದಲಾದ ಯುಗಶ್ರೇಷ್ಠ ಮತ್ತು ಯುಗಪ್ರಮುಖ ವ್ಯಕ್ತಿಗಳ ಆತ್ಮವಿಕಾಸನದ ವಿಷಯದಲ್ಲಿ, ವಿಧಿಪ್ರತಿನಿಧಿಯೂ ಸೃಷ್ಟಿಶಕ್ತಿ ಪ್ರತಿಮಾರೂಪಿಣಿಯೂ ಆದ ಪ್ರಕೃತಿಮಾತೆ ತಟಸ್ಥೆಯೂ ಅಲ್ಲ. ಅನಾಸಕ್ತೆಯೂ ಅಲ್ಲ. ಮನುಷ್ಯರೀತಿಗೆ ಅನ್ಯವಾದ ತನ್ನೊಂದು ರೀತಿಯಿಂದ ಆಕೆ ಸರ್ವರ ಕರ್ಮದಲ್ಲಿಯೂ ಭಾಗಿನಿಯಾಗುತ್ತಾಳೆ. ಆ ಭಾಷೆ ಬೇರೆಯಾಗಬಹುದು; ಆ ಸನ್ನೆ ಬೇರೆಯಾಗಬಹುದು; ಯಾವುದಾದರೊಂದು ಇಂದ್ರಿಯ ಗೋಚರವಾಗಬಹುದಾದ ಚೇಷ್ಟಿತವನ್ನಾಶ್ರಯಿಸಿ ಅಂತರ್ವೇದ್ಯವಾಗುವ ಶಕುನಸಂಜ್ಞೆಯಾಗಿ ಆಕೆ ವ್ಯಕ್ತಿಗೆ ತನ್ನ ಇಂಗಿತವನ್ನು ಸೂಚಿಸಬಹುದು. ದುರ್ಯೋಧನನಿಗೆ ಆ ಇಂಗಿತವನ್ನು ಅರಿಯುವ ಮನಶ್ಯಾಂತಿಯಾಗಲಿ ಸಾಮರ್ಥ್ಯವಾಗಲಿ ತಾಳ್ಮೆಯಾಗಲಿ ಇಚ್ಛೆಯಾಗಲಿ ಇದ್ದಿದ್ದರೆ ವೈಶಂಪಾಯನ ಸರೋವರ ಮುಂದೆ ನಡೆಯುವುದನ್ನೆಲ್ಲ ಪ್ರತಿಫಲಿಸಿ ತೋರಿಸುವ ಕನ್ನಡಿಯಾಗುತ್ತಿತ್ತು. ಆ ಸರೋವರ ರೂಪಿಯಾದ ಪ್ರಕೃತಿಮಾತೆ ‘ಕಳಹಂಸಕೋಕನಿಕರಧ್ವನಿ’ ರೂಪವಾದ ತನ್ನ ವಾಣಿಯಿಂದ “ಪರಾಕ್ರಮಶಾಲಿಯಾದ ಅರ್ಜುನನ ಮತ್ತು ಸಾಹಸಭೀಮನ ಕೋಪಾಗ್ನಿ ಸುತ್ತಿಮುತ್ತಿ ನಮ್ಮನ್ನೂ ಕೊಳ್ಳದಿರದು. ಇಲ್ಲಿ ಬಾೞ್ವರಂ ಕದಡದಿರ್, ಇತ್ತ ಬಾರದಿರು, ಸಾರದಿರು!” ಎಂದು ಚೀರಿಕೊಳ್ಳುವುದು ಸಂದೇಹಕ್ಕೆ ಆಸ್ಪದವಿಲ್ಲದಂತೆ ಕೇಳಿಸುತ್ತಿತ್ತು. ಆದರೆ ಸ್ಪಷ್ಟವಾಗಿ ಅರ್ಥವಾಗುವ ಪಿತಾಮಹನಾದ ಭೀಷ್ಮನ ಮನುಷ್ಯ ಪೂಜ್ಯ ವಾಣಿಯನ್ನೆ ಕಿವುಳ್ಗೇಳ್ದು ಬಂದಾತನಿಗೆ ಧರ್ಮದೇವತೆಯ ಸರೋವಾಣಿಯ ಸನ್ನೆಯ ಬೆರಳಾಗಲಿ ಕೊರಳಾಗಲಿ ಅರ್ಥವಾಗುವುದೆಂತು?

‘ಇಲ್ಲಿ ಬಾೞ್ವರಂ ಕದಡದಿರ್!’ ಎಂಬ ಹಕ್ಕಿಯುಲಿ ಪಂಪನ ವರ್ಣನೆಯಲ್ಲಿ ಅತ್ಯಂತ ಧ್ವನಿಪೂರ್ಣವಾಗುತ್ತದೆ: ಎಲೈ ದುರ್ಯೋಧನ, ಅಲ್ಲಿ, ಕುರುಕ್ಷೇತ್ರದಲ್ಲಿ, ಮನುಷ್ಯ ಪ್ರಪಂಚಲದಲ್ಲಿ, ನೆಮ್ಮದಿಯಾಗಿ ಬಾಳುತ್ತಿದ್ದವರನ್ನೆಲ್ಲ ನಿನ್ನ ಆಸುರೀ ವರ್ತನೆಯಿಂದ ಬಾಳ್ಗೆಡಿಸಿ, ನೀನೂ ಬಾಳ್ಗೆಟ್ಟೆ. ಇಲ್ಲಿ ನಾವು, ಪಕ್ಷಿಸಮಾಜದಲ್ಲಿ, ಪ್ರಕೃತಿಲೋಕದಲ್ಲಿ, ಆರ ಗೋಜಿಗೂ ಹೋಗದೆ, ಶಾಂತಿಯಿಂದ ಸುಖವಾಗಿ ಬಾಳುತ್ತಿದ್ದೇವೆ. ಇಲ್ಲಿಗೆ ಬಂದು ನಮ್ಮ ಬಾಳನ್ನೂ ಕೆಡಿಸಬೇಡ. ಆ ಮನುಷ್ಯ ಹೃದಯದ ಕೊಳೆ, ಕೊಚ್ಚೆ, ಕೋಟಲೆಗಳನ್ನು ತಂದು ಈ ತಿಳಿಗೊಳದ ನಿರ್ಮಲ ಜೀವನವನ್ನು ಕದಡಿ ಬಗ್ಗಡಗೊಳಿಸಬೇಡ. ದಮ್ಮಯ್ಯ, ಮಾರಾಯ! ಇತ್ತ ಬಾರದಿರು. ಬರುವುದಿರಲಿ, ಇತ್ತ ಸಾರದಿರು! ಈ ಕೊಳದ ಹತ್ತಿರ ಸುಳಿಯುವುದು ಕೂಡ ಬೇಡ,-ಎಂಬ ಮೂದಲೆಯ ದನಿ ಸಿಡಿಯುತ್ತದೆ, “ಇಲ್ಲಿ ಬಾೞ್ವರಂ ಕದಡದಿರ್” ಎಂಬ ಒಂದು ಮಾತಿನಿಂದ.

[1]

ನೀರ್ವಕ್ಕಿಗಳ ಶಕುನ ಸತ್ಯವಾಗುತ್ತದೆ. ಭೀಮಾರ್ಜುನರ ಕೋಪಾಗ್ನಿಗೆ ಸರಸ್ಸು ತುತ್ತಾಗಿ, ಜಗದ್ ಭಯಂಕರವಾದ ಭೀಮ ದುರ್ಯೋಧನರ ಗದಾಯುದ್ಧಕ್ಕೆ ಅದರ ನೀರ್‌ಕಣ್ಣಾಲಿ ಸಾಕ್ಷಿಯಾಗಿ ಉಲ್ಲೋಲವಾದಂತೆ, ಅದರ ಹಸುರಂಚು ವೇದಿಕೆಯಾಗಿ ನುಗ್ಗುನುರಿಯಾಗುತ್ತದೆ. ವೀರವು ಕೈತವದಿಂದ ತನ್ನ ಜಯವನ್ನು ಸಾಧಿಸಿದ ಮೇಲೆ ಕೌರವೇಂದ್ರನ ಬೀಳಿಗೂ ನೋವಿಗೂ ಸಾವಿಗೂ ಶವಕ್ಕೂ ಅದು ಪರೇತ ಭೂಮಿಯಾಗಿ ಪರಿಣಮಿಸುತ್ತದೆ. ಸೂರ್ಯನು ಮುಳುಗಿದ ಮೇಲೆ, ಕತ್ತಲೆ ಇಳಿತಂದ ಮೇಲೆ, ಆ ಸರೋವರತಟಪ್ರದೇಶದ ನಿಶ್ಯಬ್ದತೆ ಅಸಹನೀಯವಾಗಿ ಬೀಭತ್ಸವಾಗುತ್ತದೆ. ರುದ್ರನಾಟಕ ಮುಗಿದ ಮೇಲೆ ನಾಟಕರಂಗ ಜನಶೂನ್ಯ ಮತ್ತು ದೀಪಶೂನ್ಯವಾಗಿ ಬಿಮ್ಮೆಂದು ಬೆದರಿಸುವಂತೆ ಅದರ ಸಾನ್ನಿಧ್ಯ ನಮ್ಮನ್ನು ಹೆದರಿಸುತ್ತದೆ. ಆ ಸ್ಥಳದಲ್ಲಿ ಹೆಚ್ಚಿಗೆ ಇನ್ನೊಂದು ಕ್ಷಣವೂ ನಿಲ್ಲಲಾರದೆ ನಾವು ಪರಾಙ್ಮುಖರಾಗುತ್ತೇವೆ. ಮೃತ್ಯು, ಶೋಕ, ಅನುತಾಪ, ಪಾಪ, ಶಿಕ್ಷೆ, ಅನ್ಯಾಯ, ಸಂಕಟ-ಇತ್ಯಾದಿ ಸಹಸ್ರಾರು ಭಾವೋಪಭಾವಗಳಿಗೆ ಸ್ಮಾರಕಸ್ಥಳವಾಗಿ, ಅಚ್ಛೋದ ಸರೋವರಕ್ಕೆ ಸಂಪೂರ್ಣ ಭಿನ್ನವೂ ವಿರುದ್ಧವೂ ಆಗುತ್ತದೆ, ವೈಶಂಪಾಯನ ಸರೋವರದ ದುಃಸ್ಮೃತಿ. ಆಗ ನಮಗೆ ಪಂಪ ನಾಗವರ್ಮರ ಉಪಮೆಗಳ ಸಾರ್ಥಕತೆ ಹೊಳೆಯುತ್ತದೆ:-ನಾಗವರ್ಮನದು ಸತ್ತ್ವ ಸಂಕೇತವಾದ ಶ್ವೇತವರ್ಣನೆ: ತಾರಾಗಂ ಹರಂ ಕಣ್ಣೆಡೆ ಕರಗಿದುದು, ರುದ್ರಾಟ್ಟಹಾಸಂ ಜಲಮಾದತ್ತು. ಪಂಪನದು ತಮಸ್ ಸಂಕೇತವಾದ ಕಾಳವರ್ಣನೆ: ಪಾತಾಳ ಬಿಲಕ್ಕೆ ಬಾಗಿಲ್, ಘೋರಾಂಧಕಾರಕ್ಕೆ ಮಾಡಿದ ಕೂಪಂ. ಅಚ್ಛೋದದ ನೆನಪು ಅಮೃತರಸಾಕಾರ; ವೈಶಂಪಾಯನ ನೆನಪು ಲಯಕಾಲಾಂಭೋಧರಚ್ಛಾಯೆ!

ವೈಶಂಪಾಯನ ಸರೋವರವು ಪಂಪನ ಕವಿಪ್ರತಿಭೆಯ ಧ್ವನಿಶಕ್ತಿಗೂ ಕಲ್ಪನಾ ಸಂಪತ್ತಿಗೂ ವರ್ಣನಾವೈಖರಿಗೂ ಹಿತಮಿತವಾದ ಮಹಾಶೈಲಿಗೂ ಕನ್ನಡಿಯಾಗಿರುವಂತೆ ಇನ್ನಿಬ್ಬರು ಕನ್ನಡ ಕವಿಗಳ ಕವಿತಾಮುಖಗಳಿಗೂ ಕನ್ನಡಿ ಹಿಡಿದಿದೆ: ಪಂಪನ ಗಗನೋದಾರವಾದ ಆಶ್ರಯದಲ್ಲಿ ತನ್ನ ವ್ಯಕ್ತಿತ್ವವನ್ನಾಗಲಿ ಸತ್ತ್ವ ಔನ್ನತ್ಯ ಮಹತ್ತ್ವಗಳನ್ನಾಗಲಿ ಹೆಚ್ಚೇನೂ ಕಳೆದುಕೊಳ್ಳದೆ, ಕುಳ್ಳುಮಾಡಿಕೊಳ್ಳದೆ, ಕನ್ನಡ ಮಹಾಕವಿಗಳ ಪಂಕ್ತಿಯಲ್ಲಿ ಗಣ್ಯಸ್ಥಾನವನ್ನು ಗಳಿಸಿಕೊಂಡಿರುವ ರನ್ನನೊಬ್ಬ; ಶೈಲಿಯ ನುಣ್ಪು, ಧ್ವನಿ ಸೂಕ್ಷ್ಮತೆ, ವ್ಯವಹಾರ ಭೂಮಿಕೆಯಲ್ಲಿ ನಡೆಯುವ ನಾಗರಿಕ ವ್ಯಾಪಾರ ನಿರೂಪಣೆಯಲ್ಲಿ ಮೈದೋರುವ ನಯರುಚಿಯ ಸಂಸ್ಕೃತಿ, ಪ್ರಕೃತಿ ಪ್ರಪಂಚದ ವಿವರ ಪರಿಜ್ಞಾನ, ಪ್ರಕೃತಿ ಸೌಂದರ್ಯದಲ್ಲಿ ಗಾಢಮೋಹ, ಅದರ ಬಣ್ಣನೆಯಲ್ಲಿ ಅನುರಕ್ತಿ, ಅದರ ಶತಸಹಸ್ರಮುಖವಾದ ವೈವಿಧ್ಯದ ಒಂದೊಂದು ವಿವರದಲ್ಲಿಯೂ ಅಕ್ಕರೆಯಿಂದುಣ್ಮುವ ಆಸಕ್ತಿ-ಇತ್ಯಾದಿ ಕಲಾದೃಷ್ಟಿಯಿಂದ ಪಂಪನಿಗೆ ದ್ವಿತೀಯನೂ ಆಗದಿದ್ದರೂ ಭಾವತೀಕ್ಷ್ಣತೆಯಲ್ಲಿ, ರಸಾವೇಶದಲ್ಲಿ, ಪ್ರತಿಭಾ ಪ್ರವಾಹದ ದುರ್ದಮ್ಯ ವೇಗದಲ್ಲಿ, ಸಂಸ್ಕೃತಿಗೆ ತುಸು ದೂರವಾದರೂ ಪ್ರಕೃತಿ ಸಹಜವಾದ ಪಾರ್ವತಾರಣ್ಯಕ ರುಂದ್ರರೂಕ್ಷತಾ ಶಕ್ತಿಯಲ್ಲಿ, ಸರ್ವವನ್ನೂ ಸರ್ವರನ್ನೂ ಸರ್ವಕಾಲದಲ್ಲಿಯೂ ಸರ್ವಭಾವದಲ್ಲಿಯೂ ಭಗವದ್ ಭಕ್ತಿಯ ಶ್ರೀಮಂತ ಕಾಂತಿಯ ಕಣ್ಣಿನಿಂದಲೆ ಕಾಣುವ ‘ವಿರಾಡ್ ದರ್ಶನ’ದಲ್ಲಿ, ಲೌಕಿಕ ಆಗಮಿಕ ಐಹಿಕ ಆಮುಷ್ಮಿಕ ಎಂದು ಕವಲೊಡೆಯದೆ ಹಂಚದೆ ಅವಿಭಕ್ತವಾಗಿ ಆಕಾಶೋನ್ನತವಾಗಿ ಬ್ರಾಹ್ಮಭೂಮವಾಗಿ ಪರಮಪುರುಷಾರ್ಥ ಸಂಸ್ಪರ್ಶಿಯಾಗಿ ಬದುಕಿಗೆ ಬೆಳಕಿತ್ತು ಬಾಳನ್ನು ಹುರಿದುಂಬಿಸುವ ಆತ್ಮಶ್ರೀಯ ದಿವ್ಯಾಗ್ನಿಯಲ್ಲಿ ಆದಿಕವಿ ಪಂಪನಿಗೂ ಅದ್ವಿತೀಯನಾಗಿ ಆತನನ್ನೂ ದ್ವಿತೀಯನನ್ನಾಗಿ ಮಾಡುವ ಯೋಗಿಕವಿ ಪೂಜ್ಯ ನಾರಣಪ್ಪ ಇನ್ನೊಬ್ಬ.

ಪಂಪನಂತೆ ರನ್ನ ನಾರಣಪ್ಪರಿಬ್ಬರೂ ವೈಶಂಪಾಯನ ಸರಸ್ಸನ್ನು ಗದಾಯುದ್ಧದ ಸನ್ನಿವೇಶದಲ್ಲಿಯೆ ವರ್ಣಿಸಿರುವುದರಿಂದ ಅವರನ್ನು ಆ ಅಂಶದಲ್ಲಿ ಆದಿಕವಿಯೊಡನೆ ಹೋಲಿಸುವುದರಲ್ಲಿ ಔಚಿತ್ಯವಿದೆ; ತಾರತಮ್ಯ ವಿಮರ್ಶೆಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುವುದೂ ಕಷ್ಟವಾಗುವುದಿಲ್ಲ; ತಕ್ಕಡಿ ಒಂದೆ ಆಗಿರುವುದರಿಂದ ಅವರವರ ತೂಕವನ್ನು ತಕ್ಕಮಟ್ಟಿಗೆ ಸರಿಯಾಗಿಯೆ ಗೊತ್ತು ಹಚ್ಚುವುದು ಸಾಧ್ಯ.

ಪಂಪನ ಒಂದೆರಡು ಆಶ್ವಾಸಗಳಿಂದ ಒಂದು ಇಡಿಯ ಕಾವ್ಯವನ್ನೆ ಕಟ್ಟುತ್ತಿರುವ ರನ್ನನಿಗೆ ಕಥೆಯನ್ನಾಗಲಿ ಸಂವಾದವನ್ನಾಗಲಿ ವರ್ಣನೆಯನ್ನಾಗಲಿ ವಿಸ್ತರಿಸುವುದು ಅನಿವಾರ್ಯ. ಹಾಗೆ ಲಂಬಿಸುವ ಉತ್ಸಾಹದಲ್ಲಿ ಅವನು ಒಮ್ಮೊಮ್ಮೆ ಔಚಿತ್ಯವನ್ನೂ ಮರೆತು ತನ್ನ ಕಿರಿಯತನವನ್ನು ಮೆರೆದಿದ್ದಾನೆ.*{* ಗದಾಯುದ್ಧದ ಐದನೆಯ ಆಶ್ವಾಸದಲ್ಲಿ ಬರುವ ಭೀಷ್ಮ ಸಂದರ್ಶನದ ಸನ್ನಿವೇಶವನ್ನು ನೋಡಿ.} ಆದರೆ ವೈಶಂಪಾಯನ ಸರಸ್ಸಿನ ವರ್ಣನೆಯಲ್ಲಿ ಹಾಗೆ ಮಾಡಿಲ್ಲ. ಪಂಪ ಎರಡು ವೃತ್ತ, ಒಂದು ತುಣುಕು ವಚನ ಬರೆದಿದ್ದರೆ, ರನ್ನ ಎರಡು ವೃತ್ತ, ಒಂದು ಕಂದದಲ್ಲಿ ಅದನ್ನು ಪೂರೈಸಿದ್ದಾನೆ. ಆ ಎರಡು ವೃತ್ತಗಳಂತೂ ಪಂಪನ ವೃತ್ತಗಳಿಗೆ ಪಡಿನೆಳಲಾಗಿ ನಿಲ್ಲುತ್ತವೆ. ಹೆಚ್ಚಾಗಿ ಬರೆದಿರುವ ಆ ಒಂದು ಕಂದವೂ ‘ರನ್ನ ಪಂಪನಲ್ಲ’ ಎಂಬುದನ್ನು ಎತ್ತಿ ತೋರಿಸುವಂತೆ ವ್ಯಂಗ್ಯವಾಗಿದೆ.

ಗಗನಂ ಬಿೞ್ದುದೊ ಮೇಣ್ನೆಲಕ್ಕೆ ನೆಲನೇಂ ಪುಟ್ಟಿತ್ತೊ ಮೇಣಿಲ್ಲಿ ಪ
ನ್ನಗ ವೃಂದಾರಕರೆಂದುಮಿರ್ಪ ಬಿಲನೋ ಮೇಣಷ್ಟದಿಂಗ್ನಾಗರಾ
ಜಿಗೆ ಮೆಯ್ಗರ್ಚಿಕೊಳಲ್ಕಜಂ ಸಮೆದ ತೋಯೋದ್ದೇಶವೋ ಸಂದೆಯಂ
ಬಗೆಗಾದತ್ತೆನಿಸಿರ್ದುದೇಂ ಪಿರಿದೊ ವೈಶಂಪಾಯನಾಬ್ಜಾಕರಂ (ಗ.ಯು. ೫-೧೧)

ಕುರುಪತಿ ನಿನ್ನ ಪೊಕ್ಕ ತೊಱೆಗಳ್ಮೊದಲಾಗಿರೆ ಬತ್ತಿದಪ್ಪುವೀ
ದೊರೆಯ ದುರಾತ್ಮನಂ ಖಳನನಾನೊಳಕೊಂಡೊಡೆ ಭೀಮನೀ ಸರೋ
ವರಮುಮನೆಮ್ಮುಮಂ ಕದಡುಗುಂ ಪುಗದಿರ್ತೊಲಗೆಂದು ಬಗ್ಗಿಪಂ
ತಿರೆ ನೆಗೆದತ್ತನೇಕ ಬಕ ಕೋಕ ಮರಾಳ ವಿಹಂಗಮಸ್ವನಂ (ಗ.ಯು. ೫-೧೨)

ವಳಿತ ಶಿಳೀಮುಖಮುತ್ಪಳ
ದಳನಯನಂ ಕಂಜರಂಜಿತಂ ಜಯಲಕ್ಷ್ಮೀ
ವಿಳಸಿತಮೆನೆ ದಿಟ್ಟಿಗೆ ಕೊಳು
ಗುಳಮಂ ಪೋಲ್ದತ್ತು ಪೂಗೊಳಂ ಕೌರವನಾ (ಗ.ಯು.೫-೧೩)

ಮೊದಲನೆಯ ಪದ್ಯದಲ್ಲಿ ಪಂಪನ ಹೋಲಿಕೆಗಳಲ್ಲಿರುವ ‘ಧ್ವನಿ’ ಲವಲೇಶವೂ ಇಲ್ಲ. ಕಣ್ಣಿಗೆ ಕಾಣುವ ಕೊಳದ ಹೊರಮೆಯ್ಯೆ ಮೊದಲ ಗುರಿಯಾಗಿದೆ. ಆ ಬಣ್ಣನೆಗೆ ದುರ್ಯೋಧನನ ತತ್‌ಸಮಯ ಸ್ಥಿತಿಯನ್ನಾಗಲಿ ಆತನಿಗೆ ಮುಂದೊದಗುವ ಗತಿಯನ್ನಾಗಲಿ ಅದು ಸೂಚಿಸುವುದಂತಿರಲಿ ಗಮನಿಸುವುದೂ ಇಲ್ಲ. ಪದಬಂಧದ ಶೈಲಿ ಪಂಪನಿಗೆಣೆಯಾದರೂ ಅವನ ಕೃತಿಯ ಪಕ್ಕದಲ್ಲಿಟ್ಟು ನೋಡಿದರೆ ರನ್ನನದು ಸಪ್ಪೆಯಾಗಿ ಬೆಪ್ಪಾಗಿ ಕಾಣುತ್ತದೆ.

ಎರಡನೆಯ ಪದ್ಯವೇನೊ ಸೊಗಸಾಗಿದೆ, ಪಂಪನನ್ನು ಸಂಪೂರ್ಣವಾಗಿ ಆಶ್ರಯಿಸಿ, ಸೂರ್ಯನ ಆತಪವನ್ನೆ ಪ್ರತಿಬಿಂಬಿಸಿ ಚಂದ್ರಾತಪವು ಮನೋಹರವಾಗಿ ಪ್ರಶಂಸಾರ್ಹವಾಗುವಂತೆ. ಪಂಪನ ಮೊದಲನೆಯ ಪದ್ಯದ ‘ಬಕಬಳಾಕಾನೀಕ ರಾವಾಕುಳಂ’ ಎಂಬುದೂ ಎರಡನೆಯದರ ‘ಕಲಹಂಸಕೋಕನಿಕರ ಧ್ವನಿ’ ಎಂಬುದೂ ಸೇರಿ ರನ್ನನಲ್ಲಿ ‘ಬಕ ಕೋಕ ಮರಾಳ ವಿಹಂಗಮಸ್ವನಂ’ ಆಗಿದೆ. ‘ನಿನ್ನ ಪೊಕ್ಕ ತೊಱೆಗಳ್ ಮೊದಲಾಗಿರೆ ಬತ್ತಿದಪ್ಪುವು’ ಎಂಬುದು ಪಂಪನ ‘ಭೀಮನ ಕೋಪಪಾವಕಂ ಪುದಿರ್ದಳುರ್ದಱ್ವೆ’ ಎಂಬುದರಿಂದ ಮೂಡಿ ಚೆನ್ನಾಗಿದೆ. ಆದರೆ ‘ಈ ದೊರೆಯ ದುರಾತ್ಮನಂ ಖಳನನಾನೊಳಕೊಂಡೊಡೆ’ ಎಂದು ರನ್ನ ಬಾಯಿ ಬಿಟ್ಟು ಹೇಳುವುದು ‘ಧ್ವನಿಗೇಡು’. ದುರ್ಯೋಧನನ ಖಳತ್ವವನ್ನೂ ದುರಾತ್ಮತೆಯನ್ನೂ ಪಂಪ ‘ಪಾತಾಳ ಬಿಲಕ್ಕೆ ಬಾಗಿಲ್’ ‘ಘೋರಾಂಧಕಾರಕ್ಕೆ ಕೂಪಂ’ ಎಂಬ ರೂಪಕಪ್ರತಿಮೆಗಳನ್ನೊಡ್ಡಿ ಕಲಾಮಯವಾಗಿ ಸೂಚಿಸಿ, ಧ್ವನಿ ಸಂಪತ್ತಿಗೆ ಎಂತಹ ಗಣಿ ತೆಗೆದಿದ್ದಾನೆ ಎಂಬುದು ಸಹೃದಯ ದೃಷ್ಟಿಗ್ರಾಹ್ಯವಾಗಿ ರನ್ನನ ಕಿರಿಮೆ ಮುಷ್ಟಿಗ್ರಾಹ್ಯವಾಗುತ್ತದೆ. ‘ಭೀಮನೀ ಸರೋವರ ಮುಮನ್ ಎಮ್ಮುಮನ್ ಕದಡುಗುಂ. ಪುಗದಿರ್, ತೊಲಗು, ಎಂದು ಬಗ್ಗಿಪಂತಿರೆ’ ಎಂಬುದು ಪಂಪನ ‘ಇಲ್ಲಿ ಬಾೞ್ವರಂ ಕದಡದಿರ್, ಇತ್ತ ಬಾರದಿರು, ಸಾರದಿರ್ ಎಂಬವೊಲಾದುದು’ ಎಂಬುದಕ್ಕೆ ಸಂವಾದಿಯಾಗಿದೆ. ಆದರೆ ಸಮವಾಗಿಲ್ಲ. ‘ಇಲ್ಲಿ ಬಾೞ್ವರಂ ಕದಡದಿರ್’ ಎಂಬ ಮಾತಿನಲ್ಲಿ, ನಾವದಕ್ಕೆ ಹಿಂದೆ ಮಾಡಿರುವ ವಿವರಣೆಯಿಂದ ತೋರುವಂತೆ ಎಂತಹ ಧ್ವನಿಶಕ್ತಿ ದೀಪ್ಯವಾಗುತ್ತದೆಯೊ ಅಂತಹ ಧ್ವನಿಯಾಗಲಿ ಶಕ್ತಿಯಾಗಲಿ ರನ್ನನ ಮಾತುಗಳಲ್ಲಿ ಇಲ್ಲ. ಪಂಪನ ‘ಇಲ್ಲಿ ಬಾೞ್ವರಂ’ ಎಂಬುದರಿಂದ ಸ್ಫುರಿಸುವ ಅರ್ಥವ್ಯಾಪ್ತಿ ಮತ್ತು ಭಾವಸ್ಫೂರ್ತಿಗಳಿಗೆ ರನ್ನನಲ್ಲಿ ಒಂದಿನಿತೂ ಸಾದೃಶ್ಯವಿಲ್ಲ.

ಅದಕ್ಕೆ ಬದಲಾಗಿ ಶ್ಲೇಷೆಯಿಂದ ಅತಿಶಯೋಕ್ತಿಯನ್ನು ಸಾಧಿಸಹೊರಟು ಮುಂದೆ ಒಂದು ಕಂದಪದ್ಯ ಬರೆಯುತ್ತಾನೆ. ‘ಕೊಳುಗುಳಮಂ ಪೋಲ್ದತ್ತು’ ಎಂಬುದರಲ್ಲೇನೂ ಧ್ವನಿ ತುಂಬಿದೆ. ಮುಂದೆ ಆ ಕೊಳವೆ ಕೊಳುಗುಳದ ಕಳನಾಗುವುದನ್ನು ನೆನೆದರೆ ರಸಾನುಭವವಾಗುತ್ತದೆ. ಶ್ಲೇಷೆಯಿಂದ ಮಾತ್ರ ಅದನ್ನು ಕವಿ ಸಾಧಿಸಿದ್ದಾನೆ ಎಂಬುದರಿಂದ ಅದರ ಕಾಂತಿ ತುಸು ಮಸುಳುತ್ತದೆ. ಅದರಲ್ಲಿಯೂ ‘ಜಯಲಕ್ಷ್ಮೀ ವಿಳಸಿತಂ ಎನೆ ಕೌರವನಾ ದಿಟ್ಟಿಗೆ ಪೂಗೊಳಂ ಪೋಲ್ದತ್ತು’ ಎಂಬುದಂತೂ ಚರ್ಚಾಸ್ಪದವಾಗುವಂತೆ ವರ್ಣಿತವಾಗಿದೆ. ಪಂಪನ ‘ಲಯಕಾಳಾಂಭೋಧರಚ್ಛಾಯೆ’ಗೂ ರನ್ನನ ‘ಜಯ ಲಕ್ಷ್ಮೀವಿಳಸಿತ’ಕ್ಕೂ ಎಷ್ಟೊಂದು ಅಂತರ!

ಆ ಅಂತರಕ್ಕೆ ಕಾರಣ ಪಂಪರನ್ನರಿಗೆ ತಮ್ಮ ತಮ್ಮ ದುರ್ಯೋಧನರ ಪರವಾಗಿರುವ ಅಭಿಮಾನಾಂತರವೆ ಆಗಿರಬಹುದೆ? ದುರ್ಯೋಧನನನ್ನು ಹುಟ್ಟಂದಿನಿಂದಲೂ ಅನುಭವಿಸಿಕೊಂಡು ಬರುವ ಪಂಪನ ಧರ್ಮರುಚಿದೃಷ್ಟಿ ಕೌರವನ ಅಂತ್ಯದಲ್ಲಿ ಸಮಯೋಚಿತವಾದ ಅನುತಾಪ ಅನುಕಂಪಗಳನ್ನು ಅನುಭವಿಸಿದರೂ ಅದು ಸುಯೋಧನನ ಕ್ಷಾತ್ರತೇಜೋಜ್ವಲ ಸಾಹಸಪೂರ್ಣವಾದ ಅಂತ್ಯವೈಭವದಲ್ಲಿಯೆ ವಿಶೇಷವಾಗಿ ಆಸಕ್ತವಾಗಿರುವ ರನ್ನನ ಕಲಾರುಚಿದೃಷ್ಟಿಯಂತೆ ತಾರುಣ್ಯಸಹಜವಾದ ಅತ್ಯುತ್ಸಾಹ ಅತಿಪ್ರಶಂಸೆ ಅತಿ ಕ್ಷಮೆ ಅತಿ ರೋಮಾಂಚನಾದಿಗಳನ್ನು ಪ್ರದರ್ಶಿಸದಿರುವುದು ಸಹಜವೆ. ಅವರಿಬ್ಬರಿಗಿರುವ ಆ ರುಚಿಭಿನ್ನತೆ ಸೂಕ್ಷ್ಮಪ್ರಜ್ಞನಾದ ಸಹೃದಯನಿಗೆ ನಾನಾ ರೀತಿಯಲ್ಲಿ ಗೋಚರವಾಗುತ್ತದೆ.

ರನ್ನನ ದುರ್ಯೋಧನನ ಅಭಿಮಾನಧನತೆ ವೈಶಂಪಾಯನ ಸರೋವರದಲ್ಲಿ ಘೋರಾಂಧಕೂಪವನ್ನಾಗಲಿ ಲಯಕಾಳಾಂಭೋಧರಚ್ಛಾಯೆಯನ್ನಾಗಲಿ ಸಂದರ್ಶಿಸಲೊಲ್ಲದು. ಅವನ ದೃಷ್ಟಿಗೆ ಅದು ಜಯಲಕ್ಷ್ಮೀ ವಿಳಸಿತವಾಗಿಯೆ ಮೆರೆಯುತ್ತದೆ. ಅದರಲ್ಲಿ ಅಡಗಿ, ಒಂದು ದಿನ ಕಾಲವಂಚನೆ ಮಾಡಿ, ನಾಳೆ ವೈರಿಗಳನ್ನೆಲ್ಲ ಧ್ವಂಸಮಾಡುತ್ತೇನೆ ಎಂಬುದೆ ಸಾಹಸಗರ್ವಾಲಂಕಾರನ ನಟ್ಟ ನಂಬುಗೆ. ಆದ್ದರಿಂದಲೆ ಪಂಪಕವಿ, ಮುಂದಣ ಕಥಾ ಸಂದರ್ಭದಲ್ಲಿ, ಭೀಮನ ಮೂದಲಿಕೆಯಿಂದ ಕುದಿಗೊಂಡ ದುರ್ಯೋಧನನು ವೈಶಂಪಾಯನ ಸರೋವರದಿಂದ ಹೊರಕ್ಕೆ ನೆಗೆದಾಗ ‘ಕಾಳಕೂಟ ಮೊಗೆವಂತೊಗೆದಂ ಫಣಿರಾಜ ಕೇತನಂ’ ಎಂದು ಹಾಡಿದರೆ ಕವಿ ರನ್ನ ‘ರಸೆಯಿಂ ಕಾಲಾಗ್ನಿರುದ್ರಂ ಪೊರಮಡುವವೊಲಂತಾ ಸರೋಮಧ್ಯದಿಂ ಸಾಹಸಗರ್ವಾಲಂಕೃತಂ ತೊಟ್ಟನೆ ಕೊಳೆ ಪೊರಮಟ್ಟು’ ಎಂದು ಭವ್ಯತರವಾಗಿ ಎದೆ ಧಿಗಿಲ್ಲೆಂದು ಭಯಂಗೊಳ್ಳುವಂತೆ ಬಣ್ಣಿಸಿದ್ದಾನೆ.[2]

ರನ್ನನ ಪರವಾಗಿ ಇಷ್ಟು ಸಮಾಧಾನ ಹೇಳಿದರೂ ಅದು ಪೂರ್ಣ ಸಮರ್ಪಕವಾಗಿ ಸಹೃದಯರನ್ನು ತೃಪ್ತಿಪಡಿಸುತ್ತದೆಂದು ನಂಬಲಾಗುವುದಿಲ್ಲ. ಏಕೆಂದರೆ ಶ್ಲೇಷಾಲಂಕಾರ ಎಷ್ಟು ಸುಲಭವಾಗಿದ್ದರೂ ಪಾಂಡಿತ್ಯಬುದ್ಧಿಯನ್ನು ಕೆರಳಿಸುವುದರಿಂದ ಅನುಭವ – ತದೇಕಮುಖವಾಗಿದ್ದ ಮನಸ್ಸನ್ನು ವಿದ್ವನ್ಮಾತ್ರವಾದ ಆಲೋಚನೆಯ ಕಡೆಗೂ ತಿರುಗಿಸಿ ರಸದ ನಡೆಗೆ ತಡೆಯಾಗುತ್ತದೆ. ಒಂದುವೇಳೆ ಆ ಅಲಂಕಾರ ಧ್ವನಿಯುಕ್ತವಾಗಿದ್ದರೂ ಶ್ಲೇಷೆಯ ಕೃತಕತೆಯಿಂದ ಸಂಪೂರ್ಣವಾಗಿ ಪಾರಾಗಲಾರದು.

ಆಶ್ರಿತಕವಿ ರನ್ನನ ಪ್ರತಿಭೆಯ ಪ್ರಕಾಶ ಇಂತಹ ವರ್ಣನೆಗಳಲ್ಲಿ ಚಂದ್ರಮಂದ; ಪಂಪನದು ರವಿಪ್ರಖರ. ವೀರರೌದ್ರಾದಿ ರಜೋಗುಣಪ್ರಚುರವಾದ ಕಾವ್ಯಭಾಗಗಳನ್ನು ನಿರ್ವಹಿಸುವುದರಲ್ಲಿ ರನ್ನನ ಕಲೆ ಒಮ್ಮೊಮ್ಮೆ ಪಂಪನೂ ಕಣ್ಣೆತ್ತಿನೋಡಿ ತಲೆದೂಗುವಂತೆ ಮಹೋನ್ನತವಾಗುತ್ತದೆ. ಆದರೆ ಶಾಂತಿ ಸೌಮ್ಯತೆ ಸೌಂದರ್ಯ ಇತ್ಯಾದಿ ದೈವೀ ಲಕ್ಷಣದ ಸತ್ತ್ವಗುಣ ಪ್ರಚುರವಾದ ಕಾವ್ಯಾಂಗಗಳ ನಿರ್ವಹಣೆಯಲ್ಲಿ ರನ್ನ ಪಂಪನಿಗೆ ಯಾವಾಗಲೂ ಕಿರಿಯ. ಕಿರಿಯ ಮಾತ್ರವಲ್ಲ; ಆ ಅಂಶದಲ್ಲಿ ಅವನನ್ನು ಪಂಪನಿಗೆ ಹೋಲಿಸುವುದೂ ಸಲ್ಲದ ಗೌರವವಾದೀತು.

ಅಂತಹ ಸೂಕ್ಷ್ಮವಾದ ಸಾತ್ತ್ವಿಕಾಂಶ ವರ್ಣನೆಯ ಪ್ರಸಂಗ ಬಂದಾಗ ರನ್ನನ ಕಲೆ ನಾರಣಪ್ಪನ ಕಲೆಗೆ ಸಮೀಪವಾಗುತ್ತದೆ. ಪಂಪನ ಪ್ರತಿಭಾಪರಿವೇಷದ ಆಲಿಂಗನದಲ್ಲಿರುವ ರನ್ನನ ಪ್ರತಿಭೆ ಪಂಪನ ಕವಿತಾಲಕ್ಷಣಗಳಿಂದ ಯಾವಾಗಲೂ ಸಂಪೂರ್ಣವಾಗಿ ಚ್ಯುತವಾಗುವುದಿಲ್ಲ ಎಂಬುದನ್ನು ಮರೆಯದಿದ್ದರೂ ರನ್ನನಲ್ಲಿ ಪ್ರಕೃತಿ ಸೌಂದರ್ಯದ ಅನುಭೂತಿಯಾಗಲಿ ಅದರ ವರ್ಣನೆಯಾಗಲಿ ಎಂದಿಗೂ ಯಾವ ಸಮಯದಲ್ಲಿಯೂ ಪಂಪನ ಜಂಘೆಯೆತ್ತರಕ್ಕೂ ಏರುವುದಿಲ್ಲ. ಪಂಪನು ಪ್ರಕೃತಿಯ ಸುಭಗತೆಯನ್ನು ಸಾವಿರಾರು ಕಣ್ಣುಗಳಿಂದ ಕಂಡಿದ್ದಾನೆ; ನೂರಾರು ನಾಲಗೆಗಳಿಂದ ಸವಿದಿದ್ದಾನೆ; ಬೇಸರವರಿಯದ ಉಲ್ಲಾಸದಿಂದ ಕೊರಳು ತುಂಬಿ ಹಾಡಿದ್ದಾನೆ; ಪ್ರೇಯಸಿಯಂತೆ, ಸಖಿಯಂತೆ, ದೇವಿಯಂತೆ; ಪ್ರೀತಿಮುಖದಲ್ಲಿ, ಪ್ರಣಯಮುಖದಲ್ಲಿ, ಭಕ್ತಿಮುಖದಲ್ಲಿ. ರನ್ನನಲ್ಲಿ ಪ್ರಕೃತಿಯ ಸೌಂದರ್ಯದ ಅಂತಹ ಕಲೋಪಾಸನೆ ಸರ್ವತ್ರವಾಗಿ ಕಂಡುಬರುವುದಿಲ್ಲ.

ನಾರಣಪ್ಪನಂತೂ ಪ್ರಕೃತಿ ಸೌಂದರ್ಯದ ವಿಷಯದಲ್ಲಿ ಸಂಪೂರ್ಣವಾಗಿ ಅಂಧನಲ್ಲದಿದ್ದರೂ ಉದಾಸೀನ ಮತ್ತು ವಿರಕ್ತ. ನಮ್ಮಲ್ಲಿರುವ ಇಬ್ಬರೋ ಮೂವರೋ ಮಹಾಕವಿಗಳಲ್ಲಿ ಒಬ್ಬನಾಗಿರುವ ಆತನಲ್ಲಿ ಪ್ರಕೃತಿಸೌಂದರ್ಯ ವಿಚಾರವಾಗಿರುವ ತಾಟಸ್ಥ್ಯ, ಔದಾಸೀನ್ಯ, ಅನಾಸಕ್ತಿಯ ಮನೋಧರ್ಮವನ್ನು ಪರ್ಯಾಲೋಚಿಸಿದರೆ ಅತ್ಯಾಶ್ಚರ್ಯವಾಗುತ್ತದೆ. ಅವನೆಲ್ಲಿಯೂ ಪ್ರಕೃತಿವರ್ಣನೆಯಲ್ಲಿ ತಂಗುವುದಿಲ್ಲ; ಎಲ್ಲಿಯೂ ಅದನ್ನು ಲಂಭಿಸುವುದಿಲ್ಲ. ಬರೆದರೂ ಶಾಸ್ತ್ರೋಕ್ತವಾಗಿ, ಶಾಸ್ತ್ರಮಾತ್ರಕ್ಕಾಗಿ. ಅವನಿಗೆ ಮೇಘವಿರುವುದು ಶ್ರೀಕೃಷ್ಣನ ತನುಕಾಂತಿಯ ಉಪಮಾ ಪ್ರಯೋಜನಕ್ಕಾಗಿ; ಮೊಳಗಿರುವುದು ಮೆಚ್ಚಿನ ವೀರನೊಬ್ಬನ ರಣಗರ್ಜನೆಯ ಹೋಲಿಕೆಗಾಗಿ. ಗಾಳಿಯಿರುವುದು ಭೀಮನಿಗೆ ತಂದೆಯಾಗಿ. ಬೆಂಕಿಯಿರುವುದು ದ್ರೌಪದಿಗೆ ಜನ್ಮಕ್ಷೇತ್ರವಾಗಿ. ಮಿಂಚು ಹೆಣ್ಣಿನ ಕಡೆಗಣ್ಣಿನ ಕೈಂಕರ್ಯಕ್ಕೆ ನಿವೇದಿತ. ಹೊಳೆಯ ಹೊನಲೂ ಕಡಲ ಬಿರುಬೂ ಸೇನೆಗಳ ಸಮರಕ್ರಿಯಾ ವರ್ಣನೆಗೆ ಸಮರ್ಪಿತ. ಸೂರ್ಯೋದಯ ಸೂರ್ಯಾಸ್ತ ಚಂದ್ರೋದಯಗಳೂ ವಸಂತಾದಿ ಋತುಗಳ ಆವಿರ್ಭಾವಗಳೂ ತ್ರಿಕಾಲ ಸೂಚನೆಗೆ ಮಾತ್ರ ಉಪಯುಕ್ತ: ಸೂತ್ರಕಾರನಂತೆ ಒಂದೆರಡು ಪಂಕ್ತಿಗಳಲ್ಲಿ ಪೂರೈಸಿಬಿಡುತ್ತಾನೆ. ನಾರಣಪ್ಪ ಮಿಕ್ಕೆಲ್ಲ ವಿಷಯಗಳಲ್ಲಿ ಎಷ್ಟು ವರಿಷ್ಠನೊ ಅಷ್ಟೂ ಕನಿಷ್ಠ ಈ ಒಂದರಲ್ಲಿ.

ಆ ಕನಿಷ್ಠತೆಗೆ ಕನ್ನಡಿ ಹಿಡಿದಂತಿದೆ, ಅವನ ವೈಶಂಪಾಯನ ಸರೋವರ ವರ್ಣನೆ. ನಾರಣಪ್ಪ ತನ್ನ ದುರ್ಯೋಧನನಿಗೆ ಸರೋವರ ಪ್ರವೇಶಕ್ಕೆ ಮೊದಲು ಭೀಷ್ಮ ಸಂದರ್ಶನ ಮಾಡಿಸುವ ಗೋಜಿಗೆ ಹೋಗುವುದಿಲ್ಲ. ರಣರಂಗದಲ್ಲಿ ನಡೆಯುತ್ತಾ ಸಂಜಯನಿಗೆ ತನ್ನ ನಿರ್ಧಾರವನ್ನು ತಿಳಿಸುತ್ತಾನೆ. ಮುಂದೆ ಕವಿ ಕೌರವೇಂದ್ರನು ಸರೋವರದ ಬಳಿಗೆ ಬಂದುದನ್ನು ತಿಳಿಸುತ್ತಾನೆ, ಒಂದು ಪದ್ಯದಲ್ಲಿ: ವರ್ಣಿಸುತ್ತಾನೆ, ಒಂದೇ ಪದ್ಯದಲ್ಲಿ:

ವಿನುತ ಸಂಜಯಸಹಿತ ಕೌರವ
ಜನಪ ಬಂದನು ತತ್ಸರೋವರ
ಕನಿಲನಿದಿರಾದನು ಸುಗಂಧದ ಶೈತ್ಯಪೂರದಲಿ |
ತನುವಿಗಾಪ್ಯಾಯನದಿನಂತ
ರ್ಮನಕೆ ಪಲ್ಲಟವಾಯ್ತು ಭೀಮನ
ಜನಕನಱೆದನು ತನ್ನ ಗುಪ್ತಸ್ಥಾನ ಸಂಗತಿಯ ||

ಉಲಿವ ಕೋಕಿಲ ಪಾಠಕರ ಮೊರೆ
ವಳಿಕುಳದ ಗಾಯಕರ ಹಂಸಾ
ವಳಿಯ ಸುಭಟರ ಜಡಿವ ಕೊಳರ್ವಕ್ಕಿಗಳ ಪಡಿಯಱರ |
ಅಲರ್ದ ಹೊಂದಾವರೆಯ ನವಪರಿ
ಮಳದ ಸಿಂಹಾಸನದಿ ಲಕ್ಷ್ಮೀ
ಲಲನೆಯೋಲಗಶಾಲೆಯಂತಿರೆ ಮೆಱೆದುದಾ ಸರಸಿ ||
(ಗದಾಪರ್ವ ಸಂ. ೩-೩೭, ೩೮)

ಕುಮಾರವ್ಯಾಸನ ಪದರಚನೆ, ಪದಮೈತ್ರಿ, ಶೈಲಿ, ಶಯ್ಯೆ, ಭಾಮಿನಿಯಾದರೂ ಭೀಮಗಮನವಾದ ಷಟ್ಪದಿಗಳ ಛಂದೋವಿನ್ಯಾಸ-ಇವುಗಳ ಫಣಾರತ್ನ ಮೋಹಕ್ಕೆ ಸಿಲುಕಿ ನಾವು ಮರುಳಾಗದಿದ್ದರೆ ಮೇಲೆ ಉದಾಹರಿಸಿರುವ ಎರಡು ಪದ್ಯಗಳ ಸಾಧಾರಣತೆಗೆ ನಮ್ಮ ಪ್ರಜ್ಞೋದಯವಾಗದಿರುವುದಿಲ್ಲ.

ಕೌರವನು ಕೊಳದೆಡೆಗೆ ಬಂದುದನ್ನು ತಿಳಿಸುವ ಮೊದಲನೆಯ ಪದ್ಯವಾದರೂ ಕೆಲವು ಕಾವ್ಯಲಕ್ಷಣಗಳಿಂದ ಕೂಡಿ ಮನೋಹರವಾಗಿದೆ. ಅದನ್ನು ವರ್ಣಿಸಲೆಳಸುವ ಎರಡನೆಯ ಪದ್ಯವಂತೂ ಹಾಸ್ಯಾಸ್ಪದವಾಗುವಷ್ಟರ ಮಟ್ಟಿಗೆ ಚರ್ವಿತ ಚರ್ವಣವಾಗಿದೆ. ಅದನ್ನು ಗ್ರಹಿಸಬೇಕಾದರೆ ವಾಚಕರು ಎಚ್ಚರಿಕೆಯಿಂದಿರಬೇಕು. ಏಕೆಂದರೆ ಪದಪ್ರಯೋಗದಲ್ಲಿ ಕುಮಾರವ್ಯಾಸ ಮೋಡಿಕಾರ. ಪದ ವಿಷ್ಣುಪದಗಳಿಂದ ಭಾವ ಭಾಗೀರಥಿಯರನ್ನು ಸೃಜಿಸಿ ನೆಲಕ್ಕೆ ಕರೆತರುವ ಕಲಾಬ್ರಹ್ಮನವನು. ಯಾವ ಪದಗಳು ಎಂತೆಂತಹ ರಸದೊರತೆಗಳನ್ನು ಮಿಡಿಯಬಲ್ಲುವು ಎಂಬುದು ಅವನಿಗೆ ಹುಟ್ಟರಿವು. ಉಲಿ, ಕೋಕಿಲ, ಮೊರೆ, ಅಳಿಕುಲ, ಹಂಸಾವಳಿ, ಕೊಳರ್ವಕ್ಕಿ, ಅಲರ್, ಹೊಂದಾವರೆ, ಪರಿಮಳ, ಸಿಂಹಾಸನ, ಲಕ್ಷ್ಮೀಲಲನೆ, ಓಲಗಶಾಲೆ, ಮೆಱೆ, ಸರಸಿ-ಕುಮಾರವ್ಯಾಸ ಭಾರತದ ಹಲವಾರು ಪರ್ವಗಳನ್ನು ಓದಿದವನಿಗೆ ಮೇಲಣ ಒಂದೊಂದು ಪದವೆ ಸಾಕು ರಸಾನುಭವಕ್ಕೆ: ಇನ್ನು ಅವುಗಳ ಅರ್ಥದ್ಯೋತಕವಾದ ಮಧುರ ಮಿಲನದಿಂದ ಏನುತಾನೆ ಆಗದು! ಆದರೆ ಇಲ್ಲಿ ಆ ಅಪ್ಸರಿಯ ಮೋಹದಿಂದ ನಮ್ಮ ವಿಮರ್ಶನ ತಪಸ್ಯೆ ಪಾರಾಗದಿದ್ದರೆ ಸತ್ಯ ಸಾಕ್ಷಾತ್ಕಾರವಾಗುವುದಿಲ್ಲ.

‘ಕೌರವ ಜನಪ ಬಂದನು ತತ್ಸರೋವರಕೆ’ ಎಂಬ ಮೊದಲನೆಯ ಪದ್ಯದಲ್ಲಿ ‘ಅನಿಲನಿದಿರಾದನು ಸುಗಂಧದ ಶೈತ್ಯಪೂರದಲಿ’ ಎನ್ನುವ ಚಿತ್ರ, ಭಾವ, ಕಲ್ಪನೆ, ಅನುಭವ ಬಲು ಸೊಗಸಾದುದು. ಆದರೆ, ಪಂಪನಲ್ಲಿ ಕಾಣುವಂತೆ, ಕದಡಿದ ಅಂತಃಕರಣದ ದುರ್ಯೋಧನನಿಗೆ ಅದು ಅನುಭೂತವಾದರೂ ಅಲಕ್ಷಿತ. ನಾರಣಪ್ಪ ಅದನ್ನು ಒಂದು ಚಮತ್ಕಾರಕ್ಕಾಗಿ ಉಪಯೋಗಿಸಿಕೊಂಡು ಅದರಿಂದ ಒಂದು ವ್ಯಂಗ್ಯವನ್ನೆ ಸಾಧಿಸುತ್ತಾನೆ. ‘ತನುವಿನಾಪ್ಯಾಯನದಿನ್ ಅಂತರ್ಮನಕೆ ಪಲ್ಲಟವಾಯ್ತು.’ ಏಕೆ? ಮೆಯ್ಯಿಗೇನೊ ತಣ್ಣಗಾಗಿ ಬಹಳ ಸುಖವಾಯ್ತಂತೆ; ಅಂತರ್ಮನಸ್ಸಿಗೆ ಮಾತ್ರ ಅದಕ್ಕೆ ವಿರುದ್ಧ ಪರಿಣಾಮವಾಗಿ ದುಃಖವಾಯ್ತಂತೆ! ಏಕೆ ಎಂದರೆ ಕವಿ ‘ಭೀಮನ ಜನಕನರಿದನು ತನ್ನ ಗುಪ್ತಸ್ಥಾನ ಸಂಗತಿಯ’ ಎಂದು ಕಾರಣ ಹೇಳುತ್ತಾನೆ. ಭೀಮನ ತಂದೆ ತಿಳಿದ ಮೇಲೆ ಭೀಮನಿಗೆ ತಿಳಿಯದಿರುತ್ತದೆಯೆ? ಎಂಬ ಧ್ವನಿಯಲ್ಲಿ ಪ್ರಕೃತಿ ಸೌಂದರ್ಯವರ್ಣನೆ ಇಲ್ಲದಿದ್ದರೂ ಪ್ರಕೃತಿ ವ್ಯಾಪಾರವೊಂದು ಕಲೋಪಯುಕ್ತವಾದ ರೀತಿಯಿಂದ ವರಸತ್ತಾಗುತ್ತದೆ.

ಸರೋವರದ ವರ್ಣನೆ ಎಂದಿರುವ ಎರಡನೆಯ ಪದ್ಯದಲ್ಲಿ ಯಾವ ವ್ಯಂಗ್ಯಾರ್ಥವೂ ಸ್ಫುರಿಸುವುದಿಲ್ಲ. ‘ಲಕ್ಷ್ಮೀಲಲನೆಯೋಲಗಶಾಲೆ’ ಎಂಬುದೂ ಕೂಡ ರನ್ನನು ಶ್ಲೇಷೆಯಿಂದ ಸಾಧಿಸುವ ‘ಜಯಲಕ್ಷ್ಮೀವಿಳಸಿತಂ’ ಮತ್ತು ‘ಕೊಳುಗುಳಮಂ ಪೋಲ್ದತ್ತು’ ಎಂಬಲ್ಲಿರುವಂತೆ ಕಾವ್ಯೋದ್ದೇಶಪೂರ್ವಕವಾಗಿ ತೋರುವುದಿಲ್ಲ. ಎಲ್ಲಾ ಸರೋವರಗಳೂ ಮನೋಹರವಾಗಿರುವಂತೆ ಆ ವೈಶಂಪಾಯನವೂ ಇತ್ತು! ಅಲ್ಲಿಗೆ ಬಂದವನು ತತ್‌ಸಾಮಯಿಕ ದುರ್ಯೋಧನನಲ್ಲದೆ ಚಂದ್ರಾಪೀಡನಾಗಿದ್ದರೂ ನಾರಣಪ್ಪನ ಸರೋವರ ಯಾವ ಪಕ್ಷಪಾತವನ್ನೂ ಮಾಡುತ್ತಿರಲಿಲ್ಲ. ಪಾಪ, ನಾರಣಪ್ಪನ ಪ್ರತಿಭಾಶ್ರೀಯ ನೈಜ ಪ್ರತಿಬಿಂಬವನ್ನು ಅವನ ಸರೋವರದ ಸಿರಿಗನ್ನಡಿಯಲ್ಲಿ ಕಾಣಲೆಳಸಿದರೆ ಅವನಿಗೆ ತುಂಬಾ ಅನ್ಯಾಯಮಾಡಿದಂತಾಗುತ್ತದೆ. ಅದರ ವೈಭವವನ್ನು ಸಂದರ್ಶಿಸಬೇಕಾದರೆ ಗದುಗಿನ ವೀರನಾರಾಯಣನ ಗರ್ಭಗುಡಿಗೇ ಹೋಗಬೇಕಾಗುತ್ತದೆ. ಆದಿಕವಿ ಪಂಪನ ಪ್ರತಿಭಾಶ್ರೀಯಂತೆ ವೈರಾಗ್ಯದಲ್ಲಾಗಲಿ, ವ್ಯಾಮೋಹದಲ್ಲಾಗಲಿ, ಪ್ರಕೃತಿಸೌಂದರ್ಯದಲ್ಲಾಗಲಿ, ಆಧ್ಯಾತ್ಮಿಕ ಸೌಭಾಗ್ಯದಲ್ಲಾಗಲಿ, ಸರೋವರದಲ್ಲಾಗಲಿ, ಜಿನಮಂದಿರದಲ್ಲಾಗಲಿ, ಸಮರ ಶಾಂತಿ ರಣರಂಗ ಶೃಂಗಾರನಿಲಯ ಎಂಬ ಭೇದವಿಲ್ಲದೆ ಸರ್ವತ್ರ, ಸರ್ವದಾ, ಸಮಾನವಾಗಿ ಪ್ರತಿಬಿಂಬಿಸಲರಿಯದು ದಿವ್ಯಕವಿ ನಾರಣಪ್ಪನ ನಾರಾಯಣೀಯ ಪ್ರತಿಭಾಶ್ರೀ.[3]


[1]       ಆದರೆ ಪಂಪನ ಹೃದಯ ನಿಷ್ಕರುಣವಾಗಿಲ್ಲ. ಅವನ ಕನಿಕರ ತನ್ನ ಅನುಕಂಪೆಯ ಮತ್ತು ಗೌರವದ ತೀರ್ಥೋದಕವನ್ನು ದುರ್ಯೋಧನನ ಮೇಲೆ ಪ್ರೋಕ್ಷಿಸುತ್ತದೆ. (ಪಂ.ಭಾ. ೧೩-೭೪).

ಬೆಳಗಿ ಸಮಸ್ತ ಭೂವಳಯಮಂ ನಿಜ ತೇಜದಿನಾಂತ ದೈತ್ಯರಂ
ತಳವೆಳಗಾಗೆ ಕಾದಿ ಚಳಿತೆಯ್ದಿ ಬೞಲ್ದಪರಾಂಬುರಾಶಿಯೊಳ್
ಮುೞುಗುವ ತೀವ್ರ ದೀಧಿತಿವೊಲಾ ಕೊಳದೊಳ್ ಫಣಿರಾಜ ಕೇತನಂ
ಮುೞುಗಿದನಾರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ

ತನ್ನ ತೇಜಸ್ಸಿನಿಂದ ಸಮಸ್ತ ಭೂವಲಯವನ್ನು ಬೆಳಗಿ, ತಮೋದೈತ್ಯರೊಡನೆ ಕಾದಿ, ಬಳಲಿ, ಕೊನೆಗೆ ಪಡುಗಡಲಿಗಿಳಿಯುವ ತೀವ್ರದೀಧಿತಿಯಾದ ಸೂರ್ಯ ದೇವನ ಉಜ್ವಲೋಪಮೆಯನ್ನೊಡ್ಡಿದ್ದಾನೆ, ಕಾಲವಂಚನೆಗಾಗಿ ಕೊಳದಲ್ಲಿ ಮುಳುಗುವ ಕೌರವೇಂದ್ರನಿಗೆ. ಮಹಾಕವಿಯ ಅನುಕಂಪೆ ಇನ್ನೂ ಮುಂಬರಿದು ನಮಗೆ ಸಮಾಧಾನ ಹೇಳುತ್ತದೆ: ‘ಯಾರಾದರೇನಂತೆ? ವಿಧಿ ಕಟ್ಟಿದ್ದನ್ನು ಮೀರಲಾಗುತ್ತದೆಯೆ?’

ಪ್ರತಿನಾಯಕನಿಗೆ ಉಜ್ವಲವಾದ ತೇಜಸ್ಸಿನ ಉಪಮಾ ಕಿರೀಟವನ್ನಿಟ್ಟು ಮಿಲ್ಟನ್ ಕವಿಯೂ, ಪಂಪನಂತೆಯೆ, ತನ್ನ ‘ಪ್ಯಾರಡೈಸ್ ಲಾಸ್ಟ್’ ಮಹಾಕಾವ್ಯದಲ್ಲಿ ಸೇಟನ್ ಪಾತ್ರಕ್ಕೆ ಮೆರಗು ಕೊಟ್ಟಿರುವುದನ್ನು ತಾರತಮ್ಯ ವಿಮರ್ಶೆಗಾಗಿ ನಾವು ಗಮನಿಸಬಹುದು:

‘He ceased; and Satan staid not to reply,
But, glad that now his sea should find a shore,
With fresh alacrity and force renewed

Springs upward, like a pyramid of fire,
Into the wild expanse, and through the shock
Of fighting elements, on all sides round
Environed, wins his way;…… (Paradise Lost, Book II. 1010-1016.)

ಪಂಪ ‘ತೀವ್ರದೀಧಿತಿವೊಲ್’ ಎಂದು ವರ್ಣಿಸಿದರೆ ಮಿಲ್ಟನ್ ‘Like a Pyramid of fire’ (ಅಗ್ನಿಗೋಪುರಮೆನಲ್) ಎಂದು ವರ್ಣಿಸುತ್ತಾನೆ. ಇಬ್ಬರು ಮಹಾ ಕವಿಗಳೂ ಅಗ್ನಿ ಮತ್ತು ಸೂರ್ಯರ ತೇಜಸ್ಸಿನ ಉಪಮೆಗಳಿಂದ ತಮ್ಮ ಸಾಹಸೋನ್ಮುಖರಾದ ಪ್ರತಿನಾಯಕರನ್ನು ಅಲಂಕರಿಸಿ ಮೆಚ್ಚುಗೆಯನ್ನು ಬಿಚ್ಚಿ ತೋರಿದ್ದಾರೆ.

[2]               ನೆಗೆಯೆ ಪೊದೞ್ದ ಬೊಬ್ಬುಳಿಕೆಗಳ್ ನೆಗೆದಂತೆರಡುಂ ಕೆಲಕ್ಕೆ ನೀ
ರುಗಿಯೆ ಗದಾಭಿಘಾತ ಪರಿಪೂರಿತ ತೋಯಜ ಷಂಡಮಲ್ಲಿಗ
ಲ್ಲಿಗೆ ಕದಡೆ ಭೀಮಭುಜಮಂದರಘಟ್ಟನೆಯಿಂದಮಲ್ಲಿ ತೊ
ಟ್ಟಗೆ ಕೊಳೆ ಕಾಳಕೂಟಮೊಗೆವಂತೊಗೆದಂ ಫಣಿರಾಜಕೇತನಂ (ಪ.ಭಾ. ೧೩-೮೨)
ರಸೆಯಿಂ ಕಾಲಾಗ್ನಿರುದ್ರಂ ಪೊಱಮಡುವವೊಲಂತಾ ಸರೋಮಧ್ಯದಿಂ ಸಾ
ಹಸಗರ್ವಾಲಂಕೃತಂ ತೊಟ್ಟನೆ ಕೊಳೆ ಪೊರಮಟ್ಟೆಲ್ಲಿದಂ ಭೀಮನೆಂದೆ
ಣ್ದೆಸೆಯಂ ನೋಡುತ್ತೆ ಮತ್ತದ್ಭುತ ನಟ ನಿಟಿಲಾಲೋಲ ಕೀಲಾಕ್ಷಿವೋಲ್ ದ
ಳ್ಳಿಸೆ ಕೋಪಾರಕ್ತ ನೇತ್ರಂ ನಿಜಭುಜಗದೆಯಂ ತೂಗಿದಂ ಧಾರ್ತರಾಷ್ಟ್ರಂ (ಗ.ಯು. ೭-೩೦)

[3]       ಆದರೇನು? ಮುಂದಣ ಭೀಮ ದುರ್ಯೋಧನರ ಸಮರಕ್ರಿಯೆ ಮೊದಲಾದೊಡನೆ ನಾರಣಪ್ಪನ ಸಪ್ಪೆಯ ಸರೋವರ, ಕಪ್ಪೆಯ ಕೊಳ, ಇದ್ದಕ್ಕಿದ್ದಂತೆ ಸಕಲ ಜಗನ್ನೇತ್ರ ನಿಷ್ಠೆಗೆ ರಸವತ್ ಕೇಂದ್ರವಾಗುತ್ತದೆ! ಆ ರಸವೈಭವಸ್ವಾದನೆ ನಮ್ಮೀತಾರತಮ್ಯ ವಿಮರ್ಶೆಗೆ ಪ್ರಕೃತವಲ್ಲ.