‘ಕೈಯ ಹಿಡಿದು ನಡೆಸೆನ್ನನು ತಮಸ್ಸಿನಿಂದ ಜ್ಯೋತಿಗೆ’-
ಶತಮಾನಗಳಾಚೆಯಿಂದ ಹರಿದು ಬಂದ ಪ್ರಾರ್ಥನೆ.
ತುಂಬಿಕೊಂಡ ಅವಿವೇಕಕೆ ತೀರದಂಥ ಯಾತನೆ
ಅದರಿಂದಲೆ ಬೆಳಕಿಗಾಗಿ ನಿರಂತರವು ಯಾಚನೆ.

‘ತಮಸ್ಸಿನಿಂದ ಜ್ಯೋತಿಗೆ’-
ನಡೆಸೆನ್ನನು ಎಂದರೂ ಕತ್ತಲಿಂದ ಕತ್ತಲಿಗೇ
ನಡೆದು ಬಂದೆ ಇಲ್ಲಿಗೆ.
ಹಣತೆ ಹಿಡಿದು ಕಾದು ಕುಳಿತೆ ದೀವಳಿಗೆಯ ದಾರಿಗೆ,
ಬೆಳಕು ಮುಟ್ಟಿ ಹೋದರೂನು ಕಡೆಗುಳಿಯಿತು ಕತ್ತಲೆ
ಒಡಕು ಹಣತೆಗೆಣ್ಣೆ ಬತ್ತಿ ತುಂಬಿ ನಂಬಿ ಕಾಯಲೆ?

ತಮಸ್ಸಿನಿಂದ ಜ್ಯೋತಿಗೆ-
ಬಂದೆಯ ಬಾ ದೀಪಾವಳಿ, ನಿನ್ನ ಕಣ್ಣ ನೋಟಕೆ
ಜೀವ ಬಂತು ಈ ಹಣತೆಗೆ, ಹಬ್ಬವಾಯ್ತು ಬದುಕಿಗೆ.
ನೆಲದಿಂದಲು ಮುಗಿಲ ತನಕ ಬೆಳಕು ಬಳ್ಳಿ ಹಂದರ
ಬಿಟ್ಟ ಚಿಗುರು-ಹೂವು-ಹಣ್ಣು ಚಿಕ್ಕೆ ಸೂರ್ಯ ಚಂದಿರ.

ಹಗಲು ಇರುಳು ಸುತ್ತಮುತ್ತ ತಿರುಗುವ ಬೆಳಕಿದ್ದರೂ
ಒಳಗಿಳಿಯದು ಏಕೆ ಇದು ಹಾರೈಸುತ ಕಾದರೂ !
ದಾರಿ ತುಂಬ ಕುಲುಮೆ ಬೆಂಕಿ ಸುತ್ತಿಗೆಗಳ ಸದ್ದಿಗೆ
ಬೆದರಿ ಓಡಿ ನಡೆದರೇನು, ಹಿಡಿದು ಬಡಿದು ನೆಟ್ಟಗೆ
ಮಾಡಿಯೇ ಬಿಡುವೆನೆಂದು ಬೆನ್ನಟ್ಟಿದೆ ಕತ್ತಲೆ.
ಆದರೂ ಬೆಳಕಿಗಾಗಿ ನಿರಂತರವು ಯಾಚನೆ :
ಕೈಯ ಹಿಡಿದು ನಡೆಸೆನ್ನನು ತಮಸ್ಸಿನಿಂದ ಜ್ಯೋತಿಗೆ.