ತಾಯಿ ಮರದ ಮೇಲೆಯೇ ಮೊಳಕೆ ಒಡೆಯುವ ಮರಿ ……!

ಸಾಮಾನ್ಯವಾಗಿ ಪ್ರಾಣಿಗಳು ತಮ್ಮ ಮರಿಗಳನ್ನು ಶತ್ರುವಿನಿಂದ ಕಾಪಾಡುವುದಲ್ಲದೇ, ಅವು ಬೆಳೆದು ತಮ್ಮ ಆಹಾರವನ್ನು ತಾವೇ ದೊರಕಿಸಿಕೊಂಡು ಪ್ರಬುದ್ಧವಾಗುವವರೆಗೂ ಅವುಗಳನ್ನು ಪೋಷಿಸಿ ಸಲಹುತ್ತವೆ. ಕೇವಲ ಮನುಷ್ಯನಷ್ಟೇ ಅಲ್ಲ. ಕೋಳಿ, ಬೆಕ್ಕು, ನಾಯಿ ಇತ್ಯಾದಿ ಪ್ರಾಣಿಗಳಲ್ಲೂ ನಾವು ಈ ಪ್ರಕ್ರಿಯೆಯನ್ನು ಕಾಣತ್ತೇವೆ.

ಆದರೆ ಇದು ಕೇವಲ ಪ್ರಾಣಿಗಳಿಗಷ್ಟೇ ಸಿಮೀತವಾಗಿಲ್ಲ. ವಿಚಿತ್ರವೆಂದರೆ ಒಂದು ಬಗೆಯ ಸಸ್ಯವರ್ಗವು ಈ ರೀತಿಯ ಗುಣಲಕ್ಷಣವನ್ನು ಹೊಂದಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ಈ ಸಸ್ಯವರ್ಗವನ್ನು ‘ಕಾಂಡ್ಲಾ ಗಿಡಗಳು’ ಅಥವಾ ‘ಮ್ಯಾಂಗ್ರೋವ್ಸ್’ (Mangroves) ಎನ್ನುವರು. ಇವುಗಳಲ್ಲಿನ ಒಂದು ಕುಟುಂಬ ರೈಜೋಫೊರೇಸಿ (Rizophoracae) ಸಸ್ಯಕ್ಕೆ ಇಂಥ ಒಂದು ಗುಣವಿದೆ.

ಇವು ಸಾಮಾನ್ಯವಾಗಿ ಸಮುದ್ರದ ಉಪ್ಪು ನೀರು ಹಾಗೂ ನದಿಯ ಸಿಹಿ ನೀರು ಒಂದಕ್ಕೊಂದು ಕೂಡುವ ಅಳಿವೆ ಪ್ರದೇಶಗಳಲ್ಲಿ (Estuary) ಹಾಗೂ ಜೌಗು ಪ್ರದೇಶಗಳಲ್ಲಿ ಹೇರಳವಾಗಿ ಕಂಡು ಬರುತ್ತವೆ. ಇಂತಹ ಪ್ರದೇಶಗಳಲ್ಲಿ ನೀರು ಹಾಗೂ ಮಣ್ಣುಗಳು ಅಧಿಕ ಉಪ್ಪಿನಾಂಶ ಹೊಂದಿದ್ದು, ನೀರಿನ ಉಬ್ಬರ-ಇಳಿತದ ತೀವ್ರ ಹೊಡೆತಕ್ಕೆ ಒಳಪಟ್ಟಿರುತ್ತವೆ. ಅಷ್ಟೇ ಅಲ್ಲ, ಇಲ್ಲಿನ ಮಣ್ಣಿನಲ್ಲಿ ಆಕ್ಸಿಜನ್ ಪ್ರಮಾಣವು ಅತಿ ಕಡಿಮೆ ಮಟ್ಟದಲ್ಲಿರುತ್ತದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯಾವುದೇ ಸಸ್ಯಗಳ ಬೀಜಗಳು ಮೊಳಕೆಯೊಡೆಯುವುದಿರಲಿ, ನೆಲಕ್ಕೆ ಬಿದ್ದ ಒಂದೆರಡು ದಿನಗಳಲ್ಲೇ ಕೊಳೆತು ಹೋಗಬಹುದು ಅಥವಾ ನೀರಿನ ಪ್ರವಾಹಕ್ಕೆ ಸಿಲುಕಿ ನಾಶ ಆಗಬಹುದು.ಈರೀತಿಯ  ಪರಿಸ್ಥಿತಿಯನ್ನು  ನಿಭಾಯಿಸಲೆಂದೇ ಕಾಂಡ್ಲಾ ಗಿಡಗಳು ಒಂದು ವಿಶೇಷ ಮಾರ್ಪಾಟಿಗೆ ಒಳಗಾಗಿವೆೆ. ಈ ಸಸ್ಯಗಳಲ್ಲಿ ಬಲಿತ ಬೀಜವು ನೇರವಾಗಿ ನೆಲಕ್ಕೆ ಬೀಳುವುದಿಲ್ಲ. ಬದಲಾಗಿ ತಾಯಿ ಸಸ್ಯದ ಟೊಂಗೆಗಳಲ್ಲಿ ಬೀಜವು  ಭದ್ರವಾಗಿ ಸೆರೆಯಾಗುತ್ತದೆ. ನಂತರ ಬೀಜವು ನಿಧಾನವಾಗಿ ಮೊಳಕೆಯೊಡೆದು ಉದ್ದನೆಯ ರಚನೆ ಹೊಂದುತ್ತದೆ. ಈ ರೀತಿ ಅದು ತಾಯಿ ಸಸ್ಯದಲ್ಲೇ ಸಸಿಯಾಗಿ ಬೆಳೆಯುತ್ತದೆ. ಹೀಗೆ ನೇತಾಡುತ್ತಿರುವ ಸಸಿಯು ತನ್ನ ತುದಿಯನ್ನು ಪೆನ್ಸಿಲಿನಂತೆ ಚೂಪಾಗಿಸುತ್ತಾ ತೂಕ ಹೆಚ್ಚಿಸಿಕೊಳ್ಳುತ್ತದೆ. ಸಸಿಯು ಗಿಡವಾಗಿ ಬೆಳೆಯುವರೆಗೂ ತಾಯಿ ಸಸ್ಯದ ಮೇಲೆಯೇ ಆಧಾರವಾಗಿದ್ದು, ಈ ಸಸಿಗಳು ನೋಡಲು ನೇತಾಡುತ್ತಿರುವ ನುಗ್ಗೆಕಾಯಿಯಂತೆ ಕಾಣುತ್ತವೆ.

ಸಸಿಯು ಕೆಳಗಿರುವ ನೆಲದ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸಿ ಸಲೀಸಾಗಿ ಬೆಳೆಯುವ ಹಂತಕ್ಕೆ ತಲುಪಿದಾಗ, ಅದು ತಾಯಿ ಸಸ್ಯದಿಂದ ಬೇರ್ಪಟ್ಟು ಕೆಳಗಿನ ತೇವಯುಕ್ತ ಮಣ್ಣಿನಲ್ಲಿ ನೇರವಾಗಿ ಚುಚ್ಚಿಕೊಳ್ಳುತ್ತದೆ ಹಾಗೂ ಬೆಳೆಯಲಾರಂಭಿಸುತ್ತದೆ. ಈ ರೀತಿ ಅದು ಕಠಿಣ ಪರಿಸ್ಥಿತಿಯನ್ನು ಮೀರಿ ಸ್ವತಂತ್ರವಾಗಿ ಬದುಕುವ ಹಂತಕ್ಕೆ ತಲುಪುವವರೆಗೂ ತಾಯಿ ಸಸ್ಯದಲ್ಲಿಯೇ  ಸುರಕ್ಷಿತವಾಗಿ ಬೆಳೆಯುತ್ತದೆ. ಇಂಥ ಏನೆಲ್ಲ ವಿಸ್ಮಯಗಳು, ವಿಚಿತ್ರಗಳು ಕಂಡುಬರುತ್ತವೆ.