ಕುಳಿರ ಗಾಳಿಗೆ ಮರದ ತರಗೆಲೆಗಳುದುರಿಹವು ;
ಹಾರಾಡುತಿವೆ ಬರಿದ ಪ್ರೇತದಂತೆ !
ಹೊಗೆಮಂಜು ಆವರಿಸಿ ಅವುಗಳನು ಮೂಸುತಿದೆ
ಕೊಳೆತ ಎಲುಬಿನ ಬದಿಯ ನಾಯಿಯಂತೆ !

ಉದುರಿದೀ ತರಗಿಂದ ಉಪಯೋಗವೇನಿನ್ನು ?
ಹಾಕು ಬೆಂಕಿಯನವನು ರಾಸಿಗೈದು,
ಹತ್ತಿಸಿದೆಯಾ ಬೆಂಕಿ ? ಹೊಗೆಮಂಜಿನೊಡಗೂಡಿ
ಹೊಗೆ ಏರುತಿದೆ ನೋಡು ಸುಯ್ದು ಸುಯ್ದು.

ಸಿಮಿಸಿಮಿಸಿ ಸುಡುತಲಿದೆ ಉರಿಯ ಕೆನ್ನಾಲಿಗೆಯು
ತರಗೆಲೆಯ ಬಾಳನ್ನು ಬೂದಿಮಾಡಿ.
ಸ್ಮೃತಿಯಾಯ್ತು ಬರಿ ಬೂದಿ, ಗಾಳಿ ಸುಳಿದಾಡಿಹುದು
ಚರಮಗೀತೆಯನಿದಕೆ ತಾನೆ ಹಾಡಿ !

ತಳಿರ ತುದಿಯಿಂದುದುರಿ ಮಂಜುಹನಿ ಬೀಳುತಿವೆ
ತರಗೆಲೆಯ ಸ್ಮೃತಿಗಾಗಿ ಕಂಬನಿಗಳಂತೆ !
ತಳಿರ ಮರೆಯೊಳಗೊಂದು ಮರಿಹಕ್ಕಿ ಚೀರುತಿದೆ
ನಮ್ಮ ನಿಷ್ಕರುಣೆಯನು ಶಪಿಸುವಂತೆ !