ಅಮೃತಾಪುರದ ಅಮೃತೇಶ್ವರ ದೇವಾಲಯ

ಜಿಲ್ಲೆಯಿಂದ ೯೦ ಕಿ.ಮೀ
ತಾಲ್ಲೂಕಿನಿಂದ ೧೦ ಕಿ.ಮೀ

ಅಮೃತಾಪುರ ಎಂದಾಕ್ಷಣ ನಮಗೆ ವಾಸ್ತು ಶಿಲ್ಪದ ಮತ್ತು ಶಿಲ್ಪ ಕಲೆಯ ಅಮೃತದ ಹೊಳೆಯೇ ಹರಿದಂತೆ ಭಾಸವಾಗುತ್ತದೆ. ಇದು ತರೀಕೆರೆ ತಾಲ್ಲೂಕಿನ ಈಶಾನ್ಯ ದಿಕ್ಕಿನಲ್ಲಿರುವ ಅಮೃತಾಪುರ ಕೇಂದ್ರದಿಂದ ಸುಮಾರು ೧೦ ಕಿ.ಮೀ ದೂರದಲ್ಲಿದೆ. ಈ ದೇವಾಲಯವು ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡು ತನ್ನ ನೈಪುಣ್ಯತೆಯನ್ನು ಧಾರ್ಮಿಕ ಮನೋಭಾವದೊಂದಿಗೆ ಭಕ್ತರನ್ನು ಮತ್ತು ಕಲಾಕಾರರನ್ನು ಕೈ ಬೀಸಿ ಕರೆಯುತ್ತದೆ.

ಈ ದೇವಾಲಯವು ಕ್ರಿ.ಶ. ೧೧೯೬ರಲ್ಲಿ ನಿರ್ಮಾಣವಾಗಿದೆ. ಹೊಯ್ಸಳರ ದೊರೆಯ ದಂಡನಾಯಕ ಅಮಿತಯ್ಯ ಈ ದೇವಾಲಯವನ್ನು ನಿರ್ಮಾಣ ಮಾಡಿಸಿದನು. ಈ ದೇವಾಲಯದ ಲಿಂಗ ಪ್ರತಿಷ್ಠಾಪನೆಯು ದಕ್ಷನ ಚಕ್ರವರ್ತಿ ಎಂದು ಬಿರುದಿನಿಂದ ರಾಜ್ಯವಾಳುತ್ತಿದ್ದ ದೊರೆ ಇಮ್ಮಡಿ ಬಲ್ಲಾಳ ಇವರಿಂದ ನೆರವೇರಿಸಲ್ಪಟ್ಟಿತು.

ಈ ದೇವಾಲಯದ ಮುಖಮಂಟಪ ಹೊರಭಾಗದ ಗೋಡೆಯಲ್ಲಿ ವಿವಿಧ ಕಲಾ ನೈಪುಣ್ಯತೆ ಹರಡಿಕೊಂಡಿದೆ. ಶಿಖರದ ಮೇಲ್ಭಾಗದಲ್ಲಿ ಆನೆ, ಸಿಂಗ, ಹೊಯ್ಸಳ ಲಾಂಛನ, ಮತ್ತಿತರ ಪುರಾಣಕಾಲದ ಮಹಾಭಾರತ, ರಾಮಾಯಣ, ಶ್ರೀ ಕೃಷ್ಣನ ಜೀವನ ಚರಿತ್ರೆ ಇನ್ನು ಮುಂತಾದ ಪುರಾಣ ಕಥೆಗಳನ್ನು ಈ ದೇವಾಲಯದ ಮೇಲೆ ಕೆತ್ತಲಾಗಿದೆ.

ಈ ದೇವಾಲಯದಲ್ಲಿ ಶಿವನ ವಿಗ್ರಹವನ್ನು ಬಿಟ್ಟರೆ ಇನ್ನು ಅನೇಕ ವಿಗ್ರಹಗಳನ್ನು ಕಾಣಬಹುದು. ಇದರಲ್ಲಿ ಶಾರದಾಂಬ ದೇವಿಯ ವಿಗ್ರಹವು ಅತ್ಯಂತ ಮಹತ್ವವನ್ನು ಹೊಂದಿದೆ. ಈ ದೇವಾಲಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ದೀಪವನ್ನು ಬೆಳಗಿಸಲಾಗಿತ್ತು. ಅದು ಇಂದಿನವರೆಗೆ ನಂದಾ ದೀಪವಾಗಿ ಪ್ರಕಾಶಮಾನವಾಗಿ ಬೆಳಗುತ್ತಿದೆ.

ಈ ದೇವಾಲದಲ್ಲಿರುವ ಶಿವನ ವಿಗ್ರಹವು ಸಾಲಿಗ್ರಾಮ ವಿಗ್ರಹವಾಗಿದ್ದು, ಇದನ್ನು ನೇಪಾಳ ದೇಶದ ಗಂಡಕಿ ನದಿಯಿಂದ ತರಲಾಗಿದೆ. ಇದು ಸ್ವಾಭಾವಿಕವಾಗಿ ರಚನೆಯಾದ ಸಾಲಿಗ್ರಾಮವಾಗಿದೆ. ಇದರ ವೈಶಿಷ್ಟ್ಯವೆಂದರೆ ಶಿವರಾತ್ರಿಯ ದಿನದಂದು ಸೂರ್ಯ ಕಿರಣಗಳು ಈ ಸಾಲಿಗ್ರಾಮ ವಿಗ್ರಹದ ಮೇಲೆ ಬಿದ್ದರೆ ಇದು ಪ್ರಕಾಶಮಾನವಾಗಿ ಕಾಣುತ್ತದೆ. ಈ ಸಾಲಿಗ್ರಾಮವು ೨ ಅಡಿ ಎತ್ತರ ಹೊಂದಿದೆ.

ಈ ದೇವಾಲಯವು ಸುಮಾರು ೪ ಎಕರೆ ಪ್ರದೇಶ ಹೊಂದಿದೆ. ಇದರಲ್ಲಿ ೨ ಎಕರೆ ಪ್ರದೇಶದಲ್ಲಿ ‌ದೇಗುಲವಿದೆ. ಇನ್ನುಳಿದ ೨ ಎಕರೆ ಪ್ರದೇಶವು ಉತ್ತಮ ಮೈದಾನ ಪ್ರದೇಶ, ಹುಲ್ಲುಗಾವಲಿನ ರಾಶಿಯಲ್ಲಿ ವಿಜ್ರಂಭಿಸುತ್ತದೆ. ಇದರ ಸುತ್ತಮುತ್ತ ಸುಂದರವಾದ ತೆಂಗು, ಅಡಿಕೆ ಬಾಳೆ ಗಿಡಗಳ ತೋಟಗಳಿಂದ ಸುತ್ತುವರೆದಿದೆ.

ಈ ದೇವಾಲಯವು ಅತ್ಯಂತ ಪುರಾತನವಾಗಿರುವುದರಿಂದ ಇದು ವಾಸ್ತುಶಿಲ್ಪ ಪರಿಚ್ಚಯವನ್ನು ಮಾಡಿಕೊಡುತ್ತದೆ.

 

ಅಜ್ಜಂಪುರದ ಅಮೃತಮಹಲ್ ತಳಿಯ ದನಗಳು

ಜಿಲ್ಲೆಯಿಂದ ೬೪ ಕಿ.ಮೀ
ತಾಲ್ಲೂಕಿನಿಂದ ೨೫ ಕಿ.ಮೀ

 

ಅಮೃತಮಹಲ್ ನ ತಳಿಯು ಹೆಚ್ಚು ಉದ್ದವಾದ ದೇಹ, ಕೊಂಬು, ದೇಹತೂಕ, ಉತ್ತಮ ಮೈಕಟ್ಟು ಭಾರವನ್ನು ಹೊರುವ ಹಾಲಿನ ಉತ್ಪನ್ನ ಇವೆಲ್ಲವೂ ಇಲ್ಲಿರುವ ಗೋವಿನ ವಿಶೇಷವಾಗಿದೆ. ಇಲ್ಲಿ ಸುಮಾರು ೧೨೦ ಹಸು ಮತ್ತು ಹೋರಿ ಇವೆ. ಇಲ್ಲಿ ಬೇಸಿಗೆ ಕಾಲಕ್ಕೆ ಬೇಕಾಗುವ ಪ್ರದೇಶದಲ್ಲಿ ಬೆಳೆದು ಸಂಗ್ರಹಿಸಲಾಗುತ್ತದೆ.

ಇಲ್ಲಿ ಹಸುಗಳ ಹಾಲನ್ನು ಕರೆಯದೆ ಅದು ಸ್ವಾಭಾವಿಕವಾಗಿ ಕರುಗಳಿಗೆ ಕುಡಿಯಲು ಬಿಡಲಾಗುತ್ತದೆ. ಅಲ್ಲದೆ ಕರು ಹೊಂದಿದ ಹಸು ಯಾರನ್ನೂ ಹತ್ತಿರ ಬಿಟ್ಟುಕೊಳ್ಳುವುದಿಲ್ಲ.ಇಲ್ಲಿ ಪ್ರತಿ ವರ್ಷ ಹಸು, ಹೋರಿಗಳನ್ನು ಹರಾಜು ಮಾಡಲಾಗುತ್ತದೆ.

ಪ್ರತಿ ವರ್ಷ ಹಲವಾರು ಕಡೆ ದನಗಳು ಕ್ಷೇತ್ರೋತ್ಸವದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ. ಇಲ್ಲಿ ಪ್ರತಿ ವರ್ಷ ಕೃಷಿಕರಿಗೆ ಹಲವು ಬಗೆಯ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿ ಆದ ಬೆಳವಣಿಗೆ ಸಹಾಯವಾಗುವಂತೆ ಮಾಡುತ್ತಿದೆ. ಕೃಷಿಕರಿಗೆ ಹೈನುಗಾರಿಕೆಯ ಬಗ್ಗೆ ತಿಳುವಳಿಕೆಯನ್ನು ಈ ಕೇಂದ್ರ ನೀಡುತ್ತಾ ಬರುತ್ತಿದೆ.

 

ಕಲ್ಲತ್ತಿಗಿರಿ ಜಲಪಾತ

ಜಿಲ್ಲೆಯಿಂದ ೨ ಕಿ.ಮೀ
ತಾಲ್ಲೂಕಿನಿಂದ ೨೮ ಕಿ.ಮೀ

ತಾಲ್ಲೂಕಿನ ರಮ್ಯ ಮನೋಹರ ಸೌಂದರ್ಯ ತಾಣವಾಗಿರುವ ಕಲ್ಲತ್ತಿಗಿರಿ ಕೇಂದ್ರ ಸ್ಥಾನದಿಂದ ಸುಮಾರು ೨೫ ಕಿ.ಮೀ ದೂರದಲ್ಲಿದೆ. ಈ ಪ್ರದೇಶವು ಸುಮಧುರ ಗಿಡ ಹೂಗಳ ಸುವಾಸನೆಯು ಕೂಡಿರುವ ಪ್ರದೇಶವಾಗಿದೆ. ಇಲ್ಲಿ ಬೋರ್ಗರೆಯುವ ನೀರಿನ ಶಬ್ಧ, ಹಕ್ಕಿಗಳ ಚಿಲಿಪಿಲಿ ನಾದ, ದುಂಬಿಗಳ ಝೇಂಕಾರ ಇಲ್ಲಿ ಕಾಣಸಿಗುತ್ತದೆ.

ಈ ಜಲಪಾತ ನೀರು ಅತ್ಯಂತ ಪವಿತ್ರವು ಮತ್ತು ಆಯುರ್ವೇದಿಕ್ ಔಷಧ ಗುಣಗಳನ್ನು ಹೊಂದಿದೆ ಎಂದು ಹೇಳುತ್ತಾರೆ. ಈ ಜಲಪಾತವು ಬಹಳ ಎತ್ತರ ಪ್ರದೇಶದಿಂದ ಹರಿಯುವುದರಿಂದ ಚಿಕ್ಕ ಚಿಕ್ಕ ಗುಂಡಿಗಳನ್ನು ಮಾಡಿ ಹಂತ ಹಂತವಾಗಿ ಹರಿಯುತ್ತದೆ. ಈ ಜಲಪಾತದ ರಮ್ಯ ತಿರುವುಗಳಲ್ಲಿ ಕಾಫಿ ತೋಟವನ್ನು ನೋಡಬಹುದು. ಈ ಪ್ರದೇಶವು ಟ್ರಕಿಂಗ್ ಮಾಡುವವರಿಗೆ ಅತ್ಯಂತ ಉತ್ತಮ ಟ್ರಕಿಂಗ್ ಸ್ಥಳವಾಗಿದೆ. ಜಲಧಾರೆಯ ತುದಿ ಹತ್ತುವುದು ಕೂಡ ತುಂಬಾ ಪ್ರಯಾಸ. ಇಲ್ಲಿ ದೇವಸ್ಥಾನದಿಂದ ಜಲಪಾತದ ಮೇಲುಗಡೆ ಅರ್ಧ ಭಾಗ ಹೋದರೆ ಅಲ್ಲಿನ ಮನೆ ಜಕ್ಕರಪುಡಿ ಸಿಗುತ್ತದೆ. ಇದು ಅತ್ಯಂತ ಪವಿತ್ರ ಸ್ಥಳವಾಗಿದ್ದು ಇಲ್ಲಿ ಯವುದೇ ರೀತಿಯ ನಿಯಮ ಮೀರಿದರೆ ಅಪಾಯ ಇರುತ್ತದೆ. ಇಲ್ಲಿ ಉಳಿಯಲು ಬ್ರಿಟೀಷ್ ಕಾಲದಲ್ಲಿ ನಿರ್ಮಾಣವಾದ ಮೂರು ಅಂತಸ್ತಿನ ಕಟ್ಟಡ ಇದೆ. ಇಲ್ಲಿ ಸುಂದರವಾದ ಉದ್ಯಾನವನ ಇದೆ. ಈ ಪ್ರದೇಶಕ್ಕೆ ಭೇಟಿ ನೀಡುವುದು ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ಅತ್ಯಂತ ಸುಂದರವಾದ ಅನುಭವವನ್ನು ಈ ಪ್ರದೇಶದಲ್ಲಿ ನಾವು ಕಾಣಬಹುದಾಗಿದೆ.

 

ಕರ್ನಾಟಕ ಊಟಿ ಕೆಮ್ಮಣ್ಣುಗುಂಡಿ

ಜಿಲ್ಲೆಯಿಂದ ೨ ಕಿ.ಮೀ
ತಾಲ್ಲೂಕಿನಿಂದ ೨ ಕಿ.ಮೀ

ಶಿವ ಎಂದರೆ ಸುಂದರ. ಆ ಸುಂದರ ಸೃಷ್ಟಿಗೆ ಸೂರ್ಯನೇ ಕಾರಣ. ಸೂರ್ಯನ ದರ್ಶನಕ್ಕೆ ಬಾ ನೀ ಪಾಲ್ಗುಣ ಮಾಸದ ಕೆಮ್ಮಣ್ಣು ಗುಂಡಿ ಶೃಂಗಕ್ಕೆ ಮತ್ತೊಂದು ಹೆಸರು ಕರ್ನಾಟಕದ ಊಟಿ ಎಂದೇ ಹೆಸರಾಗಿದೆ. ಇದು ತರೀಕೆರೆ ಅಥವಾ ಬೀರೂರಿನಿಂದ ಹೊರಟು ಲಿಂಗದಹಳ್ಳಿ ಮೂಲಕ ಕಲ್ಲತ್ತಿಗಿರಿ ತಲುಪುತ್ತಿದ್ದಂತೆ ಕಾಫಿ ಗಿಡಗಳು, ಸುವಾಸನೆ ಹಾಗೆಯೇ ಕೆಮ್ಮಣ್ಣು ಗುಂಡಿ ಪ್ರವೇಶಿಸುತ್ತಿದ್ದಂತೆ ಕೆಂಪು ಮಣ್ಣು ಕೂಡ ನಮಗೆ ಪ್ರಾಕೃತಿಕ ಪೌಡರ್ ಮುಖಕ್ಕೆ ಅಂಟುತ್ತದೆ. ಕಲ್ಲುತ್ತಿಗಿರಿ ದಾಟಿ ಬಂದರೆ ಅಂಕುಡೊಂಕು ರಸ್ತೆಗಳ ಮಧ್ಯದಲ್ಲಿ ಆಳವಾದ ಕಣಿವೆಗಳು ನಮ್ಮಲ್ಲಿ ಭಯಗುಟ್ಟಿಸುತ್ತದೆ. ಸೂರ್ಯನ ಕಿರಣಗಳು ಕೂಡ ಭೂಮಿಗೆ ಬೀಳದ ನಿತ್ಯ ಹರಿದ್ವರ್ಣ ಕಾಡುಗಳು ರಸ್ತೆಯ ಬದಿಗಳಲ್ಲಿ ಬೆಳೆದು ನಿಂತಿದೆ. ಚಳಿಗಾಲ ಮತ್ತು ಮಳೆಗಾಲದಲ್ಲಿ ಧಾರಾಕಾರವಾಗಿ ಮಳೆಯು ಸುರಿಯುತ್ತದೆ. ಆದ್ದರಿಂದ ಇದನ್ನು ತರೀಕೆರೆಯ ಆಗುಂಬೆ ಎಂದು ಕೂಡ ಕರೆಯುತ್ತಾರೆ.

ಇಲ್ಲಿ ಮೈಸೂರಿನ ಮಹಾರಾಜರು ನಿರ್ಮಿಸಿರುವ ದತ್ತಾತ್ರೇಯ ಭವನ ಇದೆ. ಇದಕ್ಕೆ ಶ್ರೀ ಕೃಷ್ಣ ರಾಜೇಂದ್ರ ಗಿರಿಧಾಮ ಎಂದು ಕೂಡ ಹೆಸರು ಬಂದಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಿ ಸುಮಾರು ೪೭೦೨ ಅಡಿ ಎತ್ತರದಲ್ಲಿದೆ. ಇಲ್ಲಿ ಬೇಸಿಗೆಯ ಬಿಸಿಲಿನಲ್ಲಿ ೨೦ ಡಿಗ್ರಿ ಗಿಂತ ಹೆಚ್ಚು ಬಿಸಿಲು ತಾಪ ಇರುವುದಿಲ್ಲ. ಇಲ್ಲಿ ಗಿಡ ಮೂಲಿಕೆ ಸಸ್ಯಗಳಿಗೆ ಹೆಚ್ಚು ಮಹತ್ವವಿದೆ. ಇಲ್ಲಿ ಅನೇಕ ಬಗೆಯ ಮರಗಳನ್ನು ನಾವು ನೋಡಬಹುದು. ಇಲ್ಲಿ ಗುಲಾಬಿ ತೋಟವನ್ನು ಅತ್ಯಂತ ಸುಂದರವಾಗಿ ಅತ್ಯಂತ ಆಕರ್ಷಕ ರೀತಿಯಲ್ಲಿ ಬೆಳೆಸಲಾಗಿದೆ. ಇಲ್ಲಿ ಸುಮಾರು ೩೦೦ ಕ್ಕೂ ಹೆಚ್ಚು ಅಲಂಕಾರಿಕ ಸಸ್ಯಗಳನ್ನು ಬೆಳೆಯಲಾಗಿದೆ. ಇದು ಮಾರಾಟಕ್ಕೂ ಕೂಡ ಸಿಗುತ್ತದೆ. ಇಲ್ಲಿ ಮಕ್ಕಳಿಗೆ ಉದ್ಯಾನವನವನ್ನು  ಕೂಡ ನಿರ್ಮಾಣ ಮಾಡಿದ್ದಾರೆ.

ಇಲ್ಲಿ ಶಿಲೋದ್ಯಾನವನವಿದೆ. ಈ ವನದಲ್ಲಿ ಕಲ್ಲಿನಿಂದ ಕೆತ್ತಿದ ಅನೇಕ ಬಗೆಯ ಪ್ರಾಣಿಗಳು ಕಲ್ಲಿನ ಜಲಪಾತ, ಮುಂತಾದವುಗಳನ್ನು ಆಕರ್ಷಣೀಯವಾಗಿ ಕೆತ್ತಲಾಗಿದೆ.

ಇಲ್ಲಿ ಹತ್ತಿರದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದು. ಅವುಗಳೆಂದರೆ ಶಾಂತಿ ಜಲಪಾತ, ಹೆಬ್ಬೆ ಜಲಪಾತ, ದತ್ತಪೀಠ, ಜಾಗರಕಣಿವೆ, ಕುದುರೆ ಮಾರ್ಗ, ಮಾಣಿಕ್ಯಧಾರ, ಮುಂತಾದ ಪ್ರೇಕ್ಷಣೀಯ ಸ್ಥಳಗಳು ಸಿಗುತ್ತದೆ.

 

ಭದ್ರಾ ಜಲಾಶಯ

ಜಿಲ್ಲೆಯಿಂದ ೯೮ ಕಿ.ಮೀ
ತಾಲ್ಲೂಕಿನಿಂದ ೧೮ ಕಿ.ಮೀ

ಈ ಅಣೇಕಟ್ಟು ೧೯೪೭ರಲ್ಲಿ ಆರಂಭಗೊಂಡು ೧೯೫೯ರಲ್ಲಿ ಮುಕ್ತಾಯವಾಗಿತ್ತು. ಇದರ ಮೂಲ ಉದ್ದೇಶ ನೀರಾವರಿ ಸೌಲಭ್ಯವಾಗಿತ್ತು. ಆದರೆ ೧೯೬೫ ರ ವೇಳೆಗೆ ಇಲ್ಲಿ ವಿದ್ಯುತ್ ಕಾರ್ಯಾಗಾರ ಆರಂಭವಾಯಿತು. ಈ ಜಲಾಶಯದಲ್ಲಿ ೬೩.೦೩ ಟಿ.ಎಂ.ಸಿ. ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ನೀರನ್ನು ಶಿವಮೊಗ್ಗ, ದಾವಣಗೆರೆ, ಮಲೆಬೆನ್ನೂರು ಮುಂತಾದ ಊರಿಗೆ ಜೀವ ನದಿಯಾಗಿ ಹರಿಯುತ್ತದೆ. ಆದ್ದರಿಂದ ಈ ಪ್ರದೇಶದ ಜನರು ಸಮೃದ್ಧಿಯಾಗಿ ಜೀವನ ನಡೆಸುವಂತೆ ಮತ್ತು ಫಲವತ್ತಾದ ಪ್ರದೇಶವನ್ನು ಕೃಷಿಗೆ ಒದಗಿಸುತ್ತಾ ಈ ನದಿ ಸಾಗುತ್ತದೆ.

ವಿದ್ಯುಚ್ಛಕ್ತಿಗೆ ಇಲ್ಲಿ ೨ ಘಟಕಗಳನ್ನು ಆರಂಭಿಸಿದ್ದು ಈ ಘಟಕಗಳಲ್ಲಿ ವರ್ಷದ ೪ ತಿಂಗಳು ಮಾತ್ರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಈ ಅವಧಿಯಲ್ಲಿ ೪೦ ಮೆಗಾ ವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಲಾಗುತ್ತದೆ. ಅಂದರೆ ೫೦ ಮಿಲಿಯನ್ ಯೂನಿಟ್ ವಿದ್ಯುತ್ ಇಲ್ಲಿ ಉತ್ಪಾದನೆಯಾಗುತ್ತದೆ.

ಈ ಡ್ಯಾಂ ನೋಡಲು ಬಹಳ ಸುಂದರವಾಗಿದ್ದು, ಈ ಪ್ರದೇಶದಲ್ಲಿ ಉದ್ಯಾನವನ, ಬೋಟಿಂಗ್, ಉತ್ತಮ ರಸ್ತೆ, ಮೀನು ಸಂಗ್ರಹಾಲಯ, ದೀಪಾಲಂಕಾರ, ಪ್ರವಾಸಿಗರಿಗೆ ತಂಗಲು ತಂಗುದಾಣ ಮುಂತಾದ ವ್ಯವಸ್ಥೆಯನ್ನು ಮುಂತಾದ ವ್ಯವಸ್ಥೆಯನ್ನು ಈ ಡ್ಯಾಂ ನಲ್ಲಿ ನಾವು ಕಾಣಬಹುದಾಗಿದೆ.

 

ಲಕ್ಕವಳ್ಳಿ ಭದ್ರಾ ಅಭಯಾರಣ್ಯ

ಜಿಲ್ಲೆಯಿಂದ ೧೦೦ ಕಿ.ಮೀ
ತಾಲ್ಲೂಕಿನಿಂದ ೨೦ ಕಿ.ಮೀ

ಲಕ್ಕವಳ್ಳಿ ಅಭಯಾರಣ್ಯ ತರೀಕೆರೆ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನ ೨೦ ಕಿ.ಮೀ ದೂರದಲ್ಲಿದೆ. ಈ ಅರಣ್ಯವನ್ನು ಲಕ್ಕವಳ್ಳಿ, ಮುತ್ತೋಡಿ, ಹೆಬ್ಬೆ ಮತ್ತು ತಣಿಗೆ ಬೈಲು ಎಂಬ ೪ ವಲಯಗಳಾಗಿ ವಿಂಗಡನೆ ಮಾಡಲಾಗಿದೆ. ಈ ಅರಣ್ಯದ ಒಟ್ಟು ಚದುರ ಕಿ.ಮೀ ೪೭೦ ಆಗಿದ್ದು ೧೭,೦೦೦ ಹೆಕ್ಟೇರು ಕಾಡನ್ನು ಹೊಂದಿದೆ.

ಈ ಅರಣ್ಯದಲ್ಲಿ ಹೋಗುವಾಗ ಅನೇಕ ರೀತಿಯ ಪ್ರಾಣಿಗಳು, ಪಕ್ಷಿಗಳು, ಗಿಡಮರಗಳು ನಮಗೆ ಪರಿಚಯವಾಗುತ್ತದೆ. ಇಲ್ಲಿ ೧೦೦ ಕ್ಕೂ ಹೆಚ್ಚು ಜಾತಿಯ ಸಸ್ಯಗಳನ್ನು ನಾವು ನೋಡಬಹುದಾಗಿದೆ. ಈ ಕಾಡಿನಲ್ಲಿ ಯಾವುದೇ ರೀತಿಯ ಬೇಟೆಯಾಡುವ ವ್ಯವಸ್ಥೆಯನ್ನು ಸರ್ಕಾರವು ನಿರ್ಬಂಧಿಸಿದೆ.

ಈ ಕಾಡಿಗೆ ಪ್ರವೇಶ ಮಾಡಬೇಕು ಎಂದರೆ ಅರಣ್ಯ ಇಲಾಖೆಯ ಅನುಮತಿಯನ್ನು ಪಡೆದು ಇಲಾಖೆಯ ಸಿಬ್ಬಂದಿಯೊಂದಿಗೆ ಮಾತ್ರ ಪ್ರವೇಶ ನೀಡಲಾಗುವುದು. ಇಲ್ಲಿ ವನ್ಯ ಜೀವಿಗಳಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂಬುದನ್ನು ನೀವು ನೋಡಬಹುದಾಗಿದೆ.

ಇಲ್ಲಿ ಅನೇಕ ಜಾತಿ ಪ್ರಾಣಿ ಪಕ್ಷಿಗಳು ವಾಸಿಸುವ ತಾಣವಾಗಿದೆ. ಇಲ್ಲಿ ಅಂದಾಜು ೪೦ ಕ್ಕಿಂತ ಹೆಚ್ಚು ಹುಲಿ, ೧೨೦ ಆನೆಗಳು ೫ ಸಾವಿರ ಜಿಂಕೆಗಳು, ೨೦೦೦ಕ್ಕೂ ಹೆಚ್ಚು ಸಾರಂಗ, ಕಾಡುಕೋಣ, ಸಾವಿರಕ್ಕಿಂತ ಅಧಿಕ ನವಿಲುಗಳು, ಇನ್ನು ಅನೇಕ ಪ್ರಾಣಿಗಳು ಈ ಪ್ರದೇಶದಲ್ಲಿ ವಾಸವಾಗಿದೆ.

ಇಲ್ಲಿ ಸುಮಾರು ೧೦೦ ವರ್ಷಗಳು ಅಂದರೆ ೧೯೦೫ ರಲ್ಲಿ ನಿರ್ಮಾಣ ಮಾಡಿರುವ ಸುಕಲಾ ಹಟ್ಟಿ ವಿಶ್ರಾಂತಿ ಧಾಮವಿದೆ. ಇದು ಇಂದು ತುಂಬಾ ವ್ಯವಸ್ಥಿತವಾಗಿದೆ. ಇಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಡ್ಯಾಂನ ಹಿಂದಿನ ಪ್ರದೇಶದಲ್ಲಿ ಅನೇಕ ವಸತಿ ಗೃಹಗಳು ಇವೆ. ಇಲ್ಲಿ ತಂಗಲು ವ್ಯವಸ್ಥೆ ಇದೆ. ಈ ಪ್ರದೇಶವು ಚಾರಣಪ್ರಿಯರಿಗೆ ಅತ್ಯಂತ ಸುಂದರವಾದ ಸ್ಥಳವಾಗಿದೆ. ಸಹ್ಯಾದ್ರಿ ತಪ್ಪಲಿನ ಅತ್ಯಂತ ಸನಿಹದ ಶ್ರೀ ಅಭಯಾರಣ್ಯಕ್ಕೆ ಪ್ರತಿ ಪ್ರವಾಸಿಗರು ಭೇಟಿ ನೀಡಿ ಅರಣ್ಯ ಮತ್ತು ವನ್ಯ ಜೀವಿ ಮಹತ್ವ ತಿಳಿದರೆ ಬಹುಶಃ ಅಭಯಾರಣ್ಯಗಳು ಅತ್ಯಂತ ಮಹತ್ವ ಎಂಬುದು ನಮಗೆ ತಿಳಿಯುತ್ತದೆ.

 

ಹೆಬ್ಬೆ ಜಲಪಾತ

ಜಿಲ್ಲೆಯಿಂದ ೫೬ ಕಿ.ಮೀ
ತಾಲ್ಲೂಕಿನಿಂದ ೨೮ ಕಿ.ಮೀ

ಕಷ್ಟವಾದರು ಇಷ್ಟವಾಗುವ ಜಲಪಾತ ಹೆಬ್ಬೆ. ಈ ಜಲಪಾತಕ್ಕೆ ಯಾವುದೇ ರೀತಿಯ ಬಸ್ಸಿನ ವ್ಯವಸ್ಥೆ ಇರುವುದಿಲ್ಲ. ಈ ಜಲಪಾತವು ಒಂದು ಎಸ್ಟೇಟ್ ನಲ್ಲಿ ಇರುವುದರಿಂದ ಇಲ್ಲಿಗೆ ಹೋಗುವುದು ಒಂದು ರೀತಿಯ ಚಾರಣವೇ ಹೌದು. ಇಲ್ಲಿ ಇಳಿಜಾರು ಕಣಿವೆಗಳು ಕಡಿದಾದ ರಸ್ತೆ, ಕಾಲುಹಾದಿಗಳ ಮೂಲಕ ಈ ಜಲಪಾತಕ್ಕೆ ಸಾಗಬೇಕಾಗುತ್ತದೆ.

ಈ ಜಲಪಾತ ನೋಡಲು ಎಷ್ಟು ಅದ್ಭುತವೋ ಇದರ ಪ್ರಯಾಣವು ಅತ್ಯಂತ ಭಯಾನಕವಾಗಿರುತ್ತದೆ. ಈ ಜಲಪಾತವು ಬೇಬಿ ಭಾಗ್ ಎಸ್ಟೇಟ್ ನಲ್ಲಿ ಇದೆ. ಇಲ್ಲಿಗೆ ಜೀಪ್ ಗಳ ಮೂಲಕ ತೆರಳುವ ಅವಕಾಶವಿದೆ. ಇಲ್ಲಿಂದ ಒಂದು ಕಿ.ಮೀ ದೂರದವರೆಗೆ ನಡೆದುಸಾಗಬೇಕು.

ಈ ಜಲಪಾತವು ೫೫೦ ಅಡಿಗಳ ಎತ್ತರದಿಂದ ನೀರು ಬೀಳುತ್ತದೆ. ಈ ದೃಶ್ಯ ನೋಡಲು ರಮಣೀಯವಾಗಿರುತ್ತದೆ. ಈ ಪ್ರದೇಶವು ಹೊಸದಾದ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.