ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ಧಿ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಆನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬಯಸಿದೆ.

ಮಾಹಿತಿ ತಂತ್ರಜ್ಞಾನವು ಜಾಗತೀಕರಣದ ಪ್ರಮುಖ ಅಸ್ತ್ರವಾಗಿ ಪ್ರಯೋಗವಾಗುತ್ತಿರುವಾಗ ಈ ಅಸ್ತ್ರವನ್ನು ಕನ್ನಡದ ಅಭಿವೃದ್ಧಿಗಾಗಿ ಬಳಸುವ ಹೊಣೆಗಾರಿಕೆಯು ಕನ್ನಡ ವಿಶ್ವವಿದ್ಯಾಲಯದ ಮೇಲೆ ಇದೆ. ಕನ್ನಡ ತಂತ್ರಾಂಶಗಳ ಅಭಿವೃದ್ಧಿಯ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ಮುಂದೆ ಸಾಗಬೇಕೆನ್ನುವ ಉದ್ದೇಶದಿಂದ ಕನ್ನಡ ವಿಶ್ವವಿದ್ಯಾಲಯ ಈ ಸಂಬಂಧ ಸಾಹಿತಿಗಳ, ಭಾಷಾತಜ್ಞರ ಸಮಾಲೋಚನೆಯನ್ನು ನಡೆಸಿ ಕನ್ನಡವು ಸರ್ವವ್ಯಾಪಿಯಾಗಿ ಬೆಳೆಯಲು ಶ್ರಮಿಸುತ್ತಿದೆ.

ಕನ್ನಡವು ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ತಾಂತ್ರಿಕ-ಮೌಖಿಕ ಮಾಧ್ಯಮದಲ್ಲಿ ಕನ್ನಡವು ಬಳಕೆ ಯಾಗುತ್ತಿರುವಾಗಲೇ ಕಾಗದದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂಡು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಗೊಳ್ಳುವ ಚಿಂತನಾ ಶರೀರವೂ ಮುಖ್ಯವಾದದ್ದು, ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ಧಿಕ ಗಡಿ ರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ಸಂಪಾದಿಸಿರುವ ‘ತರೀಕೆರೆ ಪಾಳೆಯಗಾರ ಸರ್ಜಪ್ಪನಾಯಕನ ಕಥನ ಕಾವ್ಯ’ ಮೌಖಿಕ ಇತಿಹಾಸದ ದೃಷ್ಟಿಯಿಂದ ಒಂದು ಮಹತ್ವದ ದಾಖಲೆಯಾಗಿದೆ. ಸರ್ಜಪ್ಪನಾಯಕನ ಕಥನವನ್ನು ಪ್ರಾದೇಶಿಕ ಮತ್ತು ಬುಡಕಟ್ಟಿನ ನೆಲೆಗಳಿಂದಲೂ ಅಧ್ಯಯನ ಮಾಡಬಹುದು. ಅದು ಕೇವಲ ಒಬ್ಬ ನಾಯಕನ ಕಥನ ಮಾತ್ರವಲ್ಲ. ಒಂದು ಜನಾಂಗದ ಶಕ್ತಿಯನ್ನು ಅನಾವರಣ ಮಾಡುವ ಕಥನ ಕಾವ್ಯವಾಗಿ ಇದು ಮುಖ್ಯವಾಗಿದೆ. ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ತಮ್ಮ ಪ್ರಸ್ತಾವನೆಯಲ್ಲಿ ಈ ಕಥನ ಕಾವ್ಯದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಇತಿಹಾಸದ ವಿವರಗಳು ಮತ್ತು ಸಂಗ್ರಹ ಸಂಕಥನದ ವಿಧಾನಗಳನ್ನು ವಿವರವಾಗಿ ಚರ್ಚಿಸಿದ್ದಾರೆ. ಸಾಂಸ್ಕೃತಿಕವಾಗಿ ವಿಶಿಷ್ಟವಾಗಿರುವ ಈ ಕೃತಿ ಕನ್ನಡ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠದಿಂದ ಪ್ರಕಟವಾಗುತ್ತಿರುವುದು ವಿಶ್ವವಿದ್ಯಾಲಯಕ್ಕೆ ಅಭಿಮಾನದ ಸಂಗತಿಯಾಗಿದೆ. ವಾಲ್ಮೀಕಿ ಅಧ್ಯಯನ ಮಾಲೆಯ ಮೂಲಕ ಪ್ರಕಟವಾಗುತ್ತಿರುವ ಈ ಕೃತಿಯನ್ನು ಪರಿಶ್ರಮ ಮತ್ತು ಪ್ರೀತಿಯಿಂದ ಸಮ್ಪಾದಿಸಿಕೊಟ್ಟ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೆಪುರಂ ಜಿ. ವೆಂಕಟೇಶ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ ಆಭಾರಿಯಾಗಿದ್ದೇನೆ.

ಬಿ.ಎ. ವಿವೇಕ ರೈ
ಕುಲಪತಿ