ವಾಲ್ಮೀಕಿ ಅಧ್ಯಯನ ಪೀಠದ ವತಿಯಿಂದ ಈ ಕೃತಿ ಪ್ರಕಟವಾಗುತ್ತಿರುವುದು ಎರಡನೆಯ ಕಾಣಿಕೆಯಾಗಿದೆ. ಈ ಕಥನದ ಸಂಗ್ರಹಣೆಗೆ ಅನೇಕ ಬಗೆಯ ಹಿನ್ನೆಲೆಗಳಿವೆ. ಕುವೆಂಪು ವಿಶ್ವವಿದ್ಯಾಲಯದ ಇತಿಹಾಸದ ವಿಭಾಗದಲ್ಲಿ ನಾನು ಎಂ.ಎ. (೧೯೯೨-೯೪) ವ್ಯಾಸಂಗ ಮಾಡುತ್ತಿರುವಾಗ ‘ತರೀಕೆರೆ’ ಎನ್ನುವ ಹೆಸರನ್ನು ಕೇಳಿದ್ದು, ನಮ್ಮ ಹಾಸ್ಟೆಲಿಗೆ ತರಕಾರಿ ತರಲು ಹೋಗಿದ್ದ ನಮ್ಮ ಸ್ನೇಹಿತರಿಂದಲೇ. ಹಾಗಾಗಿ ಪ್ರಯಾಣ ಮಾಡುವಾಗ ಹೊಯ್ಸಳರ ಕಲಾ ಸೌಂದರ್ಯ ಮತ್ತು ಮಲೆನಾಡಿನ ಪ್ರಕೃತಿ ಸೌಂದರ್ಯ ನನ್ನನ್ನು ಮನದೂಗುವಂತೆ ಮಾಡಿದ್ದು ನಿಜ. ಆ ಕಾರಣವಾಗಿ ತರೀಕೆರೆ ತಾಲೂಕಿನ ಅಮೃತಾಪುರದ ಅಮ್ರ‍ಿತೇಶ್ವರ ದೇವಾಲಯಕ್ಕೆ, ಹೊಳೆಹೊನ್ನೂರು ತಾಲೂಕಿನ ಕೂಡಲಿಗೆ ಭೇಟಿ ನೀಡಿದ್ದು ಇಂದಿಗೂ ಹಚ್ಚಹಸಿರಾಗಿದೆ. ನನ್ನ ಹಿತೈಷಿಗಳು, ಹಿರಿಯರು ಒಮ್ಮೆ ತರೀಕೆರೆ ಯಶೋಧರಮ್ಮ ನಾಗತಿ ಮತ್ತು ಚಿತ್ರದುರ್ಗದ ಮುರುಘಮಠದ ಬಗ್ಗೆ ಚರ್ಚಿಸುತ್ತಿರುವ ಸಂಗತಿ ನನ್ನ ಕಿವಿಗೆ ಬಿತ್ತು. ಅಂದು ತರೀಕೆರೆಯನ್ನು ನೋಡಿದಾಗ ನನಗೆ ಪಾಳೆಯಗಾರರ ರಾಜಧಾನಿ ಎಂದು ಅನಿಸಿರಲಿಲ್ಲ. ಎಂ.ಎ. ಮುಗಿಸಿಕೊಂಡು ನನ್ನೂರಿಗೆ ಬಂದಾಗ ಎಲ್ಲಿಲ್ಲದ ಕುತೂಹಲ ನನಗೆ ಕಾದಿತ್ತು. ಇಂಥ ಪದವಿಯನ್ನು ಗ್ರಾಮೀಣ ಭಾಗದಲ್ಲಿ ಪಡೆದ ಮೊದಲಿಗ ಮತ್ತು ಬೇಡ ಬುಡಕಟ್ಟಿನವ ಎಂಬ ಕಾರಣಕ್ಕಾಗಿ, ಎತ್ತು, ದನ, ಕುರಿಕಾಯುವ ಹುಡುಗರಿಗೆ ನನ್ನ ಓದು ಏನೆಂಬುದು ತಿಳಿದಿರಲಿಲ್ಲ. ಅವರು ಏನೋ ದೊಡ್ಡದು ಓದಿದ್ದಾನೆಂದು ದೂರದಿಂದಲೇ ನೋಡಿ ಮಾತನಾಡಿಕೊಳ್ಳುತ್ತಿದ್ದರು. ಇಂಥಾ ಅನೇಕರನ್ನು ನಾನು ಮಮತೆಯಿಂದ ಮಾತನಾಡಿಸಿದಾಗ ಅವರು ಬೆರಗಾದರು. ಅವರು ಹಾಡುತ್ತಿದ್ದ ಹಾಡುಗಳಲ್ಲಿ ಇಂಥಾ ವ್ಯಕ್ತಿಗಳ ಚಿತ್ರಣಗಳು ನಾಲಿಗೆಯ ಮೇಲೆ ನರ್ತಿಸುತ್ತಿದ್ದವು.

ನನ್ನೂರಿನ ಪರಿಸರದಲ್ಲಿ ಬೇಡನಾಯಕ ಬುಡಕಟ್ಟಿನವರು ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾಗ ಅನೇಕ ಜನಪದ ಹಾಡುಗಳನ್ನು ಹಾಡುತ್ತಿದ್ದರು. ನಿಜಕ್ಕೂ ಅವು ನನ್ನನ್ನು ರೋಮಾಂಚನಗೊಳಿಸಿದವು. ಆ ಕಾರಣವಾಗಿ ಉತ್ತರ ಕರ್ನಾಟಕದಲ್ಲಿ ಸುರಪುರದ ವೆಂಕಟಪ್ಪ ನಾಯಕ ಮತ್ತು ಮಲೆನಾಡಿನಲ್ಲಿ ಸರ್ಜಪ್ಪ ನಾಯಕ ನನ್ನ ಮೇಲೆ ಪ್ರಭಾವಿಸಿದ್ದು ನಿಜ. ಇವರ ಬಗೆಗಿನ ಕಥನ ಕಾವ್ಯ ಪ್ರಮುಖವಾದುದು. ಸರಿಯಾಗಿ ಮಾತನಾಡಲು ಬಾರದ ಗುಗ್ಗಪಾಪಯ್ಯ ಎಂಬ ವ್ಯಕ್ತಿ (ಕಥನಕಾರ) ಸರ್ಜಪ್ಪನಾಯಕನ ಕಥನ ಕಾವ್ಯವನ್ನು ಹಾಡುವುದು ಅದ್ಭುತವೇ ಸರಿ. ಬರಗಾಲ ಬಂದಾಗ ಇವರು ಮಲಸೀಮೆ (ಮಲೆನಾಡು), ಕಾಫಿದೇಶ (ಹಾಸನ, ಚಿಕ್ಕಮಂಗಳೂರು, ಕೊಡಗು) ಮೊದಲಾದ ಪ್ರದೇಶಗಳಿಗೆ ವಲಸೆ ಹೋಗಿ ಕೂಲಿ ಕೆಲಸ ಮಾಡುವಾಗ ಅಲ್ಲಿನ ಚಾರಿತ್ರಿಕ ಸಂಗತಿಗಳನ್ನು, ಲಾವಣಿ ಹಾಡುಗಳನ್ನು ಕಲೆತು ಹಾಡುತ್ತಿದ್ದರು. ಸರ್ಜಪ್ಪನಾಯಕನ ಪಾತ್ರವು ಚರಿತ್ರೆ ಮತ್ತು ಜನಪದ ಕ್ಷೇತ್ರಗಳಲ್ಲಿ ಭಿನ್ನವಾಗಿ ಚಿತ್ರಣಗೊಂಡಿದೆ. ನಮ್ಮ ಜನಪದರು ಅವರದೇ ರೀತಿಯ ಜನಪದ ಗೀತೆಯ ಐತಿಹಾಸಿಕ ತುಣುಕುಗಳಲ್ಲಿ ಜನಪದ ಚರಿತ್ರೆಯು ವರ್ಣನೆ, ರಂಜನೆಯಿಂದ ಕೂಡಿದ್ದರೂ ಅರಸನ ಪರಾಕ್ರಮ, ಶೌರ್ಯ, ಸಾಹಸ : ಅವನಿಗಾದ ದ್ರೋಹ ಅವಸಾನ ಇವನ್ನು ಆರ್ದ್ರವಾಗಿ ವ್ಯಕ್ತಪಡಿಸುತ್ತಾರೆ.

ನನ್ನ ಅಜ್ಜಿ, ತಾತ, ಅಪ್ಪ, ಅಮ್ಮ, ಅಕ್ಕಂದಿರು ಹೇಳುತ್ತಿದ್ದ ಜನಪದ ಕಥೆ, ಗೀತೆಗಳನ್ನು ಆಲಿಸಿದಾಗ ನನಗೆ ಎಲ್ಲಿಲ್ಲದ ಕುತೂಹಲ ಉಂಟಾಗತೊಡಗಿತು. ಚಿನ್ನಹಗರಿ (ಬಯಲುಸೀಮೆ) ನದಿ ಪರಿಸರದ ಮ್ಯಾಸ ಬೇಡರು ಇಂಥಾ ಹಾಡುಗಳನ್ನು ಹಾಡುವುದರಲ್ಲಿ ನಿಪುಣರು. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಅಜ್ಜಿನಚಿನ್ನೋಬನಹಳ್ಳಿಯ (ಗುಡ್ಡಯ್ಯ) ಬೇಡರು ಸಹಾ ಇದನ್ನು ಹಾಡುತ್ತಾರೆ. ಕರ್ನಾಟಕದಾದ್ಯಂತ (ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ದಾವಣಗೆರೆ, ತುಮಕೂರು, ಚಿತ್ರದುರ್ಗ, ಬಳ್ಳಾರಿ) ಸರ್ಜಪ್ಪನಾಯಕನ ಕಥನ ಗೀತೆಗಳು ಪ್ರಚಲಿತದಲ್ಲಿವೆ. ಈಗಾಗಲೇ ಕೆಲವರು ಈ ಬಗೆಯ ಗೀತೆಗಳನ್ನು ಪ್ರಕಟಿಸಿದ್ದು ಗಮನಾರ್ಹ. ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಇವನ ಬಗೆಗಿನ ಚರಿತ್ರೆ ಮತ್ತು ಜನಪದವನ್ನು ದಾಖಲಿಸುವ ನಿಟ್ಟಿನಲ್ಲಿ ನಾನು ಈ ಪ್ರಯತ್ನವನ್ನು ಮಾಡಿರುತ್ತೇನೆ.

ನಾಯಕನಹಟ್ಟಿ ದೊರೆಗಳ ಸಂಬಂಧಿ ಶ್ರೀಮತಿ ಶಾರದಮ್ಮ ನಾಗತಿ (ಈಗ ತೀರಿಕೊಂಡಿರುತ್ತಾರೆ), ತರೀಕೆರೆ ಪಾಳೆಯಗಾರರ ರಾಜಾ ಬಿ.ಎಸ್. ಶ್ರೀನಿವಾಸನಾಯಕರು ಅರೇಹಳ್ಳಿ, ಮೊಳಕಾಲ್ಮುರು, ಗುಡೇಕೋಟೆ, ಜರಿಮಲೆ ಪಾಳೆಯಗಾರರ ವಂಶೀಕರು ಈ ಬಗ್ಗೆ ಆಸಕ್ತಿ ತೋರಿದ್ದರು. ಹೊಸಪೇಟೆಯ ಡಾ. ಬಸವರಾಜ ಮಲಶೆಟ್ಟಿ ‘ಹೊನ್ನ ಬಿತ್ತೇವು ಹೊಲಕೆಲ್ಲ’ ಪುಸ್ತಕದಲ್ಲಿ ಸರ್ಜಪ್ಪನ ಮೇಲಿನ ಒಂದು ಲೇಖನವನ್ನು ನೆರಳಚ್ಚು ಮಾಡಿಸಿಕೊಟ್ಟಿರುತ್ತಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗ್ರಂಥಾಲಯದಲ್ಲಿ ಸರ್ಜಪ್ಪನಾಯಕನ ಹಾಡುಗಳನ್ನು ನೆರಳಚ್ಚು ಮಾಡಿಸಿಕೊಟ್ಟವರು ಡಾ. ಸುರೇಶ ಹರ್ಲಾಪುರ. ಹಸ್ತಪ್ರತಿಯನ್ನು ಸಿದ್ಧಪಡಿಸುವ ಪೂರ್ವದಲ್ಲಿ ಕುವೆಂಪು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಖ್ಯಾತ ಜಾನಪದ ತಜ್ಞರಾದ ಡಾ. ಎಚ್.ಜೆ. ಲಕ್ಕಪ್ಪಗೌಡರು ಇವರನ್ನು ಭೇಟಿಯಾಗಿ ಅನೇಕ ಸಂಗತಿಗಳನ್ನು ಕುರಿತು ಚರ್ಚಿಸಿರುವೆ. ಚಿತ್ರದುರ್ಗದ ಪಾಳೆಯಗಾರರ ಇತಿಹಾಸದ ಅಭಿಮಾನಿಯಾಗಿದ್ದ ಟಿ.ಎನ್. ಗಂಡುಗಲಿಯವರು ಜೊತೆಗೆ ದಾವಣಗೆರೆ, ಶಿವಮೊಗ್ಗ ಭಾಗದ ನನ್ನ ಬಂಧು ಮಿತ್ರರು, ಸ್ನೇಹಿತರು ಅಪಾರ ಕಾಳಜಿಯಿಂದ ಇಂಥ ಹಾಡುಗಳ ಬಗ್ಗೆ ಮಾಹಿತಿ ಕೊಡಲು ಉತ್ಸಾಹ ತೋರಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ವಿದ್ವಾಂಸರು ಈ ಬಗ್ಗೆ ಸಲಹೆ ನೀಡಿದ್ದಾರೆ. ಇತರ ಭಿನ್ನ ಪಾಠಗಳನ್ನು ಸಂಗ್ರಹಿಸುವ ಸಲುವಾಗಿ ಚಿತ್ರದುರ್ಗದ ಸಂಶೋಧಕ ಡಾ. ಬಿ. ರಾಜಶೇಖರಪ್ಪನವರು ಮೂರು ಕೃತಿಗಳಲ್ಲಿ ಸರ್ಜಪ್ಪನಾಯಕನ ಬಗ್ಗೆ ವಿವರಗಳಿವೆ, ಪದ್ಯಗಳಿವೆ ಎಂದು ತಿಳಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಖ್ಯಾತ ವಿದ್ವಾಂಸರಾದ ಡಾ. ಎಂ.ಎಂ. ಕಲಬುರ್ಗಿಯವರು ಇನ್ನಷ್ಟು ಮಾಹಿತಿ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ತರಲು ಉತ್ತೇಜನ ಕೊಟ್ಟಿದ್ದನ್ನು ಮರೆಯಲಾರೆ. ಮೇಲಿನವರೆಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳು.

ಹೀಗೆ ಕೆಲವು ವರ್ಷಗಳಿಂದ ನಾನು ‘ದಲಿತ ಮತ್ತು ವಾಲ್ಮೀಕಿ ಅಧ್ಯಯನ ಪೀಠಗಳ ಸಂಚಾಲಕನಾದಾಗ ಹಿರಿಯರ ಹಾಗೂ ಸ್ನೇಹಿತರ’ ಒತ್ತಾಯದಂತೆ ಆ ಬಗ್ಗೆ ವಿಷಯ ಅಧ್ಯಯನ ಮಾಡಲು, ತಿಳಿದುಕೊಳ್ಳಲು ಸಾಧ್ಯವಾಯಿತು. ಈ ಕುರಿತು ಅನೇಕರು ಕೃಷಿ ನಡೆಸಿರುವುದನ್ನು ಗಮನಿಸಲಾಯಿತು. ಅಬ್ದುಲ್‍ಸತ್ತಾರ್ ರ ತರೀಕೆರೆ ಪಾಳೆಯಗಾರರು, ಗೊ. ರು.ಚ. ಸಂಪಾದಿಸಿರುವ ಹೊನ್ನಬಿತ್ತೇವು ಕೊಲಕ್ಕೆಲ್ಲ, ಚಿಕ್ಕಮಗಳೂರು ಜಿಲ್ಲಾ ಗ್ಯಾಸೆಟಿಯರ್ ಮೊದಲಾದ ಕೃತಿಗಳು ಇಲ್ಲಿನ ಅಧ್ಯಯನಕ್ಕೆ ಸ್ಪೂರ್ತಿ ನೀಡಿವೆ. ಈ ಎಲ್ಲಾ ಕಾರಣಗಳಿಂದ ತರೀಕೆರೆ ಪ್ರಕೃತಿ ಮತ್ತು ಕಲಾ ಸೌಂದರ್ಯದ ಸಿರಿ ನನ್ನ ಮನಸ್ಸಿಗೆ ಆನಂದವನ್ನುಂಟು ಮಾಡಿದೆ. ಅಲ್ಲಿನ ಅರಸರ ಬದುಕು ಸಹಾ ಅಷ್ಟೇ ರೋಮಾಂಚನವನ್ನು ಉಂಟುಮಾಡಿದೆ. ಅಲ್ಲಿನ ಸ್ಮಾರಕಗಳನ್ನು, ಕಥೆಗಳನ್ನು ಕೇಳಿ ನೋಡಿ ಅಷ್ಟೇ ವ್ಯಥೆ ಪಟ್ಟಿರುವೆನು.

ಕನ್ನಡ ವಿಶ್ವವಿದ್ಯಾಲಯದಲ್ಲಿ ಅಂತರ್ ಶಿಸ್ತೀಯ ಅಧ್ಯಯನಕ್ಕೊಂದು ವೇದಿಕೆಯಿದೆ. ಜಾನಪದ ಮತ್ತು ಚರಿತ್ರೆ ಈ ಬಗೆಯಲ್ಲಿ ಅಧ್ಯಯನ ಕೈಗೊಂಡಿರುವ ನನಗೆ ಸರ್ಜಪ್ಪನಾಯಕನ ಕಥನ ಈ ತಲೆಮಾರಿಗೆ ತಿಳಿಸಬೇಕು, ಇದರಿಂದ ಒಳ್ಳೆಯದನ್ನು ಕಲಿಯಲು ಮತ್ತು ಕೆಟ್ಟದ್ದನ್ನು ಕೈ ಬಿಡಲು ಮುಂದಿನ ತಲೆಮಾರಿಗೆ ಇಮ್ಥ ಕಥನ ಹೊಸ ಸಂದೇಶವನ್ನು ಕೊಡುವುದೆಂದು ನನ್ನ ಆಶಯ. ವಾಲ್ಮೀಕಿ ಅಧ್ಯಯನ ಪೀಠದ ವತಿಯಿಂದ ಇಂಥ ಕಿರುಯೋಜನೆ ಮತ್ತು ಬೃಹತ್ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕದ ಚರಿತ್ರೆಯಲ್ಲಿ ದಾಖಲಾಗಿಲ್ಲದ ಮತ್ತು ಯಾವತ್ತೂ ಜನರ ಮನದಲ್ಲಿ ಜೀವಂತವಿರುವ ಚಾರಿತ್ರಿಕ ವ್ಯಕ್ತಿಗಳ ಬಗ್ಗೆ ಚಾರಿತ್ರಿಕವಾಗಿ ದಾಖಲಿಸುವ ಹಂಬಲವಿತ್ತು. ಹೀಗಾಗಿ ವಾಲ್ಮೀಕಿ ಗೋತ್ರದ, ಕ್ಷತ್ರಿಯ ಪರಂಪರೆಗೆ ಸೇರಿದ ಸರ್ಜಪ್ಪನಾಯಕನ ಚಿತ್ರಣ ಇಲ್ಲಿ ಅವಿಸ್ಮರಣೀಯವಾದುದು. ಈತನು ಚಾರಿತ್ರಿಕ ಮಹತ್ವ ಪಡೆದಿರುವ ಕಾರಣ ವಾಲ್ಮೀಕಿ ಅಧ್ಯಯನ ಪೀಠದಿಂದ ಪ್ರಕಟಿಸಲು ಸಲಹಾ ಸಮಿತಿ ಸದಸ್ಯರಾದ ಡಾ.ತೇಜಸ್ವಿ ಕಟ್ಟೀಮನಿ, ಡಾ. ರಂಗರಾಜ ವನದುರ್ಗ, ಈಗಿನ ಸಲಹಾ ಸಮಿತಿ ಸದಸ್ಯರಾದ ಡಾ. ಆರ್. ರಾಜಣ್ಣ ಮತ್ತು ಪ್ರೊ. ಸುಕನ್ಯಾ ಮಾರುತಿ ಅವರು ಆಸಕ್ತಿ ತೋರಿದ್ದಾರೆ. ಹಾಗೆಯೇ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರು ಪೀಠದ ವತಿಯಿಂದ ಕೃತಿ ಪ್ರಕಟಿಸಲು ಸಲಹೆ ಸೂಚನೆ ಕೊಟ್ಟಿರುತ್ತಾರೆ. ಕುಲಸಚಿವರಾದ ವಿ.ಶಂಕರ್, ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಸಹಾಯಕ ನಿರ್ದೇಶಕರಾದ ಬಿ. ಸುಜ್ಞಾನಮೂರ್ತಿ, ಎಚ್.ಬಿ. ರವೀಂದ್ರ ಹಾಗೂ ಕೆ.ಎಲ್. ರಾಜಶೇಖರ್, ಕಲಾವಿದ ಕೆ.ಕೆ. ಮಕಾಳಿ, ವಿದ್ವಾಂಸರಾದ ಪ್ರೊ. ಎ.ವಿ. ನಾವಡ, ಪ್ರೊ. ಲಕ್ಷ್ಮಣ್ ತೆಲಗಾವಿ, ಡಾ. ಕೆ.ವಿ. ನಾರಾಯಣ, ಡಾ. ಮೊಗಳ್ಳಿ ಗಣೇಶ್, ಡಾ. ಕೇಶವನ್ ಪ್ರಸಾದ್, ಡಾ. ಕೆ.ಎಂ. ಮೈತ್ರಿ, ಡಾ. ಬಸವರಾಜ ಮಲಶೆಟ್ಟಿ, ಪ್ರೊ. ಜೆ.ಆರ್. ರಾಮಮೂರ್ತಿ, ಡಾ. ಬಿ.ಸಿ. ಮಹಾಬಲೇಶ್ವರಪ್ಪ ಚರಿತ್ರೆ ವಿಭಾಗದ ಸಹದ್ಯೋಗಿಗಳಾದ ಡಾ. ಟಿ.ಪಿ. ವಿಜಯ್, ಡಾ. ಸಿ.ಆರ್. ಗೋವಿಂದರಾಜು, ಡಾ. ಮೋಹನಕೃಷ್ಣ ರೈ ಮತ್ತು ಡಾ. ಚಿನ್ನಸ್ವಾಮಿ ಸೋಸಲೆ ಹಾಗೂ ಗಾದಿಲಿಂಗ ಮತ್ತು ಗಂಗಾಧರ, ತರೀಕೆರೆಯ ಪಾಳೆಯಗಾರ ವಂಶಸ್ಥರು, ಬೆಂಗಳೂರಿನ ಲೋಕಾಯುಕ್ತ ಎಸ್.ಪಿ. ಆಗಿರುವ ಶ್ರೀ ರಂಗಸ್ವಾಮಿ ನಾಯಕ್ ಅವರು ಪ್ರೋತ್ಸಾಹ ಕೊಟ್ಟು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಜ್ಜಿ ದಿವಂಗತ ತೋಟದ ಪಾಲಮ್ಮ, ತಾತ ದಿವಂಗತ ತೋಟದ ಪೆದ್ದೋಬಯ್ಯ, ಅಪ್ಪ-ಅಮ್ಮ, ಅಕ್ಕಂದಿರಾದ ಓಬಮ್ಮ, ಪಾಲಾಕ್ಷಮ್ಮ, ಬಾಳಸಂಗಾತಿ ಪೂರ್ಣಿಮ, ಪ್ರೀತಿಯ ಕಂದಮ್ಮಗಳಾದ ಅಶೋಕ, ರೋಹಿತ ಮತ್ತು ಧರ್ಮಪಾಲನನ್ನು ಇಲ್ಲಿ ನೆನಪಿಸಿಕೊಳ್ಳುವುದು ಅವಶ್ಯಕ. ಅಂದವಾದ ಡಿ.ಟಿ.ಪಿ. ಮಾಡಿದ ಫಾಂಟ್‍ಲೈನ್ ಗ್ರಾಫಿಕ್ಸ್ ನ ಉಲ್ಲಾಸ್ ಅವರಿಗೆ, ಸುಂದರವಾಗಿ ಮುದ್ರಿಸಿದ ವಿರಾಳಂ ಗ್ರಾಫಿಕ್ಸ್ ಅವರಿಗೆ, ನನ್ನ ಹಿತೈಶಿಗಳಿಗೆ ಹಾಗೂ ಬಂಧು ಮಿತ್ರರಿಗೆ ಕೃತಜ್ಞತೆಗಳು.

ಸಂಚಾಲಕರು
ಡಾ. ವಿರೂಪಾಕ್ಷಿ ಪೂಜಾರಹಳ್ಳಿ
ವಾಲ್ಮೀಕಿ ಅಧ್ಯಯನ ಪೀಠ