ತರೀಕೆರೆ ಪಾಳೆಯಗಾರ ಸರ್ಜಾ ಹನುಮಪ್ಪನಾಯಕ, ಸರ್ಜಾರಂಗಪ್ಪನಾಯಕನನ್ನು ಕುರಿತಂತೆ ಸಾಕಷ್ಟು ಕೃಷಿ ನಡೆಸಿರುವುದು ಗಮನಾರ್ಹ. ದಕ್ಷಿಣ ಕರ್ನಾಟಕದ ಕಾವ್ಯ ಪ್ರಕಾರ, ಲಾವಣಿ, ಜನಪದ ಗೀತೆ, ಕಥನ ಗೀತೆಗಳಲ್ಲಿ ಸರ್ಜಪ್ಪನಾಯಕನ ಕಥೆ ಜೀವಂತಿಕೆ ಪಡೆದಿದೆ. ಮೊತ್ತ ಮೊದಲಿಗೆ ಸರ್ಜಪ್ಪನಾಯಕನ ಕಥೆ ಸಂಶೋಧಕರ ಗಮನ ಸೆಳೆದಿದ್ದು ಲಾವಣಿ ರೂಪದಲ್ಲಿ ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೇಳಿದ್ದಾರೆ. ಅವರು ಕ್ಷೇತ್ರಕಾರ್ಯ ಕೈಗೊಂಡಾಗ ಆದ ಅನುಭವವನ್ನು ಹಂಚಿಕೊಂಡಿದ್ದಾರೆ. ೧೯೨೯ಕ್ಕೂ ಪೂರ್ವದಲ್ಲಿ (ಕನ್ನಡ ನಾಡಿನ ಲಾವಣಿ ಸಾಂಗತ್ಯ) ಎಂಬ ಲೇಖನ ಪ್ರಕಟವಾಗಿದ್ದು ಅದರಲ್ಲಿ ಸರ್ಜಪ್ಪನಾಯಕನ ಲಾವಣಿ ಪ್ರಸ್ತಾಪವಿದೆ. ಬ್ರಿಟಿಷರನ್ನು ಪರದೇಶಿಯರೆಂದು ಜನಪದರು ಕರೆದಿರುತ್ತಾರೆ. ಅಧಿಕಾರಿ, ಪ್ರಭುತ್ವ ಹೀಗೆ ಜನಸಾಮಾನ್ಯರ ಬಗ್ಗೆ ವಿವರಗಳಿವೆ. ಮುಂದುವರೆದು ಮಾಸ್ತಿಯವರು ರಂಗಪ್ಪನಾಯಕ, ಸರ್ಜಪ್ಪನಾಯಕನ ಲಾವಣಿಗಳು ಪ್ರತ್ಯೇಕವೆಂದು ಸರ್ಜಪ್ಪನ ತಂದೆ ರಂಗಪ್ಪನೆಂದು ತಿಳಿಸುತ್ತಾರೆ. ಮಾಸ್ತಿಯವರ ಲಾವಣಿಯಲ್ಲಿನ ಪ್ರಸಂಗಗಳನ್ನು ಎಲ್. ಗುಂಡಪ್ಪನವರು ತಮ್ಮ ‘ನಾಡ ಪದಗಳು’ ಕೃತಿಯಲ್ಲಿ ಅವಲೋಕಿಸಿದ್ದಾರೆ. ಮೈಸೂರು ಭಾಗದ ಕೃಷಿ. ಕೂಲಿ ಕಾರ್ಮಿಕರು, ಭಿಕ್ಷುಕರು ಸರ್ಜಪ್ಪನ ಲಾವಣಿಯನ್ನು ಹಾಡುವುದನ್ನು ಜಾನಪದ ವಿದ್ವಾಂಸರು ಗಮನಿಸಿ ದಾಖಲಿಸಿದ್ದಾರೆ. ೧೯೪೦ರ ಸುಮಾರಿನಲ್ಲಿ ಮತಿಘಟ್ಟ ಸಹೋದರರು ಸರ್ಜಪ್ಪನಾಯಕನ ಲಾವಣಿಗಳನ್ನು ಸಂಗ್ರಹಿಸಿ ಲಾವಣಿ ನಾಡಪದಗಳಲ್ಲಿ ಪ್ರಕಟಿಸಿದ್ದಾರೆ. ೧೯೫೫ರಲ್ಲಿ ಪ್ರೊ. ಎಸ್.ವಿ. ರಂಗಣ್ಣನವರು ‘ಪೆರಿಯಾಪಟ್ಟಣದ ಜಗಳ’ ಟಿಪ್ಪು ಸುಲ್ತಾನನ ಪತನ, ಇತರ ಚಾರಿತ್ರಿಕ ಲಾವಣಿಗಳ ಪೈಕಿ ‘ಸರ್ಜಪ್ಪನಾಯಕನ ಅಡಾವುಡಿ’ ಎಂಬುದನ್ನು ದಾಖಲಿಸಿದ್ದಾರೆ. ೧೯೬೬ರಲ್ಲಿ ತಿಪಟೂರು, ತುರುವೇಕೆರೆ, ಗುಬ್ಬಿ ಮೊದಲಾದ ತಾಲೂಕುಗಳಲ್ಲಿ ಸರ್ಜಪ್ಪನಾಯಕನ ಲಾವಣಿ ಹಾಡುವ ವಕ್ತೃಗಳಿದ್ದಾರೆ. ತಿಪಟೂರು ತಾಲೂಕಿನ ನೊಣವಿನಕೆರೆ, ತುರುವೇಕೆರೆ ತಾಲುಕಿನ ಚಿಕ್ಕತುರುವೇಕೆರೆ ಇತರ ಗ್ರಾಮಗಳಲ್ಲಿ ಚೌಡಿಕೆ ಸಂಪ್ರದಾಯಕ್ಕೆ ಸೇರದ ಎಲ್ಲಮ್ಮನ ಕಥೆಯ ಜೊತೆಗೆ ಸರ್ಜಪ್ಪನಾಯಕನ ಲಾವಣಿ ಕತೆಯನ್ನು ಹಾಡುತ್ತಾರೆ. ಇದನ್ನು ಜಿ.ಶಂ. ಪರಮಶಿವಯ್ಯನವರು ತುಂಬಾ ಪ್ರೀತಿಯಿಂದ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ತಿಳಿಸಿದ್ದಾರೆ. ತುಮಕೂರು ಜಿಲ್ಲೆಯ ಹಾಗಲವಾಡಿಯ ಜೋಗಿಗಳು, ತಿಪಟೂರು, ತುರುವೇಕೆರೆ ಕಡೆಯ ದೊಂಬಿದಾಸರು ಈ ಕತೆಯನ್ನು ಹಾಡದೇ ಇರುವುದು ವಿಶೇಷ ಈ ಲಾವಣಿಗೆ ವಾದ್ಯ ಹೊಂದುವುದಿಲ್ಲ, ಅದಕ್ಕೆ ಹಾಡುವುದಲ್ಲ ಎಂಬ ಉತ್ತರ ಅವರದು.

ಚೌಡಿಕೆಯವರಲ್ಲೇ ಸರ್ಜಪ್ಪನಾಯಕನ ಕತೆ ಜೀವಂತವಾಗುಳಿಯಲು ಹಲವು ಕಾರಣಗಳಿವೆ. ಅದೇ ರೀತಿ ಕೋಲಾಟ, ಕೃಷಿ ಚಟುವಟಿಕೆಯಲ್ಲಿ, ಗಾಡಿ ಹೊಡೆಯುವಾಗ ಕಪಿಲೆ ಹೊಡೆಯುವಾಗ, ಕುಟ್ಟುವಾಗ, ರುಬ್ಬುವಾಗ ತರೀಕೆರೆ ಸರ್ಜಪ್ಪನಾಯಕನ ಕಥನವು ಸುಂದರ ಹಾಡಿನಂತೆ ಕೇಳಿಸುತ್ತದೆ. ವಿಶೇಷವೆಂದರೆ, ಹೆಣ್ಣು ಮಕ್ಕಳು ಸಹಾ ಸರ್ಜಪ್ಪನಾಯಕನ ಕಥನವನ್ನು ಹಾಡುತ್ತಾ ಕಣ್ಣೀರು ಸುರಿಸುತ್ತಾರೆ. ನಿಜಕ್ಕೂ ಜನಮನದಲ್ಲಿ ಜೀವಂತ ಕುರುಹು ಆಗಿದ್ದಾನೆ ಸರ್ಜಪ್ಪನಾಯಕ.

ಸರ್ಜಾ ರಂಗಪ್ಪನಾಯಕನ ಕುರುತ ಲಾವಣಿಗಳು

ತರೀಕೆರೆಯ ಪಾಳೆಯಗಾರ ರಂಗಪ್ಪನಾಯಕ ಶಕ್ತಿಶಾಲಿ ಹಾಗೂ ಪರಾಕ್ರಮ ವ್ಯಕ್ತಿಯಾಗಿದ್ದ. ತರೀಕೆರೆ ಅರಸರಿಗೆ ‘ಸರ್ಜಾ’ ಎಂಬ ಬಿರುದನ್ನು ಹೈದರನು ಕೊಟ್ಟ ಕಾರಣದಿಂದ ಇವರಿಗೆ ಕೊನೆಯವರೆಗೂ ಅದೆ ಅಭಿದಾನ (ಹೆಸರೂ) ಬಂದಿದೆ.

ಕ್ರಿ.ಶ.೧೭೭೪ರಲ್ಲಿ ಸರ್ಜಾ ರಂಗಪ್ಪನಾಯಕನು ಆಳ್ವಿಕೆ ಮಾಡಿದ ಅರಸರಲ್ಲಿ ಆರನೆಯವನು. ಈತ ಮೈಸೂರಿನ ಮೂರನೆಯ ಮತ್ತು ನಾಲ್ಕನೆಯ ಯುದ್ಧಗಳಲ್ಲಿ ಭಾಗವಹಿಸಿದ್ದರಿಂದ ಜನಪ್ರಿಯ ಅರಸನಾಗಿದ್ದನು. ಟಿಪ್ಪು ಪಾಳೆಯಗಾರರ ಬಗ್ಗೆ ಅನುಸರಿಸಿದ ನೀತಿಯಿಂದ ದೂರವಿದ್ದ ತರೀಕೆರೆಯವರು ಅವನ ಅವಸಾನವನ್ನೇ ಕಾಯುತ್ತಿದ್ದರು. ಹೈದರ್-ಟಿಪ್ಪುವಿನ ಸ್ವಧರ್ಮ ನಿಷ್ಠೆಯಿಂದ ಕಂಗಲಾದ ಪಾಳೆಯಗಾರರು ೪ನೇ ಮೈಸೂರು ಯುದ್ಧದಲ್ಲಿ ತಟಸ್ತ ನೀತಿ ಅನುಸರಿಸಿದ್ದು ಸ್ಪಷ್ಟ. ರಂಗಪ್ಪ ನಾಯಕ ಬ್ರಿಟಿಷರ ವಿರುದ್ಧ ಬಂಡಾಯ ಹೂಡಿದ ಬಗ್ಗೆ ಸಾಕಷ್ಟು ವಿವರಗಳಿವೆ.

ಸರ್ಜಪ್ಪನಾಯಕ

ಜನಮನರಲ್ಲಿ ಸೂರೆಗೊಂಡ ವ್ಯಕ್ತಿ ಸರ್ಜಪ್ಪನಾಯಕ. ಜಾನಪದ ತಜ್ಞರಾದ ಮತಿಘಟ್ಟ ಕೃಷ್ಣಮೂರ್ತಿ ತಮ್ಮ ಕೃತಿಯಲ್ಲಿ ಸರ್ಜಾಹನುಮಪ್ಪನಾಯಕ ವೀರ, ಧೀರ, ಛಲಗಾರ. ಆಂಜನೇಯನ ಪರಮಭಕ್ತ. ಬಡವರ ಬಂಧು, ಜನತೆಯ ಅಚ್ಚು ಮೆಚ್ಚಿನ ನಾಯಕ. ಸರ್ಜಾಹನುಮಪ್ಪ ನಾಯಕರ ಸುತ್ತ ದೊಡ್ಡ ಯುವಕರ ಪಡೆಯೇ ಸೇರಿತು. ಕಲದುರ್ಗ, ಕಾಮನದುರ್ಗಗಳ ಅಜೇಯ ರಕ್ಷಣೆಯಲ್ಲಿ ಹನುಮಪ್ಪ ಬಂಡಾಯವನ್ನು ನಿರ್ದೇಶಿಸಿದರು. ತಂದೆ ಸರ್ಜಾರಂಗಪ್ಪನಾಯಕರು ಶ್ರೀರಂಗಪಟ್ಟಣದಿಂದ ಬಂದ ಮೇಲೆ ಯಾವ ಆತಂಕವೂ ಇಲ್ಲದೆ ಸರಕಾರದ ವಿರುದ್ಧ ನಿಂತು ‘ಇರುಸಾಲನ್ನು ದೋಚಿ ಬಡವರಿಗೆ ಹಂಚತೊಡಗಿದರು’ (ದಕ್ಷಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು. ಪು.೩೪೧).

ತರೀಕೆರೆ ಪಾಳೆಯಗಾರರ ಏಳಿಗೆಯನ್ನು ಸಹಿಸಲಾರದೆ ಮೈಸೂರು ಸರಕಾರ ಇವರ ಉಪಟಳವನ್ನು ಶಮನಗೊಳಿಸಲು ಆಗದಿದ್ದಾಗ ಬ್ರಿಟಿಷ್ ಸೈನ್ಯದ ಸಹಾಯ ಕೋರುತ್ತಾರೆ. ೧೮೩೧-೩೭ರಲ್ಲಿ ನಡೆದ ಯುದ್ಧದಲ್ಲಿ ಸರ್ಜಾರಂಗಪ್ಪನಾಯಕ ವೀರ ಮರಣವನ್ನಪ್ಪಿದ. ತಂದೆಯನಂತರ ಯುದ್ಧವನ್ನು ನಿಲ್ಲಿಸದೆ ಮಗ ಸರ್ಜಾ ಹನುಮಪ್ಪನಾಯಕ ಹೋರಾಟ ಮುಂದುವರೆಸಿದ. ಶತೃಗಳ ಕಪಿ ಮುಷ್ಠಿಯಿಂದ ಪಾರಾಗಿದ್ದ ಸರ್ಜಾನನ್ನು ಅವರು ಹಿಡಿಯುವುದು ದುಸ್ಸಾಧ್ಯವಾಗಿತ್ತು. ಕುತಂತ್ರ, ಕಪಟತನದಿಂದ ಇವನ ಮರ್ಮವನ್ನು ಅರಿತು ಅವನ ಸೂಳೆಯ ಮನ ಪರಿವರ್ತನೆ ಮಾಡಿ ಅವಳ ಸಹಾಯ ಪಡೆದು ನಾಯಕನನ್ನು ಬಂಧಿಸಿಡಲಾಯಿತು. ಕೊನೆಗೆ ಹನುಮಪ್ಪನಾಯಕನನ್ನು ಬೆಂಗಳೂರಿಗೆ ಕರೆದೊಯ್ದು, ಗುಟ್ಟಹಳ್ಳಿ, ಅರಮನೆ ಆವರಣದಲ್ಲಿ ೩ ಬಾರಿ ಗಲ್ಲಿಗೆ ಹಾಕಿದರೂ ಪ್ರಾಣ ಹೋಗಲಿಲ್ಲ. ಬ್ರಿಟಿಷ್ ಸರಕಾರ ಪ್ರಾಣದಾನ ಕೊಟ್ಟರು ಸ್ವಾಭಿಮಾನಿ ಸರ್ಜಪ್ಪನಾಯಕ ತನ್ನ ಕೈಯಿಂದಲೇ ನೇಣು ಹಾಕಿಕೊಂಡು ಹುತಾತ್ಮನಾಗುತ್ತಾನೆ. ಈ ಮೇಲಿನ ಚಾರಿತ್ರಿಕ ಸಂಗತಿಗಳು ಸರ್ಜಪ್ಪನಾಯಕನನ್ನು ಚಿತ್ರಿಸಿರುವ ಲಾವಣಿ-ಕಥನ ಗೀತೆಗಳಿಂದ ತಿಳಿದುಬರುತ್ತದೆ. ಇಲ್ಲಿ ಲಾವಣಿ, ಗೀತೆ, ಕಥನಗೀತೆ, ಜನಪದಗೀತೆ ಎಂದೆಲ್ಲ ಕರೆಯದೇ ಈ ಮಟ್ಟಿಗೆ ಕಥನ ಎಂದು ಕರೆದರೆ ಸೂಕ್ತವೇನೋ> ಕಥನವು ರೂಪಕ, ಉಪಮೆ, ವರ್ಣನೆ ಮತ್ತು ಅಲಂಕಾರಗಳಿಂದ ಕೂಡಿದ್ದು, ವ್ಯಕ್ತಿಯನ್ನು ಗುಣಗಾನ ಮಾಡಲಾಗಿದೆ. ಅದು ಚಾರಿತ್ರಿಕ ಪುರುಷನ ಬಗ್ಗೆ ಕಥೆ, ಗೀತೆ, ಹಾಡುಗಳು ಹುಟ್ಟುವುದು ಅವನ ಸಾಹಸಮಯವಾದ ಜೀವನವಿಧಾನದಿಂದ. ಹಾಗಾಗಿ ಸರ್ಜಪ್ಪನಾಯಕನನ್ನು ಕುರಿತು ಹುಟ್ಟಿಕೊಂಡ ಅಕ್ಷರ ಪ್ರಪಂಚವು ಆತನ ವ್ಯಕ್ತಿತ್ವವನ್ನು ಏನೆಲ್ಲಾ ಚಿತ್ರಿಸಿದ್ದರೂ ಆತನೊಬ್ಬ ಪಾಳೆಯಗಾರ, ಮೋಸದಿಂದ ಆತನನ್ನು ಕೊಲ್ಲಲಾಗುತ್ತದೆ. ಇಲ್ಲಿ ಆನಂದ, ರಂಜನೆ ಅಷ್ಟೇ ಪ್ರಮಾಣದಲ್ಲಿ ದುಃಖ, ಶೋಧಕವಾದ ಕರುಣಾರಸವನ್ನು ಜನಪದರು ಸೃಷ್ಟಿಸಿದ್ದಾರೆ. ಒಟ್ಟಾರೆ ಒಂದು ಚಾರಿತ್ರಿಕ ಘಟನೆಯೊಂದರ ಜನಪದರ ಕಥನವಿಆಗಿ ಚರಿತ್ರೆಯಲ್ಲಿ ದಾಖಲಾರ್ಹವಾಗಿದೆ.

ಕಥಾ ಸ್ವರೂಪ

ಈವರೆಗಿನ ಜನಪದ ಕಾವ್ಯಪ್ರಕಾರಗಳು ಸರ್ಜಪ್ಪನಾಯಕನನ್ನು ಕುರಿತು ಚಿತ್ರಿಸಿರುವುದು ಭಿನ್ನವೆಂದೇ ಹೇಳಬಹುದು. ಇಲ್ಲಿ ತಂದೆ ರಂಗಪ್ಪನಾಯಕ ಮಗ ಸರ್ಜಪ್ಪನಾಯಕರು ಅಪ್ರತಿಮ ವೀರರಾಗಿ ಹೋರಾಟ ಮಾಡಿದ್ದ ಸ್ಪಷ್ಟ. ತಂದೆಗಿಂತ ಮಗನ ಬಗ್ಗೆ ಕಾವ್ಯ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. ಆರಂಭದಿಂದ ಕೊನೆಯವರೆಗೂ ಲಾವಣಿಕಾರ ಕಥನಾಯಕನನ್ನು ಪ್ರಧಾನವನ್ನು ಸ್ಮರಿಸುವ ದಾಟಿ ಮನಮೋಹಕವಾಗಿದೆ. ಕಥನದ ಘಟನೆಗಳನ್ನು ಗದ್ಯರೂಪದಿಂದ ಪದ್ಯ ರೂಪಕ್ಕೆ ಅಳವಡಿಸಿಕೊಂಡು ಹಾಡುವ ಪ್ರಸಂಗವು ಮುಖ್ಯವಾಗಿದೆ. ಇಲ್ಲಿ ನಾಗರೀಕತೆ, ಆಧುನಿಕತೆ ಮತ್ತು ಸ್ಥಳೀಯತೆಯ ಲಕ್ಷಣಗಳು ಮುಖಾಮುಖಿಯಾಗುವುದು ಸಹಜ. ಸರ್ಜಪ್ಪನ ಹುಟ್ಟು, ಬಾಲ್ಯ, ಶಿಕ್ಷಣ, ಸಾಧನೆಗಳ-ಕಥೆ ಆರೋಹಣ ಕ್ರಮವಾಗಿ ಹುಟ್ಟುತ್ತದೆ. ಹಾಡುವುದು ಸಹಾ ಆರೋಹಣ ಕ್ರಮದಲ್ಲಿಯೇ. ಬ್ರಿಟಿಷರ ಆಳ್ವಿಕೆ, ಹೋರಾಟ, ತಾಯಿ, ತಂದೆಗಳ ಪಾತ್ರ, ಉಪಪತ್ನಿಯಾದ ಸೂಳೆ ನಿಂಗಮ್ಮ, ಮನೆದೇವರು ರಂಗನನ್ನು ನೆನೆಯುವುದು. ಮಲೆನಾಡಿನ ಗಿಡ, ಮರ, ಬೆಟ್ಟಗುಡ್ಡಗಳ, ಹಳ್ಳಿಗಳ ವರ್ಣನೆ ಇಲ್ಲಿದೆ. ಸರ್ಜಪ್ಪನ ಏಳಿಗೆ ಸಹಿಸಲಾರದವರು ಅವನ ಸಾವಿಗೆ ಸಂಚು ರೂಪಿಸುವುದು ಇಲ್ಲಿ ಮುಖ್ಯ. ಅದು ಆತನ ಪ್ರೇಯಸಿಯ ಮೂಲಕವೇ ಆದದ್ದು ಇನ್ನಷ್ಟು ದುರಂತಮಯವಾಗಿದೆ. ಅರಮನೆ, ಕಂದಕ, ಜನ, ದಂಡು (ಸೈನಿಕ), ಹೂವಿನಹಳ್ಳಿಕೋಟೆ, ಚಂದ್ರಾಯುಧ-ಹೀಗೆ ಕೆಲವು ವಸ್ತು ವಿಷಯಗಳು ಗಣನೀಯ ಪಾತ್ರ ವಹಿಸಿದ್ದವು. ಉದಾರಿ ಪರಾಕ್ರಮಿಯಾದ ಸರ್ಜಪ್ಪನಾಯಕನನ್ನು ಚಿತ್ರಿಸಿರುವುದೇ ಪಾಳೆಯಗಾರನಿಗಿಂತ ಹೆಚ್ಚಾಗಿ ಪ್ರಣಯಿಯಾಗಿ ಎಂದು ಹೇಳಬಹುದು. ಎರಡು ಘಟನೆಗಳು ಇಲ್ಲಿ ಮುಖಾಮುಖಿಯಾಗುತ್ತವೆ. ಒಂದು ಸರ್ಜಪ್ಪನಾಯಕ ಬ್ರಿಟಿಷರ ವಿರುದ್ಧ ಹೋರಾಟ ಮಾಡುವುದು, ಎರಡನೆಯದು ಉಪಪತ್ನಿ ಸೂಳೆ ನಿಂಗಮ್ಮನಿಂದ ಮರಣ ಹೊಂದುವುದು. ಒಂದು ಹೋರಾಟವಾದರೆ, ಇನ್ನೊಂದು ಪ್ರೇಮಕತೆಯಾಗಿದೆ. ನಿಜವಾದ ಘಟನೆ ಹೀಗಿರಬಹುದೇನೋ. ಬ್ರಿಟಿಷರ ವಿರುದ್ಧ ಹೋರಾಡುವಾಗಲೇ ಸ್ಥಳೀಯರ ಕುಮ್ಮಕ್ಕಿನಿಂದ ಆತನನ್ನು ಸಾಯಿಸಲು ಮಹಿಳೆಯನ್ನು ಬಳಸಿಕೊಂಡಿರಬೇಕು. ಸರ್ಜಪ್ಪನಾಯಕ ಗರಡಿ ಮನೆಗೆ ಹೋಗುವುದು, ಕೋಟೆ, ಅರಮನೆಗೆ ನಡೆಯುವುದು, ಕುದುರೆ ಸವಾರಿ, ತಂದೆ ತಾಯಿಗಳಿಗೆ ಸ್ವಪ್ನ, ಶಕುನ ಇವೆಲ್ಲ ಆತನನ್ನು ಸರಿಪಡಿಸುವ, ಸರಿದಾರಿಗೆ ತರುವ ಪ್ರಯತ್ನಗಳು. ಇವೆಲ್ಲ ವಿಫಲವಾದಾಗ ನಾಯಕ ದುರಂತಕ್ಕೀಡಾಗುವ ಪ್ರಸಂಗವಿದೆ. ಆತನ ಸಾವು ಸಾಕಷ್ಟು ತಿರುವು ಪಡೆದಿದೆ. ಮೈಸೂರಿನವರು ಸರ್ಜನನ್ನು ಕೊಲ್ಲಲು ಸಂಚು ರೂಪಿಸುತ್ತಾರೆ. ಸೂಳೆ ನಿಂಗಮ್ಮನ ಮನೆಯಲ್ಲಿದ್ದಾಗ ಅವಳು ಕಣ್ಣಿಗೆ ಕಾರದಪುಡಿ ಹಾಕಿ, ಸಾರು ಕೇಳಿದಾಗ ಚಂದ್ರಾಯುಧದಿಂದ ಅವನ ಕೈ ಕಡಿಯುತ್ತಾಳೆ. ಇನ್ನು ಕೆಲವು ಕಥನ ಕಾವ್ಯಗಳಲ್ಲಿ ಭಿನ್ನ ಪಾತ್ರವಿದೆ. ಸರ್ಜಪ್ಪನಾಯಕನನ್ನು ಹಿಡಿಯಲು ಮೈಸೂರು ದಂಡೆಲ್ಲ ನುಗ್ಗುವುದು, ಸೂಳೆ ನಿಂಗಿ ಮನೆಯ ಸುತ್ತ ಕಂದಕ ತೋಡಿಸಿ, ಬೈನದಸಿ ನೆಟ್ಟಿದ್ದರು. ಸರ್ಜಪ್ಪ ಹಾರಿ ಕಂದಕದಲ್ಲಿ ಬಿದ್ದು ದಸಿಗಳು ನಾಟಿಕೊಂಡರೂ. ಮೈಸೂರ ದಂಡನ್ನು ನಾಶ ಮಾಡಿ ಸೊಂಟದ ಉಡುದಾರದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಂದು ತಿಳಿಸಲಾಗಿದೆ. ಇವನ ಉಳಿದ ಸೋದರರನ್ನು ಮೈಸೂರಿನ ಅರಸರು ಚಿತ್ರದುರ್ಗದಲ್ಲಿ ಸೆರೆಯಲ್ಲಿಟ್ಟಿದ್ದರು.

ಸರ್ಜಪ್ಪನಾಯಕನ ಪದ, ಕಥನ ಮತ್ತು ಲಾವಣಿಗಳ ಮಹತ್ವ

ಸರ್ಜಪ್ಪನಾಯಕ ಪಾಳೆಯಗಾರನಾದರೂ ಆತ ಬೇಡ ಕುಲದವನೆಂಬ ಅಪಕೀರ್ತಿ ಬ್ರಾಹ್ಮಣರಿಂದ ಬರುತ್ತದೆ. ದುರುಗ ಎಂದರೆ ಕೋಟೆ, ಅರಮನೆ ಹಾಗೂ ಪಾಳೆಯಗಾರ ಕುಟುಂಬ ಮತ್ತು ಸಿಬ್ಬಂದಿ ವಾಸಿಸುವ ಪ್ರದೇಶ. ಬಾಬುಬುಡನ್ ಗಿರಿ ಅಥವಾ ತರೀಕೆರೆಯಲ್ಲಿ ಕಾಮನದುರ್ಗ ಕೋಟೆಕಟ್ಟಿ ಆಡಳಿತ ನಡೆಸಿದ ವಿವರಗಳಿವೆ. ಸರ್ಜಪ್ಪನಾಯಕ ಆಂಜನೇಯನ ಭಕ್ತನಾಗಿದ್ದು, ಬಡಜನರ ಬಗ್ಗೆ ಅನುಕಂಪವಿದ್ದು, ಉನ್ನತವರ್ಗ ಮತ್ತು ವಿರೋಧಿಗಳೊಂದಿಗೆ ಕೆಂಡಕಾರುತ್ತಿದ್ದ. ವಿರೋಧಗಳಿಗೆ ಈತ ಸಿಂಹಸ್ವಪ್ನವಾಗಿದ್ದನು. ಈತ ನಿಂಗಮ್ಮ ಎಂಬ ಬ್ರಾಹ್ಮಣ ಕುಲದವಳನ್ನು ಸೂಳೆಯಾಗಿಟ್ಟುಕೊಂಡ ಕಾರಣ ವಿರೋಧಿಗಳ ಉಪಟಳ ದ್ವಿಗುಣಗೊಂಡಿತು. ನಿಂಗಮ್ಮನ ಅಣ್ಣ ವೆಂಕಪರಾಯ, ಗೋವಿಂದರಾಯರು ಸೇರಿ ಸರ್ಜಪ್ಪನ ಸಾವಿಗೆ ನಾಂದಿಹಾಡುತ್ತಾರೆ. ನಿಂಗಮ್ಮ ಪ್ರಾಮಾಣಿಕ ಹೆಣ್ಣು. ಸರ್ಜನ ಸಾವಿನ ಸಂಚು ಕೊಡುವುದಿಲ್ಲ. ಏನೆಲ್ಲ ಒತ್ತಾಯ ಮಾಡಿ ಕೊನೆಗೆ ಒಪ್ಪಿಸುತ್ತಾರೆ. ಸರ್ಜಪ್ಪನಿಗೆ ಆಗಿನಿಂದಲೇ ಕೆಟ್ಟಕನಸು, ಶಕುನಗಳು ಬೀಳುತ್ತವೆ. ತಂದೆ-ತಾಯಿ, ಮನೆದೇವರ ಮಾತುಮೀರಿ ಹೂವನಹಳ್ಳಿಗೆ ಹೋಗುವುದು ಬೇಡ ಅಂದರು ನಾಯಕ ನಿಲ್ಲುವುದಿಲ್ಲ. ಹೂವನಹಳ್ಳಿಗೆ ಹೋದಾಗ ನಿಂಗಮ್ಮ ಬೆಳ್ಳಿಯ ಗಿಂಡಿಯಲ್ಲಿ ಇವನಿಗೆ ಪನ್ನಿರು ತಂದು ಕಾಲುತೊಳೆದು ಅತಿಥ್ಯ ಗೌರವ ನೀಡಿದಳು. ಮನೆಯಲ್ಲಿ ತಂಗುವ ಮುನ್ನ ನಾಯಕ ಉಡುಗೆ-ತೊಡುಗೆ, ಆಭರಣಗಳನ್ನು ಬಿಚ್ಚಿಟ್ಟನು. ಕಬ್ಬಿಣದ ಉಡುಗೆ, ನಾಗರಾಯುಧ ತೆಗೆದಿಟ್ಟ. ಗೊಂಬೆ ಮಂಚದಲ್ಲಿ ನಿಂಗಮ್ಮನೊಂದಿಗೆ ಪಗಡೆ ಆಡಿದ. ಆಟದಲ್ಲಿ ನಿಂಗಮ್ಮ ಗೆದ್ದಾಗ ನಾಗರಾಯುಧವನ್ನು ಬಹುಮಾನವಾಗಿ ಕೇಳುತ್ತಾಳೆ. ಆದರೆ ನಾಯಕ ಭೂಮಿ, ಕಾಣಿ, ದಂಡು, ದಳ, ಆನೆ, ಕುದುರೆ ಏನೂ ಬೇಕಾದರೂ ಕೊಡುತ್ತೇನೆ ಆದರೆ ನಾಗಾರಾಯುಧವನ್ನು ಮಾತ್ರ ಕೊಡಲಾರೆ ಎನ್ನುತ್ತಾನೆ. ಹೀಗೆ ಪಗಡೆ ಆಡಿ ಬಳಲಿದ ನಾಯಕನಿಗೆ ಬಾಯಾರಿದಾಗ ವಿಷಬೆರೆಸಿದ ನೀರುಕೊಟ್ಟಳು. ನೀರುಕುಡಿದು ಮೈ ಮರೆತು ಮಲಗಿದ ಸರ್ಜಪ್ಪನಾಯಕ. ನಿದ್ದೆಯಲ್ಲಿದ್ದ ನಾಯಕನ ನಾಗರಾಯುಧವನ್ನು ನಿಂಗಮ್ಮ ಗೋವಿಂದರಾಯನಿಗೆ ಕೊಟ್ಟು ಅವನ ಸೆರೆಹಿಡಿಯುವ ಸುಳಿವು ನೀಡಿದಳು. ಬೆಳಗಿನ ಜಾವನಿದ್ದೆಯಿಂದ ಎದ್ದ ನಾಯಕನಿಗೆ ನಾಗರಾಯುಧ ಇಲ್ಲದ್ದು ಕಂಡು ದಿಗ್ಬ್ರಾಂತನಾದ. ನಿಂಗಮ್ಮನನ್ನು ಕೇಳಿದರೆ ಇಲ್ಲ ಎಂದು ಆಣೆ ಮಾಡಿದಳು. ಏನೋ ವಂಚನೆ ನಡೆದಿದೆ ಎಂದು ಸರ್ಜಪ್ಪನಿಗೆ ಸಂಶಯಬಂತು. ಎದ್ದು ಹೊರಗಡೆ ಹೋಗುವಾಗ ಮನೆಸುತ್ತ ಕಂದಕ ತೋಡಿ, ಅದರಲ್ಲಿ ದಸಿಗಳನ್ನು ಇಟ್ಟಿರುವುದನ್ನು ಅರಿಯಲಿಲ್ಲ. ಕಂದಕದಲ್ಲಿ ಬಿದ್ದ ನಾಯಕರಿಗೆ ಗಾಯಗಳಾಗಿ ಮೂರ್ಛೆ ಹೋಗುತ್ತಾನೆ. ಆದರೂ ವಿರೋಧಿಗಳೊಂದಿಗೆ ಹೋರಾಡುತ್ತಾನೆ. ಸರ್ಜಪ್ಪನನ್ನು ಗಲ್ಲಿಗೆ ಹಾಕಿದಾಗ ಸಾಯಲಿಲ್ಲ. ಕೊನೆಗೆ ತಾನೇ ಕೊರಳಿಗೆ ಹಗ್ಗವನ್ನು ಹಾಕಿಕೊಂಡು ಪ್ರಾಣ ಬಿಡುತ್ತಾನೆ.

ಮಾಗಿ ಕಾಲದ ಸಪುನ

ಸರ್ಜಾ ಹನುಮಪ್ಪನಾಯಕನಿಗೆ ಅವಸಾನ ಆರಂಭವಾದಾಗ ತಂದೆಗೆ ಕೆಟ್ಟ ಕನಸು, ಶಕುನ ಬಿದ್ದು ತೇರಿನ ಕಳಸ, ದೇವಾಲಯದ ಗೋಪುರ ಮುರುದು ಬೀಳುವ (ಕನಸು) ಬೀಳುತ್ತದೆ. ಹುರುಪಿನ, ಯೌವನ, ಮದವೇರಿದ ಸರ್ಜಪ್ಪನಿಗೆ ತಂದೆಯ ಮಾತು ಲೆಕ್ಕಿಸಲಿಲ್ಲ. ಅದಕ್ಕೆ ತಂದೆಗೆ ತಿರುಮಂತ್ರ ಹೇಳುತ್ತಾ ನಿನಗೆ ‘ಮಾಗಿಕಾಲದ ಸಪುನ’ ಎನ್ನುತ್ತಾನೆ. ತಂದೆಗೆ ವಯಸ್ಸಾಗಿದೆ ಅದಕ್ಕೆ ಆ ರೀತಿ ಕನಸು ಬಿದ್ದಿದೆ ಎನ್ನುತ್ತಾನೆ. ಮಾಗಿ ಅಂದರೆ ಮುಪ್ಪು. ಇದು ಇಲ್ಲಿನ ಕಥನ ಕಾವ್ಯಕ್ಕೆ ಸೂಕ್ತವಾದ ಶೀರ್ಷಿಕೆ ಆಗುತ್ತದೆ. ಜನಪದರು ಸರ್ಜಪ್ಪನಾಯಕ ಜೀವನ ಚರಿತ್ರೆಯನ್ನು ಕಟ್ಟಿಕೊಡುವ ವೇದಿಕೆಯೇ ಕಥನ ಕಾವ್ಯ. ಈಗಾಗಲೇ ಚರ್ಚಿಸಿರುವಂತೆ, ತರೀಕೆರೆಯ ಸ್ಥಳನಾಮ, ಐತಿಹಾಸಿಕ ಹಿನ್ನೆಲೆ, ಭೌಗೋಳಿಕ ಪರಿಚಯ, ಪಾಳೆಯಪಟ್ಟು ಸ್ಥಾಪನೆ, ಆಳ್ವಿಕೆಯ ಕಾಲಾವಧಿ, ಆಳಿದ ಪಾಳೆಯಗಾರರು, ರಾಜಕೀಯ ಪಲ್ಲಟಗಳು, ಯುದ್ಧ-ಹೋರಾಟ, ಸಾಮಾಜಿಕ ಸ್ಥಿತಿ-ಗತಿ, ಸಾಂಸ್ಕೃತಿಕ ಸ್ಥಿತ್ಯಂತರಗಳು ಮೊದಲಾದ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಹತ್ತೊಂಬತ್ತನೇ ಶತಮಾನದ ಕಥಾವಸ್ತುವನ್ನು ಇಪ್ಪತ್ತೊಂದನೆಯ ಅರ್ಥೈಸುವ ಅವಶ್ಯಕತೆಯಿದೆ. ಇಲ್ಲಿನ ಮಾನವೀಯ ಮೌಲ್ಯಗಳು, ಜಾತಿಸಂಘರ್ಷ, ಕೋಮುಸೌಹಾರ್ದತೆ, ಮೇಳು-ಕೀಳು, ಉಚ್ಚ-ನೀಚ, ಆಸ್ತಿಕ ಮತ್ತು ನಾಸ್ತಿಕ, ಸತ್ಯ, ಪ್ರಾಮಾಣಿಕತೆ ಹಾದರತನ, ಸೂಳೆಗಾರಿಕೆ, ಕುತಂತ್ರ, ಮೋಸ, ವಂಚನೆ, ಅನ್ಯಾಯ ಹೀಗೆ ಅನೇಕ ಸಂಗತಿಗಳ ಮೂಲಕ ವಾನು ಪಾಠ ಕಲಿಯಬೇಕಿದೆ. ಸಮಾಜದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಕಥನ ಮಾದರಿಯಾಗಿದೆ. ರಾಜಪ್ರಭುತ್ವದಲ್ಲಿ ನಡೆದ ಕರುಣಜನಕವಾದ ಕಥೆಯನ್ನು ಇಂದಿನ ತಲೆಮಾರಿಗೆ ತಿಳಿಸುವುದು ಅಷ್ಟೇ ಆನಂದವನ್ನುಂಟು ಮಾಡುತ್ತದೆ. ಸಮಾಜದ ಒಳಿತು ಕೆಡಕುಗಳನ್ನು ತಿದ್ದಿಕೊಳ್ಳಲು ಈ ಕಥೆ ನೈತಿಕ ಶಿಕ್ಷಣಕ್ಕೆ ಹಾಸುಹೊಕ್ಕಾದ ಪರಿಸರ ನಿರ್ಮಿಸಿದೆ. ಹೆಣ್ಣು, ಹೊನ್ನು, ಮಣ್ಣಿಗಾಗಿ ಹೋರಾಡಿದ ಮಹನೀಯರ ಸಾಲಿಗೆ ಸರ್ಜಪ್ಪನು ಸೇರುತ್ತಾನೆ. ಎಲ್ಲವನ್ನು ಗೆಲ್ಲುವ ಸರ್ಜಪ್ಪ ಹೆಣ್ಣಿನಿಂದ ಸೋತು ಅವಸಾನಗೊಳ್ಳುವುದು ದೊಡ್ಡದುರಂತ.

ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಯ ದಕ್ಷಿಣ-ಈಶಾನ್ಯ ಭಾಗದಲ್ಲಿನ ಬುಡಕಟ್ಟು ಜನರು ಅನ್ನ-ಆಹಾರಕ್ಕಾಗಿ ಮಲೆನಾಡಿಗೆ ವಲಸೆ ಹೋಗುವುದು ಪ್ರತಿವರ್ಷ ಕಂಡುಬರುವ ಸಾಮಾನ್ಯ. ದೃಶ್ಯ. ಹೀಗೆ ಹೋಗಿಬರುವಾಗ ಅಲ್ಲಿನ ಚಾರಿತ್ರಿಕ ಸಾಂಸ್ಕೃತಿಕ ಬಿಂಬಿತವಾದ ಹಾಡು, ಲಾವಣಿ, ಕಥನಗೀತೆಗಳನ್ನು ಈ ಭಾಗದ ಜನರು ಕಲಿತು ಹಾಡುತ್ತಾರೆ. ಇವಿಷ್ಟೇ ಅಲ್ಲದೆ, ಕರ್ನಾಟಕದ ಕೆಲವು ಭಾಗಗಳಲ್ಲಿ ಈತನ ಕಥನಕಾವ್ಯವನ್ನು ರಮಣೀಯವಾಗಿ ಹಾಡಿ ಹೊಗಳುತ್ತಾರೆ. ಬಯಲುಸೀಮೆ, ಅರೆಮಲೆನಾಡಿನ ಪ್ರದೇಶದಲ್ಲಿ ಸರ್ಜಾಹನುಮಪ್ಪ ನಾಯಕನ ಜನಪದ ಕಥೆ ಇಂದಿಗೂ ಜೀವಂತವಾಗಿದೆ. ಈ ಬಗೆಯ ಲಾವಣಿ, ಕಥನಗೀತೆಗಳಲ್ಲಿ ಕಾಲಾನುಕ್ರಮವಾಗಿ ಆತನ ಜೀವನದ ವಿವರಗಳು ಬರುತ್ತವೆ. ಪದ್ಯರೂಪದ ಐದು ಸಾಲುಗಳಲ್ಲಿ (ಪಂಕ್ತಿ) ಒಂದೊಂದು ಸಂದೇಶ ಹೊರಬರುತ್ತದೆ. ಆತನ ಹುಟ್ಟು, ಬೆಳವಣಿಗೆ, ಶಿಕ್ಷಣ, ರಾಜ್ಯಭಾರ, ಯುದ್ಧ, ಸಾಧನೆ, ಸೂಳೆಯನಿಂಗಿ, ಹಾರುವರ ಕುತಂತ್ರ, ಬ್ರಿಟಿಷರ ವಿರುದ್ಧ ಅವರ ಹೋರಾಟ ಇತರ ಸಂಗತಿಗಳು ಇಲ್ಲಿ ಗಮನಾರ್ಹವಾಗಿವೆ.

ಪ್ರಸ್ತುತ ಕಥನಕಾವ್ಯದಲ್ಲಿ ಯುದ್ಧ, ಬೇಟೆ, ಸೂಳೆಯ ನಿಂಗಿಯ ಪ್ರಸಂಗ ಬರುತ್ತದೆ. ಇಲ್ಲಿ ಕರುಣರಸವನ್ನು ಪ್ರತಿಪಾದಿಸುವ ಜನಪದರು ರಸವತ್ತಾದ ಸನ್ನಿವೇಶ, ದುರಂತ ಪ್ರಸಂಗಗಳನ್ನು ಮನಕಲಕುವಂತೆ ಹಾಡಿ ರಂಜನೆ ಕೊಡುವರು. ಇಲ್ಲಿನ ಭಾಷೆ ಅಷ್ಟು ಕ್ಲಿಷ್ಟಕರವಲ್ಲ. ಹುಟ್ಟಿದ್ದು ಮಯಸೂರು (ಮೈಸೂರು), ಬೆಳೆದಿದ್ದು ಶಿವಮೊಗ್ಗ, ವಿದ್ಯೆ ಕಲಿತದ್ದು ಹಿರೆದುರುಗ ಎಂಬ ಸಂಗತಿಗಳು ಚಾರಿತ್ರಿಕವಾಗಿ ಆತನ ದಿನಚರಿಯನ್ನು ನೆನಪಿಸುತ್ತವೆ. ತಂದೆ-ತಾಯಿಗಳ ಮಾತು ಮೀರಿ ಮತ್ತು ಹಲ್ಲಿ ನುಡಿಯನ್ನು (ಶಬ್ದ) ಕೇಳಿ ಕುದುರೆ ಪಯಣಕ್ಕೆ ಅಡ್ಡಿ ಪಡಿಸಿದರೂ ಸೂಳೆಯನಿಂಗಿ ಮನೆಗೋಗಲು ಹೊರಟಾಗ ತಂದೆಗೆ ನಿನ್ನೆ ರಾತ್ರಿ ನಿದ್ದೆಯಲ್ಲಿ ಕನಸು ಬಿದ್ದಿರುತ್ತದೆ. ಅದೇನೆಂದರೆ: ಕೊಟ್ಟೂರು ಬಸವಣ್ಣನ ತೇರು ಮುರಿದು ಬಿದ್ದಂಗೆ, ನಾಯಕನ ಹಟ್ಟಿ ತಿಪ್ಪೇಸ್ವಾಮಿ ಕಳಸ ಜಾರಿಬಿದ್ದಂಗಿತ್ತು. ಎಂದಾಗ ಸರ್ಜಾಹನುಮಪ್ಪನಾಯಕ ಬಿಸಿರಕ್ತದ ಯುವಕ ಯೌವನದ ಕೆಚ್ಚೆನಿಂದ ಅಪ್ಪ ನಿನಗೆ ಎಲ್ಲೊ ಮಾಗಿ ಕಾಲದ ಸಪುನ ಬಿದ್ದಿದೆ. ಇದು ಮಕ್ಕಳಿಗೆ ಒಳ್ಳೆಯದು. ಪರರಿಗೆ ಒಳ್ಳೆಯದಲ್ಲ ಎಂದು ಹೇಳಿದಾಗ ತಂದೆ ಕುಪಿತನಾಗುತ್ತಾನೆ. ತಂದೆ ತಾಯಿಯ ಮಾತನ್ನು ಧಿಕ್ಕರಿಸಿ ಅವನ ಕುದುರೆಯಲ್ಲಿ ಪಯಣಿಸಲು ದಾರಿಸುಗಮವಾಗಿರುವುದಿಲ್ಲ. ಕೆರೆಯ ಹನುಮಂತನಿಗೂ ಬೇಡಿಕೊಂಡು ಮುಂದುವರಿಯುತ್ತಾನೆ. ಅವನು ಮಾದಿಗರ ಹನುಮ ಮತ್ತು ಆ ಊರಿನ ತಳವಾರ ತಿಪ್ಪಯ್ಯನಿಂದ ಮಾಹಿತಿ ಸಂಗ್ರಹಿಸುತ್ತಾನೆ. ವಿರೋಧಿಗಳ ಉಪಟಳವನ್ನು ಎದುರು ಹಾಕಿಕೊಂದ ಬ್ರಾಹ್ಮಣರ ನಿಂಗಿಯನ್ನು ಪ್ರೇಮಿಸಿದ್ದು ತಪ್ಪಲ್ಲದೆ, ಅವಳೆಲ್ಲ ಹಕ್ಕು ಸ್ವಾತಂತ್ರ್ಯವನ್ನು ಹರಣ ಮಾಡುವ ಆಕೆಯ ಸಹೋದರರ ಪಾತ್ರ ಇಲ್ಲಿನ ಕಥೆಗೆ ಮತ್ತೊಂದು ತಿರುವು ನೀಡುತ್ತದೆ. ವೆಂಕಪರಾಯ, ಗೋವಿಂದರಾಯ, ಮಚ್ಚನುಮಂತ ಎಂಬುವರು ಸೂಳೆಯ ನಿಂಗಿಗೆ ತಲೆ ಕೆಡಿಸಿ, ಅವಳನ್ನು ಅಪ್ರಮಾಣಿಕಳನ್ನಾಗಿ ಮಾಡುತ್ತಾರೆ.

ಸರ್ಜಪ್ಪನಾಯಕ ೧೯ನೇ ಶತಮಾನದಲ್ಲಿದ್ದ ಒಬ್ಬ ಪಾಳೆಯಗಾರ. ಘಟನೆ ಸಂಭವಿಸಿದ ನಂತರ ಈತ ಬಹು ದೊಡ್ಡ ಅರಸನಾಗಿ ಬೆಳೆದ. ರಂಜನೆ, ವರ್ಣನೆಗಳು ಕಥನದಲ್ಲಿ ನುಸುಳಿದರೂ ಕೆಲವು ವಾಸ್ತುವಾಂಶಗಳು ಇಲ್ಲಿ ಪರಿಗಣಿಸುವಂತವು. ವಿಷ ಕುಡಿಸುವದು, ನಾಗರಾಯುಧ (ಚಂದ್ರಾಯುಧ), ಕುಸಲೆ ಮಂಚದ ಪ್ರಸ್ತಾಪವಿದೆ. ಹೊಲ, ಮನೆ, ಗದ್ದೆ, ಸಿರಿಸಂಪತ್ತು ಕೊಡುತ್ತೇವೆ. ಸರ್ಜನ ಸುಳಿವು ಕೊಡು ಎಂದು ಸಹೋದರರು ಕೇಳುವ ಪ್ರಶ್ನೆಗಳಿಗೆ ಸಮ್ಮತಿಸುವುದಿಲ್ಲ. ಬ್ರಾಹ್ಮಣರ ಕುಲದಲ್ಲಿ ಬ್ಯಾಡನು ಬರುತಾನೆ ಕುಲಕ್ಕೆ  ಸಂಚುಕೊಡಬೇಕು ಎಂದಾಗ ಅವಳು ಮನಸ್ಸಿಲ್ಲದ ಮನಸ್ಸಿಂದ ಒಪ್ಪುತ್ತಾಳೆ. ಅಂದುಕೊಂಡಂತೆ ಎಲ್ಲವು ನಡೆದು ಹೋಗುತ್ತವೆ. ಹೂವನಹಳ್ಳಿ ಎಂಬ ಸ್ಥಳದಲ್ಲಿ ಸರ್ಜಾಹನುಮಪ್ಪನಾಯಕ ಸಾವನ್ನಪ್ಪುತ್ತಾನೆ.

ಸ್ವಾತಂತ್ರ್ಯ ಪೂರ್ವದಲ್ಲಿ ದೇಶಿ ಅರಸರು ಬ್ರಿಟಿಷರ ವಿರುದ್ಧ ಹೋರಾಡಿದ ಸಂದರ್ಭವನ್ನು ಬಹುರಮಣೀಯವಾಗಿ ಚಿತ್ರಿಸಿದ್ದಾರೆ ನಮ್ಮ ಜನಪದರು. ಭಾರತೀಯ ಚರಿತ್ರೆಯಲ್ಲಿ ಎಷ್ಟೋ ಅರಸರು ಇಂಥ ಘಟನೆಗಳಿಂದ ಹೊರತಾಗಿಲ್ಲ. ಆದರೆ ಸರ್ಜಪ್ಪ ಏಕಕಾಲದಲ್ಲಿ ಎರಡು ಪ್ರಬಲಶಕ್ತಿಗಳನ್ನು ಹತ್ತಿಕ್ಕಲು ಪ್ರಯತ್ನಿಸುವುದು ಮೆಚ್ಚತಕ್ಕ ಸಂಗತಿ. ಹೀಗೆ ಮೌಖಿಕ ವರಿತ್ರೆಯಲ್ಲಿ ಸರ್ಜಪ್ಪನಾಯಕ ವಿಶಿಷ್ಟ ಸ್ಥಾನ ಪಡೆದಿರುವುದು ಸ್ಮರಣೀಯ.