ಆಂತರಿಕ ಸಂಘರ್ಷ ಮತ್ತು ಅವನತಿ

ತರೀಕೆರೆ ಪಾಳೆಯಪಟ್ಟಿನ ಕೊನೆ ಹಂತದಲ್ಲಿ ಹೇಳಿಕೊಳ್ಳುವಂತ ರಾಜಕೀಯ ಬದಲಾವಣೆಗಳೇನೂ ಆಗಿರಲಿಲ್ಲ. ಸರ್ಜಾ ರಂಗಪ್ಪನಾಯಕನ ಎರಡನೇ ಹೆಂಡತಿಗೆ ಸರ್ಜಾ ಕೃಷ್ಣಪ್ಪನಾಯಕ ಮತ್ತು ಸರ್ಜಾ ಪಟ್ಟಾಭಿರಾಮಪ್ಪನಾಯಕರೆಂಬ ಇಬ್ಬರು ಪುತ್ರರು, ಮೂರನೆಯ ಹೆಂಡತಿಗೆ ಕೆಂಗಳನಾಯಕರು ಜನಿಸಿದ್ದರು. ಕೆಂಗಳನಾಯಕ ಸೈನ್ಯಕ್ಕೆ ಸೇರಿ ಅಜ್ಞಾತದಲ್ಲಿದ್ದನು. ಇವನ ಪೂರ್ಣಚಿತ್ರಣ ಅಸ್ಪಷ್ಟವಾಗಿರುವುದು ನಿಜ. ಈ ಪಟ್ಟಾಭಿರಾಮಪ್ಪನಾಯಕನ ಮಕ್ಕಳು ಹನುಮಪ್ಪನಾಯಕ ಮತ್ತು ರಂಗಪ್ಪನಾಯಕ. ಹನುಮಪ್ಪನಾಯಕನಿಗೆ ಸರ್ಕಾರ ಜಹಗೀರು ನೀಡಿತಲ್ಲದೆ, ವಾರ್ಷಿಕ ಪೊಗದಿಯನ್ನು ಸರ್ಕಾರ ಕೊಡುತ್ತಿತ್ತು. ೧೮೮೮ರಲ್ಲಿ ಈತ ಮರೆಯಾದನು. ಇವನ ತರುವಾಯ ಸರ್ಜಾ ಪಟ್ಟಾಭಿರಾಮಪ್ಪ ಪಾಳೆಯಗಾರನಾದ. ತಾಯಿಯನ್ನು ಕಳೆದುಕೊಂಡು ಚಿಕ್ಕಮಗುವಾಗಿದ್ದ ಈತನನ್ನು ಚಿಕ್ಕಪ್ಪನಾದ ರಂಗಪ್ಪನಾಯಕನೇ ಬೆಳೆಸಿದನು. ಬಾಲ್ಯದಲ್ಲಿಯೇ ಚಿಕ್ಕಪ್ಪನೊಂದಿಗೆ ವಿರೋಧ ಕಟ್ಟಿಕೊಂಡು ಬೆಳೆದಂತೆ ಇನ್ನು ಮನಸ್ತಾಪ ಇಮ್ಮಡಿಗೊಂಡಿತು.

ಯವೌನಕ್ಕೆ ಬಂದ ಪಟ್ಟಾಭಿರಾಮಪ್ಪನಾಯಕನಿಗೆ ಕೆಂಗುದಿಕುಪ್ಪಂನ ಪಾಳೆಯಗಾರ ವೆಂಕಟಪತಿನಾಯಕನ ಮೊಮ್ಮಗಳು ತಿಮ್ಮಾಜಮ್ಮ ನಾಗತಿಯೊಂದಿಗೆ ವಿವಾಹವಾಯಿತು. ಅಧುನಿಕ ಶಿಕ್ಷಣ ಪಡೆದ ಪ್ರೌಢ ಮಹಿಳೆ ಇವಳು. ಇವಳಿಂದ ಆ ಮನೆಯ ಪರಿಸರವೇ ಬದಲಾಯಿತು. ತಂದೆಯ ಆಸ್ತಿಗಾಗಿ ಇವಳು ದಾವೆ ಹೂಡುತ್ತಾಳೆ. ಇಲ್ಲಿನ ಸಂಪತ್ತು, ಆಸ್ತಿ, ಅರಮನೆಗಾಗಿ ಕಾದಾಟ ನಡೆದು ನ್ಯಾಯಾಲಯದ ಮೂಲಕ ಬಗೆಹರಿದರೂ ಸುಟ್ಟು ನಾಶ ಮಾಡಲಾಯಿತು. ವಾರ್ಧಿಕ್ಯ ಪ್ರಾಪ್ತಿಯಾಗಿ ದಂಪತಿಗಳಿಬ್ಬರು ಸತ್ತುಹೋದ ಮೇಲೆ ಮಗ ಐದನೇ ಹನುಮಪ್ಪನಾಯಕನು ಅಧಿಕಾರಕ್ಕೆ ಬರುತ್ತಾನೆ.

ಯಶೋಧಮ್ಮನಾಗತಿ ಸರ್ಜಾ ಹನುಮಪ್ಪನಾಯಕರ ಮೂರನೇ ಪತ್ನಿ. ಇವಳು ಚಿತ್ರದುರ್ಗದ ಬಿಚ್ಚುಗತ್ತಿ ಮದಕರಿನಾಯಕರ ಮಗಳು. ಮಹಾಸಾಧ್ವಿ, ಉದಾರದಾನಿಯಾದ ಇವಳು ಅಪಾರ ಕಾರ್ಯದಕ್ಷತೆಯನ್ನು ಮೆರೆಸಿದ್ದಳು. ಇವಳು ಸರ್ಜಾ ಪಟ್ಟಾಭಿಹನುಮಪ್ಪನನ್ನು ದತ್ತು ಪಡೆಸು ಸಾಕಿದಳು. ಮಗು ಅಕಾಲಮರಣಕ್ಕೆ ತುತ್ತಾಯಿತು. ಪತಿ ಸರ್ಜಾ ಹನುಮಪ್ಪನಾಯಕರು ೧೯೪೭ರಲ್ಲಿ ಹಠಾತ್ತನೆ ತೀರಿಕೊಂಡ ಮೇಲೆ ಹಿತ ಶತ್ರುಗಳು ಕೊಟ್ಟ ಎಲ್ಲಾ ರೀತಿಯ ಕಿರುಕುಳಗಳನ್ನು ನಾಗತಿಯವರು ಸಹನೆಯಿಂದ ಸಹಿಸಿಕೊಂಡರು. ಹೀಗೆ ತರೀಕೆರೆಯ ಸಮಸ್ತ ಆಸ್ತಿಯನ್ನು ತವರು ಮನೆಯ ರಾಜಗುರುಗಳಾದಂಥ ಚಿತ್ರದುರ್ಗದ ಮುರುಘರಾಜೇಂದ್ರ ಸ್ವಾಮಿಗಳ ಬೃಹನ್ಮಠಕ್ಕೆ ನೀಡಿದಳು. ಚಿತ್ರದುರ್ಗದಲ್ಲಿ ತೀರಿಕೊಂಡಳು. ಪಾಳೆಯಗಾರ ವಂಶದವರು, ನಾಯಕ ಜನಾಂಗದವರು ತರೀಕೆರೆ ಪಾಳೆಯಗಾರರ ಆಸ್ತಿಯನ್ನು ಚಿತ್ರದುರ್ಗದ ಮುರುಘರಾಜೇಂದ್ರ ಮಠಕ್ಕೆ ಕೊಡುವುದನ್ನು ತೀವ್ರ ವಿರೋಧಿಸಿದ್ದು ಗಮನಾರ್ಹ. ಹಾಗೂ ಇತರರು ಸಹಾ ಮೇಲಿನ ಸಂಗತಿಗಳನ್ನು ಖಂಡಿಸಿದ್ದರು.

ಹೀಗೆ ತರೀಕೆರೆ ನಾಯಕರು ತಮ್ಮ ಸದ್ಗುಣಗಳಿಂದ ರಾಜ್ಯಭಾರ ಮಾಡಿ ಲೋಕೈಕ ವೀರರೆಂದು, ಉತ್ತಮ ಆಡಳಿತಗಾರರೆಂದು ಕರೆಸಿಕೊಂಡರು. ಇವರ ರಾಜಕೀಯ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳ ಸಾಧನೆ ಮಹತ್ತರವಾದುದು. ಏನೆಲ್ಲಾ ಪರಿವರ್ತನೆಗಳ ನಡುವೆ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಬಂಡೆದ್ದ ಸರ್ಜಪ್ಪನ ಸಾಹಸ ಸ್ಮರಣೀಯ.

ಸಿಪಾಯಿ ದಂಗೆಯ ನಮ್ತರ ಪಾಳೆಯಗಾರರ ಬದುಕು ಬೀದಿಪಾಲಾಗುತ್ತದೆ. ಇದನ್ನರಿತ ಬ್ರಿಟಿಷರು ಪಾಳೆಯಗಾರರ ಸಂಸ್ಥಾನಗಳನ್ನು ವಿಶ್ವಾಸದಲ್ಲಿಟ್ಟುಕೊಳ್ಳಲು ಆ ಮನೆತನದವರಿಗೆ ವಿಶ್ರಾಂತಿ ವೇತನಕೊಡಲು ಮುಂದಾದರು.

ಸರ್ಜಾ ರಂಗಪ್ಪನಾಯಕನ ಹೆಂಡತಿ ಹೊನ್ನಮ್ಮನಾಗತಿ ೧೯೧೦-೧೧ರಲ್ಲಿ ತನ್ನ ಗಂಡನ ಪಿಂಚಣಿ ಮುಂದುವರೆಸಲು ಕೋರಿದಳು. ಇದಕ್ಕೂ ಮೊದಲು ಹನುಮಪ್ಪನಾಯಕನ ಹಿರಿಯಮಗ ಸರ್ಜಾ ರಂಗಪ್ಪನಾಯಕನಿಗೆ ತರೀಕೆರೆ ಪಾಳೆಯಗಾರರ ಪಿಂಛಣಿ ವೇತನವನ್ನು ತನಗೆ ಬರುವಂತೆ ಮಾಡಿಕೊಂಡು ಸಂತೋಷದಿಂದ ಜೀವನ ನಡೆಸುತ್ತಿದ್ದನು (S&A, ೧೯೧೦-೧೧, ೨೮೫ ೧೦, ೧೧, P-೭೮೨). ತರೀಕೆರೆ ವಂಶಸ್ಥಳಾದ ಹನುಮಮ್ಮನಾಗತಿ ೧೯೧೩ರಲ್ಲಿ ಸರ್ಕಾರದಿಂದ ಪಿಂಚಣಿ ಪಡೆಯುತ್ತಾಳೆ.

ತರೀಕೆರೆ ನಾಯಕ ಅರಸರಿಂದ ನಾಯಕನಟ್ಟಿ, ಮೊಳಕಾಲ್ಮೂರು, ರಾಮದುರ್ಗ, ಚಿತ್ರದುರ್ಗದ ಅರಸರೊಂದಿಗೆ ಅತೀ ಹೆಚ್ಚಿನ ವೈವಾಹಿಕ ಸಂಬಂಧಗಳೇರ್ಪಟ್ಟಿದ್ದವು.

ಡಿ.ಎನ್. ಕೃಷ್ಣಯ್ಯ ತಮ್ಮ ‘ಕೊಡಗಿನ ಇತಿಹಾಸ’ ಕೃತಿಯಲ್ಲಿ ಸರ್ಜಾ ಹನುಮಪ್ಪನಾಯಕ ಮತ್ತು ಚಿತ್ರದುರ್ಗದ ಬೇಡರ ಸೈನ್ಯವನ್ನು ಸ್ಮರಿಸಿದ್ದಾರೆ. ಚಿಕ್ಕವೀರರಾಜೇಂದ್ರ (೧೮೨೦-೧೮೩೪) ಕೊಡಗಿನಹಾಲೇರಿ ಅರಸ. ಇವನು ಚಿತ್ರದುರ್ಗ, ರಾಯದುರ್ಗದ ಬೇಡರನ್ನು ಮಡಿಕೇರಿಗೆ ಕರೆಸಿಕೊಂಡ. ಚಿತ್ರದುರ್ಗದ ಬೇಡರ ಸೈನ್ಯ ಪ್ರಬಲವಾಗಿತ್ತು. ಚಿಕ್ಕವೀರರಾಜೇಂದ್ರ ಚನ್ನಬಸಪ್ಪನನ್ನು ಕೊಲ್ಲಿಸಲು ಚಿತ್ರದುರ್ಗದ ಬೇಡರನ್ನು ವೇಷ ಬದಲಾಯಿಸಿ ಬೆಂಗಳೂರಿಗೆ ಕಳುಹಿಸಿದನು. ಕೊಡಗಿನ ಚಿಕ್ಕವೀರರಾಜೇಂದ್ರ ಬ್ರಿಟಿಷರಿಗೆ ವಿರೋಧವಾಗಿದ್ದ. ಬಂಗಾಳದ ಗವರ್ನರ್ ಜನರಲ್ ಲಾರ್ಡ್ ವಿಲಿಯಂ ಬೆಂಟಿಂಕ್ ಕಂಪನಿ ಸರ್ಕಾರ ವಿರೋಧ ಬಿಡಬೇಕೆಂದು ಆದೇಶಿಸಿದ. “ಈಮಧ್ಯೆ ನಗರ ಸೀಮೆಯಲ್ಲಿ ಬ್ರಿಟಿಷರಿಗೆ ವಿರೋಧವಾಗಿ ದಂಗೆಯೆದ್ದಿದ ಸರ್ಜಪ್ಪನಾಯಕನು ಕೊಡಗಿಗೆ ಬಂದು ರಾಜನನ್ನು ದಿವಾನ್ ಕೂಟಬಸಪ್ಪನನ್ನು ಕಂಡು ಮಾತನಾಡಿ ಹೋಗಿದ್ದನು (ಕೊಡಗಿನ ಇತಿಹಾಸ : 463-64-73-76-494).