‘ತರೀಕೆರೆ’ ಒಂದು ತಾಲೂಕು ಕೇಂದ್ರ. ಇದು ಚಿಕ್ಕಮಗಳೂರು ಜಿಲ್ಲೆಗೆ ಸೇರಿದ್ದು, ಹಿಂದೆ ಪಾಳೆಯಗಾರರ ರಾಜಧಾನಿಯಾಗಿತ್ತು. ತರೀಕೆರೆಗೆ ಮೂಲದಲ್ಲಿ ‘ಅಮರಾವತಿ’ ಎಂಬ ಹೆಸರಿತ್ತು. ಪಾಳೆಯಗಾರರಿಗೂ ಪೂರ್ವದಲ್ಲಿ ಇದೊಂದು ಅಗ್ರಹಾರ. ತರೀಕೆರೆ ವಾಯುವ್ಯಕ್ಕೆ ‘ಕಾಟೂರು’ ಗ್ರಾಮವಿದ್ದು ಇದು ತರೀಕೆರೆಗಿಂತಲೂ ಪ್ರಾಚೀನವಾಗಿದ್ದು, ಕ್ರಮೇಣ ತರೀಕೆರೆ ಆಯಿತಂತೆ. ತರೀಕೆರೆ ಮಲೆನಾಡಿನ ಮಹಾದ್ವಾರವಿದ್ದಂತೆ. ಸುತ್ತಲೂ ಕಾಡು, ಬೆಟ್ಟ-ಗುಡ್ಡಗಳ ಪ್ರಕೃತಿ ಸೌಂದರ್ಯವನ್ನು ವರ್ಣಿಸಲು ಅಸಾಧ್ಯ. ಬಾಬಾಬುಡನ್ ಗಿರಿ, ಕಲ್ಹತ್ತಿಗಿರಿ ಗಿರಿಶ್ರೇಣಿಗಳಲ್ಲದೆ, ಭದ್ರಾನದಿಯೂ ಇಲ್ಲಿ ಹರಿಯುತ್ತಾಳೆ. ತರೀಕೆರೆಗೆ ಕನಿಷ್ಟ ಸಾವಿರ ವರ್ಷಗಳ ಇತಿಹಾಸವಿದೆ. ಆದಿ ಇತಿಹಾಸ  ನಿಖರವಾಗಿ ತಿಳಿದಿಲ್ಲವಾದರೂ ಹೊಯ್ಸಳ ಇಮ್ಮಡಿ ಬಲ್ಲಾಳನ (೧೧೭೩-೧೨೨೦) ದಳಪತಿ ಕಮಲರಸ ದಂಡನಾಯಕನಿಂದ ಈ ಸ್ಥಳವನ್ನು ಅಗ್ರಹಾರವಾಗಿ ಪಡೆದನಂತೆ. ಹೊಯ್ಸಳರ ಅಧೀನದಲ್ಲಿದ್ದ ತರೀಕೆರೆಯನ್ನು ತರುವಾಯು ವಿಜಯನಗರದ ಅರಸ ಬುಕ್ಕರಾಯ ಇದನ್ನು ಜಯಿಸಿ ಉಂಬಳಿಯಾಗಿ ಪಡೆದನು. ಕಾರ್ತಿಕರಾಯ, ಕೃಷ್ಣರಾಯ, ರಾಮರಾಯರ ನೇರ ಆಳ್ವಿಕೆಗೊಳಗಾಗಿ ಪ್ರಗತಿ ಕಾಣಲು ಸಾಧ್ಯವಾಯಿತು.

ಕರ್ನಾಟಕದ ಪ್ರಮುಖ ಪಾಳೆಯಪಟ್ಟುಗಳ ಪೈಕಿ ತರೀಕೆರೆ ಒಂದು. ಇದು ಪ್ರಾಮುಖ್ಯತೆ ಪಡೆಯಲು ಕಾರಣ ಕ್ರಿ.ಶ.೧೭ ರಿಂದ ೧೯ನೇ ಶತಮಾನದವರೆಗೆ ಯುದ್ಧ, ದಾಳಿ, ಸಂಘರ್ಷ, ಅಂತಃಕಲಹ ಅನಾಯಕತ್ವ, ಅನೈತಿಕತೆಯಿಂದ (ರಾಜ್ಯ ವ್ಯವಸ್ಥೆ) ಇರುವುದನ್ನು ರಕ್ಷಿಸಿದವರು ತರೀಕೆರೆ ನಾಯಕರು. ಬ್ರಿಟಿಷರನ್ನು ಹೊರದೂಡಲು ಹೋರಾಟ ನಡೆಸಿದ ಕೀರ್ತಿ ಇವರಿಗೆ  ಸಲ್ಲುತ್ತದೆ. ಈ ತರೀಕೆರೆಯ ಪಾಳೆಯಗಾರರ ಚರಿತ್ರೆ ಬಹು ವರ್ಣಮಯ ಮತ್ತು ಅಷ್ಟೇ ರೋಮಾಂಚನಕಾರಿಯಾದುದಾಗಿದೆ.

ತಾಳೀಕೋಟೆ ಕದನದಲ್ಲಿ ಬಸವಾಪಟ್ಟಣ ಕಾಮಗೇತಿ ಹನುಮ(೦ತ)ಪ್ಪನಾಯಕನು ವಿಜಯನಗರದ ಪರ ದಂಡನಾಯಕನಾಗಿ ತೋರಿಸಿದ ಶೌರ್ಯ ಪರಾಕ್ರಮಕ್ಕಾಗಿ ತರೀಕೆರೆ ಪಾಳೆಯಗಾರರಿಗೆ ಸಂತೆಬೆನ್ನೂರನ್ನು ಉಂಬಳಿಯನ್ನಾಗಿ ನೀಡಿದರು. ಅಂದಿನಿಂದ ತರೀಕೆರೆಯವರು ಆಳಿವೆಕೆಯನ್ನು ತಮ್ಮದಾಗಿಸಿಕೊಂಡರು. ಈ ಕಾರಣವಾಗಿಯೋ ಏನೋ ೧೫೬೯ರಲ್ಲಿ ಹನುಮಪ್ಪನಾಯಕ ತರೀಕೆರೆಯನ್ನು (ಆಧುನಿಕವಾಗಿ) ನಿರ್ಮಿಸಿದಂತಿದೆ.

ತರೀಕೆರೆಯ ನಾಯಕರ ಮೂಲ ನೆಲೆ ಬಸವಾಪಟ್ಟಣ. ಸು.೧೫ನೇ ಶತಮಾನದಲ್ಲಿ ವಿಜಯನಗರದ ರಾಜಪ್ರತಿನಿಧಿ ಧೂಮರಾಜನು ಇವರ ಮೂಲ ಪುರುಷ. ಇವನು ಬೇಟೆಯಾಡುತ್ತಾ ವಿಜಯನಗರದಿಂದ ಶಿವಮೊಗ್ಗ ಜಿಲ್ಲೆ ಚನ್ನಗಿರಿ ತಾಲೂಕಿನ ಬಸವಾಪಟ್ಟಣಕ್ಕೆ (ಬೇಟೆಗಾರನ) ಬೇಡನ ಸಹಾಯದಿಂದ ಬಂದು ಅವನ ಮನೆಯಲ್ಲಿ ತಂಗಿದನು. ಅವನ ಸುಂದರ ಮಗಳನ್ನು ಮದುವೆಯಾಗಿ ಧೂಮರಾಜ ಅಲ್ಲಿ ನೆಲಸಿ ದುಮ್ಮ ಗುಡ್ಡದಲ್ಲಿ ಪಾಳೆಯ ಕಟ್ಟಿದನೆಂಬ ಪ್ರತೀತಿಯಿದೆ. ಸಂತೆಬೆನ್ನೂರು ಪಾಳೆಯಗಾರರೆಂದು ಕರೆಸಿಕೊಂಡರು ಆಗ. ಹೀಗಿರುವಾಗ ಧೂಮರಾಜನಿಗೆ ಕೆಂಗಣ್ಣನಾಯಕ ಮತ್ತು (ಸೀತಾ) ರಾಮಪ್ಪನಾಯಕ ಎಂಬಿಬ್ಬರು ಮಕ್ಕಳು ಜನಿಸುತ್ತಾರೆ. ಕೆಂಗಣ್ಣನಾಯಕ ಅಧಿಕಾರಕ್ಕೆ ಬಂದು ಬಸವಾಪಟ್ಟಣ ನಿರ್ಮಾಣ ಮಾಡಿದನು. ತನ್ನ ರಾಜ್ಯವನ್ನು ಅನಂತಪುರದಿಂದ ಮಾಯಕೊಂಡದವರೆಗೂ, ಹರಿಹರದಿಂದ ಬಾಬಾಬುಡನ್ ಗಿರಿಯವರೆಗೆ ವಿಸ್ತರಿಸಿದ. ಇವನ ತರುವಾಯ ಹನುಮಪ್ಪ ನಾಯಕ, ಇಮ್ಮಡಿ ಹನುಮಪ್ಪನಾಯಕ, ಹುಚ್ಚನುಮಪ್ಪನಾಯಕ ಮತ್ತು ಕೆಂಗಣ್ಣನಾಯಕ ಮೊದಲಾದವರು ಆಳಿದರು. ಬಿಜಾಪುರದ ದಂಡನಾಯಕ ರಣದುಲ್ಲಾಖಾನನು (ಕ್ರಿ.ಶ. ೧೬೩೦ರಲ್ಲಿ) ಬಸವಾಪಟ್ಟಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಾಗ ಕೆಂಗಣ್ಣನಾಯಕ ತರೀಕೆರೆಗೆ ಬಂದು ರಾಜಧಾನಿಯಾಗಿ ಮಾಡಿಕೊಂಡು ಕಾಳಿದುರ್ಗ ಕೋಟೆಯಿಂದ ಆಳ್ವಿಕೆ ನಡೆಸುವಲ್ಲಿ ತರೀಕೆರೆಗೆ ಮೊದಲನೆಯವನಾಗಿದ್ದಾನೆ (ಪುವ್ವಲ ಬೆಡಗು, ಬಿ.ಎಸ್. ಶ್ರೀನಿವಾಸನಾಯಕ ತನ್ನ “ಚಿತ್ರದುರ್ಗದ ಕಾಮಗೇತಿ ಅರಸ್ರು” ಎಂಬ ಕೃತಿಯಲ್ಲಿ). ಕರ್ನಾಟಕದಲ್ಲಿ ಮಹಾ ಬಲಿಷ್ಟ ಸಂಸ್ಥಾನಗಳೆನಿಸಿದ್ದ ಚಿತ್ರದುರ್ಗ, ಬಿದನೂರು (ಕೆಳದಿ, ಇಕ್ಕೇರಿ) ಮತ್ತು ಮೈಸೂರುಗಳಂತೆ ತರೀಕೆರೆಯೂ ಒಂದು ಬಲಿಷ್ಟ ಸಂಸ್ಥಾನವೆನಿಸಿತ್ತು. ಮತ್ತೊಂದು ಮೌಖಿಕ ಆಕರದಂತೆ ಈ ವಂಶದ ಮೂಲ ಪುರುಷ ಧೂಮರಾಜ ಎಂಬುವವರು ಹದಿನೈದನೇ ಶತಮಾನದ ಮಧ್ಯದ ಸುಮಾರಿನಲ್ಲಿ ವಿಜಯನಗರದಿಂದ ಬೇಟೆಗಾಗಿ ಹೊರಟು ಈಗಿನ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಬಸವಾಪಟ್ಟಣ ಪ್ರಾಂತ್ಯಕ್ಕೆ ಬಂದು, ಆ ಸ್ಥಳದಲ್ಲಿಯೇ ವಿವಾಹವಾಗಿ ಅಲ್ಲಿಯೇ ನೆಲಸುವರೆಂದು ತಿಳಿದುಬರುತ್ತದೆ.

ತರೀಕೆರೆಯನ್ನು ಆಳಿದ ಅರಸರ ಪಟ್ಟಿಯನ್ನು ಈ ರೀತಿ ನೋಡಬಹುದಾಗಿದೆ. (ಗ್ಯಾಸೆಟಿಯರ್ ಪುಟ ೨೫, ಕೈಫಿಯತ್ತು ಮತ್ತು ಶ್ಯಾನುಭೋಗರ ದಾಖಲೆಗಳಿಂದ). ಕೆಂಗಪ್ಪನಾಯಕ (ಬಸವಾಪಟ್ಟಣದಿಂದ ಬಂದವರು)

ಹನುಮಪ್ಪನಾಯಕ
ಇಮ್ಮಡಿ ಹನುಮಪ್ಪನಾಯಕ
ನಿಚ್ಚಮದುವಣಿಗ ಹನುಮಪ್ಪನಾಯಕ
(ಸರ್ಜಾಹನುಮಪ್ಪನಾಯಕ)
ಸರ್ಜಾ ಕೃಷ್ಣಪ್ಪನಾಯಕ
ಸರ್ಜಾ ರಂಗಪ್ಪನಾಯಕ
ಸರ್ಜಾ ಪಟ್ಟಾಭಿರಾಮನಾಯಕ
ಸರ್ಜಾ ಹನುಮಪ್ಪನಾಯಕ
ಸರ್ಜಾ ಪಟ್ಟಾಭಿರಾಮಪ್ಪನಾಯಕ
ಸರ್ಜಾ ಹನುಮಪ್ಪನಾಯಕ
ಸರ್ಜಾ ಪಟ್ಟಾಭಿ ಹನುಮಪ್ಪನಾಯಕ (ಅಕಾಲ ಮರಣ ದತ್ತು ಸಂತತಿ ಇಲ್ಲಿಗೆ ಕೊನೆಗೊಳ್ಳುತ್ತದೆ).

ಕ್ರಿ.ಶ. ೧೫೪೫ರಲ್ಲಿ ತರೀಕೆರೆ ಪಾಳೆಯಗಾರ ಇಮ್ಮಡಿ ಸೀತಾರಾಮಪ್ಪನಾಯಕರ ಪುತ್ರರಾದ ಹನುಮಪ್ಪನಾಯಕರು ವಿಜಯನಗರ ಚಕ್ರವರ್ತಿಗಳಿಂದ ಈಗಿನ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಬಸವಾಪಟ್ಟಣ ಮತ್ತು ಸಂತೆಬೆನ್ನೂರುಗಳ ಪ್ರಭುತ್ವವನ್ನು ಪದೆದರು. ನಂತರ ಸಂತೆಬೆನ್ನೂರು ದೊರೆಗಳು ಎಂಬ ಹೆಸರಿನಿಂದ ಪ್ರಸಿದ್ಧರಾಗಿ ಶಿವಮೊಗ್ಗೆಯನ್ನು ಕೇಂದ್ರವಾಗುಳ್ಳ ವಾರ್ಷಿಕ ಒಂಭತ್ತು ಲಕ್ಷ ಹೊನ್ನುಗಳ ಕಂದಾಯ ಬರುವಂಥ ಬಹುರಾಜ್ಯ ಕಟ್ಟಿದರು. ಕ್ರಿ.ಶ. ೧೬೩೭ರಲ್ಲಿ ಬಿಜಾಪುರದ ಸುಲ್ತಾನರೊಡನೆ ನಡೆದ ಕಾಳಗದಲ್ಲಿ ನಾಯಕ ದೊರೆಗಳು ತಮ್ಮ ರಾಜಧಾನಿಯನ್ನು ಸಂತೆಬೆನ್ನೂರಿನಿಂದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಗೆ ಬದಲಾಯಿಸಿಕೊಂಡರು (ಅದೇ:೨೬). ಅಂದಿನಿಂದ ತರೀಕೆರೆ ಅರಸರೆಂದು, ಪಾಳೆಯಗಾರರೆಂದು ಕರೆಯಲಾಯಿತು.

ತರೀಕೆರೆ ಪಾಳೆಯಗಾರರ ರಾಜ್ಯ ವಿಸ್ತಾರವು ಉತ್ತರ-ದಕ್ಷಿಣ ಅಭಿಮುಖವಾಗಿ ದಾವಣಗೆರೆ ಜಿಲ್ಲೆಯ ಹರಿಹರದಿಂದ, ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗರುಡನದುರ್ಗ ಬಾಣವಾರದವರೆಗೆ ಮತ್ತು ಪೂರ್ವ ಪಶ್ಚಿಮವಾಗಿ ಸಂತೆಬೆನ್ನೂರಿನಿಂದ ಶಿವಮೊಗ್ಗ ಜಿಲ್ಲೆಯ  ಸಾಗರ ತಾಲೂಕಿನ ಆನಂದಪುರದವರೆಗೂ ಹಾಗೂ ಹೊಸನಗರ ತಾಲೂಕಿನ ರಾಮಚಂದ್ರಪುರದವರೆಗೂ ವ್ಯಾಪಿಸಿತ್ತು. ಅಂದರೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳು ತರೀಕೆರೆ ಸಂಸ್ಥಾನದ ವ್ಯಾಪ್ತಿಯಲ್ಲಿದ್ದವು.

ಬಸವಾಪಟ್ಟಣ ಮತ್ತು ಸಂತೆಬೆನ್ನೂರುಗಳಲ್ಲಿ ಆರಂಭದ ರಾಜ್ಯಾಳ್ವಿಕೆಯನ್ನು ಮಾಡಿದವನು ರಾಮಕೋಟೆ ಹನುಮಪ್ಪನಾಯಕ (೧೪೮೦-೧೫೫೦). ಇವನು ಉಚ್ಚಂಗಿ ಪ್ರದೇಶದ ರಾಮಕೋಟೆಯವನಿರಬೇಕೆಂದು ಇತಿಹಾಸಕಾರರ ಅಭಿಪ್ರಾಯ. ರಾಜ್ಯಾಳ್ವಿಕೆಯಲ್ಲಿ ಇವನು ಅನೇಕ ಕೆಲಸ ಕಾರ್ಯಗಳನ್ನು ಕೈಗೊಂಡನು. ಇವನಿಗೆ ಪಿಲ್ಲಪ್ಪನಾಯಕ (೧೫೫೦-೧೫೬೫) ಮತ್ತು ಕೆಂಗಪ್ಪನಾಯಕ ಎಂಬ ಸಹೋದರರು ತರೀಕೆರೆಯನ್ನು ಸ್ಥಾಪಿಸುತ್ತಾರೆ (೧೫೫೨). ಇದಕ್ಕೂ ಪೂರ್ವದಲ್ಲಿ ಇವರು ಬಸವಾಪಟ್ಟಣ, ಸಂತೆಬೆನ್ನೂರುಗಳನ್ನು ಸ್ಥಾಪಿಸುತ್ತಾರೆ. ದುಮ್ಮಿ, ಬಸವಾಪಟ್ಟಣ, ಚನ್ನಗಿರಿ, ಸಂತೆಬೆನ್ನೂರು ಇತರ ಸ್ಥಳಗಳಲ್ಲಿ ಪ್ರಗತಿಪರ ಕಾರ್ಯಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಇವರು ನಿರ್ಮಿಸಿದ ಸ್ಮಾರಕಗಳು ಇಂದಿಗೂ ಜನಮನಸೂರೆಗೊಳ್ಳುತ್ತಿವೆ.

ಕೆಂಗಪ್ಪನಾಯಕ (೧೫೬೫-೧೫೭೦)

ಕೆಂಗಪ್ಪನಾಯಕ ರಾಮಕೋಟೆ ಹನುಮನಾಯಕನ ಮಗ ಮತ್ತು ಪಿಲ್ಲಪ್ಪನಾಯಕನ ಸೋದರ. ಈತ ವಿಜಯನಗರದವರ ಪರ ಸಾಕಷ್ಟು ಹೋರಾಟ ಮಾಡಿದ ಕಾರಣ ಬಸವಾಪಟ್ಟಣ ಮೊದಲಾದ ಪ್ರದೇಶಗಳ ಒಡೆತನ ಜವಾದ್ಬಾರಿಯನ್ನು ಕೊಟ್ಟಿದ್ದರು. ಕ್ರಿ.ಶ.ಸು. ೧೫೬೮ರಲ್ಲಿ  ತಿಮ್ಮಣ್ಣನಾಯಕನ ಅಧೀನದಲ್ಲಿದ್ದ ಉಚ್ಚಂಗಿದುರ್ಗವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿ ವಿಫಲನಾದ. ಅನೇಕ ಲೋಕೋಪಯೋಗಿ ಕೆಲಸಗಳನ್ನು ಇವನು ಮಾಡಿಸಿದ್ದು ಸ್ಮರಣೀಯ. ಸಂತೆಬೆನ್ನೂರಿನಲ್ಲಿ ರಾಮಚಂದ್ರ ದೇವಾಲಯ, ರಾಮತೀರ್ಥಕೆರೆ (ತಟಾಕ), ಚಿಕ್ಕಮಗಳೂರಿನಲ್ಲಿ ಪ್ರಾಣದೇವರ ಗುಡಿ, ದೇವರಹಳ್ಳಿಯಲ್ಲಿ ರಂಗನಾಥ ದೇವಾಲಯಗಳನ್ನು ಕಟ್ಟಿಸಿದ್ದಕ್ಕೆ ಶಾಸನಗಳೇ ಸಾಕ್ಷಿ. ಕೆಂಗಪ್ಪನಾಯಕನ ಸಮಾಧಿ ಭಗ್ನಗೊಂಡಿದ್ದು, ಜೀರ್ಣೋದ್ಧಾರ ಮಾಡಿಸಲು ಚನ್ನಗಿರಿ, ದಾವಣಗೆರೆ ಭಾಗದ ಜನರ ಹೋರಾಟವಾಗಿದೆ.

ಇಮ್ಮಡಿ ಹನುಮಪ್ಪನಾಯಕ (೧೫೭೦-೧೬೦೧)

ಕೆಂಗಪ್ಪನಾಯಕನ ನಂತರ ಆತನ ಮಗ ಇಮ್ಮಡಿ ಹನುಮಪ್ಪನಾಯಕ ಅಧಿಕಾರಕ್ಕೆ ಬರುತ್ತಾನೆ. ಈತನಿಗೆ ಇನ್ನೊಂದು ಹೆಸರು ಹಿರೇಹನುಪ್ಪನಾಯಕ. ತನ್ನ ಪೂರ್ವಿಕರಂತೆ ಈತ ತಣಿಗೆರೆ, ಮೆದಿಕೆರೆ, ಶಿದ್ಧನಮಠ, ಸಂತೆಬೆನ್ನೂರುಗಳಲ್ಲಿ ಕೆರೆ, ಕಟ್ಟೆ, ಬಾವಿಗಳನ್ನು ನಿರ್ಮಿಸುತ್ತಾನೆ. ಇಕ್ಕೇರಿ ಅರಸರ ವಿರುದ್ಧ ಯುದ್ಧ ಮಾಡಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಚಿತ್ರದುರ್ಗ, ಇಕ್ಕೇರಿ ಅರಸರೊಂದಿಗೆ ಹೋರಾಟ ನಡೆಸಿದರೂ ಸಫಲನಾಗಲಿಲ್ಲ.

ನಿಚ್ಚಮದುವಣಿಗ ಹನುಮಪ್ಪನಾಯಕ (೧೬೦೧-೧೬೩೫)

ಇಮ್ಮಡಿ ಹನುಮಪ್ಪನಾಯಕನ ಮಾನೇ ಸರ್ಜಾ ಹನುಮಪ್ಪನಾಯಕ (ನಿಚ್ಚಮದುವಣಿಗ, ಮುಮ್ಮಡಿ). ಇವನು ರಸಿಕ, ಸುಂದರ, ವಿಲಾಸಿಯಾಗಿದ್ದು, ಅನೇಕ ಮದುವೆಗಳನು ಮಾಡಿ ಕೊಂಡಿದ್ದರಿಂದ ನಿಚ್ಚಮದುವಣಿಗ ಎಂಬ ಹೆಸರು ಪ್ರಾಪ್ತವಾಯಿತಂತೆ. ಇವನು ಚಿತ್ರದುರ್ಗದ ನಾಯಕರ ಮೇಲೆ ಧಾಳಿ ಮಾಡಿದನಾದರೂ ಯಶಸ್ವಿಯಾಗದೆ ಮರಳಿ ಬಸಾಪಟ್ಟಣಕ್ಕೆ (೧೬೩೧) ಬರುತ್ತಾನೆ. ಬಿಜಾಪುರದ ಅರಸರೊಂದಿಗೆ ಈತನ ಸ್ನೇಹವಿತ್ತು. ವಿಜಯನಗರದ ವೆಂಕಟಪತಿ ಮಹಾರಾಯನು ಮಗರನಾಡನ್ನು ಅಮರ ಮಾಗಾಣಿಯನ್ನಾಗಿ ನೀಡಿರುವುದರಿಂದ ನಾಯಂಕಾರ ಪದ್ಧತಿಗೆ ಒಳಪಟ್ಟಿದ್ದಿತು. ಸವಣೂರನ್ನು ಗೆದ್ದು ತನ್ನ ರಾಜ್ಯದಲ್ಲಿ ಸೇರಿಸಿಕೊಳ್ಳುತ್ತಾನೆ. ಹೀಗೆ ದೇವಾಲಯ, ಕೆರೆ, ಕಟ್ಟೆ, ಬಾವಿ, ಮಠ ಮಾನ್ಯಗಳನ್ನು ಕಟ್ಟಿಸಿ ದಾನ ಮಾಡಿದ್ದು ನಿಜ. ಹನುಮಪ್ಪನಾಯಕನಿಗೆ ವಾರ್ಧಿಕ ಪ್ರಾಪ್ತಿಯಾಗುತ್ತಿದ್ದಂತೆ ಆತನ ಮಕ್ಕಳಲ್ಲಿ ಕಲಹವೇರ್ಪಟ್ಟು ಹಿರೇ ಕೆಂಗಹನುಮಪ್ಪ ಮತ್ತು ಚಿಕ್ಕ ಕೆಂಗಹನುಮಪ್ಪನವರಲ್ಲಿ ಮನಸ್ತಾಪ ಉಂಟಾಯಿತು. ಮೊದಲನೆಯನು ಕಡೂರಿಗೂ, ಚಿಕ್ಕವನು ಬಾಣವಾರಕ್ಕೂ ಹೋಗಿ ನೆಲಸುತ್ತಾರೆ. ಇವರಿಬ್ಬರಿಗೆ ಇಕ್ಕೇರಿ ಮತ್ತು ಚಿಕ್ಕನಾಯಕನಹಳ್ಳಿ ಇತರ ನೆರೆ ಹೊರೆಯ ಅರಸರು ಪ್ರೋತ್ಸಾಹ ಕೊಡುತ್ತಾರೆ. ತಾನು ಕಟ್ಟಿದ ರಾಜ್ಯ ತನ್ನ ಮಕ್ಕಳಿಂದಲೇ ಅವಸಾನಗೊಳ್ಳುತ್ತಿದ್ದುದನ್ನು ಕಂಡು ಮಮ್ಮಲ ಮರುಗುತ್ತಿದ್ದ ಹನುಮಪ್ಪನಾಯಕ.

ಹಿರೇ ಕೆಂಗಹನುಮಪ್ಪನಾಯಕ (೧೬೩೫-೧೬೩೮)

ಹಿರಿಯ ಕೆಂಗಹನುಮಪ್ಪನಾಯಕ ಸಂತೆಬೆನ್ನೂರು ಪಾಳೆಯಗಾರರಲ್ಲಿ ಸಮರ್ಥ ಅರಸ. ಸೈನ್ಯ, ಕಟ್ಟಿ, ಉತ್ತಮ ಆಡಳಿತ ನಡೆಸುವ ಜವಾಬ್ದಾರಿ ತಾಳುತ್ತಾನೆ. ನೆರೆಯ ಹೊರೆಯ ಅರಸರ ಸಹಾಕಾರಗಳಿಂದ ವಿರೋಧಿಗಳೊಂದಿಗೆ ಈ ಅರಸ ೧೬೩೬ರಲ್ಲಿ ಯುದ್ಧ ಮಾಡುತ್ತಾನೆ. ದಕ್ಷಿಣದ ಕಡೆ ದಂಡೆಯಾತ್ರೆ ಮಾಡುವಾಗ ಷಹಜಿ, ಬೇಲೂರು ವೆಂಕಟಾದ್ರಿನಾಯಕ, ಬಾಣಾವಾರದ ವೆಂಕಟಪತಿನಾಯಕ ಇವನೊಂದಿಗೆ ಸೇರಿಕೊಳ್ಳುತ್ತಾರೆ. ಅನೇಕರೊಂದಿಗೆ ಯುದ್ಧ ಮಾಡಿ (ಧಾಳಿ ಮತ್ತು ಲೂಟಿ) ಅಪಾರ ಸಂಪತ್ತನ್ನು ಸಂಪಾದಿಸಿಕೊಂಡು ರಾಜ್ಯ ವಿಸ್ತರಿಸುತ್ತಾನೆ.

ಚಿಕ್ಕ ಕೆಂಗಹನುಮಪ್ಪನಾಯಕ – ಸರ್ಜಾ ಹನುಮಪ್ಪನಾಯಕ (೧೬೩೮-೧೬೮೧)

ತರೀಕೆರೆಯನ್ನು ರಾಜಧಾನಿಯಾಗಿ ಮಾಡಿಕೊಂಡು ಆಳಿದವರ ಪೈಕಿ ಚಿಕ್ಕ ಕೆಂಗಹನುಮಪ್ಪನಾಯಕನೇ ಮೊದಲಿಗ. ಈತ ತನ್ನ ಅಣ್ಣ ಹಿರಿಯ ಕೆಂಗಪ್ಪನಾಯಕನನ್ನು ಬಂಧನ (ಬಿಜಾಪುಕ್ಕೆ ಕರೆದೊಯ್ಯುತ್ತಾರೆ) ದಿಂದ ಬಿಡಿಸಿಕೊಂಡು ಬರುವಲ್ಲಿ ಸಫಲನಾದ. ಸುಲ್ತಾನ ಆದಿಲ್‍ಶಾಹನನ್ನು ಮೆಚ್ಚಿಸಿ ಆತನಿಂದ ಸರ್ಜಾ (ಸಿಂಹ) ಎಂಬ ಬಿರುದನ್ನು ಪಡೆಯುತ್ತಾನೆ. ಇವರು ಸರ್ಜಾ ಎಂಬ ಬಿರುದನ್ನು ಬಳಸಿದರು. ನಾಯಕ ತರೀಕೆರೆಗೆ ಹಿಂದಿರುಗುವಾಗ ಸಂತೆಬೆನ್ನೂರನ್ನು ಆಕ್ರಮಣ ಮಾಡಿ ರಣದುಲ್ಲಾಖಾನ್ ಕಟ್ಟಿಸಿದ ಮಸೀದಿ, ಕೆರೆಯನ್ನು ಅಪವಿತ್ರಗೊಳಿಸಲು ಮುಂದಾದ.

ಈತ ಸಮರ್ಥ ಆಡಳಿತಗಾರನೆಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ತರೀಕೆರೆಯಲ್ಲಿ ಕೋಟೆ, ಅರಮನೆ, ಕೊಳ, ದೇವಾಲಯಗಳನ್ನು ಕಟ್ಟಿಸಿದ. ಕೆಲವು ದುರ್ಗ, ಗಿರಿಗಳನ್ನು ನಿರ್ಮಿಸಿ ಬಾಬಾಬುಡನ್ ಗಿರಿಯ ಮೇಲಿದ್ದ ಕಾಮನದುರ್ಗವನ್ನು ದುರಸ್ತಿ ಮಾಡಿಸಿದ. ಯೋಧ, ಮೃಗಯಾವಿಹಾರದಲ್ಲಿ ಈತನಿಗೆ ಅತ್ಯಾಸಕ್ತಿ. ಧರ್ಮ, ಸಾಹಿತ್ಯ, ಸಂಸ್ಕೃತಿ, ಕಲಾಪ್ರಿಯನಾಗಿದ್ದ ಈ ಅರಸ, ಕೃಷ್ಣಶರ್ಮ ಎಂಬ ಕವಿಯಿಂದ ‘ಶ್ರೀ ಸರ್ಜಾಹನುಮೇಂದ್ರ ಯಶೋವಿಲಾಸ’ ಎಂಬ ಕಾವ್ಯವನ್ನು ರಚಿಸಿದನು. ಅಂದಿನ ರಾಜಕೀಯ, ಸಾಂಸ್ಕೃತಿಕ ವಿವರಗಳು ಅದರಲ್ಲಿವೆ. ಈತನ ಆಳ್ವಿಕೆ ದೀರ್ಘವಾದುದು. ರಾಮಪ್ಪನಾಯಕ ಮತ್ತು ತಿಮ್ಮಪ್ಪನಾಯಕರೆಂಬ ಸಹೋದರರು ಇವರಿಗೆ ಇದ್ದರು. ಸಂತೆಬೆನ್ನೂರು ಕಾಳಗದಲ್ಲಿ ಇವರಿಬ್ಬರು ಮಡಿದರು. ಈತನ ಪತ್ನಿ ಗಂಗಾಂಬಿಕೆ. ಸೀತಾರಾಮಪ್ಪ ಮತ್ತು ಬಸವಪ್ಪ ಎಂಬ ಪುತ್ರರು ಇವರಿಗಿದ್ದರು. ಇತರ ಗ್ರಾಮಗಳನ್ನು ಆಕ್ರಮಿಸಿಕೊಂಡ. ನಂತರ ತರೀಕೆರೆಗೆ ಹೋಗಿ ಹನುಮಾಂಬೆಯನ್ನು ವಿವಾಹವಾದ ಮೇಲೆ ದ್ವೇಷ ಅಸೂಯೆಗಳು ಮಾಯವಾದವು.

ಕ್ರಿ.ಶ. ೧೬೮೩ರಲ್ಲಿ ತರೀಕೆರೆ ಪಾಳೆಯಗಾರ ಹನುಮಪ್ಪನಾಯಕನು ಜರಿಮಲೆಯಿಂದ ಚಿತ್ರದುರ್ಗದ ಗಡಿಗೆ ಬಂದು ಕಾದಾಟ ಮಾಡುತ್ತಿರಲು ಮದಕರಿನಾಯಕನು ಅವನನ್ನು ಓಡಿಸಿದನು. ಬಹುಶಃ ಆಗ ಸೋತು ಹೋದ ಹನುಮಪ್ಪನಾಯಕನು ತನ್ನ ಮಗಳು ಲಕ್ಷ್ಮೀಸಿರುವಂತಿ ಎಂಬ ಕನ್ಯೆಯನ್ನು ಮದಕರಿನಾಯಕನಿಗೆ ಕೊಟ್ಟು ವಿವಾಹ ಮಾಡಿದಂತೆ ಮದಕರಿ ರಾಜೇಂದ್ರ ದಂಡಕದಲ್ಲಿ ತಿಳಿದುಬರುತ್ತದೆ. ಈ ಕಾಲಮಾನಕ್ಕೂ ಅರಸನಿಗೂ ಎರಡು ವರ್ಷಗಳ ವ್ಯತ್ಯಾಸವಿದೆ. ಇದು ಪರಿಶೀಲನಾರ್ಹ.

ಸೀತಾರಾಮಯ್ಯನಾಯಕ (೧೬೮೧-೧೭೧೦)

ಸರ್ಜಾಹನುಮಪ್ಪನಾಯಕನ ಹಿರಿಯ ಮಗ ಸೀತಾರಾಮಪ್ಪನಾಯಕ. ತಂದೆಯ ನಂತರ ಅಧಿಕಾರಕ್ಕೆ ಬರುತ್ತಾನೆ. ಈತನಿಗೆ ಸೋಮಶೇಖರನಾಯಕನ ಅಭಯಹಸ್ತ ಇತ್ತು. ಅಕ್ಕ ಪಕ್ಕದ ಅರಸರೊಂದಿಗೆ ಸ್ನೇಹ ಗಳಿಸಿಕೊಂಡಿದ್ದನು.

ಪಟ್ಟಾಭಿರಾಮಪ್ಪನಾಯಕ (೧೭೧೦-೧೭೩೮)

ಸೀತಾರಾಮಪ್ಪನಾಯಕನ ಮಗ ಪಟ್ಟಾಭಿರಾಮಪ್ಪನಾಯಕ. ಇವನಿಗೆ ಬಿದನೂರಿನ ಅರಸ ಸೋಮಶೇಖರನಾಯಕ ಸೈನ್ಯ ಮತ್ತು ಹಣಕಾಸಿನ ತೊಂದರೆಯನ್ನು ನಿವಾರಿಸಿದ. ಈತನ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ.

೨ನೇ ಸರ್ಜಾ ಹನುಮಪ್ಪನಾಯಕ (೧೭೩೮-೧೭೬೪)

ಪಟ್ಟಾಭಿರಾಮಪ್ಪನ ಮಗ ೨ನೇ ಸರ್ಜಾ ಹನುಮಪ್ಪನಾಯಕ. ಉತ್ತರ ಭಾರತದಲ್ಲಿ ರಾಜಕೀಯ ಅಸ್ಥಿತರೆ ಉಂಟಾಯಿತು. ಬ್ರಿಟಿಷರ ಪ್ರವೇಶದಿಂದ ಸಂದಿಗ್ದ ಪರಿಸ್ಥಿತಿ ಹುಟ್ಟಿಕೊಂಡಿತು. ಹೈದರಾಬಾದಿನ ನಿಜಾಮ (ನಿಜಾಂ-ಉಲ್-ಮುಲ್ಕ್) ಕೆಟ್ಟ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿದ್ದ. ಪೂನಾದಲ್ಲಿ ಪೇಶ್ವೆಗಳದೇ ಪ್ರಬಲ ಶಕ್ತಿ. ದಕ್ಷಿಣ ಅರ್ಕಾಟಿನಲ್ಲಿ ನವಾಬರ ಒಳಜಗಳಗಳೇ ಹೆಚ್ಚಾಗಿದ್ದವು. ೧೭೬೩ರಲ್ಲಿ ಹೈದರ್ ಅಲಿ ತರೀಕೆರೆಗೆ ಮುತ್ತಿಗೆ ಹಾಕಿದ. ಸರ್ಜಾ ಹನುಮಪ್ಪನಾಯಕ ಇಂತಿಷ್ಟು ಕಷ್ಟ ನೀಡಿ ಕಳುಹಿಸಿದ.

ಸರ್ಜಾ ಕೃಷ್ಣಪ್ಪನಾಯಕ

ಕೃಷ್ಣಪ್ಪನಾಯಕ ಸರ್ಜಾ ಹನುಮಪ್ಪನಾಯಕರ ಹಿರಿಯ ಮಗ. ಕ್ರಿ.ಶ. ೧೭೪೩-೪೪ರಲ್ಲಿ ಇವನು ಜನಿಸಿರಬೇಕು. ಪತ್ನಿ ಲಕ್ಷ್ಮಮ್ಮನಾಗತಿ. ಈತ ತರೀಕೆರೆಯನ್ನು ಪಡೆಯಲು ವಿಫಲ ಹೋರಾಟ ನಡೆಸಿದನು. ಕೃಷ್ಣಪ್ಪನಾಯಕ ಇವನ ತಮ್ಮ ರಂಗಪ್ಪನಾಯಕ ಸೆರೆ ಸಿಕ್ಕಿದರಲ್ಲದೆ, ಮೈಸೂರಿನ ಸೆರೆಮನೆಯಲ್ಲಿರುವಾಗ ೪೧ನೇ ವಯಸ್ಸಿನಲ್ಲಿ ತೀರಿಕೊಂಡನು (೧೮೦೪).

ಸರ್ಜಾ ರಂಗಪ್ಪನಾಯಕ

ಅಪಾರ ಜನಪದ ಸಾಹಿತ್ಯ ಲಭ್ಯವಿರುವುದು ಈತನ ಬಗ್ಗೆಯೇ. ೧೭೭೪ರಲ್ಲಿ ಈತನ ಜನನ. ತಂದೆ ಕೃಷ್ಣಪ್ಪನಾಯಕ ತಾಯಿ ಸೀತಮ್ಮ ನಾಗತಿ. ತಿಮ್ಮಮ್ಮನಾಗತಿ ಈತನ ಪತ್ನಿ. ಈತನಿಗೆ ಅನೇಕ ಪತ್ನಿ-ಪುತ್ರರಿದ್ದರು. ಈತ ಸಮರ್ಥ ಸೇನಾನಿಯಾಗಿದ್ದು, ಆಂಗ್ಲರನ್ನು ಹೊರದೂಡಲು ಅಪಾರ ಹೋರಾಟ ನಡೆಸಿದ ಧೀಮಂತ ನಾಯಕ ಅರಸನೀತ. ಇವರ ಕಾಲಕ್ಕೆ ಬಂಡಾಯಗಳು ಆರಂಭವಾಗಿದ್ದವು. ಧೋಂಢಿಯಾವಾಘ್, ಬೇಲೂರಿನ ಕೃಷ್ಣಪ್ಪನಾಯಕ ಮತ್ತು ತರೀಕೆರೆಯ ರಂಗಪ್ಪನಾಯಕರು ಪ್ರಮುಖರು. ಸರ್ಜಾ ರಂಗಪ್ಪನಾಯಕ ಸು. ಇಪ್ಪತ್ತೈದು ವರ್ಷಗಳ ಕಾಲ ಸೆರ್ತೆಯಲ್ಲಿದ್ದುದಲ್ಲದೆ, ತಪ್ಪಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ. ಬಿದನೂರಿನ ವಾರಸುದಾರ ಬೂದಿ ಬಸವಪ್ಪನಾಯಕನ ನೆರವು ಈತನಿಗೆ ಪ್ರಾಪ್ತವಾಯಿತು (ಇನ್ನೊಂದು ಮೂಲದ ಪ್ರಕಾರ ಸರ್ಜಾ ರಂಗಪ್ಪನಾಯಕರು ಮೈಸೂರಿನ ೩ನೇ ಯುದ್ಧದಲ್ಲಿ ಭಾಗವಹಿಸಿದ್ದರು. ೧೭೮೨ರಲ್ಲಿ ಸರ್ಜಾ ಕೃಷ್ಣಪ್ಪನಾಯಕ ಮಂಜರಾಬಾದಿನಲ್ಲಿ ತೀರಿಕೊಂಡಾಗ ಈತನಿಗೆ ಚಿಕ್ಕ ವಯಸ್ಸು). ಹೀಗೆ ಹೋರಾಡುವಾಗ ಜಾಗರತರ್ಪುಗೊಣಕಲ್ಲು ಸೈನ್ಯದ ಠಾಣೆಯಲ್ಲಿ ಮರಣ ಹೊಂದಿದ. ಮೈಸೂರು ಸೈನ್ಯದ ೧೫೦೦ ಮಂದಿ ಬೇಡರ ಕಂದಾಯಚಾರದ ಸಿಪಾಯಿಗಳು ಸರ್ಜಾ ರಂಗಪ್ಪನಾಯಕರ ಪಕ್ಷಕ್ಕೆ ಬಂದರು.

ಸರ್ಜಾ ಹನುಮಪ್ಪನಾಯಕ

ಜನಮನದಲ್ಲಿ ಜೀವಂತ ಕುರುಹು ಆದವನು ಸರ್ಜಾ ಹನುಮಪ್ಪನಾಯಕ. ಇವನು ತರೀಕೆರೆ ಸಂಸ್ಥಾನಕ್ಕೊಂದು ಮಹಾ ತಿರುವೊಂದನ್ನು ಸೃಷ್ಟಿಸಿದ ಅರಸ. ತನ್ನೆಲ್ಲಾ ಬಂಧು. ಹಿತೈಷಿಗಳನ್ನು ತನ್ನ ತೆಕ್ಕೆಗೆ ಪಡೆದುಕೊಂಡು ಹೋರಾಟ ಮಾಡಿದನು. ಇವನ ತಂದೆ ಸರ್ಜಾ ರಂಗಪ್ಪನಾಯಕ. ಆತನ ಹಿರಿಯ ಮಗನೇ ಸರ್ಜಾ ಹನುಮಪ್ಪನಾಯಕ. ಇವನು ಮಹಾಶೂರ, ವೀರ, ಛಲಗಾರ ಅಷ್ಟೇ ಪರಾಕ್ರಮಿ. ಇವನ ಬಗ್ಗೆ ಜನಪದ ಸಾಹಿತ್ಯ ವ್ಯಾಪಕವಾಗಿ ಹುಟ್ಟಿಕೊಂಡಿದೆ. ‘ಸಾವಿರಾರು ಶಕುತಿಯೋನು ಮೂರಾನೆ ಬಲದೋನು’ ಎಂದೆಲ್ಲಾ ಬಣ್ಣಸಿದೆ. ಇವನ ಆರಂಭದ ದಿನಗಳಲ್ಲಿ ನಿಡಗಲ್ಲು ಭಸ್ಮಾಂಗಿಗಳ ಸಾಬಕು ಪಾಳೆಯಗಾರರು ಬಾಬಾಬುಡನ್ ಗಿರಿಯಲ್ಲಿದ್ದರು. ಮೈಸೂರು ದುರ್ಗವನ್ನು ತಮ್ಮ ಕೇಂದ್ರವಾಗಿಟ್ಟುಕೊಂಡು ಕಾರ್ಯ ಪ್ರವೃತ್ತರಾಗಿದ್ದರು. ಮೈಸೂರು ಅಧಿಕಾರಿಗಳ ಉಪಟಳದಿಂದ ಜನ ಬೇಸತ್ತಿದ್ದರು. ಬಂಡಾಯಗಾರರು ಸರ್ಕಾರದ ವಸೂಲಿ ಹಣವನ್ನು ದೋಚುತ್ತಿದ್ದರು. ಅಧಿಕಾರಿಗಳನ್ನು ಹೆಸರಿಸಿ ಬಂಡಾಯಗಾರರು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು. ಕೈಸೇರಿದ ಹಣದಲ್ಲಿ ಸ್ವಲ್ಪವನ್ನು ಜನಸಾಮಾನ್ಯರಿಗೆ ಹಂಚಿ, ತಮ್ಮ ಶಕ್ತಿ ಬಲಕ್ಕೆ ಬಂದೂಕು, ಮದ್ದು-ಗುಂಡು, ಕತ್ತಿ ಕಠಾರಿಗಳಿಗಾಗಿ ಬಳಸಿಕೊಂಡರು. ಜನರು ಸ್ವಯಂ ಸ್ಪೂರ್ತಿಯಿಂದ ಸೈನ್ಯಕ್ಕೆ ಸೇರಿ ಆಂಗ್ಲರ ವಿರುದ್ಧ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದರು. ಒಮ್ಮೆ ಮೈಸೂರು ದಿವಾನರು ಕಾಮನದುರ್ಗಕ್ಕೆ ಮುತ್ತಿಗೆ ಹಾಕಿದಾಗ ಬಂಡಾಯಗಾರರು ಹೋರಾಟ ನಡೆಸಿ ಅವರನ್ನು ಪರಾಭವಗೊಳಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಬ್ರಿಟಿಷರ ನೆರವಿನಿಂದ ಅಧಿಕಾರಕ್ಕೆ ಬಂದು ಕಾಮನದುರ್ಗದಲ್ಲಿ ಆದ ಸೋಲನ್ನು ತೀರಿಸಿಕೊಳ್ಳಲು ಹವಣಿಸುತ್ತಿದ್ದರು. ಈ ನಾಯಕನನ್ನು ಹತ್ತಿಕ್ಕಲು ಅಮೀಲ ಗೋವಿಂದರಾಯ ಇದರ ನೇತೃತ್ವ ವಹಿಸಿಕೊಂಡಿದ್ದ.

ಹೀಗಿರುವಾಗ ಸರ್ಜನಿಗೆ (ಹಾರುವ ಅಥವಾ ಬ್ರಾಹ್ಮಣ ಜಾತಿಗೆ ಸೇರುವ) ರಂಗಮ್ಮ ಎಂಬುವವಳೊಂದಿಗಿಗೆ ಪ್ರೇಮ(ಪ್ರೇಯಸಿ) ಸಂಬಂಧವಿದ್ದ ವಿಷಯ ತಿಳಿಯಿತು. ಹೂವಿನ ಹಳ್ಳಿಯಲ್ಲಿ ಅವಳ ವಾಸ. ಗೋವಿಂದರಾಯನಿಗೂ ಅವಳ ಪರಿಚಯವಿತ್ತು. ಸರ್ಜಪ್ಪನಾಯಕ ತನ್ನ ಸುಖದ ದಿನಗಳನ್ನು ಹೆಚ್ಚಾಗಿ ಅವಳೊಂದಿಗೆ ಕಳೆಯತೊಡಗಿದ್ದು, ವಿರೋಧಿಗಳ ಉಪಟಳಕ್ಕೆ ಆಸ್ಪದವಾಯಿತು. ಕಾಮನದುರ್ಗದ ಜವಾಬ್ದಾರಿಯಲ್ಲಿ ನೇತೃತ್ವವನ್ನು ಸರ್ಜಾನ ಅಣ್ಣ ಕೆಂಗಳನಾಯಕನು ವಹಿಸಿಕೊಂಡಿದ್ದನು. ಇಂಥಾ ಪರಿಸ್ಥಿತಿಯಲ್ಲಿ ಆಂಗ್ಲ ಅಧಿಕಾರಿಗಳು ಇವನ ಮೇಲೆ ಯುದ್ಧ ಸಾರಿದರು. ಸಾರ್ಜೆಂಟ್ ರಾಕ್ ಪೋರ್ಟ್ ಆಂಗ್ಲ ಸೇನಾಧಿಕಾರಿ ಮತ್ತು ಆಂಗ್ಲ ಮುಖ್ಯ ಸೇನಾಧಿಪತಿ ಕರ್ನಲ್ ಕಾನ್ ವೇಯರನನ್ನು ಇಲ್ಲಿಗೆ ನೇಮಿಸಿದ್ದರು. ಇವರೊಂದಿಗೆ ಸಾರ್ಜೆಂಟ್ ಮೆಕ್ ನೀರ್, ಸಾರ್ಜೆಂಟ್ ಸ್ಮಿತ್ ಇತರರು ಆಗಲೇ ಇಂಥ ಪ್ರಸಂಗಗಳನ್ನು ದಕ್ಷಿಣ ಭಾರದಲ್ಲಿ ಎದುರಿಸಿ ಜಯಶಾಲಿಗಳಾಗಿದ್ದರು. ಇತ್ತ ಸರ್ಜಾನೊಂದಿಗೆ ನಗರ ದಂಗೆಯಲ್ಲಿ ವಿಫಲರಾದ ೧೫೦೦ ಜನ ಬೇಡ ಪಡೆಯವರು ನಾಯಕರೊಂದಿಗೆ ಸೇರಿಕೊಂಡರು, ಮೈಸೂರು ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಒಂದು ಸಾವಿರ ಕಂದಾಚಾರದವರೂ ಸರ್ಜಪ್ಪನೊಂದಿಗೆ ಒಂದಾದರು. ಕಾಮನದುರ್ಗದ ಆಂತರಿಕ ಸ್ಥಿತಿ ಬ್ರಿಟಿಷರು ನಾಯಕನ ಗೈರಿಹಾಜರಿಯಲ್ಲಿ ಕಾಮನದುರ್ಗಕ್ಕೆ ಅಪಾರ ಸೈನ್ಯದೊಂದಿಗೆ ಮುತ್ತಿಗೆ ಹಾಕಿದರು.

ಇತ್ತ ಸೂಳೆ ನಿಂಗಮ್ಮನಿಗೆ ತಮ್ಮ ಬಾಂಧವರು ಆಸೆ-ಆಮಿಷಗಳನ್ನು ಒಡ್ಡಿ ತಮಗೆ ಸಹಕರಿಸುವಂತೆ ಪರಿವರ್ತಿಸಿದ್ದರು. ಅವಳಿಗೆ ಏನೆಲ್ಲಾ ಕೊಡುವ ಆಶ್ವಾಸನೆ ನೀಡದರಲ್ಲದೆ, ಆಕೆಯ ತಮ್ಮ ಮತ್ತು ತಾಯಿಯನ್ನು ಬಂಧನದಲ್ಲಿಟ್ಟಿದ್ದ ಕಾರಣಗಳಿಂದ ನಿಂಗಮ್ಮ ಅನ್ಯ ಮಾರ್ಗವಿಲ್ಲದೆ ಅವರ ತಾಳಕ್ಕೆ ಕುಣಿದಳು. ಅದರಂತೆ ಸರ್ಜಪ್ಪನಾಯಕನಿಗೆ ಊಟದಲ್ಲಿ ವಿಷ ಬೆರೆಸಿದಾಗ ಅದನ್ನು ಸೇವಿಸಿ ಮೂರ್ಛೆಹೋಗುತ್ತಾನೆ. ನಿರಾಯುಧನಾದ ನಾಯಕನನ್ನು ಕೊಲ್ಲಲು ಇದೇ ಸದಾವಕಾಶವೆಂದು ವಿರೋಧಿಗಳು ಅವನ ಆಯುಧಗಳನ್ನು, (ನಾಗರಮರಿ) ಖಡ್ಗ, ಸಂಗ್ರಹಿಸಿಕೊಂಡರು. ಆ ಮನೆಗೆ ಬೀಗ ಹಾಕಿದಾಗ ನಾಯಕ  ಮಂಚದ ಮೇಲೆ ಮಲಗಿದ್ದ. ಸುದ್ದಿ ಮೈಸೂರು ಸೇನೆಗೆ ತಿಳಿದು ಧಾವಿಸುವಷ್ಟರಲ್ಲಿ ನಾಯಕ ಮೂರ್ಛೆಯಿಂದ ಎಚ್ಚೆತ್ತು ಹೊರನಡೆಯಲು ಮುಂದಾದ. ತನಗಾದ ಮೋಸ ಅರಿತ ನಾಯಕ ಉಪ್ಪರಿಗೆಯಿಂದ ಜಿಗಿದು ಕಂದಕಕ್ಕೆ ಬೀಳುತ್ತಾನೆ. ಕಂದಕದಲ್ಲಿ ವಿರೋಧಿಗಳು ದಸೆಗಳನ್ನಿಟ್ಟಿರುತ್ತಾರೆ. ಇವುಗಳ ಮೇಲೆ ಬಿದ್ದ ನಯಕನಿಗೆ ಅಪಾರ (ನಿತ್ರಾಣ) ಬ್ರಿಟಿಷರು ಆತನನ್ನು ಬಂದಿಸಿ ಕರೆದೊಯ್ಯುತ್ತಾರೆ.

ಸರ್ಜನಿಗೆ ಪ್ರಜ್ಞೆ ಬಂದು ಚೇತರಿಕೆಯಿಂದಿರುವಾಗ ವಿಚಾರಣೆ ಆಗುತ್ತದೆ. ದೇಶಭಕ್ತ, ರಾಷ್ಟ್ರಪ್ರೇಮಿಯಾದ ಸರ್ಜನು ತನ್ನ ಕೆಲಸವನ್ನು ಪ್ರೀತಿಸುತ್ತಾನೆ. ವಿರೋಧಿಗಳ ಮಾತಿಗೆ ಸೊಪ್ಪು ಹಾಕುವುದಿಲ್ಲ. ಇದರಂತೆ ನಾಯಕನಿಗೆ ಗಲ್ಲು ಶಿಕ್ಷೆಯಾಗುತ್ತದೆ. ಬೆಂಗಳೂರು ಗುಟ್ಟಹಳ್ಳಿ ವನ ಪ್ರದೇಶದಲ್ಲಿ ಸರ್ಜಪ್ಪನಿಗೆ ಗಲ್ಲಿಗೆ ಹಾಕುತ್ತಾರೆ. ಎರಡು ಮೂರು ಬಾರಿ ಗಲ್ಲು ಶಿಕ್ಷೆ ಹಾಕಿದರೂ ನಾಯಕನ ಪ್ರಾಣ ಹೋಗುವುದಿಲ್ಲ! ಪರಕೀಯರಿಂದ ತನ್ನ ಪ್ರಾಣ ಹೋಗಬಾರದೆಂದು ತನ್ನ ನಡುಕಟ್ಟನ್ನು (ಉಡುದಾರ) ಬಿಚ್ಚಿ ಅದರಿಂದಲೇ ನೇಣು ಹಾಕಿಕೊಂಡು ಮಡಿಯುತ್ತಾನೆ. ಇವನ ಸಾವಿನ ನಂತರ ಬಂಧು-ಬಳಗ, ಸಂಗಡಿಗರು (ಸಹಗಮನ) ತಮ್ಮ ಕತ್ತಿಗಲಿಗೆ ಬಲಿಯಾಗುತ್ತಾರೆ. ಸರ್ಜನ ಪ್ರೇಯಸಿಯನ್ನು ರಂಗಮ್ಮ ಎಂದು ಕೆಲವು ಭಾಗಗಳಲ್ಲಿ ನಿಂಗಮ್ಮ ಎಂದು ಕಥನ ಗೀತೆಯಲ್ಲಿ ಹಾಕುತ್ತಾರೆ.

ಬ್ರಿಟಿಷರ ವಿರುದ್ಧ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಧೀರ ಸರ್ಜ ಹನುಮಪ್ಪನಾಯಕ. ಮೈಸೂರಿನ ಭಾಗದಲ್ಲಿ ಮತ್ತು ಕರ್ನಾಟಕದ ಚರಿತ್ರೆಯಲ್ಲಿ ಇವನಷ್ಟು ಹೋರಾಟ ನಡೆಸಿ ಮಡಿದ ವೀರ ಸಿಗುವುದು ಅಪರೂಪ. ಸ್ವಾತಂತ್ರ್ಯ ಹೋರಾಟದ ಪೂರ್ವದಲ್ಲಿ ಇಂಥ ವೀರಗಾಥೆಯನ್ನು ನಿರ್ಮಿಸಿದ ನಯಕನ ದುರಂತವು ಜನಪದರ ಕಣ್ಣೀರಲ್ಲಿ ಕಥೆಯಾಗಿ ಇಂದಿಗೂ ಜೀವಂತಗೊಂಡಿದೆ.

ಸರ್ಜಪ್ಪನಾಯಕ ಒಬ್ಬ ಸ್ವಾತಂತ್ರ್ಯ ಪ್ರೇಮಿ. ತನ್ನ ಪಾಳೆಯ ಪಟ್ಟಿನ ರಕ್ಷಣೆಗಾಗಿ ವಿರೋಧಿಗಳೊಂದಿಗೆ ವೈರತ್ವಕಟ್ಟಿಕೊಂಡಿದ್ದು ನಿಜ. ಆದರೆ ಬ್ರಿಟಿಷರಿಂದ ಪರಕೀಯರನ್ನು ಈ ನೆಲದಿಂದ ಓಡಿಸಲು ಇವನು ಅವಿರತ ಪರಿಶ್ರಮ ಪಟ್ಟಿದ್ದರಿಂದಲೇ ಅವನ ಅವಸಾನ ಆರಂಭವಾಗುತ್ತದೆ.

ಕ್ರಿ.ಶ. ೧೮೩೧ರಲ್ಲಿ ತರೀಕೆರೆ ಅರಸರ ಖಾಸಾ ವಂಶಿಕರಾದ ಸರ್ಜಾ ರಂಗಪ್ಪನಾಯಕರು, ಹನುಮಪ್ಪನಾಯಕರು ಇವರುಗಳು ಮೈಸೂರಿನ ಒಡೆಯರ ಮತ್ತು ಇಂಗ್ಲಿಷರ ವಿರುದ್ಧ ತಾಯ್ನಾಡಾದ ತರೀಕೆರೆ ಸಂಸ್ಥಾನದ ಸ್ವಾತಂತ್ರ್ಯಕ್ಕಾಗಿ ಸ್ವಾಭಿಮಾನದ ಆತ್ಮ ಗೌರವಕ್ಕಾಗೆ ಯುದ್ಧ ಘೋಷಿಸಿದಾಗ, ಆಗ ಮೈಸೂರಿನ ಒಡೆಯರ ಕೈಕೆಳಗೆ ಚಾಕರಿ ಮಾಡುತ್ತಿದ್ದ. ಈ ಹಿರೇಜಂಪಳ್ಳ ನಾಯಕರು ತರೀಕೆರೆ ಅರಸರು ಎಷ್ಟರವರು ಅವರನ್ನು ನಾನು ಹಿಡಿದು ಕೊಡುತ್ತೇನೆ ಎಂಬುದಾಗಿ ಆಗಿನ ಮೈಸೂರಿನ ದೊರೆ ಮುಮ್ಮಡಿ ಕೃಷ್ಣರಾಜ ಒಡೆಯರ ಮುಂದೆ ಹೊಗಳಿಕೊಂಡು ಸೇನೆಯ ಜೊತೆಗೆ ಹೋಗಿ ಯುದ್ಧದಲ್ಲಿ ಭಾಗವಹಿಸಿದಂತೆ (ಚಿತ್ರದುರ್ಗದ ಕಾಮಗೇತಿ ಅರಸರು, ೧೯೮೪, ಪು. ೨೮) ಈ ಕಾಮಗೇತಿ ಯುದ್ಧದಲ್ಲಿ ಒಡೆಯರು ಸೋತರಾದರೂ, ಯಾವ ಇಂಗ್ಲಿಷ್ ಸೈನ್ಯವು ತರೀಕೆರೆ ಮುತ್ತಿ ಪಾಳೆಯಗಾರರನ್ನು ಸೋಲಿಸುತ್ತಾರೆ. ಅಂದು ಸರ್ಜಾ ರಂಗಪ್ಪನಾಯಕನನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಕೆಲವರನ್ನು ಗೃಹಬಂಧನ ಮತ್ತು ಸೆರೆಮನೆಯಲ್ಲಿಟ್ಟಿದ್ದರು.

ಒಟ್ಟಾರೆ ಹೇಳುವುದಾದರೆ, ತರೀಕೆರೆ ನಾಯಕ ಅರಸರು ಸ್ವಾಭಿಮಾನಿ ಹಾಗೂ ಶೂರತ್ವ ಹೊಂದಿದವರಾಗಿದ್ದರು. ಇವರ ಪೂರ್ವಿಕರು ವಿಜಯನಗರ ಸಾಮ್ರಾಜ್ಯದಲ್ಲಿ ದಂಡನಾಯಕರುಗಳಾಗಿ ಯುದ್ಧದಲ್ಲಿ ಸೇವೆಸಲ್ಲಿಸಿದ್ದರು. ವಾಲ್ಮೀಕಿ ಜಾತಿಯ ಪುವ್ವಲಗೋತ್ರ (ಬೆಡಗಿನ) ವಂಶಜರಾಗಿರುವ ತರೀಕೆರೆಯವರು ಚಿತ್ರದುರ್ಗ, ನಾಯ್ಕನಹಟ್ಟಿ ಮೊದಲಾದವರೊಡನೆ ವೈವಾಹಿಕ ಸಂಬಂಧವಿಟ್ಟುಕೊಂಡಿದ್ದರು. ಧಾರ್ಮಿಕವಾಗಿ ಆಸಕ್ತರಾದ ಇವರು ರಾಮಚಂದ್ರ ದೇವರ ಪಾದ ಪಧ್ಮಾರಾದಕರಾಗಿದ್ದರು. ಹನುಮಂತ ದೇವರ ನಿಜಭಕ್ತರು, ಕೂಡ್ಲಿಶೃಂಗೇರಿಮಠವನ್ನು ೧೫೫೮ರ ಪೂರ್ವದಲ್ಲಿ ಈ ಅರಸರು ಸಂತೆಬೆನ್ನೂರು ರಾಜಧಾನಿಯಾಗಿರುವಾಗೇ ಕಟ್ಟಿಸಿಕೊಟ್ಟರು. ಈ ಜಗದ್ಗುರುಗಳ ಪರಮಭಕ್ತರಾದ ತರೀಕೆರೆ ಅರಸರು ಶ್ರೀಮಠಕ್ಕೆ ಅಪಾರವಾದ ದಾನದತ್ತಿ ಕಾಣಿಕೆಗಳನ್ನು ಸಲ್ಲಿಸಿ ಇದರ ಶ್ರೇಯೋಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ್ದರು.

ಸಮಕಾಲಿನ ಸ್ಥಿತಿ-ಗತಿ

ಸರ್ಜಪ್ಪನಾಯಕನ ಅವಸಾನವಾದ ಮೇಲೆ ತರೀಕೆರೆ ಪಾಳೆಯಗಾರರ ಸ್ಥಿತಿ ತುಂಬಾ ಶೋಚನೀಯ ಸ್ಥಿತಿ ತಲುಪಿತ್ತು. ಇವನ ತಂದೆಗೆ ಸರ್ಜಾಕೃಷ್ಣಪ್ಪನಾಯಕ ಮತ್ತು ಸರ್ಜಾ ಪಟ್ಟಾಭಿರಾಮಪ್ಪನಾಯಕರೆಂಬ ಇಬ್ಬರು ಪುತ್ರರು, ೩ನೆಯ ಪತ್ನಿಯಲ್ಲಿ ಕೆಂಗಳನಾಯಕನೆಂಬ ಮಗನಿದ್ದ. ಈ ಕೆಂಗಳನಾಯಕ ಬ್ರಿಟಿಷರ ವಿರುದ್ಧದ ಬಂಡಾಯದಲ್ಲಿ ಸೇರಿದ್ದು, ಅವರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡ. ಮುಂದಿನ ಸಂಗತಿಗಳು ಈ ಬಗ್ಗೆ ಬೆಳಕು ಚೆಲ್ಲುವುದಿಲ್ಲ. ಪಟ್ಟಾಭಿರಾಮಪ್ಪನಾಯಕನಿಗೆ ಹನುಮಪ್ಪನಾಯಕ ಮತ್ತು ರಂಗಪ್ಪನಾಯಕರೆಂಬ ಮಕ್ಕಳಿದ್ದರು. ಐದನೇ ಸರ್ಜಾಹನುಮಪ್ಪನಾಯಕನಿಗೆ ಸರ್ಕಾರವು ಜಹಗೀರ್ ನೀಡಿತ್ತಲ್ಲದೆ, ವಾರ್ಷಿಕಪೊಗದಿ ಕೊಡಲಾಯಿತು. ಬ್ರಿಟಿಷ್ ಸರ್ಕಾರವು ಇವನಿಗೆ ಪಲ್ಲಕ್ಕಿ, ನಿಶಾನೆ. ಬಿಚ್ಚುಗತ್ತಿ, ಪಾರಾಗಳ ಸವಲತ್ತುಗಳನ್ನು ನೀಡಲಾಗಿತ್ತು. ರಾಜ್ಯ, ವೈಭವ ಹೋದ ಮೇಲೆ ಅಳಿದುಳಿದ ಅವಶೇಷಗಳಷ್ಟೇ ಸಾಕ್ಷಿಯಾದವು. ಕ್ರಿ.ಶ. ೧೮೮೩ರಲ್ಲಿ ನಾಯಕ ಮರಣಹೊಂದಿದ.

ಇವನ ನಂತರ ಸರ್ಜಾ ಪಟ್ಟಾಭಿರಾಮಪ್ಪನಾಯಕ ಅಧಿಕಾರ ವಹಿಸಿಕೊಂಡ. ತಂದೆ-ತಾಯಿಯನ್ನು ಕಳೆದುಕೊಂಡ ಪಟ್ಟಾಭಿರಾಮಪ್ಪನಾಯ ಎಳೆಯವನಾದ ಕಾರಣ ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದ. ಹೀಗೆ ಬೆಳೆಯುವಾಗಲೇ ಚಿಕ್ಕಪ್ಪನೊಂದಿಗೆ ಮನಸ್ತಾಪವು ಬೆಳೆಯಿತು. ಯೌವನಕ್ಕೆ ಕಾಲಿರಿಸಿದ ನಾಯಕನಿಗೆ ಮದುವೆ ಹೋಗವು ಬಂದೊದಗಿತು. ಕೆಂಗುಂದಿ ಕುಪ್ಪಂ ಪಾಳೆಯಗಾರರ ಮನೆತನದ ತಿಮ್ಮಾಜಮ್ಮನಾಗತಿ ಎಂಬ ಇಂಗ್ಲೀಷ್ ವಿದ್ಯೆ ಕಲಿತ ಹೆಣ್ಣು ಪಟ್ಟಾಭಿರಾಮಪ್ಪ ನಾಯಕರ ಚಿತ್ರವನ್ನು  ನೋಡಿ ಅವರನ್ನು ಮೆಚ್ಚಿ ಮದುವೆಯಾಗಿ ಬಂದು, ಮನೆಯಲ್ಲಿ ಇಂಗ್ಲೀಷ್ ಸಂಸ್ಕೃತಿಯನ್ನು ಪ್ರತಿಪಾದಿಸಿದ್ದರಿಂದ ವಿರಸಕ್ಕೆ ಕಾರಣವಾಯಿತು. ಇವಳು ನೀಲಗಿರಿ ಪ್ರದೇಶದ (ತಮಿಳುನಾಡು) ಬ್ರಿಟಿಷ್ ಸರ್ಕಾರದ ಸಹಾಯ, ಉಸ್ತುವಾರಿಯಲ್ಲಿ ಬೆಳೆದಳು. ಆಧುನಿಕ ಶಿಕ್ಷಣ ಪಡೆದ ಈನಾಗತಿ ತಮ್ಮ ಪಿತ್ರಾರ್ಜಿತ ಆಸ್ತಿಗಾಗಿ ದಾವೆ ಹೂಡುವಲ್ಲಿ ತನ್ನ ಚಾಣಾಕ್ಷತೆಯನ್ನು ತೋರಿಸುತ್ತಾಳೆ. ಈ ಹಂತದಲ್ಲಿ ಪಟ್ಟಾಭಿರಾಮಪ್ಪನ ಚಿಕ್ಕಪ್ಪನಾದ ರಂಗಪ್ಪನಾಯಕನ ಮಗ ಡೋಲಾಯಮಾನವಾಗಿತ್ತು. ಆದರೂ ಆತ ತನ್ನ ಅಳಿಯ ಕುಪ್ಪಂನ ವೆಂಕಟಗಿರಿನಾಯಕರ ಮಗ ಸುಬ್ರಾಜುನಾಯಕನಿಗೆ ಹಾಗೂ ಕೋರ್ಟಿನಲ್ಲಿ ಪಟ್ಟಾಭಿರಾಮಪ್ಪನ ಪರವಹಿಸಿದ್ದ. ಪಟ್ಟಾಭಿರಾಮಪ್ಪ ತಿಮ್ಮಾಜಮ್ಮನ ಪ್ರತಿವಾದಿಯಾಗಿದ್ದ. ಹಾಗಾಗಿ ಇವರ ನಡುವೆ ಮನಸ್ತಾಪ ದಿನೇ ದಿನೇ ಉಲ್ಬಣಗೊಂಡಿತು. ಅನೇಕ ಬಗೆಯಕಿರುಕುಳಗಳು ನಡೆದವು. ರಂಗಪ್ಪನಾಯಕರ ಮೇಲೆ ಹಲ್ಲೆ ಸಹಾ ನಡೆಯಿತು. ಅಳಿಯನಾಗಿದ್ದ ಸುಬ್ರಾಜುನಾಯಕನು ತಾನು ಹಿಂದೆ ತರೀಕೆರೆಯವರಿಗೆ ಸಾಲಕೊಟ್ಟಿದ್ದಕ್ಕೆ ದಾವಾ ಹೂಡಿದ್ದ. ಈ ದಾವೆಯಲ್ಲಿ ಮಾವನೇ ಅಳಿಯನ ಪರ ಸಾಕ್ಷಿ ಹೇಳಿದುದರಿಂದ ಸುಬ್ರಾಜುನಾಯಕರ ಪರವಾಗಿ ಕೇಸು ಗೆದ್ದಿತು. ಈ ಗೆಲುವಿನ ತರುವಾಯು ತರೀಕೆರೆ ಅರಮನೆ ಮತ್ತು ಆಸ್ತಿ ಹರಾಜಾಗುತ್ತದೆ. ಹರಾಜಿನಲ್ಲಿ ಎಲ್ಲವನ್ನು ಕಳೆತುಕೊಂಡ ಪಟ್ಟಾಭಿರಾಮಪ್ಪನಾಯಕ ತರೀಕೆರೆ ಹೊರಗೆ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ. ಬಹುಶಃ ಅಂದಿನಿಂದಲೇ ಇರಬೇಕು ಅದಕ್ಕೆ ಪಾಳೆಯಗಾರ ಕ್ಯಾಂಪ್ ಎಂದು ಕರೆಯುತ್ತಾರೆ. ತರೀಕೆರೆಯ ಸಮಸ್ತ ಆಸ್ತಿಯನ್ನು ಚಿತ್ರದುರ್ಗ ವೈಶ್ಯರೊಬ್ಬರು ಕೊಂಡರಾದರು ಅದರಿಂದ ಯಾವ ಲಾಭ ಪಡೆಯದೇ ಅರಮನೆಯನ್ನು ನಾಶಪಡಿಸಲಾಯಿತು.

ಹತ್ತನೇ ಸರ್ಜಹನುಮಪ್ಪನಾಯಕ

ಪಟ್ಟಾಭಿರಾಮಪ್ಪನಿಗೆ ಹನುಮಪ್ಪನಾಯಕ ಎಂಬ ಮಗ ಇದ್ದ. ಇವನು ಚಿಕ್ಕವನಿರುವಾಗಲೇ ತಂದೆ-ತಾಯಿಗಳಿಬ್ಬರು ಮರಣ ಹೊಂದಿದ್ದರು. ಆಗ ಸರ್ಕಾರವೇ ಈತನನ್ನು ಸಾಕಬೇಕಾಯಿತು. ಹೀಗೆ ಇವನು ಬೆಳೆದು ದೊಡ್ಡವನಾದ ಮೇಲೆ ೫೦ ಸಹಸ್ರ ರೂಪಾಯಿಗಳ ಸಂಚಿತ ನಿಧಿ ದೊರೆಯುತ್ತದೆ. ಇದರಿಂದ ಸ್ವಲ್ಪ ಚೇತರಿಸಿಕೊಂಡಾನಾದರೂ ಪಿತ್ರಾರ್ಜಿತ ಆಸ್ತಿ ಪರಾಧೀನವಾದದ್ದನ್ನು ಖಂಡಿಸಿ ದಾವೆ ಹೂಡಿ ಸೋಲಬೇಕಾಗುತ್ತದೆ. ಈತನ ಹಕ್ಕು ಕೋರ್ಟಿನಲ್ಲಿ ಸಕಾಲಕ್ಕೆ ದಾವೆ ಹೂಡದ ಕಾರಣ ಅಪಾರ ಹಣ ಖರ್ಚು ಮಾಡಿ ಕೈಸುಟ್ಟುಕೊಂಡರು. ನಿಷ್ಕಪಟ, ವ್ಯಾಯಮ ಪಟುವಾಗಿದ್ದ ಪಟ್ಟಾಭಿರಾಮಪ್ಪ ಅನೇಕ ಕ್ರೀಡೆಗಳಲ್ಲಿ ಆಸಕ್ತನಾಗಿದ್ದನು. ಇವನು ಕುಪ್ಪಂ ಸಾವಿತ್ರಮ್ಮಳನ್ನು ಮದುವೆಯಾಗಿದ್ದನು. ಮಕ್ಕಳಾಗದ ಕಾರಣ ನಿಧನರಾದರು. ಮಕ್ಕಳಿಲ್ಲದೆ. ಮೊದಲ ಹೆಂಡತಿ ತೀರಿದ ನಂತರ ಶುಂಡಿಯ ಮಾದಮ್ಮ ನಾಗತಿಯನ್ನು ಎರಡನೆ ಮದುವೆ ಮಾಡಿಕೊಂಡರು. ಅವಳು ತವರಿನಲ್ಲೇ ಉಳಿದಳು. ಕೊನೆಗೆ ಮೂರನೇ ವಿವಾಹವನ್ನು ಚಿತ್ರದುರ್ಗದ ಬಿಚ್ಚುಗತ್ತಿ ಮದಕರಿನಾಯಕರ ಮಗಳು ಯಶೋಧಮ್ಮ ನಾಗತಿಯನ್ನು ಮಾಡಿಕೊಂಡರು.

ಯಶೋಧಮ್ಮ ನಾಗತಿ

ಈ ಯಶೋಧಮ್ಮ ನಾಗತಿ ಸುಂದರವಾಗಿದ್ದು, ಸರಳ ಮತ್ತು ಸಾತ್ವಿಕ ಸ್ವಭಾವದವಳು. ಹುಟ್ಟಿದ ಚಿತ್ರದುರ್ಗಕ್ಕೂ ಬೆಳೆದ ತರೀಕೆರೆಗೂ ಕೀರ್ತಿ ತಂದ ಮಹಾಸಾದ್ವಿ ಶಿರೋಮಣಿ ಈ ಯಶೋಧಮ್ಮ ನಾಗತಿ. ಪಾಳೆಯ ಪಟ್ಟಿನ ಅಧಿಕಾರಗಳನ್ನು ಬಹಳ ದಕ್ಷತೆ, ಜವಾಬ್ದಾರಿಯಿಂದ ನೋಡಿಕೊಳ್ಳುತ್ತಿದ್ದಳು. ಇವಳಿಗೆ ಮಕ್ಕಳಿಲ್ಲದ ಕಾರಣ ಸರ್ಜಾ ಪಟ್ಟಾಭಿರಾಮಪ್ಪ ಎಂಬ ಬಾಲಕನನ್ನು ದತ್ತು ತೆಗೆದುಕೊಂಡರು. ಈ ಬಾಲಕ ಅಕಾಲಮರಣಕ್ಕೆ ತುತ್ತಾದ. ಅಲ್ಲದೆ, ತಮ್ಮ ಪತಿ ಹನುಮಪ್ಪನಾಯಕರು ೧೯೪೭ರಲ್ಲಿ ತೀರಿಕೊಂಡರು. ಈ ಎರಡು ಘಟನೆಗಳಿಂದ ರಾಣಿ ಬಹಳಷ್ಟು ನೊಂದು-ಬೆಂದರು ಸಹನೆ ಮತ್ತು ತಾಳ್ಮೆಯಿಂದ ಜೀವನ ನಡೆಸಿದಳು. ತರೀಕೆರೆ ಪಾಳೆಯಗಾರರ ಚರಿತ್ರೆಯನ್ನು ಸಮಗ್ರವಾಗಿ ಸಂಗ್ರಹಿಸಿ, ಬರೆಯಿಸಿ ಪ್ರಕಟಿಸುವ ಪ್ರಾಪ್ತಿಯಾದಾಗ ಎಲ್ಲಾ ಆಸ್ತಿಯನ್ನು ತಮ್ಮ ತವರು ಮನೆಯ ರಾಜಗುರುಗಳಾದ ಶ್ರೀ ಜಗದ್ಗುರು ಮುರುಘರಾಜೇಂದ್ರ ಸ್ವಾಮಿಗಳು ಬೃಹನ್ಮಠ ಚಿತ್ರದುರ್ಗಕ್ಕೆ ಕೊಟ್ಟರು. ಕೊನೆಯ ದಿನಗಳನ್ನು ಚಿತ್ರದುರ್ಗದಲ್ಲೇ ಕಳೆದು ಇವಳು ಕೊನೆಯುಸಿರೆಳೆದಳು. ಹೀಗೆ ಏಳು-ಬೀಳುಗಳ ನಡುವೆ ತರೀಕೆರೆ ಪಾಳೆಯಗಾರರ ಚರಿತ್ರೆ ಎಷ್ಟು ಭವ್ಯ, ಅಮೋಘವೋ ಇಂದು ಸ್ಮಾರಕಗಳಷ್ಟೇ ಮೂಕಸಾಕ್ಷಿಗಳಾಗಿ ಸ್ಮರಿಸುತ್ತವೆ ತರೀಕೆರೆಯ ಚರಿತ್ರೆಯನ್ನು. ತರೀಕೆರೆ ಪಾಳೆಯಗಾರರ ವಂಶಸ್ಥರು ಇಂದಿಗೂ ಪಾಳೆಯಗಾರ ಕ್ಯಾಂಪ್ ತರೀಕೆರೆಯಲ್ಲಿ ನೆಲಸಿದ್ದಾರೆ. ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಎಸ್.ಪಿ. ಆಗಿರುವ ರಂಗಸ್ವಾಮಿನಾಯಕರು ಈ ವಂಶಸ್ಥರೇ ಆಗಿದ್ದಾರೆ.