ತರೀಕೆರೆ ಪಾಳೆಯಗಾರರು ಮೂಲತಃ ಬಸವಾಪಟ್ಟಣ, ಸಂತೆಬೆನ್ನೂರುಗಳಲ್ಲಿ ರಾಜ್ಯಾಳ್ವಿಕೆ ಮಾಡಿದ ನಂತರ ತರೀಕೆರೆಯನ್ನು ರಾಜಧಾನಿಯಾಗಿ ಮಾಡಿಕೊಂಡು ಎರಡು ಶತಮಾನಗಳಿಗೂ ಹೆಚ್ಚು ಕಾಲ ಆಳ್ವಿಕೆ ನಡೆಸುತ್ತಾರೆ. ಈ ಪಾಳೆಯಗಾರರಲ್ಲಿ ಚಿಕ್ಕ ಕೆಂಗ ಹನುಮಪ್ಪನಾಯಕ, ಸೀತಾ ಹನುಮಪ್ಪನಾಯಕ, ಪಟ್ಟಾಭಿರಾಮಪ್ಪನಾಯಕ, ಎರಡನೇ ಸರ್ಜಾ ಹನುಮಪ್ಪನಾಯಕ, ಸರ್ಜಾ ಕೃಷ್ಣಪ್ಪನಾಯಕ, ಸರ್ಜಾ ರಂಗಪ್ಪನಾಯಕ ಮತ್ತು ಸರ್ಜಾ ಹನುಮಪ್ಪನಾಯಕರು ಬ್ರಿಟಿಷರ ವಿರುದ್ಧ ಹೋರಾಡುವಾಗಲೇ ಹುತಾತ್ಮನಾಗುವುದು ವಿಷಾದನೀಯ ಸಂಗತಿ. ಈ ಘಟನೆ ಚರಿತ್ರೆ ಮತ್ತು ಇತರ ಶೈಕ್ಷಣಿಕ ಕ್ಷೇತ್ರಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜನಪದ ಸಾಹಿತ್ಯ, ಕಥೆ, ಲಾವಣಿಗಳಲ್ಲಿ ಸರ್ಜಪ್ಪನಾಯಕನನ್ನು ವರ್ಣಿಸಿರುವುದರ ಬಗ್ಗೆ ಕಳೆದ ಒಂದು ಶತಮಾನದಿಂದಲೂ ಸಾಹಿತ್ಯಕೃಷಿ ನಡೆದಿದೆ. ಪಾಳೆಯಗಾರನೊಬ್ಬನ ಬಗೆಗೆ ದ್ವಂದ್ವ, ತೀವ್ರವಾದ ವರ್ಣನೆಗಳಿಂದ ಕೂಡಿದ್ದು, ದುರಂತ, ಹಿಂಸೆ, ಕಪಟತನ, ಮೋಸ, ಕುತಂತ್ರ, ಸಂಚು ಮೊದಲಾದ ಕೃತ್ಯವನ್ನು ವಿರೋಧಿಗಳು ಮಾಡುತ್ತಾರೆ. ರಾಜನನ್ನು ಮೋಸದಿಂದ ಕೊಲ್ಲುವ ಪ್ರಯತ್ನಗಳು ಜನಪದರಲ್ಲಿ ಕರುಣರಸವನ್ನು ಉಕ್ಕಿಸಿದಂತೆ ಅವರ ಹಾಡು, ಲಾವಣಿ, ಕಥನಗಳಲ್ಲಿ ವ್ಯಕ್ತವಾಗಿದೆ. ಈ ಕುರಿತಂತೆ ಕನ್ನಡ ಸಾಹಿತ್ಯ, ಜನಪದ ಕ್ಷೇತ್ರಗಳಲ್ಲಿ ಸಾಕಷ್ಟು ಕೃಷಿ ನಡೆದಿದೆ.

ಇಲ್ಲಿ ಗಮನಿಸುವ ಸಂಗತಿಯೆಂದರೆ ಉತ್ತರ ಕರ್ನಾಟಕದಲ್ಲಿ ಮತ್ತು ಸರ್ಜಪ್ಪನಾಯಕನ ಸಮುದಾಯದವರೇ ತಮ್ಮ ಪಾಳೆಯಗಾರನ ಬಗ್ಗೆ ಕಥನವನ್ನು ಕಟ್ಟಿಹಾಡುವುದು ಹೊಸ ವಿಷಯ. ಹೀಗಾಗಿ ಹೊಸ ಪಾಠಕ್ಕೆ ಆಸ್ಪದ ನೀಡಿದಂತಾಗಿದೆ. ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳ ಗಡಿಭಾಗದ ಚಿನ್ನಹಗರಿ ನದಿ ಪ್ರದೇಶದಲ್ಲಿ ಮ್ಯಾಸಬೇಡ ಬುಡಕಟ್ಟಿನ ಜನ ಸರ್ಜಪ್ಪನಾಯಕನನ್ನು ಕುರಿತು ನಿರರ್ಗಳವಾಗಿ, ಅದ್ಭುತವಾಗಿ ರಾತ್ರಿಯಿಡೀ ಹಾಡುತ್ತಾರೆ. ಈ ಕಥನ ಕಟ್ಟಿದವರು ತರೀಕೆರೆ, ಹಾಸನ, ಚಿಕ್ಕಮಗಳೂರು ಕಡೆ ಕಾಫಿ ತೋಟಗಳಲ್ಲಿ, ಗದ್ದೆಗಳಲ್ಲಿ ಕೂಲಿ ಮಾಡಿ ಬಂದವರಾಗಿದ್ದಾರೆ. ಹಾಗಾಗಿ ಭೌತಿಕವಾಗಿ, ಚಾರಿತ್ರಿಕವಾಗಿ, ಅವರು ಪ್ರಜ್ಞಾಪೂರ್ವಕವಾಗಿಯೇ ಸರ್ಜಪ್ಪನಾಯಕನನ್ನು ವಾಸ್ತವ ಪ್ರಪಂಚಕ್ಕೆ ಪರಿಚಯಿಸುತ್ತಾರೆ.

ಭಾರತದಲ್ಲಿ ವಿದೇಶಿಯರನ್ನು ದೇಶಿಯರು ಆದಿಯಿಂದಲೂ ವಿರೋಧಿಸುತ್ತಾ ಪ್ರತಿಭಟಿಸುತ್ತಾ ಬಂದಿರುವುದು ಹೊಸ ಸಂಗತಿಯೇನಲ್ಲ. ಆರ್ಯರು ಭಾರತಕ್ಕೆ ಪ್ರವೇಶಿಸಿದಾಗ ಅನಾರ್ಯರಾದ ದ್ರಾವಿಡರು, ಶಬರ, ಪುಳಿಂದ, ನಿಷಾದರು ಅವರ ವಿಸ್ತರಣೆಗೆ ತಡೆಯೊಡ್ಡಿದ ಘಟನೆಗಳನ್ನು ರಾಹುಲ ಸಾಂಕೃತ್ಯಾಯನ ತನ್ನ ಕೃತಿಗಳನ್ನು ವಿವರಿಸಿರುವರು. ಮಧ್ಯಕಾಲದಲ್ಲಿ ಮಹಮದಿಯರನ್ನು ಕಮ್ಮಟದುರ್ಗದ ಅರಸ ಕಂಪಿಲನ ಮಗ ಕುಮಾರರಾಮನು ಹಿಮ್ಮೆಟ್ಟಿಸಿದ್ದು ಶ್ಲಾಘನೀಯ. ಆಧುನಿಕ ಸಂದರ್ಭದಲ್ಲಿ ಬ್ರಿಟಿಷರನ್ನು ಇಲ್ಲಿಂದ ಹೊರದೂಡಿಸಲು ನಡೆಸಿದ ಪ್ರಯತ್ನಗಳು ಹಲವು. ಬ್ರಿಟಿಷರ ಕಪಿಮುಷ್ಟಿಯಿಂದ ಹೊರಬರಲು, ದಾಸ್ಯತನದಿಂದ ವಿಮೋಚನೆಗೊಳಿಸಲು ಸಣ್ಣಪುಟ್ಟ ದಂಗೆಗಳಾಗಿರುವುದು ಮಹಾಪರಿವರ್ತನೆಗೆ ಕಾರಣ. ಬ್ರಿಟಿಷರ ಶಸ್ತ್ರಾಸ್ತ್ರ ನಿಷೇಧ ಕಾಯ್ದೆ ವಿರೋಧಿಸಿ ಹಲಗಲಿ ಬೇಡರ ದಂಗೆ ಇಡೀ ದಕ್ಷಿಣ ಭಾರತದಲ್ಲಿ ಬ್ರಿಟಿಷರಿಗೆ ಕಲಿಸಿದ ಮೊದಲ ಪಾಠ ಎಂದರೆ ತಪ್ಪಲ್ಲ. ಆದರೂ ಬುಡಕಟ್ಟು ಜನರಾದ ಜಡಿಗ್ಯಾ, ಬಾಳ್ಯ ಇತರರು ಹುತಾತ್ಮರಾದುದು (ಗಲ್ಲಿಗೇರಿಸಿ) ಬ್ರಿಟಿಷರ ವಿರುದ್ಧ ದಂಗೆಗೆ ನಾಂದಿ ಹಾಡಿದಂತಾಯಿತು. ಹಾಗೆಯೇ ಸುರಪುರದ ರಾಜ ವೆಂಕಟಪ್ಪನಾಯಕನು ಇಡೀ ಚಿಕ್ಕವಯಸ್ಸಿನಲ್ಲಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಹುತಾತ್ಮರಾಗಿರುವುದು ದುರಂತವೇ ಸರಿ. ಹೀಗೆ ಎಚ್ಚಮನಾಯಕ, ಐಗೂರು ದೊರೆ ವೆಂಕಟಾದ್ರಿನಾಯಕ, ಕರ್ನಾಟಕ ಮಹಾರಾಷ್ಟ್ರ ಗಡಿಭಾಗದ ಉಮಾಜಿರಾವ್ ನಾಯಕ, ಕಾರುಗಾನಹಳ್ಳಿಮಾನಾಯಕ, ಚಿತ್ರದುರ್ಗದ ರಾಜಾ ವೀರಮದಕರಿ ನಾಯಕ, ತರೀಕೆರೆಯ ಸರ್ಜಾ ರಂಗಪ್ಪನಾಯಕ, ಸರ್ಜಾ ಹನುಮಪ್ಪನಾಯಕ ಸ್ವಾತಂತ್ರ್ಯ ವೀರ ಮಹಾದೇಶಪ್ರೇಮಿ ವೀರಸಿಂಧೂರ ಲಕ್ಷ್ಮಣ ಮೊದಲಾದವರು ನಾಡು, ನುಡಿ, ದೇಶಪ್ರೇಮಕ್ಕಾಗಿ ಪ್ರಭುತ್ವಗಳ ವಿರುದ್ಧ, ಅನ್ಯಾಯದ ವಿರುದ್ಧ ಹೋರಾಟ ಮಾಡಿದ್ದು ಸ್ಮರಣೀಯ.

ಕರ್ನಾಟಕದಲ್ಲಿ ಬ್ರಿಟಿಷರನ್ನು ಹೊರದೂಡಿಸಲು (ಸದೆ ಬಡಿಯಲು) ಪಣತೊಟ್ಟವರೆಂದರೆ ಅನೇಕರು. ಅವರು ಹೈದರ್, ಟಿಪ್ಪು, ಹಲಿಗಲಿ ಬೇಡರು ತರುವಾಯ ಸುರಪುರದ ನಾಯಕರು, ವೀರ ಸಿಂಧೂರ ಲಕ್ಷ್ಮಣರನ್ನು ಹೆಸರಿಸಬಹುದು. ಈ ಮೂರು ಘಟನೆಗಳು ಉತ್ತರ ಕರ್ನಾಟಕಕ್ಕೆ ಸೀಮಿತವಾಗಿದ್ದರೆ. ದಕ್ಷಿಣ ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ಕಣಕಹಳೆ ಊದಿದವರು ತರೀಕೆರೆ ಸರ್ಜಾ ರಂಗಪ್ಪನಾಯಕ ಮತ್ತು ಸರ್ಜಾ ಹನುಮಪ್ಪನಾಯಕರು. ವಿಶೇಷವಾಗಿ ಪಾಳೆಯಗಾರರು ಹೈದರ್, ಸುಲ್ತಾನರನ್ನು ವಿರೋಧಿಸಿದಂತೆ ಬ್ರಿಟಿಷರನ್ನು ವಿರೋಧಿಸಿದ್ದ ಕೀರ್ತಿ ತರೀಕೆರೆಯವರಿಗೆ ಸಲ್ಲುವುದು.

ಬ್ರಿಟಿಷರ ಆಡಳಿತ ವಿರೋಧಿ ಕರ್ನಾಟಕದಲ್ಲಿ ದಂಗೆಯ ಕೂಗು ಎಲ್ಲರನ್ನು ಜಾಗೃತಗೊಳಿಸಿತು. ದೊಂಡಿಯ ವ್ಯಾಘ ಮೊದಲಾದವರು ಮೈಸೂರು ಒಡೆಯರನ್ನು ಮತ್ತು ಬ್ರಿಟಿಷರನ್ನು ಸಮಾನವಾಗಿ ವಿರೋಧಿಸಿದರು. ತರೀಕೆರೆ ನಾಯಕನಂತೆ ಅನೇಕ ಪಾಳೆಯಗಾರರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು. ಉಸಿರುಕಟ್ಟುವ ವಾತಾವರಣದ ನಡುವೆ, ಅವರ ಸೊಲ್ಲುಗಳನ್ನು ಗಮನಿಸುವ, ಅವರ ಬೇಡಿಕೆಯನ್ನು ಪೂರೈಸುವ ಉದಾರತೆ ಇಲ್ಲದಾಯಿತು. ಇಂಥ ವಿಷಮ ಸ್ಥಿತಿ ಬ್ರಿಟಿಷರ ಪಾಲಿಗೆ ಮುಳುವಾಯಿತು. ದೇಶಿಯ ಸಂಸ್ಥಾನಿಕರನ್ನು ಹತ್ತಿಕ್ಕುವ ಪ್ರಯತ್ನ ನಡೆಯಿತು. ತರೀಕೆರೆಯ ಅರಸ, ಸರ್ಜಾ ಹನುಮಪ್ಪನಾಯಕನ ಬಗೆಗೂ ಇದೇ ಅನ್ವಯಿಸುತ್ತದೆ.

ಮುಖ್ಯಾಂಶಗಳು

೧. ಸರ್ಜಾ ಹನುಮಪ್ಪನಾಯಕನ ತಂದೆ ಸರ್ಜಾ ರಂಗಪ್ಪನಾಯಕ (೧೮೩೧-೩೭) ಮಡಿದ ತರುವಾಯ, ಸರ್ಜಾ ಹನುಮಪ್ಪನಾಯಕನನ್ನು ಬೆಂಗಳೂರಿಗೆ ಕರೆದೊಯ್ಯಲಾಯಿತು. ಕ್ರಿ.ಶ. ೧೮೩೪ರಲ್ಲಿ ಗುಟ್ಟಹಳ್ಳಿ ಅರಮನೆ ಪರಿಸರದ ವನ ವಿಹಾರದಲ್ಲಿ ಈತನಿಗೆ ಮೂರು ಬಾರಿ ಗಲ್ಲಿಗೇರಿಸಿದರು ಪ್ರಾಣ ಹೊಗಲಿಲ್ಲವಾದ ಕಾರಣ ಪ್ರಾಣದಾನ ನೀಡಿದ ಬ್ರಿಟಿಷರನ್ನು ವಿರೋಧಿಸಿ ತನ್ನ ಕೈಯಿಂದಲೇ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿರುತ್ತಾನೆ. ಹೀಗೆ ಹುತಾತ್ಮನಾಗುವುದು ಸರ್ಜಾ ಹನುಮಪ್ಪನಾಯಕನ ವಾಸ್ತವ ಘಟನೆಯಾಗಿದ್ದರೂ ಒಮ್ಮೆ ತಾಭಿಪ್ರಾಯವಿಲ್ಲ.

೨. ಚರಿತ್ರೆಯಲ್ಲಿ ಈ ಘಟನೆ ನಿಖರವಾದ ಸ್ವರೂಪ ತಳೆದಿಲ್ಲ.

೩. ಜನಪದ ಸಾಹಿತ್ಯದಲ್ಲಿ ವಿಶೇಷವಾಗಿ ಕಥನ, ಲಾವಣಿಗಳಲ್ಲಿ ದಂಗೆ, ಹೋರಾಟದ ಕಿಚ್ಚಿನ ಬಗ್ಗೆ ವರ್ಣನೆಯಿದೆ.

೪. ಕ್ರಿ.ಶ. ೧೮೫೭ರಲ್ಲಿ ಮೊದಲ ಸ್ವಾತಂತ್ರ್ಯ ಹೋರಾಟದ ಹಂತಕ್ಕೂ ಮೊದಲೇ ೧೮೩೧ರಲ್ಲಿ ತರೀಕೆರೆ ನಾಯಕರು ಬ್ರಿಟಿಷರನ್ನು ವಿರೋಧಿಸಿದ್ದು ಗಮನಾರ್ಹ.

೫. ಲೌಕಿಕ ವಿಚಾರಗಳೇ ಲಾವಣಿ, ಕಥನಗಳಲ್ಲಿ ಹೆಚ್ಚಾಗಿ ನುಸುಳಿವೆ. ಸಾರ್ವತ್ರಿಕ ವಿಷಯಗಳಿಗೆ ಆಸ್ಪದವಿಲ್ಲ.

೬. ಸರ್ಜಪ್ಪನಾಯಕ ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ಏಕಕಾಲಕ್ಕೆ ವರ್ಣಾಶ್ರಮ ವ್ಯವಸ್ಥೆಯ ಸಂಕೋಲೆಯನ್ನು ಎದುರಿಸುತ್ತಾನೆ. ಅದು ಅವನ ಜೀವನದ ಭವಿಷ್ಯಕ್ಕೆ ಮುಳುವಾಯಿತು. ಹಾರುವರ ಹೆಣ್ಣು ನಿಂಗಮ್ಮನು ತಮ್ಮ ಅಣ್ಣಂದಿರಾದ ವೆಂಕಪರಾಯ, ಗೋವಿಂದರಾಯ ಮಾತು ಕೇಳಿ ಇವನಿಗೆ ಮೋಸ ಮಾಡುವುದು ಪ್ರಾಣಕ್ಕೆ ಕುತ್ತು ತರುವುದು ಪ್ರಭುತ್ವದಲ್ಲಿ ಮಹಿಳೆಯ ಕುತಂತ್ರ ಅನಾವರಣಗೊಂಡಿದೆ.

೭. ಮೈಸೂರು ಒಡೆಯರು ಮತ್ತು ಬ್ರಿಟಿಷರನ್ನು ಸಮಾನವಾಗಿ ವಿರೋಧಿಸುತ್ತಾ ಬಂದಿರುವ ತರೀಕೆರೆ ಪಾಳೆಯಗಾರರು ಸ್ಥಳೀಯತೆಯ ಪ್ರಭಾವದಿಂದ ಕನ್ನಡ ನುಡಿಗೆ ಹೆಚ್ಚಾಗಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಡಿದ್ದು ಶ್ಲಾಘನೀಯವೆಂದು ಭಾವಿಸಲಾಗಿದೆ.

೮. ಕರ್ನಾಟಕದ ವಿವಿಧ ಭಾಗಗಳಲ್ಲಿ ಸರ್ಜಾನ ಬಗೆಗೆ ಹುಟ್ಟಿಕೊಂಡ ಕಥನಗಳೆಲ್ಲವು ಒಂದೇ ಪ್ರಕಾರದವು. ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳ ಜನಪದರು ಕಟ್ಟಿಕೊಡುವ ಚಿತ್ರಣ ಕೊಂಚ ಭಿನ್ನ.

೯. ಟಿಪ್ಪುಗೆ ಸೇನಾನಿಗಳಾದ ತರೀಕೆರೆ ನಾಯಕರು ವಿಶ್ವಾಸಗಳಿಸಿದ್ದು ಬ್ರಿಟಿಷರಿಗೆ ನುಂಗಲಾರದ ತುತ್ತಾಯಿತು.

೧೦. ೧೮೩೦ರ ನಂತರ ದಂಗೆಯ ದಿನಗಳಲ್ಲಿ ಬ್ರಿಟಿಷರ ವಿರುದ್ಧ ಸರ್ಜಾ ರಂಗಪ್ಪನಾಯಕ ಮತ್ತು ಅವನ ಮಗ ಹನುಮಪ್ಪನಾಯಕ ದಂಗೆಯೇಳುವುದು, ವೀರಮರಣನ್ನಪ್ಪುವುದು. ಚರಿತ್ರೆಯಲ್ಲಿ ಭಿನ್ನರೂಪ ತಾಳಿರುವ ಸಂಗತಿಯಾಗಿದೆ.

೧೧. ತರೀಕೆರೆ ಪಾಳೆಯಗಾರರು, ನಾಯಕನಹಟ್ಟಿ, ಚಿತ್ರದುರ್ಗ, ಕುಂದರ್ಪಿ ಮೊದಲಾದವರೊಡನೆ ವೈವಾಹಿಕ, ಸ್ನೇಹ ಸಂಬಂಧವನ್ನು ಹೊಂದಿದ್ದರು.

ಹೊಸಪಾಠ

ಈ ಪಾಠವನ್ನು ಗುಗ್ಗಿ ಪಾಪಯ್ಯ ಹಾಡಿದ್ದಾನೆ. ೪೦ ಪುಟ ಪಾಠವಿದೆ. ಪಾಠದ ವಿವರಗಳು ಇಂತಿವೆ.

ತರೀಕೆರೆ ಅರಸ ಸರ್ಜಾ ಹನುಮಪ್ಪನಾಯಕನ ಜನನ, ವಿದ್ಯಾಭ್ಯಾಸ, ಬೆಳವಣಿಗೆ ಬಗೆಗೆ ತರೀಕೆರೆ, ಶಿವಮೊಗ್ಗ, ಮೈಸೂರು ಮತ್ತು ಹಿರೇದುರಗಗಳ ಉಲ್ಲೇಖವಿದೆ. ಸರ್ಜಪ್ಪನಾಯಕನ ತಂದೆ-ತಾಯಿಗಳ ರಂಗಪ್ಪ-ನಿಂಗಮ್ಮ ಮತ್ತು ಮನೆ ದೇವರಾದ ರಂಗನಾಥನ ಬಗ್ಗೆ ಅವನ ಜೀವನ-ಸಾಧನೆಗಳ ಬಗ್ಗೆ ಕಥನದಲ್ಲಿ ವಿವರಗಳಿವೆ.

೧. ಕುಲ ಬ್ಯಾಡರ, ವೀರ, ಶೌರ್ಯ, ಪರಾಕ್ರಮದ ಬಗ್ಗೆ ತಿಳಿಸಿದ್ದಾರೆ.

೨. ಕೊಣನೂರು, ಮಳಲಕೆರೆ, ಗುಂಡನೂರು, ದುರುಗ, ಹೂವೇನಹಳ್ಳಿ ಸ್ಥಳಗಳ ಉಲ್ಲೇಖವಿದೆ.

೩. ಉಪಪತ್ನಿ ನಿಂಗಮ್ಮ, ಅಣ್ಣ ವೆಂಕಪರಾಯ, ಭಾವ ಗೋವಿಂದರಾಯರ ಕುತಂತ್ರ, ಜಾತಿ ವರ್ಗ, ವರ್ಣ, ಸಂಘಟನೆ ವಿವರಗಳಿವೆ.

೪. ಬ್ರಾಹ್ಮಣರ ಕುಲದಲ್ಲಿ ಬ್ಯಾಡನು ಬರುತಾನ, ಕುಲಕಾದರೆ ಅಪಕೀರ್ತಿ, ಬ್ಯಾಡರ ಕುಲಕೆ ಸಂಚು ಕೊಡಬೇಕು ಎನ್ನುವ ಜಾತಿ ನಿಂದನೆ ಆರೋಪಗಳಿವೆ.

೫. ಒಂಟೆ, ಆನೆ ಸಾಲು, ಗದ್ದೆ ಆಳ ರಾಜ್ಯದ ಅರ್ಧ ಭಾಗ ಜಾಗೀರು ಕೊಡುತ್ತೇವೆ ಬ್ಯಾಡನ ಹೊಳ ಸಂಚು ಕೊಡಬೇಕೆಂದು ಕುತಂತ್ರ, ವೈದಿಕಶಾಹಿಯಿಂದ ಕೂಡಿದೆ.

೬. ವೃತ್ತಿ, ವರ್ಗ, ಬಡಿಗೇರ, ಕಮ್ಮಾರ, ನೆವ್ವರ, ತಳವಾರ, ಮಾದಿಗ, ವಡ್ಡರ ಇತರೆ ಜಾತಿಗಳ ಉಲ್ಲೇಖವಿದೆ.

೭. ಗರಡಿ ಮನೆ, ಚಾವಡಿ, ದೇವಾಲಯ, ಅರಮನೆಗಳ ಪ್ರಸ್ತಾಪವಿದೆ.

೮. ತಳವಾರ ತಿಪ್ಪಯ್ಯ, ಕುದುರೆ, ತಂದೆಗೆ ಸಪುವ, ಕೊಟ್ಟೂರು ಬಸವಣ್ಣನ ತೇರು, ಕಳಸವಾದರೆ ಹಟ್ಟಿ ತಿಪ್ಪಯ್ಯತೇರು ಕಳಸವಾದರೆ ಮುಸುದಂಗಿತ್ತು. ಇವತ್ತಿನ ಪಯಣ ಎಂದು ಬೇಡ ತಂದೆ ಮಗನಿಗೆ ಹೇಳುತ್ತಾನೆ.

೯. ಶೋಕ, ದುಃಖ, ಹತಾಶೆ, ಗುರುಹಿರಿಯರು, ತಂದೆತಾಯಿಗಳ ಸಂಕಟ, ದುಃಖ ಅನಾವರಣಗೊಂಡಿದೆ.

೧೦. ಬಸವನ ಕೋಟೆ, ಜಗಳೂರು ತಾಲೂಕು.

೧೧. ರಂಡಸಾವು ಸಾವಿರಳ್ಳಿಗೆ ಸರ್ಜ ನೂರಳ್ಳಿಗೆ ಅದಿ ರಂಡಸಾವು.

೧೨. ಪ್ರಭುತ್ವದ ಬಗೆಗಿನ ಮೋಸ, ವಂಚನೆ, ಕುತಂತ್ರ, ಮರಣ, ಕುಸಲೆ, ಗೊಂಬೆ ಮಂಚಕ್ಕೆ.

೧೩. ೧೦ ಲಕ್ಷ ದಂಡು ವಿರೋಧಿಗಳು, ಸರ್ಜಾನ ಮೇಲೆ ದಂಡೆತ್ತಿ ಬಂದು ಹೊಡೆದರು.

೧೪. ಮೊಸ ಅರಿತ ನಾಯಕನ ಪ್ರಾಯಶ್ಚಿತ್ತ, ದುಃಖ, ಶೋಕ ಅನಾವರಣಗೊಂಡಿದೆ.

೧೫. ವಿರೋಧಿಗಳಿಗೆ ಮಾಂಸ, ಮಧ್ಯವನ್ನು ಕೊಟ್ಟು ಗೋವಿಂದರಾಯ, ವೆಂಕಪರಾಯ ಹಗೆತನ ತೀರಿಸಿಕೊಳ್ಳುತ್ತಾರೆ.

೧೬. ಸೂಳೆ ನಿಂಗಿ, ವೆಂಕಪರಾಯ, ಗೋವಿಂದರಾಯ ಸೇರಿ ಕೊಲೆ ಮಾಡಲು ಕಂದಕ ತೋಡಿಸಿ ಶೂಲ ಪಡುತ್ತಾರೆ. ನೂಲಗ್ಗಗಳ ಉಲ್ಲೇಖವಿದೆ.

ಸರ್ಜಪ್ಪನ ಸಾವು (ಗಲ್ಲುಶಿಕ್ಷೆ)

ಬ್ರಿಟಿಷರ ದಂಡು ಮುತ್ತಿದಾಗ ಸರ್ಜಾನ ಪರಾಕ್ರಮವನ್ನು-ಸಾಲು ಹೆಣಗಳು ಬೀಳುತ್ತವೆ. ಆದರೆ, ಏಕಾಂಗಿ ವೀರ ನಿರಂತರ ಹೋರಾಟ ಮಾಡುವುದಾದರೂ ಹೇಗೆ. ಅಪಾರ ಸಾವು-ನೋವು ಚಿಂತೆ ಅವನಿಗೆ ಕಾಡುತ್ತದೆ. ಸರ್ಜಾ ಹನುಮಪ್ಪನನ್ನು ಬ್ರಿಟಿಷರು ಕಳ್ಳನೆಂದು ಘೋಷಿಸಿರುವ ಸಂಗತಿ ಅವನಿಗೆ ಕಾಡುತ್ತದೆ ಎಂಬ ಅಂಶಗಳ ಉಲ್ಲೇಖ ಪ್ರಸ್ತುತ ಕಥನದಲ್ಲಿದೆ.

೧. ಇಂತೆಂಬ ಹಳ್ಳಿಗೆ
ಕಳ್ಳನು ಬಂದನೇ-ಗೊಲ್ಲಿಗಾರ್ಡು ಕೊಡಬೇಕು
ಪಾರಂಗಿ ದೊರೆಯ-ವಾಲೆನಾದರೆ ಬರೆದಾನೊ

೨. ಗಲ್ಲು ಗಾರ್ಡನು ಇಲ್ಲವಯ್ಯs
ಕೊಟ್ಟಿನಾದರೆ ಮಾಡತೀನಿ||
ವಾಲೆನಾದರೆ ಬರೆದಾನೊ
ಪಾರಂಗಿ ದೊರೆಯ
ವಾಲೆನಾದರೆ ಬರೆದಾನೊs

ಬ್ರಿಟಿಷರೇ ನೇರವಾಗಿ ಗಲ್ಲು ಶಿಕ್ಷೆಗೆ ಗುರಿ ಮಾಡಿದ್ದಾರೆ.

ಕಥನದಲ್ಲಿ ಸಾವು ಸಹ ಪರಂಗಿ ದೊರೆ ಬ್ರಿಟಿಷರ ಅಧಿಕಾರಿಯಿಂದ ಆಗಿದೆ ಎಂದು ನಂಬಬಹುದಾಗಿದೆ. ಆದರೆ, ಸೂಳೆಯ ನಿಂಗಿಯೇ ಕೊಲೆ ಮಾಡಿದ್ದಾಳೆಂಬ ಜನಪದ ಸಂಗತಿಯನ್ನು ಕಾವ್ಯದ ವಸ್ತುಗೆ ಲಾವಣಿ, ಕಥನ, ವರ್ಣನೆಯ ಲಕ್ಷಣಗಳಾದ ಕರುಣಾರಸಕ್ಕೆ ಬಳಸಲಾಗಿದೆ ಎಂದು ಭಾವಿಸಬೇಕೆ? ಇಲ್ಲಿ ಬ್ರಾಹ್ಮಣ ಮತ್ತು ಬೇಡ ಕುಲಗಳ ನಡುವೆ ಸಂಘರ್ಷ ಮನೋಭಾವ ಇಲದೆ ಸೌಹಾರ್ದಯುತ ವಾತಾವರಣ ಇತ್ತು ಎಂದು ಮೇಲಿನ ಸಂಗತಿಗಳನ್ನು ಚರಿತ್ರೆ ಪುನಾರಚನೆಯ ಸಂದರ್ಭದಲ್ಲಿ ಅಳವಡಿಸಿಕೊಳ್ಳುವಲ್ಲಿ ಅನುಮಾನವಿಲ್ಲ. ತನ್ನ ತಂದೆ ಮತ್ತು ಸರ್ಜಪ್ಪನಾಯಕನ ಕಾಲದಲ್ಲಿ ಮೇಲಿನ ಘಟನೆಗಳು ಪ್ರತ್ಯೇಕವಾಗಿ ಸಂಭವಿಸಬಹುದು.