ಕಣಿವೆ ಕಗ್ಗಾಡಿನಲಿ ಸಂಜೆ
ಚೀರಿಡುವ ಜೀರುಂಡೆಗಳ ಮೇಳ ;
ಕಮ್ಮಾರನಂಗಡಿಯ ಅಡಿಗಲ್ಲಮೇಲೆರಗುತಿವೆ
ಸುತ್ತಿಗೆಯ ಸೇಡು ;
ಬೇಸಗೆಯ ಮಧ್ಯಾಹ್ನದುರಿಬಿಸಿಲಲ್ಲಿ
ಜಲ್ಲಿಕಲ್ಲನು ಅರೆವ ರೋಡೆಂಜಿನ್ನು ;
ಮದುವೆ ಮನೆ ಹಿತ್ತಿಲಲಿ ಎಸೆದ ಎಂಜಲ ಎಲೆಗೆ
ಕಿತ್ತಾಡುತಿವೆ ಕಾಗೆ-ನಾಯಿಯ ಹಿಂಡು ;
ಕುಂಟು ದಾರಿಯ ಮೇಲೆ ಭೋರೆಂದು ಧಾವಿಸಿದೆ
ತಗಡು ಹೇರಿದ ಲಾರಿ ;
ಬಿಸಿಗಾಳಿ ಧೂಳೆರಚುತಿದೆ ಕಣ್ಗೆ, ಓ ಎಲ್ಲಿ
ಹಸುರು ತೂಗುವ ದಾರಿ ?