ಎಪ್ರಿಲ್-ಮೇ ಹಲಸಿನ ಋತು. ಹಳ್ಳಿ ಮನೆಗಳಲ್ಲಿ ಹಲಸಿನ ಪರಿಮಳ. ನಗರದಲ್ಲಿ ಕೂಡಾ. ಹಲಸು ಹೊಲಸೆಂದು ಮುಖಸಿಂಡರಿಸುವವರೂ ಒಂದು ಸೊಳೆಯನ್ನಾದರೂ ತಿನ್ನದೆ ಬಿಡರು. ಹಲಸಿನ ರುಚಿ, ಪರಿಮಳಕ್ಕೆ ಅಷ್ಟೊಂದು ಮಾದಕತೆ.

ವಿಯೆಟ್ನಾಂನ ಹಲಸಿನ ತೋಪು ಈಗ ಹಳೆ ಸುದ್ದಿ. ನಮ್ಮೂರಲ್ಲೂ ಹಲಸಿನ ತೋಟ ಎಬ್ಬಿಸಬೇಕು ಎಂದಿರುವ ಹಲಸುಪ್ರಿಯ ಕೃಷಿಕರ ಸಂಖ್ಯೆ ಬೆಳೆಯುತ್ತಿದೆ. ಎಳೆ ಗುಜ್ಜೆಯಿಂದ ಹಣ್ಣಿನ ತನಕ ಮಾರಾಟದ ಅವಕಾಶ ಇದಕ್ಕೆ ಕಾರಣ. ಮಾರುಕಟ್ಟೆಯಲ್ಲೂ ಕೂಡಾ ಬೇಡಿಕೆ ಕುದುರಿದೆ.

ಈಚೆಗೆ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‌ನ ತರಕಾರಿ ವ್ಯಾಪಾರಿ ಡೇವಿಡ್ ಅವರನ್ನು ಮಾತನಾಡಿಸಿದಾಗ, ‘ಕಳೆದ ವರುಷಕ್ಕಿಂತಲೂ ಈ ವರುಷ ಹಲಸಿನ ಎಳೆ ಕಾಯಿ, ಹಣ್ಣನ್ನು ಕೇಳಿಕೊಂಡು ಬರುವವರ ಸಂಖ್ಯೆ ಜಾಸ್ತಿ’ ಎಂದರು. ಮನೆ ಮಟ್ಟದಲ್ಲಿ ಹಲಸು ತರಕಾರಿಯೊಂದಿಗೆ ಅಡುಗೆ ಮನೆ ಸೇರಿದೆ. ನರ್ಸರಿಗಳಲ್ಲಿ ಹಲಸಿನ ಗಿಡಕ್ಕೂ ಡಿಮಾಂಡ್ ಬಂದಿದೆಯಂತೆ.

ಬಂಟ್ವಾಳ ತಾಲೂಕಿನ ಮುಳಿಯದ ವೆಂಕಟಕೃಷ್ಣ ಶರ್ಮರು ಈಚೆಗೆ ಅವರ ಮನೆಯಲ್ಲಿ ವಿಶಿಷ್ಟ ಹಲಸಿನ ಹಣ್ಣಿನ ಹಬ್ಬವನ್ನು (೧೪-೪-೨೦೧೧) ಆಯೋಜಿಸಿದ್ದರು. ಮುಳಿಯದ ಹದಿನೈದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಹಲಸಿನ ಉತ್ತಮ ತಳಿಗಳನ್ನು ತಂದು, ಅವುಗಳಲ್ಲಿ  ಅತ್ಯುತ್ತಮ ಎಂದಿರುವ ತಳಿಗಳನ್ನು ಕಸಿ ಕಟ್ಟಿ ಅಭಿವೃದ್ಧಿ ಪಡಿಸುವ ಉದ್ದೇಶ.

ಮುಳಿಯ ಶರ್ಮರಿಂದ ತಳಿ ಆಯ್ಕೆ ಘೋಷಣೆ

ವಿವಿಧ ಪರಿಮಳ-ರುಚಿಯ ಮೂವತ್ತೇಳು ಹಲಸಿನ ಹಣ್ಣು ಅಂದು (ಎಪ್ರಿಲ್ ೧೪) ಶರ್ಮರ ಜಗಲಿಯನ್ನು ಆವರಿಸಿದ್ದುವು. ಮನೆಯಂಗಳ ಪ್ರವೇಶಿಸುತ್ತಿದ್ದಂತೆ ಮೂಗಿಗೆ ರಾಚುವ ಪರಿಮಳ. ಶರ್ಮರು ಪ್ರತಿ ಹಣ್ಣನ್ನು ಅರ್ಧ ತುಂಡರಿಸಿ, ಉಳಿದರ್ಧದ ಸೊಳೆ ತೆಗೆದು ಬಟ್ಟಲಿನಲ್ಲಿಟ್ಟಿದದ್ದರು. ಒಂದೊಂದು ಸೊಳೆಯ ಬಣ್ಣ, ರುಚಿ, ಪರಿಮಳ, ಸೊಳೆಯ ಫಿಲ್ಲಿಂಗ್.. ಆಕರ್ಷಕ.

ಶರ್ಮರಿಗೆ ಗೊತ್ತಾಗದಂತೆ ಒಂದು ಸೊಳೆ ಬಾಯಿಗೆ ಹಾಕಿಕೊಂಡರೆ ಹೇಗೆ? ಐದಾರು ಬಾರಿ ಕೈ ಬಟ್ಟಲಿನತ್ತ ಹೋಗಿ ಹಿಂದೆ ಬಂದುವು! ಅಷ್ಟರಲ್ಲಿ ‘ಮೌಲ್ಯಮಾಪನ ಶುರುವಾಗದೆ ತಿನ್ನುವ ಹಾಗಿಲ್ಲ’ ಎಂಬ ಅವರ ಸಾತ್ವಿಕ ಆದೇಶ. ತಿನ್ನಲೇ ಬೇಕೆಂಬ ತುಡಿದವರಿಗೆ ಪ್ರತ್ಯೇಕ ಬಟ್ಟಲಿನಲ್ಲಿ ಹಲಸಿನ ಹಣ್ಣಿನ ಸಮಾರಾಧನೆ.

ಈಗಾಗಲೇ ಹಣ್ಣಾಗಿ ಮುಗಿಯುವ ಹಂತದಲ್ಲಿರುವ, ಈಗ ಹಣ್ಣಾಗುತ್ತಲಿರುವ ಮತ್ತು ಮೇ ಕೊನೆಗೆ ಹಣ್ಣಾಗಲಿರುವ – ಹೀಗೆ ಮೂರು ವಿಭಾಗಗಳ ಮೌಲ್ಯಮಾಪನ. ಮೂವತ್ತೇಳು ತಳಿಗಳಲ್ಲಿ ಮೂರು ಅತ್ಯುತ್ತಮ ತಳಿಯ ಆಯ್ಕೆ – ಹಬ್ಬದ ಹೈಲೈಟ್.

ಶರ್ಮಾರಿಂದ ಸ್ವಾಗತ, ಪ್ರಸ್ತಾವನೆ. ಶ್ರೀ ಪಡ್ರೆ, ಕೃಷ್ಣ ಕೆದಿಲಾಯ ಮತ್ತು ಶೈಲಜಾ ಪಡ್ರೆಯವರಿಂದ ಮೌಲ್ಯಮಾಪನ ಶುರು. ಒಂದೊಂದೇ ಸೊಳೆಗಳನ್ನು ಬಾಯಿಗಿಡುತ್ತಾ ಜಾತಕ ಪರಿಶೀಲನೆ. ಅವರ ಹಿಂದೆಯೇ ಇನ್ನಷ್ಟು ಮಂದಿಯಿಂದ ಪೋಸ್ಟ್‌ಮಾರ್ಟಂ. ಮೂವತ್ತೇಳರಲ್ಲಿ ಅರ್ಧದಷ್ಟು ಹಣ್ಣುಗಳು ಮೌಲ್ಯಮಾಪಕರಿಗೆ ಸವಾಲನ್ನು ಒಡ್ಡಿತ್ತು!

ಮೌಲ್ಯಮಾಪನ ಪೂರ್ತಿ ಮುಗಿದಾಗ, ಬಿಡಿಸಿಟ್ಟಿದ್ದ ಸೊಳೆಗಳೂ ಮಾಯ! ಬಹುತೇಕ ಉದರ ಸೇರಿತ್ತು. ಸೊಳೆ ತೆಗೆಯದೆ ಇದ್ದ ಹಣ್ಣು ಇತ್ತಲ್ಲಾ, ಅದನ್ನು ಬೆರಳಿನಿಂದ ಕುಕ್ಕಿ ತೆಗೆದ ಪ್ರಯತ್ನಗಳೂ ಜತೆಜತೆಗೆ ನಡೆದಿದ್ದುವು. ಇದೇ ಹಲಸಿನ ಹಣ್ಣಿನ ಮೋಡಿ.

ಸನಿಹದ ಉಪನ್ಯಾಸಕ ಡಾ.ಬಿ.ಎನ್.ಮಹಾಲಿಂಗ ಭಟ್ಟರ ಹಿತ್ತಿಲಿನ ಹಲಸು ಮೊದಲ ವಿಭಾಗದಲ್ಲಿ ಮುಂದಿದ್ದರೆ, ಎರಡನೇ ವಿಭಾಗದಲ್ಲಿ ಕುದ್ದುಪದವು ಕರೀಂ ಅವರ ಹಲಸು ಮುಂದು. ಮೂರನೇ ವಿಭಾಗದ ಹಲಸು ಮಿತ್ತಮೂಲೆ ಜೆರ್ಮಿ ಅವರದು. ಇವುಗಳಲ್ಲಿ ಇನ್ನೂ ಏಳೆಂಟು ತಳಿಗಳು ಆಯ್ಕೆಯಾಗಿಲ್ಲವಾದರೂ, ಇವಕ್ಕೆ ಸರಿಸಾಟಿಯಾಗಿ ನಿಲ್ಲಬಲ್ಲ ಎಲ್ಲಾ ಅರ್ಹತೆ ಹೊಂದಿದವುಗಳೇ.

‘ಹಲಸಿನ ತಳಿ ಅಭಿವೃದ್ಧಿಗಾಗಿ ನಾವು ಬೇರೆ ಊರಿನಿಂದ ತರುವುದರ ಬದಲು ನಮ್ಮೂರಿನದೇ ಆದ ತಳಿಗಳನ್ನು ಹುಡುಕಿ ಅಭಿವೃದ್ಧಿ ಮಾಡಿದರೆ ಒಳ್ಳೆಯದು. ಇಂದಿನ ಹಬ್ಬದಲ್ಲಿ ಸುಮಾರಾಗಿ ಹತ್ತು ವಿವಿಧ ವೆರೈಟಿಗಳು ಅಭಿವೃದ್ಧಿ ಪಡಿಸಲು ಸೂಕ್ತವಾದವುಗಳು’ ಎನ್ನುತ್ತಾರೆ.

ಮೂಡಿಗೆರೆಯ ಕೃಷಿಕರೊಬ್ಬರಿಗೆ ಹಲಸಿನ ಹಬ್ಬದ ಸುದ್ದಿ ಹೇಗೋ ತಿಳಿಯಿತು. ಸಮಯಕ್ಕೆ ಹಾಜರ್. ‘ನೋಡಿ. ಇದು ಸಾವಿರ ವರುಷದಷ್ಟು ಹಳೆಯದಾದ ಹಲಸಿನ ಮರದ ಕಾಯಿ’ ಎನ್ನುತ್ತಾ ತಮ್ಮ ಚೀಲದಿಂದ ಇನ್ನೂ ತೀರಾ ಎಳೆಯದಾದ ೨-೩ ಹಲಸಿನ ಗುಜ್ಜೆಯನ್ನು ತೆಗೆದಿಟ್ಟರು! ‘ಸಾವಿರ  ವರ್ಷದ ಮರವಾ, ನೋಡ್ಬೇಕಿತ್ತಲ್ವಾ’ ಅಂತ ಜತೆಗಿದ್ದ ಎಡ್ವರ್ಡ್ ಪಿಸುಗುಟ್ಟಿದರು.

ಹಲಸಿನ ಗೀಳು

‘ವಾಮದಪದವಿನ ಕೃಷಿಕರೊಬ್ಬರು ಹಲಸಿನ ತೋಟವನ್ನು ಮಾಡಲು ನಿಶ್ಚಯ ಮಾಡಿದ್ದಾರಂತೆ’ ಈಗಷ್ಟೇ ಬಂದ ಮಾಹಿತಿ. ಈ ರೀತಿಯ ಮಾಹಿತಿ ವೆಂಕಟಕೃಷ್ಣ ಶರ್ಮರಲ್ಲಿ ಅಪ್‌ಡೇಟ್ ಆಗುತ್ತಾ ಇರುತ್ತದೆ. ನೀವು ಯಾವ ಹೊತ್ತಿಗೆ ಫೋನ್ ಮಾಡಿ, ಹೊಸ ಸುದ್ದಿ ಇದ್ದೇ ಇರುತ್ತದೆ. ಗಿಡಗಳ ಬಗ್ಗೆ, ಹಣ್ಣುಗಳ ಬಗ್ಗೆ ಅವರ ‘ಮೂರನೇ ಕಣ್ಣು’ ನಿತ್ಯ ಜಾಗೃತ.

ಶರ್ಮರಿಗೆ ಬಾಲ್ಯದಿಂದಲೇ ಹಲಸು ಪ್ರೀತಿ. ಸಮಾರಂಭಗಳ ಮುನ್ನಾ ದಿನ ತರಕಾರಿ ಹಚ್ಚುವ ಕಾರ್ಯಕ್ರಮವಿರುತ್ತದಲ್ಲಾ, ಅಂತಹ ಸಂದರ್ಭದಲ್ಲಿ ಹಲಸಿನ ಕಾಯಿ ಇದ್ದರೆ ಅದರ ಹತ್ತಿರ ಯಾರೂ ಹೋಗುವುದಿಲ್ಲ! ಆ ಕೆಲಸ ಶರ್ಮರಿಗೆ ಬಲು ಪ್ರೀತಿ.

ಮುಳಿಯ ವೆಂಕಟಕೃಷ್ಣ ಶರ್ಮರಲ್ಲಿ ತಳಿ ಆಯ್ಕೆಗಾಗಿ ಕಾಯುತ್ತಿರುವ ಹಲಸಿನ ಹಣ್ಣುಗಳು

ತನ್ನೂರಿನ ಎಲ್ಲಾ ಹಲಸಿನ ಮರಗಳ ಹತ್ತಿರದ ಪರಿಚಯ. ಅದರ ಹಣ್ಣಿನ ರುಚಿ, ಕಾಯಿ ಬಿಡುವ ಕಾಲ, ಉಪಯೋಗ.. ಅವೆಲ್ಲವೂ ನಾಲಗೆ ತುದಿಯಲ್ಲಿದೆ. ‘ನಮ್ಮಲ್ಲಿಗೆ ಬರುವ ಕೆಲಸದವರು ಹೊಸ ಮಾಹಿತಿಯನ್ನು ಹೊತ್ತು ತರುತ್ತಾರೆ. ಅವರು ಬಹುತೇಕ ಕೆಲಸಕ್ಕಾಗಿ ಸುತ್ತೆಲ್ಲಾ ಹೋಗುತ್ತಾ ಇರುತ್ತಾರಲ್ಲಾ. ಅವರಿಗದು ಗೊತ್ತಾಗಿ ಬಿಡುತ್ತದೆ’ ಎನ್ನುತ್ತಾರೆ.

ಹೀಗೆ ಗೊತ್ತಾದ ತಳಿಯನ್ನು ಮತ್ತೆ ಮರೆಯುವುದಿಲ್ಲ. ಕಾಯಿ ಬಿಡುವ ಕಾಲಕ್ಕೆ ಮರದ ಯಜಮಾನರನ್ನು ಓಲೈಸಿ, ಹಣ್ಣು ಪಡೆದು ಗುಣದೋಷಗಳನ್ನು ನೆನಪಿಟ್ಟುಕೊಳ್ಳುತ್ತಾರೆ. ಮನಸ್ಸಿನಲ್ಲಿ ದಾಖಲಿಸಿಕೊಳ್ಳುತ್ತಾರೆ. ಅವರ ನೆನಪಿನ ಸಾಮರ್ಥ್ಯ ‘ಎಂಬಿ’ಯಲ್ಲಿಲ್ಲ, ‘ಜಿಬಿ’ಯಲ್ಲಿದೆ! ಹಣ್ಣನ್ನು ನೋಡಿಯೇ, ಇದು ಇಂತಹವರ ಮರ ಎಂದು ಹೇಳುವಷ್ಟು ಗಟ್ಟಿ ‘ಹಲಸಿನ ಮೆಮೊರಿ’.

ಅವರ ಹಿತ್ತಿಲಲ್ಲಿ ಆರೇಳು ಉತ್ತಮ ತಳಿಯ ಹಲಸಿನ ಮರವಿದೆ. ಐವತ್ತಕ್ಕೂ ಮಿಕ್ಕಿ ಇನ್ನೂ ಸಸಿಯ ಹಂತದಲ್ಲಿವೆ. ಮಾಧ್ಯಮಗಳಲ್ಲಿ ಬರುವ ಹಲಸಿನ ವಿಚಾರದ ಬೆನ್ನೆತ್ತಿ ಪಡೆದ ಸಂಗ್ರಹಗಳು. ‘ಕಸಿ ತಜ್ಞರಾದ ಬಾಳ್ತಿಲ್ಲಾಯರು, ಆಲಂಕಾರಿನ ಕೃಷ್ಣ ಕೆದಿಲಾಯರ ಪರಿಚಯವಾದಂದಿನಿಂದ ಹಲಸಿನ ಹುಚ್ಚಿಗೆ ವೇಗ ಪಡೆಯಿತು’ ಎನ್ನುತ್ತಾರೆ.

ಇನ್ನೇನು, ಶರ್ಮರು ಒಂದೆಕ್ರೆಯಲ್ಲಿ ಹಲಸಿನ ತೋಟವನ್ನು ಎಬ್ಬಿಸಲಿದ್ದಾರೆ. ‘ಈಗಿನ ಹಲಸಿನ ಬೇಡಿಕೆ ಮತ್ತು ಹೊಸ ಹೊಸ ತಳಿಗಳ ಅನ್ವೇಷಣೆಯ ಹಿನ್ನಲೆಯಲ್ಲಿ ಇನ್ನೂ ಒಂದೆಕ್ರೆ ವಿಸ್ತರಿಸಿದರೂ ಲಾಸ್ ಆಗಲಿಕ್ಕಿಲ್ಲ’ ಎಂಬ ಹೊಸ ಸುಳಿವನ್ನು ನೀಡಿದರು.

ಮಾವಿನ ಹಣ್ಣು ಸಿಗುವ ಮೊದಲೇ ಹಲಸಿನ ಹಣ್ಣು ಸಿಕ್ಕರೆ ಮಾರಾಟಕ್ಕೆ ಉತ್ತಮ ಅವಕಾಶ – ಎನ್ನುವ ಲೆಕ್ಕಾಚಾರ ಶರ್ಮರದು. ಮೊದಲೆಲ್ಲಾ ಹಲಸಿನ ಖಾದ್ಯವಿಲ್ಲದ ಮನೆ ಯಾವುದಿದೆ ಹೇಳಿ? ಅಡಿಕೆಗೆ ಬೆಲೆ ಬಂತು. ಮನೆ ತರಕಾರಿ ಮರೆತೆವು. ಪೇಟೆಯಿಂದ ತರುವುದು ಸ್ಟೈಲ್ ಆಯಿತು.. ‘ಇದ್ದುದನ್ನು ಕಳೆದುಕೊಂಡ’ ಕೃಷಿಕರ ಲೈಫ್‌ಸ್ಟೈಲ್ ಕುರಿತು ಅಸಹನೆ ವ್ಯಕ್ತಪಡಿಸುತ್ತಾರೆ.

‘ರುಚಿ ನೋಡಿ-ತಳಿ ಅಭಿವೃದ್ಧಿ’ ಶೀರ್ಷಿಕೆಯ ಹಲಸು ಹಬ್ಬ ಶರ್ಮರ ಮನೆಯಲ್ಲಾಗಿದೆ. ಇತರ ಊರಿನ ತಳಿ ಅಭಿವೃದ್ಧಿಗೆ ಇದು ನಾಂದಿಯಾಗಲಿ. ಕೇವಲ ಹಲಸು ಮಾತ್ರವಲ್ಲ, ಇತರ ಹಣ್ಣಿಗೂ ಈ ಯೋಗ ಬರಲಿ. ಎಲ್ಲವನ್ನೂ ಸರಕಾರವೇ ಮಾಡಬೇಕು, ಇಲಾಖೆಗಳೇ ಮಾಡಬೇಕು ಎಂಬ ಜಿದ್ದಿಗೆ ನೇತಾಡುವ ಪರಿಪಾಠ ಬಿಟ್ಟರೆ, ಇಂತಹ ಕಾರ್ಯಕ್ರಮಗಳು ಆಪ್ತವಾಗುತ್ತವೆ.

ತಜ್ಞರಿಂದ ರುಚಿ ನೋಡಿ ತಳಿ ಆಯ್ಕೆ