ತಾಕೊಡೆ ಹಾಲಿನ ಊರು. ಮನೆಮನೆಯಲ್ಲಿ  ಗೋಮಾಳ ಮತ್ತು ಗೋಅನಿಲ ಸ್ಥಾವರ. ಅನಿಜ ಜಾಡಿಗಳು ಹುಡುಕಿದರೂ ಸಿಗದು! ಒಂದು ಕಾಲಘಟ್ಟದಲ್ಲಿ ಕಟ್ಟಿಗೆಗಾಗಿ ಬರಿದಾಗುತ್ತಿದ್ದ ಖುರ್ಸು ಗುಡ್ಡೆಯಲ್ಲಿ ಈಗ ಹಸಿರೇ ಹಸಿರು.

‘ಇದು ಖುರ್ಸು ಗುಡ್ಡೆ. ೪೫ ಹೆಕ್ಟೇರ್ ಇದೆ. ಹಾಲು, ಗೊಬ್ಬರಕ್ಕಾಗಿ ಸಾಕುವ  ಎಮ್ಮೆ ದನಗಳಿಗೆ ಮೇಯಲು ಈ ಗುಡ್ಡದ ಹುಲ್ಲು. ಬೆಳಗ್ಗಿನ ಹೊತ್ತಿಗೆ ನೂರಕ್ಕೂ ಮಿಕ್ಕಿ ಎಮ್ಮೆಗಳು ಹೋಗುವ ಚಂದ ನೋಡಬೇಕಿತ್ತು, ಅಲ್ಲಿ ಸೆಗಣಿ ಬಾಚಲು ಜನಗಳ ಪೈಪೋಟಿ! ಮನೆ ಹಟ್ಟಿಗೆ ಈ ಗುಡ್ಡದಿಂದಲೇ ಸೊಪ್ಪು, ಒಲೆಉರಿಸಲು ಇಲ್ಲಿಂದಲೇ ಕಟ್ಟಿಗೆ- ಹಾಗಾಗಿ ಖುರ್ಸು ಗುಡ್ಡ ಹಸಿರಿಂದ ದೂರ….’ 

ತಾಕೊಡೆಯ ಹಾಲು ಉತ್ಪಾದಕರ ಸಂಘದ ಸ್ಥಾಪಕಾಧ್ಯಕ್ಷ ಪಾವ್ಲು ಮೆಂಡಿಸ್ ಹದಿಮೂರು ವರುಷದ ಹಿಂದಿನ ದಿನಗಳನ್ನು ನೆನಪಿಸುತ್ತಾರೆ. ಈಗ ಬದಲಾಗಿದೆ. ಸೊಪ್ಪು, ಸೌದೆಗಾಗಿ ಯಾರೂ ಗುಡ್ಡಕ್ಕೆ ಹೋಗುತ್ತಿಲ್ಲ. ಮೇಯಲು ಬಿಡುವ  ಜಾನುವಾರುಗಳು ಮಾಯವಾಗಿದೆ.  ಮನುಷ್ಯನ ಸಹವಾಸದಿಂದ ದೂರವಿರುವ ಖುರ್ಸುಗುಡ್ಡೆಯಲ್ಲೀಗ ಹಸಿರೇ ಹಸಿರು.

ತಾಕೊಡೆಯ ಬಹುತೇಕ ಮನೆಗಳಲ್ಲಿ ಗೋಅನಿಲ ಸ್ಥಾವರವಿದೆ. ಹೈಬ್ರಿಡ್ ತಳಿ ಹಸುಗಳು ಹೆಚ್ಚಾಗಿರುವುದರಿಂದ ಹಟ್ಟಿಗೆ ಸೊಪ್ಪುಬೇಡ. ಅಡುಗೆಗೆ ಗ್ಯಾಸ್. ಒಲೆಊದಿ ಸುಸ್ತಾಗಬೇಕಾಗಿಲ್ಲ…ಇದಕ್ಕೆಲ್ಲಾ ಕಾರಣ, ಊರಿನ ಹಾಲು ಉತ್ಪಾದಕರ ಸಂಘ.

೧೯೯೧-೯೨ರಲ್ಲಿ ಗೋಅನಿಲ ಸ್ಥಾವರ ಸ್ಥಾಪಿಸಲು ಸರಕಾರದ ಯೋಜನೆ ಬಂತು. ಹನ್ನೆರಡು ಸಾವಿರ ಸಾಲ. ಅದರಲ್ಲಿ ೬೦೦೦ ಸಬ್ಸಿಡಿ. ೬೦೦೦ ಗ್ರಾಮೀಣ ಬ್ಯಾಂಕ್ ಸಾಲ. ಒಂದೇ ವರುಷದಲ್ಲಿ ತಾಕೊಡೆ ಸುತ್ತಮುತ್ತ ನೂರಕ್ಕೂ ಮಿಕ್ಕಿ ಸ್ಥಾವರಗಳಾದುವು.

“ಆರಂಭದಲ್ಲಿ ಗೋಬರ್ ಗ್ಯಾಸ್ ಬಗ್ಗೆ ಕುತೂಹಲವಿತ್ತು. ಸ್ಥಳೀಯ ಎಡ್ವಿನ್ ರೆಬೆಲ್ಲೋ ಎಂಬವರು ಮೊತ್ತಮೊದಲಿಗೆ ತಾಕೊಡೆಯಲ್ಲಿ ಸ್ಥಾವರವನ್ನು ಬ್ಯಾಂಕ್ ಸಾಲದಲ್ಲಿ ಮಾಡಿದರು. ಆಗ ಗೊಬ್ಬರದಿಂದ ಗ್ಯಾಸ್ ಹೇಗೆ ಬರುತ್ತದೆ ಎಂಬ ಚೋದ್ಯ ಎಲ್ಲರಲ್ಲಿತ್ತು. ಸ್ಥಾವರನ್ನು ನೋಡಲು ಜನರ ದಂಡೇ ಬರುತ್ತಿತ್ತು. ಅವರ ಯಶಸ್ಸನ್ನು ನೋಡಿ ಎಲ್ಲರಿಗೂ ಧ್ಯೆರ್ಯ ಬಂತು” ಜೊತೆಗಿದ್ದ ಎಡ್ವರ್ಡ್ ರೆಬೆಲ್ಲೋ ನೆನಪಿಸುತ್ತಾರೆ.

‘ನೋಡಿ…ಖುರ್ಸು ಗುಡ್ಡದಲ್ಲಿ ಒಂದು ಮರ ಒಣಗಿದ್ದು ಕಂಡರೆ ಸಾಕು, ಬೆಳಿಗ್ಗೆ ಎದ್ದು ಕಟ್ಟಿಗೆ ತರಲು ಹೋಗುತ್ತಿದ್ದೆ.  ಮನೆಯವರು ಅಟ್ಟುತ್ತಿದ್ದರು. ತಲೆಹೊರೆಯಲ್ಲಿ ಕಟ್ಟಿಗೆ ತಂದು ಸಾಕಾಗಿಹೋಗಿತ್ತು. ಇದಕ್ಕೊಂದು ಪರ್ಯಾಯ ಬೇಕಿತ್ತು. ಅದೇ ಹೊತ್ತಿಗೆ ಎಡ್ವಿನ್ ಮನೆಯ ಗೋಅನಿಲ ಘಟಕವು ನಮ್ಮ ಮನೆಯವರೆಲ್ಲರಿಗೂ ವಿಶ್ವಾಸಮೂಡಿಸಿತು, ತಕ್ಷಣ ನಾವೂ ಮಾಡಿದೆವು.’ ಎಂಬ ಆಭಿಮಾನ ಲ್ಯಾನ್ಸಿ ಕ್ರಾಸ್ತರಿಗೆ. ಇವರು ತಾಕೊಡೆಯಲ್ಲಿ ಗೋಅನಿಲ ಸ್ಥಾಪಿಸಿದವರಲ್ಲಿ ಎರಡನೆಯವರು.

ಎಮ್ಮೆ-ದನಗಳ ತ್ಯಾಜ್ಯಗಳು ಅನಿಲ ಸ್ಥಾವರಕ್ಕಾದರೆ,  ಸ್ಲರಿ…?  ಇದು ಕೃಷಿಗೆ ವಿನಿಯೋಗವಾದರೆ…? ಹಾಗಾಗಿ ದನಗಳ ಸಂಖ್ಯೆಯನ್ನು ವೃದ್ಧಿಸಿದರೆ ಹೇಗೆ? ಹೈಬ್ರಿಡ್ ದನವನ್ನು ಖರೀದಿಸುವ ಬಗೆಯೆಂತು? ಹಾಲಿನ ವಿಲೆವಾರಿ ಹೇಗೆ?  ಆಗಲೇ ಅಲ್ಪಸ್ವಲ್ಪ ಹಾಲನ್ನು ಸಹಕಾರಿ ಸಂಘದ ಮೂಲಕ ಖಾಸಗಿಯವರಿಗೆ ವಿತರಣೆಯಾಗುತ್ತಿತ್ತು. ನಿರ್ವಹಣಾ ದೋಷದಿಂದಾಗಿ ಹಾಲು ಹಾಳಾಗುತ್ತಿದ್ದುದೇ ಹೆಚ್ಚು. ಹೀಗೆ ಹಾಳಾದಾಗ ಹಾಲು ಹಾಕಿದವರಿಗೆ ಖೋತಾ! ಇದರಿಂದ ಜನ ರೋಸಿದ್ದರು.

ಆಗ ದಕ್ಷತಾ ಟ್ರಸ್ಟ್ ಎಂಬ ಸ್ವಯಂ ಸಂಸ್ಥೆ ಜನರನ್ನು ಸಂಪರ್ಕಿಸಿ, ಹೈನು ಅಭಿವೃದ್ಧಿಯತ್ತ ಗಮನಹರಿಸಿತ್ತು. ಇವರ ಸಹಕಾರದಿಂದ ಆರಂಭವಾದ (೧೯೯೩) ಹಾಲು ಉತ್ಪಾದಕರ ಸಂಘದಲ್ಲಿ ಮೊದಲು ಸಂಗ್ರಹವಾದ ಹಾಲು  ೪೦ ಲೀಟರ್. ಈಗ ೧೩೦೦ ಲೀಟರ್!

“ಆರಂಭದಲ್ಲಿ ಟ್ರಸ್ಟ್ ನೆರವಿನೊಂದಿಗೆ ದನ ಖರೀದಿಸಲು ಸಾಲ ನೀಡಿ ಪ್ರೋತ್ಸಾಹಿಸಲಾಯಿತು. ಬಹಳಷ್ಟು ಮಂದಿ ಮಹಿಳೆಯರು ಸ್ಪಂದಿಸಿದರು. ಕೆಲಸವಿಲ್ಲದ ಕೈಗಳಿಗೆ  ತುಂಬು ಕೆಲಸವಾಯಿತು” ಸಂಘದ ಈಗಿನ ಅಧ್ಯಕ್ಷ ಸಿರಿಲ್ ಮೆಂಡೊನ್ಸಾ ಹೇಳುತ್ತಾರೆ. ಕೇವಲ ಹದಿಮೂರು ವರುಷದಲ್ಲಿ ಇಡೀ ಗ್ರಾಮವನ್ನು ‘ಹಾಲು’ ಬದಲಾಯಿಸಿದ ಬಗೆ ಅನನ್ಯ.

ತಾಕೊಡೆಯಲ್ಲಿ ೧೯೯೨ ರ ಹೊತ್ತಿಗೆ ಗದ್ದೆ ಬೇಸಾಯ ಯಥೇಷ್ಟವಾಗಿತ್ತು. ಕೂಲಿಯಾಳುಗಳ ಸಮಸ್ಯೆಯಿಂದ ಹೈರಾಣವಾಗಿದ್ದ ಇಲ್ಲಿ ಎಂದಿಗೆ ಹೈನನ್ನು ವೃತ್ತಿಯಾಗಿ ಸ್ವೀಕರಿಸಿದರೋ, ಅಂದಿನಿಂದ ಗದ್ದೆ ಬೇಸಾಯ ಹಿಂದೆ ಸರಿಯಿತು. ಹೈಬ್ರಿಡ್ ತಳಿ ಹಟ್ಟಿಗೆ ಬಂದಾಗ ಊರ ದನಗಳು ಎಮ್ಮೆಗಳು ಮಾಯವಾದುವು. ಉಳುವುದಕ್ಕೆ ಟಿಲ್ಲರ್ ಬಂತು. ಆಗ ಕೋಣಗಳು ಅಜ್ಞಾತವಾದುವು.

ಇದ್ದುದರಲ್ಲಿ ತೃಪ್ತಿ ಪಡುತ್ತಿದ್ದ ಕೃಷಿಕರಿಗೆ ಹೈನುಗಾರಿಕೆಯು ಬದುಕಿನಲ್ಲಿ ಹೊಸ ತಿರುವು ನೀಡಿತು. ಸೊಸಾಟಿಯ ಮೂಲಕ ಹಾಲಿಗೆ ಸಿಗುವ ಉತ್ತಮ ದರ, ಪಶುಆಹಾರ ಮತ್ತು ವೈಯಕ್ತಿಕ ಕಾಳಜಿಗಳು ಜನರಲ್ಲಿ ವಿಶ್ವಾಸ ವೃದ್ಧಿಸಿತು. ಮನೆಮಂದಿ ಎಲ್ಲರಿಗೂ ಕೈತುಂಬ ಉದ್ಯೋಗ. ‘ಪುರುಸೊತ್ತು ಇಲ್ಲ’ ಎನ್ನುವಷ್ಟು ಬ್ಯುಸಿ.

ಸ್ಲರಿ ಮತ್ತು ಗೊಬ್ಬರಗಳು ಅಡಿಕೆ ತೋಟಕ್ಕೆ ಮುಖ್ಯಾಹಾರ. ಇದರಿಂದಾಗಿ ರಾಸಾಯನಿಕ ದೂರವಾಯಿತು. ಮೇವನ್ನು ಸ್ವತಃ ಬೆಳೆಸುತ್ತಿರುವುದರಿದ ಅದರ ಆಭಾವ ಇಲ್ಲ. “ ಸೊಸ್ಯಾಟಿಗೆ ಹಾಲು ಹಾಕುವ ನೂರು ಮಂದಿಯಲ್ಲಿ ಸುಮಾರು ೪೨ ಎಕ್ರೆಯಷ್ಟು ಮೇವಿನ ಕೃಷಿಯಾಗುತ್ತಿದೆ” ಅಂಕಿಅಂಶ ಮುಂದಿಡುತ್ತಾರೆ ಸಂಘದ ಕಾರ್ಯದರ್ಶಿ ಶೇಖರ್.

‘ಗೊಬ್ಬರವನ್ನು ಕ್ರಯಕ್ಕೆ ತರುವ ಕಾಲವಿತ್ತು. ಈಗ ಗೊಬ್ಬರವನ್ನು ನಾವೇ ಕೊಡುತ್ತೇವೆ” ಎನ್ನುವ ಜಾನ್ ರೇಗೋ ಸಂಘದ ನಿದೇಶಕ. ಇವರಲ್ಲಿ ಅನಿಲ ಘಟಕಕ್ಕೆ ಕೇವಲ ಹಟ್ಟಿತೊಳೆದ ನೀರು ಮಾತ್ರ.  ಸೆಗಣಿ ಮಾರಾಟ.  ೩೦೦ ಬಟ್ಟಿ (ಒಂದು ಬಟ್ಟಿ ಅಂದರೆ ಸುಮಾರು ೨೦-೨೫ ಕಿಲೋ)ಯ ಒಂದು ಲೋಡಿಗೆ ಮೂರು ಸಾವಿರ ರೂಪಾಯಿಯಂತೆ ಎಣಿಸುತ್ತಾರೆ.

ತಾಕೊಡೆಯ ಬಹುತೇಕ ಮನೆಯ ಅಲಂಕಾರವೇ ಗೋಸಂಸಾರ. ತೋಟಗಳು ಗೋತ್ಯಾಜ್ಯದಿಂದ ತೋಯ್ದಿರುತ್ತದೆ! ‘ಹೈನುಗಾರಿಕೆ ಲಾಭಕರವಲ್ಲ. ಪುರುಸೊತ್ತು ಸಿಗುತ್ತಿಲ್ಲ. ಕಷ್ಟದ ಕೆಲಸ. ಇದು ಹೌದೇ?

ಹಿರಿಯ ಕೃಷಿಕ ರೊಬರ್ಟ್ ಕ್ರಾಸ್ತ ಹೇಳುತ್ತಾರೆ – ‘ತೋಟದ ಜೀವವಿರುವುದು ನಮ್ಮ ಹಟ್ಟಿಯಲ್ಲಿ”.  ಬರೇ ಹಾಲಿಗಾಗಿ ಹೈನು ನಷ್ಟ ಬರಬಹುದೋ ಏನೋ. ಸ್ಲರಿ, ಗೊಬ್ಬರ, ಹಾಲು… ಎಲ್ಲವರನ್ನೂ ನಗದೀಕರಿಸಿದರೆ ನಷ್ಟ ಹೇಗಾದೀತು? ಹಾಲಿನ ಗುಣಮಟ್ಟ, ದನಗಳ ಗರ್ಭಧಾರಣೆ, ಪಶುಆಹಾರ…ಸೌಲಭ್ಯಗಳ ಬಗ್ಗೆ ಸಂಘಕ್ಕೆ ಹೆಚ್ಚಿನ ಕಾಳಜಿ  ನಮ್ಮೂರಿಗೆ ಹೈನು ಬಂದದ್ದರಿಂದ ತಿರುಗಾಡಿಗಳ ಸಂಖ್ಯೆ ಕಡಿಮೆಯಾಗಿದೆ. ಎಲ್ಲರೂ ಶ್ರಮವಹಿಸಿ ದುಡಿಯುತ್ತಾರೆ. ನಾನು ಐದು ಗಂಟೆಗೆ ಎದ್ದು ಕೆಲಸಕ್ಕೆ ತೊಡಗಿದರೆ, ಪಕ್ಕದ ಕೃಷಿಕರು ನಾಲ್ಕೂವರೆಗೆ ಎದ್ದು ದುಡಿಯಲು ಆರಂಭಿಸುತ್ತಾರೆ. ಹೀಗೆ ಕೆಲಸದಲ್ಲಿ ಅರೋಗ್ಯಕರ ಪೈಪೋಟಿ….

ಬೆಳಿಗ್ಗೆ ಆರೂವರೆ, ಸಂಜೆ ನಾಲ್ಕು ಗಂಟೆಗೆ ಸಂಘದಲ್ಲಿಹಾಲು ಸಂಗ್ರಹ. ಆಗ ನೋಡಬೇಕು. ತಾಕೊಡೆಯ ಸುತ್ತುಮುತ್ತಲಿನಿಂದ ಸ್ಟೀಲಿನ ಕ್ಯಾನ್‌ನಲ್ಲಿ ಬರುವ ಹಾಲಿನ ಸೊಬಗು. ‘ಇಷ್ಟು ಬೆಳಿಗ್ಗೆ ಹಾಲು ತರಬೇಕಾದರೆ ನೀವು ನಾಲ್ಕಕ್ಕಾದರೂ ಎದ್ದಿರಬೇಕು ಅಲ್ವಾ. ಕಷ್ಟವಲ್ಲವೇ?’ ಪ್ರಶ್ನೆಗೆ ಹಾಲು ಹಾಕುವವರ ಮುಖವೇ ಉತ್ತರ ನೀಡುತ್ತದೆ. ಯಾರ ಮೊಗದಲ್ಲೂ ಬಿಗುಮಾನವಿಲ್ಲ, ‘ಅಯ್ಯೋ’ ಎಂಬ ಮರುಕವಲ್ಲ. ಯಾಕೆಂದರೆ ಪಶುಸಹವಾಸ ಅಲ್ಲಿನ ಜೀವನ.

ಕೃಷಿಕರ ದೇವಾಲಯ  

ತಾಕೊಡೆ ಕಾರ್ಕಳ ತಾಲೂಕಿನ ಒಂದು ಹಳ್ಳಿ. ಇಲ್ಲಿನ ಹಾಲು ಉತ್ಪಾದಕರ ಸಂಘವು ಪುಚ್ಚಮೊಗರು, ಕರಿಂಜೆ, ಮಾರೂರು ಗ್ರಾಮಗಳ ಒಂದೊಂದು ವಾರ್ಡ್‌ಗಳನ್ನು ಒಳಗೊಂಡಿದೆ. ಪ್ರಸ್ತುತ ೨೧೭ ಸದಸ್ಯರು. ಅದರಲ್ಲಿ ನೂರರಷ್ಟು ಮಂದಿ ಹಾಲು ಹಾಕುವ ಸದಸ್ಯರು.  ಹಾಲಿನ ಎಲ್ಲಾ ಆರ್ಥಿಕ ಲೆಕ್ಕಗಳು ಸ್ಥಳೀಯ ಕರಿಂಜ ಸಹಕಾರಿ ಬ್ಯಾಂಕ್‌ನಲ್ಲಿ. ಇಲ್ಲಿನ ಹಾಲಿನ ಉದ್ಯಮ ಬ್ಯಾಂಕಿನ ಕೆಲಸದ ಸಮಯವನ್ನೇ ಬದಲಿಸಿದೆ!

ಬ್ಯಾಂಕು ತೆರೆಯುವುದು ಸಾಮಾನ್ಯವಾಗಿ ಹತ್ತು ಗಂಟೆಗೆ, ಮುಚ್ಚುವುದು ಐದರ ಹೊತ್ತಿಗೆ. ಆಗೊಮ್ಮೆ ಈಗೊಮ್ಮೆ ಬಂದುಹೋಗುವ ಬಸ್ಸುಗಳಲ್ಲಿ ಮೊದಲ ಬಸ್ ಒಂಭತ್ತುವರೆಗೆ. ಆ ಬಸ್ಸಿನಲ್ಲಿ ಆವಶ್ಯಕ ವಸ್ತುಗಳ ಖರೀದಿಗೆ ೧೧ಕಿ.ಮೀ.ದೂರದ ಮೂಡಬಿದ್ರೆಗೆ ಹೋಗಲೇಬೇಕು. ಆ ಬಸ್ ಬಿಟ್ಟರೆ ಮತ್ತೆ ಒಂದು ತಾಸು ಕಾಯಲೇ ಬೇಕು. ರಿಕ್ಷಾ, ಜೀಪುಗಳ ಸೇವೆ ಅಪರೂಪ. ಹಾಗಾಗಿ ಜನರಿಗೆ ಅನುಕೂಲವಾಗಲು ಬ್ಯಾಂಕ್ ತನ್ನ ಸಮಯವನ್ನೇ ಬದಲಿಸಿದೆ. ಬೆಳಿಗ್ಗೆ ಒಂಭತ್ತಕ್ಕೆ ತೆರೆಯುತ್ತದೆ. ತಮ್ಮ ಖಾತೆಯಿಂದ ಹಣವನ್ನು ನಗದೀಕರಿಸಿ ಜನರಿಗೆ ಹೋಗಲು ಅನುಕೂಲವಾಗುತ್ತದೆ.

ನಿಗದಿತವಾಗಿ ವಾರಕ್ಕೊಮ್ಮೆ ಹಾಲಿನ ಹಣ. ತಿಂಗಳಿಗೆ ನಾಲ್ಕು ಲಕ್ಷ ಹಾಲು ಇಲ್ಲಿ ನಗದಾಗುತ್ತದೆ. ೩೨ ಟನ್ ಪಶುಆಹಾರ ದನಗಳ ಉದರ ಸೇರುತ್ತವೆ. ಯಶಸ್ವಿನಿ ವಿಮಾ ಯೋಜನೆ ಇಲ್ಲಿ ಯಶಸ್ವಿ. ನಾಲ್ಕು ವರುಷವಾಯಿತು. ಹನ್ನೊಂದು ಮಂದಿ ೨ ಲಕ್ಷ ೮೫ ಸಾವಿರ ವಿಮೆ ಪಡೆದಿದ್ದಾರೆ.

ಎಲ್ಲವೂ ಗಣಕೀಕೃತ.  ಈಗ ಬಿ.ಎಂ.ಸಿ. (Bulk Milk Cooler) ವ್ಯವಸ್ಥೆಗಾಗಿ ಸಿದ್ಧವಾಗಿದೆ. ಇದೇ ೧೦ರಂದು ಶುಭಾರಂಭ. ಇದರಿಂದ ಸೂರ್ಯೋದಯದ ಬಳಿಕ ಹಟ್ಟಿ ಕೆಲಸ ಶುರುಮಾಡಿದರೆ ಸಾಕು. ಮನೆಯ ಒತ್ತಡ ಕಡಿಮೆಯಾಗುತ್ತದೆ. ಈ ವ್ಯವಸ್ಥೆ ಆರಂಭವಾದರೆ ಹಾಲು ಹಾಕುವವರಿಗೆ ಉಸಿರುಬಿಡುವಷ್ಟು ಪುರುಸೊತ್ತು ಸಿಗುತ್ತದೆ.