ಸುಮಾರು ನಾಲ್ಕು ನೂರು ವರ್ಷಗಳ ಹಿಂದಿನ ಕಾಲ. ಆಗ ಅಕ್ಬರ‍್ ಎಂಬ ಮೊಘಲ್ ಸಾಮ್ರಾಟ ಭಾರತ ದೇಶವನ್ನು ಆಳುತ್ತಿದ್ದ. ಸಾಮ್ರಾಟ ಎಂದರೆ ಮಹಾ ಸಾಮ್ರಾಜ್ಯದ ದೊರೆ. ಅನೇಕ ರಾಜಮಹಾರಾಜರು ಅವನು ಹೇಳಿದಂತೆ ಕೇಳಿಕೊಂಡು ಅವನ ಅಧೀನರಾಗಿ ತಮ್ಮ ತಮ್ಮ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದರು. ಅವರೆಲ್ಲರಿಗೆ ಒಡೆಯನಾದ ಅಕ್ಬರ‍್ ಬಾದಶಹನ ರಾಜಧಾನಿ ಆಗ್ರಾ ನಗರ. ಆಗ್ರಾ ಎಂದೊಡನೆ ತಾಜಮಹಲಿನ ನೆನಪಾಗುವುದಿಲ್ಲವೇ? ಆದರೆ ಆg ಇನ್ನೂ ತಾಜಮಹಲನ್ನು ಕಟ್ಟಿರಲಿಲ್ಲ. ದೊಡ್ಡದೊಂದು ಕೋಟೆ. ಅದರೊಳಗೆ ಅಕ್ಬರನ ಅರಮನೆ ಇದ್ದಿತು.

ಬಾದಶಹ ಮತ್ತು ಅವನ ಮಗಳಿಗೆ ಸಂಬಂಧಿಸಿದಂತೆ ಬಹು ಜನಪ್ರಿಯವಾದ ಒಂದು ಕಥೆ ಇದೆ.

ನಿನ್ನ ಆಸ್ಥಾನದಲ್ಲಿ
ಯಾರೂ ಇಲ್ಲವೆ
?

ಬಾದಶಹನ ಮುದ್ದಿನ ಮಗಳು ಅಸ್ವಸ್ಥಳಾಗಿ ಮಲಗಿದ್ದಳು. ಅನೇಕ ದಿನಗಳಿಂದ ಹಕೀಮರು ಅವಳಿಗೆ ಚಿಕಿತ್ಸೆ ನಡೆಸಿದರೂ ಏನೂ ಗುಣ ಕಂಡು ಬಂದಿರಲಿಲ್ಲ. ಅಕ್ಬರನಿಗೆ ಚಿಂತೆಯಾಗಿತ್ತು. ಈ ವೈದ್ಯ ಹಕೀಮರುಗಳ ಮದ್ದಿನಿಂದ ಗುಣವಾಗುವ ರೋಗ ಅದಲ್ಲವೆಂದು ಅವನಿಗೆ ಗೊತ್ತಿತ್ತು. ರಾಜಕುಮಾರಿಯ ಕಾಯಿಲೆ ಅಷ್ಟು ವಿಚಿತ್ರವಾದದ್ದು. ಅವಳಿಗೆ ಶೀತಪ್ರಕೋಪ. ಯಾರಾದರೂ ದೀಪಕ ರಾಗವನ್ನು ಹಾಡಿದರೆ ಆ ರಾಗದ ಶಾಖದಿಂದ ಅವಳಿಗೆ ಗುಣವಾಗಬಹುದಿತ್ತು.

’ಅಬ್ಬಾಮಿಂಯಾ ಅಬ್ಬಾಮಿಂಯಾ’ ಎಂದು ಕ್ಷೀಣ ಸ್ವರದಲ್ಲಿ ಮಗಳು ತಂದೆಯನ್ನು ಕರೆದಳು. ಅಕ್ಬರ‍್ ಬಾದಶಹ ಬಳಿಗೆ ಹೋಗಿ ಅವಳ ತಲೆಯನ್ನು ತೊಡೆಯ ಮೇಲರಿಸಿಕೊಂಡು ಕಣ್ಣೀರಿಡುತ್ತ ಕುಳಿತ. ಅವಳೆಂದಳು: ’ಅಬ್ಬಾಜಾನ್, ನಿಮ್ಮ ದರಬಾರಿನಲ್ಲಿ ಮೂವತ್ತಾರು ಜನ ದೊಡ್ಡ ದೊಡ್ಡ ಸಂಗೀತ ವಿದ್ವಾಂಸರಿದ್ದಾರೆ. ಅವರಲ್ಲಿ ಹದಿನೈದು ಜನರಂತೂ ಗ್ವಾಲಿಯರ‍್ ಸಂಸ್ಥಾನದಿಂದ ಬಂದಿರುವ ಮಹಾನ್ ಕಲಾವಿದರು. ಇಷ್ಟು ಜನರಲ್ಲಿ ಒಬ್ಬರೂ ದೀಪಕ ರಾಗ ಹಾಡಬಲ್ಲವರಿಲ್ಲವೆ? ಯಾರನ್ನಾದರೂ ಕರೆದು ದೀಪಕ ಹಾಡಿಸಿ. ನಾನು ಬದುಕುವುದು ನಿಮಗೆ ಬೇಡವಾಗಿದೆಯೇ?’

ಸಾಮ್ರಾಟನಿಗೆ ಏನು ಹೇಳಬೇಕೆಂದು ತಿಳಿಯದಾಯಿತು. ಗಂಟಲು ಕಟ್ಟಿತು. ಆದರೂ ಸುಧಾರಿಸಿಕೊಂಡು ಮಗಳ ಗಲ್ಲ ನೇವರಿಸುತ್ತ, ’ಹೀಗೆಲ್ಲ ಮಾತನಾಡಬೇಡ ಮಗೂ… ಆಗಲಿ, ಪ್ರಯತ್ನ ಮಾಡುತ್ತೇನೆ. ಹೇಗಾದರೂ ಮಾಡಿ ನಿನ್ನೆದುರು ದೀಪಕ ರಾಗ ಹಾಡಿಸುತ್ತೇನೆ’ ಎಂದು ಹೇಳಿ ಹೊರಟ.

ಸಾಮ್ರಾಟನೇ
ಬೇಡಿಕೊಂಡರೆ

ಅಕ್ಬರನ ದರಬಾರಿನಲ್ಲಿ ಪ್ರಸಿದ್ಧರಾದ ತೋಡರಮಲ್ಲ, ಬೀರಬಲ್ಲರಾದಿಯಾಗಿ ಒಂಬತ್ತು ಜನ ವಿಶಿಷ್ಟ ಪರಿಣಿತರಿದ್ದರು. ಅವರಲ್ಲಿ ಒಂದೊಂದು ರೀತಿಯಲ್ಲಿ ತಮಗೆ ಸಮಾನರಿಲ್ಲ ಎನಿಸಿಕೊಂಡವರು. ಒಬ್ಬ ಇತಿಹಾಸಕಾರನಾದರೆ, ಇನ್ನೊಬ್ಬ ರಾಜಕಾರಣಿ, ಮತ್ತೊಬ್ಬ ವೈದ್ಯ. ಅವರಲ್ಲಿ ತಾನಸೇನನೆಂಬ ಸಂಗೀತಗಾರನಿದ್ದ. ಅಕ್ಬರನು ಭಾರತ ಸಾಮ್ರಾಜ್ಯದ ಸಾಮ್ರಾಟನಾದರೆ ತಾನಸೇನ ಸಂಗೀತ ಸಾಮ್ರಾಜ್ಯದ ಸಾಮ್ರಾಟನೆನಿಸಿದ್ದ.

ಅಕ್ಬರ‍್ ತಾನಸೇನರನ್ನು ದರಬಾರಿಗೆ ಕರೆಸಿದ. ತನ್ನ ಮಗಳ ಪ್ರಾಣ ಉಳಿಸುವುದಕ್ಕಾಗಿ ದೀಪಕ ರಾಗ ಹಾಡಬೇಕೆಂದು ಆಜ್ಞಾಪಿಸಿದ.

ಆದರೆ ತಾನಸೇನ ಹಾಡಲು ನಿರಾಕರಿಸಿದ.

ಅಕ್ಬರನಿಗೆ ಅಪಾರ ಕೋಪವುಂಟಾಯಿತು. ತಾನ ಸೇನ ಬೆದರಲಿಲ್ಲ. ದೀಪಕ ರಾಗ ಹಾಡಿದರೆ ಏನಾಗುವುದೆಂದು ಅವನಿಗೆ ಗೊತ್ತಿತ್ತು. ಅದರ ಶಾಖದಿಂದಾಗಿ ಹಾಡಿದವನ ಮೈಯಲ್ಲಿ ಉಷ್ಣತೆ ಹೆಚ್ಚುತ್ತದೆ. ಕೊಡಗಟ್ಟಲೆ ತಣ್ಣೀರನ್ನು ಕುಡಿದರೂ ಅದು ಶಾಂತವಾಗದು. ಅದಕ್ಕಿರುವುದೇ ಒಂದೇ ಉಪಾಯ. ಬೇರೆ ಯಾರಾದರೂ ಮೇಘ ಮಲ್ಹಾರ ರಾಗವನ್ನು ಹಾಡಿ ಮಳೆ ಬರಿಸಬೇಕು. ದೀಪಕ ಹಾಡಿದವನು ಆ ಮಳೆಯಲ್ಲಿ ನೆನೆಯಬೇಕು, ಅದರ ಹನಿಗಳನ್ನು ಕುಡಿಯಬೇಕು. ಆಗಲೇ ಅವನು ಬದುಕಲು ಸಾಧ್ಯ. ಬಾದಶಹನ ಆಜ್ಞೆಗೆ ಮಣಿದು ತಾನಸೇನ ತನ್ನ ಜೀವನವನ್ನು ಸಂಕಟಕ್ಕೀಡು ಮಾಡುವುದೇ?

ಅಕ್ಬರ‍್ ಆಜ್ಞೆ ಮಾಡುವುದನ್ನು ನಿಲ್ಲಿಸಿ ಬಗೆಬಗೆಯಾಗಿ ಬೇಡಿಕೊಳ್ಳತೊಡಗಿದ. ’ಹೇಗಾದರೂ ಮಾಡಿ ನನ್ನ ಮಗಳ ಪ್ರಾಣವನ್ನು ಉಳಿಸು” ಎಂದು ಅಂಗಲಾಚಿದ. ತಾನಸೇನನ ಮನಸ್ಸು ಕರಗಿತು. ದೀಪಕ ರಾಗ ಹಾಡಲು ಒಪ್ಪಿಕೊಂಡ.

ರೋಗ ಗುಣ ಮಾಡಿದ ದೀಪಕ
ಮೇಘ ಮಲ್ಹಾರ

ಸೂರ್ಯಾಸ್ತದ ಸಮಯ. ಅಕ್ಬರನ ಆಪ್ತ ಪರಿವಾರವರೆಲ್ಲ ಸೇರಿದರು. ಅಸ್ವಸ್ಥಳಾಗಿದ್ದ ರಾಜಕುಮಾರಿಯನ್ನು ಒಂದೆಡೆ ಮಲಗಿಸಿದ್ದರು. ತುಂಬು ನಾದದ ತಂಬೂರಿ ಮೀಟಿಕೊಂಡು ತಾನಸೇನ ದೀಪಕ ಹಾಡಿದ. ಕೆಲವೇ ಕ್ಷಣಗಳಲ್ಲಿ ಆಶ್ಚರ್ಯವೋ ಆಶ್ಚರ್ಯ! ಅರಮನೆಯ ದೀಪಗಳೆಲ್ಲ ಝಗ್ಗನೆ ತಮ್ಮಿಂದ ತಾವೇ ಹೊತ್ತಿಕೊಂಡವು. ಎಲ್ಲೆಡೆಗೆ ಬೆಳಕೇ ಬೆಳಕಾಯಿತು. ನರಳುತ್ತ  ಮಲಗಿದ್ದ ರಾಜಕುಮಾರಿ ಎದ್ದು ಕುಳಿತಳು. ಎಲ್ಲರಿಗೂ ಹರ್ಷವಾಯಿತು.

ಆದರೆ ತಾನಸೇನ ಹಾಸಿಗೆ ಹಿಡಿದ. ಅಕ್ಬರನಿಗೆ ದುಃಖವಾಯಿತು. ತನ್ನ ಮಗಳನ್ನು ಗುಣಮಾಡಿ ತಾನಸೇನನಿಗೆ ಹೀಗಾಯಿತಲ್ಲ ಎಂದು ಚಿಂತೆ. ಅಲ್ಲದೆ ಅವನನ್ನು ಗುಣಪಡಿಸುವುದು ತನ್ನ ಕರ್ತವ್ಯ ಎನಿಸಿತು. ಸರಿ, ಅವನನ್ನು ಮೇನೆಯಲ್ಲಿ ಕುಳ್ಳಿರಿಸಿ ಜೊತೆಗೆ ಸೇವಕರನ್ನು ಕಳಿಸಿ ಮೇಘ ಮಲ್ಹಾರ ರಾಗವನ್ನು ಹಾಡಬಲ್ಲವರನ್ನರಸಲೆಂದು ಕಳಹಿಸಿದ. ಅನೇಕ ದಿನಗಳ ಸುತ್ತಾಟದ ಆನಂತರದ ಗ್ವಾಲಿಯರ‍್ ನಗರದ ಬಳಿ ತಾನಿ ಎಂಬ ಹೆಂಗಸಿನ ಭೇಟಿಯಾಯಿತು. ತಾನಸೇನನ ಅವಸ್ಥೆಯನ್ನು ನೋಡಿ ಅವಳು ಕನಿಕರದಿಂದ ಮೇಘ ಮಲ್ಹಾರ ರಾಗ ಹಾಡಿದಳು. ಮಳೆ ಬಂದಿತು. ತಾನಸೇನನ ಜೀವ ಉಳಿಯಿತು.

ಕಥೆಯ ಅರ್ಥ

ಈ ಕಥೆಯ ಒಳಗುಟ್ಟನ್ನು ತಿಳಿದುಕೊಳ್ಳಬೇಕು. ದೀಪ ರಾಗ ಹಾಡಿದರೆ ದೀಪಗಳು ಹೊತ್ತಿ ಕೊಳ್ಳುತ್ತವೆ. ಮೇಘ ಮಲ್ಹಾಹ ಹಾಡಿದರೆ ಮಳೆ ಬರುತ್ತದೆ ಎಂದರ್ಥವಲ್ಲ. ದೀಪ ಹಚ್ಚುವ ಸಮಯದಲ್ಲಿ ಎಂದರೆ ಸೂರ್ಯ ಮುಳುಗುವ ಕಾಲದಲ್ಲಿ ಹಾಡಬೇಕಾದ ರಾಗ ದೀಪಕ. ಹಾಗೆಯೇ ವರ್ಷಋತುವಿನಲ್ಲಿ ಎಂದರೆ ಮಳೆಗಾಲದಲ್ಲಿ ಹಾಡಬೇಕಾದ ರಾಗ ಮೇಘ ಮಲ್ಹಾರ. ಆಯಾ ಸಮಯಗಳಲ್ಲಿ ಹಾಡಿದರೆ ಆ ರಾಗಗಳ ರಂಜನೆ ಹೆಚ್ಚಿ ಕೇಳುವವರಿಗೆ ಹೆಚ್ಚಿನ ಆನಂದವಾಗುತ್ತದೆ.

ನಮ್ಮ ಭಾರತ ದೇಶದಲ್ಲಿ ಪೂರ್ವದಿಂದಲೂ ಮುಖ್ಯವಾಗಿ ಎರಡು ಸಂಗೀತ ಪದ್ಧತಿಗಳು ಬೆಳೆದು ಬಂದಿವೆ. ದಕ್ಷಿಣ ಭಾರತದಲ್ಲಿರುವುದು ಕರ್ನಾಟಕ ಸಂಗೀತ ಮತ್ತು ಮಿಕ್ಕೆಲ್ಲೆಡೆಗಳಲ್ಲಿರುವುದು ಹಿಂದೂಸ್ತಾನೀ ಸಂಗೀತ. ಇಂಥಿಂಥ ರಾಗವನ್ನು ಇಂಥಿಂಥ ಸಮಯದಲ್ಲಿಯೇ ಹಾಡಬೇಕೆಂಬ ನಿಯಮ ಎರಡು ಸಂಗೀತ ಪದ್ಧತಿಗಳಲ್ಲಿಯೂ ಇದೆ. ಹಿಂದೂಸ್ತಾನೀ ಸಂಗೀತಗಾರರು ಆ ನಿಯಮವನ್ನು ನಿಷ್ಠೆಯಿಂದ ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ. ರಾಗಗಳ ಸಮಯ ನಿರ್ಬಂಧದ ಮಹತ್ವವನ್ನು ತಿಳಿಸುವುದಕ್ಕಾಗಿ ಇಂತಹ ದಂತ ಕಥೆಗಳು ಹುಟ್ಟಿಕೊಂಡಿವೆ. ದೀಪಕ, ಮೇಘ ಮುಂತಾದ ರಾಗಗಳ ಬಗೆಗೆ. ಅವುಗಳಿಂದಾಗಿ ತಾನಸೇನನಂತಹ ಮಹಾನ್ ಸಂಗೀತರಗಾರರು ಐತಿಹಾಸಿಕ ವ್ಯಕ್ತಿಗಳಾದರೂ ಪವಾಡ ಪುರುಷರಾಗಿ ಕಾಣುತ್ತಾರೆ.

ಗ್ವಾಲಿಯರ‍್ ನ ಬಾಲಕ

ಕರ್ನಾಟಕ ಸಂಗೀತದ ಪಿತಾಮಹರೆನ್ನಿಸಿದ  ಪುರಂದರದಾಸರು ೧೫೬೪ರಲ್ಲಿ ಕಾಲವಾದರು. ಸುಮಾರು ಅದೇ ಸಮಯದಲ್ಲಿ ಈಗಿನ ಮಧ್ಯಪ್ರದೇಶದ ಗ್ವಾಲಿಯರ‍್ ಪಟ್ಟಣದ ಬಳಿಯ ಬೇಹಟ ಎಂಬ ಹಳ್ಳಿಯಲ್ಲಿ ತಾನಸೇನನ ಜನನವಾಯಿತು.

ತಾನಸೇನನೆಂಬುದು ತಂದೆತಾಯಿಗಳು ಆತನಿಗಿಟ್ಟ ಹೆಸರಲ್ಲ, ಅದು ಅವನು ಮುಂದೆ ದೊಡ್ಡವನಾಗಿ ದೊಡ್ಡ ಸಂಗೀತಗಾರನಾದ ಮೇಲೆ ಅವನ ತಾನಗಳ ವೈಭವವನ್ನು ಮೆಚ್ಚಿ ರಾಜರಿತ್ತ ಬಿರುದು. ಅವನ ನಿಜವಾದ ಹೆಸರು ತನ್ನಾಮಿಶ್ರ ಎಂದಿದ್ದಿತು ಎನ್ನುತ್ತಾರೆ. ಇನ್ನು ಕೆಲವರು ತ್ರಿಲೋಚನ, ತನುಸುಖ ಮತ್ತು ರಾಮತನು ಮುಂತಾದ ಹೆಸರುಗಳನ್ನು ಹೇಳುತ್ತಾರೆ. ಇವುಗಳಲ್ಲಿ ಯಾವುದು ಅವನ ನಿಜ ನಾಮಧೇಯವೊ! ಆದರೆ ತಾನಸೇನ ಎಂಬ ಹೆಸರಿನಿಂದಲೇ ಆತ ಪ್ರಸಿದ್ಧನಾಗಿದ್ದಾನೆ.

ಇವನ ತಂದೆಯ ಹೆಸರು ಮಕರಂದ ಪಾಂಡೇ ಎಂದು. ಅವರದು ಗೌಡಬ್ರಾಹ್ಮಣ ವಂಶ. ಅದರಿಂದಾಗಿ ತಾನಸೇನನ ಗಾಯನ ಶೈಲಿಗೆ ಗೌಡಬಾನೀ ಎಂಬ ಹೆಸರಿತ್ತು.

ತಾನಸೇನನ ಬಾಲ್ಯದ ದಿನಗಳ ಕುರಿತು ಸ್ಮೃತಿ ಚಿಹ್ನೆಗಳನ್ನು ಬೇಹಟದಲ್ಲಿ ತೋರಿಸುತ್ತಾರೆ. ಇವುಗಳಲ್ಲಿ ಶಿವಮಂದಿರ ಮತ್ತು ಅದರ ಕಟ್ಟೆಗಳು ಮುಖ್ಯ. ಆ ಕಟ್ಟೆ ತಾನಸೇನ ಸಂಗೀತ ಅಭ್ಯಾಸ ಮಾಡುತ್ತಿದ್ದ ಸ್ಥಳ ಎಂದೂ ಶಿವನೇ ಅವನ ಉಪಾಸನೆಯ ದೇವರು ಎಂದೂ ಹೇಳುತ್ತಾರೆ.

ಸಂಗೀತಕ್ಕೆ ರಾಜಾಶ್ರಯ ತಪ್ಪಿತು

ತಾನಸೇನ ಅರ್ಥಾತ್ ತನ್ನಾಮಿಶ್ರನ ಬಾಲ್ಯ ಕಳೆದುದು ಗ್ವಾಲಿಯರ‍್ನಲ್ಲಿ. ಆಗ ಆ ಪಟ್ಟಣ ರಾಜಾ ಮಾನಸಿಂಗ ತೋಮರನ ರಾಜಧಾನಿಯಾಗಿತ್ತು. ಮಾನಸಿಂಗ ಸ್ವತಃ ಸಂಗೀತಗಾರನಾಗಿದ್ದ. ಸಂಗೀತ ಶಾಸ್ತ್ರಜ್ಞನಾಗಿದ್ದ. ತಾನೇ ವಾಗ್ಗೇಯಕಾರನಾಗಿದ್ದುದಲ್ಲದೆ ಅನೇಕ ವಾಗ್ಗೇಯಕಾರರಿಗೆ ಎಂದರೆ ಸ್ವತಃ ಹಾಡುವುದಲ್ಲದೆ ಹಾಡುಗಳನ್ನು ರಚಿಸಬಲ್ಲ ಸಂಗೀತಗಾರರಿಗೆ ತನ್ನ ಆಸ್ಥಾನದಲ್ಲಿ ಆಶ್ರಯ ಕೊಟ್ಟಿದ್ದ. ಅವರಲ್ಲಿ ನಾಯಕ ಬಕ್ಲೂ, ನಾಯಕ ಬೈಜೂ, ನಾಯಕ ಕರ್ಣ ಮತ್ತು ನಾಯಕ ಮಹಮ್ಮದ್ ಎಂಬ ಪ್ರಸಿದ್ಧರಾದವರು. ಈಗಿನ ಕಾಲದಲ್ಲಿ ದೊಡ್ಡ ಸಂಗೀತಗಾರರನ್ನು ವಿದ್ವಾನ್, ಪಂಡಿತ, ಉಸ್ತಾದ ಎಂದು ಗೌರವಿಸುವಂತೆ ಆಗಿನ ಕಾಲದಲ್ಲಿ ಗಾಯಕರನ್ನು ನಾಯಕ ಎಂಬ ಬಿರುದಿನೊಂದಿಗೆ ಕರೆದು ಮನ್ನಿಸುತ್ತಿದ್ದರು. ಬಾಲಕನಾದ ತನ್ನಾಮಿಶ್ರನು ನಾಯಕ ಬಕ್ಸೂ ಅಥವಾ ಮಹಮ್ಮದ್ ಇವರಲ್ಲಿ ಸಂಗೀತ ಕಲಿತಿರಬಹುದು.

೧೫೭೬ರಲ್ಲಿ ರಾಜಾ ಮಾನಸಿಂಗನ ಮರಣಾ ನಂತರ ಅವನ ಮಗ ವಿಕ್ರಮಾದಿತ್ಯ ಗ್ವಾಲಿಯರ‍್ ಸಂಸ್ಥಾನದ ರಾಜನಾದ. ಆದರೆ ದಿಲ್ಲಿಯ ಇಬ್ರಾಹಿಮ್ ಲೋದಿ ಗ್ವಾಲಿಯರ‍್ ಗೆ ಮುತ್ತಿಗೆ ಹಾಕಿ ಗೆದ್ದುದರಿಂದ ವಿಕ್ರಮಾಧಿತ್ಯ ಅವನ ಮಾಂಡಲಿಕನಾಗಿ ರಾಜ್ಯಭಾರ ನಡೆಸಬೇಕಾಯಿತು. ಹೀಗಾಗಿ ಗ್ವಾಲಿಯರ‍್ ನ ಮೊದಲಿನ ವೈಭವವೆಲ್ಲ ಹಾಳಾಗಿ ಹೋಯಿತು. ಸಂಗೀತಗಾರರಿಗೆ ಆಶ್ರಯ ತಪ್ಪಿ ಅವರು ಬೇರೆ ಬೇರೆ ರಾಜ್ಯಗಳಿಗೆ ಚದುರಿ ಹೋದರು. ನಾಯಕ ಬಕ್ಸೂ ಗುಜರಾತಿನ ಅರಸನ ಅಶ್ರಯ ಬಯಸಿ  ಅಲ್ಲಿಗೆ ಹೊರಟುಹೋದ.

ಮಥುರಾಕ್ಕೆ ಹೊರಡು

ತನ್ನಾಮಿಶ್ರನ ಸಂಗೀತ ಶಿಕ್ಷಣ ಅರ್ಧಕ್ಕೇ ನಿಂತಿತ್ತು. ಆಗ ಅವನು ಕೈಚೆಲ್ಲಿ ಕುಳಿತುಕೊಳ್ಳದೆ ಆಗ್ರಾ ಪಟ್ಟಣಕ್ಕೆ ಹೊರಟುಬಂದ. ಆಗ್ರಾ ನಗರ ಸಂಗೀತಗಾರರ ಆಗರವಾಗಿತ್ತು. ಅಲ್ಲಿ ತನಗೆ ತಕ್ಕ ಗುರು ದೊರೆಯಬಹುದೆಂಬುದು ತನ್ನಾನ ಆಸೆಯಾಗಿತ್ತು. ಅಲ್ಲದೆ ಅಲ್ಲಿ ಒಂದು ದರಗಾಹದಲ್ಲಿ ಸೂಫೀ ಸಂತರೊಬ್ಬರು ವಾಸವಾಗಿದ್ದರು.

ಹಜರತ್ ಮಹಮ್ಮದ್ ಗೌಸ್ ಎಂದು ಅವರನ್ನು ಕರೆಯುತ್ತಿದ್ದರು. ತನ್ನಾ ಹೋಗಿ ಅವರ ಪಾದಕ್ಕೆ ಬಿದ್ದ. ಇವನ ಮನದಿಚ್ಛೆ ಏನೆಂದು ತಿಳಿದುಕೊಂಡ ಅವರು, ’ಮೇಲೇಳು, ಮಗೂ, ಮಥುರಾಕ್ಕೆ ಹೊರಡು. ನಿನ್ನ ಗುರು ಅಲ್ಲಿ ವೃಂದಾವನದಲ್ಲಿದ್ದಾನೆ! ’ಎಂದು ನುಡಿದರು. ಹಿರಿಯರ ನುಡಿಯನ್ನು ಕೇಳಿ ತನ್ನಾ ಪುಲಕಿತನಾದ. ಅವರ ಆಶೀರ್ವಾದ ಪಡೆದು ಮಥುರಾಕ್ಕೆ ಹೊರಟ.

ಗುರು ದೊರೆತರು

ವೃಂದಾವನದಲ್ಲಿ ಸ್ವಾಮಿ ಹರಿದಾಸರೆಂಬ ಸಂತರು ಭಗವನ್ನಾಮ ಸಂಕೀರ್ತನ ಮಾಡುತ್ತ ಕುಳಿತಿದ್ದರು.ಅವರ ಆ ದಿವ್ಯವಾದ ಗಾಯನವನ್ನು ಆಲಿಸುತ್ತ ತನ್ನಾ ಅವರೆದುರಲ್ಲಿ ಕುಳಿತ. ತಾನೆಲ್ಲಿ ಇರುವೆನೆಂಬುದೇ ಅವನಿಗೆ ಮರೆತು ಹೋಯಿತು. ಆನಂದಾತಿಶಯದಿಂದಾಗಿ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿದ್ದಿತು. ಸ್ವಾಮಿ ಹರಿದಾಸರ ಸಂಗೀತ ನಿಂತಾಗಲೇ ತನ್ನಾ ಈ ಲೋಕಕ್ಕೆ ಬಂದುದು.

ತನ್ನಾ ಹರಿದಾಸರ ಕಾಲಿಗೆರಗಿದ

ಅವರಿಗೂ ಆವಾಗಲೇ ಅರಿವಾದುದು ಬಾಲಕನೊಬ್ಬ ತಮ್ಮ ಗಾಯನವನ್ನು ತದೇಕ ಚಿತ್ತನಾಗಿ ಕೇಳುತ್ತ ಕುಳಿತಿದ್ದನೆಂದು.

ತನ್ನಾ ಸ್ವಾಮಿಗಳ ಪದತಲದಲ್ಲಿ ಸಾಷ್ಟಾಂಗವೆರಗಿದ.

’ನನ್ನನ್ನು ತಮ್ಮ ಶಿಷ್ಯ ಎಂದು ಸ್ವೀಕರಿಸಿದರೆ ನಾನು ಧನ್ಯನಾದೆ. ತಾವು ನನಗೆ ಸಂಗೀತವನ್ನು ಕಲಿಸಬೇಕು’ ಎಂದು ಬೇಡಿದ ಹುಡಗ.

ಇವನ ನಯ ವಿನಯ, ಸಂಗೀತ ಕಲೆಯ ಬಗೆಗಿದ್ದ ಶ್ರದ್ಧೆ ಇವುಗಳನ್ನು ಮೆಚ್ಚಿಕೊಂಡು ಹರಿದಾಸರು ಸಂಗೀತ ಕಲಿಸಲು ಒಪ್ಪಿಕೊಂಡರು.

ಅಂದಿನಿಂದ ತನ್ನಾ ಸ್ವಾಮೀಜಿಯ ಶಿಷ್ಯನಾದ.

ಗುರುಗಳ ಸೇವೆಯನ್ನು, ನಿಷ್ಠೆಯಿಂದ, ಭಕ್ತಿಯಿಂದ ಮಾಡುತ್ತಿದ್ದ ತನ್ನಾ. ಆಶ್ರಮದ ಅಂಗಳ ಗುಡಿಸುತ್ತಿದ್ದ, ನೀರು ತರುತ್ತಿದ್ದ, ಪೂಜೆಗೆ ಹೂಪತ್ರೆಗಳನ್ನು ಒದಗಿಸುತ್ತಿದ್ದ. ಮಿಕ್ಕ ಸಮಯದಲ್ಲಿ ಅವರು ಹೇಳಿಕೊಟ್ಟ ರಾಗಗಳನ್ನು ಧ್ರುಪದ, ಧಮಾರ, ಚೀಜನಿಗಳನ್ನು, ಸ್ವರಾಲಂಕಾರ ತಾನಗಳನ್ನು ಅಭ್ಯಾಸ ಮಾಡುತ್ತಿದ್ದ. ಹಗಲಿರುಳೆನ್ನದೆ ಹಾಡಿ ಸಾಧನೆ ಮಾಡುತ್ತಿದ್ದ.

ಸ್ವಾಮಿ ಹರಿದಾಸರು ಧ್ರುಪದ ಶೈಲಿಯ ಗಾಯನ ಸಂಪ್ರದಾಯ. ಅದರ ಸ್ವರೂಪ ಕರ್ನಾಟಕ ಸಂಗೀತದ ರಾಗ ತಾನ ಪಲ್ಲವಿಯಂತೆ. ಸ್ವಾಮಿ ಹರಿದಾಸರು ತನ್ನಾಮಿಶ್ರನಿಗೆ ಧ್ರುಪದ ಸಂಗೀತವಲ್ಲದೆ ಛಂದ, ಪ್ರಬಂಧ ಗಾಯನವನ್ನೂ ಕಲಿಸಿದರು.

ಬಹುಶಃ ಹರಿದಾಸರೆಂಬುದು ಅವರ ಹೆಸರಾಗಿರದೆ ಅನ್ವರ್ಥನಾಮವಾಗಿರಬೇಕು.

ವೃಂದಾವನದ ಸ್ವಾಮಿ ಹರಿದಾಸರಲ್ಲದೆ ಗೋಕುಲ ಎಂಬ ಆಶ್ರಮಸ್ಥಾನದಲ್ಲಿ ಗೋವಿಂದ ಸ್ವಾಮಿಗಳೆಂಬ ಸಂಗೀತಗಾರರಿದ್ದರು. ತನ್ನಾ ಅವರಲ್ಲಿಗೆ ಹೋಗಿ ಕೀರ್ತನ ಪದ್ಧತಿಯ ಗಾಯವನ್ನು ಕಲಿತುಕೊಂಡು ಬಂದ.

ರಾಜನ ಆಸ್ಥಾನದಲ್ಲಿ ತಾನಸೇನ

ಹೀಗೆ ಹಲವಾರು ವರ್ಷ ಗುರುಗಳ ಸೇವೆ ಮಾಡಿ ಸಂಗೀತ ವಿದ್ಯೆಯನ್ನು ಗಳಿಸಿ ಸ್ವಾಮಿಗಳ ಆಶೀರ್ವಾದ ಪಡೆದು ಮಥುರಾದಿಂದ ಹೊರಟ ತನ್ನಾ. ಮೊದಲಲ್ಲಿ ಶೇರ‍್ ಶಹ ಸೂರಿಯ ಮಗ ದೌಲತ್ ಖಾನ ನೆಂಬಾತ ಇವನಿಗೆ ಆಶ್ರಯ ಕೊಟ್ಟ. ಒಂದೆರಡು ವರ್ಷಗಳಾದ ಮೇಲೆ ಅಲ್ಲಿಂದ ಹೊರಟು ತನ್ನಾ ಬಾಂಧವಗಡದ ಅರಸ ರಾಮಚಂದ್ರನ ಆಸ್ಥಾನಕ್ಕೆ ಬಂದ. ಅಲ್ಲಿ ಹಾಡಿ ಆಸ್ಥಾನದಲ್ಲಿ ಗಾಯಕನಾಗಿ ನೇಮಕಗೊಂಡ. ಇವನ ಸಂಗೀತಕ್ಕೆ ಮನಸೋತು, ತಾನಗಳ ಅನಂತ ವೈವಿಧ್ಯಕ್ಕೆ ಬೆರಗಾಗಿ ರಾಜಾ ಇವನಿಗೆ ’ತಾನಸೇನ’ ಎಂಬ ಬಿರುದನ್ನಿತ್ತ. ಅಂದಿನಿಂದ ತನ್ನಾ, ತ್ರಿಲೋಚನ  ಇತ್ಯಾದಿ ಹೆಸರುಗಳೆಲ್ಲ ಹಿಂದಾಗಿ ’ತಾನಸೇ” ಎಂಬ ಹೆಸರೇ ಎಲ್ಲೆಡೆಗೂ ಹಬ್ಬಿತ್ತು. ತಾನಸೇನನ ಕೀರ್ತಿ ದಿಲ್ಲಿಯ ಆಸ್ಥಾನದವರೆಗೂ ತಲುಪಿತು.

ಅಕ್ಬರನ ಆಸ್ಥಾನಕ್ಕೆ

ದಿಲ್ಲೀಶ್ವರನಾಗಿದ್ದ ಅಕ್ಬರನು ತಾನಸೇನನ ಸಂಗೀತದ ಘನತೆಯ ಹೊಗಳಿಕೆ ಅನೇಕರ ಬಾಯಿಂದ ಬಂದುದನ್ನು ಕೇಳಿದ್ದ. ಅದಕ್ಕಾಗಿ ತನ್ನ ಆಸ್ಥಾನದ ನವರತ್ನಗಳಲ್ಲಿ ಸಂಗೀತರತ್ನವಾಗಿ ತಾನಸೇನನನ್ನು ನೇಮಿಸಿಕೊಳ್ಳಬೇಕೆಂದು ಬಯಸಿದನಾತ. ಹಾಗೆಂದು ಬಾಂಧವಗಡಕ್ಕೆ ಸಂದೇಶ ಕಳುಹಿಸಿದ. ತನ್ನ ಆಸ್ಥಾನದ ಸಂಗೀತಗಾರ ಅಕ್ಬರನ ಅಸ್ಥಾನದಲ್ಲಿ ಸಂಗೀತಗಾರನಾಗಿ ಉನ್ನತ ಪದವಿಗೇರುತ್ತಿರುವುದನ್ನು ಕಂಡು ರಾಜಾ ರಾಮಚಂದ್ರನಿಗೆ ಸಂತೋಷವೇ ಆಯಿತು. ಅವನು ತಾನಸೇನನ್ನು ತುಂಬು ಹೃದಯದಿಂದ  ಬೀಳ್ಕೊಟ್ಟ. ವೈಭವದ ಮೆರವಣಿಗೆಯಲ್ಲಿ ಅವನನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ದಿಲ್ಲಿಗೆ ಕಳುಹಿಸಿಕೊಟ್ಟ. ರಾಜಧಾನಿಯ ಗಡಿ ದಾಟುವವರೆಗೆ ರಾಜ ಸ್ವತಃ ತಾನಸೇನ ಕುಳಿತಿದ್ದ ಮೇನೆಗೆ ಹೆಗಲು ಕೊಟ್ಟ.

ಅಕ್ಬರನ ಆಸ್ಥಾನದಲ್ಲಿ ಗಾಯಕನಾದ ಮೇಲೆ ತಾನಸೇನನ ಕೀರ್ತಿ ದೇಶದ ಮೂಲೆ ಮೂಲೆಗೂ ಹರಡಿತು. ಬಾದಶಹ ಅವನ ಮೇಲೆ ಬಿರುದು ಬಾವಲಿ, ಧನ, ಕನಕ, ವಜ್ರ ವೈಡೂರ್ಯಗಳ ಮಳೆಗರೆದ. ಅವನನ್ನು ತನ್ನಲ್ಲಿ ನೌಕರಿಗಿರುವ ಸಂಗೀತಗಾರನಂತೆ ನೋಡದೆ ಆಪ್ತಮಿತ್ರ ನಂತೆ ಕಾಣುತ್ತಿದ್ದ. ಅವನ ಸಂಗೀತವನ್ನು ಮನಸಾರೆ ಹೊಗಳುತ್ತಿದ್ದ. ಅಂತಹ ಶ್ರೇಷ್ಠ ಗಾಯಕನೊಬ್ಬ ತನ್ನ ಆಸ್ಥಾನದ ಸಂಗೀತಗಾರ ಆಗಿರುವುದಕ್ಕಾಗಿ ಹೆಮ್ಮೆ ಪಡುತ್ತಿದ್ದ. ಅವನನ್ನು ’ಮಿಂಯಾ ತಾನಸೇನ’ ಎಂದು ಗೌರವದಿಂದ ಕರೆಯುತ್ತಿದ್ದ.

ಹೊಸರಾಗ

ಒಮ್ಮೆ ಅಕ್ಬರ‍್ ಮತ್ತು ತಾನಸೇನ ಕುದುರೆಗಳನ್ನೇರಿ ಊರ ಹೊರಗೆ ವಾಯುವಿಹಾರಕ್ಕೆಂದು ಹೋಗಿದ್ದರು. ಆಗ ವರ್ಷಾಕಾಲ. ಸಂಜೆಯಾಗುತ್ತ ಬಂದಿತ್ತು, ಇಬ್ಬರೂ ರಾಜಧಾನಿಗೆ ಹಿಂದಿರುಗಿ ಹೊರಟರು. ಅಕಾಶದಲ್ಲಿ ಕಪ್ಪು ಮೋಡಗಳು ದಟ್ಟಯಿಸಿದವು. ಬಿರುಗಾಳಿ ಬೀಸ ತೊಡಗಿತು. ಇವರಿಬ್ಬರೂ ಕುದುರೆಗಳನ್ನು ವೇಗವಾಗಿ ಓಡಿಸತೊಡಗಿದರು. ಆದರೆ ಅಷ್ಟರಲ್ಲಿ ಮಳೆ ಹನಿಗಳು ಉದುರತೊಡಗಿದವು. ಹತ್ತಿರದಲ್ಲಿ ಒಂದು ಬಿದಿರ ಮೆಳೆ ಕಂಡಿತು. ಇವರಿಬ್ಬರೂ ಕುದುರೆಗಳನ್ನು ನಿಲ್ಲಿಸಿ ಕೆಳಗಿಳಿದರು. ಅಲ್ಲಿಯೇ ಒಂದು ಮರಕ್ಕೆ ಅವನ್ನು ಕಟ್ಟಿ ತಾವು ಬಿದಿರ ಮೆಳೆಯ ಚಾಚಿಗೆ ಹೋಗಿ ನಿಂತರು

ತಾನಸೇನ ಹಾಡಿದರೆ ಚಾಂಖಾನ, ಸೂರಜಖಾನರೂ ಮೈಮರೆತು ಕೇಳಿದರು

ಮಳೆ ಜೋರಾಯಿತು. ಬಿರುಗಾಳಿಯ ರಭಸವೂ ಹೆಚ್ಚಾಯಿತು. ಆಗ ಮಳೆ ಹನಿಗಳ ತಟಪಟ, ಮತ್ತು ಬಿದಿರ ಮೆಳೆಯೊಳಗೆ ನುಗ್ಗಿ ಸುಂಯ್ಗುಡುತ್ತಿದ್ದ ಬಿರುಗಾಳಿಯ ಸದ್ದು ಇವುಗಳನ್ನು ಕೇಳಿ ಮಿಂಯಾ ತಾನಸೇನನಿಗೆ ಹೊಸದೊಂದು ರಾಗದ ಕಲ್ಪನೆ ಹೊಳೆಯಿತು. ಅಲ್ಲಿಯೇ ನಿಂತು ಆ ಹೊಸ ರಾಗವನ್ನು ರಚಿಸಿದ. ಅದನ್ನು ಹಿಂದೂಸ್ತಾನೀ ಸಂಗೀತಗಾರರು ಈಗಲೂ ಹಾಡುತ್ತಾರೆ. ಅದನ್ನು ಹಾಡಿದರೆ ಬಿದಿರ ಮೆಳೆಯೊಳಗೆ ಬಿರುಗಾಳಿ ಸುಂಯಿ ಗುಟ್ಟಿದ ಅನುಭವವಾಗುತ್ತದೆ. ದಟ್ಟಯಿಸಿದ ಮೋಡಗಳಿಂದ ಕೋಲ್ಮಿಂಚು ಹೊಳೆದು ಗುಡುಗು ಘರ್ಜಿಸಿದಂತೆ ಕೇಳುತ್ತದೆ. ತಟಪಟ ರುಮ-ಝುಮ, ರುಮ-ಝುಮ ಎಂದುದುರುವ ಮಳೆ ಹನಿಗಳ ಏಕತಾನ ಕಿವಿಗೆ ಬೀಳುತ್ತದೆ. ಮಿಂಯಾ ತಾನಸೇನ ರಚಿಸಿದ ಈ ರಾಗ ಮಿಂಯಾಕೀ ಮಲ್ಹಾರ ಎಂದು ಪ್ರಸಿದ್ಧವಾಗಿದೆ.

ಹಾಡಲು ಯಾರಿಗೆ ಧೈರ್ಯ?

ಒಮ್ಮೆ ಅಕ್ಬರನ ಆಸ್ಥಾನದ ಸಾಮರ್ಥ್ಯದ ಪರೀಕ್ಷೆಯ ಕಾಲ ಬಂದಿತು. ಅವನ ಆಸ್ತಾನದ ಸಂಗೀತಗಾರರನ್ನು ಮೀರಿಸುವರೋ ಎನ್ನುವಂತಹ ಸಂಗೀತಗಾರರ ಸವಾಲು ಎದುರಾಯಿತು.

ಚಾಂದಖಾನ, ಸೂರಜಖಾನರೆಂಬ ಅಣ್ಣತಮ್ಮಂದಿರಿಬ್ಬರು ಬಹು ಚೆನ್ನಾಗಿ ಹಾಡುತ್ತಿದ್ದರು. ಹಿಂದೂಸ್ತಾನದಲ್ಲೆಲ್ಲಿಯೂ ಅವರಿಗೆ ಸರಿಸಮಾನರಾದ ಗಾಯಕರೇ ಇಲ್ಲ ಎನ್ನುವಂತಾಗಿದ್ದಿತು. ಅವರು ಅನೇಕ ರಾಜರ ದರಬಾರುಗಳಿಗೆ ಹೋಗಿ ಅಲ್ಲಿನ ದರಬಾರು ಗಾಯಕರನ್ನು ಸೋಲಿಸಿ ರಾಜ ಮಹರಾಜರುಗಳಿಂದ ಬಹುಮಾನ, ಬಿರುದು, ಬಾವಲಿಗಳನ್ನು ಪಡೆಯುತ್ತ ದಿಗ್ವಿಜಯಕ್ಕೆ ಹೊರಟಿದ್ದರು. ಹಾಗೆಯೇ ಸಂಚರಿಸುತ್ತ ಎಲ್ಲೆಲ್ಲಿಯೂ ಜಯಗಳಿಸುತ್ತ ಚಾಂದಖಾನ, ಸೂರಜಖಾನರು ದಿಲ್ಲಿಗೆ ಬಂದರು.

ಅಕ್ಬರನ ಆಸ್ಥಾನದಲ್ಲಿ ಅವರಿಬ್ಬರು ಹಾಡಿದರು. ಅವರ ಗಾಯನ ಕೇಳಲು ಆಗ್ರಾದ ಕಲಾರಸಿಕರು, ಖಾನ ಮೀರರು ಕಿಕ್ಕಿರಿದು ನೆರದಿದ್ದರು. ಆದರೆ ಎಳ್ಳು ಬಿದ್ದರೆ ಸದ್ದಾಗುವಷ್ಟು ನಿಶ್ಯಬ್ದವಾಗಿ ಕುಳಿತಿದ್ದರು.

ಸೂರ್ಯೋದಯಕ್ಕೆ ಆರಂಭವಾಯಿತು. ಗಾಯನ ರಾಗಗಳ ಸಮಯ ನಿರ್ಬಂಧದ ನಿಯಮವನ್ನನುಸರಿಸಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ರಾಗಗಳನ್ನು ಸೂರಜಖಾನ ಹಾಡಿದ. ಆಕಾಶದಲ್ಲಿ ಸೂರ್ಯನ ಚಲನೆಗನುಗುಣವಾಗಿ ಭೈರವ, ಬಿಲಾವಲ, ಸಾರಂಗ, ಪಲಾಸೀ, ಶ್ರೀ ಇತ್ಯಾದಿ ರಾಗ ಪ್ರಕಾರಗಳನ್ನೆಲ್ಲ ಹಾಡಿ ಮುಗಿಸಿದ ಅವನು. ಆಮೇಲೆ ಅವನ ತಮ್ಮ ಚಾಂದಖಾನ ಹಾಡಲು ಕುಳಿತ. ಸಾಯಂಕಾಲ ಚಂದ್ರೋದಯವಾಗಿ ಬೆಳಗಿನಲ್ಲಿ ಚಂದ್ರಾಸ್ತವಾಗುವವರೆಗಿನ ರಾತ್ರಿಯ ಎಲ್ಲ ಪ್ರಹರಗಳ ರಾಗಗಳನ್ನು ಅವನು ಹಾಡಿ ಮುಗಿಸಿದ.

ಇವರಿಬ್ಬರ ಸಂಗೀತಕ್ಕೆ ಸಾಟಿಯೇ ಇಲ್ಲ; ಮುಂದೆ ಅಕ್ಬರನ ಆಸ್ಥಾನದ ಸಂಗೀತಗಾರರು ಹಾಡಬೇಕು. ಆದರೆ ಈ ಅಣ್ಣ ತಮ್ಮಂದಿರ ಗಾಯನವಾದ ಮೇಲೆ ಹಾಡಲು ಯಾರಿಗೆ ಧೈರ್ಯ ಎಂದುಕೊಂಡರು ಕುಳಿತಿದ್ದವರು.

ಆಸ್ಥಾನದ ಗೌರವ ಉಳಿಯಿತು

ಅಕ್ಬರ‍್ ಮಿಂಯಾ ತಾನಸೇನನಿಗೆ ಹಾಡಲು ಆಜ್ಞಾಪಿಸಿದ. ಇನ್ನೇನು ಉಳಿದಿದೆ ಹಾಡಲು? ಆದರೆ ಇದೀಗ ಅಕ್ಬರನ ಆಸ್ಥಾನದ ಮರ್ಯಾದೆಯ ಪ್ರಶ್ನೆ: ತನ್ನ ಯೋಗ್ಯತೆ ಪ್ರಶ್ನೆ. ತಾನಸೇನ ಮನದಲ್ಲಿ ಗುರುಗಳ ಧ್ಯಾನ ಮಾಡಿ ಹಾಡಲು ಕುಳಿತ. ಆಗ ತೋಡೀರಾಗಕ್ಕೆ ಪಂಚಮ ಸ್ವರವಿರಲಿಲ್ಲ. ತಾನಸೇನ ವಕ್ರ ಸಂಚಾರ ದೊಂದಿಗೆ ’ಪ’ ಸ್ವರ ಸೇರಿಸಿ ಹಾಡಿದ. ಅದರ ಹೊಸತನವನ್ನು ಮೆಚ್ಚಿ ಎಲ್ಲರೂ ತಲೆದೂಗಿದರು. ಆಗ ಅದು ಮಿಂಯಾಕೀ ತೋಡೀ ಎಂಬ ಹೆಸರನ್ನು ಪಡೆದು ಹೊಸರಾಗವಾಯಿತು.

ಮಳೆಗೆ ಸಿಕ್ಕಿ ಬಿದಿರ ಮಳೆಯಲ್ಲಿ ಆಶ್ರಯ ಪಡೆದಂದು ರಚಿಸಿದ ಮಿಂಯಾಕೀ ಮಲ್ಹಾರ ರಾಗ ಹಾಡಿದ ತಾನಸೇನ. ಆ ರಾಗದ ವಿಚಿತ್ರ ವಕ್ರ ಸಂಚಾರವನ್ನು ಕೇಳಿ ಮೈಯಲ್ಲಿ ಕೋಲ್ಮಿಂಚಿನ ಸಂಚಾರವಾದೆಂತೆನಿಸಿತು ಚಾಂದಖಾನ ಸೂಜಖಾನರಿಗೆ. ’ವಾಹ ಮಿಂಯಾ ವಾಹ!’ ಎಂದು ಅವರಿಬ್ಬರೂ ಹರ್ಷೋದ್ಗಾರ ಮಾಡಿ ತಾನಸೇನನನ್ನು ಹೊಗಳಿದರು.  ಅದರಿಂದ ಸ್ಫೂರ್ತಿಗೊಂಡ ತಾನಸೇನ ಇನ್ನೊಂದು ಹೊಸ ರಾಗವನ್ನು ರಚಿಸಿ ಹಾಡಿದ. ಕಾನಡಾ  ರಾಗದ ಸಂಪೂರ್ಣ ಸ್ವರೂಪವನ್ನೇ ಬದಲಾಯಿಸಿದ. ಅದಕ್ಕೊಂದು ರಾಜಗಾಂಭೀರ್ಯ ಬಂದಿತು. ಅಕ್ಬರನ ದರಬಾರಿನಲ್ಲಿ ಮೊದಲ ಬಾರಿಗೆ ಹಾಡಿದ ಕಾರಣ ಅದಕ್ಕೆ ದರಬಾರೀ ಕಾನಡಾ ಎಂದು ಹೆಸರಾಯಿತು.

ಅದನ್ನು ವರ್ಣಿಸುವುದು ಸಾಧ್ಯವೇ ಇಲ್ಲ

ಚಾಂದಖಾನ ಸೂರಜಖಾನರನ್ನು ಸಂಗೀತ ಸ್ಪರ್ಧೆಯಲ್ಲಿ ಸೋಲಿಸಿದುದು ತಾನಸೇನನ ಕೀರ್ತಿಗೆ ಕಳಶವಿಟ್ಟಂತಾಯಿತು. ಅವನ ಬಗೆಗೆ ಅಕ್ಬರನ ಅಭಿಮಾನ ಇನ್ನಷ್ಟು ಹೆಚ್ಚಿತು. ಅದರೊಂದಿಗೆ ಅವನ ಮನದಲ್ಲಿ ಒಂದು ಕುತೂಹಲವೂ ಹೊಕ್ಕಿತು. ಇವನೇ ಇದಷ್ಟು ಭವ್ಯವಾಗಿ ದಿವ್ಯವಾಗಿ ಹಾಡುತ್ತಿರಬೇಕಾದರೆ ಇನ್ನು ಇವನ ಗುರು ಹೇಗೆ ಹಾಡುತ್ತಿರಬಹುದು!

ಅಕ್ಬರ‍್ ತಾನಸೇನನ್ನು ಕೇಳಿಯೇ ಬಿಟ್ಟ : ’ತಾನಸೇನ್ ನಿನ್ನ ಗುರುಗಳು ಹೇಗೆ ಹಾಡುತ್ತಾರೆ?”

ಅದಕ್ಕೆ ತಾನಸೇನ ಉತ್ತರ ಕೊಟ್ಟ : ಪ್ರಭೂ ನನ್ನ ಗುರು ಸ್ವಾಮಿ ಹರಿದಾಸರ ಸಂಗೀತವನ್ನು ವರ್ಣಿಸುವುದು ನನ್ನಿಂದ ಸಾಧ್ಯವಿಲ್ಲ. ಅದು ಅಲೌಕಿಕ ಸಂಗೀತ. ಅದನ್ನು ಕೇಳಿ ಅನುಭವಿಸಬೇಕೇ ಹೊರತು ಬಾಯಿ ಮಾತಿನಿಂದ ಅದನ್ನು ಬಣ್ಣಿಸುವುದು ಶಕ್ಯವಲ್ಲ !’

ಅವರು ಬರುವುದಿಲ್ಲ

ತಾನಸೇನನ್ನು ಮೀರಿಸುವ ಸಂಗೀತಗಾರರ ಗಾಯನವನ್ನು ಕೇಳಲೇಬೇಕು ಎಂದು ಚಕ್ರವರ್ತಿಯ  ಮನಸ್ಸು ಕುದಿಯಿತು.

’ಹಾಗಾದರೆ ನಿನ್ನ ಗುರುವನ್ನಿಲ್ಲಿಗೆ ಕರೆಸು, ನನ್ನ ದರಬಾರಿನಲ್ಲಿ ಅವರು ಹಾಡಲಿ ’ಎಂದ ಅಕ್ಬರ‍್.

’ಅವರನ್ನು ಇಲ್ಲಿಗೆ ಕರೆಸುವುದೇ ಪ್ರಭೂ? ಮಥುರಾದ ವೃಂದಾವನದಲ್ಲಿ ಶ್ರೀಕೃಷ್ಣನ ನಾಮ ಸಂಕೀರ್ತನ ಮಾಡುವುದನ್ನು ಬಿಟ್ಟು ಅವರು ಶಾಹೀ ದರಬಾರಿಗೆ ಬಂದು ಹಾಡಲು ಖಂಡಿತ ಒಪ್ಪಲಾರರು. ಅವರ ಎತ್ತರಕ್ಕೆ ಮುತ್ತು ರತ್ನಗಳನ್ನು ಸುರಿಯುತ್ತೇನೆಂದರೂ ಇಲ್ಲಿಗೆ ಬರಲಾರರು.’

ಅಕ್ಬರ‍್ ಯೋಚಿಸಿದ.  ಆ ಸಂಗೀತಗಾರರು ಆಸ್ಥಾನಕ್ಕೆ ಬರುವುದಿಲ್ಲ ಎಂದರೆ ಅವರು ಸಂಗೀತವನ್ನು ಕೇಳುವುದು ಹೇಗೆ? ಆದರೆ ಕೇಳದಿರಲು ಮನಸ್ಸು ಒಪ್ಪುವುದಿಲ್ಲ. ತಾನೇ ಅವರಿದ್ದಲ್ಲಿಗೆ ಹೋದರೆ ಹೇಗೆ? ಆದರೆ ಅದು ತನ್ನ ಗೌರವಕ್ಕೆ ಕುಂದಲ್ಲವೆ? ಸಮಸ್ತ ಹಿಂದೂಸ್ತಾನದ ಸಾಮ್ರಾಟನಾದ ತಾನು ಒಬ್ಬ ಯಃಕಶ್ಚಿತ್ ಹರಿದಾಸನ ಗುಡಿಸಿಲಿನಲ್ಲಿ ಕುಳಿತು ಗಾಯನ ಕೇಳುವುದೇ? ಆದರೇನು ಮಾಡುವುದು? ತಾನಸೇನ ಇಷ್ಟೊಂದು ಹೊಗಳುತ್ತಾನೆಂದ ಮೇಲೆ ಆ ಮುದುಕನ ಗಾಯನ ಅಲೌಕಿಕವಾಗಿಯೇ ಇರಬೇಕು.

ಆಗಲಿ, ಅದು ನಿಜವಾಗಿ ಅಂತಹ ದಿವ್ಯವಾದ ಸಂಗೀತವೇ ಎಂಬುದನ್ನು ಒರೆಗೆಹಚ್ಚಿಯೆ ನೋಡೋಣ ಎಂದುಕೊಂಡು ಅಕ್ಬರ‍್ ವೃಂದಾವನಕ್ಕೆ ಹೊರಡಲು ತೀರ್ಮಾನಿಸಿದ.

ತಂಬೂರಿ ಹೊತ್ತ ಸಾಮ್ರಾಟ

ಆದರೆ ತಾನಸೇನ ಅವನನ್ನು ತಡೆದ.

’ಪ್ರಭೂ, ನೀವು ಹೀಗೆ ದಿಲ್ಲಿಯ ಬಾದಶಹರಾಗಿ ಜರತಾರೀ ಬಟ್ಟೆಬರೆ, ಮುತ್ತುರತ್ನಗಳ ಆಭರಣಗಳನ್ನು ಧರಿಸಿ ಬಂದರೆ ನಿಮ್ಮೆದುರು ನಮ್ಮ ಗುರುಗಳು ನಿಶ್ಚಯವಾಗಿಯೂ ಹಾಡಲಾರರು ’ ಎಂದ.

’ಹಾಗಾದರೆ ಏನು ಮಾಡಬೇಕು? ಹೇಗಾದರೂ ನಾನು ನಿನ್ನ ಗುರುವಿನ ಗಾಯನವನ್ನು ಕೇಳಲೇಬೇಕು’ಅಕ್ಬರ‍್ ನಿರ್ಧಾರದಿಂದ ನುಡಿದ.

ತಾನಸೇನ ಆಗ ಒಂದು ಉಪಾಯ ಮಾಡಿದ, ಚಕ್ರವರ್ತಿಗೆ ಹೇಳಿದ : ’ಪ್ರಭೂ, ಇರುವುದು ಒಂದೇ ದಾರಿ, ತಾವು ನನ್ನ ಶಿಷ್ಯ ಎನ್ನುವಂತೆ ಬರಬೇಕು..’

”ಎಂದರೆ?’

’ಸಾಮಾನ್ಯ ವೇಷದಲ್ಲಿ ಬರಬೇಕು. ಅಲ್ಲದೆ, ಶಿಷ್ಯ ಗುರುವಿನ ತಂಬೂರಿಯನ್ನು ಹೊತ್ತುಕೊಂಡು ಜೊತೆಗೆ ಹೋಗುವುದೇ ಸಂಪ್ರದಾಯ.’

ಇದಕ್ಕೂ ಒಪ್ಪಿದ ಚಕ್ರವರ್ತಿ!

ಬಾದಶಹನಿಗೆ ಸಾಮಾನ್ಯ ಸೇವಕನ ಉಡುಪನ್ನು ಹಾಕಿಸಿ ತನ್ನ ಶಿಷ್ಯನನ್ನಾಗಿ ಪರಿವರ್ತಿಸಿ ಅವನ ಮೇಲೆ ತನ್ನ ತಂಬೂರಿ ಹೊರಿಸಿಕೊಂಡು ತಾನಸೇನ ಮಥುರಾಕ್ಕೆ ನಡೆದ.

ಹೀಗೆ ಹಾಡಬೇಕು!

ಶ್ರೀಕೃಷ್ಣನ ಮಂದಿರದಲ್ಲಿ ಪೂಜಾನಿರತರಾಗಿದ್ದ ಸ್ವಾಮಿ ಹರಿದಾಸರನ್ನು ’ನಿಮ್ಮ ಗಾಯನ ಕೇಳಬೇಕೆಂಬ ಆಸೆಯಾಗಿದೆ. ಅದಕ್ಕಾಗಿ ದಿಲ್ಲಿಯಿಂದ ಇಲ್ಲಿಗೆ ಇಷ್ಟು ದೂರ ಪ್ರಯಾಣ ಮಾಡಿ ಬಂದಿದ್ದೇವೆ. ದಯವಿಟ್ಟು ಹಾಡುವಿರಾ ಗುರೂಜೀ?’ ಎಂದು ತಾನಸೇನ ಪ್ರಾರ್ಥಿಸಿದ.

ಸ್ವಾಮಿ ಹರಿದಾಸರ ಗಾಯನವನ್ನು ಮೊಗಲ್ ಚಕ್ರವರ್ತಿಯೂ ಸಂಗೀತ ಚಕ್ರವರ್ತಿಯೂ ಮೈಮರೆತು ಕೇಳಿದರು.

ಹರಿದಾಸರು ಅವನ ಮಾತುಗಳನ್ನೂ ಕೇಳಿಯೂ ಕೇಳದವರಿಂತಿದ್ದರು, ತಮ್ಮ ಪೂಜಾ ಪಾಠಗಳಲ್ಲಯೇ ನಿರತರಾಗಿದ್ದರು. ಅವರು ಹಾಡಲು ಸಮ್ಮತಿಸುವ ಲಕ್ಷಣಗಳೇನೂ ಕಾಣಲಿಲ್ಲ.

ಆಗ ತಾನಸೇನನಿಗೆ ಒಂದು ಉಪಾಯ ಹೊಳೆಯಿತು. ಶಿಷ್ಯನ ವೇಷದಲ್ಲಿದ್ದ ಅಕ್ಬರನ ಕೈಯಿಂದ ತಂಬೂರಿ ತೆಗೆದುಕೊಂಡು ಬೇಕುಬೇಕೆಂದೇ ಅಪಸ್ವರ ಹಾಡ ತೊಡಗಿದ.

ಈ ಸಂಗೀತದ ಕೊಲೆಯನ್ನು ಕೇಳಿ ಸಹಿಸಲಾಗಲಿಲ್ಲ ಗುರುಗಳಿಗೆ. ಅದೂ ಹೀಗೆ ಅಪಸ್ವರ ಹಾಡುತ್ತಿದ್ದವನು ತಮ್ಮ ಶಿಷ್ಯ!

’ಅಯ್ಯೋ, ಹಾಳು ಮಾಡುತ್ತಿರುವೆಯಲ್ಲ, ರಾಗವನ್ನು! ಅದನ್ನು ಹಾಗಲ್ಲ, ಹೀಗೆ ಹಾಡಬೇಕು’ ಎಂದು ಹಾಡತೊಡಗಿದರು.

ಉಪಾಯ ಫಲಿಸಿತು. ಇಬ್ಬರೂ ಗಂಟೆಗಳ ಕಾಲ ಕುಳಿತು ಕೇಳಿದರು.

ಗಾಯನ ಮುಗಿಯಿತು. ಗಂಧರ್ವ ಲೋಕದಿಂದ ಮತ್ತೆ ಭೂಮಿಗೆ ಬಂದೆಂತೆನಿಸಿತು. ಇವರಿಗೆ. ಸ್ವಾಮಿ ಹರಿದಾಸರದ್ದು ತಮ್ಮ ಆಶ್ರಮಕ್ಕೆ ಹೊರಟರು. ಅಕ್ಬರ‍್ ತಂಬೂರಿಗೆ ಗವಸು ತೊಡಿಸಿ ಕಂಕುಳಲ್ಲಿ ಹೊತ್ತುಕೊಂಡು ನಿಂತ. ತಾನಸೇನನೂ ಮೇಲಕ್ಕೆದ್ದ. ಇಬ್ಬರೂ ದಿಲ್ಲಿಯ ಕಡೆಗೆ ಪ್ರಯಾಣ ಬೆಳೆಸಿದರು.

ನಾನು ಹಾಡುವುದು ಅವರು ಹಾಡುವುದು

ಮಾರ್ಗದಲ್ಲಿ ಅಕ್ಬರನೆಂದ :

’ಇಂದು ನನ್ನ ಜನ್ಮ ಧನ್ಯವಾಯಿತು ತಾನಸೇನ. ನಿಜವಾಗಿ ನಿನ್ನ ಗುರುವಿನದು ಅಲೌಕಿಕ ಸಂಗೀತ. ನಿನ್ನ ಗಾಯನಕ್ಕಿಂತ ಎಷ್ಟೋ ಎಷ್ಟೋ ಪಾಲು ಮಿಗಿಲಾಗಿದೆ ಸ್ವಾಮೀಜಿಯ ಗಾಯನ”

’ಅದೇಕೆ ಹಾಗೆ?’

ಅದು ಸಹಜ ಆಲಂಪನಾ ತಾನಸೇನ ಉತ್ತರಿಸಿದ, ’ನಾನು ಹಾಡುವುದು ಕೇವಲ ಒಬ್ಬ ಮಾನವನಾದ ದಿಲ್ಲಿಯ ಬಾದಶಹ ಅಕ್ಬರನನ್ನು ಮೆಚ್ಚಿಸುವುದಕ್ಕೆ; ನನ್ನ ಗುರು ಹಾಡುವುದು ಇಡೀ ಜಗತ್ತಿನ ಚಕ್ರವರ್ತಿಯಾದ ಶ್ರೀಕೃಷ್ಣನನ್ನು ಮೆ‌ಚ್ಚಿಸುವುದಕ್ಕೆ ಅದಕ್ಕಾಗಿ ಅವರ ಗಾಯನ ಅಷ್ಟೊಂದು ಶ್ರೇಷ್ಠವಾಗಿದೆ.’

ಇದು ನಡೆದುದು ೧೬೨೩ರಲ್ಲಿ. ಈ ಸಂಗತಿಯನ್ನು ಅಬುಲ್ ಫಜಲನೆಂಬುವನು ’ಆಯಿನೇ ಅಕಬರೀ’ ಎಂಬ ಗ್ರಂಥದಲ್ಲಿ ಬರೆದಿಟ್ಟಿದ್ದಾನೆ. ಅವನೊಬ್ಬ ಇತಿಹಾಸಕಾರ. ಅಕ್ಬರನ ನವರತ್ನಗಳಲ್ಲಿ ಅವನೂ ಒಬ್ಬನಾಗಿದ್ದ. ಕಳೆದ ಒಂದು ಸಾವಿರ ವರ್ಷಗಳಲ್ಲಿ ತಾನಸೇನನಂತಹ ದೊಡ್ಡ ಸಂಗೀತಕಾರ ಹುಟ್ಟಿರಲಿಲ್ಲವೆಂದು ಅವನು ಬರೆದಿದ್ದಾನೆ.

ತಾನಸೇನನ ಕೆಲವು ರಚನೆಗಳು

ತಾನಸೇನ ಕೇವಲ ಅಪೂರ್ವ ಗಾಯಕ, ಸಂಗೀತ ಶಾಸ್ತ್ರಜ್ಞನಲ್ಲದೆ, ಒಳ್ಳೆಯ ವಾಗ್ಗೇಯಕಾರನೂ ಆಗಿದ್ದ. ಹಾಡುಗಳನ್ನು ರಚಿಸಿದ. ಆದರೆ ಸಂಗೀತಗಾರನಾಗಿ ಅವನು ಅತ್ಯುಚ್ಛ ಶಿಖರವನ್ನು ಏರಿದ ಕಾರಣ ಅವನ ಕೃತಿಗಳ ಉಲ್ಲೇಖ ಹೆಚ್ಚು ಕಾಣುವುದಿಲ್ಲ. ತಾನಸೇನ ಹಾಡಲು ಸ್ವಯಂ ರಚಿಸಿದ ಧ್ರುಪದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ.

ಸರಸ್ವತಿಯನ್ನು ನಮಸ್ಕರಿಸುವ ಒಂದು ರಚನೆ ಹೀಗಿದೆ :

ಜೈ ಶಾರದಾ ಭವಾನಿ, ಭಾರತೀ ವಿದ್ಯಾದಾಯಿನಿ
ಮಹವಾಕ್ ಬಾನಿ, ತೋಹಿ ಧ್ಯಾವ್ಹೆ!
ಸುರ ನರ ಮುನಿ ಮಾನಿ,ತೋಹಿ ಕೂ
ತ್ರಿಭುವನ ಜಾನಿ
ಜೋ ಜಾಕೀ ಮನ ಇಚ್ಛಾ, ಸೋ ಈ ಸೋ
ಪುಜಾವೈ ||

ಮಂಗಳಾ ಬುಧಿದಾನೀ, ಜ್ಞಾನ ಕೀ ನಿಧಾನೀ,
ವೀನಾ ಪುಸ್ತಕ ಧಾರಿನೀ ಪ್ರಥಮ ತೋಹಿ ಗಾವೈ |
ತಾನಸೇನ  ತೇರೀ ಅಸ್ತುತಿ ಕಹಾ ಲೌ ಬಖಾನೈ,
ಸುಪ್ತ ಸುರ, ತೀನ ಗ್ರಾಮ, ರಾಗ ರಂಗ
ಲಯ ಅಕ್ಷರ ಆವೈ ||

 

(ಶಾರದೆ ನಿನಗೆ ಜಯವಾಗಲಿ, ನೀನು ನಮಗೆ ವಿದ್ಯೆ ನೀಡಿದ್ದೀಯೆ ಮಾತನಾಡುವ ಶಕ್ತಿ ನೀಡಿದ್ದೀಯೆ, ಮನುಷ್ಯರು, ದೇವತೆಗಳು ಮುನಿಗಳಿಂದ ಗೌರವವನ್ನು ಪಡೆಯುತ್ತಾ ಮೂರು ಲೋಕಗಳಲ್ಲಿಯೂ ಪ್ರಖ್ಯಾತಳಾಗಿದ್ದೀಯೆ. ನೀನು ಬುದ್ಧಿ, ಜ್ಞಾನಗಳನ್ನು ನೀಡುತ್ತೀಯೆ, ವೀಣೆ, ಪುಸ್ತಕಗಳನ್ನು ಕೈಯಲ್ಲಿ ಹಿಡಿದಿದ್ದೀಯೆ. ನಾನು ತಾನಸೇನ ನಿನ್ನನ್ನು ಪ್ರಾರ್ಥಿಸುತ್ತೇನೆ.  ಜಗತ್ತಿನ ಸಮಸ್ತ ಜನರೂ ಜ್ಞಾನಿಗಳಾಗಲಿ ಎಂದು)

ತಾನಸೇನ ಪಾಪವಿನಾಶಿನಿ ಗಂಗೆಯನ್ನು ಕೊಂಡಾಡುವ ರೀತಿ ನೋಡಿ :

ಜೈಗಂಗಾ ಜಗ ತಾರಿನೀ ಜಗ ಜನನೀ ಪಾಪ ಹರನೀ
ವೇದ ವರನೀ ವೈಕುಂಠ ನಿಸಾನೀ
|
ಭಾಗೀರಥೀ ವಿಷ್ಣುಪದ ಪವಿತ್ರ ತ್ರಿಪಥಗಾ,
ಜಾಹ್ವವೀ ಜಗ ಪಾವನೀ ಜಗ ಜಾನೀ ||
ಈಶ ಶೀಷ ಮಧ್ಯ ವಿರಾಜಿತ, ತ್ರೈಲೋಕ
ಪಾವನ ಕಿಯೇ
ಜೀವ-ಜಂತು, ಖಗ-ಮೃಗ ಸುರ – ನರ ಮುನಿ ಮಾನೀ |

 

ತಾನಸೇನ ಪ್ರಭು ತೇರೀ ಅಸ್ತುತಿ ಕರತ ಹೈ
ದಾತಾ ಭಕ್ತ ಜನನ ಕೀ
, ಮುಕ್ತಿ ಕೀ ವರದಾನಿ ||

(ಗಂಗೆ, ನಿನಗೆ ಜಯವಾಗಲಿ, ನೀನು ಜಗತ್ತಿಗೇ  ಮುಕ್ತಿ ನೀಡುತ್ತೀಯೆ. ಜಗತ್ತಿನ ತಾಯಿ ನೀನು ಎಲ್ಲರ ಪಾಪವನ್ನು ನಿವಾರಿಸುವೆ. ನೀನು ವೇದಮಾತೆ, ವೈಕುಂಠವಾಸಿನಿ. ಈಶ್ವರನ ಜಟೆಯ ಮಧ್ಯೆ ನೀನು ವಿರಾಜಿಸುತ್ತಾ ಮೂರು ಲೋಕವನ್ನೂ ಉದ್ಧಾರ ಮಾಡಿದ್ದೀಯೆ. ಪ್ರಾಣಿ-ಪಕ್ಷಿಗಳು, ಮನುಷ್ಯ ದೇವತೆಗಳು, ಮುನಿಗಳೂ ನಿನ್ನಲ್ಲಿ ಗೌರವ ಹೊಂದಿದ್ದಾರೆ. ನಾನು ತಾನಸೇನ ನಿನ್ನ ಸ್ತುತಿ ಮಾಡುತ್ತಿದ್ದೇನೆ. ಭಕ್ತ ಜನರೆಲ್ಲರಿಗೆ ಮುಕ್ತಿಯ ವರ ನೀಡು)

 

ಒಪ್ಪದವರು

ಆದರೆ ತಾನಸೇನ ಬದುಕಿದ್ದ ಕಾಲದಲ್ಲಿಯೇ ಅವನ ಸಂಗೀತವನ್ನು ಜರೆಯುತ್ತಿದ್ದವರೂ ಇದ್ದರು. ಅವರು ವೃಂದಾವನ ಗೋಕುಲಗಳಲ್ಲಿ ವಾಸಿಸುತ್ತಿದ್ದ ಗೋಸಾಯಿಗಳು. ಅವರಿಗೆ ಇವನ ಸಂಗೀತದ ಬಗೆಗೆ ತಿರಸ್ಕಾರವಿತ್ತು. ಅವರೆಲ್ಲ ಭರತನೆಂಬ ಋಷಿಯ ನಾಟ್ಯ ಶಾಸ್ತ್ರಕ್ಕನುಸಾರವಾಗಿ ಪರಂಪರಾಗತವಾಗಿ ಹಾಡುತ್ತ ಬಂದ ಶುದ್ಧ ಭಾರತೀಯ ಸಂಪ್ರದಾಯ ಶುದ್ಧ ರಾಗಗಳನ್ನೇ ಹಾಡುತ್ತಿದ್ದರು. ಆ ಕಾಲಕ್ಕೆ ಭಾರತದಲ್ಲಿ ಮುಸ್ಲಿಮರ ಆಳ್ವಿಕೆಯಿಂದಾಗಿ ಅವರ ಸಾಹಿತ್ಯ, ಸಂಗೀತ, ಸಂಸ್ಕೃತಿಗಳ ಪ್ರಭಾವ ಭಾರತೀಯರ ಮೇಲೂ ಅನಿವಾರ್ಯವಾಗಿ ಬಿದ್ದಿತು. ಅದರಿಂದಾಗಿ ಹಿಂದೂಸ್ತಾನೀ ರಾಗಗಳಲ್ಲಿ ಪರದೇಶೀ ರಾಗಗಳನ್ನು ಮಿಶ್ರಣ ಮಾಡಿ ಹೊಸ ಹೊಸ ರಾಗ ರಾಗಿಣಿಗಳನ್ನು ರಚಿಸಿ, ಹಾಡುವ ಹೊಸ ಪದ್ಧತಿ ಜನಪ್ರಿಯವಾಗಿದ್ದಿತು. ಇದು ಸಂಪ್ರದಾಯನಿಷ್ಠರಾದ ಗೋಕುಲದ ಗೋಸಾಯಿಗಳಿಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಹೊಸ ಪದ್ಧತಿಯಂತೆ ಸಮ್ಮಿಶ್ರ ರಾಗಗಳನ್ನು ಹಾಡುತ್ತಿದ್ದ ತಾನಸೇನನ ಗಾಯನದ ಬಗೆಗೆ ಅವರಿಗೆ ಗೌರವವಿರಲಿಲ್ಲ. ತಿರಸ್ಕಾರವಿತ್ತು.

ಒಂದು ಕಥೆ

ಆದರೂ ವೃಂದಾವನ – ಗೋಕುಲಗಳಲ್ಲಿದ್ದ ತನ್ನ ಗುರುಗಳು ಹಾಗೂ ಮುನ್ನಿನ ತನ್ನ ಸಹಪಾಠಿಗಳು ಇವರ ಬಗೆಗೆ ತಾನಸೇನನ ಹೃದಯದಲ್ಲಿ ಅದರ ಭಾವವಿದ್ದೇ ಇತ್ತು. ಅದಕ್ಕಾಗಿ ಒಂದು ಸಲ ಆತ ಗೋಸಾಯಿ ವಿಠ್ಠಲ ದಾಸರನ್ನು ಕಾಣಲು ಗೋಕುಲಕ್ಕೆ ಹೋದ. ಅಲ್ಲಿ ಅವನ ಗುರುಗಳಾದ ಹರಿದಾಸಸ್ವಾಮಿ ಗೋವಿಂದ ಸ್ವಾಮಿಗಳೂ ಇದ್ದರು.

ಆಶ್ರಮವಾಸಿಗಳಲ್ಲಿ ಸೇರಿ ತಾನಸೇನನ ಗಾಯನ ಕಾರ್ಯಕ್ರಮವನ್ನೇರ್ಪಡಿಸಿದರು. ಆಗ ಅವನು ತಾನು ನಿರ್ಮಿಸಿದ ನವೀನ ಸಂಪ್ರದಾಯದ ಸಮ್ಮಿಶ್ರ ರಾಗ – ರಾಗಿಣಿಗಳಲ್ಲಿ, ತಾನೇ ರಚಿಸಿದ ಹೊಸ ಹೊಸ ಧ್ರುಪದ ಧಮಾರ, ಬೇಜುಗಳನ್ನು ಹಾಡಿದ.

ಯಾವ ಬಗೆಯ ಮೆಚ್ಚುಗೆಯನ್ನೂ ಸೂಚಿಸಿದೆ ಕಲ್ಲಿನಂತೆ ಕುಳಿತು ಕೇಳಿದರು ಗೋಸಾಯಿಗಳು. ಗಾಯನ ಮುಗಿಯಿತು.

ಆಗ ಅವರೆಲ್ಲ ಸೇರಿ ಒಂದು ತಟ್ಟೆಯಲ್ಲಿ ಐನೂರು ಬೆಳ್ಳಿಯ ನಾಣ್ಯಗಳನ್ನಿಟ್ಟು ಅವುಗಳ ಮಧ್ಯೆ ಒಂದು ಕವಡೆಯನ್ನಿಟ್ಟು ತಾನಸೇನನಿಗೆ ಗೌರವಪೂರ್ವಕವಾದ ಕಾಣಿಕೆಯೆಂದು ಕೊಟ್ಟರು.

ಅದನ್ನು ಕಂಡು ತಾನಸೇನನಿಗೆ ಆಶ್ಚರ್ಯವಾಯಿತು. ಏನಿದರರ್ಥ ಎಂದು ಕೇಳಿದ. ಗೋಸಾಯಿಗಳು ಹೇಳಿದರು :

’ನೀನು ಸಾಮ್ರಾಟ ಅಕ್ಬರನ ಆಸ್ಥಾನದ ಸಂಗೀತ ಸಾಮ್ರಾಟ, ನಿನ್ನ ಸ್ಥಾನಮಾನದ ಗೌರವಾರ್ಥ ಐನೂರು ನಾಣ್ಯಗಳ ಕಾಣಿಕೆ. ಇನ್ನು ಆ ಕವಡೆ ನಿನ್ನ ಸಂಗೀತಕ್ಕಾಗಿ ’.

ತಾನಸೇನ ತಾನಸೇನನೇ

ಇಂತಹ ಕಥೆಗಳು ನಾಗರೀದಾಸನೆಂಬುವನು ೧೮೦೦ ರಲ್ಲಿ ರಚಿಸಿದ ಪದ ಪ್ರಸಂಗಮಾಲಾ ಮತ್ತು ವಲ್ಲಭ ಸಂಪ್ರದಾಯದ ’ದೋಸೌಬಾವನ ವೈಷ್ಣವೋಂಕೀ ವಾರ್ತಾ’ ಮುಂತಾದ ಗ್ರಂಥಗಳಲ್ಲಿ ದೊರೆಯುತ್ತವೆ. ಆದರೆ ಇವುಗಳಿಂದ ತಾನಸೇನನ ಗಾಯನದ ಬಗೆಗೆ  ಕೆಲವರಿಗಿದ್ದ ಅಭಿಪ್ರಾಯ ತಿಳಿಯುತ್ತದೆಯೇ ಹೊರತು ಅವನ ಯೋಗ್ಯತೆಯೇನೂ ಕಡಿಮೆಯಾಗುವುದಿಲ್ಲ. ಹಾಗೆಯೇ ದೀಪಕ ರಾಗದ ಕಥೆಯಂತಹ ಅತಿಶಯೋಕ್ತಿಗಳಿಂದ ತುಂಬಿದ ದಂತಕಥೆಗಳಿಂದ ಹೆಚ್ಚೂ ಅಗುವುದಿಲ್ಲ. ತಾನಸೇನ ತಾನಸೇನನೇ. ಹಿಂದೂಸ್ತಾನೀ ಸಂಗೀತ ಪ್ರಪಂಚದಲ್ಲಿ ಅವನು ಅಮರನಾಗಿದ್ದಾನೆ. ಅವನು ನಿರ್ಮಿಸಿದ ಮಿಂಯಾ ಕೀ ಮಲ್ಹಾರ, ದರಬಾರೀ ಕಾನಡಾ ರಾಗಗಳು ಇಂದಿಗೂ ಜನಪ್ರಿಯವಾಗಿವೆ. ಅವನ ಗಾಯನದ ಘನತೆನ್ನು ಸಾರುತ್ತಿವೆ.

ಖಯಾಲ ಗಾಯನಕ್ಕೊಂದು ಮೂರ್ತ ಸ್ವರೂಪ ಕೊಟ್ಟು ಅದನ್ನು ಜನಪ್ರಿಯವಾಗಿಸಿದವನು ತಾನಸೇನನ ವಂಶಜನೇ ಆದ ಸದಾರಂಗ ಎಂಬವ.

ತಾನಸೇನನ ಗಂಡುಮಕ್ಕಳಲ್ಲಿ ತಾನತರಂಗಾಖಾನ, ಸುರತಸೇನ ಮತ್ತು ಬಿಲಾಸಖಾನರೆಂಬುವರು ಪ್ರಸಿದ್ಧರಾದ ಗಾಯಕರಾಗಿದ್ದರು. ಅವರಲ್ಲಿ ಬಿಲಾಸಖಾನ ನಿರ್ಮಿಸಿದ ಬಿಲಾಸಖಾನೀ ತೋಡೀ ಎಂಬ ರಾಗ ತುಂಬ ಮನಮೋಹಕವಾಗಿದೆ. ಇಂದಿಗೂ ಬಹುಜನ ರಂಜಕವಾಗಿದೆ.

ತಾನಸೇನನಿಗೆ ಒಬ್ಬಳೇ ಮಗಳು. ಅವಳ ಗಂಡನಾದ ನೌಬತಖಾನನೆಂಬುವನು ಪ್ರತಿಭಾಶಾಲಿಯಾದ ವೀಣಾವಾದಕನಾಗಿದ್ದ.

ಸಂಗೀತಸಾರ ಮತ್ತು ರಾಗಾಮಾಲಾ ಎಂಬ ಎರಡು ಗ್ರಂಥಗಳನ್ನು ರಚಿಸಿದ್ದಾನೆ. ಸಂಗೀತ ಸಾಮ್ರಾಟನಾದ ತಾನಸೇನ.

ತಾನಸೇನ ಇನ್ನಿಲ್ಲ – ಅವನ ಸ್ಮರಣೆ ಉಳಿಯಿತು.

೧೬೪೬ರ ಇಸವಿಯಲ್ಲಿ ಆಗ್ರಾ ನಗರದಲ್ಲಿ ತಾನಸೇನನ ದೇಹಾವಸಾನವಾಯಿತು. ಅವನ ದೇಹವನ್ನು ಗ್ವಾಲಿಯರಿಗೆ ತಂದು ಅಂತ್ಯಕ್ರಿಯೆ ಮಾಡಲಾಯಿತು.

ತಾನಸೇನನ ಸಮಾಧಿಯ ಮೇಲೆ ಭವ್ಯವಾದೊಂದು ಸ್ಮಾರಕ ಮಂದಿರವನ್ನು ಕಟ್ಟಿದ್ದಾರೆ. ಹಿಂದೂಸ್ತಾನೀ ಸಂಗೀತಗಾರರಿಗೆ ಅದೊಂದು ಪವಿತ್ರ ಯಾತ್ರಾಸ್ಥಳವಾಗಿದೆ.  ಈಗ ಪ್ರತಿವರ್ಷ ಆ ಸ್ಥಳದಲ್ಲಿ ತಾನಸೇನ ಉರುಸ್ ಎಂಬ ಜಾತ್ರೆ ಜರುಗುತ್ತದೆ. ಆಗ ದೇಶದ  ಮೂಲೆಮೂಲೆಗಳಿಂದ ಗಾಯಕರು, ವಾದ್ಯವಾದಕರು ಹಿಂದೂ ಮುಸಲ್ಮಾನರ ಎಂಬ ಭೇದ ಭಾವ ಇಲ್ಲದೆ,  ಹಿಂದೂಸ್ತಾನೀ ಕರ್ನಾಟಕ ಎಂಬ ಭೇದ ಭಾವ ಇಲ್ಲದೆ, ಉರುಸಿನಲ್ಲಿ ಭಾಗವಹಿಸಿ ಹಾಡಿ, ವಾದ್ಯಗಳನ್ನು ನುಡಿಸಿ ಅದರ ಮೂಲಕ ಸಂಗೀತ ಸಾಮ್ರಾಟನಿಗೆ ತಮ್ಮ ಭಕ್ತಿಯ ಶ್ರದ್ಧಾಂಜಲಿಯನ್ನರ್ಪಿಸಿ ಧನ್ಯರಾಗುತ್ತಾರೆ.