ಅಧ್ಯಾಪಕರು : ಮಾಪನ ಕೈಗೊಳ್ಳಬೇಕಾದರೆ ಗೋಚರವಾಗುವ ಬದಲಾವಣೆ ಇರಬೇಕು. ಆದರೆ ತಾಪ ಗೋಚರವಲ್ಲ. ಹಾಗಿದ್ದರೆ ತಾಪದ ಮಾಪನ ಹೇಗೆ ಸಾಧ್ಯ ಎನಿಸುವುದು ಸಹಜ.

ಹಾಗಿದ್ದಾಗ ತಾಪದ ಪರಿಣಾಮ ಯಾವುದನ್ನಾದರೂ ಆಧರಿಸಿ ತಾಪಮಾಪನವನ್ನು ಕೈಗೊಳ್ಳಬೇಕು. ಈಗ ಮಾಡುತ್ತಿರುವುದೂ ಅದೇ. ತಾಪಕ್ಕೆ ಅನುಗುಣವಾಗಿ ದ್ರವ್ಯದ ಗಾತ್ರದ ಹೆಚ್ಚಳ ಆಗುತ್ತದೆ. ಆದ್ದರಿಂದ ಗಾತ್ರದ ಹೆಚ್ಚಳವನ್ನು ಮಾಪನ ಮಾಡಲು ಸಾಧ್ಯ. ಹೀಗಾಗಿ ಪ್ರಾರಂಭಿಕ ತಾಪಮಾಪಕಗಳು ಸಹಜವಾಗಿಯೇ ದ್ರವ್ಯದ ಗಾತ್ರ ಹೆಚ್ಚಳ ಆಧರಿಸಿ ತಾಪವನ್ನು ಮಾಪನ ಕೈಗೊಂಡವು.

ಘನ ವಸ್ತುವಿನ ಗಾತ್ರದ ಹೆಚ್ಚಳ ನಗಣ್ಯ. ಆದ್ದರಿಂದ ತಾಪಮಾಪಕದಲ್ಲಿ ಘನ ವಸ್ತು ಬಳಕೆ ಮಾಡುವುದಿಲ್ಲ. ಅನಿಲಗಳ ಬಳಕೆ ಮಾಡಿದ ತಾಪಮಾಪಕಗಳಿದ್ದರೂ ಸಾಮಾನ್ಯ ಮಾಪನಕ್ಕೆ ಅನಿಲಗಳ ಬಳಕೆ ತೊಂದರೆದಾಯಕ. ಅನಿಲಗಳು ಸುಲಭವಾಗಿ ಸೋರಿಕೆಯಾಗುವ ಅಪಾಯ ಹಾಗೂ ಅಗೋಚರತೆ ಸಮಸ್ಯೆ ನೀಡುವವು. ಅನಿಲಗಳ ಗಾತ್ರದಲ್ಲಿ / ಒತ್ತಡದಲ್ಲಿ ಆಗುವ ಹೆಚ್ಚಳವನ್ನು ಮಾಪನ ಮಾಡುವುದೂ ಕಷ್ಟ. ಹೀಗಾಗಿ ತಾಪಮಾಪಕದಲ್ಲಿ ದ್ರವಗಳ ಬಳಕೆ ಮಾಡಿದ ತಾಪಮಾಪಕಗಳೇ ಹೆಚ್ಚು ಬಳಕೆಯಲ್ಲಿವೆ.

ತೆಳು ಗಾಜಿನ ಧಾರಕದಲ್ಲಿ ದ್ರವವನ್ನು ತೆಗೆದುಕೊಂಡು ಆ ಧಾರಕದ ಮೇಲೆ ಏಕರೂಪವ್ಯಾಸದ ಲೋಮನಾಳವನ್ನು ಅಳವಡಿಸಲಾಗಿರುತ್ತದೆ. ಲೋಮನಾಳದ ಇನ್ನೊಂದು ತುದಿ ಮುಚ್ಚಿದೆ. ದ್ರವವು ಯಾವ ಮಟ್ಟದಲ್ಲಿ ಇರುತ್ತದೆಂಬುದನ್ನು ಆಧರಿಸಿ ತಾಪವನ್ನು ನಿರ್ಧರಿಸಬಹುದು. ತಾಪಮಾಪಕವನ್ನು ದ್ರವಿಸುವ ಮಂಜುಗಡ್ಡೆಯಲ್ಲಿ ಇರಿಸಿದಾಗ ತಾಪದ ಮಟ್ಟ 0º ಸೆಲ್ಸಿಯಸ್‌ಗೆ ಸಮ. ತದನಂತರ ಕುದಿಯುವ ನೀರಿನಲ್ಲಿರಿಸಿದಾಗ ತಲಪುವ ಮಟ್ಟ 100º ಸೆಲ್ಸಿಯಸ್‌ಗೆ ಸಮ. ಈ ಎರಡು ತಾಪಗಳನ್ನು ಸೂಚಿಸುವ ಬಿಂದುಗಳ ಅಂತರವನ್ನು ನೂರು ಭಾಗ ಮಾಡಿದರೆ ಡಿಗ್ರಿ ಸೆಲ್ಸಿಯಸ್ ಸೂಚಿ ಬರುತ್ತದೆ. ಪ್ರತಿ ಡಿಗ್ರಿಯನ್ನು ಹತ್ತು ಸಮಭಾಗ ಮಾಡಿದಾಗ ಪ್ರತಿ ಶ್ರೇಣ್ಯಂಕ ಬರುತ್ತದೆ. ಈ ಬಗ್ಗೆ ವಿವರಗಳಿಗೆ ಪಠ್ಯಪುಸ್ತಕ ಓದಿರಿ.

ಪಾದರಸವನ್ನು ಉಪಯೋಗಿಸಿದ ತಾಪಮಾಪಕಗಳೇ ಅಧಿಕವಾಗಿ ಚಾಲ್ತಿಯಲ್ಲಿವೆ. ಬೇರೆ ದ್ರವಗಳನ್ನೇಕೆ ಬಳಕೆ ಮಾಡಬಾರದು?

ಮಾಡಬಹುದು. ಆದರೆ ಪಾದರಸದಷ್ಟು ಸಮಂಜಸವಾಗಿ ತಾಪಮಾಪಕ ಸಮರ್ಪಕವಾಗಲಾರದು. ನೀರನ್ನು ಬಳಕೆ ಮಾಡಿದೆವೆನ್ನೋಣ. ಆಗ ನೀರು ಗಾಜಿನ ಗೋಡೆಗೆ ಅಂಟಿಕೊಳ್ಳುವುದು.

ಈ ಸಂದರ್ಭದಲ್ಲಿ ಪ್ರಸಂಗವೊಂದನ್ನು ಹೇಳಬೇಕು. ಸರ್ ಆಲ್ಬರ್ಟ್ ಸ್ಕೆವಿಟ್ಜರ್ ಎಂಬ ಜರ್ಮನ್ ವೈದ್ಯ ಆಫ್ರಿಕಾ ಕಾಡುಗಳ ಆದಿವಾಸಿ ಜನರಿಗೆ ಸೇವೆ ಮಾಡಲು ಜರ್ಮನಿಯಿಂದ ಆಫ್ರಿಕಾದ ದಟ್ಟ ಕಾಡುಗಳಲ್ಲಿ ಸಂಚರಿಸಿದ. ಹಾಗೆ ಸಂಚರಿಸುವಾಗ ಅವನ ತಾಪಮಾಪಕ ಕೆಳಕ್ಕೆ ಬಿದ್ದು ಒಡೆದುಹೋಯಿತು. ತನ್ನೂರಿನಿಂದ ತಾಪಮಾಪಕವನ್ನು ತರಿಸುವುದು ಆಗದ ಮಾತು. ಆಗ ಆತ ತನ್ನದೇ ಆದ ತಾಪಮಾಪಕವನ್ನು ತಯಾರಿಸಿದ!

ಆದಿವಾಸಿಗಳು ಒಂದು ಬಗೆಯ ಮದ್ಯವನ್ನು ಸೇವಿಸುತ್ತಿದ್ದರು. ಆ ಪಾತ್ರೆಯ ಮೇಲ್ಭಾಗದಲ್ಲಿ ಒಂದು ಕೊಳವೆಯನ್ನಿರಿಸಿದ. ಆದಿವಾಸಿ ಜನಾಂಗದ ಆರೋಗ್ಯವಂತರನೇಕರನ್ನು ಆ ಸಾಧನದಲ್ಲಿ ಪರೀಕ್ಷಿಸಿ ಸಾಮಾನ್ಯಮಟ್ಟದ ಗುರುತು ಹಾಕಿದ. ಆ ರೋಗಿಗಳನ್ನು ಪರೀಕ್ಷಿಸಿದಾಗ ಆ ಮಾಪಕದಲ್ಲಿ ದ್ರವದ ಮಟ್ಟ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚು ಎತ್ತರ ಹೋದಾಗ ಅವರಿಗೆ ಜ್ವರ ಇರುವುದಾಗಿ ತೀರ್ಮಾನಿಸುತ್ತಿದ್ದ. ದ್ರವದ ಮಟ್ಟ ಎಷ್ಟು ಮೇಲೆ ಹೋಗುವುದು ಎಂಬುದನ್ನರಿತು ಅವರ ಜ್ವರದ ತೀವ್ರತೆಯನ್ನು ನಿರ್ಧರಿಸುತ್ತಿದ್ದ. ಹೀಗಾಗಿ ಅನಿವಾರ್ಯ ಅಗತ್ಯ ಅನೇಕ ವೇಳೆ ನನ ಸೃಷ್ಟಿಗೆ ಎಡೆಮಾಡಿಕೊಡುವುದು. ನಾನು ಇಷ್ಟೆಲ್ಲಾ ಹೇಳಿದ್ದು – ತಾಪಮಾಪಕದಲ್ಲಿ ಯಾವ ದ್ರವವನ್ನೂ ಬೇಕಾದರೂ ಬಳಕೆ ಮಾಡಬಹುದೆಂಬುದನ್ನು ರುಜುವಾತು ಮಾಡುವ ಸಲುವಾಗಿ ಮಾತ್ರ.

ಈಗ ಪಾದರಸ ಬಳಕೆ ಮಾಡುವುದರ ಅನುಕೂಲಗಳನ್ನು ತಿಳಿಯೋಣ.

1. ಪಾದರಸವು ದ್ರವ ಲೋಹ; ಹೀಗಾಗಿ ಉಷ್ಣವನ್ನು ಸುಲಭವಾಗಿ ಹೀರಿ ತಾಪಮಾಪನ ಮಾಡಬಲ್ಲದು.

2. ಪಾದರಸ ಹೊಳಪಾದ ಬಿಳಿದ್ರವವಾಗಿರುವ ಕಾರಣ ಪಾದರಸದ ಮಟ್ಟ ಪತ್ತೆ ಮಾಡುವುದು ಸುಲಭ.

3. ಪಾದರಸದ ಮೇಲ್ಭಾಗದಲ್ಲಿ ಪಾದರಸದ ಆವಿ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಸುಲಭವಾಗಿ ಆವಿಯಾಗುವುದಿಲ್ಲ.

4. ಪಾದರಸವು ಘನಸ್ಥಿತಿಯಿಂದ ದ್ರವಸ್ಥಿತಿಗೆ ಬರುವ ತಾಪದಿಂದ ದ್ರವವು ಅನಿಲವಾಗುವ ತಾಪದ ಅಂತರ ಹೆಚ್ಚು. ಹೀಗಾಗಿ ಅಗಾಧ ತಾಪ ವ್ಯಾಪ್ತಿಯಲ್ಲಿ ಇದನ್ನು ತಾಪಮಾಪಕದಲ್ಲಿ ಬಳಕೆ ಮಾಡಬಹುದು. (–40º C – +360ºC) ನೀರಿನ ವಿಷಯದಲ್ಲಿ ಇದು ಕೇವಲ 0ºC – 100ºC ಮಾತ್ರ.

ಸಾಮಾನ್ಯ ಸಂದರ್ಭಗಳಲ್ಲಿ ಮಾಪನ ಮಾಡುವ ತಾಪದ ವ್ಯಾಪ್ತಿ ಇದೇ ಆಗಿರುತ್ತದೆ. ಪಾದರಸದ ಬಳಕೆಯಿಂದ ಕೆಲವು ತೊಂದರೆಗಳೂ ಇವೆ.

(1) ಪಾದರಸ ಸಾಂದ್ರವಾದ ದ್ರವ. ಅದನ್ನು ತೆಳುಗಾಜಿನ ಬುರುಡೆಗೆ ಹಾಕಿರುವ ಕಾರಣ ಕೊಂಚ ಪೆಟ್ಟು ತಗಲಿದರೂ ತಾಪಮಾಪಕ ಒಡೆದುಹೋಗುತ್ತದೆ.

(2) ಪಾದರಸದ ಮಟ್ಟ ಏರಿಕೆ ಕ್ರಮೇಣ ಆಗುವ ಬದಲು ಜಿಗಿತದ ವಿಧಾನದಿಂದ ಆಗುತ್ತದೆ. ತಾಪದ ಏರಿಕೆಯನ್ನು ದಾಖಲಿಸಲು ಇದೊಂದು ತೊಡಕು.

ಈಗ ಮತ್ತೊಂದು ಪ್ರಸಂಗ. ಪಾದರಸದ ಬಳಕೆಯ ತೊಂದರೆಯಿಂದಲೇ ಅನುಕೂಲವಾದ ಘಟನೆ ನಡೆಯಿತು. ಪರ್ಕಿನ್ ಎಂಬ ವಿಜ್ಞಾನಿ ರಾಸಾಯನಿಕ ಕ್ರಿಯೆ ನಡೆಯುವುದೆಂಬ ನಿರೀಕ್ಷೆಯಿಂದ ರಾಸಾಯನಿಕಗಳನ್ನು ಬಿಸಿ ಮಾಡಿದ್ದ. ಆದರೆ ಉತ್ಪನ್ನ ಪಡೆಯುವಲ್ಲಿ ಅವನು ಯಶಸ್ವಿ ಆಗಿರಲಿಲ್ಲ. ಆಗ, ಅಕಸ್ಮಾತ್ ಆ ಪಾತ್ರೆಯಲ್ಲಿ ತಾಪ ನೋಡಲು ಇರಿಸಿದ್ದ ತಾಪಮಾಪಕ ಒಡೆದುಹೋಗಿ ಪಾದರಸ ಹೊರಚೆಲ್ಲಿತು. ತಾಪಮಾಪಕ ಹಾಳಾದ ಬಗ್ಗೆ ಬೇಸತ್ತ ಪರ್ಕಿನ್‌ಗೆ ಒಂದು ಅಚ್ಚರಿ ಕಾದಿತ್ತು. ತಾಪಮಾಪಕದಿಂದ ಹೊರಬಂದ ಪಾದರಸ ವೇಗವರ್ಧಕವಾಗಿ ಪರಿಣಮಿಸಿ ಉತ್ಪನ್ನಗಳು ಉಂಟಾದವು!

ಸಾಮಾನ್ಯ ಸಂದರ್ಭದಲ್ಲಿ ಈ ಕೆಳಗಿನ ತಾಪಮಾಪಕಗಳನ್ನು ಪ್ರಯೋಗಾಲಯದಲ್ಲಿ ಬಳಕೆಮಾಡಲಾಗುವುದು.

ಕನಿಷ್ಟ ಮಾಪನ

0º K – 110º K              1º K

0º C – 110º C              0.1º C

0º C – 360ºC               1º C

ಇನ್ನು ಶ್ರೀಸಾಮಾನ್ಯರಾದ ನಮ್ಮ ನಿತ್ಯದ ಬದುಕಿನಲ್ಲಿ ಬಳಕೆಯಾಗುವ ತಾಪಮಾಪಕ ಕ್ಲಿನಿಕಲ್ ತರ್ಮಾಮೀಟರ್ ಅರ್ಥಾತ್ ವೈದ್ಯಕೀಯ ತಾಪಮಾಪಕ.

ಈ ತಾಪಮಾಪಕದಲ್ಲೂ ಪಾದರಸವನ್ನೇ ಬಳಕೆಮಾಡಲಾಗಿದೆ. ತಾಪದ ವ್ಯಾಪ್ತಿ 95ºF – 110ºF. ಸಾಮಾನ್ಯ ತಾಪವನ್ನು ಖಚಿತ ಗೆರೆಯಿಂದ ಸೂಚಿಸಲಾಗುತ್ತದೆ. ಆ ಗೆರೆಯನ್ನು ಮೀರಿ ಪಾದರಸದ ಮಟ್ಟ ಸಾಗಿದರೆ ಆಗ ಜ್ವರ ಇದೆ ಎಂದು ತೀರ್ಮಾನಿಸಬೇಕಾಗುತ್ತದೆ. ಜ್ವರದ ತಾಪವನ್ನೂ ಪಾದರಸದ ಮಟ್ಟ ಸೂಚಿಸುತ್ತದೆ. ತಾಪವು ಖಚಿತ ಗೆರೆಯಿಂದ ಕೆಳಗೆ ಹೋಗತೊಡಗಿದರೆ ಅದು ಸಾವಿನ ಮುನ್ಸೂಚನೆಯೂ ಆಗಬಹುದು.

1. ತಾಪಮಾಪಕವನ್ನು ನಾಲಗೆಯ ತಳದಲ್ಲಿ ಇಲ್ಲವೆ ಕಂಕುಳ ತಳಭಾಗದಲ್ಲಿ ಇಡಬೇಕು.

2. ತಾಪಮಾಪಕ ಕೆಳಗೆ ಬೀಳದಂತೆ, ಯಾವ ರೀತಿಯ ಪೆಟ್ಟು ಬೀಳದಂತೆ ಎಚ್ಚರವಹಿಸಬೇಕು.

3. ಕುದಿಯುವ ನೀರಿನಲ್ಲಿ ತಾಪಮಾಪಕ ತೊಳೆಯಬಾರದು. ಕುದಿಯುವ ನೀರು 212º F ಇರುತ್ತದೆ. ಆದರೆ ಈ ತಾಪಮಾಪಕದ ಗರಿಷ್ಠ ತಾಪ 110ºF ಹೀಗಾಗಿ ತಾಪಮಾಪಕ ಒಡೆದುಹೋಗುತ್ತದೆ.

4. ತಾಪಮಾಪಕದಲ್ಲಿ ಪಾದರಸದ ಎಳೆಗಳ ನಡುವೆ ಅಂತರ ಇಲ್ಲವೆಂದು ಖಚಿತಪಡಿಸಿಕೊಳ್ಳಬೇಕು. ಅಂತರವೇನಾದರೂ ಕಂಡುಬಂದರೆ ಮಾಪನ ವಿಶ್ವಾಸಾರ್ಹವಲ್ಲ.

ಈಚಿನ ದಿನಗಳಲ್ಲಿ ವೈದ್ಯರು ಮತ್ತೊಂದು ಬಗೆಯ ತಾಪಮಾಪಕವನ್ನು ಬಳಕೆ ಮಾಡುವುದನ್ನು ನೀವು ಗಮನಿಸಿರಬಹುದು. ಹಣೆಯ ಮೇಲೆ ಪಟ್ಟಿಯೊಂದನ್ನು ಅಂಟಿಹಾಕಿ ಆ ಪಟ್ಟಿ ಯಾವ ಬಣ್ಣಕ್ಕೆ ತಿರುಗುವುದೆಂದು ಆಧರಿಸಿ ತಾಪವನ್ನು ನಿರ್ಧರಿಸಲಾಗುತ್ತದೆ.

ಇಲ್ಲಿ ಬಳಕೆ ಆಗುವುದು ದ್ರವದ ಲಕ್ಷಣ ಹಾಗೂ ಸೇಟಿಕದ ಲಕ್ಷಣ ಎರಡೂ ಇರುವ ದ್ರವ್ಯ. ಇದನ್ನು ದ್ರವಸೇಟಿಕ ಎನ್ನುವರು. ಕೆಲವೊಂದು ವಿಶಿಷ್ಟ ದ್ರವಸೇಟಿಕಗಳು ವಿವಿಧ ತಾಪದಲ್ಲಿ ವಿವಿಧ ಬಣ್ಣ ತಳೆಯುವ `ತಾಪಗೋಸುಂಬೆ‘ಗಳು! ತಪ್ಪಾಗಿ ಭಾವಿಸಬೇಡಿ. ಘನಸೇಟಿಕವು ಗೋಸುಂಬೆಯ ಹಾಗೆ ಜೀವಿಯಲ್ಲ, ನಿರ್ಜೀವಿ ದ್ರವ್ಯ!

ಹವಾಮಾನ ತಾಪ ಅಳೆಯಲು ಆಲ್ಕೊಹಾಲ್ / ಪಾದರಸ ಬಳಕೆ ಮಾಡಿದ ತಾಪಮಾಪಕಗಳನ್ನು ಬಳಕೆ ಮಾಡಲಾಗುವುದು. ಇಲ್ಲಿ ಜೋಡಿ ತಾಪಮಾಪಕಗಳಿರುವವು.

ಮೊದಲ ತಾಪಮಾಪಕವು ಗಾಳಿಗೆ ನೇರವಾಗಿ ಒಡ್ಡಿಕೊಂಡ ಶುಷ್ಕ ಬಲ್ಬ್ ತಾಪಮಾಪಕ.

ಎರಡನೇ ತಾಪಮಾಪಕದ ಬಲ್ಬ್ (ಮಾಪಕದ ದ್ರವ ಇರುವ ಗಾಜಿನ ಬುರುಡೆ) ನೀರಿನಲ್ಲಿ ಅದ್ದಿಡಲಾಗುವುದು. ಇದು ಆರ್ದ್ರ ಬಲ್ಬ್ ತಾಪಮಾಪಕ.

ಆರ್ದ್ರ ಬಲ್ಬ್ ತಾಪಮಾಪಕದ ತಾಪ ಶುಷ್ಕ ಬಲ್ಬ್ ತಾಪಮಾಪಕಕ್ಕಿಂತ ಕೊಂಚ ಕಡಿಮೆ. ಏಕೆಂದರೆ ನೀರು ನಿರಂತರ ಆವಿಯಾಗುವ ಮೂಲಕ ತಾಪಮಾಪಕವನ್ನು ತಂಪಾಗಿಸುವುದು.

ವಿಶೇಷವಾಗಿ ಗಾಳಿ ಕಾಲದಲ್ಲಿ ಶುಷ್ಕ ಬಲ್ಬ್ ಹಾಗೂ ತೇವ ಬಲ್ಬ್ ತಾಪಮಾಪಕಗಳ ಅಂತರ ವಿಶೇಷವಾಗಿ ಹೆಚ್ಚು.

ಅಂತೆಯೇ ದಿನದ ಗರಿಷ್ಠತಾಪ ಹಾಗೂ ಕನಿಷ್ಠತಾಪವನ್ನು ಸೂಚಿಸುವ ತಾಪಮಾಪಕಗಳೂ ಬಳಕೆಯಲ್ಲಿವೆ.

ಈ ತಾಪಮಾಪಕಗಳ ರಚನೆ ಅಗತ್ಯವನ್ನಾಧರಿಸಿ ವಿಭಿನ್ನವಾಗಿದ್ದರೂ – ಮೂಲತತ್ತ್ವ ಒಂದೇ. ಅದೆಂದರೆ ದ್ರವದ ತಾಪ ಆಧಾರಿತ ವಿಕಸನ. ಈ ಸರಣಿಯಲ್ಲಿ ದ್ರವಸೇಟಿಕ ತಾಪಮಾಪಕ ಪಟ್ಟಿ ಮಾತ್ರ ಭಿನ್ನ.