ಅಧ್ಯಾಪಕರು : ಮಾನವರು ಶೀತರಕ್ತ ಪ್ರಾಣಿಗಳಿಗಿಂತಲೂ ಹೆಚ್ಚು ಆಲೋಚನಾ ಸಾಮರ್ಥ್ಯ ಪಡೆದಿರುವುದು ವಿಶೇಷ. ಈ ವಿಶೇಷಕ್ಕೆ ಕಾರಣ ಅವರು ತಮ್ಮ ದೇಹದ / ವಿಶೇಷವಾಗಿ ಮಿದುಳಿನ ತಾಪವನ್ನು ಕಾಯ್ದುಕೊಳ್ಳುವ ದೈಹಿಕ ರಚನೆಯನ್ನು ಪಡೆದಿರುವುದು.

ಪ್ರಯೋಗಾಲಯಗಳಲ್ಲಿ ದ್ರಾವಣಗಳ ತಾಪವನ್ನು ತಂತಾನೆ ಸ್ಥಿರವಾಗಿರಿಸಿಕೊಳ್ಳುವ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತದೆ. ಈ ವ್ಯವಸ್ಥೆಗೆ ತರ್ಮೊಸ್ಟ್ಯಾಟ್ ಅಥವಾ ಸ್ಥಿರತಾಪಿ ಎಂದು ಹೇಳಲಾಗುತ್ತದೆ. ಈ ವ್ಯವಸ್ಥೆಯ ವಿಶೇಷವೆಂದರೆ ತಾಪಕ್ಕನುಗುಣವಾಗಿ ದ್ರವ್ಯವು ವಿಕಸನಗೊಳ್ಳುವುದನ್ನು ಬಳಕೆಮಾಡಿಕೊಂಡಿರುವ ಜಾಣತನ.

ಒಂದು ವಿದ್ಯುನ್ಮಂಡಲವನ್ನು ಪೂರ್ಣಗೊಳಿಸಿ ಜಲಾಗಾರವನ್ನು ಬಿಸಿ ಮಾಡಲಾಗುತ್ತದೆ. ಆ ವಿದ್ಯುನ್ಮಂಡಲವನ್ನು ಕೊಳವೆಯೊಂದರಲ್ಲಿ ತೆಗೆದುಕೊಂಡ ಪಾದರಸದಿಂದ ಕೈಗೊಳ್ಳಲಾಗುತ್ತದೆ. ಸ್ಥಿರತಾಪಿಯ ತಾಪ ಹೆಚ್ಚಿದಂತೆಲ್ಲಾ ಪಾದರಸವೂ ವಿಕಸನವಾಗುತ್ತಾ ಹೋಗುತ್ತದೆ. ಖಚಿತಪಡಿಸಿದ ತಾಪಕ್ಕೆ ತಲಪಿದ ಕೂಡಲೆ ಪಾದರಸವು ವಿಕಾಸಹೊಂದಿ ಸ್ವಿಚ್‌ಗೆ ವಿದ್ಯುತ್‌ಸಂಪರ್ಕ ನೀಡುತ್ತದೆ. ಆಗ ವಿದ್ಯುನ್ಮಂಡಲವನ್ನು ಸ್ವಿಚ್ ಕಡಿದುಹಾಕುತ್ತದೆ.

ತಾಪ ಕಡಿಮೆ ಆಯಿತೆನ್ನಿ. ಆಗ ಪಾದರಸದ ಗಾತ್ರ ಕುಗ್ಗಿದ ಕಾರಣದಿಂದಾಗಿ ಮತ್ತೆ ಸ್ವಿಚ್ ನಿಷ್ಕ್ರಿಯವಾಗಿ ನೀರು ವಿದ್ಯುನ್ಮಂಡಲದ ಬೆಂಬಲದಿಂದಾಗಿ ಬಿಸಿಯಾಗತೊಡಗುತ್ತದೆ.

ಪಾದರಸ ಹಾಗೂ ಸ್ವಿಚ್ಚಿನ ಮಟ್ಟವನ್ನು ಏರುಪೇರು ಮಾಡಿ ಸ್ಥಿರತಾಪಿಯ ತಾಪವನ್ನು ಅಪೇಕ್ಷಿಸಿದ ತಾಪಕ್ಕೆ ನಿಗದಿಗೊಳಿಸಿಕೊಳ್ಳಲೂ ಅವಕಾಶವಿದೆ.

ಸುಹಾಸ್ : ನನ್ನದೊಂದು ಉಹೆ ಇದೆ. ಬೆಳಕಿನ ಬಳಕೆಯಿಂದ ಛಾಯಾಚಿತ್ರ ತೆಗೆದಹಾಗೆಯೇ ಉಷ್ಣದ ವಿಕಿರಣಗಳನ್ನು ಆಧರಿಸಿ ಛಾಯಾಚಿತ್ರ ತೆಗೆಯಲು ಸಾಧ್ಯವೆ?

ಅಧ್ಯಾಪಕರು : ಸಾಧ್ಯ. ಅದನ್ನು ತರ್ಮೊಗ್ರಾಫ್ ಅರ್ಥಾತ್ ಉಷ್ಣಛಾಯಾ ಚಿತ್ರ ಎಂದು ಕರೆಯುತ್ತಾರೆ.

ಉಷ್ಣಛಾಯಾಚಿತ್ರವನ್ನು ವ್ಯಕ್ತಿಗಳ ಅಥವಾ ಪ್ರಾಣಿಗಳ ಯಥಾವತ್ ಬಿಂಬ ಪಡೆಯುವ ಸಲುವಾಗಿ ಬಳಕೆ ಮಾಡುವುದಿಲ್ಲ. ಮರದ ಮರೆಯಲ್ಲಿ ಅವಿತಿರುವ ವ್ಯಕ್ತಿಯನ್ನು ಬೆಳಕಿನ ಛಾಯಾಚಿತ್ರ ಗುರುತಿಸಲಾರದು. ಏಕೆಂದರೆ ಮರವು ಬೆಳಕಿಗೆ ಪಾರದರ್ಶಕವಲ್ಲ. ಆದರೆ ಉಷ್ಣಛಾಯಾಚಿತ್ರದ ಸಹಾಯದಿಂದ ಮರದ ಹಿಂದೆ ಅವಿತಿರುವ ವ್ಯಕ್ತಿಯನ್ನು ಪತ್ತೆಹಚ್ಚಬಹುದು. ಈ ಬಗೆಯ ಸಾಧನಗಳು ಯುದ್ಧದಲ್ಲಿ ವಿಶೇಷವಾಗಿ ಬಳಕೆಯಾಗುತ್ತವೆ.

ಅಮೆರಿಕೆಯು ವಿಯೆಟ್ನಾಮ್ ದೇಶದ ಮೇಲೆ ಯುದ್ಧದಲ್ಲಿ ತೊಡಗಿತ್ತು. ಆಗ ವಿಯಟ್ನಾಮ್‌ನ ಸೈನಿಕರು ಗೆರಿಲ್ಲಾ ಯುದ್ಧದಲ್ಲಿ ತೊಡಗಿದರು. ಅಂದರೆ, ಮುಖಾಮುಖಿ ಯುದ್ಧ ಮಾಡದೆ ಇದ್ದಕ್ಕಿದ್ದಂತೆ ದಾಳಿಮಾಡಿ ಕಣ್ಮರೆಯಾಗಿ ಬಿಡುವುದು ಈ ತಂತ್ರನ ವಿಶೇಷ. ವಿಯೆಟ್ನಾಮಿನ ಪ್ರಜೆಗಳ ಬೆಂಬಲವೂ ಈ ಸೈನಿಕರಿಗೆ ಇದ್ದ ಕಾರಣ ನಾಗರಿಕ ಪ್ರಜೆ ಯಾರು, ಸೈನಿಕರು ಯಾರು ಎಂಬಂಶ ಪತ್ತೆ ಮಾಡುವುದು ಕಠಿಣ. ಹೀಗೆ ಯುದ್ಧ ಸಾಗಿದ್ದಾಗ ವಿಯೆಟ್ನಾಮ್ ಪರ್ವತಪ್ರದೇಶದಲ್ಲಿ ಇರುವ ದಟ್ಟ ಕಾಡುಗಳಲ್ಲಿ ಗೆರಿಲ್ಲಾ ಯೋಧರು ಅವಿಕುಕೊಳ್ಳುತ್ತಿದ್ದರು. ಆ ಗೆರಿಲ್ಲಾ ಯೋಧರನ್ನು ಪತ್ತೆಹಚ್ಚುವುದೇ ಕಠಿಣವಾಗುತ್ತಿತ್ತು. ದುರ್ಗಮ ಅರಣ್ಯಗಳ ದಟ್ಟ ಕಾಡುಗಳ ಮೇಲೆ ವಿಮಾನ ಹಾರಾಟ ನಡೆಸಿದರೂ ಮರಗಳ ನೆರಳಿನಲ್ಲಿ ಅಡಗಿರುವ ಜನರನ್ನು ಪತ್ತೆ ಹಚ್ಚುವುದು ಕಠಿಣವಾಗುತ್ತಿತ್ತು. (ರಪ್ಪನ್ ಸಹಚರರನ್ನು ಪತ್ತೆಹಚ್ಚಲು ಅದೆಷ್ಟು ಶ್ರಮವಾಯಿತೆಂಬುದನ್ನು ನೆನಪಿಸಿಕೊಳ್ಳಿ) ಹೀಗಾಗಿ ಮಾನವರ ಚಲನವಲನವನ್ನು ಪತ್ತೆಹಚ್ಚಲು ತರ್ಮೊಗ್ರಾಫ್ ಬಳಕೆ ಮಾಡಲಾಯಿತು.

ಮಾನವರ ದೇಹದ ವಿಶಿಷ್ಟ ತಾಪದಿಂದಾಗಿ ಅವರ ಸುತ್ತಲೂ ವಿಕಿರಣ ವಲಯವೊಂದಿರುತ್ತದೆ. ಪ್ರದೇಶವೊಂದರ ವಿಕಿರಣ ತೀವ್ರತೆಯ ಏರುಪೇರುಗಳನ್ನು ಗೋಚರ ಬೆಳಕಿಗಿಂತಲೂ ಪಾರಕವಾದ ವಿಕಿರಣಗಳಿಗೆ ಸಂಬಂಧಿಸಿದಂತೆ ದಾಖಲಿಸಲಾಗುತ್ತದೆ. ಹೀಗೆ ದಾಖಲಿಸಿದಾಗ ಮಾನವ ದೇಹದಿಂದಲೇ ಉಂಟಾಗುವ ವಿಶಿಷ್ಟ ಏರುಪೇರುಗಳೇನಾದರೂ ಕಾಡಿನ ಮರಗಳ ಬುಡಗಳಲ್ಲಿ ಕಂಡುಬಂದರೆ ಅಲ್ಲಿ ಮಾನವರ ಇರುವಿಕೆ ಹಾಗೂ ಚಲನವಲನಗಳು ಪತ್ತೆ ಆಗುತ್ತದೆ. ಮಾನವರಿರುವೆಡೆ ಸಾಕುಪ್ರಾಣಿಗಳೂ ಇರುವ ಸಂಭವನೀಯತೆ ಇದ್ದೇ ಇರುತ್ತದೆ. ಅವುಗಳನ್ನೂ (ಉದಾ : ಕುದುರೆ, ಕತ್ತೆ, ಕೋಳಿ ಮೊದಲಾದವು) ಉಷ್ಣಛಾಯಾಚಿತ್ರ ಬಿಂಬಿಸುತ್ತದೆ.

ಹೀಗಾಗಿ ಸುಹಾಸನ ಕಲ್ಪನೆಯಲ್ಲಿ ಮೂಡಿದ ಉಷ್ಣಛಾಯಾಗ್ರಹಣ ಕೇವಲ ಹಗಲುಗನಸಲ್ಲ; ನಿಜ ವಾಸ್ತವ ಎಂದು ಹೇಳಬಹುದು.

 

ಅನುಬಂಧ

(ವಿದ್ಯಾರ್ಥಿಯೋರ್ವನ ಕೋರಿಕೆ ಮೇರೆಗೆ)

 

ಪ್ರಾಣಿಯ ದೇಹ ತನ್ನ ತಾಪವನ್ನು ಕಾಯ್ದಿಟ್ಟುಕೊಳ್ಳುವ ಸ್ಥಿರತಾಪಿಯಾಗಿ ಕಾರ್ಯನಿರ್ವಹಿಸುವ ಬಗೆ ಹೀಗೆ.

ಶೀತರಕ್ತ ಪ್ರಾಣಿಗಳು ತಮ್ಮ ದೇಹದ ತಾಪವನ್ನು ನಿಯತವಾಗಿ ಕಾಯ್ದುಕೊಳ್ಳಲಾರವು. ಆದರೆ, ಉಷ್ಣ ರಕ್ತ ಪ್ರಾಣಿಗಳು ತಮ್ಮ ದೇಹದ ತಾಪವನ್ನು ಕಾಯ್ದುಕೊಳ್ಳಬಲ್ಲವು. ದೇಹವು ಸ್ಥಿರತಾಪಿಯಾಗಿರುವುದು ಜೀವಿ ವಿಕಸನದಲ್ಲಿ ನಿಧಾನವಾಗಿ ಕಾಣಿಸಿಕೊಂಡ ಪ್ರಗತಿ. ಜೀವಿಯ ಮಿದುಳು ತನ್ನ ತಾಪವನ್ನು ಕಾಯ್ದುಕೊಂಡರೆ ಚುರುಕಾಗಿರಲು ಸಾಧ್ಯ. ಹೀಗಾಗಿ ಉಷ್ಣರಕ್ತ ಪ್ರಾಣಿಗಳು ಶೀತರಕ್ತ ಪ್ರಾಣಿಗಳಿಗಿಂತ ಸಂವೇದನಶೀಲ.

ಈಗ ತಾಪಕಾಯ್ದುಕೊಳ್ಳುವ ಕ್ರಿಯಾ ವಿನ್ಯಾಸದ ಬಗೆಗೆ ತಿಳಿಯುವಾ. ಬಾಹ್ಯ ಪರಿಸರದ ತಾಪದ ಏರಿಳಿತಗಳಿಗೆ ತನ್ನನ್ನು ಒಡ್ಡಿಕೊಳ್ಳದ ಹಾಗೆ ಕಾಯ್ದುಕೊಳ್ಳುವ ದಪ್ಪ ಚರ್ಮ, ಗಾಳಿಯೆಂಬ ಅಗೋಚರ ಉಷ್ಣ ಅವಾಹಕವನ್ನು ತನ್ನ ಸುತ್ತಲೂ ಸೆರೆಹಿಡಿವ ರೋಮವ್ಯವಸ್ಥೆ, ನೀರೊಳಗಿದ್ದರೂ ಅಥವಾ ಮೈಮೇಲೆ ನೀರು ಬಿದ್ದರೂ ಕೊಡವಿದರೆ ಸಾಕು ಹೊರಹಾಕಲು ಸಾಧ್ಯವಾಗುವಂತಹ ರೈನ್‌ಕೋಟ್ – ಇವು ಪ್ರಾಣಿ, ಪಕ್ಷಿಗಳಿಗೆ ನಿಸರ್ಗದತ್ತ ವರ. ನಮ್ಮ ದೇಹಕ್ಕೇನಾದರೂ ನೀರು ಅಂಟಿಕೊಂಡು ಆವಿಯಾಗತೊಡಗಿದರೆ ದೇಹವು ತಂಪಾಗಿ ಅದರ ತಾಪ ತಗ್ಗುವುದು. ಇವೆಲ್ಲಾ ಬಾಹ್ಯ ವ್ಯವಸ್ಥೆಗಳಾಯಿತು.

ಆಂತರಿಕ ವ್ಯವಸ್ಥೆಯೂ ಉಂಟು. ಜೀವಿಗಳ ದೇಹದ ಸುಮಾರು ಸೇಕಡಾ 70ರಷ್ಟು ನೀರು. ನೀರು ಉಷ್ಣದ ಅವಾಹಕ. ಹೀಗಾಗಿ ಬಾಹ್ಯದ ತಾಪದ ಏರಿಳಿತಗಳು ಜೀವಿಗಳ ತಾಪದ ಮೇಲೆ ಪರಿಣಾಮ ಉಂಟುಮಾಡುವುದು ಕಡಿಮೆ.

ಬಾಹ್ಯ ತಾಪ ಕಡಿಮೆಯಾದಾಗ ಉಷ್ಣದ ಸೋರಿಕೆಯನ್ನು ತಡೆಗಟ್ಟುವುದಲ್ಲದೆ ಉಷ್ಣವನ್ನು ಉತ್ಪಾದನೆ ಮಾಡಿ ಆ ನಷ್ಟವನ್ನು ಭರಿಸಬೇಕು. ನಡುಗುವುದು, ವೇಗವಾಗಿ ಮೈಕೈ ಮುದುರುವುದು, ಮೈಕೈ ತಿಕ್ಕಿಕೊಳ್ಳುವುದು, ಮುಂತಾದ ಯಾಂತ್ರಿಕ ಕ್ರಿಯೆಗಳನ್ನು ಚಳಿ ಆದಾಗ ಮಾಡುವೆವಲ್ಲವೆ! ಹಾಗೆ ಮಾಡಿದಾಗ ರಕ್ತ ಪರಿಚಲನೆ ತೀವ್ರಗೊಂಡು ಶಕ್ತಿ ಉತ್ಪಾದನೆಯಾಗುವುದಲ್ಲದೆ ದೇಹದಲ್ಲಿ ಉಷ್ಣ ಉತ್ಪಾದನೆಗೊಂಡು ತಾಪ ನಿರ್ವಹಣೆ ಸಾಧ್ಯವಾಗುವುದು.

ತಾಪಕ್ಕೂ ರಕ್ತಪರಿಚಲನೆಗೂ ಸಂಬಂಧವಿದೆ ಎಂದಾಯಿತು. ಕೈಬೆರಳ ತುದಿಗೆ ಬಿಗಿಯಾಗಿ ದಾರವನ್ನು ಬಿಗಿದು ಹಾಗೆಯೇ ಬಿಡಿ. ಕೆಲ ನಿಮಿಷಗಳ ಅನಂತರ ಬೆರಳ ತುದಿ ನೀಲಿಯಾಗಿರುವುದನ್ನು ನಿಮ್ಮ ಕಣ್ಣು ಗುರುತಿಸುತ್ತದೆ. ಆ ಬೆರಳಿನಿಂದ ನೀವು ದೇಹದ ಬೇರೆ ಭಾಗಗಳನ್ನು ಮುಟ್ಟಿದರೆ ಬೆರಳು ತಂಪಾಗಿ ಕೊರೆಯುತ್ತಿರುತ್ತದೆ. ನೀವು ಬಿಗಿದ ದಾರ ರಕ್ತ ಪರಿಚಲನೆಗೆ ಅಡ್ಡಿಯಾಯಿತು. ರಕ್ತಪರಿಚಲನೆ ಇಲ್ಲವಾದಾಗ ಸಹಜವಾಗಿಯೇ ಆ ಭಾಗದ ತಾಪ ಕುಗ್ಗಿತು.

ಯಾವ ಪ್ರಾಣಿಯ ದೇಹ ತನ್ನ ತಾಪದ ಸ್ಥಿರತೆ ಕಾಯ್ದುಕೊಳ್ಳಲಾರದೋ ಆ ಪ್ರಾಣಿ ಮೃತವಾದಂತೆಯೇ ಸರಿ. ಜೀವಂತಿಕೆ ಇರುವುದು ಜೀವಿಗಳು ತಾಪವನ್ನು ಸ್ಥಿರವಾಗಿ ಕಾಯ್ದುಕೊಳ್ಳುವ ಸಾಮರ್ಥ್ಯದಿಂದಾಗಿ ಎಂಬುದನ್ನು ಗಮನಿಸಿ.

ಸಾವು ಸಂಭವಿಸುವಾಗಲೂ ಅಷ್ಟೇ. ಹೃದಯದಿಂದ ದೂರವಾಗಿರುವ ಅಂಗಗಳು ಹಾಗೂ ರಕ್ತನಾಳಗಳು ಕನಿಷ್ಠ ಇರುವ ಅಂಗಗಳು ಮೊದಲು ತಣ್ಣಗಾಗುತ್ತವೆ (ಉದಾ : ಕಿವಿ, ಕೈಕಾಲು).

ಈಗ ತಾಪದ ಹೆಚ್ಚಳ ಉಂಟಾಗುವುದೆನ್ನೋಣ. ಆಗ ಜೀವಿಯು ಉಷ್ಣವನ್ನು ಹೊರಹಾಕಿ ತನ್ನ ತಾಪವನ್ನು ಕಾಯ್ದುಕೊಳ್ಳಬೇಕಾಗುತ್ತದೆ.

ಹೆಚ್ಚು ದುಡಿದಾಗ, ಕೋಪಗೊಂಡಾಗ, ಪರಿಸರದ ತಾಪ ಹೆಚ್ಚು ಆದಾಗ – ಇವೇ ಮೊದಲಾದ ಸಂದರ್ಭದಲ್ಲಿ ಬೆವರುತ್ತೇವೆ. ಈ ಎಲ್ಲ ಸಂದರ್ಭಗಳಲ್ಲೂ ತಾಪ ಹೆಚ್ಚುತ್ತದೆ. ಕೋಪ – ತಾಪ ಎಂಬುದು ಜೋಡಿ ಪದ ಅಲ್ಲವೆ!

ಈ ಎಲ್ಲ ಸಂದರ್ಭಗಳಲ್ಲೂ ಬೆವರುವಿಕೆ ಉಂಟಾಗುತ್ತದೆ. (ಹೃದಯ ಬಡಿತದಲ್ಲಿ ತೀವ್ರ ಏರುಪೇರಾದರೆ ಕೂಡಾ ಬೆವರುವುದುಂಟು. ಅಲ್ಲೂ ರಕ್ತಪರಿಚಲನೆ ಎಲ್ಲ ಅಂಗಗಳಿಗೂ ಏಕರೂಪದಲ್ಲಿ ಆಗದಿರುವುದೇ ಅಥವಾ ಕೆಲವು ಭಾಗಗಳಿಗೆ ಅಸಹಜ ತೀವ್ರತೆಯಿಂದ ಆಗುವುದೇ – ಬೆವರುವಿಕೆಗೆ ಕಾರಣ) ಬೆವರಿನೊಂದಿಗೆ ಹೊರಬರುವ ನೀರಿನ ಅಂಶ ಆವಿಯಾಗುತ್ತದೆ. ದ್ರವ ಆವಿಯಾಗುವಾಗ ನೀರು ನಷ್ಟವಾಗುವುದರೊಡನೆ ಉಷ್ಣವೂ ನಷ್ಟವಾಗುತ್ತದೆ. ನೀರನ್ನು ಆವಿಯಾಗಿಸಲು ಉಷ್ಣಬೇಕಲ್ಲವೆ!

ಶೀತಲ್ : ನಮ್ಮ ದೇಹದಲ್ಲಿ ನೀರಿನ ಬದಲು ಪೆಟ್ರೊಲ್ ಇದ್ದಿದ್ದರೆ ದೇಹವು ಇನ್ನೂ ಬೇಗ ತಂಪಾಗುತ್ತಿದ್ದಿತು, ಅಲ್ವಾ ಸಾರ್?

ಅಧ್ಯಾಪಕರು : ಆಗ ಪೆಟ್ರೊಲ್ ತೀವ್ರ ವೇಗದಿಂದ ನಷ್ಟ ಆಗಿ ಪೆಟ್ರೋಲ್ ಕೊರತೆ ಆಗುತ್ತಿತ್ತು. ಆಶ್ಚರ್ಯವೆಂದರೆ ನೀರು ತಾನು ಆವಿಯಾಗಿ ಹೋಗುವಾಗ ಕಡಿಮೆ ಪ್ರಮಾಣದಲ್ಲಿ ಆವಿಯಾಗಿ ಹೆಚ್ಚು ಉಷ್ಣವನ್ನು ಹೊರದೂಡಬಲ್ಲದು. ಬೆವರುವಿಕೆಯಿಂದ ನೀರು ಆವಿಯಾಗುವುದರಿಂದಲೇ ನೀರಿನ ಕೊರತೆ ಉಂಟಾಗಿ ಬಾಯಾರಿಕೆ ಆಗುವುದು. ನೀರು ಅಧಿಕ ಉಷ್ಣ ಬಳಕೆ ಮಾಡಿಕೊಂಡು ಆವಿಯಾಗುವ ಗುಣ ಪಡೆದಿರುವುದನ್ನು ನೀರಿನ ಅನೇಕ ಗುಣಗಳ ಸದ್ಬಳಕೆ ಜೀವಿಗಳಿಂದ ಆಗಿದೆ. ಜೀವಿಗಳ ದೇಹ ಎಷ್ಟು ಚೆನ್ನಾಗಿ ಅನ್ವಯ ಮಾಡಿಕೊಂಡಿದೆ. ಜೀವಿಯು ನೀರಿನಿಂದಲೇ ಉಗಮಗೊಂಡಿದೆ ಎಂಬುದಕ್ಕೆ ಇದೂ ಒಂದು ಪುರಾವೆಯಾಗಬಲ್ಲದು.