ಮಾರನೆಯ ದಿನ ರವಿಪ್ರತಾಪ ತನ್ನ ಗೆಳೆಯ ವಿವೇಕನೊಂದಿಗೆ ಶಾಲೆಗೆ ಹೊರಟ. ಎದುರಿಗೆ ಸಾಗುತ್ತಿದ್ದವರನ್ನು ನೋಡಿ ಪ್ರತಾಪ ತನ್ನ ಅಧ್ಯಾಪಕರು ಹೋಗುತ್ತಿರುವುದಾಗಿ ವಿವೇಕನಿಗೆ ತಿಳಿಸಿದ. ಆಗ ವಿವೇಕ ನಗುತ್ತಾ ಹೇಳಿದ “ನಿನಗೆ ಸದಾ ಆ ಅಧ್ಯಾಪಕರದ್ದೇ ಗುಂಗು. ಕಂಡವರನ್ನು ಅವರೆಂದು ಹೇಳುತ್ತೀಯೆ. ಸರಿಯಾಗಿ ನೋಡು. ಅಲ್ಲಿ ಬೇರೆ ಯಾರೋ ಹೋಗುತ್ತಿದ್ದಾರೆ. ನೀನು ಹೇಳಿದ್ದು ತಪ್ಪಾಯಿತೆಂದು ಚಿಂತಿಸಬೇಡ. ವಿಜ್ಞಾನಿಗಳೂ ಉಷ್ಣವನ್ನು ದ್ರವವೆಂದು ಭಾವಿಸಿ ತಪ್ಪು ಮಾಡಿರಲಿಲ್ಲವೆ? ಯಾರಿಗೆ ಗೊತ್ತು, ನೀನು ವಿಜ್ಞಾನಿಯೇ ಆಗಬಹುದು‘’. ರವಿಪ್ರತಾಪನಿಗೆ ಸಂಕೋಚ ಆಯಿತು. “ನಾನು ತಪ್ಪು ಮಾಡಿದ್ದಕ್ಕೆ ಅಣಕಿಸಿಕೋ. ಆದರೆ ವಿಜ್ಞಾನಿಯಾಗುತ್ತೇನೆ ಎಂದು ಹೇಳಬೇಡ. ನಾನೆಲ್ಲಿ, ವಿಜ್ಞಾನಿ ಎಲ್ಲಿ? ವಿಜ್ಞಾನಿಗಳು ಏಕೆ ತಪ್ಪು ಮಾಡುವರೆಂಬುದನ್ನು ತಿಳಿಯುವ ಕುತೂಹಲ ನನಗೆ. ಅದಕ್ಕೇ ಇರಬೇಕು. ನನಗೆ ಅವರು ಅಧ್ಯಾಪಕರ ರೀತಿ ಕಂಡು ಬಂದಿದ್ದು. ನಮ್ಮ ಮೇಷ್ಟ್ರು ಪಾಠವನ್ನು ಕತೆ ಹೇಳುವ ರೀತಿ ಹೇಳ್ತಾರೆ‘’. ಅಂತೂ ಅವರು ಶಾಲೆಗೆ ತಲುಪಿದರು.

ವಿಜ್ಞಾನದ ತರಗತಿ ಕೊನೆಗೂ ಬಂದಿತು. ಅಧ್ಯಾಪಕರು ಲವಲವಿಕೆಯಿಂದ ತರಗತಿ ಪ್ರವೇಶಿಸಿ ಕತೆಯನ್ನು ಪ್ರಾರಂಭಿಸಿದರು. “ಘನವಾಗಲಿ ದ್ರವವಾಗಲಿ ಅನಿಲವಾಗಲಿ – ಎಲ್ಲವನ್ನೂ ದ್ರವ್ಯ ಎಂಬ ಸಾಮಾನ್ಯ ಹೆಸರಿನಿಂದ ಕರೆಯಲಾಗುವುದು. ಕೇವಲ ಗಮನಿಸುವಿಕೆಯಿಂದಲೇ ಘನ, ದ್ರವ, ಅನಿಲ ಎಂದು ವರ್ಗೀಕರಿಸುವುದು ಸುಲಭ. ಇವುಗಳಿಗೆ ದ್ರವ್ಯವೆಂಬ ಸಾಮಾನ್ಯ ಹೆಸರಿದ್ದ ಮೇಲೆ ಸಾಮಾನ್ಯ ಲಕ್ಷಣಗಳು ಇರಬೇಕಲ್ಲವೆ? ಈ ಸಾಮಾನ್ಯ ಲಕ್ಷಣಗಳು ಶಕ್ತಿಯ ರೂಪಗಳಿಗೆ ಇರುವುದಿಲ್ಲ. ಈ ಲಕ್ಷಣಗಳು ಇವು :

1. ಪ್ರತಿ ದ್ರವ್ಯವೂ ಜಾಗವನ್ನು ಆಕ್ರಮಿಸುತ್ತದೆ. ಎರಡು ವಸ್ತುಗಳು ಒಂದೇ ಜಾಗದಲ್ಲಿ ಒಮ್ಮೆಗೇ ಇರಲು ಸಾಧ್ಯವಿಲ್ಲ.

ಕಲ್ಲು ಜಾಗವನ್ನು ಆಕ್ರಮಿಸುತ್ತದೆ. ಕಲ್ಲು – ಕಣಗಳ ಒತ್ತಟ್ಟಿನ ಜೋಡಣೆ ಹಾಗೂ ಘನರೂಪವಾದ ಕಾರಣ ಅದೇ ಜಾಗದಲ್ಲಿ ಕಡ್ಡಿಯನ್ನು ಇಡಲು ಆಗುವುದಿಲ್ಲ.

ನೀರಿನ ಪಾತ್ರೆಯ ತುಂಬಾ ನೀರಿದೆ ಎನ್ನೋಣ. ಆಗ ಅಲ್ಲಿ ಕಡ್ಡಿಯನ್ನು ಅದ್ದಿದರೆ ನೀರು ಪಾತ್ರೆಯಿಂದ ಹೊರಬರುವುದು. ಹೊರಬರುವ ನೀರಿನ ಗಾತ್ರ / ಕಡ್ಡಿಯಷ್ಟೇ ಇರುವುದು.

ಪವನ ಎದ್ದು ನಿಂತುದನ್ನು ಕಂಡು ಅಧ್ಯಾಪಕರು ತಾವು ಹೇಳುತ್ತಿದ್ದದನ್ನು ನಿಲ್ಲಿಸಿ ಅವನೆಡೆ ನೋಡಿದರು. “ಈ ಶಾಲೆಯ ತುಂಬಾ ಗಾಳಿ ಇತ್ತು. ಆದರೂ ನಾವು ಪ್ರವೇಶಿಸುವುದು ಸಾಧ್ಯವಾಯಿತೆಂದ ಮೇಲೆ ಗಾಳಿ ಇರುವ ಜಾಗದಲ್ಲೇ ನಾವೂ ಇದ್ದೇವೆಂದಾಯಿತು. ಆಗ ಗಾಳಿ ಸ್ಥಾನವನ್ನು ನಾವು ಆಕ್ರಮಿಸಿದ ಹಾಗೆ ಆಗಲಿಲ್ಲವಲ್ಲವೆ?’’ – ಇದು ಪವನನ ಪ್ರಶ್ನೆ.

“ಮೇಲುನೋಟಕ್ಕೆ ಹಾಗೆನಿಸುವುದು ಸಹಜ. ನಾವೆಲ್ಲರೂ ಕೊಠಡಿ ಪ್ರವೇಶಿಸಿದಾಗ ಗಾಳಿಯ ಗಾತ್ರ ಕುಗ್ಗಿ ಒತ್ತಡ ಹೆಚ್ಚುತ್ತದೆ. ಆ ಹೆಚ್ಚಿದ ಒತ್ತಡದಿಂದಾಗಿ ಗಾಳಿಯು ಹೊರಹೋಗುತ್ತದೆ. ಗಾಳಿಯು ಅಗೋಚರವಾದ ಕಾರಣ ಅದು ಹೊರಹೋದದ್ದು ನಮಗೆ ತಿಳಿಯುವುದೇ ಇಲ್ಲ.

ಕಿಟಕಿ ಬಾಗಿಲುಗಳನ್ನೆಲ್ಲಾ ಮುಚ್ಚಿ ನಾವು ಕೊಠಡಿಯನ್ನು ಪ್ರವೇಶಿಸಿದೆವೆನ್ನೋಣ. ಆಗ ಗಾಳಿ ಹೊರಹೋಗಲು ಆಸ್ಪದವಿಲ್ಲದೆ ಹೋದಲ್ಲಿ ಒತ್ತಡ ಹೆಚ್ಚಾಗುತ್ತದೆ. ಅಂದರೆ ಕಡಿಮೆ ಜಾಗವನ್ನು ಗಾಳಿ ಆಕ್ರಮಿಸುತ್ತದೆ. ಏಕೆಂದರೆ ಅನಿಲದ ಕಣಗಳ ನಡುವೆ ಜಾಗ ಇರುವುದಲ್ಲವೆ? ನಿಮ್ಮ ಗೆಳೆಯರು ಶಾಲೆಗೆ ತಡವಾಗಿ ಬಂದಾಗ ನೀವು ಪಕ್ಕಕ್ಕೆ ಜರಗಿ ಜಾಗ ಮಾಡಿಕೊಡುವ ಹಾಗೆ ಅನಿಲ ಕಣಗಳು ಪಕ್ಕಕ್ಕೆ ಸರಿಯುತ್ತವೆ. ಆದರೆ ಒತ್ತಡ ಹೆಚ್ಚಾದಂತೆಲ್ಲ ದ್ರವ್ಯಸೇರ್ಪಡೆಗೆ ಪ್ರತಿರೋಧವೂ ಹೆಚ್ಚಾಗುತ್ತದೆ.

ಈಗೊಂದು ಚಟುವಟಿಕೆ ಕೈಗೊಳ್ಳೋಣ. ಈ ಗಾಜಿನ ಬಾಟಲಿಯ ಒಳಭಾಗದ ತಳಕ್ಕೆ ಕಾಗದವನ್ನು ಅಂಟಿಸುತ್ತೇನೆ. ಇದನ್ನು ಒಂದು ಬಕೆಟ್ ನೀರಿನಲ್ಲಿ ಬೋಲಾಗಿ ನೇರ ಹಿಡಿದು ಮುಳುಗಿಸಿ. ಓರೆಯಾಗಿ ಮುಳುಗಿಸಿದರೆ ಗಾಳಿ ಹೊರಹೋಗಿಬಿಡುತ್ತದೆ. ಬಕೆಟ್ ತಳಕ್ಕೆ ಬಾಟಲಿ ಮುಟ್ಟಿಸಿ ಹೊರತೆಗೆದರೂ ಕಾಗದ ಒದ್ದೆಯಾಗುವುದಿಲ್ಲ. ಹೀಗೆ ಹೇಳಿದ ಅಧ್ಯಾಪಕರು ಈ ಪ್ರಯೋಗವನ್ನು ಮಾಡಿ ತೋರಿಸಿದರು.

ಆಗ ಗಂಗಾ ಎದ್ದು ನಿಂತು ಹೀಗೆ ಹೇಳಿದಳು “ಈ ಪ್ರಯೋಗವನ್ನು ಪ್ಲಾಸ್ಟಿಕ್ ಮಗ್ ಬಳಕೆ ಮಾಡಿಯೂ ಮಾಡಲು ಸಾಧ್ಯವೆ? ಈ ಪ್ರಯೋಗವನ್ನು ನಮ್ಮಜ್ಜಿಗೆ ನಾನು ಮಾಡಿ ತೋರಿಸಬೇಕು‘’

ಅಧ್ಯಾಪಕರು ಹೇಳಿದರು “ಸಾಧ್ಯ. ಗಾಜು ಪಾರದರ್ಶಕ ಎಂಬ ಕಾರಣಕ್ಕಾಗಿ ನಾನು ಗಾಜಿನ ಬಾಟಲಿ ಉಪಯೋಗಿಸಿದೆ ಎಂದು ಸ್ಪಷ್ಟೀಕರಣ ನೀಡಿದರು. ದ್ರವ್ಯದ ಎರಡನೇ ಗುಣ ತಿಳಿಯೋಣ.

“ದ್ರವ್ಯದ ಎರಡನೆಯ ಲಕ್ಷಣ ಎಂದರೆ ಭಾರ. ಘನ, ದ್ರವ ಮತ್ತು ಅನಿಲಗಳು ತಮ್ಮದೇ ಆದ ತೂಕವನ್ನೂ ಜಡತೆಯನ್ನೂ ಪಡೆದಿವೆ. ಆದರೆ ಬೆಳಕಿಗೆ ತನ್ನದೇ ಆದ ಮಾಪನೀಯ ಭಾರ ಇಲ್ಲ

ಈಚಿನ ದಿನಗಳಲ್ಲಿ ಬೆಳಕಿಗೆ ಭಾರವಿರುವ ಬಗ್ಗೆ ರುಜುವಾತಾದರೂ ಆ ಭಾರ ಮಾಪನೀಯವಲ್ಲ ಎಂಬುದನ್ನು ಗಮನಿಸಿ.

ಉಷ್ಣವು ದ್ರವ್ಯದಲ್ಲಿರುವಾಗ ದ್ರವ್ಯದಲ್ಲಿ ಬೆರೆತು ದ್ರವ್ಯದ ಕಣಗಳ ವಿವಿಧ ಚಲನೆಗಳ ರೂಪದಲ್ಲಿರುತ್ತದೆ. ಇದು ಘನ, ದ್ರವ, ಅನಿಲ ಹಾಗೂ ಪ್ಲಾಸ್ಮಾ ಸ್ಥಿತಿಗಳೆಲ್ಲದಕ್ಕೂ ಅನ್ವಯವಾಗುತ್ತದೆ. ಹೀಗಾಗಿ ದ್ರವ್ಯವನ್ನು ಧಾರಕವೆಂದೂ (ಉಷ್ಣವನ್ನು ಹಿಡಿದಿಡುವ ಪಾತ್ರೆ ಎಂದೂ) ಉಷ್ಣವನ್ನು ಆ ಪಾತ್ರೆಯಲ್ಲಿ ತುಂಬಿಡಲಾಗಿರುವ ದ್ರವವೆಂದೂ ಕಲ್ಪಿಸಿಕೊಳ್ಳಬಹುದಲ್ಲವೇ? ನೇರವಾಗಿ ಕಣ್ಣಿಗೆ ಕಾಣದೆ ಇರುವ ವಿದ್ಯಮಾನದ ಬಗೆಗೆ ಊಹೆ ತಾನೆ ಉಳಿದಿರುವುದು! ಹೀಗಾಗಿ ಉಷ್ಣವನ್ನು `ಕ್ಯಾಲರಿಕ್‘ ಎಂಬ ದ್ರವವೆಂದು ಊಹಿಸಲಾಯಿತು.

ಉಷ್ಣವನ್ನು ಪಡೆಯುವ ಕ್ರಮವನ್ನು ನೆನಪು ಮಾಡಿಕೊಳ್ಳಿ. ಯಾವುದೇ ಎರಡು ವಸ್ತುಗಳನ್ನು ಉಜ್ಜಿದರೆ ಆ ವಸ್ತುಗಳು ಬಿಸಿಯಾಗುವುದಲ್ಲವೇ? (ರವಿಪ್ರತಾಪನಿಗೆ ತಾನು ಬೆಳಿಗ್ಗೆ ಎದ್ದಾಗ ಕೈ ಉಜ್ಜಿ, ಬಿಸಿಯಾಗಿದ್ದದ್ದು ನೆನಪಾಯಿತು). ಬಟ್ಟೆಯನ್ನು ಹಿಂಡಿದಾಗ ನೀರು ಹೊರಬರುವ ಹಾಗೆ ದ್ರವ್ಯದಲ್ಲಿರುವ ಉಷ್ಣವು ಉಜ್ಜಿದಾಗ ಹೊರಬರುವುದು. ಹೀಗಾಗಿ ಉಷ್ಣ ಬಿಡುಗಡೆಯನ್ನೂ ಈ ಊಹೆ ಅರ್ಥೈಸಿತು.

ದ್ರವ್ಯವನ್ನು ಕಾಸಿದಾಗ ಆ ದ್ರವ್ಯದ ಗಾತ್ರ ಹೆಚ್ಚಳ ಆಗುವುದು. ಅದನ್ನು `ಉಷ್ಣ ವಿಕಸನ‘ ಎನ್ನುವರು. ಹಾಗೆಂದರೆ `ಉಷ್ಣದ‘ ವಿಕಸನವಲ್ಲ. ಉಷ್ಣ ಉಂಟುಮಾಡುವ ವಿಕಸನ ಎಂದರ್ಥ. ಅಂದ ಮೇಲೆ ಉಷ್ಣವು ಬೇರೆ ದ್ರವ್ಯಗಳ ಹಾಗೆ ಜಾಗವನ್ನು ಆಕ್ರಮಿಸಿದಂತಾಯಿತಲ್ಲವೆ! ಅದೇ ಆಧಾರದ ಮೇಲೆ ಉಷ್ಣವು ದ್ರವ್ಯದ ಒಂದು ಸ್ಥಿತಿಯಾದ ದ್ರವವೆಂದು ನಿರ್ಧರಿಸಲಾಯಿತು‘’.

“ಈ ವಾದವೂ ಸರಿಯೇ ಎಂದು ತೋರುತ್ತದೆ. ಮತ್ತೆ ಈಗೇಕೆ ಉಷ್ಣವನ್ನು ಶಕ್ತಿ ಎಂದು ಭಾವಿಸಬೇಕು?’’ – ಪ್ರಶ್ನೆ ಹಾಕಿದ ಅನಿರುದ್ಧ.

“ಸಂದರ್ಭ ಅಷ್ಟು ಸರಳವಾಗಿರುವುದಿಲ್ಲ. ಉಷ್ಣವನ್ನು ಕೆಲೊರಿಕೆ ಎಂಬ ದ್ರವ ಎಂದು ಭಾವಿಸೋಣ. ಆಗ ಒಂದೇ ಪ್ರಮಾಣದ ದ್ರವನ್ನು ಯಾವ ವಸ್ತುವಿಗೆ ನೀಡಿದರೂ ಆ ವಸ್ತುವಿನ ಗಾತ್ರ ಸಮ ಪ್ರಮಾಣದಲ್ಲಿ ಹೆಚ್ಚಳವಾಗಬೇಕು. ಆದರೆ ವಾಸ್ತವವೇ ಬೇರೆ. ಒಂದೇ ಒಲೆಯ ಮೇಲೆ ಘನ, ದ್ರವ ಹಾಗೂ ಅನಿಲಗಳನ್ನು ಕಾಸಿದರೂ, ಘನಕ್ಕಿಂತ ಹೆಚ್ಚು ಪ್ರಮಾಣದಲ್ಲಿ ದ್ರವ ಹಾಗೂ ದ್ರವಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಅನಿಲ ವಿಕಾಸವಾಗುತ್ತವೆ. ಈ ಸಂಗತಿಯನ್ನು ಅರ್ಥೈಸುವುದು ಹೇಗೆ?

ಇದಕ್ಕೂ ಮಿಗಿಲಾಗಿ ಇನ್ನೊಂದು ತೊಂದರೆ ಇದೆ. ಒಂದು ಪದಾರ್ಥವನ್ನು ಬಿಸಿ ಮಾಡಿದಾಗ, ಆ ಪದಾರ್ಥದ ದ್ರವ್ಯರಾಶಿ ಹೆಚ್ಚಾಗುವುದಿಲ್ಲ. ಉಷ್ಣವು ದ್ರವವಾಗಿದ್ದರೆ ಉಷ್ಣದ ಸೇರ್ಪಡೆಯಿಂದ ದ್ರವ್ಯರಾಶಿ ಹೆಚ್ಚಳ ಆಗಬೇಕಾಗಿತ್ತು. ಆದರೆ ಹಾಗಾಗುವುದಿಲ್ಲ. ಮಿಗಿಲಾಗಿ ಉಷ್ಣವನ್ನು ಶಕ್ತಿಯ ಇತರ ರೂಪಗಳಿಗೆ (ಬೆಳಕು, ವಿದ್ಯುಚ್ಛಕ್ತಿ, ಇತ್ಯಾದಿ) ಪರಿವರ್ತಿಸಬಹುದು.

ಹೀಗಾಗಿ ಉಷ್ಣವು ದ್ರವ್ಯ (ದ್ರವ)ವೆನ್ನುವ ಅಭಿಪ್ರಾಯ ಬದಲಾಗಿ ಶಕ್ತಿಯ ಒಂದು ರೂಪ ಎಂದು ಪರಿಗಣಿತವಾಯಿತು‘’ – ಇದು ಅಧ್ಯಾಪಕರು ನೀಡಿದ ಸ್ಪಷ್ಟೀಕರಣ.

ಉಷ್ಣವು ಶಕ್ತಿಯ ರೂಪವಾದರೆ ಜಾಗವನ್ನೇಕೆ ಆಕ್ರಮಿಸಬೇಕಾಗಿತ್ತೆಂಬ ಸಂದೇಹವನ್ನು ತೇಜಸ್ ವ್ಯಕ್ತಪಡಿಸಿದ.

ದ್ರವ್ಯದ ಕಣಗಳಿಗೆ ಶಕ್ತಿ ಒದಗಿಸಿದಾಗ ಆ ಕಣಗಳು ಹೆಚ್ಚು ವೇಗವಾಗಿ ಚಲಿಸುವವು. ಕಣಗಳ ಪರಸ್ಪರ ಆಕರ್ಷಣೆ ಮೀರುವುದು ಹೆಚ್ಚು ಸಾಧ್ಯವಾಗುವುದರಿಂದ ಹೆಚ್ಚು ದೂರದವರೆಗೂ ಚಲಿಸುವವು. ಇದರಿಂದಾಗಿ ಗಾತ್ರದಲ್ಲಿ ಹೆಚ್ಚಳವುಂಟಾಗುವುದು. ದ್ರವಗಳಲ್ಲಿ ಈಗಾಗಲೇ ಚಲನೆ ಇದ್ದು ಕಣಗಳ ಆಕರ್ಷಣೆಗೆ ಮೀರಿದ ಶಕ್ತಿ ಇರುವ ಕಾರಣ ಉಷ್ಣದ ಪರಿಣಾಮ ಇನ್ನೂ ಹೆಚ್ಚು. ಅನಿಲಗಳಲ್ಲಿರುವ ಚಲನಶಕ್ತಿ ಅದೆಷ್ಟು ಅಗಾಧವೆಂದರೆ ಕಣಗಳ ಪರಸ್ಪರ ಆಕರ್ಷಣೆ ನಗಣ್ಯ. ಹೀಗಾಗಿ ಉಷ್ಣ ಉಂಟುಮಾಡುವ ಚಲನೆ ಅನಿಲದ ಕಣಗಳನ್ನು ಹೆಚ್ಚು ದೂರ ಸಾಗುವಂತೆ ಮಾಡಿ ಗಾತ್ರದಲ್ಲಿ ಹೆಚ್ಚಳ ಉಂಟುಮಾಡುವುದು. ಗಾತ್ರದ ಹೆಚ್ಚಳಕ್ಕೆ ಅವಕಾಶವಿಲ್ಲದೆ ಹೋದರೆ ಅನಿಲದ ಒತ್ತಡ ಹೆಚ್ಚಾಗುವುದು.

ಘನವು ಸ್ತಬ್ಧ ಕಣಗಳಿಂದಾಗಿದೆ ಎಂದು ನಾವು ಕ್ಷಣೆಯಿಂದ ಭಾವಿಸಿದ್ದೇವಲ್ಲವೆ? ಆದರೆ ಚಲನೆಯೂ ದ್ರವ್ಯದ ಲಕ್ಷಣ. ಅಂದ ಮೇಲೆ ದ್ರವ್ಯವೆನ್ನುವುದು ವಾಸ್ತವವಾಗಿ ಕಣ ಹಾಗೂ ಕಣದ ಚಲನೆ. ಅದಕ್ಕೇ ಡಿಮಾಕ್ರಿಟಸ್, ದ್ರವ್ಯವನ್ನು ಕಣ ಹಾಗೂ ಶೂನ್ಯ ಎಂದು ವಿವರಿಸಿದ. ಶೂನ್ಯವಿದ್ದರೆ ಮಾತ್ರ ಚಲನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

“ಅಂತೂ ದ್ರವ್ಯವೆಂದರೆ ದ್ರವ್ಯ ಮತ್ತು ಶಕ್ತಿಗಳ ಮಿಶ್ರಣ ಎಂದಾಯಿತು. ಶಕ್ತಿಯಾದರೂ ಸ್ವತಂತ್ರವಾಗಿ ದ್ರವ್ಯವಿಲ್ಲದೆ ಇರುವುದೇ?’’ – ಇದು ಶೀತಲ್ ಕೇಳಿದ ಪ್ರಶ್ನೆ.

ಅಧ್ಯಾಪಕರೆಂದರು – “ಇದಕ್ಕೆ ಇದಮಿತ್ಥಂ ಎಂದು ಹೇಳಲು ಸಾಧ್ಯವಿಲ್ಲ. ಚಲನಶಕ್ತಿಯು ದ್ರವ್ಯದಲ್ಲಿ ಚಲನೆ ಉಂಟುಮಾಡಬೇಕಾಗಿರುವಾಗ ಸ್ವತಂತ್ರವಾಗಿರಲು ಸಾಧ್ಯವಿಲ್ಲ. ಆದರೆ ಬೆಳಕು ಸ್ವತಂತ್ರಶಕ್ತಿ ರೂಪವಾಗಿ ವ್ಯಾಪಿಸುವುದು.

ಉಷ್ಣವಾದರೋ ದ್ರವ್ಯದೊಂದಿಗೆ ಬೆರೆತೂ ಇರುವುದು. ಅದು ದ್ರವ್ಯದಿಂದ ಬೇರ್ಪಟ್ಟಾಗ ಬೆಳಕಿನ ಮಾದರಿಯ ಅಗೋಚರ ವಿಕಿರಣದ ಅಲೆಗಳಂತೆ ಇರುವುದು. ಬೆಳಕಿಗಿಂತ ಅದು ಭಿನ್ನವಲ್ಲ. ಹೆಚ್ಚಿನ ವಿವರಗಳು ಮುಂದಿನ ತರಗತಿಗಳಿಗೆ ಹೋದಾಗ ತಿಳಿಯುವುವು.‘’ ಎಂದರು. ಮುಂದಿನ ತರಗತಿಗಳಿಗೆ ಹೋಗುವ ಕನಸು ಕಾಣುತ್ತಿದ್ದ ಮಕ್ಕಳನ್ನು ಬೆಲ್ ಎಚ್ಚರಿಸಿತು.