ಶಾಲೆಯ ಬೆಲ್ ಹೊಡೆಯುವ ಮೊದಲೇ ಹುಡುಗರು ಸೇರಿದ್ದರು.

ಸುಹಾಸ : ಸೂರ್ಯನ ತಾಪ ಹೇಗೆ ಕಂಡುಕೊಳ್ಳುವುದೆಂದು ಯಾರು ಹೇಳುತ್ತೀರಿ?

ಎಲ್ಲರೂ : ಗೊತ್ತಿಲ್ಲಪ್ಪ

ಸುಹಾಸ : ನಾನು ಹೇಳ್ತೀನಿ ಕೇಳಿ. ಸೂರ್ಯ ಅಂದರೆ ರವಿ. ನಮ್ಮ ರವಿಗೆ ಜ್ವರ ಬಂದಾಗ ಡಾಕ್ಟರು, ಅದೇನಪ್ಪ ಅಂದರೆ, ಕ್ಲಿನಿಕ್ ತರ್ಮಾಮೀಟರ್‌ನಲ್ಲಿ ನೋಡುತ್ತಾರೆ.

ತೇಜಸ್ : ಕ್ಲಿನಿಕ್ ಅಲ್ಲವೋ ಕ್ಲಿನಿಕಲ್ ತರ್ಮಾಮೀಟರ್ (ಎಲ್ಲರೂ ನಗುವರು)

ಅಧ್ಯಾಪಕರು : ಅಲ್ರೊ ಮುಖ್ಯೋಪಾಧ್ಯಾಯರು ಹೇಳಿಕಳಿಸಿದ್ದರಿಂದ ಹತ್ತು ನಿಮಿಷ ತಡ ಆದ್ರೆ, ಅದೆಷ್ಟು ದಾಂಧಲೆ ಮಾಡ್ತೀರಿ. ಅದ್ಯಾಕೆ, ಎಲ್ಲರೂ ನಗುತ್ತಿದ್ದೀರಿ? ವಿನೋದ ಸುಹಾಸನು ಹೇಳಿದ ನಗೆಹನಿಯನ್ನು ವಿವರಿಸಿದ. ಸೂರ್ಯನ ತಾಪವನ್ನು ಹೇಗೆ ಕಂಡುಕೊಳ್ಳಲಾಗುವುದೆಂದು ವಿವರಿಸುವಂತೆ ಮನವಿ ಮಾಡಿದ.

ಅಧ್ಯಾಪಕರು : ನೀವು ಶಾಲೆಯಿಂದ ಬರುವಾಗ ಕಮ್ಮಾರನ ಕುಲುಮೆಯನ್ನು ಯಾರು ನೋಡಿದ್ದೀರಿ? – ಕೈ‌ಎತ್ತಿ.

ವಿದ್ಯಾರ್ಥಿಗಳಲ್ಲಿ ಇಬ್ಬರೇ ಕೈ‌ಎತ್ತಿದರು. ಅನೇಕರು ನೋಡಿಯೇ ಇರಲಿಲ್ಲ; ನೋಡಿದೆನೆಂದರೆ ಅಧ್ಯಾಪಕರೇನು ಪ್ರಶ್ನೆ ಕೇಳುವರೋ ಎಂಬ ಭಯ. ವಿಚಿತ್ರವೆಂದರೆ ಅಧ್ಯಾಪಕರು ಅದೇಕೋ ಆ ಬಗ್ಗೆ ಪ್ರಶ್ನೆ ಕೇಳಲೇ ಇಲ್ಲ. (ಮುಂಚೆಯೇ ಗೊತ್ತಿದ್ದರೆ ನಾನೂ ಕೈ ಎತ್ತಬಹುದಾಗಿತ್ತು ಎಂದು ಶಾಲೆ ಬಿಟ್ಟಮೇಲೆ ವಿದ್ಯಾರ್ಥಿಗಳು ಅಂದುಕೊಂಡಿರಲೂಬಹುದು).

ಅಧ್ಯಾಪಕರು : ನೀವು ಶಾಲೆಗೆ ಬರುವಾಗ ಸುತ್ತಮುತ್ತಲಿನ ಆಗುಹೋಗುಗಳನ್ನು ಗಮನಿಸಿದರೆ ನಿಮ್ಮ ತಿಳಿವು ಹೆಚ್ಚಾಗುತ್ತದೆ. ಇನ್ನು ಮುಂದಾದರೂ ಇಡೀ ಜಗತ್ತನ್ನೇ ಪ್ರಯೋಗಾಲಯವೆಂದು ಭಾವಿಸಿ ಸೂಕ್ಷ್ಮವಾಗಿ ಗಮನಿಸಿ.

ಕಮ್ಮಾರನು ಕಬ್ಬಿಣ ಕಾಸತೊಡಗಿದಾಗ ಕಬ್ಬಿಣದ ತಾಪ ಹೆಚ್ಚಳವಾದಂತೆಲ್ಲಾ ಅದರಿಂದ ಉಷ್ಣ ಸೋರಿಕೆಯಾಗತೊಡಗುತ್ತದೆ. ಬಿಸಿಯ ಝಳವನ್ನು ದೂರದಿಂದಲೇ ಅನುಭವಿಸಬಹುದು. ಇನ್ನೂ ಕಾದಾಗ ಅದು ಕೆಂಪಗಾಗುತ್ತದೆ. ಇನ್ನೂ ಕಾಯಿಸಿದಾಗ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಮತ್ತೂ ಕಾಯಿಸಿದಾಗ ಬಿಳಿಯ ಬೆಳಕಿನ ಆಕರವಾಗುತ್ತದೆ.

ಅಂದರೆ ಕಬ್ಬಿಣಕ್ಕೆ ಒದಗಿಸಿದ ಉಷ್ಣಶಕ್ತಿಯು ಬೆಳಕಾಗಿ ಪರಿವರ್ತನೆಯಾಗುತ್ತದೆ. ತಂತಿ ಇರುವ ವಿದ್ಯುದ್ದೀಪದಲ್ಲಿ ಆಗುವುದೂ ಅದೇ. ಆದರೆ ವಿದ್ಯುದ್ದೀಪದ ತಂತಿ ಕ್ಷಣಾರ್ಧದಲ್ಲಿ ಕಾದುಹೋಗುವುದರಿಂದ ವ್ಯತ್ಯಯಗಳೂ ಕ್ಷಣಾರ್ಧದಲ್ಲಿ ನಡೆದುಹೋಗುತ್ತವೆ.

ರವಿ : ಸಿಂಗಲ್‌ಫ್ಯೂಸ್ ಇದ್ದಾಗ ಬಲ್ಬ್‌ಗಳ ಬೆಳಕಿಗೆ ಬದಲಾಗಿ ಮಣಕು ಹಳದಿ ಬೆಳಕನ್ನು ಹೊರಸೂಸುತ್ತದೆ.

ಸೂಕ್ಷ್ಮ : ನಮ್ಮ ಮನೆಯ ಇಲೆಕ್ಟ್ರಿಕ್ ಸ್ಟೌವ್ ಕೊಂಚಮಟ್ಟಿಗೆ ಈ ಬಣ್ಣದ ಏರಿಳಿತವನ್ನು ಪ್ರದರ್ಶಿಸುತ್ತದೆ.

ಅಧ್ಯಾಪಕರು : ವಿದ್ಯುಚ್ಛಕ್ತಿಯು ಉಷ್ಣವಾಗಿ ಉಷ್ಣವು ಬೆಳಕಾಗುವ ಪ್ರಕ್ರಿಯೆ ಇದು. ಅಂತೂ ತಾಪ ಹೆಚ್ಚಾದ ಹಾಗೆಲ್ಲಾ ಉಷ್ಣವು ಬೆಳಕಾಗಿ ಪರಿವರ್ತನೆಯಾಗುತ್ತದೆ.

ವಿನೋದ : ಸರ್ ನನ್ನ ಪ್ರಶ್ನೆ ಮರೆತುಬಿಟ್ರಾ?

ಅಧ್ಯಾಪಕರು : ಅದರ ಸಲುವಾಗಿ ಇಷ್ಟೆಲ್ಲಾ ಪೀಠಿಕೆ ಹಾಕಿದ್ದು. ತಾಪವನ್ನು ತಾಪದ ಪರಿಣಾಮವಾದ ವಿಕಸನದ ಮೂಲಕ ಅಳೆಯುವ ಬದಲು ತಾಪದ ಇನ್ನೊಂದು ಪರಿಣಾಮವಾಗಿರುವ ಬೆಳಕು ಹೊರಸೂಸುವ ಗುಣದಿಂದ ಅಳೆಯಬಹುದು. ತಾಪ ಹೆಚ್ಚಾದ ಹಾಗೆಲ್ಲಾ ಬಿಸಿಯಾದ ದ್ರವ್ಯದಿಂದ ಹೊರಬರುವ ಬೆಳಕಿನ ಸ್ವರೂಪ ಬೇರೆಯೇ ಆಗಿರುತ್ತದೆ. ಬೆಳಕು ಬಹುದೂರದವರೆಗೆ ಸಾಗಬಲ್ಲದಾದ ಕಾರಣ ದೂರದಿಂದಲೇ ತಾಪವನ್ನು ಅಂದಾಜು ಮಾಡಲು ಸಾಧ್ಯ. ಬೆಳಕಿನ ಸ್ವರೂಪದ ಆಧಾರದ ಮೇಲೆ ನಕ್ಷತ್ರಗಳ ತಾಪವನ್ನು ಅಧ್ಯಯನ ಮಾಡುತ್ತಾರೆ.

ರೋಹಿಣಿ ನಕ್ಷತ್ರ, ಆರ್ದ್ರಾ ನಕ್ಷತ್ರ – ಕೆಂಪು ಬಣ್ಣದವು, ಬಿಳಿ ಬಣ್ಣವಾಗಿ ಕಾಣುವ ನಕ್ಷತ್ರಗಳಿಗಿಂತ ಈ ನಕ್ಷತ್ರಗಳ ತಾಪ ಕಡಿಮೆ. ರೋಹಿತದ ಮೂಲಕ ಅಧ್ಯಯನ ಮಾಡಿ ಬೆಳಕಿನ ಸ್ವರೂಪ ಹಾಗೂ ತೀವ್ರತೆಯ ಆಧಾರದ ಮೆಲೆ ತಾಪವನ್ನು ಅಂದಾಜು ಮಾಡಲಾಗುವುದು.

ಸೂರ್ಯನೂ ಒಂದು ನಕ್ಷತ್ರ ತಾನೆ. ಹೀಗೆ ಅಂದಾಜು ಮಾಡಿದಾಗ ಸೂರ್ಯನ ಹೊರಮೈ ತಾಪ ಸುಮಾರು 6000K ಎಂದು ಗೊತ್ತಾಗಿದೆ!

ಸುಹಾಸ್ : ರಿಮೋಟ್ ಕಂಟ್ರೋಲ್ ಅರ್ಥಾತ್ ದೂರ ನಿಯಂತ್ರಣ ಇದ್ದ ಹಾಗೆ ಇದು ರಿಮೋಟ್ ಅಸೆಸ್‌ಮೆಂಟು ಅರ್ಥಾತ್ ದೂರ ಅಂದಾಜು.

ಸೂಕ್ಷ್ಮ : ಸರ್, ಇಲೆಕ್ಟ್ರಿಕ್ ಸ್ಟೌವ್ ವಿದ್ಯುಚ್ಛಕ್ತಿಯನ್ನು ಉಷ್ಣವಾಗಿಸುವುದು. ಉಷ್ಣವನ್ನು ವಿದ್ಯುಚ್ಛಕ್ತಿಯಾಗಿಸಿ ಅಳೆಯಬಹುದಲ್ವಾ?

ಅಧ್ಯಾಪಕರು : ಹೌದು. ಹಾಗೆ ಮಾಡಲು ಸಾಧ್ಯ. ಉಷ್ಣವನ್ನು ವಿದ್ಯುಚ್ಛಕ್ತಿಯಾಗಿಸಿದರೆ ಉಷ್ಣದ ಲಭ್ಯತೆಗೆ ಕಾರಣವಾದ ತಾಪವನ್ನು ಪರೋಕ್ಷವಾಗಿ ಅಂದಾಜು ಮಾಡಲು ಸಾಧ್ಯ. ಈ ಕುರಿತ ತತ್ತ್ವವನ್ನು ಮಾತ್ರ ನಿಮಗೆ ವಿವರಿಸುತ್ತೇನೆ.

ಈ ಚಿತ್ರದಲ್ಲಿ ತೋರಿಸಿರುವ ರೀತಿಯಲ್ಲಿ ತಂತಿ ಜೋಡಣೆ ಮಾಡಿದೆವೆನ್ನೋಣ.

ಮೇಲಿನ ಚಿತ್ರದಲ್ಲಿ ಕಬ್ಬಿಣ ಮತ್ತು ತಾಮ್ರದ ಜೋಡಣೆ ಹಾಗೂ ತಾಮ್ರ ಮತ್ತು ಕಬ್ಬಿಣದ ಜೋಡಣೆ ಇದೆ. ಈ ಜೋಡಣೆ (I) ಮತ್ತು ಜೋಡಣೆ (II) ವಿಭಿನ್ನ ತಾಪದಲ್ಲಿವೆ ಎಂದು ಭಾವಿಸೋಣ. ಆಗ ಈ ಜೋಡಣೆಯಲ್ಲಿ ವಿದ್ಯುತ್‌ಕೋಶದಲ್ಲಿರುವ ಹಾಗೆ ವೋಲ್ಟೇಜ್ ಉಂಟಾಗುತ್ತದೆ. ಆಗ ವಿದ್ಯುತ್ಪ್ರವಾಹ ಉಂಟಾಗುತ್ತದೆ. ಈ ವಿದ್ಯುತ್ಪ್ರವಾಹವು ಜೋಡಣೆ (i) ಮತ್ತು ಜೋಡಣೆ (ii)ರ ಪೈಕಿ ಒಂದರ ತಾಪ ತಿಳಿದಿದ್ದರೆ, ವಿದ್ಯುತ್ಪ್ರವಾಹವನ್ನು ಆಧರಿಸಿ ಎರಡನೆಯ ಜೋಡಣೆಯ ತಾಪವನ್ನು ತಿಳಿಯಬಹುದು. ಈ ಜೋಡಣೆಗೆ ತರ್ಮೊಕಪಲ್ ಎನ್ನುತ್ತಾರೆ. ಈ ಸಾಧನದ ಸಹಾಯದಿಂದ ತಾಪವನ್ನು ಅಂದಾಜು ಮಾಡಲಾಗುವುದು.

ವಿದ್ಯುಚ್ಛಕ್ತಿಯನ್ನು ಪರೋಕ್ಷವಾಗಿ ಆಧರಿಸಿದ ಮತ್ತೊಂದು ಸಾಧನವೂ ಇದೆ. ಅದೆಂದರೆ ಪ್ಲಾಟಿನಮ್ ರೋಧ ತಾಪಮಾಪಕ.

ಒಂದು ತಂತಿಯ ಮೂಲಕ V ವೋಲ್ಟೇಜ್ ವಿದ್ಯುದ್ವಿಭವಾಂತರ ಜೋಡಣೆಗೊಳಿಸಿದಾಗ ಬರುವ ವಿದ್ಯುತ್ಪ್ರವಾಹವನ್ನು ತಂತಿಯು ಉಂಟುಮಾಡುವ ವಿದ್ಯುನ್ನಿರೋಧ ನಿರ್ಧರಿಸುತ್ತದೆ. ವಿದ್ಯುನ್ನಿರೋಧ ಹೆಚ್ಚಿದಷ್ಟೂ ವಿಭವಾಂತರ ಅಷ್ಟೇ ಇದ್ದರೂ ವಿದ್ಯುತ್ಪ್ರವಾಹ ಕಡಿಮೆ ಆಗುತ್ತದೆ.

ಪ್ಲಾಟಿನಮ್ ತಂತಿಯನ್ನು ಹೆಚ್ಚು ತಾಪದಲ್ಲಿರಿಸಿದಾಗ ಸಹಜವಾಗಿಯೇ ಆ ಪ್ಲಾಟಿನಮ್ ತಂತಿಯ ವಿದ್ಯುನ್ನಿರೋಧ ಹೆಚ್ಚಾಗುತ್ತದೆ. ಹೀಗಾಗಿ ವಿದ್ಯುತ್ಪ್ರವಾಹ ಕಡಿಮೆ ಆಗುತ್ತದೆ. ಪ್ಲಾಟಿನಮ್ ಉಷ್ಣವಾಹಕ ಆದ್ದರಿಂದ ಕ್ಷಣಾರ್ಧದಲ್ಲಿ ಪರಿಸರದ ತಾಪ ಪಡೆದು ಅದಕ್ಕನುಗುಣವಾಗಿ ವಿದ್ಯುನ್ನಿರೋಧವನ್ನು ಬದಲಾಯಿಸಿಕೊಳ್ಳುತ್ತಿದೆ. ವಿದ್ಯುನ್ನಿರೋಧಕ್ಕನುಗುಣವಾಗಿ ವಿದ್ಯುತ್ಪ್ರವಾಹವೂ ಬದಲಾಗುತ್ತದೆ. ಹೀಗಾಗಿ ಈ ಸಾಧನದಲ್ಲಿ ವಿದ್ಯುತ್ಪ್ರವಾಹವನ್ನು / ವಿದ್ಯುನ್ನಿರೋಧವನ್ನು ಅಳತೆಮಾಡಿ ತಾಪವನ್ನು ಅಂದಾಜು ಮಾಡಲು ಸಾಧ್ಯ. ಈ ತಾಪಮಾಪಕವನ್ನು ಪಾದರಸ ತಾಪಮಾಪಕದ ವ್ಯಾಪ್ತಿಗಿಂತಲೂ ಹೆಚ್ಚಿನ ವ್ಯಾಪ್ತಿಯಲ್ಲಿ ಬಳಕೆ ಮಾಡಬಹುದು.

ಅನಿರುದ್ಧ : ತಾಪವನ್ನು ಚಲನಶಕ್ತಿಯಾಗಿಯೂ ಮಾಪಿಸಬಹುದೆ?

ಅಧ್ಯಾಪಕರು : ಆ ಸಾಧ್ಯತೆಯನ್ನು ನೀವೇ ಚಟುವಟಿಕೆ ಒಂದರಿಂದ ತಿಳಿಯಿರಿ. ಈ ದಿನ ಮನೆಗೆ ಹೋದ ಮೇಲೆ, ಅಗಲವಾದ ಊದುಕೊಳವೆಯನ್ನು ಆಯ್ಕೆ ಮಾಡಿ. 3 ಮೇಣದ ಬತ್ತಿಯನ್ನು ತೆಗೆದುಕೊಳ್ಳಿ. ಅತ್ಯಂತ ತೆಳುವಾದ ಕಾಗದದಿಂದ ಈ ಆಕಾರ ಮಾಡಿ ಚುಕ್ಕೆಗೆರೆಗುಂಟಲೂ ಮಡಚಿ.

ಈ ಚಿತ್ರದಲ್ಲಿ ತೋರಿಸಿರುವಂತೆ ಗುಂಡುಸೂಜಿಯ ಚೂಪು ತುದಿಯ ಮೇಲೆ ಮಡಿಚಿದ ಕಾಗದವನ್ನು ಏರಿಸಿ ಮಡಿಕೆಗಳ ಸಂಗಮ ಬಿಂದುವಿನಲ್ಲಿ ಗುಂಡುಸೂಜಿಯ ಚೂಪು ತುದಿ ಇರಲಿ.

ಒಂದು ಮೇಣದ ಬತ್ತಿಯನ್ನು ಹೊತ್ತಿಸಿ ಅದರ ಸುತ್ತಲೂ ಸುತ್ತುವರಿಯುವಂತೆ ಊದುಕೊಳವೆಯನ್ನು ಲಂಬವಾಗಿ ನಿಲ್ಲಿಸಿ. ಆ ಕೊಳವೆಯ ಮೇಲು ತುದಿಯ ಬಳಿಗೆ ಗುಂಡುಸೂಜಿಯನ್ನು ತನ್ನಿ. ಕಾಗದದ ರಚನೆ ತಿರುಗತೊಡಗುತ್ತದೆ.

ಇದೇ ಪ್ರಯೋಗವನ್ನು ಎರಡು ಮೇಣದ ಬತ್ತಿ ಉರಿಸಿ ಕೈಗೊಳ್ಳಿ. ಆಗ ಕಾಗದವು ಮತ್ತೂ ವೇಗದಿಂದ ತಿರುಗುತ್ತದೆ.

ಕಾಗದ ಹೀಗೆ ತಿರುಗಲು ಕಾರಣವೆಂದರೆ, ಉರಿಯುವ ಮೇಣದ ಬತ್ತಿ ಉಂಟುಮಾಡಿದ ಉಷ್ಣದಿಂದಾಗಿ ಗಾಳಿಯ ಮೇಲ್ಮುಖ ಪ್ರವಾಹ.

ಇಂತಹದೇ ತತ್ತ್ವವನ್ನು ಆಧರಿಸಿ ವಿಕಿರಣ (ಮುಕ್ತ ಉಷ್ಣ) ಪರಿಮಾಣವನ್ನು ಅಂದಾಜು ಮಾಡಲಾಗುವುದು.