ಅಧ್ಯಾಪಕರು : ಉದ್ದವನ್ನು ಅಳೆಯಲು ಅಳತೆ ಪಟ್ಟಿ ಬೇಕು. ಆ ಅಳತೆಪಟ್ಟಿಯು ಉದ್ದದ ವ್ಯಾಪ್ತಿಗೆ ವಿಸ್ತರಿಸುವಂತಿರಬೇಕು. ಮೀಟರ್ ಕಡ್ಡಿಯಿಂದ ಬಟ್ಟೆ ಅಳೆಯಬಹುದಲ್ಲದೆ ಬೆಂಗಳೂರು ಗುಲಬರ್ಗಾ ನಡುವಣ ದೂರ ಅಳೆಯಲಾದೀತೆ?

ಅಂತೆಯೇ ತಾಪವನ್ನು ಅಳೆಯಲು ತಾಪಮಾಪಕ ಬೇಕು. ಆದರೆ ತಾಪಮಾಪಕ ರಚಿಸುವಾಗ ತಾಪದ ಶ್ರೇಣ್ಯಂಕಗಳನ್ನೂ ನಿರ್ಧರಿಸುವ ವಿಧಾನ ಬೇಕು.

ಉದ್ದದ ಅಳತೆ ಪಟ್ಟಿಯಲ್ಲಿ ಶ್ರೇಣ್ಯಂಕವನ್ನು ಮೀಟರ್ ಎಂದೋ ಅಡಿ ಎಂದೊ ನಿರ್ದೇಶಿಸಿದರಾಯಿತು. ಅದರ ಗುಣಕ ಉಪಗುಣಕಗಳ ಬಳಕೆ ಮಾಡಿ ಉದ್ದವನ್ನು ಅಳೆಯಬಹುದು. ಉದ್ದಕ್ಕೆ ಶೂನ್ಯವೆಂದರೆ ಅಳತೆಯ ಪ್ರಾರಂಭ ಬಿಂದು.

ಆದರೆ ತಾಪದ ವಿಷಯ ಹಾಗಲ್ಲ. ತಾಪದ ಅಳತೆಯ ಪ್ರಾರಂಭ ಬಿಂದುವನ್ನು ಕಂಡುಕೊಂಡು ಅದನ್ನು ಶೂನ್ಯವೆಂದು ಭಾವಿಸಬೇಕು. (ಉದ್ದದ ವಿಷಯದಲ್ಲಿ ಈ ಗೋಜಲಿಲ್ಲ). ತಾಪದ ಶಿಷ್ಠ ಶ್ರೇಣ್ಯಂಕಗಳನ್ನು ನಿರ್ಧರಿಸುವಾಗ ತಾಪವೆಂದರೇನೆಂಬ ವಿಷಯಗಳನ್ನು ಪರಿಗಣಿಸಿಲ್ಲ. ಹೀಗಾಗಿ ಈವರೆವಿಗೆ ತಿಳಿದ ವಿಷಯಗಳ ಮುಂದುವರಿಕೆಯಾಗಿ ತಾಪ ಮಾಪನ ಬರುವುದಿಲ್ಲ.

ತಾಪಮಾಪನದ ಶ್ರೇಣ್ಯಂಕಗಳನ್ನು ನಿರ್ಧರಿಸಿದ್ದು ಅಗತ್ಯಕ್ಕೆ ಅನುಗುಣವಾಗಿ. ಸಾಮಾನ್ಯ ಮಾಪನಕ್ಕೆ ಸಂಬಂಧಿಸಿದ ಹಾಗೆ ಹೇಳುವುದಾದರೆ ನೀರಿನ ಘನರೂಪ ಉಂಟಾಗುವ ತಾಪದಿಂದ ನೀರು ಕುದಿಯತೊಡಗುವ ತಾಪವನ್ನೇ ಆಧಾರವಾಗಿರಿಸಿಕೊಂಡು ಮೊದಲ ತಾಪಮಾಪನ ಶ್ರೇಣಿಯನ್ನು ಸೆಲ್ಸಿಯಸ್ ರೂಪಿಸಿದ.

ನೀರು ಘನೀಕರಣಗೊಳ್ಳುವಾಗಿನ ತಾಪವನ್ನೇ ಏಕೆ ಕನಿಷ್ಠ ತಾಪವಾಗಿ ಪರಿಗಣಿಸಲಾಯಿತೆಂಬ ಪ್ರಶ್ನೆಗೆ ಎರಡು ಸಮರ್ಥನೆಗಳಿವೆ.

1) ಸಾಮಾನ್ಯ ಸಂದರ್ಭಗಳಲ್ಲಿ ಗಮನಿಸುವ ಕನಿಷ್ಠ ತಾಪವೆಂದರೆ ನೀರು ಘನೀಭವನಗೊಳ್ಳುವ ತಾಪ.

2) ನೀರು ಘನೀಭವನ ಪ್ರಾರಂಭವಾಗುವಾಗಿನ ಸಂದರ್ಭದಿಂದ ಮೊದಲುಗೊಂಡು ಪೂರ್ಣವಾಗಿ ಘನೀಭವನ ಆಗುವವರೆಗೆ ತಾಪವು ಸ್ಥಿರವಾಗಿರುವುದು. ಹೀಗಾಗಿ ನೀರಿನ ಘನೀಕರಣ ತಾಪವನ್ನು 0º ಸೆಲ್ಸಿಯಸ್ ಎಂದು ನಿರ್ಧರಿಸಲಾಯಿತು.

ಇದೇ ತರ್ಕವನ್ನು ಮುಂದುವರಿಸಿ ನೀರು ಹಬೆಯಾಗುವ ತಾಪವನ್ನು 100º ಸೆಲ್ಸಿಯಸ್ ಎಂದು ನಿರ್ಧರಿಸಲಾಯಿತು. ನೀರು ಸಂಪೂರ್ಣವಾಗಿ ಹಬೆಯಾಗುವವರೆಗೆ ತಾಪವು ಸ್ಥಿರವಾಗಿರುವ ಕಾರಣ ಈ ಬಿಂದುವನ್ನು ರೂಪಿಸಲು ಅನುಕೂಲ. ಈ ಎರಡು ತಾಪಗಳನ್ನು ನೂರು ವಿಭಾಗಗಳಾಗಿ ಮಾಡಿರುವ ಕಾರಣ ಈ ತಾಪಗಳ ಅಂತರದ (ಘನೀಭವನ ಹಾಗೂ ಹಬೆಯಾಗುವಿಕೆಯ ತಾಪಗಳ ಅಂತರ) ನೂರನೇ ಒಂದು ಭಾಗವನ್ನು ಪರಿಗಣಿಸಿದ್ದರಿಂದ ಈ ಶ್ರೇಣಿಯನ್ನು ಸೆಂಟಿಗ್ರೇಡ್ ಶ್ರೇಣಿ (ಸೆಂಟಿ = ನೂರರಲ್ಲಿ ಒಂದು ಭಾಗ) ಎಂದೂ ಸೆಲ್ಸಿಯಸ್ ಶ್ರೇಣಿ ಎಂದೂ ಕರೆಯಲಾಗುತ್ತದೆ. ವ್ಯಾವಹಾರಿಕ ಅಗತ್ಯಗಳಿಗೆ ಈ ಶ್ರೇಣಿ ಉಪಯುಕ್ತವಾಗಿದೆ.

ದಶಮಾನ ಪದ್ಧತಿಯ ಲೆಕ್ಕಾಚಾರಕ್ಕೆ ಹೊಂದಿಕೊಳ್ಳುವ ಅನುಕೂಲವೇ ಅಲ್ಲದೆ ಆಧಾರ ಬಿಂದುಗಳನ್ನು ಆಧರಿಸಿ ತಾಪಮಾಪಕವನ್ನು ರಚಿಸುವುದೂ ಸುಲಭವಾಗಿರುವ ಕಾರಣ ಈ ಶ್ರೇಣೀಕರಣ ಸಹಜವಾಗಿಯೇ ಜನಪ್ರಿಯವಾಯಿತು. ಆದರೂ ತಾಪ ಮಾಪನದ ಇನ್ನೊಂದು ಶ್ರೇಣಿ ಕಾಣಿಸಿಕೊಳ್ಳುವ ಅನಿವಾರ್ಯ ಬಂದಿತು. ವಿಜ್ಞಾನದಲ್ಲಿ ಆದ ಅನಿರೀಕ್ಷಿತ ತಿರುವು ಈ ಅನಿವಾರ್ಯತೆಯನ್ನು ತಂದೊಡ್ಡಿತು.

ನೀರನ್ನು ಘನೀಭವಿಸುವ ಬದಲು ಲವಣ ದ್ರಾವಣವನ್ನು ಘನೀಭವಿಸಿದಾಗ ಘನೀಭವನ ಬಿಂದು 0º C ಸೆ ಗಿಂತಲೂ ಕಡಿಮೆ ಇರುವುದು ಕಂಡುಬಂದಿತು. ಅಂದರೆ ತಾಪ ಋಣಾತ್ಮಕವಾದಂತಾಯಿತು. ಇದೇಕೋ ಹಿತಕರ ಎನಿಸಲಿಲ್ಲ. ವಿವಿಧ ಲವಣಗಳನ್ನು ನೀರಿಗೆ ವಿವಿಧ ಪರಿಮಾಣದಲ್ಲಿ ಬೆರೆಸಿ ಘನೀಭವಿಸಿ ನೋಡಲಾಗಿ ನಿರ್ದಿಷ್ಟ ಸಾರತೆಯ ಪೊಟ್ಯಾಸಿಯಂ ಐಯೊಡೈಡ್ ದ್ರಾವಣ ಅತ್ಯಂತ ಕನಿಷ್ಟ ತಾಪವನ್ನು ನೀಡಬಲ್ಲ ದ್ರಾವಣ ಎಂದು ತಿಳಿದುಬಂದಿತು. ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ `ಕ್ರಯೋಜನಿಕ್ಸ್‘ – `ಕನಿಷ್ಠ ತಾಪ‘ ಉತ್ಪಾದನಾ ತಂತ್ರನ ಎಂಬ ವಿಜ್ಞಾನದ ಶಾಖೆ ಆರಂಭವಾಯಿತು.

ಈ ಹಂತದಲ್ಲಿ ತಾಪದ ಋಣದ ಬೆಲೆಯನ್ನು ತಪ್ಪಿಸುವ ಸಲುವಾಗಿ ಫ್ಯಾರನ್‌ಹೀಟ್ ಮತ್ತೊಂದು ತಾಪಶ್ರೇಣಿ ರೂಪಿಸಿದ. ಅದೇ ಫ್ಯಾರನ್‌ಹೀಟ್ ತಾಪಶ್ರೇಣಿ. ಪೊಟ್ಯಾಸಿಯಮ್ ಐಯೊಡೈಡ್‌ನ ನಿರ್ದಿಷ್ಟ ಪಾರತೆಯ ದ್ರಾವಣವನ್ನು ಘನೀಭವಿಸಿದಾಗ ಬರುವ ಕನಿಷ್ಠ ತಾಪವನ್ನಾತ 0º F ಎಂದು ತೀರ್ಮಾನಿಸಿದ. ಅದರ ಬೆಲೆ ಸುಮಾರು – 23.2 ಡಿಗ್ರಿ ಸೆಲ್ಸಿಯಸ್. 0º ಸೆಲ್ಸಿಯಸ್ ಬೆಲೆಯನ್ನು 32ºಫ್ಯಾರನ್‌ಹೀಟ್ ಎಂದು ಭಾವಿಸಿದ. ಕುದಿಯುವ ನೀರಿನ ತಾಪವನ್ನು 212º F ಎಂದು ಘೋಷಿಸಿದ. ಅಂದ ಮೇಲೆ ನೀರಿನ ಕುದಿಬಿಂದುವಿಗೂ ಘನೀಭವನ ಬಿಂದುವಿಗೂ ಇರುವ ಅಂತರ (212º F – 32º F) = 180ºF. ಹೀಗಾಗಿ 100ºಸೆಲ್ಸಿಯಸ್ = 180º ಫ್ಯಾರನ್‌ಹೀಟ್. ಇದನ್ನು ಆಧರಿಸಿದ ತಾಪಮಾಪಕಗಳೂ ಬಂದವು.

xº ಸೆಲ್ಸಿಯಸ್ ತಾಪವನ್ನು ಫ್ಯಾರನ್‌ಹೀಟ್‌ನಲ್ಲಿ ಬರೆಯಬೇಕಾಗಿದೆ ಎನ್ನೋಣ.

ಹೀಗಾಗಿ ಡಿಗ್ರಿ ಸೆಲ್ಸಿಯಸ್ ಬೆಲೆ ಗೊತ್ತಿದ್ದಲ್ಲಿ ಅದನ್ನು ಡಿಗ್ರಿ ಫ್ಯಾರನ್‌ಹೀಟ್‌ಗೆ ಪರಿವರ್ತಿಸಲು ಅಥವಾ ಡಿಗ್ರಿ ಫ್ಯಾರನ್‌ಹೀಟ್ ಬೆಲೆ ಗೊತ್ತಿದ್ದಲ್ಲಿ ಡಿಗ್ರಿ ಸೆಲ್ಸಿಯಸ್‌ಗೆ ಪರಿವರ್ತಿಸಲು ಈ ವಿಧಾನ ಸಹಾಯಕ.

ಮಾನವ ದೇಹದ ತಾಪವನ್ನು ಅಳೆಯುವ ವೈದ್ಯಕೀಯ ತಾಪಮಾಪಕದ ಮಾಪನ ಫ್ಯಾರನ್‌ಹೀಟ್ ಬೆಲೆಯಲ್ಲಿದೆ. ಆರೋಗ್ಯವಂತ ವ್ಯಕ್ತಿಯ ದೇಹದ ತಾಪ ಸುಮಾರು 98.7º F

“ಕಡಿಮೆ ತಾಪ ಪಡೆಯಲು ಸಾಧ್ಯವಾದ ಹಾಗೆಲ್ಲಾ ಹೊಸ ಹೊಸ ತಾಪಶ್ರೇಣಿಗಳು ಬಂದರೆ ಏನು ಗತಿ ಸರ್‘’ ಎಂದು ಗಾಬರಿಯಾಗಿ ಕೇಳಿದ ಚಿಂತನ.

ಅಧ್ಯಾಪಕರು : ಈ ತೊಂದರೆಗೆ ಇತಿಶ್ರೀ ಹಾಡಿದ ಕೀರ್ತಿ ಕೆಲ್ವಿನ್ ಎಂಬ ವಿಜ್ಞಾನಿಗೆ ಸಲ್ಲುತ್ತದೆ. ಆತನು ರೂಪಿಸಿದ ತಾಪಶ್ರೇಣಿ ಮೂರನೆಯ ಹಾಗೂ ಕೊನೆಯದು.

ಕೆಲ್ವಿನ್ ತನ್ನ ತಾಪಶ್ರೇಣಿಯ 0ºಯನ್ನು ನಿರ್ಧರಿಸುವಾಗ ಪ್ರಯೋಗವನ್ನು ಆಧರಿಸದೆಯೇ ತರ್ಕವನ್ನು ಆಧರಿಸಿದ್ದು ವಿಶೇಷ.

ಕೆಲ್ವಿನ್ ಒಂದು ವಿಶೇಷವನ್ನು ಗಮನಿಸಿದ್ದು ಅನಿಲಗಳ ವಿಕಸನ ಕುರಿತಂತೆ 0º C ಮತ್ತು ಶಿಷ್ಟ ಒತ್ತಡದಲ್ಲಿ (760 mm of Hg) 273 ಘನಮೀಟರ್ ಅನಿಲವೊಂದನ್ನು ತೆಗೆದುಕೊಂಡು ಒತ್ತಡವನ್ನು ಬದಲಾಯಿಸದೆಯೇ ತಾಪವನ್ನು 1º C ಗೆ ಏರಿಸಿದೆ- ವೆನ್ನೋಣ. ಆಗ ಅನಿಲದ ಗಾತ್ರ 274 ಘನ ಮೀಟರ್ ಆಗುವುದು. ಅಂದರೆ ಪ್ರತಿ ಡಿಗ್ರಿ ಸೆಂಟಿಗ್ರೇಡ್ ಏರಿಕೆಗೆ ಗಾತ್ರ 1 ಘನಮೀಟರ್‌ನಷ್ಟು ಹೆಚ್ಚಳವಾಗುವುದು.

ಅಂತೆಯೇ ಅದೇ ಅನಿಲದ ತಾಪವನ್ನು 0º C ನಿಂದ –1º Cಗೆ ಇಳಿಸಿದೆವೆ- ನ್ನೋಣ. ಆಗ ಗಾತ್ರವು 272 ಘನ ಮೀಟರ್ ಆಗುವುದು. –5º C ಗೆ ತಾಪ ಬಂದಾಗ (273 – 5) ಘನಮೀಟರ್ ಅಂದರೆ 268 ಘನಮೀಟರ್ ಗಾತ್ರ ಉಂಟಾಗುವುದು.

ಹಾಗಿದ್ದ ಮೇಲೆ –273º Cಗೆ ತಾಪವನ್ನು ಇಳಿಸಿದ್ದೇ ಆದರೆ ಆಗ ಗಾತ್ರವು (273 – 273) ಘನ ಮೀಟರ್ ಆಗಬೇಕು. ಅಂದರೆ ಗಾತ್ರವು ಶೂನ್ಯ ಆಗಬೇಕು. ಅಂದ ಮೇಲೆ –273º ಸೆಲ್ಸಿಯಸ್ ಅನ್ನು ಶೂನ್ಯ ಎಂದು ಭಾವಿಸುವುದು ಸಮಂಜಸ. ಏಕೆಂದರೆ ಯಾವುದೇ ಅನಿಲ ತೆಗೆದುಕೊಂಡರೂ ಆ ತಾಪ ತಲಪುವ ವೇಳೆಗೆ ಚಲನೆ ನಿಂತುಹೋಗಿ ಗಾತ್ರ ಶೂನ್ಯವಾಗಬೇಕೆಂಬುದು ತರ್ಕ.

ಈ ಬಗೆಯ ಶ್ರೇಣಿಯಲ್ಲಿನ ವಿಶೇಷವೆಂದರೆ ಸೆಲ್ಸಿಯಸ್ ಶ್ರೇಣೀಕರಣದ ಶ್ರೇಣ್ಯಾಂಕ ಕ್ರಮವನ್ನೇ ಉಳಿಸಿಕೊಂಡು ಶೂನ್ಯ ಬಿಂದುವನ್ನು ಮಾತ್ರ 273º ಯಷ್ಟು ಹಿಂದಕ್ಕೆ ಸರಿಸಲಾಗಿದೆ. ಇದನ್ನು ಕೆಲ್ವಿನ್ ಶ್ರೇಣಿ ಇಲ್ಲವೆ ನಿರಪೇಕ್ಷ ಶ್ರೇಣಿ ಎನ್ನಲಾಗುವುದು.

1º ಸೆಲ್ಸಿಯಸ್ = 1K (ಕೆಲ್ವಿನ್ ಅನ್ನು K ಎಂದು ಸೂಚಿಸಲಾಗುವುದು. º ಡಿಗ್ರಿ ಎಂದು ಬರೆಯಲಾಗುವುದಿಲ್ಲ.

ಆದರೆ 0º ಸೆಲ್ಸಿಯಸ್ = 273.14 K

xº ಸೆಲ್ಸಿಯಸ್ = (273.14 + x) ಕೆಲ್ವಿನ್

x ಕೆಲ್ವಿನ್ = (x – 273.14)º ಸೆಲ್ಸಿಯಸ್

ವಾಸ್ತವವಾಗಿ ಅನಿಲದ ಗಾತ್ರ ಶೂನ್ಯವಾಗುವುದೆಂದು ಪರೀಕ್ಷೆ ಮಾಡಲಾಗಿದೆಯೇ ಎಂಬುದು ಕುತೂಹಲಕರ ಸಂಗತಿ. ಹಾಗೆ ಮಾಡಬೇಕಾದರೆ ಕ್ರಯೋಜನಿಕ್ ತಂತ್ರಜ್ಞಾನದ ಬೆಳವಣಿಗೆ ಆಗಿ ಅತ್ಯಂತ ಕಡಿಮೆ ತಾಪವನ್ನು ಉಂಟುಮಾಡಲು ಸಾಧ್ಯವಾಗಬೇಕು. ಈಚಿನ ದಿನಗಳಲ್ಲಿ ಅದು ಹೆಚ್ಚು ಕಡಿಮೆ ಸಾಧ್ಯವಾಗಿದೆ.

ಆದರೆ, ಆ ತಾಪ ತಲಪುವ ಮೊದಲೆ ಅನೇಕ ಅನಿಲಗಳು ದ್ರವಗಳು, ಘನಗಳು ಆಗಿಬಿಡುತ್ತವೆ. ಹೀಗಾಗಿ ಕೆಲ್ವಿನ್ ಮಾಡಿದ ಸಾಧನೆ ಕಾಲ್ಪನಿಕ ಹಾಗೂ ತರ್ಕಕ್ಕೆ ಬದ್ಧವಾದ ಊಹೆ.

ವಿಜ್ಞಾನದ ಮತ್ತೊಂದು ಲೆಕ್ಕಾಚಾರದ ಪ್ರಕಾರ 0K ತಲುಪಲು ಸಾಧ್ಯವೇ ಇಲ್ಲ. ಈವರೆವಿಗೆ ಕೈಗೊಂಡಿರುವ ಪ್ರಯತ್ನಗಳೂ ಇದಕ್ಕೆ ಪೂರಕವಾಗಿವೆ. ಆದರೂ ಮಾನವನ ಸಾಹಸಕ್ಕೆ ಮಿತಿಯಿಲ್ಲ. 0Kಗೆ ಸಮೀಪದ ತಾಪವನ್ನು ತಲಪಿದ್ದಾನೆ.

ಅಕಸ್ಮಾತ್ ಶೂನ್ಯ ಕೆಲ್ವಿನ್ ತಲಪಿದರೆ? ಆಗ ಶೂನ್ಯ ಬಿಂದುವನ್ನೇ ಪಲ್ಲಟಿಸಬೇಕೇನೋ! ಏಕೆಂದರೆ ಶೂನ್ಯತಾಪ ತಲುಪಲು ಸಾಧ್ಯವಾದ ತಾಪದ ಅಂಚು ಎಂದು ವಿಜ್ಞಾನಿಯೋರ್ವರು ಹೇಳಿರುವುದನ್ನಿಲ್ಲಿ ಗಮನಿಸಬೇಕು.

ಅಂತೂ ತಾಪಕ್ಕೊಂದು ಶ್ರೇಣಿ ರೂಪಿಸಬೇಕು. ಆ ಶ್ರೇಣಿಯಲ್ಲಿ ಋಣತಾಪ ಇರಬಾರದೆಂಬ ಪ್ರಯತ್ನಗಳ ಫಲವಾಗಿ ಕ್ರಯೋಜನಿಕ್ ತಂತ್ರಜ್ಞಾನ ಹಾಗೂ ನಿರಪೇಕ್ಷ ತಾಪ ಶ್ರೇಣಿಗಳು ರೂಪುಗೊಂಡವು. ವಿಜ್ಞಾನ ಕ್ಷೇತ್ರದ ವಿವಿಧ ಶಾಖೆಗಳ ಬೆಳವಣಿಗೆಗಳು ಪರಸ್ಪರ ಬೆಂಬಲವನ್ನು ನೀಡುವುದು, ಪರಸ್ಪರ ಸವಾಲುಗಳನ್ನೊಡ್ಡುವುದು – ವಿಜ್ಞಾನದ ಇತಿಹಾಸದಲ್ಲಿ ಗುರುತಿಸಲಾಗಿರುವ ವಿಶಿಷ್ಟ ಲಕ್ಷಣ.

ಮಾಪನಕ್ಕೆ ಸೆಲ್ಸಿಯಸ್ ಶ್ರೇಣಿ, ಲೆಕ್ಕಾಚಾರಕ್ಕೆ ಕೆಲ್ವಿನ್ ಶ್ರೇಣಿ ಬಳಕೆಯಲ್ಲಿವೆ. ದೇಹತಾಪಮಾಪನದ ಸಲುವಾಗಿ ಫ್ಯಾರನ್‌ಹೀಟ್ (F) ಶ್ರೇಣಿಯ ತಾಪಮಾಪಕ ಬಳಕೆಯಲ್ಲಿದೆ. ಹೀಗಾಗಿ ಮೂರೂ ಶ್ರೇಣಿಗಳ ಬಳಕೆ ಆಗುತ್ತಿದೆ.

 

ಗಮನಿಸಿ :

ಮಿಂಚು ಉಂಟಾದಾಗ ಸರಿಸುಮಾರು, ಸೂರ್ಯನ ಮೇಲ್ಮೈ ತಾಪದಷ್ಟೇ ತಾಪ ಉಂಟಾಗುವುದಾದರೂ ಸೂರ್ಯನಿಗಿಂತ ಮಿಂಚು ಭೂಮಿಗೆ ಸಮೀಪ ಇದ್ದರೂ ಅಪಾಯವಿಲ್ಲ.

ಆಶ್ಚರ್ಯವಲ್ಲವೆ! ಇದಕ್ಕೆ ಕಾರಣ ಮಿಂಚಿನ ಅಲ್ಪಾಯುಷ್ಯ ಹಾಗೂ ಗಾಳಿಯು ಉಷ್ಣದ ಅವಾಹಕವಾಗಿರುವುದಲ್ಲದೆ ಉಷ್ಣ ಶಕ್ತಿಯನ್ನು ಗಾಳಿಯ ಚಲನಶಕ್ತಿಯಾಗಿ ಪರಿವರ್ತಿಸುವುದು.